|
(ಫೋಟೋ ಕೃಪೆ: kannada.oneindia.in - http://bit.ly/ww4Wn2) |
ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ "ಚಿಂತನಗಂಗಾ"ದಿಂದ ಆಯ್ದ ಕೆಲಭಾಗಗಳನ್ನು ಸಂಘದ ನಿಲುವುಗಳೆಂದು ಒಂದು ಬರಹವನ್ನು ಪ್ರಕಟಿಸಿ, `ಇಂತಹ ನಿಲುವಿನ ಸಂಘವನ್ನು ಬೆಳೆಸುವುದು ಕನ್ನಡಿಗರಿಗೆ ಮುಳುಗುನೀರು ತರುತ್ತದೆ' ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿತ್ತು. ಈ ಬರಹಕ್ಕೆ ಸಂಘದ ಸದಸ್ಯರ, ಪದಾಧಿಕಾರಿಗಳ ಮತ್ತು ಬೆಂಬಲಿಗರ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಬರಹವನ್ನು ಸಂಘದ `ಶತ್ರುವಿನ ಸಂಚು' ಎಂಬಂತೆ ಕಂಡ ಇವೆಲ್ಲಾ ಕಮೆಂಟುಗಳೇ ಸಂಘದ ಅನುಯಾಯಿಗಳಲ್ಲಿರುವ/ ಇಲ್ಲದಿರುವ ವೈಚಾರಿಕತೆ, ವಿಚಾರ ಸ್ವಾತಂತ್ರ ಮತ್ತು ಬೆಂಬಲಿಗರ ಮುಗ್ಧತೆಗಳನ್ನು ಬಿಂಬಿಸುವಂತಿವೆ. ಸಂಘ ಸಿದ್ಧಾಂತವಾದ "ಚಿಂತನಗಂಗಾ"ವನ್ನು ಓದದೆಯೇ ಸಂಘದ ಜೊತೆ ಕೈಗೂಡಿಸಿದ್ದವರಿದ್ದಾರೆ ಎನ್ನುವಂತೆ ಕೆಲವು ಪ್ರತಿಕ್ರಿಯೆಗಳಿದ್ದವು. ಸಂಘದ ನಿಲುವು ಇದೆಂದು ಒಪ್ಪಿಕೊಳ್ಳದಷ್ಟು ಮಾಯೆ ಮುಸುಕಿದವರೂ ಇದ್ದಾರೆ.
‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?
ಚಿಂತನಗಂಗಾ ಹೊತ್ತಗೆಯ ಮೊದಲಲ್ಲಿ ಹೀಗೆ ಬರೆಯಲಾಗಿದೆ:
ಸಾವಿರಾರು, ಅಷ್ಟೇಕೆ ಲಕ್ಷಾಂತರ ಜನರು ಈ ಗ್ರಂಥದಲ್ಲಿನ ಜೀವಂತ ವಿಚಾರಗಳಿಂದ ಪ್ರೇರಣೆ ಪಡೆದಿದ್ದಾರೆ ಎನ್ನುವ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಪ್ರಾ. ಎಂ.ಎ. ವೆಂಕಟರಾಯರು ತಮ್ಮ ’ಪ್ರವೇಶ’ದಲ್ಲಿ ಹೇಳಿರುವಂತೆ "ರಾಷ್ಟ್ರನಿರ್ಮಾಣಕ್ಕಾಗಿ ಸಂಘವು ಎಂತಹ ಪರಿಪೂರ್ಣವಾದ, ಗುಣಾತ್ಮಕವಾದ, ದೇಶಾಭಿಮಾನದಿಂದ ತುಂಬಿ ತುಳುಕುವ, ಕಾರ್ಯಸಾಧ್ಯವಾದ, ಆದರ್ಶಪೂರ್ಣವಾದ ತತ್ವಗಳನ್ನೂ, ವಿಧಾನಗಳನ್ನೂ ಅನುಸರಿಸುತ್ತಿದೆ ಎಂಬುದನ್ನು ಇಲ್ಲಿ ಕಾಣಬಹುದು..."
ಇನ್ನು ಅರಿಕೆಯಲ್ಲಿ ಪ್ರಕಾಶಕರು ಚಿಂತನಗಂಗಾ ಬಗ್ಗೆ ಹೀಗೆ ಬರೆದಿದ್ದಾರೆ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಷಯ ಹೊಸದಾಗಿ ತಿಳಿಯ ಬಯಸುವವರಿಗೆ ಅದರಲ್ಲಿ ಅವರ ಬುದ್ಧಿ-ಹೃದಯಗಳನ್ನು ಬೆಳಗಲು ಸಾಕಷ್ಟು ಸಾಮಗ್ರಿ ಸಿಕ್ಕಿತು. ಸಂಘದ ವಿಷಯವಾಗಿ ಸಂದೇಹ- ಆಕ್ಷೇಪ ಇದ್ದವರಿಗೆ ಸಂಘದ ವಾಸ್ತವಿಕ ರೂಪ ಕಂಡು ಕಣ್ತೆರೆಯಿತು. ಸಮಾಧಾನ ಸಿಕ್ಕಿತು. ಸಂಘದ ಹೊರರೂಪ ಕಂಡಿದ್ದವರಿಗೆ ಅದರ ಆಂತರ್ಯದ ತಿರುಳು ತಿಳಿಯಿತು.
ಹಲವಾರು ವರ್ಷಗಳಿಂದ ಸಂಘದ ಕೆಲಸವನ್ನು ನಿಷ್ಠೆಯಿಂದ ನಡೆಸುತ್ತಾ ಬಂದಿರುವ ಕಾರ್ಯಕರ್ತರಿಗೆ ಸಹ ಆ ಗ್ರಂಥವು ಕಾರ್ಯದ ಕೈದೀವಿಗೆಯಾಯಿತು.
ಪ್ರತಿಕ್ರಿಯೆಯಲ್ಲಿ ಕೊನೆಕೊನೆಗೆ ಕೆಲವರಂತೂ ಇದು ಸಂಘದ ನಿಲುವೇ ಅಲ್ಲಾ, ಗುರೂಜಿಯವರ ಮಾತೇ ಅಲ್ಲ.. ಎನ್ನುವಂತಹ ಅರ್ಥದ ಮಾತುಗಳನ್ನೂ ಆಡಿದ್ದಾರೆ. ‘ಇದನ್ನು ಬರೆದವರೇ ಬೇರೆ, ಇದನ್ನು ಗುರೂಜಿ ನಿಧನರಾದ ಮೇಲೆ ಬಂದಿದ್ದು’ ಇತ್ಯಾದಿ ಮಾತುಗಳನ್ನಾಡಿದ್ದಾರೆ. ಆದರೆ ಹೊತ್ತಗೆಯ ಮೊದಲಲ್ಲೇ ಬರೆದಿರುವಂತೆ "ಬಂಚ್ ಆಫ್ ಥಾಟ್ಸ್" ಮೊದಲು ಪ್ರಕಟವಾದದ್ದು ೧೯೬೬ರಲ್ಲಿ. ಗುರೂಜಿಯವರ ೬೦ನೇ ವರ್ಷದ ಹುಟ್ಟುಹಬ್ಬದಂದು. ಇನ್ನಾದರೂ ಇದನ್ನು ಸಂಘದ ತತ್ವಸಿದ್ಧಾಂತದ ಪುಸ್ತಕ ಎನ್ನುವುದನ್ನು ಒಪ್ಪಬಹುದಲ್ಲವೇ? ಚಿಂತನಗಂಗಾ ಸಂಘದ ಸಿದ್ಧಾಂತವಲ್ಲದಿದ್ದರೆ ಸಮಸ್ಯೆಯೇ ಇಲ್ಲಾ... ಮತ್ಯಾವುದನ್ನು ಸಮಾಜ ಸಂಘ ಸಿದ್ಧಾಂತವೆಂದು ಅರಿತುಕೊಳ್ಳಬೇಕು ಎಂದು ತಿಳಿಸಿದರೆ ಸಾಕು!
ಸಂಘದ ಬಗ್ಗೆ ಯಾಕೆ ಬರೆದಿರಿ ಎಂದರೆ...!
ಇಡೀ ಬರಹದಲ್ಲಿ ಬರೆಯಲಾಗಿರುವ ನಾಲ್ಕು ವಿಷಯಗಳ ಬಗ್ಗೆ ಸಂಬಂಧಿಸಿದವರು ತಮ್ಮ ಸಹಮತಿಯನ್ನು ಇದುವರೆಗೂ ಹೇಳಿಲ್ಲ ಅಥವಾ ಅದು ಹೀಗಿರುವುದು ತಪ್ಪು ಎಂದೂ ಕೂಡಾ ಹೇಳುತ್ತಿಲ್ಲ. ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ ಎನ್ನುವ ಪ್ರಶ್ನೆಗೆ ಇದು ಕಾರಣವಾಗಿದೆ. ನಾವು ಎತ್ತಿರುವ ಪ್ರಶ್ನೆಗೆ ಉತ್ತರಿಸುವ ಬದಲು, ಹೀಗೆ ಪ್ರಶ್ನೆ ಮಾಡಿದ್ದನ್ನೇ ‘ಯಾಕೆ ಮಾಡಿದಿರಿ?’ ಎನ್ನುವ ಮಾತುಗಳು ಕೇಳಿಬಂದವು. ವಾಸ್ತವವಾಗಿ ನಾವು ಹೀಗೆ ಪ್ರಶ್ನಿಸಲು ಕಾರಣ, ಸಂಘ ತನ್ನ ಸೈದ್ಧಾಂತಿಕ ನಿಲುವುಗಳನ್ನು ತನ್ನ ಮುಖವಾಡವಾದ ಬಿಜೆಪಿ ಸರ್ಕಾರದ ಮೂಲಕ ಮಾಡಿಸುತ್ತಿರುವುದು ಮುಖಕ್ಕೆ ರಾಚುವಂತೆ ಕಾಣುತ್ತಿರುವುದು. ಇರುವ ವಿಶ್ವವಿದ್ಯಾಲಯಗಳಲ್ಲೇ ಸಂಸ್ಕೃತ ವಿದ್ಯಾರ್ಥಿಗಳಿಗೆ ಕೊರತೆಯಿರುವಾಗ ಹೊಸದಾಗಿ ತೀವ್ರ ವಿರೋಧದ ನಡುವೆಯೂ ವಿಶ್ವವಿದ್ಯಾಲಯ ಸ್ಥಾಪಿಸಲು ಏನು ಕಾರಣ? ಬೆಂಗಳೂರಿನಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಸವಾಲಾಗಿ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಎಷ್ಟೇ ವಿರೋಧವಿದ್ದರೂ ಪ್ರತಿಭಟನೆಯನ್ನು ಬಗ್ಗು ಬಡಿದು ಸ್ಥಾಪಿಸಿದ್ದೇಕೆ? ಇವೆಲ್ಲದರ ಹಿಂದೆ ಕೆಲಸ ಮಾಡುತ್ತಿರುವ ಮಿದುಳಾದರೂ ಸಂಘ ಸಿದ್ಧಾಂತದ್ದಲ್ಲವೇ? ಇದಕ್ಕೆಲ್ಲಾ ಕಲಶವಿಟ್ಟಂತೆ ನಿನ್ನೆ ಮುಗಿದ ಸಂಘದ ಶಿಬಿರದಲ್ಲಿ ಆರುಕೋಟಿ ಜನರ ಪ್ರತಿನಿಧಿ/ ಮುಖಂಡರಾದ ಮುಖ್ಯಮಂತ್ರಿಗಳೇ ಹೋಗಿ ಪಾಲ್ಗೊಂಡಿದ್ದೂ, ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟವಿದ್ದಾಗೆಲ್ಲಾ ಸಂಘದ ಕೇಂದ್ರ ಕಛೇರಿಯ ಕರೆಗೆ ಓಗೊಟ್ಟು ಎಡತಾಕಿದ್ದು ಕಾಣುತ್ತಿರುವಾಗ ಸಂಘದ ಬಗ್ಗೆ ಬರೆಯದೆ ಇರಬೇಕಿತ್ತಾದರೂ ಹೇಗೆ?
ಭಾಷಾವಾರು ಪ್ರಾಂತ್ಯ ಬೇಡ, ಚಿಕ್ಕ ರಾಜ್ಯಗಳಿರಲಿ ಎನ್ನುವ, ಮುಸ್ಲಿಮರು ಕ್ರೈಸ್ತರ ದೇಶದ ಬದ್ಧತೆಯನ್ನು ಪ್ರಶ್ನಿಸುವ ನಿಲುವಿನ ಸಂಘವು, ಸಾವಿರಾರು ಕನ್ನಡಿಗರನ್ನು ಸೇರಿಸಿ ಅವರ ತಲೆಯಲ್ಲಿ ತುಂಬುತ್ತಿರುವುದಾದರೂ ಏನನ್ನು? ಎಂಬ ಆತಂಕದ ಕಾರಣದಿಂದಲೇ ಆ ಬರಹವನ್ನು ಬರೆದದ್ದು! ಆರೆಸ್ಸೆಸ್ ಜೊತೆ ಕೈಗೂಡಿಸುವ ಕನ್ನಡಿಗನಿಗೆ, ಅದರ ಮೂಲತತ್ವವೇ ವೈವಿಧ್ಯತೆಯನ್ನು ಶಾಪವೆಂದು ಪರಿಗಣಿಸಿರುವ, ರಾಜ್ಯಗಳ ಶಾಸನದ ಹಕ್ಕನ್ನೂ ನಿರಾಕರಿಸುವ ಸಿದ್ಧಾಂತ ಎಂದು ಎಚ್ಚರ ಮೂಡಿಸುವ ಕಾರಣದಿಂದಲೇ ಬರೆಯಲಾಗಿತ್ತು. ಇದು ನೇರಾನೇರ ಕನ್ನಡ ಕನ್ನಡಿಗ ಕರ್ನಾಟಕದ ಹಿತಕ್ಕೆ ಸಂಬಂಧಿಸಿದ್ದರಿಂದಲೇ ಬರೆದದ್ದು.
ಸಮಾಜದಲ್ಲಿ ಒಡಕಿನ ವಿಷ ತುಂಬುವ ‘ಮುಸ್ಲಿಂ, ಕ್ರೈಸ್ತರು ಭಾರತಕ್ಕೆ ನಿಷ್ಠರಲ್ಲಾ’ ಎನ್ನುವ ಮೂಲಕ ವಿಭಿನ್ನ ಧರ್ಮಗಳ ಕನ್ನಡಿಗರ ನಡುವೆ ಅಪನಂಬಿಕೆಯ ವಿಷಬೀಜ ಬಿತ್ತುವ ಕಾರಣದಿಂದಲೇ ಇಂದು ಸಿಂಧಗಿಯಲ್ಲಾದಂತಹ ಘಟನೆಗಳಾಗುತ್ತಿರುವುದು ಎನ್ನಿಸುತ್ತದೆ. ಸುಮ್ಮನೆ ಒಡಕಿನ ಸಿದ್ಧಾಂತ ಬೋಧಿಸಿ ಶಿಸ್ತಿನ ರೋಬೋಗಳನ್ನು ಸೃಷ್ಟಿಸಿ ಸಮಾಜದ ಒಳಗೆ ಬಿಟ್ಟು, ಅವುಗಳ ಕೆಲಸಕ್ಕೂ ಸಂಘಕ್ಕೂ ಸಂಬಂಧವಿಲ್ಲಾ ಎಂದು ನುಣುಚಿಕೊಳ್ಳುವ ಮನಸ್ಥಿತಿ ಸಂಘಕ್ಕಿಲ್ಲಾ ಎಂದೇ ಭಾವಿಸೋಣ. ಹಾಗಾಗಬೇಕಾದರೆ ಕಡೇಪಕ್ಷ ಸಂಘದವರು ಒಪ್ಪಬೇಕಾದ್ದು "ತಮ್ಮ ಸಿದ್ಧಾಂತವು ಗುರೂಜಿಯವರ ಚಿಂತನಗಂಗಾದ ಬರಹಗಳಿಗೆ ಒಪ್ಪುತ್ತದೆ" ಎನ್ನುವುದನ್ನು. ಇಲ್ಲವೇ "ಗುರೂಜಿಯವರು ಹೇಳಿರುವ ಮುಸ್ಲಿಮ್, ಕ್ರೈಸ್ತರ ಬಗೆಗಿನ ಅನಿಸಿಕೆಗಳು ತಪ್ಪು, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಒಳ್ಳೆಯದು, ಮೀಸಲಾತಿಗೆ ಪರವಾಗಿದ್ದೇವೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ - ಇದು ಸಂಘದ ಸಿದ್ಧಾಂತ" ಎಂದು ಘೋಷಿಸಲಿ ಸಾಕು. ಬಹಿರಂಗವಾಗಿ, ಚರ್ಚೆಗಳಲ್ಲಿ "ಇಲ್ಲಾ.. ಇಲ್ಲಾ.." ಅಂತನ್ನೋ ಬದಲು ನಮ್ಮ ಸಿದ್ಧಾಂತವನ್ನು ಇಲ್ಲಿ ಬರೆಯಲಾಗಿದೆ ನೋಡಿ ಎಂದು ಒಂದು ಅಧಿಕೃತ ನಿಲುವಿನ ಮೂಲವನ್ನು ತೋರಿಸಿದ್ದರೆ ಸಾಕಿತ್ತು. ಆದರೆ ತಮಾಶೆಯೆಂದರೆ ಹಾಗೆ ತೋರಿಸಿದ ನಂತರ ಚಿಂತನಗಂಗಾ ಹೊತ್ತಗೆಯ ಬರಹಗಳ ಹಲವು ಅಂಶಗಳನ್ನು ಅವರೇ ಅಲ್ಲಗಳೆಯಬೇಕಾಗುತ್ತದೆ. ಒಟ್ಟಾರೆ ಸಂಘದ ಅಧಿಕೃತ ಸಿದ್ಧಾಂತ ಏನೆಂದು ತಿಳಿಸಿಕೊಟ್ಟರೆ ಸಾಕು.
ಈ ಬರಹಕ್ಕೆ ಬಂದ ಪ್ರತಿಕ್ರಿಯೆಗಳು ಮಾತ್ರಾ ಬೆಂಬಲಿಗರ/ ಪರಿವಾರದ ಮುಗ್ಧತೆ, ಕುರುಡು ಬದ್ಧತೆಗೆ ಕನ್ನಡಿ ಹಿಡಿದಂತಿದ್ದವು...
ಪ್ರತಿಕ್ರಿಯೆಗಳ ಸಾರ!
"ರಾಜಕೀಯ ಮಾಡ್ತಿದೀರಾ?... ನಿಮ್ಮ ಸಂಘಟನೆ ಹೆಸರು ಬದಲಾಯಿಸಿಕೊಳ್ಳಿ... ಮೊದಲು ಕನ್ನಡದ ಕೆಲಸ ಮಾಡಿ ತೋರಿಸಿ... ನೀವು ಕೆಂಪು ಬಣ್ಣದವರು... ದೇಶ ಒಡೆಯಬೇಡಿ... ದೇಶ, ಹಿಂದುತ್ವ, ಸಂಘದ ಬಗ್ಗೆ ಅಂಧತೆಯನ್ನು ಬೆಳೆಸಿಕೊಂಡು ಬಂದ ಕೆಂಬಣ್ಣದ ಭೂತ...ಲೇಖಕರಿಗೆ ಆಂಗ್ಲಭಾಷೆಯ ದಾಸ್ಯವು ನಮ್ಮದೇ ಸಂಸ್ಕೃತವನ್ನು ಒಪ್ಪಿಕೊಳ್ಳುವುದಕ್ಕಿಂತಾ ಮೇಲೆಂದು ತೋರುತ್ತದೆ...ಕೆಂಪು ಲೇಖಕರ ಹಿಡಿತದಿಂದ ನಲುಗದಿರಲಿ...RSS ಬಗ್ಗೆ ಬರೀತೀರಲ್ಲಾ KFD-PFI ಬಗ್ಗೆ ಬರೀತೀರಾ?...ಹಳದಿ ಕೆಂಪು ಈಗ ಚೀನಿಯರ ಸಂಕೇತವಾಗುತ್ತಿದೆ... Do you have guts to question urdu primary mode of communication... ನೀವೇನು ಕನ್ನಡದ ಕೆಲಸಾ ಮಾಡಿದ್ದೀರಾ? ತಾಕತ್ತಿದ್ದರೆ ಒಂದು ಕನ್ನಡ ಶಾಲೆ ಮಾಡಿ... "
ಹೀಗೇ... ಕೆಲವು ಪ್ರತಿಕ್ರಿಯೆಗಳಂತೂ ಶತ್ರುಗಳನ್ನು ತೋರಿಸಿ ಒಗ್ಗಟ್ಟು ತರುವ ಪ್ರಯತ್ನದಂತೆ ಇವೆ.
ನೀವು ಸಂಸ್ಕೃತ/ ಹಿಂದೀ ಒಪ್ಪದಿದ್ದರೆ ನಾಳೆ ಕನ್ನಡವೂ ಇರಲ್ಲ... ಇಂಗ್ಲೀಶ್ ಬಂದುಬಿಡುತ್ತದೆ ಎಂದು ಒಬ್ಬರೆಂದರೆ ಮತ್ತೊಬ್ಬರು ಈ ರಾಜ್ಯವನ್ನು ಮುಸ್ಲಿಮರು ಆಳಿದರೆ ನಾಳೆ ಕನ್ನಡವು ಧೂಳಿಪಟವಾಗುತ್ತದೆ (ondantoo satya. karnatakadalli muslimara adalita bandare, marane dinave kannada dhooli patavagtade.)
ಎಂದಿದ್ದಾರೆ.
ಇವೆಲ್ಲಾ ತೋರಿಸುವುದಾದರೂ ಏನನ್ನು? ‘ಯಾವ ಚಿಂತನೆಗಳನ್ನು ಆರಿಸಿ ತೋರಿಸಲಾಗಿದೆಯೋ ಆ ಚಿಂತನೆಗಳು ಸರಿ - ಅದನ್ನು ನಾವು ಒಪ್ಪುತ್ತೇವೆ’ ಎನ್ನುವ ನೇರವಂತಿಕೆಯಾಗಲೀ, ‘ಇಲ್ಲಾ, ಅದು ತಪ್ಪು.. ಗುರೂಜಿಯವರ ಈ ನಿಲುವನ್ನು ಸಂಘ ಒಪ್ಪದು’ ಎನ್ನುವ ದಿಟ್ಟತನ/ ವೈಚಾರಿಕ ಸ್ವಾತಂತ್ರವಾಗಲೀ ಇಲ್ಲದಿರುವಂತೆ ತೋರುತ್ತದೆ. ಹಾಗಾಗಿ ವಿಷಯಾಂತರ ಮಾಡೋ ಮೂಲಕ ಉತ್ತರಿಸುವ ಪ್ರಯತ್ನಗಳಂತೆ ಇವು ಕಾಣುತ್ತವೆ.
ಬರಹದ ಆಶಯ
ನಿಜಕ್ಕೂ ಸಂಘ ಗುರೂಜಿಯವರ ಈ ಮಾತುಗಳನ್ನು/ ಸಿದ್ಧಾಂತವನ್ನು ಹೊಂದಿರುವುದಾದರೆ ಒಪ್ಪಿಕೊಳ್ಳಲಿ. "ನಾವು ಪ್ರತಿಪಾದಿಸುವುದು ಇದನ್ನೇ... ಭಾರತದಲ್ಲಿ ಒಂದೇ ಶಾಸಕಾಂಗವಿರಲಿ, ಮುಸ್ಲಿಮರು/ ಕ್ರೈಸ್ತರ ದೇಶಪ್ರೇಮ ಪ್ರಶ್ನಾರ್ಹ, ಮೀಸಲಾತಿ ಕೆಟ್ಟ ಪದ್ದತಿ ಮತ್ತು ಹಿಂದೀ ಭಾರತದ ಸಂಪರ್ಕ ಭಾಷೆಯಾಗಲಿ" ಎನ್ನುವುದನ್ನೇ ಎನ್ನಲಿ. ವಾಸ್ತವವಾಗಿ ನಾಲ್ಕನೆಯದನ್ನು ಈಗಾಗಲೇ ಹೇಳಿದ್ದಾರೆ. ಉಳಿದ ಮೂರನ್ನು ಅದು ಸತ್ಯವಾದರೆ ಒಪ್ಪಿಕೊಳ್ಳಲಿ. ಇಲ್ಲದಿದ್ದರೆ ಇನ್ಯಾವ ಸಿದ್ಧಾಂತ ಇವರನ್ನು ನಡೆಸುತ್ತಿದೆ ತಿಳಿಸಲಿ. ಈಗ ಜನರ ಮುಂದೆ ಇಂತಹ ನಿಲುವುಗಳನ್ನು ಇಟ್ಟುಕೊಂಡೇ ನೇರವಾಗಿ ರಾಜಕಾರಣಕ್ಕಿಳಿಯಲಿ ಎಂದದ್ದೂ ಕೂಡಾ... ‘ಬಿಜೆಪಿಯ ಮೂಲಕ ಹಿಂಬಾಗಿಲ ರಾಜಕಾರಣ ಮಾಡುವುದನ್ನು ಬಿಡಲಿ’ ಎನ್ನುವ ಕಾರಣದಿಂದಲೇ! ಅಥವಾ ಬಿಜೆಪಿಯೇ ತನ್ನ ಸಿದ್ಧಾಂತ ಸಂಘದ್ದು ಎಂದು ಹೇಳಿಕೊಂಡು ರಾಜಕಾರಣ ಮಾಡಲಿ. ಗುರೂಜಿಯವರ ಮಾತುಗಳ ಬಗ್ಗೆ ಸಮ್ಮತಿ ಅಥವಾ ತಿರಸ್ಕರಣೆಯನ್ನು ಸಾರ್ವಜನಿಕವಾಗಿ ಸಂಘವು ತಿಳಿಸುವುದು ಸಂಘದ ಬಗ್ಗೆ ಸಮಾಜಕ್ಕೆ ಇರುವ ಗೊಂದಲಗಳು ದೂರಾಗಲು ಖಂಡಿತಾ ನೆರವಾದೀತು! ಇಡೀ ರಾಷ್ಟ್ರಕ್ಕೇ ಬೆಳಕು ಕೊಡುತ್ತೇನೆನ್ನುವ, ಬಲಿಷ್ಠ ರಾಷ್ಟ್ರ ನಿರ್ಮಾಣವೇ ಪರಮಗುರಿಯೆನ್ನುವ ಸಂಘಕ್ಕೆ ಇಷ್ಟೂ ನೇರವಂತಿಕೆ ಇರದಿದ್ದರೆ ಹೇಗೆ?