ಕನ್ನಡದಾ ಮಕ್ಕಳೆಲ್ಲಾ ಒಂದಾಗೆ ಬನ್ನಿ...

ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. ನಮ್ಮ ನಾಡು ಪ್ರಪಂಚದಲ್ಲೇ ಮುಂದುವರಿದ ನಾಡಾಗಬೇಕು ಅನ್ನೋದು ಪ್ರತಿಯೊಬ್ಬ ಕನ್ನಡಿಗನ ಕನಸು. ಆದ್ರೆ ಇವತ್ತು ನಾವು ಇರೋ ಪರಿಸ್ಥಿತಿ, ವಾತಾವರಣ ನೋಡ್ದಾಗ ಈ ಗುರಿ ಇನ್ನೂ ನಮ್ಮ ದಿಟ್ಟಿಗೆ ಎಟುಕಿಲ್ಲ ಅನ್ನಿಸುತ್ತದೆ. ನಾಡು ಎತ್ತ ಸಾಗಬೇಕು? ಏನಾಗಬೇಕು? ಅನ್ನೋದ್ರ ಬಗ್ಗೇನೇ ಕನ್ನಡಿಗರಲ್ಲಿ ಒಂದು ಸ್ಪಷ್ಟವಾದ ಚಿತ್ರಣ ಮೂಡಬೇಕಾಗಿದೆ. ಕನ್ನಡ-ಕನ್ನಡಿಗ-ಕರ್ನಾಟಕಗಳು ಸಾಧನೆಯ ಶಿಖರವನ್ನೇರಬೇಕಾದರೆ ನಾವು ಒಗ್ಗಟ್ಟಾಗಲೇ ಬೇಕು. ಕನ್ನಡಿಗರ ಒಗ್ಗಟ್ಟು ಸಾಧಿಸಲು ಸಾಧ್ಯವಾಗದ್ದು ಏನೂ ಇರಲು ಸಾಧ್ಯವೇ ಇಲ್ಲ. ಈ ಒಗ್ಗಟ್ಟು ಬರಿಯ ದೇಶದೊಳಗಣ ಒಗ್ಗಟ್ಟಲ್ಲ, ನೂರಾರು ವರ್ಷಗಳವರೆಗಿನ ಕನ್ನಡ ಜನಾಂಗವು ಸಾಧನೆಯ ಶಿಖರವೇರುವ ಒಂದೇ ಕನಸಿನ ಸಾಕಾರಕ್ಕಾಗಿ, ಒಂದೇ ಗುರಿಯೆಡೆಗೆ ಸಾಗಲು ಪ್ರೇರಕವಾಗುವ ಕಾಲದಲ್ಲಿನ ಒಗ್ಗಟ್ಟೂ ಆಗಿದೆ.
ಕನ್ನಡತನವೆಂಬ ಗುರುತು

ನಾಡಿನ ಇಂದಿನ ಸಮಸ್ಯೆಗಳನ್ನು ಎದುರಿಸಲು ನಾವು ಶಕ್ತರಾಗಬೇಕಾದರೆ ನಮ್ಮೊಳಗೆ ಕನ್ನಡತನವು ಜಾಗೃತಿಯಾಗಬೇಕಾಗಿದೆ. ಈ ಜಾಗೃತಿಯ ಹಣತೆಯ ಬೆಳಕೇ ನಮ್ಮ ಏಳಿಗೆಯ ದಾರಿ ದೀವಿಗೆ. ಕೆಲವು ಕನ್ನಡಿಗರು ಇಂದು ನಮ್ಮ ಸುತ್ತಲಿನ ಪ್ರಪಂಚವನ್ನು ಕಾಣುತ್ತಿರುವುದು ಸಹಜ ಕಣ್ಣುಗಳಿಂದಲ್ಲ. ಈ ಕಣ್ಣಿನ ಮುಂದೆ ನಾನಾ ರೀತಿಯ ಬಣ್ಣದ ಪರದೆಗಳು ಇವೆ. ಜಾತಿ, ಧರ್ಮ, ಕನ್ನಡತನವನ್ನು ಗೌಣವಾಗಿಸಿಹ ಪೊಳ್ಳು ರಾಷ್ಟ್ರೀಯತೆಯೇ ಮೊದಲಾದ ಈ ಬಣ್ಣದ ಕನ್ನಡಕಗಳ ಮೂಲಕ ನೋಡುತ್ತಿರುವವರೆಗೂ ಕನ್ನಡಿಗರಿಗೆ ಪ್ರಪಂಚದ ನಿಜರೂಪದ ಅರಿವಾಗದು. ಏಳಿಗೆಯ ದಾರಿ ಕಾಣದು. ಕನ್ನಡತನದ ಜಾಗೃತಿ ಈ ಗಾಜುಗಳ ತೆರೆಯನ್ನು ಸರಿಸಿ ಜಗದ ನಿಜರೂಪ ತೋರುವುದು ದಿಟ.
ಎಲ್ಲ ಸಿದ್ಧಾಂತದ ಗುರಿ ಮುಟ್ಟಲು ಇದೇ ಸಾಧನ

ಸಹಜವಾಗಿ ಇರುವ ಸಮಾನತೆಯನ್ನು ಕಾಯ್ದುಕೊಂಡು, ಸಹಜವಾಗಿ ಬಂದಿರುವ ನಮ್ಮತನವನ್ನು ಉಳಿಸಿಕೊಂಡು, ಸಹಜವಾಗಿ ನಮಗೆ ದೊರೆತಿರುವ ನುಡಿ ಸಾಧನವನ್ನು ಬಳಸಿಕೊಂಡೇ ನಾವು ಬೆಳೆಯುವುದು ಸಾಧ್ಯ. ಇಂದು ಕೆಲವರು ನಂಬಿ ಸಾಧಿಸಬೇಕೆಂದಿರುವ ಎಲ್ಲ ಸಮಾನತೆ, ರಾಷ್ಟ್ರೀಯತೆ, ಧರ್ಮಗಳ ಉಳಿವಿಗೆ ಇದೇ ಸಾಧನ. ಕನ್ನಡಿಗರೆಲ್ಲಾ ಇಂದು ಈ ದಾರಿಯನ್ನು ಕಂಡುಕೊಂಡು ಒಂದಾಗಿ ಮುನ್ನಡೆದರೆ ನಮ್ಮ ಏಳಿಗೆ ಅಸಾಧ್ಯವೇನಲ್ಲ. ನಾವಿಂದು ಪ್ರತಿಪಾದಿಸುತ್ತಿರುವ ಈ ಸಹಜವಾದ ಒಗ್ಗಟ್ಟಿನ ಮಂತ್ರದಿಂದಲೇ ಕನ್ನಡಿಗರ ಏಳಿಗೆ, ಕರ್ನಾಟಕದ ಏಳಿಗೆ, ಭಾರತದ ಏಳಿಗೆ, ಇದರಿಂದಲೇ ಮನುಕುಲದ ಏಳಿಗೆ. ಮೇಲ್ನೋಟಕ್ಕೆ ಯಾವುದು ಪ್ರಾಂತೀಯತೆ, ಸಂಕುಚಿತತೆ ಎಂದು ಇಂದು ಕೆಲವರಿಗೆ ತೋರುತ್ತಿರುವುದೋ ಅದು ಸಮಗೌರವದ, ಸಮಾನ ಏಳಿಗೆಯ ಅವಕಾಶ ಕಲ್ಪಿಸುವ, ಸಹಕಾರದ, ಉಜ್ವಲ ರಾಷ್ಟ್ರಪ್ರೇಮದ ದಾರಿ.
ಓ ಕನ್ನಡ ಬಂಧು... ಜಗವ ನೋಡುವ ಕಣ್ಣಿಗೆ ಕವಿದ ಬಣ್ಣದ ಕನ್ನಡಕಗಳನ್ನು ಕಿತ್ತೊಗೆದು ಸಹಜವಾದ ಕಣ್ಣುಗಳಿಂದ ಈ ಜಗವನ್ನು ನೋಡಿದರೆ ಅಂದೇ ಏಳಿಗೆಯ ದಾರಿ, ಸಾಧಿಸಬೇಕಾದ ಗುರಿ ನಿಚ್ಚಳವಾಗಿ ಕಾಣುವುದು ಸತ್ಯ. ಈ ಗುರಿಯೆಡೆಗೆ ಸಾಗೋಣ. ಆ ದಾರಿಯಲ್ಲಿ ಸಾಗಲು ಇಂದು ನಮಗಿರುವ ಎಲ್ಲ ಸಾಧನಗಳನ್ನೂ ಬಳಸೋಣ. ಪ್ರಪಂಚದ ಅತ್ಯುತ್ತಮವಾದವುಗಳನ್ನೆಲ್ಲಾ ಬಳಸೋಣ. ಭಾಷೆ, ಗಡಿಗಳ ಮಿತಿಯಿಲ್ಲದೆ ಎಲ್ಲೆಲ್ಲಿ ನಮ್ಮ ಏಳಿಗೆಗೆ ಪೂರಕವಾದವುಗಳಿವೆಯೋ ಅವೆಲ್ಲವನ್ನೂ ಬಳಸೋಣ. ಸಾಧನೆಯ ಶಿಖರವನ್ನೇರೋಣ. ಕನ್ನಡದಾ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನೀವಾಗ ಬನ್ನಿ!

3 ಅನಿಸಿಕೆಗಳು:

Anonymous ಅಂತಾರೆ...

ಎಲ್ಲ "ಕನ್ನಡಿಗರಿಗೂ" ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-ಶ್ವೇತ

SHASHI ಅಂತಾರೆ...

ella kannadigara hrudayalada bayake eederide... innu mundaadaru belesi posisona.. Kannada ushiragali..hasiragali...kannada siri nadu nudi

Shashi SR.

gvdayana ಅಂತಾರೆ...

U r absolutely right !!

Regards,
Dayanand

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails