ಭಾರತೀಯ ಅಂಚೆ ಇಲಾಖೆಗೆ ಮರೆತುಹೋಗಿರೋ ಕರ್ನಾಟಕ!

ಮೊನ್ನೆ ಕನ್ನಡಪ್ರಭದಲ್ಲಿ "ಕರ್ನಾಪೆಕ್ಸ್ 07 ಬಹಿಷ್ಕರಿಸೋಣ" ಅಂತ ಮೈಸೂರಿನ ಮುದ್ದುಕೃಷ್ಣ ಅವರು ತಮ್ಮ ಅಳಲು ತೋಡ್ಕೊಂಡಿದಾರೆ. ಈ ಕರ್ನಾಪೆಕ್ಸು ಅಂಚೆಚೀಟಿ (ಸ್ಟಾಂಪ್) ಪ್ರದರ್ಶನ "ಅಷ್ಟೇ", ಇದಕ್ಕ್ಯಾಕೆ ಇಷ್ಟೆಲ್ಲ ತಲೆ ಕೆಡಿಸಿಕೋಬೇಕು ಅಂತ ಅನ್ಸ್‍ಬೋದು. ಆದರೆ ಕರ್ನಾಟಕಕ್ಕೆ ಇಲ್ಲೂ ಮೋಸ ಆಗಿರೋದ್ನ ನೋಡಿದ್ರೆ ಕೋಪಾನೇ ಬರತ್ತೆ ಗುರು!

1947 ರಿಂದ 2007 ವರೆಗೆ 1,980 ಅಂಚೆಚೀಟಿಗಳ್ನ ಭಾರತ ಸರ್ಕಾರದ ಅಂಚೆ ಇಲಾಖೆ ಹೊರಡಿಸಿದೆ. ಇದರಲ್ಲಿ ಕನ್ನಡದ್ದು- ಕರ್ನಾಟಕಕ್ಕೆ ಸಂಭಂದ ಪಟ್ಟಿದು ಬೆರಳೆಣಿಕೆಯಷ್ಟು ಮಾತ್ರ. ಒಕ್ಕೂಟದಲ್ಲಿ ಇರೋ ಎಲ್ಲಾ ರಾಜ್ಯಗಳಿಗೆ ಸಂಬಂದ ಪಟ್ಟ ಮಹತ್ವದ ಘಟನೆಗಳ, ಮಹಾನ್ ಪುರುಷರ ನೆನಿಪಿಸಿಕೊಳ್ಳುವ , ಆಗು-ಹೋಗುಗಳ ಬಗ್ಗೆ ದಾಖಲಿಸಲು ಸಮನಾಗಿ ಸ್ಟಾಂಪುಗಳನ್ನು ಹೊರತಂದಿದ್ರೆ ಕರ್ನಾಟಕದ ಮಹತ್ವ ಸಾರೋ 75ಕ್ಕೂ ಹೆಚ್ಚು ಅಂಚೆ ಚೀಟಿ ಹೊರಬರಬೇಕಿತ್ತು.

ಕರ್ನಾಟಕಕ್ಕೆ ಸಂಬಂದಪಟ್ಟಂತೆ ಬಂದ ಮೊಟ್ಟಮೊದಲನೆ ಅಂಚೆಚೀಟೀಂದ್ರೆ 1960ರಲ್ಲಿ ಸರ್. ಎಂ. ವಿಶ್ವೇಶ್ವರಯ್ಯನೋರಿರೋ ಒಂದು ಚೀಟಿ. ಆಮೇಲೆ 1979ರವರೆಗೆ ಬಿಡುಗಡೆಯಾದ ಚೀಟಿಗಳಲ್ಲಕಾಣಿಸಿಕೊಂಡಿದ್ದು ನಮ್ಮ ಬಸವಣ್ಣೋರು ಒಬ್ಬರು ಮಾತ್ರ. ನಂತರದಲ್ಲಿ ನಮ್ಮ ಜ್ಞಾನಪೀಠ ಸಾಹಿತಿಗಳಾದ ಕುವೆಂಪು-ಬೇಂದ್ರೆ-ಗೋಕಾಕ್-ಮಾಸ್ತಿ ಈ ನಾಕು ಕವಿಗಳನ್ನೂ ಒಂದೇ ಚೀಟೀಲಿ ಕುರಿ ತುಂಬಿದಂಗೆ ತುಂಬಿದ್ರು. ಶಿವರಾಮ ಕಾರಂತ ಒಬ್ಬರ ಅಂಚೆಚೀಟಿಯನ್ನ ಬಿಡಿಯಾಗಿ ಮಾಡಿದ್ದು ಬಿಟ್ಟರೆ ಕನ್ನಡಕ್ಕೆ ಸಂಬಂಧಪಟ್ಟ ಮತ್ಯಾವ ವ್ಯಕ್ತಿಗಳ ಅಂಚೆಚೀಟೀನೂ ಬಂದಿಲ್ಲ. ನಾಮಕಾವಸ್ಥೆಗೆ ಸ್ಯಾಂಡಲ್ವುಡ್ (2006) ಮತ್ತು ಬಂಡಿಪುರ ಅರಣ್ಯದ ಬಗ್ಗೆ (2007) ಎರಡು ಚೀಟಿಗಳು ಬಂದಿವೆ ಅಷ್ಟೆ.

ಇತರ ರಾಜ್ಯದ ವ್ಯಕ್ತಿಗಳ ಬಗ್ಗೆ ಹೇಳಬೇಕೆಂದ್ರೆ ಬರೀ 2006 ರಲ್ಲೇ ತಮಿಳುನಾಡಿನ ಬಗ್ಗೆ 17 ಅಂಚೆಚೀಟಿಗಳು ಬಿಡುಗಡೆ ಆಗಿವೆ. ಆ ಸಮಯದಲ್ಲಿ ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಮಂತ್ರಿಯಾಗಿದ್ದಿದ್ದು ಡಿ.ಏಂ.ಕೆ. ದಯಾನಿಧಿ ಮಾರನ್.

ಹೆಂಗಿದೆ ಫಿಟ್ಟಿಂಗು ಗುರು?

ಕರ್ನಾಟಕ ಅನ್ನೋ ಕನಸ್ನ ನನಸುಮಾಡಿದ ಆಲೂರ ವೆಂಕಟರಾಯರು, ಜಯ ಚಾಮರಾಜೇಂದ್ರ ಒಡೆಯರು, ಬಿ.ಎಂ. ಶ್ರೀ, ಸಂಗೊಳ್ಳಿ ರಾಯಣ್ಣ, ಟಿಪ್ಪೂ, ಕೆಂಪೇಗೌಡ, ಪುಲಕೇಶಿ, ಗುಬ್ಬಿ ವೀರಣ್ಣ, ಶಂಕರ್ನಾಗ್ ಇವರನ್ನು ನಾವು ಅಂಚೆಚೀಟಿಗಳಲ್ಲಿ ಕಾಣೋದು ಯಾವಾಗ ಅಂತ ಒಂದಪ್ಪ ಯೋಚ್ನೆ ಮಾಡು ಗುರು!

ಇತ್ತೀಚೆಗೆ ಕರ್ನಾಟಕದ 50 ವರ್ಷದ ಹುಟ್ಟಿದಹಬ್ಬಕ್ಕಾಗಲಿ ನಟಸಾರ್ವಭೌಮ ಡಾ|| ರಾಜಕುಮಾರ್ ನೆನಪಿಗಾಗಿ ಆಗ್ಲಿ ಅಂಚೆಚೀಟಿ ಮಾಡಕ್ಕಾಗಲ್ಲ ಅನ್ನೋ ಅಂಚೆ ಇಲಾಖೆ ನಿಲುವು ಕನ್ನಡಿಗರ್ನ, ಕರ್ನಾಟಕಾನ ಕಡೆಗಣಿಸಿರೋದಲ್ದೆ ಮತ್ತೇನು ಗುರು?

ಇದ್ರಿಂದೆಲ್ಲ ಸ್ಪಷ್ಟವಾಗಿ ಹೊರಗ್ ಬರ್ತಿರೋದು ಏನಪ್ಪಾ ಅಂದ್ರೆ: ಕನ್ನಡಿಗರು ಒಗ್ಗೂಡಿ ಕೇಂದ್ರದಲ್ಲಿ ಗಟ್ಟಿಯಾಗಲಿಲ್ಲಾಂದ್ರೆ, ಭಾರತಸರ್ಕಾರದ ಜುಟ್ಟು ತಕ್ಕಮಟ್ಟಿಗೆ ನಮ್ಮ ಕೈಯಲ್ಲಿಲ್ಲಾಂದ್ರೆ ಅಂಚೆಚೀಟೀನೂ ಹೋಗತ್ತೆ, ಊಟದ ಚೀಟೀನೂ ಹೋಗತ್ತೆ, ಕನ್ನಡಿಗರಿಗೆ ಪ್ರತಿಯೊಂದು ಹೆಜ್ಜೇಲೂ ಈಗಾಗಲೇ ಆಗ್ತಿರೋ ಮೋಸ ಎಂದ್ಗೂ ನಿಲ್ಲಕ್ಕೆ ಸಾಧ್ಯವೇ ಇಲ್ಲ. ಜುಟ್ಟು ನಮ್ಮ ಕೈಗೆ ಬರಲೇಬೇಕು.

ಅದಕ್ಕೆ ಮೊದಲು ಕನ್ನಡ-ಕನ್ನಡಿಗ-ಕರ್ನಾಟಕಗಳ ಹಿತಾಸಕ್ತೀನ ಕಾಯೋದೇ ಗುರಿಯಾಗಿಟ್ಟುಕೊಂಡಿರೋ ಒಂದಾದ್ರೂ ರಾಜಕೀಯ ಪಕ್ಷಾನ ಕನ್ನಡಿಗರು ಒಗ್ಗೂಡಿ ಕಟ್ಟಬೇಕು. ಇಲ್ದಿದ್ರೆ ಕನ್ನಡಪ್ರಭಕ್ಕೆ ಮುದ್ದುಕೃಷ್ಣಗಳು ಈರೀತಿ ಪತ್ರಗಳ್ನ ಬರೆಯೋದು ಎಂದ್ಗೂ ನಿಲ್ಲಲ್ಲ, ಕರ್ನಾಟಕ ಅನ್ನೋದು ಕೇಂದ್ರಾಡಳಿತದಲ್ಲಿರೋ ಇಲಾಖೆಗಳಿಗೆ ನೆನಪೂ ಆಗಲ್ಲ!

4 ಅನಿಸಿಕೆಗಳು:

Rohith B R ಅಂತಾರೆ...

ಸುಲಭವಾಗಿ ಹೇಳುವುದಾದರೆ, ನಮ್ಮನ್ನು ನಾವೇ ಆಳಬೇಕು, ಬೇರೆಯವರಲ್ಲ! ನಮ್ಮನೆ ತೊಂದರೇನ ನಾವೇ ಬಗೆಹರಿಸೋದಕ್ಕ್ಕಾಗೋದು, ಪಕ್ಕದ ಮನೆಯೋರಲ್ಲ.. ಇಲ್ಲವೆ ನಾವು ಹೇಳಿದ ಹಾಗೆ ಕೇಳುವ ಆಳಾದರೆ ಔವ್ರನ್ನ ನೇಮಿಸ್ಕೋಬೋದು..outsourcing ಮಾಡಿದಹಾಗೆ :)

ಈ ದಿಕ್ಕಿನಲ್ಲಿ ಕರ್ನಾಟಕವನ್ನು ಆಳಲು ಅರ್ಹರಾದವರು ಯಾರು ಅಂತ ಅನ್ಸತ್ತೆ ಗುರು ನಿಮ್ಗೆ? ಈಗಿರುವ ಪಕ್ಷಗಳಲ್ಲಿನ ಕೆಲವು ಜನರನ್ನು ಒಗ್ಗೂಡಿಸಲು ಸಾಧ್ಯವೆ ಈ ಕೆಲ್ಸಕ್ಕೆ?? ಅಥ್ವಾ from-scratch ಶುರು ಮಾಡ್ಬೇಕು ಅನ್ಸತ್ತೋ??

Anonymous ಅಂತಾರೆ...

ಅಂಚೆ ಕಛೇರಿಗ್ ಹೋದಾಗ್ಲೆಲ್ಲ ಅನ್ಕೊತಿದ್ದೆ,, ಅವನೌನ್ ನಮ್ಮ ಕರ್ನಾಟಕದ ಬಗ್ಗೆ, ನಮ್ಮ ಕನ್ನಡದ ಮಂದಿ ಬಗ್ಗೆ stamps ಇಲ್ಲೆ ಇಲ್ಲಲಪ ಅಂತ,, ಇವತ್ತು ನಿಮ್ಮ ಬರಹಾ ಒದಿದ ಮ್ಯಾಲ್ ಗೋತ್ತಾತು,, ಪರಿಸ್ಥಿಥಿ ಏನ್ ಐತಿ ಅನ್ನುದ್... ಇದರ ಬಗ್ಗೆ ನಾವೆಲ್ಲಾ ಕೂಡಿ ಕೇಂದ್ರ ಸರ್ಕಾರ್ಕ್ಕ್ ,, ಅಂಚೆ ಇಲಾಖೆಗ್ ಬರೀಯೋಣ್ರಿ ಏನಂತೀರಿ..???

Anonymous ಅಂತಾರೆ...

ಕನ್ನಡಕ್ಕಾಗಿರುವ ತಾರತಮ್ಯತೆಯನ್ನು ಎಲ್ಲಾ ವಿಭಾಗಗಳಲ್ಲಿ ಗಮನಿಸಿ ನಮಗೆ ತಿಳಿಸುತ್ತಿರುವ ನಿಮಗಿದೋ ವಂದನೆ.

Anonymous ಅಂತಾರೆ...

ಕನ್ನಡದಿಂದ ಎಷ್ಟು central representation ಇದೆ ನೋಡಿ ... ಅಲ್ಲಿ ಹೋಗಿ ಕೂರೋ ನಮ್ಮ ಪ್ರತಿನಿದಿಗಳಿಗೂ ಬೇಕಿಲ್ಲ, ರಾಜಕಾರಣಿಗಳಿಗೂ ಬೇಕಿಲ್ಲ .... ಆದ್ರೆ ನಿಮ್ಮ ಡಾ||ರಾಜ್ ಉಧಾಹರಣೆ ಸರಿ ಇಲ್ಲ, ಅಣ್ಣವ್ರು ನಮ್ಮಗೆ ಗ್ರೇಟ್ ಆದ್ರೆ ಆಚೆ ಅವ್ರ್ಗೆ ಅವ್ರು ಬರೀ ಒಬ್ಬ ಶ್ರೆಷ್ಟ ನಟ ಅಷ್ಟೆ ... ಹೀಗೇ ಆಗೋ ಹಾಗಿದ್ರೆ n.t.r, y.n.r, m.g.r, ಶಿವಾಜಿ, ಪುಟ್ಟಣ್ಣ, ಸುಬ್ಬಲಕ್ಷ್ಮಿ, ಕಿಶೋರ್ ಕುಮಾರ್ ಹೀಗೆ ಪಟ್ಟಿ ಹೋಗ್ತಾ ಇರುತ್ತೆ ..... ತಮಿಳರು ಕೇಂದ್ರದಲ್ಲಿ ಕೂತು ಕೆಲ್ಸ ಮಾಡ್ಸ್ಕೊತಾರೆ ... ದೇವೆಗೌಡ್ರು ಅಲ್ಲಿ ಕೂತಾಗ ಅಣ್ಣವ್ರ್ಗೆ ದಾದಾಸಾಹೇಬ್ ಫಾಲ್ಕೆ ಸಿಗ್ಲಿಲ್ವೇ, jnanapeeTಅ ಸಿಗ್ಲಿಲ್ವೆ? ಬೇರೆಯವರಿಗೆಲ್ಲಾ ಹೊಟ್ಟೆ ಉರೀಲಿಲ್ವೆ? ದೆಷ ಅಂದ್ಮೇಲೆ ಹೀಗೆಲ್ಲ ಇದ್ದಿದ್ದೆ ... ಹೋಗಿ ಅಲ್ಲಿ ಕೂತ್ಕೊಳಿ, ಅತ್ವಾ ಕೂತ್ಕೊಳೊ ಅಂತವ್ರ್ಗೆ ತ್ತಿಳ್ಸಿ, ಸುಮ್ನೆ ಇಲ್ಲಿ ಬರ್ಯೋದ್ರಿಂದ ಬರೀ ಎತ್ತಿಕಟ್ಟಿ disintegrationಗೆ ದಾರಿ ಮಾಡಿಕೊಡೋ ಪ್ರಯತ್ನ ಆಗುತ್ತೆ ....

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails