ಇವತ್ತಿನ (26.07.2009ರ) ಪ್ರಜಾವಾಣಿಯ 7ನೇ ಪುಟದಲ್ಲಿ ಒಂದು ಅಂಕಣ ತಿರುವಳ್ಳುವರ್ ವಿರೋಧಿಸಿ ಸಣ್ಣವರಾಗೋದ್ ಬ್ಯಾಡಾ ಅಂತ ಮುದ್ರಣವಾಗಿದೆ. ಹೌದು, ಶ್ರೀ ಪದ್ಮರಾಜ ದಂಡಾವತಿಯವರು ಹೇಳಿದ ಈ ಮಾತು ಕಣ್ಣಿಗೆ ತಂಪಾಗಿಯೂ, ಕಿವಿಗೆ ಇಂಪಾಗಿಯೂ ಇದೆ. ಆದ್ರೆ ಈ ವಳ್ಳುವರ್ ಪ್ರತಿಮೇನಾ ವಿರೋಧಿಸೋದು ಸಣ್ಣತನಾ ಅನ್ನೋ ಭರದಲ್ಲಿ ಪದ್ಮರಾಜ್ ಅವರು ಇಡೀ ಕನ್ನಡ ಕುಲಕೋಟಿಗೆ ಹಲವಾರು ಹಣೆಪಟ್ಟಿಗಳನ್ನು ಅಂಟಿಸಿದ್ದಾರೆ. ಮತ್ತು ಮತ್ತದೇ ಕಾಗಕ್ಕಂಗೆ ನರಿಯಣ್ಣ ಸಕ್ಕತ್ತಾಗಿ ಹಾಡ್ತಿ ಹಾಡು ಅಂದು ರೊಟ್ಟಿ ಎಗುರಿಸಿದಂಥಾ ಡೈಲಾಗನ್ನೂ ಹೊಡ್ದಿದಾರೆ.
ಕನ್ನಡಿಗರ ಹೆಸರು ಕೆಡುತ್ತೆ! ಅನ್ನೋ ಪುಂಗಿ
ಇದು ಮಾಮೂಲಿ ಕಣ್ರಿ. ಕರ್ನಾಟಕದಲ್ಲಿ ಕನ್ನಡಿಗರು ಭಾಳಾ ಸಹಿಷ್ಣುಗಳು. ನಗುಮೊಗದವರು. ಭಾಳಾ ಒಳ್ಳೇವ್ರು, ಎಲ್ಲಾ ಭಾಷೆಗಳೂ ಇಲ್ಲಿ ನಡ್ಯುತ್ತೆ, ಇವ್ರು ನೀರು ಕೇಳಿದ್ರೆ ಮಜ್ಜಿಗೆ ಕೊಡ್ತಾರೆ ಅಂತಾ ಹೊಗಳೀ ಹೊಗಳೀ ಹೊನ್ನಶೂಲಕ್ಕೇರಿಸೋದನ್ನು ಹಿಂದಿನಿಂದ್ಲೂ ನೋಡ್ತಾನೇ ಬಂದಿದೀವಿ. ಈ ಮಾತು ನಮ್ಮ ಹಕ್ಕೊತ್ತಾಯದ ಕೂಗನ್ನು ಅಡಗಿಸೋ ತಂತ್ರ ಮಾತ್ರಾ ಅಂತ ಜನ ಈಗಾಗ್ಲೆ ಅರ್ಥ ಮಾಡ್ಕೊಂಡಿದಾರೆ. ಇನ್ನೂ ಈ ತಂತ್ರ ನಡ್ಯುತ್ತೆ ಅಂದ್ಕೊಳ್ಳೋದು ಸರಿಯಲ್ಲ. ಇರಲಿ, ನಿಜಕ್ಕೂ ಈಗ ವಳ್ಳುವರ್ ಪ್ರತಿಮೆ ಬೆಂಗಳೂರಲ್ಲಿ ತಲೆಯೆತ್ತಬೇಕಾ? ಬೇಡವಾ? ಅನ್ನೋದನ್ನು ವಿಚಾರ ಮಾಡೋಣ.
ತಿರುವಳ್ಳುವರ್ ಬಗ್ಗೆ ಗೌರವ ಇಲ್ದಿದ್ರೆ ಮಾನವತೆಗೇ ಗೌರವ ಇಲ್ದಂಗೆ!
ಹೌದ್ರೀ, ತಮಿಳು ನಾಡಿನ ದಾರ್ಶನಿಕ ವಳ್ಳುವರ್ (ಇದು ಒಬ್ಬರಲ್ಲಾ, ಅನೇಕರು ಅಂತಾ ನಮ್ಮ ಬಿ.ಜಿ.ಎಲ್ ಸ್ವಾಮಿಗಳು ತಮ್ಮ ತಮಿಳು ತಲೆಗಳ ನಡುವೆ ಹೊತ್ತಿಗೆಯಲ್ಲಿ ಬರ್ದಿದಾರೆ) ಎರಡು ಸಾವಿರ ವರ್ಷಗಳ ಹಿಂದೆಯೇ ಬರೆದಿರೋ ಕುರುಳ್ ಹೆಸರಿನ ಪದ್ಯಗಳು, ನಮ್ಮ ಸರ್ವಜ್ಞನ ವಚನದಂತೆಯೇ ಸಮಾಜದ ಒಳಿತಿನ ಪಾಠ ಕಲಿಸೋ ಮಹಾನ್ ನುಡಿಮುತ್ತುಗಳು. ಇಂಥಾ ದಾರ್ಶನಿಕರು ಜಗತ್ತಿನ ನಾನಾ ಭಾಗಗಳಲ್ಲಿ ನಾನಾ ಕಾಲಘಟ್ಟಗಳಲ್ಲಿ ಆಗಿಹೋಗಿದ್ದಾರೆ ಮತ್ತು ಇವರುಗಳು ಎಲ್ಲಾ ಕಟ್ಟುಪಾಡುಗಳನ್ನು ಮೀರಿದ್ದಾರೆ. ವಳ್ಳುವರ್, ಕಬೀರ್, ತ್ಯಾಗರಾಜ, ತುಳಸಿದಾಸ, ಶರೀಫಜ್ಜ.... ಅಯ್ಯೋ ಒಬ್ರಾ ಇಬ್ರಾ ಆ ಪಟ್ಟಿ ದೊಡ್ಡದಿದೆ ಬಿಡಿ. ಇವರನ್ನು ಅಪಮಾನಿಸೋದಿರಲಿ, ಇಂಥವರಿಗೆ ಗೌರವ ಕೊಡ್ದೇ ಇರೋದೂ ಕೂಡಾ ಸಣ್ಣತನವೇ. ಹಾಗಾದರೆ ತಿರುವಳ್ಳುವರ್ ಪ್ರತಿಮೆಯನ್ನು ಸ್ಥಾಪನೆಗೆ ವಿರೋಧಿಸೋದು ಸಣ್ಣತನಾನೇ ಅಲ್ವಾ?
ವಿಷಯ ಪ್ರತಿಮೆಯದ್ದಲ್ಲ! ಸಮಾನ ಗೌರವದ್ದು!!
ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ, ವಳ್ಳುವರ್ ಅವರಿಗೆ ತೋರಿಸೋ ಗೌರವ ಅನ್ನೋದನ್ನು ಪಕ್ಕಕ್ಕಿಟ್ಟು ಇನ್ನೊಂದೆರಡು ವಿಷಯ ಇತ್ಯರ್ಥ ಮಾಡ್ಕೋಬೇಕಿದೆ. ಯಾಕಂದ್ರೆ ಈ ಪ್ರತಿಮೆಯ ಸ್ಥಾಪನೆ ಮಾಡ್ತಿರೋರಿಗೂ, ಬೇಡ ಅಂತಿರೋರಿಗೂ ಇದು ಬರೀ ಒಬ್ಬ ದಾರ್ಶನಿಕನ ಗೊಂಬೆ ಆಗಿಲ್ಲ. ಒಂದು ಸಂಸ್ಕೃತಿಯ, ತಿಕ್ಕಾಟದ ಇತಿಹಾಸದ, ನಾಡಿನ ಸ್ವಾಭಿಮಾನದ ಮತ್ತು ಸಾರ್ವಭೌಮತ್ವ ಸ್ಥಾಪನೆಯ ಪ್ರತೀಕಗಳಾಗಿವೆ ಅನ್ನೋದಾಗಿದೆ.
- ಶತಶತಮಾನಗಳಿಂದ ತಮಿಳು ಮತ್ತು ಕನ್ನಡಿಗರ ನಡುವೆ ಕಾವೇರಿ ಹಂಚಿಕೆ ವ್ಯಾಜ್ಯ ಇನ್ನೂ ಬಗೆಹರಿದಿಲ್ಲ. ಅದರ ತೀರ್ಪು ನ್ಯಾಯಯುತವಾಗಿದೆ ಅಂತಾ ಇನ್ನೂ ಕನ್ನಡಿಗರು, ಕರ್ನಾಟಕ ಸರ್ಕಾರ ಒಪ್ಪಿಲ್ಲ. ಈ ವ್ಯಾಜ್ಯ ಪರಿಹಾರದ ವಿಷಯದಲ್ಲಿ ಟ್ರಿಬ್ಯೂನಲ್ ಜನ ಬಂದಾಗ ತಮಿಳುನಾಡು, ಇವರಿಗೆ ಭರ್ಜರಿ ಕಾಣಿಕೆಗಳ್ನ ಕೊಟ್ಟು ವಶೀಲಿ ಮಾಡೋ ಯತ್ನ ಮಾಡುದ್ರು ಅಂತಾ ಕರ್ನಾಟಕವೇ ಆರೋಪ ಮಾಡಿತ್ತು.
- ಪ್ರತಿಮೆ ಸ್ಥಾಪಿಸಿ ಸೌಹಾದ್ರತೆ ಹೆಚ್ಚಿಸೋ ಮಾತಾಡೋರು ಹೊಗೇನಕಲ್ ನಡುಗಡ್ಡೆಯಲ್ಲಿ ಜಂಟಿ ಸರ್ವೇಗೆ ಒಪ್ಸಿ/ ಒಪ್ಪಿ ಸೌಹಾರ್ದತೆ ಹೆಚ್ಚಿಸೋ ಮಾತಾಡಬೇಕಿತ್ತಲ್ವಾ ಗುರು?
- ಕನ್ನಡಕ್ಕೆ ಶಾಸ್ತ್ರೀಯ ಭಾಷೆಗೆ ಅಡ್ಡಗಾಲು ಹಾಕ್ಕೊಂಡು ಸೌಹಾರ್ದತೆ ತೋರುಸ್ತಿರೋ ತಮಿಳುನಾಡಿನ ದೊಡ್ಡತನದ ಮುಂದೆ ಬೆಂಗಳೂರಲ್ಲಿ ತಿರುವಳ್ಳುವರ್ ಪ್ರತಿಮೆ ಬೇಡ ಅಂದ್ರೆ ಕನ್ನಡಿಗರು ಚಿಕ್ಕವರಾಗಲ್ವಾ?
- ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಿ ಅನ್ನೋ ಕೂಗನ್ನು ಎಬ್ಸಿದ್ದು, ಶ್ರೀರಾಮಪುರದಲ್ಲಿ ಕೇಂದ್ರಸರ್ಕಾರದ ಪೊಲೀಸ್ ಠಾಣೆ ಇಡೀ ಅಂದಿದ್ದು, ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಡಿ.ಎಂ.ಕೆಯ ಕಪ್ಪು ಕೆಂಪು ಬಾವುಟ ಹಾರಿಸೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
- ಬೆಂಗಳೂರನ್ನು ಕಟ್ಟಿದೋರು ನಾವು ನಮಗೆ ಇಲ್ಲಿನ ಅರ್ಧದಷ್ಟಾದರು ವಿಧಾನಸಭಾ ಸೀಟುಗಳ ಮೇಲೆ ಹಕ್ಕಿದೆ ಅನ್ನೋದು ಸೌಹಾರ್ದತೆ ಹೆಚ್ಚಿಸೋ ನಡವಳಿಕೆಯೇನು?
ಇವೆಲ್ಲಾ ಒಂದು ತೂಕವಾದರೆ ಕನ್ನಡಿಗರ ಹೃದಯ ಸಿಂಹಾಸನಾಧೀಶ್ವರ, ಕನ್ನಡದ ಕಣ್ಮಣಿ ಡಾ.ರಾಜ್ ಅಪಹರಣವಾದಾಗ (ಮಾಡಿಸಿದಾಗ ಅನ್ನೋ ಗುಮಾನಿ ಇದೆ) ವೀರಪ್ಪನ್ (ಕಡೆಯಿಂದ) ಮುಂದಿರಿಸಿದ್ದ ಬೇಡಿಕೆಗಳ ಪಟ್ಟಿ ನೋಡಿದರೆ ಸಾಕು ಈ ಅಪಹರಣ ಒಬ್ಬ ಜುಜುಬಿ ಕಾಡುಗಳ್ಳನದೋ ಅಥವಾ ಇದರ ಹಿಂದಿನ ಷಡ್ಯಂತ್ರ ಬೇರೆ ಇದೆಯೋ ಅನ್ನೋದು ತಿಳ್ಯಲ್ವಾ ಗುರು?
- ಕರ್ನಾಟಕದ ಪಾಲಿಗೆ ಬರಬೇಕಾದ ಆಟೋಮೊಬೈಲ್ ಸಂಶೋಧನಾ ಕೇಂದ್ರ, ಅನೇಕ ಉದ್ದಿಮೆಗಳು, ಹೊಸ ಉದ್ದಿಮೆ ಕಾರಿಡಾರು, ಅನೇಕ ರೈಲು ಯೋಜನೆಗಳು... ಒಂದಾ ಎರಡಾ ತಮಿಳುನಾಡು ದಕ್ಕಿಸಿಕೊಂಡಿದ್ದು? ಪ್ರತಿಯೊಂದು ವಿಷಯದಲ್ಲೂ ಕನ್ನಡನಾಡಿನ ದೊಡ್ಡಣ್ಣನಂತೆ ತಮಿಳುನಾಡು ವರ್ತಿಸೋ ರೀತಿ ಕಾಣ್ತಿದ್ದಾಗ ಈ ಪ್ರತಿಮೆ ಸ್ಥಾಪನೆ ಬರೀ ಸೌಹಾರ್ದತೆ ಹೆಚ್ಚಿಸೋ ಕ್ರಮವಾದೀತೇ ಅನ್ನೋ ಅನುಮಾನ ಹುಟ್ಟಲ್ವಾ ಗುರು? ಇರಲಿ, ತಿರುವಳ್ಳುವರ್ ಪ್ರತಿಮೆ ಖಂಡಿತಾ ನಮ್ಮೂರಲ್ಲಿ ಬರಲಿ. ಆದರೆ ಅದೇ ಸಮಯದಲ್ಲಿ ಅದೇ ದಿವಸ, ಅದೇ ಹೊತ್ತಲ್ಲಿ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬೆಂಗಳೂರಿನ ವಳ್ಳುವರ್ ಪ್ರತಿಮೆ ಇಟ್ಟಿರೋ ಅಂಥದ್ದೇ ಪ್ರಮುಖವಾದ ಸ್ಥಳದಲ್ಲಿ ಸರ್ವಜ್ಞನ ಪ್ರತಿಮೆ ಅನಾವರಣ ಮಾಡೋದು ಈ ವಿಷಯದಲ್ಲಿ ಸಮ ಗೌರವದ ಕ್ರಮವಾಗುತ್ತೆ ನಿಜಾ. ಆದ್ರೆ ಇಷ್ಟು ಸಾಕಾ? ನಮ್ಮ ಸರ್ಕಾರ ಇದೇ ಸ್ಪೂರ್ತಿಯಿಂದ ಉಳಿದ ವಿಷಯಗಳ ಬಗ್ಗೇನೂ ತಮಿಳುನಾಡಿನ ಜೊತೆ ಮಾತುಕತೆಯಾಡೀತಾ? ಈಗ ಈ ಪ್ರತಿಮೆ ನೆಪದಲ್ಲಿ ಅವೆಲ್ಲಾ ವಿಷಯಗಳ ಬಗ್ಗೆ ಮಾತುಕತೆ ನಡೆಸಬಹುದಿತ್ತಲ್ವಾ? ಅದುಬಿಟ್ಟು ಕನ್ನಡಿಗರು ಜಗಳಗಂಟರು, ಅಸಹಿಷ್ಣುಗಳು, ಕೆಟ್ಟೋರು ಅನ್ನುಸ್ಕೋಬಾರ್ದು ಅದಕ್ಕೇ ಇದುಕ್ ಒಪ್ಕೊಳ್ಳೋಣ ಅಂದ್ರೆ ಹೆಂಗೇ ಗುರು?