೨೨ ಕೋಟಿ ರೂ ವೆಚ್ಚದಲ್ಲಿ ಕರ್ನಾಟಕದ ತನ್ನ ೫೯೦೦ ಶಾಖೆಗಳಲ್ಲಿ ಹೊಸ ನಾಮಫಲಕಗಳನ್ನು ಅಳವಡಿಸಲು ನಮ್ಮ ಕೆನರಾ ಬ್ಯಾಂಕು ಸಜ್ಜಾಗುತ್ತ ಅಲ್ಲಿ ಕನ್ನಡವನ್ನು ಕಡೆಗಣಿಸುತ್ತಿರುವ ಬಗ್ಗೆ ೨೦ ನೇ ಡಿಸಂಬರ್ ೨೦೦೭ ರ ವಿ.ಕ. ದಲ್ಲಿದೆ ಒಂದು ಸುದ್ಧಿ.
ಮಂಗಳೂರಿನ ಅಮ್ಮೆಂಬಳ ಸುಬ್ಬರಾಯ ಪೈ ಎಂಬ ಮಹನೀಯರೊಬ್ಬರು ಬಹಳ ದೂರದೃಷ್ಟಿಯಿಟ್ಟು ೧೯೦೬ ರಲ್ಲೆ ಆರಂಭಿಸಿದ ಈ ಕೆನರಾ ಬ್ಯಾಂಕ್ ಹಣಕಾಸು ಸಂಸ್ಥೆ. ನಂತರದಲ್ಲಿ ಕನ್ನಡಿಗರೆಲ್ಲರ ಬೆಂಬಲದೊಂದಿಗೆ ಬೆಳೆದು ಇಂದು ಇಡೀ ವಿಶ್ವಕ್ಕೆ ಚಿರಪರಿಚಿತ.
ನಮ್ಮ ಕನ್ನಡಿಗರದೇ ಬ್ಯಾಂಕು ಎಂದು ನಾವು ಹೆಮ್ಮೆಯಿಂದ ಹೇಳುತ್ತಿದ್ದ ಕರ್ನಾಟಕ, ಕಾರ್ಪೋರೇಷನ್, ವಿಜಯ, ಸಿಂಡಿಕೇಟ್, ವೈಶ್ಯ ಮತ್ತು ಕೆನರಾ ಬ್ಯಾಂಕುಗಳು ನಮ್ಮೂರುಗಳಲ್ಲಿ ಕನ್ನಡಿಗರಿಗೇ ಹೆಚ್ಚು ಕೆಲಸದ ಅವಕಾಶ ಒದಗಿಸಿದ್ದವು. ಶಾಖೆಗಳೆಲ್ಲೆಡೆ ಕನ್ನಡತನ ತುಂಬಿ ತುಳುಕಿರುತ್ತಿತ್ತು. ಸಂಪೂರ್ಣ ಕನ್ನಡಮಯವಾಗಿದ್ದ ಬ್ಯಾಂಕಿನೊಳಗೆ ಕಾಲಿಟ್ಟೊಡನೆ ನಮ್ಮದೇ ಮನೆಯೊಳಗೆ ದೊರಕುವ ಸ್ವಾಗತ ನಮಗಲ್ಲಿ ಸಿಗುತ್ತಿತ್ತು. ಕನ್ನಡಿಗರ ಆಶೀರ್ವಾದದಿಂದ ಬೆಳೆದ ಈ ಬ್ಯಾಂಕುಗಳು ದೇಶದೆಲ್ಲೆಡೆ ಟಿಸಿಲೊಡೆದು ಆರ್ಥಿಕವಾಗಿ ಸಾಕಷ್ಟು ಲಾಭ ಮಾಡಿಕೊಂಡವು. ಆದರೆ ತಾವು ಬೆಳೆದಂತೆ ತಮ್ಮನ್ನು ಬೆಳೆಸಿದ ಕರ್ನಾಟಕವನ್ನು ಸಮರ್ಥವಾಗಿ ಪ್ರತಿನಿಧಿಸಲು ಇತ್ತೀಚಿನ ದಿನಗಳಲ್ಲಿ ಈ ಸಂಸ್ಥೆಗಳು ವಿಫಲವಾಗುತ್ತಿರುವುದು ವಿಪರ್ಯಾಸವಾಗಿದೆ.
ಇದರ ಜತೆಗೆ ಇಂಗ್ಲೀಷ್ ಬಲ್ಲವರಿಗೆ ಮಾತ್ರ ನಮ್ಮ ಬ್ಯಾಂಕಿರುವುದು ಎಂಬ ಭಾವನೆ ಮೂಡಿಸುತ್ತ ಇಂದು ಅನೇಕ ವಿದೇಶಿ ಬ್ಯಾಂಕುಗಳು ನಮ್ಮಲ್ಲಿ ಲಗ್ಗೆ ಇಟ್ಟಿವೆ. ಈ ಬ್ಯಾಂಕಿನ ಕರ್ನಾಟಕದ ಶಾಖೆಗಳಲ್ಲಿ ಕನ್ನಡಿಗ ಇಂದು ಪರಕೀಯ. ತಾವು ಬೆಳೆಯುವುದರ ಜತೆಗೆ ಕನ್ನಡ-ಕನ್ನಡಿಗ-ಕರ್ನಾಟಕದ ಸಂಸ್ಕೃತಿಗೆ ಕಿಂಚಿತ್ತಾದರೂ ಪ್ರತ್ಯಕ್ಷವಾಗಿ ಸಹಕಾರಿಯಾಗಬೇಕಾದದ್ದು ಇಲ್ಲಿಗೆ ಬರುವ ಯಾವುದೇ ವ್ಯಾಪಾರಿಗಳ ಮನೋಧರ್ಮವಾಗಬೇಕು. ಅದರಲ್ಲೂ ಕೆನರಾ ಬ್ಯಾಂಕ್ ನಂತಹ ಸ್ಥಳೀಯ ಸಂಸ್ಥೆಗಳಿಗೆ ಅದು ಮೂಲಮಂತ್ರವಾಗಬೇಕು. ಅದೇ ಅವರ ಸ್ವಸ್ವರೂಪ ಮತ್ತು ಸ್ವವ್ಯಕ್ತಿತ್ವಕ್ಕೆ ಕೈಗನ್ನಡಿಯಾಗುವುದು. ಇವೇ ಅವರಲ್ಲಿಗೆ ಬರುವ ಗ್ರಾಹಕರು ಇದು ನಮ್ಮ ಬ್ಯಾಂಕು ಎಂದು ಗುರುತಿಸಿಕೊಳ್ಳಲು ಸಹಕಾರಿಯಾಗುವುದು. ನ್ಯಾಯಾಲಯ ನಾಮಫಲಕದ ಈ ವ್ಯವಹಾರದಲ್ಲಿ ತಾನು ಏನೂ ಹೇಳಲಿಚ್ಚಿಸುವುದಿಲ್ಲ ಎಂದು ಕೈ ತೊಳೆದುಕೊಂಡಿದೆ. ಇದು ಕೆನರಾ ಬ್ಯಾಂಕ್ ತನಗೆ ದೊರೆತ ಜಯ ಎಂದು ಭಾವಿಸಿರಬಹುದು. ಆದರೆ, ಕೆನರಾ ಬ್ಯಾಂಕ್ ನಮ್ಮ ನಾಡಿನ ತನ್ನ ಶಾಖೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡದಿರುವುದು ತನ್ನ ಅನನ್ಯತೆ ಮತ್ತು ಅಭಿನ್ನತೆಗೆ ಮಸಿಬಳಿದುಕೊಂಡತಲ್ವ ಗುರು.
ಕರ್ನಾಟಕದ ಎಲ್ಲಾ ಅಂಗಡಿ, ಮುಂಗಟ್ಟು, ವಾಣಿಜ್ಯೋದ್ದೇಶಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರಬೇಕು ಅನ್ನೋ ಆದೇಶ ಇಂತಹವರ ಕಣ್ಣು ತೆರಸಬೇಕಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಕೂಡಲೇ ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ಕನ್ನಡಕ್ಕೆ ಅಗ್ರಸ್ಥಾನ ನೀಡಲು ಗಮನಹರಿಸಬೇಕಿದೆ. ಕೆನರಾ ಬ್ಯಾಂಕಲ್ಲಿ ಖಾತೆ ಹೊಂದಿರುವ ಕನ್ನಡಿಗರೆಲ್ಲರೂ ಬ್ಯಾಂಕ್ ನ ಈ ನಿಲುವಿನ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಬೇಕಿದೆ.
2 ಅನಿಸಿಕೆಗಳು:
ಎರಡು ಮೂರು ತಿಂಗಳ ಹಿಂದೆ ನಮ್ಮ ಸಿಂಡಿಕೇಟ್ ಬ್ಯಾಂಕ್ ತನ್ನ ಬ್ಯಾಂಕ್ ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರಿಗೆ ಹಿಂದಿ ಕಡ್ಡಾಯವಾಗಿ ಬರಬೇಕು ಎಂಬ ಜಾಹೀರಾತು ನೀಡಿತ್ತು. ತಮಿಳುನಾಡಿನಲ್ಲಿ ಕರುಣಾನಿಧಿ ವ್ಯಾಪಕವಾಗಿ ಇದರ ಬಗ್ಗೆ ಪ್ರತಿಭಟನೆ ಸಲ್ಲಿಸಿದ್ದರು.
ಲೇಖನದಲ್ಲಿ ಉಲ್ಲೇಖಿಸಿರುವ ನಮ್ಮ ಕರ್ನಾಟಕ ಮೂಲದ ಎಲ್ಲಾ ಬ್ಯಾಂಕುಗಳು ತಮ್ಮ ಅಂತರ್ಜಾಲ ತಾಣವನ್ನು ಬರೀ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾಡಿದ್ದಾರೆ. ಕನ್ನಡದಲ್ಲಿ ಮಾಡಬೇಕು ಎನ್ನುವ ಸಾಮಾನ್ಯ ತಿಳುವಳಿಕೆ ಇವರಿಗೆ ಇಲ್ಲದಿರುವುದು ಕನ್ನಡದ ಬಗೆಗಿನ ಇವರ ಉದಾಸೀನತೆಯನ್ನು ತೋರಿಸುತ್ತದೆ. ತಾಣವನ್ನು ಕನ್ನಡದಲ್ಲಿ ಮಾಡಲು ನಾವು ಇವರನ್ನು ಆಗ್ರಹಿಸಬೇಕು.
ನಾವು [ಗ್ರಾಹಕರು] ಸೇವೆ ನಮಗೆ ಕನ್ನಡದಲ್ಲೇ ಬೇಕು ಎಂದು ಆಗ್ರಹಿಸಬೇಕು. ಹಾಗೆ ಮಾಡಿದಾಗ ಮಾತ್ರ ಅದಕ್ಕೆ ಬೆಲೆ ಸಿಗುವುದು. ಬ್ಯಾಂಕುಗಳಲ್ಲಿ ನಾವು ವಿತರಿಸುವ ಚೆಕ್ಕು, ಚಲನ್, ಅರ್ಜಿ, ನಮೂನೆ ಎಲ್ಲವನ್ನು ನಾವು ಕನ್ನಡದಲ್ಲೇ ತುಂಬಬೇಕು. ಬ್ಯಾಂಕ್ ಒಳಗೆ / ಕರೆ ಕೇಂಡ್ರದೊಡನೆ ನಾವು ವ್ಯವಹರಿಸುವಾಗ ಅವರನ್ನು ಕನ್ನಡದಲ್ಲೇ ಮಾತನಾಡಿಸಬೇಕು. ಸ್ವಯಂ ಚಾಲಿತ ಹಣ ಯಂತ್ರ [ಎಟಿಎಂ]ದಲ್ಲಿ ಸಹ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಬೇಕು.
ಹೀಗೆ ನಮ್ಮ ಸಣ್ಣ ಪ್ರಯತ್ನ ದೊಡ್ಡ ಪ್ರಮಾಣದಲ್ಲಿ ಬೆಳೆದರೆ ನಮ್ಮ ಬೆಲೆ ಅವರಿಗೆ ಅರಿವಾಗುತ್ತದೆ. ನಾವೇ ಸುಮ್ಮನಿದ್ದುಬಿಟ್ಟರೆ ಇವರಿಗೆ ಕನ್ನಡ ಬೇಡ ಎಂದು ಅವರು ನಿರ್ಧರಿಸಿಬಿಡುತ್ತಾರೆ.
ಈ ಸಣ್ಣ ಸಣ್ಣ ಪ್ರಯತ್ನವನ್ನು ನಾವು ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಿದ್ರೆ ಕನ್ನಡ ತಂತಾನೆ ಅಲ್ಲಿ ಕಂಗೊಳಿಸುತ್ತೆ............
ಶುರು ಹಚ್ಕೋಳಿ...........
ಕೆನರಾ ಬ್ಯಾಂಕ್ ಗೆ ಗುಮ್ಮೋದು ಸಹ ಮರೀಬೇಡಿ........... ಅವರ ಮಿಂಚೆ ವಿಳಾಸ hosecretarial@canbank.co.in
ಕನ್ನಡ ವಿರೋಧಿ ನಡವಳಿಕೆಗೆ ಧಿಕ್ಕಾರ !!
ಇದು ಬಹುಪಾಲು ನಿಜ. ಆದರೆ ನಾನು ವ್ಯವಹರಿಸುವ ಕೆನರಾ ಬ್ಯಾಂಕಿನಲ್ಲೆಲ್ಲಾ ಕನ್ನಡವೇ ನಡೆಯುತ್ತದೆ. ಆದರೆ ನಾನು ಇತ್ತೀಚಿಗೆ ಇಂಟರ್ನೆಟ್ ಬ್ಯಾಂಕಿಂಗ್ ಗಾಗಿ ಫೋನಾಯಿಸಿದಾಗ ಇಂಗ್ಲೀಷ್ ನಲ್ಲೇ ಮಾತನಾಡಲು ಶುರುಮಾಡಿಕೊಂಡರು. ಇದನ್ನು ಪ್ರತಿಭಟಿಸಿ ನಾನು ಮಿಂಚಿಸಿದ್ದೇನೆ.
ಕೆನರಾಬ್ಯಾಂಕ್ ನಾವು ಕನ್ನಡಿಗರು ನಮ್ಮದೆಂದು ಹೇಳಿಕೊಳ್ಳುವ ಬ್ಯಾಂಕ್. ಈ ವರ್ತನೆ ಖಂಡನೀಯ.
ಮೊದಲು ನಾವು ಸರಿ ಹೋಗಬೇಕು. ಆದಷ್ಟು ಚಲನ್ ಗಳನ್ನು ಕನ್ನಡದಲ್ಲಿಯೇ ತುಂಬಬೇಕು. ಕನ್ನಡದಲ್ಲಿಯೇ ವ್ಯವಹರಿಸಬೇಕು. ಅವರಿಗೆ ಬೇಕಾಗಿರೋದು ಕಾಸು ಅದು ನಮ್ಮ ಹತ್ರ ಇದೆ. ಯಾರು ನಮ್ಮ ಭಾಷೆಗೆ ಗೌರವ ಕೊಡ್ತಾರೋ ಅವರಿಗೆ ಕೊಡೋಣ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!