ಒಕ್ಕೂಟಕ್ಕೆ ಧಕ್ಕೆ ತರಲು ಇದು ಇನ್ನೊಂದು ನೆಪವೇ?!

ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ(NCTC)ವನ್ನು ಆರಂಭಿಸಲು ಕೇಂದ್ರಸರ್ಕಾರ ರೂಪಿಸಿರುವ ನೀತಿಗಳ ಬಗ್ಗೆ ಅನೇಕ ರಾಜ್ಯಗಳಿಂದ ವಿರೋಧ ವ್ಯಕ್ತವಾಗಿದೆ ಎನ್ನುವ ಸುದ್ದಿಯು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೇಂದ್ರಸರ್ಕಾರದ ಈ ಕ್ರಮವನ್ನು ಅನೇಕ ಮುಖ್ಯಮಂತ್ರಿಗಳು ವಿರೋಧಿಸಿದ್ದಾರೆ ಎನ್ನುವುದು ತುಸು ಸಮಾಧಾನ ತರುವ ವಿಷಯವಾಗಿದೆ.  ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿರುವ ಈ ವಿರೋಧಕ್ಕೆ ರಾಷ್ಟ್ರೀಯಪಕ್ಷವಾದ ಬಿಜೆಪಿ ಕೂಡಾ "ಇದು ಒಕ್ಕೂಟ ವ್ಯವಸ್ಥೆಗೆ ಮಾರಕ" ಎಂದು ದನಿಗೂಡಿಸಿರುವುದು ಉತ್ತಮ ಬೆಳವಣಿಗೆಯಾಗಿದೆ.

ಭಯೋತ್ಪಾದನಾ ಪಿಡುಗು ಮತ್ತು ಅದರ ವಿರುದ್ಧದ ಹೋರಾಟ!

ಭಯೋತ್ಪಾದನೆಯು ಇಡೀ ಭಾರತದ ತುಂಬಾ ಬೇರೆ ಬೇರೆ ಪ್ರಮಾಣದಲ್ಲಿ ತನ್ನ ಕರಾಳಹಸ್ತ ಚಾಚಿದೆ. ಈ ಭಯೋತ್ಪಾದನೆಯ ಭೂತಕ್ಕೆ ಬಲಿಯಾದ ಅಮಾಯಕರು ಎಲ್ಲಾ ರಾಜ್ಯಗಳಲ್ಲೂ ಇರುವಂತೆಯೇ ಇದರ ಜಾಲವೂ ಎಲ್ಲೆಡೆ ಹರಡಿದೆಯೆನ್ನುವ ಮಾತಿನಲ್ಲಿ ದಿಟವಿಲ್ಲದೆ ಇಲ್ಲ. ಕರ್ನಾಟಕದಂತಹ ರಾಜ್ಯಗಳು ಅನೇಕ ರಾಷ್ಟ್ರೀಯ/ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳಿಗೆ ಅಡುಗುತಾಣವೂ ಆಗಿರುವುದನ್ನೂ ಕೂಡಾ ಹಲವು ಬಾರಿ ಕಂಡಿದ್ದೇವೆ. ಇದಕ್ಕೆ ಸಾಕ್ಷಿಯೆನ್ನುವಂತೆ ಕೆಲವು ಹೊರರಾಜ್ಯಗಳ ಭಯೋತ್ಪಾದಕ ಸಂಘಟನಾ ಮುಖ್ಯಸ್ಥರು ಇಲ್ಲಿ ಬಂಧಿತರೂ ಆಗಿದ್ದಾರೆ. ಭಾರತದ ಮುಂದಿರುವ ಭದ್ರತಾ ಸವಾಲುಗಳಲ್ಲಿ ಪ್ರಮುಖವಾದದ್ದು ಈ ಭಯೋತ್ಪಾದನೆಯೇ ಆಗಿದೆ. ಭಾರತದ ಗುಪ್ತಚರ ಹಾಗೂ ತನಿಖಾದಳಗಳು ಬಹುವಾಗಿ ಶ್ರಮಿಸುತ್ತಾ ಈ ಪಿಡುಗನ್ನು ಇಲ್ಲವಾಗಿಸುತ್ತಿದ್ದಾರೆ ಎನ್ನುವುದೂ ದಿಟವೇ ಆಗಿದೆ. ಯಾವುದೇ ನಾಡಿಗೇ ಆಗಲಿ ಟೆರರಿಸ್ಮ್ ಒಂದು ಬಹುದೊಡ್ಡ ಪಿಡುಗಾಗಿದ್ದು ಅದನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇಂತಹ ಹೋರಾಟದಲ್ಲಿ ಪ್ರತಿಯೊಬ್ಬರೂ ನಮ್ಮ ಪಾತ್ರ ನಿರ್ವಹಿಸಬೇಕು ಹಾಗೂ ಪ್ರತಿಯೊಂದು ರಾಜ್ಯಗಳ ಆಡಳಿತವೂ ಕಠಿಣತೆಯಿಂದ ಭಯೋತ್ಪಾದನೆಯನ್ನು ಇಲ್ಲವಾಗಿಸಲು ಮುಂದಾಗಬೇಕು. ಹಾಗಾಗೇ ಕೇಂದ್ರಸರ್ಕಾರ ಹೊತ್ತಿರುವ ಈ ಹೊಣೆಯನ್ನು ನಿಭಾಯಿಸುವಲ್ಲಿ ರಾಜ್ಯಗಳು ಸಂಪೂರ್ಣವಾಗಿ ಕೈಜೋಡಿಸಬೇಕು. ಕೇಂದ್ರಸರ್ಕಾರ ಭಯೋತ್ಪಾದನೆ ತಡೆಗೆ ಕೈಗೊಳ್ಳುತ್ತಿರುವ ಅನೇಕ ಕ್ರಮಗಳಲ್ಲಿ ಇತ್ತೀಚಿನದು "ನ್ಯಾಶನಲ್ ಕೌಂಟರ್ ಟೆರರಿಸಂ ಸೆಂಟರ್" ಕೂಡಾ ಒಂದು. ಆದರೆ ಭದ್ರತೆಯ ಕಾರಣದಿಂದಾಗಿ ರಾಜ್ಯಗಳ ಅಧಿಕಾರ ಮೊಟಕು ಮಾಡುವಂತಹ ಕ್ರಮಗಳನ್ನು ಇದು ಹೊಂದಿದೆ ಎನ್ನುವುದು ಮಾತ್ರಾ ಒಪ್ಪಲಾಗದಂತಹದ್ದು!

ಇದರಲ್ಲಿ ಬೇಡದ್ದೇನಿದೆ?

ಮೂಲತಃ ಇದಕ್ಕೆ ವಿರೋಧವಿರುವುದು ರಾಜ್ಯಗಳನ್ನು ಒಂದು ಮಾತೂ ಕೇಳದೆ "ಜಾರಿ ಆದೇಶ" ಹೊರಡಿಸಿದ ಕೇಂದ್ರದ ಆಕ್ರಮಣಶೀಲ ನಡೆಯ ಬಗ್ಗೆ ಮತ್ತು ಸಂಸತ್ತಿಗೆ ಉತ್ತರದಾಯಿಯಲ್ಲದ ಕೇಂದ್ರೀಯ ತನಿಖಾ ಸಂಸ್ಥೆಯೊಂದಕ್ಕೆ ಹಿಂದೆಂದೂ ಇಲ್ಲದ ಅಧಿಕಾರವನ್ನು ನೀಡುತ್ತಿರುವ ಬಗ್ಗೆಯಾಗಿದೆ. ಅಂದರೆ ಇದುವರೆಗೆ ರಾಷ್ಟ್ರೀಯ ತನಿಖಾದಳಕ್ಕೆ ತನಿಖೆ ಮಾಡುವ ಅಧಿಕಾರವಿತ್ತೇ ಹೊರತು ಬಂಧಿಸುವ ಅಧಿಕಾರವಲ್ಲ. ಈ ಅಧಿಕಾರವನ್ನು ನೀಡುವ ಮೂಲಕ ಕೇಂದ್ರವು ತನ್ನ ರಾಜಕೀಯ ಎದುರಾಳಿಗಳನ್ನು ಕಿರುಕುಳಕ್ಕೀಡು ಮಾಡಬಹುದು ಎನ್ನುವ ಆತಂಕವು ಮೊದಲ ಆಕ್ಷೇಪಕ್ಕೆ ಕಾರಣವಾಗಿದೆ. ರಾಜ್ಯಗಳ ಹೊಣೆಗಾರಿಕೆಯಾಗಿರುವ ಕಾನೂನು ಸುವ್ಯವಸ್ಥೆಯಲ್ಲಿ, ಕೇಂದ್ರವು ಯುದ್ಧದಂತಹ ತೀವ್ರ ಬಿಕ್ಕಟ್ಟಿನ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತಲೆಹಾಕಬಹುದೇ ಹೊರತು ರಾಜ್ಯಗಳ ಅಸಮರ್ಥತೆಯ ನೆಪ ಹೇಳಿ ಅಧಿಕಾರ ಚಲಾಯಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಇನ್ನು ಈ ಆದೇಶವನ್ನು ಹೊರಡಿಸುವ ಮುನ್ನ ರಾಜ್ಯಗಳ ಅಭಿಪ್ರಾಯ ಕೇಳುವ, ರಾಜ್ಯಗಳಿಗೆ ಮುಂತಿಳಿವು ನೀಡುವ ಯಾವ ಸೌಜನ್ಯವನ್ನೂ ತೋರಿಸದೆ ಒಮ್ಮಿಂದೊಮ್ಮೆಗೇ, ನೇರವಾಗಿ ಆದೇಶ ನೀಡಿದ್ದಾರೆ ಎನ್ನುವು ಕೂಡಾ ಆಕ್ಷೇಪಣೇಗೆ ಕಾರಣವಾಗಿದೆ.


ಇದಕ್ಕಿಂತಾ ಪ್ರಮುಖವಾದದ್ದು...


ಈ ಕಾರಣಗಳಿಗಿಂತ ಪ್ರಮುಖವಾದದ್ದು  ಸರ್ಕಾರದ ಪ್ರತಿನಿಧಿಯಾಗಿರುವ ಗೃಹ ಕಾರ್ಯದರ್ಶಿಗಳು "ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಭಯೋತ್ಪಾದನೆಯ ವಿರುದ್ಧದ ಯುದ್ಧವನ್ನು ಎಂದಿಗೂ ಗೆಲ್ಲಲಾಗುವುದಿಲ್ಲ" ಎಂಬ ಭಾವನಾತ್ಮಕ ಹೇಳಿಕೆ ನೀಡಿ ವಿರೋಧವನ್ನು ಹತ್ತಿಕ್ಕುವ ಪ್ರಯತ್ನವನ್ನೂ ಮಾಡಿರುವುದು. ರಾಜ್ಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ ಕೇಂದ್ರದ ಅಧೀನವಾಗಿಯೇ ಇರಬೇಕೆನ್ನುವ ಆಶಯವೇ ಒಕ್ಕೂಟ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಪ್ರಜಾಪ್ರಭುತ್ವದ ಸಾರ್ಥಕತೆಯೇ ವಿಕೇಂದ್ರೀಕರಣವಾಗಿದೆ ಎನ್ನುವುದನ್ನು ಶ್ರೀಯುತರು ಅರ್ಥ ಮಾಡಿಕೊಡಿಲ್ಲದಿರುವುದು ಕಾಣುತ್ತಿದೆ. ಅಷ್ಟೇ ಅಲ್ಲದೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಇರುವ ರಾಜ್ಯಸರ್ಕಾರಿ ವ್ಯವಸ್ಥೆಯ ಬಗ್ಗೆ ಅಂದರೆ ಇಲ್ಲಿನ ಗುಪ್ತಚರ, ಪೊಲೀಸು ಮೊದಲಾದ ವ್ಯವಸ್ಥೆಗಳ ಬಗ್ಗೆ ನಂಬಿಕೆ ಇಲ್ಲದಿರುವುದು ಕಾಣುತ್ತಿದೆ. ನಿಜಕ್ಕೂ ರಾಜ್ಯ ರಾಜ್ಯಗಳ ನಡುವೆ ಅಥವಾ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಹಕಾರದ ಕೊರತೆಯಿದ್ದಲ್ಲಿ ಅದನ್ನು ಸರಿಪಡಿಸುವ/ ಉತ್ತಮಗೊಳಿಸುವ ಹೊಣೆಯಿರುವುದೇ ಕೇಂದ್ರಸರ್ಕಾರದ ಮೇಲೆ. ಇದಕ್ಕಾಗೇ ರಾಜ್ಯಗಳನ್ನು ಒಗ್ಗೂಡಿಸಿ ಭದ್ರತಾ ಸಭೆಗಳನ್ನು ನಡೆಸುವ ಪರಿಪಾಟವೂ, ಕೇಂದ್ರ ತನಿಖಾದಳದಿಂದ ಕಾಲಕಾಲಕ್ಕೆ ಎಚ್ಚರಿಕೆ ನೀಡುವ ಪರಿಪಾಟವೂ, ತೀರಾ ಮುಂಬೈ ದಾಳಿಯಂಥಾ ಸಂದರ್ಭಗಳಲ್ಲಿ ನೇರವಾಗಿ ರಾಜ್ಯಕ್ಕೆ ನೆರವು ನೀಡುವ ಏರ್ಪಾಡುಗಳೂ ಇರುವಾಗ ಆ ವ್ಯವಸ್ಥೆಗಳನ್ನೇ ಬಲಪಡಿಸುವ ಬದಲು ಹೀಗೆ ರಾಜ್ಯಗಳ ಸಹಜ ಹಕ್ಕನ್ನು ಮೊಟಕು ಮಾಡಲು ಯತ್ನಿಸುವುದು ಖಂಡಿತಾ ಆಕ್ಷೇಪಾರ್ಹವೂ ಖಂಡನಾರ್ಹವೂ ಆಗಿದೆ.

ಕೊನೆಹನಿ: ಇವತ್ತು ಭಯೋತ್ಪಾದನೆ ತಡೆ ಹೆಸರಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಮೊಟಕು ಮಾಡುತ್ತಿರುವ ಕೇಂದ್ರಕ್ಕೆ ಹಾಗೆ ಮೊಟಕು ಮಾಡಲು ದಿನಕ್ಕೆ ಹತ್ತು ಕಾರಣಗಳು ಸಿಗುತ್ತವೆ. ಮೊನ್ನೆ ಮೊನ್ನೆ ಭ್ರಷ್ಟಾಚಾರ ನಿಗ್ರಹ ಈಗ ಭಯೋತ್ಪಾದನೆಯ ನಿಗ್ರಹ... ನಾಳೆ ಇನ್ನೊಂದು, ನಾಡಿದ್ದು ಮತ್ತೊಂದು... ಹೀಗೆ. ಇವನ್ನೆಲ್ಲಾ ನಿಭಾಯಿಸಲು ರಾಜ್ಯಗಳು ಅಸಮರ್ಥ ಎನ್ನುವ ರೀತಿಯಲ್ಲಿ ದಿನೇದಿನೇ ರಾಜ್ಯಗಳ ಎಲ್ಲಾ ಹಕ್ಕುಗಳನ್ನೂ, ಅಧಿಕಾರಗಳನ್ನೂ ಒಂದೊಂದಾಗಿ ಕಸಿದುಕೊಳ್ಳುತ್ತಾ ಹೋದಲ್ಲಿ ಒಕ್ಕೂಟವೆನ್ನುವ ಹೆಸರಿಗೇನರ್ಥ? ನಮ್ಮನ್ನು ನಾವೇ ಆಳಿಕೊಳ್ಳಬೇಕೆನ್ನುವ  ತತ್ವಗಳಿಗೆ ತಿಲಾಂಜಲಿಯಿಟ್ಟರೆ ಪ್ರಜಾಪ್ರಭುತ್ವಕ್ಕೇನರ್ಥ?

2 ಅನಿಸಿಕೆಗಳು:

dhiraj ಅಂತಾರೆ...

Bharatada kelavu rajyagalige deshavagi nibhaisaballa shakti mattu sampanmulagalu iddu..antaha rajyagalalli karnatakavu ondu......hegiruvaga...rajya sarkaragalu innu swayattate inda nededu kolluvantaga beku.....adare..adikarada ase inda...hinde ide congressina nayakarugalu madida kelasakke igina sarkara kaihakutta ide....

dhiraj ಅಂತಾರೆ...

100 kooti janagallanna alluva yogyate illada nayakaru ivaru...ivaru nammavaralla......adaru ivarige namma jayakaraviralli... idu namma kannadigara daurbagya mattu daurbalyate......

.namma kannadigaru ...rajakiyadalli swanta nayakaru , swanta shakti mattu swanta nirdharagallanna tegedu kolluva pakshavannu belesikolluvudillavo.....alliya varege ide gati..........

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails