Showing posts sorted by relevance for query ನಾಮಫಲಕ. Sort by date Show all posts
Showing posts sorted by relevance for query ನಾಮಫಲಕ. Sort by date Show all posts

ನಾಮಫಲಕಗಳ ಕನ್ನಡೀಕರಣ: ಮಂತ್ರಕ್ಕಿಂತ ಉಗುಳೇ ಹೆಚ್ಚು!

ಹೆಚ್ಚೂ-ಕಡಿಮೆ ಒಂದು ವರ್ಷದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆ ವರ್ಷದ ನವೆಂಬರ್ ಒಂದನೇ ತಾರೀಕಿನ ಒಳಗೆ ಬೆಂಗಳೂರಿನ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಪೂರ್ತಿ ಅನುಷ್ಠಾನ ಆಗಬೇಕು ಅಂತ ಗಡುವು ಹಾಕಿತ್ತು. ಅವತ್ತು ಬುಸುಗುಟ್ಟಿದ್ದ ಆ ಹಾವು, ಇವತ್ತಿನ ತನಕ ಕಚ್ಚಿಲ್ಲ ಅನ್ನೋದೇ ಸ್ವಾರಸ್ಯ ಗುರು!

"ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಬರೀ "ಕನ್ನಡ ವರದಿ ಪ್ರಾಧಿಕಾರ" ಆಗಿದ್ದರೆ ಸುಖವಿಲ್ಲ

ನಮ್ಮ ಸರ್ಕಾರ 1992ರ ಜುಲೈ 6ನೇ ತಾರೀಕು ಒಂದ್ ಆದೇಶ ಹೊರಡ್ಸೋ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರನ ಹುಟ್ ಹಾಕ್ತು. ಈ ಸಂಸ್ಥೆಯ ಉದ್ದೇಶಗಳೇನಪ್ಪಾ ಅಂದ್ರೆ [ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ 'ಕನ್ನಡ-ಕನ್ನಡಿಗ-ಕರ್ನಾಟಕ' ಹೊತ್ತಿಗೆ] -
  • ರಾಜ್ಯ ಸರ್ಕಾರದ ಭಾಷಾ ನೀತೀನ ಅನುಷ್ಠಾನಕ್ ತರಕ್ಕೆ ಕಾರ್ಯವಿಧಾನ ರೂಪಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಜಾರಿಗೊಳಿಸಕ್ಕೆ ಕ್ರಮ ತೊಗೊಳ್ಳೋದು
  • ಕನ್ನಡವನ್ನ ಆಡಳಿತ ಭಾಷೆ ಮಾಡಕ್ಕಿರೋ ಅಡ್ಡಿ ಆತಂಕ ಗುರುತ್ಸಿ ಸರ್ಕಾರಕ್ಕೆ ಅದ್ನ ನಿವಾರ್ಸೋ ಸಲಹೆ ಕೊಡೋದು
  • ಕನ್ನಡ ಅನುಷ್ಠಾನ ಸರ್ಯಾಗಿ ಆಗಿಲ್ಲದಿದ್ದರೆ ಅಂಥೋರ ಮೇಲೆ ಕ್ರಮ ತೊಗೊಳ್ಳಿ ಅಂತ ಸರ್ಕಾರಕ್ಕೆ ವರದಿ ಕೊಡೋದು.

ಕ.ಅ.ಪ್ರಾ.ದ ವ್ಯಾಪ್ತಿಗೆ ಸರ್ಕಾರ ಮತ್ತದರ ಅಧೀನ ಸಂಸ್ಥೆಗಳು ಬರ್ತವೆ. ಕನ್ನಡ ಅನುಷ್ಠಾನಕ್ ಸಂಬಂಧಿಸಿದ ಹಾಗೆ ಕಾಲಕಾಲಕ್ಕೆ ಸರ್ಕಾರ ವಹಿಸೋ ಎಲ್ಲ ವಿಷ್ಯಗಳೂ ಬರ್ತವೆ. ಆದ್ರೆ ಈ ಪ್ರಾಧಿಕಾರಕ್ಕೆ ಸಲಹೆ, ವರದಿ ಕೊಡುವ ಅಧಿಕಾರವಿದೆಯೇ ಹೊರ್ತು ಕ್ರಮ ತೊಗೊಳ್ಳೋ ಅಧಿಕಾರ ಇಲ್ಲ ಗುರು! ಆದ್ದರಿಂದ ಪ್ರಾಧಿಕಾರ ಏನು ಬಡ್ಕೊಂಡ್ರೂ ಜನ ಹಾಡು-ಹಗಲಲ್ಲೇ ಅದನ್ನ ಉಲ್ಲಂಘನೆ ಮಾಡ್ತಾನೇ ಇರ್ತಾರೆ ಗುರು!

ಕನ್ನಡ ನಾಮಫಲಕ ಮತ್ತು ಸರಕಾರದ ಆದೇಶ

24-ಎ, ನಾಮಫಲಕ ಪ್ರದರ್ಶನ ಅನ್ನೋ ಒಂದು ಆದೇಶದಲ್ಲಿ ದಿನಾಂಕ 11.01.1985ರಲ್ಲಿ ಕರ್ನಾಟಕದಲ್ಲಿ ಇರೋ ಎಲ್ಲ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕ ಕನ್ನಡದಲ್ಲೇ ಇರಬೇಕು, ಅಕಸ್ಮಾತ್ ಬೇರೆ ಭಾಷೆ ಬಳ್ಸೋ ಪ್ರಮೇಯ ಇದ್ದಲ್ಲಿ ಮೊದಲು ದೊಡ್ಡದಾಗಿ ಕನ್ನಡದಲ್ಲಿ, ಅದರ ಕೆಳಗೆ ಇತರೆ ಭಾಷೇಲಿ ಬರೀಬೇಕು ಅನ್ನುತ್ತೆ ಆ ಆದೇಶ. ಇದನ್ನ ಜಾರಿಗೆ ತರಬೇಕು ಅನ್ನೋ ದೃಷ್ಟಿಯಿಂದಲೇ ಕ.ಅ.ಪ್ರಾ.ದ ಅಧ್ಯಕ್ಷರು ಅಂಥ ಒಂದು ಹೇಳಿಕೆ ಕೊಟ್ಟಿರೋದು. ತಮಾಷೆ ಅಂದ್ರೆ ಇದಕ್ಕೆ ತಪ್ಪಿದರೆ ತೆರಬೇಕಾದ ದಂಡ ಬರೀ 50 ರೂಪಾಯಿ (1985ರಲ್ಲಿ)! [ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ 'ಕನ್ನಡ-ಕನ್ನಡಿಗ-ಕರ್ನಾಟಕ' ಹೊತ್ತಿಗೆ]

ಪ್ರಾಧಿಕಾರ ಹೇಳಿದ್ದು ನಿಜಕ್ಕೂ ಜಾರಿಗೆ ಬರಬೇಕಾದರೆ ಏನೇನಾಗಬೇಕು?

ನಿಜವಾಗ್ಲೂ ಈ ಆದೇಶ ಸರಿಯಾಗಿ ಜಾರಿಯಾಗಬೇಕಾದ್ರೆ ಎರಡು ಕೆಲಸ ಆಗಬೇಕು ಗುರು! ಮೊದಲನೇದು ನಗರ ಪಾಲಿಕೆಗಳಿಗೆ, ವಿಧಾನ ಸಭೆಯಲ್ಲಿನ ಶಾಸಕಾಂಗಕ್ಕೆ ಇಂಥಾ ವಿಷಯದಲ್ಲಿ ಕ್ರಮ ತೊಗೊಳ್ಳೋ, ಕಾನೂನು ಮಾಡೊ ಅಧಿಕಾರ ಇದೆ ಗುರು! ಇಲ್ಲೆಲ್ಲಾ ಕನ್ನಡದ ಬಗ್ಗೆ ಕಾಳಜಿಯಿರೋ ಜನ ಕುಂತ್ರೆ ಕೆಲ್ಸ ಸಲೀಸು. ಹಾಗೆ ಕೂರೋ ಹಾಗ್ ಮಾಡೊ ಶಕ್ತಿ ಇರೋದೂ ಕೂಡಾ ನಮಗೇನೆ.

ಎರಡನೇ ಕೆಲಸ ಅಂದರೆ ಗ್ರಾಹಕನೇ ದೇವ್ರು ಅನ್ನೋ ಅಸ್ತ್ರಾನ ನಾವೂ ನೀವೂ ಸರಿಯಾಗ್ ಬಳಸಿ ಕನ್ನಡದಲ್ಲೇ ಸೇವೆ ಕೊಡಿ ಅಂತಾ ಒತ್ತಾಯಿಸ್ಬೇಕು. ಕನ್ನಡದಲ್ಲಿ ವ್ಯವಹರಿಸ್ದೆ ಇದ್ರೆ, ಕನ್ನಡ ನಾಮಫಲಕ ಹಾಕ್ದೆ ಇದ್ರೆ ನಿಮ್ಮ ಅಂಗಡೀಗೆ ಬರಲ್ಲ ಅನ್ನೋ ಸಂದೇಶ ಕೊಡ್ಬೇಕು. ಹೋದಲ್ಲೆಲ್ಲಾ ಕನ್ನಡದಲ್ಲೇ ಮಾತಾಡಬೇಕು.

ಸರಿಯಾದ್ ಅಧಿಕಾರ ಕೊಡ್ದೆ ಒಂದಲ್ಲ ನೂರು ಪ್ರಾಧಿಕಾರಗಳನ್ನು ಹುಟ್ ಹಾಕುದ್ರೂ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನ ಸಾಧ್ಯಾನಾ ಗುರೂ? ಈ ನಾಮಫಲಕದ ಒಂದು ಸಣ್ಣ ನಿಯಮ ಅನುಷ್ಠಾನ ಮಾಡಕ್ಕೆ ಅಂಗಡಿ-ಮುಂಗಟ್ಟುಗಳಿಗೆ ಪರವಾನಿಗೆ ಕೊಡೋ ಮಹಾನಗರ ಪಾಲಿಕೆ, ಕನ್ನಡತನ ಕಾಪಾಡಕ್ಕೇ ಇರೋ ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ಸಚಿವರು, ನಮ್ಮನ್ನಳೋ ಸರ್ಕಾರಗಳು, ಎಲ್ಲಕ್ಕಿಂತ ಹೆಚ್ಚಿನದಾಗಿ ನಾವೂ ನೀವೂ ಒಟ್ಟಾಗಿ ಸೇರುದ್ರೆ ಸಾಧ್ಯ ಆಗಲ್ಲ ಅಂತೀರಾ?

ಮುಂದಿನ ಮಹಾನಗರ ಪಾಲಿಕೆ ಚುನಾವಣೆ: ಒಂದು ಒಳ್ಳೇ ಅವಕಾಶ

ಈಗ ಒಂದು ಸುಲಭದ ಅವಕಾಶ ನಮ್ಗೆ ಒದಗಿ ಬಂದಿದೆ. ಇನ್ನೇನು ಸಧ್ಯದಲ್ಲೇ ಮಹಾನಗರ ಪಾಲಿಕೆ ಚುನಾವಣೆಗಳು ನಡ್ಯೋದ್ರಲ್ಲಿವೆ. ನಮ್ಮ ರಾಜಕೀಯ ಪಕ್ಷಗಳು ಇಂಥಾ ಒಂದು ಕನ್ನಡ ಅನುಷ್ಠಾನದ ಭರವಸೇನ ತಮ್ಮ ಪ್ರಣಾಳಿಕೇಲಿ ಸೇರಿಸಬೇಕು ಅಂತ ಒತ್ತಾಯ್ಸೋಣ. ಯಾರು ಕನ್ನಡದ ಹಿತ ಕಾಪಾಡಕ್ಕೆ ಬದ್ಧರಾಗಿರ್ತಾರೋ ಅಂಥೋರಿಗೇ ನಮ್ಮ ಮತ ಹಾಕೋಣ. ಬರೀ ಉಗುಳೇ ಆಯಿತಲ್ಲ, ಮಂತ್ರ ಎಲ್ಲಿ ಅಂತ ಕೇಳೋಣ! ಏನ್ ಗುರು?

ನಿಜವಾಗಿಯೂ ಕಾನೂನು ಮುರಿಯುತ್ತಿರುವವರು ಯಾರು?


ನವೆಂಬರ ಒಂದರ ನಂತರ ಬೆಂಗಳೂರಿನಲ್ಲಿ ಕನ್ನಡದಲ್ಲಿರದ ನಾಮ ಫಲಕಗಳಿಗೆ ಮಸಿ ಬಳಿತೀವಿ ಅಂದಿರೋ ಕನ್ನಡ ಪರ ಸಂಘಟನೆಗಳ ಮಾತಿಗೆ ಪ್ರತಿಕ್ರಿಯಿಸಿರುವ ನಗರ ಪೋಲಿಸ್ ಮುಖ್ಯ ಆಯುಕ್ತರಾದ ಶ್ರೀ ಶಂಕರ ಬಿದರಿಯವರು, ಅಂತಹ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿರೋ ಸುದ್ದಿ ಮೊನ್ನೆ ಮೊನ್ನೆ ಎಲ್ಲ ಪತ್ರಿಕೆಯಲ್ಲಿ ಬಂದಿತ್ತು ಗುರು. ಕಾನೂನು ಕೈಗೆತ್ತಿಕೊಳ್ಳೋರ ವಿರುದ್ಧ ಕ್ರಮ ತೆಗೆದುಕೊಳ್ಳೋದೇನೋ ಸರಿಯಾದದ್ದೇ, ಆದ್ರೆ ಇದೇ ಉತ್ಸಾಹವನ್ನು ಕನ್ನಡದ ಅನುಷ್ಠಾನಕ್ಕೆ ತಾನೇ ಮಾಡಿರೋ ಕಾನೂನುಗಳ ಜಾರಿಗೂ ತೋರಿಸಬೇಕು ತಾನೆ? ಆಗಲೇ ತಾನೆ ಸರಕಾರ ಪೂರ್ತಿ ಕಾನೂನು ಕಾಪಾಡಿದಂಗಾಗೋದು? ಒಂದ್ ಕಾನೂನ್ನ ಕಾಪಾಡ್ತೀನಿ, ಇನ್ನೊಂದ್ನ ಕಡೆಗಣಿಸ್ತೀನಿ ಅಂದ್ರೆಂಗೆ ಗುರು?

ನಾಮಫಲಕ - ಸರ್ಕಾರಿ ಆಜ್ಞೆ

ಕರ್ನಾಟಕ ಅಂಗಡಿ ಮತ್ತು ವಾಣಿಜೋದ್ಯಮ ಸಂಸ್ಥೆಗಳ ಕಾನೂನಿನ ನಿಯಮ ೨೪ರ ಅನ್ವಯ ಕರ್ನಾಟಕದಲ್ಲಿರುವ ಎಲ್ಲಾ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕಗಳು ಮೊದಲು ಕನ್ನಡದಲ್ಲಿಯೇ ಇರತಕ್ಕದ್ದು. ಎಲ್ಲೆಲ್ಲಿ ಇತರ ಭಾಷೆಗಳನ್ನು ಬಳಸಬೇಕಾಗುತ್ತದೆಯೋ ಅಲ್ಲೆಲ್ಲಾ ಮೊದಲು ಕನ್ನಡದಲ್ಲಿ ದೊಡ್ಡದಾಗಿ ಬರೆದು ನಂತರ ಇತರ ಭಾಷೆಗಳಲ್ಲಿ ಅದರಡಿಯಲ್ಲಿ ಬರೆಯತಕ್ಕದ್ದು. ನಿಯಮ ಉಲ್ಲಂಘಿಸಿ ತಪ್ಪಿತಸ್ಥರೆಂದು ತೀರ್ಮಾನವಾದಾಗ ಅಂತಹವರಿಗೆ 10,000 ರೂಪಾಯಿಗಳವರೆಗೂ ದಂಡ ಹಾಕುವುದು. ಸರ್ಕಾರವೇ ಇಂತದೊಂದು ನಿಯಮ ಮಾಡಿರುವಾಗ ಅದನ್ನು ಪಾಲಿಸದೇ ಕಾನೂನು ಮುರಿಯುತ್ತಿರುವವರು, ಕನ್ನಡದಲ್ಲಿ ನಾಮಫಲಕಗಳನ್ನು ಹಾಕದಿರುವ ಅಂಗಡಿ ಮುಂಗಟ್ಟುಗಳ ಮಾಲೀಕರು ತಾನೇ ಗುರು? ಅವರ ವಿರುದ್ಧ ಸರಕಾರವೇ ಕ್ರಮ ತೆಗೆದುಕೊಂಡಿದ್ದರೆ ಜನ ಯಾಕೆ ಕನ್ನಡ ನಾಮ ಫಲಕಗಳಿಗಾಗಿ ಹೋರಾಡುತ್ತಿದ್ದರು ? ಯಾಕೆ ಮಸಿ ಬಳಿತೀವಿ ಅಂತಿದ್ರು? ಇದು ಯೋಚಿಸಬೇಕಾದ ವಿಚಾರ ಅಲ್ವಾ ಗುರು ?

ಇಂದು ನಿನ್ನೆಯದಲ್ಲ ಈ ನಿಯಮ

ಕನ್ನಡದಲ್ಲಿ ನಾಮಫಲಕ ಹಾಕಬೇಕು ಅನ್ನೊ ನಿಯಮ ಇವತ್ತು-ನಿನ್ನೆಯದಲ್ಲ. 1985ರಲ್ಲೇ ಈ ಕಾನೂನು ಬಂದಿದೆ. ಕಾನೂನು ಬಂದಾಗ ಇದ್ದದ್ದು 50 ರೂಪಾಯಿ ದಂಡ. ಇವತ್ತು 23 ವರ್ಷದ ನಂತರ ಆ ದಂಡದ ಮೊತ್ತ 10,000 ವರೆಗೂ ಹೋಗಿದೆ. ಈಗ ನೀನೇ ಹೇಳು ಗುರು, ಒಂದು ಸರಳವಾದ ಕಾನೂನು ಅನುಷ್ಟಾನಕ್ಕೆ 23 ವರ್ಷ ಸಾಕಾಗಲ್ವ? ಹಾಗಾದ್ರೆ ಇನ್ನೂ ಯಾಕೆ ಅದು ಆಗಿಲ್ಲ? ಇಷ್ಟು ವರ್ಷಗಳ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಾನೇ ಇವತ್ತು ಜನಸಾಮಾನ್ಯರೇ ಈ ಕಾನೂನು ಉಳಿಸಲು ಹೋರಟಿರೋದು? ಇನ್ನಾದ್ರೂ ಸರ್ಕಾರ, ಕನ್ನಡಕ್ಕಾಗಿ ಧ್ವನಿ ಎತ್ತಿರುವವರ ವಿರುದ್ಧ ಗುಡುಗಿದಷ್ಟೇ ಉತ್ಸಾಹವನ್ನು ತಾನೇ ಮಾಡಿರುವ ಕಾನೂನ್ನ ಉಲ್ಲಂಘಿಸೋ ಅಂಗಡಿ ಮಾಲಿಕರ ಮೇಲೂ ತೋರಿಸಿದರೆ ಬೆಂಗಳೂರಿನಲ್ಲಿ ಕನ್ನಡದ ನಾಮ ಫಲಕಗಳ ಅನುಷ್ಠಾನ ನಿಜಕ್ಕೂ ಅಷ್ಟು ದೊಡ್ಡ ಸವಾಲಾಗದು. ಅದು ಬಿಟ್ಟು ಒಂದ್ ಕಾನೂನ್ನ ಕಾಪಾಡಿ ಇನ್ನೊಂದ್ನ ಕಡೆಗಣಿಸಬೋದು ಅನ್ನೋ "ಪಾಠ"ವನ್ನ ಸರಕಾರವೇ ಜನಕ್ಕೆ ಕಲಿಸಿದರೆ ಹೆಂಗೆ ಗುರು?

ಗಾಡಿಗಳ ಮೇಲೆ ಕನ್ನಡದ ಫಲಕ ಕಾನೂನು ಬದ್ಧವಾಗಲಿ!

ಕರ್ನಾಟಕದಲ್ಲಿ ಓಡಾಡೋ ವಾಹನಗಳಲ್ಲಿ ಅನೇಕವು ಕನ್ನಡದಲ್ಲಿ ಇರುತ್ತವೆ. ಇಂಥವನ್ನು ನೋಡ್ದಾಗ ನಮಗೆ ಹೆಮ್ಮೆಯೂ ಆಗುತ್ತೆ. ನಾಡಿನ ಮೇಲಿನ ಅಭಿಮಾನದಿಂದ ನಮ್ಮ ಜನರೂ ಕೂಡಾ ತಮ್ಮ ಗಾಡಿಗಳ ನಂಬರ್ರನ್ನು ಕನ್ನಡದಲ್ಲಿ ಬರೆಸಿರುತ್ತಾರೆ.

ಅಷ್ಟೇ ಏಕೆ? ಬೆಂಗಳೂರಿನಲ್ಲಿ ಓಡಾಡೊ ಬಿಟಿಎಸ್ ಬಸ್ಸುಗಳಲ್ಲೂ ನೀವು ಕನ್ನಡದ ಅಂಕಿಗಳ ಬಳಕೆ ನೋಡಿರಬಹುದು. ರಾಜ್ಯೋತ್ಸವ ಬಂದಾಗ ಕನ್ನಡದಲ್ಲಿ ಅಂಕಿ ಬರೆಸುವ ಒಂದು ಕಾರ್ಯಕ್ರಮವನ್ನೂ ಕೆಲ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿವೆ.

ಆದರೆ ಇದು ಭಾರತದಲ್ಲಿ ಕಾನೂನು ಬಾಹಿರವಾದದ್ದು ಅಂತಾ ನಿಮಗೆ ಗೊತ್ತಾ ಗುರೂ!


ಸಾರಿಗೆ ಇಲಾಖೆಯ ಕಾಯ್ದೆ

ಭಾರತದ ಸಾರಿಗೆ ಇಲಾಖೆಯು ವಾಹನಗಳ ನಾಮಫಲಕ ಹೇಗಿರಬೇಕೆಂದು ಒಂದು ನಿಯಮ ಮಾಡಿದೆ. ಅದರಲ್ಲಿ ಹೀಗಿದೆ ನೋಡಿ.
All motorised road vehicles are tagged with a registration or licence number in India. The Licence plate (commonly known as number plates) number is issued by the district-level Regional transport office (RTO) of respective states — the main authority on road matters. The licence plates are placed in the front and back of the vehicle. By law, all plates are required to be in modern Hindu-Arabic numerals with Roman alphabet.

ಅಂದರೆ ಕರ್ನಾಟಕದಲ್ಲಿ ನಾವು ಕನ್ನಡದಲ್ಲಿ ನಮ್ಮ ಗಾಡಿಗಳಿಗೆ ಕನ್ನಡದಲ್ಲಿ ನಾಮಫಲಕ ಬರೆಸೋದು ಕಾನೂನು ಬಾಹಿರವಾದದ್ದಾಗಿದೆ. ಬೇರೆ ಬೇರೆ ದೇಶಗಳಲ್ಲಿ ವಾಹನಗಳ ನೋಂದಣಿ ಫಲಕ ಹೇಗಿರುತ್ತೆ ಅಂತಾ ಮಾಹಿತಿ ವಿಕಿಪೀಡಿಯಾದಲ್ಲಿದೆ. ನೋಡಿ. ಎಂಥಾ ದುರಂತಾ ನೋಡಿ, ನಮ್ಮ ನಾಡಲ್ಲಿ ನಾವು ದುಡ್ಡು ಕೊಟ್ಟು ಕೊಂಡುಕೊಳ್ಳೋ ಗಾಡಿಯ ನೋಂದಣಿ ಸಂಖ್ಯೆಯನ್ನು ನಮ್ಮ ನುಡಿಯಲ್ಲಿ ಬರೆಯೋದು ಕಡ್ಡಾಯ ಅಂತಾ ಇರೋ ದೇಶಗಳ ನಡುವೆ "ಹಾಗೆ ಬರೆಯೋದು ಕಾನೂನು ಬಾಹಿರ" ಅನ್ನೋ ವ್ಯವಸ್ಥೆ ಭಾರತದ್ದು!

ನಿಜಕ್ಕೂ ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆ ಕಡ್ಡಾಯ ಅಂತಾ ಮಾಡಿದ್ದಿದ್ರೆ ಸರಿ ಇರ್ತಿತ್ತು. ಆಗ ನಮ್ಮ ನಾಡಲ್ಲಿ ನಮ್ಮ ನುಡಿಯನ್ನು ಬಳಸೋದು ಅಪರಾಧ ಅನ್ನೋ ವಿಕೃತಿಗೆ ಅವಕಾಶ ಆಗ್ತಾ ಇರಲಿಲ್ಲ. ಆದರೂ ನಮ್ಮ ಪುಣ್ಯವೆಂದರೆ ಕೇಂದ್ರದ ಆಡಳಿತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಬರೆಯೋದು ಕಡ್ಡಾಯ ಅನ್ನೋ ದಿನಗಳು ಇನ್ನೂ ಬಂದಿಲ್ಲ ಅಂತಾ ಸಮಾಧಾನ ಮಾಡ್ಕೋಬೇಕಾಗಿದೆ ಅಲ್ವಾ ಗುರೂ!!

ಇದೂ ಬೊಂಬೆಯಾಟವಯ್ಯಾ...

ತಮಿಳುನಾಡಿನ ಮುಖ್ಯಮಂತ್ರಿಗಳಾದ ಕರುಣಾನಿಧಿಯವರು ಹೊಗೇನಕಲ್ ಕುಡ್ಯೋ ನೀರಿನ ಯೋಜನೆ ಜಾರಿಗೆ ತರಲೇಬೇಕು ಅನ್ನೋ ಭರದಲ್ಲಿ ಒಂದು ಹೇಳಿಕೆ ನೀಡಿ ಭಾರತದಲ್ಲಿ ತಮ್ಮ ಕೆಲಸಾ ಸಾಧುಸ್ಕೋಬೇಕು ಅಂದ್ರೆ ಲಾಬಿ ಮಾಡ್ಬೇಕು ಅಂತನ್ನೋ ನಿಜಾನ ಬಯಲು ಮಾಡಿದಾರೆ ಗುರು. ಇದನ್ನು ಜನಾ ಬ್ಲಾಕ್ ಮೇಲ್ ತಂತ್ರಾ ಅಂತ್ಲೂ ಅಂತಾರೆ ಗುರು.

ಹೊರಗ್ ಬರ್ತೀನಿ ಅನ್ನೋ ಬೆದರುಗೊಂಬೆ...


ಈ ಹೊರಗೆ ಬರ್ತೀವಿ ಅನ್ನೋ ಅಸ್ತ್ರದಿಂದ ಇವ್ರು ಅದೇನೇನ್ ಕೆಲ್ಸ ಮಾಡುಸ್ಕೊಂಡಿದಾರೆ ಅಂತ ವಸಿ ನೋಡಮಾ ಬನ್ನಿ. ಹಿಂದೆ ಭಾಜಪಾ ಅಧಿಕಾರದಲ್ಲಿದ್ದಾಗ್ಲೂ ಅದರ ಜೊತೆ ಹೊಂದಾಣಿಕೆ ಮಾಡ್ಕೊಂಡು ಅಧಿಕಾರ ಅನುಭವಿಸಿದ್ದೋರು ಈ ಡಿ.ಎಂ.ಕೆ ಜನಾ ಅಂತ ನೆನುಪ್ ಮಾಡ್ಕೊಟ್ಟು ಮುಂದ್ಕ್ ಹೇಳ್ತೀವಿ ಕೇಳಿ.
ಮೊದಲು ತಮಗೆ ಬೇಕಾದ ಖಾತೆಗಳು ಸಿಗಲಿಲ್ಲ ಅಂತ ಅಧಿಕಾರ ವಹಿಸಿಕೊಳ್ದೆ ಬ್ಲಾಕ್ ಮೇಲ್ ಮಾಡುದ್ರು. ಅಧಿಕಾರಕ್ಕೆ ಬಂದ ಕೂಡಲೇ ತಮಿಳಿಗೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಶಾಸ್ತ್ರೀಯ ಸ್ಥಾನಮಾನ ಪಟ್ಟ ಕೊಡ್ಸಿಕೊಟ್ರು. ಆಟೊಮೊಬೈಲ್ ತಂತ್ರಜ್ಞಾನದ ಸಂಶೋಧನಾ ಕೇಂದ್ರವನ್ನು ತಮಿಳುನಾಡಿಗೆ ತರಲಾಯಿತು. ರೈಲ್ವೇಯ ಹಿಂದಿ ಪರವಾಗಿ ಎಲ್ಲ ರೈಲಲ್ಲಿ ಹಿಂದಿ ಇಂಗ್ಲಿಷ್ ನಾಮಫಲಕ ಮಾತ್ರಾ ಇರ್ಬೇಕು ಅನ್ನೋ ನಿಯಮದಿಂದ ವಿನಾಯ್ತಿ ಪಡ್ಕೊಂಡ್ರು. ತಮಿಳುನಾಡಿಗೆ ನೆರೆ ಪರಿಹಾರವಾಗಿ ಹೆಚ್ಚುವರಿ ಹಣ ಬಿಡುಗಡೆ ಮಾಡ್ತೀವಿ ಅಂತ ಕೇಂದ್ರದೋರು ಅಂದಾಗ್ಲೂ ನಮ್ಗೆ ಹೇಳ್ದೆ ಹಾಗ್ ಮಾಡುದ್ರೆ ಅಷ್ಟೇ, ಬೆಂಬಲ ವಾಪಸ್ ತೊಗೋತೀವಿ ಅಂತ ಬೆದರ್ಸುದ್ರು. ತಮಿಳುನಾಡಿನ ನೈವೇಲಿ ಲಿಗ್ನೈಟ್ ನಿಯಮಿತ ಸಂಸ್ಥೆಯಿಂದ ಶೇಕಡಾ ಹತ್ತರಷ್ಟು ಬಂಡವಾಳ ಹಿಂತೆಗೆದು ಖಾಸಗೀಕರಣ ಮಾಡ್ತೀವಿ ಅಂದ್ರೆ ರಾಜಿನಾಮೆಯ ಬೆದರಿಕೆ ಹಾಕುದ್ರು. ಇದೆಲ್ಲಾ ನೋಡಿದ ಮೇಲೂ ಕಾವೇರಿ ನದಿ ನೀರಿನ ತೀರ್ಪು, ಕರ್ನಾಟಕದ ಎಲ್ಲ ಸಮರ್ಥ ವಾದಗಳ ನಂತರವೂ ತಮಿಳುನಾಡಿನ ಪರವಾಗಿದ್ದು ಹೀಗೇನಾ ಅಂತ ಜನಾ ಮಾತಾಡ್ಕೊತಾ ಇದಾರೆ ಗುರು. ಈಗ ಅದೇ ಇಡೀ ಕಾವೇರಿ ನದೀನ ರಾಷ್ಟ್ರೀಯ ಸಂಪತ್ತು ಅಂತೀವಿ ಅಂದ್ರೂ ನಮ್ಮೋರು ಬಾಯ್ಮುಚ್ಕೊಂಡು ಇರ್ತಾರೆ.

ಇರೋದು ಮೂರು % ಸೀಟು! ಎರಡು % ಓಟು!

ಒಟ್ನಲ್ಲಿ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಬೆಂಬಲ ಕೊಟ್ಟು ತಮಗೆ ಬೇಕಾದ ಹಾಗೆ ಸರ್ಕಾರಾನ ಆಡುಸ್ಕೊಂದು ಬೇಕಾದ ಅನುಕೂಲ ಮಾಡ್ಕೋತಾ ಇದಾರೆ ಗುರು. ಇಡೀ ಸರ್ಕಾರಾನ ಸೂತ್ರದ ಗೊಂಬೆ ಥರಾ ಇಷ್ಟೆಲ್ಲಾ ಆಡ್ಸಕ್ಕೆ ಡಿ.ಎಂ.ಕೆ ಹತ್ರ ಇರೋ ಸಂಸದರ ಸಂಖ್ಯೆ ಎಷ್ಟು ಗೊತ್ತಾ? 552 ಸದಸ್ಯರ ಲೋಕಸಭೆಯಲ್ಲಿ ಡಿ.ಎಂ.ಕೆ ಹೊಂದಿರೋದು ಬರೀ ಹದಿನಾರು ಸೀಟುಗಳು. ಅಂದ್ರೆ ನೂರಕ್ಕೆ ಮೂರಕ್ಕಿಂತ ಕಡಿಮೆ. ಕಳೆದ ಚುನಾವಣೇಲಿ ಅದು ಗಳಿಸಿದ ಮತದ ಪ್ರಮಾಣ ನೂರಕ್ಕೆ ಎರಡಕ್ಕಿಂತ ಕಡಿಮೆ. ಕರ್ನಾಟಕದಿಂದ ಆಯ್ಕೆಯಾಗಿರೋ ಭಾಜಪಾ ಸದಸ್ಯರ ಸಂಖ್ಯೆನೇ ಹದಿನೇಳು. ಕಾಂಗ್ರೆಸ್ಸಿಗರ ಸಂಖ್ಯೆ ಎಂಟು. ಆದ್ರೆ ಡಿ.ಎಂ.ಕೆಯೋರ್ಗೆ ಯಾವಾಗ ಕಾಲ್ ಹಿಡುದ್ರೆ ಏನಾಗುತ್ತೆ, ಯಾವಾಗ ಕಾಲ್ ಎಳುದ್ರೆ ಏನಾಗುತ್ತೆ ಅಂತಲೂ ಗೊತ್ತಿದೆ.

ಈಗ ಹೊಗೇನಕಲ್ ಕುಡ್ಯೋ ನೀರಿನ ಯೋಜನೆಗೆ ತಡೆ ಹಾಕ್ಬಾರ್ದು, ಆದ್ರೆ ಕರ್ನಾಟಕದಲ್ಲಿ ಕಾವೇರಿ ಪಾತ್ರದ ಒಂದು ಕೆರೆ ಹೂಳನ್ನು ಎತ್ತಕ್ಕೆ ಬಿಡಬಾರ್ದು ಅನ್ನೋ ನಿಲುವನ್ನೂ ದಕ್ಕುಸ್ಕೊಂಡು ಬಿಡ್ತಾರೆ. ಕರ್ನಾಟಕದ ರಾಜಕೀಯ ಪಕ್ಷಗಳು ಇದನ್ನು ಅರ್ಥ ಮಾಡ್ಕೊಳೋದು ಯಾವಾಗ? ಕನ್ನಡಿಗರು ಇದನ್ನು ಅರ್ಥ ಮಾಡ್ಕೊಳ್ಳೋದು ಯಾವಾಗ? ಅನ್ನೋದೆ ಒಂದು ದೊಡ್ ಪ್ರಶ್ನೆ ಆಗ್ಬಿಟ್ಟಿದೆ ಗುರು.

ಮುಖ್ಯಮಂತ್ರಿ ಚಂದ್ರು ಪ್ರಾಧಿಕಾರಕ್ಕೆ ಹುಣ್ಣಿಮೆ ಬೆಳಕು ತರಲಿ!

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ "ಮುಖ್ಯಮಂತ್ರಿ" ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಅಭಿವೃದ್ಧಿ ಪ್ರಾಧಿಕಾರದ ಕೆಲಸ ನಿಭಾಯ್ಸಕ್ಕೆ ಚಂದ್ರು ಅವ್ರು ಸೂಕ್ತ ಆಯ್ಕೆ ಅಂತ್ಲೇ ಹೇಳ್ಬೋದು ಗುರು.
ಚಲನಚಿತ್ರ ನಟರೂ, ರಂಗಭೂಮಿ ಕಲಾವಿದರೂ ಆಗಿರುವ ಇವರು ತಮ್ಮ ನಟನಾ ಕೌಶಲ್ಯದಿಂದ ಜನಮನ ಗೆದ್ದಿರೋದಷ್ಟೆ ಅಲ್ಲದೆ ನಾಡು ನುಡಿಗಾಗಿ ತುಡಿಯುವ ಮನಸ್ಸು ಹೊಂದಿದ್ದು ಸದಾ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ನಾಡಪರ ಕಾಳಜಿ ತೋರುತ್ತಲೇ ಬಂದಿದ್ದಾರೆ.
ಇಪ್ಪತ್ತೆಂಟು ದಿನಗಳ ಕಾಲದ ಜಾಥವನ್ನು ನಡೆಸಿದ ಇವರು ನಾಡಿನ ಎಲ್ಲ ಗಡಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕನ್ನಡ ಅಭಿಮಾನ ತುಂಬುವ ಕೆಲಸ ಮಾಡಿ ತಮ್ಮ ಕನ್ನಡ ಕಾಳಜಿಯನ್ನು ಮೆರೆದಿದ್ದಾರೆ. ಇದೀಗ ಇವರ ಹೆಗಲೇರಿರುವ ಹೊಸ ಜವಾಬ್ದಾರಿ ನಾಡಪರ ಕೆಲಸಗಳನ್ನು ನಡೆಸಲು ದೊರೆತ ಸುವರ್ಣಾವಕಾಶವೇ ಆಗಿದ್ದು ಇದರಲ್ಲಿ ಶ್ರೀಯುತರು ಯಶಸ್ವಿಯಾಗಲಿ ಅಂತಾ ಹಾರೈಸೋಣ ಗುರು.
ಪ್ರಾಧಿಕಾರ ತುಸು ಇತ್ತಲೂ ಗಮನ ಹರಿಸಲಿ

ಈಗಾಗಲೇ ನಾಡಪರವಾದ ಎಲ್ಲ ವರದಿಗಳ ಜಾರಿಯ ಬಗ್ಗೆ ಗಮನ ಹರಿಸುವುದಾಗಿ ಚಂದ್ರು ಅವರು ಭರವಸೆ ನೀಡಿದ್ದಾರೆ. ಇದರ ಜೊತೆಯಲ್ಲೇ ಆದ್ಯತೆ ಮೇರೆಗೆ ನಾಮಫಲಕ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗೆ ಮುಂದಾಗ ಬೇಕು. ಆಡಳಿತದಲ್ಲಿ ಕನ್ನಡದ ಸಂಪೂರ್ಣ ಜಾರಿಗೆ ಮಹತ್ವ ನೀಡಬೇಕು. ನಾಡಿನಲ್ಲಿ ಸಾರ್ವಜನಿಕರ ಬಳಕೆಗೆ/ ಸೇವೆಗೆ ಇರುವ ಎಲ್ಲ ವ್ಯಾಪಾರ, ವಹಿವಾಟು, ಸೇವಾಕೇಂದ್ರ, ರೈಲು, ಬಸ್ಸು, ವಿಮಾನ ನಿಲ್ದಾಣಗಳಲ್ಲಿ ಕನ್ನಡದ ವಾತಾವರಣ ನಿರ್ಮಿಸಲು ಮುಂದಾಗಬೇಕು.
ಕನ್ನಡ ನಾಡಿನ ಹಳ್ಳಿಗಾಡಿನ, ಕನ್ನಡವನ್ನಷ್ಟೇ ಬಲ್ಲ, ಅತಿ ಸಾಮಾನ್ಯನಿಗೂ ಯಾವ ಸ್ಥಳದಲ್ಲೂ ಹಿಂಜರಿಕೆ, ಮುಜುಗರ, ಕೀಳರಿಮೆ ಉಂಟಾಗದೆ ಸರಳವಾಗಿ ಕನ್ನಡದಲ್ಲೇ ವ್ಯವಹರಿಸಿಯೂ ಬೇಕಾದ ಸೌಕರ್ಯ ಪಡೆದುಕೊಳ್ಳಲು ಅನುವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಲು ಕಾರ್ಯೋನ್ಮುಖರಾಗಬೇಕು.
ಮುಖ್ಯಮಂತ್ರಿ ಚಂದ್ರು ಅವರಿಗೆ ಈ ಎಲ್ಲ ಕೆಲಸ ಮಾಡುವ ಮನಸ್ಸು, ಶಕ್ತಿಯನ್ನು ತಾಯಿ ರಾಜರಾಜೇಶ್ವರಿ ಕೊಡಲಿ ಅಂತ ಆಶಿಸೋಣ. ಅವರ ಕನ್ನಡ ಪರ ಕೆಲಸಗಳನ್ನು ಬೆಂಬಲಿಸೋಣ. ಬಾ ಗುರು.

ಕನ್ನಡಿಗನಾದ ಗ್ರಾಹಕನಾಗಿ ನಿಮ್ಮ ಅನುಭವ ಹಂಚಿಕೊಳ್ಳಿ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಇಲ್ಲಿ ಕನ್ನಡ ಮತ್ತು ಕನ್ನಡಿಗರಿಗೆ ಎಲ್ಲದರಲ್ಲೂ ಆದ್ಯತೆ ಸಿಗಬೇಕು ಅಂತ ಹಂಬಲಿಸೋ ಅಂಥೋರಿಗೆ, ಇದನ್ನು ನಮ್ಮ ಹಕ್ಕು ಅಂತ ಈಗಾಗಲೇ ಅರಿತಿರೋ ಕನ್ನಡಿಗರಿಗೆಲ್ಲಾ ನಮಸ್ಕಾರಗಳು. ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರೋ ಸಂಗತಿಗಳು ನಮ್ಮ ನಿಮ್ಮ ಗಮನಕ್ಕೆ ಬಂದಾಗ ಸಂಕಟ ಪಟ್ಕೋತೀವಿ. ಆ ಸಮಸ್ಯೆ ಬಗೆಹರೀಲಿ ಅಂತಾ ತುಡೀತೀವಿ. ಬದಲಾವಣೆಗಳು ಆದಾಗ ಹಿಗ್ಗುತ್ತೀವಿ. ಆ ಬದಲಾವಣೆಗಳು ನಮ್ಮಿಂದಲೇ ಆಗಿದ್ದರೆ ಮೆರೀತೀವಿ. ಈ ಪೆಟ್ರೋಲ್ ಬಂಕಿನವರು ಹೇಗಿದ್ದರು ನೋಡಿ, ಕನ್ನಡದವರಿಗೆ ಇಂಗ್ಲಿಷ್ ಲಿಪೀಲಿ ಹಿಂದಿ ಹೇಳ್ಕೊಡ್ತಾ ಇದಾರೆ...ಪಾಪ. ಇದು ನಮ್ ಬೆಂಗಳೂರಿನ ಒಂದು ಪೆಟ್ರೋಲ್ ಬಂಕಲ್ಲಿ ಹಾಕಿದ್ದ ನಾಮಫಲಕ.
ಇದೇ ಬಂಕ್ ನವರೇ ಈಗ ಹೇಗೆ ಬದಲಾಗಿದಾರೆ ಅಂತ ನೋಡಿ. ಖುಷಿ ಆಗ್ತಿದೆ ಅಲ್ವಾ?

ಬೆಂಗಳೂರಿನ ಖಾಸಗಿ ಎಫ್.ಎಂ ವಾಹಿನಿಗಳು ಒಂದು ವರ್ಷದ ಹಿಂದೆ "ನಮ್ಮದು 100% ಬಾಲಿವುಡ್ ಸ್ಟೇಷನ್" "ಕನ್ನಡಕ್ಕೆ ಮಾರುಕಟ್ಟೆ ಇಲ್ಲ" "ಕನ್ನಡ ಹಾಡುಗಳು ಸಿಗ್ತಿಲ್ಲ" ಅಂತ ಕುಂಟು ನೆಪ ಹೇಳ್ತಾ ೧೦~೧೫% ಕನ್ನಡ ಹಾಡುಗಳನ್ನು ಹಾಕ್ತಿದ್ರು. ಆದ್ರೆ ಇವತ್ತು ಬೆಂಗಳೂರಿನ ಟಾಪ್ 3 ಎಫ್.ಎಂಗಳಲ್ಲಿ ಕಡಿಮೆ ಅಂದ್ರೆ 80% ಕನ್ನಡ ಹಾಡುಗಳೇ ಬರುತ್ತಿವೆ. ಸಿಂಗಪೂರ್ ಏರ್ ಲೈನ್ಸ್ ನವರು ಕನ್ನಡಿಗರ ಒತ್ತಾಯಕ್ಕೆ ಮಣಿದು ತಮ್ಮ ವಿಮಾನಗಳಲ್ಲಿ ಕನ್ನಡದ ಮೆನು ಸಿಗೋ ಹಾಗೆ ಮಾಡಿದಾರೆ ಅನ್ನೋದು ನಮಗೆಲ್ಲಾ ಗೊತ್ತೇ ಇದೆ.

ಈ ಬದಲಾವಣೆಗೆ ಕಾರಣವೇನು?

ಇವೆಲ್ಲಾ ಹೇಗಾಯ್ತು ಅಂದ್ರೆ ಅದಕ್ಕೆ ಉತ್ತರ ಗ್ರಾಹಕನಾಗಿ ಕನ್ನಡಿಗ ಒಗ್ಗಟ್ಟಾಗಿ ನಿಂತದ್ದರಿಂದ ಆಯ್ತು. ತನ್ನ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದು. ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ್ದು, ಮಿಂಚೆ (e-mail) ಚಳವಳಿ ನಡೆಸಿದ್ದು, ಪತ್ರಿಕೆಗಳಿಗೆ ಬರೆದಿದ್ದು...ಇವೇ ಕಾರಣ. ನಿಜ, ನಾವು ಒಟ್ಟಾಗಿ ಧ್ವನಿ ಎತ್ತೋಣ. ಮತ್ತಷ್ಟು ಬದಲಾವಣೆಗಳಿಗೆ ಕಾರಣರಾಗೋಣ.

ನೀವೇನು ಮಾಡಬಹುದು?

ನಿಮ್ಮ ಅನುಭವಗಳನ್ನು ವಿವರಗಳೊಂದಿಗೆ graahaka@gmail.com ಗೆ ಮಿಂಚಿಸಿ. ಸೂಕ್ತವಾದವುಗಳನ್ನು ಏನ್‌ಗುರುವಿನಲ್ಲಿ ಪ್ರಕಟಪಡಿಸಲಾಗುತ್ತದೆ. ಆ ಮೂಲಕ ಕನ್ನಡಿಗರನ್ನು ಒಗ್ಗೂಡಿಸೋಣ. ಬನ್ನಿ, ನೀವೂ ಬದಲಾವಣೆ ಮಾಡಬಲ್ಲಿರಿ...ಐದು ಬೆರಳು ಸೇರಿದರೆ ಮುಷ್ಟಿ ...

ಕನ್ನಡಿಗರ ಕೀಳರಿಮೆಗೊಂದು ಆಸ್ಪತ್ರೆ!

ನಮ್ ಬೆಂಗಳೂರಿನ ಬಸವನಗುಡೀಲಿರೋ ಶೇಖರ್ ಆಸ್ಪತ್ರೆ ಒಂದು ಮಾದರಿ ಆಸ್ಪತ್ರೆ ಗುರು! ಕನ್ನಡ ನಾಡಿನ ಎಲ್ಲ ವ್ಯವಸ್ಥೇನೂ, ಸೌಕರ್ಯಾನೂ ಪರಭಾಷಿಕರ ಪಾದಸೇವೆಗೇ ಮೀಸಲು ಅನ್ಕೊಂಡಿರೋಂಥಾ ಕನ್ನಡಿಗರಿಗೆ ಈ ಆಸ್ಪತ್ರೆ ಒಂದು ಪಾಠ ಗುರು!
ಹ್ಯಾಗೆ ಅಂತೀರಾ?

"ನಮ್ಮ ನಾಡಿನ ಅನುಕೂಲಗಳು ನಮಗಲ್ಲ, ನಮ್ಮ ಸ್ಥಳಗಳು ನಮ್ಮದಲ್ಲ ; ಇಲ್ಲಿ ನಾವೇ ಅಪರಿಚಿತರು, ನಮ್ಮ ಕನ್ನಡ ಭಾಷೆ ಬರೀ ಅಡಿಗೆಮನೆಗೆ ಮೀಸಲು" ಅನ್ಸೋ ವಾತಾವರಣಾನ ಬೆಂಗಳೂರಲ್ಲಿ ಕೀಳರಿಮೆ-ಕನ್ನಡಿಗರು ತಾವೇ ತರ್ತಾ ಇರೋವಾಗ.... ಬಸವನಗುಡಿ ರಸ್ತೇಲಿರೋ ಈ ಆಸ್ಪತ್ರೆ ಬೆಂಗಳೂರು ನಿಜವಾಗಲೂ ಕನ್ನಡದೋರ್ದು ಅನ್ನೋದನ್ನ ಮತ್ತೆ ನೆನಪಿಸಿಕೊಡೋದು ಮಾತ್ರಾ ಹದಿನಾರಾಣೆ ನಿಜಾ ಗುರು!

ಆಸ್ಪತ್ರೆ ಹೆಸರಿನ ನಾಮಫಲಕ ಮುಖ್ಯರಸ್ತೆ ಕಡೆ ದೊಡ್ಡದಾಗಿ ಹೊಳೆಯೋ ನಿಯಾನ್ ದೀಪಗಳಿಂದ ಹೇಗ್ ಕಂಗೊಳುಸ್ತಿದೆ ನೋಡೂ ಗುರೂ... ಒಳಗ್ ಬರ್ತಿದ್ ಹಾಗೆ ನಿಮ್ ಕಣ್ಣು, ಹೃದಯ ತುಂಬ್ಸೋದು 'ಕನ್ನಡಕ್ಕೆ ಆದ್ಯತೆ' ಅನ್ನೋ ಆತ್ಮೀಯ ಫಲಕ.

ಈ ಆಸ್ಪತ್ರೆಯ ಹೆಚ್ಚಿನ ಸಿಬ್ಬಂದಿಗಳು ಕನ್ನಡಿಗರು, ಇವರ ಜೊತೆ ಇರೋ ಕೆಲ ಪರಭಾಷಾ ಸಿಬ್ಬಂದಿಗಳಿಗೂ ಕನ್ನಡ ಬರುತ್ತೆ. ಯಾಕೇಂದ್ರೆ ಇಲ್ಲಿ ಕೆಲ್ಸ ಬೇಕು ಅಂದ್ರೆ ಕನ್ನಡ ಕಲಿತಿರ್ಲೇಬೇಕು ಗುರೂ...ಇಲ್ಲಿನ ಎಲ್ಲ ತಜ್ಞ ವೈದ್ಯರುಗಳೂ ಕನ್ನಡಿಗರು ಅಥವಾ ಕನ್ನಡ ಬಲ್ಲವರೇ ಆಗಿದ್ದಾರೆ.

ಈ ವಾತಾವರಣಕ್ಕೆ ಕಾರಣ ಈ ಆಸ್ಪತ್ರೆಯ ಯಜಮಾನರಾದ ಡಾ. ಪಿ.ವಿಷ್ಣುಮೂರ್ತಿ ಐತಾಳ್ ಅವರು. ಮೂಳೆತಜ್ಞರಾದ ಐತಾಳರು ಕನ್ನಡದ ಬಗ್ಗೆ ಹೊಂದಿರೋ ಅಭಿಮಾನ ಮತ್ತು ಸುತ್ತಮುತ್ತಲ ಜನರಿಗೆ ಅರ್ಥವಾಗೋ ಭಾಷೇಲೇ ಸೇವೆ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನಾನ ಔರು ಉಳಿಸಿಕೊಂಡು ಬಂದಿರೋದೇ, ಇವತ್ತು ಅವರ ಆಸ್ಪತ್ರೇಲಿ ಕನ್ನಡ ಮೆರೆಯೋದಕ್ಕೆ ಕಾರಣ. ರೋಗಿಗಳಿಗೆ ತಮ್ಮ ರೋಗದ ಜೊತೆ ಹೊಡೆದಾಡೋದ್ರ ಜೊತೆಗೆ ಯಾವುದೋ ಹೊರದೇಶದ ಭಾಷೆ ಜೊತೆಗೆ ಹೋರಾಡೋದು ತಪ್ತಿರೋದು ಸಕ್ಕತ್ ಒಳ್ಳೇದು ಗುರು! ಮುಂದಿನ ದಿನಗಳಲ್ಲಿ ಇಲ್ಲಿ ಬಳಸುವ ಅರ್ಜಿಗಳು, ನಮೂನೆಗಳು... ಹೀಗೆ ಎಲ್ಲವನ್ನು ಕನ್ನಡದಲ್ಲಿ ಮಾಡಿಸುವ ಉತ್ಸಾಹವನ್ನು ಆಡಳಿತ ಮಂಡಲಿ ಹೊಂದಿದೆ ಅಂತ ಆಡಳಿತಾಧಿಕಾರಿ ಶ್ರೀಧರ್ ಹೇಳ್ತಾರೆ.

ಕೊನೆ ಗುಟುಕು

ಅಲ್ಲಾ... ಒಂದು ಸಂಸ್ಥೆ ಸರ್ಯಾಗಿ ಇರಬೇಕಾದ್ರೆ ಯಜಮಾನ ನೆಟ್ಟಗಿರಬೇಕು ಅನ್ನೋದು ಹೇಗೆ ನಿಜವೋ ಹಾಗೇ ಈ ನಮ್ಮ ನಾಡು ಸರಿಯಾಗಿರಬೇಕಾದ್ರೆ ನಮ್ನ ಆಳೋ (ಇಲ್ಲವೇ ಆಳಬೇಕೂಂತಿರೋ) ರಾಜಕಾರಣಿಗಳು ನೆಟ್ಟಗಿರಲೇಬೇಕು ಅನ್ನೋದು ಸ್ಪಷ್ಟ ಗುರು! ಕನ್ನಡದ ಬಗ್ಗೆ ತಾವೇ ಕೀಳರಿಮೆ ಇಟ್ಕೊಂಡಿರೋ ನಮ್ಮ ರಾಜಕಾರಣಿಗಳು ಈ ಆಸ್ಪತ್ರೆಗೆ ಹೋಗಿ ಒಸಿ ಚಿಕಿತ್ಸೆ ಮಾಡಿಸಿಕೊಳೋದು ಲೇಸು ಗುರು!

ನೀವು ಕನ್ನಡ ಶಿವಯ್ಯ ಆಗ್ತೀರಾ?

 


ಅಂತೂ ಸಿದ್ದರಾಮಯ್ಯನವರ ಪರ್ವ ಮುಗಿದಂಗಾಯ್ತು ಗುರೂ! ಕನ್ನಡನಾಡಿಗೆ ಹೊಸ ಸಾರಥಿಯಾಗಿ ಶ್ರೀ ಡಿ. ಕೆ ಶಿವಕುಮಾರ್ ಅವರು ಇನ್ನೇನು ನೇಮಕವಾಗಲಿದ್ದಾರೆ.. ಅಭಿನಂದನೆಗಳು ಅವರಿಗೆ!


ಕನ್ನಡ ರಾಮಯ್ಯ!

ಶ್ರೀ ಸಿದ್ದರಾಮಯ್ಯನವರಿಗೆ ಅವರ ಕೆಲವುಕನ್ನಡ ಪರವಾದ ಕೆಲಸಗಳಿಂದ ಕನ್ನಡ ರಾಮಯ್ಯ ಅಂತಾರೆ. ಬೆಂಗಳೂರಿನ ನಮ್ಮ ಮೆಟ್ರೋ ಹೋರಾಟ ಗೆಲ್ಲೋದಕ್ಕೆ ಕಾರಣವೇ ಅವರು. ಇತ್ತೀಚಿಗೆ ಜಾರಿಯಾದ ನಾಮಫಲಕ ಕಾಯ್ದೆಯು ಜಾರಿಯಾದದ್ದೂ ಇವರದ್ದೇ ಕಾಲದಲ್ಲಿ. ಕನ್ನಡ ನಾಡಿನ ಕಲಿಕೆಯಲ್ಲಿರುವ ತ್ರಿಭಾಷಾನೀತಿಯನ್ನು ಕೈಬಿಟ್ಟು ದ್ವಿಭಾಷಾನೀತಿಯ ಜಾರಿಗೆ ಒಲವು ತೋರಿಸಿದವರು ಅವರು. ಕನ್ನಡದ ಕೆಲಸಗಳು ಸಾಕಷ್ಟಿದ್ದರೂ, ಕೆಲವನ್ನಾದರೂ ಧೈರ್ಯವಾಗಿ ಮಾಡಿದ್ದು ಶ್ರೀ ಸಿದ್ದರಾಮಯ್ಯನವರು. ಹೀಗಾಗಿ ಅವರನ್ನು ತುಸುಮಟ್ಟಿಗಾದರೂ ಕನ್ನಡ ರಾಮಯ್ಯ ಎನ್ನಬಹುದು...


ನೀವಾಗಿ ಕನ್ನಡ ಶಿವಯ್ಯ!

ಕನ್ನಡ ಪರ ಯಾವುದು, ಕನ್ನಡ ವಿರೋಧ ಯಾವುದು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು, ಕನ್ನಡಿಗರ ಪರವಾಗಿ ಕೆಲಸ ಮಾಡಲು ಡಿ ಕೆ ಶಿವಕುಮಾರ್ ಅವರು ಮನಸ್ಸು ಮಾಡಬೇಕಿದೆ. ಕನ್ನಡಪರ ದನಿಗಳಿಗೆ ಕಿವಿಯಾಗಬೇಕಿದೆ. ಮೊದಲಿಗೆ, ಏನಿಲ್ಲದಿದ್ದರೂ ತ್ರಿಭಾಷಾನೀತಿಯಂಥಾ ಕನ್ನಡ ವಿರೋಧಿ ನೀತಿಗಳನ್ನು ಕೈಬಿಡಲು ಮನಸ್ಸು ಮಾಡಬೇಕಿದೆ. 

ಈಗ ನಾಡಿನ ಮುಖ್ಯಮಂತ್ರಿಗಳಾಗಲಿರೋ ಶಿವಕುಮಾರ್ ಅವರನ್ನು ಎಲ್ಲಾ ಕನ್ನಡಪರರೂ ಕೇಳೋದು ಒಂದೇ ಪ್ರಶ್ನೆ! ನೀವಾಗ್ತೀರಾ, ಕನ್ನಡ ಶಿವಯ್ಯ? ಅವರೆಲ್ಲರ ಆಶಯವೂ ಒಂದೇ... ನೀವಾಗಿ ಕನ್ನಡ ಶಿವಯ್ಯ!

ನಿನ್ನದೂ ಇದೇ ಮಾತಲ್ವಾ ಗುರೂ!!   

ಗ್ರಾಹಕನ ಭಾಷೇನೇ ಕೈಬಿಟ್ಟ ಗ್ರಾಹಕ ದಿನಾಚರಣೆ

"ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಯ ಸಂಬಂಧವಾಗಿ ಬೆಂಗಳೂರಿನಲ್ಲಿ ನಿನ್ನೆ (ಡಿಸೆಂಬರ್ 24) ಒಂದು ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದ ತುಂಬ ಗ್ರಾಹಕರ ಹಕ್ಕುಗಳ ಜಾಗೃತಿಯ ಬಗ್ಗೆ ಅನೇಕ ಗಣ್ಯರು ಮಾತಾಡುದ್ರು ಅಂತ ವರದೀಲಿ ಬರ್ದಿದಾರೆ. ಆದರೆ ಗ್ರಾಹಕನ ಭಾಷೆಗೆ ಇರೋ ಮಹತ್ವದ ಬಗ್ಗೇನೇ ಚಕಾರ ಎತ್ತದೇ ಇನ್ನೆಂಥಾ ಗ್ರಾಹಕ ಜಾಗೃತಿ ನಡೆದೀತು?


ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಆಗಬೇಕು

ಗ್ರಾಹಕರ ಹಕ್ಕುಗಳ ಬಗ್ಗೆ ನಮ್ಮ ಜನರಲ್ಲಿ ಜಾಗೃತಿ ಮತ್ತಷ್ಟು ವ್ಯಾಪಕ ಮಟ್ಟದಲ್ಲಿ ಹುಟ್ ಹಾಕ್ಬೇಕು ಅನ್ನೋದು ಈ ಸಭೆಯ ಒಮ್ಮತದ ಅಭಿಪ್ರಾಯ ಆಗಿತ್ತು. ನಗರಗಳಲ್ಲಿ ಇಂಥಾ ಜಾಗೃತಿ ಇದ್ರೂ ಕೂಡಾ ಜನ ತಲೆ ಕೆಡುಸ್ಕೋತಾ ಇಲ್ಲ, ಹಳ್ಳಿಗಳ ಕಡೆ ಇಂಥಾ ಜಾಗೃತಿಯ ಕೊರತೆ ತೀವ್ರವಾಗಿ ಇದೆ ಅನ್ನೋದನ್ನೂ ಅಲ್ಲಿ ಪ್ರಸ್ತಾಪ ಮಾಡಿದಾರೆ. ಗ್ರಾಹಕ ಹಕ್ಕುಗಳ ಬಗ್ಗೆ ನಗರ, ಹಳ್ಳಿ ಎಲ್ಲ ಕಡೆ ಜಾಗೃತಿ ಮೂಡಿಸಬೇಕು ಅನ್ನೋ ಕಾಳಜಿಯೇನೋ ಸರಿಯಿದೆ. ಆದರೆ ಜಾಹಿರಾತುಗಳು, ಅರ್ಜಿಗಳು, ಸೂಚನೆಗಳು, ಬಿಲ್ಲುಗಳು, ರಸೀತಿಗಳೂ ಸೇರಿದಂತೆ ಗ್ರಾಹಕನ ಜೊತೆ ನಡೀತಿರೋ ವ್ಯವಹಾರವೆಲ್ಲಾ ಕನ್ನಡದಲ್ಲಿ ನಡೆಯೋ ವ್ಯವಸ್ಥೆ ಮಾಡದೆ, ಸರ್ಕಾರ ಜನ ಜಾಗೃತಿ ಆಗ್ತಿಲ್ಲಾ ಅಂತ ಎಷ್ಟು ಪೇಚಾಡುದ್ರೂ ಪರಿಣಾಮ ಅಷ್ಟಕ್ಕಷ್ಟೇ ಗುರು.

ಜಾಗೃತಿ ಪರಿಣಾಮಕಾರಿ ಮಾಡೋದು ಹ್ಯಾಗೆ?

ಗ್ರಾಹಕರ ಹಕ್ಕುಗಳ ಬಗ್ಗೆ ಜನರಿಗೆ ನಾವು ಎಷ್ಟೇ ಹೇಳಿ ಕೊಟ್ರೂ, ಗ್ರಾಹಕ ಸೇವೆ ಕನ್ನಡದಲ್ಲಿ ಇಲ್ಲದೇ ಇದ್ರೆ ಅದು ಪರಿಣಾಮಕಾರಿ ಆಗಲ್ಲ. ಉದಾಹರಣೆಗೆ ಯಾವುದೋ ಒಂದು ವಸ್ತು ಕೊಂಡುಕೊಳ್ಳೋ ಗ್ರಾಹಕನಿಗೆ, ಅದರ ಮೇಲೆ ಬರೆದಿರೋ ಸೂಚನೆಗಳು ಅವನದಲ್ಲದ ಭಾಷೇಲಿ ಇರೋ ಕಾರಣದಿಂದ ಸರಿಯಾಗಿ ಅವುಗಳ್ನ ಪಾಲಿಸಕ್ಕೆ ಆಗಲಿಲ್ಲ ಅಂದ್ರೆ ಅಥವಾ ಆ ಕಾರಣಕ್ಕೇ ನಿಬಂಧನೆಗಳು ಅರ್ಥ ಆಗ್ದೆ ಇದ್ರೆ ಅದಕ್ಕೆ ಯಾರು ಹೊಣೆ? ಯಾವ್ದೋ ಅಂಗಡಿಗೆ ಹೋಗಿ ಅಲ್ಲಿ ಬರೆದಿರೋ ನಾಮಫಲಕ ಕನ್ನಡದಲ್ಲಿ ಇಲ್ಲದ ಕಾರಣಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದರೆ ಅಥ್ವಾ ಅವರ ಸೇವೆಯ ವ್ಯಾಪ್ತಿ ಅರ್ಥವಾಗದೆ ಎಡವಟ್ಟಾದ್ರೆ ಯಾರು ಹೊಣೆ?

ಭಾಷೆ ಮತ್ತು ಗ್ರಾಹಕನ ಹಕ್ಕು

ತೂಕ, ಪ್ರಮಾಣ, ಅಳತೆ ಇವೆಲ್ಲವೂ ಸರಿಯಾಗಿ ಇರಬೇಕು ಅನ್ನೋದ್ರ ಜೊತೆಜೊತೆಗೇ ಗ್ರಾಹಕನಿಗೆ ಏನೇನೆಲ್ಲಾ ಹಕ್ಕುಗಳಿವೆ, ಅವನ ಸಹಾಯಕ್ಕೆ ಏನೇನೆಲ್ಲಾ ಸಂಸ್ಥೆಗಳು, ವ್ಯವಸ್ಥೆಗಳು ಇವೆ ಅಂತೆಲ್ಲಾ ಜಾಗೃತಿ ಮೂಡಿಸಬೇಕು ಅನ್ನೋದೇನೋ ಸರಿ. ಎಲ್ಲಾ ವಸ್ತುಗಳ ಮೇಲಿನ ಸೂಚನೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು, ಅಲ್ಲಿನ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಇರಬೇಕಾದದ್ದು ಕಡ್ಡಾಯ ಆಗಬೇಕು ಗುರು. ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದನ್ನ ನಾವು ಮರೀಬಾರ್ದು ಗುರು.

ಭಾಷಾ ಆಯಾಮವಿಲ್ಲದೆ ಯಾವ ತೆರನಾದ ಜಾಗೃತಿ ಮೂಡುಸ್ತೀನಿ ಅಂತಂದ್ರೂ ಅದು ಪರಿಣಾಮಕಾರಿ ಆಗಲ್ಲ. ಇದನ್ನು ಸಂಬಂಧ ಪಟ್ಟವರು ಅರ್ಥ ಮಾಡ್ಕೋಬೇಕು. ಇಲ್ಲದಿದ್ದಲ್ಲಿ ಪ್ರತೀ ವರ್ಷ "ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಗಳು ನಡೀತಲೇ ಇರ್ತವೆ. ಗಣ್ಯರು ಜಾಗೃತಿ ಕೊರತೆ ಇದೆ ಅಂತ ಭಾಷಣ ಮಾಡ್ತಾನೇ ಇರ್ತಾರೆ. ಏನಂತೀ ಗುರು?

ಏಳು ಸೂತ್ರ ಸೂಪರ್! ಇನ್ನೈದು ಯಾವಾಗ?

ಈ ವರ್ಷಾನ ಕನ್ನಡ ಜಾಗೃತಿ ವರ್ಷವಾಗಿ ಆಚರಿಸಲು ಭಾರತೀಯ ಜನತಾ ಪಕ್ಷದ ಸರ್ಕಾರ ಏಳು ಆಡಳಿತ ಸೂತ್ರಗಳನ್ನು ಘೋಷಿಸಿದ ಸುದ್ದಿ ವಿಜಯ ಕರ್ನಾಟಕದ 02.01.2009ರ ಸಂಚಿಕೆಯ ಮುಖಪುಟದಲ್ಲಿ ಬಂದಿರೋ ಸುದ್ದಿ ನೋಡಿ ಭಾಳಾ ಖುಷಿ ಆಯ್ತು ಗುರು! ಇಂಥಾ ಗಟ್ಟಿ ನಿಲುವು ತೋರಿಸಿದ ಸರ್ಕಾರಕ್ಕೆ ನಮ್ಮ ಅಭಿನಂದನೆಗಳು.
ಕನ್ನಡ ಜಾಗೃತಿ ವರ್ಷಾಚರಣೆಗೆ ಏಳು ಸೂತ್ರಗಳು!
ಕರ್ನಾಟಕ ಸರ್ಕಾರ ಘೋಷಿಸಿರೋ ಈ ಏಳು ಸೂತ್ರಗಳು ಆಡಳಿತ, ಶಿಕ್ಷಣ, ನಾಮಫಲಕ, ಗಡಿ ಕಾವಲು, ನೀರು, ಉದ್ಯೋಗ, ಸಂಸ್ಕೃತಿ ಮತ್ತು ಮುಖ್ಯವಾಹಿನಿಗೆ ವಲಸಿಗರು ಎನ್ನುವ ಅಂಶಗಳನ್ನು ಒಳಗೊಂಡಿದೆ. ಈ ಸೂತ್ರಗಳು ಸರಿಯಾಗಿ ಜಾರಿಯಾದರೆ ಬಹಳ ದೊಡ್ಡ ಕ್ರಾಂತಿಯೇ ಆದ ಹಾಗಾಗುತ್ತೆ ಗುರು! ಈ ಏಳು ಸೂತ್ರಗಳ ಅಡಿಯಲ್ಲಿ ಏನೆಲ್ಲಾ ಮಾಡ್ತೀರಾ ಅಂತ ಸರ್ಕಾರಾನ ಕೇಳೋ ಬದಲು ’ಇಂಥಿಂಥಾ ಕೆಲಸಗಳು ಆಗಬೇಕು, ಇವೆಲ್ಲಾ ಮಾಡ್ತೀರಾ?’ ಅಂತ ಕೇಳಬೇಕಾಗಿದೆ.

1. ಆಡಳಿತದಲ್ಲಿ ಕನ್ನಡ : ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡೋ ಎಲ್ಲ ಕಛೇರಿಗಳಲ್ಲಿ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಸರ್ಕಾರದ ನಿಲುವು ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆಯೇ? ಇಲ್ಲಿನ ತೆರಿಗೆ ಇಲಾಖೆ, ಸುಂಕ ಇಲಾಖೆ, ಪಾಸ್ ಪೋರ್ಟ್ ಕಛೇರಿ, ವಿಮಾನ ನಿಲ್ದಾಣಗಳು... ಹೀಗೆ ಎಲ್ಲೆಡೆ ಕನ್ನಡದಲ್ಲಿ ಆಡಳಿತವನ್ನು ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದೇ?

2. ಕಲಿಕೆಯಲ್ಲಿ ಕನ್ನಡ : ಕನ್ನಡ ಮಾಧ್ಯಮದಲ್ಲಿನ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳುವಿರಿ? ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ಕಲಿಕೆ ಸಾಧ್ಯವಾಗಿಸಲು ಯಾವ ಯೋಜನೆ ಹೊಂದಿದ್ದೀರಿ? ಐ.ಸಿ.ಎಸ್.ಇ ಮತ್ತು ಸಿ.ಬಿ.ಎಸ್.ಇ ಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡ್ತೀರಾ?

3. ನಾಮಫಲಕದಲ್ಲಿ ಕನ್ನಡ : ಇದರ ಜೊತೇಲಿ ಗ್ರಾಹಕಸೇವೆಯನ್ನು ಕನ್ನಡದಲ್ಲಿ ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆ ಮಾಡಲು ಸಿದ್ಧರಾಗಿದ್ದೀರಾ? ಗ್ರಾಹಕ ಸೇವೆಯ ವ್ಯಾಪ್ತಿಗೆ ಕನ್ನಡದಲ್ಲಿನ ಸೇವೆಯನ್ನು ತರಲು ಮುಂದಾಗುವಿರಾ?

4. ಕನ್ನಡ ಗಡಿ ಕಾಯೋಣ : ಹೇಗೆ? ಸರ್ಕಾರ ಗಡಿ ಭಾಗಗಳಲ್ಲಿ ಕನ್ನಡ ವಾತಾವರಣ ಕಟ್ಟಲು ಏನೇನು ಯೋಜನೆ ಹೊಂದಿದೆ? ಹೇಗೆ ಅಲ್ಲಿನ ಮಕ್ಕಳ ಕಲಿಕೆ, ಅಲ್ಲಿನ ಜನರ ಬದುಕಲ್ಲಿ ಕನ್ನಡವನ್ನು ಅಡಕಗೊಳಿಸಲಾಗುತ್ತದೆ?

5. ನೆಲ, ಜಲ, ಉದ್ಯೋಗ ಕನ್ನಡಿಗರಿಗೆ : ಸೂಪರ್... ರಾಷ್ಟ್ರೀಯ ಜಲನೀತಿ ರೂಪಿಸಲು ಏನುಮಾಡ್ತೀರಾ? ಮಹಾಜನ್ ವರದಿ ಜಾರಿಗಾಗಿ ಹೇಗೆ ಮುಂದಾಗ್ತೀರಾ? ಡಾ. ಸರೋಜಿನಿ ಮಹಿಷಿ ವರದಿ ಜಾರಿ ಎಂದು?

6. ನಮ್ಮ ಸಂಸ್ಕೃತಿ ಕನ್ನಡ : ಕನ್ನಡಿಗರದ್ದಲ್ಲದ ಸಾಂಸ್ಕೃತಿಕ ದಾಳಿಗಳಾದ ಅಯ್ಯಪ್ಪ, ಛತ್ ಪೂಜಾ, ಕರುಮಾರಿಯಮ್ಮರ ಹಾವಳಿ ತಡೆಗೆ ಏನುಮಾಡ್ತೀರಾ? ಹಂಪಿ ಉತ್ಸವಗಳಲ್ಲಿ, ಬೆಂಗಳೂರು ಹಬ್ಬಗಳಲ್ಲಿ, ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸಲು ಕ್ರಮ ಕೈಗೊಳ್ತೀರಾ? ನಮ್ಮ ಸಂಸ್ಕೃತಿಯ ಪ್ರಚಾರಕ್ಕೆ ಯಾವ ಕ್ರಮ ತೊಗೋತೀರಾ?

7. ಎಲ್ಲಿಂದಾದ್ರೂ ಬಂದಿರಿ, ಕನ್ನಡಿಗರಾಗಿರಿ : ಎಲ್ಲಿಂದಲೋ ಬಂದವರಿಗೆ ಕನ್ನಡ ಕಲಿಸೋಕೆ ಏನು ಕ್ರಮ ತೊಗೋತೀರಾ? ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡೊಕೆ ಏನು ಕ್ರಮಕ್ಕೆ ಮುಂದಾಗ್ತೀರಾ?

ಕನ್ನಡ ಜಾಗೃತಿಗೆ ಹನ್ನೆರಡು ಸೂತ್ರಗಳು : ಇನ್ನೈದು ಇಲ್ಲಿವೆ!

8. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಮುಂದಾಗ್ತೀರಾ?

9. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ಕೊಟ್ಟು ಕನ್ನಡದ ಮಕ್ಕಳಿಗೆ ಹಿಂದಿ ಕಲಿಕೆಯೆಂಬ ಶಾಪದಿಂದ ಮುಕ್ತಿ ಕೊಡುಸ್ತೀರಾ?

10. ಕನ್ನಡ ನಾಡಿನ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ನಿವಾರಿಸಲು ಮುಂದಾಗಿ "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎನ್ನಲು ಮುಂದಾಗ್ತೀರಾ? ಕನ್ನಡದ ಸಾರ್ವಭೌಮತ್ವ ಸ್ಥಾಪಿಸಲು ಮುಂದಾಗ್ತೀರಾ?

11. ನಿಮ್ಮ ಪಕ್ಷದ ವತಿಯಿಂದ (ಕಡೇ ಪಕ್ಷ!) ಮುಂಬರುವ ಚುನಾವಣೆಗಳಲ್ಲಿ ಕನ್ನಡಿಗರನ್ನು ಮಾತ್ರಾ ಕಣಕ್ಕಿಳುಸ್ತೀರಾ?

12. ನಾಡು ನುಡಿಗೆ ಹಾನಿ ಮಾಡುವ ನಿಲುವು ಹೊಂದಿರುವ ದ್ರಾವಿಡ ಪಕ್ಷಗಳಾಗಲೀ, ಎಂ.ಇ.ಎಸ್ ಥರದ ಪಕ್ಷಗಳಾಗಲೀ ತಲೆ ಎತ್ತಲು ಸಹಾಯವಾಗುವಂತೆ ಅವರೊಂದಿಗೆ ರಾಜಕೀಯ ಸಖ್ಯಕ್ಕೆ ಮುಂದಾಗುವುದಿಲ್ಲ ಎಂದು ಘೋಷಣೆ ಮಾಡ್ತೀರಾ?
ಹದಿನಾರಾಣೆ ಪ್ರಶ್ನೆಗಳು!
ಈ ಕೆಲಸಗಳೆಲ್ಲಾ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗಲು ಅತ್ಯಗತ್ಯವಾಗಿದೆ. ಆದರೆ ಈ ನಿಲುವುಗಳೆಲ್ಲಾ ಭಾಜಪ ಪ್ರತಿಪಾದುಸ್ತಾ ಇರೋ ರಾಷ್ಟ್ರೀಯತೆ(?)ಯ ಪರಿಕಲ್ಪನೆಗೆ ಹೊಂದಿಕೆಯಾದೀತೇ? ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪನೆಯಾಗೋದ್ರಿಂದಲೇ ಕನ್ನಡಿಗರ ಬದುಕು ಹಸನಾಗೋದು, ಬಲಿಷ್ಟ ಕರ್ನಾಟಕ ಹುಟ್ಟೋದು... ಇಂತಹ ಕ್ರಮಗಳಿಂದಲೇ ಬಲಿಷ್ಟ ತಮಿಳುನಾಡು, ಬಲಿಷ್ಟ ಗುಜರಾತುಗಳನ್ನು ಕಟ್ಟಲು ಸಾಧ್ಯವಾಗೋದು ಅನ್ನೋದನ್ನು ಇವರು ಅರ್ಥ ಮಾಡ್ಕೊಳ್ಳಬಲ್ಲರೇ? ಬಲಿಷ್ಟವಾದ ರಾಜ್ಯಗಳೇ ಭಾರತವನ್ನು ಬಲಿಷ್ಟಗೊಳಿಸೋದು ಅನ್ನೋದನ್ನು ಇವರು ಅರಿಯಬಲ್ಲರೇ?ನಿಜವಾದ ಏಳಿಗೆಗೆ ಬೇಕಾದ ಈ ಕ್ರಮಗಳನ್ನು ಇವತ್ತಿನ ಭಾಜಪಾ ಒಪ್ಪೀತಾ? ಅನ್ನೋದು ಹದಿನಾರಾಣೆ ಉತ್ತರವಿಲ್ಲದ ಪ್ರಶ್ನೆಗಳು ಗುರು!
Related Posts with Thumbnails