ಗ್ರಾಹಕನ ಭಾಷೇನೇ ಕೈಬಿಟ್ಟ ಗ್ರಾಹಕ ದಿನಾಚರಣೆ

"ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಯ ಸಂಬಂಧವಾಗಿ ಬೆಂಗಳೂರಿನಲ್ಲಿ ನಿನ್ನೆ (ಡಿಸೆಂಬರ್ 24) ಒಂದು ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದ ತುಂಬ ಗ್ರಾಹಕರ ಹಕ್ಕುಗಳ ಜಾಗೃತಿಯ ಬಗ್ಗೆ ಅನೇಕ ಗಣ್ಯರು ಮಾತಾಡುದ್ರು ಅಂತ ವರದೀಲಿ ಬರ್ದಿದಾರೆ. ಆದರೆ ಗ್ರಾಹಕನ ಭಾಷೆಗೆ ಇರೋ ಮಹತ್ವದ ಬಗ್ಗೇನೇ ಚಕಾರ ಎತ್ತದೇ ಇನ್ನೆಂಥಾ ಗ್ರಾಹಕ ಜಾಗೃತಿ ನಡೆದೀತು?


ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಆಗಬೇಕು

ಗ್ರಾಹಕರ ಹಕ್ಕುಗಳ ಬಗ್ಗೆ ನಮ್ಮ ಜನರಲ್ಲಿ ಜಾಗೃತಿ ಮತ್ತಷ್ಟು ವ್ಯಾಪಕ ಮಟ್ಟದಲ್ಲಿ ಹುಟ್ ಹಾಕ್ಬೇಕು ಅನ್ನೋದು ಈ ಸಭೆಯ ಒಮ್ಮತದ ಅಭಿಪ್ರಾಯ ಆಗಿತ್ತು. ನಗರಗಳಲ್ಲಿ ಇಂಥಾ ಜಾಗೃತಿ ಇದ್ರೂ ಕೂಡಾ ಜನ ತಲೆ ಕೆಡುಸ್ಕೋತಾ ಇಲ್ಲ, ಹಳ್ಳಿಗಳ ಕಡೆ ಇಂಥಾ ಜಾಗೃತಿಯ ಕೊರತೆ ತೀವ್ರವಾಗಿ ಇದೆ ಅನ್ನೋದನ್ನೂ ಅಲ್ಲಿ ಪ್ರಸ್ತಾಪ ಮಾಡಿದಾರೆ. ಗ್ರಾಹಕ ಹಕ್ಕುಗಳ ಬಗ್ಗೆ ನಗರ, ಹಳ್ಳಿ ಎಲ್ಲ ಕಡೆ ಜಾಗೃತಿ ಮೂಡಿಸಬೇಕು ಅನ್ನೋ ಕಾಳಜಿಯೇನೋ ಸರಿಯಿದೆ. ಆದರೆ ಜಾಹಿರಾತುಗಳು, ಅರ್ಜಿಗಳು, ಸೂಚನೆಗಳು, ಬಿಲ್ಲುಗಳು, ರಸೀತಿಗಳೂ ಸೇರಿದಂತೆ ಗ್ರಾಹಕನ ಜೊತೆ ನಡೀತಿರೋ ವ್ಯವಹಾರವೆಲ್ಲಾ ಕನ್ನಡದಲ್ಲಿ ನಡೆಯೋ ವ್ಯವಸ್ಥೆ ಮಾಡದೆ, ಸರ್ಕಾರ ಜನ ಜಾಗೃತಿ ಆಗ್ತಿಲ್ಲಾ ಅಂತ ಎಷ್ಟು ಪೇಚಾಡುದ್ರೂ ಪರಿಣಾಮ ಅಷ್ಟಕ್ಕಷ್ಟೇ ಗುರು.

ಜಾಗೃತಿ ಪರಿಣಾಮಕಾರಿ ಮಾಡೋದು ಹ್ಯಾಗೆ?

ಗ್ರಾಹಕರ ಹಕ್ಕುಗಳ ಬಗ್ಗೆ ಜನರಿಗೆ ನಾವು ಎಷ್ಟೇ ಹೇಳಿ ಕೊಟ್ರೂ, ಗ್ರಾಹಕ ಸೇವೆ ಕನ್ನಡದಲ್ಲಿ ಇಲ್ಲದೇ ಇದ್ರೆ ಅದು ಪರಿಣಾಮಕಾರಿ ಆಗಲ್ಲ. ಉದಾಹರಣೆಗೆ ಯಾವುದೋ ಒಂದು ವಸ್ತು ಕೊಂಡುಕೊಳ್ಳೋ ಗ್ರಾಹಕನಿಗೆ, ಅದರ ಮೇಲೆ ಬರೆದಿರೋ ಸೂಚನೆಗಳು ಅವನದಲ್ಲದ ಭಾಷೇಲಿ ಇರೋ ಕಾರಣದಿಂದ ಸರಿಯಾಗಿ ಅವುಗಳ್ನ ಪಾಲಿಸಕ್ಕೆ ಆಗಲಿಲ್ಲ ಅಂದ್ರೆ ಅಥವಾ ಆ ಕಾರಣಕ್ಕೇ ನಿಬಂಧನೆಗಳು ಅರ್ಥ ಆಗ್ದೆ ಇದ್ರೆ ಅದಕ್ಕೆ ಯಾರು ಹೊಣೆ? ಯಾವ್ದೋ ಅಂಗಡಿಗೆ ಹೋಗಿ ಅಲ್ಲಿ ಬರೆದಿರೋ ನಾಮಫಲಕ ಕನ್ನಡದಲ್ಲಿ ಇಲ್ಲದ ಕಾರಣಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆದರೆ ಅಥ್ವಾ ಅವರ ಸೇವೆಯ ವ್ಯಾಪ್ತಿ ಅರ್ಥವಾಗದೆ ಎಡವಟ್ಟಾದ್ರೆ ಯಾರು ಹೊಣೆ?

ಭಾಷೆ ಮತ್ತು ಗ್ರಾಹಕನ ಹಕ್ಕು

ತೂಕ, ಪ್ರಮಾಣ, ಅಳತೆ ಇವೆಲ್ಲವೂ ಸರಿಯಾಗಿ ಇರಬೇಕು ಅನ್ನೋದ್ರ ಜೊತೆಜೊತೆಗೇ ಗ್ರಾಹಕನಿಗೆ ಏನೇನೆಲ್ಲಾ ಹಕ್ಕುಗಳಿವೆ, ಅವನ ಸಹಾಯಕ್ಕೆ ಏನೇನೆಲ್ಲಾ ಸಂಸ್ಥೆಗಳು, ವ್ಯವಸ್ಥೆಗಳು ಇವೆ ಅಂತೆಲ್ಲಾ ಜಾಗೃತಿ ಮೂಡಿಸಬೇಕು ಅನ್ನೋದೇನೋ ಸರಿ. ಎಲ್ಲಾ ವಸ್ತುಗಳ ಮೇಲಿನ ಸೂಚನೆಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳು, ಅಲ್ಲಿನ ಸೇವೆಗಳು ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಇರಬೇಕಾದದ್ದು ಕಡ್ಡಾಯ ಆಗಬೇಕು ಗುರು. ಗ್ರಾಹಕ ಸೇವೆಯನ್ನು ಕನ್ನಡದಲ್ಲಿ ಪಡೆದುಕೊಳ್ಳುವುದು ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು ಅನ್ನೋದನ್ನ ನಾವು ಮರೀಬಾರ್ದು ಗುರು.

ಭಾಷಾ ಆಯಾಮವಿಲ್ಲದೆ ಯಾವ ತೆರನಾದ ಜಾಗೃತಿ ಮೂಡುಸ್ತೀನಿ ಅಂತಂದ್ರೂ ಅದು ಪರಿಣಾಮಕಾರಿ ಆಗಲ್ಲ. ಇದನ್ನು ಸಂಬಂಧ ಪಟ್ಟವರು ಅರ್ಥ ಮಾಡ್ಕೋಬೇಕು. ಇಲ್ಲದಿದ್ದಲ್ಲಿ ಪ್ರತೀ ವರ್ಷ "ರಾಷ್ಟ್ರೀಯ ಗ್ರಾಹಕ ದಿನಾಚರಣೆ"ಗಳು ನಡೀತಲೇ ಇರ್ತವೆ. ಗಣ್ಯರು ಜಾಗೃತಿ ಕೊರತೆ ಇದೆ ಅಂತ ಭಾಷಣ ಮಾಡ್ತಾನೇ ಇರ್ತಾರೆ. ಏನಂತೀ ಗುರು?

1 ಅನಿಸಿಕೆ:

Unknown ಅಂತಾರೆ...

anisike saralavagi hagu uchitvagi shiguva vastu,karya rupakke tegudukolluvadu bahala kashta sadhya. addarind somaritanadinda yenu sadhane madikollalikke sadhyavilla, prayatna pattalli, guriyalli tannannu tanu karyadalli todagisikondalli yashada haadiyalli nadige hakalikke sadhya.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails