ಹಿಸ್ಟರಿಯ ಮಿಸ್ಟರಿಯೂ ಕನ್ನಡದಲ್ಲಿ ಸಿಗಲಿ!

ಇತ್ತೀಚಿಗೆ ಹಿಸ್ಟರಿ ಚಾನಲ್‍ನ ಫೇಸ್‍ಬುಕ್ಕಿನಲ್ಲೊಂದು ಶುಭಾಶಯ ಸಂದೇಶ ಹಾಕಲಾಗಿತ್ತು. ಈ ಸಂದೇಶವನ್ನು ತಮಿಳು, ತೆಲುಗು, ಬೆಂಗಾಲಿ, ಮರಾಠಿ ಹಾಗೂ ಹಿಂದೀಯಂತಹ ಕೆಲವು ಭಾರತೀಯ ಭಾಷೆಗಳಲ್ಲಿ ಹಾಕಿದ್ದರು. ಈ ಸಂದರ್ಭದಲ್ಲಿ ಬರೆಯಲಾದ ಒಂದು ಕಮೆಂಟ್ "ಕನ್ನಡದಲ್ಲಿ ಹಿಸ್ಟರಿ ಚಾನೆಲ್ ಯಾವಾಗ ಪ್ರಾರಂಭವಾಗಲಿದೆ? ಆದಷ್ಟು ಬೇಗನೆ ಶುರು ಮಾಡಿರಿ" ಎನ್ನುವ ಅರ್ಥದಲ್ಲಿತ್ತು. ಅದಕ್ಕೆ ಚಾನಲ್ಲಿನವರು ಕೊಟ್ಟ ಉತ್ತರ ದಂಗುಬಡಿಸುವಂತಿತ್ತು! ಅದ್ಯಾರೋ ಪುಣ್ಯಾತ್ಮರು "ಕನ್ನಡನಾಡಿನಲ್ಲಿ ಡಬ್ಬಿಂಗ್ ನಿಶೇಧವಿದೆ, ಹಾಗಾಗಿ ಇಲ್ಲಿ ಹಿಸ್ಟರಿ ಚಾನಲ್ ಶುರುಮಾಡಲಾಗುವುದಿಲ್ಲ" ಎನ್ನುವ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎನ್ನಿಸುತ್ತೆ! ಹಾಗಾಗಿ ಅದೇ ಉತ್ತರವನ್ನು ಚಾನಲ್ಲಿನವರು ಫೇಸ್‍ಬುಕ್ಕಿನಲ್ಲೂ ಬರೆದುಬಿಟ್ಟರು.

ಕಾನೂನು ಮತ್ತು ಕಟ್ಟುಪಾಡು!

ಕನ್ನಡ ಚಿತ್ರರಂಗದಲ್ಲಿದ್ದ ಡಬ್ಬಿಂಗ್ ನಿಶೇಧವೆನ್ನುವ ಪಿಡುಗು ಮುಂದೆ ದೂರದರ್ಶನಕ್ಕೂ ಕಾಲಿಟ್ಟದ್ದು ಇತಿಹಾಸ. ಹಿಂದೆ ಹಿರಿಯರು ಯಾವುದೋ ಸಂದರ್ಭದಲ್ಲಿ ಕೈಗೊಂಡಿದ್ದ ನಿಲುವನ್ನೇ ಮುಂದು ಮಾಡಿಕೊಂಡು, ಇಂದಿಗೂ ಚಿತ್ರೋದ್ಯಮದ ಕೆಲವು ಪಟ್ಟಭದ್ರರು "ಡಬ್ಬಿಂಗ್ ಬೇಡ" ಎಂದು "ಕನ್ನಡದಲ್ಲೇ ಮನರಂಜನೆ" ಪಡೆದುಕೊಳ್ಳುವ ತಮ್ಮ ಸಹಜವಾದ ಹಕ್ಕನ್ನು ಕನ್ನಡಿಗರಿಗೆ ನಿರಾಕರಿಸುತ್ತಾ ಬಂದಿದ್ದಾರೆ.
ಈ ಬಗ್ಗೆ ಇತ್ತೀಚಿನ ದಿನಗಳಲ್ಲಿ ಒಂದಷ್ಟು ಜನ ಜಾಗೃತಿಯಾಗುತ್ತಿರುವುದನ್ನೂ, ಹಲವರು ಡಬ್ಬಿಂಗ್ ಆದ ಚಿತ್ರಗಳ ನಿಶೇಧ ತೆರವು ಮಾಡಿಸಲು ಕೋರ್ಟಿನ ಮೊರೆಹೋಗಲು ಸಿದ್ಧತೆ ನಡೆಸುತ್ತಿರುವ ಸುದ್ದಿ ಕೇಳಿಬರುತ್ತಿರುವುದರಿಂದಲೂ ಬಹುಷಃ ವಿಚಲಿತರಾದಂತೆ ಕಾಣುತ್ತಿದೆ. ಹಾಗಾಗೇ.. ಹಿಂದೆಲ್ಲಾ ಕಾನೂನು ಎಂದು ಕೇಳಿಬರುತ್ತಿದ್ದ ಆಕ್ಷೇಪಗಳು ಇದೀಗ ಕಟ್ಟುಪಾಡು ಎಂದು ಕೇಳಿಬರುತ್ತಿದೆ. ಕಾನೂನು ಮಾಡುವುದು ಜನರಿಂದ ಆಯ್ಕೆಯಾದ ಶಾಸನ ಸಭೆ... ಅದೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಮಾತ್ರಾ! ಅಂತಹ ಯಾವ ಕಾನೂನೂ ಇಂದು ಡಬ್ಬಿಂಗಿನ ವಿರುದ್ಧವಾಗಿ ಇಲ್ಲ!! ಇನ್ನು ಸಮಾಜ ಮಾಡಿಕೊಂಡಿರುವ ಕಟ್ಟುಪಾಡು ಎನ್ನುವುದಕ್ಕೆ ಅರ್ಥವೇನು? ಯಾರು ಕನ್ನಡ ಸಮಾಜವೆಂದರೆ? ಸಮಾಜದ ಕಟ್ಟುಪಾಡು ಯಾವ ರೀತಿಯಲ್ಲಿರುತ್ತದೆ? ಇಂದಿಗೂ ಕನ್ನಡ ಸಮಾಜ ಡಬ್ಬಿಂಗ್ ನಿಶೇಧದ ಅಂತಹ ಕಟ್ಟುಪಾಡನ್ನು ಒಪ್ಪಿಕೊಂಡೇ ಇದೆಯೋ ಇಲ್ಲವೋ ತಿಳಿಯುವುದು ಹೇಗೆ?...

ಕಟ್ಟುಪಾಡಿನ ಪರೀಕ್ಷೆ ಆಗಿಯೇ ಬಿಡಲಿ!

ಇಂತಹ ಪ್ರಶ್ನೆಗಳಿಗೆ ಗೊಂದಲವಿಲ್ಲದ ಉತ್ತರ ಸಿಗುವುದು ಕಷ್ಟ. ಹಾಗಾಗಿ ಕನ್ನಡ ಸಮಾಜ ಡಬ್ಬಿಂಗ್ ಕಟ್ಟುಪಾಡನ್ನು ಒಪ್ಪಿದ್ದರೆ ಅಂತಹ ಚಿತ್ರಗಳನ್ನು ನೋಡದೇ ಇರುವ ಮೂಲಕ, ಗಲ್ಲಾಪೆಟ್ಟಿಗೆಯಲ್ಲಿ ಸೋಲಿಸುವ ಮೂಲಕ ಉತ್ತರ ನೀಡುತ್ತಾರೆ. ಇಂತಹ ಅವಕಾಶವನ್ನೇ ನಿರಾಕರಿಸುವಂತಹ ವ್ಯವಸ್ಥೆ ನಮ್ಮಲ್ಲಿರುವುದು ಸರಿಯಲ್ಲ. ಹಿಸ್ಟರಿ ಚಾನೆಲ್ ಕನ್ನಡದಲ್ಲಿ ಬಾರದೆ ಇರುವುದರಿಂದಾಗಿ ಅದೆಷ್ಟೋ ಆಸಕ್ತರಿಗೆ ಹಕ್ಕಿನ ನಿರಾಕರಣೆಯಾಗುತ್ತಿರುವಂತೆಯೇ, ಕನ್ನಡ ಸಿನಿಮಾರಂಗದಲ್ಲಿ ಡಬ್ಬಿಂಗ್ ಇಲ್ಲದಿರುವುದರಿಂದ ತಾಯ್ನುಡಿಯಲ್ಲಿನ ನಮ್ಮ ಮನರಂಜನೆಯನ್ನು ನಿರಾಕರಿಸಲಾಗುತ್ತಿದೆ ಎನ್ನುವುದೂ ಸತ್ಯವಾಗಿದೆ. ಇಂತಹ ನಿರಾಕರಣೆ ನಡೆಯುತ್ತಿರುವುದು ದಬ್ಬಾಳಿಕೆಯಿಂದಲೇ ಎನ್ನುವುದನ್ನೂ ನಾವು ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಅದಕ್ಕೆ ತೀರಾ ಇತ್ತೀಚಿನ ಉದಾಹರಣೆಯೆಂದರೆ "ಝಾನ್ಸಿ ರಾಣಿ ಲಕ್ಷ್ಮಿಬಾಯಿ" ಸೀರಿಯಲ್ ವಿಷಯವಾಗಿ ಜ಼ೀ ಕನ್ನಡ ವಾಹಿಯ ಕಚೇರಿಯ ಮೇಲೆ ನಡೆದ ದಾಳಿ. ಚಿತ್ರರಂಗದ ಗಣ್ಯರೆನ್ನಿಸಿಕೊಂಡ ಕೆಲವರು ಬೀದಿಗಿಳಿಯುವ, ಯಾವ ಹಂತಕ್ಕಾದರೂ ಹೋರಾಟ ಮಾಡುವಂತಹ ವೀರಾವೇಶದ ಬೆದರಿಕೆಯ ಮಾತುಗಳು!! ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹೀಗೆ ನಾಗರೀಕರ ಹಕ್ಕುಗಳ ದಮನ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದು ಎಷ್ಟು ಸತ್ಯವೋ ಮುಂದಿನ ದಿನಗಳಲ್ಲಿ ಡಬ್ಬಿಂಗ್ ಬರುವುದನ್ನು ತಡೆಯುವುದೂ ಹೆಚ್ಚುದಿನ ನಡೆಯುವುದಿಲ್ಲ ಎನ್ನುವುದೂ ಅಷ್ಟೇ ಸತ್ಯಾ! ಕನ್ನಡ ಸಮಾಜಕ್ಕೆ ಡಬ್ಬಿಂಗ್ ಬೇಕೋ ಬೇಡವೋ ಎನ್ನುವುದು ಗಲ್ಲಾಪೆಟ್ಟಿಗೆಗಳು ತೀರ್ಮಾನಿಸಲಿ! ಇದು ಪ್ರಜಾಸತ್ತೆಯಲ್ಲಿ ನಂಬಿಕೆಯಿರುವವರು ಒಪ್ಪುವ ಮಾತಲ್ಲವಾ ಗುರೂ?

ಕೊನೆಹನಿ: ಹಿಸ್ಟರಿ ಚಾನಲ್ಲಿನವರಿಗೆ ಕನ್ನಡದಲ್ಲಿ ವಾಹಿನಿ ಆರಂಭಿಸಲು ರಾಶಿ ರಾಶಿ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ "ಕನ್ನಡದಲ್ಲೂ ವಾಹಿನಿ ಆರಂಭಿಸುವುದನ್ನು ಪರಿಗಣಿಸುತ್ತೇವೆ ಮತ್ತು ಬೆಳವಣಿಗೆಗಳನ್ನು ಹಂಚಿಕೊಳ್ಳುತ್ತೇವೆ" ಎಂಬ ಉತ್ತರ ಅವರ ಗೋಡೆಯಲ್ಲಿ ಹಂಚಿಕೊಂಡಿದ್ದಾರೆ!

4 ಅನಿಸಿಕೆಗಳು:

Suhas Koushik ಅಂತಾರೆ...

super...

Anonymous ಅಂತಾರೆ...

Super.

G.Venkatesh ಅಂತಾರೆ...

ಕನ್ನಡದಲ್ಲಿ ಆದಷ್ಟೂ ಬೇಗ ಹಿಸ್ಟರಿ ಛಾನಲ್ ಬರಲಿ, ಅದೇ ತರಹ ಡಿಸ್ಕವರಿ ಛಾನಲ್, ನ್ಯಾಷನಲ್ ಜಿಯಾಗ್ರಫ್ಹಿ, ಡಿಸ್ನಿ, ಕಾರ್ಟೂನ್ ಛಾನಲ್ ಕೂಡ ಬರಲಿ. ಇದು ಈಗಾಗಲೇ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿದೆ. ನಾವು ಈ ವಾಹಿನಿಯವರಿಗೂ ನಮ್ಮ ಭಾಷೆಯಲ್ಲಿ ಬರುವಂತೆ ಒತ್ತಾಯಿಸೋಣ. ಆ ಎಲ್ಲಾ ವಾಹಿನಿಯವರಿಗೂ ಮಿಂಚಂಚೆ ಕಳುಹಿಸಿ. ಇದು ದೊಡ್ಡ ಆಂದೋಲನ ವಾಗಲಿ. by g.venkatesh
blog: 24x7kannada.blogspot.com
e-mail:guruvenk907@gmail.com

Mallesh ಅಂತಾರೆ...

ಕನ್ನಡದಲ್ಲಿ ಆದಷ್ಟೂ ಬೇಗ ಹಿಸ್ಟರಿ ಛಾನಲ್ ಬರಲಿ, ಅದೇ ತರಹ ಡಿಸ್ಕವರಿ ಛಾನಲ್, ನ್ಯಾಷನಲ್ ಜಿಯಾಗ್ರಫ್ಹಿ, ಡಿಸ್ನಿ, ಕಾರ್ಟೂನ್ ಛಾನಲ್ ಕೂಡ ಬರಲಿ. ಇದು ಈಗಾಗಲೇ ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬರುತ್ತಿದೆ. ನಾವು ಈ ವಾಹಿನಿಯವರಿಗೂ ನಮ್ಮ ಭಾಷೆಯಲ್ಲಿ ಬರುವಂತೆ ಒತ್ತಾಯಿಸೋಣ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails