ಹಿಂದಿ ಬರದಿದ್ರೆ ಕೇಂದ್ರದಲ್ಲಿ ಕೆಲ್ಸ ಆಗಲ್ಲಂತೆ!

ಅಕ್ಟೋಬರ್ ೨೫ರ ವಿ.ಕ ಮುಖಪುಟದಲ್ಲಿ ವಿ.ಕ ಸುದ್ದಿಲೋಕ ಅನ್ನೋ ತುಣುಕಿನ ಅಡಿಯಲ್ಲಿ ಒಂದು ಮಸ್ತ್ ಸುದ್ದಿ ಪ್ರಕಟವಾಗಿದೆ. ಕರ್ನಾಟಕದಿಂದ ದಿಲ್ಲಿಯಲ್ಲಿ ನಿಯೋಜಿತವಾಗಿರೋ ರಾಜ್ಯ ಪ್ರತಿನಿಧಿಗಳಾದ ಶ್ರೀ ಸುಭಾಷ್ ಭರಣಿಯವರಿಗೆ ಹಿಂದಿ ಬರಲ್ಲ ಅನ್ನೋ ಕಾರಣಕ್ಕೆ ಅವರು ದಿಲ್ಲಿಯಲ್ಲಿರಲು ನಾಲಾಯಕ್ಕು ಅನ್ನೋ ಧಾಟೀಲಿ ಬರೆದಿರೋ ವರದಿ ಪ್ರಕಟವಾಗಿದೆ, ಗುರು. ಈ ಸುದ್ದಿ ನೋಡ್ತಾ ಇದ್ರೆ ಕಣ್ಮುಂದೆ ಹತ್ತಾರು ಪ್ರಶ್ನೆಗಳು ಹುಟ್ಕೊತಾವೆ...

ಭಾರತೀಯ ಅನ್ನಿಸಿಕೊಳ್ಳಕ್ಕೆ ಹಿಂದಿ ಬರಲೇ ಬೇಕಾ?

ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ದಿಲ್ಲಿಯಲ್ಲಿರೋ ಭರಣಿಯವರಿಂದ ರಾಜ್ಯದ ಪರವಾಗಿ ಯಾವ ಕೆಲಸವೂ ಆಗಿಲ್ಲ ಅನ್ನೋದನ್ನು ಹೇಳ್ತಾ ಇರೋ ವರದಿಗಾರ ಇದಕ್ಕೆ ಕಂಡುಕೊಂಡಿರೋ ಕಾರಣ ಮಾತ್ರಾ ತೀರಾ ಅಮಾನವೀಯವಾದದ್ದಾಗಿದೆ ಗುರು! ನಿಜಕ್ಕೂ ಭರಣಿಯವರು ವಿಫಲರಾಗಿದ್ದರೆ ಮತ್ತು ಅದಕ್ಕೆ ವಿ.ಕ ಹೇಳ್ತಿರೋದೆ ಕಾರಣವಾಗಿದ್ರೆ ಒಕ್ಕೂಟ ವ್ಯವಸ್ಥೆ ಅನ್ನೋ ಪದ ಭಾರತದಲ್ಲಿ ಅರ್ಥ ಕಳ್ಕೊಂಡಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ದಿಲ್ಲಿ(ಕೇಂದ್ರ)ಯಲ್ಲಿ ಕರ್ನಾಟಕಾನ(ರಾಜ್ಯಗಳನ್ನು) ಪ್ರತಿನಿಧಿಸೋ ವ್ಯಕ್ತಿಗೆ ಹಿಂದಿ ಬರುತ್ತೋ ಇಲ್ವೋ ಅನ್ನೋದ್ರ ಮೇಲೆ ಈ (ಆಯಾ) ರಾಜ್ಯದ ಕೆಲಸಗಳು ಆಗುತ್ತೆ, ಯೋಜನೆಗಳು ಮಂಜೂರಾಗ್ತವೆ ಅನ್ನೋದಾದ್ರೆ ಭಾರತದಲ್ಲಿ ಇರೋಕೆ ಹಿಂದಿ ಕಲೀಲೆ ಬೇಕು ಅನ್ನೋ ಹಾಗಾಯ್ತಲ್ಲ. ಆ ಮೂಲಕ ನಮ್ಮ ಹಾಗೂ ನಮ್ಮಂಥ ಕೋಟ್ಯಾಂತರ ಜನರ ಬದುಕುವ ಹಕ್ಕಿಗೇ ಈ ವ್ಯವಸ್ಥೆ ಸಂಚಕಾರ ತರ್ತಿದೆ ಅಂತಾ ಆಗಲ್ವಾ? ಹಿಂದಿ ಗೊತ್ತಿಲ್ಲದೆ ಇರೋರು ಭಾರತೀಯರಲ್ಲ ಅಂದ ಹಾಗಲ್ವಾ?

ಯೋಜನೆಗಳ ಮಂಜುರಾತಿಗೂ ಭಾಷೆಗೂ ಯಾಕೆ ತಳುಕು?

ಕನ್ನಡನಾಡಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಆಗ್ಬೇಕು ಅನ್ನೋರು, ಹಾಗೆ ದಿಲ್ಲಿಯಲ್ಲಿ ಅಲ್ಲಿನ ಭಾಷೆ (ಹಿಂದಿ?) ಮಾತಾಡೋದು ಸರಿ ಅಲ್ವಾ? ಹಿಂದಿ ಭಾಷೇನ ಯಾಕೆ ಕಲೀಬಾರ್ದು? ಇದು ಸಣ್ಣ ಬುದ್ಧಿ ಅಲ್ವಾ? ಎಲ್ಲಾ ಭಾಷೇನೂ ಗೌರವಿಸಬೇಕು? ದೇಶದ ಒಗ್ಗಟ್ಟು .... ಇತ್ಯಾದಿ ಇತ್ಯಾದಿ ಗೊಂದಲಗಳನ್ನು ತಲೇಲಿ ಬಿಟ್ಟು ಇದೇ ಸರಿ ಅಂತ ತಲೆ ಕೆಡೋ ಹಾಗೆ ಮಾಡೋರುನ್ನ ಪಕ್ಕಕ್ಕಿಟ್ಟು ಈ ವಿಷ್ಯಾನ ನೋಡೋಣ ಬನ್ನಿ ಗುರುಗಳೇ. ನಿಜಾ ಅಂದ್ರೆ ಕನ್ನಡದೋರು ಬೇರೆ ಬೇರೆ ಭಾಷೆ ಕಲಿಯಕ್ಕೂ ಇದಕ್ಕೂ ಯಾವ ಸಂಬಂಧಾನೂ ಇಲ್ಲ. ಬರಿ ಹಿಂದಿ ಯಾಕೆ, ತಮಿಳು, ತೆಲುಗು, ಮರಾಠಿ, ಭೋಜ್ ಪುರಿ, ಸಂಸ್ಕೃತ, ಜರ್ಮನ್, ಜಪಾನೀಸ್, ಫ್ರೆಂಚು ಬೇಕಾದ್ರೂ ಕಲಿಯೋಣ. ಹಾಗೆ ಹತ್ತಾರು ಭಾಷೆ ಕಲಿಯೋದೂ ಒಳ್ಳೇದೇನೆ. ಆದ್ರೆ ಒಂದು ದೇಶಾ ಅಂತ ಒಂದು ವ್ಯವಸ್ಥೆ ಮಾಡಿ ಅದರಂತೆ ರಾಜ್ಯಗಳ ಯೋಜನೆಗಳಿಗೆ ಒಪ್ಪಿಗೆ ಬೇಕಂದ್ರೆ ದಿಲ್ಲಿಗೆ ಬರಬೇಕು ಅಂತಾ ಮಾಡಿ, ರಾಜ್ಯಗಳ ಕೆಲಸಗಳು ಆಗಬೇಕು ಅಂದ್ರೆ ’ನೀವು ಹಿಂದಿ ಕಲೀಲೆ ಬೇಕು, ಇಲ್ದಿದ್ರೆ ನಿಮ್ಮ ಯೋಜನೆಗಳಿಗೆ ಅನುಮತಿ ಸಿಗಲ್ಲ’ ಅನ್ನೋದು ಅಕ್ಷಮ್ಯ. ಕೇಂದ್ರದ ಜೊತೆ ಆಗಬೇಕಾದ ನಮ್ಮ ಕೆಲಸಗಳಿಗಾಗಿ ನಮ್ಮ ಭಾಷೆ ಬಳಸೋ ಹಾಗಿಲ್ಲ ಅನ್ನೋದನ್ನು ತಪ್ಪು ಅನ್ನಕ್ಕೂ ನಾವು ಎಲ್ಲಾ ಭಾಷೇನೂ ಗೌರವಿಸಬೇಕು ಅನ್ನೋದಕ್ಕೂ ಏನಾದ್ರೂ ಸಂಬಂಧ ಇದೆಯಾ ಗುರು? ಇದು ಭಾರತ, ಇಲ್ಲಿನ ಅಧಿಕೃತ ಭಾಷೆ ಹಿಂದಿ ಅನ್ನೋದಾದ್ರೆ ಬದಲಾಗಬೇಕಿರೋದು ನಾವಾ? ಅಥವಾ ವ್ಯವಸ್ಥೇನಾ? ಮೈಗೆ ತಕ್ಕಂತೆ ಅಂಗಿ ಹೊಲುಸ್ಕೊಬೇಕೇ ಹೊರತು ಅಂಗಿ ಆಕಾರಕ್ಕೆ ಮೈನ ಹಿಗ್ಸೋದು ಕುಗ್ಸೋದು ಮಾಡಕ್ ಆಗುತ್ತಾ ಗುರೂ?

ಕೇಂದ್ರದೊಂದಿಗೆ ವಹಿವಾಟಿಗೆ ಹಿಂದಿ ಕಡ್ಡಾಯ ಅನ್ನೋದು ಸರಿಯಲ್ಲ!

ವಿಷಯ ಏನಪ್ಪಾ ಅಂದ್ರೆ ನಿಜವಾಗ್ಲೂ ದಿಲ್ಲಿಯಲ್ಲಿ ಕನ್ನಡದೋರ ಕೆಲಸ ಆಗಬೇಕಾದ್ರೆ ಹಿಂದಿ ಮಾತ್ರಾ ನಡೆಯೋದು ಅನ್ನೋದು ವಾಸ್ತವಾನೋ ಅಲ್ಲವೋ ಅನ್ನೋದಕ್ಕಿಂತ ನಮ್ಮ ಕನ್ನಡಿಗರಲ್ಲೇ ಅನೇಕರ ಮನಸ್ಸಲ್ಲಿ ಭಾರತ/ಕೇಂದ್ರ ಸರ್ಕಾರದ ವ್ಯವಹಾರ ಅಂದ ಕೂಡಲೇ ಹಿಂದಿ ಕಲಿತಿರಲೇ ಬೇಕು, ಇದು ಸಹಜವಾದದ್ದು, ಸರಿಯಾದದ್ದು ಅನ್ನೋ ಮನಸ್ಥಿತಿ ಬೇರೂರಿರೋದು ಭಾರತದ ಒಳಿತಿನ ದೃಷ್ಟಿಯಿಂದಲೇ ಒಳ್ಳೇದಲ್ಲಾ. ಇಂಥಾ ಮನಸ್ಥಿತಿ ಪತ್ರಿಕೆಗಳವರಿಗಿರೋದಂತೂ ನಾಡಿನ ಹಿತಕ್ಕೆ ಮತ್ತಷ್ತು ಹೆಚ್ಚು ಮಾರಕ. ಕೇಂದ್ರ ಸರ್ಕಾರದ ಹಣಕಾಸು ಮಂತ್ರಿಗಳಾದ ಶ್ರೀ ಚಿದಂಬರಂ ಅವರು ಹಿಂದೊಮ್ಮೆ ಮುಂಬೈಯಲ್ಲಿ ಪತ್ರಿಕಾ ಗೋಷ್ಟಿ ಮಾಡ್ತಿದ್ದಾಗ ಇದೇ ಮನಸ್ಥಿತಿಯ ಪತ್ರಕರ್ತರೊಬ್ಬರು ಇದು ಭಾರತ, ಹಿಂದಿಯಲ್ಲಿ ಮಾತಾಡಿ ಅಂದಾಗ ಮಂತ್ರಿಗಳು ನಾನು ಇಂಗ್ಲಿಷಲ್ಲಿ ಮಾತಾಡ್ತೀನಿ, ಬೇಕಾದ್ರೆ ತರ್ಜುಮೆದಾರರನ್ನು ಇಟ್ಕೊಳ್ಳಿ ಅಂದಿದ್ದು ಈ ಸಂದರ್ಭದಲ್ಲಿ ನೆನಪಾಗ್ತಿದೆ. ಆಗ ಚಿದಂಬರಂ ಅವ್ರು ಸಾರಿದ್ದು ಭಾರತೀಯ ಆಗಿರೋದಕ್ಕೆ ಹಿಂದಿ ಕಲಿತಿರಲೇಬೇಕು ಅನ್ನೋದು ಸರಿಯಲ್ಲ ಅಂತಾ. ದೇವೆಗೌಡರು ಪ್ರಧಾನಿಯಾದಾಗ "ಈ ಮನುಷ್ಯಂಗೆ ಹಿಂದೀನೇ ಬರಲ್ಲ, ಇವರು ಹ್ಯಾಗೆ ಭಾರತದ ಪ್ರಧಾನಿಯಾಗಲು ಲಾಯಕ್ಕು?" ಅನ್ನೋ ಅಪಸ್ವರಗಳು ಎದ್ದಿದ್ದನ್ನು ಮರೆಯಕ್ಕಾಗುತ್ತಾ ಗುರು? ಭಾರತದ ಪ್ರಧಾನಿಯಾದವರಿಗೆ ಹಿಂದಿ ಬರಲೇಬೇಕು, ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡೋರು ತಮಗೆ ಬರದೇ ಇದ್ರೂ, ತಮ್ಮ ಭಾಷೇಲಿ ಬರೆದುಕೊಂಡಾದ್ರೂ ಹಿಂದೀಲಿ ಭಾಷಣ ಮಾಡಲೇಬೇಕು ಅನ್ನೋ ಮನಸ್ಥಿತಿ ತಪ್ಪು. ಕೆಂಪುಕೋಟೆ ಮೇಲೆ ನಿಂತ ದೇವೇಗೌಡರಿಗೆ ಕನ್ನಡದಲ್ಲಿ ಭಾಷಣ ಮಾಡೊಕೆ, ಮನಮೋಹನ್ ಸಿಂಗರಿಗೆ ಪಂಜಾಬಿಯಲ್ಲಿ ಭಾಷಣ ಮಾಡೊಕ್ಕೆ ಅವಕಾಶ ಇರೋದೆ ಸರಿಯಾದ್ದು. ಆದರೆ ಭಾರತದಲ್ಲಿ ಸ್ವತಂತ್ರ ಬಂದಾಗಿನಿಂದಲೂ ಎಲ್ಲ ಪ್ರದೇಶಗಳ ಜನರ ತಲೆ ಸವರಿ ಸವರಿ ಹಿಂದಿ ಅನಿವಾರ್ಯ ಅನ್ನೋ ಮನಸ್ಥಿತಿಯನ್ನು ಕನ್ನಡಿಗರಲ್ಲೇ ಹುಟ್ಟು ಹಾಕಿರೋದು ನಿಜಕ್ಕೂ ಹುನ್ನಾರ ಅಲ್ವಾ ಗುರು? ಇದರಿಂದ ನಾವು ಆದಷ್ಟು ಬೇಗ ಹೊರಗ್ ಬರಲೇಬೇಕು ಗುರು!

4 ಅನಿಸಿಕೆಗಳು:

ತಿಳಿಗಣ್ಣ ಅಂತಾರೆ...

ಏನ್‌ಗುರು ಇಲ್ಲಿ ಬಾವನೆಗಳಿಗಿಂತ ನಮ್ಮ ಕಾನೂನೇ ಹಾಗಿದೆ..

ಗಮನಿಸಿರಿ.. ಕೇಂದ್ರ ಸರಕಾರದ ಆಡಳಿತ ನುಡಿಗಳು ಹಿಂದಿ ಮತ್ತು ಇಂಗ್ಲೀಶು. ಇವೆರಡರಲ್ಲಿ ಹಿಂದಿಗೆ ಒತ್ತು ಹೆಚ್ಚು ಎಂದು ಅದು ರಾಜಬಾಶೆ ಎಂದು ಆಗಲೇ ಕೇಂದ್ರ ಸಾರಿದೆ.

ಈಗ ಒಬ್ಬ ಅದಿಕಾರಿ ’ಕೇಂದ್ರ ಸರಕಾರ’ ಎಂಬ ಸಂಸ್ತೆಗೆ ನಂಟಾದ ಕೆಲಸಗಳನ್ನು ಮಾಡುವಾಗ/ಮಾಡಿಸಿಕೊಳ್ಳುವಾಗ ಆ ಸಂಸ್ತೆಯ ಆಡಳಿತ ನುಡಿ(ಗಳನ್ನು)ಯನ್ನು ತಿಳಿದುಕೊಳ್ಳಲೇ ಬೇಕು.. ಅದನ್ನು ತಿಳಿಯದೇ ಆ ಸಂಸ್ತೆಯಲ್ಲಿ ಕೆಲಸ ಮಾಡುವುದು/ಮಾಡಿಸಿವುದು ಆಗಲ್ಲ.

ಈ ಇಕ್ಕಟ್ಟಿಗೆ ಕನ್ನಡಿಗರಾದ ನಾವೇ ಮಾಡಿಕೊಂಡ ಹಲವು ತಪ್ಪುಗಳು ಕಾರಣಗಳು
೧) ಹಿಂದಿ ವಿರೋದಿ ಚಳುವಳಿ ತಮಿಳುನಾಡಲ್ಲಿ ನಡೆದಾಗ ಅದನ್ನು ನಾವು ಬೆಂಬಲಿಸಿಲ್ಲ.
೨) ಕರ್ನಾಟಕವೂ ತ್ರಿಬಾಶೆಯ ಸೂತ್ರ.. ಅಂದರೆ ಕನ್ನಡ-ಹಿಂದಿ-ಇಂಗ್ಲಿಶು ಮೂರು ನುಡಿಗಳನ್ನು ಒಪ್ಪಿದೆ.
೩) ಕೇಂದ್ರ ಸರಕಾರ ಆಡಳಿತ ಬಾಶೆಯಾಗಿ ಹಿಂದಿಯನ್ನ ಮಾಡಿದಾಗ, ಹಾಗೂ ಅದಕ್ಕೆ ಒತ್ತು ಕೊಟ್ಟು ರಾಜಬಾಶೆ ಎಂದಾಗ ಸುಮ್ಮನಿದ್ದುದು.

ಇಶ್ಟೆಲ್ಲ ತಪ್ಪುಗಳನ್ನು ಮಾಡಿಕೊಂಡಿರುವ ಕನ್ನಡಿಗರು.. ಏನ್ಗುರು ಹೇಳ್ತಾ ಇರೋದನ್ನೆಲ್ಲ ಪೂರಯ್ಸಲು
೧) ಬಂಗಾಳಿ/ತಮಿಳರಂತೆ ಹಿಂದಿಯನ್ನು ಬಿಟ್ಟು ಬರೀ ಎರಡು ಇಲ್ಲವೇ ಒಂದೇ ನುಡಿಯ ಸೂತ್ರವನ್ನು ಒಪ್ಪಬೇಕು
೨) ಕೇಂದ್ರ ಸರಕಾರ ಎಂಬ ಸಂಸ್ತೆಯ ಆಡಳಿತ ನುಡಿಯಾಗಿ ಕನ್ನಡವನ್ನೂ ಸೇರಿಸಬೇಕು
೩) ಹಿಂದಿಯನ್ನು ’ರಾಜಬಾಶೆ’ ಕನ್ನಡಿಗರಿಗೆ ಅಲ್ಲ ಎಂದು ಮಾಡಬೇಕು..

ಇದೆಲ್ಲ ಆಗಲು ನಾವು ಆರಿಸುವ ಕನ್ನಡನಾಡಿ ಮುಂದಾಳುಗಳಿಗೆ ಇದ ಬಗ್ಗೆ ಗಮನವಿರಬೇಕು....

ಈಗಿರುವ ಬಿಜೆಪಿ, ಕಾಂಗ್ರೆಸ್ಸು, ಜೇಡಿಎಸ್ಸು ಇವರಿಗೆ ಇದರ ಬಗ್ಗೆ ಆಸಕ್ತಿ ಇರುವಂತೆ ಕಾಣುತ್ತಿಲ್ಲ...

ಉಉನಾಶೆ ಅಂತಾರೆ...

ಮಾಯ್ಸ ಹೇಳಿರುವುದು ನೂರಕ್ಕೆ ನೂರು ಸರಿ.
ನಾವೀಗ ಇನ್ನೊಂದು ಹಿಂದಿ ವಿರೋಧಿಸುವ ಚಳುವಳಿ ಮಾಡದೆ ಬಗೆಯಿಲ್ಲ ಅನ್ನಿಸುತ್ತದೆ.
ಹಿಂದಿಗೆ ಪ್ರಬಲ ವಿರೋಧ ವ್ಯಕ್ತಪಡಿಸದಿದ್ದರೆ ಮುಂದೆ ತುಂಬ ತುಂಬ ಕಷ್ಟವಾಗುತ್ತದೆ.
ಇತೀ,
ಉಉನಾಶೆ

sunaath ಅಂತಾರೆ...

ಈ ರೂಲು ತಮಿಳಿನವರಿಗೆ ಅನ್ವಯ ಆಗೋದಿಲ್ಲ. ಅವರು ತಮ್ಮ ಕಡತಗಳನ್ನು ಕೇವಲ ಇಂಗ್ಲಿಶಿನಲ್ಲಿ ಕೊಟ್ಟರೂ ಅವು sanction ಆಗುತ್ತವೆ.
ಇದರರ್ಥ ಏನೆಂದರೆ, ನಮ್ಮ ರಾಜಕಾರಣಿಗಳು ಶಿಖಂಡಿಗಳು ಅಂತ.

Anonymous ಅಂತಾರೆ...

ಭಾರತದ "ಅಫಿಷಿಯಲ್ ಲಾಂಗ್ವೇಜ್ ಆಕ್ಟ್"ನಿಂದ ತಮಿಳರು ಮುಕ್ತರಾಗಿದಾರೆ. ಅವರಿಗೆ ಇದು ಅನ್ವಯ ಆಗಲ್ಲವಂತೆ. ಈ ಲಿಂಕ್ ನೋಡಿ
http://rajbhasha.nic.in/dolruleseng.htm
ಕನ್ನಡಿಗರಿಗೂ ಈ ವಿನಾಯ್ತಿ ಸಿಗಲಿ, ಯಾಕಂದ್ರೆ ಭಾರತದಲ್ಲಿ ಎಲ್ರೂ ಸಮಾನರು ತಾನೇ?

ಗುಂಡ

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails