ಅಕ್ಕ ಸಮ್ಮೇಳನ ಸಣ್ಣ ಕತೆಗಳ ಸ್ಪರ್ಧೆ - ಬರೆಯಿರಿ, ಬಹುಮಾನ ಗೆಲ್ಲಿರಿ !

ಇದೇ ವರ್ಷ ಸೆಪ್ಟೆಂಬರ್ 3,4 ಮತ್ತು 5 ರಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆಯಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ ಸಣ್ಣ ಕತೆಗಳ ಸ್ಪರ್ಧೆಯ ಬಗ್ಗೆ ಸಾಹಿತ್ಯ ಸಮೀತಿಯ ಸತ್ಯಾ ಅವರು ಏನ್ ಗುರುವಿನಲ್ಲಿ ಪ್ರಕಟಿಸಲು ಕೋರಿ ಕಳಿಸಿರುವ ಮಾಹಿತಿ ಇಂತಿದೆ. ಆಸಕ್ತ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಯಶಸ್ಸಿಗೆ ಕಾರಣರಾಗಿ.

6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ೨೦೧೦ಸಣ್ಣ ಕತೆಗಳ ಸ್ಪರ್ಧೆ ಕನ್ನಡದ ಯುವ ಬರಹಗಾರರಿಗೆ ಕರೆ ಇದೇ ವರ್ಷ ಸೆಪ್ಟೆಂಬರ್ 3,4 ಮತ್ತು 5 ರಲ್ಲಿ ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಡೆಯಲಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ ಸಣ್ಣ ಕತೆಗಳ ಸ್ಪರ್ಧೆಯನ್ನು ನಿಮ್ಮ ಗಮನಕ್ಕೆ ತರಲು ಸಂತೋಷಿಸುತ್ತೇವೆ. ಈ ಸ್ಪರ್ಧೆಯ ಮುಖ್ಯ ಉದ್ದೇಶ 20 ರಿಂದ 30ರ ವರೆಗಿನ ವಯಸ್ಸಿನ ನಮ್ಮ ಕನ್ನಡ ಯುವ ಬರಹಗಾರರ ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದು. ಈ ಯುವ ಬರಹಗಾರರು ಕಳಿಸುವ ಕತೆಗಳನ್ನು ಖ್ಯಾತ ಸಾಹಿತಿಗಳನ್ನೊಳಗೊಂಡ ತೀರ್ಪುಗಾರರ ಮಂಡಲಿಗೆ ಒಪ್ಪಿಸಲಾಗುವುದು. ಆ ಮಂಡಲಿ ನಿರ್ಧರಿಸುವ ಮೊದಲ ಮೂರು ಕತೆಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಅಲ್ಲದೆ, ಈ ಮೂರು ಕತೆಗಳ ಜೊತೆಗೆ ಉತ್ತಮ ಎಂದು ಮಂಡಲಿ ನಿರ್ಧರಿಸುವ ಇನ್ನೂ 12 ಕತೆಗಳನ್ನು ಸೇರಿಸಿ ಒಟ್ಟು ಹದಿನೈದು ಕತೆಗಳ ಸಂಗ್ರಹವನ್ನು ಆಕರ್ಷಕವಾದ ಪುಸ್ತಕ ರೂಪದಲ್ಲಿ ಮುದ್ರಿಸಿ ಅಕ್ಕ ಸಮ್ಮೇಳನಕ್ಕೆ ನೋಂದಾವಣೆ ಸಲ್ಲಿಸಿದವರೆಲ್ಲರಿಗೂ ಹಂಚಲಾಗುವುದು. ಈ ನಮ್ಮ ಕರೆಯನ್ನು ಮನ್ನಿಸಿ ಕನ್ನಡದ ಯುವ ಬರಹಗಾರರು ಅಧಿಕ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಪಾಲುಗೊಳ್ಳುತ್ತಾರೆಂದು ಆಶಿಸುತ್ತೇವೆ. ಕನ್ನಡ ಸಾಹಿತ್ಯದ ಭವ್ಯ ಪರಂಪರೆಯನ್ನು ಮತ್ತಷ್ಟು ಉಜ್ವಲಗೊಳಿಸುವ, ಹಾಗೂ ಅದನ್ನು ಹೊಸ ಪಥ, ದಿಕ್ಕುಗಳಲ್ಲಿ ಬೆಳೆಸುವ ಹೊಣೆ ಹೊತ್ತ ಈ ಯುವಜನಾಂಗಕ್ಕೆ ನಮ್ಮ ಹಾರ್ದಿಕ ಸ್ವಾಗತ. ಸ್ಪರ್ಧೆಯ ಬಗ್ಗೆ ಕೆಲವು ಸೂಚನೆ ಮಾಹಿತಿಗಳನ್ನು ಈ ಕೆಳಗೆ ಕೊಟ್ಟಿದೆ:

ಲೇಖಕರಿಗೆ ಸೂಚನೆಗಳು, ಮಾಹಿತಿಗಳು
  • ಈ ಸ್ಪರ್ಧೆಯಲ್ಲಿ 20-30ರ ವಯಸ್ಸಿನ ಯುವ ಬರಹಗಾರರಿಗೆ ಮಾತ್ರ ಪ್ರವೇಶವುಂಟು. ಬರಹಗಾರರು ಭಾರತದಲ್ಲಾಗಲೀ, ಬೇರೆಲ್ಲಿಯಾಗಲೀ ಇರಬಹುದು.
  • ನೀವು ಕಳಿಸುವ ಕತೆ ಕನ್ನಡದಲ್ಲಿರಬೇಕು.
  • ಕತೆ ನಿಮ್ಮ ಸ್ವಂತ ರಚನೆಯಾಗಿರಬೇಕು. ಇದಕ್ಕೆ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
  • ಭಾಷಾಂತರಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.
  • ಸ್ಪರ್ಧೆಯಲ್ಲಿ ಭಾಗವಹಿಸುವವರು ತಲಾ ಒಂದು ಕತೆ ಮಾತ್ರ ಕಳಿಸಬಹುದು.
  • ಕತೆಗಳ ಮಿತಿ 3000 ಪದಗಳು. (ಬರಹ ನಂಬರ್ 14 ಫಾಂಟ್ ಸೈಜಿನಲ್ಲಿ ಇದ್ದು 8 1/2 x 11" ಹಾಳೆಗಳಲ್ಲಿ ಸುಮಾರು 10 ಪುಟ ತುಂಬುತ್ತದೆ.) ಇಲ್ಲಿ ಸೂಚಿಸಿರುವ ಮಿತಿಗಿಂತಲೂ ದೀರ್ಘವಾದ ಕತೆಗಳನ್ನು ಸ್ವೀಕರಿಸುವುದಿಲ್ಲ.
  • ಕತೆಗಳನ್ನು ಮಿಂಚೆ (email) ಗಳ ಮೂಲಕ ಮಾತ್ರ ಕಳಿಸತಕ್ಕದ್ದು.
  • ಕೈಬರಹದ ಅಥವ ಟೈಪು ಮಾಡಿದ ಕತೆಗಳನ್ನು ಸ್ವೀಕರಿಸುವುದಿಲ್ಲ. ನುಡಿ ಅಥವ ಬರಹ ತತ್ರಾಂಶಗಳನ್ನು ಮಾತ್ರ ಬಳಸಿ.
  • ಕತೆಗಳನ್ನು ಸ್ವೀಕರಿಸಲು ಕಡೆಯ ತಾರೀಕು: ಏಪ್ರಿಲ್ 15, 2010.
  • ಕತೆಗಳನ್ನು email ಮೂಲಕ ಈ ವಿಳಾಸಕ್ಕೆ ಕಳಿಸಿಕೊಡಿ: wkc2010.literary@gmail.com
  • ನಿಮ್ಮ ಕತೆಯ ಜೊತೆಗೆ, ನಿಮ್ಮ ವಯಸ್ಸಿನ ಬಗ್ಗೆ ಮಾಹಿತಿಯನ್ನು ಕಳಿಸಿಕೊಡಿ. ಇದು ನಿಮ್ಮ ಹೆಸರನ್ನು ನಮೂದಿಸಿರುವ ಜನನ ಪತ್ರಿಕೆ (Birth Certificate), ಸೆಕಂಡರಿ ಶಾಲಾ ಪ್ರಮಾಣಪತ್ರ (SSLC) ಅಥವ ಅವಕ್ಕೆ ಸಮವಾದ ಇನ್ನಾವುದೇ ಆಧಾರವಾಗಿರಬಹುದು.
  • ಕತೆಗಳ ಸ್ವಾಮ್ಯ, ಹಕ್ಕು (copyright) ನಿಮ್ಮದೇ ಆಗಿರುತ್ತದೆ. ಆದರೆ ಈ ಪ್ರಸ್ತುತ ಸಂಗ್ರಹದಲ್ಲಿ ಪ್ರಕಟಗೊಂಡ ಯಾವುದೇ ಕತೆಯನ್ನು ಮರುಪ್ರಕಟನೆ ಮಾಡುವ ಹಕ್ಕನ್ನು ಅಕ್ಕ ಉಳಿಸಿಕೊಳ್ಳುತ್ತದೆ.
  • ಕತೆಗಳ ಆಯ್ಕೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾದದ್ದು.

ನಿಮಗೆ ಇನ್ನೇನಾದರೂ ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಇವರನ್ನು ಸಂಪರ್ಕ ಮಾಡಿ:

  1. ಸತ್ಯಾ 732 763 2363 (US)
  2. ಜೆ.ಎ.ಸೀತಾರಾಮ್ 944-803-8181 (India)

ಆಲೂರು ವೆಂಕಟರಾಯರು ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನ!

ಇಂದು ಆಲೂರು ವೆಂಕಟರಾಯರ ನಲವತ್ತಾರನೆಯ ಪುಣ್ಯದಿನ. ಬನವಾಸಿ ಬಳಗ ಕರ್ನಾಟಕ ಕುಲಪುರೋಹಿತರಿಗೆ ನಮನಗಳನ್ನು ಸಲ್ಲಿಸುತ್ತದೆ.

ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರು ಉಜ್ವಲ ದೇಶಭಕ್ತರು. ತಮ್ಮ ಬದುಕನ್ನೇ ದೇಶಸೇವೆಗೆ ಮುಡುಪಿಟ್ಟು ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿಯೂ ದುಡಿದವರು. ಕರ್ನಾಟಕದಲ್ಲಿ ಭಾರತವಿದೆ ಎನ್ನುವ ವಿಶಿಷ್ಟ ತತ್ವದ ಮೂಲಕ ನಾಡಿಗೆ ಕರ್ನಾಟಕತ್ವದ ಬೀಜಮಂತ್ರ ಕೊಟ್ಟವರು. ಭಾರತೀಯತೆ ಮತ್ತು ಕರ್ನಾಟಕತ್ವಗಳ ನಡುವಿನ ಸಂಬಂಧಗಳನ್ನು ಸ್ಪಷ್ಟವಾಗಿ ಎಳೆ‍ಎಳೆಯಾಗಿ ಬಿಡಿಸಿಡುವ ರಾಯರು ರಾಷ್ಟ್ರೀಯತೆಯ ಬಗ್ಗೆ ಬರೆದಿರುವ ಕೆಲ ಮಾತುಗಳನ್ನು ಭಾರತದ ಸ್ವಾತಂತ್ರ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತವಾಗಿದೆ.


ಭಾರತೀಯ ಸಂಸ್ಕೃತಿಯೆಂಬ ಬಂಗಾರ!
ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳು, ಬಂಗಾಲ ಮುಂತಾದ ಪ್ರಾಂತಗಳು ಭಿನ್ನ ಭಿನ್ನ ಜೀವಿಗಳೆಂದು ತಿಳಿಯಲು ಅಡ್ಡಿಯಿಲ್ಲ. ಏಕೆಂದರೆ ಆ ಪ್ರಾಂತಗಳು ತಮ್ಮ ತಮ್ಮ ಭಾಷೆಯ ದ್ವಾರದಿಂದ ತಮ್ಮ ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ತಮ್ಮ ತಮ್ಮ ಸಂಸ್ಕೃತಿಗಳನ್ನು ವಿಶಿಷ್ಟ ಎರಕದಲ್ಲಿ ಹೊಯ್ದುಕೊಂಡಿರುತ್ತವೆ. ಭಾರತೀಯ ಸಂಸ್ಕೃತಿಯೆಂಬ ಬಂಗಾರವನ್ನು ತೆಗೆದುಕೊಂಡು ಅದರಿಂದ, ತಮತಮಗೆ ಇಷ್ಟವಾದ ಆಭರಣಗಳನ್ನು ಮಾಡಿಕೊಂಡಿರುತ್ತವೆ. ಪರಮಾತ್ಮನು ಭಿನ್ನ ಭಿನ್ನ ಜೀವಿಗಳಲ್ಲಿ ಅಂತರ್ಯಾಮಿ ರೂಪದಿಂದ ಇದ್ದಂತೆ, ಭಾರತಮಾತೆಯು ಈ ಭಿನ್ನ ಭಿನ್ನ ಪ್ರಾಂತಗಳಲ್ಲಿ ಅಂತರ್ಯಾಮಿಯಾಗಿದ್ದಾಳೆ.

ಕರ್ನಾಟಕದಿಂದ ಭಾರತ!
ಪೃಥ್ವಿ ದೇವತೆಗೆ ತನ್ನ ಶಕ್ತಿಯ ಅವಿರ್ಭಾವವಾಗುವುದಕ್ಕೆ ಭಾರತ ಮಾತೆಯ ಅವಶ್ಯಕತೆಯಿದ್ದಂತೆ, ಭಾರತಮಾತೆಗೆ ಕರ್ನಾಟಕ ಮಾತೆಯ ಅವಶ್ಯಕತೆಯಿರುತ್ತದೆ. ಸಾರಾಂಶ, ಜಗತ್ತಿನ ಉದ್ಧಾರವಾಗುವುದಕ್ಕೆ ಭರತಖಂಡವು ಜೀವದಿಂದುಳಿಯುವುದು ಎಷ್ಟು ಅವಶ್ಯವಿರುತ್ತದೆಯೋ ಅಷ್ಟೇ ಭರತ ಖಂಡದ ಉದ್ಧಾರಕ್ಕೆ ಕರ್ನಾಟಕವು ಜೀವದಿಂದುಳಿಯುವುದು ಅವಶ್ಯವಿರುತ್ತದೆ. ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ!!

ಕರ್ನಾಟಕಾಂತರ್ಗತ ಭಾರತಮಾತೆಯನ್ನು ಕಾಣಿರಿ!
ನಾಳೆ, ಜಗತ್ತೆಲ್ಲವೂ ಒಂದೇ ಧರ್ಮದಿಂದ, ಒಂದೇ ರಾಜ್ಯಪದ್ದತಿಯಿಂದ, ಒಂದೇ ಭಾಷೆಯಿಂದ, ಒಂದೇ ಸಂಸ್ಕೃತಿಯಿಂದ, ಒಂದೇ ತೆರನಾದ ಆಚಾರ ವಿಚಾರಗಳಿಂದ, ಒಂದೇ ತರಹದ ಉಡುಪು ತೊಡಪುಗಳಿಂದ ಬದ್ಧವಾದರೆ ಅದು ಎಷ್ಟು ಸುಂದರವಾಗಿ ಕಂಡೀತು? ನಿಜಕ್ಕೂ ಇದು ಅತ್ಯಂತ ಸ್ಪೃಹಣೀಯವಾದ ಕಲ್ಪನೆಯು. ಈ ಕಲ್ಪನೆಯಲ್ಲಿ ಅದ್ಭುತವಾದ ಶಕ್ತಿಯಿದೆ. ಆದರೆ, ದುರ್ದೈವದಿಂದ, ಅದು ತಪ್ಪು ಕಲ್ಪನೆಯು, ಅಸಾಧ್ಯವಾದ ಕಲ್ಪನೆಯು, ಅದು ಮೃಗಜಲವು.
ಹಾಗಾದರೆ ಜಗತ್ತನ್ನು ಒಡೆದು ತುಂಡು ತುಂಡಾಗಿ ಮಾಡಿಬಿಡಬೇಕೋ? ಅವುಗಳನ್ನು ಒಟ್ಟುಗೂಡಿಸುವ ಪ್ರಯತ್ನವನ್ನೇ ಮಾಡಬಾರದೋ? ಜಗತ್ತು ಯಾವಾಗಲೂ ಭಿನ್ನ ಭಿನ್ನ ಪ್ರಾಣಿಗಳ ಬಡಿದಾಟದ ಕ್ಷೇತ್ರವಾಗಿಯೇ ಉಳಿಯಬೇಕೋ ಎಂದು ಕೇಳಿದರೆ ಇಲ್ಲ, ಅದೂ ದೊಡ್ಡತಪ್ಪು. ಒಂದುಗೂಡಿಸುವ ತತ್ವವು ಯಾವಾಗಲೂ ಸ್ತುತ್ಯವೇ. ಒಂದುಗೂಡಿಸುವಾಗ ಜೀವಿಗಳನ್ನು ಕೊಂದು ಒಂದುಗೂಡಿಸಲೆತ್ನಿಸಬಾರದೆಂಬುದೇ ನಮ್ಮ ಅಂಬೋಣದ ಅರ್ಥ. ಜೀವಂತ ಸಂಸ್ಕೃತಿಗಳನ್ನು ಏಕಸೂತ್ರದಿಂದ ಬದ್ಧಮಾಡುವುದು ಪುಣ್ಯವು. ಕರ್ನಾಟಕತ್ವದ ಈ ಸೂತ್ರವನ್ನು ಅನುಸರಿಸಿ, ರಾಷ್ಟ್ರೀಯತ್ವದ ನಿಜವಾದ ಕಲ್ಪನೆಯನ್ನು ಜನತೆಯಲ್ಲಿ ಬೇರೂರಿ ಇಡೀ ಹಿಂದೂಸ್ಥಾನದಲ್ಲಿ ಸನಾತನ ರಾಷ್ಟ್ರೀಯತ್ವವನ್ನು ಪ್ರತಿಷ್ಠಾಪಿಸುವರೆಂದು ಆಶಿಸುತ್ತೇವೆ. ಈ ಮಾತಿನ ಅರಿವಾದರೆ ಅಪರೋಕ್ಷ, ಮರೆವಾದರೆ ವಿನಾಶ.
ಕೊನೆಗೆ, ಈ ವಿವಿಧ ಸಂಸ್ಕೃತಿಗಳ ನವರತ್ನದ ಹಾರವನ್ನು ಧರಿಸಿದ - ಅಲ್ಲ, ಮಂಗಳ ಸೂತ್ರವನ್ನು ಕೊರಳಲ್ಲಿ ಕಟ್ಟಿಕೊಂಡ ಕರ್ನಾಟಕಾಂತರ್ಗತ ಭಾರತ ಮಾತೆಗೆ ನಮಸ್ಕರಿಸಿ ಈ ಲೇಖನವನ್ನು ಮುಗಿಸುತ್ತೇವೆ.
(ಜಯಕರ್ನಾಟಕ, 1964, ಮಾರ್ಚ್)

ವಿಶ್ವಕಪ್ ಹಾಕಿ: ಮೊದಲು ಕನ್ನಡದಲ್ಲಿ ಜಾಹೀರಾತು ಹಾಕಿ!

ಇದೇ ಫೆಬ್ರವರಿ 28 ರಿಂದಾ ದಿಲ್ಲೀಲಿ ಹಾಕಿ ವಿಶ್ವ ಕಪ್ ಶುರುವಾಗಲಿದೆ. ಇದೇ ಹೊತ್ತಲ್ಲಿ ಹಾಕಿ ವಿಶ್ವ ಕಪ್ಪಿಗೆ ಪ್ರೋತ್ಸಾಹ ಕೊಡಿ ಎಂಬರ್ಥದ ಜಾಹೀರಾತುಗಳು ಅಲ್ಲಲ್ಲಿ ಕಾಣಿಸಿಕೊಳ್ತಾ ಇವೆ. ಕ್ರಿಕೆಟ್ ಆಟಕ್ ಮಾತ್ರಾ ಯದ್ವಾತದ್ವಾ ಮಹತ್ವ, ಪ್ರೋತ್ಸಾಹ ಸಿಕ್ಕುತ್ತಾ... ಬಾಕಿ ಎಲ್ಲಾ ಆಟಗಳು, ಆಟಗಾರರು ಬೆಲೆ ಇಲ್ಲದೇ ಇರೋ ಹಾಗಿರೋ ಇವತ್ತಿನ ದಿನಗಳಲ್ಲಿ ಈ ರೀತಿ ಹಾಕಿ ಕ್ರೀಡೆಗೆ ಪ್ರೋತ್ಸಾಹ ಕೊಡಿ ಅನ್ನೋ ಜಾಹೀರಾತು ಬರುತ್ತಿರೋದೆನೋ ಒಳ್ಳೆದೇ, ಆದ್ರೆ ಇದು ಜನರ ಮನಸ್ಸನ್ನ ತಲುಪೋಕೆ ಯಶಸ್ವಿ ಆಗುತ್ತಾ ಅನ್ನೋದು ಮಾತ್ರಾ ಬಲೇ ಅನುಮಾನಾ ಗುರು. ಯಾಕಂತೀರಾ? ಈ ಜಾಹೀರಾತುಗಳು ನಮ್ಮ ಜನರ ಭಾಷೇಲಿದ್ರೆ ತಾನೇ ಜನರಿಗೆ ಅರ್ಥ ಆಗೋದು, ಜನರ ಪ್ರೋತ್ಸಾಹ ಸಿಗೋದು ?


ಹಿಂಗ್ಲೀಷ್ ಜಾಹೀರಾತು - ದುಡ್ಡು ದಂಡ !


ಬೆಂಗಳೂರಲ್ಲಿ ಅಲ್ಲಲ್ಲಿ ಇಂಗ್ಲಿಷಲ್ಲಿ (ರೋಮನ್ ಲಿಪಿಯಲ್ಲಿ) ಬರೆದಿರೋ, ಹಿಂದಿ ವಾಕ್ಯಗಳು ಇರೋ ಜಾಹೀರಾತುಗಳನ್ನು ಹಾಕಿದಾರೆ. ಜನರಿಗೆ ಅರ್ಥ ಆಗದ ಭಾಷೇಲಿ ಅದೇನ್ ಬರುದ್ರು ಏನ್ ಬಂತು ಭಾಗ್ಯ? ಕ್ರಿಕೆಟ್‍ನ ಜನಪ್ರಿಯತೆಗೆ, ಅದರಲ್ಲೂ ವಿಶೇಷವಾಗಿ ಈಗಿನ ಐ.ಪಿ.ಎಲ್‍ನ ಜನಪ್ರಿಯತೆಗೆ ಆಯಾ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೇನಾ ಬಳಸ್ಕೊಂಡು ಪ್ರಚಾರ ಮಾಡ್ತಿರೋದು ಒಂದು ಮಟ್ಟಿಗೆ ಕಾರಣ ಅನ್ನೋದು ಸಕತ್ ನಿಜ. ಈಗ ಡಿ.ಎಲ್.ಎಫ್ ಐ.ಪಿ.ಎಲ್‍ನ ಸರಣಿಯ ಬಗ್ಗೆ ರೇಡಿಯೋ, ಟಿ.ವಿಗಳಲ್ಲಿ ಬರ್ತಿರೋ ಕನ್ನಡ ಜಾಹೀರಾತನ್ನೇ ನೋಡಿ. ಜಾಹೀರಾತು ಕೇಳ್ತಿದ್ರೆನೇ, ಜನಕ್ಕೆ ಆಟ ನೋಡಬೇಕು ಅನ್ನಿಸೋ ಹಾಗಿದೆ. ಹಾಕಿಯೋರು ಮಾತ್ರ ಅದೇನೆನೋ ಹಿಂದೀಲಿ ಬರ್ಕೊಂಡು ದುಡ್ಡು ದಂಡಾ ಮಾಡ್ತಾ ಇದ್ದಾರೆ ಅನ್ಸಲ್ವಾ ಗುರು?

ಕೊನೆಗೂ ಮಮತೆಯ ಕಣ್ಣು ತೆರೆದ ಮಮತಾ !


ಅಂತೂ ಇಂತೂ ರೈಲ್ವೆ ಯೋಜನೆಗಳ ವಿಷಯದಲ್ಲಿ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಿತು ಗುರು. ಫೆಬ್ರವರಿ 7 ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿಯವರು ಕರ್ನಾಟಕದ ಈ ಕೆಳಗಿನ 19 ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಿದರು:

  1. ಚಾಮರಾಜನಗರ - ಮೆಟ್ಟುಪಾಳ್ಯ ಯೋಜನೆಗೆ ಚಾಲನೆ.
  2. ಮೈಸೂರು - ಶಿವಮೊಗ್ಗ ನಡುವೆ ಕುವೆಂಪು ಎಕ್ಸ್-ಪ್ರೆಸ್ ರೈಲಿಗೆ ಚಾಲನೆ.
  3. ಮಂಗಳೂರು - ಬೆಂಗಳೂರು ನಡುವೆ ವಾರಕ್ಕೆ ಒಂದು ದಿನ ಇದ್ದ ರೈಲನ್ನು ಪ್ರತಿ ದಿನಕ್ಕೆ ವಿಸ್ತರಣೆ.
  4. ಕೊಡಗು - ಬೆಂಗಳೂರು ನಡುವ ಮಾರ್ಗ ಸಮೀಕ್ಷೆಗೆ ಚಾಲನೆ.
  5. ಬೆಳಗಾವಿ - ಬೆಂಗಳೂರು - ಮೈಸೂರು ಜನ ಶತಾಬ್ದಿ ರೈಲ್ವೆ ಯೋಜನೆಗೆ ಚಾಲನೆ.
  6. ಚಿತ್ರದುರ್ಗ - ಬೆಂಗಳೂರು ನಡುವೆ ಪ್ರತಿ ದಿನ ಓಡುವ ರೈಲು ಯೋಜನೆಗೆ ಚಾಲನೆ.
  7. ಮಂಗಳೂರು - ಕಾರವಾರ ಜನ ಶತಾಬ್ದಿ ರೈಲ್ವೆ ಯೋಜನೆಗೆ ಚಾಲನೆ.
  8. ಬಿಜಾಪುರ - ಬೆಂಗಳೂರು ಮಧ್ಯೆ ಹೊಸ ರೈಲು ಮಾರ್ಗಕ್ಕೆ ಚಾಲನೆ.
  9. ಧಾರವಾಡದಲ್ಲಿ ರೈಲ್ವೆ ಕೋಚ್ ಕಾರ್ಖಾನೆಗೆ ಸ್ಥಾಪನೆಗೆ ನಿರ್ಧಾರ.
  10. ಬೆಂಗಳೂರು ಮೈಸೂರು ಜೋಡಿ ಮಾರ್ಗಕ್ಕೆ ಚಾಲನೆ.
  11. ಮಂಗಳೂರು - ಕಾಸರಗೋಡು ನಡುವೆ ಪುಶ್ ಪುಲ್ ರೈಲು ಸೇವೆಗೆ ಚಾಲನೆ.
  12. ಬಿಜಾಪುರ - ಅಕ್ಕಲಕೋಟೆ ನಡುವೆ ವಾರಕ್ಕೆ 3 ಬಾರಿ ರೈಲು ಸೇವೆಗೆ ಚಾಲನೆ.
  13. ಹುಬ್ಬಳ್ಳಿ ಅಂಕೋಲಾ ರೈಲ್ವೆ ಮಾರ್ಗದ ಎಲ್ಲ ಅಡೆತಡೆಗಳನ್ನು ನಿವಾರಿಸಿ ಕಾಮಗಾರಿ ನಡೆಸಲು 1000 ಕೋಟಿ ರೂಪಾಯಿ ಮಂಜೂರು.
  14. ಬರೋ 4 ವರ್ಷಗಳಲ್ಲಿ ಕರ್ನಾಟಕದ ಸುಮಾರು 1,000 ಕಿ.ಮೀ ರೈಲುಮಾರ್ಗ ವಿದ್ಯುತ್ ಮಾರ್ಗವಾಗಿ ಬದಲಿಸುವ ಯೋಜನೆಗೆ ಚಾಲನೆ.
  15. ಹರಿಹರ - ಕೊಟ್ಟೂರು ನಡುವೆ ಹೊಸ ರೈಲು ಮಾರ್ಗಕ್ಕೆ ಚಾಲನೆ.
  16. ಹುಬ್ಬಳ್ಳಿ - ದಾವಣಗೆರೆ ನಡುವೆ ದಿನವೂ ಓಡಾಡುವ ರೈಲಿಗೆ ಚಾಲನೆ.
  17. ಗುಲ್ಬರ್ಗಾ - ಹುಬ್ಬಳ್ಳಿ ನಡುವೆ ವಾರಕ್ಕೆ ೨ ಬಾರಿ ಓಡಾಡುವ ರೈಲಿಗೆ ಚಾಲನೆ.
  18. ಬಿಜಾಪುರ - ಬಾಗಲಕೋಟೆ ನಡುವೆ ಪುಶ್ ಪುಲ್ ರೈಲು ಸೇವೆಗೆ ಚಾಲನೆ.
  19. ಗದಗ - ಬಾಗಲಕೋಟೆ - ಬಿಜಾಪುರ ಮಾರ್ಗದಲ್ಲಿ ವಾರಕ್ಕೆ 3 ದಿನ ಸಂಚರಿಸುವ ರೈಲು ಮಾರ್ಗಕ್ಕೆ ಚಾಲನೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ದಿನ ಕರ್ನಾಟಕದ ಇತಿಹಾಸದಲ್ಲೇ ಮರೆಯಲಾಗದ್ದು ಎಂದರು. ಕರ್ನಾಟಕದ ರೈಲ್ವೆ ಕನಸುಗಳನ್ನೆಲ್ಲ ಒಂದೇ ಏಟಿಗೆ ಈಡೇರಿಸಿದ ರೈಲ್ವೆ ಇಲಾಖೆಯನ್ನು ತಮ್ಮ ಭಾಷಣದುದ್ದಕ್ಕೂ ಕೊಂಡಾಡಿದರು.

ನಿಲ್ಲಿ ನಿಲ್ಲಿ ನಿಲ್ಲಿ.... ಇದೆಲ್ಲ ಯಾವಾಗಾಯ್ತಪ್ಪಾ ಅಂದ್ಕೊಬಿಟ್ರಾ ?? ಯಾವ ಪೇಪರಲ್ಲೂ, ಯಾವ ಟಿವಿಲೂ ಈ ಸುದ್ದಿ ನೋಡೇ ಇಲ್ವಲ್ಲ ಅಂದ್ಕೊಂಡ್ರಾ? ನಿಮ್ಮ ಊಹೆ ಸರಿ ಗುರು, ಇದು ಬರೀ ತಮಾಶೆಗೆ ಅಂತಾ ಏನ್ ಗುರು ಕೊಟ್ಟ ಸುದ್ದಿ. ನಿಜಕ್ಕೂ ಇದೆಲ್ಲ ಆಗಿದ್ದು ಇಲ್ಲಲ್ಲ ದೂರದ ಉತ್ತರ ಪ್ರದೇಶದಲ್ಲಿ. ಉತ್ತರ ಪ್ರದೇಶದಲ್ಲಿ ಮಮತಾ ಬ್ಯಾನರ್ಜಿ ಅವರು ಒಂದೇ ದಿನದಲ್ಲಿ ಚಾಲನೆ ನೀಡಿದ 19 ಯೋಜನೆಗಳ ವಿವರಗಳಿಗೆ ಪತ್ರಿಕೆಯಲ್ಲಿ ಬಂದ ಜಾಹೀರಾತಿನ ತುಣುಕನ್ನು ಇಲ್ಲಿ ಮತ್ತು ಇಲ್ಲಿ ನೋಡಿ.

ದಿಲ್ಲಿಯಲ್ಲಿ ಯಾವ ರಾಜ್ಯದ ಹಿಡಿತ ಬಿಗಿಯಾಗಿರುತ್ತೋ, ಆ ರಾಜ್ಯಗಳಿಗೆ ಮಾತ್ರ ಇಂತದೆಲ್ಲ ದಕ್ಕಿಸಿಕೊಳ್ಳಲು ಸಾಧ್ಯ ಗುರು. ಕರ್ನಾಟಕದಂತಹ ಪ್ರಾದೇಶಿಕ ಪಕ್ಷವಿಲ್ಲದ, ಸರಿಯಾದ ನಾಯಕತ್ವವಿಲ್ಲದ ನಾಡಲ್ಲಿ ಇದೆಲ್ಲ ಕನಸೇ ಸರಿ. ಏನಂತೀಯಾ ಗುರು?

ಕಾಪಿ ರೈಟ್ - ಸಮಿತಿ ಮಾತ್ರಾ ರಾಂಗ್ !

1957 ರಲ್ಲಿ ಬಂದ ಕಾಪಿ ರೈಟ್ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನ ಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ರಚಿಸಿರೋ ಸಮಿತಿಯ ಸದಸ್ಯರು ಕಿತ್ತಾಡ್ಕೊಂಡಿರೋ ಸುದ್ದಿ ಫೆಬ್ರವರಿ 18 ರ ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದಿದೆ. ಕಿತ್ತಾಡ್ಕೊಂಡಿದ್ದು ಯಾಕೆ ಏನು ಅನ್ನೋದು ಅತ್ಲಾಗಿಟ್ಟು, ಈ ಸಮಿತಿಲಿ ಇರೋರು ಯಾರು ಅಂತ ನೋಡಿದ್ರೆ ಬೇಸರಾ ಮೂಡುತ್ತೆ. ಇಡೀ ದೇಶಕ್ಕೆ ಅನ್ವಯಿಸೋ ಈ ಕಾನೂನಿನ ಪರಿಶೀಲನೆ ನಡೆಸೋ ಸಮಿತಿಯಲ್ಲಿ ಸಹಜವಾಗಿ ದೇಶದ ಎಲ್ಲ ಭಾಗದ ಪ್ರತಿನಿಧಿಗಳಿಗೆ ಅವಕಾಶ ಸಿಗಬೇಕಿತ್ತು, ಆದ್ರೆ ಇಲ್ಲಿರೋ 10 ಜನ ಸದಸ್ಯರಲ್ಲಿ ಹೆಚ್ಚಿನವರು ಬಾಲಿವುಡ್ ಸಿನೆಮಾದವರು. ಭಾರತ ಅಂದ್ರೆ ಹಿಂದಿ ಸಿನೆಮಾ ಅಂದ್ಕೊಂಡಿರೋ ಜನರ ಮೂರ್ಖತನಕ್ಕೆ ಏನ್ ಹೇಳ್ತಿಯಾ ಗುರು.

ಏನಿದು ಕಾಪಿ ರೈಟ್ ಕಾಯ್ದೆ?
ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ, ವಾಸ್ತು ಶಿಲ್ಪ, ಕಂಪ್ಯೂಟರ್ ಪ್ರೋಗ್ರಾಮ್ ಸೇರಿದಂತೆ ಕ್ರಿಯಾಶೀಲತೆಯ ಎಲ್ಲ ಪ್ರಕಾರದ ಆಲೋಚನೆ, ಉತ್ಪನ್ನಗಳ ವಿಷಯಕ್ಕೂ ಈ ಕಾನೂನು ಅನ್ವಯಿಸುತ್ತೆ. ಸೃಜನಶೀಲತೆಯ ಎಲ್ಲ ಪ್ರಕಾರಗಳಲ್ಲೂ ಮೂಲ ಸೃಷ್ಟಿಕರ್ತನ ಹಕ್ಕನ್ನು ಕಾಪಾಡುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕಾಯ್ದೆಯೇ ಈ ಕಾಪಿ ರೈಟ್ ಕಾಯಿದೆ.

ಬಾಲಿವುಡ್ ಸಮಿತಿ ಎಷ್ಟು ಸರಿ ?
ಈ ಕಾಯ್ದೆ ಅಸ್ತಿತ್ವಕ್ಕೆ ಬಂದು ಸುಮಾರು 53 ವರ್ಷಗಳಾಗಿರೋದ್ರಿಂದ, ಹಾಗೇ ಕಳೆದ 50 ವರ್ಷಗಳಲ್ಲಿ ಎಷ್ಟೋ ಹೊಸ ಬಗೆಯ ವಿಷಯಗಳು ಕಾಪಿ ರೈಟ್ ನ ಪಟ್ಟಿಗೆ ಸೇರುವುದರ ಬಗ್ಗೆ ಸ್ಪಷ್ಟತೆ ಬೇಕಿರೋದ್ರಿಂದ ಈ ಪರಿಶೀಲನೆ ಸಮಿತಿ ರಚಿಸಿರೋದು. ಸಮಿತಿ ರಚಿಸೋ ಉದ್ದೇಶಾ ಏನೋ ಒಳ್ಳೇದೆ, ಆದ್ರೆ ಇಷ್ಟು ವೈವಿಧ್ಯತೆ ಇರೋ ಭಾರತದ ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನೆಮಾ ಮುಂತಾದ ವಿಷ್ಯಗಳ ಕಾಪಿ ರೈಟ್ ಬಗ್ಗೆ, ಇಡೀ ದೇಶಕ್ಕೆ ಅನ್ವಯಿಸುವಂತೆ ಕಾನೂನು ಬದಲಾಯಿಸಲು ಹೊರಟಾಗ ಅಲ್ಲಿ ದೇಶದ ಎಲ್ಲ ಭಾಗದ ಜನರಿಗೂ ಪ್ರಾತಿನಿಧ್ಯ ಸಿಗಬೇಕು ಅನ್ಸಲ್ವಾ ಗುರು? ಸ್ಥಳೀಯವಾದ ಸಮಸ್ಯೆಯೊಂದಕ್ಕೆ ಪರಿಹಾರ ಸೂಚಿಸಲು, ಆ ಸಮಸ್ಯೆಯನ್ನಿರಿತ ಸ್ಥಳೀಯರಿಗಲ್ಲದೇ ಇನ್ನಾರಿಗಾದರೂ ಸಾಧ್ಯವಾದೀತಾ? ಹಾಗಿದ್ದಾಗ, ಕರ್ನಾಟಕದಲ್ಲಿನ ಯಾವುದೋ ಒಬ್ಬ ಲೇಖಕ, ಇಲ್ಲವೇ ಚಿತ್ರ ನಿರ್ದೇಶಕ, ಇಲ್ಲವೇ ಸಂಗೀತ ನಿರ್ದೇಶಕ ಎದುರಿಸುವ ಕಾಪಿ ರೈಟ್ ಸಂಬಂಧಿತ ಸಮಸ್ಯೆ ಬಾಲಿವುಡ್ ನ ಪಂಡಿತರಿಗೆ ಎಂದಿಗಾದರೂ ಅರ್ಥವಾದೀತಾ?

ಕೊನೆಹನಿ
ಕಾಪಿ ರೈಟ್ ಕಾಯಿದೆಗೆ ಇರೋ ವ್ಯಾಪ್ತಿ ನಿಜಕ್ಕೂ ದೊಡ್ಡದು. ಅದು ಬರೀ ಸಿನೆಮಾ, ಸಿನೆಮಾ ಸಾಹಿತ್ಯ ಅನ್ನೋದಕ್ಕೆ ಸೀಮಿತವಾಗಿಲ್ಲ. ಜಾನಪದ, ಸುಗಮ ಸಂಗೀತ, ಸಾಹಿತ್ಯ, ನಾಟಕ, ಚಿತ್ರಕಲೆ, ಹೀಗೆ ಸೃಜನಶೀಲತೆಯ ಹತ್ತು ಹಲವು ಪ್ರಕಾರಗಳಿಗೆ ಈ ಕಾಯ್ದೆ ಅನ್ವಯಿಸುತ್ತೆ. ಹಾಗೆಯೇ, ಈ ಎಲ್ಲ ಕ್ಷೇತ್ರಗಳ ಕಾಪಿ ರೈಟ್ ಸಮಸ್ಯೆಗಳು ಅಷ್ಟೇ ಬೇರೆಯಾದದ್ದು. ಆಯಾ ಭಾಗದಲ್ಲಿನ ಕಾಪಿ ರೈಟ್ ಸಮಸ್ಯೆಗಳ ಅರಿವೇ ಇಲ್ಲದೇ ಈ ಬಾಲಿವುಡ್ ಪಂಡಿತರು, ಸ್ಥಳೀಯರಿಗೆ ಬೇಡದ ಪರಿಹಾರ ಕೊಡಲು ಹೊರಟ್ರೆ ಅದು ಇನ್ನೊಂದು ರೀತಿಯ ಹೇರಿಕೆ ಅನ್ನಿಸಿಕೊಳ್ಳಲ್ವಾ ಗುರು?

ವರ್ಜಿನ್ ಮೊಬೈಲ್ ಕಂಡುಕೊಂಡ ಮಾರುಕಟ್ಟೆ ಗುಟ್ಟು!

ಕೆಲತಿಂಗಳ ಹಿಂದೆ ವರ್ಜಿನ್ ಮೊಬೈಲ್ ಎನ್ನುವ ಹೆಸರಿನ ಮೊಬೈಲ್ ಸೇವೆ ಕಂಪನಿಯೊಂದು, ಕರ್ನಾಟಕದಲ್ಲಿ ಜಿ.ಎಸ್.ಎಮ್ ಸೇವೆ ನೀಡಲು ಬಂತು.ಹೆಚ್ಚಾಗಿ ಯುವಕ ಯುವತಿಯರನ್ನೇ ಗ್ರಾಹಕರನ್ನಾಗಿಸಿಕೊಳ್ಳಲು ಮಾರುಕಟ್ಟೆಗೆ ಇಳಿದ ಇವರು ಅದಕ್ಕೆ ಮೊದಲು ಹಾದಿ ಅಂತ ಆಯ್ದುಕೊಂಡದ್ದು, ಹಿಂದಿ-ಇಂಗ್ಲಿಷ್ ಜಾಹೀರಾತುಗಳನ್ನು. ಬಹುಶಃ ಇಂತಾ ತಪ್ಪು ನಿರ್ಧಾರದ ಪರಿಣಾಮ ಈಗ ಅವರಿಗೆ ಅರಿವಾಗಿ ವರ್ಜಿನ್‍ನಲ್ಲಿ ಬದಲಾವಣೆಯ ಗಾಳಿ ಬೀಸಿದ ಹಾಗಿದೆ ಗುರು! ಕಾರಣ, ವರ್ಜಿನ್-ನವರ ಕನ್ನಡ ಜಾಹೀರಾತುಗಳು ಕಾಣಲು ಕೇಳಲು ಶುರುವಾಗಿವೆ!

ಕರ್ನಾಟಕದಲ್ಲಿ ಕನ್ನಡದ ತಲುಪು ಶಕ್ತಿ ಹೆಚ್ಚು!

ಕನ್ನಡವು ಕರ್ನಾಟಕದಲ್ಲಿ ಅತೀ ಹೆಚ್ಚು ಮಂದಿಗೆ ತಿಳಿದ ಭಾಷೆಯಾಗಿದ್ದು, ಜಾಹೀರಾತಿಗೆ ಕನ್ನಡ ಬಳಸುವುದೇ ಸರಿ ಎಂಬುದು ಕಾಮನ್‍ಸೆನ್ಸು. ಆದರೂ ಕೆಲವು ಕಂಪನಿಗಳು ಬಂದ ಹೊಸತರಲ್ಲಿ ತಪ್ಪೆಸಗಿ ನಂತರ “ಕೆಟ್ಟ ಮೇಲೆ ಬುದ್ಧಿ ಬಂತು” ಎಂಬಂತೆ ಕನ್ನಡದ ಅನಿವಾರ್ಯತೆ ಕಂಡುಕೊಳ್ಳುತ್ತಿವೆ ಅನ್ನುವ ಹಾಗಿದೆ. ವರ್ಜಿನ್ ಮೊಬೈಲ್‍ನವರಲ್ಲಾದ ಈ ಬದಲಾವಣೆಯು, “ಗ್ರಾಹಕನನ್ನು ಪರಿಣಾಮಕಾರಿಯಾಗಿ ಮುಟ್ಟಿ ಅವನ ಮನ ಒಲಿಸಲು ಆತನ ನುಡಿಗಿಂತಾ ಬೇರೊಂದು ಸಾಧನವಿಲ್ಲಾ” ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಗುರು!

ಕರ್ನಾಟಕದಲ್ಲಿ ವ್ಯಾಪಾರಕ್ಕೆ ಬರುವ ಪ್ರತಿಯೊಂದು ಕಂಪನಿಯೂ ಕನ್ನಡಿಗ ಗ್ರಾಹಕರನ್ನು ಆಕರ್ಷಿಸಲು ಕನ್ನಡವನ್ನು ಬಳಸುವುದೇ ಸರಿಯಾದ ಮತ್ತು ಸಹಜವಾದ ದಾರಿ. ಇಲ್ಲವಾದಲ್ಲಿ, ಮಾರುಕಟ್ಟೇನಾ ಗೆಲ್ಲೋದು ಕಷ್ಟ ಅನ್ನೋದು ಬೀದಿ ದಿಟ. ಇದುನ್ನ ಅರಿತಾಗ ಅವರಿಗೂ ಲಾಭ, ಇಲ್ದಿದ್ರೆ ಮುಟ್ಟೋ ಮೂರು ಮತ್ತೊಬ್ಬರನ್ನೇ ಗ್ರಾಹಕರನ್ನಾಗಿ ಪಡೆದು ಪಾಲಿಗೆ ಬಂದಿದ್ದೇ ಪಂಚಾಮೃತ ಅಂತಾ ಸಮಾಧಾನ ಪಟ್ಟುಕೋಬೇಕಾಗುತ್ತೆ, ಅಲ್ವಾ ಗುರು ?

ಬಂಡಿಪುರ ರಸ್ತೆ ಮತ್ತು ಒಕ್ಕೂಟ ವ್ಯವಸ್ಥೆ!

ಬಂಡಿಪುರ ಕಾಡಲ್ಲಿ ಇರುಳಲ್ಲಿ ಗಾಡಿಗಳು ಓಡಾಡಬಾರದು ಅಂತಾ ರಾಜ್ಯ ಹೈಕೋರ್ಟು ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಹೇಳಿದ್ದ ಸುದ್ದಿ ಇತ್ತೀಚಿಗೆ ನಾವೆಲ್ಲಾ ಓದಿದೀವಿ ಗುರು! ಕಾಡುಪ್ರಾಣಿಗಳು ಇರುಳಲ್ಲಿ ಓಡಾಡೋ ಗಾಡಿಗಳಿಗೆ ಸಿಕ್ಕಿ ಸಾಯ್ತಿವೆ ಅನ್ನೋ ಕಳವಳಕಾರಿ ವಿಷಯದಿಂದಾಗಿ ಇಂಥಾ ಕ್ರಮ ಜಾರಿಯಾಗಿದೆ ಅನ್ನೋದೂ ದಿಟ. ಹೊಸಾ ಸುದ್ದಿ (ಪ್ರಜಾವಾಣಿ, ದಿ.09.02.2010 ಪುಟ 3) ಏನಪ್ಪಾ ಅಂದ್ರೆ ಈಗ ಕೇಂದ್ರಸರ್ಕಾರದೋರು ಕರ್ನಾಟಕಕ್ಕೆ ಬುದ್ಧಿ ಹೇಳಿ, ಬಂಡಿಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿ ಕೊಡಿ ಅಂತಾ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ ಮೂಲಕ ಒತ್ತಡಾ ಹೇರಕ್ಕೆ ಮುಂದಾಗಿದಾರಂತೆ.

ಕೇರಳ ಹಾಕ್ತಿರೋ ಒತ್ತಡ!

ಕೇರಳದ ಸಾರಿಗೆ ಮಾಫಿಯಾ ಅಲ್ಲಿನ ರಾಜಕಾರಣದಲ್ಲಿ ಹೊಂದಿರೋ ಬಿಗಿ ಹಿಡಿತದಿಂದಾಗಿ ಆ ರಾಜ್ಯದ ರಾಜಕಾರಣಿಗಳು ‘ತಮ್ಮ ರಾಜ್ಯದ ಆರ್ಥಿಕತೆಗೆ ಈ ರಾತ್ರಿ ಪ್ರಯಾಣ ನಿಲ್ಲಿಸಿದ್ದರಿಂದ ತೊಂದರೆ ಆಗಿದೆ’ ಅನ್ನೋ ಶಂಖಾನಾ ಜೋರಾಗೇ ಹೊಡ್ಕೊಳ್ಳೋಕೆ ಶುರು ಮಾಡಿದಾರೆ. ಆ ಜನ ನಮ್ಮ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಬಂದು ಮೊದಲಿಗೆ ಚಾಮರಾಜನಗರದ ಜಿಲ್ಲಾಧಿಕಾರಿ ಹೊರಡಿಸಿದ್ದ ನಿಷೇಧದ ಆಜ್ಞೇನಾ ಯಶಸ್ವಿಯಾಗಿ ತೆರವು ಮಾಡ್ಸಿದ್ರು. ಆದ್ರೆ ನ್ಯಾಯಾಲಯದ ಮಧ್ಯ ಪ್ರವೇಶದಿಂದಾಗಿ ನಿಷೇಧ ಮತ್ತೆ ಜಾರಿಯಾಯ್ತು. ಇದು ರಾಜ್ಯಸರ್ಕಾರಕ್ಕೆ ಈ ವಿಷಯದಲ್ಲಿ ಇರೋ ಅಸಡ್ಡೇನಾ ತೋರ್ಸುತ್ತೆ ಅಂತಾ ಹಿಂದಿನ ಸಾರೀನೇ ಜನ ಬೇಜಾರಾಗಿದ್ರು! ಈ ಸಲ ಕೇರಳದ ಲಾಬಿ ದಿಲ್ಲಿಯಲ್ಲಿ, ಕೇಂದ್ರಸರ್ಕಾರದ ಮಟ್ಟದಲ್ಲಿ ಜೋರಾಗಿ ನಡೆದಿದೆ. ಅದುಕ್ಕೇ ಕೇಂದ್ರದೋರು ಹೊಸ ವರಸೆ ತೆಗೆದಿದ್ದಾರೆ! ರಾಜ್ಯಸರ್ಕಾರ ಶರತ್ತುಬದ್ಧ ಅನುಮತಿಯ ಹೆಸರಲ್ಲಿ ಗಾಡಿಗಳ ಓಡಾಟಕ್ಕೆ ಅನುಮತಿ ಕೊಡೋ ಲಕ್ಷಣಗಳು ಕಾಣ್ತಿವೆ.

ಕೇಂದ್ರ ರಸ್ತೆ ಸಾರಿಗೆ ಇಲಾಖೆಯ ಅಧಿಕಾರ ವ್ಯಾಪ್ತಿ!

ಈ ವರದಿಯಲ್ಲಿರೋ ತಮಾಶೆ ನೋಡಿ. ಯಾವುದೇ ರಾಜ್ಯ ಸರ್ಕಾರ ತನ್ನ ನೆಲದಲ್ಲಿ ಸಂಚಾರ ನಿರ್ಬಂಧ ಹೇರಲು ಅವಕಾಶ ಇದ್ಯಂತೆ. ಆದ್ರೆ ಎರಡು ರಾಜ್ಯಗಳಿಗೆ ಸಂಬಂಧಿಸಿದ ರಸ್ತೆ ಆಗ್ಬುಟ್ರೆ ಕೇಂದ್ರ ರಸ್ತೆ ಸಾರಿಗೆ ಇಲಾಖೆಯೋರು ತಲೆ ತೂರುಸ್ಬೋದಂತೆ. ಇದು ಸಾಮಾನ್ಯ ಸಂದರ್ಭಗಳಲ್ಲಿ ಒಪ್ಪಬಹುದಾದ ಒಂದು ವ್ಯವಸ್ಥೆ ಅಂದುಕೊಂಡ್ರೂ ಕೇಂದ್ರಸರ್ಕಾರಕ್ಕೆ ನಮ್ಮ ಮೇಲೆ ತನ್ನ ನಿಲುವು ಹೇರೋ ಅಧಿಕಾರ ಇರೋದು ಎಷ್ಟು ಸರಿ? ಅನ್ಸಲ್ವಾ! ಬೇಕಂದ್ರೆ ಎರಡೂ ರಾಜ್ಯಗಳ ನಡುವೆ ಬಿಕ್ಕಟ್ಟು ಬರದಂಗೆ ಮಧ್ಯಸ್ಥಿಕೆ ವಹಿಸ್ತೀನಿ ಅನ್ನೋದ್ನ ಒಪ್ಪಬಹುದು. ಈಗ ನ್ಯಾಯಾಲಯ ತನ್ನ ನಿಲುವು ಸೂಚಿಸಿರೋ ವಿಷಯಕ್ಕೆ, ಅದೂ ಕಾಡುಪ್ರಾಣಿಗಳು ವಾಹನಗಳಿಗೆ ಬಲಿಯಾಗ್ಬಾರ್ದು ಅನ್ನೋ ಕಾರಣಕ್ಕೆ ಜಾರಿಗೆ ತಂದಿರೋ ನಿರ್ಬಂಧಾನ ಹೀಗೆ ರಾಜಕೀಯ ಲಾಬಿಯ ಕಾರಣದಿಂದಾಗಿ ತೆಗೆದು ಹಾಕ್ಸೋ ಪ್ರಯತ್ನ ಮಾಡೋದು ಸರೀನಾ? ಗುರು! ಎರಡು ರಸ್ತೆಗಳಲ್ಲಿ ರಾತ್ರಿ ಒಂಬತ್ತರಿಂದ ಬೆಳಗಿನ ಆರರವರೆಗೆ ಸಂಚಾರ ನಿಷೇಧ ಮಾಡೋ ಕಾರಣದಿಂದಾನೆ ಹಾಳಾಗಿಬಿಡೋ ಅಷ್ಟು ಕಳಪೆ ಆರ್ಥಿಕ ಪರಿಸ್ಥಿತಿ ಯಾವುದಾದ್ರೂ ರಾಜ್ಯಕ್ಕೆ ಇದೆ ಅನ್ನೋದೇ ನಂಬಕ್ಕಾಗದ ಮಾತು. ಅಂಥಾದ್ರಲ್ಲಿ ಆ ಮಾತ್ ಕಟ್ಕೊಂಡು ನಮ್ಮ ಮೇಲೆ ಅಧಿಕಾರ ಚಲಾಯ್ಸೋಕೆ ಅವಕಾಶ ಮಾಡಿಕೊಡೋ ಅಂಥಾ ವ್ಯವಸ್ಥೆ ನಮ್ಮ ಭಾರತ ಒಕ್ಕೂಟದ್ದು ಅನ್ನೋದು, ನಿಜಕ್ಕೂ ಯೋಚನೆ ಮಾಡಬೇಕಾದ ವಿಷಯಾ ಅಲ್ವಾ? ಈಗ ಕರ್ನಾಟಕ ರಾಜ್ಯ ಸರ್ಕಾರದೋರೇ ‘ಕಾಡುಪ್ರಾಣಿಗಳ ಉಳಿವಿಗಾಗಿ ಲಾಬಿಗಳಿಗೆ ಮಣಿಯಲ್ಲಾ... ನಾಡು, ನಾಡಿನ ಜನ, ನಾಡಿನ ಸಂಪತ್ತು, ನಾಡಿನ ಜೀವವೈವಿಧ್ಯ ಕಾಪಾಡೋ ವಿಷಯದಲ್ಲಿ ರಾಜಿಯಾಗಲ್ಲಾ’ ಅನ್ನೋದನ್ನ ಸಾಬೀತು ಮಾಡ್ತಾರಾ? ಗುರು!

ಫೇಸ್ ಬುಕ್ - ಕೊಡೊಣ ಕನ್ನಡದ ಲುಕ್ !

ಅಂತರ್ಜಾಲದಲ್ಲಿ ಗೆಳೆತನ, ನಂಟು ಬೆಸೆಯೋ ಸೋಶಿಯಲ್ ನೆಟವರ್ಕ್ ತಾಣಗಳಲ್ಲಿ ಮುಂಚೂಣಿಯಲ್ಲಿರೋ ಫೇಸ್ ಬುಕ್, ಇನ್ನೂ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ. ಈ ಪಟ್ಟಿಲಿ ಭಾರತದ 6 ಭಾಷೆಗಳಿವೆ. ಕನ್ನಡಕ್ಕಿಂತಲೂ ಕಡಿಮೆ ಜನ ಮಾತಾಡೋ ಮಲಯಾಳಂ, ಪಂಜಾಬಿಗಳಲ್ಲೂ ಈ ತಾಣ ಲಭ್ಯವಿದೆ, ಅದೆಲ್ಲ ಬಿಡಿ, ಬರೀ 3 ಲಕ್ಷ 20 ಸಾವಿರ ಜನ ಮಾತಾಡೋ ಐಸ್ ಲ್ಯಾಂಡ್ ದೇಶದ ಇಸಲೆನಸ್ಕಾ ಭಾಷೆಯಲ್ಲಿ ಫೇಸ್ ಬುಕ್ ಇದೆ, ಆದ್ರೆ 5 ಕೋಟಿ ಜನ ಮಾತಾಡೋ ಕನ್ನಡದಲ್ಲಿ ಮಾತ್ರ ಈ ಸೇವೆ ಇಲ್ಲ ಗುರು. ಬಿಡಿ, ಇದರಲ್ಲಿ ಫೇಸ್ ಬುಕ್ ದೇನು ತಪ್ಪಿಲ್ಲ, ಈ ತಾಣದಲ್ಲಿ ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿ ಕೊಡೊ ಕೆಲಸದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳದೇ ಇರೋದೆ ಇದಕ್ಕೆ ಕಾರಣ. ಅಂತರ್ಜಾಲದಲ್ಲಿರೋ ಕನ್ನಡಿಗರೆಲ್ಲ ಒಂದಾಗಿ ಕೆಲಸ ಮಾಡಿದ್ರೆ ಇದನ್ನ ಚಿಟಿಕೆ, ಚಿಟಿಕೆ ಹೊಡೆಯೋದ್ರಲ್ಲಿ ಮಾಡಿ ಹಾಕಬೌದು ಗುರು.

ನಾವೇನ್ ಮಾಡೋಣ ಅಂತೀರಾ ?
ಆಫೀಸ್ ಅಲ್ಲಿ, ಮನೆಲಿ, ಕಾಲೇಜಲ್ಲಿ, ನೆಟ್ ಪಾರ್ಲರ್ ಅಲ್ಲಿ ಹೀಗೆ ಎಲ್ಲಂದ್ರಲ್ಲಿ ನಮ್ಮ ಹುಡುಗ್ರು ಫೇಸ್ ಬುಕ್ ಅಲ್ಲಿ ಗಂಟೆಗಟ್ಟಲೇ ಹರಟೆ ಹೊಡಿತಿವಿ, ಆ ಹರಟೆ ಮಧ್ಯಾನೇ ಒಂದು ಸ್ವಲ್ಪ ಸಮಯ ಇದಕ್ಕೆ ಕೊಟ್ರೆ ಸಾಕು, ಫೇಸ್ ಬುಕ್ ಕನ್ನಡದಲ್ಲಿ ಬಂದೇ ಬಿಡುತ್ತೆ.

ಅದಕ್ಕೆ ನೀವ್ ಮಾಡಬೇಕಿರೋ ಕೆಲಸ ಸಕತ್ ಸಿಂಪಲ್ ಗುರು. ನೀವು ಮಾಡಬೇಕಿರೋದು ಇಷ್ಟೇ:
  • ನಿಮ್ಮ ಫೇಸ್ ಬುಕ್ ಖಾತೆಗೆ ಸೈನ್ ಇನ್ ಮಾಡಿ
  • ಈ ಕೆಳಗಿನ ಕೊಂಡಿಗೆ ಹೋಗಿ http://www.facebook.com/translations
  • ಇಲ್ಲಿ ಪುಟದ ಬಲಗಡೆ ಇರೋ Translation Links ಅನ್ನೋ ಭಾಗಕ್ಕೆ ಹೋಗಿ, ಅಲ್ಲಿ ಭಾಷೆ ಆಯ್ಕೆಯ ಅನುಕೂಲ ಬಳಸಿ "ಕನ್ನಡ" ಆಯ್ದುಕೊಳ್ಳಿ
  • ಶುರು ಹಚ್ಕೋಳ್ಳಿ !
ನೀವು ಮಾಡಿ, ನಿಮ್ಮ ಅಕ್ಕ,ತಂಗಿ, ಅಣ್ಣ, ತಮ್ಮ, ಗೆಳೆಯ, ಗೆಳತಿ ಎಲ್ಲರಿಗೂ ಹೇಳಿ ಮತ್ತೆ. ಎಂತೆಂಥ ಚಿಕ್ಕ ಚಿಕ್ಕ ದೇಶಗಳ ಭಾಷೆಲೆಲ್ಲ ಈ ಸೇವೆ ಸಿಕ್ಕು, 5 ಕೋಟಿ ಕನ್ನಡಿಗರ ಭಾಷೆಲಿ ಇದಿಲ್ಲ ಅಂದ್ರೆ ಕನ್ನಡಿಗರಿಗೆ ಅದು ನಿಜಕ್ಕೂ ಅವಮಾನದ ವಿಷ್ಯ ಅನ್ಸಲ್ವಾ ಗುರು? ಕನ್ನಡಿಗರು ಅಭಿಮಾನ ಇಲ್ಲದೋರು, ಅದು ಇದು ಅನ್ನೋದೆಲ್ಲ ಹಳೇ ಮಾತು, ಈಗಿನ ಕನ್ನಡದ ಹುಡುಗ್ರು ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸಬಲ್ರು, ಅಂತಾದ್ರಲ್ಲಿ ಇದೆಲ್ಲ ಒಂದ್ ಲೆಕ್ಕಾನಾ ಅಂತ ತೋರ್ಸಬೇಕು ಗುರು. ಹಾಗಿದ್ರೆ, ಫೇಸ್ ಬುಕ್ ಕನ್ನಡಕ್ಕೆ ತರೋ ಕೆಲಸ ಶುರು ಮಾಡೋಣ್ವಾ ಗುರು?

ಎಲ್ಲ ಕನ್ನಡಿಗರಿಗಾಗಿ ಎಲ್ಲರಕನ್ನಡ !

ಕಳೆದ ಭಾನುವಾರ ನಡೆದ "ನುಡಿಯರಿಮೆ ಮತ್ತು ಕಲಿಕೆ" ವಿಚಾರ ಸಮ್ಮೇಳನದಲ್ಲಿ ಎಲ್ಲರಕನ್ನಡ ಅನ್ನುವ ಯೋಜನೆಯ ಅಂತರ್ಜಾಲ ತಾಣಕ್ಕೆ ಚಾಲನೆ ಸಿಕ್ಕಿದ್ರ ಬಗ್ಗೆ ಓದಿದ್ರಿ. ಈ ಎಲ್ಲರಕನ್ನಡ ಅಂದ್ರೇನು, ಈ ಯೋಜನೆಯಲ್ಲೇನಿದೆ ಅಂತ ವಸಿ ನೋಡ್ಮಾ ಬಾ ಗುರು..

ಎಲ್ಲರಕನ್ನಡ ಅಂದ್ರೇನು?
ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸುವ ಒಳನುಡಿಯನ್ನು "ಎಲ್ಲರಕನ್ನಡ" ಎಂದು ಕರೆಯಬಹುದು. ಕರ್ನಾಟಕದಲ್ಲ ಹಲವು ಬಗೆಯ ಆಡುನುಡಿಗಳನ್ನು ಬಳಸುತ್ತಿದ್ದರೂ, ಈ ದಿನ ಕನ್ನಡಿಗರೆಲ್ಲರೂ ಬರಹ ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಬಳಸುತ್ತಿರುವ ಕನ್ನಡವೇ "ಎಲ್ಲರಕನ್ನಡ" ಅನ್ನಬಹುದು. ಈ ಎಲ್ಲರಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಬಗೆಗಿನ ಸಂಶೋಧನೆ ಮತ್ತು ಬೆಳವಣಿಗೆಯ ಯೋಜನೆಯ ಹೆಸರೂ "ಎಲ್ಲರಕನ್ನಡ"ವೆಂದೇ.

ಸದ್ಯಕ್ಕೆ ಬನವಾಸಿ ಬಳಗ ಈ ಯೋಜನೆಯನ್ನು ಪ್ರಾಯೋಜಿಸುತ್ತಿದ್ದು, ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಈ ಯೋಜನೆಯಲ್ಲಿ ಹಿರಿಯ ಸಂಶೋಧಕರಾಗಿ ತೊಡಗಿಕೊಂಡಿದ್ದಾರೆ. ಮೊದಲ ಹಂತದಲ್ಲಿ ಎಲ್ಲರ ಕನ್ನಡದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಹೆಜ್ಜೆಯಾಗಿ ಅವರ ಕನ್ನಡದ ಕೆಲವು ಹೊತ್ತಿಗೆಗಳನ್ನು ಉಚಿತವಾಗಿ ಪಿ.ಡಿ.ಎಫ್ ರೂಪದಲ್ಲಿ ಈ ಯೋಜನೆಯ ಮಿಂಬಲೆಯ ತಾಣವಾದ http://www.ellarakannada.org/ ನಲ್ಲಿ ಕೊಡಲಾಗಿದೆ. ಈ ಹೊತ್ತಿಗೆಗಳನ್ನು ಓದಿ ಹೆಚ್ಚು ಹೆಚ್ಚು ಜನರು ಈ ವಿಷ್ಯಗಳ ಬಗ್ಗೆ ಅರಿವು ತಂದುಕೊಳ್ಳಬೇಕು ಎಂಬುದೇ ಇದರ ಉದ್ದೇಶ. ನೀವು ಓದಿ, ಹಾಗೆಯೇ, ನಿಮ್ಮ ಗೆಳೆಯರಿಗೂ ಈ ತಾಣದ, ಈ ಹೊತ್ತಿಗೆಗಳ ಪರಿಚಯ ಮಾಡಿಸಿ. ಬರುವ ದಿನಗಳಲ್ಲಿ ಇನ್ನೂ ಹತ್ತು ಹಲವು ವಿಷಯಗಳ ಮೇಲೆ ಈ ಯೋಜನೆ ಕೆಲಸ ಮಾಡಲಿದೆ, ಹಾಗಾಗಿ ಈ ತಾಣವನ್ನು ನಿಮ್ಮ ಬ್ರೌಸರ್ ನಲ್ಲಿ ಬುಕ್ ಮಾರ್ಕ್ ಮಾಡಿಕೊಳ್ಳಿ ಗುರು. ಹಾಗೆಯೇ ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಇಲ್ಲವೇ ಹಣವಿತ್ತು ಬೆಂಬಲಿಸುವ ಆಸೆ ನಿಮ್ಮಲ್ಲಿದ್ದಲ್ಲಿ ಬನವಾಸಿ ಬಳಗದ ಸಂಜೀವ ಕೌತಾಳ ಅವರನ್ನು ಸಂಪರ್ಕಿಸಿ.

"ನುಡಿಯರಿಮೆ ಮತ್ತು ಕಲಿಕೆ" ವಿಚಾರ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ !

ಯಾವುದೇ ಒಂದು ನಾಡಿನ ಏಳಿಗೆಯಲ್ಲಿ ದುಡಿಮೆಯ ಪಾತ್ರ ಬಲು ಹಿರಿದಾಗಿದ್ದು, ದುಡಿಮೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂಬುದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂಬುದೂ ಜಗತ್ತಿನಾದ್ಯಂತ ಸ್ಥಾಪಿತವಾಗಿರುವ ದಿಟವಾಗಿದೆ. ಆದ್ದರಿಂದ ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡವೇ ಸರಿಯಾದ ಸಾಧನವೆಂಬುದೂ, ಹಾಗೇ ನಮ್ಮ ಮಕ್ಕಳ ಕಲಿಕೆ ಅತ್ಯುತ್ತಮವಾಗಲು ಅದಕ್ಕೆ ಸಾಧನವಾದ ಕನ್ನಡನುಡಿಯ ಸರಿಯಾದ ಅಧ್ಯಯನವಾಗಬೇಕೆಂಬುದೂ ಮತ್ತು ಆ ಅಧ್ಯಯನದ ಫಲವು ಕನ್ನಡಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.
ಈ ನಿಟ್ಟಿನಲ್ಲಿ, ಫೆಬ್ರವರಿ 7, 2010ರ ಭಾನುವಾರ ದಂದು ಬನವಾಸಿ ಬಳಗ ಹಮ್ಮಿಕೊಂಡಿದ್ದ "ನುಡಿಯರಿಮೆ ಮತ್ತು ಕಲಿಕೆ" ಎಂಬ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಭಾಷಾ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿರುವ ನಾಡೋಜ ಡಾ. ಡಿ.ಎನ್. ಶಂಕರ್ ಭಟ್, ಡಾ. ಕೆ.ವಿ. ನಾರಾಯಣ ಮತ್ತು ಅಮೇರಿಕದ ನ್ಯೂಯಾರ್ಕದಲ್ಲಿರುವ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಎನ್. ಶ್ರೀಧರ್ ಹಾಗೂ ಹಿರಿಯ ಶಿಕ್ಷಣ ತಜ್ಞ ಡಾ.ಎನ್.ಎಸ್.ರಘುನಾಥ್ ಅವರು ಪಾಲ್ಗೊಂಡು ಉಪನ್ಯಾಸ ನೀಡಿದರು.

ಮೊದಲಿಗೆ "ನುಡಿಯ ಕಲಿಕೆಗೆ ಸೊಲ್ಲರಿಮೆಯ ನೆರವು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳು, ಅವುಗಳ ಒಳರಚನೆ, ಅವುಗಳನ್ನು ಜೋಡಿಸಿ ಬಗೆ ಬಗೆಯ ವಾಕ್ಯಗಳನ್ನು ಮಾಡುವ ಪರಿ, ಆ ವಾಕ್ಯಗಳನ್ನು ಬಳಸಿ ಬರಹವನ್ನು ಬರೆಯುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ಸೊಲ್ಲರಿಮೆಯ ಮೂಲ ಗುರಿಯಾಗಿದೆ. ಹಾಗಾಗಿ, ನಿಜಕ್ಕೂ ಕನ್ನಡದ ಸೊಲ್ಲರಿಮೆಯ ಸ್ವರೂಪ ಎಂತಹದು ಎಂಬುದರ ಸರಿಯಾದ ಅರಿವು, ಹೇಗೆ ಕನ್ನಡವನ್ನು ಓದಲು ಬರೆಯಲು ಕಲಿಯುವವರಿಗೆ ಮತ್ತು ಇಂಗ್ಲಿಷ್‍ನಂತಹ ಬೇರೆ ನುಡಿಯೊಂದನ್ನು ಕಲಿಯುವವರಿಗೆ ನೆರವನ್ನು ನೀಡಬಲ್ಲದು ಎಂಬುದರ ಬಗ್ಗೆ ವಿವರಿಸಿ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ಕೆಲಸಗಳಾಗಬೇಕು ಎಂದು ನುಡಿದರು.

ಎರಡನೆಯದಾಗಿ "ಕನ್ನಡ ಭಾಷಾ ವಿಜ್ಞಾನ ಮತ್ತು ಕನ್ನಡ ಸಮಾಜ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಕೆ.ವಿ. ನಾರಾಯಣ ಅವರು ಕನ್ನಡ ನುಡಿಯರಿಮೆಗೂ, ಕರ್ನಾಟಕದ ಸಮಾಜಕ್ಕೂ ಇರುವ ನಂಟನ್ನು ಕುರಿತು ತಿಳಿಸುವ ಬರವಣಿಗೆಗಳು ಬರಬೇಕಾದ ಅಗತ್ಯದ ಬಗ್ಗೆ, ಕರ್ನಾಟಕದಲ್ಲಿರುವ ಭಾಷೆಗಳ ಮತ್ತು ಭಾಷಿಕರ ನಡುವಣ ಸಂಬಂಧದ ಕುರಿತಂತೆ ನೀತಿಯೊಂದನ್ನು ರೂಪಿಸಬೇಕಾದ ಅಗತ್ಯದ ಬಗ್ಗೆ ಮತ್ತು ಕನ್ನಡ ನುಡಿಯ ಬೆಳವಣಿಗೆಯ ಬಗ್ಗೆ ರೂಪಿಸುವ ಯೋಜನೆಗಳನ್ನು ಹೇಗೆ ಮತ್ತು ಯಾವ ತಳಹದಿಯ ಮೇಲೆ ಕಟ್ಟಬೇಕು ಎಂಬುದರ ಬಗ್ಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೇ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳ ನಡುವೆ ಇರುವ ಮತ್ತು ಇರಬೇಕಾದ ನಂಟನ್ನು ಕುರಿತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸಿದರು.

ಮೂರನೆಯದಾಗಿ "ಭಾಷಾವಿಜ್ಞಾನ ಮತ್ತು ಶಿಕ್ಷಕರು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎನ್.ಎಸ್. ರಘುನಾಥ್ ಅವರು ಕರ್ನಾಟಕದಲ್ಲಿ ಇಂದಿಗೂ ಬಹುಪಾಲು ಶಿಕ್ಷಕರಲ್ಲಿ ಭಾಷಾ ವಿಜ್ಞಾನ ಎನ್ನುವ ವಿಷಯವೊಂದು ಇರುವುದರ ಮತ್ತು ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇರುವುದರ ಬಗ್ಗೆ ಅರಿವು ತುಂಬಾ ಕಡಿಮೆಯಿದ್ದು, ಭಾಷಾ ವಿಜ್ಞಾನದ ಬಗ್ಗೆ ಇರುವ ತಿರಸ್ಕಾರ ಭಾವನೆಯು, ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹೇಗೆ ತೊಡಕುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ವಾಕ್ಯ ರಚನೆ, ಫೊನೆಟಿಕ್ಸ್ ಮುಂತಾದ ಭಾಷಾ ವಿಜ್ಞಾನದ ಮುಖ್ಯ ಭಾಗಗಳ ಅರಿವು ಭಾಷಾ ಶಿಕ್ಷಕರಿಗೆ ಇದ್ದಲ್ಲಿ, ಮಕ್ಕಳ ಭಾಷಾ ಕಲಿಕೆಯ ಮಟ್ಟದಲ್ಲಿ ಆಗಬಹುದಾದ ಲಾಭದಾಯಕ ಪರಿಣಾಮಗಳ ಬಗ್ಗೆ ವಿವರಿಸಿದರು.

ಕೊನೆಯಲ್ಲಿ "ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನ ಏಕೆ ಬೇಕು? ಮತ್ತು ಅದನ್ನು ಬೆಳೆಸುವ ಬಗೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎಸ್.ಎನ್. ಶ್ರೀಧರ್ ಅವರು, ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಭಾಷಾವಿಜ್ಞಾನ ಇನ್ನೂ ಎಳವೆಯಲ್ಲಿರುವುದನ್ನು, ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನದ ಅವಶ್ಯಕತೆಯಿದೆಯೆನ್ನುವುದೇ ಇಲ್ಲಿಯವರೆಗೆ ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲದಂತಿರುವುದು ಇದಕ್ಕೆ ಕಾರಣವೆಂದು ವಿವರಿಸಿದರು. ಭಾಷಾವಿಜ್ಞಾನದಿಂದಲೇ ಕನ್ನಡದ ಸರಿಯಾದ ಸ್ವರೂಪದ ಅರಿವು ನಮಗಾಗಬಲ್ಲುದು ಮತ್ತು ಕನ್ನಡದಿಂದ ಅತಿ ಹೆಚ್ಚಿನ ಲಾಭವನ್ನು ನಾವು ಪಡೆಯಬಲ್ಲೆವು. ಆದ್ದರಿಂದ ಭಾಷಾವಿಜ್ಞಾನವನ್ನು ಒಂದು ಅತಿಮುಖ್ಯವಾದ ವಿಷಯವಾಗಿ ವಿಶ್ವವಿದ್ಯಾಲಯಗಳು ಪರಿಗಣಿಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಬೋಧನೆಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರತಿ ಉಪನ್ಯಾಸದ ನಂತರ ಆಯಾ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆಗಳಾದವು. ಭಾರತದ ಹಲವೆಡೆಯಿಂದ ಬಂದಿದ್ದ ಶಿಕ್ಷಣ ಮತ್ತು ಭಾಷಾ ವಿಜ್ಞಾನದ ವಿಷಯ ಪರಿಣಿತರು ಈ ಚರ್ಚೆಗಳಿಗೆ ಹೊಸ ಮೆರುಗು ತಂದರು.

ಇದೇ ಸಂದರ್ಭದಲ್ಲಿ "ಎಲ್ಲರ ಕನ್ನಡ" ಅನ್ನುವ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಯಿತು. ಇದು ಕನ್ನಡಿಗರೆಲ್ಲರೂ ಬಳಸುವ ಕನ್ನಡದ ಭಾಷಾವಿಜ್ಞಾನ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವ್ಯವಸ್ಥೆಯನ್ನು ಕುರಿತ ತಾಣವಾಗಿದೆ. ಕನ್ನಡ ಭಾಷಾವಿಜ್ಞಾನದ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದರಲ್ಲಿ ನಾಡೋಜ ಡಾ. ಡಿ. ಎನ್. ಶಂಕರಭಟ್ಟರ ಕನ್ನಡದ ಹೊತ್ತಗೆಗಳನ್ನೆಲ್ಲ ಉಚಿತವಾಗಿ ಪಿಡಿಎಫ್ ರೂಪದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ನುಡಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಾವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಕೂಡಿ ಕೆಲಸ ಮಾಡಲು ಮುಂದಾಗಬೇಕಾದ ಅವಶ್ಯಕತೆಯನ್ನು ಇಡೀ ಸಮ್ಮೇಳನ ಅರ್ಥಪೂರ್ಣವಾಗಿ ಒಕ್ಕೊರಲಿನ ಅಭಿಪ್ರಾಯದ ಮೂಲ ಹೊರಹೊಮ್ಮಿಸಿತು.

ನುಡಿಯರಿಮೆ ಮತ್ತು ಕಲಿಕೆ - ವಿಚಾರ ಸಮ್ಮೇಳನ

ಏಳಿಗೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂದೂ, ಆದ್ದರಿಂದ ಕನ್ನಡಿಗರ ತಾಯ್ನುಡಿಯಾದ ಕನ್ನಡದ ಸರಿಯಾದ ಅಧ್ಯಯನವಾಗಬೇಕೆಂಬುದೂ, ಆ ಅಧ್ಯಯನದ ಫಲವು ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.

ಈ ನಿಟ್ಟಿನಲ್ಲಿ ದಿನಾಂಕ 7/2/2010 ರಂದು ಬೆಂಗಳೂರಿನಲ್ಲಿ "ನುಡಿಯರಿಮೆ ಮತ್ತು ಕಲಿಕೆ" ಎಂಬ ವಿಚಾರ ಸಮ್ಮೇಳನವನ್ನು ಬನವಾಸಿ ಬಳಗವು ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ನುಡಿ ಮತ್ತು ಕಲಿಕೆಯ ತೊಂಬತ್ತಕ್ಕೂ ಹೆಚ್ಚು ಮಂದಿ ತಜ್ಞರು ಭಾಗವಹಿಸಲಿದ್ದಾರೆ. ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ.

ಹಿನ್ನೆಲೆ ಮತ್ತು ಉದ್ದೇಶಗಳು

ಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಕ್ಷೇತ್ರದಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಹಳ ಮುಖ್ಯವಾದ ಬೆಳವಣಿಗೆಗಳಾಗಿವೆ. ಕನ್ನಡದ ಸ್ವರೂಪದ ಬಗ್ಗೆ ಸಾವಿರಾರು ವರ್ಷಗಳಿಂದ ಬೇರೂರಿದ್ದ ನಂಬಿಕೆಗಳನ್ನು ಅರಿಮೆಯ (ವಿಜ್ಞಾನದ) ಪರೀಕ್ಷೆಗೆ ಒಳಪಡಿಸಿ ಅವುಗಳಲ್ಲಿ ಕೆಲವು ಮುಖ್ಯವಾದ ನಂಬಿಕೆಗಳನ್ನು ನುಡಿಯರಿಗರು (ಭಾಷಾವಿಜ್ಞಾನಿಗಳು) ಕೈಬಿಟ್ಟಿದ್ದಾರೆ. ಈ ಮೂಲಕ ಕನ್ನಡ ನುಡಿಯರಿಮೆಯು ಅರಿಮೆಯ ಬೆಳಕಿನಿಂದ ಕಂಗೊಳಿಸುತ್ತಿರುವ ಹೊಸದೊಂದು ದಿಕ್ಕಿನಲ್ಲಿ ಹರಿದಿದೆ.

ಮುಖ್ಯವಾಗಿ, ಸಂಸ್ಕೃತದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಕನ್ನಡಕ್ಕೆ ಅಳವಡಿಸುವುದು ಅರಿಮೆಯಲ್ಲವೆಂದು (ಅವೈಜ್ಞಾನಿಕವೆಂದು) ಕಂಡುಕೊಂಡ ಸೊಲ್ಲರಿಗರು (ವೈಯಾಕರಣಿಗಳು) ಕನ್ನಡಕ್ಕೆ ಕನ್ನಡದ್ದೇ ಸೊಲ್ಲರಿಮೆಯನ್ನು ಕಟ್ಟುತ್ತಿದ್ದಾರೆ. ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಲ್ಲಿ ಈ ಹೊಸ ಸೊಲ್ಲರಿಮೆಯು ಹಿಂದಿನ ಸೊಲ್ಲರಿಮೆಗಳಿಗಿಂತ ಹೆಚ್ಚು ಸಮರ್ಪಕವಷ್ಟೇ ಅಲ್ಲ, ಕಲಿಯಲು ಸುಲಭವೂ ಆಗಲಿದೆ.

ಹಾಗೆಯೇ, ಹೊಸ ಪದಗಳನ್ನು ಕಟ್ಟುವಾಗ ಕನ್ನಡಿಗರಿಗೆ ಕಷ್ಟವಾದ ಸಂಸ್ಕೃತದ ಮೊರೆಹೋಗದೆ ಬೇರೆ ದಾರಿಯೇ ಇಲ್ಲವೆಂಬ ನಂಬಿಕೆಯೂ ಅರಿಮೆಯಲ್ಲವೆಂದು ಕಂಡುಕೊಂಡ ನುಡಿಯರಿಗರು ಸಾಮಾನ್ಯ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿರುವ ಎಲ್ಲರಕನ್ನಡವೇ ಹೊಸ ಪದಗಳ ಗಣಿಯೆಂದು ಗುರುತಿಸಿದ್ದಾರೆ. ಈ ಪದಗಳನ್ನು ಉಲಿಯಲು ಮತ್ತು ಕಲಿಯಲಷ್ಟೇ ಅಲ್ಲ, ಕಟ್ಟುವುದು ಕೂಡ ಸುಲಭವಾಗಿದೆ.

ಹಾಗೆಯೇ, ಕನ್ನಡದ ಇಂದಿನ ಲಿಪಿಯಿಂದ ತಲೆದೋರಿರುವ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಈ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸಿದರೆ ಬರಹವನ್ನು ಮಕ್ಕಳಿಗೆ ಕಲಿಸುವುದು ಸುಲಭವಾಗುತ್ತದೆಯೆಂದು ಅನೇಕ ನುಡಿಯರಿಗರು ತೀರ್ಮಾನಿಸಿದ್ದಾರೆ.

ನುಡಿಯರಿಮೆಯ ಕ್ಷೇತ್ರದಲ್ಲಿ ಈ ವೈಜ್ಞಾನಿಕ ಬದಲಾವಣೆಗಳಾಗುತ್ತಿದ್ದರೂ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು (ಶಿಕ್ಷಣವ್ಯವಸ್ಥೆ) ಇವುಗಳಿಂದ ಬಹಳ ದೂರವುಳಿದಿದೆ. ಹೀಗಾಗಿ, ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಾಗ, ವಿಜ್ಞಾನ-ತಂತ್ರಜ್ಞಾನಗಳ ಪದಗಳನ್ನು ಕಟ್ಟುವಾಗ, ಮತ್ತು ಬರಹವನ್ನು ಕಲಿಸುವಾಗ ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ರಚಿಸುವವರು ಇನ್ನೂ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು ತನ್ನ ಹರವು ಮತ್ತು ಗುಣಮಟ್ಟಗಳನ್ನು ಹೆಚ್ಚಿಸಿಕೊಳ್ಳಲು ಬಹಳ ತೊಂದರೆಯಾಗಿದೆಯೆಂಬುದು ಅನೇಕ ಕಲಿಕೆಯರಿಗರ (ಶಿಕ್ಷಣತಜ್ಞರ) ಮತ್ತು ನುಡಿಯರಿಗರ ಅನಿಸಿಕೆಯಾಗಿದೆ.

ನುಡಿಯರಿಮೆ ಮತ್ತು ಕಲಿಕೆಯೆಂಬೀ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಒಗ್ಗೂಡಿ ಈ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರೆ ಪರಿಸ್ಥಿತಿ ಬಹಳ ಸುಧಾರಿಸಬಲ್ಲುದು ಎಂದು ನಾವು ನಂಬಿದ್ದೇವೆ. ಆದ್ದರಿಂದ ಕಲಿಕೆಯರಿಗರು ಮತ್ತು ನುಡಿಯರಿಗರನ್ನು ಒಂದೇ ಸೂರಿನಡಿ ಸೇರಿಸುವುದೇ ಈ ಸಮ್ಮೇಳನದ ಅತಿಮುಖ್ಯವಾದ ಮತ್ತು ಮೊದಲನೆಯ ಉದ್ದೇಶವಾಗಿದೆ. ಹಾಗೆಯೇ ನುಡಿಯರಿಮೆಯ ಸಂಶೋಧನೆಗಳಿಂದ ಯಾವ ಯಾವ ಸತ್ಯಗಳು ಹೊರಬಂದಿವೆ, ಅವುಗಳಲ್ಲಿ ಯಾವ ಸತ್ಯಗಳನ್ನು ಯಾವಾಗ ಕಲಿಕೆಯೇರ್ಪಾಡಿನಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಾಗೆಯೇ, ಕಲಿಕೆಯೇರ್ಪಾಡಿನಲ್ಲಿ ಯಾವ ಬದಲಾವಣೆಗಳು ತುರ್ತಾಗಿ ಆಗಬೇಕು ಮತ್ತವುಗಳಲ್ಲಿ ನುಡಿಯರಿಗರ ಪಾತ್ರವೇನು ಎಂಬುದರ ಬಗ್ಗೆಯೂ ಚರ್ಚೆ ನಡೆಯಬೇಕಿದ್ದು. ಈ ಚರ್ಚೆಗಳ ಮೂಲಕ ನುಡಿಯರಿಗರು ಮತ್ತು ಕಲಿಕೆಯರಿಗರಿಬ್ಬರೂ ಯಾವ ಕೆಲಸಗಳನ್ನು ಆದ್ಯತೆಯಿಂದ ಮಾಡಬೇಕೆಂದು ಕೂಡ ಚರ್ಚೆಯಾಗಬೇಕಿದೆ. ಈ ಚರ್ಚೆಗಳು ನಡೆಯುವಂತೆ ಮಾಡುವುದು ಈ ಸಮ್ಮೇಳನದ ಎರಡನೆಯ ಉದ್ದೇಶವಾಗಿದೆ. ಈ ಚರ್ಚೆಗಳಿಗೆ ಬೀಜವಾಗಿ ನಾಲ್ಕು ಹಿರಿಯ ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದೇವೆ.

ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಉಪನ್ಯಾಸಕರು ಮತ್ತು ಪರಿಶೀಲಕರು:
ಉಪನ್ಯಾಸಕರು
  • ನಾಡೋಜ ಡಾ. ಡಿ. ಎನ್. ಶಂಕರಭಟ್, ನಿವೃತ್ತ ನುಡಿಯರಿಮೆಯ ಪ್ರೊಫೆಸರ್, ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ಕರ್ನಾಟಕ.
  • ಡಾ. ಎನ್. ಎಸ್. ರಘುನಾಥ್, ನಿವೃತ್ತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು, ಕರ್ನಾಟಕ.
  • ಡಾ. ಕೆ. ವಿ. ನಾರಾಯಣ, ನಿವೃತ್ತ ಕನ್ನಡದ ಪ್ರೊಫೆಸರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
  • ಡಾ. ಎಸ್. ಎನ್. ಶ್ರೀಧರ್, ಪ್ರೊಫೆಸರ್, ನುಡಿಯರಿಮೆ ವಿಭಾಗ, ಸ್ಟೋನಿ ಬ್ರುಕ್ ವಿಶ್ವವಿದ್ಯಾಲಯ, ನ್ಯೂಯಾರ್ಕ್, ಯು.ಎಸ್.ಎ.
ಪರಿಶೀಲಕರು
  • ಡಾ. ಬಿ. ಪಿ. ಹೇಮಾನಂದ, ಹಿರಿಯ ರಿಸರ್ಚ್ ಫೆಲೊ, ದ್ರಾವಿಡ ಮತ್ತು ಕಂಪ್ಯುಟೇಶನಲ್ ಭಾಷಾವಿಜ್ಞಾನ ವಿಭಾಗ, ದ್ರಾವಿಡ ವಿವಿ, ಕುಪ್ಪಂ, ಆಂಧ್ರಪ್ರದೇಶ.
  • ಶ್ರೀ ನಿರಂಜನ್ ಉಪ್ಪೂರ್, ನುಡಿಯರಿಮೆ ರಿಸರ್ಚ್ ಫೆಲೋ, ಐ‌ಐಟಿ ಕಾನ್ಪುರ್, ಉತ್ತರ ಪ್ರದೇಶ.
  • ಡಾ. ವಿ. ಬಿ. ತಾರಕೇಶ್ವರ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಅನುವಾದ ವಿಭಾಗ, ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
  • ಡಾ. ಪಾಂಡುರಂಗ ಬಾಬು, ನುಡಿಯರಿಮೆಯ ಪ್ರೊಫೆಸರ್, ಕನ್ನಡ ಭಾಷಾಧ್ಯಯನ ವಿಭಾಗ, ಹಂಪಿ ಕನ್ನಡ ವಿಶ್ವವಿದ್ಯಾಯಯ, ಹಂಪಿ, ಕರ್ನಾಟಕ.
  • ಶ್ರೀಮತಿ ಪಿ. ಭಾರತೀ ದೇವಿ, ಕನ್ನಡ ಲೆಕ್ಚರರ್, ಸರಕಾರಿ ಮಹಿಳೆಯರ ಪದವಿ ಕಾಲೇಜು, ಮಂಡ್ಯ, ಕರ್ನಾಟಕ.
  • ಡಾ. ಶಿವರಾಮ್ ಪಡಿಕ್ಕಲ್, ಪ್ರೊಫೆಸರ್, ಸಿ.ಎ.ಎಲ್.ಟಿ.ಎಸ್, ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
  • ಡಾ. ಸಿ. ಎಸ್. ರಾಮಚಂದ್ರ, ನುಡಿಯರಿಮೆಯ ಪ್ರೊಫೆಸರ್, ನುಡಿಯರಿಮೆ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೇಶಕರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ.
  • ಡಾ. ಪಿ. ಮಹದೇವಯ್ಯ, ನುಡಿಯರಿಮೆಯ ರೀಡರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
  • ಡಾ. ವಿಕ್ರಮ್ ವಿಸಾಜಿ, ಕನ್ನಡ ಲೆಕ್ಚರರ್, ಪದವಿಪೂರ್ವ ಕೇಂದ್ರ, ಗುಲಬರ್ಗ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ.
  • ಶ್ರೀ. ಸಿ. ಪಿ. ನಾಗರಾಜ್, ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥರು, ಕೆ. ಎಂ. ದೊಡ್ಡಿ, ಮಂಡ್ಯ, ಕರ್ನಾಟಕ.
  • ಡಾ. ಮಹಾಬಲೇಶ್ವರ ರಾವ್, ಪ್ರಾಂಶುಪಾಲರು, ಟಿ‌ಎಂಎ ಪೈ ಶಿಕ್ಷಣ ಕಾಲೇಜು, ಕುಂಜೆಬೆಟ್ಟು, ಉಡುಪಿ, ಕರ್ನಾಟಕ.
  • ಡಾ. ಡಿ. ಜಗನ್ನಾಥ ರಾವ್, ನಿವೃತ್ತ ನಿರ್ದೇಶಕರು, ಡಿ‌ಎಸ್‌ಇ‌ಆರ್‌ಟಿ, ಬೆಂಗಳೂರು.
  • ಶ್ರೀ ವಿ. ಪಿ. ನಿರಂಜನ ಆರಾಧ್ಯ, ರೀಡರ್, ನ್ಯಾಶನಲ್ ಲಾ ಕಾಲೇಜ್, ಬೆಂಗಳೂರು.
  • ಶ್ರೀ. ಎಸ್. ಸಂಪಂಗಿ, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
  • ಶ್ರೀ. ಟಿ. ಎಂ. ಕುಮಾರ್, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
ಈ ಸಮ್ಮೇಳನವನ್ನು ನಡೆಸಲು ಬಂಡಾರ ಪ್ರಕಾಶನ, ಮಸ್ಕಿ ಮತ್ತು ಆಂಧ್ರಪ್ರದೇಶದ ಕುಪ್ಪಂ-ನ ದ್ರಾವಿಡ ವಿಶ್ವವಿದ್ಯಾಲಯವು ನೆರವು ನೀಡಿದೆಯೆಂದು ನಿಮ್ಮೊಡನೆ ಹಂಚಿಕೊಳ್ಳಲು ಬನವಾಸಿ ಬಳಗ ಸಂತಸ ಪಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ನಮ್ಮ ಅಂತರ್ಜಾಲ ತಾಣಕ್ಕೆ ಭೇಟಿಕೊಡಿ: http://www.banavasibalaga.org/

ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ
Related Posts with Thumbnails