ಕನಸೊಂದು, ಹೇರಲಾದ ನನಸು ಇನ್ನೊಂದು!

ಬನ್ನಿ ಕುಂತ್ಕಳಿ. ಈ ಪಟ್ಟು ಒಂದೆರಡು "ಅಂತರರಾಷ್ಟ್ರೀಯ ವಿಮಾನ ನಿಲ್ದಾಣ"ಗಳ ಒಳಗೆ ಇಣುಕಿ ನೋಡ್ಮ.

ಚೀನಿ ಭಾಷೆಯ ಜಾಹೀರಾತುಗಳ್ನ ಹಾಕಿಕೊಳೋದು ನಾಚಿಕೆಗೇಡು ಅಂತ ಬೀಜಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅನ್ನಿಸಿಲ್ಲ ಇಲ್ನೋಡಿ:


ಮ್ಯೂನಿಕ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಲ್ಲಿಯ ಜರ್ಮನ್ ಭಾಷೆಯಲ್ಲಿ ಸೂಚನೆಗಳ್ನ ಹಾಕಿಕೊಳೋದು ಬಟ್ಟೆ ಬಿಚ್ಚಿ ನಿಂತಂಗೆ ಅಂತೇನು ಅನ್ನಿಸಿಲ್ಲ ಇಲ್ನೋಡಿ :


ಈಗ ಪ್ರಶ್ನೆ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಯಾವ ಸ್ಥಾನ ಇರ್ಬೇಕು? ಅದೇ ಸ್ಥಾನ ತಾನೆ? ಇರ್ಬೇಕು ಅನ್ನೋದು ಒಂದಾದ್ರೆ ಏನ್ ಆಗತ್ತೆ ಅನ್ನೋದು ಆ ಕೇಂದ್ರಪ್ಪ ದ್ಯಾವ್ರಪ್ಪನಿಗೇ ಗೊತ್ತು!

ಬೆಂಗಳೂರಿನ ವಿಮಾನ ನಿಲ್ದಾಣ ಹೆಂಗೆ ಇರಬೇಕು?

ವಿಮಾನ ನಿಲ್ದಾಣದ ಆವರಣದಲ್ಲಿ ವಾಹನ ನಿಲ್ದಾಣದ ಚೀಟಿಗಳಾಗಲಿ, ವಿಮಾನದ ಚೀಟಿಗಳಾಗಲಿ, ದೃಶ್ಯ/ಶ್ರಾವ್ಯ ಮಾಧ್ಯಮಗಳಾಗಲಿ, ಮನರಂಜನೆಯಾಗಲಿ, ವಿಮಾನಗಳ ಒಳಗಡೆ ಸೂಚನೆಗಳಾಗಲಿ, ವಿಮಾನ ನಿಲ್ದಾಣದೊಳಗಿನ ಸೂಚನೆಗಳು ಮತ್ತು ಕರೆಗಳಾಗಲಿ - ಪ್ರತಿಯೊಂದೂ ಮೊದ್ಲು ಕನ್ನಡದಲ್ಲಿರ್ಬೇಕು ಅನ್ನೋದ್ನ ಹೊಸದಾಗಿ ಹೇಳಬೇಕಾಗಿಲ್ಲ. ವಿಮಾನ ನಿಲ್ದಾಣದ ಅಂತರ್ಜಾಲ ತಾಣಾನೂ ಮೊದ್ಲು ಕನ್ನಡದಲ್ಲಿರಬೇಕು.

ಹಂಗಂದ ಮಾತ್ರಕ್ಕೆ ಇಂಗ್ಲೀಷ್ ಇರ್ಬಾರ್ದು ಅಂತೇನು ನಾವು ಹೇಳ್ತಿಲ್ಲ. ಇರ್ಲಿ, ಇಂಗ್ಲೀಷ್ ಇರ್ಲಿ ಕನ್ನಡ ಬರ್ದೇ ಇರೋರಿಗೆ. ಆದ್ರೆ ಕನ್ನಡ-ಇಂಗ್ಲೀಷ್ ಬಿಟ್ಟು ಬೇರೆ ಯಾವ ಭಾಷೇನೂ (ಜುಲು, ಹಿಂದಿ, ಸಿಂಹಳ, ಆಫ್ರಿಕಾನ್ಸ್, ಪಂಜಾಬಿ, ತಮಿಳು ಮುಂತಾದವು) ಅಲ್ಲಿ ಇರುವ ಅವಶ್ಯಕತೆಯಿಲ್ಲ. ಮ್ಯೂನಿಕ್ಕಲ್ಲಿ ಫ್ರೆಂಚ್ ಭಾಷೆ ಹೇಗೆ ಕಾಣ್ಸಲ್ವೋ ಹಾಗೇ ಇಲ್ಲೂ ಈ ಯಾವ ಭಾಷೇನೂ ಕಾಣ್ಸೋ ಅವಶ್ಯಕತೆ ಇಲ್ಲ.

ಇರ್ಬೇಕಾದ್ದು ಒಂದು, ಇರಕ್ಕೆ ಹೊರ್ಟಿರೋದು ಮತ್ತೊಂದು!

ನೆನಪಿರಲಿ - ನಾವು ಒಂದು ವಿಶೇಷವಾದ ದೇಶದಲ್ಲಿ ಇದೀವಿ. ಇಲ್ಲಿ ಫ್ರೆಂಚ್ (ಹಿಂದಿ) ಭಾಷೆ ಜರ್ಮನ್ (ಕನ್ನಡ) ಭಾಷೆಯ ಜಾಗ ತೊಗೋಬೋದು ಅಂತ ಸಂವಿಧಾನವೇ ಹೇಳತ್ತೆ! ಈ ನಮ್ಮ ಇಸೇಸವಾದ ದೇಸದಲ್ಲಿ ಫ್ರೆಂಚ್ (ಹಿಂದಿ) ಭಾಷೇನ ಜರ್ಮನಿಯಲ್ಲಿ (ಕರ್ನಾಟಕದಲ್ಲಿ) "ಆಡಳಿತ ಭಾಷೆ" ಅಂತ ಕರಿಯೋದಷ್ಟೇ ಅಲ್ಲ, ಅದನ್ನ "ರಾಷ್ಟ್ರಭಾಷೆ" ಅಂತ ಬೇರೆ ಸುಳ್ಳು ಪ್ರಚಾರ ಮಾಡಲಾಗುತ್ತೆ! ಈ ನಮ್ಮ ಅದ್ಭುತವಾದ ದೇಸದಲ್ಲಿ ಮಾತ್ರ ಮ್ಯೂನಿಕ್ಕಿಗೆ (ಬೆಂಗಳೂರಿಗೆ) ಬಂದು ಇಳಿದೋರು ಇಲ್ಲೇ ಎಲ್ಲೋ ಹತ್ರದಲ್ಲಿ ಐಫಿಲ್ ಟವರ್ (ತಾಜ್ ಮಹಲ್) ಇರಬೇಕು ಅಂದ್ಕೊಳಕ್ಕೆ ಅವಕಾಶ ಇರೋದು. ಈ ಇಸೇಸವಾದ ದೇಸದಲ್ಲಿ ಮಾತ್ರ ಮ್ಯೂನಿಕ್ಕಿಗೆ (ಬೆಂಗ್ಳೂರಿಗೆ) ಬಂದೋರಿಗೆ ಅಕ್ಟೋಬರ್ ಫೆಸ್ಟ್ (ಹಂಪಿ ಉತ್ಸವ) ಅನ್ನೋದು ಬೇರೆ ಯಾವುದೋ ಒಂದು ದೇಶದಲ್ಲಿ ನಡ್ಯುತ್ತೆ, ಅಲ್ಲೀ ಜನಾಂಗವೇ ಪ್ರಪಂಚದಿಂದ ಅಳಿದುಹೋಗ್ತಿದೆ ಅನ್ಸೋದು! ಈ ನಮ್ಮ ಭಾರತದಲ್ಲಿ ಮಾತ್ರ ವಿಮಾನ ನಿಲ್ದಾಣ ಯಾವ ನಾಡಿನಲ್ಲಿದೆಯೋ ಆ ನಾಡು-ನುಡಿ-ನಾಡಿಗರು ಸತ್ತೇ ಹೋಗಿವೆ ಅನ್ನಿಸೋ ವಾತಾವರಣ ಇರಕ್ಕಾಗೋದು! ಇಲ್ಲಿ ಮಾತ್ರ ಕನ್ನಡಿಗರಂತಹ ಇಡೀ ಭಾಷಾವಾರು ಜನಾಂಗಗಳ್ನ ಕೀಳಾಗಿ ಕಾಣಕ್ಕಾಗೋದು. ಈ ದೇಶದಲಿ ಮಾತ್ರ ಇಡೀ ಭಾಷಾವಾರು ಜನಾಂಗಗಳಿಗೆ "ನಿಮಗೆ ಹಿಂದಿ ಬಾರದ ಕಾರಣ ನೀವು ಪೂರ್ಣ ಭಾರತೀಯರಲ್ಲ" ಅನ್ನಕ್ಕಾಗೋದು!

ಇನ್ನೂ ನಮ್ಮ ವಿಮಾನ ನಿಲ್ದಾಣದಲ್ಲಿ ಕನ್ನಡದ ಗತಿ ಏನಿರತ್ತೆ ಅಂತ ಒತ್ತಿ ಹೇಳಬೇಕಾ? ಕನ್ನಡಿಗರ ಕನಸೊಂದು, ಹದಗೆಟ್ಟ ವ್ಯವಸ್ಥೆ ಹೇರುವ ನನಸು ಇನ್ನೊಂದು ಅನ್ನೋ ಈ ನರಕದಿಂದ ನಮ್ನ ಪಾರುಮಾಡೋ ಗಂಡೆದೆಯ ವೀರರು ಯಾರಾದರೂ ಇದೀರಾ?

ಇಂಗ್ಲೀಶಲ್ಲೂ ಒದಿ: KARNATIQUE: Airport: what ought to be and what shall be

ಇನ್ನು ರಾಷ್ಟ್ರಧಾನ್ಯ ಒಂದು ಬಾಕಿ ಇತ್ತು!

ಇನ್ನು ಕನ್ನಡಿಗರು ಹೊಟ್ಟೆಗೆ ಅನ್ನ ತಿನ್ನಬೇಡಿ, ಗೋಧಿ ತಿನ್ನಿ ಅಂತ ಭಾರತ ಸರ್ಕಾರ ಅಪ್ಪಣೆ ಹೊರಡಿಸಿ ಕರ್ನಾಟಕದ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚು ಹೆಚ್ಚು ಗೋಧಿ ಮಾರಲು ಹೊರಟಿದೆ ಅಂತ 19ನೇ ತಾರೀಕಿನ ಕನ್ನಡಪ್ರಭದ ವರದಿ. ಆ ವರದಿ ಪ್ರಕಾರ:
ದೇಶವ್ಯಾಪಿ ಅಕ್ಕಿ ಉತ್ಪಾದನೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಭತ್ತದ ಬೆಳೆಯುವ ಪ್ರಮಾಣ ನಿಧಾನಗತಿಯಲ್ಲಿ ಕಡಮೆ ಆಗುತ್ತಿದೆ. ಲೆವಿ ಸಂಗ್ರಹದ ಪ್ರಮಾಣವೂ ಕಡಮೆ ಆಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ಧಾರಣೆ ಭಾರಿ ಪ್ರಮಾಣದಲ್ಲಿ ಏರಿದೆ. ಹೀಗಾಗಿ ಅಕ್ಕಿ ಹೆಚ್ಚು ಬಳಸುವ ದಕ್ಷಿಣದ ರಾಜ್ಯಗಳಿಗೆ ಆಗಾಗ್ಗೆ ಅಕ್ಕಿಯ ಕೊರತೆಯಾಗುತ್ತಿದೆ. ಆದರೆ, ಭತ್ತಕ್ಕೆ ಹೋಲಿಸಿದರೆ ಗೋಧಿ ಉತ್ಪಾದನೆ ಪ್ರಮಾಣ ಹೆಚ್ಚುತ್ತಿದೆ. ಹೆಚ್ಚು ಗೋಧಿ ಪೂರೈಕೆ ಮಾಡಲು ಇದು ಮುಖ್ಯ ಕಾರಣ ಎನ್ನುತ್ತವೆ ಆಹಾರ ಇಲಾಖೆ ಉನ್ನತ ಮೂಲಗಳು.
ಕನ್ನಡದ ಮಣ್ಣಲ್ಲಿ ಮುಖ್ಯವಾಗಿ ಅಕ್ಕಿ ಮತ್ತು ರಾಗಿಯೇ ಬೆಳ್ಯೋದು. ಇದು ತಲತಲಾಂತರಗಳಿಂದ ಕಂಡುಬಂದಿರೋ ನೈಸರ್ಗಿಕ ಸತ್ಯ. ಈ ಧಾನ್ಯಗಳಿಂದಲೇ ಹೆಚ್ಚು-ಕಡಿಮೆ ಇಲ್ಲಿಯ ಜನರ ಆಹಾರ ಸೇವಿಸುವ ರೀತಿ ರೂಪುಗೊಂಡಿದೆ. ಕನ್ನಡಿಗರು ಅಕ್ಕಿ (ಅನ್ನ), ರಾಗಿ ಮತ್ತು ಜೋಳಗಳ್ನೇ ಹೆಚ್ಚಾಗಿ ಸೇವಿಸೋದು ಅಂತ ಇಡೀ ಭಾರತಕ್ಕೆ ಗೊತ್ತಿದೆ. ಹಾಗೇ, ಭಾರತದ ಉತ್ತರ ಭಾಗಗಳಲ್ಲಿ ಹೆಚ್ಚಾಗಿ ಬೆಳ್ಯೋ ಧಾನ್ಯವೆಂದ್ರೆ ಗೋಧಿ. ಹಾಗಾಗಿ ಅಲ್ಲಿಯ ಜನರ ಊಟದಲ್ಲಿ ಗೋಧಿಯಡುಗೆಗಳೇ ಹೆಚ್ಚಿರುತ್ತೆ. ಈ ಎರಡೂ ಪ್ರವೃತ್ತಿಗಳು ಪ್ರಕೃತಿಯ ನಿಯಮದಂತೆ ನಡೆದು ಬಂದಿರುವಾಗ, ಏಕಾಏಕಿ ಅನ್ನ ಉಣ್ಣುವ ಕನ್ನಡಿಗರಿಗೆ ಗೋಧಿ ಉಣಿಸಿ ಕೈತೊಳ್ಕೊಂಬುಡಣ ಅಂತ ಹೊರ್ಟಿದ್ಯಲ್ಲ ಗುರು ನಮ್ಮ ಘನ ಭಾರತ ಸರ್ಕಾರ! ಇದನ್ನ ಕೇಳೇ ಕನ್ನಡಿಗನ ಹೊಟ್ಟೆ ತಣ್ಣಗಾಗ್ಬೇಕು!

ರಾಷ್ಟ್ರಭಾಷೆ ಆದಮೇಲೆ ಈಗ ರಾಷ್ಟ್ರಧಾನ್ಯದ ಕಾಲ!

ಅಲ್ಲ ಗುರು, ಕರ್ನಾಟಕದಲ್ಲಿ ಅಕ್ಕಿ ಬೆಳೆ ಕಡಿಮೆ ಆಗ್ತಾ ಇದೆ ಅನ್ನೋದು ನಿಜವೇ ಆಗಿದ್ರೆ ಅಕ್ಕಿ ಪೂರೈಕೆಗೆ ಏನಾದ್ರೂ ದಾರಿ ಹುಡುಕೋ ಬದ್ಲು ಗೋಧಿ ತಿನ್ನಿ ಅನ್ನೋ ಮೂರ್ಖತನ ಕೇಂದ್ರಸರ್ಕಾರಕ್ಕೆ ಎಲ್ಲಿಂದ ಬಂತು ಅನ್ನೋ ಪ್ರಶ್ನೇನಾ? ಕೇಂದ್ರಸರ್ಕಾರಕ್ಕೇನು ಗೊತ್ತು ಕನ್ನಡಿಗನ ಹೊಟ್ಟೆಗೆ ಏನ್ಬೇಕು, ಏನ್ಬೇಡ ಅಂತ? ಕೇಂದ್ರಕ್ಕೆ ಈ ಗೋಧಿ-ಅಕ್ಕಿ-ರಾಗಿ-ಜೋಳ ಇವೆಲ್ಲ ತಲೆನೋವು ತರೋ "ವಿವಿಧತೆ". ಈ ವಿವಿಧತೆ ಇದ್ರೆ ತಾನೆ ತಲೆನೋವು? ಎಲ್ಲಾ ಗೋಧೀಮಯ ಮಾಡ್ಬುಡಮ ಅಂತ ಒಂಟ್ರೆ ತಲೆನೋವೇ ಇರಕ್ಕಿಲ್ಲವಲ್ಲ?! ಎಷ್ಟೇ ಆದ್ರೂ ಗೋಧಿ ತಾನೆ "ರಾಷ್ಟ್ರಭಾಷೆ" ಆಡೋರ ಧಾನ್ಯ? ಆದ್ರಿಂದ ಗೋಧೀನೇ ತಾನೆ "ರಾಷ್ಟ್ರಧಾನ್ಯ"?! ಇನ್ನು ರಾಷ್ಟ್ರಧಾನ್ಯ ಪ್ರಸಾರ ಪರಿಷತ್ತುಗಳು, ರಾಷ್ಟ್ರಧಾನ್ಯ ಇಲಾಖೆಗಳು ಇವೆಲ್ಲಾ ಉಟ್ಕೋತವೋ ಏನೋ!

ಕೇಂದ್ರಸರ್ಕಾರದ ಈ ನಡವಳಿಕೆಯೂ ಒಂದೇ, ಕರ್ನಾಟಕದಲ್ಲಿ ಡಿ-ಗುಂಪಿನ ರೈಲ್ವೇ ಹುದ್ದೆಗಳು ಖಾಲಿ ಇವೆ, ಇದಕ್ಕೆ ಬಿಹಾರಿಗಳ್ನ ಕಳಿಸೋಣ ಅನ್ನೋ ನಡವಳಿಕೇನೂ ಒಂದೇ! ಇದು ಗೋಧಿ ಕಾಳಿನ ವಲಸೆ, ಅದು ಗೋಧಿ ಉಣ್ಣೋರ ವಲಸೆ, ಅಷ್ಟೆ! ಒಟ್ನಲ್ಲಿ ಕರ್ನಾಟಕದಲ್ಲಿ ಖಾಲಿ ಜಾಗಗಳ್ನ ತುಂಬಬೇಕು ಅನ್ನೋದಷ್ಟೇ ಕೇಂದ್ರಸರ್ಕಾರದ ಉದ್ದೇಶ ಇದ್ದಂಗಿದೆ! ಅದ್ನ ಬಿಹಾರಿಗಳಿಂದ ತುಂಬುದ್ರೇನು ಗೋಧಿಯಿಂದ ತುಂಬುದ್ರೇನು? ಎಲ್ಲಾ ನಮ್ಮ ಹಣೇಬರ! ಸರಿ ಬನ್ನಿ, ಮೊದ್ಲು ಕನ್ನಡ ಮರೆತು ಹಿಂದಿ ಮಾತಾಡೋಣ, ಆಮೇಕೆ ಅನ್ನ ಮರೆತು ಗೋಧಿ ತಿನ್ನಮ. ಏನ್ ಗುರು?

ಇದ್ನೂ ಒಸಿ ಓದಿ: ಹೊಟ್ಟೆ! ಕನ್ನಡವಿಲ್ಲದೆ ನೀ ಕೆಟ್ಟೆ!

ಉದ್ಧಾರಕ್ಕೆ ಭಾಷೆ ಬೇಕು ನಿಜ, ಆದ್ರೆ ಯಾವ್ ಭಾಷೆ?

ಮೊನ್ನೆ ಬೆಂಗಳೂರಿನ ಕೇಂದ್ರೀಯ ಸದನದಲ್ಲಿ ಕೇಂದ್ರ ನಗರಾಭಿವೃದ್ದಿ ಮತ್ತು ವಸತಿ ಇಲಾಖೆಯ ಒಂದು ವಿಚಾರ ಸಂಕಿರಣದಲ್ಲಿ ಭಾರತದ "ಪ್ರಗತಿಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತೆ" ಅಂತ ಯಾರೋ ಹೇಳಿದಾರೆ ಅಂತ ಇದೇ ತಿಂಗಳ 17ನೇ ತಾರೀಕಿನ ವಿ.ಕ.ದಲ್ಲಿ ಸುದ್ದಿ ನೋಡಿ "ಕೊನೆಗೂ ಭಾಷೆ ಪ್ರಾಮುಖ್ಯಾನ ಜನ್ರು ಅರ್ಥ ಮಾಡ್ಕೋತಿದಾರಪ್ಪಾ" ಅನ್ನೋ ಖುಷಿ ಆಗಿದ್ದೇನೋ ನಿಜ. ಆದ್ರೆ ಅದನ್ನ ಹೇಳಿದ ಅಯೋಗ್ಯನ ತಲೇಲಿ ಭಾರತಕ್ಕೆ "ಭಾಷೆ" ಅನ್ನೋದರ ಅರ್ಥವೇ "ಹಿಂದಿ" ಅನ್ನೋ ಪ್ರಜಾಪ್ರಭುತ್ವ-ವಿರೋಧಿ ನಿಲುವು ಕೂತಿದೆ, ಅದು ಆ ವಯ್ಯನ ಲೆಕ್ಕದಲ್ಲಿ ಭಾರತದ ರಾಷ್ಟ್ರಭಾಷೆ ಅಂತ ಇಡೀ ಸುದ್ದಿ ಓದಿದ ಮೇಲೇ ಗೊತ್ತಾಗಿದ್ದು. ಈ ಹಿಂದೀ ಬಗ್ಗೆ ಇರೋ ಗೊಂದಲ ಭಾರತದ ಜನಕ್ಕೆ ಯಾವಾಗ್ ಹೋಗತ್ತೋ ನಾ ಕಾಣೆ ಗುರು! (ಹೆಂಗ್ ಹೋದಾತು, ಇನ್ನೂ ಅದೇ ಸುಳ್ನ ಸಾರಿ ಸಾರಿ ಹೇಳೋರಿರುವಾಗ ಅಂತೀರಾ?!)...

ಹಿಂದಿ ರಾಷ್ಟ್ರಭಾಷೆ ಅನ್ನೋ ಮಹಾ ಸುಳ್ಳು

ಹಿಂದಿ ರಾಷ್ಟ್ರಭಾಷೆ ಅನ್ನೋದೇ ಒಂದು ದೊಡ್ಡ ಸುಳ್ಳು. ಹಿಂದಿ ರಾಷ್ಟ್ರಭಾಷೆ ಅಂಥ ನಂಬಕೊಂಡಿರೋರು ಇವರೊಬ್ರೇ ಅಲ್ಲ, ಭಾರತದಲ್ಲಿ ಬಹಳ ಜನ ಇದಾರೆ. ಆದರೆ ಇವೆಲ್ಲ ಸುಳ್ಳು. ಹಿಂದಿಗೆ ಭಾರತೀಯ ಸಂವಿಧಾನ ಕೇಂದ್ರದ "ಅಧಿಕೃತ ಭಾಷೆ" ಅನ್ನೋ ಸ್ಥಾನಮಾನ ಕೊಟ್ಟಿದೆಯೇ ಹೊರತು ಹೆಚ್ಚೇನೂ ಇಲ್ಲ (ಹಾಗ್ ಕೊಟ್ಟಿರೋದೂ ನಮ್ಮ ಸಂವಿಧಾನದ ಒಂದು ಕಟುಸತ್ಯ ಅನ್ನೋದು ಬೇರೆ ವಿಶ್ಯ). ಒಂದು ಸುಳ್ಳನ್ನ ಸಾವಿರ ಸಲಿ ಹೇಳಿದ್ರೆ ಸತ್ಯ ಆಗುತ್ತೆ ಅನ್ನೋ ಹಾಗೆ ಈ ಹಿಂದಿ-ಪಕ್ಷಪಾತಿಗಳು, ಕನ್ನಡದ್ರೋಹಿಗಳು ಇವತ್ತಿಗೂ ಇಲ್ಲದ ಪ್ರಚಾರ, ಇಲ್ಲದ ಸ್ಥಾನಮಾನಾನ ಹಿಂದಿಗೆ ಕೊಡ್ತಾನೇ ಇದಾರೆ ಅನ್ನೋದು ಭವ್ಯಭಾರತದ ಒಳಹುಳುಕು. ಈ ಹುಳುಕಿನಿಂದ ಕನ್ನಡಿಗರದಷ್ಟೇ ಅಲ್ಲ, ಭಾರತದಲ್ಲಿ ಹಿಂದಿಯೇತರ ಜನರೆಲ್ಲರ ಬಾಳು ನರಕವಾಗಿಹೋಗಿ, ತಂತಮ್ಮ ನಾಡಿನಲ್ಲೇ ಹೊರಗಿನವರಾಗಿಹೋಗಿದ್ದಾರೆ ಗುರು! ಇದು ನಮ್ಮ ಭವ್ಯಭಾರತದ ಹಿರಿಮೆ!

ಯಾವ್ ಭಾಷೆ ಸ್ವಾಮಿ?


ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾದ ಭಾರತ ಉದ್ಧಾರ ಆಗೋದು ಹೇಗೆ? ಬಲಿಷ್ಠ ಕರ್ನಾಟಕ, ಬಲಿಷ್ಠ ತಮಿಳುನಾಡು, ಬಲಿಷ್ಠ ಗುಜರಾತ - ಹೀಗೆ ಬಲಿಷ್ಠ ರಾಜ್ಯಗಳಿಂದ ಭಾರತ ಬಲಿಷ್ಠ ಆಗುತ್ತೆಯೇ ಹೊರತು ಹಿಂದೀನ ರಾಷ್ಟ್ರಭಾಷೆ ಮಾಡೋದ್ರಿಂದ ಅಲ್ಲ. ಭಾರತ ಉದ್ಧಾರ ಆಗೋಕೆ ಭಾಷೆಗೂ ಒಂದು ಮುಖ್ಯ ಸ್ಥಾನ ಇದೆ ಅನ್ನೋ ಇವರ ಮಾತನ್ನ ಎಲ್ಲರೂ ಒಪ್ತಾರೆ, ಆದ್ರೆ ಯಾವ ಭಾಷೆ? ಆಯಾ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡೋಕೆ ಆಗೋವಂತ ಅಲ್ಲಿನ ಸ್ಥಳೀಯ ಭಾಷೇನೋ ಇಲ್ಲ ಯಾವುದೇ ಸಂಬಂಧವಿರದ ಹಿಂದಿಯಿಂದಾನೋ?

ಹೇರಿಕೆ ಅಲ್ಲ ಉತ್ತೇಜನ !

ರಾಜ್ಯದಲ್ಲಿ ಸದ್ಯಕ್ಕೆ "ಹಿಂದಿ ಹೇರಿಕೆಯ ವಾತಾವರಣ ಇಲ್ಲ, ಆದರೆ ಹಿಂದಿಗೆ ಉತ್ತೇಜನ ನೀಡುವ ವ್ಯವಸ್ಥೆ ಇದೆ" ಅನ್ನೋ ಮೂರ್ಖರು ಕೂಡ ಇದ್ದಾರೆ! ಅವರಿಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ, ಮಾರುಕಟ್ಟೆಯಲ್ಲಿ, ಗ್ರಾಹಕಸೇವೆಯಲ್ಲಿ, ಮನರಂಜನೆಯಲ್ಲಿ - ಪ್ರತಿಯೊಂದರಲ್ಲೂ ನಡೀತಿರೋ ಹಿಂದಿ ಹೇರಿಕೆ ನೋಡೋಕಾಗದೆ ಇರೋ ಜಾಣ ಕುರುಡು. ಇದೇ ರೀತಿ ಹಿಂದಿ/ಹಿಂದಿಯವರ ಹೇರಿಕೆ ನಡೀತಾ ಇದ್ರೆ ಇವತ್ತು ಮುಂಬೈನಲ್ಲಿ ಆದಂತೆ ನಾಳೆ ಎಲ್ಲ ಹಿಂದಿಯೇತರ ರಾಜ್ಯದಲ್ಲೂ ಆದೀತು. ಅದು ಖಂಡಿತವಾಗ್ಯೂ ಒಕ್ಕೂಟ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೇದಲ್ಲ ಗುರು!

ಅರ್ಥ ಮಾಡ್ಕೋ ಗುರು!

ಇದು ನಮ್ಮ ಕನ್ನಡ ನಾಡು. ಇಲ್ಲಿ ಸಾವಿರಾರು ವರ್ಷದಿಂದ ಬಾಳಿ ಬದುಕ್ತಾ ಇರೋರು ನಾವು, ಅಂದ್ರೆ ಕನ್ನಡಿಗರು, ಇಲ್ಲಿ ನಾವಾಡೋ ನುಡಿ ಕನ್ನಡ. ನಾವು ಉದ್ಧಾರ ನಮಗೆ ಗೊತ್ತಿಲ್ಲದೆ ಇರೋ ಹಿಂದಿ ಕಲಿಯೋದ್ರಿಂದ ಸಾಧ್ಯ ಅಂಥ ಹೇಳೋದು ತಮಾಷೆಯಷ್ಟೇ ಅಲ್ಲ, ಎಲ್ಲಾ ಹಿಂದಿಯೇತರ ಜನಾಂಗಗಳ ಕಡೆಗಣಿಕೆ. ಇಡೀ ಭಾರತಕ್ಕೆ ನಿಧಾನವಾಗಿ ಹಿಂದಿ ಅನ್ನೋ ವಿಷ ಉಣಿಸಿ ವಿವಿಧತೆ ನಿಧಾನವಾಗಿ ಅಳಿಸಿ, ಆಮೇಲೆ ನಮ್ಮನ್ನ ಉದ್ಧಾರ ಮಾಡೋದೇನ್ ಬಂತು ಮಣ್ಣು?

ಭಾರತಕ್ಕೆ ಹೊಂದುವ ಸರಿಯಾದ ಭಾಷಾ ನಿಯಮ

ನಿಜವಾಗಲೂ ಯೋಚಿಸಿ ನೋಡಿದರೆ ಭಾರತದ ಪ್ರತಿಯೊಂದು ಭಾಷೆಯೂ ರಾಷ್ಟ್ರಭಾಷೆಯಾಗಬೇಕು. ಯಾವುದೋ ಆಯ್ಕೆಯ ಒಂದೆರಡಲ್ಲ. ಯೂರೋಪು ಒಕ್ಕೂಟದಲ್ಲಿ ಕೇಂದ್ರ-ಸರ್ಕಾರ ಒಗ್ಗೂಡಿರುವ ಎಲ್ಲಾ ರಾಜ್ಯಗಳ ಭಾಷೆಗಳಲ್ಲೂ ಕೆಲಸ ಮಾಡಕ್ಕೆ ತಯಾರಿರುವಾಗ ಭಾರತಕ್ಕೆ ಯಾಕೆ ಹಿಂದಿ ಅನ್ನೋ ಒಂದೇ ಭಾಷೆ ಮೇಲೆ ಒಲವು? ಈ ಒಲವು ಪ್ರಜಾಪ್ರಭುತ್ವಕ್ಕೆ ಎಷ್ಟು ಹೊಂದುವಂಥದ್ದು? ಈ ಒಲವು ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರು ಸಾರ್ವಭೌಮರಾಗಿರಬೇಕೆಂಬ ಪ್ರತಿಯೊಬ್ಬರ ಸಹಜವಾದ ಆಶಯಕ್ಕೆ ಎಷ್ಟು ಪೂರಕ? ಕೇಂದ್ರ-ಸರ್ಕಾರದ ಕೆಲಸಗಳೆಲ್ಲ ಒಂದೇ ಭಾಷೇಲಿ ಆಗಬೇಕು ಅನ್ನೋ ಚಿಂತನೆಯಾದರೂ ಎಷ್ಟು ಸರಿ? ಇವತ್ತಿನ ದಿನ ತಂತ್ರಜ್ಞಾನದ ಬಳಕೆಯಿಂದ ಪ್ರತಿಯೊಂದು ಭಾಷೆಯಲ್ಲೂ ಆಡಳಿತ ಮಾಡುವುದು ಕಷ್ಟವೂ ಏನಿಲ್ಲ. ಮಾಡಕ್ಕೆ ಮನಸ್ಸಿರಬೇಕಷ್ಟೆ. ಏನ್ ಗುರು?

ಸರಿಯಾದ ರೀತಿಯಲ್ಲಿ ನೀವೇ ವಿರೋಧಿಸಬಹುದಿತ್ತಲ್ಲ ಕುಮಾರಣ್ಣ?

ಕೇಂದ್ರ ರೈಲ್ವೇ ಮಂತ್ರಿ ಲಾಲೂ ಪ್ರಸಾದ್ ಯಾದವ್ ಮೊನ್ನೆಮೊನ್ನೆ ಗೊತ್ತಿದ್ದೋ ಗೊತ್ತಿಲ್ಲದೇನೋ ಕನ್ನಡಿಗರ ವಿರುದ್ಧ ಜನಾಂಗೀಯ ನಿಂದನೆಯಂತಹಾ ಹಲ್ಕಾ ಕೆಲಸಕ್ಕೆ ಕೈ ಹಾಕಿದ್ದು ನಿಮಗೆ ಗೊತ್ತೇ ಇದೆ. ಅದರ ವಿರುದ್ಧ ಇಡೀ ಕರ್ನಾಟಕದಲ್ಲಿ ಪ್ರತಿಭಟನೆಗಳು ಆಗಿದ್ದೂ ಗೊತ್ತೇ ಇದೆ. ಆದ್ರೆ ಲಾಲೂ ಪ್ರಸಾದ್ ನಿಜವಾಗಲೂ ಹಂಗೆ ಅಂದೇ ಇಲ್ಲ ಅನ್ನೋದು ಎಚ್.ಡಿ.ಕುಮಾರಸ್ವಾಮಿಗಳ ಅಂಬೋಣ. ಹಂಗೆ ಅಂದಿಲ್ಲ ಅಂತ ಲಾಲೂ ಅಂದ್ರಂತೆ, ಇವ್ರು ನಂಬುದ್ರಂತೆ, ಅದನ್ನ ನಾವು ನಂಬಬೇಕಂತೆ! ಅರ್ಥವಾಯಿತು ಬಿಡಿ!

ಅಷ್ಟೇ ಅಲ್ಲ, "ರೈಲ್ವೇ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ, ಆದ್ರೆ ಅದರ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿದ ರೀತಿ ಸರಿಯಿಲ್ಲ, ಕನ್ನಡಿಗರಿಗೆ ರೈಲ್ವೆ ಕೆಲಸಗಳಲ್ಲಿ ಆದ್ಯತೆ ಸಿಗಬೇಕಾದರೆ ಕೇಂದ್ರದಲ್ಲಿ ಪಾಲಿಸಿ ಬದಲಾಗಬೇಕು" ಅಂತ ದೊಡ್ಡ ಮಾತು ಕೂಡ ಕುಮಾರಣ್ಣ ಆಡಿದಾರಲ್ಲ, ಔರಿಗೆ ಕೇಳಬೇಕಾದ ಕೆಲವು ಪ್ರಶ್ನೆಗಳಿವೆ.

ಕುಮಾರಣ್ಣ, ಒಸಿ ಕಿವಿ ಬುಟ್ ಕೇಳ್ಕಳಿ, ಉತ್ರ ಕೊಡಿ:
  1. ಅಲ್ಲ ಕುಮಾರಣ್ಣ, ನಿಮ್ಮ ಸರ್ಕಾರವೇ ಇದ್ದಾಗ ಕನ್ನಡಿಗರಿಗೆ ನ್ಯಾಯವಾಗಿ ಸೇರಬೇಕಾಗಿದ್ದ ಕಾವೇರಿ ನೀರ್ನ ಹಾಡಹಗಲಲ್ಲೇ ತಮಿಳ್ರು ಕಿತ್ಕೊಂಡ್ ಹೋದ್ರಲ್ಲ, ಆಗ ನೀವು "ಸರಿಯಾದ ರೀತಿ"ಯಲ್ಲೇ ಪ್ರತಿಭಟನೆ ಮಾಡಬಹುದಾಗಿತ್ತಲ್ಲ? ದಿಲ್ಲಿಗೆ ಹೋಗಿ ಬರೀ ಕಿತ್ತಳೇಹಣ್ಣು ಜೂಸ್ ಕುಡ್ಕೊಂಡು ಧರಣಿ ಮಾಡಬೋದಾಗಿತ್ತಲ್ಲ? ನೀರು ಕೊಡೋ ವರೆಗೂ ಕದ್ಲಕ್ಕಿಲ್ಲ ಅಂತ ಹಟ ಹಿಡೀಬೋದಿತ್ತಲ್ಲ? ಎಲ್ಲೀಗೆ ಹೋಗಿತ್ತು ನಿಮ್ಮ ಕನ್ನಡ ಪ್ರೇಮ ಆಗ?
  2. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಕ್ಕೆ ಬೇಕಾದ ಎಲ್ಲಾ ಅರ್ಹತೆಗಳಿದ್ದರೂ ನಿಮ್ಮ ಆಡಳಿತದಲ್ಲೇ ನಿಮಗೆ "ಸರಿಯಾದ ರೀತಿ"ಯಲ್ಲಿ ಏನೂ ಮಾಡಕ್ಕಾಗಲಿಲ್ಲವಲ್ಲ ಕುಮಾರಣ್ಣ? ಎಲ್ಲಿಗೆ ಹೋಗಿತ್ತು ನಿಮ್ಮ ಕನ್ನಡ ಪ್ರೇಮ ಆಗ?
  3. "ಸರಿಯಾದ ರೀತಿ"ಯಲ್ಲೇ ಪ್ರತಿಭಟನೆ ಮಾಡೋದು ಸರಿ ಅನ್ನೋದಾದರೆ ರೈಲ್ವೇ ನೇಮಕಾತಿಯಲ್ಲಾದ ಅನ್ಯಾಯದ ವಿರುದ್ಧ ನೀವು ತುಟಿಕ್-ಪಿಟಿಕ್ ಅಂತ "ಸರಿಯಾದ ರೀತಿ"ಯಲ್ಲೂ ಅನ್ನಲಿಲ್ಲವಲ್ಲ ಯಾಕೆ? ಸರ್ಕಾರ ಬಿದ್ದ ತಕ್ಷಣ ನಿಮ್ಮ ಪಕ್ಷಕ್ಕೆ ಇದ್ದ ಕನ್ನಡ ಪ್ರೇಮವೂ ಬಿದ್ದುಹೋಯಿತೋ ಹೇಗೆ? ಅಥವಾ ಮೊದಲಿಂದಲೂ ಇರಲೇ ಇಲ್ಲವೋ ಹೇಗೆ?
ಅಲ್ಲ ಕುಮಾರಣ್ಣ, ಕನ್ನಡಪರ ಸಂಘಟನೆಗಳು ಹಂಗೆ ಮಾಡಬಾರದು, ಹಿಂಗ್ ಮಾಡಬಾರದು ಅನ್ನೋ ನೀವು ಮಾಡಬೇಕಾಗಿದ್ನ ಮಾಡಿದೀರಾ? ನಿಮ್ಮಂತೋರು "ಸರಿಯಾದ ರೀತಿ"ಯಲ್ಲಿ ಮಾಡಬೇಕಾಗಿರೋದನ್ನ ಮಾಡಿದ್ರೆ ಕನ್ನಡದ ಹೋರಾಟಾಗಾರರು ಪೋಲೀಸರ ಕೈಯಿಂದ ಸಾಯೋಬೀಳ ಹೊಡಿಸಿಕೊಂಡು ಕೇಸ್ಮೇಲೆ ಕೇಸ್ ಹಾಕಿಸಿಕೊಂಡು ಕನ್ನಡಕ್ಕೆ ಹೋರಾಡೋ ಸಂಗತೀನೇ ಇರ್ತಾ ಇರಲಿಲ್ಲ. ಅದೇನೋ ಹೇಳ್ತಾರಲ್ಲ - ಉಳ್ಳವರಾದ ನೀವು ಶಿವಾಲಯವ ಮಾಡದೆ ತಮ್ಮ ದೇಹವೇ ದೇಗುಲವಾದ ಹೋರಾಟಗಾರರು ಮಾಡಿದ್ದು ತಪ್ಪು ಅಂತೀರಲ್ಲ - ಇದನ್ನು ಕೇಳಿ ಆ ಕೂಡಲಸಂಗಮದೇವ ಮೆಚ್ತಾನಾ ಕುಮಾರಣ್ಣ? ಏನ್ ಗುರು?

ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!

ಅಂತರ್ಜಾಲದಲ್ಲಿ ಸಕ್ಕತ್ ಪ್ರಸಿದ್ಧಿ ಹೊಂದಿರುವ ಗೂಗಲ್ ಸಂಸ್ಥೆಯ ಬ್ಲಾಗರ್ ಮತ್ತು ಆರ್ಕುಟ್ ತಾಣಗಳು ಇತ್ತೀಚೆಗೆ ರೋಮನ್ ನಿಂದ ಕನ್ನಡಕ್ಕೆ ಲಿಪಿ-ಬದಲಾವಣೆ ಮಾಡೋ ತಂತ್ರಾಂಶವನ್ನ ಜೋಡಿಸಿಕೊಂಡಿವೆ. ಈಗ ಇವೆರಡು ಜನಪ್ರಿಯ ತಾಣಗಳಲ್ಲಿ "ಬರಹ" ಮುಂತಾದ ಯಾವುದೇ ವಿಶೇಷ ತಂತ್ರಾಂಶವಿಲ್ಲದೆ ಲಿಪಿ-ಬದಲಾವಣೆ ಸಾಧ್ಯವಾಗಿದೆ. ಪ್ರಪಂಚದಲ್ಲಿ ಬೆರಳೆಣಿಕೆಯಷ್ಟೇ ಭಾಷೆಗಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಕನ್ನಡವೂ ಈ ಪಟ್ಟಿಯಲ್ಲಿರೋದು ಖುಶಿ ತರುವ ಸುದ್ದಿ ಗುರು!

ಗೂಗಲ್ ಒಂದು ಬಹು-ಬಿಲಿಯನ್ ಡಾಲರ್ ವಹಿವಾಟಿರೋ ಬಹುರಾಷ್ಟ್ರೀಯ ಸಂಸ್ಥೆ. ಇದರ ಕಚೇರಿಗಳು ಬರೀ ಬೆಂಗ್ಳೂರಲ್ ಮಾತ್ರ ಅಲ್ಲ, ಅಮೇರಿಕ-ಗಿಮೇರಿಕ ಯೂರೋಪ್-ಗೀರೋಪಲ್ಲೆಲ್ಲಾ ಎರ್ರಾಬಿರ್ರಿ ಚೆಲ್ಲಾಡಿದಹಾಗಿವೆ. ಇವ್ರಿಗೇನು ತೀಟೆ ಕನ್ನಡದ ತಂತ್ರಾಂಶ ಮಾಡಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ಇಷ್ಟೇ: ಕನ್ನಡ ಅಂತರ್ಜಾಲದಲ್ಲಿ ಸಕ್ಕತ್ ಬಳಕೆ ಆಗ್ತಿದೆ. ಕನ್ನಡದ ಅಂತರ್ಜಾಲ ತಾಣಗಳ್ನ ಮಾಡೋರು, ಬ್ಲಾಗುಜೀವಿಗಳು, ಆರ್ಕುಟ್ಟೋರು - ಇವ್ರೆಲ್ಲ ಎಷ್ಟ್ ಜನ ಇದಾರೆ ಅಂದ್ರೆ ಗೂಗಲ್ಗೆ ಇಲ್ಲಿ ಒಂದು ಒಳ್ಳೇ ಲಾಭದಾಯಕ ಮಾರುಕಟ್ಟೆ ಕಾಣಿಸಿದೆ, ಅಷ್ಟೆ. ಯಾವ ಮಣ್ಣು ಕನ್ನಡದ "ಸೇವೆ" ಗೋಸ್ಕರಾನೂ ಇವ್ರು ಈ ಕೆಲ್ಸ ಮಾಡಿಲ್ಲ, ಮಾಡಬೇಕಾಗೂ ಇಲ್ಲ. ಬರೀ ಸೇವೆ ಮಾಡುಸ್ಕೊಂಡು ಒಂದು ಮೂಲೇಲಿ ಬಿದ್ದಿರಕ್ಕೆ ಕನ್ನಡ ಏನು ಒಂದು ಮುದಿ ಹೆಂಗ್ಸಲ್ಲ ಗುರು, ಹದಿಹರೆಯದ ಚೆಲುವೆ! ಇವಳನ್ನ ಮೆಚ್ಚಿಸಕ್ಕೆ ಬ್ಲಾಗರ್ ಮತ್ತು ಆರ್ಕುಟ್ ಲೈನ್ ಹೊಡೀತಿವೆ. ಏನ್ ಗುರು?

ಅಂದಹಾಗೆ...ಅದೇನೋ ಹೇಳ್ತಾರಲ್ಲ, ಅಮೇರಿಕದೋರಿಗೂ ಅರ್ಥವಾಗಿದೆ ಈಗ ಕನ್ನಡದ ಮಾರುಕಟ್ಟೆ ಎಷ್ಟಿದೆ ಅಂತ. ಶಂಕದಿಂದ ಬಂದೈತಲ್ಲ ತೀರ್ಥ, ಇನ್ನು ನಾವೂ ನಮ್ಮ ಮಾರುಕಟ್ಟೆ ಲಾಭ ಪಡ್ಕೋಬೋದು, ರೈಟ್!

ಎಂಕನ ಕನಸಲ್ಲಿ ನಾಣಿ!

ಇತ್ತೀಚೆಗೆ ಕನ್ನಡಿಗ ನಾರಾಯಣ ಮೂರ್ತಿಗಳಿಗೆ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಾರಾಯಣ ಮೂರ್ತಿಗಳ ಉದ್ಯಮ ಕ್ಷೇತ್ರದಲ್ಲಿನ ಅಪಾರವಾದ ಸಾಧನೆಗೆ ಸಂದ ಗೌರವವಾಗಿದೆ.
ಸಾಧಾರಣ ಶಾಲಾಮಾಸ್ತರರ ಮಗನಾಗಿ ಮಧ್ಯಮ ವರ್ಗದ ಎಲ್ಲ ಬವಣೆಗಳನ್ನು ದಾಟಿ ತಮ್ಮ ಉದ್ಯಮಶೀಲತೆಯಿಂದಾಗಿ ವಿಶ್ವದೆಲ್ಲೆಡೆ ಮಾನ್ಯತೆ ಪಡೆದ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ ಇವರ ಸಾಧನೆ ಎಲ್ಲ ಕನ್ನಡಿಗರಿಗೆ ಪ್ರೇರಣಾದಾಯಕ.
ಈ ಪ್ರಶಸ್ತಿ ಶ್ರೀಯುತರಿಗೆ ದೊರೆತಿರುವುದು ಅವರ ಉದ್ಯಮಶೀಲತೆ ಮತ್ತು ಜಾಗತೀಕರಣದ ಉಪಯೋಗ ಪಡೆದುಕೊಂಡು ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟು ಮಾಡಿದ ಕ್ರಾಂತಿಗಾಗಿ.

ಇವೆಲ್ಲದರ ನಡುವೆ ನಮ್ಮ ಎಂಕ ಕಣ್ಮುಚ್ಕೊಂಡು ಅದೇನೇನೇನೋ ಕನಸ್ ಕಾಣ್ತಾವ್ನೆ. ಔನ್ ಕನಸು ಅಂಥಿಂಥದ್ದಲ್ಲ, ಇಪ್ಪತ್ತು ವರ್ಷ ಮುಂದಿನ್ದು. ಎಂಕನ್ ಕನಸಿಗೆ ಒಂದು ಬಾಲ್ಕನಿ ಟಿಕೆಟ್ ತಗಂಡ್ ಒಳಗ್ ಓಗ್ಮ ಬನ್ನಿ!

ಅಬ್ಬಬ್ಬಬ್ಬಾ ಏನ್ ಗುರು ಇದು? ಕನ್ನಡದ ಶಾಲೆ ಇಂಗೆಲ್ಲಾ ಇರ್ತುದಾ? ಅದೇನು ಎಕರೆಗಟ್ಟಲೆ ಮೈದಾನ, ತೋಟ, ಆಟದ ಮೈದಾನ, ಲಾನು... ಎಷ್ಟು ಸಖತ್ತಾಗ್ ಐತಲ್ಲಪ್ಪೋ ನಮ್ ಐಕ್ಳು ಹಾಕಿರೋ ಯೂನಿಫಾರ್ಮು? ಆ ಪ್ರೊಜೆಕ್ಟರ್ ಏನು? ಆ ಮಕ್ಳು ಬಳುಸ್ತಿರೋ ಸೌಕರ್ಯಗಳೇನು? ಇದ್ಯಾವ ಇಂಟರ್ ನ್ಯಾಸನಲ್ ಶಾಲೆಗೂ ಕಮ್ಮಿ ಇಲ್ದಂಗ್ ಐತಲ್ಲಪ್ಪೋ?
ಶಿಕ್ಷಣ ಕ್ರಾಂತಿ!
ಇಪ್ಪತ್ತು ವರ್ಷಗಳ ಹಿಂದೆ ಎಕ್ಕುಟ್ ಹೋಗಿದ್ದ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಗೆ ದೊಡ್ ತಿರುವು ಕೊಟ್ರು ನಮ್ ಮೂರ್ತಿಗಳು. ಕನ್ನಡ ಶಾಲೆಗಳು, ಮಾಧ್ಯಮ ಇವುಗಳ ಸ್ವರೂಪವನ್ನು ಜಿಲ್ಲೆಗೊಂದು ಮಾದರಿ ಶಾಲೆಗಳನ್ನು ಕಟ್ಟೋ ಮೂಲಕ ಬುಡಸಮೇತ ಬದ್ಲಾಯ್ಸುದ್ರು. ಕನ್ನಡದ ಮಕ್ಕಳ ಕಲಿಕೇನ ಸರಳ ಮಾಡಿ, ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಸಾಲಿನಲ್ಲಿ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೇನ ನಿಲ್ಸಿ ತೋರುಸ್ಕೊಟ್ರು. ಅಂಥಾ ನಾರಾಯಣ ಮೂರ್ತಿಗಳು ಕನ್ನಡದೋರು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಈ ಎಲ್ಲ ಜ್ಞಾನ ಸಂಪತ್ತು ಕನ್ನಡದಲ್ಲಿ ಇರಬೇಕಾದ ಅಗತ್ಯ ಅರ್ಥಮಾಡ್ಕೊಂಡು, ಕನ್ನಡ ತಂತ್ರಜ್ಞಾನ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಮೆಕಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ನ್ಯಾನೋ, ಬಯೋ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಪ್ರಪಂಚದ ಅತ್ಯುನ್ನತ ಅರಿವನ್ನು ಕನ್ನಡಕ್ಕೆ ತರುವ ಮೂಲಕ ಹೊಸ ಹೊಸ ಅವಿಷ್ಕಾರಗಳಿಗೆ ಕಾರಣವಾಗುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈಗಾಗ್ಲೆ ಇದುಕ್ಕೆ ಬೇಜಾನ್ ಪೇಟೆಂಟ್ಗಳು ಸಿಕ್ಕವೆ ಗುರು!
ಉದ್ದಿಮೆಗಾರಿಕೆ!
ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ಹೆಚ್ಚಿಸಲು ಮಾರ್ಗದರ್ಶನ/ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ಕಟ್ಟಿದಾರೆ. ಇದ್ರಾಗೆ ಯಶಸ್ವಿ ಉದ್ದಿಮೆಗಾರಿಕೆಯ ಬಗ್ಗೆ ತರಬೇತಿ ಕೊಡೋದ್ರು ಜೊತೆಗೆ ಕನ್ನಡ ನಾಡಿನ ಅನೇಕ ವಿಶ್ವವಿದ್ಯಾಲಯಗಳಲ್ಲೂ ಉದ್ದಿಮೆಗಾರಿಕೆ ಹೆಚ್ಚಿಸಲು ಅಗತ್ಯವಿರುವ ಕೋರ್ಸುಗಳನ್ನು ಆರಂಭಿಸಲು ಉತ್ತೇಜಿಸಲಾಗಿದೆ. ಶ್ರೀಯುತರು ಇಂತಹ ಕಡೆ ಅತಿಥಿ ಉಪನ್ಯಾಸಕರಾಗಿ ಮುನ್ನಡೆಸ್ತಿರೋದು ವಿಶೇಷವಾಗಿದೆ. ಇವರು ಇಪ್ಪತ್ ವರ್ಷದಿಂದ ಹೊಸ ಉದ್ದಿಮೆಗಾರರನ್ನು ಪ್ರೋತ್ಸಾಹಿಸ್ತಾ, ನಾಡಿಗೆ ಬಂಡವಾಳ ಹರಿದು ಬರಕ್ಕೆ ಕನ್ನಡಿಗರ ಬ್ರಾಂಡ್ ಅಂಬಾಸಿಡರ್ ಆಗಿಯೂ ಕೆಲಸ ಮಾಡಿ ಗೆದ್ದಿದ್ದಾರೆ. ಇದೀಗ ಉದ್ದಿಮೆಗಾರಿಕೆಗೆ ದಾರಿ ತೋರ್ಸಕ್ಕೆ ಇವರೇ ಹುಟ್ಟು ಹಾಕಿದ ಏಜೆನ್ಸಿಯೊಂದು ಕಾರ್ಯನಿರ್ವಹಿಸುತ್ತಿದ್ದು ಇಡೀ ಭಾರತ ಈ ಮಾದರಿಯನ್ನು ಅನುಸರಿಸತೊಡಗಿದೆ.
ಅಸ್ತು ದೇವತೆಗಳಿರ್ತಾರಂತೆ!
ಎಂಕನ್ನ ಸುಮ್ನೆ ಎಬ್ಬಿಸಿ, ಲೇ ಕನಸು ಕಾಣ್ಬೇಡ ಅನ್ನಬ್ಯಾಡ್ರಿ. ಒಳ್ಳೇ ಕನಸುಗಳು ನನಸಾಗಲಿ ಅನ್ನೋ ಅಸ್ತು ದೇವತೆಗಳು ಇರ್ತಾರಂತೆ ಗುರು!

ಲಾಲೂ ಮಾತು ಜನಾಂಗೀಯ ನಿಂದನೆ ಅಲ್ದೆ ಮತ್ತೇನು?

ನಿನ್ನೆ ತುಮಕೂರಿನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸನ್ಮಾನ್ಯ ಗೌರವಾನ್ವಿತ ಶ್ರೀ ಶ್ರೀ ಶ್ರೀ ಲಾಲೂ ಪ್ರಸಾದ್ ಯಾದವ್ ಅವರು ಕನ್ನಡಿಗರನ್ನು "ಕಚಡಾ ಜನ (ಡರ್ಟಿ ಪೀಪಲ್)" ಅಂದ ಸುದ್ದಿ ಕೇಳಿ ಕನ್ನಡಿಗರ ಜನ್ಮ ಪಾವನವಾಯಿತು ಗುರು. ಜನಾಂಗೀಯ ನಿಂದನೆಗೆ ಇದಕ್ಕಿಂತಾ ಹೆಚ್ಚಿನ ಬೈಗುಳ ಬೇಕಾ ಗುರು? ಕನ್ನಡದವರು ಅಂದ್ರೆ ಏನಂದ್ರೂ ನಡ್ಯತ್ತೆ ಅಂದ್ಕೊಂಡ್ರೋ ಏನೋ? ಅದಕ್ಕೆ ಕನ್ನಡದ ನೆಲದಲ್ಲೇ ನಿಂತು ಇಂಥಾ ಜನಾಂಗೀಯ ನಿಂದನೆಗೆ ಮುಂದಾದ್ರೂ ಗುರು.

ಅಧಿಕಾರದ ಮದದಿಂದ ರಾಷ್ಟ್ರ್ರೀಯ ಜನತಾ ದಳ ಎನ್ನುವ ಬಿಹಾರದ ಪ್ರಾದೇಶಿಕ ಪಕ್ಷದ ನಾಯಕ ಮತ್ತು ಕೇಂದ್ರ ರೇಲ್ವೇ ಸಚಿವರಾಗಿರುವ ಲಾಲೂ ಪ್ರಸಾದ್ ಯಾದವ್ ಅವ್ರು ಮಾಡಿದ ಈ ಜನಾಂಗೀಯ ನಿಂದನೆಗೆ ಕರ್ನಾಟಕದ ಮಹಾನ್ ರಾಜಕೀಯ ನಾಯಕರುಗಳು ಇನ್ನೂ ಪ್ರತಿಕ್ರಿಯೆ ನೀಡದಿರುವುದು ಈ ಜನಗಳ ಹೇಡಿತನವನ್ನು ಜಗಜ್ಜಾಹೀರು ಮಾಡಿದೆ. ಕೇವಲ 24 ಸೀಟು ಗೆದ್ದು ಕಾಂಗ್ರೆಸ್ ಪಕ್ಷದ ಮುಂದಾಳ್ತನದ ಸರ್ಕಾರದಲ್ಲಿ ಮಂತ್ರಿ ಪದವಿ ಗಿಟ್ಟಿಸಿ, ಸರ್ಕಾರದ ಜುಟ್ಟು ಹಿಡ್ದು ಆಡುಸ್ತಿರೋ ಇವರ ಉದ್ಧಟತನಕ್ಕೆ ಕರ್ನಾಟಕದಿಂದ ಆರಿಸಿ ಬಂದಿರೋ ಸಂಸದರೆಲ್ಲಾ ಒಟ್ಟು ಸೇರಿ ಛಳಿ ಬಿಡ್ಸಕ್ ಆಗಲ್ವಾ? ನಾಳೆ ಬೇಕಾದ್ರೆ ಅವ್ರು ಅಂದಿದ್ದು ಆ ಅರ್ಥದಲ್ಲಿ ಅಲ್ಲ ಅಂತನ್ನೋ ಸಮರ್ಥಕೋಪಖ್ಯಾನಕ್ಕೆ ಇವ್ರುಗಳೇ ಮುಂದಾದ್ರೂ ಆದ್ರೆ. ಈ ಅಪಮಾನದ, ಅವಹೇಳನೆಯ ವಿರುದ್ಧ ದನಿ ಎತ್ತಿ ಅಂತ ಕನ್ನಡ ಪರಸಂಘಟನೆಗಳು ನಮ್ಮ ಸಂಸದರನ್ನು ಘೇರಾವ್ ಮಾಡಿ ಅವರ ವಿರುದ್ಧವೂ ಹೋರಾಟ ಮಾಡ್ಬೇಕೇನೋ?

ಕನ್ನಡದೋರಿಗೆ ಪರೀಕ್ಷೆಗೆ ವಿನಾಯ್ತಿ ಕೊಡೀ ಅಂತ ಯಾರಂದ್ರು?

" ಕನ್ನಡದವರಿಗೆ ಪರೀಕ್ಷೆಗೆ ವಿನಾಯ್ತಿ ಕೊಟ್ಟು ಕೆಲಸ ಕೊಡು ಅಂತಾ ಕೇಳ್ತಿಲ್ಲಾ, ಇಲ್ಲಿರೋ ಅಭ್ಯರ್ಥಿಗಳಲ್ಲಿ ಯೋಗ್ಯರನ್ನು ಆಯ್ಕೆ ಮಾಡ್ಕೊ, ಕರ್ನಾಟಕ ಏನು ನಿರಾಶ್ರಿತರಿಗೆ ಅಂತ ಇರೋ ಕ್ಯಾಂಪ್ ಅಲ್ಲಾ, ಇಲ್ಲಿರೋ ಜನರಿಗೆ ಮೊದಲು ಕೆಲಸ ಕೊಟ್ರೆ ನೀನೂ ನಿನ್ನ ರೈಲ್ವೇನೂ ಇಲ್ಲಿರೋಕೆ ಲಾಯಕ್ಕು. ಈಗ ಖಾಲಿ ಇರೋ ಹುದ್ದೆಗಳಿಗೆ ಕನ್ನಡಿಗರಲ್ಲಿ ಇಲ್ಲದ ಯಾವ ಘನಂದಾರಿ ಯೋಗ್ಯತೆ ಬಿಹಾರಿಗಳಲ್ಲಿ ಕಂಡುಕೊಂಡು ಅವರ್ನ ಇಲ್ಲಿಗೆ ಬಿಟ್ಟಿ ರೈಲಲ್ಲಿ, ಪುಗಸಟ್ಟೆ ಊಟ ಕೊಟ್ಟು ರವಾನೆ ಮಾಡ್ತಿದೀಯಾ? " ಅಂತ ಕೇಳೋ ಮೀಟ್ರು ಇವ್ರಲ್ಲಿ ಯಾರ್ಗಾದ್ರೂ ಇದ್ಯಾ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ.

ಇಲ್ಲೀ ನಾಯಕರ ಸೂತ್ರದ ದಾರ ದಿಲ್ಲೀಲಿದೆ ಅಂತ ಗೊತ್ತು.

ಇವ್ರುಗಳ ಸೂತ್ರದ ದಾರ ಹೇಗೂ ದಿಲ್ಲೀಲಿರೋ ನಮ್ ಮ್ಯಾಡಮ್ ಕೈಲಿ, ಅರ್ಧ ನಿದ್ದೇಲಿರೋ ಮಾಜಿ ಪ್ರಧಾನಿ ಕೈಲಿ, ಪ್ರಾದೇಶಿಕತಾವಾದ ರಾಷ್ಟ್ರೀಯತೆಗೆ ಮಾರಕ ಅನ್ನೋ ರಾಷ್ಟ್ರೀಯವಾದಿಗಳ ಕೈಲಿದೆ. ಇವ್ರು ಏನಿದ್ರೂ "ತೇನವಿನಾ ತೃಣಮಪಿ ನ ಚಲತೆ" ಅಂತ ಭಜನೆ ಮಾಡ್ಕೊಂಡ್ ದೆಲ್ಲಿ ಕಡೆ ನೋಡ್ಕಂಡ್ ಇರ್ತಾರೆ ಅಂತ ಲಾಲೂಗೂ ಗ್ಯಾರಂಟಿ. ಅದಿಕ್ಕೆ ನಾಲ್ಗೆ ಎಂಗ್ ಬೇಕಾದ್ರೂ ಆಡ್ತದೆ.

ಅಲ್ಲಾ ಒಬ್ಬ ಮನುಷ್ಯನ್ನ ಮಂಗ ಅಂದ ಅನ್ನೋದೇ ಜನಾಂಗೀಯ ನಿಂದನೆ ಆಗೋದಾದ್ರೆ , ಈಗ ಲಾಲೂ ಕನ್ನಡಿಗರನ್ನು ಡರ್ಟಿ ಪೀಪಲ್ ಅಂದಿರೋದು ಏನು ಗುರು? ಇದಕ್ಕೆ ತಕ್ಕ ಶಿಕ್ಷೆ ಕೊಡ್ಸಕ್ ನಮ್ಮ ಸಂಸದರು ಮುಂದಾಗ್ತಾರೋ ಅಥ್ವಾ ಇವ್ರುಗಳಿಗೆ ಜನರೇ ಶಿಕ್ಷೆ ಕೊಡ್ಬೇಕೋ ನೀನೆ ಹೇಳು ಗುರು. ಹಿಂದೆ ಆಫ್ರಿಕಾದಲ್ಲಿ ಬ್ರಿಟೀಷರು ಆಫ್ರಿಕನ್ನರ ಬಗ್ಗೆ ಹಾಕ್ತಿದ್ದಂಗೆ ನಾಳೆ ನಮ್ಮೂರಲ್ಲೇ "ಕನ್ನಡಿಗರಿಗೂ, ನಾಯಿಗಳ್ಗೂ ಪ್ರವೇಶವಿಲ್ಲ"ಅಂತ ಯಾರಾನ ಬೋರ್ಡ್ ಬರೆಸಿ ಹಾಕುದ್ರೂ ನಮ್ ಸಂಸದರು ಬಾಯಿ ಬಿಡ್ಲಾರ್ರು ಅನ್ಸುತ್ತೆ. ಅಲ್ವಾ ಗುರು?

ಹೊಸ ವಿಮಾನ ನಿಲ್ದಾಣದಲ್ಲಿ ಕನ್ನಡದ ಗತಿ?

ಬೆಂಗಳೂರಿಗೆ ಒಂದು ಹೊಸ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬರ್ತಿದೆ ಅಂತ ನಿಮಗೆ ಗೊತ್ತಿಲ್ಲದೇ ಇರ್ಲಿಕ್ಕಿಲ್ಲ. ಇದಕ್ಕೆ "ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ" (ಇಂಗ್ಲೀಷಿನಲ್ಲಿ Bangalore ಬದ್ಲು "Bengaluru International Airport") ಅಂತ ಕೊನೆಗೂ ಹೆಸ್ರಿಡ್ತಿದಾರೆ ಅನ್ನೋದು ಒಳ್ಳೇ ಬೆಳ್ವಣಿಗೆ ಆದ್ರೂ ಈ ನಿಲ್ದಾಣದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟತ್ವೆ.

ಈ ನಿಲ್ದಾಣದಲ್ಲಿ ಕನ್ನಡಕ್ಕೆ ಯಾವ ಸ್ಥಾನ ಇರುತ್ತೆ? ಕನ್ನಡ ಇದರಲ್ಲಿ ಕಾಣುತ್ತೋ ಇಲ್ಲವೋ? ಸೂಚನೆಗಳು, ಅರ್ಜಿಗಳು - ಮುಂತಾದವುಗಳಲ್ಲಿ ಕನ್ನಡ ಇರುತ್ತೋ ಇರೋದಿಲ್ವೋ? ಇದ್ದರೆ ಕಣ್ಣಿಗೆ ಕಾಣೋಹಂಗ್ ಇರತ್ವೋ ಕಾಟಾಚಾರಕ್ಕೆ ಯಾರಿಗೂ ಕಾಣಿಸದೇ ಇರೋಷ್ಟು ಚಿಕ್ಕದಾಗಿ ಕನ್ನಡದಲ್ಲೂ ಇರತ್ತೋ? ನಿಲ್ದಾಣದಲ್ಲಿ ಕೇಳಿಬರೋ ಸಂಗೀತ-ಗಿಂಗೀತ ಕನ್ನಡದ್ದಾಗಿರತ್ತೋ ಇಲ್ಲವೋ? ಒಳಗಡೆ ಪ್ರಯಾಣಿಕನಿಗೆ ಕನ್ನಡದಲ್ಲಿ ಸೇವೆ ಸಿಗತ್ತೋ ಇಲ್ಲಾ ಬರೀ ಇಂಗ್ಲೀಷು ಮತ್ತೆ ನಾವು-ನೀವೆಲ್ಲ ಭಾರತೀಯರು ಅನ್ನಿಸಿಕೊಳಕ್ಕೆ ಕಲೀಬೇಕಾಗಿರೋ ಹಿಂದೀನೋ?

ಈ ನಿಲ್ದಾಣದಲ್ಲಿ ಕನ್ನಡಿಗನಿಗೆ ಯಾವ ಸ್ಥಾನ ಇರುತ್ತೆ? ಈ ವಿಮಾನ ನಿಲ್ದಾಣದಲ್ಲಿ ಸಧ್ಯಕ್ಕೆ ವರ್ಷಕ್ಕೆ ಅಂದಾಜು 1 ರಿಂದ 1.2 ಕೋಟಿ ವಿಮಾನ ಪ್ರಯಾಣಿಕರು ಬರ್ತಾರಂತೆ. ಪ್ರತಿ 10 ಲಕ್ಷ ಪ್ರಯಾಣಿಕರ್ಗೆ ಒಂದು ಸಾವಿರ ಹುದ್ದೆಗಳ ಲೆಕ್ಕದಂತೆ ಸುಮಾರು 12 ಸಾವಿರ ಹುದ್ದೆಗಳು ಈ ಹೊಸ ನಿಲ್ದಾಣದಲ್ಲಿ ಹುಟ್ಟೋದ್ರಲ್ಲಿವೆ. ಇವುಗಳಲ್ಲಿ ಎಷ್ಟು ಕನ್ನಡಿಗರಿಗೆ ಸಿಗುತ್ವೆ? ಕಸ ಗುಡ್ಸೋರಿಂದ ಹಿಡಿದು ಪಾಸ್ಪೋರ್ಟ್ ತಪಾಸಣೆ ಮಾಡೋರು, ಮೇಲ್ವಿಚಾರಕರು ಮುಂತಾದೋರ್ನೆಲ್ಲ ಎಲ್ಲಿಂದ ಕರ್ಕೊಂಬರ್ತಾರೆ? ತಮಿಳ್ನಾಡಿಂದ್ಲೋ ಕೇರಳದಿಂದ್ಲೋ ಬಿಹಾರಿಂದ್ಲೋ ಉತ್ತರಪ್ರದೇಶದಿಂದ್ಲೋ ಇನ್ನೆಲ್ಲಿಂದ?

