ಕನ್ನಡ ಚಿತ್ರರಂಗದಲ್ಲಿ ಆಗಾಗ ಇಂಥಾ ಸನ್ನಿವೇಶ ಹುಟ್ತಾನೆ ಇದೆ! ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಚಿತ್ರಮಂದಿರಗಳು ಸಿಗ್ತಿಲ್ಲಾ ಅನ್ನೋದು ನಿಜಕ್ಕೂ ನಾಡಿನ ಶೋಚನೀಯ ಸ್ಥಿತಿಯನ್ನು ತೋರುತ್ತಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಿನಿಮಾಗಳನ್ನು ಬಿಡುಗಡೆ ಮಾಡೋದು ವಾಡಿಕೆ. ನಮ್ಮ ರವಿಚಂದ್ರನ್ ಅವರ ಬಹುತೇಕ ಸೂಪರ್ ಹಿಟ್ ಚಿತ್ರಗಳು ತೆರೆ ಕಂಡಿದ್ದು ಇದೇ ದಿನ. ಪ್ರತಿಹಬ್ಬದ ಸಂದರ್ಭದಲ್ಲೂ ಹೆಚ್ಚಿಚ್ಚು ಸಿನಿಮಾಗಳು ಬಿಡುಗಡೆಯಾಗುವುದು ಒಂದು ಸಾಮಾನ್ಯ ರೂಢಿ. ಯಾಕೆಂದರೆ ಹಬ್ಬದ ರಜ ಮತ್ತು ಹಬ್ಬದ ಸಂತಸದಲ್ಲಿರುವ ಉಲ್ಲಾಸದ ಮನಸ್ಸುಗಳು ಜನರನ್ನು ಚಿತ್ರಮಂದಿರಕ್ಕೆ ಕರೆತಂದುಬಿಡುವ ಸಾಧ್ಯತೆಗಳು ಆಗ ಉಳಿದೆಲ್ಲಾ ದಿನಗಳಿಗಿಂತಾ ಹೆಚ್ಚು. ಹಾಗಾಗೇ ಹಬ್ಬ ಬಂದಾಗ ಸಿನಿಮಾಗಳಿಗೆ ಬಿಡುಗಡೆಯ ಸುಗ್ಗಿ! ಆದರೆ ಇತ್ತೀಚಿಗೆ ನಮ್ಮ ನಾಡಿನಲ್ಲಿ ಹಬ್ಬದ ಸಂದರ್ಭದಲ್ಲಿ ಕನ್ನಡ ಚಿತ್ರಗಳು ಬಿಡುಗಡೆಯನ್ನೇ ಕಾಣದ ಹೀನಾಯ ಪರಿಸ್ಥಿತಿ ಬಂದೊದಗಿದೆ. ಕಳೆದ ದೀಪಾವಳಿಯ ಸಂದರ್ಭದಲ್ಲಂತೂ ಒಂದೂ ಚಿತ್ರ ಬಿಡುಗಡೆಯಾಗಲಿಲ್ಲ. ಕಾರಣ "ಆ ಸಮಯದಲ್ಲಿ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗುತ್ತಿವೆ, ಅವುಗಳ ಪೈಪೋಟಿ ಎದುರಿಸಲಾಗಲ್ಲಾ.. ಹಾಗಾಗಿ ಕನ್ನಡ ಚಿತ್ರ ಈ ಬಾರಿ ಇಲ್ಲ…" ಎನ್ನುವ ಮಾತುಗಳು ಕೇಳಿಬಂದವು. ಈ ಬಾರಿ ಸಂಕ್ರಾಂತಿಯ ಸಮಯದಲ್ಲೂ ಇಂಥದ್ದೇ ಮತ್ತೊಂದು ಸನ್ನಿವೇಶ ಎದುರಾಗಿದೆ. ಈ ಬಾರಿ ಬಿಡುಗಡೆಗೆ ಕಾದಿರೋ ಕನ್ನಡ ಚಿತ್ರಗಳಿಗೆ ಚಿತ್ರಮಂದಿರವಿಲ್ಲಂತೆ! ಇದೆಂಥಾ ದುರಂತಾ ನೋಡಿ. ನಮ್ಮ ನಾಡಲ್ಲೇ ನಮಗೆ ಹಬ್ಬದ ಸಂದರ್ಭದಲ್ಲಿ ಕನ್ನಡದ ಹೊಸಚಿತ್ರಗಳಿಗೆ ಸಾಕಷ್ಟು ಚಿತ್ರಮಂದಿರಗಳಿಲ್ಲವಂತೆ! ಯಾರು ಹೊಣೆ ಇದಕ್ಕೇ? ಪರಭಾಷಾ ಚಿತ್ರಗಳನ್ನು ತೆಗೆಯೋರಾ? ಅವರ ಕೆಲಸ ಅವರು ಮಾಡ್ತಿದಾರೆ, ನಿಜವಾಗ್ಲೂ ಸರಿಯಿಲ್ಲದೇ ಇರೋರು ನಮ್ಮವರೇ! ನಮ್ಮ ಕನ್ನಡ ಚಿತ್ರರಂಗದ ಬೃಹಸ್ಪತಿಗಳೇ!!
ಪರಭಾಷಾ ಚಿತ್ರಗಳನ್ನು ತಡೆಯೋಕಾಗಲ್ವಾ?
ಇವತ್ತಿನ ದಿನ, ಪರಭಾಷಾ ಚಿತ್ರಗಳ ಬಿಡುಗಡೆಯನ್ನು ತಡೆಯೋಕೆ ಕಾನೂನಿನ ರೀತ್ಯಾ ಆಗಲ್ಲ. ಹೀಗೆ ತಡೆಯಬಲ್ಲವರು ವಾಣಿಜ್ಯ ಮಂಡಲಿಯೋರು, ಸರ್ಕಾರದವರು ಮತ್ತು ಜನರು! ಇದುವರೆಗೂ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಪರಭಾಷಾ ಚಿತ್ರಗಳ ಬಿಡುಗಡೆಯನ್ನು ತಡೆಯೋಕೆ ಅಂತಾ ಮಾಡಿಕೊಂಡಿದ್ದ, ಏಳು ವಾರಗಳ ಅಂತರದ ಬಿಡುಗಡೆ ಹಾಗೂ ಇಂತಿಷ್ಟೇ ಪ್ರಿಂಟುಗಳ ಬಿಡುಗಡೆ ಎಂಬ ಕಟ್ಟಳೆಗಳನ್ನು ಒಳಗೊಂಡಿರೋ “ಜಂಟಲ್ಮನ್ ಅಗ್ರಿಮೆಂಟ್” ಎನ್ನೋ ಕೆಲಸಕ್ಕೆ ಬಾರದ ನಿಯಮದಿಂದ ಈ ಕೆಲಸ ಸಾಧ್ಯವೇ ಇಲ್ಲವಾಗಿದೆ. ಇದಕ್ಕೆ ಈ ಹಿಂದೆಯೂ ನಿಯಮ ಮೀರಿ ಬಿಡುಗಡೆಯಾದ ಪರಭಾಷಾ ಚಿತ್ರಗಳೇ ಸಾಕ್ಷಿ. ಅಷ್ಟಕ್ಕೂ ಮೀರಿ ವಾಣಿಜ್ಯ ಮಂಡಳಿಯೋರು ರಾವಣನ್ ಸಿನಿಮಾ ಬಿಡುಗಡೆ ತಡೆಗೆ ಯತ್ನಿಸಿದಾಗ, ಇವರ ಒತ್ತಡಕ್ಕೆ ಮಣಿದ ರಿಲಯನ್ಸ್ ಚಿತ್ರ ತಕ್ಷಣಕ್ಕೆ ಬಿಡುಗಡೆ ಮಾಡಿದ್ದನ್ನು ಹಿಂತೆಗೆದುಕೊಂಡರೂ ಬೆನ್ನಲ್ಲೇ “ಕಾಂಪಿಟೇಶನ್ ಕೌನ್ಸಲ್ ಆಫ್ ಇಂಡಿಯಾ” (ಸಿಸಿಐ)ಕ್ಕೆ ದೂರು ನೀಡಿತು. ಆ ಸಂಸ್ಥೆಯೋರು ಈಗ ವಾಣಿಜ್ಯ ಮಂಡಳಿಗೇ ದಂಡ ಹಾಕಿರೋ ಸುದ್ದಿಯಿದೆ. ಹಾಗಾಗಿ ಮಂಡಳಿಗೆ, ತನ್ನ ಯಾವುದೇ ನಿಯಮಾನ ತೋರಿಸಿ ಪರಭಾಷಾ ಚಿತ್ರಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ! ಇನ್ನುಳಿದಂತೆ ಜನತೆ ಪರಭಾಷಾ ಚಿತ್ರಗಳತ್ತ ಮನಸ್ಸು ಮಾಡದೆ ಕನ್ನಡ ಸಿನಿಮಾ ನೋಡಬೇಕು! ಇದೂ ಕೂಡಾ ಆಗದ ಹೋಗದ ಮಾತು. ಯಾರನ್ನೂ ಇಂಥದ್ದನ್ನು ನೋಡಬೇಡಿ ಎಂದು ಯಾರೂ ತಡೆಯಲಾಗದು. ಹಾಗಾದರೆ ಸರ್ಕಾರ ಈ ಬಗ್ಗೆ ರಂಗಕ್ಕಿಳಿಯಬಹುದೇ? ಹೌದೂ! ಕರ್ನಾಟಕ ಸರ್ಕಾರ ಇಂಥದ್ದೊಂದು ದಿಟ್ಟಕ್ರಮಕ್ಕೆ ಮುಂದಾಗಬಹುದು.
ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಘೋಷಣೆ!
ವಿಶ್ವಸಂಸ್ಥೆಯ ಬಾರ್ಸಿಲೋನಾ ಭಾಷಾ ಘೋಷಣೆಯಲ್ಲಿ ಜಗತ್ತಿನ ಪ್ರತಿಯೊಂದು ಭಾಷಿಕ ಜನಾಂಗಕ್ಕೂ ಇರುವ ಹಕ್ಕುಗಳ ಬಗ್ಗೆ ಮಾತಾಡಲಾಗಿದೆ. ಭಾಷಿಕ ಸಮುದಾಯಗಳು ಅವು ಯಾವುದೇ ದೇಶದಲ್ಲಿರಲಿ, ಯಾವುದೇ ರಾಜಕೀಯ ಪರಿಸ್ಥಿತಿಯಲ್ಲಿರಲಿ, ಆಯಾ ದೇಶದಲ್ಲಿ ಎಂಥದ್ದೇ ಕಾನೂನಿರಲಿ... ಅವುಗಳ ಭಾಷಿಕ ಹಕ್ಕುಗಳಿಗೆ ಧಕ್ಕೆ ತರುವಂತಿಲ್ಲ ಎನ್ನುವ ಈ ಘೋಷಣೆಯಲ್ಲಿ ಒಂದು ಭಾಷಿಕ ಜನಾಂಗದ ನಾಡಲ್ಲಿ ಪರಭಾಷೆಯ ಮನರಂಜನೆಗಳು ಯಾವ ಪ್ರಮಾಣದಲ್ಲಿರಬಹುದು ಎನ್ನುವುದನ್ನು ತೀರ್ಮಾನಿಸುವುದು ಆಯಾ ಭಾಷಿಕರಿಗೆ ಇರುವ ಹಕ್ಕೆಂದು ಹೇಳಲಾಗಿದೆ.
Article 45
All language communities have the right for the language specific to the territory to occupy a preeminent position in cultural events and services (libraries, videothèques, cinemas, theatres, museums, archives, folklore, cultural industries, and all other manifestations of cultural life)ಈ ಹಿನ್ನೆಲೆಯಲ್ಲಿ ರಾಜ್ಯಸರ್ಕಾರವೇ ಪರಭಾಷಾ ಚಿತ್ರಗಳ ಕಡಿವಾಣಕ್ಕೆ ಮುಂದಾಗಬೇಕಾಗಿದೆ. ಪರಭಾಷಾ ಚಿತ್ರಗಳ ಬಿಡುಗಡೆಗೆ ಕಡಿವಾಣ ಹಾಕೋಕೆ ಅವಕ್ಕೆ ಹೆಚ್ಚಿನ ತೆರಿಗೆ ಹಾಕೋ, ಇಂತಿಷ್ಟೇ ಟಾಕೀಸು ಅನ್ನೋ ನಿಯಾಮಾನ ಸರ್ಕಾರ ಮಾಡಬೇಕಾಗುತ್ತೆ. ಯಾಕಂದರೆ ಇಲ್ಲೂ ಮಾತು ‘ಸರಿಯಿಲ್ಲದ ಒಕ್ಕೂಟ ವ್ಯವಸ್ಥೆ’ಯ ಬುಡಕ್ಕೇ ಬರುತ್ತೆ. ಕನ್ನಡ ಸಿನಿಮಾಗಳಿಗೆ ಪ್ರೈಮರಿ ಮಾರುಕಟ್ಟೆ ಕರ್ನಾಟಕ, ಆದರೆ ಇದು ಪರಭಾಷಾ ಚಿತ್ರಗಳಿಗೆ ಹೆಚ್ಚುವರಿ/ ಸೆಕಂಡರಿ ಮಾರುಕಟ್ಟೆ. ಇಂಥಾ ಸನ್ನಿವೇಶದಲ್ಲಿ ನಮ್ಮ ಮಾರುಕಟ್ಟೆ ಕಾಪಾಡಿಕೊಳ್ಳೋ ಹಕ್ಕು ನಮಗಿರಲೇಬೇಕಲ್ಲವೇ? "ಹಾಗೆ ಮಾಡಕ್ಕಾಗಲ್ಲಾ, ಇದು ಭಾರತ, ಇಲ್ಲಿ ಎಲ್ಲಾ ಭಾಷೆಯೋರೂ ಒಂದೇ, ದೇಶವೆಲ್ಲಾ ಒಂದೇ ನಿಯಮಾ, ಭಾರತ ದೇಶದಲ್ಲಿ ಯಾರಿಗಾದರೂ ಎಲ್ಲಾದರೂ ಹೋಗಿ ವ್ಯಾಪಾರ ಮಾಡೋ ಹಕ್ಕು ಭಾರತದ ಪ್ರಜೆಗಳಿಗಿದೆ" ಅಂತಂದುಕೊಂಡು ಹೋದರೆ ನಾಳೆ ನಮ್ಮ ಉಳಿವಿಗೇ ಗ್ಯಾರಂಟಿಯಿಲ್ಲ! ಸರ್ಕಾರ ವಿಶ್ವಸಂಸ್ಥೆಯ ಭಾಷಾಹಕ್ಕುಗಳತ್ತ ಸ್ವಲ್ಪ ಕಣ್ಣು ಹಾಯಿಸಿ ಕನ್ನಡವನ್ನು ಉಳಿಸಲು ಮುಂದಾಗಬೇಕು. ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲಿ ಮೊದಲ ಆದ್ಯತೆಯನ್ನು ನೀಡುವುದನ್ನು ಕಾನೂನು ಬದ್ಧಗೊಳಿಸಲೇಬೇಕು!
ಇದೆಲ್ಲಾ ಆಗುತ್ತಾ? ಅಂದ್ರೆ ಆಗುತ್ತೆ ಆದ್ರೆ ಅದುಕ್ಕೆ ಇಚ್ಛಾಶಕ್ತಿ ಬೇಕು...ಅಷ್ಟೇ! ಈಗ ನೋಡಿ ಒಂದು ಜನಾಂಗದ ಭಾಷಾಹಕ್ಕಿಗೆ ಧಕ್ಕೆಯಾಗೋದಾದ್ರೆ ಯಾವುದಕ್ಕೆ ಪ್ರಾಮುಖ್ಯತೆ ಸಿಗಬೇಕು ಅಂತಾ ವಿಶ್ವಸಂಸ್ಥೆ ಹೇಳಾಗಿದೆಯಲ್ಲಾ...ಒಟ್ನಲ್ಲಿ ಕೇಳೋಕೆ ಮನಸ್ಸು ಬೇಕು ಅಷ್ಟೆ!
ಕನ್ನಡ ಜನರ ಉಳಿವು ಮತ್ತು ಡಬ್ಬಿಂಗ್!
ಈ ನಿಲುವು ತೆಗೆದುಕೊಂಡರೆ ಕನ್ನಡದ ಜನರು ಉಳಿದ ಭಾಷೆಯ ಚಿತ್ರಗಳನ್ನು ಹೇಗೆ ನೋಡೋದು ಎನ್ನುವ ಪ್ರಶ್ನೆಗೆ ಉತ್ತರ... ಡಬ್ಬಿಂಗ್ ಮೂಲಕ ಎನ್ನಬಹುದು. (ಭಾಷೆಯನ್ನು ಉಳಿಸಿಕೊಳ್ಳೋಕೆ ಇದನ್ನೂ ಒಂದು ಸಾಧನವೆಂದೇ ವಿಶ್ವಸಂಸ್ಥೆ ಪರಿಗಣಿಸುತ್ತಿದೆ.) ಕರ್ನಾಟಕದಲ್ಲಿ ಪ್ರದರ್ಶನವಾಗೋ ಎಲ್ಲಾ ಕನ್ನಡದಲ್ಲಿರಬೇಕಾದ್ದು ಕನ್ನಡದವರ ಹಕ್ಕು. ಹಾಗಾಗಿ ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗಬೇಕು. "ಅಲ್ರೀ, ಈಗ ಒರಿಜಿನಲ್ ಬಂದ್ರೇ ನಮ್ಮ ಚಿತ್ರಕ್ಕೆ ಟಾಕೀಸ್ ಸಿಗಲ್ಲಾ, ಇನ್ನು ಡಬ್ಬಿಂಗ್ ಬರಕ್ ಬಿಟ್ರೆ ನಮ್ ಗತಿ ಏನು?" ಅನ್ನೋ ಪ್ರಶ್ನೆ ಚಿತ್ರರಂಗದೋರಲ್ಲಿ ಹುಟ್ಟಬಹುದು. ಮೊದಲು ಕನ್ನಡದೋರು ಕನ್ನಡದಲ್ಲಿ ಮನರಂಜನೆಯನ್ನು ಪಡ್ಕೊಳ್ಳೋ ವ್ಯವಸ್ಥೆ ಗಟ್ಟಿಯಾಗಲಿ. ಕನ್ನಡ ಮೊದಲು ಉಳಿದರೆ ಕನ್ನಡ ಚಿತ್ರರಂಗದೋರು ಕೂಡಾ ಉಳಿಯೋದು ಅಲ್ವಾ! ಹಾಗಾಗಿ ಚಿತ್ರರಂಗದೋರಿಗೆ "ಚೆನ್ನಾಗಿರೋ ಸಿನಿಮಾ ತೆಗೀರಿ, ಜನಾ ನೋಡ್ತಾರೆ. ಇಡೀ ಕನ್ನಡನಾಡಿನ ಜನರನ್ನು ಡಬ್ಬಿಂಗ್ ಮೂಲಕ ಕನ್ನಡ ಭಾಷೆಯ ಚಿತ್ರಗಳತ್ತ ಸೆಳೆದಾದ ಮೇಲೆ ನಿಮ್ಮ ಚಿತ್ರಗಳಿಂದ ಅವರನ್ನು ಸೆಳೀರಿ" ಅನ್ನದೇ ವಿಧಿಯಿಲ್ಲ.
ಕನ್ನಡಕ್ಕೆ ಡಬ್ಬಿಂಗ್ ಬೇಡಾ, ಬೇಡಾ ಅಂತಂದು ಅಂದೂ... ಈಗ ಕನ್ನಡದ ಜನರೇ ಪರಭಾಷಾ ಚಿತ್ರಗಳನ್ನು ಆಯಾಯಾ ಭಾಷೆಗಳಲ್ಲೇ ನೋಡಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮ ನಿಧಾನವಾಗಿ ಕನ್ನಡ ಚಿತ್ರಗಳಿಂದ ಅವರು ದೂರಾಗ್ತಿದಾರೆ. ಬರೀ ಇಷ್ಟೇ ಆಗಿದ್ದಿದ್ರೆ ಸಹಿಸಬೋದಿತ್ತು.. ಇದರ ಪರಿಣಾಮವಾಗಿ ಮನರಂಜನಾ ಕ್ಷೇತ್ರದಿಂದ ಕನ್ನಡ ಅಳಿದುಹೋಗುವ ಅಪಾಯ ಇದೆ. ಲಾಭವೊಂದನ್ನೇ ಗುರಿಯಾಗಿಸಿಕೊಂಡೋರು ಪರಭಾಷಾ ಚಿತ್ರಗಳ ವಿತರಣೇಲೆ ತೇಲಾಡ್ತಿರೋದು ಒಂದು ಕಡೆಯಾದ್ರೆ, ಡಬ್ಬಿಂಗ್ ವಿರೋಧ ಮಾಡ್ತಾನೇ "ರಿಮೇಕ್ ಒಂದು ಕಷ್ಟದ ಕಲೆ, ಅದನ್ನು ಮಾಡೋಕೂ ತಾಕತ್ತು ಬೇಕು" ಅನ್ನೋ ನಿರ್ದೇಶಕರಂಥಾ ಜನ ಇನ್ನೊಂದು ಕಡೆ, ಪರಭಾಷೆಯಲ್ಲಿ ಚಿತ್ರ ಬಿಡುಗಡೆಯಾಗೋದುನ್ನೇ ಕಾಯ್ಕೊಂಡು ಓಡೋಗಿ ರಿಮೇಕ್ ಹಕ್ಕು ಪಡ್ಕೊಂಡು ಬರೋ ನಿರ್ಮಾಪಕರು ಮೂರನೇ ಕಡೆ... ಡಬ್ಬಿಂಗ್ ಬಂದ್ರೆ ಸಂಸ್ಕೃತಿ ಹಾಳು, ಭಾಷೆ ಹಾಳು ಅಂತನ್ನೋರು ಮತ್ತೊಂದು ಕಡೆ... ಎಲ್ಲಾ ಒಟ್ಟೊಟ್ಗೆ ನಾಡುನ್ನ ಮಕಾಡೆ ಮಲಗುಸ್ತಾ ಇರೋದ್ ಹೆಂಗೆ ನೋಡ್ಕೊಂಡಿರೋದು ಗುರೂ? ಕನ್ನಡ ಚಿತ್ರಗಳು ನಿಧಾನವಾಗಿ ಶಾಶ್ವತವಾಗಿ ಮರೆಯಾಗಲು ಕಾರಣವಾಗುತ್ತಿರುವ ಮತ್ತೆಂದೂ ಏಳಲಾಗದ ಇಂತಹ ಸಾವಿಗಿಂತ ಡಬ್ಬಿಂಗ್ ತರುವ ಸಣ್ಣ ಜರ್ಕ್ ವಾಸಿ ಅನ್ಸಲ್ವಾ!
ನಮ್ಮ ಚಿತ್ರರಂಗದೋರು "ಇಲ್ಲಪ್ಪಾ... ನಮಗೆ ಸ್ಪರ್ಧೆ ಬೇಡಾ, ನಮಗೆ ಬರೀ ಸಬ್ಸಿಡಿ ಬೇಕು, ನಮ್ಮ ಚಿತ್ರಗಳಿಗೆ ಜನರು ಬರಲೀ ಅಂತಾ ತೆರಿಗೆ ವಿನಾಯ್ತಿ ಕೊಡಬೇಕು" ಅಂತಾ ಸದಾ ಸರ್ಕಾರದ ಮುಂದೆ ಕೈಯ್ಯೊಡ್ಡಿ ನಿಲ್ಲದೆ ಒಳ್ಳೊಳ್ಳೆ ಚಿತ್ರ ತೆಗೆದು, ಸ್ಪರ್ಧೆ ಎದುರಿಸಿ ಗೆದ್ದು ತೋರುಸ್ತೀವಿ ಅನ್ನೋ ಸ್ವಾಭಿಮಾನಿಗಳಾಗಬೇಕು. ಇಂಥಾ ಕೆಚ್ಚೆದೆಯ ಕನ್ನಡದೋರುನ್ನ ನಮ್ಮೋರು,. ನಿಜವಾದ ಕನ್ನಡಿಗರು ಅನ್ನಬಹುದು... ಅದು ಬಿಟ್ಟು ಪರಭಾಷೆ ಚಿತ್ರಾ ಪರಭಾಷೇಲೇ ನೋಡಿ, ಯಾಕಂದ್ರೆ ಅದು ಕನ್ನಡದಲ್ಲಿ ಡಬ್ ಆಗ್ಬುಟ್ರೆ ನಮ್ ಸಿನಿಮಾ ನೋಡೋರಿರಲ್ಲಾ, ಕನ್ನಡ ಸಿನಿಮಾ ತೆಗ್ಯೋರಿರಲ್ಲಾ ಅನ್ನೋ ಹೇಡಿತನದಿಂದಾ ನಾಳೆ ಕನ್ನಡನೆಲದಿಂದ ಕನ್ನಡಾನೇ ಅಳಿದುಹೋಗೋದನ್ನು ನೋಡ್ಕೊಂಡು ಸಹಿಸೋದು ಹೇಗೆ ಗುರೂ!
ಕೊನೆಹನಿ: ತಮಾಶೆ ಅಂದ್ರೆ ಕಳೆದ ದೀಪಾವಳಿ ಸಮಯದಲ್ಲಿ ಕನ್ನಡದ ಚಿತ್ರರಂಗದವರು ಚಿತ್ರ ಬಿಡುಗಡೆ ಮಾಡೊಕೆ ಬೆದರಿದ್ದು ವೇಲಾಯುದಂ, ಏಳುಂ ಅರಿವುಮ್ ಮತ್ತು ರಾ ಒನ್ ಚಿತ್ರಗಳ ಅಬ್ಬರಕ್ಕೆ ಬೆದರಿ. ಆದರೆ ಈ ಮೂರರಲ್ಲಿ ಒಂದೂ ಕೂಡಾ ನಮ್ಮಲ್ಲಿ ಗೆಲ್ಲಲಿಲ್ಲ. ಅಂದ್ರೇನರ್ಥ? ನಮ್ಮವರೇ ಸ್ಪರ್ಧೆಗೆ ಮುಂಚೆ ಸೋತು ಶರಣಾದರು ಅಂತಲ್ಲವೇ?
9 ಅನಿಸಿಕೆಗಳು:
ಡಬ್ಬಿಂಗ್ ಇರಲಿ ಅಥವಾ ಇಲ್ಲದಿರಲಿ, ದೊಡ್ದ ಬಜೆಟ್ಟಿನ ಪರಬಾಶೆ ಚಿತ್ರಗಳು ಬರಲಿ ಅಥವಾ ಬಾರದಿರಲಿ ಕನ್ನಡದಲ್ಲಿ ಒಳ್ಳೆಯ ಚಿತ್ರ ಬಂದರೆ ಅದು ಗೆದ್ದೆ ಗೆಲ್ಲುತ್ತದೆ. ಆಗ ಇತರ ಅಂಶಗಳೆಲ್ಲ ನಗಣ್ಯವಾಗುತ್ತವೆ. ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡದೇ ಪರಬಾಶೆ ಚಿತ್ರಗಳಿಗೆ ಮಾರುಕಟ್ಟೆ ನಿರ್ಮಿಸಿ ಕೊಟ್ಟು, ಅವುಗಳನ್ನು ಡಬ್ ಮಾಡದೇ ಜನರಿಗೆ ಆಯಾ ಬಾಶೆ ಕಲಿಯುವ ಹಾಗೆ ಮಾಡಿ, ಪರಬಾಶೆ ಚಿತ್ರಗಿರುವ ಅಲ್ಪ ಮಾರುಕಟ್ಟೆಯನ್ನು ದೊಡ್ಡದಾಗಿ ಮಾಡುತ್ತಿದ್ದಾರೆ. ಕ್ರಮೇಣ ಕನ್ನಡಕ್ಕಿರುವ ಏಕೈಕ ದೊಡ್ದ ಮಾರುಕಟ್ಟೆಯನ್ನೂ (ಸದ್ಯದ ಮಟ್ಟಿಗೆ) ಇತರರಿಗೆ ದಾರೆ ಎರೆದು ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಕಲ್ಲನ್ನು ಹಾಕಿಕೊಳ್ಳುತ್ತಿದ್ದಾರೆ.
ಲೇಖನದಲ್ಲಿ ಹೇಳಿರುವ ಹಾಗೆ, ಪರಬಾಶೆ ಚಿತ್ರಗಳು ಕ್ರಮೇಣ ರಾಜ್ಯದಲ್ಲಿ ಮಾಡುವ ಸರಿಪಡಿಸಲಾಗದ ಹಾನಿಗಿಂತ ಡಬ್ಬಿಂಗ್ ನೀಡುವ ಸಣ್ಣ ಮಟ್ಟದ ಜರ್ಕ್ ನೂರು ಪಟ್ಟು ವಾಸಿ.
ಸಕ್ಕತ್ ಬರಹ ಸರ್. enguru rocks
೧) ಕರ್ನಾಟಕದ ಸಿನಿಮ ನಿರ್ಮಾಪಕರು ಮತ್ತು ಹಂಚಿಕೆದಾರರು ಬೇರೆ ಭಾಷೆ ಚಿತ್ರ ನಿರ್ಮಾಪಕರ ಎಂಜಲು ಕಾಸಿಗೆ ಆಸೆಪಟ್ಟು ಕನ್ನಡ ತಾಯಿಯನ್ನು ಬಲಿ ಕೊಡುತ್ತಿದ್ದಾರೆ. ನೀವು ಹೇಳೋ ಹಾಗೆ ಕನ್ನಡ ಸಿನಿಮ ಬಿಡುಗಡೆ ಮುಂಚೆನೇ ಚೆನ್ನಾಗಿಲ್ಲ ಅಂತ ತೀರ್ಮಾನ ಮಾಡಿಬಿಡುತ್ತಾರೆ. ಇವರ ಕನ್ನಡ ನಿರಾಭಿಮನದಿಂದಲೇ ನಮ್ಮ ಚಿತ್ರರಂಗ ಇನ್ನು ಅಂಬೆಗಾಲಿಡುತ್ತ ಸಾಗಿರುವುದು. ನಮ್ಮ ಒಳ್ಳೆ ಚಿತ್ರಗಳು ಪ್ರಚಾರದ ಕೊರತೆಯಿಂದಾಗಿ ನೆಲಕಚ್ಚುತ್ತದೆ. ಇತ್ತೀಚಿನ ಉದಾಹರಣೆ : ಐ ಅಂ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ.
೨) ಡಬ್ಬಿಂಗ್ ಮೇಲಿರುವ ಕಡಿವಾಣ ಕೂಡಲೇ ತೆಗೆಯಬೇಕು. ಸಣ್ಣ ಸಣ್ಣ ಮಕ್ಕಳು ತಮಿಳು, ಹಿಂದಿ, ತೆಲಗು ಕಲಿತ ಇದಾರೆ. ಒಳ್ಳೆಯ ಬೆಳವಣಿಗೆ ಅಲ್ಲ.
೩) ನೀವು ಕಳೆದ ದೀಪಾವಳಿ ಬಿಡುಗಡೆ ಆದ ಪರಭಾಷಾ ಸಿನಿಮಾಗಳ ಬಗ್ಗೆ ಹೇಳಿದ್ದೀರ - ಆದರೆ ಅದು ಯಾವಾಗಲು ಆಗೋದೇ ಹಂಗೆ! ೨೦೦೬ ರಲ್ಲಿ ಸಿವಾಜಿ ಅಂತ ಸಿನಿಮ ಬಂತು - ನಮ್ಮ ದುನಿಯಾ ಮತ್ತೆ ಮುಂಗಾರು ಮಳೆ ಮುಂದೆ ಏನು ಕೆಮ್ಮಕ್ ಆಗ್ಲಿಲ್ಲ. ೨೦೧೦ ರೋಬೋ ಸಿನಿಮ ಬಂತು ಜಾಕಿ + ಸೂಪರ್ ಅಬ್ಬರದ ಮುಂದೆ ಟುಸ್ ಅಂತು !
೪) ಅಷ್ಟೆಲ್ಲ ಯಾಕೆ ಮೊನ್ನೆ ಬಿಡುಗಡೆಯಾದ ಬಿಸಿನೆಸ್ಸ್ಮ್ಯಾನ್ ಅನ್ನೋ ಚಿತ್ರ ಮಕಾಡೆ ಮಲಗಿದೆ ಅಂತ ಸುದ್ದಿ.ಡೆಕ್ಕನ್ ಹೆರಾಲ್ಡ್ 'thumbs down' ಕೊಟ್ಟಿದೆ . ಆದರೆ ಏನು ಅಬ್ಬರವಿಲ್ಲದೆ ಬಿಡುಗಡೆಯಾದ ಸಿದ್ಲಿಂಗು ಒಳ್ಳೆ ಒಪನಿಂಗ್ ತೊಗೊಂಡಿದೆ. ಡೆಕ್ಕನ್ ಹೆರಾಲ್ಡ್ 'thumbs up' ಕೊಟ್ಟಿದೆ .ಲೂಸ್ ಮಾದ ಅವರ ಬಗ್ಗೆ ಕೆಟ್ಟದಾಗಿ ಮಾತಾಡುತ್ತಿದ್ದ ಕೊಸ್ಮೋ ಕನ್ನಡಿಗರು ತೆಪ್ಪಗಾಗೋ ಹಾಗೆ ಅವರು ನಟಿಸಿದ್ದಾರಂತೆ. ಅವರು ಒಳ್ಳೆ ನಟ ಅಂತ ಹುಡುಗರು ಚಿತ್ರದಲ್ಲೇ ತೋರಿಸಿದ್ದರು.
೫) ಸಲ್ಪ ಭಾರತದ ಬೇರೆ ಬೇರೆ ಚಿತ್ರರಂಗಗಳ ಮೇಲೆ ಸಣ್ಣ ಸಂಶೋಧನೆ ಮಾಡಿದರೆ ಗೊತ್ತಾಗುತ್ತೆ ಎಲ್ಲರ ಮನೆ ದೋಸೆ ತೂತು ಅಂತ. ಕನ್ನಡಿಗರು ಬಾವಿ ಕಪ್ಪೆಗಳು. ಹಿತ್ತಲು ಗಿಡ ಮದ್ದಲ್ಲ ಅನ್ನೋ ಅಸಡ್ಡೆ. ಇದನ್ನ ಚೆನ್ನಾಗಿ ಎನ್ಕ್ಯಾಶ್ ಮಾಡ್ಕೊಂದಯಾರೆ ಬೇರೆಯವರು. ಈ ವರದಿಗಳನ್ನು ಓದಿದರೆ ತಿಳಿಯುತ್ತದೆ:
http://www.hiindiaweekly.com/Editions/06-01-2012/PDF/hiindia_01_06_12_28.pdf
http://www.thehindu.com/news/the-india-cables/article1715615.ece
ಕೊನೆ ಹನಿ ಹಚ್ಹಿಕೊಂಡು ಹೊಡೆದಹಾಗಿದೆ
ಇದು ಕನ್ನಡ ಜನತೆಯ ಮುಂದೆ ಇರೋ ಗಂಬೀರ ಸಮಸ್ಯೆ. ನಾವು ನಮ್ಮ ಭಾಷೆ ಹಾಗು ನಮ್ಮ ತನಕ್ಕಾಗಿ ಹೋರಾಟ ಮಾಡದಿದ್ದರೆ ಮುಂದೊಂದು ದಿನ ಗುಜರಾತಿ, ಮರಾಟಿ ಹಾಗು ಇತರೆ ಭಾಷಾ ಚಿತ್ರಗಳಂತೆ ಮೂಲೆ ಗುಂಪಾಗುವುದು ಸತ್ಯ. ಈಗಲೇ ನಮ್ಮ ಸರ್ಕಾರ ಹಾಗು ಚಿತ್ರ ಮಂಡಳಿ ಎಚ್ಚರ ವಹಿಸದಿದ್ದರೆ ನೀವೆಲಿದಂತೆ ನಮ್ಮ ಜನ ಕನ್ನಡವನ್ನೇ ಮರೆತು ಹೋಗುವುದು ಸತ್ಯ. ನಮ್ಮಲ್ಲೂ ಹೊಸ ಪ್ರಯೋಗಗಳ ಚಿತ್ರ ಮೂಡಿಬರಬೇಕು ಹಾಗು ಉನ್ನತ ಗುಣಮಟ್ಟದ ಚಿತ್ರಗಳನ್ನ ತಯಾರು ಮಾಡಬೇಕಾಗಿರುವುದು ಅತ್ಯಗತ್ಯ. ನಿಮ್ಮ ಈ ಪ್ರಯತ್ನಕ್ಕೆ ನನ್ನ ಮೆಚ್ಹುಗೆ ಸದಾ ಇರುತ್ತದೆ. ಧನ್ಯವಾದಗಳು.
Kannada cinemavannu kannadigane kollau horataaga . . . . . !
Karnataka chalanchitra mandali modalu parabhasha chitragalu kalidadante avugalannu tadeyabeku.aadaru . .; kannadigaru parabhase cinema nodtare yake . . . .?
Kannadigaru swabhimanigalalla.
Kannadigaru swabhimanigalagabeku.
ಕನ್ನಡ ಸಿನಿ ಪ್ರೆಷಕನಿಗೆ ಇರುವ ಕಾಳಾಜಿ, ಅದರಿಂದಲೇ ಬದುಕು ಕಟ್ಟಿಕೊಂಡಿರುವ ಸಿನಿಮಾ ಮಂದಿಗೆ ಯಾಕೆ ಇಲ್ಲ? ರಜಾದಿನಗಳಲ್ಲಿ ಬರಬೇಕಿದ್ದ ಸಿನಿಮಾ ಪರಭಾಷೆಯ ಸಿನಿಮಾಗೆ ಹೆದರಿ ಮುಂದಕ್ಕೆ ಹಾಕುವ ಇವರು ಯುದ್ದಕ್ಕೇ ಮುನ್ನ ಶರಣಗುವಷ್ಟು ನಿರ್ವಿಯರೇ ಸದಾ ಕನ್ನಡ ಸಿನಿಮಾದ ಬಗ್ಗೆ ಮಾತಾಡುವ ಜಗ್ಗೇಶ್ ಉಪ್ಪಿ ಮಾಡುತ್ತಿರುವ ಸಿನಿಮಾ ಕಥೆ ಹೇಳುವ ಹಾಗೇ ಇಲ್ಲ.... ಅಷ್ಟಕ್ಕೂ ಬಿಡುಗಡೆಗೆ ಹೆದರಿಸಿದ ಕುಚೇಲನ್, ಉಸರವಳ್ಳಿ, ರಾ.ಒನ್, ವೆಲಾಯಥಂ, 7ಅಮ್ ಅರಿವು, ಬಿಸಿನೆಸ್ಮನ್, ಬಿದ್ದರೆ ಎದುರಿಸಿದ "ಜಾಕಿ, ಸಾರಥಿ, ಶಕ್ತಿ, ಸಿದ್ಲಿಂಗು" ಗೆದ್ದವು .
ಡಬ್ಬಿಂಗ್ ಸಿನಿಮಾದಿಂದ ಸಂಸ್ಕೃತಿ ಹಾಳಗುವುದಾದರೆ ನೇರವಾಗಿ ಪರಭಾಷೆ ನೋಡುತ್ತಿರುವರಲ್ಲಾ ಇದರಿಂದ ಭಾಷೆ ಜೊತೆಗೆ ಸಂಸ್ಕೃತಿಯು ಹಾಳಗುವುದಿಲ್ಲವೇ? "ಭಾಷೆ ಸಂಸ್ಕೃತಿಯ ವಾಹಕ" ಹಾಗಾಗಿ ಭಾಷೆಯೇ ನಶಿಸಿದರೆ ಸಿನಿಮಾ ಎಲ್ಲಿ? ಸಂಸ್ಕೃತಿ ಎಲ್ಲಿ...?
Ittichina dinagalalli kanataka sarkarave kannadigara dodda shatru aagide...kannada bashe haagu naadina bagge yava kalajiyu illadante vartisuttide.kannada haagu kannadigara paravagi yaava gattiyada nirdharagallanu tegrdukollada e sarkara punda rajakiya madikondu kaala harana madtha ide.
ಪರಭಾಷಾ ಚಿತ್ರಗಳನ್ನು ನೋಡುವವರು ಕನ್ನಡಿಗರು ಅಂತ ತಿಳಿದುಕೊಂಡಿದ್ದರೆ ಅದು ತಪ್ಪು. ಇರಬಹುದು, ೧೦ % ಜನ ಕನ್ನಡಿಗರು ನೋಡಬಹುದು. ಆದರೆ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳನ್ನ ಹೆಚ್ಚಾಗಿ ನೋಡೋದು ಪರ ರಾಜ್ಯ ಜನರು. ನಮ್ಮಲ್ಲಿಗೆ ಬರುವಂತಹ ಪರರಾಜ್ಯ ಯುವಕರು. ಬೇರೆ ಬೇರೆ ರಾಜ್ಯದಿಂದ ಇಲ್ಲಿಗೆ ಕಾಲೇಜ್ ಕಲಿಯೋಕೆ ಬರುವ ಹುಡುಗ ಮತ್ತು ಹುಡುಗಿಯರು. ಮೊದಲು ನಾವು ಅದಕ್ಕೆ ಏನಾದರು ಮಾಡಬೇಕು. ಎಲ್ಲರನ್ನು ಇಲ್ಲಿಗೆ ಬರಲಿಕ್ಕೆ ಬಿಟ್ಟು, ಆಮೇಲೆ ಗೊಳಡಿದರೆ ಏನು ಆಗಲ್ಲಾ. ಅವರು ಇಲ್ಲಿಗೆ ಬಂದು, ಇಲ್ಲೇ ಇದ್ದು, ಇಲ್ಲಿಯದೇ ತಿಂದು, ಬಿಟ್ಟು ಹೋಗ್ತಾರೆ. ಆದ್ರೆ ಹೋಗುವಾಗ ಸುಮ್ನೆ ಹೋಗಲ್ಲ, ಅವರ ಭಾಷೆಯನ್ನು ನಮ್ಮವರಿಗೆ ಕಲಿಸಿ ಹೋಗ್ತಾರೆ. ಒಂದು ಸಲ ಒಬ್ಬ ಮನುಷ್ಯ ಒಂದು ಭಾಷೆ ಕಲಿತರೆ ಪದೆ ಪದೆ ಆ ಭಾಷೆಯ ಚಿತ್ರವನ್ನು ನೋಡಬಯಸುತ್ತಾನೆ. ಹೀಗಾಗಿ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಾಗುತ್ತೆ ವಿನಃ ಕಡಿಮೆ ಆಗಲ್ಲ. ನಾವು ಕನ್ನಡಿಗರಿಗೆ ಬೇರೆ ಭಾಷೆಯ ಚಿತ್ರಗಳನ್ನ ನೋಡಬೇಡಿ ಅಂತ ಅಂದ್ರೆ ಅವ್ರು ನೋಡೋದನ್ನ ಬಿಟ್ರೂ , ಬೇರೆ ಸಾಕಷ್ಟು ಜನ ಅವುಗಳನ್ನ ನೋಡಿ ಪ್ರೋತ್ಸಾಹಿಸುತ್ತಾರೆ. ಹಾಗಾಗಿ ಈಗ ಕನ್ನಡಿಗರಿಗೆ ಹೇಳುವದರಿಂದ ಏನು ಪ್ರಯೋಜನವಿಲ್ಲ. ಮೊದಲು ಶಿಕ್ಷಣ ಸಂಸ್ಥೆಗಳನ್ನು ಟಾರ್ಗೆಟ್ ಮಾಡಬೇಕು. ಮ್ಯಾನೇಜ್ಮೆಂಟ್ ಕೋಟ ದಲ್ಲಿ ಸಾಕಷ್ಟು ಪರಭಾಷಾ ಯುವಕರನ್ನ ನಮ್ಮ ರಾಜ್ಯಕ್ಕೆ ಕರೆತಂದರೆ ಅವರು ತಮಗಿಷ್ಟವಾದ ಚಿತ್ರಗಳನ್ನೇ ನೋಡ್ತಾರೆ. ಅವರು ಕನ್ನಡ ಚಿತ್ರಗಳನ್ನ ನೋಡಲ್ಲ. ಅವರಿಗೆ ಅವರವರ ಭಾಷೆಯ ಚಿತ್ರಗಳೇ ಬೇಕು. ಹೀಗಾಗಿ ಬೇರು ಕಿತ್ತು ಹಾಕಬೇಕು ವಿನಃ ಎಲೆಗಳನಲ್ಲ. ನೋಡುವವರೇ ಇಲ್ಲ ಅಂತ ಅಂದಮೇಲೆ ತೋರಿಸುವವರು ಇರುವರೇ? ಬರುವರೆ? ಬಂದರು ಬದುಕುವರೆ? ನೀವೇನಂತಿರಿ ????????
ಕನ್ನಡ ಸಿನಿ ಪ್ರೆಷಕನಿಗೆ ಇರುವ ಕಾಳಾಜಿ, ಅದರಿಂದಲೇ ಬದುಕು ಕಟ್ಟಿಕೊಂಡಿರುವ ಸಿನಿಮಾ ಮಂದಿಗೆ ಯಾಕೆ ಇಲ್ಲ? ಪರಭಾಷಾ ಚಿತ್ರಗಳನ್ನು ನೋಡುವವರು ಕನ್ನಡಿಗರು ಅಂತ ತಿಳಿದುಕೊಂಡಿದ್ದರೆ ಅದು ತಪ್ಪು.Ittichina dinagalalli kanataka sarkarave kannadigara dodda shatru aagide. ಕರ್ನಾಟಕದ ಸಿನಿಮ ನಿರ್ಮಾಪಕರು ಮತ್ತು ಹಂಚಿಕೆದಾರರು ಬೇರೆ ಭಾಷೆ ಚಿತ್ರ ನಿರ್ಮಾಪಕರ ಎಂಜಲು ಕಾಸಿಗೆ ಆಸೆಪಟ್ಟು ಕನ್ನಡ ತಾಯಿಯನ್ನು ಬಲಿ ಕೊಡುತ್ತಿದ್ದಾರೆ. ನೀವು ಹೇಳೋ ಹಾಗೆ ಕನ್ನಡ ಸಿನಿಮ ಬಿಡುಗಡೆ ಮುಂಚೆನೇ ಚೆನ್ನಾಗಿಲ್ಲ ಅಂತ ತೀರ್ಮಾನ ಮಾಡಿಬಿಡುತ್ತಾರೆ. ಇವರ ಕನ್ನಡ ನಿರಾಭಿಮನದಿಂದಲೇ ನಮ್ಮ ಚಿತ್ರರಂಗ ಇನ್ನು ಅಂಬೆಗಾಲಿಡುತ್ತ ಸಾಗಿರುವುದು. ನಮ್ಮ ಒಳ್ಳೆ ಚಿತ್ರಗಳು ಪ್ರಚಾರದ ಕೊರತೆಯಿಂದಾಗಿ ನೆಲಕಚ್ಚುತ್ತದೆ. ಇತ್ತೀಚಿನ ಉದಾಹರಣೆ : ಐ ಅಂ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ. ಅವರು ಕನ್ನಡ ಚಿತ್ರಗಳನ್ನ ನೋಡಲ್ಲ. "ಭಾಷೆ ಸಂಸ್ಕೃತಿಯ ವಾಹಕ" ಹಾಗಾಗಿ ಭಾಷೆಯೇ ನಶಿಸಿದರೆ ಸಿನಿಮಾ ಎಲ್ಲಿ? ಸಂಸ್ಕೃತಿ ಎಲ್ಲಿ...? ನೀವು ಕಳೆದ ದೀಪಾವಳಿ ಬಿಡುಗಡೆ ಆದ ಪರಭಾಷಾ ಸಿನಿಮಾಗಳ ಬಗ್ಗೆ ಹೇಳಿದ್ದೀರ - ಆದರೆ ಅದು ಯಾವಾಗಲು ಆಗೋದೇ ಹಂಗೆ! ೨೦೦೬ ರಲ್ಲಿ ಸಿವಾಜಿ ಅಂತ ಸಿನಿಮ ಬಂತು - ನಮ್ಮ ದುನಿಯಾ ಮತ್ತೆ ಮುಂಗಾರು ಮಳೆ ಮುಂದೆ ಏನು ಕೆಮ್ಮಕ್ ಆಗ್ಲಿಲ್ಲ. ೨೦೧೦ ರೋಬೋ ಸಿನಿಮ ಬಂತು ಜಾಕಿ + ಸೂಪರ್ ಅಬ್ಬರದ ಮುಂದೆ ಟುಸ್ ಅಂತು !
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!