"ಬೇರೆ ಬೇರೆ ಭಾಷೆಗಳಿರೋ ಭಾರತಾನ ಒಂದು ಮಾಡಕ್ಕೆ ಸಾಮಾನ್ಯವಾದ ಒಂದು ಭಾಷೆ ಬೇಕೇ ಬೇಕು, ಇಲ್ದಿದ್ರೆ ಇದು ಒಡೆದು ಹೋಗುತ್ತೆ" ಅಂತನ್ನೋ ಸುಳ್ಳುನ್ನ ನಂಬುದ್ರೆ ಎಂಥಾ ಅಪಾಯ ಕಾದಿದೆ ಅನ್ನೋದಕ್ಕೆ ಸಾಕ್ಷಿಯಾಗಿರೋ ಒಂದು ಘಟನೆ ಮೊನ್ನೆ ಮೊನ್ನೆ ಹಾಸನದಲ್ಲಿ ನಡೆದಿದೆ ಅಂತಾ ೧೩ನೇ ತಾರೀಕಿನ ವಿಜಯಕರ್ನಾಟಕದ ಐದನೇ ಪುಟದಲ್ಲೊಂದು ಸುದ್ದಿ ಬಂದಿದೆ ಗುರು! ಭೂಸೇನಾ ನಿಗಮದೋರು ನೇಮಕಾತಿ ಮಾಡ್ಕೊಳ್ಳಕ್ಕೆ ಅಂತಾ ಹಾಸನದಲ್ಲಿ ಒಂದು ಸಂದರ್ಶನಕ್ಕೆ ಕರೆದಿದ್ದಾರೆ. ನೇಮಕಾತಿ ಆಗೋ ಆಸೆಯಿಂದ ನಾಡಿನ ಮೂಲೆ ಮೂಲೆಯಲ್ಲಿರೋ ಯುವಕರುಗಳು ತಮ್ಮ ತಮ್ಮ ಓದಿನ, ಹುಟ್ಟಿನ, ಜಾತಿಯ ಇತ್ಯಾದಿ ಪ್ರಮಾಣಪತ್ರಗಳನ್ನು ಕೈಲಿ ಹಿಡ್ಕೊಂಡು ಈ ಸಂದರ್ಶನಕ್ಕೆ ಬಂದಿದಾರೆ. ಆದ್ರೆ ಇದನ್ನು ಆ ಅಧಿಕಾರಿಗಳು ಒಪ್ಕೊತಾ ಇಲ್ಲ. ಯಾಕಪ್ಪಾ ಅಂತೀರೇನು?
ಕನ್ನಡದಲ್ಲಿ ಪ್ರಮಾಣ ಪತ್ರ!
"ಏನಿದು ಅನ್ಯಾಯ? ಇವರ ಬಹಳ ಮುಖ್ಯವಾದ ಅನೇಕ ಪ್ರಮಾಣಪತ್ರಗಳು ಕನ್ನಡದಲ್ಲಿವೆ. ಭಾರತದ ಮೂಲೆ ಮೂಲೆಗಳಲ್ಲಿರೋ ಅನೇಕಾನೇಕ ಭಾಷೆ ಮಾತಾಡೊ ಜನರು ಕೆಲಸ ಮಾಡಬೇಕಾದ ಇಲಾಖೆಗೆ ಜುಜುಬಿ ಲೋಕಲ್ ಭಾಷೆಯಲ್ಲಿರೋ ಪ್ರಮಾಣ ಪತ್ರ ಸಲ್ಲಿಸಿದ್ರೆ ಹೇಗೆ? ಭಾರತ ದೇಶದ ಅಧಿಕೃತ ಆಡಳಿತ ಭಾಷೆಯಾಗಿ ಹಿಂದಿ ಎಂಬ ದೇವತೆಯನ್ನು ಪ್ರತಿಷ್ಠಾಪಿಸಿರುವಾಗ ಇದೆಲ್ಲಿ ಕನ್ನಡದ ದೆವ್ವ ಇವರ ಪ್ರಮಾಣಪತ್ರದಲ್ಲಿ ಹೊಕ್ಕಿಕೊಂಡಿದೆ? ಅನ್ಯಾಯ... ಅನ್ಯಾಯ... ಹಿಂದುಸ್ತಾನದಲ್ಲಿರಲು ಈ ಮುಂಡೇಮಕ್ಕಳು ಲಾಯಕ್ಕಿಲ್ಲ. ಭಾರತೀಯ ಸರ್ಕಾರದ ಸೇವೆಯಲ್ಲಿರಲು ಈ ಬಡ್ಡಿಹೈಕಳು ಯೋಗ್ಯರಲ್ಲ. ಇವರನ್ನೆಲ್ಲಾ ವಾಪಸ್ ಕಳಿಸಿಬಿಡೋಣ" ಅಂತ ಭೂಸೇನಾ ಅಧಿಕಾರಿಗಳು ಅಂದುಕೊಂಡ್ರೋ ಏನೋ... ಒಟ್ನಲ್ಲಿ ಕನ್ನಡದಲ್ಲಿ ಪ್ರಮಾಣ ಪತ್ರ ತಂದವರನ್ನೆಲ್ಲಾ "ಥೂ, ಮುಂಡೇವಾ, ದೂರದಲ್ಲಿ ಆ... ಮೂಲೇಲಿ ಕೂತ್ಕೊಳಿ" ಅಂತ ದೂರದ ಮೂಲೆಗಟ್ಟಿದ್ದು ಮಾತ್ರಾ ಸುಳ್ಳಲ್ಲ ಗುರು!
ನಿಮ್ಮದು ನಿಮಗೇ ಕೀಳು ಅನ್ನಿಸಬೇಕು!
"ಹೌದು, ನಮ್ಮ ಪೆದ್ದು ಕರ್ನಾಟಕ ಸರ್ಕಾರಕ್ಕೆ ಅಷ್ಟೂ ಗೊತಾಗೋದು ಬ್ಯಾಡವಾ? ಎಲ್ಲ ಪ್ರಮಾಣಪತ್ರಗಳನ್ನು ಇಂಗ್ಲಿಷೂ, ಹಿಂದಿ ಭಾಷೇಲಿ ಕೊಡದಿದ್ರೆ, ಪಾ...ಪಾ, ಕೇಂದ್ರ ಸರ್ಕಾರದೋರು ಹ್ಯಾಗೆ ಅರ್ಥ ಮಾಡ್ಕೊತಾರೆ? ಎಲ್ಲಾ ರಾಜ್ಯದೋರೂ ಅವರವರ ಭಾಷೇಲೇ ಪ್ರಮಾಣ ಪತ್ರ ಕೊಟ್ರೆ, ಅದು ಹೇಗೆ ದೇಶದ ಉಳಿದವರಿಗೆ ಅರ್ಥ ಆಗುತ್ತೆ? ಭಾರತದ ಒಗ್ಗಟ್ಟು ಅದೇಗೆ ಉಳ್ಯುತ್ತೆ?" ಅಂತ ಈ ಕುರಿಗಳು ಬಯ್ಕೊಂಡು ಎದ್ದು ಹೋಗ್ತಾವೆ ಅಂದ್ಕೊಂಡ್ರು ಅನ್ಸುತ್ತೆ ಗುರು! ಆದ್ರೆ ಸುಮಾರು ಜನ ಕನ್ನಡಕ್ಕೆ ಬೆಲೆ ಕೊಡದೆ ಇರೋದನ್ನು ಪ್ರತಿಭಟಿಸಿ ಅಲ್ಲೇ ಕೂತರು. ಕಡೆಗೆ ಅದ್ಯಾರಿಗೆ ಹೆದರಿಕೊಂಡ್ರೋ ಏನೋ ಗೊತ್ತಿಲ್ಲ. ಅಂತೂ ಇಂತು ಕನ್ನಡದ ಪ್ರಮಾಣ ಪತ್ರಾನು ಇಸ್ಕೋತೀವಿ ಅಂತ ಭೂಸೇನಾ ಅಧಿಕಾರಿಗಳು ಅನ್ನೋ ಹೊತ್ತಿಗೆ ಅಲ್ಲಿಗೆ ಬಂದಿದ್ದೋರಲ್ಲಿ ಸಾಕಷ್ಟು ಜನರು ಮನೆಗೆ ಹೋಗಾಗಿತ್ತು! ಹಾಂ, ಈಗ ನೋಡ್ರಪ್ಪಾ ಸರಿಹೋಯ್ತು. ಇನ್ನು ಆ ಹುದ್ದೆಗಳಲ್ಲಿ ಹಿಂದಿನಲ್ಲೋ, ಇಂಗ್ಲಿಷಲ್ಲೋ ಪ್ರಮಾಣಪತ್ರ ತರೋ ಅಂತಾ ಉತ್ತರದೋರನ್ನು, ಬಿಹಾರಿಗಳನ್ನು ನೇಮಕ ಮಾಡ್ಕೋಬಹುದು ಅಂತಾ ಅಲ್ಲಿರೋ ಅಧಿಕಾರಿಗಳೂ ಒಳಗೊಳಗೇ ನಿಟ್ಟುಸಿರು ಬಿಟ್ರು ಅನ್ಸುತ್ತೆ! ಹೀಗೆ ನೀವು ಕನ್ನಡನಾಡಲ್ಲಿರೋ ರೈಲು, ಬ್ಯಾಂಕು, ಪೋಸ್ಟ್ ಆಫೀಸು, ಪಾಸ್ ಪೋರ್ಟ್ ಆಫೀಸು... ಎಲ್ಲೇ ಹೋದ್ರೂ ಕನ್ನಡಕ್ಕೆ ಕಿಮ್ಮತ್ತಿಲ್ಲ ಅನ್ಸಕ್ಕೆ ಶುರು ಮಾಡ್ಸುದ್ರೆ ಆಯ್ತಲ್ಲ. ಒಟ್ನಲ್ಲಿ ಇದು ಕನ್ನಡದವರ ತಲೇಲೇ ’ಹೌದು, ಕನ್ನಡ ಲೋಕಲ್ಲು. ಕನ್ನಡ ಭಾಷೇಗೆ ಭಾರತದ ಮಟ್ಟದಲ್ಲಿ ಉಪಯೋಗಕ್ಕೆ ಬರೋ ಯೋಗ್ಯತೆಯಿಲ್ಲ. ಇದನ್ನೇನಿದ್ರೂ ಮನೆ ಒಳಗೆ ಮಾತಾಡಕ್ಕೆ ಬಳುಸ್ಬೇಕು’ ಅನ್ನೋ ಕೀಳರಿಮೆಯ ಹುಳಾ ಬಿಡೋ ಹುನ್ನಾರ ಗುರು!
1 ಅನಿಸಿಕೆ:
ಸೇನೆಯಲ್ಲಿ ಕನ್ನಡಿಗರಿಲ್ಲ ಎ೦ದು ಉ.ಭಾರತದವರು ಕಟುವಾಗಿ ಠೀಕಿಸಿಸುವುದನ್ನು ದಿನವೂ ನೋಡುತ್ತಲೇ ಇದ್ದೇನೆ. ಸೇನೆಯಲ್ಲಿರುವ ಒಬ್ಬ ಕನ್ನಡಿಗನ ತಲೆಯಲ್ಲಿ ಏನೇನೆಲ್ಲ ತು೦ಬಿ ಕಳಿಸಿದ್ದರೆ ಅ೦ದ್ರೆ. ಹಬ್ಬಕ್ಕೆ ಬರುತ್ತಿದ್ದ ಸೇನೆಯಲ್ಲಿರುವ ಒಬ್ಬ ಕನ್ನಡಿಗನನ್ನು ನಾನು ರೈಲಿನಲ್ಲಿ ಭೇಟಿಯಾದೆ. ಅವನು ಹೇಳುವುದೇನೆ೦ದರೆ "ಭಾರತಕ್ಕೆ ಏನೇ ತೊ೦ದರೆ ಆದ್ರೂ ಕನ್ನಡಿಗರು ಏನು ಮಾಡಲ್ಲ. ಕಾಶ್ಮೀರದಲ್ಲಿ ಜನ ಸತ್ತರೂ ಕನ್ನಡಿಗರು ಸ್ಪ೦ದಿಸಲ್ಲ. ಒಟ್ಟಿನಲ್ಲಿ ಕನ್ನಡಿಗರಿಗೆ ಸ್ವಾತ೦ತ್ರದ ಮೌಲ್ಯನೇ ಗೊತ್ತಿಲ್ಲ" ಎ೦ದು ಒಬ್ಬ ಕನ್ನಡಿಗನೇ ಹೇಳಿದನೆ೦ದರೆ..
ಅವನು ಕನ್ನಡ ಮಾತಾಡಲು ಅದೇನೋ ಸ೦ಕೋಚ ಪಡುತ್ತ, ಅರ್ಧ ಹಿ೦ದಿ, ಅರ್ಧ ಕನ್ನಡ ಮಾತಾಡುತ್ತಿದ್ದ.
ಕನ್ನಡಿಗರು ಭಾರತದ ಸೇನೆಯನ್ನು ಸೇರಲು ಈ ರೀತಿ ಹರಸಾಹಸ ಪಡುತ್ತಿರುವುದು ದುರ್ದೈವ. ಬೇರೆ ದೇಶಕ್ಕೆ ಹೋಗಿ ಸೇನೆಗೆ ಸೇರುವುದು ಮತ್ತು ಭಾರತದ ಸೇನೆಗೆ ಸೇರುವುದು ಎರಡೂ ಒ೦ದೇ ಆಗಿಹೋಗಿದೆ. ಅಲ್ಲೂ ನಮ್ಮ ಭಾಷೆಗೆ ಮಣೆ ಹಾಕಲ್ಲ. ಇಲ್ಲೂ ಕ್ಯಾರೆ ಅನ್ನಲ್ಲ. ಹಿ೦ದಿ ಕಲಿತರೇನೆ ಹಿ೦ದೂಸ್ತಾನಮ್ಮ ಅನ್ನೋ ದೇವತೆಯ ಸೇವೆ ಮಾಡಕ್ಕಾಗೋದು. ಹಾಗಿದ್ದರೆ ಕನ್ನಡಿಗ ಇನ್ನಮೇಲೆ ಕನ್ನಡಮ್ಮನ ಸೇವೆ ಮಾಡಿಕೊ೦ಡಿದ್ರೆ ಸಾಕು ಅನಿಸತ್ತೆ..!!
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!