ರೈಲ್ವೇ ನೇಮಕಾತಿ: ಮುಖ್ಯಮಂತ್ರಿಗಳಿಗೊಂದು ಬಹಿರಂಗ ಪತ್ರ

ಸನ್ಮಾನ್ಯ ಮುಖ್ಯಮಂತ್ರಿಗಳೇ, ನಾಡಿನ ಎಲ್ಲ ಕನ್ನಡಿಗರ ಪರವಾಗಿ ನಿಮಗೆ ನಮ್ಮ ನಮಸ್ಕಾರಗಳು. ಕರ್ನಾಟಕವೆಂಬ ನಮ್ಮೀ ಮನೆಯ ಯಜಮಾನ್ರು ನೀವು. ಈ ಮನೆಯ ಮಕ್ಕಳ ಯೋಗಕ್ಷೇಮದ ಹೊಣೆಗಾರಿಕೆ ನಿಮ್ದು. ಪ್ರಜೆಗಳ ಪಾಲಿನ ತಂದೆಯಾಗಿ ತಾವು ನಮ್ಮ ಬದುಕುವ ಹಕ್ಕನ್ನು ಉಳಿಸಿಕೊಡಬೇಕಾದದ್ದು ನಿಮ್ಮ ಮೊದಲ ಕರ್ತವ್ಯ ಮತ್ತು ನಿಮ್ಮ ಅಸ್ತಿತ್ವದ ಪರಮೋದ್ದೇಶ.

ಟಾಟಾ ಬರಲಿ ಎಂದು ಶ್ರಮಿಸಿದ್ದು ಯಾಕೆ?

ಮೊನ್ನೆ ಮೊನ್ನೆ ಟಾಟಾ ಸಂಸ್ಥೆಯ ನ್ಯಾನೋ ಕಾರು ತಯಾರಿಕಾ ಘಟಕ ಕರ್ನಾಟಕಕ್ಕೆ ಬರಲಿ ಅಂತ ತಾವೂ ತಮ್ಮ ಸರ್ಕಾರದೋರೂ ಅದೆಷ್ಟು ಪ್ರಯತ್ನ ಪಟ್ರಿ. ಟಾಟಾ ಸಂಸ್ಥೆಯ ಅಧಿಕಾರಿಗಳಿಗೆ ನೀವು ಕೊಟ್ಟ ಮರ್ಯಾದೆ ಎಷ್ಟು? ನೀವು ಆ ಸಂಸ್ಥೆಗೆ ಏನೆಲ್ಲಾ ರಿಯಾಯ್ತಿ, ಸೌಕರ್ಯಗಳನ್ನು ಕೊಡಕ್ಕೆ ಮುಂದಾಗಿದ್ರಿ ಅನ್ನೋದನ್ನು ಒಂದು ಸಾರ್ತಿ ನೆನಪು ಮಾಡಿಕೊಟ್ಟು ಮುಂದಿನ ಮಾತಾಡೋಣ. ಮಹಾಸ್ವಾಮಿಗಳೇ, ಯಾಕೆ ನೀವು ಟಾಟಾ ಕಾರ್ಖಾನೆ ಬರ್ಲಿ ಅಂತ ಇಷ್ಟೊಂದು ಪ್ರಯತ್ನ ಪಟ್ರಿ? ಸರ್ಕಾರಕ್ಕೆ ತೆರಿಗೆ ಬರುತ್ತೇ ಅಂತಲಾ? ಹಾಗಿದ್ದಿದ್ರೆ ತೆರಿಗೆ ರಜೆ ಕೊಡ್ತೀವಿ ಅಂತಿರಲಿಲ್ಲಾ ಅಲ್ವಾ? ಹಾಗಾದ್ರೆ ಮತ್ಯಾಕೆ ಯಜಮಾನ್ರೇ, ಟಾಟಾ ಬರಲಿ ಅಂತ ಶತ ಪ್ರಯತ್ನ ಮಾಡುದ್ರಿ? ನಮ್ಮ ಜನರಿಗೆ ಕೆಲಸ ಸಿಗುತ್ತೆ ಅಂತ್ಲಾ? ಹೌದು ತಾನೆ? ನಮ್ಮ ನಾಡಿನ ಏಳಿಗೆಗೆ ಉದ್ದಿಮೆಗಾರಿಕೆ ಮತ್ತದು ಸೃಷ್ಟಿ ಮಾಡೋ ಕೆಲಸಗಳೇ ದಾರಿ ಅನ್ನೋ ಸತ್ಯ ತಮಗೆ ಮನವರಿಕೆ ಆಗಿಯೇ ಇದೆ ಅನ್ನೋದು ನಮ್ಮ ನಂಬಿಕೆ.

ಅಂಗೈಲಿರೋ ಬೆಣ್ಣೆ : ರೈಲ್ವೇಯ ’ಡಿ’ ಗುಂಪಿನ ಹುದ್ದೆಗಳು

ಇದೀಗ ತಡೆ ಹಿಡಿದಿದ್ದ ನೈಋತ್ಯ ವಲಯದ ರೇಲ್ವೆಯಲ್ಲಿ ’ಡಿ’ ಗುಂಪಿನ ಹುದ್ದೆಗಳಿಗೆ ನೇಮಕಾತಿ ಮತ್ತೆ ಶುರು ಮಾಡ್ತಿದಾರಲ್ಲಾ? ಈ ಕೆಲಸಗಳು ಕನ್ನಡಿಗರಿಗೆ ಸಿಗಬಾರದೆಂದು ರೇಲ್ವೆಯವರು ಹುನ್ನಾರ ನಡೆಸಿರಬಹುದು ಎಂಬ ಅನುಮಾನ ನಿಮಗೆಂದೂ ಬಂದಿಲ್ವಾ? ಅಥ್ವಾ ಬಂದಿದ್ರೂ ಸುಮ್ಮನಿದ್ದೀರಾ? ಒಟ್ಟಾರೆ ಆ ಕೆಲಸಗಳು ಕನ್ನಡದೋರಿಗೇ ಸಿಗೋ ಹಾಗೆ ಕ್ರಮ ತೊಗೊಳ್ಳೋ ಮನಸ್ಸು ಮಾಡ್ತೀರಾ? ಧಣಿಗಳೇ, ಹತ್ತು ಸಾವಿರ ಕೆಲಸ ಹುಟ್ಟುತ್ತೆ ಅಂತಾ ಟಾಟಾದವರಿಗೆ ಅಷ್ಟೆಲ್ಲಾ ಸೌಕರ್ಯ ಕೊಡಕ್ಕೆ ಮುಂದಾದ ನೀವು, 4701 ಹುದ್ದೆಗಳು ನಾಡಿಗರಿಗೆ ಸಿಗಲೀ ಅಂತ ಏನೇನು ಕ್ರಮಕ್ಕೆ ಮುಂದಾಗ್ತೀರಾ? ಹೇಳಿ. ಉತ್ತರ ಕರ್ನಾಟಕದ ಏಳಿಗೆಗಾಗಿ ನೂರಾರು ಯೋಜನೆಗಳನ್ನು ಕೈಗೊಳ್ಳಲು ಮುಂದಾಗ್ತೀವಿ ಅನ್ನುವ ನೀವು ಈ ಅಂಗೈಯಲ್ಲಿನ ಬೆಣ್ಣೆಯನ್ನು ಕಡೆಗಣಿಸೋದನ್ನು ಹೇಗೆ ಸಹಿಸೋದು? ನಿಮ್ಮ ಕಾಳಜಿ ನಿಜವಾದುದು ಅಂತ ಸಾಧಿಸಲಾದರೂ ನೀವು ಮಾತಾಡಬೇಕಿದೆ ಯಡ್ಯೂರಪ್ಪನವರೇ...

ನೈಋತ್ಯ ರೈಲ್ವೇ ಹುದ್ದೆಗಳು ನಮ್ಮ ಅಗತ್ಯ!

ಈ ನಾಡಿನಲ್ಲೇ ತನ್ನ ಕಾರ್ಯಬಾಹುಳ್ಯ ಹೊಂದಿರೋ ನೈಋತ್ಯ ರೇಲ್ವೇಯಲ್ಲಿ 4701 ಡಿ ಗುಂಪಿನ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಬೇಕಿರೋ ಅರ್ಹತೆ ಎಂಟನೇ ತರಗತಿ ಓದು. ಡಿ ಗುಂಪಿನ ನೌಕರಿ ಅಂದ್ರೆ ಕಲಾಸಿ, ಗ್ಯಾಂಗ್ ಮ್ಯಾನ್, ಟ್ರ್ಯಾಕ್ ಮ್ಯಾನ್, ಪ್ಲಾಟ್ ಫಾರ್ಮ್ ಪೋರ್ಟರ್, ಪಾರ್ಸಲ್ ಪೋರ್ಟರ್ ಮತ್ತು ಸಫಾಯಿವಾಲಾ ಅನ್ನೋದು ರೈಲ್ವೇಯವರ ವಿವರಣೆ. ಈ ಕೆಲಸ ಮಾಡಲು ಯೋಗ್ಯತೆ ಇರೋ 4701 ನಿರುದ್ಯೋಗಿ ಯುವಕರು ಕನ್ನಡನಾಡಲ್ಲಿ ಸಿಗಲಾರರಾ? ನಮ್ಮ ನಾಡಲ್ಲೇ ಇರೋ ಈ ಹುದ್ದೆಗಳಿಗೆ ಅರ್ಜಿ ಬರೀಬೇಕಾದರೆ ಇಂಗ್ಲಿಷು ಅಥವಾ ಹಿಂದಿಯಲ್ಲಿ ಮಾತ್ರಾ ಬರಿಯಬೇಕು ಅನ್ನೋ ನಿಬಂಧನೆಯನ್ನು ರೈಲ್ವೇ ಇಲಾಖೆ ಹಾಕಿರುವುದರ ಉದ್ದೇಶವೇನಿರಬಹುದು? ಇದರ ಪರಿಣಾಮಗಳೇನು? ಅನ್ನುವುದರ ಬಗ್ಗೆ ಸ್ವಲ್ಪ ವಿಚಾರ ಮಾಡ್ತೀರಾ ತಂದೇ...

ಜನ್ರಿಗಾಗಿ ವ್ಯವಸ್ಥೆ ಇರೋದು ಸರಿಯಲ್ವಾ?

ಇಂತಹ ಕೆಳ ಹಂತದ ಕೆಲಸಗಳಿಗೂ ಕನ್ನಡಿಗರನ್ನು ಹಿಂದಿ ಬಾರದ ಕಾರಣಕ್ಕೆ ಅನರ್ಹರನ್ನಾಗಿಸೋದು ಕ್ರೌರ್ಯ ಅನ್ನಿಸೋಲ್ವಾ ನಿಮಗೆ? "ಇದು ಭಾರತ ಸರ್ಕಾರದ ಸೇವೆ, ಭಾರತದ ಸಂವಿಧಾನದ ಪ್ರಕಾರ ಯಾರು ಎಲ್ಲಿಗಾದರೂ ಕೆಲಸಕ್ಕೆ ಅರ್ಜಿ ಹಾಕಬಹುದು" ಅಂತಾ ಬಿಹಾರಿ, ಉತ್ತರ ಪ್ರದೇಶಗಳ ಅಭ್ಯರ್ಥಿಗಳಿಗೆ ಅವಕಾಶ ಕೊಡೋದ್ನ ಒಂದೆಡೆ ಒಪ್ತಾ," ಹಿಂದಿ-ಇಂಗ್ಲಿಷು ಭಾರತದ ಅಧಿಕೃತ ಆಡಳಿತ ಭಾಷೆಗಳು, ಆದ್ದರಿಂದ ಹಿಂದಿಯಲ್ಲಿ ಅರ್ಜಿ ಬರೀರಿ ಅನ್ನೋದು ಸರಿ" ಅಂತಾ ಇನ್ನೊಂದೆಡೆ ಒಪ್ತಾ ನಮ್ಮ ನಾಡಿನ ಮಕ್ಕಳಿಗೆ ಅನ್ಯಾಯ ಆಗ್ತಿರೋದನ್ನು ಸಹಿಸೋದು ಸರೀನಾ ಸ್ವಾಮಿ? ಎಂಟನೇ ತರಗತಿ ಓದಿರೋ ಅಭ್ಯರ್ಥಿಗೆ ತನ್ನದಲ್ಲದ ಒಂದು ನುಡಿಯಲ್ಲಿ ಅರ್ಜಿ ಬರೆಯುವಷ್ಟು ಪ್ರಾವೀಣ್ಯತೆ ಇರಲು ಸಾಧ್ಯವೇ? ವ್ಯವಸ್ಥೆ ಹಾಗಿದೇ ಅಂದರೆ ಬದಲಾಯಿಸಿ...ಇಡೀ ಪ್ರಜಾಪ್ರಭುತ್ವ, ಸಂವಿಧಾನ, ಆಡಳಿತ ವ್ಯವಸ್ಥೆಗಳೆಲ್ಲಾ ಇರುವುದೂ, ಇರಬೇಕಾದ್ದೂ ಪ್ರಜೆಗಳ ಹಿತ ಕಾಪಾಡಲು ಅಲ್ಲವೇನು? ಇರುವ ವ್ಯವಸ್ಥೆ ನಾಡಿನ ಜನರ ಹಿತ ಕಾಪಾಡಲು ವಿಫಲವಾಗುತ್ತಿರುವುದು ಕಣ್ಣಿಗೆ ರಾಚುತ್ತಿದ್ದಾಗಲೂ ಅಂತಹ ವ್ಯವಸ್ಥೆಯನ್ನು ಬದಲಾಯಿಸಲು ಮನೆ ಯಜಮಾನರಾದ ತಾವು ಯಾವ ಕ್ರಮ ತೊಗೋತೀರಿ ದೊರೆಗಳೇ? ಕನ್ನಡಿಗರು ಕೂಡಾ ಭಾರತೀಯರು ತಾನೇ? ಹಿಂದಿ ಕಲಿತಿಲ್ಲ ಅನ್ನೋ ಕಾರಣಕ್ಕೆ ನಿಮಗೆ ಉದ್ಯೋಗ ಇಲ್ಲ ಅನ್ನೋದನ್ನು ಹೇಗೆ ಒಪ್ತೀರಿ ಧಣಿಗಳೇ? ನಮ್ಮ ಮನೆಯ ಮಕ್ಕಳನ್ನು ಉಪವಾಸ ಕೆಡವಿ ನೆರೆಯವರನ್ನು ಪೊರೆಯೋದು ಸರೀನಾ ಗುರುಗಳೇ?

ಸ್ವಲ್ಪ ರಾಜಕೀಯ ಇಚ್ಛಾಶಕ್ತಿ ತೋರಿಸಿ ಧಣಿ!

ಧಣಿಗಳೇ, ಇದೊಂದು ಉದಾಹರಣೆ ನೋಡಿ. ಭಾರತಕ್ಕೆ ನೇರವಾಗಿ ಹಿಡಿತವೇ ಇಲ್ಲದ ಶ್ರೀಲಂಕಾದಲ್ಲಿ ತಮಿಳರ ಮೇಲೆ ಅಲ್ಲಿನ ಸೈನ್ಯ ಯುದ್ಧಕ್ಕೆ ಮುಂದಾದರೆ ’ಭಾರತ ಮಧ್ಯ ಪ್ರವೇಶಿಸಿ ಅವರನ್ನು ಕಾಪಾಡಬೇಕು, ಇಲ್ಲದಿದ್ರೆ ನಾವು ರಾಜಿನಾಮೆ ಬಿಸಾಕ್ತೀವಿ’ ಅನ್ನೋ ತಮಿಳುನಾಡಿನ ಸಂಸದರ ರಾಜಕೀಯ ಇಚ್ಛಾಶಕ್ತಿಯನ್ನು (ಇದು ಸರೀನಾ? ತಪ್ಪಾ? ಅನ್ನೋದು ಇಲ್ಲಿ ಅಪ್ರಸ್ತುತ) ನೋಡಿದ ಮೇಲೂ ನಾವು ಕನ್ನಡಿಗರು ಕಲ್ಯದು ಏನಾರಾ ಇದೆ ಅನ್ನುಸ್ತಿಲ್ವಾ ಯಜಮಾನ್ರೆ? ನೀವೂ ಕಡೇಪಕ್ಷ ಕನ್ನಡನಾಡಲ್ಲಿರೋ ಕನ್ನಡಿಗರಿಗೆ ಕರ್ನಾಟಕದಲ್ಲಿ ಅನ್ಯಾಯ ಆಗದ ಹಾಗೇ ತಡೆಯಕ್ಕೆ ಆಗಲ್ವಾ? ಕೈಗೆಟುಕೋ ಹಣ್ಣಿನಂತಿರೋ ರೈಲ್ವೇಯಲ್ಲಿನ ಈ ಹುದ್ದೆಗಳು ಕನ್ನಡಿಗರಿಗೆ ಸಿಗುವಂತೆ ಮಾಡಲು ನಿಮಗೆ ಅಸಾಧ್ಯ ಅನ್ನಿಸುತ್ತಿದೆಯೇ? ಕರ್ನಾಟಕದ ಅಷ್ಟೂ ಸಂಸದರನ್ನು ಈ ಬಗ್ಗೆ ದನಿಯೆತ್ತುವಂತೆ ಮಾಡಲು ನಿಮಗೆ ಅಸಾಧ್ಯವೇ? ಇಂದು ನೀವು ಈ ಹುದ್ದೆಗಳನ್ನು ಕನ್ನಡಿಗರಿಗೆ ದಕ್ಕಿಸಿಕೊಟ್ಟಿದ್ದೇ ಆದರೆ ಈ ನಾಡಿನ ಸಾವಿರಾರು ನಿರುದ್ಯೋಗಿಗಳು ಕೃತಜ್ಞರಾಗಿರ್ತಾರೆ ಗುರುಗಳೇ!

7 ಅನಿಸಿಕೆಗಳು:

ಪುಟ್ಟ PUTTA ಅಂತಾರೆ...

ಔದು. ಇದು ಅಕ್ಷರಶಃ ಸತ್ಯ. ಈಗಾಗಲೆ ಭೂಕಂಡಾಯದಂತ ಭಾರೀ ಖಾತೆಗಳು ತೆಲುಗು ಗುಳ್ಡುಗಳ ಕೈಲೇ ಇರೋದ್ ನೋಡಿದ್ರೆ ಇನ್ನೈದು ವರ್ಷಗಳಲ್ಲಿ ಅರ್ಧ ಕರ್ನಾಟಕದ ತೆಲುಗರ ಹೆಸರಿನಲ್ಲಿ ನೋಂದಾವಣಿ ಯಾಗುವುದು ಆತಂಕಕಾರಿಯಾದಾದರೂ ಸತ್ಯ.

ಉಉನಾಶೆ ಅಂತಾರೆ...

ಈ ಪತ್ರವನ್ನು ಮುಖ್ಯಮಂತ್ರಿಗಳಿಗೆೆ ಮುಟ್ಟಿಸಲು ಸಾಧ್ಯವೆ?
ಹಾಗೆಯೇ, ಇನ್ನೊಂದು ವಿಚಾರ: ನಮ್ಮ ಏನ್ಗುರು ಪತ್ರಗಳನ್ನು ಯಾವುದಾದರೂ ಪ್ರಮುಖ ದಿನಪತ್ರಿಕಗಳಲ್ಲ್ಲಿನಿಯಮಿತವಾಗಿ ಪ್ರಕಟವಾಗುವಂತೆ ನೋಡಿಕೊಳ್ಳಲು ಸಾಧ್ಯವೇ?

Anonymous ಅಂತಾರೆ...

ಪತ್ರಿಕೆಯಲ್ಲಿ ಬರಬೇಕು. ಏನ್ಗುರು ಪ್ರತೀದಿನ ಹೊಸ ಹೊಸ ಸುದ್ದಿ ತ೦ದು ಜನ ಜಾಗೃತಿ ಮಾಡಬೇಕು. ಒ೦ದು ಕನ್ನಡ ಪತ್ರಿಕೆಯನ್ನೇ ಸೃಷ್ಟಿಮಾಡಬೇಕು. ಜನರ ಮನಸ್ಸನು ಮುಟ್ಟುವ ಹಾಗೆ ಕನ್ನಡಿಗರ ಕನ್ನಡನಾಡಿನ ಪರವಾದ ಪತ್ರಿಕೆ ಬರಬೇಕು.

Anonymous ಅಂತಾರೆ...

monne bengaluralli indu sanje anno patrike nodide,, adaralli enguru blog na article bandittu,,

amele 2-3 dina regular aagi nodide,, dinavu bartide,,

enguru,, olle kelsa,,

hige kannada da ella dodda patrikegaLallu nimma baraha barabeku

Anonymous ಅಂತಾರೆ...

ಏನೇ ಬ್ಲಾಗ್ ಇಂಟರನೆಟ್ ತುಂಬಾ ಫೇಮಸ್ ಅಂತಂದ್ರೂ ಸಾಮಾನ್ಯ ಜನ ಮುಖ್ಯ ಮಂತ್ರಿಗಳು ಅಧಿಕಾರಿಗಳು ಇನ್ನೂ ಪೇಪರನ್ನೇ ಓದೋದು. ನಮ್ಮ ಏನ್ ಗುರು ಲೇಖನಗಳು ವಿಜಯ ಕರ್ನಾಟಕದಲ್ಲೋ ಮತ್ಯಾವುದೋ ಪೇಪರಲ್ಲೋ ಬರೋ ಹಂಗೆ ನೋಡಿಕೋಬೇಕು. ಲೇಖನ ಸೊಗಸಾಗಿದೆ. ಮುಖ್ಯಮಂತ್ರಿಗಳು ನಮ್ಮ ನಾಡಿನಲ್ಲಿ ಕೆಲಸ ಕೊಡಿಸುವುದಕ್ಕೆ ಇದೊಂದು ಸದವಕಾಶ.

Anonymous ಅಂತಾರೆ...

ಇ೦ದು ಸ೦ಜೆ ತರಹ ಎಲ್ಲ ಪತ್ರಿಕೆಗಳಲ್ಲಿ ಏನ್ಗುರು ಜಾಗೃತಿ ಮೂಡಿಸಲಿ.

Anonymous ಅಂತಾರೆ...

railway nemakaati vishayadalli MNS avaru en maadidaare anta nODudvala. ishtella ella rajyadalli galaate aadru cha kaara ettade sumniruva sarkaaragaLige namma dikkara.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails