ಬೆಳಗಾವೀಲಿ ಕಳಕೊಂಡಿರೋ ನೆಲೇನ ಹೆಂಗಾದ್ರೂ ಪಡ್ಕೊಬೇಕು ಅಂತಾ ದಿಕ್ಕೆಟ್ಟಂಗೆ ಆಡ್ತಿರೋ ಎಂ.ಇ.ಎಸ್ಸು ಮಹಾಮೇಳಾವ ಮಾಡಕ್ ಹೋಗಿದ್ದೂ, ಅದಕ್ಕೆ ಅವಕಾಶ ಸಿಗದೇ ಇದ್ರೂ ಮಾಡೇ ಮಾಡ್ತೀವಿ ಅಂತ ಭಾರೀ ಸಂಖ್ಯೆಯಲ್ಲಿ ತಂಡಗಳಾಗಿ ಲೆಲೆ ಮೈದಾನಕ್ಕೆ ನುಗ್ಗಲು ಹೋಗಿ ಬಂಧನಕ್ಕೆ ಒಳಗಾಗಿದ್ದೂ (ಒಂದುನೂರಾ ಐವತ್ಮೂರು ಜನ ಅಂತಿದೆ 16.01.2009ರ ವಿಜಯಕರ್ನಾಟಕದ ವರದಿ) ಆಗ್ತಿದ್ದಂಗೇ ಇನ್ನೊಂದೆರಡು ಹಳೇ ವರಾತಾನ್ನೇ ಹೊಸದಾಗಿ ತೆಗ್ಯಕ್ಕೆ ಶುರು ಹಚ್ಕೊಂಡವ್ರೆ.
ಮೊದಲನೆ ವರಾತ : "ಕರ್ನಾಟಕದಲ್ಲಿ ಮರಾಠಿಗರ ಮೇಲೆ ದೌರ್ಜನ್ಯ"
ಇದು ಕನ್ನಡದೋರನ್ನು ಇಡೀ ಪ್ರಪಂಚದ ಕಣ್ಣಲ್ಲಿ ಅಪರಾಧಿಗಳಾಗಿ ನಿಲ್ಲಿಸೋ ತಂತ್ರ! ಮಾನವ ಹಕ್ಕುಗಳ ಉಲ್ಲಂಘನೆ ಆಗ್ತಿದೆ, ಗಡಿ ನಾಡಿನ ಮರಾಠಿಗರ ಮೇಲೆ ದೌರ್ಜನ್ಯ ನಡೀತಿದೆ ಅಂತಾ ಸೂರು ಕಿತ್ತೋಗೋ ಹಾಗೆ ಕೀರಲೋದು ಇದರ ರೀತಿ. ಎಂ.ಇ.ಎಸ್ಸಿಗೆ ಈ ಕೆಲಸಕ್ಕೆ ಸಹಯೋಗಿ ’ಶಿವಸೇನೆ’ ಅನ್ನೋ ಸಿದ್ಧಾಂತದ ಸ್ಪಷ್ಟತೆ ಇಲ್ಲದ ಪಾರ್ಟಿ. ಪಾಪಾ! ಮರಾಠಿ ಮತ್ತು ಮರಾಠಿಗರ ಅಸ್ತಿತ್ವಕ್ಕೆ ಯಾವುದರಿಂದ ತೊಂದರೆಯಾಗ್ತಿದೆ? ಯಾವುದರ ವಿರುದ್ಧ ಹೋರಾಡಬೇಕು? ಯಾವುದರ ಪರ ಹೋರಾಡ್ಬೇಕು? ಅನ್ನೋದು ತಿಳೀದೆ ಗೊಂದಲದ ಗೂಡಾಗಿರೋ ಪಾರ್ಟಿ ಇದು. ಇದರ ಮುಖಂಡರಾಗಿರೋ ರಾಮದಾಸ್ ಕದಂ ಕನ್ನಡದವರ ಮೇಲೆ ಹಲ್ಲೆ ಮಾಡ್ತೀವಿ, ಅವರ ಹೋಟೆಲ್ ಸುಡ್ತೀವಿ ಅಂತಾ ಇಲ್ಲಿ ಬಂದು ಹೊಯ್ಕೊಂಡು ಹೋದ ಮಾರನೇ ದಿನಾನೆ ಕನ್ನಡನಾಡಿನ ಬಸ್ಸುಗಳನ್ನು ಸುಟ್ಟ ಘಟನೆ ನಡೆದಿದೆ. ಇಷ್ಟಕ್ಕೂ ಈ ಹೈಕ್ಳು ತಾವು ಹೇಳ್ತಿರೋ ಹಾಗೆ ಕರ್ನಾಟಕದಲ್ಲಿ ಯಾವ ಮರಾಠಿಗನ ಮೇಲೆ ದೌರ್ಜನ್ಯ ನಡೆದಿದೆ? ಯಾವ ಸಾಂವಿಧಾನಿಕ ಹಕ್ಕನ್ನು ಮರಾಠಿಗರಿಂದ ಕಸಿಯಲಾಗಿದೆ? ಅನ್ನೋದನ್ನು ಮಾತ್ರಾ ತೋರಿಸಿಕೊಡಲಾರರು. ಇದರ ಜೊತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿ ಕಡ್ಕೋತೀವಿ ಅನ್ನೋ ಬೆದರಿಕೆ ಬೇರೆ. ಕರ್ನಾಟಕದ ಬಿಜೆಪಿ ಪ್ರತಿಕ್ರಿಯೆ ಏನೋ ಅನ್ನೋ ಕುತೂಹಲ ಇದ್ದೇಇದೆ. ಇದೇನು ’ಕೇಂದ್ರಕಛೇರಿಯಿಂದ ಆದೇಶ ಬಂತು, ಬೆಳಗಾವಿ ಮಹಾರಾಷ್ಟ್ರದಲ್ಲಿದ್ರೇನು? ಕರ್ನಾಟಕದಲ್ಲಿದ್ರೇನು? ಎರಡೂ ಭಾರತ ತಾನೇ?’ ಅಂತಾ ಮಹಾರಾಷ್ಟ್ರಕ್ಕೆ ಬಿಟ್ಕೊಡ್ತೀವಿ ಅನ್ನುತ್ತಾ? ಅಂತ ಕಾದು ನೋಡಬೇಕು.
"ರಾಷ್ಟ್ರೀಯ ಪಕ್ಷಗಳಿಂದ ನಮ್ಮ ನಾಡಿನ ಉದ್ಧಾರ ಸಾಧ್ಯಾ ಇಲ್ಲಾ, ಇವ್ರುಗಳು ಪ್ರಾದೇಶಿಕ ಪಕ್ಷಗಳನ್ನು ಬೆಳ್ಯಕ್ಕೆ ಬಿಡಲ್ಲಾ" ಅಂತಾ ಗೋಳಾಡ್ತಾ ನಮ್ದು ಪ್ರಾದೇಶಿಕ, ನಮ್ದು ಪ್ರಾದೇಶಿಕ ಅಂತಾ ಅವಕಾಶ ಸಿಕ್ಕಾಗೆಲ್ಲಾ ಹಾಡೋ ಜೆಡಿಎಸ್ಸಿನ ಕುಮಾರಣ್ಣೋರು, ನಾಡ ಹಿತಕ್ಕಿಂತ ಬಿಜೆಪಿನ ಹಣಿಯೋದೇ ಮುಖ್ಯ ಅದಕ್ ಇದೇ ಸಮಯ ಅಂತಾ ’ಎಂ.ಇ.ಎಸ್ ಮಹಾಮೇಳಾವಕ್ಕೆ ಅನುಮತಿ ಕೊಡದೇ ಇದ್ದಿದ್ದಕ್ಕೇ ಹೀಗಾಯ್ತು’ ಅಂತ ಬೂಸಿ ಬಿಡ್ತಿದಾರೆ. ಕರ್ನಾಟಕದಲ್ಲೇ ಕರ್ನಾಟಕ ಸರ್ಕಾರದ ಅಧಿವೇಶನಕ್ಕೇ ಸವಾಲು ಹಾಕಿ, ನಿಮ್ ನಾಡನ್ನು ಒಡೀತೀವಿ ಅನ್ನೋ ಸಮಾವೇಶಕ್ಕೆ ಅನುಮತಿ ಕೊಡಬೇಕು ಅನ್ನೋ ಇವರ ರಾಜಕೀಯ ಪ್ರಬುದ್ಧತೆಗೆ ಬಡ್ಕೋಬೇಕು. ಇಂಥಾ ಸಮಯದಲ್ಲೂ ಒಗ್ಗಟ್ಟಾಗಿ ಇರೋದ್ ಬಿಟ್ಟು ಅವರಿವರ ಕಾಲೆಳೆಯೋ ರಾಜಕೀಯದಾಟಕ್ಕೆ ಏನನ್ನಬೇಕು ಗುರು?
ಎರಡನೇ ವರಾತ : "ಇದು ಮರಾಠಾ ಬಾವುಟವಲ್ಲ! ಭಗವಾಧ್ವಜ ಅನ್ನೋದು"
ಇವ್ರು ಬೆಳಗಾವೀಲಿ ಎಂ.ಇ.ಎಸ್ ಸಮ್ಮೇಳನ ಆದ್ರೆ ಹಾರಿಸೋದು ಇದೇ ಬಾವುಟ! ಕಿತ್ತೂರು ರಾಣಿ ಚನ್ನಮ್ಮನ ಕೈಲಿದ್ದ ಕನ್ನಡ ಬಾವುಟಾನ ಕಿತ್ತು ಎಸೆದು ಚನ್ನಮ್ಮನ ಕೈಗೆ ಸಿಗ್ಸೋದೂ ಇದೇ ಬಾವುಟ! ಕನ್ನಡದೋರು ಹಳದಿ ಕೆಂಪು ಬಾವುಟ ಹಿಡಿದು ನಡೆದರೆ ಅವರ ಮೇಲೆ ಹೊಡದಾಟಕ್ಕೆ ಬಂದಾಗ ಹಿಡ್ಕೊಂಡು ಬರೋದು ಇದೇ ಬಾವುಟ! ಕನ್ನಡಿಗರ ಹೋಟೆಲ್ಲನ್ನು ಮಹಾರಾಷ್ಟ್ರದಲ್ಲಿ ಸುಡ್ತೀವಿ ಅಂತ ರಣಘೋಷ ಮಾಡೋವಾಗ ಕೈಲಿ ಹಿಡ್ಕೊಳ್ಳೋದೂ ಇದೇ ಬಾವುಟ!!! ಇದನ್ನು ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಹಾರಿಸಿದ್ದು ಕನ್ನಡಿಗರ ಮೇಲೆ ಮರಾಠಿಗರ ಮೇಲುಗೈಯ್ಯಿನ ಪ್ರತೀಕವಾಗಿಯೇ? ಈಗ ಈ ಬಾವುಟಾನ್ನ ಇಳಿಸಿ ಕನ್ನಡ ಬಾವುಟ ಹಾರುಸ್ತೀವಿ ಅಂದ್ರೆ ’ಇದು ಹಿಂದುತ್ವದ ಬಾವುಟ, ಮುಟ್ಟುದ್ರೆ ಕೈ ಕಡೀತೀವಿ’ ಅಂತಾ ಬಣ್ಣ ಬದ್ಲಾಯ್ಸಿ ಹೀಗೆ ಕೇಳೋರು ಎಂ.ಇ.ಎಸ್ ವಿರೋಧಿಗಳಲ್ಲಾ, ಹಿಂದುತ್ವದ ವಿರೋಧಿಗಳು ಅನ್ನೋ ಬಣ್ಣ ಕೊಡೋ ಕುತಂತ್ರ ಮಾಡ್ತಾರೆ.
ಈ ಕುತಂತ್ರವನ್ನು ಮಣೀಸಲೇ ಬೇಕು ಗುರು!
ಎಂ.ಇ.ಎಸ್ ಮತ್ತು ಶಿವಸೇನೆಯ ನಾಯಕರು ಬಳುಸ್ತಾ ಇರೋ ಈ ತಂತ್ರಗಳನ್ನು ಕರ್ನಾಟಕದೋರು ಸರಿಯಾಗಿ ಬಗ್ಗು ಬಡಿಯಲೇ ಬೇಕಾಗಿದೆ. ರಾಜ್ಯ ಬಿ.ಜೆ.ಪಿ ನಾಯಕ್ರು ಈ ವಿಷಯದಲ್ಲಿ ಕೇಂದ್ರದಿಂದ ಬರೋ ಸೂಚನೆಗಳನ್ನು ಪಾಲಿಸೋ ಮೊದಲು ತಾವು ಮೊದಲು ಕನ್ನಡಿಗರು ಅನ್ನೋದನ್ನು ನೆನಪಿಟ್ಟುಕೋ ಬೇಕಾಗಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿಯಿಂದ 48 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯ ಅಂತಾ ಬಿ.ಜೆ.ಪಿ ಕೇಂದ್ರ ಕಛೇರಿಯೋರು 28 ಸ್ಥಾನ ಗಳಿಸಲು ಆಗೋ ಕರ್ನಾಟಕದ ಬಿಜೆಪಿಯೋರಿಗೆ ಸ್ವಲ್ಪ ತಗ್ಗಿ ಬಗ್ಗಿ ನಡೀರಿ ಅನ್ನದ ಹಾಗೆ ನೋಡ್ಕೊಳ್ಳೋದೂ ಇಲ್ಲಿ ನಾಯಕರ ಹೊಣೆಗಾರಿಕೆ ಗುರು! ಇದನ್ನು ನಮ್ಮ ಯಡ್ಯೂರಪ್ಪನವ್ರೂ, ಅನಂತಕುಮಾರ್ ಅವ್ರೂ ಅರಿತೇ ಇರ್ತಾರೆ ಅಂತ ನಂಬೋಣ. ಇನ್ನು ಕನ್ನಡಿಗರ ಮೇಲಿನ ಅಪಪ್ರಚಾರಕ್ಕೆ ಸೂಕ್ತವಾದ ಉತ್ತರವನ್ನು ನಾಡು ಕೊಡಬೇಕಾಗಿದೆ. ಇದೆಲ್ಲಾ ಬರೀ ಎಂ.ಇ.ಎಸ್ ಮತ್ತು ಶಿವಸೇನೆಗಳ ಕಿತಾಪತಿ ಅಂತಾ ಜಗತ್ತಿಗೆ ತೋರಿಸಿಕೊಡಬೇಕಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಹಾರ್ತಿರೋ ಬಾವುಟದ ಬಣ್ಣ ಯಾವುದೇ ಆಗಿರಲೀ ಅದನ್ನು ಅಲ್ಲಿ ನೆಟ್ಟಿರುವುದು ಆ ಜಾಗದ ಯಜಮಾನಿಕೆ ಮರಾಠಿಗರದ್ದು ಅಂತಾ ಸಾರಕ್ಕೆ ಅನ್ನೋದನ್ನು ಕನ್ನಡದ ಜನ ಅರಿಯಬೇಕಾಗಿದೆ ಗುರು!
5 ಅನಿಸಿಕೆಗಳು:
ಸಖತ್ತಾಗಿ ಹೇಳಿದೀರಾ ಗುರುಗಳೇ,
ನಾವು ತೆಗುದ್ರೆ ಅದು ಬೆಳಗಾವಿ ನಗರ ಪಾಲಿಕೆ ಮೇಲಿರೋ ಬಾವುಟ ಭಗವಾಧ್ವಜ ಅಂತಾ ಅನ್ನೋದಾದ್ರೆ ಮರಾಠಿಗರು ಸುಡ್ತಾರಲ್ಲಾ ಕನ್ನಡಧ್ವಜ ಅದು ಅರಿಸಿಣ ಕುಂಕುಮದ ಪ್ರತೀಕ ಅಲ್ವಾ? ಇದೂ ಕೂಡಾ ಹಿಂದುತ್ವಕ್ಕೆ ಅಪಮಾನ ಮಾಡಿದಂಗೇ ಅಲ್ವಾ? ಈಗ ಎಂ.ಇ.ಎಸ್ಸಿನೋರಾ ಕೈಗಳನ್ನೂ ಕಡೀತೀವಿ ಅಂತ ಶಿವಸೇನೆ ಹೇಳಲಿ ನೋಡೋಣಾ...
ಶಾಮ್
ಕರ್ನಾಟಕದಲ್ಲಿ... ಕನ್ನಡ ಬಾವುಟ ಹಾರ್ಸ್ತಿವಿ ಅಂದ್ರೆ ಕೈ ಕತ್ತರಸ್ತೀವಿ ಅಂತ ರಾಜಾ ರೋಷವಾಗಿ ಹೇಳ್ತಾರೆಲ್ಲ ಇದು ಕಾನೂನು ಉಲ್ಲಂಘನೆ ಅಲ್ವಾ.. ?, ಈಗಲೂ ಕನ್ನಡಿಗರು ಎಚ್ಚತ್ತಿಕೊಳ್ದೆ ಹೋದ್ರೆ ನಾಳೆ ಬೆಂಗಳೂರಿನಲ್ಲಿ ತಮಿಳರು ತಮ್ಮ ಬಾವುಟ ಹಾರ್ಸೋದ್ರಲ್ಲಿ ಆಶ್ಚರ್ಯವೇನಿಲ್ಲ... ಮೆಳಾವಗೆ ಅನುಮತಿ ಕೊಡಬೇಕಿತ್ತು ಅನ್ನೋ ಕುಮಾರಣ್ಣನ ನಾಡ ದ್ರೋಹಿ ಹುನ್ನಾರಕ್ಕೆ ಧಿಕ್ಕಾರ...
ಶಿವಾಜಿನಗರದ ತುಂಬಾ ರೋಶನ್ ಬೈಗ್, ಜಾಫರ್ ಶರೀಫ್ ಅಂತಹ ನಾಡ ದ್ರೋಹಿಗಳು ಸಂಕ್ರಾಂತಿ ಶುಭಾಶಯಗಳನ್ನ ತಮಿಳಲ್ಲೂ ಹಾಕ್ಸವ್ರೆ... ಸ್ವತಹ ತಾವೇ ಕನ್ನಡ ಕಡೆಗಣಸೋ ಈ ಉರ್ದು ವಾಚಕರು... ಈಗ ತಮಿಳರ ಮನವೊಲಿಸಲು ಈ ರೀತಿ ಹುನ್ನಾರ ನಡ್ಸಿದ್ದಾರೆ.... ತಮಿಳ್ನಾಡ್ನಲ್ಲೂ ಸಾಕಷ್ಟು ಕನ್ನಡಿಗರಿದ್ದಾರೆ.. ಅಲ್ಲಿ ಈ ರಾಷ್ಟ್ರೀಯ ಪಕ್ಷಗಳು ಕನ್ನಡದಲ್ಲಿ ಶುಭಾಶಯ ಹಾಕ್ಸ್ತಾರ ?... ಇನ್ನೂ ಕನ್ನಡಿಗರು ಎಚ್ಚೆತ್ತಿ ಕೊಳ್ಳಲಿಲ್ಲಾ ಅಂದ್ರೆ ಕರ್ನಾಟಕದ ರಾಜಧಾನಿಯಲ್ಲೇ ಕನ್ನಡ ಮೂಲೆಗುಂಪು ಸೇರುತ್ತೆ...
ಕ್ಲಾನ್ಗೊರೌಸ್
ಹೊಸ ಬೆಳಗಾವಿ ಮಹಾನಗರದ ಕಟ್ಟಡದ ಮು೦ದೆ ಕನ್ನಡ ಧ್ವಜವನ್ನು ಹಾಕಲ್ವ೦ತೆ, ಅಲ್ಲಿ ರಾಷ್ಟ್ರಧ್ವಜ ಮಾತ್ರ ಹಾಕ್ತಾರ೦ತೆ ಯಡಿಯೂರಪ್ಪನವರು. ಅ೦ತೂ ಇ೦ತು ಕರ್ನಾಟಕದಲ್ಲಿ ಕನ್ನಡ ಬಾವುಟ ಹಾಕೋದಕ್ಕೆ ನಮಗೆ ನರ ಇಲ್ಲ ಅ೦ತ್ ಬಿಜೆಪಿ ಒಪ್ಪಿಕೊ೦ಡಿದೆ.
ನಪು೦ಸಕರು ಸರ್ಕಾರದಲ್ಲಿರಬೇಕಾದರೆ ಕನ್ನಡದ ಕೆಲಸ ಹೇಗಾದೀತು. ನಾಡಿನ ಅಕ್ಕತ೦ಗಿಯರಾ, ದಯವಿಟ್ಟು ಯಡಿಯೂರಪ್ಪನವರಿಗೆ ನಿಮ್ಮ ಬಳೆಗಳನ್ನು ಕೊಟ್ಟು ಶೃ೦ಗರಿಸಿ.
ಸ್ವಾಭಿಮಾನಿ,
ನೀವೇನೋ ಬಳೆ ಬಳೆ ಅ೦ತೀರ.. ಆದರೆ, ಸಿ.ಎ೦. ಕರ್ನಾಟಕದ ಒ೦ದು ಇ೦ಚನ್ನೂ ಮಹಾರಾಷ್ತ್ರಕ್ಕೆ ಬಿಟ್ಟುಕೊಡಲ್ಲ ಅ೦ತಾರೆ ?
-ಕುರೂಪ್ ನಾಗ
http://www.samaylive.com/news/karnataka-seeks-pms-intervention-on-boundary-row/604941.html
ಇಲ್ಲೂ ಹಾಕಿದ್ದಾರೆ ನೋಡ್ರೀ...
http://kannada.webdunia.com/newsworld/news/current/0901/17/1090117096_1.htm
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!