ಕನ್ನಡ ಮಾಧ್ಯಮ ಎಡವುತ್ತಿರುವುದು ಯಾಕೆ?

ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಪ್ರತಿಯೊಂದು ಮಗೂನೂ ಚಿನ್ನ. ಪ್ರತಿಯೊಂದು ಮಗೂನಲ್ಲೂ ಅದ್ಭುತವಾದ ಪ್ರತಿಭೆ ಅಡಗಿದೆ. ನಮ್ಮ ಮಕ್ಕಳಲ್ಲಿ ಮುಂದಿನ ನೊಬೆಲ್ ಪ್ರಶಸ್ತಿಗಳ್ನ ಗೆಲ್ಲೋರಿದಾರೆ, ಪ್ರಪಂಚವೇ ಬೆರಗಾಗೋಂಥಾ ವೈಜ್ಞಾನಿಕ ಆವಿಷ್ಕಾರಗಳ್ನ ಮಾಡೋರಿದಾರೆ, ಸಾಟಿಯಿಲ್ಲದ ಅರ್ಥಶಾಸ್ತ್ರಪ್ರವೀಣರಾಗೋರಿದಾರೆ...ಕಲಿಕೆಯ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ತುಟ್ಟತುದೀನ ಮುಟ್ಟೋಂಥಾ ಪ್ರಚಂಡರಿದಾರೆ. ನಮ್ಮ ಮಕ್ಕಳಿಗೂ ಇಂಗ್ಲೇಂಡಲ್ಲೋ ಅಮೇರಿಕದಲ್ಲೋ ಹುಟ್ಟೋ ಮಕ್ಕಳಿಗೂ ಪ್ರತಿಭೆಯಲ್ಲಿ ಎತ್ವಾಸ ಏನಾರೂ ಇದ್ದರೆ ಅದು ನಮ್ಮ ಮಕ್ಕಳೇ ಮುಂದಿರೋದು. ಇದಕೆ ಸಂಶಯ ಬೇಡ (ಕಷ್ಟದಲ್ಲಿ ಬೆಳೆದ ಮಕ್ಕಳಿಗೆ ಬುದ್ಧಿ ಜಾಸ್ತಿ).

ನಮ್ಮ ನಾಡಿನ ಮಕ್ಕಳು ಮಾತಾಡೋದು ಕನ್ನಡ. ಔರ್ ತಲೇಲಿ ಸಿಗೋದು ಕನ್ನಡದ ಅಕ್ಷರಾನೇ. ಔರಿಗೆ ಅರ್ಥ ಆಗೋದು ಕನ್ನಡಾನೇ. ಈಗ ಈ ಮಕ್ಕಳ್ನ ಬಳಸಿಕೊಂಡು ನಾಡು ಕಟ್ಟೋದು ಹೇಗೆ? ಈ ಮಕ್ಕಳ ಬುದ್ಧಿವಂತಿಕೇನ ಹಾಲು ಕರೆದಹಂಗೆ ಕರೆಯೋ ವ್ಯವಸ್ಥೆ ಹೇಗಿರಬೇಕು? ಅವರಿಗೆ ಅರ್ಥವಾಗದೇ ಇರೋ ಒಂದು ಭಾಷೆಯಲ್ಲಿ ವಿದ್ಯೆ ಕಲಿಸಕ್ಕೆ ಹೋಗಬೇಕಾ ಆ ವ್ಯವಸ್ಥೆ? ಅಥವಾ ಔರಿಗೆ ಗೊತ್ತಿರೋ ಭಾಷೇಲೇ ತಿಳುವಳಿಕೆ ಹೆಚ್ಚಿಸಿ ಆದಷ್ಟು ಬೇಗ ಅವರೇ ತಿಳುವಳಿಕೆಯ ಎಲ್ಲೆಗಳ್ನೇ ಹೆಚ್ಚಿಸೋಹಾಗೆ ಮಾಡಬೇಕಾ? ಉತ್ತರ ಎರಡನೇದೇ.

ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೌಕೊಂಡಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ.

ಇಷ್ಟೆಲ್ಲ ವೈಜ್ಞಾನಿಕ ಸತ್ಯಗಳಿದ್ದರೂ ಇವತ್ತಿನ ದಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಕುಂಟುಕೊಂಡು ಕುಂಟುಕೊಂಡು ನಡೀತಿರೋದು ಯಾಕೆ? ಈ ವ್ಯವಸ್ಥೆಯಲ್ಲಿ ಏನು ಕುಂದು ಕೊರತೆಗಳಿವೆ ಅಂತ ನೋಡೋಣ.

ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಮೊದಲನೇ ಕಾರಣ

ಹೀಗೆ ಕನ್ನಡ ಮಾಧ್ಯಮ ಎಡವುತ್ತಾ ಇರೋದರ ಒಳಗಿನ ಕಾರಣ ಏನು ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ ನಮಗೆ ಸಿಗೋ ಮೊದಲನೇ ಉತ್ತರ ಏನಪ್ಪಾ ಅಂದ್ರೆ ನಮ್ಮ ಶಿಕ್ಷಣ ವ್ಯವಸ್ಥೇಲಿ ಯಾವುದನ್ನ ಕನ್ನಡ ಅಂತ ಕಲಿಸುತ್ತಾ ಇದ್ದಾರೋ ಅದು ಸಾಮಾನ್ಯ ಕನ್ನಡಿಗರಿಗೆ ಬಹಳ ದೂರವಾಗಿದೆ. ಉದಾಹರಣೆಗೆ "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟಾತು?

ಇವತ್ತಿನ ದಿನ ಬರಹದಲ್ಲಿ ಇರೋ ಕನ್ನಡಕ್ಕೆಲ್ಲ ಈ ರೋಗ ಇದೆ. ಆಡುನುಡಿ ಕೈಬಿಟ್ಟಷ್ಟೂ ಅದು ಒಳ್ಳೇ ಕನ್ನಡ ಅಂತ ನಂಬಿಕೊಂಡಿರೋ ಪೆದ್ದರು ನಾವು. ಆದ್ರೆ ಅದು ಬರೀ ತಪ್ಪು. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.

(ಕನ್ನಡಿಗರ ಈ ಪೆದ್ದತನ ನೋಡಿ ಗೆಲಿಲಿಯೋ ತಲೆ ಚೆಚ್ಚಿಕೊಂಡಿದ್ದು ಗೊತ್ತಾ ನಿಮಗೆ? ಇಲ್ಲಿ ಓದಿ)

ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಎರಡನೇ ಕಾರಣ

ಇನ್ನು ಎರಡನೇ ಕಾರಣ ಏನಪ್ಪಾ ಅಂದ್ರೆ ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಪೂರ್ಣ ವ್ಯವಸ್ಥೆ ಆಗಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತಗಳ ವರೆಗೆ ಏನೋ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗತ್ತೆ. ಆದ್ರೆ ಪದವಿ ಪೂರ್ವ ಮತ್ತು ಪದವಿ ಹಂತಗಳ ವರೆಗೆ ತಲುಪೋ ಹೊತ್ತಿಗೆ ಕನ್ನಡ ಕಾಣಸಿಗೋದೇ ಕಡಿಮೆ ಆಗೋಗತ್ತೆ. ವಿಜ್ಞಾನ-ತಂತ್ರಜ್ಞಾನಗಳು, ಅರ್ಥಶಾಸ್ತ್ರ, ಮ್ಯಾನೇಜ್ಮೆಂಟು ಇಂಥವಂತೂ ಕನ್ನಡದಲ್ಲಿ ಸಾಧ್ಯವೇ ಇಲ್ಲ ಅಂತ ನಾವು ಒಪ್ಪಿಕೊಂಡಂತಿದೆ. ಇದು ಇವತ್ತಿನ ಕನ್ನಡದ ಶಿಕ್ಷಣ ವ್ಯವಸ್ಥೆ.

ಏನೋ ಹಳ್ಳೀ ಮುಂಡೇವು ಒಂದಿಷ್ಟು ಅಕ್ಷರ ಕಲೀಲಿ ಹೆಬ್ಬೆಟ್ಟ್ ಒತ್ತೋ ಬದ್ಲು ಅಂತ ವ್ಯವಸ್ಥೆ ಕಟ್ಟಿದಹಂಗಿದೆ! ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರುವವರೆಲ್ಲರ ಪ್ರತಿಭೆ ಬೆಳಕಿಗೆ ಬರಬೇಕಾದ್ರೆ ಕನ್ನಡದ ಶಿಕ್ಷಣ ವ್ಯವಸ್ಥೆ ಅನ್ನೋದು ಬರೀ ಹೆಬ್ಬೆಟ್ ಒತ್ತೋದನ್ನ ಹೋಗಲಾಡಿಸಿದರೆ ಸಾಲದು ಗುರು! ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್, ಇಂಗ್ಲೇಂಡ್ ಮುಂತಾದ ಕಡೆಯೆಲ್ಲ ಹೇಗೆ ತಮ್ಮತಮ್ಮ ನುಡಿಗಳಲ್ಲಿ ಉನ್ನತಶಿಕ್ಷಣಾನೂ ಕೊಡೋ ವ್ಯವಸ್ಥೆಗಳಿವೆಯೋ ಹಾಗೆ ಇಲ್ಲೂ ಬರಬೇಕು. ಇಲ್ಲದೆ ಹೋದರೆ ಎಂದಿಗೂ ನಮ್ಮ ನಾಡಿನ ನಿಜವಾದ ಪ್ರತಿಭೆ ಬೆಳಕಿಗೆ ಬರೋದಿಲ್ಲ.

ನಿಜಕ್ಕೂ ಇದನ್ನ ಮಾಡೋದು ಕಷ್ಟದ ಕೆಲಸವೇನಲ್ಲ. ಆದರೆ ಇದನ್ನ ಮಾಡಬೇಕಾದರೆ ಕನ್ನಡಿಗರಲ್ಲಿ ಬಹಳ ಒಗ್ಗಟ್ಟು ಬೇಕು. ನಿಜವಾದ ಶಿಕ್ಷಣತಜ್ಞರು ಬೇಕು. ನಿಜವಾದ ಉದ್ಯಮಿಗಳು ಬೇಕು. ನಿಜವಾದ ಕಾಳಜಿಯುಳ್ಳ ಸರಕಾರ ಬೇಕು, ಅಷ್ಟೆ.

ಎಡವೋದು ನಿಲ್ಲಲೇಬೇಕು, ಬೇರೆ ದಾರಿಯಿಲ್ಲ

ಆಯಿತು. ಈಗ ನಮಗೆ ಕನ್ನಡ ಮಾಧ್ಯಮ ಶಿಕ್ಷಣವ್ಯವಸ್ಥೆಯಲ್ಲಿರೋ ಕುಂದು ಕೊರತೆಗಳು ಅರ್ಥವಾಗಿವೆ. ಈಗ ಈ ಕುಂದು ಕೊರತೆಗಳ್ನ ಧೈರ್ಯವಾಗಿ ಎದುರಿಸೋ ಮನಸ್ಸು ಕನ್ನಡಿಗರು ಮಾಡಬೇಕು. ಯಾಕೇಂದ್ರೆ ಇದನ್ನ ಎದುರಿಸದೆ ನಾಡಿನ ಪ್ರತಿಭೆಯೆಲ್ಲ ಬೆಳಕಿಗೆ ಬರೋ ಸಾಧ್ಯತೇನೇ ಇಲ್ಲ. ಕನ್ನಡ ನಾಡು ಚಿನ್ನದ ಬೀಡು ಅಂತ ಎಷ್ಟು ಬಡ್ಕೊಂಡ್ರೂ ಏನ್ ಪ್ರಯೋಜನ? ಆ ಚಿನ್ನ ಬೆಳಕಿಗೆ ಬರದೆ ಹೋದ್ರೆ ಅದು ಚಿನ್ನವಾಗಿದ್ರೇನು ತಗಡಾಗಿದ್ರೇನು?

ಈ ನಮ್ಮ ಶಿಕ್ಷಣ ವ್ಯವಸ್ಥೇನ ಜಗತ್ತಿನಲ್ಲಿ ಅತ್ಯುತ್ತಮ ಮಟ್ಟದ ಒಂದು ವ್ಯವಸ್ಥೆ ಮಾಡಕ್ಕೆ ಏನೇನು ಮಾಡಬೇಕು ಅಂತ ನಾವು ಯೋಚಿಸಬೇಕು. ಇವತ್ತಿನ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಹೇಗೆ ಬದಲಾಗಬೇಕು? ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ನಾವು ಮೇಲೆ ತೋರಿಸಿರುವ ತೊಂದರೆಗಳ್ನ ಬಗೆಹರಿಸಿಕೊಳ್ಳಕ್ಕೆ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೇ ನಾವು ಬದುಕುದ್ವಿ. ಇಲ್ದೇ ಹೋದ್ರೆ ಎಂದೆಂದಿಗೂ ನಮ್ಮ ನಮ್ಮ ನಾಡಿನ ಮಕ್ಕಳಿಗೆ ಒಳ್ಳೇ ಭವಿಷ್ಯ ಅನ್ನೋದು ಇಲ್ಲ. ಒಳಗೆ ಬುದ್ಧಿವಂತರಾಗಿದ್ದ್ರೇನು ಬಂತು?

7 ಅನಿಸಿಕೆಗಳು:

Kishore ಅಂತಾರೆ...

ಮಾನ್ಯರೇ,

ಕರ್ನಾಟಕದಲ್ಲೇ ಒಂದು ಪುಟ್ಟ ಭಾರತ ಇದೆ. ಇಲ್ಲಿ ತುಳು, ಕೊಂಕಣಿ ಹಾಗು ಕೊಡವ ಭಾಷೆಗಳಿಗೆ ಅದರದೇ ಆದ ಸ್ಥಾನ ಮಾನಗಳಿವೆ. ಶಿಕ್ಷಣ ವ್ಯವಸ್ಥೆ ಕನ್ನಡದಲ್ಲೇ ಇರಬೇನ್ಕೆಂದು ಕೂಗಿಕೊಳ್ತಿರೋ ನಮ್ಮನ್ನು ಕರೆದು ಜನ ಕೇಳೋದೇ ಇದನ್ನು... ಅಲ್ರಿ ಸ್ವಾಮಿ ನಮ್ಮ ಮಕ್ಕಳು ತಮ್ಮ ಮಾತೃಭಾಷೆಯಾದ ತುಳುವಿನಲ್ಲೇ ಗಣಿತ, ವಿಜ್ಞಾನ ಹಾಗು ಸಮಾಜ ಶಾಸ್ತ್ರವನ್ನು ಓದಲಿ ಬಿಡ್ರಿ. ಇದಕ್ಕೆ ಗುರುಗಳೇ.. ತಾವು ಏನ್ ಹೇಳ್ತಿರ? ಕರ್ನಾಟಕದ ಏಕೀಕರಣ ಹೇಗೆ ಸಾಧ್ಯ..

ಧನ್ಯವಾದಗಳು,
ಕಿಶೋರ್.

Anonymous ಅಂತಾರೆ...

ಕಿಶೋರ್ ಅವರೆ,

ಪ್ರಪಂಚದ ಮಟ್ಟದಲ್ಲಿ ಭಾಷೆಗಳ ವಿವಿಧತೆಯನ್ನು ಎತ್ತಿಹಿಡಿಯಬೇಕು ಎನ್ನುವುದು ಎಷ್ಟು ಸತ್ಯವೋ ಕರ್ನಾಟಕದ ಒಳಗಡೆಯೂ ಅಷ್ಟೇ ಸತ್ಯ. ತುಳು, ಕೊಂಕಣಿ ಮತ್ತು ಕೊಡವ ಭಾಷೆಗಳ ಜನರು ಎಚ್ಚೆತ್ತುಕೊಂಡು ತಂತಮ್ಮ ಭಾಷೆಗಳಲ್ಲಿ ಶಿಕ್ಷಣ ವ್ಯವಸ್ಥೆಗಳನ್ನು ಕಟ್ಟಬೇಕು.

ಹಾಗೆ ಕಟ್ಟುವ ಆಸೆಯಿಲ್ಲದಿದ್ದರೆ ತಮಗೆ ಇಷ್ಟವಾದ ಭಾಷೆಯ ವ್ಯವಸ್ಥೆಗೆ ಹೋಗಿ ಸೇರಿಕೊಳ್ಳುವುದು ಅನಿವಾರ್ಯ. ಕನ್ನಡವೇ ಇಷ್ಟವಾದರೆ ಕನ್ನಡದ ವ್ಯವಸ್ಥೆಗೆ ಸೇರಿಕೊಳ್ಳಬಹುದು.

ಕನ್ನಡದ ವ್ಯವಸ್ಥೆಗೆ ನೀವು ಸೇರಲೇ ಬೇಕು ಎಂದು ಯಾರೂ ನಮ್ಮ ತುಳು/ಕೊಂಕಣಿ/ಕೊಡವ ಬಾಂಧವರಿಗೆ ಹೇಳುತ್ತಿಲ್ಲ. ಆ ಹೇರಿಕೆಯ ಕೆಲಸ ಭಾರತದಲ್ಲಿ ಹಿಂದಿಯವರೊಬ್ಬರೇ ಮಾಡಿರುವುದು, ಮಾಡುತ್ತಿರುವುದು. ಭಾಷೆಯ ವಿಷಯದಲ್ಲಿ ಕನ್ನಡಿಗರಷ್ಟು ಸಹನಶೀಲರು ಇಲ್ಲವೇ ಇಲ್ಲ ಎನ್ನಬಹುದು.

ಆದರೆ ಇಷ್ಟು ಮಾತ್ರ ಸತ್ಯ: ಈ ಮೇಲಿನ ಭಾಷೆಗಳಿಗೆ ಕನ್ನಡ ಅತಿ ಹತ್ತಿರದ ಭಾಷೆಯೇ ಹೊರತು ಹಿಂದಿಯಲ್ಲ. ಹಿಂದಿಯನ್ನು ಕೈಬಿಟ್ಟು ಕನ್ನಡದಿಂದ ಅವರು ಲಾಭವನ್ನು ಪಡೆದುಕೊಳ್ಳಬಹುದು. ಕನ್ನಡದ ಬಾಗಿಲುಗಳು ಅವರಿಗಾಗಿ ಸದಾ ತೆಗೆದಿರುತ್ತದೆ.

Anonymous ಅಂತಾರೆ...

ರಾಘವೇಂದ್ರಾಚಾರ್ ಅವರೇ,
ನಿಮ್ಮ ನಿಲುವು ಸರಿಯಾಗಿದೆ. ತುಳು, ಕೊಡವ ಭಾಷೆಗಾಗಿ ಕರ್ನಾಟಕ ಸರ್ಕಾರ ಸಾಕಷ್ಟು ಹಣ ಕೂಡಾ ಖರ್ಚು ಮಾಡುತ್ತಿದೆ. ತುಳು, ಕೊಂಕಣಿ, ಕೊಡವ ಭಾಷೆಗಳು ಎಲ್ಲಿಂದಲೋ ಬಂದ ಭಾಷೆಗಳಲ್ಲ,, ಅವು ಕನ್ನಡದೊಂದಿಗೆ ನೂರಾರು ವರ್ಷದಿಂದ ಸಹಬಾಳ್ವೆ ಮಾಡುತ್ತಿವೆ. ನಮ್ಮ ಈ ಎಲ್ಲ ಭಾಷೆಗಳ ಕಾಮನ್ ಎನಿಮಿ ಅಂದ್ರೆ ಹಿಂದಿ, ನಮ್ಮ ದುಡ್ಡಲ್ಲಿ ನಮ್ಮ ಮೇಲೆ ಹಿಂದಿ ಹೇರಿಕೆ ನಡಿತಾ ಇದೆ. ಇದನ್ನು ತಡೆಗಟ್ಟಬೇಕು.

ಹಾಗೆ, ತುಳು, ಕೊಡವ, ಕೊಂಕಣಿ ಭಾಷೆಯು ಉಳಿದು ಬೆಳೆಯಲು ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು.

Anonymous ಅಂತಾರೆ...

gurugale neevu heliruva 3 amshagalu sarine ide. adakke eega takshana atha 1-5 varshadalli jaarige barabekadre nanna prakara idannu maadabahudu.

1. eegiruva kannada madhyama shalegala jote naavu kai jodisabeku
(IT, itara kannada da bagge nijavaada kalakali iruva arga)

2. antha shaalegalannu gurutisi munde namma makkalannnu saha naavu allige kalisalu shuru maadabeku

3. yaaru tamma makalannu kannada shalege kalisuttaro avaru adakke hechchina prachara kodabeku

4. matte naavu kannada da shalegalannu beti maadi alli - janaru bayasuva shikshana vyavasthege iruva gap galannu sarakaarakke, shikshana ilaakege arivu maadikodabeku.

karuNaa.

Anonymous ಅಂತಾರೆ...

allade - mysurinalli ondu olle kannada shaale ide antha kelidde ..
adannu naavu yaradru beti maadi adara bagge hechchina maahiti , prachara itara kannadetararige kodabeku.

- karuNaa

Anonymous ಅಂತಾರೆ...

ಕನ್ನಡ ಮೀಡಿಯಂ ಅಂತ ಸಂಸ್ಕೃತದಲ್ಲಿ ಕಲಿಯೋದಕ್ಕಿಂತ ಆರಾಮಾಗಿ ಇಂಗ್ಲೀಷ್ ಮೀಡಿಯಮ್ಮಲ್ಲಿ ಕಲಿಯೋದು ಒಳ್ಳೇದು.

ಇವರ ಈ ಕನ್ನಡ ಹೋರಾಟ ಅರವತ್ತು ವರ್ಷದಿಂದ ನಡೀತಾ ಇದ್ದರೂ ಇಂದಿಗೂ ಕನ್ನಡದಲ್ಲಿ ೨ನೇ ಪಿಯುಸೀ ವಿಜ್ಞಾನ ಮಾಡಕ್ಕೆ ಆಗಲ್ಲ.

ಪಕ್ಕದ ತಮಿಳುನಾಡು ಕೇರಳದಲ್ಲಿ ಪಾಸಿಂಗ್ ಪರ್ಸೆಂಟೇಜು ೮೦ಕ್ಕಿಂತ ಜಾಸ್ತಿ ಇದೆ. ನಮ್ಮ ಕರ್ನಾಟಕದಲ್ಲಿ ಬರೀ ೫೦% ಹತ್ತಿರ.

ತಮಿಳರೂ ಹಿಂಗೆ ಸುಮ್ನೆ ಮಾತಾಡ್ತಾ ಕೂತಿದ್ದಾರ?

ಈ ಕನ್ನಡ ಮೀಡಿಯಂ, ಕನ್ನಡ ಮೀಡಿಯಂ ಅಂತ ಗಲಾಟೆ ೫೦ ವರ್ಷಗಳಿಂದಲೂ ಇದೆ. ಸುಮ್ನೆ ಇವೆಲ್ಲ ಕನ್ನಡಸಂಘಗಳ ಮೆಂಬರುಗಳಿಗೆ ಟೈಂ ಪಾಸ್ ಟಾಪಿಕ್... :)

ಇದು ವರೆಗೂ ಒಂದು ಕನ್ನಡ ಸಂಘವೂ ಒಂದು ಸ್ಕೂಲ್ ತೆಗೆದಿರೋದು ಕಂಡಿಲ್ಲ............

ಕನ್ನಡಿಗರು ಶೌರ್ಯ ಏನಿದ್ದರೂ ಬರೀ ಮಾತಲ್ಲಿ ಈಗೀಗ ಬ್ಲಾಗಲ್ಲಿ :). ಕೆಲಸ ಮಾಡಿ ಅಂದರೆ ಸೋಂಬೇರಿತನ......

ಅದಕ್ಕೆ ಐಟಿಯಲ್ಲೂ ಇವರು ಬರೀ ೧೫% :)

Kishore ಅಂತಾರೆ...

We are always blamed that we concentrate on the medium but neglect the quality of eucation. We cant communicate our idea of Kannada convent schools imparting good english as well. How to create awareness among people. How to show our people the dreams we are seeing..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails