ಭಾರತದ ಹುಳುಕಿನ ಭಾಷಾನೀತಿಗೆ ಮತ್ತು ಆ ಮೂಲಕ ಹಿಂದೀ ಭಾಷಿಕರಿಗೆ ವಿಶೇಷ ಉಪಕಾರ ಮಾಡಿಕೊಡುತ್ತಾ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುತ್ತಿರುವುದಕ್ಕೆ ಕೇಂದ್ರಸರ್ಕಾರದ ಅಧೀನದಲ್ಲಿರುವ ವಿಮಾ ಸಂಸ್ಥೆಗಳಲ್ಲಿ ಇತ್ತೀಚಿಗೆ ಆಗುತ್ತಿರುವ ನೇಮಕಾತಿ ಪ್ರಕ್ರಿಯೆಗಳು ತಾಜಾ ಉದಾಹರಣೆಯಾಗಿ ನಿಂತಿವೆ.
ಹಿಂದೀಭಾಷಿಕರಿಗೆ ಸುಲಭ!
ಕೇಂದ್ರದ ಅಧೀನದ ಸಾರ್ವಜನಿಕ ವಲಯದ ನಾಲ್ಕು ವಿಮಾಸಂಸ್ಥೆಗಳಾದ ನ್ಯಾಶನಲ್, ಓರಿಯಂಟಲ್, ನ್ಯೂ ಇಂಡಿಯಾ ಮತ್ತು ಯುನೈಟಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿಗಳಲ್ಲಿ ೨೬೦೦, ಕ್ಲಾಸ್ ಮೂರರ ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ. ಇದಲ್ಲದೆ ಭಾರತಾದ್ಯಂತ ಒಂದೇಸಲಕ್ಕೆ ನಡೆಸಲಾಗುತ್ತಿರುವ ಈ ನೇಮಕಾತಿಯ ಅಂಗವಾಗಿ ಕರ್ನಾಟಕದಲ್ಲಿ ಒಟ್ಟು ೧೮೧ ಹುದ್ದೆಗಳಿಗೆ ಆಯ್ಕೆ ನಡೆಯುತ್ತಿದೆ. ವಿಷಯವೇನೆಂದರೆ ಈ ನೇಮಕಾತಿಯು ಹಿಂದೀ ಭಾಷಿಕರಿಗೆ ಅತಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಮಾಡಿಕೊಡುತ್ತಿದೆ ಮತ್ತು ಹಿಂದೀಯೇತರರ ಅವಕಾಶಗಳನ್ನು ಮೊಟಕು ಮಾಡುತ್ತಿದೆ.
ಕನ್ನಡಿಗರಿಗೆ ಮೋಸ!
ಈ ಪರೀಕ್ಷೆಗಳು ನಡೆಯುವ ಬಗೆಯನ್ನು ನೋಡಿ. ಇಂಗ್ಲೀಶ್ ಭಾಷೆಯ ಬಗ್ಗೆ ಇರುವ ಒಂದು ಪ್ರಶ್ನೆಪತ್ರಿಕೆಯನ್ನು ಬಿಟ್ಟರೆ ಉಳಿದೆಲ್ಲವನ್ನೂ ಹಿಂದೀ/ ಇಂಗ್ಲೀಶುಗಳಲ್ಲಿ ನೀಡಲಿದ್ದಾರಂತೆ. ಈ ಪ್ರಶ್ನೆಗಳು "ಸರಿ ಉತ್ತರವನ್ನು ಗುರುತಿಸಿ" ಎಂಬ ಮಾದರಿಯವಾದ್ದರಿಂದ ಹಿಂದೀ ಭಾಷೆಯವರಿಗೆ ಉಳಿದವರಿಗಿಂತಲೂ ಈ ಪ್ರಶ್ನೆಗಳು ಸುಲಭವಾಗುತ್ತದೆ. ಕನ್ನಡಿಗನೊಬ್ಬ ಇಂಗ್ಲೀಶ್ ಅಥವಾ ಹಿಂದೀಯಲ್ಲಿ ಈ ಪ್ರವೇಶ ಪರೀಕ್ಷೆಗಳನ್ನು ಎದುರಿಸಬೇಕು. ಆದರೆ ಹಿಂದೀಯವರು ಹಿಂದೀ ಅಥವಾ ಇಂಗ್ಲೀಶಿನಲ್ಲಿ ಎದುರಿಸಬಹುದು ಎಂಬ ನೀತಿಯೇ ದುರುದ್ದೇಶದ್ದು! ಹೀಗಾಗಿ ನೇರವಾಗಿ ಈ ಪ್ರವೇಶ ಪರೀಕ್ಷೆಗಳು ತಾರತಮ್ಯದ ಅನ್ಯಾಯವನ್ನು ಎತ್ತಿಹಿಡಿಯುವ ನಡೆಯಾಗಿವೆ ಎನ್ನದೆ ವಿಧಿಯಿಲ್ಲಾ! ಇದೇ ರೀತಿಯ ತಾರತಮ್ಯದ ಕೆಲಸವನ್ನು ಈ ಹಿಂದೆ ಭಾರತೀಯ ರೈಲ್ವೇ ಇಲಾಖೆಯು ಮಾಡಿತ್ತು! ಬ್ಯಾಂಕುಗಳ ನೇಮಕಾತಿಯಲ್ಲೂ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ "ಹಿಂದೀ"ಯನ್ನು ಓದಿರುವ ಪುರಾವೆ ಇರಬೇಕು ಎಂದಿತ್ತು! ಈಗ ವಿಮಾ ಸಂಸ್ಥೆಗಳ ನೇಮಕಾತಿಯಲ್ಲೂ ಇಂಥದ್ದೇ ಏರ್ಪಾಡಿರುವುದು ಕಾಣುತ್ತಿದೆ. ಒಟ್ಟಾರೆ ಈ ದೇಶ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಿಂದೀಯವರ ಸ್ವತ್ತು ಎಂಬಂತೆ ಭಾರತ ಸರ್ಕಾರದ ನೀತಿಗಳು ಕೊರಳೆತ್ತಿ ಸಾರುತ್ತಿರುವಂತಿದೆ. ಇದು ಸರಿ ಹೋಗಬೇಕೆಂದರೆ ಹುಳುಕಿನ ಭಾಷಾನೀತಿಯನ್ನು ಬದಲಿಸುವುದೊಂದೇ ದಾರಿ.
ಕೊನೆಹನಿ: ಈ ನೇಮಕಾತಿಯ ಜಾಹೀರಾತಿನಲ್ಲಿ ಸ್ಥಳೀಯ ಭಾಷೆಯ ಅರಿವು ಅಭ್ಯರ್ಥಿಗಳಿಗೆ ಇರಬೇಕು ಎಂದು ಬರೆಯಲಾಗಿದೆ. ಅಂದರೆ ಕರ್ನಾಟಕದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಕನ್ನಡ ಬರಬೇಕು ಎನ್ನುವುದು ಇದರ ಅರ್ಥ. ತಮಾಶೆಯೆಂದರೆ ಅಭ್ಯರ್ಥಿಗಳ ಸ್ಥಳೀಯ ಭಾಷೆಯ ಜ್ಞಾನವನ್ನು ಹೇಗೆ ಅಳೆಯಲಾಗುತ್ತದೆ? ಅದಕ್ಕೆ ಯಾವ ಪರೀಕ್ಷೆಯಿದೆ? ಯಾವ ಮಟ್ಟದ ಅರಿವು ಇರಬೇಕು? ಇತ್ಯಾದಿಗಳ ಬಗ್ಗೆ ಏನೂ ಮಾಹಿತಿಯಿಲ್ಲಾ! ಅಂದರೆ ಈ ನಿಯಮವನ್ನು ಬರೀ ತೋರಿಕೆಗಾಗಿ ಕಾಟಾಚಾರಕ್ಕೆಂಬಂತೆ ಮಾಡಿರಬಹುದೆನ್ನುವ ಅನುಮಾನ ಮೂಡುತ್ತದೆ.
2 ಅನಿಸಿಕೆಗಳು:
ಕಾನೂನು ರೀತಿ ಏನು ಹೊರಟ ಮಾಡಬಹುದು ಇದರ ವಿರುಧ್ಧವಾಗಿ.. !! ಹೇಳಿ ನನ್ನ ಕೈಲಾಗುಷ್ಟು ಶ್ರಮ ನಾನು ಹಾಕೋದಕ್ಕೆ ತಯಾರು...
ಭಾರತದ ಕಾನೂನು ಕಾಪಾಡುವ ಆಲಯಗಳು ಸಂವಿಧಾನವನ್ನು ಎತ್ತಿಹಿಡಿಯುತ್ತವೆ. ಭಾರತೀಯ ಸಂವಿಧಾನದ ಪ್ರಕಾರ ಹಿಂದೀ/ ಇಂಗ್ಲೀಷಿನಲ್ಲಿ ನೀಡುವುದು ಕಡ್ಡಾಯವೇ ಹೊರತು ಕನ್ನಡದಲ್ಲಿ ನೀಡುವುದಲ್ಲಾ! ಹಾಗಾಗಿ ಈ ವಿಷಯವಾಗಿ ಕೋರ್ಟು ಕನ್ನಡದಲ್ಲಿ ಸೂಚನೆ ಕೊಡಿ ಎನ್ನಲಾಗದು. ಈ ರೀತಿಯ ನಿಲುವನ್ನು ತಮಿಳುನಾಡಿನ ಕಾಕಾಲಯ(ಕಾ.ಕಾ.ಆಲಯ)ವ್ಯಕ್ತಪಡಿಸಿಯಾಗಿದೆ. ಇದು ಸರಿಹೋಗಬೇಕೆಂದರೆ ಭಾರತದ ಭಾಷಾನೀತಿ ಬದಲಾಗಬೇಕು. ಅದಾಗಲು ಸಂವಿಧಾನ ತಿದ್ದುಪಡಿಯೊಂದೇ ದಾರಿ!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!