ಕಲಿಕೆ ಮತ್ತು ಕಲಿಕಾ ಮಾಧ್ಯಮ!

ಒಂದು ಭಾಷಾ ಜನಾಂಗದ ಕಲಿಕೆಯ ಭಾಷೆ ಯಾವುದಿರಬೇಕು ಅನ್ನೋ ವಿಷ್ಯ ಚರ್ಚೆಯಾಗ್ತಿರೋದು ಬಹುಶಃ ನಮ್ಮಲ್ಲಿ ಮಾತ್ರಾ. ನಮ್ಮ ಮಕ್ಕಳಿಗೆ ಯಾವುದರಿಂದ ಅನುಕೂಲ ಆಗುತ್ತೋ, ಯಾವುದರಿಂದ ನಮ್ಮ ಜನರ ಏಳಿಗೆ ಸಾಧ್ಯಾನೋ, ಯಾವುದರಿಂದ ನಮ್ಮ ಮಕ್ಕಳ ಬದುಕು ಹಸನಾಗುತ್ತದೋ ಅದೇ ಕಲಿಕಾ ಮಾಧ್ಯಮವಾಗಿರಲಿ ಅಂತ ನಮ್ಮ ಜನ ಬಯಸೋದು ಸಹಜ. ಅದು ಸರಿ ಕೂಡಾ. ಹಾಗಾದ್ರೆ ಕನ್ನಡದ ಮಕ್ಕಳ ಕಲಿಕೆಗೆ ಸಾಧನ ಇಂಗ್ಲೀಷ್ ಆಗಿರಬೇಕೆ ಅಥವಾ ಕನ್ನಡವೇ ಅನ್ನೋದನ್ನು ಸ್ವಲ್ಪ ನೋಡೋಣ್ವಾ ಗುರು.

ಜ್ಞಾನ, ಕಲಿಕೆ ಮತ್ತು ಕಲಿಕಾ ಮಾಧ್ಯಮ!

ಹುಟ್ಟಿದಾಗಿನಿಂದ ಮಗು ತನ್ನ ಸುತ್ತಲಿನ ಪ್ರಪಂಚವನ್ನು ಅರಿಯಲು ಪ್ರಮುಖವಾಗಿ ಅವಲಂಬಿಸೋದು ಅನುಕರಣಾ ವಿಧಾನವನ್ನು. ತನ್ನ ತಾಯ್ತಂದೆಯರನ್ನು, ಸುತ್ತಲಿನ ಸಮಾಜವನ್ನು ಅರ್ಥ ಮಾಡ್ಕೊಳ್ಳೋಕೆ ಮುಖ್ಯ ಸಾಧನ ಭಾಷೆ. ಭಾಷಾ ವಿಜ್ಞಾನಿಗಳ ಅಧ್ಯಯನದಂತೆ ಪ್ರತಿ ಮಗುವೂ ತಾನು ಮೊದಲು ತೆರೆದು ಕೊಳ್ಳುವ ನುಡಿಯ ಸ್ವಭಾವ, ವ್ಯಾಕರಣ, ಬಳಕೆ ಮಾಡೋ ರೀತಿ, ಸೊಗಡನ್ನು ಮೊದಲ ಆರು ವರ್ಷಗಳಲ್ಲಿ ಅತಿ ಸಹಜವಾಗಿ ಕಲಿಯುತ್ತದೆ. ಇನ್ನೆಲ್ಲಾ ಭಾಷಾ ಕಲಿಕೆಯನ್ನೂ ಆ ಅಡಿಪಾಯದ ಅನುಭವದ ಮೇಲೇ ಕಲಿಯುತ್ತವೆ. ಬಾಲ್ಯದಲ್ಲಿ ತಾಯ್ನುಡಿಗೆ ತೆರೆದುಕೊಳ್ಳುವುದರಿಂದಾಗಿ ಪ್ರಪಂಚವನ್ನು ಅರಿಯಲು ಮನುಷ್ಯನಿಗೆ ಇರುವ ಅತ್ಯುತ್ತಮ ಸಾಧನವೆಂದರೆ ತಾಯ್ನುಡಿಯೇ ಆಗಿದೆ. ಹೀಗಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳುವಿಕೆ, ಯೋಚಿಸುವಿಕೆ ಎಲ್ಲವೂ ಆ ಮೊದಲು ಕಲಿಯುವ ಭಾಷೆಯಲ್ಲಿರುವುದು ಸಹಜವಾಗುತ್ತದೆ. ಆ ಕಲಿಕೆ ಬರುವುದು ಹೇಳಿಕೊಡುವುದರಿಂದಲ್ಲ, ಗಮನಿಸುವುದರಿಂದ, ಸುತ್ತಲಿನ ಪರಿಸರದಿಂದ. ಹಾಗಾಗಿ ಕನ್ನಡಿಗರ ಕಲಿಕೆ ಕನ್ನಡದಿಂದಲೇ ಅತ್ಯುತ್ತಮವಾಗಲು ಸಾಧ್ಯ. ಕಲಿಕೆ ಅತ್ಯುತ್ತಮವಾಗುವುದು ಎನ್ನುವುದರ ಅರ್ಥ ಕಲಿಯುವ ವಿಷಯದ ಬಗ್ಗೆ ಆಳವಾದ ಅರಿವು, ವಿಷಯ ಅರ್ಥವಾಗುವುದು. ಮಕ್ಕಳು ಶಾಲೆ ಸೇರುವ ಹೊತ್ತಿಗಾಗಲೇ ಈ ತಾಯ್ನುಡಿಯ ಅಡಿಪಾಯ ಬಿದ್ದಿರುವುದರಿಂದ ಶಾಲಾ ಕಲಿಕೆ ತಾಯ್ನುಡಿಯಲ್ಲಿರುವುದು ಸರಿಯಾದದ್ದು ಎನ್ನುವುದು ಭಾಷಾ ವಿಜ್ಞಾನಿಗಳ ಅನಿಸಿಕೆ.

ಜಾಗತೀಕರಣ ಮತ್ತು ಇಂಗ್ಲಿಷ್

ಕಳೆದೊಂದು ದಶಕದಲ್ಲಿ ಜಾಗತೀಕರಣ ನಮ್ಮೆಲ್ಲರ ಬದುಕಿನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದರ ಫಲವಾಗಿ ನಮಗೆ ಸೇವಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ ದೊರೆಯಲಾರಂಭಿಸಿದೆ. ಹೊಸ ಹೊಸ ಸಂಸ್ಥೆಗಳು ಇಲ್ಲಿ ತಲೆಯೆತ್ತುವ ಮೂಲಕ ನಮ್ಮ ಜನಕ್ಕೆ ಹೆಚ್ಚು ಸಂಬಳದ ಕೆಲ್ಸಗಳು ಸಿಕ್ತಿರೋದೂ ಕಾಣ್ತಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಆ ಕೆಲಸಗಳ ಅವಕಾಶ ತಮ್ಮ ಮಕ್ಕಳಿಗೂ ಸಿಗಲೀ ಅನ್ನೋ ಹಂಬಲ ಇರೋದೂ ಸಹಜ. ಆದ್ರೆ ಈ ದಿನ ನಮ್ಮ ನಾಡಲ್ಲಿ ಬಂದಿರೋ ಉದ್ಯೋಗಗಳು ಹೆಚ್ಚಿನದಾಗಿ ಅಮೇರಿಕಾ, ಇಂಗ್ಲೇಂಡುಗಳಂತಹ ಇಂಗ್ಲಿಷ್ ಭಾಷಾ ನಾಡುಗಳಿಗೆ ಒದಗಿಸುವ ಭಾಷಾ ಆಧಾರಿತ ಸೇವಾ ಉದ್ದಿಮೆಗಳು, ಅದರಲ್ಲೂ ಕಾಲ್ ಸೆಂಟರ್ ಉದ್ದಿಮೆಗಳು. ಇಂದಿಗೂ ನಮ್ಮಿಂದ ಈ ಸೇವೆಯನ್ನು ಬಯಸೋ ಗ್ರಾಹಕರು ಜಪಾನಿಯರಾದರೆ ಜಪಾನಿ ಭಾಷೆಯಲ್ಲೂ, ಜರ್ಮನ್ನರಾದರೆ ಜರ್ಮನಿಯಲ್ಲೂ ಸೇವೆ ಕೊಡಬೇಕಾದದ್ದು ಅನಿವಾರ್ಯವಾಗುತ್ತದೆ. ಈ ಭಾಷಾ ಆಧಾರಿತ ಉದ್ದಿಮೆಗಾಗಿಯೇ ಇಡೀ ಒಂದು ನಾಡಿನ ಕಲಿಕಾ ವ್ಯವಸ್ಥೆಯನ್ನು ಕಟ್ಟುವುದು ಎಷ್ಟು ಸರಿ? ಇಷ್ಟಕ್ಕೂ ಈ ಉದ್ದಿಮೆ ನಮ್ಮ ಪಾಲಾಗಲು ಇರುವ ಮಾನದಂಡವೇ ’ಕನಿಷ್ಟ ಕೂಲಿ’ಯಾಗಿರುವಾಗ ಈ ಉದ್ದಿಮೆಗಳ ಆಯಸ್ಸೆಷ್ಟು? ನೂರು ಕೋಟಿ ಜನ ಮೂವತ್ತು ಕೋಟಿ ಜನರಿಗೆ ಎಷ್ಟು ದಿನಗಳ ಕಾಲ ಸೇವೆ ಒದಗಿಸಬಲ್ಲರು?
ಭಾಷಾ ಆಧಾರಿತ ಸೇವೆ ಒದಗಿಸುವ ಉದ್ದಿಮೆ ಜಾಗತೀಕರಣದಿಂದ ದಕ್ಕಿರೋ ಉಪ್ಪಿನಕಾಯಿಯೇ ಹೊರತು ಊಟವಲ್ಲ. ಆ ಊಟ ಸಿಗಬೇಕಾದ್ರೆ ಬೇಕಿರೋದು ಪ್ರಪಂಚದಲ್ಲಿ ಯಾರಿಗೂ ಕಡಿಮೆಯಿಲ್ಲದ ಉತ್ಪನ್ನಗಳನ್ನು ತಯಾರಿಸಬಲ್ಲ ಶಕ್ತಿ. ಆ ಶಕ್ತಿ ಸಿಗೋದು ಆ ಉತ್ಪನ್ನಗಳನ್ನು ಮಾಡೊ ಪರಿಣಿತಿ, ಅರಿವಿನಿಂದ, ಹೊಸದನ್ನು ಮಾಡಬಲ್ಲ ಯೋಗ್ಯತೆಯಿಂದ. ಆ ಯೋಗ್ಯತೆ ಸಿಗೋದೂ ತಾಯ್ನುಡಿಯಲ್ಲಿ ಕಲಿಯೋದ್ರಿಂದ. ಇದು ಬಿಟ್ಟು ಈಗಿನ ದಾರಿ ಹಿಡಿದರೆ ಅಧೋಗತಿ ಗ್ಯಾರಂಟಿ. ನಮ್ಮ ಸರ್ಕಾರಗಳು ಕನ್ನಡದಲ್ಲಿ ಕಲಿಕಾ ವ್ಯವಸ್ಥೆ ಬಲಪಡಿಸೋಕೆ ಮುಂದಾಗಬೇಕು. ತಾಯ್ತಂದೆಯರ ಮಕ್ಕಳ ಬಗೆಗಿನ ಕಾಳಜಿ ಅರ್ಥ ಮಾಡ್ಕೊಂಡು ಕನ್ನಡದಲ್ಲಿ ಕಲಿಯೋದ್ರಿಂದ ಹೇಗೆ ಮಕ್ಕಳ ಬದುಕು ಹಸನಾಗುತ್ತದೆ, ಹೇಗೆ ಮಕ್ಕಳನ್ನು ಪರಿಣಿತರನ್ನಾಗಿ ಮಾಡಬಹುದು ಅನ್ನೋದನ್ನು ಸಾಧಿಸಿ ತೋರುಸ್ಬೇಕು ಗುರು!

7 ಅನಿಸಿಕೆಗಳು:

ಉಉನಾಶೆ ಅಂತಾರೆ...

ಕನ್ನಡ ಮಾಧ್ಯಮದ ವ್ಯಾಜ್ಯದಲ್ಲಿ ಇಲ್ಲಿಯವರೆಗೆ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳು ಸರಕಾರದ ಪರವಾಗೇ ಇದ್ದುವು. ಕೊನೆಗೆ ತೀರ್ಪು ಮಾತ್ರ ಸರಕಾರದ ವಿರುದ್ಧವಾಗಿದೆ.
ಇದು ಯೋಚಿಸಬೇಕಾದ ವಿಚಾರ.
ಪತ್ರಿಕಾ ವರದಿಯಲ್ಲಿ ಕೊಟ್ಟ "ತೀರ್ಪಿನ ವಿವರಗಳನ್ನು" ನೋಡಿದರೆ "ವಾಚಕರ ವಾಣಿ" ಇದ್ದ ಹಾಗಿದೆ.
"ಕನ್ನಡ ಅಭಿವೃದ್ದಿ ಹೇಗೆ ಮಾಡಬೇಕು?" ಅಂತ ಯಾರು ಕೇಳಿದ್ರು ಹೈಕೋರ್ಟನ್ನು? ಅಂತ ಗೊತ್ತಾಗಲಿಲ್ಲ!!!
ಕರ್ನಾಟಕದಲ್ಲಿ ತಾಯ್ನುಡಿ ಅಥವಾ ಕನ್ನಡದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಬೇಕು ಎನ್ನುವುದು ೧೯೯೪ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಶಯವೆಂದು ಓದಿದ ನೆನಪು.
ನೋಡೋಣ, ಅಲ್ಲೇನಾಗುತ್ತದೋ ಎಂದು!!
-ಉಉನಾಶೆ

ಸಂಪಿಗೆ ಕಂಪು ಅಂತಾರೆ...

ಸರ್ವೋಚ್ಚ ನ್ಯಾಯಾಲಯದಲ್ಲೂ ಕನ್ನಡಕ್ಕೆ ನ್ಯಾಯ ದೊರೆಯುವುದು ಕಷ್ಟ. ಉನ್ನತ ಹಾಗೂ ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ತರುವವರೆಗೂ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕೆ ಜನರು ಖಂಡಿತ ಒಪ್ಪಲ್ಲ ಹಾಗೂ ಅದು ಸರಿ ಕೂಡ ಅಲ್ಲ ಎಂದು ನನ್ನ ಅನಿಸಿಕೆ. ಕನ್ನಡಿಗರು ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಸರ್ಕಾರ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು.
ಇದು ಬರಿ ಕನ್ನಡದ ಸಮಸ್ಯೆಯಾಗಿ ಉಳಿದಿಲ್ಲ. ಇತರ ರಾಜ್ಯಗಳಲ್ಲೂ ಈ ಸಮಸ್ಯೆ ಇದೆ. ಉದಾಹರಣೆಗೆ ತಮಿಳುನಾಡಿನಲ್ಲೂ ತಮಿಳು ಮಾಧ್ಯಮಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಕ್ಕಿರುವುದನ್ನು ನಾವು ಗಮನಿಸಬೇಕಾಗಿದೆ.

ಆನಂದ್ ಅಂತಾರೆ...

ಪ್ರಿಯ ಸಂಪಿಗೆ ಕಂಪು,
ಕುಣೀಲಾರದಾವಳಿಗೆ ನೂರೆಂಟು ನೆಪ, ಪಲಾಯನ ವಾದಿಗೆ ಸಾವಿರಾರು ದಾರಿ ಅನ್ನೋಹಾಗಾಗುತ್ತೆ ನಿಮ್ಮ ನಿಲುವು. ಮದ್ವೆ ಆಗೋವರ್ಗೂ ಹುಚ್ಚು ಬಿದಲ್ಲ, ಹುಚ್ಚು ಬಿಡೋವರ್ಗುಮ್ದ್ವೆ ಆಗಲ್ಲ ಅಂದಹಾಗೆ, ಹ ಹ್ಹ ಹ್ಹ... ಅಲ್ರೀ ನಿಮ್ಮ ಥರಾನೆ ಎಲ್ರೂ ಯೋಚುಸ್ಬುಟ್ರೆ ಕನ್ನಡಾನಾ ಮಾತಾಡಬಲ್ಲ, ಓದಲು ಬರೆಯಲು ಆಗಲಾರ್ದ ಜನಾಂಗಾನ ಹುಟ್ಟುಹಾಕೋ ಅಪಾಯ ಇಲ್ಲವೇನ್ರಿ? ಇಲ್ಲ ಮನೇಲಿ ಕಲುಸ್ತೀವಿ ಅಂದುಗಿಂದೀರಾ, ಅದು ಬೂಟಾಟಿಕೆ ಮಾತಾಗುತ್ತೆ ಅಷ್ಟೆ.

ನಮಸ್ಕಾರ

Anonymous ಅಂತಾರೆ...

timmayya nore....
adu palayanavadi maatu alla .. eegina paristhithige uchitavada maatu ...

manushyange modlu hotte batte vichara maadtane .. ad nantara bhashe/dharma anta nooraru bere vichara maadakke sadhya .....

kannada madhyamada( yaavude bhashe irli ) shikshana irbekadre ondu unnata padavigalige kannada madhyama barbeku ...erdu kannada jote english kooda kalsbeku ....

u cant expect to build high quality product by just restricting your domain of learning to one language ...

And i dont think its fair to compare Kannada with any other language .... whatever languages we quote for example they r way ahead and far reachable in Technical aspects whereas Kannada is so far super rich only literature wise ...

Anonymous ಅಂತಾರೆ...

I think it is upto parents to decide in which medium or what languages their children are going to study.

How long someone live on hopes?

When will the govt or any body start technical education or useful education in Kannada?

If the 'when' is answered, then we can support this cause.

If personally don't want my child to study in Kannada medium and suffer in its future.

ಆನಂದ್ ಅಂತಾರೆ...

Dear Mr.Anonymous,

Please read all the posts written by 'Enguru' regarding this issue. I do not think he is telling to sacrifice the future of the childern. Please understand, people like me are today in a high position because we have studied in kannada medium and our basics are very strong. Your arguement is like 'studying in kannada will spoil the future of childern'.
I only said, if we decide to put our childern in kannada medium only after getting all the higher education facilities in kannada, then it is obsolutely hypocritic. If it takes 10 years to bring everything in kannada,there will be no student who will study in kannada by then.

regards

timmayya

Anonymous ಅಂತಾರೆ...

ಹು

ಉನ್ನತಶಿಕ್ಷಣ ಕನ್ನಡದಲ್ಲಿ ಸಾಧ್ಯ ಎಂದು ನಂಬಿಕೆ ನಮಗಿಲ್ಲ..

ಇದರಲ್ಲಿ ಕನ್ನಡ ಭಾಷೆಯ ದೋಷವಿಲ್ಲ.. ದೋಷವಿರೋದು ಸರಕಾರ ಮತ್ತು ನಾವು ಕನ್ನಡಿಗರಲ್ಲೇ...

ಬರೀ ಬ್ಲಾಗನ್ನು ನಂಬಿ ನಮ್ಮ ಮಕ್ಕಳನ್ನು ಕನ್ನಡ ಮೀಡಿಯಮ್ಮಿಗೆ ಸೇರಿಸಲಾರೆವು...

ಮೊದಲು ಒಂದು ಕನ್ನಡದಲ್ಲಿ ಇಂಜಿನಿಯರಿಂಗ್ ಕಾಲೇಜು ಬರಲಿ.. ಅದಕ್ಕೆ ಸಹಾಯವನ್ನು ಮಾಡಲೂ ಸಿದ್ಧಿರಿದ್ದೇವೆ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails