ಹಳೆಗನ್ನಡ ಹೊಸಗನ್ನಡಕ್ಕೆ "ಹೊಸ" ಪದಗಳ ಮೂಲ
ಇವತ್ತಿನ ದಿನ ಕನ್ನಡಕ್ಕೆ ಹೊಸ ಪದಗಳ್ನ ಸೇರ್ಸೋವಾಗ ಕನ್ನಡಿಗನ ಬಾಯಲ್ಲಿ ಹೊರಡಲಿ ಬಿಡಲಿ ಸಂಸ್ಕೃತದಿಂದ ಪದಗಳ್ನ ತಂದು ತುರುಕೋ ಗುಂಗಿಗೆ ನಾವು ಬಿದ್ದಿದೀವಿ. ಇದು ಬಿಟ್ಟು ಹಳೆಗನ್ನಡದಿಂದ ಎಷ್ಟೋ ಪದಗಳ್ನ ಮತ್ತೆ ಚಾಲ್ತಿಗೆ ತರಬೋದು ಗುರು! ಹೊಸ ಪದಗಳ್ನ ಹುಟ್ಟಿಸುವಾಗ ಬೇರೆ ಭಾಷೆಗಳಲ್ಲಿರೋ ಒಂದು ಪದಕ್ಕೆ ಕನ್ನಡದಲ್ಲೂ ಒಂದೇ ಪದ ಹುಡುಕೋರಿಗೆ ಹಳೆಗನ್ನಡದ ಅಧ್ಯಯನ ಸಕ್ಕತ್ ನೆರವಾಗತ್ತೆ.
ಕನ್ನಡದ ವ್ಯಾಕರಣದ ರಿಪೇರಿಗೆ ಹಳೆಗನ್ನಡ
ನಮ್ಮ ಇಂದಿನ ಕನ್ನಡದ ವ್ಯಾಕರಣದಲ್ಲಿ ನಮ್ಮದಲ್ಲದ ವ್ಯಾಕರಣದ ಅಂಶಗಳು ತುಂಬಿಹೋಗಿ ವ್ಯಾಕರಣ ಅನ್ನೋದು ಒಂದು ಕಬ್ಬಿಣದ ಕಡಲೆ ಆಗೋಗಿದೆ. ಕನ್ನಡಕ್ಕೆ ಒಂದು ತನ್ನದೇ ಆದ ವ್ಯಾಕರಣ ಅನ್ನೋದು ಇವತ್ತಿಗೂ ಸರಿಯಾಗಿ ಇಲ್ಲ. ಇದಕ್ಕೆ ಮೂಲ ಕಾರಣ ಕನ್ನಡದ ವ್ಯಾಕರಣವನ್ನ ಸಂಸ್ಕೃತದ ಒಂದು ಉಪವ್ಯಾಕರಣ ಅಂತ ಪರಿಗಣಿಸಿರೋದು. ಇದು ಬಿಟ್ಟು ಕನ್ನಡದ ವ್ಯಾಕರಣ ಬರಿಯೋರು ಹಳೆಗನ್ನಡದ ಅಧ್ಯಯನ ಮಾಡಬೇಕು ಗುರು! ಉದಾಹರಣೆಗೆ ಕನ್ನಡದಲ್ಲಿ ಐದನೇ ವಿಭಕ್ತಿ ಪ್ರತ್ಯಯ ಇದೆ ಅಂತ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಹೇಳ್ಕೊಡ್ತಿರೋದು ಕನ್ನಡದ ಕೊಲೆ ಗುರು! ಕನ್ನಡಿಗನ ನಾಲಿಗೆಯಲ್ಲಿ ಇವತ್ತಿಗೂ ಮಹಾಪ್ರಾಣಗಳು ಮತ್ತು ಒಂದು ಅಕ್ಷರಕ್ಕೆ ಬೇರೆ ಒಂದು ಅಕ್ಷರ ಒತ್ತಕ್ಷರವಾಗಿ ಬರೋದು ಬಹಳ ಕಡಿಮೆ. ಹಳೆಗನ್ನಡ ಸ್ವಲ್ಪ ಕಲ್ತ್ರೆ ಇನ್ನು ಮುಂದೆ "ಔನು ಹಳ್ಳಿ ಗುಗ್ಗು, ಅವನ ಬಾಯಲ್ಲಿ ಮಹಾಪ್ರಾಣ ಹೊರಳಲ್ಲ" ಅನ್ನೋ ಮಾತು ನಮ್ಮ ಬಾಯಲ್ಲಿ ಬರಲ್ಲ ಗುರು! ನಿಜಕ್ಕೂ ತಲೆತಲಾಂತರದಿಂದ ನಮ್ಮ ಬಾಯಲ್ಲಿ ಮಹಾಪ್ರಾಣ ಹೊರಳಿಲ್ಲ! ಹಳೆಗನ್ನಡದಲ್ಲಿ ಪದಗಳ ಸ್ವರೂಪ ಅರ್ಥವಾಗೋದು ಇವತ್ತಿನ ದಿನ ಹೊಸ ಪದಗಳ್ನ ಹುಟ್ಟಿಸೋದಕ್ಕೆ ಬಹಳ ಮುಖ್ಯಾಮ್ಮಾ!
ಹಳೆಗನ್ನಡ ಕನ್ನಡ ಜನಾಂಗದ ಇತಿಹಾಸಕ್ಕೆ ಕನ್ನಡಿ
ಹಳೆಗನ್ನಡದಲ್ಲಿರೋ ಬರಹಗಳ್ನ ಸರಿಯಾಗಿ ಅಧ್ಯಯನ ಮಾಡಿದಾಗಲೇ ನಮ್ಮ ಭಾಷೆಯ ನಿಜವಾದ ಮೂಲದ ಬಗ್ಗೆ ಸರಿಯಾದ ಮಾಹಿತಿ ದೊರಕೋದು. ಸಂಸ್ಕೃತದಿಂದ ಎಲ್ಲಾ ಭಾಷೆಗಳು ಹುಟ್ಟಿವೆ, ಅದ್ರಲ್ಲಿ ಕನ್ನಡವೂ ಒಂದು ಅಂತೆಲ್ಲ ತಪ್ಪು ತಿಳುವಳಿಕೆ ಇವತ್ತು ಮಾರುಕಟ್ಟೆಯಲ್ಲಿರೋದಕ್ಕೆ ಕಾರಣವೇ ಹಳೆಗನ್ನಡದಿಂದ ಕನ್ನಡಿಗರು ದೂರ ಇರೋದು.
ಇದೇ ಕನ್ನಡ ಜನಾಂಗದ ಜನಜೀವನ ಕೆಲ ಶತಮಾನಗಳ ಹಿಂದೆ ಹೇಗಿತ್ತು ಅಂತ ತಿಳ್ಕೊಳೋಕ್ಕೆ ಬೇಕಾದ ವಸ್ತು ಹಳೆಗನ್ನಡದ ಹೊತ್ತಿಗೆಗಳಲ್ಲೇ ಇರೋದು. ಜನರ ಆರ್ಥಿಕ ಪರಿಸ್ಥಿತಿ, ಇತಿಹಾಸ ಇವೆಲ್ಲಾ ತಿಳ್ಕೊಳಕ್ಕೆ ಇಷ್ಟ ಪಡೋರಿಗೂ ಹಳೆಗನ್ನಡ ಬೇಕೇ ಬೇಕು. ನಮ್ಮ ಇತಿಹಾಸ ಸರಿಯಾಗಿ ತಿಳ್ಕೊಳೋದು ನಮಗೆ ತುಂಬ ಮುಖ್ಯ ಗುರು! ಅದನ್ನ ನಾವು ಸರಿಯಾಗಿ ತಿಳ್ಕೊಳ್ದೇ ಹೋದ್ರೆ ಇನ್ನ್ಯಾರೋ ಬಂದು ತಮ್ಗೆ ಬೇಕಾಗೋ ಹಾಗೆ ಇತಿಹಾಸನ ನಮ್ಗೇ ಹೇಳ್ಕೊಡಕ್ಕ್ ಶುರು ಹಚ್ಕೋಳ್ತಾರೆ ಗುರು! ನಮ್ಮ ನಿಜವಾದ ಇತಿಹಾಸ ತಿಳ್ಕೊಂಡ್ರೆನೇ ನಾವು ಯಾರು ಅನ್ನೋದು ಅರ್ಥ ಆಗೋದು ಗುರು!
ಇವೆಲ್ಲಾ ಯಾಕೆ? ನಮ್ಮ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ, ನಮ್ಮ ಲಿಪಿಯ ಬಗ್ಗೆ, ನಮ್ಮ ಪದಗಳ ಬಗ್ಗೆ, ನಮ್ಮ ವಿಶೇಷತೆಯ ಬಗ್ಗೆ ಒಂಚೂರು ಕುತೂಹಲ ನಿಮಗೆ ಇದ್ಯಾ? ಇದ್ದ್ರೆ ಹಳೆಗನ್ನಡದ ಅಧ್ಯಯನಕ್ಕೆ ಕೈ ಹಾಕು ಗುರು!