ಏಳು ಸೂತ್ರ ಸೂಪರ್! ಇನ್ನೈದು ಯಾವಾಗ?

ಈ ವರ್ಷಾನ ಕನ್ನಡ ಜಾಗೃತಿ ವರ್ಷವಾಗಿ ಆಚರಿಸಲು ಭಾರತೀಯ ಜನತಾ ಪಕ್ಷದ ಸರ್ಕಾರ ಏಳು ಆಡಳಿತ ಸೂತ್ರಗಳನ್ನು ಘೋಷಿಸಿದ ಸುದ್ದಿ ವಿಜಯ ಕರ್ನಾಟಕದ 02.01.2009ರ ಸಂಚಿಕೆಯ ಮುಖಪುಟದಲ್ಲಿ ಬಂದಿರೋ ಸುದ್ದಿ ನೋಡಿ ಭಾಳಾ ಖುಷಿ ಆಯ್ತು ಗುರು! ಇಂಥಾ ಗಟ್ಟಿ ನಿಲುವು ತೋರಿಸಿದ ಸರ್ಕಾರಕ್ಕೆ ನಮ್ಮ ಅಭಿನಂದನೆಗಳು.
ಕನ್ನಡ ಜಾಗೃತಿ ವರ್ಷಾಚರಣೆಗೆ ಏಳು ಸೂತ್ರಗಳು!
ಕರ್ನಾಟಕ ಸರ್ಕಾರ ಘೋಷಿಸಿರೋ ಈ ಏಳು ಸೂತ್ರಗಳು ಆಡಳಿತ, ಶಿಕ್ಷಣ, ನಾಮಫಲಕ, ಗಡಿ ಕಾವಲು, ನೀರು, ಉದ್ಯೋಗ, ಸಂಸ್ಕೃತಿ ಮತ್ತು ಮುಖ್ಯವಾಹಿನಿಗೆ ವಲಸಿಗರು ಎನ್ನುವ ಅಂಶಗಳನ್ನು ಒಳಗೊಂಡಿದೆ. ಈ ಸೂತ್ರಗಳು ಸರಿಯಾಗಿ ಜಾರಿಯಾದರೆ ಬಹಳ ದೊಡ್ಡ ಕ್ರಾಂತಿಯೇ ಆದ ಹಾಗಾಗುತ್ತೆ ಗುರು! ಈ ಏಳು ಸೂತ್ರಗಳ ಅಡಿಯಲ್ಲಿ ಏನೆಲ್ಲಾ ಮಾಡ್ತೀರಾ ಅಂತ ಸರ್ಕಾರಾನ ಕೇಳೋ ಬದಲು ’ಇಂಥಿಂಥಾ ಕೆಲಸಗಳು ಆಗಬೇಕು, ಇವೆಲ್ಲಾ ಮಾಡ್ತೀರಾ?’ ಅಂತ ಕೇಳಬೇಕಾಗಿದೆ.

1. ಆಡಳಿತದಲ್ಲಿ ಕನ್ನಡ : ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡೋ ಎಲ್ಲ ಕಛೇರಿಗಳಲ್ಲಿ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಸರ್ಕಾರದ ನಿಲುವು ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆಯೇ? ಇಲ್ಲಿನ ತೆರಿಗೆ ಇಲಾಖೆ, ಸುಂಕ ಇಲಾಖೆ, ಪಾಸ್ ಪೋರ್ಟ್ ಕಛೇರಿ, ವಿಮಾನ ನಿಲ್ದಾಣಗಳು... ಹೀಗೆ ಎಲ್ಲೆಡೆ ಕನ್ನಡದಲ್ಲಿ ಆಡಳಿತವನ್ನು ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದೇ?

2. ಕಲಿಕೆಯಲ್ಲಿ ಕನ್ನಡ : ಕನ್ನಡ ಮಾಧ್ಯಮದಲ್ಲಿನ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳುವಿರಿ? ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ಕಲಿಕೆ ಸಾಧ್ಯವಾಗಿಸಲು ಯಾವ ಯೋಜನೆ ಹೊಂದಿದ್ದೀರಿ? ಐ.ಸಿ.ಎಸ್.ಇ ಮತ್ತು ಸಿ.ಬಿ.ಎಸ್.ಇ ಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡ್ತೀರಾ?

3. ನಾಮಫಲಕದಲ್ಲಿ ಕನ್ನಡ : ಇದರ ಜೊತೇಲಿ ಗ್ರಾಹಕಸೇವೆಯನ್ನು ಕನ್ನಡದಲ್ಲಿ ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆ ಮಾಡಲು ಸಿದ್ಧರಾಗಿದ್ದೀರಾ? ಗ್ರಾಹಕ ಸೇವೆಯ ವ್ಯಾಪ್ತಿಗೆ ಕನ್ನಡದಲ್ಲಿನ ಸೇವೆಯನ್ನು ತರಲು ಮುಂದಾಗುವಿರಾ?

4. ಕನ್ನಡ ಗಡಿ ಕಾಯೋಣ : ಹೇಗೆ? ಸರ್ಕಾರ ಗಡಿ ಭಾಗಗಳಲ್ಲಿ ಕನ್ನಡ ವಾತಾವರಣ ಕಟ್ಟಲು ಏನೇನು ಯೋಜನೆ ಹೊಂದಿದೆ? ಹೇಗೆ ಅಲ್ಲಿನ ಮಕ್ಕಳ ಕಲಿಕೆ, ಅಲ್ಲಿನ ಜನರ ಬದುಕಲ್ಲಿ ಕನ್ನಡವನ್ನು ಅಡಕಗೊಳಿಸಲಾಗುತ್ತದೆ?

5. ನೆಲ, ಜಲ, ಉದ್ಯೋಗ ಕನ್ನಡಿಗರಿಗೆ : ಸೂಪರ್... ರಾಷ್ಟ್ರೀಯ ಜಲನೀತಿ ರೂಪಿಸಲು ಏನುಮಾಡ್ತೀರಾ? ಮಹಾಜನ್ ವರದಿ ಜಾರಿಗಾಗಿ ಹೇಗೆ ಮುಂದಾಗ್ತೀರಾ? ಡಾ. ಸರೋಜಿನಿ ಮಹಿಷಿ ವರದಿ ಜಾರಿ ಎಂದು?

6. ನಮ್ಮ ಸಂಸ್ಕೃತಿ ಕನ್ನಡ : ಕನ್ನಡಿಗರದ್ದಲ್ಲದ ಸಾಂಸ್ಕೃತಿಕ ದಾಳಿಗಳಾದ ಅಯ್ಯಪ್ಪ, ಛತ್ ಪೂಜಾ, ಕರುಮಾರಿಯಮ್ಮರ ಹಾವಳಿ ತಡೆಗೆ ಏನುಮಾಡ್ತೀರಾ? ಹಂಪಿ ಉತ್ಸವಗಳಲ್ಲಿ, ಬೆಂಗಳೂರು ಹಬ್ಬಗಳಲ್ಲಿ, ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸಲು ಕ್ರಮ ಕೈಗೊಳ್ತೀರಾ? ನಮ್ಮ ಸಂಸ್ಕೃತಿಯ ಪ್ರಚಾರಕ್ಕೆ ಯಾವ ಕ್ರಮ ತೊಗೋತೀರಾ?

7. ಎಲ್ಲಿಂದಾದ್ರೂ ಬಂದಿರಿ, ಕನ್ನಡಿಗರಾಗಿರಿ : ಎಲ್ಲಿಂದಲೋ ಬಂದವರಿಗೆ ಕನ್ನಡ ಕಲಿಸೋಕೆ ಏನು ಕ್ರಮ ತೊಗೋತೀರಾ? ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡೊಕೆ ಏನು ಕ್ರಮಕ್ಕೆ ಮುಂದಾಗ್ತೀರಾ?

ಕನ್ನಡ ಜಾಗೃತಿಗೆ ಹನ್ನೆರಡು ಸೂತ್ರಗಳು : ಇನ್ನೈದು ಇಲ್ಲಿವೆ!

8. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಮುಂದಾಗ್ತೀರಾ?

9. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ಕೊಟ್ಟು ಕನ್ನಡದ ಮಕ್ಕಳಿಗೆ ಹಿಂದಿ ಕಲಿಕೆಯೆಂಬ ಶಾಪದಿಂದ ಮುಕ್ತಿ ಕೊಡುಸ್ತೀರಾ?

10. ಕನ್ನಡ ನಾಡಿನ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ನಿವಾರಿಸಲು ಮುಂದಾಗಿ "ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ" ಎನ್ನಲು ಮುಂದಾಗ್ತೀರಾ? ಕನ್ನಡದ ಸಾರ್ವಭೌಮತ್ವ ಸ್ಥಾಪಿಸಲು ಮುಂದಾಗ್ತೀರಾ?

11. ನಿಮ್ಮ ಪಕ್ಷದ ವತಿಯಿಂದ (ಕಡೇ ಪಕ್ಷ!) ಮುಂಬರುವ ಚುನಾವಣೆಗಳಲ್ಲಿ ಕನ್ನಡಿಗರನ್ನು ಮಾತ್ರಾ ಕಣಕ್ಕಿಳುಸ್ತೀರಾ?

12. ನಾಡು ನುಡಿಗೆ ಹಾನಿ ಮಾಡುವ ನಿಲುವು ಹೊಂದಿರುವ ದ್ರಾವಿಡ ಪಕ್ಷಗಳಾಗಲೀ, ಎಂ.ಇ.ಎಸ್ ಥರದ ಪಕ್ಷಗಳಾಗಲೀ ತಲೆ ಎತ್ತಲು ಸಹಾಯವಾಗುವಂತೆ ಅವರೊಂದಿಗೆ ರಾಜಕೀಯ ಸಖ್ಯಕ್ಕೆ ಮುಂದಾಗುವುದಿಲ್ಲ ಎಂದು ಘೋಷಣೆ ಮಾಡ್ತೀರಾ?
ಹದಿನಾರಾಣೆ ಪ್ರಶ್ನೆಗಳು!
ಈ ಕೆಲಸಗಳೆಲ್ಲಾ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗಲು ಅತ್ಯಗತ್ಯವಾಗಿದೆ. ಆದರೆ ಈ ನಿಲುವುಗಳೆಲ್ಲಾ ಭಾಜಪ ಪ್ರತಿಪಾದುಸ್ತಾ ಇರೋ ರಾಷ್ಟ್ರೀಯತೆ(?)ಯ ಪರಿಕಲ್ಪನೆಗೆ ಹೊಂದಿಕೆಯಾದೀತೇ? ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪನೆಯಾಗೋದ್ರಿಂದಲೇ ಕನ್ನಡಿಗರ ಬದುಕು ಹಸನಾಗೋದು, ಬಲಿಷ್ಟ ಕರ್ನಾಟಕ ಹುಟ್ಟೋದು... ಇಂತಹ ಕ್ರಮಗಳಿಂದಲೇ ಬಲಿಷ್ಟ ತಮಿಳುನಾಡು, ಬಲಿಷ್ಟ ಗುಜರಾತುಗಳನ್ನು ಕಟ್ಟಲು ಸಾಧ್ಯವಾಗೋದು ಅನ್ನೋದನ್ನು ಇವರು ಅರ್ಥ ಮಾಡ್ಕೊಳ್ಳಬಲ್ಲರೇ? ಬಲಿಷ್ಟವಾದ ರಾಜ್ಯಗಳೇ ಭಾರತವನ್ನು ಬಲಿಷ್ಟಗೊಳಿಸೋದು ಅನ್ನೋದನ್ನು ಇವರು ಅರಿಯಬಲ್ಲರೇ?ನಿಜವಾದ ಏಳಿಗೆಗೆ ಬೇಕಾದ ಈ ಕ್ರಮಗಳನ್ನು ಇವತ್ತಿನ ಭಾಜಪಾ ಒಪ್ಪೀತಾ? ಅನ್ನೋದು ಹದಿನಾರಾಣೆ ಉತ್ತರವಿಲ್ಲದ ಪ್ರಶ್ನೆಗಳು ಗುರು!

3 ಅನಿಸಿಕೆಗಳು:

Anonymous ಅಂತಾರೆ...

ಸರ್ಕಾರದ ಏಳು ಸೂತ್ರಗಳೂ ನೋಡಿದರೆ ಯಾವುದೋ ಎಲೆಕ್ಷನ್ manifesto ತರ ಇದೆ. :)
ನಾವು ಅದು ಮಾಡ್ತಿವಿ, ನಾವು ಇದು ಮಾಡ್ತಿವಿ. ಕೆಲಸ ಕೊಡಿಸ್ತಿವಿ, ನೀರು ಕೊಡ್ತಿವಿ..

ತಿಭಾಷಾ ಸೂತ್ರದ೦ತಹ ಕನ್ನಡಕ್ಕೆ ಮಾರಕವಾಗಿರುವ ಗ೦ಭೀರವಾದ ತೊ೦ದರೆಯ ಬಗ್ಗೆ ಮಾತನಾಡುವ ಎದೆಗಾರಿಕೆ ಸರ್ಕಾರಕ್ಕೆ ಇಲ್ಲ. ರಾಷ್ಟ್ರೀಯ ಪಕ್ಷಕ್ಕೆ ಬಿಗಿದಿರುವ ಕಟ್ಟಳೆಯನ್ನು ಮೀರಿ ಅವರು ಕನ್ನಡದ ಜ್ವಲ೦ತ ಸಮಸ್ಯೆಗಳ ಬಗ್ಗೆ ಕೆಲಸ ಮಾಡಿದರೆ ಇವರದು ಕನ್ನಡಿಗರ ಸರ್ಕಾರವಾಗುತ್ತದೆ.

Rohith B R ಅಂತಾರೆ...

ಅನಾನಿಮಸ್ ಅವ್ರೆ,
ನೀವು ಬಯಸುವಿರೋ ಇಲ್ಲವೋ, ಸರ್ಕಾರಗಳು ಹಾಗೇ ಮಾತನಾಡುವುದು! ಒಂದು ಪಕ್ಷದ ಸರ್ಕಾರ ತನ್ನ ಪಕ್ಷವೇ ಮುಂದಿನ ಬಾರಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದು ಅದರ ಕರ್ಮವೇ ಸರಿ!
ಅವರು ಮಾತಾಡುವ ಬಗೆಯನ್ನ ಬದಲಾಯಿಸುವುದು ಬೇಕಿಲ್ಲ, ಆದರೆ ಅವರೇನೇ ಹೇಳಿದರೂ ನಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುವುದು ನಮ್ಮ ಧರ್ಮ! ನಾವು ಪ್ರಜೆಗಳಾಗಿ ನಮ್ಮ ಕರ್ಮವನ್ನ ನಾವು ಅರಿಯಬೇಕು. ಅದೇನೆಂದರೆ ಇಂತಹ ಬೆಳವಣಿಗೆ ನಡೆದಾಗೆಲ್ಲಾ ಸರ್ಕಾರದ ಪ್ರಶಂಸೆ ಮಾಡಿ ನಮ್ಮ ಅಪೇಕ್ಷೆಗಳ ಪಟ್ಟಿ ಮುಂದಿಡುವುದು, ಮತ್ತು ಅದನ್ನು ಸದಾ ಮೇಲಕ್ಕೇರಿಸುತ್ತಲೇ ಇರುವುದು.
ಇದರೊಡನೆ ಸರ್ಕಾರದ ಹೆಜ್ಜೆಗಳಲ್ಲಿ ಜಾಗೃತಿಯ ಇಂತಹ ಸಣ್ಣ ನೆರಳಾದರೂ ಕಾಣ ಶುರುವಾಗಿದೆಯೆಂದರೆ ಅದರಲ್ಲಿ ಎಲ್ಲೋ ಒಂದು ಕಡೆ ನಮ್ಮೆಲ್ಲರ ಜಾಗೃತಿಯ ಕೆಲಸವೇ ಕಾರಣವಾಗಿದೆಯೆಂದು ಅರಿಯಬೇಕು, ಅದನ್ನ ಮುಂದುವರಿಸಲೂ ಬೇಕು..

Anonymous ಅಂತಾರೆ...

ನಮ್ಮ ರಾಜಧಾನಿಯನ್ನ 'BengaLuru' ಅಂತ ಪೂರ್ತಿಯಾಗಿ ಅನುಷ್ಟಾನ ಮಾಡೋ ತಾಕತ್ತಿದ್ಯ...?
'Bombay' 'Mumbai ಆಯ್ತು , 'Calcutta' 'Kolkatta' ಆಯ್ತು, 'Madras' 'Chennai' ಆಯ್ತು , ಆದರೆ ಯಾಕೋ ಕೇಂದ್ರ ಸರ್ಕಾರ ಇನ್ನು 'Bangalore' ನ 'BengaLuru' ಮಾಡಲು ಮೀನ ಮೇಷ ಎಣುಸ್ತಾ ಇದೆ...

ಕ್ಲಾನ್ಗೊರೌಸ್

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails