ಕನ್ನಡ ಅನ್ನೋದೆ ಕಬ್ಬಿಣದ ಕಡ್ಲೆ ಆದ್ರೆ ಎಂಗಣ್ಣಾ..

ನನ್ ಮಗೀನಾ ಇಸ್ಕೂಲ್ಗೆ ಸೇರುಸ್ಬೇಕು ಅಂತ ಒಂಟಾಗ ನಮ್ ಮನ್ಯಾಗೆ ಬೋ ಮಾತುಕತೆ ಆತು ಗುರುಗಳೇ... ನಮ್ ಎಂಡ್ರು ’ಎಂಕಾ, ಮಗಾ ಉದ್ದಾರ ಆಗ್ಬೇಕಂದ್ರೆ ಅದುನ್ ಇಂಗ್ಲಿಸ್ ಬಾಸೇಲೆ ಓದುಸ್ಬೇಕು ಕಣ್ಲಾ...’ ಅಂತಾ ಒಂದೇ ಅಟ. ನಾನಾರಾ ಸುಮ್ಕಿದ್ನಾ? ’ಅಲ್ ಕಣಮ್ಮಿ, ನಮ್ಗೆ ಕನ್ನಡಾನೆ ಏಳ್ ಕೊಡೋದು ಸುಲಬ, ಅದು ನಮ್ ಬಾಸೆ ಅಲ್ವಾ... ಮಗೀಗೆ ಕಲ್ಯದೆಲ್ಲಾ ಅರ್ತ ಆಗ್ಬೇಕಲ್ವಾ? ಕನ್ನಡದಾಗೇ ಓದ್ಲಿ. ನಮ್ ಶಾಲೇ ಮಾಸ್ತರ್ರು ಕನ್ನಡದೋರೆಯಾ... ಅವ್ರೇನು ಇಂಗ್ಲೇಂಡಿಂದ ಬಂದಿಲ್ಲಾ, ಮಗಾ ಕನ್ನಡದಲ್ಲೇ ಓದ್ಲಿ’ ಅಂತ ಕನ್ನಡ ಶಾಲೆಗೇ ಸೇರುಸ್ದೆ ಕಣ್ರಣ್ಣಾ....
ಕನ್ನಡ ಅನ್ನೋ ಕಬ್ಬಿಣದ ಕಡಲೆ!
ಮಗಾ, ಇಸ್ಕೂಲಲ್ಲಿ ಕಲ್ತಿದ್ನ ನಾನೂ ಅಂಗೇ ಓದುಸ್ತಾ ಓದುಸ್ತಾ ಇದ್ರೆ ಇದೇನ್ ಕನ್ನಡ ಅಂದ್ರೆ ನಾ ಮಾತಾಡಾದೋ, ಇಲ್ಲಾ ಈ ಪುಸ್ಕದಲ್ಲಿ ಬರ್ದಿರೋದೋ ಅಂತ ಗೊಂದಲಾ ಸುರು ಅತ್ಕಂಬುಡ್ತು.. ಕೂಡೋದಕ್ಕೆ ಸಂಕಲನ ಅನ್ನಬೇಕು, ಕಳೆಯೋದಕ್ಕೆ ಯವಕಲನ ಅನ್ನಬೇಕು. ನನ್ ಮಗ ಯವಕಲನ ಅಂದ್ರೆ ಆ ಮೇಸ್ಟ್ರಪ್ಪ ಏಯ್ ಮೊದ್ಲು ಉಚ್ಚರಣೆ ಸರಿ ಮಾಡ್ಕೊ ಅಂತ ಬಯ್ಯೋದಾ? ಅಲ್ಲಾ ಕಳೆಯದ್ನ ಕಲ್ಸಕ್ಕೆ ಯವಕಲನ ಅನ್ನೋ ಪದ ಯಾಕ್ ಸರಿಯಾಗ್ ಉಚ್ಚರುಸ್ಬೇಕು ಅಂತಾ ಗೊತ್ತೇ ಆಗ್ಲಿಲ್ಲ. ಮುಂದ್ ಅಂಗೇ ಯಾಕರಣದ ಪಾಟ ಮಾಡೋವಾಗ ಅದೆಂತದೋ ಜಸ್ವ ಸಂದಿ, ಚುಸ್ವ ಸಂದಿ, ಸವರ್ಣ ದೀರ್ಗ ಸಂದಿ ಅಂತ ಯೋಳ್ ಕೊಟ್ರು. ದಂದುವ ಸಮಾಸ, ಬವುರೀವಿ ಸಮಾಸ, ಅವ್ಯಯೀ ಬಾವ ಸಮಾಸ ಅಂತೆಲ್ಲಾ ಮಗಾ ಕೇಳ್ತಿದ್ರೆ ಇದ್ಯಾಕೋ ಶಾಲೇಲಿ ಕಲ್ಸೋ ಕನ್ನಡ ಬಾಸೇ ನಾವ್ ಆಡೊ ಅಷ್ಟು ಸುಲುಬದ್ ಅಲ್ಲಾ ಅನ್ಸಕ್ ಸುರುವಾಯ್ತು.
ಇಗ್ನಾನದ ಪಾಟದಲಿ ಎಲೆ ಅಸ್ರು ಅನ್ನೋದ್ನಾ ಪತ್ರ ಅರಿತ್ತು ಅಂತಾ ಏಳ್ ಕೊಟ್ಟವ್ರೆ. ಅದೇನೋ ಪೀನ ದರ್ಪಣ, ನಿಮ್ನ ದರ್ಪಣ ಅಂತೆ. ಅಂಗಂದ್ರೇನ್ ಬುದ್ದಿ ಅಂತ ಮಾಸ್ತರಪ್ಪನ್ ಕೇಳುದ್ರೆ... ’ನಿಮ್ನ ದರ್ಪಣ ಅಂದ್ರೆ ಕನ್ನಡಿ ತಗ್ಗಾಗಿರದೂ, ಪೀನ ದರ್ಪಣ ಅಂದ್ರೆ ಕನ್ನಡಿ ಉಬ್ಬಾಗಿರದೂ’ ಅಂದ್ರು. ಅದುಕ್ಕೆ ನಮ್ ಮಗಾ ’ಅಪ್ಪಯ್ಯ ಅದ್ನ ಉಬ್ಬುಗನ್ನಡಿ, ತಗ್ಗುಗನ್ನಡಿ ಅಂತಲೇ ನಮ್ ಬುಕ್ಕಲ್ಲಿ ಬರೀಬೋದಲ್ಲಪ್ಪಾ... ನಿಮ್ನ, ಪೀನ ಅನ್ನದು ಕನ್ ಪ್ಯೂಜ್ ಆಯ್ತುದೆ, ಯಾವ್ದ್ ಏನು ಅಂತ ಜಪ್ತಿಲ್ ಇರಕ್ಕಿಲ್ಲ’ ಅಂದಾಗ ಇದ್ಯಾಕೋ ಕನ್ನಡದ ಶಾಲೇಲಿ ಕನ್ನಡದಲ್ ಕಲ್ಸದ್ ಬುಟ್ಟು ಇನ್ಯಾವ ಬಾಸೇಲಿ ಕಲ್ಸಕ್ ಸುರು ಅಚ್ಕಂಡವ್ರಲ್ಲಾಪ್ಪೋ ಅನ್ಸಕ್ ಸುರುವಾಯ್ತು ಗುರುಗಳೇ...ನೀವಾರ ಯೋಳಿ, ನಾವ್ ಮಾತಾಡೋದು ಕೀಳು ಕನ್ನಡಾನಾ? ನಮ್ ಐಕ್ಳುಗಳಿಗೆ ಅರ್ತ ಆಗೋ ಅಂಗೆ ಪುಸ್ಕ ಬರೆಯೋದ್ ಆಗಾಕಿಲ್ವಾ? ಕನ್ನಡದ ಮಕ್ಳಿಗೆ ಕನ್ನಡದಲ್ಲೇ ಪಾಟ ಮಾಡಬೇಕಪ್ಪಾ.. ನೀವೇನಂತೀರೀ ಗುರುಗಳೇ?

17 ಅನಿಸಿಕೆಗಳು:

Anonymous ಅಂತಾರೆ...

ಎಷ್ಟೋ ಜನಕ್ಕೆ ನಾವು ಶಾಲೆನಲ್ಲಿ ಓದ್ತಿರೋದೇ ಕನ್ನಡ ಅನ್ನೋ ಭಾವನೆ ಇದೆ. ಯದ್ಭಾವ೦ ತದ್ಭ್ಹವತಿ ಅನ್ನೋ ಹಾಗೆ ಯಾರೂ ಯಾವತ್ತೂ ಮಾತಾಡದೇ ಇರೋ ಅತೀ ಮುಖ್ಯವಾದ ವಿಷಯಕ್ಕೆ ಕೈಹಾಕಿದಿರಾ ಗುರು. ಪಠ್ಯ ಪುಸ್ತಕ ಬರೆಯೋರ ಪ್ರತಿಕ್ರಿಯೆ ಈ ವಿಷಯಕ್ಕೆ ಹೇಗಿರುತ್ತದೆ ಅ೦ತ ನೋಡ್ಬೇಕು. ಯಾವುದೋ ಒ೦ದು ಪಾಠವನ್ನು ನಾವು "ಕನ್ನಡ-ಸ೦ಸ್ಕೃತದಿ೦ದ" ತೆಗೆದು ಅದನ್ನು ಕನ್ನಡದಲ್ಲಿ ಶಾಲಾ ಮಕ್ಕಳಿಗೆ ಹೇಳಿಕೊಡಬೇಕು. ಆಮೇಲೆ ಅದಕ್ಕೆ ಅವರ ಪ್ರತಿಕ್ರಿಯೆ ಹೇಗಿದೆ ಅ೦ತ ಊರಲ್ಲಿ ಡ೦ಗೂರ ಸಾರಬೇಕು. ಮುಖ್ಯವಾಗಿ ಈ ರೀತಿ ಪ್ರಯತ್ನ ನಡೀತಿದೆ ಮತ್ತು ಇದೇ ನಮ್ಮ ಮು೦ದಿನ ಭವಿಷ್ಯ ಅನ್ನೋದು ನಮ್ಮ ಸರ್ಕಾರದ ಕಿವಿಗೆ ಹೋಗಲೇ ಬೇಕು ಗುರು.

Anonymous ಅಂತಾರೆ...

ಲೇಖನ ತುಂಬಾ ಚೆನ್ನಾಗಿದೆ. ಮೊದಲಿಗೆ ಓದಿದಾಗ ಹೌದಲ್ವಾ ಅನ್ನಿಸುತ್ತೆ. ಈ ಪದಗಳು ಮೊದಲಿಂದಲೇ ನಮ್ಮ ಕನ್ನಡ ಭಾಷೆಯಲ್ಲಿ ಇದ್ದವೆ? ಯಾರು ಕಂಡು ಹಿಡಿದರು ಇವನ್ನು? ಬೇರೆ ಭಾಷೆಯಿಂದ (ಅಂದರೆ ಸಂಸ್ಕ್ರುತದಿಂದ) ಪಡೆದಿರುವ ಪದಗಳೇ ಮುಂತಾದ ವಿವರಣೆ ಬೇಕು. ಇದನ್ನು ಸಂಪೂರ್ಣವಾಗಿ ತಳ್ಳಿ ಹಾಕುವುದಕ್ಕೂ ಆಗುವುದಿಲ್ಲ, ಕೆಲವೊಂದು ಪದಗಳನ್ನು ಬದಲಾಯಿಸಬಹುದೇನೋ...

ಆದರೆ ಆಡು ಭಾಷೆಯ ಪದಗಳೀಗೂ ವೈಗ್ನ್ಯಾನಿಕ ಪದಗಳಿಗೂ ವ್ಯತ್ಯಾಸ ಇದ್ದೇ ಇದೆ. ನಿಮ್ಮ ಉದಾಹರಣೆಯನ್ನೇ ತೆಗೆದುಕೊಂಡರೆ ಪತ್ರಹರಿತ್ತು ಹಾಗು ಎಲೆ ಹಸಿರು. ಇಂಗ್ಲೀಷಿನಲ್ಲಿ ಆಡು ಭಾಷೆಯಲ್ಲಿ ’leaf green' ಅನ್ನುತ್ತಾರೆ, ವೈಗ್ನ್ಯಾನಿಕವಾಗಿ 'photosynthesis’ ಎಂಬ ಪದದ ಬಳಕೆ ಇದೆ. ಹಾಗಿದ್ದಲ್ಲಿ ಇಂಗ್ಲೀಷಿನಲ್ಲೂ 'leaf green' ಎಂದು ಬದಲಾಯಿಸಿ ಎಂದು ವಿದ್ಯಾರ್ಥಿಗಳು ಯಾಕೆ ಬೊಬ್ಬೆ ಹೊಡೆಯುತ್ತಿಲ್ಲ? ಇಂಗ್ಲೀಷಿನಲ್ಲಿ ಹೀಗಿದೆ ಹಾಗಾಗಿ ನಮ್ಮಲ್ಲೂ ಹಾಗೇ ಇರಲಿ ಎಂದು ನಾನು ಹೇಳುತ್ತಿಲ್ಲ. ವಿದ್ಯಾರ್ಥಿಗಳ ಕಲಿಕೆ ಯಾವಾಗಲು ಕಷ್ಟವೇ. ನಾವೆಲ್ಲ ಕನ್ನಡ ಮಾಧ್ಯಮದಲ್ಲೇ ಕಲಿತು ಬರಲಿಲ್ಲವೇ? ನನಗಂತೂ ಒಂದು ದಿನವೂ ಈ ಪದಗಳು ಕಷ್ಟ ಎನಿಸಲಿಲ್ಲ. ನಮ್ಮಲ್ಲಿ ಈಗಿನ ವೈಗ್ನ್ಯಾನಿಕ ಪದಗಳೆಲ್ಲವಕ್ಕೂ ಸರಿಸಮಾನವಾದ ಪದಗಳಿವೆಯಲ್ಲ ಎಂದು ಸಂತೋಷ ಪಡಬಹುದು.

ಕನ್ನಡ ಕಬ್ಬಿಣದ ಕಡಲೆ ಎಂದು ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ನಿಲ್ಲಿಸಬಾರದು. ನಮ್ಮದಲ್ಲದ ಭಾಷೆಯಾದ ಇಂಗ್ಲೀಷನ್ನೇ ಕಲಿತು ದೊಡ್ಡ ದೊಡ್ಡ ಸ್ಥಾನದಲ್ಲಿಲ್ಲವೇ ನಮ್ಮಲ್ಲಿ? ನಮ್ಮ ಕನ್ನಡ ಭಾಷೆಯಲ್ಲಿ ಹೊಸ ಹೊಸ ವೈಗ್ನ್ಯಾನಿಕ ಪದಗಳನ್ನು ಶಾಲೆಯಲ್ಲಿ ಕಲಿಯುವುದರಲ್ಲಿ ತಪ್ಪೇನಿಲ್ಲ ಎಂದು ನನ್ನ ಅನಿಸಿಕೆ.

ಮತ್ತೇನೆಂದರೆ, ಕನ್ನಡ ಕಲಿಕಾ ಪ್ರಕಾರದಲ್ಲಿರುವ ದೋಶಾಲೋಪಗಳನ್ನು ಹುಡುಕುವುದಕ್ಕಿಂತ ಮುಖ್ಯವಾದ ಕೆಲಸವೆಂದರೆ ಕನ್ನಡದಲ್ಲಿ ಕಲಿತವರಿಗೆ ಮುಂದೇನು ಎನ್ನುವ ಬಗ್ಗೆ ಚಿಂತಿಸುವುದು. ಹೆಂಡತಿಗೆ ಬುದ್ದಿ ಹೇಳಿ ಕನ್ನಡದಲ್ಲಿ ಮಗುವಿಗೆ ಹೇಳಿ ಕೊಡೋದು ಸುಲಭ, ಕಲಿಯೋದು ಸುಲಭ ಅಂತ ಹೇಳಿ ಮಗುವನ್ನೇನೋ ಶಾಲೆಗೆ ಸೇರಿಸಿದ್ರಿ. ಮಗು ವಿಗ್ನ್ಯಾನಿಯಾದರೇನೋ ನಮ್ಮ ಕನ್ನಡದಲ್ಲೇ ಏನೋ ಒಂದು ಥೀಸೀಸ್ ಬರೆದು ಜೀವನ ನಡೆಸುತಾನೆ. ಆದರೆ ಎಲ್ಲರೂ ವಿಗ್ನ್ಯಾನಿಗಳಾಗೋಲ್ಲವೆ... ಮಿಕ್ಕವರಿಗೆಲ್ಲಿದೆ ಕೆಲಸ?

Anonymous ಅಂತಾರೆ...

ನಿಮ್ಮ ಕಾಮೆಂಟನ್ನು ಉಳಿಸಲಾಗಿದೆ ಹಾಗೂ ಬ್ಲಾಗ್ ಮಾಲೀಕರ
’ಅಂಗೀಕಾರದ ನಂತರ ಗೋಚರಿಸುತ್ತದೆ’

ಇದಕ್ಕಿಂತ ’ಒಪ್ಪಿಗೆಯ ನಂತರ ಕಾಣಿಸುತ್ತದೆ’ ಎನ್ನುವುದು ಸುಲಭ :-) ನಿಮ್ಮ ಲೇಖನದ ಪ್ರಕಾರ

Anonymous ಅಂತಾರೆ...

ಜಿಂಕೆ ... ಅಗೈನ್ ಅವರೆ,

ನೀವು ಹೇಳುವುದು ಸರಿಯಾಗಿದೆ. ನಮಗೂ ಹಾಗೇ ಅನ್ನಿಸುತ್ತದೆ.

ನಿಮ್ಮ ಅನಿಸಿಕೆಯನ್ನು ದಯವಿಟ್ಟು ಗೂಗಲ್-ಗೆ ತಿಳಿಸಿ. ಬ್ಲಾಗಿನಲ್ಲಿ "ಕನ್ನಡ ಯು.ಐ." ಆರಿಸಿಕೊಂಡರೆ ಈ ರೀತಿ ಬಂದರೆ ಅದಕ್ಕೆ ಜವಾಬ್ದಾರರು ನಾವಲ್ಲ, ಗೂಗಲ್-ಅನ್ನು ಕನ್ನಡಕ್ಕೆ ಅನುವಾದಿಸಿರುವ ಅಂತರ್ಜಾಲ ಕನ್ನಡಿಗರು.

ಇಷ್ಟು ದಿವಸ ನಾವು "ಕನ್ನಡ ಯು.ಐ." ಆರಿಸಿಕೊಳ್ಳದೆ ಇರುವುದಕ್ಕೆ ನೀವು ಹೇಳುತ್ತಿರುವುದೇ ಕಾರಣ. ಆದರೆ ಈಗ ಕೆಲವು ದಿನ ಅದನ್ನು ಬಳಸಿ ನೋಡುವ, ಏನೇನು ಕೊರತೆಗಳಿದೆ ಅಂತ ತಿಳಿಯುತ್ತೆ ಅಂತ ಹಾಕಿದ್ದೇವೆ.

ತಿಳಿಗಣ್ಣ ಅಂತಾರೆ...

ಬರಹವು ಚನ್ನಾಗಿದೆ.

ನನ್ನಿ.

Anonymous ಅಂತಾರೆ...

ಹೌದು ಗುರು, ಕನ್ನಡದಲ್ಲೇ ಪಾಠ ಮಾಡ್ಬೇಕು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಈಗಿರೋ ಹಾಗೆ ಕೇವಲ ಸಮಾಸ , ಸಂಧಿ ಮಾತ್ರ ಅಲ್ಲ. ವಿಜ್ಞಾನದ ಈಗಿನ ಆಗು ಹೋಗುಗಳ ಬಗ್ಗೆ ಕಲಿಸ ಬೇಕು.

ಚಂದ್ರು

Anonymous ಅಂತಾರೆ...

ಕನ್ನಡ ಮಾದ್ಯಮದಲ್ಲಿ ಓದಿದರೆ ಮುಂದೆ ಇಂಗ್ಲಿಶ್ ಮಾದ್ಯಮಕ್ಕೆ ಸ್ವಿಚ್ ಆಗುವುದು ಕಷ್ಟ ಆಗುತ್ತೆ. ಕನ್ನಡ ಮಾದ್ಯಮದ ಒಳಗಡೆನೆ ತೊಂದರೆ ಇದೆ ಎಂದು ನೀವೇ ಹೇಳುತ್ತಿರಿ. ಹೀಗಿರುವಾಗ ಕನ್ನಡ ಮಾದ್ಯಮದಿಂದ ಎನು ಪ್ರಯೊಜನ.

Anonymous ಅಂತಾರೆ...

ಜಿಂಕೆ ಮರಿ

ವಿಗ್ಯಾನ, ವೈಗ್ಯಾನಿಕ ಅಲ್ಲ ಮರಿ.. ವಿಜ್ಞಾನ, ವೈಜ್ಞಾನಿಕ. ( ಐದು ಸರತಿ ಇದೇ ತಪ್ಪು )

ದೋಶಾಲೋಪ ಅಲ್ಲ ಲೋಪದೋಷ

ಕನ್ನಡ ಮಾಧ್ಯಮದಲ್ಲಿ ಓದಿದ್ದ ನೀವು. :)

Hussain ಅಂತಾರೆ...

pattya pustaka rachne maadovru ishtella tale kedisi kondiddre nivu adara bagge chakara vettuva avashyakathe irtirlilla.

pattya rachisuvarella baril copy paste maaduvare iddare ;)

Anonymous ಅಂತಾರೆ...

ಕುರಿ ಮರಿ ಅವರೆ,
ಕನ್ನಡ ಕೀ ಬೋರ್ಡ್ ಆಗಿದ್ದಲ್ಲಿ "ವಿಗ್ಯಾನ, ವೈಗ್ಯಾನಿಕ ಅಲ್ಲ ಮರಿ.. ವಿಜ್ಞಾನ, ವೈಜ್ಞಾನಿಕ. ( ಐದು ಸರತಿ ಇದೇ ತಪ್ಪು )" ಇದು ಆಗುತ್ತಿರಲಿಲ್ಲ.
ದೋಶಾಲೋಪವೋ ಲೋಪದೋಶವೋ ಒಟ್ಟಿನಲ್ಲಿ ನನ್ನ ಕಾಮೆಂಟಿನಲ್ಲಿ ಬರೆದದ್ದು ಅರ್ಥವಯಿತಲ್ಲ.... ಅದಕ್ಕೆ ಉತ್ತರವನ್ನು ಕೊಡುವುದಕ್ಕಾದಲ್ಲಿ ಕೊಡಿ, ಅದನ್ನು ಬಿಟ್ಟೂ ನನ್ನ ಕಾಮೆಂಟಿನಲ್ಲಿರುವ ದೋಶಾಲೋಪಗಳನ್ನು ಹುಡುಕುವುದಕ್ಕೆ ಹೋಗಬೇಡಿ.

Hussain ಅಂತಾರೆ...

kannadadalli oduvudu kashta kannnada dinda yenu pryojana illa annodu tilivalike illandene vaddo nepa ashte ...

innu haela bekandre, chikkandi nalle yella bhashe galanna tilukondu oduvadralli yava dodda kelasanu alla.

navella maadillve? namm tatandiru maadillve?

pille ge gulle neva ante ;) .. :D

Anonymous ಅಂತಾರೆ...

ಒಂದು ಹಂತದವರೆಗೆ ಆಡು ಭಾಷೆಯಲ್ಲೇ ( ಸಾಹಿತ್ಯದ / ಪುಸ್ತಕದ ಭಾಷೆ ಯನ್ನು ಬಿಟ್ಟು ) ವಿಜ್ಞಾನ , ಗಣಿತ ಅಷ್ಟೇ ಯಾಕೆ ಎಲ್ಲ ವಿಚಾರಗಳನ್ನು ಹೇಳಿಕೊಡಬೇಕು ಅನ್ನೋದು ಸರಿಯಾಗಿ ಕಾಣುತ್ತಾದರೂ ....ನಮ್ಮ ಎಂಕನ ಆಡುಭಾಷೆ ನಮ್ಮ "ಶೆಟ್ಟ"ರಿಗೂ ,"ಹಿತ್ತಲಮನೆ"ಯವರಿಗೂ ಆಡುಭಾಷೆಯಾಗಬೇಕಲ್ಲ. ಈ ಸಮಸ್ಯೆಯನ್ನು ಬಗೆ ಹರಿಸುವುದು ಹೇಗೆ ? ಅದರ ಬದಲು ಉತ್ತಮವಾದ "ಪಾರಿಭಾಷಿಕ ಶಬ್ಧಕೋಶ" ವನ್ನು ರೂಪಿಸಿಕೊಂಡು "ಪುಸ್ತಕದ ಪದಗಳನ್ನು" ಬಳಸುವುದರಲ್ಲಿ ತಪ್ಪೇನು ? ಹಾಗೆಂದ ಮಾತ್ರಕ್ಕೆ ಈಗೀರುವುದನ್ನೆಲ್ಲ ಒಪ್ಪಿಕೊಳ್ಳ ಬೇಕೆಂದೇನಲ್ಲ.

ಆಡುಭಾಷೆಯಲ್ಲಿ ಇಲ್ಲದಿದ್ದರೆ ಅದು ಅರ್ಥವೇ ಆಗದು ಅನ್ನುವುದು ತೀರ್ಮಾನವಾದರೇ ಕುವೆಂಪು,ಅಡಿಗ ಮೊದಲಾದವರ ಕಾವ್ಯವನ್ನು ನಾವು ಇನ್ನೊಮ್ಮೆ ಪರಿಗಣಿಸಬೇಕಾಗುತ್ತದೆ.ಸಾಹಿತ್ಯ ಮತ್ತು ವಿಜ್ಞಾನ ಬೇರೆ ಬೇರೆ ಅನ್ನೋ ವಾದ ನಿಮ್ಮದಾದರೆ " ಸಾಹಿತ್ಯ ಮತ್ತು ವಿಜ್ಞಾನದಲ್ಲಿ ಮನಸ್ಸಿಗೆ / ಮನುಷ್ಯನಿಗೆ ಯಾವುದು ಹತ್ತಿರ ?" ಅನ್ನೋ ಪ್ರಶ್ನೆ ಕೇಳಿಕೊಳ್ಳಬೇಕಾಗುತ್ತದೆ :-)

ಆನಂದ್ ಅಂತಾರೆ...

ಜಿಂಕೆ ಮರಿಯವರಿಗೆ,

ಇಂಗ್ಲಿಷಿನ ಮಕ್ಕಳು ಇಂಗ್ಲಿಷ್ ಭಾಷೇಲಿ ಪದಗಳು ಬೇಕು ಅಂತಾ ಕೇಳ್ತಾ ಇಲ್ಲಾ ಅನ್ನೋದು ಕನ್ನಡದಲ್ಲಿ ಪದಗಳು ಅನ್ನೋದನ್ನು ತಪ್ಪು ಅಂತ ಸಾಬೀತು ಮಾಡಲ್ಲ. ಆದರೆ ಕನ್ನಡದಲ್ಲಿ ಕನ್ನಡಿಗರು ಕಲೀದೇ ಇರೋ ಕಾರಣಕ್ಕೆ ನಮ್ಮಲ್ಲಿ ನೋಬೆಲ್ ಪ್ರಶಸ್ತಿ ಗಳಿಸೋ ಅಂತ ಮೇಧಾವಿಗಳು ಕಡಿಮೆ. ನೀವಂದಂತೆ ಕನ್ನಡದಲ್ಲಿ ವಿಜ್ಞಾನಿಯಾದ್ರೆ ಬದುಕಬಹುದು, ಇಲ್ಲದಿದ್ರೆ ಏನು ಗತಿ ಅನ್ನೋ ಪರಿಸ್ಥಿತಿಯನ್ನೇ ನಾವು ಬದಲಾಯಿಸಬೇಕಿರೋದು. ಕನ್ನಡ ಅನ್ನ ಕೊಡೋ ಭಾಷೆಯಾಗಬೇಕು ಅನ್ನೋದೇ ನಮ್ಮ ಗುರಿಯಾಗಬೇಕು. ಇದು ಇವತ್ತು ಅಸಾಧ್ಯ ಅನ್ನಿಸಬಹುದು. ಆದರೆ ಸ್ವಲ್ಪ ಹೀಬ್ರೂ ಭಾಷೆಯ ಇತಿಹಾಸ ನೋಡಿದರೆ ಇದು ಅತ್ಯಂತ ಸುಲಭದ ಕೆಲಸ ಅನ್ಸುತ್ತೆ. ಇಷ್ಟಕ್ಕೂ ಹೊರನಾಡಿನಲ್ಲಿ ನಮ್ಮ ಭಾಷೆಗೆ ಯಾವ ಮಾನ್ಯತೆಯೂ ಇರಲ್ಲ, ಇರೋದು ನಾವು ತಯಾರು ಮಾಡೋ ಉತ್ಪನ್ನಗಳ ಗುಣಮಟ್ಟಕ್ಕೆ. ಕನ್ನಡ ವಿಶ್ವಮಟ್ಟದಲ್ಲಿ ಸಲ್ಲುವುದಿಲ್ಲ ಅನ್ನುವುದು ನಿಜವಾದರೆ ಜಪಾನೀಸ್, ಹೀಬ್ರೂ, ಜರ್ಮನ್ ಭಾಷೆಗಳೂ ಅಷ್ಟೇ ಸಲ್ಲದವುಗಳು. ಆದರೂ ಆಯಾ ನಾಡುಗಳು ಏಳಿಗೆ ಸಾಧಿಸಿರುವುದು ತಾವು ತಯಾರಿಸಿದ ಉತ್ಪನ್ನಗಳಿಂದ (ಉತ್ಪನ್ನಗಳ ಗುಣಮಟ್ತದಿಂದ). ಕನ್ನಡಿಗರೂ ಅದನ್ನು ಸಾಧಿಸಬೇಕೆಂದರೆ ನಮ್ಮ ಜ್ಞಾನ ಸಂಪಾದನೆ ನಮ್ಮ ನುಡಿಯಲ್ಲೇ ಆಗಬೇಕು ಅನ್ನುವುದು ನಿಚ್ಚಳವಾದ ನಿಜ.

ಅನಾನಿಮಸ್ ಅವರೇ,
ನೀವಂದಂತೆ ಕುವೆಂಪು, ಅಡಿಗರ ಕಾವ್ಯಗಳು ಎಲ್ಲರಿಗೂ ಅರ್ಥವಾಗದು ಎನ್ನುವುದು ಕೂಡಾ ನಿಜ. ಅದನ್ನು ಒಪ್ಪಿಕೊಳ್ಳುವುದು ಅವಮಾನ ಅಲ್ಲ. ಆ ಕಾವ್ಯಗಳು ಅರ್ಥವಾಗದಿರುವುದಕ್ಕೆ ಕಾರಣ ಅದರ ಭಾಷೆ. "ತೇನವಿನಾ, ತೃಣಮಪಿ ನಚಲತೆ ತೇನವಿನಾ" "ಓ ನನ್ನ ಚೇತನಾ, ಆಗು ನೀ ಅನಿಕೇತನಾ..." ಅಂತ ಕುವೆಂಪು ಅವ್ರು ಬರ್ದಿರೋದನ್ನು ಕನ್ನಡ ಅಂತ ಒಪ್ಪಿಕೊಳ್ಳೋದು ಸರೀನಾ? ಇವತ್ತು ಹಳೆಗನ್ನಡವೂ ಅರ್ಥವಾಗಲ್ಲ ಅನ್ನೋದೂ ನಿಜಾನೆ, ಆದರೆ ಅದಕ್ಕೆ ಕಾರಣವೂ ನಾವು ಅದರಿಂದ ದೂರ ಸಾಗಿರೋದು. ಬೇರೆ ಭಾಷೆ ಪದಗಳನ್ನು ಉಲಿಯಲು ಸುಲಭವಾಗಿದ್ದರೆ ಬಳಸೋದು ಖಂಡಿತ ತಪ್ಪಲ್ಲ. ಹಾಗೇ ಇತರೆ ಭಾಷೆಯ ಪದಗಳನ್ನು ನಮ್ಮ ನಾಲಗೆಯಲ್ಲಿ ಉಲಿಯಲು ಸುಲಭವಾಗುವಂತೆ ಬದಲಾಯಿಸಿಕೊಳ್ಳುವುದೂ ಸರಿಯಾದ್ದೇ. ಇವೆಲ್ಲಾ ಸರಿ ಅನ್ನೋಕ್ಕಿಂತ ಸಹಜ ಅನ್ನೋದು ಮೇಲು. ನೀವಂದಂತೆ ಕನ್ನಡದಲ್ಲಿ ಆಡುನುಡಿಗಳ ನಡುವೆ ಇರೋ ವ್ಯತ್ಯಾಸಗಳು ಸ್ವಲ್ಪ ಮಟ್ಟಿಗೆ ಸಮಸ್ಯೆ ಉಂಟು ಮಾಡ್ತವೆ ಅನ್ನೋದು ಕೂಡಾ ನಿಜವೇ. ಆದರೆ ಆ ಕಾರಣದಿಂದ ಯಾರ ನಾಲಗೆಯಲ್ಲೂ ಸರಳವಾಗಿ ಉಲಿಯಲಾಗದ, ಉಲಿದರೂ ಅರ್ಥವಾಗದ ಪದಗಳನ್ನು ಕಲಿಕೆಯಲ್ಲಿ ಬಳಸುವುದಕ್ಕಿಂತ ಅರ್ಥವಾಗುವ ಪದಗಳನ್ನು ಬಳಸುವುದು ಮೇಲು. ಪಾರಿಭಾಷಿಕ ಪದ ಅನ್ನೋದರ ಅರ್ಥವೇ ಬೇರೆ ಭಾಷೆಗಳಿಂದ ಪಡೆದ ಪದಗಳು ಅಂತ, ಹಾಗೆ ಬಳಸೋ ಬದಲು ನಮ್ಮದೇ ಭಾಷೆಯ ಪದಗಳನ್ನು ಬಳಸೋದು ಉತ್ತಮ.

ಪ್ರೀತಿಯಿಂದ

ತಿಮ್ಮಯ್ಯ

Anonymous ಅಂತಾರೆ...

ನೀವು ಹೇಳಿದ್ದು ಸರಿ ಏನ್ಗುರು ಅವರೆ. ಚಿಕ್ಕ ಮಕ್ಕಳಿಗೆ ಕಲಿಸುವ ಕನ್ನಡದಲ್ಲಿ ಸಂಸ್ಕ್ರುತ ಹೊಗಿಸುವುದು ಸರಿಯಲ್ಲ. ಆಗಿನ ಕನ್ನಡಿಗರು ಉಲಿಯಲು ಸಲೀಸಾಗುವಂತ ಕನ್ನಡ ಒರೆಗಳನ್ನು ಹುಟ್ಟಿಸಲಿಲ್ಲವೆ? ಉದಾ: ಪಕ್ಷಿ->ಪಕ್ಕಿ/ಹಕ್ಕಿ. ಇದೇ ರೀತಿ ಮಕ್ಕಳಿಗೆ ಉಲಿಯಲು ಅನುಕೂಲವಾಗುವಂತ ಕನ್ನಡ ಪದಗಳನ್ನು ಹುಟ್ಟಿಸಬಹುದು.
ಇನ್ನು ಆಡುಮಾತಿನ ಕನ್ನಡ ಬೇರೆಬೇರೆ ಕಡೆ ಬೇರೆ ಬೇರೆ ರೂಪಗಳನ್ನು ಹೊಂದಿದ್ದರೂ, ಎಲ್ಲ ಕನ್ನಡಿಗರಿಗೆ ಒಂದೇ ಆಗಿರುವ ಕನ್ನಡ ಸಾಕಷ್ಟಿದೆ :)

ವಿಜಯ

Drushya ಅಂತಾರೆ...

ಕುವೆಂಪು ಅಡಿಗರನ್ನು ನೆನೆಪಿಸಿಕೊಂಡ ನಾವು ತೇಜಸ್ವಿಯವರನ್ನು ಯಾಕೆ ಮರೀತಿದ್ದೀವಿ??

Anonymous ಅಂತಾರೆ...

super site guru i love it.

Anonymous ಅಂತಾರೆ...

jinke mari anna,

ondu saNNa thiddupadi: patra harittu andare chlorophyll, photosynthesis alla.
Photosynthesis andre dyuthisanshleShaNa kriye.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails