ಇನ್ನು ಮೆನುಗಳು ಹೋಟೆಲಿನಲ್ಲಿ "ಏನೇನಿದೆ" ಅಂತ ಹೇಳುತ್ತವೆ!


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೊಸ ಆಯುಕ್ತರು ಕೈಗೊಂಡ ನಿರ್ಧಾರಗಳ ಬಗ್ಗೆ ಮೊನ್ನೆ ತಾನೇ ಮಾತಾಡಿದ್ವಿ. ಬಿ.ಬಿ.ಎಂ.ಪಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬೆಂಗಳೂರಲ್ಲಿ ಜಾಹೀರಾತು ಫಲಕಗಳು, ಹೋಟೆಲ್ ಮೆನು-ಗಳಲ್ಲೂ ಕನ್ನಡ ತರ್ಸಕ್ಕೆ ಒತ್ತಡ ಹೇರುತ್ತಿದೆ ಅಂತ ೨೦೦೯ರ ಜುಲೈ ತಿಂಗಳ ಏಳನೇ ತಾರೀಕಿನ "ದಿ ಹಿಂದೂ" ಮತ್ತು ಜುಲೈ ಹನ್ನೊಂದರ "ಡೆಕ್ಕನ್" ಪತ್ರಿಕೆಗಳಲ್ಲಿ ವರದಿಯಾಗಿದೆ.

ಕಡೆಗೂ ಗ್ರಾಹಕನಿಗೆ ಸಿಗಲಿರೋ ನ್ಯಾಯ!
ಒಂದು ಹೋಟೆಲಿನಲ್ಲಿ ಸಿಗುವ ತಿನಿಸಿನ ಬಗ್ಗೆ ಇರಲಿ, ಬೀದಿಯಲ್ಲಿ ಕಾಣುವ ಜಾಹಿರಾತಿನ ಮಾಹಿತಿಯೇ ಇರಲಿ, ಇವೆಲ್ಲವೂ ಕನ್ನಡ ಭಾಷೆಯಲ್ಲಿ ಕರ್ನಾಟಕದಲ್ಲಿ ಅಲ್ಲದೆ ಇನ್ನೆಲ್ಲಿರ್ಬೇಕು ಹೇಳಿ? ಆದರೆ ಇಂದು ಪರಿಸ್ಥತಿ ಹಾಗಿಲ್ಲವೆಂಬುದು ನಮಗೆಲ್ಲಾ ಗೊತ್ತು, ಈಗ ಇದು ಬಿ.ಬಿ.ಎಂ.ಪಿ ಕಣ್ಣಿಗೂ ಬಿದ್ದಿರುವ ಹಾಗಿದೆ. ಇಷ್ಟು ದಿನ ಹಲವು ಹೋಟೆಲ್ ಮೆನುಗಳಲ್ಲಿ, ಜಾಹೀರಾತು ಫಲಕಗಳಲ್ಲಿ ಕೇವಲ ಇಂಗ್ಲಿಷ್ ಇದ್ದುದು ಗೊತ್ತಿರೋ ವಿಷಯ. ಹೋಟೆಲಿನಲ್ಲಿ ಅಲ್ಲಿ-ಇಲ್ಲಿ ತಿರುಗಿ "ಈ ತಿನಿಸೇನು? ಆ ತಿನಿಸೇನು?" ಅಂತ ಕೇಳಿ ಕೇಳಿ, ಅಥವಾ ನಾಚಿ, ಕೇಳದೆಯೇ, ತಿಂದ ಮೇಲೆ ಅರ್ಥ ಮಾಡಿಕೊಂಡ ಅನುಭವ ಹೆಚ್ಚಿನವರಿಗೆ ಸಾಮಾನ್ಯ ಆಗೋಗಿತ್ತು, ಅಲ್ವಾ ಗುರು? ನಮ್ಮ ನಾಡಲ್ಲೇ ನಮಗೆ ಈ ಅಧೋಗತಿಯಾದರೆ ಕನ್ನಡಿಗ ಗ್ರಾಹಕನೊಬ್ಬ ನಿಶ್ಚಿಂತೆಯಿಂದ ಖರೀದಿ ಮಾಡುವುದಾದರೂ ಎಲ್ಲಿ?! ಗ್ರಾಹಕನಿಗೆ ತೊಡಕಾಗೋದ್ರ್ ಜೊತೆಗೆ, ಇಲ್ಲೆಲ್ಲಾ ಮಾಹಿತಿ ಪಡೆಯುವ ಅವನ ಹಕ್ಕನ್ನೂ ನಿರಾಕರಿಸಲಾಗುತ್ತಿದೆ. ಹೀಗೆ ಗ್ರಾಹಕನ ಭಾಷೆಯನ್ನು ಕಡೆಗಣಿಸಿ, ಎಲ್ಲರೂ "ಗುಂಪಲ್ಲಿ ಗೋವಿಂದ" ಅಂತ ಇಂಗ್ಲಿಷ್ ಬಳಸೋ ಸ್ಥಿತಿ ಮಾರುಕಟ್ಟೆಯಲ್ಲಿ ತೊಂದರೆ ಅಲ್ಲದೆ ಗ್ರಾಹಕರ ಮಧ್ಯೆ ಒಂದು ರೀತಿಯ ಕಂದರವನ್ನ ಉಂಟು ಮಾಡುತ್ತಿದೆ. ಈ ಪರಿಸ್ಥಿತಿಯನ್ನು ಬಗೆಹರಿಸಲು ಪಾಲಿಕೆ ಇದೀಗ ಇಟ್ಟಿರುವ ಹೆಜ್ಜೆ ಕನ್ನಡಿಗ ಗ್ರಾಹಕನಿಗೆ ದೊರಕುತ್ತಿರೋ ನ್ಯಾಯ ಅಂತಲೇ ಹೇಳಬಹುದು ಗುರು! ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಕನ್ನಡಿಗ ತನ್ನೂರಲ್ಲಿನ ಮಾರುಕಟ್ಟೆಯಲ್ಲಿ ನೆಮ್ಮದಿಯ, ಸಂಕೋಚವಿಲ್ಲದಿರುವಂತಹ ಅನುಕೂಲಕರವಾದ ಪರಿಸ್ಥಿತಿ ಹುಟ್ಕೊತಿರೋದು ಒಳ್ಳೇ ಬೆಳವಣಿಗೆ ಗುರು!

4 ಅನಿಸಿಕೆಗಳು:

ಸುನಿಲ್ ಛಾತ್ರ ಅಂತಾರೆ...

ತಡ್ಕಾ ಅ೦ದರೆ ಏನೆ೦ದು ಗೊತ್ತಿರಲಿಲ್ಲ. ನನ್ನ ಸ್ನೇಹಿತರು ಗೇಲಿಮಾಡಿದ್ದು೦ಟು.
ಒಗ್ಗರಣೆಗೆ ಹಾಗ೦ತಾರ೦ತೆ.

ಪವನ ಹುಳಿಮಾವು ಅಂತಾರೆ...

ಮೊನ್ನೆ ಕೋರಮಂಗಲದಲ್ಲಿರುವ ಒಂದು ಹೋಟೆಲ್ ಗೆ ಹೋಗಿದ್ದೆ,, ಅಲ್ಲಿ ಒಬ್ಬ ಕನ್ನಡಿಗ ತನ್ನ ಕುಟುಂಬ ಕರಕೊಂಡು ಬಂದಿದ್ದ ( ಮಂಡ್ಯ-ಮೈಸೂರು ಕಡೆಯವರು ಅನ್ಸುತ್ತೆ), ಅಲ್ಲಿ ಊಟಕ್ಕೆ ಕೂತಾಗ,, ಆ ವ್ಯಕ್ತಿಗೆ ಒಂದು ಕರೆ ಬಂದಿದೆ ( ಆಫೀಸ್ ಇಂದ ಇರಬಹುದು), ಆಗ ಆತ, ಅಪ್ಪಾ ನೀವು ಊಟ ಆರ್ಡರ್ ಮಾಡಿ ನಾನು ೨ ನಿಮಿಷದಲ್ಲಿ ಬಂದೆ ಅಂತಾ ಹೋದ. ಅವರ ತಂದೆ ತಾಯಿಗೆ ಇಂಗ್ಲಿಷ್ ಅಲ್ಲಿರೋ ಮೆನು ನ ಮೇಲೆ ಕೆಳಗೆ ಮಾಡಿ ನೋಡ್ತಾನೆ ಇದ್ದಾರೆ. ಅದಕ್ಕೆ ತಕ್ಕಂತೆ ಅಲ್ಲಿನ ಸಪ್ಲೈಯರ್ ಹಿಂದಿಯವನು. ಬೇಡ ಅವರ ಫಜೀತಿ. ಅವನು ಹಿಂದಿ ಹಿಂದಿ ಅಂತಾ ಬಡ್ಕೊತಾ ಇದ್ದಾನೆ, ಅವರ ತಂದೆ ತಾಯಿಗೋ ಏನು ಅರ್ಥ ಆಗದೇ ಪೆಚ್ಚಾಗಿದ್ರು. ಅವರ ನಾಡಲ್ಲೇ, ಒಂದು ಹೋಟೆಲ್ ಅಲ್ಲಿ ಅವರ ಭಾಷೆ ಮಾತಾಡಿ ದಕ್ಕಿಸಿಕೊಳ್ಳಲು ಆಗತಿಲ್ವಲ್ಲ ಅನ್ನೋ ಕೊರಗು ಅವರ ಮುಖದಲ್ಲಿ ಕಾಣ್ತಾ ಇತ್ತು. ಕೊನೆಗೆ ಅವರ ಮಗ ಬಂದು ಇಂಗ್ಲಿಷ್ ಅಲ್ಲಿ ಆರ್ಡರ್ ಕೊಟ್ಟ ಮೇಲೆ ಅವರು ಊಟ ಮಾಡಿದ್ದು. ಹೋಟೆಲ್ ಅಲ್ಲಿ ರಶ್ ಇದ್ದ ಕಾರಣ ನಾನು ಕಾಯ್ತಾ ನಿಂತಾಗ ಇದು ಆಗಿದ್ದು, ಅದನ್ನ ನೋಡಿ, ಕನ್ನಡಕ್ಕೆ ನಯಾ ಪೈಸೆ ಮರ್ಯಾರೆ ಇರದ ಈ ಹೋಟೆಲ್ ಅಲ್ಲಿ ತಿನ್ನಲ್ಲ ಅಂತ ಆಚೆ ಬಂದೆ ಗುರು. ನನ್ನ ಹೆಂಡ್ತಿಗೆ ನನ್ನ ಮೇಲೆ ಸಿಟ್ಟು ಬಂತು, ಆದ್ರೆ ನನ್ನ ಸ್ವಾಭಿಮಾನಕ್ಕೆ, ನನ್ನತನಕ್ಕೆ ಧಕ್ಕೆ ಬಂದಾಗ, ಹೆಂಡ್ತಿಗೆ ಹೆದರಿದ್ರೆ ಆಗಲ್ಲ ಅಂತ ಹೀಗೆ ಮಾಡಿದೆ ಗುರು.

prasadh ಅಂತಾರೆ...

ಪವನ ಅವರೆ, ನೀವು ಮಾಡಿದ್ದೇನೊ ಸರಿ ಆದ್ರೆ ಮಾಡಿದ ಕೆಲಸ ಪೂರ್ತಿ ಮಾಡಲಿಲ್ಲ:(. ನೀವು ಆ ಹೋಟೆಲ್ ಇಂದ ಹೊರ ಬರುವ ಮುನ್ನ ಆ ಕಾಶಿಯರ್ ಹತ್ರ ಹೋಗಿ ಕಂಪ್ಲೈಂಟ್ ಪುಸ್ತಕ ಇದ್ಯ ಅಂತ ಕೇಳ್ಬೇಕಿತ್ತು. ಯಾಕೆ ಅಂತ ಕೇಳ್ತಿದ್ದ, ಸಹಜ ಅಲ್ವಾ? ಆಗ ಹೇಳ್ಬೇಕಿತ್ತು ಹೀಗೆ ಹೀಗ್ ನಡೆಯುತ್ತೆ ನಿಮ್ಮ ಹೋಟಲ್‌ನಲ್ಲಿ ನಂಗೆ ಬೇಜಾರಾಗಿದೆ ಅದನ್ನ ತಿಳಿಸ್ಬೇಕಿತ್ತು, ಇದನ್ನ ನಂ ಸ್ನೇಹಿತರಿಗು ತಿಳಿಸ್ತೀನಿ ಅನ್ಬೇಕಿತ್ತು.. ಬೇಜಾರಲ್ಲಿ ಹಂಗೆ ಬಂದ್ಬಿಟ್ಟಿದೀರ. ಮತ್ತೊಂದು ವಿಷ್ಯ ಏನ್ ಅಂದ್ರೆ ಆ ಹೋಟಲ್‌ನವರಿಗೆ ಕನ್ನಡಿಗರು ಮುಖ್ಯ ಇರೋದೆ ಇಲ್ಲ ಅದೊಂದು ವಿಪರ್ಯಾಸ. ನಿಮ್ಮವರಿಗೂ ಸಹ ನಿಮ್ಮ ನಿಲುವಿನ ಬಗ್ಗೆ ಅಭಿಮಾನ ಮೂಡುವ ಹಾಗೆ ತಿಳಿಸಬೇಕಿತ್ತು ಹೆದರುವ ಅವಶ್ಯಕತೆಯೇನಿದ? :)

ಚಿಕ್ಕ ಅಂತಾರೆ...

ಪವನ ರವರೆ, ಒಳ್ಳೆಯ ಕೆಲಸ ಮಾಡಿದ್ದೀರ. ಈಗ ಹೋಟೆಲ್ ರವರಿಗೆ ನಿಮ್ಮ ಅಸಹಕಾರ ತೋರೋದ್ರಿ೦ದ ಅವರು ತಿದ್ದುಕೊಳ್ಳುತ್ತಾರೆ. ಹೀಗೆ ನಿಮ್ಮ೦ತೆಯೇ ಎಲ್ಲರೂ ಒಟ್ಟುಗೂಡಿ ಅಸಹಕಾರ ನೀಡುತ್ತಾ ಬ೦ದಲ್ಲಿ, ಮು೦ದೊ೦ದು ದಿನ ಕನ್ನಡವನ್ನು ಉಳಿಸಲು ಹೋರಾಟ ಮಾಡೋ ಅವಶ್ಯಕತೆ ಇರಲ್ಲ. ಕನ್ನಡದಲ್ಲಿ ಸೇವೆ ಪಡೆಯುವವರನ್ನು ಸಮಾಜ ಗೌರವದಿ೦ದ ಆದರಿಸುತ್ತದೆ. ಹಾಗೇ ಕನ್ನಡದಲ್ಲಿ ಸೇವೆ ಕೊಡದವರಿಗೆ ದ೦ಡ ವಿಧಿಸುತ್ತದೆ. ಆದರೆ ದ೦ಡ ವಿಧಿಸಿಕೊಳ್ಳಲು ಯಾರೂ ತಯಾರಾಗಿರೋದಿಲ್ಲ >ಹಾಗಾಗಿ ಕನ್ನಡದಲ್ಲಿ ಸೇವೆ ಸಿಗೋದು ಖ೦ಡಿತ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails