(ಫೋಟೋ: http://sadanandagowda.com/news-events/cm-performed-bhumi-puja/) |
ಬೆಂಗಳೂರಿನ ಸಮೀಪವಿರುವ ನರಸಾಪುರ ಕೈಗಾರಿಕಾ ಪ್ರದೇಶ(ಕೋಲಾರ ಜಿಲ್ಲೆ)ದಲ್ಲಿ ಹೊಸ ಹೊಸ ಕೈಗಾರಿಕೆಗಳು ಶುರುವಾಗುತ್ತಿವೆ. ಆಟೋಮೊಬೈಲ್ ದಿಗ್ಗಜರಲ್ಲೊಂದಾದ ಹೋಂಡಾ ಸಂಸ್ಥೆಯ ಮೂರನೆಯ ಘಟಕವು ಇಲ್ಲಿ ಇತ್ತೀಚಿಗೆ ಶುರುವಾಯಿತು. ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಹೆಸರಿನ ಈ ಸಂಸ್ಥೆಗೆ ಭಾರತೀಯ ಜನತಾ ಪಕ್ಷದ ನಮ್ಮ ರಾಜ್ಯಸರ್ಕಾರವು ಅನೇಕಾನೇಕ ವಿನಾಯ್ತಿ, ರಿಯಾಯಿತಿಗಳನ್ನು ನೀಡಿದೆ. ಈ ಸಂಬಂಧವಾದ ಆದೇಶಗಳಿಗೆ ಸಂಪುಟಸಭೆಯಲ್ಲಿ ಮುಖ್ಯಮಂತ್ರಿಗಳಿಂದ ಒಪ್ಪಿಗೆ ಪಡೆಯಲಾಯಿತಂತೆ. ಇದೇ ಸಂದರ್ಭದಲ್ಲಿ ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಎಸ್ ಸುರೇಶ್ ಕುಮಾರ್ ಅವರು ಸಂಸ್ಥೆಯ ಅಧಿಕಾರಿಗಳಿಗೆ "ಸಂಸ್ಥೆಯಲ್ಲಿ ಕಡಿಮೆಯೆಂದರೆ ನೂರಕ್ಕೆ ಎಂಬತ್ತರಷ್ಟು ಕನ್ನಡಿಗರಿಗೆ ಕೆಲಸ ನೀಡದಿದ್ದಲ್ಲಿ ಈ ಸವಲತ್ತುಳನ್ನೆಲ್ಲಾ ಹಿಂಪಡೆಯಲಾಗುವುದು" ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಈ ಸುದ್ದಿಯನ್ನು ಮಾಧ್ಯಮದ ವರದಿಗಳಲ್ಲಿ ಕಂಡಾಗ ಹಾಲು ಕುಡಿದಷ್ಟು ಹಿಗ್ಗುಂಟಾಯ್ತು ಗುರೂ!
ಹೊಸ ಉದ್ದಿಮೆಗಳು ಮತ್ತು ಕೆಲಸದ ಅವಕಾಶಗಳು
ಯಾವುದೇ ನಾಡಿನಲ್ಲಿ ಶುರುವಾಗುವ ಸಂಸ್ಥೆಗಳು ಆ ನೆಲದ ಜನರಿಗೆ ಉದ್ಯೋಗ ದೊರಕಿಸಿಕೊಡಬೇಕಾದ್ದು ಸಹಜ ನ್ಯಾಯವಾಗಿದೆ. ಸರ್ಕಾರವು ಹೊರನಾಡಿನ ಸಂಸ್ಥೆಗಳು ನಮ್ಮಲ್ಲಿ ಆರಂಭವಾಗುವುದಕ್ಕೆ ಉತ್ತೇಜನ ನೀಡುತ್ತಾ ಅವುಗಳಿಗೆ ಎಲ್ಲಾ ತೆರನಾದ ಸವಲತ್ತುಗಳನ್ನು ನೀಡಲು ಮುಂದಾಗುತ್ತದೆ. ಕಡಿಮೆದರದಲ್ಲಿ/ ಪುಕ್ಕಟೆಯಾಗಿ ವಿದ್ಯುತ್ತು, ನೀರು, ನೆಲ ಕೊಡುವುದಲ್ಲದೆ ನೋಂದಣಿ ಶುಲ್ಕದಲ್ಲಿ ವಿನಾಯಿತಿ, ತೆರಿಗೆ ರಜೆಯೇ ಮೊದಲಾದ ಸೌಕರ್ಯಗಳನ್ನು ನೀಡುತ್ತದೆ. ಮೂಲತಃ ಹೀಗೆ ಮಾಡುವುದು ಬಂಡವಾಳವನ್ನು ಸೆಳೆಯಲೆಂದೇ ಆಗಿದೆ. ಇದರಿಂದಾಗಿ ನಾಡಿಗೆ ಸಿಗಬಹುದಾದ ಅತಿದೊಡ್ಡ ಲಾಭವೆಂದರೆ ನಿರುದ್ಯೋಗ ಸಮಸ್ಯೆಯು ಕಡಿಮೆಯಾಗುವುದು. ಹಾಗಾಗೇ ಹೊಸ ಉದ್ದಿಮೆಗಳ ಆರಂಭಕ್ಕೆ ಒಪ್ಪಿಗೆ ಕೊಡುವಾಗ ಸರ್ಕಾರವು ಇಂಥಾ ಕಟ್ಟಳೆಗಳನ್ನು ಮುಂದಿಡಬಹುದಾಗಿದೆ. ಈಗ ಈ ಹೋಂಡಾ ಘಟಕದಿಂದಲೇ ೩೨೦೦ ನೇರ ನೇಮಕಾತಿ ನಡೆಯಲಿದೆ. ಇದಲ್ಲದೆ ಪೂರಕ ಉದ್ದಿಮೆಗಳಲ್ಲಿಯೂ ೧೨೦೦ ಹುದ್ದೆಗಳು ಹುಟ್ಟಿಕೊಳ್ಳಲಿವೆಯಂತೆ. ಬಿಜೆಪಿ ಸರ್ಕಾರ ನಿಜಕ್ಕೂ ಕನ್ನಡಿಗರಿಗೆ ೮೦% ಕೆಲಸ ಕೊಡಲೇಬೇಕು ಎನ್ನುವುದನ್ನು ಒಂದು ಕಟ್ಟಳೆಯಾಗಿ ಮಾಡಿರುವುದು ಅತ್ಯುತ್ತಮವಾದ ಹೆಜ್ಜೆಯಾಗಿದೆ.
ಇಂದಿಗೆ ಸರೋಜಿನಿ ಮಹಿಷಿ ವರದಿ
೧೯೮೩ರಲ್ಲಿ ರಚನೆಯಾಗಿ ತನ್ನ ಅಂತಿಮ ವರದಿಯನ್ನು ೫೮ ಮಹತ್ವದ ಸಲಹೆಗಳ ಮೂಲಕ ೧೯೮೬ರಲ್ಲಿ ನೀಡಿದ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗೆ ಅಂದಂದಿನ ಸರ್ಕಾರಗಳು ಅನೇಕ ಆದೇಶಗಳನ್ನು ಹೊರಡಿಸಿದ್ದರೂ ಇಂದಿಗೂ ವರದಿಯು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ನಾಡಿನಲ್ಲಿ ಈ ವರದಿಯ ಜಾರಿಗಾಗಿ ಅನೇಕ ಹೋರಾಟಗಳು ನಡೆದಿದ್ದು ಇದರ ಜಾರಿಗೆ ರಾಜ್ಯಸರ್ಕಾರ ಮನಸ್ಸು ಮಾಡಬೇಕಾಗಿದೆ. ಇದಕ್ಕೂ ಮುನ್ನ ಅಂದಿಗೆ ಹೊಂದುವಂತಿದ್ದ ಮಹಿಷಿ ವರದಿಯನ್ನು ಇಂದಿನ ಸನ್ನಿವೇಶದಲ್ಲಿ ಮತ್ತೆ ಪರಿಶೀಲಿಸಿ, ಬೇಕಾದ ತಿದ್ದುಪಡಿಗಳನ್ನು ಸೂಚಿಸುವ ಸಮಿತಿಯನ್ನು ರಚಿಸಬೇಕಾಗಿದೆ. ಸಮಿತಿಗೆ ನಿಗದಿತ ಸಮಯದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿ ಸದರಿ ವರದಿಯನ್ನು ಜಾರಿ ಮಾಡಲು ಮುಂದಾಗಬೇಕಿದೆ. ನಾಡಿನಲ್ಲಿ ಉದ್ದಿಮೆ ಸ್ಥಾಪಿಸಲು ಬರುವ ಎಲ್ಲಾ ಸಂಸ್ಥೆಗಳಿಗೆ ಸ್ಥಳೀಯರಿಗೆ ಇಂತಿಷ್ಟು ಕೆಲಸಗಳನ್ನು ನೀಡಲೇಬೇಕೆಂದು ಕಟ್ಟಳೆಯನ್ನು ರೂಪಿಸಲು ಅನುವಾಗುವ ಕಾಯ್ದೆಯನ್ನು ಆ ಮೂಲಕ ಜಾರಿಗೊಳಿಸಬೇಕಾಗಿದೆ. ಈಗಾಗಲೇ ಹೋಂಡಾ ಸಂಸ್ಥೆಯೊಂದಿಗೆ ಇಂತಹ ಕರಾರಿಗೆ ಬಂದು ನೂರಕ್ಕೆ ಎಂಬತ್ತು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕೆಂದು ತಾಕೀತು ಮಾಡಿ ಮೊದಲ ಹೆಜ್ಜೆಯಿಟ್ಟಿರುವ ರಾಜ್ಯಸರ್ಕಾರ ಈ ದಿಕ್ಕಿನಲ್ಲಿ ಮತ್ತಷ್ಟು ವೇಗವಾಗಿ ನಡೆಯಲಿದೆಯೆಂದು ಆಶಿಸೋಣ!
ಕೊನೆಹನಿ: ಇಂತಹ ಕಾಯ್ದೆ ಮಾಡೋದು ಹ್ಯಾಗಪ್ಪಾ ಅಂತಾ ಸರ್ಕಾರ ಚಿಂತೆ ಮಾಡೋ ಹಾಗೇ ಇಲ್ಲಾ... ಯಾಕಂದ್ರೆ ಬಿಜೆಪಿಯ ಸರ್ಕಾರವೇ ಇರುವ ಗುಜರಾತಿನಲ್ಲಿ ಈಗಾಗಲೇ ಇಂತಹ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿದೆ. ಗುಜರಾತು, ಒರಿಸ್ಸಾ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳಲ್ಲಿ ಇಂತಹ ವ್ಯವಸ್ಥೆ ಇದ್ದು ನಮ್ಮ ಸರ್ಕಾರವೂ ಬೇಗನೆ ಇದಕ್ಕೊಂದು ನೀತಿಯನ್ನು ರೂಪಿಸಲಿ.
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!