(ಫೋಟೋ ಕೃಪೆ: ಸುಲೇಖಾ.ಕಾಮ್) |
ಲೋಕಸಭೆಯಲ್ಲಿ ಒಪ್ಪಿತವಾಗಿ ಬಂದ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, 2011"ಗೆ ಸದ್ಯಕ್ಕೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿಯವರಿಂದ ಸಕ್ಕತ್ತಾಗಿ ಬ್ರೇಕ್ ಬಿದ್ದಿದೆ. ರಾಜ್ಯಸಭೆಯಲ್ಲಿ ಇನ್ನೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವ ಮಸೂದೆ ಮತಕ್ಕೆ ಬೀಳುವ ಸಾಧ್ಯತೆಗಳು ಕಮ್ಮಿ. ಉದ್ದೇಶಿತ ಮಸೂದೆಯು ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತಿದೆ, ವಿಕೇಂದ್ರಿಕರಣಕ್ಕೆ ವಿರುದ್ಧವಾಗಿದೆ ಮತ್ತು ಒಕ್ಕೂಟ ವ್ಯವಸ್ಥೆಯ ಮೂಲಸಿದ್ಧಾಂತಗಳಿಗೆ ಮಾರಕವಾಗಿದೆ ಎನ್ನುವ ಸರಿದನಿಯನ್ನು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು ಎತ್ತಿದ್ದು ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಮಂತ್ರಿಗಳು ಅಚ್ಚರಿ ಹುಟ್ಟಿಸುವಂತೆ ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಒಕ್ಕೂಟಕ್ಕೆ ಧಕ್ಕೆಯಾದರೂ ಅಡ್ಡಿಯಿಲ್ಲ ಎನ್ನುವಂತೆ ಮಾತಾಡಿದ್ದಾರೆ. ಇಷ್ಟಕ್ಕೂ ಅಂತಹದ್ದೇನನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ನೋಡೋಣ.
ಒಕ್ಕೂಟ ಧರ್ಮಕ್ಕೆ ವಿರುದ್ಧವಾಗಿರುವ ನಿಲುವುಗಳು
ಈ ಮಸೂದೆಯ ಹೆಸರನ್ನೇ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, ೨೦೧೧" ಎಂದು ಇಡಲಾಗಿದೆ. ಅಂದರೆ ರಾಜ್ಯಗಳ ಲೋಕಾಯುಕ್ತ ಇನ್ಮೇಲೆ ಕೇಂದ್ರದ ಅಧೀನ ಅಂದಂಗಾಯ್ತು. ಈ ಮಸೂದೆಯ ಮೂರನೇ ಭಾಗದಲ್ಲಿ (Part III) "ಲೋಕಾಯುಕ್ತ" ಸಂಸ್ಥೆಯ ಬಗ್ಗೆ ಹೇಳಲಾಗಿದೆ. ೬೪(೧)ರಲ್ಲಿ ಸದರಿ ಮಸೂದೆ ಜಾರಿಯಾದ ದಿನದಿಂದ ಪ್ರತಿಯೊಂದು ರಾಜ್ಯವೂ ಲೋಕಾಯುಕ್ತ ಸಂಸ್ಥೆಯನ್ನು ಜಾರಿಗೊಳಿಸತಕ್ಕದ್ದು ಎನ್ನಲಾಗಿದೆ. ಇದು ರಾಜ್ಯಗಳು ಲೋಕಾಯುಕ್ತ ಸಂಸ್ಥೆಯನ್ನು ರಚಿಸುವುದನ್ನು ಕಡ್ಡಾಯಗೊಳಿಸುತ್ತದೆ. ಹೀಗೆ ರಾಜ್ಯಗಳ ಆಡಳಿತದಲ್ಲಿ ಮೂಗು ತೂರಿಸುವುದು ಅವುಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ನಿಲುವಾಗಿದೆ ಎನ್ನುವುದು ತೃಣಮೂಲ ಮತ್ತದರ ಸಹಯೋಗಿ ಪಕ್ಷಗಳ ನಿಲುವು. ಈ ನಿಲುವಿನ ನಿಜಾಯತಿಯನ್ನು ಅನುಮಾನಿಸದೇ ನೋಡಿದರೆ ಒಕ್ಕೂಟ ಧರ್ಮದ ಪರವಾಗಿ ಇದು ಇರುವುದು ಎದ್ದು ಕಾಣುತ್ತದೆ. ಈ ಮಸೂದೆಯ ಮೂಲಕ ರಾಜ್ಯಗಳ ’ಆಡಳಿತವನ್ನು ರೂಪಿಸುವ, ಅದಕ್ಕೆ ಬೇಕಾದ ಸಂಸ್ಥೆಗಳನ್ನು ರೂಪಿಸುವ ಅಧಿಕಾರದಲ್ಲಿ’ ಕೇಂದ್ರ ಕೈಯ್ಯಾಡಿಸುತ್ತಿರುವ ಮತ್ತು ಅಂತಹ ಅಧಿಕಾರವನ್ನು ರಾಜ್ಯಗಳ ಕೈಯ್ಯಿಂದ ಕಸಿಯುವಂತಹ ನಿಯಮಗಳು ಮಸೂದೆಯಲ್ಲಿದೆ ಎನ್ನುವುದು ಅರಿವಾಗುತ್ತದೆ.
ರಾಜ್ಯಸರ್ಕಾರ ಏಕಿದೆ?
ರಾಜ್ಯಗಳಲ್ಲೂ ಸರ್ಕಾರಗಳಿವೆ, ಅದರಲ್ಲೂ ಜನರಿಂದಲೇ ಆಯ್ಕೆಯಾಗೋ ಶಾಸಕರಿದ್ದಾರೆ. ತನ್ನ ನಾಡಿಗೆ ಅಗತ್ಯವಿರುವ ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಗಳೇ ಕಟ್ಟಿಕೊಳ್ಳುತ್ತವೆ. ರಾಜ್ಯಗಳ ಈ ಅಧಿಕಾರವನ್ನು ಕೇಂದ್ರ ಕಿತ್ತುಕೊಳ್ಳೋದು ಸರಿಯಲ್ಲ. ಹಾಗೆ ಮಾಡೋದು ನಿಮಗೆ ನಿಮ್ಮನ್ನು ಆಳಿಕೊಳ್ಳುವ ಯೋಗ್ಯತೆಯಿಲ್ಲ, ‘ನಾವು ನಿಯಮ ರೂಪಿಸುತ್ತೇವೆ ನೀವು ಜಸ್ಟ್ ಫಾಲೋ ಮಾಡಿ’ ಅಂದಂಗಲ್ವಾ? ರಾಜ್ಯಸಭೆಯ ಒಬ್ಬ ಸಂಸದರು ಇದೇ ಮಾತನ್ನು ಚರ್ಚೆಯಲ್ಲಿ ಹೇಳುತ್ತಾ.. "ಕೇಂದ್ರವೇನು ಮೊಗಲ್ ಸಾಮ್ರಾಜ್ಯವಲ್ಲ.. ನೀವು ಅಕ್ಬರ್ ಬಾದಶಹಾನೂ ಅಲ್ಲಾ, ರಾಜ್ಯಗಳು ನಿಮ್ಮ ಸಾಮಂತ ರಾಷ್ಟ್ರಗಳೂ ಅಲ್ಲಾ" ಎಂದದ್ದು ಸಕ್ಕತ್ತಾಗಿತ್ತು. ಉತ್ತರಾಖಂಡ, ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಈಗಾಗಲೇ ಬಲಿಷ್ಠವಾಗಿರುವ ಲೋಕಾಯುಕ್ತ ಕಾಯಿದೆಯಿದ್ದು ಅವುಗಳ ಗತಿ ಏನಾದೀತು ಎನ್ನುವ ಆತಂಕವೂ ವ್ಯಕ್ತವಾಗಿದೆ.
ದನಿಯೆತ್ತಿರುವ ಪ್ರಾದೇಶಿಕ ಪಕ್ಷಗಳು
ರಾಜ್ಯದ ಅಧಿಕಾರ ಮೊಟಕುಗೊಳಿಸುವ ಈ ಮಸೂದೆಗೆ ಈ ಕಾರಣಕ್ಕಾಗಿ ವಿರೋಧ ತೋರಿಸಿದ್ದು ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿಯವರು. ಇದಕ್ಕೆ ಎಐಡಿಎಂಕೆ, ಬಿಜೆಡಿ, ಬಿಎಸ್ಪಿ, ಎಸ್ಪಿ... ಮೊದಲಾದ ಪ್ರಾದೇಶಿಕ ಪಕ್ಷಗಳು ದನಿಗೂಡಿಸಿವೆ. ಬಿಜೆಪಿಯೂ ಇವರೊಡನೆ ದನಿಯೆತ್ತಿದೆ. ಧರ್ಮಾಧಾರಿತ ಮೀಸಲಾತಿಯ ಬಗೆಗಿನ ಆಕ್ಷೇಪದ ಜೊತೆಯಲ್ಲಿಯೇ ಒಕ್ಕೂಟ ಶಿಥಿಲಗೊಳಿಸುವ ಈ ಅಂಶವನ್ನೂ ಸೇರಿಸಿಕೊಂಡು ವಿರೋಧಪಕ್ಷವಾದ ಬಿಜೆಪಿ ಕೂಡಾ ತೃಣಮೂಲದ ಈ ನಿಲುವನ್ನು ಬೆಂಬಲಿಸಿದೆ.
ಮುಂದೇನಾದೀತು?
ಇಂದೇನಾದರೂ ಈ ಮಸೂದೆ ಇದೇ ರೂಪದಲ್ಲಿ ಮಂಡನೆಯಾದರೆ ಸೋಲು ಕಾಣುವುದು ಖಚಿತ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಲೋಕಾಪಾಲ್ ಮಸೂದೆ ತಿದ್ದುಪಡಿಯಾಗಿ ಮಂಡಿತವಾಗಬೇಕಾದರೆ ಮತ್ತೆ ಲೋಕಸಭೆಯಲ್ಲಿ ಮಂಡಿತವಾಗಿ ಒಪ್ಪಿಗೆ ಪಡೆದುಕೊಳ್ಳಬೇಕು. ಅಥವಾ ಈಗ ಮಸೂದೆಗೆ ವಿರೋಧ ತೋರಿಸದೆ ಒಪ್ಪಿಕೊಳ್ಳಿ, ಮುಂದೆ ತಿದ್ದುಪಡಿಯ ಮೂಲಕ ಬದಲಾವಣೆ ಮಾಡುತ್ತೇವೆ ಎಂದು ಪ್ರಾದೇಶಿಕ ಪಕ್ಷಗಳ ಮನವೊಲಿಸಬೇಕು. ಆದರೆ ಲೋಕಸಭೆ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡಿಕೆಯಾಗಿರುವುದರಿಂದ ಮುಂದಿನ ಅಧಿವೇಶನದವರೆಗೂ ಸದರಿ ಮಸೂದೆ ಮಂಡನೆಯಾಗುವ ಸಾಧ್ಯತೆಗಳು ಕಾಣುತ್ತಿಲ್ಲ. ಏನಾಗುವುದೋ ಕಾದು ನೋಡೋಣ. ಒಟ್ಟಿನಲ್ಲಿ ಲೋಕಾಯುಕ್ತ ನಿರ್ವಹಿಸುವ ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದ ಲೋಕಪಾಲ್ ಮಸೂದೆ ಒಪ್ಪಿಗೆಯಾಗುವುದೇ ಎನ್ನುವುದು ಕುತೂಹಲದ ವಿಷಯವಾಗಿದೆ.
ಕೊನೆಹನಿ: ಈಗಾಗಲೇ ಕೇಂದ್ರೀಯ ತನಿಖಾದಳದಂತಹ ಸಂಸ್ಥೆಗಳು ಬಳಕೆಯಾಗುತ್ತಿರುವ ಬಗೆಯನ್ನು ನೋಡಿದರೆ ಲೋಕಪಾಲ್ ಎನ್ನುವುದೂ ಕೂಡಾ ಪ್ರಾದೇಶಿಕ ಪಕ್ಷಗಳನ್ನು ಅದುಮಿಡುವ, ರಾಷ್ಟ್ರೀಯ ಪಕ್ಷಗಳ ಕೈ ಅಸ್ತ್ರವಾದೀತೆನ್ನುವ ಆತಂಕವಿರುವುದಂತೂ ದಿಟ!