ಭಾರತ ಒಪ್ಪುಕೂಟ ಮತ್ತು ಚಿಕ್ಕರಾಜ್ಯಗಳು!


ಇತ್ತೀಚಿಗೆ ಔಟ್‍ಲುಕ್ ಪತ್ರಿಕೆಯಲ್ಲಿ ಒಂದು ಬರಹ ಪ್ರಕಟವಾಗಿದೆ. ಇಂದಿನ ಭಾರತದೇಶವನ್ನು "ಯುನೈಟಡ್ ಸ್ಟೇಟ್ಸ್ ಆಫ್ ಇಂಡಿಯಾ" ಎಂದು ತೋರಿಸಲಾಗಿರುವ ಚಿತ್ರದ ಸಹಿತ ಆ ಬರಹವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ೨೦೪೦ರ ವೇಳೆಗೆ ಸುಮಾರು ೧೬೦ ಕೋಟಿ ಜನಸಂಖ್ಯೆಯಾಗುವ ಭಾರತವು ಐವತ್ತು ರಾಜ್ಯಗಳ ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರಬಹುದು ಎನ್ನುವ ಮಾತುಗಳನ್ನು ಆಡಲಾಗಿದೆ.

ಭಾರತ ಏಕೆ ಚಿಕ್ಕರಾಜ್ಯಗಳನ್ನು ಹೊಂದಿರಬೇಕು?

ಅತ್ಯುತ್ತಮ ಆಡಳಿತಕ್ಕಾಗಿ ಅಧಿಕಾರವು ವಿಕೇಂದ್ರೀಕರಣವಾಗಲು ಭಾರತವು ಚಿಕ್ಕ ಚಿಕ್ಕ ರಾಜ್ಯಗಳನ್ನು ಹೊಂದಿರಬೇಕೆನ್ನುತ್ತದೆ ಲೇಖನ. ೧೯೫೬ರ ರಾಜ್ಯ ಪುನರ್ವಿಂಗಡನಾ ಆಯೋಗದ ಪರಿಣಾಮಗಳನ್ನು ವಿಶ್ಲೇಷಣೆ ಮಾಡುತ್ತಾ `ಭಾಷಾವಾರು ಪ್ರಾಂತ್ಯಗಳ ರಚನೆ ಉದ್ದೇಶಿತ ಪರಿಣಾಮಗಳನ್ನು ನೀಡಿಲ್ಲ ಬದಲಾಗಿ ಚಿಕ್ಕ ರಾಜ್ಯಗಳು ಹೆಚ್ಚು ಆಕರ್ಶಣೀಯವಾಗಿದೆ' ಎನ್ನುತ್ತಾ ಹರ್ಯಾಣದ ಉದಾಹರಣೆಯನ್ನು ಕೊಟ್ಟಿದ್ದಾರೆ. ಒಂದು ಕಡೆ ಚಿಕ್ಕ ಚಿಕ್ಕ ರಾಜ್ಯಗಳಾದ ಕೂಡಲೇ ಏಳಿಗೆ ಹೊಂದಿಬಿಡುತ್ತವೆ ಎನ್ನುವದಕ್ಕೂ ಅಪವಾದವಾಗಿ ಹೊಸ ಚಿಕ್ಕ ರಾಜ್ಯಗಳು ಇನ್ನೂ ಆರ್ಥಿಕವಾಗಿ ತಡಬಡಾಯಿಸುತ್ತಿರುವುದನ್ನೂ ನಾವು ಕಾಣಬಹುದಾಗಿದೆ. ಈ ನಡುವೆ ತೆಲಂಗಣಾ ರಾಜ್ಯ ಬೇಕೆಂಬ ಕೂಗು, ಉತ್ತರ ಪ್ರದೇಶವನ್ನು ಹೋಳಾಗಿಸಬೇಕೆನ್ನುವ ಮಾಯಾವತಿ ಸರ್ಕಾರದ ಪ್ರಯತ್ನಗಳನ್ನು ಈ ಬರಹ ಹೊಸ ರಾಜ್ಯಗಳ ಆಕಾಂಕ್ಷೆ ಎನ್ನುವುದಾಗಿ ಬರೆದಿದ್ದಾರೆ. ಈಗ ತೆಲಂಗಣದ್ದೋ, ಹರಿತಖಂಡದ್ದೋ ಒಂದೋ ಎರಡೋ ವಿಷಯಗಳನ್ನು ಮಾತ್ರಾ ಕೈಗೆತ್ತಿಕೊಳ್ಳದೆ ದೂರದೃಷ್ಟಿಯಿಂದ ಕೆಲಸ ಮಾಡಬಲ್ಲ ಎರಡನೇ "ರಾಜ್ಯ ಪುನರ್ವಿಂಗಡನಾ ಆಯೋಗ"ವನ್ನೇ ರಚಿಸಿ ಮುಂದಿನ ಭಾರತದ ಆರ್ಥಿಕ ಏಳಿಗೆಯ ಗುರಿಯೊಂದಿಗೆ ಸಾಂಸ್ಕೃತಿಕ, ಭಾಷಿಕ, ಆಡಳಿತಾತ್ಮಕ ಅಂಶಗಳನ್ನು ಪರಿಗಣಿಸಿ ಮತ್ತೆ ರಾಜ್ಯಗಳು ರೂಪಗೊಳ್ಳಬೇಕು ಎಂಬ ಅಭಿಪ್ರಾಯ ಆ ಲೇಖನದ್ದಾಗಿದೆ.

ಭಾಷಾವಾರು ಪ್ರಾಂತ್ಯಗಳ ಮೂಲೋದ್ದೇಶ...

ಭಾಷೆಯೆನ್ನುವುದು ಒಂದು ಜನಾಂಗದ ಸಂವಹನ ಮಾಧ್ಯಮ ಮಾತ್ರವಲ್ಲ, ಅದು ಸಹಕಾರದ ಮಾಧ್ಯಮ. ನಾಗರೀಕ ಮನುಜನ ಅತಿ ಹಳೆಯ ಗುರುತು ಆತನ ನುಡಿ. ಇದರೊಂದಿಗೇ ಆತನ ನಂಬಿಕೆ, ಆಚರಣೆ, ಸಂಸ್ಕೃತಿ, ಕಲಿಕೆ, ದುಡಿಮೆ, ಏಳಿಗೆಗಳೆಲ್ಲಾ ತಳುಕುಹಾಕಿಕೊಳ್ಳಲಾಗಿದೆ ಎನ್ನುವುದೊಂದು ನಂಬಿಕೆ. ಅಂತೆಯೇ ಪ್ರಜಾಪ್ರಭುತ್ವದ ಮೂಲ ಆಶಯವಾಗಿರುವ ‘ನಮ್ಮನ್ನು ನಾವೇ ಆಳಿಕೊಳ್ಳುವುದು’ ಎನ್ನುವುದು ಪರಿಣಾಮಕಾರಿಯಾಗುವಲ್ಲೂ ಕೂಡಾ ನುಡಿಯ ಪಾತ್ರ ಹಿರಿದು. ಹಾಗಾಗಿ ಭಾರತದಲ್ಲಿ ಶಾಸನ ಮಾಡಬಲ್ಲ ಬುಡಮಟ್ಟದ ಘಟಕವೆಂದರೆ ರಾಜ್ಯವೇ ಆಗಿದ್ದು... ಇದು ಒಂದೇ ಭಾಷಿಕ ಜನರಿಂದ ಕೂಡಿರುವುದು ಪ್ರಜಾಪ್ರಭುತ್ವದ ಆಶಯಗಳ ಈಡೇರಿಕೆಗಿರುವ ಹೆದ್ದಾರಿಯಾಗಿದೆ. 

ಇಷ್ಟಕ್ಕೂ ಒಂದೇ ಕರ್ನಾಟಕವೇಕೆ?

ಹೌದು! ಕರ್ನಾಟಕವೇಕೆ ಒಂದೇ ಆಗಿರಬೇಕು? ಮೂರಾದರೆ ಏನಂತೆ? ಎನ್ನುವ ಮಾತುಗಳು ಈ ಹಿಂದೆಯೇ ಎದ್ದಿತ್ತು. ಸಂಯುಕ್ತ ಕರ್ನಾಟಕದಲ್ಲಿ ಒಂದು ಬರಹವನ್ನು ಬರೆದಿದ್ದಾಗ ಪ್ರತಿಕ್ರಿಯಿಸಿ ನಾವು ಬರೆದಿದ್ದದು ನಾಡಜನರಿಗೆ/ ನಾಡಿಗೆ ಚಿಕ್ಕರಾಜ್ಯಗಳಾಗೋದ್ರಲ್ಲಿಯೇ ಒಳಿತಿದ್ದರೆ ಅದೇ ಆಗಲಿ ಎಂದು! ಈಗ ಅದನ್ನೇ ಮತ್ತಷ್ಟು ವಿಸ್ತಾರವಾಗಿ ಚರ್ಚಿಸೋಣ! ಮೂಲತಃ ಕನ್ನಡನಾಡು ಒಂದಾಗಬೇಕೆಂಬ ಕನಸಿನ ರೂವಾರಿ "ಕರ್ನಾಟಕ ಕುಲಪುರೋಹಿತ"ರೆನ್ನಿಸಿದ ಆಲೂರು ವೆಂಕಟರಾಯರು. ಇವರು ಕೂಡಾ ಹಾಗೆ ಹೇಳಲು ಇದ್ದ ಕಾರಣಗಳು ಕನ್ನಡನಾಡು ಹಲವು ಆಡಳಿತಗಳಲ್ಲಿ ಹಂಚಿಹೋಗಿದ್ದು, ಕನ್ನಡೇತರ ಆಡಳಿತಗಾರರ/ ಸಾಮ್ರಾಜ್ಯಗಳ ಭಾಗವಾಗಿದ್ದು ಕನ್ನಡಿಗರ ಬದುಕು ಹೀನಾಯವಾಗುತ್ತಿದೆ ಎನ್ನಿಸಿದ್ದು. ನಾವೆಲ್ಲಾ ಒಂದುಗೂಡಿ ಒಮ್ಮನದಿಂದ ಒಗ್ಗಟ್ಟಿನಿಂದ ನಮ್ಮ ನಾಡು ಕಟ್ಟೋಣ ಎನ್ನುವ ಹಿರಿಯಾಸೆಯಿಂದಲೇ ಅಂತಹ ಏಕೀಕರಣದ ಕನಸು ಕಂಡಿದ್ದು. ಅಂದು ಒಂದುಗೂಡಿದ ಕರ್ನಾಟಕದಲ್ಲಿ ಇಂದಿಗೂ ಅಂದಿದ್ದ ಅಸಮಾನ ಏಳಿಗೆಯ ಸನ್ನಿವೇಶಗಳಿರುವುದರಿಂದಲೇ ಇಂದು ಇಲ್ಲಿನ ಆಡಳಿತ ಸಮರ್ಪಕವಾಗಿಲ್ಲ ಎನ್ನುವ ಭಾವನೆ ಕೆಲಭಾಗದ ಜನರಲ್ಲಿ ಮೊಳೆತದ್ದು. ಸಮರ್ಥವಾದ, ಎಲ್ಲ ಭಾಗದ ಏಳಿಗೆಗೆ ದುಡಿಯಬಲ್ಲ ನಾಯಕರ ಕೊರತೆಗಿಂತಲೂ ತನ್ನ ಕ್ಷೇತ್ರಕ್ಕಾಗಿ ಮಿಡಿಯದ ನಾಯಕರ ಕಾರಣದಿಂದಲೇ ಇಂತಹ ಹಿಂದುಳಿದಿರುವಿಕೆಯುಂಟಾಗಿದೆ ಎನ್ನುವುದು ಹೆಚ್ಚು ನಂಬಲರ್ಹವಾಗಿದೆ. ಆದರೂ ಕೆಲವರು ಇಂದಿನ ಕರ್ನಾಟಕವು ಮೂರಾಗಬೇಕು ಎಂದರೆ ಅದರಿಂದ "ಖಂಡಿತವಾಗಿ" ಆಗುವ ಕೆಟ್ಟದ್ದನ್ನು ಅಲಕ್ಷಿಸಿ "ಆಗಬಹುದಾದ" ಒಳಿತುಗಳನ್ನು ಮಾತ್ರಾ ಗಮನದಲ್ಲಿಟ್ಟುಕೊಂಡಿದ್ದಾರೆ ಎನ್ನಬೇಕಾಗುತ್ತದೆ. ಕನ್ನಡಿಗರೆಲ್ಲಾ ಇರುವ ಪ್ರದೇಶಗಳು ಒಂದೇ ರಾಜ್ಯವಾಗಿರದಿದ್ದರೆ ಕನ್ನಡನಾಡಿನ ಕಲಿಕಾ ವ್ಯವಸ್ಥೆಯು ಏಕರೂಪವಾಗಿರುವುದಿಲ್ಲ. ನಾಡಿನ ಸಂಪನ್ಮೂಲಗಳ ಮೇಲೆ ಹಕ್ಕು/ ಹಂಚಿಕೆಗಳು ಅಸಮಾನವಾಗಿರುತ್ತದೆ. ಎಲ್ಲಾ ಭಾಗಗಳೂ ಈ ವಿಷಯಗಳಲ್ಲಿ ಸಹಯೋಗದಿಂದ ವರ್ತಿಸಿದಲ್ಲಿ ಮಾತ್ರಾ ಕರ್ನಾಟಕ ಮೂರಾದರೂ ನೂರಾದರೂ ತೊಡಕಾಗದು! ಇನ್ನೂ ಸರಿಯಾಗಿ ಹೇಳಬೇಕೆಂದರೆ ಸಮಾನ ಗೌರವದ ಸರಿಯಾದ ಒಕ್ಕೂಟ ವ್ಯವಸ್ಥೆಯು ಸರಿಯಾದ ಅಂತರರಾಜ್ಯ ರೀತಿನೀತಿಗಳನ್ನು ರೂಪಿಸಿದಲ್ಲಿ ಈ ಸಮಸ್ಯೆಯು ತಕ್ಕಮಟ್ಟಿಗೆ ಪರಿಹಾರವಾಗಬಹುದಾಗಿದೆ.

ಚಿಕ್ಕರಾಜ್ಯಗಳು "ಯುಎಸ್‍ಐ"ನಲ್ಲಿ ಮಾತ್ರಾ ಸುರಕ್ಷಿತ!


ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡಾ ಉತ್ತರ ಮತ್ತು ದಕ್ಷಿಣ ಭಾರತಗಳೇ ಎದುರಾಳಿಗಳಾಗಬಹುದೆಂಬ ಆತಂಕ ವ್ಯಕ್ತಪಡಿಸಿ ಇದನ್ನು ಸರಿದೂಗಿಸಲು ಎಲ್ಲಾ ರಾಜ್ಯಗಳ ಜನಸಂಖ್ಯೆಯೂ ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿರಲಿ, ಇದಕ್ಕಾಗಿ ಉತ್ತರದ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳನ್ನು ಚಿಕ್ಕರಾಜ್ಯಗಳನ್ನಾಗಿಸುವುದು ಒಳ್ಳೆಯದು ಎಂದಿದ್ದರು. ಹಾಗೆ ಮಾಡುವುದರಿಂದ ಕೇಂದ್ರಸರ್ಕಾರದ ಮೇಲೆ ದೊಡ್ಡ ರಾಜ್ಯದ ಹಿಡಿತ ತಪ್ಪಿಸಲು ಸಾಧ್ಯವೆಂದಿದ್ದರು. ದಕ್ಷಿಣ ಭಾರತದ ಹೈದರಾಬಾದ್ ಭಾರತದ ಎರಡನೇ ರಾಜಧಾನಿಯಾಗಲೀ ಎನ್ನುವವರೆಗೂ ಅವರು ಹೇಳಿದ್ದರು. ಎಂದರೆ ಕೇಂದ್ರದ ಮೇಲೆ ಯಾವ ರಾಜ್ಯವು ದೊಡ್ಡದೋ ಅದರ ಪ್ರಭಾವ, ಹಿಡಿತ ಇರುತ್ತದೆ ಮತ್ತು ಅದು ಸರಿಯಲ್ಲಾ ಎನ್ನುವ ಕಾಳಜಿಯಿಂದಲೇ ಹೇಳಿದ್ದರು.

ಇಂದು ಭಾರತದ ರಾಜಕಾರಣದಲ್ಲಿ ಯಾವ ಪಕ್ಷಗಳು ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಲ್ಲಿ ಆಸಕ್ತಿ ತೋರುತ್ತಿದ್ದಾವೋ ಆ ಪಕ್ಷಗಳು ದೇಶದ ಒಪ್ಪುಕೂಟ ಸ್ವರೂಪದ ಬಗ್ಗೆ ನಂಬಿಕೆಯನ್ನು ಹೊಂದಿರುವಂತೆ ತೋರುತ್ತಿಲ್ಲ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕೆನ್ನುವ ಮನಸ್ಥಿತಿಯಿಲ್ಲದೆ, ಚಿಕ್ಕರಾಜ್ಯ ಮಾಡಬೇಕೆನ್ನುವುದು "ಬಲಿಷ್ಟ ಕೇಂದ್ರ ಮತ್ತು ಬಲಹೀನ ರಾಜ್ಯ"ದ ನಿರ್ಮಾಣದ ಪ್ರಯತ್ನವಾಗುತ್ತದೆ. ಇಂದು ಇಪ್ಪತ್ತೆಂಟು ಸಂಸದರ ಕರ್ನಾಟಕವು ಹೇಗೆ ಹೆಚ್ಚಿನ ಸಂಸದರ ಮಹಾರಾಷ್ತ್ರ, ತಮಿಳುನಾಡು ಹಾಗೂ ಆಂಧ್ರಗಳ ದೆಹಲಿ ಲಾಬಿಯ ಎದುರು ಕೈಚೆಲ್ಲುತ್ತದೆ ಎನ್ನುವುದು ಒಂದು ಕಡೆ, ಹಾಗೇ ಕಡಿಮೆ ಸಂಸದರನ್ನು ಹೊಂದಿರುವ ಹೆಚ್ಚು ರಾಜ್ಯಗಳಿರುವ ಈಶಾನ್ಯ ಭಾರತದ ಸಮಸ್ಯೆಗಳಿಗೆ ಭಾರತದ ಸಂಸತ್ತಿನಲ್ಲಿ ಸಿಗುವ ಆದ್ಯತೆಗಳ ಬಗ್ಗೆ ಕಣ್ಣು ಹಾಯಿಸಿದರೆ ಚಿಕ್ಕ ರಾಜ್ಯಗಳು ಭಾರತದಲ್ಲಿ ತಮ್ಮ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವುದು ಕಷ್ಟವೇನೋ ಎನ್ನುವ ಅನುಮಾನ ಮೂಡುತ್ತದೆ.

ಭಾರತವು ಸರಿಯಾದ ಸಂಯುಕ್ತ ಸಂಸ್ಥಾನವಾದಲ್ಲಿ ಇಂತಹ ತೊಡಕುಗಳನ್ನು ನಿವಾರಿಸಬಹುದಾಗಿದೆ. ‘ದೊಡ್ಡದಕ್ಕೆ ಬಲ/ ಪ್ರಭಾವ ಹೆಚ್ಚು’ ಎನ್ನುವ ಪರಿಸ್ಥಿತಿ ಇಂದಿನ ಭಾರತದಲ್ಲಿರುವುದು ನಮ್ಮ ಅನೇಕ ಸಮಸ್ಯೆಗಳು ಬಗೆಹರಿಯದಿರಲು, ಬಗೆಹರಿದರೂ ಪರಿಹಾರಗಳು ಪಕ್ಷಪಾತತನದಿಂದ ಕೂಡಿವೆ ಎನ್ನಿಸಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಇದನ್ನು ಬಗೆಹರಿಸುವುದು ಎಂಬುದರ ಬಗ್ಗೆ ಅನೇಕರು ಚಿಂತನೆ ನಡೆಸಿದ್ದಾರೆ!

ಭಾರತ ಒಪ್ಪುಕೂಟದಲ್ಲಿ...


ರಾಜ್ಯಸಭೆಗೆ ಇಂದು ರಾಜ್ಯಗಳನ್ನು ಪ್ರತಿನಿಧಿಸುವ ಸಭೆ ಎನ್ನುವ ಅರ್ಥವಿದ್ದರೂ ಸದಸ್ಯ ಬಲ, ಆರ್ಥಿಕ ವಿಷಯಗಳಲ್ಲಿನ ಮಿತಿಯಂತಹ ಹಲವಾರು ವಿಷಯಗಳಲ್ಲಿ ಲೋಕಸಭೆಗಿಂತಲೂ ಕಡಿಮೆ ಅಧಿಕಾರಗಳಿವೆ. ಎರಡೂ ಸದನಗಳ ಸದಸ್ಯ ಬಲವನ್ನು ಸಮಾನವಾಗಿಸುವ ಮೂಲಕ ಈ ಕೊರತೆಯನ್ನು ನೀಗಿಸಬಹುದಾಗಿದೆ. ರಾಜ್ಯಸಭೆಯಲ್ಲಿ ಪ್ರತಿರಾಜ್ಯದಿಂದ ಸಮಾನ ಪ್ರಾತಿನಿಧ್ಯವಿರುವುದೂ ಕೂಡಾ ಅಗತ್ಯವಾಗಿದೆ. ಅಮೇರಿಕಾದ ಸೆನೆಟ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಮರುರೂಪಿಸಬಹುದಾಗಿದೆ.

ಎಷ್ಟೇ ಚಿಕ್ಕ ರಾಜ್ಯವಿರಲಿ ಅದಕ್ಕೆ ಸಂಬಂಧಿಸಿದ ಯಾವುದೇ ನಿರ್ಣಯವನ್ನು, ಅದರ ಸಹಮತಿಯಿಲ್ಲದೆ ಜಾರಿಮಾಡುವಂತಿಲ್ಲ ಎನ್ನುವ ವ್ಯವಸ್ಥೆ ಇರಬೇಕಾಗಿದೆ. ಇದು ಬಹುಮತದ ಕಾರಣದಿಂದಲೇ ರಾಜ್ಯವೊಂದರ ಮೇಲೆ ಕೇಂದ್ರ ಅಧಿಕಾರ ಚಲಾಯಿಸುವುದನ್ನು ತಪ್ಪಿಸುತ್ತದೆ. ಇಡೀ ಭಾರತದ ಸಂಸತ್ತು ಒಮ್ಮತದಿಂದ ತನ್ನೆಲ್ಲಾ ಸದಸ್ಯ ಬಲ ಬಳಸಿ ರಾಜ್ಯವೊಂದರ ಹಕ್ಕುಗಳನ್ನು ಮೊಟಕುಗೊಳಿಸಿಬಿಡಬಹುದಾದ ಅಪಾಯ ಇದರಿಂದ ದೂರವಾಗಬಹುದಾಗಿದೆ.

ಚಿಕ್ಕರಾಜ್ಯಗಳು ಆಡಳಿತಾತ್ಮಕ ದೃಷ್ಟಿಯಿಂದ ಅನುಕೂಲವೆನ್ನುವ ಮಾತಿಗೆ ಅರ್ಥ ಸಿಗಬೇಕೆಂದರೆ ರಾಜ್ಯಗಳಿಗೆ ತಮ್ಮನ್ನು ತಾವು ಆಳಿಕೊಳ್ಳುವ ಅಧಿಕಾರವಾದರೂ ಇರಬೇಕಲ್ಲವೇ? ಹಾಗಾಗಿ ಕೇಂದ್ರವು ಕೇಂದ್ರಪಟ್ಟಿ ಮತ್ತು ಜಂಟಿ ಪಟ್ಟಿಯಲ್ಲಿರುವ ಆಡಳಿತಾತ್ಮಕ ವಿಷಯಗಳಲ್ಲಿನ ತನ್ನ ಹಕ್ಕನ್ನು ರಾಜ್ಯಗಳಿಗೆ ಬಿಟ್ಟು ಕೊಡಬೇಕು. ಹಣಕಾಸು, ರಕ್ಷಣೆ, ವಿದೇಶಾಂಗ ವ್ಯವಹಾರ ಮೊದಲಾದ ಕೆಲವೇ ಕೆಲವು ವಿಷಯಗಳನ್ನು ಮಾತ್ರಾ ತಾನುಳಿಸಿಕೊಳ್ಳಬೇಕು. ಇನ್ನು ಕೆಲವರು ಪ್ರತಿಪಾದಿಸಿದಂತೆ ದ್ವಿಪೌರತ್ವವನ್ನೂ ಪರಿಗಣಿಸಬಹುದಾಗಿದೆ.

ಇಂಥಾ ವಿಷಯಗಳೆಲ್ಲಾ ಜಾರಿಯಾದಾಗ ರಾಜ್ಯಗಳ ಸ್ವಾಯತ್ತತೆಗೆ ಭದ್ರತೆ ಸಿಗುತ್ತವೆ. ಇಂದಿನ ಭಾರತದಲ್ಲಿ ಔಟ್‍ಲುಕ್‍ನಲ್ಲಿನ ಬರಹದಂತೆ ಆಡಳಿತದ ಕಾರಣಕ್ಕಾಗಿ ಚಿಕ್ಕ ಚಿಕ್ಕ ರಾಜ್ಯಗಳ ರಚನೆಯಾಗುವುದಾದಲ್ಲಿ ರಾಜ್ಯಗಳು ಮತ್ತಷ್ಟು ಅತಂತ್ರವಾಗುವುದು ಖಚಿತ. ಬಲಿಷ್ಠವಾದ ಕೇಂದ್ರವು ಸಾಧ್ಯವಾಗುವುದು ಬಲಶಾಲಿಯಾದ ರಾಜ್ಯಗಳಿಂದಲೇ ಹೊರತು ರಾಜ್ಯಗಳನ್ನು ಚಿಕ್ಕದಾಗಿಸಿ, ಕೇಂದ್ರದಲ್ಲಿ ಅವುಗಳ ಪ್ರಾತಿನಿಧ್ಯ ಕಡಿಮೆ ಮಾಡಿಸಿ, ಅವುಗಳ ಬಲಕುಂದಿಸುವುದರಿಂದಲ್ಲಾ!!

4 ಅನಿಸಿಕೆಗಳು:

Priyank ಅಂತಾರೆ...

ನಾರ್ತೀಸ್ಟ್ ರಾಜ್ಯಗಳ ಬೇನೆಯನ್ನು ಕೇಳುವವರೇ ಇಲ್ಲ ಸಂಸತ್ತಿನಲ್ಲಿ. ಯಾಕಂದರೆ, ಅಲ್ಲಿಂದ ಆರಿಸಿ ಬರುವ ಎಂಪಿಗಳ ಸಂಖ್ಯೆ ಒಂದೋ ಎರಡೋ ಇದೆ.
ನಾರ್ತೀಸ್ಟ್ ರಾಜ್ಯಗಳಿಗೆ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪೂರ್ತಿ ಅಧಿಕಾರ ಇಲ್ಲ.
ಕೇಂದ್ರ ಸರ್ಕಾರದ ಮೊರೆ ಹೋದರೆ, ಅಲ್ಲಿ ಕೇಳುವವರೇ ಇಲ್ಲ.
ಹಂಗಾಗಿ, ಅಲ್ಲಿ ಬೇರೆ ನಾಡಾಗುವ ಕೂಗು ಹಬ್ಬಿದೆ.

ಒಪ್ಪುಕೂಟ ವ್ಯವಸ್ಥೆ ತಾರದೇ, ಚಿಕ್ಕ ಚಿಕ್ಕ ರಾಜ್ಯಗಳಾಗಿ ಮಾಡಿದರೆ, ನಾರ್ತೀಸ್ಟಿನ ಸಮಸ್ಯೆಗಳು ಎಲ್ಲಾ ರಾಜ್ಯಗಳಿಗೂ ಹಬ್ಬುತ್ತವೆ.

ಮಾಯ್ಸ ಅಂತಾರೆ...

ಪ್ರಿಯಾಂಕರೇ.

ಮೂಡುಬಡಗಣದ ರಾಜ್ಯಗಳ ಸಂಗತಿಯೇ ಬೇರೆ. ಇಂಡಿಯದ ಸರಕಾರ ಅಲ್ಲಿ ನಡೆಸುತ್ತಿರುವ ರಾಜಕೀಯವೇ ಬೇರೆ. ಅದಕ್ಕೆ ಅಲ್ಲಿ ಗಲ್ಲಿಗೊಂದು ರಾಜ್ಯದ ಹಾಗೆ ಪುಟ್ಟಪುಟ್ಟ ರಾಜ್ಯಗಳನ್ನು ಬೇಕಂತಲೇ ಮಾಡಿರುವುದು.

ಆದರೆ ನೋಡಿ, ಆಡಳಿತದ ಅಚ್ಚುಕಟ್ಟಿಗೆ ಚಿಕ್ಕಚಿಕ್ಕ ರಾಜ್ಯಗಳನ್ ಮಾಡೋದು ಒಳ್ಳೇದು.
ಆದರೆ ಎಶ್ಟು ಚಿಕ್ಕವು? ಕಡಮೆ ಅಂದರೆ ಮೂರು ಕೋಟಿ ಜನ ಹಾಗೂ ಹೆಚ್ಚುಗೆ ಅಂದರೆ ಆರು ಕೋಟಿ ಮಂದಿಯಿರುವ ರಾಜ್ಯಗಳನ್ನು ಮಾಡಬೋದು.

ಹಾಗೇ ತೀರಾ ಚಿಕ್ಕದಾಗಿರುವ ’ಕೇಂದ್ರಾಡಳಿತ ಪ್ರದೇಶ’ ಹಾಗು ರಾಜ್ಯಗಳ ಇರಬಾರದು. ಅವುಗಳನ್ನು ಅವುಗಳು ನೆಲ/ಭೂಗೋಳ ಹಾಗು ನಡೆ/ಸಂಸ್ಕೃತಿಗಳಿಗೆ ಹತ್ತಿರವಾದ ಪಕ್ಕದ ರಾಜ್ಯಗಳಿಗೆ ಸೇರಿಸಬೇಕು. ಮಾದರಿ: ಪುದುಚರಿಯನ್ನುತಮಿಳುನಾಡಿಗೆ, ಲಕ್ಷದ್ವೀಪಗಳನ್ನು ಕೇರಳಕ್ಕೆ, ದಿಯೋ-ಹಾಗು ದಮನ್ಗಳನ್ನು ಗುಜರಾತಿಗೆ ... ಮೂರುಕೋಟಿಗಿಂತ ಕಡಮೆ ಮಂದಿಯಿರುವ ರಾಜ್ಯ/ಆಡಳಿತಪ್ರದೇಶಕ್ಕೆ ಎಲ್ಲರೂ ವಿರೋಧ ಮಾಡಬೇಕು. ತೀರಾ ಪುಟ್ಟಪುಟ್ಟ ರಾಜ್ಯಗಳಿಂದ ಹೆಚ್ಚು ವೆಚ್ಚ ಹಾಗು ಬಗ್ಗಿಸಲಾಗದಂತಹ ’ಕೇಂದ್ರ’ ನೇರ‍್ಪಡುವುದು.

ಇನ್ನು ಕನ್ನಡವೆಂಬ ’Ethnic nation’ ಒಂದೇ ಇರಬೇಕು ಅದು ಕನ್ನಡತನ ಹಾಗು ಕನ್ನಡಿಗರ ಒಕ್ಕಟ್ಟಿಗೆ ಎಂಬುದು ಭಾವನಾತ್ಮಕವಾಗಿ ತಕ್ಕುದ್ದು. ಆದರೆ ಏಳಿಗೆ, ಸವಲತ್ತು ಹಾಗು ಸಮ-ಅವಕಾಶಕ್ಕೆ ಬಡಗಣ-ಕರ‍್ನಾಟಕಕ್ಕೆ ಅನ್ಯಾಯವಾಗಿರುವುದು ದಿಟವೇ ತಾನೇ!

ಕರ‍್ನಾಟಕದ ತೆಂಕುಮೂಡಣದ ಮೂಲೆಯಲ್ಲಿರುವ ಬೆಂಗಳೂರನ್ನು ತಲೆವೊಳಲ್/ರಾಜಧಾನಿಯಾಗಿ ಮಾಡಿ, ಪಕ್ಕದ ಹೊಸೂರು, ವೆಲ್ಲೂರು, ಅನಂತಪುರ ಮುಂತಾದ ಅಕನ್ನಡ ಜಿಲ್ಲೆಯ ಜನರಿಗೆ ಬೆಂಗಳೂರಿನ ಬಾಳಿಕೆ ಹೆಚ್ಚಾಗಿಸಿ, ನಮ್ಮ ಹೆಚ್ಚು ಕನ್ನಡಿಗರಿಗೆ ’ದೊಡ್ಡ ಊರಿನ ಹತ್ತಿರ’ದ ಸವಲತ್ತಿನಿಂದ ದೂರವಿರಿಸಿರುವುದು ತರವೇ? ಪಾಪ ಬೀದರ, ಗುಲಬರ‍್ಗದವರು ಹೈದರಾಬಾದಿಗೆ ಕೆಲಸಕ್ಕಾಗಿ ಹೋದರು/ಹೋಗುವರು, ಕರಾವಳಿ/ಹಾಗು ಪಡುಬಡಗಣದ ಕನ್ನಡಿಗರ ಮುಂಬಾಯಿಗೆ, ಆದರೆ ಬೆಂಗಳೂರಿಗೆ ತೆಂಕು-ಕರ‍್ನಾಟಕದ ಮಂದಿಯ ಜತೆಗೆ ರಾಯಲಸೀಮೆಯ ತೆಲುಗರು, ಹೊಸೂರು, ವೆಲ್ಲೂರಿನ ತಮಿಳರು ಕೆಲಸಕ್ಕಾಗಿ ಬಂದು ತುಂಬಿಕೊಳ್ಳುವರು.

ಕಳೆದ ೬೦-೭೦ ಏಡು/ವರುಶಗಳಿಂದ ನಮ್ಮ ಕರ‍್ನಾಟಕದ ಆಳ್ವಿಕೆಗಾರರು ಏಕೆ ತಲೆವೊಳಲನ್ನು ನಡು-ಕರ‍್ನಾಟಕದಲ್ಲಿ ಕಟ್ಟಬಾರದು. ಆಗ ಅಶ್ಟೂ ಕಡೆಯಿಂದ ಕನ್ನಡನುಡಿಗರೇ ಸುತ್ತುವರಿದ ಕನ್ನಡನಾಡಿನ ತಲೆಯೊಳಲು ಎಲ್ಲಾ ಕನ್ನಡಿಗರಿಗೂ ಆನುವುದು.

ಎಲ್ಲಾ ಒಂದೊಂದು ದೊಡ್ಡರಾಜ್ಯಗಳನ್ನೂ ಒಡೆದು ತಕ್ಕತಕ್ಕ ಪಾಟಿನ ರಾಜ್ಯಗಳ್ನು ಮಾಡುವದೇ ಆದರೆ ಕರ‍್ನಾಟಕವೂ ಸಲೀಸು ಆಡಳಿತದ ಸಲುವಾಗಿ ಓರಣಿಸಿದರೆ ತಪ್ಪಿಲ್ಲ. ಆದರೆ ಈ ಹೊತ್ತು ಇರುವ ಚಲ್ಲಾ-ಪಿಲ್ಲಿ ರಾಜ್ಯಗಳ ರಚನೆ ಎಲ್ಲ ಕಡೆಯಿಂದಲೂ ಅವ್ಯವಸ್ಥೆಯೇ!

karunadu ಅಂತಾರೆ...

ಈ ಮಾಪ್ನಲ್ಲಿ ಕೆಲವು ಅಚ್ಚರಿ ಸಂಗತಿಗಳಿವೆ.
೧. ೨೦೫೦ ಹೊತ್ತಿಗೂ ಕೂಡ ಇಡೀ ಕಾಶ್ಮೀರ ಬಾರತದಲ್ಲಿ ಸೇರುವ ನಂಬಿಕೆ ಯಾರಿಗು ಇಲ್ಲ !
೨. ಇದನ್ನು ಯಾರೊ ಮಲಯಾಳಿ ಬರೆದಿರೋದು ಎಂದು ದಿಟವಾಗಿ ಹೇಳಬಹುದು.ಯಾಕಂದರೆ ಕೇರಳವನ್ನು ಇಲ್ಲಿ ಒಂದೇ ರಾಜ್ಯವಾಗಿ ತೋರಿಸಲಾಗಿದೆ. ಈಗಿನ ಕೇರಳ ಮುಂಚೆ ಮೂರು ಬಾಗಗಳಾಗಿ ಇತ್ತು- ಟ್ರಾವಂಕೂರ್,ಕೊಚ್ಚಿ,ಮಲಾಬಾರ್. ಬೇರೆಯವರು ಬರೆದಿದ್ದರು ಕೇರಳವನ್ನು ಅಶ್ಟು ಸಲೀಸಾಗಿ ಒಡೆಯಲಾಗುವುದಿಲ್ಲ ಎಂಬುದು ಅವರ ಅನಿಸಿಕೆ. ಇದಕ್ಕೆ ಕೇರಳಿಗರ ಒಗ್ಗಟ್ಟೆ ಮುಕ್ಯ ಕಾರಣ.
೩. ಕರ್ನಾಟಕವನ್ನು ಒಡೆದರೆ ಕನ್ನಡಿಗರ ಒಗ್ಗಟ್ಟನ್ನು ಮುರಿದಂತೆ. ಇಲ್ಲಿ ಕೊಟ್ಟಿರುವ ಹಾಗೆ ಕರ್ನಾಟಕ ಮೂರು ಪಾಲಾದರೆ ಅಕ್ಕಪಕ್ಕದವರಿಗೆ ಇನ್ನೂ ಒಳ್ಳೇದಾದಂತೆ.ಇದನ್ನು ತಡೆಯಬೇಕೆಂದರೆ ಕರ್ನಾಟಕದ ಎಲ್ಲ ಊರಿನ ಮಂದಿಗೂ ಸಮಾನ ಅವಕಾಶ ನೀಡಬೇಕು.ಇಲ್ಲವಾದರೆ ನಮ್ಮಲ್ಲಿ ಬಿರುಕು ಬಿಡುತ್ತದೆ.
೪.ತುಳು ಮತ್ತು ಕೊಡವ ನುಡಿಗಳಿಗೆ ಸರಿಯಾದ ಸ್ತಾನಮಾನ ಕೊಡಬೇಕು.
೫. ಎಲ್ಲಕ್ಕಿಂತ ಹೆಚ್ಚಾಗಿ ಮಾಯ್ಸ ರವರು ಹೇಳಿದ ಹಾಗೆ ರಾಜದಾನಿಯನ್ನು ಮಾರ್ಪಾಟು ಮಾಡಬೇಕು. ಇನ್ನು ಕಾಲ ಮಿಂಚಿಲ್ಲ. ಹಾವೇರಿ, ದಾವಣಗೆರೆ ಇಲ್ಲ ಕೊಪ್ಪಳಕ್ಕೆ ಎರಡನೆ ರಾಜದಾನಿ ಎಂಬ ಪಟ್ಟವನ್ನು ಅದಿಕ್ರುತವಾಗಿ ಕೊಡಬೇಕು ಮತ್ತು ಸುತ್ತಮುತ್ತಲಿನವರಿಗೆ ಕೆಲಸ ಸಿಗುವಂತೆ ಮಾಡಬೇಕು.

ಮಾಯ್ಸ ಅಂತಾರೆ...

ಇನ್ನೊಂದು ಗಮನಿಸಿ ನಮ್ಮ ಕರ‍್ನಾಟಕದಲ್ಲಿರುವ ’ಉತ್ತರ ಕರ‍್ನಾಟಕ’ದ ಬೇಡಿಕೆ, ತುಂಬಾನೇ ಮೆತ್ತಗೆ ಇದೆ.

ಆದರೆ ತಮಿಳುನಾಡಿನಂತಹ ನುಡಿಹೋರಾಟದ ನಾಡಲ್ಲೇ ಕೊಂಗುನಾಡಿನ ಬೇಡಿಕೆ ತುಂಬಾ ಗಟ್ಟಿಯಾಗಿದ್ದು. ಆ ಗುರಿಗಾಗೇ ಕೊಂಗುನಾಡು ಮುನ್ನೇತ್ರ ಕೞಗಂ ಹಾಗು ಕೊಂಗುನಾಡು ಮಕ್ಕಳ ಕಟ್ಚಿ ಎಂಬ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿವೆ.

ಎಲ್ಲ ಹೊಸರಾಜ್ಯಗಳ ಬೇಡಿಕೆಗಳೂ ಸರಿಸುಮಾರು ಏಳಿಗೆಯ ಕೊರತೆಯಿಂದಲೇ ಎದ್ದಿರುವುದು. ಈ ಕೊರತೆಯನ್ನು ನೀಗಿಸುವುದು ರಾಜ್ಯ/ದೇಶ ದೊಡ್ಡದಾಗಿದ್ದಷ್ಟೂ ಕಷ್ಟವೇ!

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails