"ನುಡಿಯರಿಮೆ ಮತ್ತು ಕಲಿಕೆ" ವಿಚಾರ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ !

ಯಾವುದೇ ಒಂದು ನಾಡಿನ ಏಳಿಗೆಯಲ್ಲಿ ದುಡಿಮೆಯ ಪಾತ್ರ ಬಲು ಹಿರಿದಾಗಿದ್ದು, ದುಡಿಮೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂಬುದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂಬುದೂ ಜಗತ್ತಿನಾದ್ಯಂತ ಸ್ಥಾಪಿತವಾಗಿರುವ ದಿಟವಾಗಿದೆ. ಆದ್ದರಿಂದ ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡವೇ ಸರಿಯಾದ ಸಾಧನವೆಂಬುದೂ, ಹಾಗೇ ನಮ್ಮ ಮಕ್ಕಳ ಕಲಿಕೆ ಅತ್ಯುತ್ತಮವಾಗಲು ಅದಕ್ಕೆ ಸಾಧನವಾದ ಕನ್ನಡನುಡಿಯ ಸರಿಯಾದ ಅಧ್ಯಯನವಾಗಬೇಕೆಂಬುದೂ ಮತ್ತು ಆ ಅಧ್ಯಯನದ ಫಲವು ಕನ್ನಡಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.
ಈ ನಿಟ್ಟಿನಲ್ಲಿ, ಫೆಬ್ರವರಿ 7, 2010ರ ಭಾನುವಾರ ದಂದು ಬನವಾಸಿ ಬಳಗ ಹಮ್ಮಿಕೊಂಡಿದ್ದ "ನುಡಿಯರಿಮೆ ಮತ್ತು ಕಲಿಕೆ" ಎಂಬ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಭಾಷಾ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿರುವ ನಾಡೋಜ ಡಾ. ಡಿ.ಎನ್. ಶಂಕರ್ ಭಟ್, ಡಾ. ಕೆ.ವಿ. ನಾರಾಯಣ ಮತ್ತು ಅಮೇರಿಕದ ನ್ಯೂಯಾರ್ಕದಲ್ಲಿರುವ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಎನ್. ಶ್ರೀಧರ್ ಹಾಗೂ ಹಿರಿಯ ಶಿಕ್ಷಣ ತಜ್ಞ ಡಾ.ಎನ್.ಎಸ್.ರಘುನಾಥ್ ಅವರು ಪಾಲ್ಗೊಂಡು ಉಪನ್ಯಾಸ ನೀಡಿದರು.

ಮೊದಲಿಗೆ "ನುಡಿಯ ಕಲಿಕೆಗೆ ಸೊಲ್ಲರಿಮೆಯ ನೆರವು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳು, ಅವುಗಳ ಒಳರಚನೆ, ಅವುಗಳನ್ನು ಜೋಡಿಸಿ ಬಗೆ ಬಗೆಯ ವಾಕ್ಯಗಳನ್ನು ಮಾಡುವ ಪರಿ, ಆ ವಾಕ್ಯಗಳನ್ನು ಬಳಸಿ ಬರಹವನ್ನು ಬರೆಯುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ಸೊಲ್ಲರಿಮೆಯ ಮೂಲ ಗುರಿಯಾಗಿದೆ. ಹಾಗಾಗಿ, ನಿಜಕ್ಕೂ ಕನ್ನಡದ ಸೊಲ್ಲರಿಮೆಯ ಸ್ವರೂಪ ಎಂತಹದು ಎಂಬುದರ ಸರಿಯಾದ ಅರಿವು, ಹೇಗೆ ಕನ್ನಡವನ್ನು ಓದಲು ಬರೆಯಲು ಕಲಿಯುವವರಿಗೆ ಮತ್ತು ಇಂಗ್ಲಿಷ್‍ನಂತಹ ಬೇರೆ ನುಡಿಯೊಂದನ್ನು ಕಲಿಯುವವರಿಗೆ ನೆರವನ್ನು ನೀಡಬಲ್ಲದು ಎಂಬುದರ ಬಗ್ಗೆ ವಿವರಿಸಿ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ಕೆಲಸಗಳಾಗಬೇಕು ಎಂದು ನುಡಿದರು.

ಎರಡನೆಯದಾಗಿ "ಕನ್ನಡ ಭಾಷಾ ವಿಜ್ಞಾನ ಮತ್ತು ಕನ್ನಡ ಸಮಾಜ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಕೆ.ವಿ. ನಾರಾಯಣ ಅವರು ಕನ್ನಡ ನುಡಿಯರಿಮೆಗೂ, ಕರ್ನಾಟಕದ ಸಮಾಜಕ್ಕೂ ಇರುವ ನಂಟನ್ನು ಕುರಿತು ತಿಳಿಸುವ ಬರವಣಿಗೆಗಳು ಬರಬೇಕಾದ ಅಗತ್ಯದ ಬಗ್ಗೆ, ಕರ್ನಾಟಕದಲ್ಲಿರುವ ಭಾಷೆಗಳ ಮತ್ತು ಭಾಷಿಕರ ನಡುವಣ ಸಂಬಂಧದ ಕುರಿತಂತೆ ನೀತಿಯೊಂದನ್ನು ರೂಪಿಸಬೇಕಾದ ಅಗತ್ಯದ ಬಗ್ಗೆ ಮತ್ತು ಕನ್ನಡ ನುಡಿಯ ಬೆಳವಣಿಗೆಯ ಬಗ್ಗೆ ರೂಪಿಸುವ ಯೋಜನೆಗಳನ್ನು ಹೇಗೆ ಮತ್ತು ಯಾವ ತಳಹದಿಯ ಮೇಲೆ ಕಟ್ಟಬೇಕು ಎಂಬುದರ ಬಗ್ಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೇ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳ ನಡುವೆ ಇರುವ ಮತ್ತು ಇರಬೇಕಾದ ನಂಟನ್ನು ಕುರಿತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸಿದರು.

ಮೂರನೆಯದಾಗಿ "ಭಾಷಾವಿಜ್ಞಾನ ಮತ್ತು ಶಿಕ್ಷಕರು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎನ್.ಎಸ್. ರಘುನಾಥ್ ಅವರು ಕರ್ನಾಟಕದಲ್ಲಿ ಇಂದಿಗೂ ಬಹುಪಾಲು ಶಿಕ್ಷಕರಲ್ಲಿ ಭಾಷಾ ವಿಜ್ಞಾನ ಎನ್ನುವ ವಿಷಯವೊಂದು ಇರುವುದರ ಮತ್ತು ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇರುವುದರ ಬಗ್ಗೆ ಅರಿವು ತುಂಬಾ ಕಡಿಮೆಯಿದ್ದು, ಭಾಷಾ ವಿಜ್ಞಾನದ ಬಗ್ಗೆ ಇರುವ ತಿರಸ್ಕಾರ ಭಾವನೆಯು, ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹೇಗೆ ತೊಡಕುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ವಾಕ್ಯ ರಚನೆ, ಫೊನೆಟಿಕ್ಸ್ ಮುಂತಾದ ಭಾಷಾ ವಿಜ್ಞಾನದ ಮುಖ್ಯ ಭಾಗಗಳ ಅರಿವು ಭಾಷಾ ಶಿಕ್ಷಕರಿಗೆ ಇದ್ದಲ್ಲಿ, ಮಕ್ಕಳ ಭಾಷಾ ಕಲಿಕೆಯ ಮಟ್ಟದಲ್ಲಿ ಆಗಬಹುದಾದ ಲಾಭದಾಯಕ ಪರಿಣಾಮಗಳ ಬಗ್ಗೆ ವಿವರಿಸಿದರು.

ಕೊನೆಯಲ್ಲಿ "ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನ ಏಕೆ ಬೇಕು? ಮತ್ತು ಅದನ್ನು ಬೆಳೆಸುವ ಬಗೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎಸ್.ಎನ್. ಶ್ರೀಧರ್ ಅವರು, ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಭಾಷಾವಿಜ್ಞಾನ ಇನ್ನೂ ಎಳವೆಯಲ್ಲಿರುವುದನ್ನು, ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನದ ಅವಶ್ಯಕತೆಯಿದೆಯೆನ್ನುವುದೇ ಇಲ್ಲಿಯವರೆಗೆ ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲದಂತಿರುವುದು ಇದಕ್ಕೆ ಕಾರಣವೆಂದು ವಿವರಿಸಿದರು. ಭಾಷಾವಿಜ್ಞಾನದಿಂದಲೇ ಕನ್ನಡದ ಸರಿಯಾದ ಸ್ವರೂಪದ ಅರಿವು ನಮಗಾಗಬಲ್ಲುದು ಮತ್ತು ಕನ್ನಡದಿಂದ ಅತಿ ಹೆಚ್ಚಿನ ಲಾಭವನ್ನು ನಾವು ಪಡೆಯಬಲ್ಲೆವು. ಆದ್ದರಿಂದ ಭಾಷಾವಿಜ್ಞಾನವನ್ನು ಒಂದು ಅತಿಮುಖ್ಯವಾದ ವಿಷಯವಾಗಿ ವಿಶ್ವವಿದ್ಯಾಲಯಗಳು ಪರಿಗಣಿಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಬೋಧನೆಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರತಿ ಉಪನ್ಯಾಸದ ನಂತರ ಆಯಾ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆಗಳಾದವು. ಭಾರತದ ಹಲವೆಡೆಯಿಂದ ಬಂದಿದ್ದ ಶಿಕ್ಷಣ ಮತ್ತು ಭಾಷಾ ವಿಜ್ಞಾನದ ವಿಷಯ ಪರಿಣಿತರು ಈ ಚರ್ಚೆಗಳಿಗೆ ಹೊಸ ಮೆರುಗು ತಂದರು.

ಇದೇ ಸಂದರ್ಭದಲ್ಲಿ "ಎಲ್ಲರ ಕನ್ನಡ" ಅನ್ನುವ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಯಿತು. ಇದು ಕನ್ನಡಿಗರೆಲ್ಲರೂ ಬಳಸುವ ಕನ್ನಡದ ಭಾಷಾವಿಜ್ಞಾನ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವ್ಯವಸ್ಥೆಯನ್ನು ಕುರಿತ ತಾಣವಾಗಿದೆ. ಕನ್ನಡ ಭಾಷಾವಿಜ್ಞಾನದ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದರಲ್ಲಿ ನಾಡೋಜ ಡಾ. ಡಿ. ಎನ್. ಶಂಕರಭಟ್ಟರ ಕನ್ನಡದ ಹೊತ್ತಗೆಗಳನ್ನೆಲ್ಲ ಉಚಿತವಾಗಿ ಪಿಡಿಎಫ್ ರೂಪದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ನುಡಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಾವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಕೂಡಿ ಕೆಲಸ ಮಾಡಲು ಮುಂದಾಗಬೇಕಾದ ಅವಶ್ಯಕತೆಯನ್ನು ಇಡೀ ಸಮ್ಮೇಳನ ಅರ್ಥಪೂರ್ಣವಾಗಿ ಒಕ್ಕೊರಲಿನ ಅಭಿಪ್ರಾಯದ ಮೂಲ ಹೊರಹೊಮ್ಮಿಸಿತು.

7 ಅನಿಸಿಕೆಗಳು:

Me, Myself & I ಅಂತಾರೆ...

ನಿಮ್ಮೆಲ್ಲಾ ಕಾರ್ಯಗಳಿಗೆ ಸಾಕಷ್ಟು ಯಶಸ್ಸು ದೊರಕಲಿ
<< ಇದರಲ್ಲಿ ನಾಡೋಜ ಡಾ. ಡಿ. ಎನ್. ಶಂಕರಭಟ್ಟರ ಕನ್ನಡದ ಹೊತ್ತಗೆಗಳನ್ನೆಲ್ಲ ಉಚಿತವಾಗಿ ಪಿಡಿಎಫ್ ರೂಪದಲ್ಲಿ ಕೊಡಲಾಗಿದೆ. >>
ಈ ವಿಷಯವನ್ನ ತಿಳಿದು ತುಂಬಾ ಸಂತೋಷವಾಗುತ್ತಿದೆ.

ಬರತ್ ಕುಮಾರ್ ಅಂತಾರೆ...

’ನುಡಿಯರಿಮೆ ಮತ್ತು ಕಲಿಕೆ’ಯ ಬಗ್ಗೆ ನಡೆದ ಸಮ್ಮೇಳನವನ್ನು ತುಂಬ ಅಚ್ಚುಕಟ್ಟಾಗಿ ಏರ್ಪಡಿಸಲಾಗಿತ್ತು. ಬನವಾಸಿ ಬಳಗಕ್ಕೆ ಸವಿಯೊದಗು!!

ನುಡಿಯರಿಗರನ್ನು ಮತ್ತು ಕಲಿಕೆಯರಿಗರನ್ನು ಒಟ್ಟುಗೂಡಿಸಿ ಮೇಲ್ಮಟ್ಟದ ಮಾತ್ಕೂಟವನ್ನು ಏರ್ಪಡಿಸಿ ಮುಂದಿನ ಹೆಜ್ಜೆಗಳನ್ನು ತೆಗೆದುಕೊಳ್ಳುವುದಕ್ಕೆ ಈ ಸಮ್ಮೇಳನ ದಾರಿಮಾಡಿಕೊಟ್ಟಿದೆ ಎಂದು ಹೇಳಬಹುದು.

ಸಮ್ಮೇಳನದ ಬಗ್ಗೆ ನನ್ನ ಕೆಲವು ಗಮನಿಕೆಗಳು/ಅನಿಸಿಕೆಗಳು:-
೧. ಸಬಾಂಗಣಕ್ಕೆ ಬೇಕಾದ ಅಚ್ಚುಕಟ್ಟಾದ ಮಾಡರ್ನ್ ಏರ್ಪಾಡುಗಳು ಅಲ್ಲಿ ಇದ್ದವು.
೨. ’ಹಚ್ಚೇವು ಕನ್ನಡದ ದೀಪ’ದಿಂದ ಕಾರ್ಯಕ್ರಮಗಳನ್ನು ಸುರು ಮಾಡಿದ್ದು ಚೆನ್ನಾಗಿತ್ತು.
೨. ಪ್ರತಿ ಉಪನ್ಯಾಸವಾದ ನಂತರ ಸಬಿಕರಿಗೆ ಉಪನ್ಯಾಸದ ಬಗ್ಗೆ feedback form ಗಳನ್ನು ಕೊಟ್ಟಿದ್ದರೆ ಇನ್ನು ಚೆನ್ನಾಗಿರುತ್ತಿತ್ತು.
೩. ಆ ಸಬಾಂಗಣದಲ್ಲಿ ಪ್ರೊಜೆಕ್ಟರ್ ಇದ್ದುದರಿಂದ ಉಪನ್ಯಾಸಗಳ PPT ಪ್ರೆಸೆಂಟೇಶನ್ ಏರ್ಪಡಿಸಬಹುದಿತ್ತು. ಇದರಿಂದ ಉಪನ್ಯಾಸಗಳು ಇನ್ನು ಹೆಚ್ಚು ಪರಿಣಾಮಿಕಾರಿಯಾಗಿ ಸಬಿಕರನ್ನು ತಲುಪಿತ್ತಿತ್ತು ಅಂತ ಅನ್ನಿಸಿತು.
೪. ಕನ್ನಡ ತಾಯ್ನುಡಿಯಾರುವ ಮಕ್ಕಳಲ್ಲಿ ಕಲಿಕೆಯಲ್ಲಿರುವ ತೊಡರು/ಸಮಸ್ಯೆಗಳೇನು ಎಂಬುದು ಪರಿಣಾಮಕಾರಿಯಾಗಿರು ಚರ್ಚೆಯಾಗಲಿಲ್ಲ ಅಂತ ಅನ್ನಿಸಿತು. ಕನ್ನಡ ತಾಯ್ನುಡಿಯಲ್ಲದ ಮಕ್ಕಳ ಕಲಿಕೆಯಲ್ಲಿರುವ ಸಮಸ್ಯೆಗಳ ಕಡೆ ಹೆಚ್ಚು ಗಮನವನ್ನ ಹರಿಸಲಾಯಿತು.

ಒಟ್ಟಿನಲ್ಲಿ ಕನ್ನಡದ ಮಟ್ಟದಲ್ಲಿ ಇಂತ ಒಂದು ಸಮ್ಮೇಳನ ಇದೇ ಮೊದಲು ಅನ್ಸುತ್ತೆ. ಇದರಿಂದ ಕನ್ನಡ/ಕನ್ನಡಿಗ/ಕರ್ನಾಟಕದ/ಕ್ಕೆ ಏಳ್ಗೆಯಾಗಲಿ/ಒಳ್ಳೆಯದಾಗಲಿ ಎಂದು ಬಯಸುವ

ಹದುಳವಿರಲಿ,
ಬರತ್
http://ybhava.blogspot.com

Mahesh ಅಂತಾರೆ...

ನೆಗಳ್ತೆಯ ವರದಿ ಕಂಡು ನಲಿವಾಯ್ತು.

ನಂನಿ.

Anonymous ಅಂತಾರೆ...

ಬನವಾಸಿ ಬಳಗ, ದ್ರಾವಿಡ ವಿಶ್ವವಿದ್ಯಾನಿಲಯ ಹಾಗು ಬಂಡಾರ ಪ್ರಕಾಶನದವರ ಒಗ್ಗಟ್ಟಿನಲ್ಲಿ ನಡೆದ ಕಾರ್ಯಕ್ರಮ ನನಗೆ ಬಹಳವೇ ಹಿಡಿಸಿತು. ಅದಕ್ಕೆ ಕಾರಣ, ಆ ಕಾರ್ಯಕ್ರಮ ನಡೆದ ರೀತಿ. ಅಲ್ಲಿ ನೆರೆದಿದ್ದ ವಾಲುಟೀರ್ಸ್ ಬಗ್ಗೆ ತುಂಬ ಗೌರವವುಂಟಾಯಿತು.

ಶಂಕರ ಭಟ್ಟರ ಪುಸ್ತಕಗಳನ್ನು ಓದಿ, ಗೆಳೆಯರೊಡನೆ ಚರ್ಚೆ, ಜಗಳ, ಹೊಸಪದಗಳ ಆಟ, ಎಲ್ಲವನ್ನೂ ಮಾಡಿದ್ದ ನಮಗೆ ಶಂಕರ ಭಟ್ಟರು ಯಾರು? ಎಲ್ಲಿಯವರು ? ಹೇಗಿದ್ದಾರೆ ಎಂಬ ವಿಷಯಗಳು ತಿಳಿದಿರಲಿಲ್ಲ. ಅವರನ್ನು ಮಾತನಾಡಿಸಿ ತುಂಬಾ ಖುಷಿಯಾಯಿತು. ಇದಕ್ಕಾಗಿ ಬನವಾಸಿ ಬಳಗದವರಿಗೆ ನನ್ನಿ.

ಕಾರ್ಯಕ್ರಮದ ಬಗ್ಗೆ ಒಂದೇ ಒಂದು ಫೀಡ್ಬಾಕು. ಶಂಕರ ಭಟ್ಟರು, ಅವರೇ ಹೇಳುವಂತೆ ಸ್ವಭಾವತಃ ಭಾಷಣಕಾರರಲ್ಲ. ಹೇಗಿದ್ದರೂ, ಉಪನ್ಯಾಸದ ಪಠ್ಯ ಮುಂಚೆಯೇ ಲಭ್ಯವಿದ್ದ ಕಾರಣ, ಬಳಗದವರು ಪ್ರೊಜೆಕ್ಟರ್ ಬಳಸಿ ಪಠ್ಯಕ್ಕೆ ಸರಿಹೊಂದುವಂತಹ ಪ್ರೆಸೆಂಟೇಶನ್ ಹಾಕಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಂತ ನನ್ನ ಅನಿಸಿಕೆ. (ಬರತ್ ಕುಮಾರ್ ಅವರೂ ಇದೇ ಮಾತನ್ನು ಹೇಳಿದ್ದಾರೆ).

ಒಂದು ಒಳ್ಳೆಯ ಚರ್ಚೆಯಲ್ಲಿ ಭಾಗವಹಿಸಿದ ಖುಷಿ ನನ್ನಲ್ಲಿ ಇದೆ. ಅದಕ್ಕಾಗಿ ಮತ್ತೊಮ್ಮೆ ಹೆನ್ನನ್ನಿ.

ವಿ.ರಾ.ಹೆ. ಅಂತಾರೆ...

ಸಮ್ಮೇಳನ ಬಹಳ ಅಚ್ಚುಕಟ್ಟಾಗಿ ಕಾರ್ಪೋರೇಟ್ ಮಟ್ಟದಂತೆ ಆಗಿದ್ದು ಚೆನ್ನಾಗಿತ್ತು. ಅಲ್ಲಿ ನಡೆದ ಚರ್ಚೆಗಳು ಬಹಳ ಉಪಯುಕ್ತವಾಗಿದ್ದವು. ನುಡಿಯರಿಮೆ ಮತ್ತು ಕಲಿಕೆ ವಿಷಯದಲ್ಲಿ ವಿವಿಧ ವಿಶ್ವವಿದ್ಯಾಲಯ, ಸರ್ಕಾರಿ ಇಲಾಖೆಗಳ ಆಯಕಟ್ಟಿನ ವ್ಯಕ್ತಿಗಳನ್ನು ಕೂಡಿಸಿ ನೆಡೆಸಿದ ಈ ಬಗೆಯ ಪ್ರಯತ್ನಕ್ಕೆ ಬನವಾಸಿ ಬಳಗಕ್ಕೆ ಧನ್ಯವಾದಗಳು.

Anonymous ಅಂತಾರೆ...

Kannadigarannu sariyaad dikkinedege karedoyyalu intah karyakramagalu innu hechchige aagali.
Banavasi balagakke abhinandanegalu.

E tingala (feb,2010) Mayur maasa patrikeyalli D N shankara bhat avara sandarshanavide. tappade odi

Vandanegalondige,
Prashant JS

Anonymous ಅಂತಾರೆ...

ಹೌದು . ಈ ನಿಟ್ಟಿನಲ್ಲಿ ಬಹುಶ: ನಮ್ಮ ಬಳಗದ ಪ್ರಯತ್ನವೇ ಮೊದಲನೆಯನದು ಎನ್ನಿಸಿತು. ಅಲ್ಲದೇ ಭಾಷ ವಿಜ್ಞಾನದ ಬಗ್ಗೆ ನನಗೆ ಎಷ್ಟೋ ವಿಷಯಗಳು ಗೊತ್ತೇ ಇರಲಿಲ್ಲ . ಈ ಹೊಸ ಆಯಾಮಗಳನ್ನು ತೆರೆದಿಟ್ಟುದಕ್ಕಾಗಿ ವಂದನೆಗಳು. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿತು
ಕರುಣಾ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails