ಕನ್ನಡ ನುಡಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಭಾಷಾ ವಿಜ್ಞಾನಿ ಶ್ರೀ ಶಂಕರ ಭಟ್ ಅವರ, ನಾಡಿನ ಜನರಲ್ಲಿ ಬಹಳ ಕುತೂಹಲ ಮೂಡಿಸಿದ್ದ ಹೊಸ ಹೊತ್ತಿಗೆ ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ಇದೀಗ ಮಾರುಕಟ್ಟೆಗೆ ಬಂದಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರುವ ಈ ಸಂದರ್ಭದಲ್ಲೇ ಭಟ್ಟರ ಹೊಸ ಪುಸ್ತಕ ಬಿಡುಗಡೆಯಾಗಿರುವುದು ನಮ್ಮ ನುಡಿ ಎತ್ತ ಕಡೆಗೆ ಸಾಗಬೇಕೆಂಬ ದಾರಿತೋರುಕವಾಗಿದೆ.
ಕನ್ನಡದ್ದೇ ಹೊಸಪದಗಳನ್ನು ಹುಟ್ಟಿಸುವ ಬಗೆ!
ಈ ಹೊತ್ತಿಗೆ ಭಟ್ಟರೇ ಹೇಳುವಂತೆ ಇಂಗ್ಲಿಷ್ ಭಾಷೆಯ ಪದಗಳನ್ನು ಬಲ್ಲ ಕನ್ನಡಿಗರು, ಅದಕ್ಕೆ ಸಮಾನವಾದ ಕನ್ನಡದ್ದೇ ಆದ ಪದಗಳನ್ನು ಹುಡುಕಲು ಸಹಕಾರಿಯಾಗಿದೆ. ಇದರ ಮೊದಲಲ್ಲೇ ಕನ್ನಡದ ಪದಗಳನ್ನು ಕಟ್ಟುವ ಬಗೆಯನ್ನು ವಿವರಿಸಲಾಗಿದೆ. ಕನ್ನಡದ ನಾಮಪದ (ಹೆಸರುಪದ), ಕ್ರಿಯಾಪದ(ಎಸಗುಪದ), ಗುಣವಾಚಕ (ಪರಿಚೆಪದ), ಪ್ರತ್ಯಯ (ಒಟ್ಟು)ಗಳನ್ನು ಬಳಸಲು ಕನ್ನಡದಲ್ಲೇ ಇರುವ ರೀತಿ ನೀತಿಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ. ಇಂದಿನ ದಿನ ಕನ್ನಡದ ಅನೇಕ ಪಂಡಿತರೂ, ಬರಹಗಾರರೂ ಸಾಕಷ್ಟು ಪದಗಳನ್ನು ಹುಟ್ಟು ಹಾಕಿದ್ದು ಅವು ಕನ್ನಡದ್ದೂ ಆಗಿಲ್ಲದೆ, ಸಂಸ್ಕೃತದ್ದೂ ಆಗಿಲ್ಲದೆ ತ್ರಿಶಂಕು ಪದಗಳಾಗಿವೆ. ಕನ್ನಡದ ಬರಹಗಳೆಲ್ಲಾ ಇಂತಹ ತ್ರಿಶಂಕು ಪದಗಳಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ಭಟ್ಟರು ಈ ಪದಕೋಶದ ಬಗ್ಗೆ ಬರೆಯುತ್ತಾ ಹೀಗೆನ್ನುತ್ತಾರೆ :
ಕನ್ನಡದವೆಂದು ಹೇಳಿಕೊಳ್ಳುತ್ತಿರುವ ಪಾರಿಬಾಶಿಕ ಪದಕೋಶವೊಂದನ್ನು ಬಿಡಿಸಿ ನೋಡಿದೆವಾದರೆ ಅದರಲ್ಲಿ ನೂರಕ್ಕೆ ಎಂಬತ್ತರಶ್ಟು (ಇಲ್ಲವೇ ಅದಕ್ಕಿಂತಲೂ ಹೆಚ್ಚು) ತ್ರಿಶಂಕು ಪದಗಳಿರುವುದನ್ನು ಕಾಣಬಹುದು. ಅವುಗಳಿಂದಾಗಿ ಇವತ್ತು ಕನ್ನಡದಲ್ಲಿ ಬರೆದ ವಿಜ್ನಾನದ ಬರಹಗಳನ್ನು ಅರ್‍ತ ಮಾಡಿಕೊಳ್ಳುವುದು ಹೆಚ್ಚಿನ ಕನ್ನಡಿಗರಿಗೂ ತುಂಬಾ ಕಶ್ಟವೆಂದೆನಿಸುತ್ತದೆ. ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎಂಬ ಅನಿಸಿಕೆ ಹಲವು ಪಂಡಿತರಲ್ಲಿರುವುದು ಈ ರೀತಿ ಸಂಸ್ಕ್ರುತದ ಮೊರೆಹೊಕ್ಕು ತ್ರಿಶಂಕು ಪದಗಳನ್ನು ಉಂಟುಮಾಡುತ್ತಿರುವುದಕ್ಕೆ ಒಂದು ಕಾರಣ. ಸಂಸ್ಕ್ರುತ ಪದಗಳಿಗಿರುವ ಮರ್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿರುವ ಕೀಳರಿಮೆ ಇನ್ನೊಂದು ಕಾರಣ.
ಇವೆರಡೂ ತಪ್ಪು ಅನಿಸಿಕೆಗಳು. ಆದರೆ ಇವುಗಳಿಂದಾಗಿ ಇವತ್ತು ಕನ್ನಡದ ಮೇಲೆ ಸಂಸ್ಕ್ರುತದ ಹೊರೆ ಹೆಚ್ಚುತ್ತಿದ್ದು, ಕನ್ನಡ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ್‍ತವಾಗದ ಕಗ್ಗಂಟುಗಳಾಗುತ್ತಿವೆ. ಹೆಚ್ಚು ಹೆಚ್ಚು ತ್ರಿಶಂಕು ಪದಗಳನ್ನು ಬಳಸಿರುವ ಬರಹಗಳು ತಮ್ಮ ಓದುಗರನ್ನು ಬರೇ ’ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ತಮ್ಮ ಮೂಲಗುರಿಯನ್ನು ತಲುಪುವುದೇ ಇಲ್ಲ.
ಒಂದು ಹೊಸ ಮನೆಗೆ, ಹೊಸ ಅಂಗಡಿಗೆ ಇಲ್ಲವೇ ಹೊಸ ಉತ್ಪಾದನೆಗೆ ಹೆಸರು ಕೊಡಬೇಕಾದಾಗ ಕನ್ನಡದವೇ ಆದ ಪದಗಳು ಅವರ ಕಣ್ಣಿಗೆ ಬೀಳುವುದೇ ಇಲ್ಲ ಎಂಬುದನ್ನು ಗಮನಿಸಿದೆವಾದರೆ ನಿಜಕ್ಕೂ ಕನ್ನಡಕ್ಕೆ ಎಂತಹ ಹೀನಾಯ ಸ್ತಿತಿ ಬಂದೊದಗಿದೆಯೆಂಬುದನ್ನು ಊಹಿಸಬಹುದು. ನಮಗೆ ಬೇಕಾಗಿಬರುವ ಎಂತಹ ಪದಗಳನ್ನು ಬೇಕಿದ್ದರೂ ಸಂಸ್ಕ್ರುತದ ಸಹಾಯವಿಲ್ಲದೆ ಕನ್ನಡದಲ್ಲೇನೆ ಉಂಟುಮಾಡಬಲ್ಲೆವು. ಅಂತಹ ಕಸುವು ಕನ್ನಡಕ್ಕಿದೆ. ಇದನ್ನು ತೋರಿಸಿಕೊಡುವುದಕ್ಕಾಗಿಯೇ ನಾನು ಈ ಪದಕೋಶವನ್ನು ತಯಾರಿಸಲು ಹೊರಟಿದ್ದೇನೆ.
ಶಂಕರ ಭಟ್ ಅವರ ಈ ಹೊಸ ಹೊತ್ತಿಗೆ ಕನ್ನಡ ಭಾಷಾ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ. ಇದು ಕನ್ನಡ ನುಡಿ ಸಾಗಬೇಕಾದ ದಾರಿಯನ್ನು ನಿಚ್ಚಳವಾಗಿ ತೋರುತ್ತಿದೆ. ಇಂತಹ ಹೊತ್ತಿಗೆ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಲಿ ಅನ್ನೋದು ನಮ್ಮಾಸೆ. ಬಾಶಾ ಪ್ರಕಾಶನದೋರು ಹೊರತಂದಿರೋ ಈ ಹೊತ್ತಿಗೆ ಎಲ್ಲ ದೊಡ್ಡ ಪುಸ್ತಕದಂಗಡಿಗಳಲ್ಲಿ ದೊರೆಯುತ್ತಿದೆ ಗುರು!