ಇನ್ನು ಈ ನಿಲ್ದಾಣದಲ್ಲಿ ಕರ್ನಾಟಕಕ್ಕೆ ಯಾವ ಸ್ಥಾನ ಇರುತ್ತೆ? ಕರ್ನಾಟಕ ಅನ್ನೋ ನಾಡಿಗೆ ಬಂದು ಇಳ್ದಿದೀರಿ, ಇಲ್ಲಿ ಇರೋದು ಮೈಸೂರು ಅರಮನೆ, ಹಂಪೆ ವಿರೂಪಾಕ್ಷಸ್ವಾಮಿ ದೇವಾಲಯ ಹೊರತು ಹತ್ರದಲ್ಲಿ ಎಲ್ಲೂ ತಾಜ್ ಮಹಲ್ ಇಲ್ಲ ಅಂತ ಬುದ್ಧಿ ಹೇಳೋರು ಯಾರಾದ್ರೂ ಇರ್ತಾರಾ ಇಲ್ಲಿ? ಇಲ್ಲೀ ಸಂಸ್ಕೃತಿಯ ತುಣುಕುಗಳು ಕಾಣ್ಸತ್ವೋ ಇಲ್ಲಾ ರಾಜಾಸ್ಥಾನ್ ಗೀಜಾಸ್ಥಾನ್ ಸಂಸ್ಕೃತಿ ತಂದು ಇಲ್ಲಿ ತುಂಬ್ತಾರೋ?

ಸಾಕಾ ಪ್ರಶ್ನೆಗಳು? ಇಲ್ಲಿ ನಾವು ಕೊಟ್ಟಿರೋದು ಶಾಸ್ತ್ರಕ್ಕೆ ಕೆಲವು ಪ್ರಶ್ನೆಗಳ್ನ ಮಾತ್ರ. ಕೇಳ್ಬೇಕಾಗಿರೋವು ಇನ್ನೂ ಅವೆ. ಈ ಪ್ರಶ್ನೆಗಳ್ನ ಕನ್ನಡಿಗರೆಲ್ಲ ಬೀದೀಗ್ ಇಳ್ದು ಕೇಳ್ಬೇಕು. ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಮೋಸ ಆದ್ರೆ ಸುಮ್ನಿರಕ್ಕಿಲ್ಲ ಅಂತ ಪಣ ತೊಡ್ಬೇಕು. ಆಗ್ಲೇ ಏನಾದ್ರೂ ನಾವು, ನಮ್ಮ ನುಡಿ, ನಮ್ಮ ನಾಡು ಅನ್ನೋದು ಈ ವಿಮಾನ ನಿಲ್ದಾಣದಲ್ಲಿ ಜೀವಂತವಾಗಿ ಉಳಿಯೋದು. ಇಲ್ದೇ ಹೋದ್ರೆ ಮಟಾಷ್ ಗುರು!

ಮಹಿಳಾ ವಿವಿಗೆ ಒಬ್ಬ ಕನ್ನಡತಿ ಸಿಗಂಗಿಲ್ಲೇನು?

ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಗೆ ರಾಜ್ಯಪಾಲ ಠಾಕೂರ್ ಸಾಹೇಬ್ರು ಆಂಧ್ರಪ್ರದೇಶದ ವಿಧಾನ ಪರಿಷತ್ ಸದಸ್ಯೆಯೊಬ್ರನ್ನ ನೇಮಕ ಮಾಡಿ ಆದೇಶ ಹೊರುಡ್ಸಿ, ಈಗ ಕನ್ನಡ ಸಂಘಟನೆಗಳು ತೊಡಿ ತಟ್ಟಿ ಹೋರಾಟಕ್ ನಿಂತ್ ಮ್ಯಾಲ ನೇಮಕಾತಿ ರದ್ದು ಮಾಡ್ಯಾರಿ ಸರಾ.. ಕರ್ನಾಟಕದಾಗ ದಿಲ್ಲಿ ಮಂದಿ ನಡ್ಸಾಕ್ ಹತ್ತಿರೂ ದರ್ಬಾರದಾಗಿನ ಈ ರಂಗಾದ ಕಥಿ ಅಂತೂ ಇಂತೂ ಸುಖಾಂತ ಕಾಣ್ತಂತ ಕನ್ನಡ ಮಂದಿ ನಿಟ್ಟುಸ್ರು ಬಿಟ್ಟಾರ. ಹಾಂ, ನಮ್ ರಾಜ್ಯಪಾಲರೇನು ಸುಖಾ ಸುಮ್ಮನೆ ಈ ಆದೇಶಾನ ಹೊಳ್ ತೊಗೋಳಿಲ್ರೀ. ಇಡೀ ಕರ್ನಾಟಕದ ಉದ್ದಗಲಕ್ಕೆ ಕನ್ನಡಪರ ಸಂಘಟನೆಗಳು ಭಾರೀ ಪ್ರತಿಭಟನೆ ಮಾಡಿದ್ದರಿಂದ ಇದು ಹೀಂಗಾತ್ರಿ.

ರಾಜ್ಯಪಾಲರು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆಯಾಗಿ ಕರ್ನಾಟಕದಾಗ ಅಂಥಾ ಯೋಗ್ಯ ಹೆಣ್ಣುಮಗಳು ಇಲ್ಲ ಅಂತಾ ಸಾಬೀತ್ ಮಾಡ್ದೆ ಹೊರಗಿಂದ ತಜ್ಞರಿದಾರ ಅಂತ ಕರ್ಕೊಂಬರೋ ಆದೇಶಾ ಹೊರಡ್ಸಿದ್ದೇ ತಡ ಕನ್ನಡದ ಮಂದಿ ಹೊಯ್ಕೊಳಕ್ ಚಾಲೂ ಮಾಡುದ್ರುರೀ. ಅಲ್ರಿ, ನಮ್ಮ ಇಡೀ ಕರ್ನಾಟಕದಾಗ ರಾಜ್ಯಪಾಲರಿಗೆ ರಾಜ್ಯದ ಮಹಿಳಾ ವಿಶ್ವವಿದ್ಯಾಲಯಕ್ಕ ಬೇಕಾದ ಅರ್ಹತಿ, ಪ್ರತಿಭೆ ಇರುವಂತ ಒಬ್ಬಾಕಿ ಹೆಣ್ಣು ಮಗಳು ಸಿಗಂಗಿಲ್ಲ ಅಂದ್ರ ಇದಕಿಂತ ದೊಡ್ಡ ಕಾಮೆಡಿ ಏನ್ ಐತ್ರಿ?

ನಮ್ಮಲ್ಲೇ ಪ್ರತಿಭಾನ್ವಿತರು, ನುರಿತ ಶಿಕ್ಷಣ ತಜ್ಞರು ಇರಬೇಕಾರ ಹೊರಗಿನ ಮಂದಿನ ಯಾ ಮಾನದಂಡ ಇಟ್ಕೊಂಡ ಕರುಸ್ಲಿಕ್ ಹೊಂಟಿದ್ರುರೀ? ಆಂಧ್ರಪ್ರದೇಶದ ಶಾಸಕಿ ಆ ರಾಜ್ಯದಾಗ್ ಶಿಕ್ಷಣ ತಜ್ಞರೆ ಇರಬಹುದು. ಆದ್ರ, ನಮ್ಮ ಕರ್ನಾಟಕದಾಗ್ ಒಬ್ರೂ ತಜ್ಞರಿಲ್ಲೆನು? ನಮ್ಮ ರಾಜ್ಯದ ಒಬ್ಬೆ ಒಬ್ಬ ಅರ್ಹ ಹೆಣ್ಣ ಮಗಳ್ನ ಹುಡಕಕ್ಕ ಆಗಂಗಿಲ್ಲಾ ಅಂದ್ರ ಏನ ಹೇಳಬೇಕ್ರಿ. ಹೀಂಗಾ ಆದ್ರಾ ನಮ್ಮೂರಿನ ಕಲಿತ ಮಂದಿ ಹೊಟ್ಟಿಪಾಡಿಗೆ ಏನ್ ಮಾಡ್ಬೇಕಾ? ಆಂಧ್ರದ ಹೆಣ್ಣುಮಗಳನ್ನು ಇಲ್ಲಿ ಕರ್ಸೋ ಮಂದಿ ಎಷ್ಟು ಮಂದಿ ಕನ್ನಡದೋರಿಗೆ ಹೊರಗಿನ ರಾಜ್ಯಗಳಲ್ಲಿ ಕೆಲ್ಸ ಕೊಡುಸ್ತಾರ್ರೀ?

ಹೀಂಗಾ ನೋಡ್ರಿ ವಲಸಿ ಚಾಲೂ ಆಗೋದು...

ಭಾರತದಾಗ್ ಎಲ್ಲಾರ ಹೋಗ್ ಇರೂ ಹಕ್ಕೈತಿ ಅನ್ನೋ ಮಂದಿ ತುಸಾ ತಿಳ್ಕೊಳೋದೈತ್ರಿ. ಅಲ್ಲಾ, ನಮ್ಮ ನಾಡಿನಾಗಿರೂ ಮಂದಿಗ ಒಂದು ಹುದ್ದೆಗೆ ಬೇಕಾದ ಅರ್ಹತಿ ಇಲ್ಲಂದ್ರ, ಅದುನ್ನ ಸಾಬೀತ್ ಮಾಡಿ ಹೊರಗಿಂದ ಮಂದೀನ ಕರ್ಕೊಂಡ್ ಬರೂದ್ ಒಪ್ಪೋ ಮಾತ್ರಿ. ಆದ್ರ ಬ್ಯಾರಿ ಬ್ಯಾರಿ ಕಾರಣಗೋಳ್ನ ಇಟ್ಕೊಂಡು ಹೊರಗಿನ ಮಂದೀನ ಇಲ್ಲಿಗ ಕರುಸ್ಕೊಂಡು ಕನ್ನಡ ಮಂದೀಗ ಈ ಕೆಲ್ಸ ಮಾಡೊ ಯೋಗ್ಯತೀ ಇಲ್ಲ, ಅದುಕ್ಕಾ ಹೊರಗಿನ ಮಂದೀನ ಕರಸಾಕ್ ಹತ್ತೀವಿ ಅನ್ನೋರು ಭಾಳ ಜನ ಅದಾರ್ರೀ. ಅದಕ್ಕ ಹಾಗ್ ಹೊರಗಿಂದ ಕರ್ಕೊಂಡು ಬರೋದು ಬರೀ ಒಂದು ತಾತ್ಕಾಲಿಕ ಏರ್ಪಾಡ್ ಆಗ್ಬೇಕ್ರಿ. ಅದೆಂಥದೇ ಹುದ್ದಿ ಇರಲಿ, ಇವತ್ತಿಗ ನಮ್ ಕೂಡಾ ಅಂಥಾ ಯೋಗ್ಯತೀ ಇರೂ ಮಂದಿ ಇಲಾಂದ್ರ ಅಂಥಾ ಯೋಗ್ಯತೀನ ನಮ್ ಮಂದಿ ಗಳಿಸೋ ವ್ಯವಸ್ಥೀನೂ ಮಾಡಬೇಕ್ರಿ. ಇಲ್ಲಾಂದ್ರ ಶಾಶ್ವತವಾಗಿ ಹೊರಗಿನ ಮಂದೀನಾ ಕರ್ಕೊಂಡು ಬರ್ತಾನೆ ಇರ್ಬೇಕಾಗುತ್ತೆ. ಹೀಂಗಾ ನಮ್ ಮಂದ್ಯಾಗೆ ಅಂಥ ಯೋಗ್ಯತಿ ಐತೊ ಇಲ್ಲೋ ಅಂತಾನೂ ನೋಡ್ದೆ ಹೊರಗಿಂದ ಮಂದೀನ ಕರ್ಕೊಂಡು ಬರೋದನ್ನೇ ಕನ್ನಡ ಮಂದಿ ಕೂಡಿ ತಡೀಬೇಕಾಗೈತಿ.

ಈ ಮಾತು ಬರೀ ವಿಶ್ವವಿದ್ಯಾಲಯಕ್ಕಲ್ರೀ, ಊರು ಸುದ್ದ ಮಾಡೋ ಹುದ್ದೆಯಿಂದ ಊರು ಆಳೋ ಹುದ್ದಿ ಮಟ ಅನ್ವಯ ಆಕ್ಕೈತಿ. ಹೌದಲ್ರೀ, ಗುರುಗಳೇ?

ಹಿಂದಿ ಒಪ್ಪಿದ್ದಕ್ಕೇ ಮುಂಬೈ ಮಟಾಷ್!

ಉತ್ತರ ಪ್ರದೇಶ ರಾಜ್ಯ ಸ್ಥಾಪನೆ ದಿವಸಾನ ಅಲ್ಲಿಗಿಂತ ಇಲ್ಲೇ ಜೋರಾಗ್ ಆಚರ್ಸೋ ಅಗತ್ಯ ಇಲ್ಲ ಅನ್ನೋ ಹೇಳಿಕೆಯಿಂದ ಶುರುವಾದದ್ದು, ಮುಂಬೈ ಮರಾಠಿಗಳದ್ದಲ್ಲ, ಎಲ್ರುದ್ದು ಅನ್ನೋಗಂಟ ಬಂತಲ್ಲಪ್ಪ ಶಿವಾ. ಮಹಾರಾಷ್ಟ್ರದಲ್ಲೇ ಮರಾಠಿಗನಿಗೆ ಎಂಥಾ ಕೆಟ್ಟ ಗತಿ ಬಂತಲ್ಲಪ್ಪೋ.. ಅಯ್ಯೋ ಪಾಪ ಅನ್ನುಸ್ತಿದೆ. ಹಿಂದಿ ಅನ್ನೋ ಮಹಾಮಾರೀನ ಮನೆದೇವತೆ ಮಾಡ್ಕೊಂಡು ತಲೆಮೇಲೆ ಹೊತ್ಕೊಂಡು ಮೆರೆಸಿದ್ದಕ್ಕೆ ಸಿಕ್ತಲ್ಲಪ್ಪಾ ದೊಡ್ ಬಹುಮಾನ. ಕಂಡ ಕಂಡವರನ್ನೆಲ್ಲಾ ಬಾ ಅಣ್ಣಾ, ಬಾ ತಮ್ಮಾ, ಇದು ಭಾರತ ದೇಶದ ಹೆಬ್ಬಾಗ್ಲು, ಇಲ್ಲೇ ಇರೋದು ಗೇಟ್ ವೇ ಆಫ್ ಇಂಡಿಯಾ, ಇಲ್ಲಿ ಯಾರು ಎಲ್ಲಿಂದಾನಾ ಬಂದು ಬದುಕ್ಬೋದು ಅಂತ ಬಂದೋರ್ನೆಲ್ಲಾ ಕಣ್ಮುಚ್ಕೊಂಡ್ ಕರ್ಕೊಂಡಿದ್ದಕ್ಕೆ ಸರಿಯಾಗ್ ಬಿತ್ತಲ್ಲ ಬಗುಣಿ ಗೂಟ.

ಮನೆ ಹೊಕ್ಕಿದ್ದೇ ಮನರಂಜನೆ ರೂಪದಲ್ಲಿ...

ಈ ಹಿಂದಿ ಭಾಷೆನ ಒಪ್ಕೊಳೊ ಹಾಗ್ ಮಾಡಕ್ ಇರೊ ಸುಲಭದ ಸೀ ಮೆತ್ತಿರೋ ಮಾತ್ರೆ ಅಂದ್ರೆ ಮನರಂಜನೆ. ಮುಂಬೈಯಲ್ಲಿ ಹಿಂದಿ ಸಿನಿಮಾಗಳ ಭರಾಟೆ ಏನು? ಇರೋ ನೂರರಲ್ಲಿ ತೊಂಬತ್ತೈದು ಟಾಕೀಸ್ನಲ್ಲಿ ಹಿಂದಿ ಫಿಲಂಗಳದ್ದೇ ಮೆರೆದಾಟ. ಇದ್ರು ಜೊತೆಗೆ ಇಡೀ ಹಿಂದಿ ಚಿತ್ರರಂಗಕ್ಕೇ ನೆಲೆ ಕೊಡ್ತಲ್ಲಾ ಮುಂಬೈ. ನಮ್ಗೂ ಏನಾರ ಚೂರುಪಾರು ಹೊಟ್ಟೆಪಾಡು ನಡ್ಯತ್ತೆ ಅಂತ ಮರಾಠಿಗರು ಅಂದ್ಕೊಂಡ್ರೇನೋ! ಚಿತ್ರರಂಗಾನೂ ಎಲ್ಲೋ ನಾಕು ಜನಕ್ಕೆ ಅನ್ನ ಕೊಡ್ತೇನೋ, ಆದ್ರೆ ಇಡೀ ಮುಂಬೈನ ಬಟ್ಟೆ ಅಲ್ಲ ಆತ್ಮದ ಸಮೇತ ಬದಲಾಯ್ಸಿಬಿಡ್ತು. ಬರ್ತಾ ಬರ್ತಾ ಇರೋ ಬರೋ ಕೆಲ್ಸಗಳೆಲ್ಲಾ ವಲಸಿಗರ ಪಾಲಾಯ್ತು.

ಹೊಟ್ಟೆ ಬಟ್ಟೆ ಕಿತ್ಕೊಂಡ ವಲಸೆ!

ಹಿಂಗ್ ಶುರು ಹಚ್ಕೊಂಡ್ ಕಥೆ ಕೊನೆಗ್ ಎಲ್ಲಿಗಪ್ಪಾ ಬಂತು ಅಂದ್ರೆ ಮುಂಬೈಯಲ್ಲಿ ಯಾವೊಂದು ಉದ್ದಿಮೆ ತೊಗೊಂಡ್ರೂ ಅದ್ರಲ್ಲಿ ಬೇರೆಭಾಷೆಯವ್ನೇ ಯಜಮಾನ, ಬೇರೆಭಾಷೆಯವ್ನೇ ಕೆಲಸಗಾರ. ಉದ್ದಿಮೆ, ಉದ್ಯೋಗಗಳ ಮೇಲೆ ಹಿಡ್ತ ಕಳ್ಕೊಂಡ್ ಮೇಲೆ ಇನ್ನೇನಪ್ಪಾ ಬಾಕಿ ಉಳೀತು. ಹೋಗ್ಲಿ ವಲಸೆ ಬಂದೋವ್ರಾದ್ರೂ ಮರಾಠಿ ಕಲ್ಯೋಹಾಗ್ ಮಾಡಿದ್ದಿದ್ರೆ ಇನ್ನೊಂದಿಷ್ಟು ಮರಾಠಿ ಜನಕ್ಕೆ ಬದುಕ್ನ ಕಟ್ಕೊಳಕ್ ಆಗ್ತಿತ್ತಲ್ವಾ? ಹಾಗಾಗ್ಲಿಲ್ವೇ? ಒಟ್ನಲ್ಲಿ ಎರೆಹುಳು ಆಸೆಗೆ ಗಾಳಕ್ ಬಿದ್ದ ಮೀನಂಗಾಯ್ತು ಮುಂಬೈಯಲ್ಲಿ ಮರಾಠಿಗರ ಬದುಕು. ಇವ್ರ ಹಿತ ಕಾಪಾಡೊಕ್ಕೆ ಅಂತಲೇ ಪ್ರಜಾಪ್ರಭುತ್ವಾ ಇಲ್ವಾ, ಜನಪ್ರತಿನಿಧಿಗಳಿಲ್ವಾ ಅಂತೀರಾ?

ಮ-ಮ-ಮ ಮರೆತು ದಿಕ್ಕು ತಪ್ಪಿದೋರು

ಗುರು, ದೊಡ್ದೊಡ್ಡ ರಾಷ್ಟ್ರೀಯ ಪಕ್ಷಗಳ ಹಣೆಬರಾ ಗೊತ್ತಿರೋದೆ ಬೇರೆ ಏನಾರ ಯೋಳು ಅಂತೀರೇನೋ. ಅಲ್ಲಾ ಮಾರಾಷ್ಟ್ರದಾಗೆ ಒಂದು ಶಿವಸೇನಾ , ಒಂದು ಎಂ.ಎನ್.ಎಸ್ಸು, ಒಂದು ಎನ್.ಸಿ.ಪಿ ಅನ್ನೋ ಪಕ್ಷಗಳು ಬದ್ಕವಲ್ಲಾ ಅಂತೀರೇನೋ? ಭಾಳಾ ಹಿಂದೆ ಅಂದ್ರೆ 1960ರ ದಶಕದಲ್ಲಿ ಮುಂಬೈನ ಕೇಂದ್ರಾಡಳಿತ ಪ್ರದೇಶ ಅಂತ ಮಾಡಕ್ ಹೊರ್ಟಾಗ ಎಚ್ಚೆತ್ತ ಮರಾಠಿ ಸ್ವಾಭಿಮಾನದ ಅಲೆಯಲ್ಲಿ ತೇಲ್ಕೊಂಡು ಬಂದು 1966ರಲ್ಲಿ ಹುಟ್ಕೊಂಡು ಅಮ್ಚಿ ಮುಂಬೈ ಅಂತ ಗರ್ಜನೆ ಮಾಡಕ್ ಶುರು ಹಚ್ಕೊಂಡ ಪಕ್ಷ ಶಿವಸೇನೆ. ಆದ್ರೆ ಮರಾಠಿ-ಮರಾಠಿಗ- ಮಹಾರಾಷ್ಟ್ರ ಅನ್ನೋದ್ನ ಕೇಂದ್ರವಾಗಿ ಇಟ್ಕೊಳದ್ನ ಅದ್ಯಾಕೋ ಮರ್ತೇ ಬುಟ್ಟು ಇನ್ಯಾವ್ಯಾದ್ರ ಸುತ್ತಾನೋ ಗಿರಕಿ ಹೊಡ್ಕೊಂಡು ದಿಕ್ಕು ತಪ್ಪೋಯ್ತು ಅನ್ನಂಗ್ ಆಗದೆ ಗುರು. ಬೇರೆ ಪ್ರಾದೇಶಿಕ ಪಕ್ಷಗಳ್ದೂ ಇದೇ ಕಥೆ. ಇಡೀ ಮಾರಾಷ್ಟ್ರಾನ ಮರಾಠಿ - ಮರಾಠಿಗ- ಮಹಾರಾಷ್ಟ್ರದ ಹೆಸರಲ್ಲಿ ಒಗ್ಗೂಡ್ಸೋದ್ರಲ್ಲಿ ಎಲ್ಲವೂ ಎಡುವುದ್ವು ಗುರು. ಇದ್ದ ಅವಕಾಶಗಳ್ನ ಕೈಬಿಟ್ಟು ಈಗ ಉಗ್ರವಾಗಿ ನಡ್ಕೊಂಡು ಕೈಲಾಗದವ್ನು ಮೈ ಪರಚ್ಕೊಂಡಂಗೆ ಆಡ್ತಿರೋದು ನೋಡುದ್ರೆ ತಮ್ಮ ಜನರ ಬದುಕನ್ನು ಹಸನು ಮಾಡ್ಕೊಳೋ ಒಳ್ಳೇ ಅವಕಾಶಾನ ಮರಾಠಿ ಜನ ಕಳ್ಕೊಂಡ್ರೇನೋ ಅನ್ಸುತ್ತೆ ಗುರು.

ವಲಸೆ ಬಂದೋನ್ನ ಮುಖ್ಯವಾಹಿನಿಗೆ ಸೇರುಸ್ಕೊಬೇಕು!

ಮರಾಠಿ ಜನರಾದ್ರೂ ಏನ್ ಮಾಡುದ್ರು. ಹಿಂದೀನಾ ಅದ್ಯಾಕೋ ರಾಷ್ಟ್ರಭಾಷೆ ಅಂತ ಒಪ್ಕೊಂಡೇ ಬುಡೋದಾ? ಮುಂಬೈನಲ್ಲಿ ಯಾವ ಅಂಗಡಿ ಮುಂಗಟ್ಟು, ಸಿನಿಮಾ ನಾಟಕ ಎಲ್ಗಾನಾ ಓಗಿ, ಹಿಂದಿ ಒಂದೇ ನಡ್ಯದು. ಯಾವಾನಾದ್ರೂ ಮರಾಠಿ ಬಾಯ್ಬುಟ್ರೆ ಒಳ್ಳೇ ಹಳ್ಳಿ ಗುಗ್ಗೂನ ನೋಡೋ ಅಂಗ್ ನೋಡ್ತಾರೆ. ಇದ್ಯಾಕಪ್ಪಾ ಇಂಗೆ ಅಂದ್ರೆ, ಬಂದೌರ್ಗೆಲ್ಲಾ ಅನುಕೂಲ ಆಗ್ಲಿ ಆಂತ ವಲಸಿಗರ ಭಾಷೇಲೆ ಯವಾರ ಮಾಡಕ್ ಶುರು ಅಚ್ಕಂಡಿದ್ದು. ಜೊತೆಗೆ ಮರಾಠಿ ಏನಿದ್ರೂ ಮನೆ ಒಳ್ಗೆ, ಬೀದಿಗ್ ಬಂದ್ರೆ ಹಿಂದಿ ಅಂತ ಲೆವೆಲ್ ತೋರುಸ್ಕೊಳಕ್ ಹೋಗಿದ್ದು. ತಕ್ಕಳಪ್ಪಾ, ಒಂದಪಾ ಹಿಂದಿನಾ ಒಪ್ಕಂಡ್ ಒಳಿಕ್ ಬುಟ್ಟಿದ್ದೇ ಬುಟ್ಟಿದ್ದು ವಲಸೇ ತಡ್ಯಕ್ ಆಯ್ತದಾ? ಭಾಷೆ ಒಪ್ಕೊಂಡೋರು ಆ ಭಾಷಿಕರನ್ನೂ ಒಪ್ಕಂಡಂಗೆ ಅಲ್ವಾ? ಬಂದವ್ರ ಜೊತೆ ಹಿಂದೀಲೆ ಮಾತಾಡ್ತಿದ್ರೆ ಇನ್ನು ಒಳಿಕ್ ಬಂದವ್ರಾದ್ರು ಎಂಗೆ ಮುಕ್ಯವಾಹಿನಿ ಸೇರ್ಕತಾರೆ? ಮುಂಬೈಯಲ್ಲಿ ಹಿಂದಿ ನಡೀತದೆ, ಅಲ್ಲಿಗೇ ಹೋಗಮಾ ಅಂತ ನುಗ್ಗುದ್ರು ನೋಡಿ ಜನ, ವಲಸಿಗರ ಸಂಕ್ಯೆ ಎದ್ವಾ ತದ್ವಾ ಏರ್ಬುಡ್ತು. ಇದಾಗ್ತಿದ್ ಹಂಗೇ ತಮ್ದೇ ಮುಖ್ಯವಾಹಿನಿ ಅನ್ನಕ್ ಶುರು ಹಚ್ಕಂಡ್ರು. ಮಾತಾಡುದ್ರೆ ಇದು ಭಾರತ ದೇಶ, ಇಲ್ಲಿ ಯಾರ್ ಎಲ್ಲಿಗ್ ಬೇಕಾರ್ ಹೋಗ್ ಬದುಕ್ಬೋದು ಅನ್ನಕ್ ಶುರು ಹಚ್ಕೊಂಡ್ರು. ಅಲ್ಲಾ ಗುರು, "ಯಾರು ಬೇಕಾದ್ರು ಮುಂಬೈಗೆ ಬಂದ್ ಬದುಕೋದು ಎಲ್ಲಾ ಭಾಷೆಯೋರ ಹಕ್ಕಾದರೆ, ಮುಂಬೈಗೆ ಬರೋರು ನಮ್ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಧಕ್ಕೆ ತರ್ದೆ ಬದುಕೋದು ನಿಮ್ಮ ಕರ್ತವ್ಯ ಅಲ್ವಾ?" ಅಂತ ಬುದ್ಧಿಜೀವಿ, ನಾಯಕ, ರಾಜಕಾರಣಿ ಅನ್ನುಸ್ಕೊಂಡಿರೋ ಯಾವ್ ಬಡ್ಡೀಹೈದ್ನೂ ದನಿ ಎತ್ತುತಿಲ್ವಲ್ಲಾ ಅಂತ.

ಇನ್ನಾದ್ರೂ ಕಣ್ ಬುಟ್ಟಾರಾ?

ಇಡೀ ಸಮಸ್ಯೆ ಮೂಲ ಇರೋದು ಮುಂಬೈನಲ್ಲಿ ಇವತ್ತಿರೋ ಪರಭಾಷಿಕರ ಪ್ರಾಬಲ್ಯ. ಇದುಕ್ ಕಾರಣ ವಲಸೆ, ವಲಸೆಗೆ ಪ್ರೇರಣೆ ನೀಡಿದ್ದೆ ಮುಂಬೈ ಜನ ಹಿಂದೀನ ಒಪ್ಕೊಂಡು ತಲೆಮೇಲೆ ಕೂರುಸ್ಕೊಂಡಿದ್ದು. ಇವತ್ಗೂ ಮರಾಠಿ ಜನ್ರು ಹಿಂದಿ ಅನ್ನೋದು ಏನು? ಅದ್ರ ಕಿತಾಪತಿ ಏನು? ಅನ್ನೋದ್ನ ಸರ್ಯಾಗಿ ಗುರುತ್ಸಕ್ ಆಗ್ದೆ ಎಲ್ಲೆಲ್ಲೋ ತಡಕಾಡ್ತಾ ಇದಾರೆ. ಹಿಂದೀನ ಒಳಿಗ್ ಬುಟ್ಕೊಂಡು ವಿಶೇಷವಾಗಿ ಮುಂಬೈಯಲ್ಲಿ ತಮ್ಮ ಭಾಷೆನ ಬಲಿ ಕೊಟ್ರು, ತಮ್ಮ ಸಿನಿಮಾ ಇಂಡಸ್ಟ್ರಿ ಬಲಿ ಕೊಟ್ರು, ತಮ್ಮ ಮಕ್ಳುಗಳ ಕೆಲ್ಸದ ಅವಕಾಶಾನ ಬಲಿ ಕೊಟ್ರು... ಈಗ ಸಮಾಜವಾದಿ ತರದ ಉತ್ತರಪ್ರದೇಶದ ಪಾರ್ಟಿ ಮುಂಬೈಯಲ್ಲೇ ದೊಡ್ ದೊಡ್ ಮೆರವಣಿಗೆ ಸಭೆ ಮಾಡಿ ’ಮುಂಬೈ ಯಾರಪ್ಪಂದೂ ಅಲ್ಲ. ಉತ್ತರ ಭಾರತದವ್ರಿಗೆ ಇಲ್ಲಿ ಬದುಕೋ ಹಕ್ಕಿದೆ’ ಯಾರಾನಾ ಉತ್ತರದವ್ರ್ ಸುದ್ದಿಗ್ ಬಂದ್ರೆ ಉಸಾರ್ ಅಂತ ಬೆದರಿಕೆ ಹಾಕೋ ಮಟ್ಟಕ್ ಬಂದವ್ರೆ. ಇನ್ನು ವಲಸಿಗರ ವೋಟ್ ಮೇಲೆ ಕಣ್ ಮಡ್ಗಿ ಭಾಜಪ, ಕಾಂಗ್ರೆಸ್ಸು ಕೂಡಾ ಎಗರಾಡ್ತಿವೆ. ಮರಾಠಿಗರು ತಮಗ್ ಬಂದಿರೋ ಆಪತ್ತಿನ ಮೂಲ ಹಿಂದಿ ಭಾಷೆನ ಒಪ್ಕೊಂಡಿರೋದು ಅಂತ ಎಷ್ಟು ಬೇಗ ಅರ್ಥ ಮಾಡ್ಕೊಂಡ್ರೆ ಅವ್ರಿಗೂ, ಭಾರತಕ್ಕೂ ಅಷ್ಟೋ ಇಷ್ಟೋ ಒಳ್ಳೇದು ಆಗ್ಬೋದು.

ಇನ್ನೇನಪ್ಪಾ, ನಮ್ ಕನ್ನಡದೋರ್ಗೆ ನಾವೆಂಗ್ ಇರ್ಬೇಕು ಅಂತಾ ಇನ್ನೂ ಬಾಯ್ ಬುಟ್ ಯೋಳ್ಬೇಕಾ?

ಕಲೆಯಲ್ಲವಿದು, ತಂತ್ರಜ್ಞಾನದ ಉತ್ತುಂಗ


ಜನವರಿ 26ರಂದು ದಿಲ್ಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಕರ್ನಾಟಕದ ಕಡೆಯಿಂದ ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಬಿಂಬಿಸುವಂತಹ ಸ್ತಬ್ಧ ಚಿತ್ರ ತೋರಿಸಲಾಗಿತ್ತು. ಇದು ಎರಡನೇ ಅತ್ಯುತ್ತಮ ಸ್ತಬ್ಧ-ಚಿತ್ರ, ಅತ್ಯುತ್ತಮ ಫ್ಯಾಬ್ರಿಕೇಷನ್ ಹಾಗೂ ವಿಷಯವನ್ನು ಅತ್ಯುತ್ತಮವಾಗಿ ಬಿಂಬಿಸಿದೆ ಎಂದು ಬಹುಮಾನ ಗಳಿಸಿದೆ. ಇದು ನಿಜಕ್ಕೂ ಕನ್ನಡಿಗರ ಕಿರೀಟದಲ್ಲಿನ ಇನ್ನೊಂದು ಗರಿಯಾಗಿದೆ. ಹಿಂದೊಮ್ಮೆ 2005ರಲ್ಲಿ ಮೊದಲನೇ ಬಹುಮಾನ ಗೆದ್ದಿದ್ದ ಗೊಮಟೇಶ್ವರನ ಸ್ತಬ್ಧ-ಚಿತ್ರ ಇನ್ನೂ ನೆನಪಿನಲ್ಲಿರುವಾಗ್ಲೇ ಈ ಬಹುಮಾನವೂ ಕರ್ನಾಟಕಕ್ಕೆ ದೊರಕಿದೆ! ಇದು ನಮಗೆಲ್ಲಾ ಎಂತಹ ಒಳ್ಳೇ ಸಂದೇಶ ಕೊಡ್ತಿದೆ ಅನ್ನೋದ್ನ ಗಮನಿಸಿ.

ಬಹುಮಾನ ಟ್ಯಾಬ್ಲೋಗಲ್ಲ, ನಮ್ಮ ಹಿಂದಿನವರ ಕುಶಲತೆಗೆ

ಬೇಲೂರಿನ ದೇವಾಲಯದ ಕೇವಲ ಒಂದು ನಕಲು-ಪ್ರತಿಗೇ ಇಷ್ಟು ಗೌರವ ನೀಡ್ಬೇಕಾಗಿ ಬಂದಿದೆ ಅಂದ್ರೆ ಇನ್ನು ನಿಜವಾದುದರ ಹಿರಿಮೆ ಏನು ಅನ್ನೋದ್ನ ತಿಳ್ಕೋಬೇಕು ನಾವು. ಈ ಕುಶಲತೆಯನ್ನು ಬರೀ ಬೇಲೂರಿನ ಒಂದು ದೇವಾಲಯಕ್ಕೆ ಅಂದುಕೊಳ್ಳದೆ ಕಣ್ಣು ಹಾಯಿಸಿದರೆ ಕಾಣೋದು ಹಂಪೆ-ಬಾದಾಮಿ-ಐಹೊಳೆ-ಪಟ್ಟದಕಲ್ಲಿನ ವಿನ್ಯಾಸಗಳು, ಕರಾವಳಿಯ ಮುರುಡೇಶ್ವರ, ಸೋಮನಾಥಪುರ, ಮೈಸೂರಿನ ಅರಮನೆ, ಬೆಂಗಳೂರಿನ ವಿಧಾನ ಸೌಧ ಮತ್ತನೇಕ.

ಕಲೆಯಲ್ಲವಿದು, ತಂತ್ರಜ್ಞಾನದ ಶಿಖರ ಸಾಧನೆಯ ಹೆಗ್ಗುರುತು!


ಓ ಕನ್ನಡಿಗಾ, ಇವುಗಳಲ್ಲಿ ಕಾಣುತ್ತಿರುವುದು ಬರಿಯ ಕಲೆಯ ಉತ್ತುಂಗವಲ್ಲ. ಇದರಲ್ಲಿರುವುದು ಉನ್ನತ ತಂತ್ರಜ್ಞಾನ. ಅಂದಿನ ದಿನಗಳಲ್ಲಿ ಪ್ರಪಂಚದಲ್ಲಿ ಅತಿ ವಿರಳವಾದ ತಂತ್ರಜ್ಞಾನ. ಅದು ಒಂದೇ ಕಲ್ಲಿನಲ್ಲಿ ಕೆತ್ತಿರೋ ಬೆಳಗೋಳದ 57 ಅಡಿ ಎತ್ತರದ ಗೊಮ್ಮಟನೇ ಇರ್ಬೋದು, ಬೇಲೂರಿನ ಶಿಲಾ-ಬಾಲಿಕೆಯರ ಮೋಹಕ ವಿನ್ಯಾಸವೇ ಇರ್ಬೋದು, ಹಂಪೆಯ ಸಂಗೀತ ಮೂಡಿಸುವ ಕಂಬಗಳೇ ಇರ್ಬೋದು, ಸುಂದರ ಸ್ನಾನದ ಕೊಳವಿರವಿರಬಹುದು, ನೀರಾವರಿ ಕಾಲುವೆಗಳಿರಬಹುದು, ಸಂಕ್ರಮಣದ ಸಮಯದಲ್ಲಿ ಸರಿಯಾಗಿ ಸೂರ್ಯನ ಪ್ರಕಾಶ ಒಂದೇ ಕಡೆ ಬೀಳೋ ಹಾಗಿರೋ ಗವಿಪುರಂನ ಶಿವಮಂದಿರ ಇರ್ಬೋದು, ಹಂಪೆಯಲ್ಲಿರುವ ಹವಾನಿಯಂತ್ರಿತ ಅರಮನೆಯೇ ಇರ್ಬೋದು.. ಹೀಗೇ ನೂರಾರು ಉದಾಹರಣೆ ಇರ್ಬೋದು - ಇವೆಲ್ಲವೂ ಕಲೆಯ ಹೊದಿಕೆಯಲ್ಲಡಗಿರೋ ತಂತ್ರಜ್ಞಾನದ ಉತ್ತುಂಗ ಸಾಧನೆಯಲ್ಲವೇ?
ಇಂದಿಗೂ ತಂತ್ರಜ್ಞಾನದ ಮುಂಚೂಣಿಗೆ ಕನ್ನಡಿಗ ಬರಬೇಕು

ಅಂದೇ ತಂತ್ರಜ್ಞಾನದಲ್ಲಿ ಅಂತಹ ಸಾಧನೆಗೈದಿದ್ದ ಕನ್ನಡಿಗರು ನಾವು ಇಂದೂ ಕೂಡಾ ತಂತ್ರಜ್ಞಾನದ ಮುಂಚೂಣಿಯಲ್ಲಿ ನಿಂತು ಅದರ ಕರ್ತಾರರಾಗ್ಬೋದು. ಇಂತಹ ಇತಿಹಾಸವಿರೋ ನಮಗೆ ಯಾವ ಕೀಳರಿಮೆಯೂ ಇರಬೇಕಿಲ್ಲ. ನಮ್ಮ ರಕ್ತದಲ್ಲೇ ಆ ಹಿರಿಮೆ ಇರೋದ್ರಿಂದ ಮನಸ್ಸು ಮಾಡಿ ಸಾಧಿಸಿ ತೋರಿಸಿದ್ರೆ ಸಾಕು, ಇಡೀ ಜಗತ್ತೇ ನಿಬ್ಬೆರಗಾಗೋ ಅವಿಷ್ಕಾರಗಳನ್ನು ನಾವು ಮಾಡಬಹುದು. ಮಾಡಬೇಕು. ಅದಕ್ಕೆ ನಮ್ಮ ಹಿರಿಯರ ಅಂದಿನ ಸಾಧನೆಗಳು ಪ್ರೇರಣೆ ನೀಡುತ್ತಿವೆ. ಅಗೋ ನೋಡಿ, ಕನ್ನಡಿಗ ಏನೆಲ್ಲಾ ಸಾಧಿಸುವನೆಂದು ಕಾಣಲೆಂದೇ ಆ ಸ್ಮಾರಕಗಳೆಂಬ ಸಾಧನೆಯ ಹೆಗ್ಗುರುತುಗಳು ಕಾತರಿಸುತ್ತಾ ಕಾಯುತ್ತಿವೆ.
Related Posts with Thumbnails