1953ರ ಕೊನೆಯ ವಾರದಲ್ಲಿ ಹುಬ್ಬಳ್ಳಿಯ ಸಮೀಪದ ಅದರಗುಂಚಿಯ ಶಂಕರ ಗೌಡ ಪಾಟೀಲರು ಆರಂಭಿಸಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹ ಎಂಟು ದಿನಗಳನ್ನು ದಾಟಿ ಕಾವು ಪಡೆದುಕೊಂಡಿತ್ತು. ಜನರಲ್ಲಿ ಹೋರಾಟದ ಮನೋಭಾವ ತೀವ್ರವಾಗಿ ಜಾಗೃತವಾಗಿ, ಪ್ರಜಾ ಪ್ರತಿನಿಧಿಗಳೆಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ರಾಜಿನಾಮೆ ಕೊಡಲೇ ಬೇಕೆಂದು ಜನ ಒತ್ತಾಯಿಸತೊಡಗಿದ್ದರು. ಇದೇ ಸಮಯದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಏಪ್ರಿಲ್ 19ರಂದು ಹುಬ್ಬಳ್ಳಿಯ ಪುರಭವನದಲ್ಲಿ ಸಭೆ ನಡೆಸಲು ಮುಂದಾಯಿತು. ಆಗ ನಡೆದ ಘಟನೆ ಬಗ್ಗೆ ಏಕೀಕರಣದ ಹೋರಾಟಗಾರರಾದ ಶ್ರೀ ಏ. ಜೆ. ಮುಧೋಳರು ಹೀಗಂತಾರೆ.
1953ನೇ ಹುಬ್ಬಳ್ಳಿಯ ಘಟನೆ: ಶ್ರೀ. ಏ ಜೆ ಮುಧೋಳರ ನುಡಿಗಳಲ್ಲಿ
ಏಪ್ರಿಲ್ 19ರ ಬೆಳಗಿನಿಂದಲೇ ಹುಬ್ಬಳ್ಳಿಯ ಗುಳಕವ್ವ ಮೈದಾನದಲ್ಲಿ (ಈಗಿನ ನೆಹ್ರೂ ಸ್ಟೇಡಿಯಂ) ಜನ ಸೇರಲಾರಂಭಿಸಿದರು. ನಾಲ್ಕು ಗಂಟೆಯ ಹೊತ್ತಿಗೆ ಸುಮಾರು 25,000 ಜನ ಸೇರಿದ್ದರು. ಅವರ ಕೂಗೆಲ್ಲಾ ಒಂದೇ 'ಅವರು ರಾಜಿನಾಮೆ ಕೊಟ್ಟರೇನು?' ನಾನು ಮತ್ತು ಸಿದ್ದಪ್ಪ ಕಮ್ಮಾರ ಮುಂದೆ ಇದ್ದೆವು. ಪೊಲೀಸ್ ಬಂದೋಬಸ್ತ್ ಜೋರಾಗಿತ್ತು. ಆಗ ರೆಬೆಲೋ ಎಸ್.ಪಿ, ಕಾಂಬ್ಳಿ ಡಿ.ಎಸ್.ಪಿ ಆಗಿದ್ದರು. ಗುಳಕವ್ವನ ಕೆರೆ ಮೈದಾನದಲ್ಲೇ ಆಗ ಪ್ರಕಾಶ್ ಸರ್ಕಸ್ ನಡೀತಿತ್ತು. ಜನ ಗುದ್ಲೆಪ್ಪ ಹಳ್ಳಿಕೇರಿಯ ಜೀಪಿಗೆ ಬೆಂಕಿ ಇಟ್ಟರು. ಜನ ಟೌನ್ ಹಾಲಿನೊಳಗೆ ನುಗ್ಗಿದರು. ನಿಜಲಿಂಗಪ್ಪನವರಿಗೆ ಬಳೆ ತೊಡಿಸಿದರು. ನೇಸ್ವಿಯವರಿಗೆ ಏಟು ಬಿತ್ತು. ಜನ ಕೇಳಿದ್ದು 'ರಾಜಿನಾಮೆ ಕೊಡಿ'. ಗಲಭೆ ಹೆಚ್ಚಾದಾಗ ಪೊಲೀಸರು ಲಾಠಿ ಛಾರ್ಜ್ ಮಾಡುವುದಾಗಿ ಬೆದರಿಸಿದರು. ಜನ 'ಮಾಡಿ' ಅಂತ ಎದೆಯೊಡ್ಡಿದರು.
ಸಿಡಿದವು ಗುಂಡುಗಳು: ಹಾರಿದವು ಹುಲಿಗಳು
ಜನ ಕದಲಲಿಲ್ಲ. ಲಾಠಿ ಛಾರ್ಜ್ ಗೆ ಆಜ್ಞೆ ಮಾಡಲಾಯಿತು. ಆಗ ಪ್ರಕಾಶ್ ಸರ್ಕಸ್ ನಲ್ಲಿ ಹುಲಿ ಪ್ರದರ್ಶನ ನಡೆಯುತ್ತಿತ್ತು. ಗಲಭೆಯಲ್ಲಿ ಎರಡು ಹುಲಿಗಳೂ ಹೊರಬಿದ್ದವು. ಇಲ್ಲಿ ಜನರ ಗಲಭೆ. ಜನರೂ ಪೊಲೀಸರ ವಿರುದ್ಧ ತಿರುಗಿ ಬಿದ್ದು ಕಲ್ಲು ತೂರಾಟ ಆರಂಭವಾಯಿತು. ಟೌನ್ ಹಾಲ್ ತುಂಬಾ ಕಲ್ಲು ಬಿದ್ದವು. ಲಾಠೀ ಛಾರ್ಜ್ ಆರಂಭವಾಗುತ್ತಿದ್ದಂತೆಯೇ ಹೆದರಿದ ಜನ ಗುಳಕವ್ವ ಕೆರೆಯ ಒಂದು ಅಂಚಿಗಿದ್ದ ದೊಡ್ಡ ಚರಂಡಿಯನ್ನು ದಾಟಿ ಮರಾಟ ಗಲ್ಲಿಯತ್ತ ಓಡಿದರು. ಗಲಭೆ ಇನ್ನೂ ಮುಂದುವರೆದೇ ಇತ್ತು.
ಆಗ ಪೊಲೀಸರು ಗೋಲಿಬಾರ್ ಗೆ ಆದೇಶ ನೀಡಿದರು. ಗುದ್ಲೆಪ್ಪನವರ ಜೀಪಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ಫೈರ್ ಎಂಜಿನ್ ಮೇಲೂ ಜನ ದಾಳಿ ಮಾಡಿದರು.
ಹನ್ನೆರಡು ಗಂಟೆಯವರೆಗೂ ಗಲಭೆ ನಡೆಯಿತು. ಬೆಳಗಿನ ಜಾವ 4 ಗಂಟೆಗೆ ನಮ್ಮನ್ನೆಲ್ಲಾ ಹಿಡಿದರು. ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿಗೆ ಬಂತು. ಹುಬ್ಬಳ್ಳಿಯ ಗೋಲಿಬಾರ್ ಕಟ್ಟಲೆ ಎಂದೇ ಪ್ರಸಿದ್ಧವಾದ ಅದು ಮೂರುವರೆ ವರ್ಷ ಕೋರ್ಟಿನಲ್ಲಿ ನಡೆಯಿತು. ಅದರಲ್ಲಿ ಮುದ್ದೇಮಾಲು ಐದುಗಾಡಿ ಚಪ್ಪಲಿಗಳು ಮತ್ತು ಬೂಟುಗಳು. ಇವೆಲ್ಲಾ ಗಲಭೆ ಸಮಯದಲ್ಲಿ ಮೈದಾನದಲ್ಲಿ ಬಿದ್ದಿದ್ದು ನಂತರ ಸಂಗ್ರಹಿಸಲ್ಪಟ್ಟವುಗಳು.....
ಕೇಸು ವಜಾ ಆದದ್ದು ಹೀಗೆ...
ವಿಚಾರಣೆಯ ಸಮಯದಲ್ಲಿ ಉಚಿತವಾಗಿ ನಮ್ಮ ಪರವಾಗಿ ವಾದ ಮಾಡಿದ ಎಸ್. ಆರ್. ಬೊಮ್ಮಾಯಿಯವರ ಜಾಣತನದಿಂದಾಗಿ ಈ ಕೇಸು ಬಿದ್ದು ಹೋಯಿತು. ವಿಚಾರಣೆಗಾಗಿ ನಮ್ಮ ಒತ್ತಾಯದ ನಂತರ ಮುಂದಿನ ಬಾರಿ ನಿಜಲಿಂಗಪ್ಪನವರು ಬಂದರು. ವಿಚಾರಣೆಯ ಸಂದರ್ಭದಲ್ಲಿ ಮುದ್ದೇಮಾಲಾಗಿದ್ದ ಚಪ್ಪಲಿ ರಾಶಿಯನ್ನು ತೋರಿಸಿ 'ತಮಗೆ ಏಟು ಬಿದ್ದ ಚಪ್ಪಲಿಯನ್ನು ಗುರುತಿಸಲು' ನಿಜಲಿಂಗಪ್ಪನವರಿಗೆ ಕೇಳಲಾಯಿತು.ಅವರು ಗುರುತಿಸಲು ಸಾಧ್ಯವಿಲ್ಲ ಅಂದರು. ಜೀಪಿಗೆ ಬೆಂಕಿ ಇಟ್ಟವರನ್ನು ಗುದ್ಲೆಪ್ಪನವರಿಗೂ ಗುರುತಿಸಲಾಗಲಿಲ್ಲ. ಕೊನೆಗೆ ನಮ್ಮ ಮೇಲೆ ಯಾವ ಆರೋಪಗಳನ್ನೂ ಸಿದ್ಧಪಡಿಸಲಾಗದೆ , ಬಿಡುಗಡೆ ಮಾಡಿದರು.
ಕರ್ನಾಟಕ ಏಕೀಕರಣ ಇತಿಹಾಸ: ಡಾ. ಎಚ್. ಎಸ್. ಗೋಪಾಲ ರಾವ್
ನವಕರ್ನಾಟಕ ಪ್ರಕಾಶನದ ಈ ಪುಸ್ತಕದ ತುಂಬ ಇಂತಹ ಅನೇಕ ರೋಮಾಂಚಕಾರಿ ಸಂಗತಿಗಳು ಇವೆ. ನಮ್ಮ ನಾಡು ನಮಗೆ ಪುಗಸಟ್ಟೆ ಸಿಕ್ಕಿಲ್ಲ. ಕನ್ನಡಿಗರ ಇತಿಹಾಸದ ಪುಸ್ತಕ ಸ್ವಾಭಿಮಾನಿಗಳ, ಮಹಾ ಸಾಮ್ರಾಜ್ಯಗಳ, ಸಾಹಸದ ಪುಟಗಳಿಂದ ಕಂಗೊಳಿಸುತ್ತಿದ್ದರೆ ಆ ಇತಿಹಾಸ ಕಥನದ ರಕ್ಷಾಪುಟವಾಗಿಇಂತಹ ತ್ಯಾಗ ಬಲಿದಾನಗಳ ಕಥೆ ಇವೆ. ಈ ಹೊತ್ತಿಗೆಯನ್ನು ತಪ್ಪದೆ ಓದಿ... ಇಂದೇ.
3 ಅನಿಸಿಕೆಗಳು:
namma deshakke swatantra baralu maatra hOraaDidavarannu deshabhaktaru anta jana parigaNisuttaare..
haMchi haridu hogidda kannaDada praantyagaLa ekikaraNa maaDisuvudakkagi horaaDida anekaaneka kannaDa kaTTaLugaLu saha desha premigaLe..
jai kannaDaambe
adbhuta baraha sir,,
namma sarkara yaake intha horaTada bagegina onde ondu paaTavannu namma shalegaLalli heLalla???
naadu nudiya bagegina e yella maahitagaLu namma mahiLeyarannu talupabeku sir,,, avara mulakhave adu namma baruva generation ge pass aagodu.
tale keDiso Tele Serials maadoru swalpa naadu nudiya bagegina, itihaasada bagegina vivaraanu tamma serials alli haaki namma mahiLeyaralli jaagruti tarabeku annodu nanna abhipraya.
nimma kelsa hige saagali sir !!
EkIkaraNada itihaasada bagge tiLisikoTTaddakke dhanyavaadagaLu. iShTu kaShTa paTTu gaLisikomDa naaDannu uLisikoLLabEkaadaddu nammellara kartavya.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!