ಡಾ. ಡಿ ಎನ್ ಶಂಕರ್ ಬಟ್ ಅವರ "ಮಾತು ಮತ್ತು ಬರಹದ ನಡುವಿನ ಗೊಂದಲ" ಎನ್ನುವ ಹೆಸರಿನ ಹೊಸ ಹೊತ್ತಗೆಯೊಂದು ಇದೀಗ ಮಾರುಕಟ್ಟೆಗೆ ಬಂದಿದೆ. ಇದುವರೆಗೆ ನುಡಿಯರಿಮೆಯ ಬಗ್ಗೆ ಹತ್ತು ಹಲವು ಹೊತ್ತಗೆಗಳನ್ನು ಬರೆದಿರುವ ಇವರ ಈ ಹೊತ್ತಗೆಯಲ್ಲಿಯೂ ಎಂದಿನಂತೆ ಅತ್ಯಂತ ಸರಳವಾಗಿಯೂ, ವೈಜ್ಞಾನಿಕವಾಗಿಯೂ ವಿಷಯ ಮಂಡನೆ ಮಾಡಲಾಗಿದೆ. ಬಾಶಾ ಪ್ರಕಾಶನದವರು ಹೊರತಂದಿರುವ ಹೊತ್ತಗೆಯ ಬೆನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ.
ಮಾತು ಮತ್ತು ಬರಹದ ನಡುವಿನ ಗೊಂದಲ
ಮಾತು ಮತ್ತು ಬರಹಗಳ ನಡುವಿನ ಸಂಬಂದವೆಂತಹುದು ಮತ್ತು ಅವಕ್ಕೂ ನುಡಿ ಇಲ್ಲವೇ ಬಾಶೆಗೂ ನಡುವಿರುವ ಸಂಬಂದವೆಂತಹುದು ಎಂಬುದರ ಕುರಿತಾಗಿ ಜನರಲ್ಲಿ ಗೊಂದಲವಿದೆ; ಈ ಗೊಂದಲದಿಂದಾಗಿ, ಅವರಲ್ಲಿ ನುಡಿಯ ಕುರಿತಾಗಿ ಹಲವು ತಪ್ಪು ಅನಿಸಿಕೆಗಳು ಮೂಡಿಬಂದಿವೆ. ಇವನ್ನು ಹೋಗಲಾಡಿಸುವುದಕ್ಕಾಗಿ, ಈ ಎರಡು ಬಗೆಯ ಸಂಬಂದಗಳು ಎಂತಹವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನುಡಿ ಎಂಬುದು ಮಾತಲ್ಲದೆ ಬರಹವಲ್ಲ; ನುಡಿಯ ಇಲ್ಲವೇ ಮಾತಿನ ಒಂದು ಕ್ರುತಕ ರೂಪವೇ ಬರಹ. ಮಾತು ಮಕ್ಕಳ ಬೆಳವಣಿಗೆಯ ಅಂಗವಾಗಿ ತಲೆಮಾರಿನಿಂದ ಸಾಗುತ್ತಾ ಹೋಗುತ್ತದೆ; ಹಾಗಾಗಿ, ಅದು ಯಾವಾಗಲೂ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿರುತ್ತದೆ.
ಬರಹವನ್ನು ಮಕ್ಕಳಿಗೆ ಕಲಿಸಬೇಕಾಗುತ್ತದೆಯಾದ ಕಾರಣ, ಅದು ಸಮಯ ಕಳೆದಂತೆಲ್ಲಾ ಹೆಚ್ಚು ಹೆಚ್ಚು ಕ್ರುತಕವಾಗುತ್ತಾ ಹೋಗಿ, ತನ್ನ ಜೀವಂತಿಕೆಯನ್ನು ಕಳೆದುಕೊಳ್ಳುತ್ತದೆ; ಅದರಲ್ಲಿ ಜೀವಂತಿಕೆಯನ್ನು ತುಂಬಲು ಅದಕ್ಕೂ ಮಾತಿಗೂ ನಡುವಿರುವ ಅಂತರವನ್ನು ಬರಹಗಾರರು ಕಡಿಮೆ ಮಾಡುತ್ತಿರಬೇಕಾಗುತ್ತದೆ.
ಬರಹವನ್ನು ಬಳಸಬಲ್ಲವರಿಗೂ ಅದನ್ನು ಬಳಸದಿರುವವರಿಗೂ ನಡುವೆ ಆಲೋಚಿಸುವ ಬಗೆಯಲ್ಲೇ ವ್ಯತ್ಯಾಸಗಳಿರುತ್ತವೆ; ಒಂದು ಸಮಾಜದಲ್ಲಿ ಕೆಲವರು ಮಾತ್ರ ಬರೆಯಬಲ್ಲವರಾಗಿದ್ದರೆ, ಅವರಿಗೂ ಉಳಿದವರಿಗೂ ನಡುವೆ ಹೊಂದಾಣಿಕೆಯಾಗಲಾರದು. ಹಾಗಾಗಿ, ಒಂದು ಸಮಾಜದ ಏಳಿಗೆಯಾಗಬೇಕಿದ್ದಲ್ಲಿ, ಅದರಲ್ಲಿರುವವರೆಲ್ಲರೂ ಬರಹ ಬಲ್ಲವರಾಗಿರಬೇಕು.
ನುಡಿಯರಿಮೆಯ ಅಡಿಪಾಯದಂತಿದೆ ಈ ಹೊತ್ತಗೆ!
ನಾಡೋಜ ಡಾ. ಡಿ ಎನ್ ಶಂಕರಬಟ್ಟರು ಕನ್ನಡದ ನುಡಿಯರಿಮೆಗೆ ಹೊಸತನದ ದಿಕ್ಕುತೋರಿದ ಈ ಕಾಲದ ಪ್ರಮುಖರಲ್ಲೊಬ್ಬರು. ಇವರು ನುಡಿಯರಿಮೆಯ ಬಗ್ಗೆ, ಕನ್ನಡ ನುಡಿ ಸಾಗಿಬಂದ ಬಗೆ, ಸಾಗಬೇಕಾದ ಬಗೆಗಳ ಬಗ್ಗೆ ಹತ್ತಾರು ಹೊತ್ತಗೆಗಳನ್ನು ಬರೆದಿದ್ದಾರೆ ಮತ್ತು ನುಡಿಯರಿಗರ ಪಾಲಿಗೆ ಮಹತ್ವದ ವಿಜ್ಞಾನಿಯಾಗಿದ್ದಾರೆ. ಇವರ ಹೊತ್ತಗೆಗಳಲ್ಲಿ ಪ್ರಮುಖವಾಗಿ ಪ್ರತಿಪಾದಿಸಲ್ಪಡುತ್ತಿರುವ ವಿಷಯಗಳು ಕನ್ನಡ ವರ್ಣಮಾಲೆಯಿಂದ ಬಳಕೆಯಲ್ಲಿರದ ಅಕ್ಷರಗಳನ್ನು ಕೈಬಿಡಬೇಕು ಎನ್ನುವುದು. ಇದಕ್ಕೆ ಪೂರಕವಾಗಿ ಈಗಾಗಲೇ ಬಳಸುತ್ತಿರುವ ಪರಭಾಷೆಯ ಪದಗಳನ್ನು ಕನ್ನಡಿಗರು ಉಲಿಯುವಂತೆಯೇ ಬರೆಯಬೇಕು ಎನ್ನುವುದು. ಕನ್ನಡದಲ್ಲೇ ಪದಗಳನ್ನು ಕಟ್ಟುವ ಮೂಲಕ ಪದ ಕಟ್ಟುವಿಕೆಯನ್ನು ಜನರಿಗೆ ಹತ್ತಿರವಾಗಿಸಬೇಕು ಎನ್ನುವುದು. ಶಂಕರಬಟ್ಟರ ನಿಲುವಿಗೆ ಬೆಂಬಲ ಸಿಕ್ಕಂತೆಯೇ ಕೆಲವರಿಂದ ವಿರೋಧವೂ ಇದೆ. ಹೀಗೆ ವಿರೋಧಿಸುವವರ ವಾದಗಳಲ್ಲಿ ಮುಖ್ಯವಾಗಿ ಮಾತು ಮತ್ತು ಬರಹಗಳ ನಡುವೆ ವ್ಯತ್ಯಾಸ ಮರೆಮಾಚಿದ ಒಂದು ರೀತಿಯ ಗೊಂದಲ ಎದ್ದು ತೋರುತ್ತಿದ್ದು... ಈ ಹೊತ್ತಗೆಯಲ್ಲಿ ಅವೆಲ್ಲವನ್ನೂ ಸರಳವಾಗಿ ವಿವರಿಸಿ, ಗೊಂದಲ ನಿವಾರಿಸುವ ಪ್ರಯತ್ನವನ್ನು ಬಟ್ಟರು ಮಾಡಿದ್ದಾರೆ. ಹಾಗಾಗಿ, ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನದ ಅಂದರೆ ನುಡಿಯರಿಮೆಯ ಅಡಿಪಾಯದಂತಿದೆ ಈ ಹೊತ್ತಗೆ ಎನ್ನಬಹುದಾಗಿದೆ!
ಈ ಹೊತ್ತಗೆಯು ನವಕರ್ನಾಟಕ ಪ್ರಕಾಶನ ಸಂಸ್ಥೆಯಿಂದ ಹಂಚಿಕೆಯಾಗಿದ್ದು ಪ್ರಮುಖವಾದ ಹೊತ್ತಗೆ ಮಳಿಗೆಗಳಲ್ಲಿ ಸಿಗುತ್ತಲಿದೆ. ಹಾಗೇ ಮಿಂಬಲೆಯನ್ನು ಬಳಸಿ ಕುಳಿತಲ್ಲೇ ಹೊತ್ತಗೆಯನ್ನು ಕೊಳ್ಳುವ ಏರ್ಪಾಡು ಕೂಡಾ ಇದೆ. ಪತ್ರಿಕೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಗಳಿಸಿರುವ ಈ ಹೊತ್ತಗೆಯನ್ನು ಆಕೃತಿ ಪುಸ್ತಕದ ಈ ಕೊಂಡಿಯಲ್ಲಿ ಕೊಳ್ಳಬಹುದು. ಬೆಂಗಳೂರಿಗರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯೂ ಇವರಲ್ಲಿದೆ.
೧. ಮಾತು ಮತ್ತು ಬರಹದ ನಡುವಿನ ಗೊಂದಲ : http://akrutibooks.com/node/2884
0 ಅನಿಸಿಕೆಗಳು:
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!