ಕುಸೇಲನ್ ಕನ್ನಡಿಗರಿಗೆ ಕಲಿಸಿದ ಪಾಠ!

ಕರ್ನಾಟಕದಲ್ಲಿ ರಜನಿಕಾಂತ್ ಅಭಿನಯದ ಕುಸೇಲನ್ ಬಿಡುಗಡೇನಾ ಬೇಡ ಅಂತನ್ನೋ ಕನ್ನಡಿಗರ ದನಿ, ದಿನ ಕಳೆದ ಹಾಗೆ ಗಟ್ಟಿಯಾಗ್ತಾ ಹೋಗ್ತಿದ್ದ ಹಾಗೇ ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗೋ ಸಾಧ್ಯತೆ ಕರಗ್ತಾ ಬಂತು. ಕರ್ನಾಟಕ ರಕ್ಷಣಾ ವೇದಿಕೆಯೋರು ಒಂದೊಂದೇ ಚಿತ್ರಮಂದಿರಗಳ ಮಾಲಿಕರ ಹತ್ತಿರ ಮಾತಾಡಿ, ಅವರ ಮನವೊಲಿಸಲು ಶುರು ಮಾಡ್ತಿದ್ದ ಹಾಗೇ ಚಿತ್ರಮಂದಿರದೋರು ಚಿತ್ರ ಪ್ರದರ್ಶನ ಮಾಡಲು ಹಿಂದೇಟು ಹಾಕತೊಡಗಿದ್ರು. ಇವತ್ತು ಮಧ್ಯಾಹ್ನ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡಿಗರ ದೊಡ್ಡ ಪ್ರತಿಭಟನೆ ನಡೆದದ್ದೂ ಇದಕ್ಕೆ ಪೂರಕವಾಗಿ ನಡೆದು, ಅಂತೂ ಕಡೆಗೆ ರಜನಿಕಾಂತ್ ಕನ್ನಡಿಗರ ಕ್ಷಮೆ ಕೇಳಿ, ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಲು ವಿನಂತಿಸಿಕೊಂಡ ಸುದ್ದಿ ಮಾಧ್ಯಮಗಳಲ್ಲಿ ಬರ್ತಾ ಇದೆ ಗುರು! ಆವತ್ತು ಕರ್ನಾಟಕದಲ್ಲಿ ಸರ್ಕಾರ ಇಲ್ಲಾ ಅಂತ ಕರುಣಾನಿಧಿ ಹೊಗೆನಕಲ್ ಯೋಜನಾ ಕಾಮಗಾರಿ ಕೈಗೆತ್ತಿಕೊಂಡಾಗಲೂ ಕನ್ನಡದೋರು ಒಗ್ಗಟ್ಟಾಗಿ ನಿಂತು ಪ್ರತಿಭಟಿಸಿದಾಗ ಇಡೀ ಯೋಜನೇನ ಮುಂದೂಡಿದ್ರು. ಆವತ್ತು ಯಾವ ಕನ್ನಡದ ಒಗ್ಗಟ್ಟಿನ ಶಕ್ತಿ ತಮಿಳುನಾಡನ್ನು ಹಿಮ್ಮೆಟ್ಟಿಸಿತ್ತೋ ಅದೇ ಇವತ್ತೂ ರಜನಿ ಕ್ಷಮೆ ಕೇಳಲು ಕಾರಣವಾಗಿದೆ ಗುರು!
ಹೊಗೆನಕಲ್ ಪ್ರತಿಭಟನೆಗಳ ಸರಣಿಯಲ್ಲಿ ರಜನಿ ಕನ್ನಡಿಗರ ಕುರಿತು ಅವಹೇಳನಕಾರಿಯಾಗಿ ಮಾತಾಡಿ ಒದೀಬೇಕು ಅಂದಿದ್ದೂ, ಆಮೇಲೆ ನಾನಂದಿದ್ದು ಕೆಟ್ಟವರಿಗೆ ಅಂದಿದ್ದೂ, ಕ್ಷಮೆ ಕೇಳಲ್ಲಾ ಅಂದಿದ್ದೂ, ನನ್ನ ಚಿತ್ರ ನೋಡದಿದ್ರೆ ನಷ್ಟ ಕನ್ನಡಿಗರಿಗೇ ಅಂದಿದ್ದೂ... ಎಲ್ಲವೂ ಇದೀಗ ’ತಪ್ಪು ಮಾಡಿದ್ದೇನೆ, ಮತ್ತೊಮ್ಮೆ ಮಾಡಲ್ಲ, ಕ್ಷಮಿಸಿ’ ಅಂದ ಮಾತಿಂದ ಅಳಿಸಿಹೋಗಿದೆ ಅಂತಾ ಅನ್ಸುದ್ರೂ ಇಡೀ ಪ್ರಕರಣದಲ್ಲಿ ಕನ್ನಡದೋರು ಕಲೀಬೇಕಾದ ಒಂದು ಪಾಠ ಇದೆ ಗುರು!

ಸಹನೆ ದೌರ್ಬಲ್ಯ ಆಗಬಾರದು!

"ಕನ್ನಡಿಗರು ಸಹನಶೀಲರು, ನೀರು ಕೇಳ್ದೋರಿಗೆ ಮಜ್ಜಿಗೆ ಕೊಡ್ತಾರೆ" ಅನ್ನೋ ಹೊಗಳಿಕೆ ಮಾತಿಗೆ ಮರುಳಾಗಿ ಕೂತ್ಕೊಂಡ್ರೆ ಆಗಬಾರದ ಅಪಮಾನಗಳು ಆಗುತ್ವೆ ಅಷ್ಟೆ. ಈ ಬಾರಿ ಕನ್ನಡಿಗರು ರಜನಿಕಾಂತ್ ಆಡಿದ ಮಾತಿನಿಂದ, ಮಾಡಿದ ಅಪಮಾನದಿಂದ ನೊಂದು ಅವರ ಸಿನಿಮಾ ಬಿಡಲ್ಲ ಅಂದಿದ್ದು, ಈ ವಿಷಯಾನ ಸ್ವಾಭಿಮಾನದ ಪ್ರಶ್ನೆಯಾಗಿ ಬಗೆದದ್ದು ಇವತ್ತು ರಜನಿಕಾಂತ್ ಕ್ಷಮೆ ಯಾಚಿಸಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡಿಗರ ಬಗ್ಗೆ ಯಾರು ಬೇಕಾದ್ರೂ ಹಗುರಾಗಿ ಮಾತಾಡಕ್ಕಾಗಲ್ಲ ಅನ್ನೋ ಸಂದೇಶಾನ ಇದು ಕೊಡ್ತಿದೆ. ಕನ್ನಡದೋರೂ ಕೂಡಾ ಅಪಮಾನಾನ ಸಹಿಸದೆ ಒಟ್ಟಾಗಿ ನಿಂತು ಪ್ರತಿಭಟಿಸಿದ್ರೆ ಇಂಥಾ ಘಟನೆಗಳು ಮರುಕಳಿಸಲ್ಲ ಗುರು!

ವಾಣಿಜ್ಯ ಮಂಡಳಿ ಕರ್ನಾಟಕದ್ದಾಗಿರಲಿ!
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಕನ್ನಡ ಚಿತ್ರಗಳಿಗೆ ಹೊರನಾಡಿನಲ್ಲಿ ಹೇಗೆ ಮಾರುಕಟ್ಟೆ ಒದಗಿಸಿ ಕೊಡೋದು? ನಮ್ಮ ನಾಡಿನಲ್ಲೇ ಪರಭಾಷಾ ಚಿತ್ರಗಳ ಬಿಡುಗಡೆ ನಮ್ಮ ಚಿತ್ರಗಳಿಗೆ ತೊಂದರೆ ಮಾಡ್ದೆ ಇರಕ್ ಏನ್ ಮಾಡಬೇಕು? ನಮ್ಮ ಚಿತ್ರರಂಗಕ್ಕೆ ಅಗತ್ಯವಿರೋ ತಂತ್ರಜ್ಞಾನ, ಸ್ಟುಡಿಯೋ, ಲ್ಯಾಬ್ ಇತ್ಯಾದಿ ಸೌಕರ್ಯಗಳ ಬಳಕೇಲಿ ಹೇಗೆ ಸ್ವಾವಲಂಬನೆ ಸಾಧಿಸೋದು? ನಮ್ಮ ನೆಲದ ಕೊಡವ, ತುಳು ಚಿತ್ರರಂಗಾನ ಹೇಗೆ ಬೆಳೆಸೋದು? ಇತ್ಯಾದಿ ಹತ್ತಾರು ಕೆಲಸ ಮಾಡದ್ ಬಿಟ್ಟು ತಮಿಳು, ತೆಲುಗು, ಹಿಂದಿ ಚಿತ್ರಗಳ ಬಿಡುಗಡೆಗೆ ಅಡ್ಡಿಯಾಗದಂತೆ ಹೇಗೆ ನೋಡ್ಕೊಳ್ಳೋದು ಅಂತ ಕಾಳಜಿ ವಹಿಸೋದನ್ನು ನೋಡ್ತಿದ್ರೆ ಬಸವಣ್ಣನೋರು ಹೇಳಿದ "ನೆಲಹತ್ತಿ ಉರಿದೊಡೆ ನಿಲಬಹುದಯ್ಯ...ಏರಿ ನೀರುಂಬೊಡೆ, ಬೇಲಿ ಹೊಲ ಮೆಯ್ದೊಡೆ, ನಾರಿ ತನ್ನ ಮನೆಯಲೆ ಕಳುವೊಡೆ...ಆರು ಕಾವರಯ್ಯ ಕೂಡಲ ಸಂಗಮದೇವಾ!" ವಚನ ನೆನಪಾಗುತ್ತೆ ಗುರು! ಅವ್ರು ಇನ್ನಾದ್ರು ಸುಧಾರಿಸ್ಲಿ.

ಎಸ್.ಬಿ.ಎಂ ನಲ್ಲೀಗ ಕನ್ನಡದ ಕಂಪು

1913ರಲ್ಲಿ ಬ್ಯಾಂಕ್ ಆಫ್ ಮೈಸೂರು ಎಂಬ ಹೆಸರಿನ ಬ್ಯಾಂಕೊಂದನ್ನು ಶುರು ಮಾಡುವ ಮೂಲಕ ವಿಶ್ವೇಶ್ವರಯ್ಯನೋರು ಕನ್ನಡಿಗರ ಆರ್ಥಿಕ ಏಳ್ಗೆಗಾಗಿ ಒಂದು ಉನ್ನತವಾದ ಕನಸನ್ನೇ ಕಂಡಿದ್ರು. ಇಂತಹ ಕನಸು ನನಸಾಗಿಸಲು ಇಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಂದು ಹೆಸರು ಮಾಡಿರೋ ಬ್ಯಾಂಕ್ ಆಫ್ ಮೈಸೂರಿನೋರು ಒಂದು ಸೊಗಸಾದ ಕೆಲ್ಸ ಮಾಡಿದಾರೆ ಗುರು! ಎಸ್.ಬಿ.ಎಮ್ ಅಂತ್ಲೇ ಪ್ರಖ್ಯಾತ ಆಗಿರೋ ಈ ಬ್ಯಾಂಕು ಈಚೆಗೆ ತನ್ನ ಅಂತರ್ಜಾಲ ತಾಣದ ಕನ್ನಡ ಆವೃತ್ತಿ ಹೊರತಂದಿದೆ ಗುರು. ಆಹಾ! ಎಂತಾ ಸೊಗಸಾದ ತಾಣ ಅಂತೀರ? ಒಮ್ಮೆ ನೋಡಿ ಹೋಗಿ...

ಸಹಜ ನಡೆ!

ಬ್ಯಾಂಕು ಇಲ್ಲೀದು, ಅವರ ಪ್ರಮುಖ ಶಾಕೆಗಳೂ ಕರ್ನಾಟಕದಲ್ಲೇ ಇರೋದು, ಹೆಚ್ಚಿನ ಖಾತೆದಾರ್ರೂ ಕನ್ನಡಿಗರೇ. ಹೀಗಿರುವಾಗ ಬ್ಯಾಂಕಿನ ಇಂತಹ ಅಂತರ್ಜಾಲ ತಾಣವೂ ಕನ್ನಡದಲ್ಲೇ ಇರಬೇಕಾಗಿರೋದು ಸಹಜ ಮತ್ತು ಸರಿ! ಬ್ಯಾಂಕಿನ ಈ ಕನ್ನಡದ ತಾಣದಿಂದ ಕೆಲವರಿಗೆ ಸೇವೆ ಪಡ್ಯೋದು ನಿರಾಳವಾಗಿದ್ರೆ, ಇನ್ನೂ ಕೆಲವರಿಗೆ ಸೇವೆ ಪಡ್ಯೋಕ್ಕೆ ಇಂಗ್ಲಿಷೋ ಹಿಂದಿಯೋ ಗೊತ್ತಿರಬೇಕಿಲ್ಲ ಅನ್ನೋದು ನಿಟ್ಟುಸಿರು ತಂದಿದೆ! ಒಟ್ಟಿನಲ್ಲಿ ಬ್ಯಾಂಕಿನ ಈ ಹೆಜ್ಜೆ ಕರ್ನಾಟಕದಲ್ಲಿ ಸಹಜವಾದ್ದೇ ಆಗಿದ್ದರೂ, ಇದೊಂದು ಸಕ್ಕತ್ ಒಳ್ಳೆ ಮೊದಲ ಹೆಜ್ಜೆಯೆಂದೇ ಹೇಳ್ಬೋದು. ಮತ್ತಿದು ಕರ್ನಾಟಕದಲ್ಲಿ ಬ್ಯಾಂಕಿನ ಕ್ಷೇತ್ರದಲ್ಲಿ ಒಂದು ಒಳ್ಳೇ ಬದಲಾವಣೆಗೆ ಬುನಾದಿಯಾಗಲಿದೆ! ಇವತ್ತೇನಾದ್ರು ವಿಶ್ವೇಶರಯ್ಯನೋರು ನಮ್ಮ ಮಧ್ಯ ಇದ್ದಿದ್ರೆ ಇದನ್ನ ನೋಡಿ ಅದೆಷ್ಟು ಆನಂದ ಪಡ್ತಿದ್ರೋ ಏನೊ ಗುರು!
ಒಳ್ಳೆಯ ಉದಾಹರಣೆ

ಮೈಸೂರು ಬ್ಯಾಂಕಿನ ಈ ಸಕ್ಕತ್ ಹೆಜ್ಜೆ ತನ್ನ ಅಂತರ್ಜಾಲ ತಾಣಕ್ಕೇ ಸೀಮಿತವಾಗದೆ, ಪ್ರತಿದಿನ ಗ್ರಾಹಕರು ಭೇಟಿ ನೀಡುವ ತನ್ನ ಸಾವಿರಾರು ಶಾಕೆಗಳಲ್ಲೂ ಕಾಣಬೇಕು. ಬ್ಯಾಂಕಿನೊಳ್ಗೆ ಹಾಕೋ ಸೂಚನೆಗಳಿರ್ಬೋದು, ಗ್ರಾಹಕರು ತುಂಬುವ ಚಲಾನ್-ಚೀಟಿಗಳಿರ್ಬೋದು, ಅರ್ಜಿಗಳಿರ್ಬೋದು, ತೊಂದ್ರೆಯಾದಲ್ಲಿ ಯಾರನ್ನ ಕಾಣ್ಬೇಕು ಅನ್ನೋದಿರ್ಬೋದು, ಬ್ಯಾಂಕಿನ ಎ.ಟಿ.ಎಮ್ ಅಲ್ಲಿನ ಸೇವೆ ಇರ್ಬೋದು, ಬ್ಯಾಂಕಿನ ಕಾಲ್ ಸೆಂಟರ್ ಇಂದ ಬರುವ ಕರೆಗಳಿರ್ಬೋದು - ಇವುಗಳಲ್ಲೆಲ್ಲಾ ವ್ಯವಹಾರದ ಭಾಷೆಯಾಗಿ ಕನ್ನಡವೇ ಬಳಕೆಯಾಗೋದು ಶುರುವಾಗ್ಬೇಕು. ಇದ್ರಿಂದ ಬ್ಯಾಂಕು ತನ್ನ ಖಾತೆದಾರರೊಡನೆ ಒಳ್ಳೆಯ ಸಂಬಂಧ ಬೆಳೆಸಲೂ ಸಾಧ್ಯವೆಂಬ ನಿಜ ತಿಳ್ಕೊಳೋ ಸಮಯ ಬಂದಿದೆ ಗುರು! ಮೈಸೂರು ಬ್ಯಾಂಕಿನ ಹಾಗೆಯೇ ಕರ್ನಾಟಕವಿಡೀ ಹರಡಿಕೊಂಡಿರೋ ಇನ್ನೂ ಹಲವಾರು ಬ್ಯಾಂಕುಗಳಿವೆ. ಇವುಗಳೂ ಇದೇ ರೀತಿ ತಮ್ಮ ಬ್ಯಾಂಕುಗಳಲ್ಲಿ ಸೇವೆಗೆ ಮುಖ್ಯ ಮಾಧ್ಯಮವಾಗಿ ಕನ್ನಡವನ್ನು ಬಳಸೊಕ್ಕೆ ಮುಂದಾಗಬೇಕು. ಇದರಿಂದ್ಲೇ ಮುಂದೆ ಹೋಗುತ್ತಾ ತಮಗೆ ಹೆಚ್ಚಿನ ಲಾಭ ಇದೆ ಎಂಬುದನ್ನ ಅವರು ತಿಳ್ಕೊಬೇಕು ಗುರು! ಹಾಗಾಗಿ ಕನ್ನಡ ನಾಡಲ್ಲಿ ಬ್ಯಾಂಕುಗಳ ಈ ದಿಕ್ಕಿನ ಹೆಜ್ಜೆ ನಿಜಕ್ಕೂ ಪ್ರಶಂಸಾರ್ಹ. ಈ ರೀತಿಯಾಗಿ ಕನ್ನಡ ನಾಡಿನೆಲ್ಲೆಡೆ ಗ್ರಾಹಕರಿಗೆ ಸಿಗುವ ಸೇವೆಯೆಲ್ಲಾ ಕನ್ನಡದಲ್ಲೇ ದೊರಕಿಸೋ ಮೂಲಕ ಕರ್ನಾಟಕದಲ್ಲಿ ಕನ್ನಡದಲ್ಲಿ ವ್ಯಾಪಾರ ಲಾಭಾದಾಯಕ ಎಂಬ ಸತ್ಯ ಹೊರಬರ್ಲಿ ಗುರು!

ಬಾಂಬ್ ಸಿಡಿತ ಮತ್ತು ಭದ್ರತೆ

ಮೊನ್ನೆ ಬೆಂಗಳೂರಲ್ಲಿ, ಅಲ್ಲಲ್ಲಿ ಬಾಂಬ್ ಸಿಡೀತಲ್ಲಾ, ಅದ್ರಾಗೆ ದೊಡ್ಡ ಪ್ರಮಾಣದಲ್ಲಿ ಜೀವ ಹಾನಿ ಆಗ್ದೆ ಇರೋದು ಸಮಾಧಾನದ ವಿಷ್ಯ. ಈ ಘಟನೆಗಳ ಬಗ್ಗೆ ಶಾಸಕರಾದ ನರೇಂದ್ರಬಾಬು ಅವ್ರೊಂದು ತೂಕದ ಮಾತಾಡಿದಾರೆ ಗುರು! ವಲಸಿಗರ ಮೇಲೊಂದು ಕಣ್ಣಿಡಬೇಕು ಅನ್ನೋ ಅವ್ರ್ ಮಾತು ಸರಿಯಾಗೇ ಇದೆ. ಬೆಂಗಳೂರು ಆರ್ಥಿಕವಾಗಿ ಬೆಳೀತಿದೆ ಅನ್ನೋದೂ ಇಲ್ಲಿ ಉಗ್ರರ ಕಣ್ಣು ಸೆಳ್ಯಕ್ ಕಾರಣ ಅನ್ನೋದೂ ನಿಜಾನೆ. ಆದ್ರೂ ಇಂಥಾ ಸಮಯದಲ್ಲಿ, ನಾವು ಎಷ್ಟು ಎಚ್ಚರಿಕೆಯಿಂದ ಇರಬೇಕು, ನಮ್ಮ ವ್ಯವಸ್ಥೆ ಹೆಂಗಿರಬೇಕು ಅನ್ನೋ ಯೋಚನೆ ಬರುತ್ತೆ.

ಬಾಂಬ್ ಇಡೋರನ್ನ ಹೆಂಗ್ ತಡೆಯೋದು?

ಇಡೀ ಪೊಲೀಸ್ ವ್ಯವಸ್ಥೆ ಯಾರು ಎಲ್ಲಿ ಬಾಂಬ್ ಇಡ್ತಾರೆ ಅಂತಾ ಹುಡುಕ್ಕೊಂಡು ಇಪ್ಪತ್ನಾಕು ಗಂಟೆ ಕಣ್ಣುಗ್ ಎಣ್ಣೆ ಬಿಟ್ಕೊಂಡು ಇರಕ್ ಆಗುತ್ತಾ? ಅಥ್ವಾ ಯಾರು ಬಾಂಬ್ ಇಡಬಹುದು ಅನ್ನೋದನ್ನು ಮೊದಲೇ ಊಹೆ ಹೆಂಗ್ ಮಾಡಕ್ ಆಗುತ್ತೆ ಅಂತ ಅನ್ಸದು ಸಹಜ. ಆದ್ರೆ ಅದುಕ್ಕೆ ಅಂತಲೇ ಪೊಲೀಸ್ ಇಲಾಖೆಯೋರು ಗುಪ್ತಚರರನ್ನು ಇಟ್ಕೊಂಡಿರ್ತಾರೆ. ಆದ್ರೂ ಹೀಗಾಗಿದೆ ಅಂದ್ರೆ ಇದರ ಹೊಣೆಗಾರಿಕೆ ಅವ್ರುದ್ದೇ ತಾನೆ. ಇಡೀ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಕಣ್ತಪ್ಪಿಸಿ ಈ ಸಿಡಿತಗಳಾಗಿರೋದು ಎದ್ದು ಕಾಣ್ತಿದೆ. ಕೇಂದ್ರದೋರು ನಾವು ಮೊದ್ಲೆ ಸುಳಿವು ಕೊಟ್ಟಿದ್ವಿ ಅಂತಲೂ, ಇಲ್ಲ ಕೊಟ್ಟಿರಲಿಲ್ಲ ಅಂತ ರಾಜ್ಯಸರ್ಕಾರದೋರು ಅಂತಲೂ, ಒಬ್ರು ಮೇಲೊಬ್ರು ಗೂಬೆ ಕೂರಿಸೋದುನ್ನ ಬಿಟ್ಟು ಇನ್ಮುಂದ್ ಹೀಗಾಗ್ದೆ ಇರೋಕೆ ಬೇಕಾದ ಕ್ರಮಗಳನ್ನು ಮುಲಾಜಿಲ್ಲದೆ ತೊಗೋಬೇಕು.

ಒಳಗ್ ಬರೋರ್ ಬಗ್ಗೆ ನಿಗಾ ಬೇಕು

ನಮ್ಮ ಮನೆ ಒಳಗಡೆ ಯಾರೋ ಹೊರಗಿನವ್ರು ಬಂದ್ರೆ ಸುಮ್ನೆ ಬಾಗ್ಲು ತೆಗ್ದು ಒಳಗ್ ಬಿಟ್ಕೋತೀವಾ? ಇಲ್ಲಾ ತಾನೆ? ಹಾಗಿದ್ ಮೇಲೆ ನಮ್ಮೂರ ಒಳಗ್ ಬರೋರನ್ನು ಒಳಗ್ ಬಿಡಕ್ ಮೊದ್ಲು ಏನೇನು ಪರೀಕ್ಷೆ ಮಾಡಿ ಬಿಟ್ಕೋತಿದೀವಿ. ಹೊರನಾಡಿಂದ ಬರೋರ ಬಗ್ಗೆ ಹಿಂದೆ ಮುಂದೆ ತಿಳ್ಕೊಳಕ್ಕೆ ಏನ್ ವ್ಯವಸ್ಥೆ ಇದೆ ಇಲ್ಲಿ? ಹಾಗೆ ವಲಸೆ ಬರೋರ ಯಾವ ದಾಖಲೇನ ಪರೀಕ್ಷೆ ಮಾಡಿ ಒಳಗ್ ಬಿಟ್ಕೊತಾ ಇದೀವಿ? ಅಸಲಿಗೆ ಅಂಥಾ ವ್ಯವಸ್ಥೆಯ ಅಗತ್ಯ ಇದೇ ಅನ್ನೋದೆ ನಮ್ಮೋರಿಗೆ ಮನವರಿಕೆ ಆಗಬೇಕಾಗಿದೆ.
ಇದ್ರ ಜೊತೆಗೆ ನಮ್ ಜನತೆ ಅಕ್ಕಪಕ್ಕ ವಾಸಕ್ ಬರೋರ್ ಯಾರು? ಅವ್ರ್ ಚಟುವಟಿಕೆ ಎಂಥದ್ದು? ಅಂತಾ ಕಣ್ಣು ಬಿಟ್ಕೊಂಡಿರ್ಬೇಕು ಗುರು. ಅಂದ್ರೆ ಇಂಥಾ ಕಠಿಣವಾದ ಸವಾಲನ್ನು ಎದ್ರುಸಕ್ಕೆ ಬರೀ ಪೊಲೀಸರಲ್ಲ, ನಾವು ಕೂಡಾ ಒಂದಾಗಬೇಕು, ಮುಂದಾಗಬೇಕು. ಏನಂತೀ ಗುರು!

ಕೊನೆಹನಿ : ಕೆಲವು ಮಾಧ್ಯಮಗಳೋರೂ, ಅಧಿಕಾರಿಗಳೂ ’ಈ ಕೆಲಸ ಮಾಡಿರೋರು ಸ್ಥಳೀಯರೇ’ ಅಂತಿದಾರೆ. ಸ್ಥಳೀಯ ಅನ್ನೋದ್ರ ಅರ್ಥ ಏನು ಗುರು? ಇಲ್ಲಿ ಹುಟ್ಟಿ ಬೆಳದೋರು ಅಂತಲಾ? ಇಲ್ಲಿ ಸ್ವಂತ ಮನೆ ಇಟ್ಕೊಂಡೋರು ಅಂತ್ಲಾ? ಇಲ್ಲೇ ಬದುಕ್ತಿರೋರು ಅಂತ್ಲಾ? ಉಹೂ ಅಂತವ್ರ್ ಯಾರನ್ನೂ ಸ್ಥಳೀಯರು ಅನ್ನಕ್ಕಾಗಲ್ಲ. ನಮ್ಮ ಮುಖ್ಯವಾಹಿನೀಲಿ ಒಂದಾಗಿ ಈ ನಾಡನ್ನು ತನ್ನದು ಅಂದ್ಕೊಂಡಿರೋರು ತಾನೆ ಸ್ಥಳೀಯರು. ಅಂಥಾವ್ರು ತನ್ನ ಮನೇಗೆ ಬಾಂಬ್ ಇಡೋಕೆ ಸಾಧ್ಯಾನೆ ಇಲ್ಲ ಗುರು!

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗಳು: ಹುಷಾರಾಗಿರಿ


ಬಿಸಿ ಸುದ್ದಿ: ೧-೨ ಗಂಟೆ ಹಿಂದೆ ಇವತ್ತಿನ ದಿನ ಬೆಂಗಳೂರಲ್ಲ ೭ ಬಾಂಬ್ ಸ್ಫೋಟಗಳಾಗಿವೆ. ಈ ಕೆಳಗಿನ ಸ್ಥಳಗಳಲ್ಲಿ ಸ್ಫೋಟಗಳಾಗಿವೆ ಎಂದು ಸುದ್ದಿಗಳು ಬರುತ್ತಿವೆ:

  • ಮಡಿವಾಳ ಚೆಕ್ಪೋಸ್ಟ್
  • ನಾಯಂಡಹಳ್ಳಿ (ಮೈಸೂರು ರಸ್ತೆ)
  • ಕೋರಮಂಗಲ
  • ಆಡುಗೋಡಿ
  • ರಿಚ್ಮಂಡ್ ರಸ್ತೆ (ಮಲ್ಯ ಆಸ್ಪತ್ರೆ ಹತ್ತಿರ)
  • ಲ್ಯಾಂಗ್ಫೋರ್ಡ್ ರಸ್ತೆ

ಹೆಚ್ಚಾಗಿ ಜೆಲ್ಯಾಟಿನ್ ಕಡ್ಡಿಗಳನ್ನು ಉಪಯೋಗಿಸಿ ಸ್ಫೋಟಿಸಲಾಗಿದೆ ಎಂದು tv9 ಮುಂತಾದ ಟಿವಿ ವಾಹಿನಿಗಳಲ್ಲಿ ಮೂಡಿಬರುತ್ತಿದೆ. ಘಟನೆಗಳಿಂದ ಅನೇಕರು ಗಾಯಗೊಂಡಿದ್ದಾರೆ ಮತ್ತು ಲಕ್ಷ್ಮೀ ಎಂಬ ಓರ್ವ ಹೆಂಗಸು ಸತ್ತಿದ್ದಾಳೆ.

"ನಡೀಲಿ, ಹಿಂದಿ ಹಾಡು ನಡೀಲಿ" - ಯಡ್ಯೂರಪ್ಪ

ಈ ತಿಂಗಳ ೨೦ನೇ ತಾರೀಖು ಬೆಂಗ್ಳೂರಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಹುಟ್ಟು ಹಬ್ಬ ಆಚರಿಸಲಾಯ್ತು. ಕರ್ನಾಟಕ ವಿದ್ಯುತ್ ನಿಗಮದ ಕಾರ್ಯಕ್ರಮವೇ ಆಗಿದ್ರೂ ಇದ್ರಲ್ಲಿ ತೆಲುಗು ಮತ್ತು ಹಿಂದಿ ಹಾಡುಗಳ್ನ ಹಾಡ್ತಿದ್ರಂತೆ ಗುರು!

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡ್ಯೂರಪ್ಪನೋರು ಬಂದ್ರು ಅಂತ ಹಾಡು ನಿಲ್ಲುಸ್ದ್ರಂತೆ. "ಛೆ ಛೆ ನಿಲ್ಲುಸ್ಬೇಡಿ, ಸಂಗೀತ ಮುಂದುವರೀಲಿ" ಅಂತ ಯಡ್ಯೂರಪ್ನೋರು ಹೇಳಿದ್ರಲ್ಲಿ ವಿನಯವೇನೋ ಕಾಣುತ್ತೆ, ಆದ್ರೆ "ಕನ್ನಡದ ಹಾಡು ಹಾಡಕ್ಕೆ ನಿಮಗೇನು ರೋಗ, ತೆಲುಗು ಮತ್ತೆ ಹಿಂದಿ ಹಾಡುಗಳ್ನ ಯಾಕ್ ಹಾಡ್ತಿದೀರಿ, ನಿಮಗೆ ಮೈಮೇಲೆ ಗ್ನಾನ ಇಲ್ವಾ?" ಅಂತ ಕೇಳದೆ ಹೋದದ್ದರಿಂದ ಯಡ್ಯೂರಪ್ನೋರಿಗೆ ಅವತ್ತಿನ ದಿನ ವಿವೇಕ ನಿದ್ದೆ ಹೊಡೀತಿತ್ತೇನೋ ಅಂತ್ಲೂ ಅನ್ಸುತ್ತೆ ಗುರು! ಮುಖ್ಯಮಂತ್ರಿಗಳು ತಾವು ಯಾವುದನ್ನ ಮುಂದ್ವರಿಯೋಕ್ಕೆ ಹೇಳಿದ್ದು, ಅದೂ ಎಲ್ಲಿ, ಅಂತೆಲ್ಲಾ ಒಂದ್ಸಲಿ ಯೋಚ್ನೆ ಮಾಡ್ಬಾರ್ದಿತ್ತಾ?

ಇವತ್ತಿನ ದಿನ ಕನ್ನಡಿಗರಿಗಷ್ಟೇ ಅಲ್ಲ, ಕನ್ನಡೇತರರಿಗೂ ಮೆಚ್ಚುಗೆ ಆಗಿರೋ ಸಾಕಷ್ಟು ಕನ್ನಡ ಹಾಡುಗಳು ಇರೋವಾಗ ಕರ್ನಾಟಕದಲ್ಲೇ ಕರ್ನಾಟಕದ ಮುಖ್ಯಮಂತ್ರಿಯ ಮುಂದೇನೇ ಬೇರೆ ಭಾಷೆಗಳಲ್ಲಿ ಹಾಡುಗಾರಿಕೆ ನಡೆದಿದೆ ಅಂದ್ರೆ ಇನ್ನು ಕನ್ನಡದ ಸಂಗೀತಗಾರರು ಎಲ್ಲಾ ಹೋಗಿ ನೇಣು ಹಾಕ್ಕೊಳೋದೊಂದು ಬಾಕಿ! ಇದು ಕರ್ನಾಟಕದ ಒಂದು ಸಂಸ್ಥೆಯ ಕಾರ್ಯಕ್ರಮ, ಇಲ್ಲಿ ಕನ್ನಡ ಸಂಗೀತವನ್ನೇ ಹಾಡಿ ಅಂತ ಒಂದೇ ಒಂದು ಸಾರಿ ಕೇಳಿದ್ರೂ ಆ ಮಾತೇ ಕನ್ನಡಿಗರಿಗೆಲ್ರಿಗೂ ಸಂಗೀತ ಆಗಿರ್ತಿತ್ತಲ್ಲ ಯಡ್ಯೂರಪ್ನೋರೆ?

ಕನ್ನಡವನ್ನ ಕಡೆಗಣಿಸಿ ಅಲ್ಲಿ ನಡೀತಿದ್ದಿದ್ದು ಸಂಗೀತ ಅಲ್ಲ, ಕನ್ನಡದ ಕಲಾವಿದರನ್ನ ಕನ್ನಡ ಚಲನಚಿತ್ರೋದ್ಯಮಾನ ಹೆತ್ತಿರೋ ಕನ್ನಡದ ತಾಯಿ ಸಾಯ್ತಾ ಸಾಯ್ತಾ "ಅಯ್ಯೋ ಅಮ್ಮಾ! ಕಾಪಾಡಿ, ಕಾಪಾಡಿ!" ಅಂತ ಅಳ್ತಿದ್ದಿದ್ದು ಅಂತ ಅರ್ಥವಾಗಲಿಲ್ವಾ ನಿಮಗೆ ಯಡ್ಯೂರಪ್ನೋರೆ? ಏನ್ ಪ್ರಯೋಜ್ನ ಆಯ್ತು ನೀವು ಆಡಳಿತಕ್ಕೆ ಬಂದು? ಏನ್ ಪ್ರಯೋಜ್ನ ನಿಮ್ಮ ಕೈಲಿರೋ ಅಧಿಕಾರದ್ದು? ಏನ್ ಉಪಯೋಗ ಆಯ್ತು ಕನ್ನಡಕ್ಕೆ ನಿಮ್ಮಿಂದ? ಕನ್ನಡನಾಡಿನಲ್ಲಿ ನಿಮ್ಮ ಮುಂದೇನೇ ಹಿಂದಿ ಹಾಡು ಹಾಕಿದ್ದನ್ನ ಕೇಳಿ ನಿಮ್ಮ ರಕ್ತ ಕುದೀಬೇಕಾಗಿತ್ತು. ಅದು ಬಿಟ್ಟು ನೀವು ಏನಾದರೂ ಹಿಂದಿ "ರಾಷ್ಟ್ರಭಾಷೆ" ಅಂತ ನಿಮಗೆ ಹಿಂದೆ ಹೇಳ್ಕೊಟ್ಟಿರೋ ಸುಳ್ಳನ್ನೆಲ್ಲ ನೆನಪಿಸಿಕೊಂಡು ಸುಮ್ಮನಾಗಿಬಿಟ್ಟಿರೇನು? ನಿಮಗೆ ಯಾಕೆ ಈ ಗೊಂದಲ? ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅಂತ ಗೊತ್ತಿಲ್ವಾ ನಿಮಗೆ?

ಆವೂ ಸರಿ, ಹಾವೂ ಸರಿ

ಕನ್ನಡದ ನಿಜವಾದ ಸ್ವರೂಪ ಎಂತದ್ದು, ಕನ್ನಡವನ್ನು ಬೇರೆಬೇರೆ ಕಡೆಗಳಲ್ಲಿ ಕನ್ನಡಿಗರು ಹೇಗೆ ಉಲಿಯುತ್ತಾರೆ, ಅವುಗಳಲ್ಲಿ ಹೇಗೆ ಮೇಲು-ಕೀಳೆಂಬುದಿಲ್ಲ ಎಂದು ಡಾ. ಡಿ. ಎನ್. ಶಂಕರಬಟ್ಟರು ತಮ್ಮ ಹೊಚ್ಚ ಹೊಸ "ಮಾತಿನ ಒಳಗುಟ್ಟು" ಎಂಬ ಹೊತ್ತಿಗೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಕೆಲವು ಕನ್ನಡಿಗರಿಗೆ (ಅವರು ನಾಡು ನುಡಿಗಾಗಿ ಪ್ರಾಣವನ್ನು ಕೊಡುತ್ತಿದ್ದರೂ) ಹಕಾರ-ಅಕಾರದ ವ್ಯತ್ಯಾಸ "ಗೊತ್ತಿಲ್ಲ", ಆದ್ದರಿಂದ ಅವರಿಗೆ ಕನ್ನಡವೇ ಬರುವುದಿಲ್ಲ ಎಂದು ಹೇಳುವ ಮೂರ್ಖರಿಗೆ ಬಟ್ಟರ ಈ ಪಾಠ ಬಹುಮುಖ್ಯ. ಕನ್ನಡಿಗರು ಆಡಿದ್ದೇ ಕನ್ನಡ ಎಂಬ ಕನಿಷ್ಠ ತಿಳುವಳಿಕೆಯೂ ಇಲ್ಲದ ಮೂರ್ಖರಿಗೆ ಈ ಪಾಠ ಬಹು ಮುಖ್ಯ. ಕನ್ನಡಿಗರು ಎಲ್ಲೇ ಇದ್ದರೂ ಯಾವ ಜಾತಿಯವರೇ ಆಗಿದ್ದರೂ ಅವರೆಲ್ಲ ಆಡುವುದು ಕನ್ನಡವೇ, ಎಲ್ಲವೂ ಪೂಜಾರ್ಹವೇ ಎಂದು ತಿಳಿಯದ ಮೂರ್ಖರಿಗೆ ಈ ಪಾಠ ಬಹುಮುಖ್ಯ:

ಹಕಾರದ ಗೆರೆ

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ನಿಯಮಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಉದಾಹರಣೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ನಿಯಮವನ್ನು ಗಮನಿಸಬಹುದು.

ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಪದ ಅಂಬು ಎಂದಾಗುತ್ತದೆ, ಹಾವು ಪದ ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನಡದಲ್ಲಿ ಬಿದ್ದುಹೋಗಿವೆ ಮತ್ತು ಹುಣಸೂರಿನ ಕನ್ನಡದಲ್ಲಿ ಬದಲಾಗದೆ ಉಳಿದಿವೆ ಎಂಬ ನಿಯಮ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್. ನಗರ ಮತ್ತು ಪಿರ್ಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಚ್ಚರಿಸುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿರುವುದನ್ನು ಕಾಣಬಹುದು.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು ’ಹಕಾರದ ಗೆರೆ’ ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವಕ್ಕಾಗಿ ಹಾಯ್ದೇತು.

ಈ ಗೆರೆ ಮಯ್ಸೂರು ಜಿಲ್ಲೆಯನ್ನು ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಎರಡು ತುಂಡುಗಳಾಗಿ ಒಡೆಯುತ್ತಿದೆಯೆಂದು ತೋರುತ್ತದೆ. ಯಾಕೆಂದರೆ ಗುಲ್ಬರ್ಗ ಮತ್ತು ಶಾಬಾದ್ ಗಳ ನಡುವೆಯೂ ಇಂತಹದೇ ಹಕಾರ ಬಿದ್ದುಹೋಗುವ ಮತ್ತು ಹೋಗದಿರುವ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಆದರೆ ನಿಜಕ್ಕೂ ಈ ಎರಡು ತುದಿಗಳ ನಡುವಿನ ಜಿಲ್ಲೆಗಳನ್ನು ಈ ಹಕಾರದ ಗೆರೆ ಉದ್ದಕ್ಕೂ ಕತ್ತರಿಸುತ್ತಾ ಸಾಗುತ್ತದೆಯೇ ಎಂಬುದನ್ನು ತಿಳಿಯಲು ಮಂಡ್ಯ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲೆಲ್ಲ ಸುತ್ತಾಡಿ ಅಲ್ಲಿನ ಜನರ ಮಾತನ್ನು ಕೇಳಿನೋಡಬೇಕು. ಈ ಕೆಲಸವಿನ್ನೂ ನಡೆದಿಲ್ಲ.

ಕನ್ನಡದ ಆಡುನ್ನುಡಿಗಳನ್ನು ಕತ್ತರಿಸುವ ಹಾಗೆ ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಉದಾಹರಣೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಈ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜ್ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ.

ಈ ರೀತಿ ಒಂದೇ ಹಳ್ಳಿಯಲ್ಲಿ ಬೇರೆ ಬೇರೆ ಜಾತಿಗಳ ನಡುವೆ ಆಡುಮಾತಿನಲ್ಲಿ ಕಾಣಿಸುವ ವ್ಯತ್ಯಾಸಗಳೂ ಬೇರೆ ಬೇರೆ ಊರುಗಳ ನಡುವೆ ಕಾಣಿಸುವ ವ್ಯತ್ಯಾಸಗಳಷ್ಟೇ ನಿಯಮಬದ್ದವಾಗಿವೆ. ಇದಕ್ಕೆ ಇನ್ನೊಂದು ಉದಾಹರಣೆಯಾಗಿ ನಂಜನಗೂಡಿನ ಒಕ್ಕಲಿಗರ ಮತ್ತು ಆದಿಕರ್ನಾಟಕರ ಮಾತುಗಳನ್ನು ಹೋಲಿಸಿ ನೋಡಬಹುದು. ಒಕ್ಕಲಿಗರು ಮನೆ ಎನ್ನುವುದಕ್ಕೆ ಆದಿಕರ್ನಾಟಕರು ಮನ ಎನ್ನುತ್ತಾರೆ. ಅಣೆ (ಹಣೆ)ಗೆ ಅಣ ಎನ್ನುತ್ತಾರೆ, ತಲೆಗೆ ತಲ ಎನ್ನುತ್ತಾರೆ, ಅತ್ತೆಗೆ ಅತ್ತ ಎನ್ನುತ್ತಾರೆ. ಹೆಸರುಗಳ ಕೊನೆಯಲ್ಲಿ ಬರುವ ಎಕಾರಗಳೆಲ್ಲ ಆದಿಕರ್ನಾಟಕರ ಮಾತಿನಲ್ಲಿ ಅಕಾರವಾಗಿ ಬದಲಾಗಿವೆ ಎಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳಿಗೆ ಈ ರೀತಿ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು. ಯಾಕೆಂದರೆ ಎರಡೂ ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ನಿಯಮಗಳೇ ಕಾಣಿಸುತ್ತವೆ.

ಉದಾಹರಣೆಗಾಗಿ ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ನಿಯಮ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ನಿಯಮದ ಹಾಗೆಯೇ ಇದೆ.

ಅಂದಹಾಗೆ ಬಟ್ಟರು ತಮ್ಮನ್ನು ತಾವು "ಭಟ್ಟರು" ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ, ಏಕೆಂದರೆ ಬೇರೆಲ್ಲ ಕನ್ನಡಿಗರಂತೆ ಅವರ ನಾಲಿಗೆಯಲ್ಲೂ ಮಹಾಪ್ರಾಣ ಹೊರಳುವುದಿಲ್ಲ. ಹಾಗೆಯೇ ಮೇಲಿನ ಬರಹವನ್ನೂ ಅವರು ತಮ್ಮ "ಹೊಸ" ಬರಹದಲ್ಲಿ ಬರೆದಿದ್ದಾರೆ (ಮಹಾಪ್ರಾಣಗಳಿಲ್ಲ, "ಷ" ಬದಲು "ಶ", ಐ ಬದಲು ಅಯ್, ಔ ಬದಲು ಅವ್, ಹೀಗೆ). ಯೂನಿಕೋಡಿಗೆ ಬಟ್ಟರ ಹೊಸ ಬರಹ ಅಷ್ಟು ಚೆನ್ನಾಗಿ ಬಾರದ ಕಾರಣ ನಾವು ಅದನ್ನು ಬರೆಯುವಾಗ ಅಲ್ಲ್ಲಲ್ಲಿ ತಪ್ಪುಗಳಾಗಿವೆ.

ಅಚ್ಚಕನ್ನಡ ನಿಘಂಟು ಮತ್ತು ಕೊಳಂಬೆ ಪುಟ್ಟಣ್ಣಗೌಡರು

ಆಂಡಯ್ಯ ಅನ್ನೋ ಕವಿ ಕನ್ನಡದಲ್ಲೇ ಬರೆದು ಬಹಳ ಹೆಸರು ಮಾಡಿದ್ದವನು. ಅವನು ಹದಿಮೂರನೇ ಶತಮಾನದ ಮೊದಲ ಭಾಗದಲ್ಲಿ ಇದ್ದ ಒಬ್ಬ ಕವಿ. ಈತ ಆ ದಿನಗಳಲ್ಲೇ ಅಚ್ಚಗನ್ನಡ ಬಳಸಿ ಕಾವ್ಯ ಬರೆದಿದ್ದವನು. ಇದೀಗ ಇಪ್ಪತ್ತನೇ ಶತಮಾನದಲ್ಲಿ ಅಂದಿನ ಆಂಡಯ್ಯನಿಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಿದ್ದ ವಿದ್ವಾನ್ ಶ್ರೀ ಕೊಳಂಬೆ ಪುಟ್ಟಣ್ಣಗೌಡರು ಆಂಡಯ್ಯನಿಗೇ ಸವಾಲಾಗಿ ಅವನನ್ನೇ ಮೀರಿಸಿರೋ ಮಹಾನುಭಾವರು ಅಂತ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಅಭಿಪ್ರಾಯ ಪಟ್ಟಿದ್ದಾರೆ.
ಪುಟ್ಟಣ್ಣ ಗೌಡರು ಅಪಭ್ರಂಶಗಳನ್ನು ಕೂಡಾ ಬಳಸದೆ ಕೇವಲ ದೇಶೀಯ ಪದಗಳನ್ನು ಬಳಸೇ "ಕಾಲೂರ ಚೆಲುವೆ’ ಅನ್ನೋ ರೋಚಕವಾದ ಕಾವ್ಯವನ್ನು ಬರ್ದಿದಾರೆ. ಈ ಕಾವ್ಯದ ಮೂಲಕ ಇಡೀ ಕನ್ನಡ ಸಾಹಿತ್ಯ ಲೋಕವನ್ನೇ ಅಚ್ಚರಿಗೊಳಿಸಿದ್ದ ಈ ಸಾಧಕರು ’ಅಚ್ಚಕನ್ನಡ ನುಡಿಕೋಶ’ ಎನ್ನೋ ಕನ್ನಡ ಶಬ್ದಗಳ ನಿಘಂಟನ್ನು ರಚಿಸಿದ್ದಾರೆ. ಈ ಹೊತ್ತಿಗೆಯನ್ನು ಮೈಸೂರಿನ ಪುಸ್ತಕ ಪ್ರಕಾಶನದವರು ೧೯೯೩ರಲ್ಲೇ ಹೊರತಂದಿದ್ದಾರೆ. ಹಳಗನ್ನಡ ಮತ್ತು ಹೊಸಗನ್ನಡಗಳಿಗೆ ಸೇತುವೆಯಾಗಿ ದುಡಿದ ಮಹನೀಯರು ಅನೇಕ ಹೊಸ ಕನ್ನಡ ಪದಗಳನ್ನೂ ಹುಟ್ಟುಹಾಕಿದ್ದಾರೆ. ವಿಮಾನಕ್ಕೆ ಬಾನೋಡ, ಸ್ವರ್ಗಕ್ಕೆ ಮೇಲ್ನೆಲ ಎನ್ನುವ ವಿಶಿಷ್ಟ ಪದಗಳ ಜನಕರು ಇವರು. ಈ ಹೊತ್ತಿಗೆ ನಿಮ್ಮ ಹೊತ್ತಿಗೆ ಮನೆಯಲ್ಲಿರೋದು ಹೊತ್ತಿಗೆಮನೆಗೆ ಶೋಭೆ.

ಕನ್ನಡ ಮರೆತ ಮೈಸೂರು ಸಿಲ್ಕ್ಸ್!


ಕರ್ನಾಟಕದ ಹೆಮ್ಮೆಯ ಮೈಸೂರು ರೇಶ್ಮೆ ಉದ್ಯೋಗದ ಉತ್ಪನ್ನ ಆಗಿರುವ ಮೈಸೂರು ರೇಶ್ಮೆ (ಜರತಾರಿ) ಸೀರೇನ ಮಾರಾಟ ಮಾಡಕ್ಕೆ, ದೇಶ-ವಿದೇಶಗಳಲ್ಲಿ ಮಾರುಕಟ್ಟೆ ಕಟ್ಕೊಳಕ್ಕೆ ಅಂತ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೋರೇಶನ್ ( ಕೆ.ಎಸ್.ಐ.ಸಿ) ಅನ್ನೋ ಒಂದು ಸಂಸ್ಥೆ ಇದೆ. ಈ ಸಂಸ್ಥೆನ ಸರ್ಕಾರದಿಂದ ನೇಮಕವಾಗಿರೋ ಐಏಎಸ್ಸು ಅಧಿಕಾರಿಗಳು ‍ಮುನ್ನಡುಸ್ತಾ ಇದಾರೆ. ನಮ್ಮ ನಾಡಿನ ಹೆಮ್ಮೆಯ ವಿಶಿಷ್ಟವಾದ ಒಂದು ಉತ್ಪನ್ನಾನ ಎಲ್ಲೆಡೆ ಮಾರಾಟ ಮಾಡಬೇಕು ಅಂತ ಮುಂದಾಗಿರೋ ಈ ಸಂಸ್ಥೆ ತನ್ನದೇ ಆದ ಒಂದು ಅಂತರ್ಜಾಲ ತಾಣಾನ ರೂಪಿಸಿದೆ.
ಪ್ರಪಂಚದ ಮೂಲೆಮೂಲೆಗಳಿಗೆ ಮೈಸೂರು ಸಿಲ್ಕ್ಸ್ ಬ್ರಾಂಡಿನ ರೇಶ್ಮೆ ಉತ್ಪನ್ನಗಳನ್ನು ಮಾರಕ್ಕೆ ಹೊರಟಿರೋ ಈ ಸಂಸ್ಥೆಯ ಅಂತರ್ಜಾಲ ಯಾವ ಭಾಷೇಲಿದೆ ಹೇಳಿ ನೋಡಣಾ?

ಹುಡುಕುದ್ರೂ ಕಾಣದ ಮೈಸೂರು ಸೊಬಗು!

ಈ ತಾಣಾನ ಇಡಿಇಡಿಯಾಗೇ ಇಂಗ್ಲಿಷ್ನಲ್ಲಿ ಮಾಡಿದಾರೆ. ಇದ್ರಲ್ಲಿ ಇಂಗ್ಲಿಷ್ ಭಾಷೇ ಇರೋದು ಸರಿಯಾಗೇ ಇದೆ ಗುರು! ಆದ್ರೆ ನಿಜವಾಗಿ ಗ್ರಾಹಕರನ್ನು ಗೆಲ್ಲಕ್ಕೆ ಇವ್ರು ಇನ್ನೊಂದೆರಡು ಹೆಜ್ಜೆ ಮುಂದೆ ಹೋಗ್ಬೇಕು ಗುರು. ಈ ತಾಣದ ಡಿಫಾಲ್ಟ್ ಭಾಷೆ ಕನ್ನಡ ಆಗಿರಬೇಕು. ಅಂದ್ರೆ ಮೈಸೂರು ಸಿಲ್ಕು ಮೊದಲು ಕನ್ನಡದೋರಿಗೆ ನಮ್ಮದು ಅನ್ನೋ ಭಾವನೆ ಹುಟ್ಟಲು ಕಾರಣವಾಗಬೇಕು. ಆಮೇಲೆ ಒಂದು ಬದೀಲಿ ಭಾಷಾ ಅಯ್ಕೆ ಕೊಟ್ಟು ಇಂಗ್ಲಿಷು, ತಮಿಳು, ತೆಲುಗು, ಮಲಯಾಳಮ್ಮು, ಹಿಂದಿ, ಜರ್ಮನ್ನು, ಜಪಾನು, ಮಣ್ಣು, ಮಸಿ, ಸುಡುಗಾಡು ಅಂತಾ ಎಲ್ಲಾ ಭಾಷೆಗಳ ಆಯ್ಕೆ ಕೊಡಬೇಕು ಗುರು!

ಅಷ್ಟೆ ಅಲ್ಲ, ಈ ನಮ್ಮ ಮೈಸೂರು ರೇಶ್ಮೆ ಸೀರೇಯ ವಿನ್ಯಾಸದ ಬಗ್ಗೆ ಹಾಕಿರೋ ಮಾಹಿತೀನು ಅಷ್ಟೆ, ನಮ್ಮತನಾನ ತೋರಿಸಿಕೊಡಭೇಕು. ಈ ತಾಣದಲ್ಲಿ ಇಂಗ್ಲಿಷಿನಲ್ಲಿ ಇಂಗ್ಲಿಷಿನದ್ದಲ್ಲದ ಪಲ್ಲು ಅಂತ ಬರ್ದಿರೋದಿಕ್ಕೆ ಸಂಬಂಧಪಟ್ಟೋರು ಏನು ಸಮರ್ಥನೆ ಕೊಟ್ಟಾರು? ಪಲ್ಲು ಅನ್ನೋ ಪದ ಇಂಗ್ಲಿಷ್ ಭಾಷೇಲಿಲ್ಲ, ಅದು ನೌನು, ಅದ್ಕೆ ಹಾಗ್ ಬರ್ದಿದೀವಿ ಅಂತಾರೇನೋ. ಹಾಗೆ ಬರೆಯೋದಕ್ಕೆ ಇದೇ ಕಾರಣ ಆಗಿದ್ರೆ ಕನ್ನಡದೇ ಆದ ಸೆರಗು ಅಂಚು ಅಂತ ಬರೀಬೇಕಿತ್ತಲ್ವಾ ಗುರು! ಹೊರಗಿನೋರ್ನ ಸೆಳೆಯೋಕೆ ಅವರ ಭಾಷೇ ಬಳಸೋದು ನಿಜವಾಗ್ಲೂ ಒಳ್ಳೇ ಮಾರುಕಟ್ಟೆ ತಂತ್ರಾನೇ. ಆದರೆ ಈ ನೆಪದಲ್ಲಿ ನಮ್ಮತನಾನೆ ಬಿಟ್ಟುಕೊಡೋದು ಸರೀನಾ? ಇದು ಹೀಗೇ ಇದ್ರೆ ನಾಳೆ ಈ ತಾಣ ನೋಡೋ ಮೈಸೂರಿನೋರೇ ಇದು ನಮ್ಮದಲ್ಲ, ಈ ತಾಣಾ ನಮ್ಮದಲ್ಲ, ಈ ಸಂಸ್ಥೆ ನಮ್ಮದಲ್ಲ ಅನ್ನಕ್ ಶುರು ಹಚ್ಕೋತಾರೆ, ಅಷ್ಟೇ ಗುರು!

ಕನ್ನಡದ ಪೂಜಾರೀನೂ ಯಾಮಾರ್ಸಿರೋ ಹಿಂದಿ ಭೂತ!

ನಿಮ್ಗೆಲ್ಲಾ ಎಂಕಂದೊಂದು ನಮಸ್ಕಾರ. ಬೆಂಗಳೂರಿನ ಜಯನಗರ ಕಾಂಪ್ಲೆಕ್ಸ್ ಅಲ್ಲಿ ಒಂದು ಅಂಗಡಿ ಐತೆ, ಮೊನ್ ಮೊನ್ನೆ ಆ ಅಂಗ್ಡಿ ಕಡೆಗ್ ಓಗಿದ್ದೆ. ಅದ್ರ ಎಸ್ರು ಸವಿತಾ ಸ್ಟೋರ್ಸು ಅಂತಾ. ಈ ಅಂಗಡೀಲಿ ಹುರಿದ್ ಜ್ವಾಳ, ಐಸ್ ಕ್ರೀಮು ಎಲ್ಲಾ ಮಾರ್ತಾರೆ. ಇವರ ಅಂಗ್ಡೀಲಿ ಮಾರೋ ತಿನಿಸುಗಳಿಗೆ ಸುತ್ತಾ ಮುತ್ತಾ ಇರೋ ಎಲ್ಲಾ ಅಂಗಡಿಗಳ ತಿನಿಸಿಗಿಂತಾ ಎಚ್ಚು ರುಚಿ. ಅದ್ಯಾಕಪ್ಪಾ ಅಂತೀರಾ? ಈ ಅಂಗಡೀ ತುಂಬಾ ನಮ್ ಕಣ್ಣು ತಂಪಾಗೋ ಅಂತಾ ಸೀನುಗಳೇ ತುಂಬವೆ. ಏ, ರಮ್ಯಾ ರಕ್ಸಿತಾ ಅಂತ ಬಾಯ್ ಬುಡಬೇಡಿ. ಅಂಗಡಿ ತುಂಬಾ ಕನ್ನಡಕ್ಕೆ ಮಾರುಕಟ್ಟೆಲಿ ಇರಬೇಕಾದ ಮಅತ್ವದ ಬಗ್ಗೆ ಬೋಲ್ಡು ಬರ್ದು ನೇತ್ ಆಕ್ಕೊಂಡವ್ರೆ. ಅಚ್ಚರಿ ಪಡಬ್ಯಾಡ್ರಿ. ಯಾಕಂದ್ರೆ ಈ ಅಂಗಡಿ ಯಜಮಾನ್ರು ಕನ್ನಡದ ಬೋ ದೊಡ್ ಅಬಿಮಾನಿ. ಆ ಅಂಗಡಿ ಅತ್ರ ಓಯ್ತಿದ್ ಅಂಗೇ ಮೈಯೆಲ್ಲಾ ಜುಮ್ ಅಂದುಬುಡ್ತದೆ. ಅಂತಾ ಪಸಂದಾಗ್ ಐತೆ ಅಲ್ಲಿ ಕನ್ನಡದ ಸ್ತಾನಮಾನ.

ಕನ್ನಡ ಕಲೀರಿ ಅಂತ ಹೊರಗಿನವ್ರಿಗೆ ಸಂದೇಸ

ಕನ್ನಡದೋರಿಗೆ ’ಅಣ್ಣದೀರಾ, ಇದು ನಿಮ್ಮೂರು ಕಣ್ರಲಾ, ಇಲ್ಲಿ ಯಾಪಾರ ಮಾಡೋಕೆ ಗ್ರಾಅಕರಾಗಿ ಬರೋ ನೀವುಗಳೇ ಯಜಮಾನ್ರುಗಳು. ಇಲ್ಲಿ ಎಲ್ಲಾ ಸೇವೇನ ಕನ್ನಡದಲ್ಲಿ ಪಡ್ಕಳೋಕೆ ನಿಮ್ಗೆ ಹಕ್ಕೈತೆ’ ಅನ್ನೋ ಸಂದೇಶ ಕೊಡ್ತಾ ಔರೆ. ಜೊತೆಗೆ ಕನ್ನಡಾನ ಮಾರುಕಟ್ಟೇಲಿ ಬಳ್ಸಕ್ಕೆ ಕೀಳರಿಮೆ ಪಟ್ಕೋಬೇಡಿ ಅಂತಲೂ ಸಂದೇಸ ಕೊಡ್ತಾ ಔರೆ. ಇಲ್ಲಿ ಒರಗಿಂದ ಬರೋ ಕನ್ನಡ ಓದಕ್ಕೆ ಬರ್ಯಕ್ಕೆ ಬರ್ದೆ ಇರೋರ್ಗೆ ಇಂಗ್ಲಿಸಾಗೆ ಎಚ್ಚರಿಕೆ ಕೊಡ್ತವ್ರೆ. ಕನ್ನಡ ನಾಡಲ್ಲಿ ಎಲ್ಡು ವರ್ಸಕ್ಕಿಂತ ಎಚ್ಗೆ ಕಾಲ ಇರೋರಾದ್ರೆ ಕನ್ನಡ ಕಲ್ತುಕೊಳ್ಳಿ ಅನ್ನೋ ಬೋಲ್ಡು ಹಾಕಿರೋದ್ರು ಜೊತೇಲೆ ’ಕನ್ನಡ ಕಲಿ: ಇಲ್ಲಾ ತೊಲಗು’ ಅಂತಲೂ ಆಕ್ಕೊಂಡವ್ರೆ. ಇವೆಲ್ಲಾ ನೋಡುದ್ರೆ ಆ ಯಜಮಾನರ ಕನ್ನಡ ಪ್ರೇಮಕ್ಕೆ ಒಂದ್ಸಲ ನಮಸ್ಕಾರ ಕಣ್ರಣ್ಣೋ ಅನ್ನದೇ ಇರಕ್ಕೆ ಮನ್ಸಾಗಲ್ಲ. ಒಟ್ನಲ್ಲಿ ಇವ್ರು ಕನ್ನಡದ ಪೂಜಾರಿಗಳು ಅನ್ನಬೌದು.

ಇಂಥಾ ಅಬಿಮಾನೀನೂ ಇಂಗ್ ಯಾಮಾರ್ಸವ್ರೆ!
ಈ ಪಾಟಿ ಕನ್ನಡ ಅಬಿಮಾನ ಮಡಿಕ್ಕಂಡಿರೋ ಸವಿತಾ ಸ್ಟೊರ್ಸ್ ಅಂಗಡಿ ಯಜಮಾನ್ರುಗೂ ಹಿಂದಿ ಬಾಸೆಯೋರು ಯಾಮಾರ್ಸಿರೊ ಬಗೆ ನೋಡ್ರಣಾ. ಹಿಂದಿ ಭಾರತದ ರಾಷ್ಟ್ರಬಾಶೆ ಅನ್ನೋ ಸುಳ್ಳುನ್ನ ಇವ್ರ್ ತಲೆಗೂ ತುಂಬವ್ರೆ. ಅದ್ಕೆಯಾ ಇವ್ರಂಗಡೀಲಿ "ಹಿಂದಿ ಕಲೀರಿ, ಇಲ್ಲಾ ಭಾರತ ಬಿಟ್ಟು ತೊಲಗಿ" ಅನ್ನೋ ಬೋಲ್ಡು ನೇತಾಕವ್ರೆ. ಅದ್ಯಾಕ್ ಯಜಮಾನ್ರೆ ಇಂಗ್ ಆಕ್ಕೊಂಡಿದೀರೀ? ಅಂದ್ರೆ ಹೂ ಇಡೀ ಬಾರತಾನ ಒಂದು ಮಾಡಕ್ಕೆ ಇಂದಿ ಬೇಕು, ಅದು ಬಾರತದ ಲಿಂಕು ಅಂತಾ ಅಂದ್ರು. ನಾನೂನೂವೆ, ಅಲ್ಲಾ ಯಜಮಾನ್ರೆ, ನಾನು ಆಗಾಗ ತಿರುಕ್ಕೋಯಿಲ್ ಕಡೆ ಓಯ್ತಿರ್ತೀನಿ, ನಾನು ತಮಿಳು ಕಲ್ತುಕೊಂಡು ಮಾತಾಡಬೇಕಾ ಅತ್ವಾ ನಾನೂ, ತಿರುಕ್ಕೋಯಿಲ್ ಅಯ್ಯರ್ ಅವ್ರೂ ಇಂದೀ ಕಲ್ತುಕೊಂಡು ಮಾತಾಡ್ಬೇಕಾ ಅಂದ್ರೆ ಏನೂ ಉತ್ರ ಕೊಡ್ದೆ ಮುಂದಿನ್ ಗಿರಾಕಿ ಕಡೆ ಕಣ್ ಹಾಯಿಸ್ಬುಡೋಡಾ ಗುರುಗಳೇ?

ಕನ್ನಡ ಮಾಧ್ಯಮ ಎಡವುತ್ತಿರುವುದು ಯಾಕೆ?

ಕರ್ನಾಟಕದ ಮಣ್ಣಲ್ಲಿ ಹುಟ್ಟಿದ ಪ್ರತಿಯೊಂದು ಮಗೂನೂ ಚಿನ್ನ. ಪ್ರತಿಯೊಂದು ಮಗೂನಲ್ಲೂ ಅದ್ಭುತವಾದ ಪ್ರತಿಭೆ ಅಡಗಿದೆ. ನಮ್ಮ ಮಕ್ಕಳಲ್ಲಿ ಮುಂದಿನ ನೊಬೆಲ್ ಪ್ರಶಸ್ತಿಗಳ್ನ ಗೆಲ್ಲೋರಿದಾರೆ, ಪ್ರಪಂಚವೇ ಬೆರಗಾಗೋಂಥಾ ವೈಜ್ಞಾನಿಕ ಆವಿಷ್ಕಾರಗಳ್ನ ಮಾಡೋರಿದಾರೆ, ಸಾಟಿಯಿಲ್ಲದ ಅರ್ಥಶಾಸ್ತ್ರಪ್ರವೀಣರಾಗೋರಿದಾರೆ...ಕಲಿಕೆಯ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ತುಟ್ಟತುದೀನ ಮುಟ್ಟೋಂಥಾ ಪ್ರಚಂಡರಿದಾರೆ. ನಮ್ಮ ಮಕ್ಕಳಿಗೂ ಇಂಗ್ಲೇಂಡಲ್ಲೋ ಅಮೇರಿಕದಲ್ಲೋ ಹುಟ್ಟೋ ಮಕ್ಕಳಿಗೂ ಪ್ರತಿಭೆಯಲ್ಲಿ ಎತ್ವಾಸ ಏನಾರೂ ಇದ್ದರೆ ಅದು ನಮ್ಮ ಮಕ್ಕಳೇ ಮುಂದಿರೋದು. ಇದಕೆ ಸಂಶಯ ಬೇಡ (ಕಷ್ಟದಲ್ಲಿ ಬೆಳೆದ ಮಕ್ಕಳಿಗೆ ಬುದ್ಧಿ ಜಾಸ್ತಿ).

ನಮ್ಮ ನಾಡಿನ ಮಕ್ಕಳು ಮಾತಾಡೋದು ಕನ್ನಡ. ಔರ್ ತಲೇಲಿ ಸಿಗೋದು ಕನ್ನಡದ ಅಕ್ಷರಾನೇ. ಔರಿಗೆ ಅರ್ಥ ಆಗೋದು ಕನ್ನಡಾನೇ. ಈಗ ಈ ಮಕ್ಕಳ್ನ ಬಳಸಿಕೊಂಡು ನಾಡು ಕಟ್ಟೋದು ಹೇಗೆ? ಈ ಮಕ್ಕಳ ಬುದ್ಧಿವಂತಿಕೇನ ಹಾಲು ಕರೆದಹಂಗೆ ಕರೆಯೋ ವ್ಯವಸ್ಥೆ ಹೇಗಿರಬೇಕು? ಅವರಿಗೆ ಅರ್ಥವಾಗದೇ ಇರೋ ಒಂದು ಭಾಷೆಯಲ್ಲಿ ವಿದ್ಯೆ ಕಲಿಸಕ್ಕೆ ಹೋಗಬೇಕಾ ಆ ವ್ಯವಸ್ಥೆ? ಅಥವಾ ಔರಿಗೆ ಗೊತ್ತಿರೋ ಭಾಷೇಲೇ ತಿಳುವಳಿಕೆ ಹೆಚ್ಚಿಸಿ ಆದಷ್ಟು ಬೇಗ ಅವರೇ ತಿಳುವಳಿಕೆಯ ಎಲ್ಲೆಗಳ್ನೇ ಹೆಚ್ಚಿಸೋಹಾಗೆ ಮಾಡಬೇಕಾ? ಉತ್ತರ ಎರಡನೇದೇ.

ಶಿಕ್ಷಣ ಅಂದ್ರೆ ಮಕ್ಕಳ ಅಂತರಾಳದಲ್ಲಿ ಅಡಗಿಕೊಂಡಿರೋ ಇಡೀ ಜಗತ್ತನ್ನೇ ಬೆಳಗಿಸುವಂತಹ ಪ್ರತಿಭೆಯ ಮೇಲೆ ಕೌಕೊಂಡಿರೋ ಕೊಳೆ ತೆಗೆಯೋದೇ ಹೊರತು ಹೊರಗಿಂದ ಇನ್ನೊಂದಿಷ್ಟು ಕೊಳೆ ತಂದು ಅವರ ಮೇಲೆ ಹೇರೋದಲ್ಲ. ಈ ಪ್ರಕ್ರಿಯೆ ಆ ಮಗು ಮನೇಲಿ ಬಳಸೋ ಭಾಷೆಯಲ್ಲೇ ಸಾಧ್ಯ. ಮಗೂಗೆ ಅರ್ಥವೇ ಆಗದೆ ಇರೋ ಬೇರೆ ಒಂದು ಭಾಷೆಯನ್ನ ಈ ಸಮೀಕರಣಕ್ಕೆ ತಂದ್ರೆ ಅದು ಆ ಮಗುವಿನ ತಿಳುವಳಿಕೆಯ ಮೇಲೆ ಕೂತ್ಕೊಳೋ ಕೊಳೆ ಅಲ್ಲದೆ ಮತ್ತೇನೂ ಅಲ್ಲ.

ಇಷ್ಟೆಲ್ಲ ವೈಜ್ಞಾನಿಕ ಸತ್ಯಗಳಿದ್ದರೂ ಇವತ್ತಿನ ದಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಕುಂಟುಕೊಂಡು ಕುಂಟುಕೊಂಡು ನಡೀತಿರೋದು ಯಾಕೆ? ಈ ವ್ಯವಸ್ಥೆಯಲ್ಲಿ ಏನು ಕುಂದು ಕೊರತೆಗಳಿವೆ ಅಂತ ನೋಡೋಣ.

ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಮೊದಲನೇ ಕಾರಣ

ಹೀಗೆ ಕನ್ನಡ ಮಾಧ್ಯಮ ಎಡವುತ್ತಾ ಇರೋದರ ಒಳಗಿನ ಕಾರಣ ಏನು ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದ್ರೆ ನಮಗೆ ಸಿಗೋ ಮೊದಲನೇ ಉತ್ತರ ಏನಪ್ಪಾ ಅಂದ್ರೆ ನಮ್ಮ ಶಿಕ್ಷಣ ವ್ಯವಸ್ಥೇಲಿ ಯಾವುದನ್ನ ಕನ್ನಡ ಅಂತ ಕಲಿಸುತ್ತಾ ಇದ್ದಾರೋ ಅದು ಸಾಮಾನ್ಯ ಕನ್ನಡಿಗರಿಗೆ ಬಹಳ ದೂರವಾಗಿದೆ. ಉದಾಹರಣೆಗೆ "ಉಪ್ಪು" ಅಂತ ಹೇಳಿಕೊಡೋ ಬದ್ಲು "ಲವಣ" ಅಂತ ಹೇಳಿಕೊಟ್ಟರೆ ಉಪ್ಪಿನ ಉಪ್ಪುತನವೇ ಆ ಲವಣಕ್ಕೆ ಹೊಸದಾಗಿ ಬರಬೇಕಾಗುತ್ತೆ! ಹಾಗೇ "ಕೂಡುವುದು, ಕಳೆಯುವುದು" ಅಂತ ಹೇಳಿಕೊಡೋ ಬದಲು "ಸಂಕಲನ, ವ್ಯವಕಲನ" ಅಂತ ಹೇಳಿಕೊಟ್ಟರೆ ನಿಜಕ್ಕೂ ಕೂಡಕ್ಕೆ ಕಳಿಯಕ್ಕೆ ಬರೋ ಮಕ್ಕಳಿಗೇ ಎಷ್ಟು ಕಷ್ಟ ಆಗಬೇಡ?! "ಎಲೆ" ಮತ್ತು "ಹಸಿರು" ಎರಡೂ ಗೊತ್ತಿರೋ ಮಕ್ಕಳಿಗೆ "ಎಲೆಹಸಿರು" ಅಂತ ಹೇಳಿಕೊಡದೆ "ಪತ್ರಹರಿತ್ತು" ಅಂತ ಹೇಳಿಕೊಟ್ಟರೆ ಕನ್ನಡ ಮಾಧ್ಯಮ ಮಕ್ಕಳಿಗೆ ಕಷ್ಟ ಅನ್ನಿಸುತ್ತಾ ಇರೋದ್ರಲ್ಲಿ ತಪ್ಪೇನಿದೆ? ಆಡುನುಡಿಯ ಪದಗಳ್ನ ಬಿಟ್ಟು ಬಹಳ ದೂರ ಹೊರಟುಹೋಗಿರೋ ಶಿಕ್ಷಣ ವ್ಯವಸ್ಥೆ ನಾಡಿನ ಮೂಲೆಮೂಲೆಗಳಲ್ಲಿ ಅಡಗಿಕೊಂಡಿರೋ ಪ್ರತಿಭೇನ ಯಾವ ಸೀಮೆ ಮುಟ್ಟಾತು?

ಇವತ್ತಿನ ದಿನ ಬರಹದಲ್ಲಿ ಇರೋ ಕನ್ನಡಕ್ಕೆಲ್ಲ ಈ ರೋಗ ಇದೆ. ಆಡುನುಡಿ ಕೈಬಿಟ್ಟಷ್ಟೂ ಅದು ಒಳ್ಳೇ ಕನ್ನಡ ಅಂತ ನಂಬಿಕೊಂಡಿರೋ ಪೆದ್ದರು ನಾವು. ಆದ್ರೆ ಅದು ಬರೀ ತಪ್ಪು. ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರೋ ಪ್ರತಿಭೇನ ಬಳಸಿಕೊಳ್ಳೋ ವ್ಯವಸ್ಥೆ ಆ ಮೂಲೆಮೂಲೆಗಳಲ್ಲಿ ಬಳಕೆಯಾಗೋ ನುಡೀನ ಕೈಬಿಡಕ್ಕಾಗಲ್ಲ. ಶಿಕ್ಷಣ ತಜ್ಞರು ಇದನ್ನ ಮೊದಲು ಮನಗಂಡು ಕನ್ನಡನುಡಿಯನ್ನ ಈ ಬೂಟಾಟಿಕೆಗಳಿಂದ ಸೋಸೋ ಕೆಲಸ ಮಾಡಬೇಕು. ಹೊಟ್ಟೆಗೆ ಅನ್ನ ತರೋ ಕನ್ನಡದ ಮೇಲೆ ಇವತ್ತು ಎಷ್ಟು ಕೊಳೆ ಕೂತಿದೆಯಪ್ಪಾ ಅಂದ್ರೆ ಆ ಕೊಳೆ ತೆಗೆಯೋದಕ್ಕೆ ಒಂದು ಹೊಸ ವಿಶ್ವವಿದ್ಯಾಲಯವೇ ಬೇಕು ಅಂದ್ರೆ ತಪ್ಪಾಗಲಾರದು.

(ಕನ್ನಡಿಗರ ಈ ಪೆದ್ದತನ ನೋಡಿ ಗೆಲಿಲಿಯೋ ತಲೆ ಚೆಚ್ಚಿಕೊಂಡಿದ್ದು ಗೊತ್ತಾ ನಿಮಗೆ? ಇಲ್ಲಿ ಓದಿ)

ಕನ್ನಡ ಮಾಧ್ಯಮ ಎಡವುತ್ತಾ ಇರೋದಕ್ಕೆ ಎರಡನೇ ಕಾರಣ

ಇನ್ನು ಎರಡನೇ ಕಾರಣ ಏನಪ್ಪಾ ಅಂದ್ರೆ ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಪೂರ್ಣ ವ್ಯವಸ್ಥೆ ಆಗಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತಗಳ ವರೆಗೆ ಏನೋ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಿಗತ್ತೆ. ಆದ್ರೆ ಪದವಿ ಪೂರ್ವ ಮತ್ತು ಪದವಿ ಹಂತಗಳ ವರೆಗೆ ತಲುಪೋ ಹೊತ್ತಿಗೆ ಕನ್ನಡ ಕಾಣಸಿಗೋದೇ ಕಡಿಮೆ ಆಗೋಗತ್ತೆ. ವಿಜ್ಞಾನ-ತಂತ್ರಜ್ಞಾನಗಳು, ಅರ್ಥಶಾಸ್ತ್ರ, ಮ್ಯಾನೇಜ್ಮೆಂಟು ಇಂಥವಂತೂ ಕನ್ನಡದಲ್ಲಿ ಸಾಧ್ಯವೇ ಇಲ್ಲ ಅಂತ ನಾವು ಒಪ್ಪಿಕೊಂಡಂತಿದೆ. ಇದು ಇವತ್ತಿನ ಕನ್ನಡದ ಶಿಕ್ಷಣ ವ್ಯವಸ್ಥೆ.

ಏನೋ ಹಳ್ಳೀ ಮುಂಡೇವು ಒಂದಿಷ್ಟು ಅಕ್ಷರ ಕಲೀಲಿ ಹೆಬ್ಬೆಟ್ಟ್ ಒತ್ತೋ ಬದ್ಲು ಅಂತ ವ್ಯವಸ್ಥೆ ಕಟ್ಟಿದಹಂಗಿದೆ! ನಿಜಕ್ಕೂ ನಾಡಿನ ಮೂಲೆಮೂಲೆಗಳಲ್ಲಿರುವವರೆಲ್ಲರ ಪ್ರತಿಭೆ ಬೆಳಕಿಗೆ ಬರಬೇಕಾದ್ರೆ ಕನ್ನಡದ ಶಿಕ್ಷಣ ವ್ಯವಸ್ಥೆ ಅನ್ನೋದು ಬರೀ ಹೆಬ್ಬೆಟ್ ಒತ್ತೋದನ್ನ ಹೋಗಲಾಡಿಸಿದರೆ ಸಾಲದು ಗುರು! ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್, ಇಂಗ್ಲೇಂಡ್ ಮುಂತಾದ ಕಡೆಯೆಲ್ಲ ಹೇಗೆ ತಮ್ಮತಮ್ಮ ನುಡಿಗಳಲ್ಲಿ ಉನ್ನತಶಿಕ್ಷಣಾನೂ ಕೊಡೋ ವ್ಯವಸ್ಥೆಗಳಿವೆಯೋ ಹಾಗೆ ಇಲ್ಲೂ ಬರಬೇಕು. ಇಲ್ಲದೆ ಹೋದರೆ ಎಂದಿಗೂ ನಮ್ಮ ನಾಡಿನ ನಿಜವಾದ ಪ್ರತಿಭೆ ಬೆಳಕಿಗೆ ಬರೋದಿಲ್ಲ.

ನಿಜಕ್ಕೂ ಇದನ್ನ ಮಾಡೋದು ಕಷ್ಟದ ಕೆಲಸವೇನಲ್ಲ. ಆದರೆ ಇದನ್ನ ಮಾಡಬೇಕಾದರೆ ಕನ್ನಡಿಗರಲ್ಲಿ ಬಹಳ ಒಗ್ಗಟ್ಟು ಬೇಕು. ನಿಜವಾದ ಶಿಕ್ಷಣತಜ್ಞರು ಬೇಕು. ನಿಜವಾದ ಉದ್ಯಮಿಗಳು ಬೇಕು. ನಿಜವಾದ ಕಾಳಜಿಯುಳ್ಳ ಸರಕಾರ ಬೇಕು, ಅಷ್ಟೆ.

ಎಡವೋದು ನಿಲ್ಲಲೇಬೇಕು, ಬೇರೆ ದಾರಿಯಿಲ್ಲ

ಆಯಿತು. ಈಗ ನಮಗೆ ಕನ್ನಡ ಮಾಧ್ಯಮ ಶಿಕ್ಷಣವ್ಯವಸ್ಥೆಯಲ್ಲಿರೋ ಕುಂದು ಕೊರತೆಗಳು ಅರ್ಥವಾಗಿವೆ. ಈಗ ಈ ಕುಂದು ಕೊರತೆಗಳ್ನ ಧೈರ್ಯವಾಗಿ ಎದುರಿಸೋ ಮನಸ್ಸು ಕನ್ನಡಿಗರು ಮಾಡಬೇಕು. ಯಾಕೇಂದ್ರೆ ಇದನ್ನ ಎದುರಿಸದೆ ನಾಡಿನ ಪ್ರತಿಭೆಯೆಲ್ಲ ಬೆಳಕಿಗೆ ಬರೋ ಸಾಧ್ಯತೇನೇ ಇಲ್ಲ. ಕನ್ನಡ ನಾಡು ಚಿನ್ನದ ಬೀಡು ಅಂತ ಎಷ್ಟು ಬಡ್ಕೊಂಡ್ರೂ ಏನ್ ಪ್ರಯೋಜನ? ಆ ಚಿನ್ನ ಬೆಳಕಿಗೆ ಬರದೆ ಹೋದ್ರೆ ಅದು ಚಿನ್ನವಾಗಿದ್ರೇನು ತಗಡಾಗಿದ್ರೇನು?

ಈ ನಮ್ಮ ಶಿಕ್ಷಣ ವ್ಯವಸ್ಥೇನ ಜಗತ್ತಿನಲ್ಲಿ ಅತ್ಯುತ್ತಮ ಮಟ್ಟದ ಒಂದು ವ್ಯವಸ್ಥೆ ಮಾಡಕ್ಕೆ ಏನೇನು ಮಾಡಬೇಕು ಅಂತ ನಾವು ಯೋಚಿಸಬೇಕು. ಇವತ್ತಿನ ಇಂಗ್ಲೀಷ್ ಮಾಧ್ಯಮದ ಶಿಕ್ಷಣ ವ್ಯವಸ್ಥೆ ಹೇಗೆ ಬದಲಾಗಬೇಕು? ಇವತ್ತಿನ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆ ನಾವು ಮೇಲೆ ತೋರಿಸಿರುವ ತೊಂದರೆಗಳ್ನ ಬಗೆಹರಿಸಿಕೊಳ್ಳಕ್ಕೆ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಿದರೇ ನಾವು ಬದುಕುದ್ವಿ. ಇಲ್ದೇ ಹೋದ್ರೆ ಎಂದೆಂದಿಗೂ ನಮ್ಮ ನಮ್ಮ ನಾಡಿನ ಮಕ್ಕಳಿಗೆ ಒಳ್ಳೇ ಭವಿಷ್ಯ ಅನ್ನೋದು ಇಲ್ಲ. ಒಳಗೆ ಬುದ್ಧಿವಂತರಾಗಿದ್ದ್ರೇನು ಬಂತು?

ಕಲಿಕೆ, ಬಳಕೆ ಮತ್ತು ಉಳಿಕೆ!


ಕಲಿಕೆ ಕನ್ನಡದಲ್ಲಿ ಇಲ್ದಿದ್ರೆ ಕನ್ನಡದ ಮಕ್ಕಳಿಗೆ ಜ್ಞಾನ ಸಂಪಾದನೆಗೆ, ಪರಿಣಿತಿ ಸಾಧ್ಸಕ್ಕೆ, ಜಾಗತೀಕರಣದ ರಣರಂಗದಲ್ಲಿ ಸಾಧನೆಯ ಶಿಖರವನ್ನೇರಕ್ಕೆ ಆಗೋದೇ ಇಲ್ಲ ಅಂತನ್ನೋದು ಒಂದು ತೂಕವಾದರೆ ಆದ್ರೆ ನಮ್ಮ ಕನ್ನಡ ಕುಲದ ಮೇಲೆ ಇದ್ರಿಂದಾಗೋ ಪರಿಣಾಮಗಳದ್ದೇ ಇನ್ನೊಂದು ತೂಕ.

ಕನ್ನಡ ಓದಲು ಬರೆಯಲು ಬಾರದ ಮುಂದಿನ ಪೀಳಿಗೆ!

ಕಲಿಕೆಯ ಮಾಧ್ಯಮವಾಗದೆ ಕನ್ನಡ ಬರಿಯ ಒಂದು ಭಾಷೆಯಾಗುವುದರಿಂದ ಕನ್ನಡ ನುಡಿಗೆ ಕನ್ನಡಿಗರು ಅಪರಿಚಿತರಾಗ್ತಾ ಹೋಗ್ತಾರೆ. ಶಾಲೆಯಲ್ಲಿ ಇದು ಬರೀ ಒಂದು ಭಾಷೆಯಾಗಿ ಕಲ್ಯೋದ್ರಿಂದ ಇದಕ್ಕಿರೋ ಮಹತ್ವ ಕಡಿಮೆಯಾಗುತ್ತೆ. ಇದೇ ಕಾರಣಕ್ಕೆ ಮಕ್ಕಳು ತಮ್ಮೆಲ್ಲ ಕೆಲಸ ಕಾರ್ಯಗಳಿಗೆ ಇಂಗ್ಲಿಷ್ಅನ್ನು ಅವಲಂಬಿಸತೊಡಗ್ತಾರೆ. ಅಂದ್ರೆ ಮುಂದಿನ ದಿನಗಳಲ್ಲಿ ಕನ್ನಡ ಓದಲು ಬರೆಯಲು ಬಾರದ, ಮಾತಾಡಲು ಮಾತ್ರಾ ಬಲ್ಲ ಜನಾಂಗವೊಂದರ ಹುಟ್ಟಿಗೆ ಇದು ಮೂಲವಾಗುತ್ತೆ. ಇದು ಉತ್ಪೇಕ್ಷೆಯ ಮಾತು, ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುತ್ತೀವಲ್ಲಾ ಅನ್ನೋದಾದ್ರೆ ’ಇಂಗ್ಲಿಷನ್ನು ಕೂಡಾ ಹಾಗೆ ಕಲಿಸಿದ್ರೂ ಅದೆ ಪರಿಣಾಮ ಬೀರುತ್ತಲ್ಲಾ, ಮತ್ಯಾಕೆ ಮಾಧ್ಯಮವಾಗಿ ಇಂಗ್ಲಿಷ್ ಬೇಕು’ ಅನ್ನೋ ಪ್ರಶ್ನೆ ಬರುತ್ತೆ. ಇದರರ್ಥ ಇಷ್ಟೆ, ಮಾಧ್ಯಮವಾಗಿ ಕನ್ನಡವನ್ನು ಬಳಸದ ಮಕ್ಕಳಿಂದ ಕನ್ನಡ ನಿಧಾನವಾಗಿ ದೂರವಾಗ್ತಾ ಆಗ್ತಾ ಮರೆಯಾಗುತ್ತೆ. ಈಗಾಗಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕಲಿತಿರೋ ಇಂಥಾ ಸಾವಿರಾರು ಕನ್ನಡ ಮಕ್ಕಳನ್ನು ನಾವು ನೋಡಬಹುದು. ಇವರಿಗೆ ಕನ್ನಡ ಓದಕ್ಕೆ ಬರದು, ಬರೆಯೋಕಂತೂ ಕೇಳಲೇಬೇಡಿ. ಇಂಥಾ ಒಂದು ಪೀಳಿಗೆ ಇವತ್ತೇ ನಮಗೆ ಕಾಣ್ತಿದೆ ಅಲ್ವಾ? ಇಷ್ಟಕ್ಕೂ ಬದುಕು ಮುಖ್ಯಾರೀ, ಕನ್ನಡ ಓದಲು ಬರೆಯಲು ಕಲಿಯೋದ್ರಿಂದ ಏನು ಮಹಾ ಲಾಭವಿದೆ ಅನ್ನೋ ಜನ್ರೂ ಇರಬಹುದು!

ಕನ್ನಡವೆಂದರೆ ಬರಿ ಸಾಹಿತ್ಯವಲ್ಲ!

ಕನ್ನಡ ಭಾಷೆಗೆ ಭಾಳ ಜನ್ರು ಬರೀ ಸಾಹಿತ್ಯ, ಕಥೆ, ಕವನ, ಮನೇಲಿ ಮಾತಾಡಕ್ಕೆ ಮಾತ್ರಾ ಲಾಯಕ್ಕಾಗಿರೋ ಭಾಷೆ ಅನ್ನೋ ಪಟ್ಟಾನಾ ಈಗಾಗಲೇ ಕಟ್ಟಿದ್ದಾರೆ. ಆ ಕಾರಣದಿಂದಲೇ ಇವತ್ತು ನಮ್ಮ ಪತ್ರಿಕೆಗಳಲ್ಲಿ ಆರ್ಥಿಕ ಸಂಬಂಧಿ ವಿಷಯಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳೂ, ಉದ್ದಿಮೆಗೆ ಸಂಬಂಧಿಸಿದ ವಿಷಯಗಳೂ ಕಡಿಮೆ ಇರೋದು. ಕಥೆ ಕವನ ಅನ್ನೋದಕ್ಕೆ ಮಹತ್ವ ಕಡಿಮೆ ಮಾಡ್ದೆ ನೋಡುದ್ರೂ ಕನ್ನಡ ಭಾಷಾ ಬಳಕೆಯ ವ್ಯಾಪ್ತಿ ಕನ್ನಡ ಮಾಧ್ಯಮವನ್ನು ಕಡೆಗಣ್ಸೋ ಮೂಲಕ ಕಡಿಮೆ ಆಗ್ತಾ ಹೋಗೋದೂ ಸತ್ಯ.

ಹೇಗಂತೀರಾ? ಕನ್ನಡಾನ ಓದಕ್ಕೆ, ಬರೆಯೋಕ್ಕೇ ಬರೋರೆ ಇಲ್ಲದಿದ್ದ ಮೇಲೆ ನಮ್ಮೂರಲ್ಲಿ ಸರ್ಕಾರಕ್ಕೆ ಸಂಬಂಧಿಸಿದಂತೆ ಎಲ್ಲ ಅರ್ಜಿಗಳು ಕನ್ನಡದಲ್ಲಿ ಇದ್ರೇ ತಾನೆ ಏನುಪಯೋಗ ಹೇಳಿ? ನಮ್ಮೂರ ಬಸ್ಸುಗಳ ಮೇಲೆ ಹಾಕೋ ಫಲಕ, ಅಂಗಡಿಗಳಲ್ಲಿ ಹಾಕೋ ಫಲಕಗಳು, ಸರ್ಕಾರಿ ಕಡತಗಳು ಎಲ್ಲಾನೂ ಕನ್ನಡದಲ್ಲಿ ಯಾರಿಗಾಗಿ ಇರಬೇಕು? ಅಂಗಡಿಯೋರು ಅಕ್ಕಿ ಅಂತ ಕನ್ನಡದಲ್ಲಿ ಹಾಕುದ್ರೆ ಯಾರಿಗೆ ಅರ್ಥವಾಗುತ್ತೆ, ರೈಸ್ ಅಂತ ಇಂಗ್ಲಿಷಲ್ ತಾನೆ ಬರೆದರೆ ಅನುಕೂಲ ಆಗೋದು? ಇಲ್ಲ ಇಲ್ಲಾ, ಇವೆಲ್ಲಾ ವ್ಯವಹಾರಗಳನ್ನು ಕನ್ನಡಿಗರು ಕನ್ನಡದಲ್ಲೇ ಮಾಡ್ತಾರೆ, ಬರೀ ಅವರ ಹೊಟ್ಟೆ ಹೊರೆಯಲು ಅವರ ಉದ್ದಿಮೆಗಳಲ್ಲಿ, ಉದ್ಯೋಗಗಳಲ್ಲಿ ಮಾತ್ರಾ ಇಂಗ್ಲಿಷ್ ಬಳುಸ್ತಾರೆ ಅಂತ ಅನ್ನೋದು ಸಿನಿಕತನ ಆಗುತ್ತೆ ಅಷ್ಟೆ.

ಕನ್ನಡ ನುಡಿ ಇನ್ನೆಲ್ಲಿ ಬಳಕೆಯಾಗುತ್ತೆ? ಕನ್ನಡ ಪತ್ರಿಕೆಗಳನ್ನು ಯಾರಾದ್ರೂ ಯಾಕೆ ಓದ್ತಾರೆ? ಕನ್ನಡ ಕಲೀಬೇಕು ಅಂತಾನಾ? ಕನ್ನಡದಲ್ಲಿ ಗ್ರಾಹಕ ಸೇವೇನ ಯಾರಾದ್ರೂ ಯಾಕೆ ಕೊಡ್ತಾರೆ? ಭಾಷೆಯ ಬಳಕೆ ಕಡಿಮೆ ಆಗ್ತಾ ಆಗ್ತಾ... ಆಡುವ ಕನ್ನಡವೂ ಕಲುಷಿತಗೊಳ್ಳುತ್ತಾ ಮರೆಯಾಗ್ತಾ ಹೋಗುವ ಸಾಧ್ಯತೆಗಳೇ ಹೆಚ್ಚು. ಆಗ ಕನ್ನಡ ಭಾಷೇನ ಉಳಿಸಕ್ಕೆ ಮಹಾನ್ ಸಾಹಿತಿಗಳ ಪುಸ್ತಕಗಳನ್ನು ಮುದ್ರಿಸಿ ಕಡಿಮೆ ಬೆಲೆಗಲ್ಲ ಪುಗಸಟ್ಟೆ ಕೊಟ್ರೂ ಓದೋರಿರಲ್ಲ ಆಗ.

ಬಳ್ಸುದ್ರೆ ಮಾತ್ರಾ ಉಳ್ಯೋದು!

ಕನ್ನಡ ಉಳಿಸಲು ಕನ್ನಡಿಗರು ಅಭಿಮಾನ ತೋರಿಸಬೇಕು ಅನ್ನೋ ಮಾತೆಲ್ಲಾ ಅಸಹಜ ಬಡಬಡಿಕೆ ಆಗಬಾರ್ದು ಅಂದ್ರೆ ಎಲ್ಲೆಡೆ ಜನ ಕನ್ನಡಾನ ಬಳಸಬೇಕು. ಜನರ ಸಹಜವಾದ ವ್ಯವಹಾರ ಕನ್ನಡದಲ್ಲಾಗಬೇಕು, ಎಲ್ಲೆಡೆ ಕನ್ನಡ ಡಿಫಾಲ್ಟ್ ಭಾಷೆ ಆಗಬೇಕು. ಹಾಗೆ ಆಗಬೇಕು ಅಂದ್ರೆ ಅದಕ್ಕೆ ಕನ್ನಡ ಬರಬೇಕು. ಇದೆಲ್ಲಾ ಆಗಬೇಕು ಅಂದ್ರೆ ಕಲಿಕೆ ಸಹಜವಾಗೆ ಕನ್ನಡದಲ್ಲಿ ಆಗಿರಬೇಕು. ಇಲ್ಲಾಂದ್ರೆ ಎಷ್ಟೋ ಪದಗಳಿಗೆ ಕನ್ನಡದಲ್ಲಿ ಏನಂತಾರೆ ಅನ್ನೋದೆ ಜನಕ್ಕೆ ಮರೆತು ಹೋದೀತು ಗುರು!

ಕಲಿಕೆ ಮತ್ತು ಕಲಿಕಾ ಮಾಧ್ಯಮ!

ಒಂದು ಭಾಷಾ ಜನಾಂಗದ ಕಲಿಕೆಯ ಭಾಷೆ ಯಾವುದಿರಬೇಕು ಅನ್ನೋ ವಿಷ್ಯ ಚರ್ಚೆಯಾಗ್ತಿರೋದು ಬಹುಶಃ ನಮ್ಮಲ್ಲಿ ಮಾತ್ರಾ. ನಮ್ಮ ಮಕ್ಕಳಿಗೆ ಯಾವುದರಿಂದ ಅನುಕೂಲ ಆಗುತ್ತೋ, ಯಾವುದರಿಂದ ನಮ್ಮ ಜನರ ಏಳಿಗೆ ಸಾಧ್ಯಾನೋ, ಯಾವುದರಿಂದ ನಮ್ಮ ಮಕ್ಕಳ ಬದುಕು ಹಸನಾಗುತ್ತದೋ ಅದೇ ಕಲಿಕಾ ಮಾಧ್ಯಮವಾಗಿರಲಿ ಅಂತ ನಮ್ಮ ಜನ ಬಯಸೋದು ಸಹಜ. ಅದು ಸರಿ ಕೂಡಾ. ಹಾಗಾದ್ರೆ ಕನ್ನಡದ ಮಕ್ಕಳ ಕಲಿಕೆಗೆ ಸಾಧನ ಇಂಗ್ಲೀಷ್ ಆಗಿರಬೇಕೆ ಅಥವಾ ಕನ್ನಡವೇ ಅನ್ನೋದನ್ನು ಸ್ವಲ್ಪ ನೋಡೋಣ್ವಾ ಗುರು.

ಜ್ಞಾನ, ಕಲಿಕೆ ಮತ್ತು ಕಲಿಕಾ ಮಾಧ್ಯಮ!

ಹುಟ್ಟಿದಾಗಿನಿಂದ ಮಗು ತನ್ನ ಸುತ್ತಲಿನ ಪ್ರಪಂಚವನ್ನು ಅರಿಯಲು ಪ್ರಮುಖವಾಗಿ ಅವಲಂಬಿಸೋದು ಅನುಕರಣಾ ವಿಧಾನವನ್ನು. ತನ್ನ ತಾಯ್ತಂದೆಯರನ್ನು, ಸುತ್ತಲಿನ ಸಮಾಜವನ್ನು ಅರ್ಥ ಮಾಡ್ಕೊಳ್ಳೋಕೆ ಮುಖ್ಯ ಸಾಧನ ಭಾಷೆ. ಭಾಷಾ ವಿಜ್ಞಾನಿಗಳ ಅಧ್ಯಯನದಂತೆ ಪ್ರತಿ ಮಗುವೂ ತಾನು ಮೊದಲು ತೆರೆದು ಕೊಳ್ಳುವ ನುಡಿಯ ಸ್ವಭಾವ, ವ್ಯಾಕರಣ, ಬಳಕೆ ಮಾಡೋ ರೀತಿ, ಸೊಗಡನ್ನು ಮೊದಲ ಆರು ವರ್ಷಗಳಲ್ಲಿ ಅತಿ ಸಹಜವಾಗಿ ಕಲಿಯುತ್ತದೆ. ಇನ್ನೆಲ್ಲಾ ಭಾಷಾ ಕಲಿಕೆಯನ್ನೂ ಆ ಅಡಿಪಾಯದ ಅನುಭವದ ಮೇಲೇ ಕಲಿಯುತ್ತವೆ. ಬಾಲ್ಯದಲ್ಲಿ ತಾಯ್ನುಡಿಗೆ ತೆರೆದುಕೊಳ್ಳುವುದರಿಂದಾಗಿ ಪ್ರಪಂಚವನ್ನು ಅರಿಯಲು ಮನುಷ್ಯನಿಗೆ ಇರುವ ಅತ್ಯುತ್ತಮ ಸಾಧನವೆಂದರೆ ತಾಯ್ನುಡಿಯೇ ಆಗಿದೆ. ಹೀಗಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳುವಿಕೆ, ಯೋಚಿಸುವಿಕೆ ಎಲ್ಲವೂ ಆ ಮೊದಲು ಕಲಿಯುವ ಭಾಷೆಯಲ್ಲಿರುವುದು ಸಹಜವಾಗುತ್ತದೆ. ಆ ಕಲಿಕೆ ಬರುವುದು ಹೇಳಿಕೊಡುವುದರಿಂದಲ್ಲ, ಗಮನಿಸುವುದರಿಂದ, ಸುತ್ತಲಿನ ಪರಿಸರದಿಂದ. ಹಾಗಾಗಿ ಕನ್ನಡಿಗರ ಕಲಿಕೆ ಕನ್ನಡದಿಂದಲೇ ಅತ್ಯುತ್ತಮವಾಗಲು ಸಾಧ್ಯ. ಕಲಿಕೆ ಅತ್ಯುತ್ತಮವಾಗುವುದು ಎನ್ನುವುದರ ಅರ್ಥ ಕಲಿಯುವ ವಿಷಯದ ಬಗ್ಗೆ ಆಳವಾದ ಅರಿವು, ವಿಷಯ ಅರ್ಥವಾಗುವುದು. ಮಕ್ಕಳು ಶಾಲೆ ಸೇರುವ ಹೊತ್ತಿಗಾಗಲೇ ಈ ತಾಯ್ನುಡಿಯ ಅಡಿಪಾಯ ಬಿದ್ದಿರುವುದರಿಂದ ಶಾಲಾ ಕಲಿಕೆ ತಾಯ್ನುಡಿಯಲ್ಲಿರುವುದು ಸರಿಯಾದದ್ದು ಎನ್ನುವುದು ಭಾಷಾ ವಿಜ್ಞಾನಿಗಳ ಅನಿಸಿಕೆ.

ಜಾಗತೀಕರಣ ಮತ್ತು ಇಂಗ್ಲಿಷ್

ಕಳೆದೊಂದು ದಶಕದಲ್ಲಿ ಜಾಗತೀಕರಣ ನಮ್ಮೆಲ್ಲರ ಬದುಕಿನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಇದರ ಫಲವಾಗಿ ನಮಗೆ ಸೇವಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿ ದೊರೆಯಲಾರಂಭಿಸಿದೆ. ಹೊಸ ಹೊಸ ಸಂಸ್ಥೆಗಳು ಇಲ್ಲಿ ತಲೆಯೆತ್ತುವ ಮೂಲಕ ನಮ್ಮ ಜನಕ್ಕೆ ಹೆಚ್ಚು ಸಂಬಳದ ಕೆಲ್ಸಗಳು ಸಿಕ್ತಿರೋದೂ ಕಾಣ್ತಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಆ ಕೆಲಸಗಳ ಅವಕಾಶ ತಮ್ಮ ಮಕ್ಕಳಿಗೂ ಸಿಗಲೀ ಅನ್ನೋ ಹಂಬಲ ಇರೋದೂ ಸಹಜ. ಆದ್ರೆ ಈ ದಿನ ನಮ್ಮ ನಾಡಲ್ಲಿ ಬಂದಿರೋ ಉದ್ಯೋಗಗಳು ಹೆಚ್ಚಿನದಾಗಿ ಅಮೇರಿಕಾ, ಇಂಗ್ಲೇಂಡುಗಳಂತಹ ಇಂಗ್ಲಿಷ್ ಭಾಷಾ ನಾಡುಗಳಿಗೆ ಒದಗಿಸುವ ಭಾಷಾ ಆಧಾರಿತ ಸೇವಾ ಉದ್ದಿಮೆಗಳು, ಅದರಲ್ಲೂ ಕಾಲ್ ಸೆಂಟರ್ ಉದ್ದಿಮೆಗಳು. ಇಂದಿಗೂ ನಮ್ಮಿಂದ ಈ ಸೇವೆಯನ್ನು ಬಯಸೋ ಗ್ರಾಹಕರು ಜಪಾನಿಯರಾದರೆ ಜಪಾನಿ ಭಾಷೆಯಲ್ಲೂ, ಜರ್ಮನ್ನರಾದರೆ ಜರ್ಮನಿಯಲ್ಲೂ ಸೇವೆ ಕೊಡಬೇಕಾದದ್ದು ಅನಿವಾರ್ಯವಾಗುತ್ತದೆ. ಈ ಭಾಷಾ ಆಧಾರಿತ ಉದ್ದಿಮೆಗಾಗಿಯೇ ಇಡೀ ಒಂದು ನಾಡಿನ ಕಲಿಕಾ ವ್ಯವಸ್ಥೆಯನ್ನು ಕಟ್ಟುವುದು ಎಷ್ಟು ಸರಿ? ಇಷ್ಟಕ್ಕೂ ಈ ಉದ್ದಿಮೆ ನಮ್ಮ ಪಾಲಾಗಲು ಇರುವ ಮಾನದಂಡವೇ ’ಕನಿಷ್ಟ ಕೂಲಿ’ಯಾಗಿರುವಾಗ ಈ ಉದ್ದಿಮೆಗಳ ಆಯಸ್ಸೆಷ್ಟು? ನೂರು ಕೋಟಿ ಜನ ಮೂವತ್ತು ಕೋಟಿ ಜನರಿಗೆ ಎಷ್ಟು ದಿನಗಳ ಕಾಲ ಸೇವೆ ಒದಗಿಸಬಲ್ಲರು?
ಭಾಷಾ ಆಧಾರಿತ ಸೇವೆ ಒದಗಿಸುವ ಉದ್ದಿಮೆ ಜಾಗತೀಕರಣದಿಂದ ದಕ್ಕಿರೋ ಉಪ್ಪಿನಕಾಯಿಯೇ ಹೊರತು ಊಟವಲ್ಲ. ಆ ಊಟ ಸಿಗಬೇಕಾದ್ರೆ ಬೇಕಿರೋದು ಪ್ರಪಂಚದಲ್ಲಿ ಯಾರಿಗೂ ಕಡಿಮೆಯಿಲ್ಲದ ಉತ್ಪನ್ನಗಳನ್ನು ತಯಾರಿಸಬಲ್ಲ ಶಕ್ತಿ. ಆ ಶಕ್ತಿ ಸಿಗೋದು ಆ ಉತ್ಪನ್ನಗಳನ್ನು ಮಾಡೊ ಪರಿಣಿತಿ, ಅರಿವಿನಿಂದ, ಹೊಸದನ್ನು ಮಾಡಬಲ್ಲ ಯೋಗ್ಯತೆಯಿಂದ. ಆ ಯೋಗ್ಯತೆ ಸಿಗೋದೂ ತಾಯ್ನುಡಿಯಲ್ಲಿ ಕಲಿಯೋದ್ರಿಂದ. ಇದು ಬಿಟ್ಟು ಈಗಿನ ದಾರಿ ಹಿಡಿದರೆ ಅಧೋಗತಿ ಗ್ಯಾರಂಟಿ. ನಮ್ಮ ಸರ್ಕಾರಗಳು ಕನ್ನಡದಲ್ಲಿ ಕಲಿಕಾ ವ್ಯವಸ್ಥೆ ಬಲಪಡಿಸೋಕೆ ಮುಂದಾಗಬೇಕು. ತಾಯ್ತಂದೆಯರ ಮಕ್ಕಳ ಬಗೆಗಿನ ಕಾಳಜಿ ಅರ್ಥ ಮಾಡ್ಕೊಂಡು ಕನ್ನಡದಲ್ಲಿ ಕಲಿಯೋದ್ರಿಂದ ಹೇಗೆ ಮಕ್ಕಳ ಬದುಕು ಹಸನಾಗುತ್ತದೆ, ಹೇಗೆ ಮಕ್ಕಳನ್ನು ಪರಿಣಿತರನ್ನಾಗಿ ಮಾಡಬಹುದು ಅನ್ನೋದನ್ನು ಸಾಧಿಸಿ ತೋರುಸ್ಬೇಕು ಗುರು!

ಕಲಿಕಾ ಮಾಧ್ಯಮ ಮತ್ತು ಏಳಿಗೆ!

ಕರ್ನಾಟಕದಲ್ಲಿ ಅನುದಾನರಹಿತ ಖಾಸಗಿ ಶಾಲೆಗಳು ೧ರಿಂದ ೪ನೇ ತರಗತಿಯ ವರೆಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕಾಗಿಲ್ಲ, ಬೇಕಾದ್ರೆ ಇಂಗ್ಲೀಷಲ್ಲಿ ಕೊಡಬಹುದು ಅಂತ ನಮ್ಮದೇ ಮುಖ್ಯ ನ್ಯಾಯಾಲಯ ತೀರ್ಪು ಕೊಟ್ಟಿದೆ.
ಈ ಸುದ್ದಿ ಹೊರಕ್ ಬರ್ತಿದ್ದಂಗೇ ಇಂಗ್ಲೀಷ್ ಮಾಧ್ಯಮಗಳಿಗೆ ಏನೋ ದೊಡ್ಡ ಹಬ್ಬದ ಊಟ ಬಡಿಸಿದಂಗಾಗಿದೆ ಗುರು! ಅವುಗಳ ಪ್ರಕಾರ ಈ ತೀರ್ಪಿಂದ ಜಾಗತೀಕರಣದ ರಣರಂಗದಲ್ಲಿ ಸಾರ್ವಭೌಮತ್ವ ಪಡ್ಕೊಳಕ್ಕೆ ನಮಗೆ ಇನ್ನು ಒಂದೇ ಗೇಣು ದೂರ ಉಳ್ದಿರೋದು! ಆದ್ರೆ ನಿಜವಾದ ಸಂಗತಿ ಏನಪ್ಪಾ ಅಂದ್ರೆ ಈ ಮಾಧ್ಯಮಗಳಿಗಾದರೂ ಆಗಲಿ, ಆ ಶಾಲಾ ಮಾಲೀಕರಿಗಾದರೂ ಆಗಲಿ ನಾಡಿನ ಏಳಿಗೆ ಅನ್ನೋದು ಬೇಕಾಗೇ ಇಲ್ಲ ಅನ್ನೋದನ್ನ ಮಾತ್ರ ಇದು ತೋರುಸ್ತಿರೋದು. ಯಾಕೆ ಅಂತೀರಾ?

ಶಿಕ್ಷಣ ತಜ್ಞನ ಪೋಜು ಕೊಡೋ ವ್ಯಾಪಾರಿಗಳು!

ಯಾಕೇಂದ್ರೆ ತಾಯ್ನುಡಿಯಲ್ಲೇ ಮಕ್ಕಳಿಗೆ ಕಲಿಕೆ ಅತ್ಯಂತ ಪರಿಣಾಮಕಾರಿಯಾಗಿ ಕೊಡಕ್ಕಾಗೋದು ಅಂತ ಬೀದೀಲ್ ಹೋಗೋ ವಿಜ್ಞಾನಿಗಳೆಲ್ಲಾ ಹೇಳ್ತಿದಾರೆ. ಎರಡಕ್ಕೆ ಎರಡು ಕೂಡುದ್ರೆ ನಾಲ್ಕು ಅಂತ ಇವ್ರಿಗೆ ತಿರ್ಗಾ ಏನಾದ್ರೂ ಹೇಳ್ಕೊಡ್ಬೇಕಾ? ಇಲ್ಲ. ಇವ್ರುಗೂ ಗೊತ್ತಿದೆ ತಾಯ್ನುಡಿಯಲ್ಲಿ ಕಲಿಸಿದರೇ ಕಲಿಕೆ ಚೆನ್ನಾಗಿ ಆಗೋದು ಅಂತ. ಆದ್ರೆ ಕಲಿಕೆ ಆಗೋದಲ್ಲವಲ್ಲ ಇವ್ರಿಗೆ ಬೇಕಾಗಿರೋದು... ಇವ್ರುಗೆ ಬೇಕಾಗಿರೋದು ಬರೀ ತಮ್ಮ ಜೋಬು ತುಂಬಿಸಿಕೊಳೋದು, ಅಷ್ಟೆ. ಅದಕ್ಕೆ ನಾಡು ನಾಯಿ ಪಾಲಾದ್ರೇನು? ಮಕ್ಳು ಅನ್ನದ್ ಬದ್ಲು ಸಗಣಿ ತಿಂದ್ರೇನು? ತಮ್ಮ ಜೋಬು ತುಂಬುದ್ರೆ ಆಯ್ತು, ಅಷ್ಟೆ. ಈ "ಶಿಕ್ಷಣ ತಜ್ಞರ" ಉದ್ದೇಶ ಇಷ್ಟೇ: ಇಂಗ್ಲೀಷೇ ಇವತ್ತಿನ ದಿನ ದೇವ್ರು ಅನ್ನೋ ಸುಳ್ಳು ಬೊಗಳಿ ಪೋಷಕರ್ನ ಮರುಳು ಮಾಡಿ ತಮ್ಮ ವ್ಯಾಪಾರ ಹೆಚ್ಚುಸ್ಕೊಳೋದು.

ಇಂಗ್ಲಿಷ್ ಮಾಧ್ಯಮದೋರ್ ಬೆಂಬಲ ಯಾಕೆ?

ಇನ್ನು ಇಂಗ್ಲೀಷ್ ಮಾಧ್ಯಮಗಳಿಗೆ ಈ ಮಕ್ಕಳೇ ತಾನೆ ಮುಂದೆ ಮಾರುಕಟ್ಟೆ? ಮಕ್ಕಳು ಕನ್ನಡದಿಂದ ದೂರ ಹೋದಷ್ಟೂ ಇಂಗ್ಲೀಷ್ ಮಾಧ್ಯಮಗಳಿಗೆ ಸುಗ್ಗಿ! ಅದಕ್ಕೇ ಇವರಿಬ್ಬರೂ ಸೇರಿ ಮಾಡಿರೋ ಹೀನವಾದ ಕೆಲ್ಸ ಇದು. ಇನ್ನು ಈ ತೀರ್ಪು ಸಿಕ್ಕಮೇಲೆ ಜಾಗತೀಕರಣದ ಮೃಷ್ಟಾನ್ನ ತಿನ್ನಕ್ಕೆ "ಗೋವಿಂದ" ಅನ್ನೋದು ಒಂದು ಬಾಕಿ ಅಂತ ಅನ್ಕೊಂಡಿರೋ ಈ ಪೆದ್ದಮುಂಡೇವಕ್ಕೆ ತಲೇಲಿ ಜೇಡಿಮಣ್ಣೇ ಇರೋದು. ಇವ್ರು ಇಡೀ ಕರ್ನಾಟಕವನ್ನ ಒಂದು ಕಾಲ್-ಸೆಂಟರ್ ಆಗಿಸಕ್ಕೆ ಹೊರಟಿರೋದನ್ನ ನೋಡಿದರೆ ಇವರಿಗೆ ಎಂಜಲೇ ಮೃಷ್ಟಾನ್ನ ಆಗೋಗಿದ್ಯೋ ಏನೋ ಅನ್ನಿಸುತ್ತೆ! ನಿಜವಾದ ಬುದ್ಧಿವಂತರಿಗೆ ಜಾಗತೀಕರಣದ ಮೃಷ್ಟಾನ್ನ ತಿನ್ನಬೇಕಾದರೆ ಬೇಕಾಗಿರೋದು ಇಂಗ್ಲೀಷಲ್ಲ, ನಿಜವಾದ ಜ್ಞಾನ-ವಿಜ್ಞಾನಗಳ ಅರಿವು ಅನ್ನೋದು ಗೊತ್ತು. ಜಾಗತೀಕರಣದ ಲಾಭ ಪಡಿಯಕ್ಕೆ ನಮಗೆ ಬೇಕಾಗಿರೋದು ಡಸ್-ಪುಸ್ ಅಂತ ಇಂಗ್ಲೀಷಲ್ಲಿ ಫೋನ್ ಉತ್ತರಿಸೋರಲ್ಲ, ನಿಜವಾಗಿ ಇಡೀ ನಾಡಿನ ಪ್ರತಿಭೆಯನ್ನೆಲ್ಲ ಸದ್ಬಳಕೆ ಮಾಡಿಕೊಳ್ಳಬಲ್ಲ ಒಂದು ಶಿಕ್ಷಣ ವ್ಯವಸ್ಥೆ. ಆ ಶಿಕ್ಷಣ ವ್ಯವಸ್ಥೆ ಕನ್ನಡದ್ದೇ ಆಗಿರಬೇಕು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಕನ್ನಡದ ಚಿಂತಕರು ಕೈಕಟ್ಟಿ ಕೂರಬಾರದು!

ಇನ್ನು ಕನ್ನಡ ಮಾಧ್ಯಮಗಳು ಮತ್ತೆ ಕನ್ನಡದ "ಚಿಂತಕ"ರೋ - ಈ ತೀರ್ಪು ಕನ್ನಡಕ್ಕೆ ಮರಣಶಾಸನ ಅಂತ ಕರ್ಕೊಂಡು ಕಣ್ಣೀರು ಸುರುಸ್ತಿದಾರೇ ಹೊರತು ಇನ್ನೇನೂ ಮಾಡಕ್ಕಾಗಲ್ಲ ಅನ್ನೋಹಂಗೆ ಕೈಕಟ್ಟಿ ಕೂತ್ಕೊಂಡಿದಾರೆ! ಕನ್ನಡ ಉಳಿಯಕ್ಕಾಗೋದು ಸರ್ಕಾರ ಒತ್ತಡ ತರೋದ್ರಿಂದ ಮಾತ್ರ ಅಂತ ಅನ್ಕೊಂಡಿರೋ ಇವರ ಅಸಹಾಯಕತೆಗೆ ಬಡ್ಕೋಬೇಕು! ಇವರ ಈ ಚಿಂತನೆಯೇ ಸರಿಯಿಲ್ಲ. ಕನಸು ಕಾಣೋ ಯೋಗ್ತೇನೂ ಇಲ್ಲ ಇವ್ರಿಗೆ. ಹೀಗೆ ಹೇಡಿಗಳಂಗೆ ಕಣ್ಣೀರು ಸುರ್ಸೋ ಬದ್ಲು ಕನ್ನಡಾನ ಶಿಕ್ಷಣದ ಎಲ್ಲಾ ಕ್ಷೇತ್ರಗಳಲ್ಲೂ ಮತ್ತು ಎಲ್ಲಾ ಮಟ್ಟಗಳಲ್ಲೂ ಅನುಷ್ಠಾನ ಮಾಡೋ ಸಂಸ್ಥೆಗಳ್ನ ಹುಟ್ಟಾಕೋ ಪ್ರಯತ್ನ ಮಾಡ್ಬೇಕು, ಅದಕ್ಕೆ ಬೇಕಾದ ತರಬೇತಿಗಳ್ನ ಕೊಡಿಸಬೇಕು ಗುರು! ಇಸ್ರೇಲು ಜಪಾನು ಚೈನಾಗಳು ಮಾಡಿದಮೇಲೆ ಕರ್ನಾಟಕದ ಕೈಯಲ್ಲಿ ಇದು ಆಗಲ್ಲ ಅಂತ ಯಾಕ್ ಅನ್ಕೋಬೇಕು? ಇಸ್ರೇಲಲ್ಲಿ ಟೆಕ್ನಿಯಾನ್ ಅಂತ ಒಂದು ವಿಶ್ವವಿದ್ಯಾಲಯ ಇದೆ. ಅದರ ಅದ್ಭುತವಾದ ಇತಿಹಾಸ ಏನಪ್ಪಾ ಅಂದ್ರೆ - ಹೊಸ ಹೀಬ್ರೂ ಭಾಷೆ ಇನ್ನೂ ಎಳವೆಯಲ್ಲಿ - ಅಂದ್ರೆ ದಿನಬಳಕೆಯ ಪದಗಳೂ ಅದರಲ್ಲಿ ಇರದಿದ್ದಾಗ - ಇಸ್ರೇಲಿಗಳು ತಮ್ಮ ಭಾಷೆ ಬಿಟ್ಟುಕೊಡದೆ ಟೆಕ್ನಿಯಾನ್ ನಲ್ಲಿ ಹೀಬ್ರೂ ಮಾಧ್ಯಮದಲ್ಲೇ ಶಿಕ್ಷಣ ಕೊಡಬೇಕು ಅಂತ ಗಟ್ಟಿಯಾಗಿ ಕೂತ್ರು ಗುರು! ಎಷ್ಟು ಸ್ವಾಭಿಮಾನ, ಎಷ್ಟು ಮಾಡೇ ತೀರ್ತೀವಿ ಅನ್ನೋ ಭರವಸೆ! ಇವತ್ತಿನ ದಿನ ಅದೇ ಟೆಕ್ನಿಯಾನ್ ಪ್ರಪಂಚದಲ್ಲಿ ಮುಂಚೂಣಿಯಲ್ಲಿರೋ ತಾಂತ್ರಿಕ ವಿಶ್ವವಿದ್ಯಾಲಯ; ಅದರಲ್ಲಿ ಇವತ್ತಿಗೂ ಹೀಬ್ರೂನಲ್ಲಿ ಜನ ಪಿ.ಎಚ್.ಡಿ. ಮಾಡ್ತಾರೆ ಅಂದ್ರೆ ನಮ್ಮ ಕನ್ನಡಿಗರಿಗೆ ನಂಬಕ್ಕೇ ಆಗಲ್ಲ! ಅವತ್ತು ಹೊಸ ಹೀಬ್ರೂ ಯಾವ ಹೀನಾಯಮಾನ ಸ್ಥಿತಿಯಲ್ಲಿತ್ತೋ ಆ ಸ್ಥಿತಿಯಲ್ಲೇನು ಕನ್ನಡ ಇಲ್ಲ. ಆದ್ರೆ ನಮ್ಮ ಚಿಂತಕರಿಗೆ / ಆಳೋರಿಗೆ ದಿಟ್ಟತನ ಕಡಿಮೆಯಾಗಿರೋದ್ರಿಂದ ಇವತ್ತಿನ ದಿನ ಕನ್ನಡ ಮಾಧ್ಯಮ ಶಿಕ್ಷಣ ಅಂದ್ರೆ ಅದು ಯಾರ್ಗೂ ಬೇಡ್ದೆ ಇರೋದು ಅಂತ ಕನ್ನಡಿಗರು ಅನ್ಕೊಂಡಿರೋದು. ಈ ಒಂದು ಕೀಳರಿಮೆ ನಮ್ನ ಕತ್ತಲೆಯಿಂದ ಕಗ್ಗತ್ತಲೆಗೆ ಕರ್ಕೊಂಡ್ ಹೋಗ್ತಿದೆ, ನಾವು ಸತ್ತ ಹೆಣಗಳಂಗೆ ಹೋಗ್ತಿದೀವಿ, ಅಷ್ಟೆ.
ಸರ್ಕಾರಕ್ಕೆ ದೂರದೃಷ್ಟಿ ಇರ್ಬೇಕು

ಇವತ್ತಿನ ಕೂಳು ಗಿಟ್ಟಿಸಿಕೊಳಕ್ಕೆ ಹುರುಳಿಲ್ಲದ ತತ್ವವಾದ ಸಾರ್ಕೊಂಡು "ಇಂಗ್ಲೀಷ್ ಮಾಧ್ಯಮ! ಇಂಗ್ಲೀಷ್ ಮಾಧ್ಯಮ" ಅಂತ ಬಡ್ಕೋತಿರೋ ಚಿಲ್ಲರೆ ವ್ಯಾಪಾರಿಗಳಿಗೆ ದೂರದೃಷ್ಟಿಯಿಲ್ಲ ಅಂದ್ರೆ ಹಾಳಾಗೋಗ್ಲಿ, ಆದ್ರೆ ಸರ್ಕಾರಕ್ಕಾದರೂ ಭವಿಷ್ಯದ ಬಗ್ಗೆ ಕಾಳಜಿ ಇರಬೇಡವೆ? ನಮ್ಮ ಸರ್ಕಾರಕ್ಕೂ ಕನ್ನಡ ಮಾಧ್ಯಮ ಅಂದ್ರೆ ಬರೀ ಹಳ್ಳೀ ಹೈಕ್ಳಿಗೆ ಅನ್ನಿಸಿದೆಯಲ್ಲ ಇದಕ್ಕೆ ಏನು ಬಡ್ಕೋಬೇಕು? ನಾಡಿನ ಮಕ್ಕಳೆಲ್ಲ ನಿಧಾನವಾಗಿ ಕನ್ನಡ ಕಡೆಗಣಿಸ್ತಾ ಇರೋದನ್ನ ನೋಡ್ಕೊಂಡು ಕೂತಿರೋ ನಮ್ಮ ಸರ್ಕಾರಕ್ಕೆ ಇದರಿಂದ ನಾಡಿನ ವಿನಾಶ ದಿನೇ ದಿನೇ ಆಗ್ತಿರೋದು ಅರ್ಥ ಆಗ್ತಿಲ್ಲವಲ್ಲ ಗುರು?! ಸರ್ಕಾರಾನೂ ಆ ಜುಜುಬಿ ವ್ಯಾಪಾರಿಗಳ ಥರ ಯೋಚ್ನೆ ಮಾಡೋದ್ನ ಬಿಟ್ಟು ಕನ್ನಡದಲ್ಲಿ ಉನ್ನತಶಿಕ್ಷಣ ದೊರಕಿಸಿಕೊಡೋ ದೂರಗಾಮಿ ಯೋಜನೆಗಳಿಗೆ ಕೈ ಹಾಕಬೇಕು, ಹಣ ಹೂಡಬೇಕು. ಸರ್ಕಾರವಾದರೂ ಇವತ್ತಿನ ಕೂಳಿನ ಯೋಚ್ನೆ ಬಿಟ್ಟು (ಇದ್ಯಲ್ಲ, ಇನ್ನೆಷ್ಟು ಬೇಕು?) ದೊಡ್ಡ ಕೆಲಸಕ್ಕೆ ಕೈ ಹಾಕಬೇಕು ಗುರು!

ಕನ್ನಡಿಗನ ಉದ್ಧಾರ ಕನ್ನಡದಿಂದ್ಲೇ ಸಾಧ್ಯ ಅಂತ ಅರ್ಥ ಮಾಡ್ಕೊಂಡಿರೋ ಮುತ್ಸದ್ದಿಗಳು ಎಲ್ಲ ಎಲ್ಲೀಗ್ ಹೋದ್ರು? ಕನ್ನಡದ ಟೆಕ್ನಿಯಾನ್ ಗಳ್ನ ಹುಟ್ಟಾಕ್ತೀನಿ ಅನ್ನೋ ಗುಂಡಿಗೆಯ ಕನ್ನಡಿಗರು ಎಲ್ಲ ಎಲ್ಲೀಗ್ ಹೋದ್ರು? ಎಲ್ಲಾ ಸತ್ತು ಹೆಣಗಳಾಗಿದಾರೋ ಹೇಗೆ? ಅಥವಾ ಎಲ್ಲಾ ತಮ್ಮ ಆತ್ಮಗಳ್ನ ಮಾರ್ಕೊಂಡಿದಾರೋ ಹೇಗೆ?

ಬರೋ ಬಾನುವಾರ ಬರದ್ ಮರೀಬೇಡಿ ಗುರುಗಳೇ!

"ಏನ್ ಗುರು" ಬರೋ ಆಯಿತವಾರ 6ನೇ ತಾರೀಕು ಬೆಳಗ್ಗೆ ಅತ್ತು ಗಂಟ್ಗೆ ಎಲ್ರುನ್ನು ಬೆಟ್ಟಿ ಆಯ್ತೀನಿ, ಎಲ್ರು ಜೊತೆ ಕಾಪಿ ಕುಡೀತೀನಿ ಅಂತ ಕರದವ್ರೆ ಅಂತಾ ಗೊತಾಯ್ತು. ಅಲ್ಲಾ ಮೊನ್ನೆ ಮೊನ್ನೆ ನನ್ನುನ್ನ ತೈಲ್ಯಾಂಡಿಗೆ ಕಳ್ಸಿ, ನಿನ್ನೆ ಮಂಡ್ಯಕ್ ಕಳ್ಸಿದ್ ’ಏನ್ ಗುರು’ ಏಳವ್ರೆ ಅಂತಾ ಎಲ್ಡು ದಿನದಿಂದ ನಾನೂ ಅಂಗೇ ಜಯನಗರ ಕಾಂಪ್ಲೆಕ್ಸ್ ಕಡೆ ಅಡ್ಡಾಡ್ಕಂಡ್ ಬರೋದ್ರಲ್ಲಿ ಇಂಗೆಲ್ಲಾ ಮಾಡವ್ರಲ್ಲಾ... ಇವ್ರು ಅಂತಾ.

ನನ್ನ ಬುಟ್ಟು ಅದೆಂಗ್ಲಾ ಕಾಪಿ ಕುಡ್ಯಕ್ ಆಯ್ತದೆ. ನಾನಿಲ್ದಿದ್ರೆ ಕಾಪೀನೂ ಕರ್ರುಗ್ ಆಯ್ತುದೆ, ಸಕ್ರೆನೂ ಸಪ್ಪುಗ್ ಆಯ್ತುದೆ. ಅದ್ಕೆಯಾ ನಾನೂನೂವೆ ಅವತ್ತು ಬಿ.ಎಂ.ಸಿರ್ಕಂಟಯ್ಯ ಕಲಾಬವನಕ್ಕೆ ಬತ್ತೀನಿ. ಬೆಳ್ಳಂ ಬೆಳ್ಗೆ ಅದೂ ರವಿವಾರ ಯೋಳೋದು ವಸಿ ತಾಪತ್ರಯಾನೆ ಗುರು, ಆದ್ರೂ ನಮ್ ಏನ್ ಗುರು ಓದುಗ್ರುನ್ ಮಾತಾಡ್ಸೋದು ಅಂದ್ರೆ ಅಂತಾ ಅವಕಾಸ ಬುಡಕಾಯ್ತುದಾ? ನೀವೂನು ಬತ್ತೀರಾ ತಾನೇ?

ಅಕ್ರೆಯಿಂದ ಎಂಕ

ಅಂದಾಗೆ ಕಾರ್ಯಕ್ರಮದ ಬಗ್ಗೆ ಇಲ್ಲಿ ಓದಿ: ಬಾ ಗುರು! ಕಾಫಿ ಕುಡಿಯೋಣ!!

ಅನಿವಾಸಿ ಕನ್ನಡಿಗರ ಘಟಕಕ್ಕೆ ಸಲಹೆ


ಯಡಿಯೂರಪ್ಪನವರ ಸರ್ಕಾರ ಹೊರನಾಡ ಕನ್ನಡಿಗ ಮತ್ತು ಕನ್ನಡ ನಾಡಿನ ನಡುವೆ ಸೇತುವೆಯಾಗಿರೋ ಒಂದು ಘಟಕಾನ ಹುಟ್ಟುಹಾಕಿರೋದು ಒಳ್ಳೆ ಬೆಳವಣಿಗೆ ಗುರು! ಈ ಘಟಕದ ಕಾರ್ಯ ವ್ಯಾಪ್ತಿ ಏನು? ಏನೇನು ಕೆಲಸ ಮಾಡಕ್ಕೆ ಇದು ಮುಂದಾಗುತ್ತೆ ಅಂತಾ ಇನ್ನೂ ವಿವರಗಳು ಹೊರ ಬರಬೇಕಿದೆ, ಆದ್ರೂ ಇದು ಕನ್ನಡಿಗರ ಅದ್ರಲ್ಲೂ ಹೊರನಾಡ ಕನ್ನಡಿಗರ ಪಾಲಿಗೆ ಒಳಿತನ್ನು ಮಾಡುವಲ್ಲಿ ಒಳ್ಳೇ ಹೆಜ್ಜೆಯಾಗಿದೆ.

ಹೊರನಾಡ ಕನ್ನಡಿಗರೆಂದರೆ?

ಹೊರನಾಡ ಕನ್ನಡಿಗರು ಅಂದ್ರೆ ಬರೀ ಭಾರತದ ಹೊರಗಿರೋ ಕನ್ನಡಿಗ್ರು ಮಾತ್ರಾ ಅಲ್ಲ, ಅದು ಕನ್ನಡ ನಾಡನ್ನು ಬಿಟ್ಟು ಹೊರಗಿರೋ ಎಲ್ಲಾ ಕನ್ನಡಿಗ್ರು. ಹಾಗಂದುಕೊಂಡು ನೋಡುದ್ರೆ ಹೊರದೇಶದಲ್ಲಿರೋರಿಗಾಗಿ ಒಂದು, ಹೊರ ರಾಜ್ಯದಲ್ಲಿರೋರಿಗೆ ಇನ್ನೊಂದು ಘಟಕಗಳನ್ನು ಮಾಡೋದು ಒಳ್ಳೇದು. ಗಡಿ ಭಾಗಗಳಲ್ಲಿ ಹೊರರಾಜ್ಯದ ಕನ್ನಡಿಗ್ರು ಕನ್ನಡಾನ ಉಳಿಸಿಕೊಳ್ಳಕ್ಕೆ ಎಷ್ಟು ಒದ್ದಾಡ್ತಿದಾರೆ ಅನ್ನೋದನ್ನು ಮಹಾರಾಷ್ಟ್ರ, ಆಂಧ್ರದಲ್ಲಿನ ಕನ್ನಡ ಶಾಲೆಗಳ ಸಮಸ್ಯೆ, ಅಲ್ಲಿನ ಕನ್ನಡ ಪುಸ್ತಕಗಳ ಕೊರತೆಯ ಸಮಸ್ಯೆಗಳು ಎತ್ತಿ ತೋರಿಸ್ತಿವೆ. ಹಾಗಾಗಿ ಹೊರರಾಜ್ಯದ ಕನ್ನಡಿಗರು ತಮ್ಮ ತಾಯ್ನಾಡು ತಾಯ್ನುಡಿಯೊಂದಿಗೆ ಬೇರಿನ ಸಂಬಂಧ ಉಳಿಸಿಕೊಳ್ಳೋಕೆ, ಅಲ್ಲಿನ ಕನ್ನಡ ಸಂಘಗಳು ಇಲ್ಲಿನ ಸರ್ಕಾರದ ಜೊತೆ ನೇರ ಸಂಪರ್ಕ ಸಾಧ್ಸಕ್ಕೆ ಈ ವಿಶೇಷ ಘಟಕ ನೆರವಾಗಬೇಕು. ಹೊರನಾಡಲ್ಲೇ ಹುಟ್ಟಿ ಬೆಳ್ಯೋ ಕನ್ನಡದ ಮಕ್ಕಳು ತಾಯ್ನುಡಿಯ ನಂಟು ಉಳಿಸಿಕೊಳ್ಳಲು, ತಾಯ್ನಾಡಿನಲ್ಲಿ ಅಗತ್ಯ ಸವಲತ್ತು ಸೌಕರ್ಯ ಪಡೆಯಲು ಅನುಕೂಲ ಮಾಡಿಕೊಡಲು ಸಖತ್ ಸಹಾಯ ಮಾಡಬೇಕು. ಎಲ್ಲ ರಾಜ್ಯಗಳಲ್ಲೂ ಒಂದೊಂದು "ತಾಯ್ನಾಡು ಸಂಪರ್ಕ ಕೇಂದ್ರ"ಗಳನ್ನು ಹುಟ್ಟುಹಾಕುದ್ರೆ ಭಾಳಾ ಒಳ್ಳೇದು ಗುರು!

ಹೊರದೇಶಗಳ ಕನ್ನಡಿಗರು

ಹೊರದೇಶಗಳ ಕನ್ನಡಿಗರಿಗೆ ಬಂಡವಾಳ ಹೂಡಿಕೆಗೆ ಉತ್ತೇಜನ ಕೊಡಬೇಕಾದ್ದು ಒಂದು ಸಹಜವಾದ ಚಟುವಟಿಕೇನೆ ಆಗಿದ್ರೂ ಇದು ಬರೀ ಬಂಡವಾಳ ಸೆಳೆಯೋಕೆ ಇರೋ ಘಟಕ ಆಗಬಾರ್ದು ಗುರು. ಅಲ್ಲಿನ ಕನ್ನಡಿಗರ ಸುಖದುಃಖಕ್ಕೆ ಒದಗೋ ಶಕ್ತಿಯಾಗಬೇಕು. ಇಲ್ಲಿಂದ ಹೊರನಾಡಿಗೆ ಹೋಗೋರಿಗೆ ಮಾರ್ಗದರ್ಶನ, ಸಲಹೆ, ತರಬೇತಿ ಕೊಡೋದು, ಅಲ್ಲಿನ ಕನ್ನಡಿಗರು ತಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳಕ್ಕೆ ಸಹಾಯ ಮಾಡೋದೂ ಕೂಡಾ ಈ ಘಟಕದ ಅಂಗವಾಗೋದು ಒಳ್ಳೇದು. ಕನ್ನಡ ನಾಡಿನ ಉದ್ದಿಮೆದಾರರ ಪರವಾಗಿ ಹೊರನಾಡುಗಳಲ್ಲಿ ಬೆಂಬಲವಾಗಿ ನೀಲ್ಲಬೇಕು. ಕನ್ನಡದ ಮಾರುಕಟ್ಟೆ ಬೆಳಸಕ್ಕೆ ಉತ್ತೇಜನ ಕೊಡಲು ಮುಂದಾಗಬೇಕು. ಉದಾಹರಣೆಗೆ ಕನ್ನಡ ಸಿನಿಮಾಗೆ ಮಾರುಕಟ್ಟೆ ಕಟ್ಟಿಕೊಡಲು ಈ ಒಂದು ಘಟಕ ತನ್ನ ಎಲ್ಲ ಸಂಪರ್ಕಗಳನ್ನು ಬಳಸಿಕೊಂಡು ಸಹಾಯ ಒದಗಿಸಿಕೊಡಬಹುದು. ಹೊರದೇಶಗಳ ಕನ್ನಡಿಗರಲ್ಲೇ ಸಂಪರ್ಕ ಜಾಲ ಹುಟ್ಟುಹಾಕಬಹುದು. ಒಟ್ನಲ್ಲಿ ಹೊರನಾಡ ಕನ್ನಡಿಗರಿಗೆ ತಾಯ್ನಾಡಿನ ಜೊತೆ ಇರೋ ಸಂಬಂಧವನ್ನು ಉತ್ತಮಗೊಳಿಸೋದೂ, ತಾಯಿಬೇರಿನ ನಂಟನ್ನು ಗಟ್ಟಿ ಮಾಡೋದೂ ಈ ಘಟಕದ ಮೂಲೋದ್ದೇಶವಾಗಲಿ. ಈ ಘಟಕದ ಕೆಲಸದ ವ್ಯಾಪ್ತಿ ಸಮಗ್ರವಾಗಿರಬೇಕಾದ್ದು ನಾಡಿನ ನಾಳಿನ ಒಳಿತಿನ ದೃಷ್ಟಿಯಿಂದ ಸಖತ್ ಅಗತ್ಯವಾದದ್ದು ಗುರು!
Related Posts with Thumbnails