ಕನ್ನಡದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಮತ್ತು ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ವೈಜ್ಞಾನಿಕ ಮನೋಭಾವದ ಕನ್ನಡಿಗರೆಲ್ಲರ ಮನಸ್ಸನ್ನು ಗೆದ್ದಿರುವ
ಶ್ರೀ. ಡಿ.ಎನ್. ಶಂಕರಭಟ್ಟರ ಕೊಡುಗೆ ಬಹಳ ಮುಖ್ಯವಾದದ್ದು. ಭಟ್ಟರ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ", "ಮಾತಿನ ಒಳಗುಟ್ಟು", "ಕನ್ನಡ ನುಡಿ ನಡೆದುಬಂದ ದಾರಿ" ಮುಂತಾದ ಹೊತ್ತಿಗೆಗಳು ಜನರಲ್ಲಿ ಕನ್ನಡದ ಬಗೆಗಿರುವ ತಪ್ಪು ತಿಳುವಳಿಕೆಯನ್ನು ಸುಟ್ಟು ಹಾಕುತ್ತವೆ. ಈ ಕ್ಷೇತ್ರದಲ್ಲಿ ಬಹುಕಾಲದಿಂದ ಕನ್ನಡದ ಭಾಷಾವಿಜ್ಞಾನಿಗಳು ಮತ್ತು ವ್ಯಾಕರಣಕಾರರು ಮಾಡಿಕೊಂಡು ಬಂದಿರುವ ತಪ್ಪುಗಳನ್ನು ಭಟ್ಟರು ಖಡಾಖಂಡಿತವಾಗಿ ತೋರಿಸಿಕೊಟ್ಟಿರುವುದರಿಂದ (ಮತ್ತು ಇನ್ನೂ ಮುಂದೆ ಬರುವ ಹೊತ್ತಿಗೆಗಳಲ್ಲಿ ತೋರಿಸಿಕೊಡಲಿರುವುದರಿಂದ)
ಹಳೆ-ಶಾಲೆಗೆ ಅಂಟಿಕೊಂಡಿರುವ ಕೆಲವರ ಕಾಲ್ಕೆಳಗಿನ ನೆಲವೇ ಕುಸಿದಂತಾಗಿ, ಭಟ್ಟರನ್ನೂ ಮತ್ತವರ ತತ್ವಗಳನ್ನೂ ಕಟುವಾಗಿ ವಿರೋಧಿಸುವುದನ್ನೇ ಒಂದು ಹವ್ಯಾಸವಾಗಿಸಿಕೊಂಡಿದ್ದಾರೆ! ತಮಾಷೆಯೇನೆಂದರೆ ಇವರಾರ ವಿರೋಧವೂ ಭಟ್ಟರ ವೈಜ್ಞಾನಿಕತೆಯ ಮಟ್ಟಕ್ಕೆ ಏರದೆ ಬರೀ ಅವರನ್ನು ವೈಯಕ್ತಿಕವಾಗಿ ಮೂದಲಿಸುವುದರಿಂದ ಹಿಡಿದು, ಸಂಸ್ಕೃತದ ಪಂಡಿತರಾದ ಅವರೇ ಸಂಸ್ಕೃತದ್ವೇಷಿಗಳೆಂದು ಮೂದಲಿಸುವವರೆಗೆ, ಎಪ್ಪತ್ತೈದು ವರ್ಷದ ಮುದುಕರಾದ ಭಟ್ಟರು ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎನ್ನುವ ಸೊಂಟದ ಕೆಳಗಿನ ಆರೋಪದವರೆಗೆ ಮಾತ್ರ ತಲುಪುತ್ತವೆ! ಈ ಅವೈಜ್ಞಾನಿಕತೆಯೇ ಕನ್ನಡದ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಕನ್ನಡಿಗರನ್ನು ಸೋಲಿಸಿರುವುದರಿಂದ ಇದನ್ನು ಕಿತ್ತೊಗೆಯದೆ ಬೇರೆ ದಾರಿಯಿಲ್ಲ. ಈ ಹಿನ್ನೆಲೆಯಲ್ಲಿ
ಅಕ್ಟೋಬರ್ ೩ರ
ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ಕೂಡಲಸಂಗಮ ದೇವನ ಕನ್ನಡ" ಎಂಬ ಬರಹದಲ್ಲಿ
ಶ್ರೀ ಕೆ.ವಿ. ತಿರುಮಲೇಶ್ ಅವರು (ಚಿತ್ರ ನೋಡಿ) ಅದೇ ಅವೈಜ್ಞಾನಿಕತೆಯನ್ನು ಓದುಗರ ಮುಂದಿಟ್ಟು ನಮ್ಮ ಈ ಮರುವುತ್ತರವನ್ನು ತಾವೇ ಬರಮಾಡಿಕೊಂಡಿದ್ದಾರೆ. ತಿರುಮಲೇಶರ ಬರಹದಲ್ಲಿ ಆ ಹಳೆ-ಶಾಲೆಯ ಅವೈಜ್ಞಾನಿಕತೆಯು ಮೈದಳೆದು ಬಂದಿರುವುದರಿಂದ ನಮ್ಮ ಈ ಉತ್ತರವು ಅವರಿಗೊಬ್ಬರಿಗೇ ಅಲ್ಲದೆ ಆ ಹಳೆ-ಶಾಲೆಯವರೆಲ್ಲರಿಗೂ ಒಪ್ಪುತ್ತದೆ.
ಆ ಹಳೆ-ಶಾಲೆಯ ಅವೈಜ್ಞಾನಿಕ ತತ್ವಗಳಿಗೆ ಅಂಟಿಕೊಂಡಿರುವವರು ಅವೈಜ್ಞಾನಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ ಎನ್ನುವುದು ನಿಜವಾದರೂ ಅವರ ಗುರಿಯು ಸಾಧುವಾಗೇ ಇದೆ. ಅವರಿಗೂ ಕನ್ನಡಿಗರ ಏಳಿಗೆ ಬೇಕು. ಅವರಿಗೂ ಕನ್ನಡವು ಬೆಳೆಯಬೇಕೆಂಬುದಿದೆ. ಅವರಿಗೂ ಕರ್ನಾಟಕವು ಏಳಿಗೆಹೊಂದಬೇಕೆಂಬ ಆಸೆಯಿದೆ. ಗುರಿಯಲ್ಲಿ ಅವರಿಗೂ
ಹೊಸ-ಶಾಲೆಯ ನಮಗೂ ಹೆಚ್ಚು-ಕಡಿಮೆಯಿರುವುದಿಲ್ಲ; ಇರುವುದು ದಾರಿಯಲ್ಲಿ, ಗುರಿ ಮುಟ್ಟಲು ಯಾವಯಾವ ಹಂತಗಳ ಮೂಲಕ ಕನ್ನಡ-ಕನ್ನಡಿಗ-ಕರ್ನಾಟಕಗಳು ಹಾದುಹೋಗಬೇಕೆಂಬುದರಲ್ಲಿ. ಅವರ ಆಸೆಗಳು ಅವರೇ ಕಟ್ಟಿಕೊಂಡಿರುವ ಕಟ್ಟಳೆಗಳ ಹೊರಗೆ ಬರಲಾರದ ಚಿಂತನೆ ಮತ್ತು ಕೆಲಸಗಳಿಂದ ಈಡೇರದೆ ಹೋಗುವುದನ್ನು ಕಂಡು ಬೇಸರಗೊಂಡೇ ನಾವು ಸರಿಯಾದ ದಾರಿಯನ್ನು ಹುಡುಕಿ ಹೊರಟಿರುವುದು, ಹೊಸದೊಂದು ಶಾಲೆಯನ್ನು ಕಟ್ಟಲು ಹೊರಟಿರುವುದು.
ಮತ್ತೂ ಕೆಲವು ವಿಷಯಗಳಲ್ಲಿ ಹೊಸ ಮತ್ತು ಹಳೆಯ ಶಾಲೆಗಳಲ್ಲಿ ಒಮ್ಮತವಿರುತ್ತದೆ. ಕನ್ನಡವನ್ನು ಇನ್ನಷ್ಟು ಶ್ರೀಮಂತಗೊಳಿಸುವುದು ಹೇಗೆ, ಕನ್ನಡದ ಬೋಧನೆ, ಉಪಯೋಗಗಳನ್ನು ಆಕರ್ಷಕವೂ ವ್ಯಾಪಕವೂ ಆಗಿಸುವುದು ಹೇಗೆ ಎನ್ನುವ ಕಡೆ ನಮ್ಮ ಚಿಂತನೆ ಹರಿಯಬೇಕಾಗಿದೆ ಎಂದು ತಿರುಮಲೇಶರು ಹೇಳಿರುವುದೂ ಕೂಡ ಶೇಕಡ ನೂರರಷ್ಟು ಒಪ್ಪುವಂಥದ್ದು. ಆದರೆ ಹಳೆ-ಶಾಲೆಯವರು ಈ ಚಿಂತನೆಯನ್ನು ಹರಿಸುವಾಗ ಅನುಸರಿಸುತ್ತಿರುವ ಅವೈಜ್ಞಾನಿಕತೆಯೇ ಅವರನ್ನು ಗುರಿಮುಟ್ಟದಂತೆ ನೋಡಿಕೊಳ್ಳುತ್ತಿರುವುದರಿಂದ ಆ ಅವೈಜ್ಞಾನಿಕತೆಯನ್ನು ಕಿತ್ತೊಗೆಯಬೇಕೆಂಬುದೇ ಹೊಸ-ಶಾಲೆಯ ಮೂಲಮಂತ್ರವಾಗಿದೆ. ಸಂಸ್ಕೃತವನ್ನು ದ್ವೇಷಿಸಬಾರದು ಎಂದು ಇಬ್ಬರೂ ಒಪ್ಪುತ್ತಾರೆ. ಅದನ್ನು ದ್ವೇಷಿಸುವುದರಿಂದ ಏನೂ ಸಿಗುವುದಿಲ್ಲ ಎಂದು ಗೊತ್ತಿರುವುದೇ. ತಿರುಮಲೇಶರೇ ಬಹಳ ಚೆನ್ನಾಗಿ ಹೇಳುವಂತೆ ಸಂಸ್ಕೃತವನ್ನು ವೈರಿಯಾಗಿ ತೆಗೆದುಕೊಳ್ಳದೆ ಒಂದು ಸಂಪನ್ಮೂಲವಾಗಿ ತೆಗೆದುಕೊಳ್ಳುವುದೇ ಸರಿ. ಆದರೆ ಹೊಸ-ಶಾಲೆಗೂ ಅವರಿಗೂ ಹೆಚ್ಚು-ಕಡಿಮೆಯಿರುವುದು ಆ ಸಂಪನ್ಮೂಲವು ಯಾವ ರೀತಿಯದ್ದು, ಅದಕ್ಕೂ ಸಂಪನ್ಮೂಲವನ್ನು ಬಳಸಬೇಕಾದ ಕನ್ನಡಕ್ಕೂ ಸಂಬಂಧವೇನು ಎನ್ನುವುದರಲ್ಲಿ. ಆ ಸಂಪನ್ಮೂಲವಿಲ್ಲದೆ ಕನ್ನಡದ ಏಳಿಗೆಯ ಬಂಡಿ ಮುಂದಕ್ಕೇ ಹೋಗುವುದಿಲ್ಲ ಎಂದು ಹಳೆ-ಶಾಲೆಯವರು ತಿಳಿದುಕೊಂಡಿರುವುದು ಅವರು ಮಾಡುವ ಬಹಳ ದೊಡ್ಡ ತಪ್ಪುಗಳಲ್ಲಿ ಒಂದು. ಕನ್ನಡವೇನೆಂದು, ಭಾಷೆಯೇನೆಂದು ಅರಿತವರಾರೂ ಅದನ್ನು ಒಪ್ಪಲಾಗುವುದಿಲ್ಲವಾದ್ದರಿಂದ ಇಲ್ಲಿ ನಮ್ಮಿಬ್ಬರಲ್ಲಿ ಒಮ್ಮತವಿರುವುದಿಲ್ಲ. ಹಾಗೆಯೇ ತಿರುಮಲೇಶರು ಹೇಳುವಂತೆ ಕನ್ನಡಕ್ಕೆ ವಿಸ್ತರಣೆ ಬೇಕು, ಸಂಕುಚಿತತೆಯಲ್ಲ ಎನ್ನುವುದನ್ನು ಕೂಡ ನಾವು ಒಪ್ಪುತ್ತೇವೆ. ಆದರೆ ಯಾವುದು ಸಂಕುಚಿತತೆ, ಯಾವುದು ವಿಸ್ತರಣೆ ಎನ್ನುವುದರಲ್ಲಿ ಹೊಸ-ಶಾಲೆಗೂ ಹಳೆ-ಶಾಲೆಯವರಿಗೂ ಒಮ್ಮತವಿರುವುದಿಲ್ಲ. ಹಳೆ-ಶಾಲೆಯವರಿಗೆ ಸಂಸ್ಕೃತವೊಂದರಿಂದಲೇ ಕನ್ನಡಕ್ಕೆ ವಿಸ್ತರಣೆ ಸಾಧ್ಯವೆನಿಸುತ್ತದೆ; ಆದರೆ ನಿಜಕ್ಕೂ ನೋಡಿದರೆ ಅದೇ ಸಂಕುಚಿತತೆ, ಎಷ್ಟೆಂದರೆ ಕನ್ನಡಿಗರನ್ನೇ, ಕನ್ನಡವನ್ನೇ ಹೊರಗಿಡುವಷ್ಟು! ಹಾಗೆಯೇ ಇಡೀ ಜಗತ್ತಿಗೆ ಬೇಕಾಗಿರುವ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆಯುವುದು, ಓದುವುದು ಸಾಧ್ಯವಾಗಬೇಕು ಎನ್ನುವ ತಿರುಮಲೇಶರ ಆಸೆಯೇ ಹೊಸ-ಶಾಲೆಯವರಿಗೂ ಇರುವುದು. ಆದರೆ ಹಳೆ-ಶಾಲೆಯವರು ಹಾಗೆ ಆಗಬೇಕು, ಆಗಬೇಕು ಎಂದು ಕೂಗಿಕೊಂಡು ಸುಸ್ತಾಗಿದ್ದಾರೆಯೇ ಹೊರತು ಅದು ಇವತ್ತಿನವರೆಗೂ ಯಾಕೆ ಆಗಿಲ್ಲ ಎನ್ನುವುದನ್ನು ವೈಜ್ಞಾನಿಕವಾಗಿ ಅರಿತುಕೊಳ್ಳುವ ಗೋಜಿಗೆ ಅವರು ಹೋಗಿಲ್ಲ. ನಮ್ಮಲ್ಲಿ ಸ್ವೋಪಜ್ಞ ಚಿಂತನೆಯ ಕೃತಿಗಳು ಬಾರದೆ ಇರುವುದಕ್ಕೆ ಕನ್ನಡಿಗರು ಪ್ರಯತ್ನಿಸದೆ ಇರುವುದೇ ಕಾರಣ ಎಂದು ಹೇಳಿರುವುದರಲ್ಲೂ ಪರಿಸ್ಥಿತಿಯ ಬರೀ ಮೇಲುಮೇಲಿನ ಅರಿವು ಮಾತ್ರ ಹಳೆ-ಶಾಲೆಯ ತಿರುಮಲೇಶರಿಗೆ ಇದೆ ಎಂದು ಎದ್ದು ಕಾಣುತ್ತಿದೆ. ಹೌದು, ಕನ್ನಡಿಗರು ಪ್ರಯತ್ನಿಸುತ್ತಿಲ್ಲ. ಆದರೆ ಏಕೆ ಪ್ರಯತ್ನಿಸುತ್ತಿಲ್ಲ ಎಂದು ಎಂದಾದರೂ ಹಳೆ-ಶಾಲೆಯವರು ಪ್ರಶ್ನಿಸಲಿಲ್ಲವಲ್ಲ?! ಆ ಪ್ರಶ್ನೆಯನ್ನು ಕೇಳಿದರೆ ಕನ್ನಡಿಗರಿಗೆ ಕಲಿಕೆಯ ಕನ್ನಡವೇ ತಮ್ಮದಲ್ಲ ಎನ್ನುವಷ್ಟು ಕಬ್ಬಿಣದ ಕಡಲೆಯಾಗಿ ಹೋಗಿದೆಯೆನ್ನುವ ಒಳಗಿನ ಕಾರಣವು ಗೋಚರವಾಗುತ್ತದೆ. ಹೀಗೆ ಇಲ್ಲೂ ಎರಡೂ ಶಾಲೆಯವರ ಗುರಿಯು ಒಂದೇ ಆಗಿದ್ದು ಹಳೆ-ಶಾಲೆಯವರು ಆ ಗುರಿಯನ್ನು ಮುಟ್ಟಲು ಶಕ್ತಿಯಿಲ್ಲದೆ ಕುಸಿದು ಬಿದ್ದಿರುವುದು ಕಾಣಿಸುತ್ತದೆ.
ಕಾಲವೇ ಆ ಹಳೆ-ಶಾಲೆಯ ಅವೈಜ್ಞಾನಿಕತೆಯಿಂದ ಏನೂ ಗಿಟ್ಟುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಯನ್ನು ನಮ್ಮ ಹೊಸ-ಶಾಲೆಯೇ ಮಾಡಿಸುವುದು ಎನ್ನುವುದರಲ್ಲಿ ಸಂದೇಹವಿಲ್ಲ. ಈ ಶಾಲೆಯೇ ಜಪಾನ್, ದಕ್ಷಿಣ ಕೊರಿಯಾ, ಇಸ್ರೇಲ್ ಮುಂತಾದ ಪ್ರಪಂಚದ ಅನೇಕ ನಾಡುಗಳನ್ನು ಆಯಾ ಭಾಷೆಗಳ ಸರಿಯಾದ ಬಳಕೆಯಿಂದ ಏಳಿಗೆ ಮಾಡಿಸಿರುವುದು. ಹಳೆ-ಶಾಲೆಯವರು ಪ್ರಪಂಚದಲ್ಲೆಲ್ಲ ಆಗದು ಎಂದೂ, ಕೈಲಾಗದು ಎಂದೂ ಕೈಕಟ್ಟಿ ಕೂತಿರುವುದನ್ನು ನೋಡಿದರೆ ಸಾಕು, ಇವರಿಂದ ಏನೂ ಸಾಧ್ಯವಿಲ್ಲ ಎಂದು ಅರಿತುಕೊಳ್ಳಲು! ಇನ್ನು ಈ ಬರಹದ ಉಳಿದ ಭಾಗದಲ್ಲಿ ಶ್ರೀ ತಿರುಮಲೇಶರು ಬರೆದಿರುವ ವಿಷಯಗಳ ಬಗ್ಗೆ ನಮ್ಮ ನಿಲುವನ್ನೂ ಅದಕ್ಕೆ ಸಮರ್ಥನೆಯನ್ನೂ ಕೊಡುತ್ತೇವೆ.
ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಅಧ್ಯಯನವಾಗಬೇಕಿದೆತಿರುಮಲೇಶರು ಸಂಸ್ಕೃತವನ್ನು ದ್ವೇಷಿಸಬಾರದು, ಅದರ ಬದಲಾಗಿ ಸಮಾಜದಲ್ಲಿರುವ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಕುರಿತಾದ ಭಿನ್ನತೆಗಳು ಮತ್ತು ಅನ್ಯಾಯಗಳನ್ನು ದ್ವೇಷಿಸಬೇಕು ಎನ್ನುತ್ತಾರೆ. ಸಂಸ್ಕೃತವನ್ನು ದ್ವೇಷಿಸಬಾರದು ಎನ್ನುವುದೇನೋ ಸರಿ, ಆದರೆ ಭಿನ್ನತೆ, ಅನ್ಯಾಯಗಳನ್ನು ದ್ವೇಷಿಸಿದರೆ ಏನು ಸಾಧಿಸಿದಂತಾಯಿತು? ಬರೀ ಆ ದ್ವೇಷದಿಂದ ಏನೂ ಗಿಟ್ಟುವುದಿಲ್ಲವಲ್ಲ? ಹಾಗೆಯೇ ಪ್ರಜಾಪ್ರಭುತ್ವವು ಬಂದಾಗಲೂ ಈ ಭಿನ್ನತೆಗಳು ಹೋಗಲಿಲ್ಲ ಎಂದು ಅಳುವುದರಿಂದಲೂ ಏನೂ ಗಿಟ್ಟುವುದಿಲ್ಲವಲ್ಲ? ನಿಜಕ್ಕೂ ಕನ್ನಡಜನಾಂಗದ ಏಳಿಗೆಯಾಗುವುದು ಅದನ್ನು ದ್ವೇಷಿಸುವುದರಿಂದ ಇಲ್ಲವೇ ಇದನ್ನು ದ್ವೇಷಿಸುವುದರಿಂದಲ್ಲ, ಪರಿಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡುವುದರಿಂದ.
ಜಾತಿಯೇ ಮೊದಲಾದ ತಿರುಮಲೇಶರ ಪಟ್ಟಿಯಲ್ಲಿ ಪ್ರತಿಯೊಂದರಲ್ಲೂ ಇರುವ ಮೇಲು-ಕೀಳು ಮನೋಭಾವವನ್ನು ತೆಗೆದು ಹಾಕಬೇಕಾದರೆ ಪ್ರತಿಯೊಂದರಲ್ಲೂ ಎಲ್ಲರಿಗೂ ಸಮನಾದದ್ದೇನಿದೆಯೋ ಅದನ್ನು ಎತ್ತಿಹಿಡಿಯಬೇಕು ಎನ್ನುವುದು ತಿಳುವಳಿಕಸ್ತರಿಗೆ ಗೊತ್ತಾಗದೆ ಹೋಗುವುದಿಲ್ಲ. ಸಮನಾದದ್ದೇನಿದೆಯೋ ಅದೇ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಇವುಗಳುಂಟುಮಾಡಿರುವ ಒಡಕನ್ನು ಹೋಗಲಾಡಿಸಿ ಕನ್ನಡಿಗರನ್ನು ಒಗ್ಗೂಡಿಸುವುದು. ಏನದು ಸಮನಾದದ್ದು? ಇನ್ನೇನೂ ಇಲ್ಲ, ನುಡಿಯೇ ಅದು. ಎಂತಹ ನುಡಿಯದು? ಯಾವುದನ್ನು ಕಂಡಾಗಲೆಲ್ಲ ಕೇಳಿದಾಗಲೆಲ್ಲ ಜಾತಿ, ಅರ್ಥ, ಶಿಕ್ಷಣ, ಸಂಸ್ಕೃತಿ ಕುರಿತಾದ ಭಿನ್ನತೆಗಳು ಮತ್ತು ಅನ್ಯಾಯಗಳು ನೆನಪಾಗುತ್ತವೋ ಅಂತಹ ನುಡಿಯಲ್ಲ, ಯಾವ ನುಡಿಯು ಈ ಮಣ್ಣಿನ ಜನರಿಗೆಲ್ಲ ಸಮನಾಗಿದೆಯೋ ಆ ನುಡಿ. ಆ ನುಡಿಯಲ್ಲಿ ಸಂಸ್ಕೃತವು ಇದ್ದರೆ ತಿರುಮಲೇಶರೇ ಉದಾಹರಿಸಿರುವ ಬಸವಣ್ಣನವರ ವಚನಗಳಲ್ಲಿ ಎಷ್ಟಿರುತ್ತದೆಯೋ ಅಷ್ಟಿರುತ್ತದೆಯೇ ಹೊರತು ಈಗಿನ ಕೆಲವರು ತಮ್ಮ ಸಂಸ್ಕೃತದ ಪಾಂಡಿತ್ಯವನ್ನು ಕನ್ನಡಿಗರ ಮುಂದೆ ತೋರಿಸಿಕೊಳ್ಳುವುದಕ್ಕೆ ಬಳಸುತ್ತಾರಲ್ಲ, ಅಷ್ಟಲ್ಲ. ಕನ್ನಡಿಗರೆಲ್ಲರನ್ನು ಒಗ್ಗೂಡಿಸುವ, ಕನ್ನಡಿಗರೆಲ್ಲರ ನಾಲಿಗೆಯ ಮೇಲೆ ಜಳಜಳನೆ ಹರಿಯುವ ಆ ನುಡಿಯೇ ಕನ್ನಡ. ಮತ್ತೊಂದಲ್ಲ.
ಅಂತಹ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದಿಂದಲೇ ಜಾತಿ ಮೊದಲಾದ ಕಡೆ ಭಿನ್ನತೆಯನ್ನು ತಕ್ಕಮಟ್ಟಿಗೆ ಹೋಗಲಾಡಿಸಲಾಗುವುದು. ಪೂಜೆಯನ್ನು ಸಂಸ್ಕೃತದಲ್ಲೇ ಮಾಡಬೇಕೆಂದೇನಿಲ್ಲ, ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದಲ್ಲೇ ಲಿಂಗ ಮೆಚ್ಚಿ ಅಹುದಹುದೆನ್ನುವಂತೆ ಪೂಜಿಸಲಾಗುವುದು! ಅರ್ಥ-ಶಿಕ್ಷಣಗಳನ್ನೇನು ಇಂಗ್ಲೀಷಿನ ಮೂಲಕವೇ ಪಡೆಯಲಾಗುವುದು ಎಂದೇನಿಲ್ಲ. ನಿಜಕ್ಕೂ ನೋಡಿದರೆ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದಿಂದಲೇ ಕನ್ನಡಿಗರು ಕುಬೇರರಾಗಲು ಸಾಧ್ಯ, ನೊಬೆಲ್ ಪ್ರಶಸ್ತಿಗಳನ್ನು ದೊರಕಿಸಿಕೊಳ್ಳಲು ಸಾಧ್ಯ, ಇಂಗ್ಲೀಷಿನಿಂದಲ್ಲ. ಹಾಗೆಯೇ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡವೇ ಕನ್ನಡಿಗರಿಗೆ ಒಳ್ಳೆಯ ಸಂಸ್ಕೃತಿಯನ್ನೂ ತಂದುಕೊಡಲು ಸಾಧ್ಯ. ಆದ್ದರಿಂದ ಆ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಅಧ್ಯಯನವಾಗಬೇಕಿದೆ, ಅದರ ಸ್ವರೂಪವನ್ನು ನಾವು ತಿಳಿದುಕೊಳ್ಳಬೇಕಿದೆ. ಅದೇನು ಅಂತಿಂತಹ ನುಡಿಯಲ್ಲ. ಅದು ಚಿನ್ನದ ಗಣಿ! ಅದರಲ್ಲಿ ನಮ್ಮ ಭವಿಷ್ಯವೇ ಅಡಗಿದೆ!
ನಮ್ಮ ನುಡಿಯ ಸರಿಯಾದ ಅಧ್ಯಯನ ಮಾಡುವುದು ಬೇರೆ ನುಡಿಗಳ ದ್ವೇಷವಲ್ಲಸಂಸ್ಕೃತ ಪದಗಳನ್ನು ಕಿತ್ತುಹಾಕಬೇಕು ಎಂದು ಎಲ್ಲೂ ಯಾರೂ (ಶಂಕರಭಟ್ಟರನ್ನೂ ಸೇರಿದಂತೆ) ಹೇಳಲಿಲ್ಲ. ತಿಳುವಳಿಕಸ್ತರು ಹೇಳುತ್ತಿರುವುದು ಇಷ್ಟೇ: ಎಲ್ಲೆಲ್ಲಿ ಈಗಾಗಲೇ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಪದಗಳಿವೆಯೋ ಅವುಗಳನ್ನು ಕೈಬಿಡದೆ ಬಳಸಿಕೊಂಡು ಹೋಗಬೇಕು. ಅವುಗಳ ಬದಲು ಸಂಸ್ಕೃತದ ಇಲ್ಲವೇ ಮತ್ತೊಂದು ಭಾಷೆಯ ಪದಗಳನ್ನು ಬಳಸುವುದು ಸರಿಯಲ್ಲ. ಹಾಗೆಯೇ ಹೊಸ ಪದಗಳನ್ನು ಹುಟ್ಟಿಸುವಾಗಲೂ ಈಗಾಗಲೇ ಇರುವ ಕನ್ನಡದ ಪದಗಳನ್ನು ಒಟ್ಟಿಗೆ ಸೇರಿಸಿ ಇಲ್ಲವೇ ತುಸು ಬದಲಾಯಿಸಿ ಹುಟ್ಟಿಸುವುದೇ ನಮ್ಮ ಮೊದಲ ಹೆಜ್ಜೆಯಾಗಬೇಕು. ಈ ಒಂದು ಬಗೆಯಿಂದಲೇ ಕಲಿಕೆಯ ಎಲ್ಲಾ ಕ್ಷೇತ್ರಗಳಲ್ಲೂ (ಬರೀ ಅಧ್ಯಾತ್ಮ, ನಾಟಕ ಕವಿತೆಗಳಲ್ಲಿ ಮಾತ್ರವಲ್ಲ) ಶೇಕಡ ೮೦ರಷ್ಟು ಪದಗಳನ್ನು ಹುಟ್ಟಿಸಬಹುದು. ನಮ್ಮ ಕನ್ನಡಕ್ಕೆ ಆ ಶಕ್ತಿಯಿದೆ. ಅಷ್ಟೇ ಏಕೆ, ಎಲ್ಲಾ ಭಾರತೀಯ ಭಾಷೆಗಳಿಗೂ ಆ ಶಕ್ತಿ ಇದೆ.
ಇನ್ನು ಮಿಕ್ಕ ಶೇಕಡ ೨೦ರಷ್ಟು ಪದಗಳನ್ನು ಬರೀ ಸಂಸ್ಕೃತದಿಂದ ಮಾತ್ರ ಆರಿಸಿಕೊಳ್ಳಬೇಕು ಎಂದೇನಿಲ್ಲ. ಪ್ರಪಂಚದ ಯಾವ ಭಾಷೆಯಿಂದ ಬೇಕಾದರೂ ಆರಿಸಿಕೊಳ್ಳಬಹುದು. ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ಭಾಷೆಗಳು ಹೆಚ್ಚು ಬಳಕೆಯಲ್ಲಿವೆಯೋ ಆಯಾ ಭಾಷೆಗಳಿಂದಲೇ ಪದಗಳನ್ನು ಆಯ್ದುಕೊಳ್ಳುವುದು ಸಹಜ. ಅಧ್ಯಾತ್ಮಕ್ಕೆ ಸಂಬಂಧಿಸಿದ ಪದಗಳನ್ನು ಸಂಸ್ಕೃತದಿಂದಲೂ, ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪದಗಳನ್ನು ಇಂಗ್ಲೀಷಿನಿಂದಲೂ ಆರಿಸಿಕೊಳ್ಳಬಹುದು (ಇಂಗ್ಲೀಷ್ ಕೂಡ ಪ್ರಪಂಚದ ಎಲ್ಲಾ ಭಾಷೆಗಳಿಂದ ಪದಗಳನ್ನು ಆಮದಿಸಿಕೊಂಡಿದೆ). ಹೀಗೆ ಆರಿಸಿಕೊಳ್ಳುವಾಗಲೂ ಕೆಲವು ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಬಹುಮುಖ್ಯವಾದ ನಿಯಮವೇನೆಂದರೆ ಆ ಪದಗಳು ಕನ್ನಡಿಗರ ನಾಲಿಗೆಯಲ್ಲಿ ಹೊರಳುವಂಥವಿರಬೇಕು. ಇಲ್ಲದಿದ್ದರೆ ಹೊರಳಲು ಬೇಕಾದ ಬದಲಾವಣೆಗಳನ್ನು ಮಾಡಬೇಕು. ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂದು ತಿಳಿದುಕೊಳ್ಳುವುದಕ್ಕೂ ಕೂಡ ನಮ್ಮ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಅಧ್ಯಯನವಾಗಬೇಕು.
ಒಟ್ಟಿನಲ್ಲಿ ನಮ್ಮ ನುಡಿಯಿಂದ ಬರಬೇಕಾದ ಶೇಕಡ ೮೦ನ್ನು ಕೈಬಿಡದೆ ಹೋಗದಂತೆ ಮಾಡಲು ಕನ್ನಡದ ಸರಿಯಾದ ಅಧ್ಯಯನವಾಗಬೇಕಿದೆ. ಆ ಕನ್ನಡದಲ್ಲಿ ಸಂಸ್ಕೃತವೂ ಇಲ್ಲ, ಇಂಗ್ಲೀಷೂ ಇಲ್ಲ, ಇನ್ನೊಂದೂ ಇಲ್ಲ. ಅದು ಬರೀ ಕನ್ನಡವೇ. ಅದರ ಅಧ್ಯಯನ ಮಾಡಿದರೆ ಸಂಸ್ಕೃತ ಮತ್ತು ಇಂಗ್ಲೀಷುಗಳನ್ನು ದ್ವೇಷಿಸಿದಂತಾಗುವುದಿಲ್ಲ. ಬದಲಾಗಿ ಅವುಗಳಿಗೆ ಕೊಡಬೇಕಾದ ಗೌರವವನ್ನು ಸರಿಯಾಗಿ ಅಳತೆಮಾಡಿ ತಿಳಿದುಕೊಂಡಂತಾಗುತ್ತದೆ, ಅಷ್ಟೆ. ಮಿಕ್ಕ ಶೇಕಡ ೨೦ನ್ನು ಬೇರೆ ಭಾಷೆಗಳಿಂದ ಸರಿಯಾಗಿ ಆಮದುಮಾಡಿಕೊಳ್ಳುವುದಕ್ಕೂ ಕನ್ನಡದ ಅಧ್ಯಯನವಾಗಬೇಕಿದೆ.
ನೋವಿನ ವಿಷಯವೇನೆಂದರೆ ಇವತ್ತಿಗೂ ಕೂಡ ಕನ್ನಡವನ್ನು ತನ್ನ ಕಾಲ ಮೇಲೆ ತಾ ನಿಂತ ಒಂದು ಭಾಷೆಯಂತೆ ಪರಿಗಣಿಸಿರುವ ವ್ಯಾಕರಣಗಳೇ ಇಲ್ಲ. ಇರುವವೆಲ್ಲವೂ ಸಂಸ್ಕೃತದ ವ್ಯಾಕರಣವನ್ನು ಕನ್ನಡಕ್ಕೆ ಹೊಂದಿಸಲು ಹೊರಟಿರುವವೇ. ಕನ್ನಡದ ಅಧ್ಯಯನದಲ್ಲಿ ನಾವು ಅಷ್ಟು ಹಿಂದಿದ್ದೇವೆ! ಈ ಕಟುಸತ್ಯವನ್ನು ಕಂಡುಹಿಡಿದು ಕನ್ನಡಿಗರ ಮುಂದಿಟ್ಟಿರುವ ಒಬ್ಬನೇ ಒಬ್ಬ ಭಾಷಾವಿಜ್ಞಾನಿಯೆಂದರೆ ಶ್ರೀ. ಡಿ.ಎನ್. ಶಂಕರಭಟ್ಟರು. ಈ ಕಟುಸತ್ಯವು ಕೆಲವರಿಗೆ ಹಿಡಿಸದಿರಬಹುದು, ಆದರೆ ಅವರಿಗೆ ಹಿಡಿಸದ ಮಾತ್ರಕ್ಕೆ ಸತ್ಯವೇನು ಬದಲಾಗುವುದಿಲ್ಲ. ಸತ್ಯದಿಂದ ಓಡಿಹೋಗುವ ಅವರಿಗೆ ಈ ಕೆಲಸವನ್ನು ಕೈಗೊಂಡವರಿಗೆ ಸಂಸ್ಕೃತದ ದ್ವೇಷವಿದೆ ಎನಿಸಿರುವುದಂತೂ ಒಂದು ದೊಡ್ಡ ತಮಾಷೆಯೇ ಸರಿ!
ಕನ್ನಡ ಬರಹದ ಸ್ಪೆಲ್ಲಿಂಗ್ ಸಮಸ್ಯೆಯನ್ನು ಹೋಗಲಾಡಿಸಲು ಅವಸರವಿಲ್ಲಆಡಿದಂತೆ ಬರೆದರೆ ಕನ್ನಡದ ಬರಹದಲ್ಲಿ ಗೊಂದಲ ಕಡಿಮೆಯಾಗುತ್ತದೆ ಎನ್ನುವುದು ಸರಿಯೇ. ಅಚ್ಚುಕಟ್ಟಾದ (ಸಮ್ಯಕ್ ಕೃತಃ ವಾದ) ಯಾವ ಭಾಷೆಯಲ್ಲೂ ಸ್ಪೆಲ್ಲಿಂಗ್ ಸಮಸ್ಯೆ ಇರಲಾರದು. ಸಂಸ್ಕೃತದಲ್ಲಿ ಹೇಗೋ ಹಾಗೆ. ಈ ನಿಟ್ಟಿನಿಂದ - ಎಂದರೆ ಯಾರಿಗೆ ಕನ್ನಡವನ್ನು ಅಚ್ಚುಕಟ್ಟಾಗಿ ಮಾಡಬೇಕೆನ್ನುವ ಆಸೆಯಿದೆಯೋ ಅವರ ಕಣ್ಣಿಗೆ - ಇವತ್ತಿನ ಕನ್ನಡದ ಲಿಪಿಯಲ್ಲಿ ತೊಂದರೆಗಳು ಕಾಣಿಸದೆ ಹೋಗವು. ಕನ್ನಡಿಗರ ನಾಲಿಗೆಯಲ್ಲಿ ಉಲಿಯಲಾಗದ ಮಹಾಪ್ರಾಣಗಳು, ಋ, ಷ ಮುಂತಾದವುಗಳನ್ನು ತೆಗೆದರೇ ಕನ್ನಡವು ಅಚ್ಚುಕಟ್ಟಾಗುವುದು ಎಂದು ಅನ್ನಿಸದೆ ಹೋಗದು. ಸಿದ್ಧಾಂತದ ಬಣ್ಣವಿಲ್ಲದೆ ನೋಡಿದರೆ ಇದನ್ನು ಎಲ್ಲರೂ ಒಪ್ಪಲೇಬೇಕಾಗುವುದು. ಇಲ್ಲೂ ಶ್ರೀ ಶಂಕರಭಟ್ಟರು ಏನು ಮಾಡಿದರೆ ಕನ್ನಡದ ಸ್ಪೆಲ್ಲಿಂಗ್ ಸಮಸ್ಯೆ ಬಗೆಹರಿಯುತ್ತದೆ ಎಂದು ತಮ್ಮ ಕನ್ನಡ ಬರಹವನ್ನು ಸರಿಪಡಿಸೋಣ ಎಂಬ ಹೊತ್ತಗೆಯಲ್ಲಿ ತಿಳಿಸಿದ್ದಾರೆಯೇ ಹೊರತು ಸ್ಪೆಲ್ಲಿಂಗ್ ಸಮಸ್ಯೆಯನ್ನು ಬಗೆಹರಿಸದಿದ್ದರೆ ಏನಾದೀತು ಎನ್ನುವ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಅದು ಅವರ ಕೆಲಸವಲ್ಲ. ಇದ್ದಿದ್ದನ್ನು ಇದ್ದಂತೆ ಹೇಳುವುದು ಭಾಷಾವಿಜ್ಞಾನಿಯಾದ ಅವರ ಕೆಲಸ.
ಆದರೆ ಸ್ಪೆಲ್ಲಿಂಗ್ ಸಮಸ್ಯೆಯನ್ನು ಬಗೆಹರಿಸಲೇಬೇಕೆ? ಬಗೆಹರಿಸದಿದ್ದರೆ ಕನ್ನಡಜನಾಂಗವು ಏಳಿಗೆಹೊಂದದೆ ಹೋಗುತ್ತದೆಯೆ? ಎಂದು ಕೇಳಿಕೊಕೊಂಡರೆ ಉತ್ತರವು ಇಲ್ಲ ಎಂದೇ ಸಿಗುವುದು. ಹೌದು, ಕನ್ನಡ ಬರಹದಿಂದ ಸ್ಪೆಲ್ಲಿಂಗ್ ಸಮಸ್ಯೆಗಳನ್ನು ತೆಗೆದುಹಾಕಿ ಸರಿಪಡಿಸದಿದ್ದರೆ ಕನ್ನಡಜನಾಂಗಕ್ಕೆ ಏಳಿಗೆಯಿಲ್ಲ ಎಂದು ಯಾರಿಗೂ ತೋರಿಸಲಾಗುವುದಿಲ್ಲ. ಇಂಗ್ಲೀಷ್, ಫ್ರೆಂಚ್ ಮುಂತಾದ ಭಾಷೆಗಳಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯಿದ್ದರೂ ಅವರ ಏಳಿಗೆಗೆ ಅದೇನು ಅಡ್ಡಿಯಾಗಿಲ್ಲವಲ್ಲ? ಆದ್ದರಿಂದ ಬರಹವನ್ನು ಸರಿಪಡಿಸುವ ಯೋಜನೆ ಈಗಲೇ ಜಾರಿಗೆ ಬರದಿದ್ದರೂ ನಮಗೆ ಅಂಥದ್ದೇನೂ ತೊಂದರೆ ಕಾಣಿಸುತ್ತಿಲ್ಲ.
ಹಾಗೆಯೇ ಈ ಬದಲಾವಣೆಯನ್ನು ಮಾಡುವುದು ದೊಡ್ಡ ತಪ್ಪೆಂದು ಹಳೆ-ಶಾಲೆಯವರು ತಿಳಿಯುವುದೂ ಸರಿಯಲ್ಲ. ಈ ಬದಲಾವಣೆ ಜಾರಿಗೆ ಬಂದರೆ ಅದರಿಂದ ಯಾವ ಹೆಚ್ಚಿನ ತೊಂದರೆಯೂ ನಮಗೆ ಕಾಣುತ್ತಿಲ್ಲ. ಏಕೆಂದರೆ ಕನ್ನಡವು ಮತ್ತಷ್ಟು ಅಚ್ಚುಕಟ್ಟಾದರೆ ತಪ್ಪೇನಿಲ್ಲ. ಕೊರಿಯಾ ಮತ್ತು ಟರ್ಕೀಗಳಲ್ಲಿ ಕೇವಲ ಇನ್ನೂರು ವರ್ಷಗಳ ಹಿಂದೆ ಹೆಚ್ಚು-ಕಡಿಮೆ ಇಂಥದ್ದೇ ಒಂದು ಬರಹಕ್ಕೆ ಸಂಬಂಧಿಸಿದ ಬದಲಾವಣೆ ನಡೆದಿದ್ದು ಇವತ್ತಿನ ದಿನ ಅವರಿಗೆ ಈ ವಿಷಯದಲ್ಲಿ ಯಾವ ತೊಂದರೆಯೂ ಆಗುತ್ತಿಲ್ಲ. ಆ ಎರಡು ನಾಡುಗಳಲ್ಲೂ ಹಳೆಯ ಚೈನೀಸ್ ಮತ್ತು ಅರೇಬಿಕ್ ಬರಹವನ್ನೇ ಇಟ್ಟುಕೊಳ್ಳಬೇಕು ಎನ್ನುವವರಿದ್ದರು; ಈಗ ಯಾರೂ ಇಲ್ಲ. ಹಾಗೆ ನೋಡಿದರೆ ಇಲ್ಲಿ ಶಂಕರಭಟ್ಟರು ಸೂಚಿಸುವಂತೆ ಕೆಲವು ಅಕ್ಷರಗಳನ್ನು ಕೈಬಿಡುವ ಕೆಲಸ ಕೊರಿಯಾ ಮತ್ತು ಟರ್ಕೀಗಳು ಮಾಡಿದಷ್ಟೇನು ಕಷ್ಟದ ಕೆಲಸವೂ ಅಲ್ಲ; ಕೊರಿಯಾ ಹೊಸದೊಂದು ಲಿಪಿಯನ್ನೇ ಕಂಡುಹಿಡಿಯಿತು, ಟರ್ಕೀ ರೋಮನ್ ಅಕ್ಷರಗಳನ್ನು ಅಳವಡಿಸಿಕೊಂಡಿತು. ಕೈಬರಹದಲ್ಲಿ, ಮುದ್ರಣಯಂತ್ರಗಳಲ್ಲಿ ಇಲ್ಲವೇ ಗಣಕಯಂತ್ರಗಳಲ್ಲಿ ಹೊಸ ಬರವಣಿಗೆಯನ್ನು ಅಳವಡಿಸುವುದೂ ಕಷ್ಟವಲ್ಲ. ಹೌದು, ಕೆಲಕಾಲ ಇವತ್ತಿನ ಕನ್ನಡದ ಅನೇಕ ಹೊತ್ತಿಗೆಗಳನ್ನು ಓದಲು ತುಸು ಕಷ್ಟವಾಗುತ್ತದೆ. ಆದರೆ ಈ ರೀತಿಯ ಬದಲಾವಣೆ ಕನ್ನಡಕ್ಕೇನು ಹೊಸದಲ್ಲವಲ್ಲ? ಈ ಹಿಂದೆ ಹಳಗನ್ನಡದ ಕೆಲವು ಅಕ್ಷರಗಳನ್ನು ನಾವು ಬಿಟ್ಟುಬಿಟ್ಟಿಲ್ಲವೆ? ಅದರಿಂದ ಹಳಗನ್ನಡವನ್ನು ಅಧ್ಯಯನ ಮಾಡುವವರಿಗೆ ಏನೂ ತೊಂದರೆಯಾಗಿಲ್ಲವಲ್ಲ? ಅವರು ಆ ಅಕ್ಷರಗಳನ್ನು ಕಲಿತುಕೊಂಡರೆ ಸಾಕು. ಹಾಗೆಯೇ ಸಂಸ್ಕೃತದ ಗ್ರಂಥಗಳನ್ನು ಓದುವಾಗಲೂ ತೊಂದರೆಯಾಗಬಹುದು, ಸಂಸ್ಕೃತದ ಶ್ಲೋಕಗಳನ್ನು ಓದುವಾಗ ಛಂದೋಭಂಗವಾಗಬಹುದು. ಆದರೆ ಇದಾವುದೂ ಕನ್ನಡವನ್ನು ಬಳಸಬಯಸುವವರ ಸಮಸ್ಯೆಗಳಲ್ಲ; ಸಂಸ್ಕೃತವನ್ನು ಬಳಸಬಯಸುವವರ ತೊಂದರೆಗಳು. ಹಳಗನ್ನಡದ ವರ್ಣಮಾಲೆಯೇ ಹೇಗೆ ಬೇರೆಯಿದೆಯೋ ಹಾಗೆ ಸಂಸ್ಕೃತಕನ್ನಡಕ್ಕೂ ಒಂದು ವರ್ಣಮಾಲೆಯನ್ನು ಇಟ್ಟುಕೊಳ್ಳಬಹುದು. ಮತ್ತೂ ಏನೆಂದರೆ ಮೇಲೆ ನಾವು ಹೇಳಿರುವ ಎರಡು ತೊಂದರೆಗಳೂ ಹಳೆಯದನ್ನು ಓದಿ-ಬರೆಯುವಾಗ ತಲೆಯೆತ್ತುತ್ತವೆಯೇ ಹೊರತು ಹೊಸತನ್ನು ಮಾಡಹೊರಟಾಗಲ್ಲ. ಜುಟ್ಟಿಗೆ ಮಲ್ಲಿಗೆಹೂವಿನ ವಿಷಯದಲ್ಲಿ ತಲೆಯೆತ್ತುತ್ತವೆಯೇ ಹೊರತು ಹೊಟ್ಟೆಗೆ ಹಿಟ್ಟಿನ ವಿಷಯದಲ್ಲಲ್ಲ. ಕನ್ನಡಿಗರು ಸಿರಿವಂತರಾಗಬೇಕಾದರೆ ಕನ್ನಡದಲ್ಲಿ ಹೊಟ್ಟೆಗೆ ಹಿಟ್ಟಿನ ವಿದ್ಯೆಗಳು ಮೆರೆಯಬೇಕು; ಹಿಂದಿನವರು ಬರೆದಿಟ್ಟುಹೋದ ಅಧ್ಯಾತ್ಮ, ನಾಟಕ, ಕವಿತೆ, ಕಾದಂಬರಿಗಳಿಂದ ಹೊಟ್ಟೆಗೆ ಹಿಟ್ಟು ಗಿಟ್ಟುವುದಿಲ್ಲವಾದ್ದರಿಂದ ಅವುಗಳನ್ನು ಓದಲು/ಬರೆಯಲು ಬೇಕಾದ ಅಕ್ಷರಗಳೇನು ಒಂದು ಜನಾಂಗದ ಹೊಟ್ಟೆಗೆ ಹಿಟ್ಟನ್ನು ಗಿಟ್ಟಿಸುವ ವಿದ್ಯೆಗಳಿಗೆ ಬಹುಮುಖ್ಯವಾದವಲ್ಲ (ಹಾಗೆಂದ ಮಾತ್ರಕ್ಕೆ ಅವುಗಳನ್ನು ಗೌರವಿಸಬಾರದು ಎಂದೇನಿಲ್ಲ. ಆ ವಿದ್ಯೆಗಳಿಗೆ ತಮ್ಮದೇ ಆದ ಮೇಲ್ಮೆಯು ಇದ್ದೇ ಇದೆ).
ಮತ್ತೂ ಒಂದು ಮಾತು ನಿಜ: ಕನ್ನಡದಲ್ಲಿ ಆಡಿದಂತೆ ಬರೆಯುವ ಏರ್ಪಾಡಿದ್ದರೆ ಕಲಿಕೆ ಸುಲಭವಾಗುತ್ತದೆ ಎನ್ನುವುದೇನಾದರೂ ನಿಜವಾದರೆ ಅದೂ ಒಳ್ಳೆಯದೇ. ಹಾಗೆ ಸುಲಭವಾಗುತ್ತದೆಯೋ ಇಲ್ಲವೋ ಎಂದು ಶಿಕ್ಷಣತಜ್ಞರು ಹೇಳಬೇಕು. ಇಂಗ್ಲೀಷ್ ಮತ್ತು ಫ್ರೆಂಚ್ ಮುಂತಾದ ಭಾಷೆಗಳನ್ನಾಡುವವರ ಸಮಾಜಗಳಲ್ಲಿ ಭಾಷೆಗೆ ಸ್ಪೆಲ್ಲಿಂಗ್ ಸಮಸ್ಯೆಯಿದ್ದರೂ ಅದರಿಂದಾಗುವ ನಷ್ಟವನ್ನು ಪೂರೈಸಲು ಕನ್ನಡಿಗರಲ್ಲಿಲ್ಲದ ಬೇರೆಯೇನಾದರೂ ಏರ್ಪಾಡುಗಳಿವೆಯೆ? ಆ ಏರ್ಪಾಡುಗಳನ್ನು ಕರ್ನಾಟಕದಲ್ಲಿ ಮಾಡುವುದು ಬಹಳ ಕಷ್ಟವಾಗಿವೆಯೆ? ಹಾಗಾದರೆ ಸ್ಪೆಲ್ಲಿಂಗ್ ಸಮಸ್ಯೆಯೆಂಬ ಕೊರತೆಯನ್ನು ಕನ್ನಡದಲ್ಲಿ ಇಟ್ಟುಕೊಂಡು ಮುಂದುವರೆಯುವುದೇ ತಪ್ಪಾಗಬಹುದು. ಈ ವಿಷಯದಲ್ಲಿ ಆಳವಾಗಿ ಸಂಶೋಧನೆ ನಡೆಯಬೇಕು (ಹಂಪಿ ಕನ್ನಡ ವಿವಿ ಇದನ್ನು ಕೈಗೊಳ್ಳಬಹುದು). ಆಳವಾಗಿ ವಿಷಯವನ್ನು ಅರ್ಥಮಾಡಿಕೊಳ್ಳದೆ ಬದಲಾವಣೆಯನ್ನು ಮಾಡುವ ಇಲ್ಲವೇ ಹಳೆ-ಶಾಲೆಯವರಂತೆ ವಿರೋಧಿಸುವ ಅವಶ್ಯಕತೆಯಿಲ್ಲ.
ಸಂಸ್ಕೃತದಿಂದಲೇ ಕನ್ನಡಕ್ಕೆ ಅಂಗಾಂಗಗಳು ಬಂದಿಲ್ಲ, ಅವು ಮೊದಲಿಂದಲೇ ಕನ್ನಡದಲ್ಲಿ ಇವೆ!ತಿರುಮಲೇಶರು ಕನ್ನಡದ ಅಂಗಾಂಗಗಳೆಂದರೆ ಸಂಸ್ಕೃತದ ಪದಗಳು, ಸಂಸ್ಕೃತದ ಅಕ್ಷರಗಳು, ಸಂಸ್ಕೃತದ ಪದಕಟ್ಟುವ ನಿಯಮಗಳು ಎಂದು ತಿಳಿದುಕೊಂಡಿರುವುದು ಅವರಿಗೆ ಕನ್ನಡದ ಸ್ವರೂಪದ ಅರಿವಿಲ್ಲದಿರುವುದನ್ನು ತೋರಿಸುತ್ತದೆ. ಕನ್ನಡಕ್ಕೆ ಸಂಸ್ಕೃತದಿಂದಲ್ಲದೆ ಕೈಕಾಲುಗಳೇ ಇರುವುದಿಲ್ಲ ಎಂದು ತಿಳಿದುಕೊಂಡಿರುವುದು ತಪ್ಪು. ಕನ್ನಡದಲ್ಲಿ ಸ್ವಂತವಾಗಿ ಕೈಕಾಲುಗಳು ಇವೆ, ಕಣ್ಣು ಬಿಟ್ಟು ನೋಡಬೇಕಷ್ಟೆ. ಆ ಕೈಕಾಲುಗಳನ್ನು ಇಲ್ಲ, ಇಲ್ಲ ಎಂದು ಜಪಿಸುತ್ತಿರುವವರಿಗೆ ಅವು ಇಲ್ಲವೆನಿಸಬಹುದಷ್ಟೆ. ಕನ್ನಡ ಸಂಸ್ಕೃತದಿಂದ ಹುಟ್ಟಿಬಂದ ಭಾಷೆಯೆಂದು ತಪ್ಪಾಗಿ ತಿಳಿದಿರುವವರಿಗೆ ಇಲ್ಲವೆನಿಸಬಹುದಷ್ಟೆ.
ಹಾಗೆಂದ ಮಾತ್ರಕ್ಕೆ ಕನ್ನಡಕ್ಕೆ ಇಲ್ಲದ ಗುಣವೇ ಇಲ್ಲವೆಂದೂ ನಾವು ಹೇಳುತ್ತಿಲ್ಲ. ಸಂಸ್ಕೃತದಲ್ಲೂ ಇಲ್ಲದ ಗುಣಗಳಿವೆ. ಸಂಸ್ಕೃತವು ಸರ್ವಗುಣಸಂಪನ್ನವು ಎಂದು ಕೆಲವರು ತಿಳಿದುಕೊಂಡಿರುವುದು ಸಂಸ್ಕೃತದಲ್ಲಿರುವ ಅಧ್ಯಾತ್ಮಿಕ ಸಾಹಿತ್ಯದ ಬಗೆಗಿನ ಗೌರವವು ಸಂಸ್ಕೃತಭಾಷೆಗೆ ತುಳುಕಿರುವುದರಿಂದ. ಇಂಗ್ಲೀಷ್ ಕೂಡ ಸರ್ವಗುಣಸಂಪನ್ನವು ಎಂದು ಕೆಲವರು ತಿಳಿದಿರುವುದು ಇಂಗ್ಲೀಷಿನಿಂದ ಹೆಚ್ಚಿನ ಅನ್ನ ಹುಟ್ಟುತ್ತದೆ ಎನ್ನುವುದರ ಕುರಿತಾದ ಗೌರವವು ಭಾಷೆಗೆ ತುಳುಕಿರುವುದರಿಂದ. ಇರಲಿ. ಒಟ್ಟಿನಲ್ಲಿ ಕನ್ನಡಕ್ಕೆ ಬೇರೆ ಭಾಷೆಗಳಿಂದ ಬರಬೇಕಾದ್ದು ಬಹಳ ಇದೆ. ಬರಬೇಕಾದ್ದೆಲ್ಲ ಸಂಸ್ಕೃತದಿಂದಲೇ ಬರಬೇಕು ಎನ್ನುವುದು ಬಾವಿಯ ಕಪ್ಪೆಯ ಮಾತಾದೀತು. ಕನ್ನಡಕ್ಕೆ ಇಂಗ್ಲೀಷಿನಿಂದಲೂ ಬರಬೇಕಾದ್ದಿದೆ, ಜಪಾನೀಸಿನಿಂದಲೂ ಬರಬೇಕಾದ್ದಿದೆ, ಜರ್ಮನ್-ನಿಂದಲೂ ಬರಬೇಕಾದ್ದಿದೆ, ಮತ್ತೊಂದರಿಂದಲೂ ಬರಬೇಕಾದ್ದಿದೆ. ಸಂಸ್ಕೃತವೊಂದರಿಂದಲೇ ಆಮದುಮಾಡಿಕೊಂಡರೆ ಕನ್ನಡವು ಜಾಗತಿಕ ಮಟ್ಟಕ್ಕೆ ಏರಿದಂತೆಯೂ ಆಗುವುದಿಲ್ಲ. ಹಾಗೆ ಏರಲು ಪ್ರಪಂಚದ ಅನೇಕ ಪ್ರಮುಖ ಭಾಷೆಗಳಿಂದ ಆಮದುಮಾಡಿಕೊಳ್ಳಬೇಕು ಎನ್ನುವುದನ್ನು ತಿಳುವಳಿಕಸ್ತರು ಅರಿಯದೆ ಹೋಗರು.
ಏನೇ ಇರಲಿ, ಕನ್ನಡಕ್ಕೆ ಎಲ್ಲೆಲ್ಲಿಂದ ಏನೇನು ಬರಬೇಕೋ ಅದೆಲ್ಲವೂ ಸೇರಿ ಬೇಕಾದ ಅಂಗಾಂಗಗಳಲ್ಲಿ ಶೇ.೨೦ರಷ್ಟನ್ನು ಮಾತ್ರ ಪೂರೈಸಬಲ್ಲದು. ಮಿಕ್ಕ ಶೇ.೮೦ ಕನ್ನಡದಿಂದಲೇ ಬರಬೇಕು, ಈ ಮಣ್ಣಿನಿಂದಲೇ ಬರಬೇಕು, ಈ ಜನಾಂಗದಿಂದಲೇ ಬರಬೇಕು ಮತ್ತು ಬಂದೂ ಬರುತ್ತದೆ, ಎಕೆಂದರೆ ಅದೆಲ್ಲವೂ ನಮ್ಮ ನುಡಿಯಲ್ಲಿ ಅಡಗಿದೆ. ಇದಕೆ ಸಂಶಯವೆ? ಈ ದಿಟವನ್ನು ಕಾಣದವರಿಗೆ ಈ ಶೇ.೮೦ ಕೂಡ ಕನ್ನಡದ ಒಳಗಿನಿಂದ ಬರಲಾರದು ಎಂಬ ಹುಸಿನಂಬಿಕೆಯಿರುತ್ತದೆ. ಅದೂ ಸಂಸ್ಕೃತದಿಂದ ಬರಬೇಕು ಎಂದು ತಿಳಿದುಕೊಳ್ಳುವುದು ಪೆದ್ದತನವೇ ಸರಿ. ಈ ಶೇ.೮೦ರನ್ನು ಪೂರೈಸುವ ಕನ್ನಡದ ಒಳಗಿನ ಶಕ್ತಿಯನ್ನು ಬಳಸಿಕೊಳ್ಳಬೇಕಾದರೆ ನಾವು ಕನ್ನಡವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಎನ್ನುವುದರಲ್ಲಿ ಸಂದೇಹವಿಲ್ಲ. ಕನ್ನಡದ ನಿಜವಾದ ಸ್ವರೂಪವೇನು? ಕನ್ನಡದ ನಿಜವಾದ ವ್ಯಾಕರಣವೇನು? ಕನ್ನಡಕ್ಕೂ ಸಂಸ್ಕೃತಕ್ಕೂ ನಿಜಕ್ಕೂ ಯಾವ ಸಂಬಂಧವಿದೆ? ಇವುಗಳನ್ನೆಲ್ಲ ಸರಿಯಾಗಿ ಅರಿತುಕೊಳ್ಳುವುದು ಬಹುಮುಖ್ಯ. ಕನ್ನಡವೆಂಬ ಚಿನ್ನದ ಗಣಿಯೊಳಗೆ ಅಡಗಿರುವ ಮುತ್ತು-ರತ್ನಗಳನ್ನು ಬೆಳಕಿಗೆ ತರುವ ಕೆಲಸವಾಗಬೇಕಿದೆ. ಈ ಗಣಿಯ ಮೇಲೆ ಕೂತಿರುವ ಕಸ-ಕಡ್ಡಿ-ಮಣ್ಣು-ಕಲ್ಲುಗಳನ್ನು ಅಗೆದು ಪಕ್ಕಕ್ಕೆ ಎಸೆಯಬೇಕಿದೆ. ಇದನ್ನು ಮಾಡಿದಾಗಲೇ ಕಾಲದ ಬಸಿರಿನಲ್ಲಿ ಇಂದು ಭ್ರೂಣಾವಸ್ಥೆಯಲ್ಲಿರುವ ಕನ್ನಡದ ಕೂಸಿನಲ್ಲಿರುವ ಅಂಗಾಂಗಗಳು ಬೆಳಕಿಗೆ ಬರುವುದು. ಇದನ್ನು ಮಾಡಿದಾಗಲೇ ಐದೂವರೆಕೋಟಿ ಕನ್ನಡಿಗರೆಲ್ಲರು ಆಡುವ ಭಾಷೆಯ ಸೊಗಡು ಮತ್ತು ಶಕ್ತಿ ಹೊರಬರುವುದು, ಲಾಭದಾಯಕವಾಗಿ ಬಳಸಲಾಗುವುದು. ಇದನ್ನು ಮಾಡಿದಾಗಲೇ ಉಬ್ಬುಕನ್ನಡಿ, ತಗ್ಗುಕನ್ನಡಿ ಮುಂತಾದ ಹೊಸ ಪದಗಳು ಕನ್ನಡದಲ್ಲಿ ಹುಟ್ಟುವುದು. ಇಲ್ಲದಿದ್ದರೆ ಅರ್ಥವಾಗದ ನಿಮ್ನದರ್ಪಣ, ಪೀನದರ್ಪಣ ಮುಂತಾದವುಗಳೊಡನೆ ಏಗಿ ಏಗಿ ಕನ್ನಡಿಗರು ಸುಸ್ತಾಗಿ ಕೂರಬೇಕಾಗುತ್ತದೆ. ಕನ್ನಡದ ಶೇ.೮೦ರಷ್ಟು ಅಂಗಾಂಗಗಳನ್ನು ಕನ್ನಡದಲ್ಲೇ ಹುಡುಕುವುದು ಕನ್ನಡಿಗರನ್ನು ಮತ್ತಷ್ಟು ಅವಕಾಶವಂಚಿತರಾಗಿಸಿದಂತೆ ಎಂದುಕೊಳ್ಳುವುದು ಚಿಂತನೆಯ ದೋಷವಾದೀತು, ಹೇಡಿತನವಾದೀತು, ಅಭಿಮಾನದ ಕೊರತೆಯಾದೀತು, ಪೆದ್ದತನವಾದೀತು.
ಕನ್ನಡದ ಏಳಿಗೆಗೆ ನಾವು ಮೇಲೆ ತೋರಿಸಿಕೊಟ್ಟಿರುವ ದಾರಿಯು ಪ್ರಪಂಚದಲ್ಲಿ ಹೊಸದೇನಲ್ಲ. ತಿರುಮಲೇಶ್ ಅವರು ಉದಾಹರಿಸಿರುವ ಯಹೂದ್ಯರ ಭಾಷೆಯಾದ ಹೀಬ್ರೂನ ಏಳಿಗೆಯ ಕತೆಯನ್ನು ಬಲ್ಲವರಿಗಿದು ಬಹಳ ಚೆನ್ನಾಗಿ ಗೊತ್ತು. ಯಹೂದ್ಯರ ಈ ಮುಖ್ಯವಾದ ಕತೆಯನ್ನು ಓದುಗರು ಒಮ್ಮೆ ಓದಬೇಕು.