ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಯಾಕೆ, ಏನು, ಎತ್ತ?

ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಬೇಕು, ಇದು ನಮಗೆ ನೀವು ಕೊಡೋ ಭಿಕ್ಷೆ ಅಲ್ಲ, ನಮ್ಮ ಹಕ್ಕು ಅಂತ ಹಿರಿಯ ಸಾಹಿತಿಗಳಾದ ಶ್ರೀ ಎಲ್.ಎಸ್. ಶೇಷಗಿರಿರಾಯರು ನಿನ್ನೆ ಒಂದು ಕಾರ್ಯಕ್ರಮದಲ್ಲಿ ಗುಡುಗಿದ್ದಾರೆ.

ಕನ್ನಡ ಭಾಷಾ ಸಾಹಿತ್ಯಕ್ಕೆ ಕೇಂದ್ರ ಸರ್ಕಾರ ಹೊಸದಾಗಿ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಕ್ಕೆ ನಿಗದಿ ಮಾಡಿರೋ ಎಲ್ಲಾ ಅರ್ಹತೆಗಳೂ ಇವೆ ಅಂತ ತಜ್ಞರ ವರದಿ ಕೇಂದ್ರಕ್ಕೆ ಸಲ್ಲಿಕೆ ಆಗೇ ಹತ್ತು ತಿಂಗ್ಳು ಕಳ್ದು ಒಂದು ವರ್ಷ ಅಗ್ತಾ ಬಂದ್ರೂ ಇನ್ನೂ ಯಾವ ಬೆಳವಣಿಗೇನೂ ಆದಂಗೆ ಕಾಣ್ತಾ ಇಲ್ಲ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ಸಾಮಾನ್ಯವಾಗಿ ಕೇಳಿಬರೋ ಪ್ರಶ್ನೆಗಳು

ಕನ್ನಡ ನುಡಿಗೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಗೋದ್ರಿಂದ ಒಂದಷ್ಟು ಕೋಟಿ ಅನುದಾನ ಬರುತ್ತೆ, ಭಾರತದ, ಪ್ರಪಂಚದ ನಾನಾ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಅಧ್ಯಯನಕ್ಲ್ಕೆ ಅವಕಾಶ ಸಿಗುತ್ತೆ, ಕನ್ನಡ ಓದಿದವ್ರಿಗೆ ಇಂಥಾಲ್ಲೆಲ್ಲಾ ಚೂರುಪಾರು ಕೆಲ್ಸದ ಅವಕಾಶ ಸಿಗುತ್ತೆ, ಪ್ರಪಂಚದ ಕಣ್ಣಲ್ಲಿ ಕನ್ನಡಕ್ಕೆ ಪುರಾತನವಾದ ಭಾಷೆ ಅಂತ ಒಸಿ ಮರ್ವಾದೇನೂ ಸಿಗುತ್ತೆ ಅನ್ನೋದೇನೋ ನಿಜ. ಆದ್ರೆ ಇದಕ್ಕೋಸ್ಕರ ಇಷ್ಟೆಲ್ಲಾ ಅತ್ತೂ ಕರೆದೂ ಈ ಸ್ಥಾನಮಾನ ಗಿಟ್ಟಿಸ್ಕೋಬೇಕಾ ಅನ್ನೋ ಪ್ರಶ್ನೆ ಅನೇಕರಿಗೆ ಇದೆ.

"ಹತ್ತು ವರ್ಷದ ಹಿಂದೆ ಯಾಕೆ ಈ ಕೂಗು ಎದ್ದಿರ್ಲಿಲ್ಲ? ಈಗ ತಮಿಳಿಗೆ ಆ ಸ್ಥಾನ ಸಿಕ್ಕಿದ ಕೂಡಲೇ ನಮಗೂ ಶಾಸ್ತ್ರೀಯ ಭಾಷಾಸ್ಥಾನಮಾನ ಬೇಕು ಅಂದ್ರೆ ಸರೀನಾ? ಇದು ಸಣ್ಣ ಬುದ್ಧಿ ಅಲ್ವಾ?" ಅಂತ ಕೊಂಕು ಮಾತಾಡೋರ್ಗೇನು ಕೊರತೆ ಇಲ್ಲ. ಆದರೆ ನಿಜವಾಗ್ಲೂ ಕನ್ನಡಕ್ಕೆ ಈ ಸ್ಥಾನಮಾನ ಯಾಕೆ ಬೇಕು? ಇದಕ್ಕಾಗಿ ಯಾಕೆ ಕನ್ನಡಿಗ್ರು ಹೋರಾಡ್ಬೇಕು? ಈ ಪ್ರಶ್ನೆಗಳಿಗೆ ಉತ್ತರ ಏನೂಂತ ಒಸಿ ನೋಡ್ಮ.

ಗೌರವಕ್ಕಾಗಲ್ಲ, ಒಕ್ಕೂಟ ವ್ಯವಸ್ಥೆಯ ಘನತೆಗಾಗಿ

ನಿಜವಾಗ್ಲೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನ ಸಿಗೋದ್ರಿಂದ ಒಂದೇ ಒಂದು ನಯಾಪೈಸ ಲಾಭ ಇಲ್ಲಾಂದ್ರೂ ಪರ್ವಾಗಿಲ್ಲ (ತಮಿಳ್ರು ಈ ಸ್ಥಾನಮಾನದಿಂದ ಕಿಸ್ದಿರೋದು ಅಷ್ಟಕ್ಕಷ್ಟೇ!), ನಮಗದು ಬೇಕೇ ಬೇಕು! ಯಾಕಂದ್ರೆ ಒಂದು ಒಕ್ಕೂಟ ವ್ಯವಸ್ಥೇಲಿ ಇದ್ದು, ಒಂದೊಂದು ಭಾಷೆಗೆ ಒಂದೊಂದು ಮಾನದಂಡ ಅನುಸರಿಸೋ ರೀತಿ ಬದ್ಲಾಗಬೇಕು. ತಮಿಳು ಭಾಷೆಗೆ ಅಂಥಾ ಸ್ಥಾನ ಕೊಡ್ಬೇಕಾದಾಗ ಇಲ್ದೇ ಇದ್ದ ನಿಯಮಗಳ್ನ ಈಗ ಕನ್ನಡದ ವಿಷ್ಯಕ್ ಬಂದಾಗ ಹೇರುದ್ರೆ ಅದು ಒಕ್ಕೂಟ ವ್ಯವಸ್ಥೆಗೆ ಬಗೆಯೋ ದ್ರೋಹ ಆಗುತ್ತೆ ಗುರು!

ಭಾರತೀಯ ಒಕ್ಕೂಟದಲ್ಲಿ ಎಲ್ರುಗೂ ಸಮಾನವಾದ ಹಕ್ಕಿದೆ, ಸ್ಥಾನಮಾನ ಇದೆ ಅನ್ನೋದು ಬರೀ ಪುಸ್ತಕದ ಬದ್ನೇಕಾಯಿ ಆಗ್ದೆ, ಎಲ್ಲರ ನಡುವೆ ನಿಜವಾದ ಸಮಾನತೆ ಬರ್ಬೇಕು. ತಮಿಳು ಕಣ್ಣಿಗೆ ಬೆಣ್ಣೆ, ಕನ್ನಡದ ಕಣ್ಣಿಗೆ ಸುಣ್ಣ ಹಚ್ಚೋದ್ನ ಇನ್ ಸಹಿಸಕಾಗಲ್ಲ ಅನ್ನೋದ್ನ ಸಾರಬೇಕಾಗಿದೆ ಗುರು. ಇದು ಬರೀ ಶಾಸ್ತ್ರೀಯ ಭಾಷೆ ವಿಷ್ಯಕ್ ಮಾತ್ರ ಅಲ್ಲ. ಆಪತ್ತಿನ ಕಾಲದಲ್ಲಿ ಪರಿಹಾರ ಹಂಚಿಕೆ ಮಾಡೋವಾಗ, ಹೊಸ ಯೋಜನೆಗಳ್ನ, ಸಂಪನ್ಮೂಲಗಳ್ನ ಹಂಚಿಕೆ ಮಾಡೋವಾಗೆಲ್ಲಾ ಇನ್ನು ಕನ್ನಡಿಗರನ್ನು ಕಡೆಗಣನೆ ಮಾಡ್ಬೇಡಿ ಅನ್ನೋ ಸಂದೇಶಾನ ಈ ಮೂಲಕ ಕೇಂದ್ರ ಸರ್ಕಾರಕ್ಕೆ ಕೊಡಲೇ ಬೇಕಾಗಿದೆ. ಏನ್ ಗುರು?

4 ಅನಿಸಿಕೆಗಳು:

Anonymous ಅಂತಾರೆ...

"ಭಾರತೀಯ ಒಕ್ಕೂಟದಲ್ಲಿ ಎಲ್ರುಗೂ ಸಮಾನವಾದ ಹಕ್ಕಿದೆ, ಸ್ಥಾನಮಾನ ಇದೆ ಅನ್ನೋದು ಬರೀ ಪುಸ್ತಕದ ಬದ್ನೇಕಾಯಿ ಆಗ್ದೆ, ಎಲ್ಲರ ನಡುವೆ ನಿಜವಾದ ಸಮಾನತೆ ಬರ್ಬೇಕು." ಅವನೌನ್ ಮನಗಂಡ್ ಮಾತ ನೋಡ್ ಗುರು !

ತಮಿಳರಿಗೆ ಕೇಳ್ ಕೇಳಿದನ್ನೆಲ್ಲ ಕೊಡು ನಮ್ಮ ಕೇಂದ್ರ ಸರ್ಕಾರ ನಮಗ್ಯಾಕ್ ಕೊಡವಲ್ತು ಅನ್ನುದನ್ನ ನಮ್ಮ ಮಂದಿ ಸ್ವಲ್ಪ ವಿಚಾರ ಮಾಡಬೇಕ್ರಿ ಗುರು. ನಮ್ಮದ್ ಆದ್ ಒಂದ ಪ್ರಾದೇಶಿಕ ಪಕ್ಷ ಬಂದು ಒಂದು 20 ಮಂದಿ ಎಮ್.ಪಿ ಗೊಳ್ ಇದ್ದರಂದ್ರ ಅವನೌನ್ ಎಂತ ಸೂ.. ಮಕ್ಕಳು ನಾವು ಹೇಳದಂಗ ಕೇಳತಾರ್ ಗುರು.. ಹೌದಿಲ್ರಿ??

ನಮ್ಮ ಮಂದಿ ಸ್ವಲ್ಪ ವಿಚಾರ ಮಾಡಿ ಬರು ಎಲೆಕ್ಷನ್ ನಾಗ್ ( ಬಿ.ಜೆ.ಪಿ, ಕಾಂಗ್ರೆಸ, ದಳದಾಗ ಇರು) ಚಲೊ ಚಲೊ ಮಂದಿಗೆ ಆರಸಿ ಕಳಸಬೇಕು.. ಅದು ಎಲ್ಲಿವರಿಗ್ ಅಂದ್ರ ನಮ್ಮದ ಆದ್ ಒಂದು ಪಾರ್ಟಿ ಬರುತಂಕ.

ಆಮ್ಯಾಲ್ ಎ ಮಂಗ್ಯಾ ಸೂ.. ಮಕ್ಕಳಿಗ್ ಒದ್ದು ಹೊರಗ್ ಹಾಕಬೇಕ್ ಗುರು.. ಏನಂತಿರಿ??

sunaath ಅಂತಾರೆ...

ಶಾಸ್ತ್ರೀಯ ಭಾಷೆಯ ಸ್ಥಾನಮಾನದಿಂದ ಕೆಲವೊಂದು ಸೌಕರ್ಯಗಳು ಲಭ್ಯವಾಗುವದೇನೊ ನಿಜ; ಆದರೆ ಇದರ ಮತ್ತೊಂದು ಮುಖವನ್ನು ದಯವಿಟ್ಟು ಗಮನಿಸಿರಿ.
ಸಂಸ್ಕೃತಕ್ಕೆ ಅಥವಾ ಹಳೆಯ ಗ್ರೀಕ್ ಭಾಷೆಗೆ ಶಾಸ್ತ್ರೀಯ ಭಾಷೆ ಅಂತ ಯಾಕೆ ಕರೀತಾರೆ? ಯಾಕೆಂದರೆ ಆ ಭಾಷೆಗಳು ನಿಂತಲ್ಲೇ ನಿಂತಿವೆ. ಆಧುನಿಕ ಭಾಷೆಗಳಲ್ಲಿ ಆಗೋವಂತಹ ಬದಲಾವಣೆಗಳು ಈ ಭಾಷೆಗಳಲ್ಲಿ ಆಗೋದಿಲ್ಲ ಅನ್ನೋ ಕಾರಣಕ್ಕೆ.ಆ ರೀತಿಯಲ್ಲಿ ತಮಿಳು ಕೂಡಾ ಒಂದು ಬದಲಾವಣೆ ಇಲ್ಲದ ಭಾಷೆ. ತಮಿಳಿಗೆ ಶಾಸ್ತ್ರೀಯ ಭಾಷೆ ಅಂತ ಕರೆಯೊ ಬದಲು primitive-ಅನಾಗರಿಕ ಭಾಷೆ ಅಂತ ಕರೆಯೋದು ಹೆಚ್ಚು ಯೋಗ್ಯವಾದದ್ದು. ಪ್ರತಿ ವರ್ಗದ ನಾಲ್ಕು ವ್ಯಂಜನಗಳ ಬದಲಾಗಿ ಒಂದೇ ವ್ಯಂಜನವುಳ್ಳ ಈ ತಮಿಳು ಲಿಪಿ primitive ಅಲ್ಲದೆ ಇನ್ನೇನು? ಆದರೆ ಭಾರತದ ಯಾವುದೆ ಭಾಷೆಯಲ್ಲಿ ಇರುವದಕ್ಕಿಂತ ಹೆಚ್ಚು ಅಕ್ಷರಗಳು ಕನ್ನಡ ಲಿಪಿಯಲ್ಲಿ ಇವೆ. ನಮ್ಮ ಕನ್ನಡ ಭಾಷೆ ನಿಂತ ನೀರಾಗಿಲ್ಲ.ಆಧುನಿಕ ಯುಗಕ್ಕೆ ತಕ್ಕಂತೆ ನವನವೀನವಾಗುತ್ತಲೇ ಇದೆ. ಅಂದ ಮೇಲೆ ನಾವೇಕೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಕೇಳಬೇಕು ಹೇಳಿ.

hamsanandi ಅಂತಾರೆ...

ಸುಧೀಂದ್ರ ಅವರೆ,

ನೀವು ಎರಡು ಮೂರು ವಿಷಯಗಳನ್ನ ಬೆರೆಸುತ್ತಿದ್ದೀರ!
೧. ತಮಿಳು ನಿಂತ ನೀರಾಗಿರುವ ಭಾಷೆಯೇನಲ್ಲ. ಅದರಲ್ಲೂ ಬಹಳ ಬದಲಾವಣೆಗಳಾಗಿವೆ. ರಸ್ತೆಯಲ್ಲಿ ಹೋಗುವ ಒಬ್ಬ ಸಾಮಾನ್ಯ ತಮಿಳನನ್ನು ಆಳ್ವಾರ್ ಕವಿತೆಯನ್ನು ಅರ್ಥಮಾಡಿಕೊಳ್ಳಲು ಕೇಳಿದರೆ, ಆತನಿಗೆ ಅರ್ಥವಾಗುವುದೂ ನಮ್ಮಲ್ಲಿ ಸಾಮಾನ್ಯನೊಬ್ಬನಿಗೆ ವಡ್ಡಾರಾಧನೆ ಅರ್ಥವಾಗುವಷ್ಟೇ.
೨. ತಮಿಳು ನಿಂತ ನೀರು ಭಾಷೆಯೋ ಅಲ್ಲವೋ ಎನ್ನುವುದು ಕೂಡ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಲು ತಡೆಯಾಗಬಾರದು.
೩. ನಮ್ಮ ನುಡಿಯ ಹಿರಿಮೆಯನ್ನು ಹೇಳುವಾಗ ನಾವು ಇತರರನ್ನು ಹಳಿಯುವುದರಿಂದ ಆ ಸ್ಥಾನ ಪಡೆಯುವ ಅಗತ್ಯವಿಲ್ಲ. ಕನ್ನಡದ ವಿಶೇಷತೆ ಅದಕ್ಕೆ ಇದ್ದೇ ಇದೆ.
೪. ಲಿಪಿ primitive ಅನ್ನುವುದೂ ಭಾಷೆಯ primitiveness ಗೆ ಸಾಕ್ಷಿಯಲ್ಲ ಎಂದು ನನಗನಿಸುತ್ತೆ. ಭಾಷಾ ವಿಜ್ಞಾನಿಗಳು ಇದರ ಬಗ್ಗೆ ಏನೆನ್ನುತ್ತಾರೆ ಎಂದು ನನಗೆ ತಿಳಿದಿಲ್ಲ.

ಆದರೆ ತಮಿಳಿನಷ್ಟೇ ಹಳೆಯ, ಅದರಷ್ಟೇ (ಅಥವ್ ಇನ್ನೂ ಹೆಚ್ಚು ) ವಿಪುಲವಾದ ಸಾಹಿತ್ಯವಿರುವ ಕನ್ನಡವನ್ನು ಕಾಮಾಲೆಕಣ್ಣಿಂದ ನೋಡುವ ದಿಲ್ಲಿಯ ದರ್ಬಾರಿಗೆ ನನ್ನ ವಿರೋಧವಿದೆ.

-ಹಂಸಾನಂದಿ

Anonymous ಅಂತಾರೆ...

ಹಂಸಾನಂದಿಯವರಿಗೆ ನನ್ನಿ!

ಇಲ್ಲಿ ಸಂಗತಿ ಇಂತೇ!

ತಮಿಳರಿಗೆ ಎಂದಿನಿಂದಲೂ ತಮಿಳೇ ದೇವರ ನುಡಿ, ಆಡುನುಡಿ, ಸಾಂಸ್ಕೃತಿಕ ನುಡಿ, ಅವರಿಗೆ ತಮಿಳೂ ಅನ್ನೋದೇ ತಮ್ಮ ಗುರುತು. ಅದಕ್ಕೆ ಅವರು ತಮಿಳು ಕೂಡ ಒಂದು ಮೇರು ನುಡಿ, ಮೇಲ್ಮಟ್ಟದ್ದು ಎಂಬ ಭಾವನೆಯನ್ನು ತಲೆಮಾರುಗಳಿಂದ ಇಟ್ಟುಕೊಂಡು ಬಂದಿದ್ದಾರೆ. ಆ ಭಾವನೆಯಿಂದಲೇ ಇಂದು ಅವರು ದುಡಿದು, ರಾಜಕೀಯ ಮತ್ತು ವಿದ್ವತ್ ಶ್ರಮ ಎರಡು ಹಾಕಿ ತಮ್ಮ ನುಡಿಗೆ ಈ ಬಿರುದು ತಂದು ಕೊಟ್ಟರು.

ಅದೂ ಅಲ್ಲದೇ ಯಾವುದೇ ವ್ಯಾವಹಾರಿಕ/ಆಡುನುಡಿಗೆ ಒಂದು ಶಾಸ್ತ್ರೀಯ ನುಡಿ ಯಾಖೆ ಬೇಕು ಅಂದ್ರೆ ನಾವು ಹಲವು terminologyಗಳಿಗೆ ಶಾಸ್‌ತ್ರೀಯ ನುಡಿ ಕಡೆಗೆ ನೋಡುವೆವು. ಹಿಂದೆ ಇಂಗ್ಲೀಶಿಗೆ ಲ್ಯಾಟಿನ್ ಇದ್ದ ಹಾಗೆ.

ತಮಿಳರಿಗೆ ತಮಿಳೇ terminologyಗೆ ಬೇಕಾದ ನುಡಿ. ಅವರು ಸಂಸ್ಕೃತದಿಂದಲೂ, ಪಾರಸಿಯಿಂದಲೂ ಎರವಲು ಪಡೆಯಲೂ ಎಂದೂ ಒಪ್ಪಿಲ್ಲ, ಒಪ್ಪಲ್ಲ.

ಆದ್ರೆ ಹಲವು ಕನ್ನಡಿಗರು ಹಾಗಲ್ಲ. ನಮಗೆ ಸಂಸ್ಕೃತವು ಕನ್ನಡಕ್ಕಿಂತ ಮೇಲ್ನುಡಿ. ಅದು ದೇವರ ನುಡಿ. ನಾವು ಎಗ್ಗಿಲ್ಲದೇ ಸಂಸ್ಕೃತದಿಂದ ಪದಗಳನ್ನು ತುಂಬಿಕೊಂಡಿದ್ದೀವಿ.

ಕನ್ನಡವೆನ್ನುವ ವ್ಯವಹಾರದ/ಆಡುನುಡಿಗೆ ಶಾಸ್ತ್ರೀಯ ನುಡಿ ಎಂಬುದನ್ನು ಈಗಾಗಲೇ ಸಂಸ್ಕೃತ ಮತ್ತು ಕೆಲವ ಸರತಿ ಪಾರಸೀ ತುಂಬಿ ಬಿಟ್ಟಿದೆ. ಹೆಚ್ಚು ಕನ್ನಡಿಗರು ಹೊಸ terminologyಗೆ ಅಚ್ಚ-ಕನ್ನಡದಲ್ಲಿ ಪದಗಳನ್ನು ಹುಟ್ಟಿಸುವುದರ ಬದಲು ಸಂಸ್ಕೃತಕ್ಕೆ ಮೊದಲು ಮೊರೆಹೋಗುವರು.

ಈ ಕಾರಣಗಳಿಂದ ಕನ್ನಡಕ್ಕೆ ಶಾಸ್ತ್ರೀಯ/ಅಭಿಜಾತ ಪಟ್ಟ ಸಿಕ್ಕರೆ, ಅದು ಬರೀ ಬಿರುದು ಹೊರತು, ಅದರ ದಿಟದ ಬಾಳಿಕೆ ಕನ್ನಡಕ್ಕೆ, ಕನ್ನಡಿಗರಿಗೆ ಸಿಗದು. ತಮಿಳರಿಗೆ ಹೋಲಿಸಿ ಕೊಂಡರೆ, ಮಾಮೂಲಿ ಮಂದಿ ಏನೂ ದಕ್ಕದು.

ಸಂಸ್ಕೃತಕ್ಕೆ ಶಾಸ್ತ್ರೀಯ ಪಟ್ಟ ಕೊಟ್ಟಿರುವುದರಿಂದ ಸಂಸ್ಕೃತವನ್ನೇ ತುಂಬಿಕೊಂಡಿರುವ ಕನ್ನಡಕ್ಕೆ ಮತ್ತು ತಲುಗಿಗೆ ಆ ಪಟ್ಟದ ಅಗತ್ಯವಿಲ್ಲ. ಕೊಟ್ಟರೂ ಒಂದು ನಲಿವು, ಪ್ರತಿಷ್ಠೆ ಹೊರತು ಅದರ ಬಾಳಿಕೆಯಂತೂ ಎಳ್ಳಷ್ಟೂ ಇದ್ದಂತಿಲ್ಲ.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails