ಕನ್ನಡಿಗರು ಒಗ್ಗೂಡದೆ ಗಣಕದಲ್ಲಿ ಕನ್ನಡದ ಮುನ್ನಡೆಯಿಲ್ಲ

ಗಣಕ ತಂತ್ರಜ್ಞಾನದಲ್ಲಿ ಕನ್ನಡದ ಮುನ್ನಡೆ ಆಗಿದೆ ಅಂತ ನವೆಂಬರ್ 1ರಂದು ವಿ.ಕ ಪತ್ರಿಕೆ ವರದಿ ಮಾಡಿದೆ. IISc ಸಂಸ್ಥೇಲಿ ಕನ್ನಡದಲ್ಲಿ ಗಣಕ ತಂತ್ರಜ್ಞಾನ ತರೋ ಪ್ರಯತ್ನದಲ್ಲಿ OCR ಎಂಬ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೆಲಸ ನಡ್ದಿರೋ ಬಗ್ಗೆ ಇಲ್ಲಿ ಹೇಳಿದಾರೆ. ಇದಲ್ದೆ ಕನ್ನಡದಲಿ ಶ್ರೀಲಿಪಿ, ನುಡಿ, ಕನ್ನಡ ಸ್ಪೆಲ್-ಚೆಕ್ಕರ್, ಮುಂತಾದ ಹೊಸ ತಂತ್ರಜ್ಞಾನಗಳೂ ಬಂದಿವೆ ಅಂತ್ಲೂ ವರದಿ ಹೇಳತ್ತೆ (ಆದ್ರೆ ಇಡೀ ಪ್ರಪಂಚವೇ ಉಪಯೋಗಿಸ್ತಾ ಇರೋ ಬರಹ ತಂತ್ರಾಂಶದ ಬಗ್ಗೆ ತುಟಿಕ್-ಪಿಟಿಕ್ ಅನ್ನಲ್ಲ ಆ ವರದಿ!). ಅಂತರ್ಜಾಲ ತಾಣಗಳಲ್ಲೂ ಇತ್ತೀಚೆಗೆ ಹೆಚ್ಚಿನ ಬರಹಗಳು ಕನ್ನಡದಲ್ಲೇ ಕಂಡು ಬರ್ತಿರೋದು ಖುಷಿಯ ವಿಷಯ ಆಗಿದೆ.

ಆದ್ರೆ ಈಗ ನಾವುಗಳು ಇಟ್ಟಿರೋ ಪುಟ್ಟಪುಟ್ಟ ಹೆಜ್ಜೆಗಳಿಂದ್ಲೇ ಸಂತೃಪ್ತರಾಗದೆ ಇನ್ನೂ ಬಹಳ ದೂರ ಹೋಗಬೇಕಿದೆ ಗುರು! ಅದಕ್ಕೆ ಈ ತಂತ್ರಜ್ಞಾನದ ಇವತ್ತಿನ ಸ್ಥಿತಿ ಏನು, ಇನ್ನೂ ಏನೇನಾಗಬೇಕು, ಅದಕ್ಕೆ ಏನೇನು ಬೇಕು ಅಂತ ಯೋಚನೆ ಮಾಡೋದು ಬಹಳ ಮುಖ್ಯ ಗುರು.

ಈಗಿರೋ ಕನ್ನಡ ಗಣಕ ತಂತ್ರಾಂಶಗಳಲ್ಲಿ ತೊಂದರೆಗಳಿವೆ
ಇವತ್ತು ಕನ್ನಡದಲ್ಲಿ ಇರೋ ತಂತ್ರಾಂಶಗಳ ಗುಣಮಟ್ಟ ಹೇಗಿದೆ, ಅವುಗಳಲ್ಲಿ ಏನು ತೊಂದರೆಗಳಿವೆ, ಅವುಗಳಲ್ಲಿ ಏನು ಬದಲಾವಣೆಗಳಾಗಬೇಕು ಅಂತ ನೋಡಿದರೆ ಮನಸ್ಸಿಗೆ ಬರೋ ಕೆಲವು ಇಲ್ಲಿವೆ:
 • ಹೆಚ್ಚಾಗಿ ಲಿಪಿ ತಂತ್ರಾಂಶಗಳು ಬಳಸೋ ಫಾಂಟ್-ಗಳು ಯೂನಿಕೋಡಿನಲ್ಲಿ ಬಹಳ ಸೀಮಿತ ರೀತಿಯಲ್ಲಿ ಸಿಗತ್ವೆ. ಆದ್ರಿಂದ ಇವುಗಳ್ನ ಉಪ್ಯೋಗ್ಸಿದ್ರೆ ಸುಮಾರು ಕಡೆ ಕನ್ನಡ ಅಕ್ಷರಗಳ ಬದ್ಲು "?" ಚಿನ್ನೆಯೇ ಗತಿ! ಇಂತಹ ಯಾವುದೇ ಫಾಂಟ್ ಗಳು ಪೂರ್ತಿಯಾಗಿ ಯೂನಿಕೋಡ್‍ನಲ್ಲಿ ದೊರೆಯಬೇಕು.
 • ಎಷ್ಟೇ ಬಗೆಯ ತಂತ್ರಜ್ಞಾನಗಳು ಕನ್ನಡದಲ್ಲಿ ಬಂದ್ರೂ ಇನ್ನೂ ನಾವು ಒಂದು ಗಣಕದೊಡನೆ ಮಾತಾಡಲು ಕನ್ನಡದ್ದೇ ಆದ ಕೀಲಿಮಣೆ ಮಾಡ್ಕೊಂಡಿಲ್ಲ! ಇದು ಕೂಡಲೆ ಬೇಕಿರೋ ಒಂದು ವಸ್ತು ಗುರು! ಇದಿಲ್ಲದೆ ನಾವೆಲ್ಲರೂ ಇಂಗ್ಲೀಷ್ ಕೀಲಿಮಣೇನೇ ಇಟ್ಕೊಂಡು ಕನ್ನಡ ಕುಟ್ತಾ ಇರೋದು ಒಂಥರಾ ಪೆದ್ದತನಾನೇ ಗುರು!
 • Windows XPನಲ್ಲೂ ಕನ್ನಡ language-interface-pack/support ಗಳು ಇಂದಿಗೂ ಪೂರ್ತಿಯಾಗಿಲ್ಲ. ಇದು ಪೂರ್ತಿಯಾಗೋವರ್ಗೂ ಅದರ ಉಪ್ಯೋಗ ಸೊನ್ನೇನೇ ಗುರು! ವಿಂಡೋಸ್ನಲ್ಲಿ ಪ್ರತಿಯೊಂದು ಹಂತದಲ್ಲೂ ನಮಗೆ ಕನ್ನಡದ ಉಪ್ಯೋಗವೇ ಮಾಡೋ ಹಾಗಿರ್ಬೇಕು. ಮತ್ತೆ ಇದರಲ್ಲಿ ಎಲ್ಲೆಡೆ ಕನ್ನಡದ ಅಕ್ಷರಗಳು ಸರಿಯಾಗಿ ಕಾಣಬೇಕು.
 • ಲಿನಕ್ಸ್ (Linux) ನಲ್ಲಂತೂ ಎಲ್ಲಾನೂ ನೀವೇ ಮಾಡ್ಕೊಳಿ ಅಂತ ಇಡೀ ಸೋರ್ಸ್-ಕೋಡ್ ಬಿಟ್ಟಿಯಾಗಿ ನಮ್ಮ ಮುಂದೆ ಇಟ್ಟಿದಾರೆ. ಬಳಕೆದಾರನಿಗೆ ಕನ್ನಡದ ಅನುಭವ ಕೊಡಿಸೋದು ಕನ್ನಡಿಗರದೇ ಕೆಲಸ ಇವತ್ತಿನ ದಿನ. ಆದರೆ ನಮ್ಮ ಕನ್ನಡಿಗರು ಈ KDE/GNOME ಅನುವಾದದ ಯೋಜನೆಯಲ್ಲೂ ಎಷ್ಟು ಹಿಂದಿದಾರೆ ಅಂತ ಯೋಚನೆ ಮಾಡಿದರೇ ನಾಚಿಕೆಯಾಗತ್ತೆ!
 • KDE/GNOME/Windows XP ಗಳ್ನ ಅನುವಾದ ಮಾಡೋರು ಕನ್ನಡದ ಪದಗಳ್ನ ಮರೆತು ಯಾರ ಬಾಯಲ್ಲೂ ಹೊರಳದಂಥಾ ಸಂಸ್ಕೃತದ ಪದಗಳ್ನ ಉಪಯೋಗಿಸಿದರೆ ಹೇಗೆ?
 • ಇಂದು ನಾವು ಕಾಣ್ತಿರೋ ಕನ್ನಡದ ಅಂತರ್ಜಾಲತಾಣಗಳಲ್ಲಿ ಅನೇಕವುಗಳ್ನ ಓದಕ್ಕೇ ಆಗಲ್ಲ. ಆ ತಾಣಗಳಿಗೆ ಹೋದ ಕನ್ನಡಿಗ ಏನೇನು ದೊಮ್ಮರಾಟ ಮಾಡುದ್ರೂ ಕನ್ನಡ ಕಾಣಿಸಲ್ಲ. ಇಲ್ಲಿ ಯೂನಿಕೋಡನ್ನು ಪಾಲಿಸದೇ ಇರೋದೇ ಕಾರಣ. ಪ್ರತಿ ಕನ್ನಡ ತಾಣವೂ ಯೂನಿಕೋಡನ್ನ ಪಾಲಿಸ್ಬೇಕು.
 • ಕನ್ನಡದಲ್ಲಿ ಲೇಟೆಕ್ ಇದೆ. ಯಾವುದೇ ಕನ್ನಡದ ಬರಹವನ್ನ PDFಆಗಿ ಮಾಡಲು ಸಹಾಯ ಏನೋ ನೀಡತ್ತೆ, ಇದ್ರೂ ಇದ್ರಲ್ಲೂ ಕಿರೀಕು ಅಂದ್ರೆ ಗಣಕದೊಡನೆ ಮಾತಾಡೋದು ಒಂದು ವಿಚಿತ್ರವಾದ ಕಂಗ್ಲಿಷಿನಲ್ಲೇ!
 • ಬರಹ ತಂತ್ರಾಂಶವು ಚೆನ್ನಾಗೇ ಇದೆ, ಆದ್ರೆ ಅದು ವಿಂಡೋಸ್-ನಲ್ಲಿ ಬಿಟ್ಟು ಇನ್ನ್ಯಾವ ಓ.ಎಸ್.ನಲ್ಲೂ ಸಿಗಲ್ಲ
ಜಗತ್ತಿನ ಬೇರೆ ಭಾಷೆಗಳಿಗೆ ಹೋಲಿಸಿದ್ರೆ ಕನ್ನಡದಲ್ಲಿ ಇನ್ನೂ ಸಕ್ಕತ್ ಕೆಲಸ ಆಗಬೇಕಾಗಿದೆ! ಜಪಾನ್ನವರ, ಚೈನಾದವರ ಬಹಳ ಕಷ್ಟ ಎನ್ನಲಾಗಿರೋ ಲಿಪಿ ಉಳ್ಳ ಭಾಷೆಗಳಲ್ಲಿ ಇಂಗ್ಲಿಷಿನ ಸಮಾನವಾದ ಸೌಕರ್ಯಗಳು ಈಗಾಗ್ಲೇ ಗಣಕಗಳಲ್ಲಿ ದೊರೆಯತ್ತೆ. ಸಕ್ಕತ್ ವೈಜ್ಞಾನಿಕ ಲಿಪಿ ಅಂತ ಕರೆಸಿಕೊಳ್ಳೋ ಕನ್ನಡಕ್ಕೇನು ಧಾಡಿ?!

ತೊಂದರೆಗಳ್ನ ಬಗೆಹರಿಸಲು ಏನೇನಾಗಬೇಕು?

ಮೇಲಿನ ತೊಂದರೆಗಳು ಬಗೆಹರಿದು ಗಣಕ ಆನುಮಾಡಿದ ತಕ್ಷಣ ಪೂರ್ತಿ ಕನ್ನಡದಲ್ಲಿ ಯಾವುದೇ ಕಿರೀಕೂ ಇಲ್ಲದೆ ವ್ಯವಹರಿಸೋ ಕನಸು ನನಸಾಗಬೇಕಾದ್ರೆ ಈ ಕೆಳಗಿನವು ಆಗಬೇಕು ಗುರು:
 • ಗಣಕದಿಂದ ಇಂಗ್ಲೀಷ್ನ ತೆಗೆಯಕ್ಕೆ ಆಗೋದೇ ಇಲ್ಲ ಅನ್ನೋ ಯೋಚನೆ ಕೈಬಿಡಬೇಕು. ಎಲ್ಲವೂ ಕನ್ನಡದಲ್ಲೇ ಸಾಧ್ಯ ಅನ್ನೋ ಗುರಿ ಇಟ್ಕೋಬೇಕು. ಯಾಕೆ ಸಾಧ್ಯವಿಲ್ಲ? ಕನ್ನಡಕ್ಕೆ ಯಾವ ರೋಗವೂ ಬಂದಿಲ್ಲ. ಬಂದಿರೋದು ನಿಜವೇ ಆದರೆ ಅದು ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿರೋ ಕನ್ನಡಿಗರಿಗೆ!
 • ಕನ್ನಡಿಗರು ಒಗ್ಗಟ್ಟಿಂದ ಕೆಲಸಗಳ್ನ ಮಾಡಬೇಕು. ಇವತ್ತಿನ ದಿನ ಪ್ರಪಂಚದಲ್ಲಿ ಎಲ್ಲೇ ಕೂತಿದ್ದರೂ ಅಂತರ್ಜಾಲದಲ್ಲಿ ಸಹಕರಿಸಿ ಕೆಲ್ಸ ಮಾಡಬಹುದು. ಮಾಡಿದ್ದನ್ನೇ ಮಾಡ್ಕೊಂಡು ಕಿಸ್ಬಾಯಿದಾಸ ಅಂದಹಾಗೆ ಇವತ್ತಿಂದ ಹತ್ತು ವರ್ಷ ಆದರೂ ಅದದೇ ಕೆಲ್ಸಗಳ್ನ ಮಾಡ್ತಾ ಇದ್ರೆ ನಮ್ಮಲ್ಲಿ ಸಹಕಾರದ ಬುದ್ಧಿ ಇಲ್ಲ ಅಂತ ತೋರ್ಸತ್ತೆ, ಅಷ್ಟೆ. ಹೀಗೇ ಮುಂದುವರೆದ್ರೆ ನಾವು ಉದ್ಧಾರ ಆದ್ವಿ, ಅದಾಯ್ತು!
 • ಮೂಲಭೂತ ಹಂತದಲ್ಲಿ ಸಂಶೋಧನೆ/ಅಭಿವೃದ್ಧಿಗಳ್ನ ಮಾಡಕ್ಕೆ ನಾವು ಹಿಂಜರೀಬಾರ್ದು, ನಮ್ಮ ವಿ.ವಿ.ಗಳು ಅಂಜಬಾರದು. ಉದಾಹರಣೆಗೆ ಇಂಗ್ಲೀಷಿನ ಕೀಲಿಮಣೇನೇ ನಮಗೆ ಗತಿ ಅಂತ ಹೇಳಿದೋರು ಯಾರು? ಅಂತರ್ಜಾಲ ತಾಣಗಳ ವಿಳಾಸಗಳು ರೋಮನ್ ಅಕ್ಷರಗಳಲ್ಲೇ ಇರಬೇಕು ಅಂತ ಹೇಳಿದೋರು ಯಾರು? ಪ್ರೋಗ್ರಾಮಿಂಗ್ ಕನ್ನಡದಲ್ಲಿ ಆಗಲ್ಲ ಅಂದೋರು ಯಾರು?
 • ಹೊಸ ಪದಗಳ್ನ ಹುಟ್ಟಿಸುವಾಗ ಆದಷ್ಟೂ ಆಡುನುಡಿಯಿಂದ್ಲೇ ಪದಗಳ್ನ ತೊಗೋಬೇಕು, ಬಾಯಲ್ಲಿ ಹೊರಳೋ ಪದಗಳ್ನೇ ಹುಟ್ಟಿಸಬೇಕು (ಆದು ಸಂಸ್ಕೃತದಿಂದ ಬಂದರೂ ತೊಂದರೆಯಿಲ್ಲ).
 • ಉದ್ದಿಮೆದಾರರು ಕನ್ನಡದ ತಂತ್ರಾಂಶಗಳ್ನ ತಯಾರಿಸಿ ಕರ್ನಾಟಕದಲ್ಲಿರೋ 5.5ಕೋಟಿ ಕನ್ನಡಿಗರ ಮಾರುಕಟ್ಟೇನ ಮುಟ್ಟೋ ಗುರಿ ಇಟ್ಟುಕೊಳ್ಳಬೇಕು. ಕನ್ನಡ ಅಂದ ತಕ್ಷಣ ಏನೋ ದಾನ-ಧರ್ಮ ಅನ್ನೋ ಅನಿಸಿಕೆ ಬಿಟ್ಟು ವ್ಯಾಪಾರ ಅಂತ ತೊಗೋಬೇಕು.
 • ಸರ್ಕಾರ ಇದರಲ್ಲೆಲ್ಲ ತನ್ನ ಪಾತ್ರ ಏನು ಅಂತ ಅರ್ಥ ಮಾಡ್ಕೋಬೇಕು. ಸರ್ಕಾರದ ಪಾತ್ರ ಈ ಕೆಲಸಗಳೆಲ್ಲಾ ಸುಗಮವಾಗಿ ಆಗೋಹಾಗೆ ನೋಡಿಕೊಳ್ಳೋದೇ ಹೊರತು, ವಿ.ವಿ.ಗಳಿಗೆ ಯೋಜನೆಗಳ್ನ ನಡೆಸೋದಕ್ಕೆ ದುಡ್ಡು ಕೊಡೋದೇ ಹೊರತು ತಾನೇ ತಂತ್ರಾಂಶಗಳ್ನ ಅಭಿವೃದ್ಧಿ ಪಡಿಸೋದಲ್ಲ (ಒಂದು ಕಾಲದಲ್ಲಿ ಸರ್ಕಾರ ಹೋಟೆಲ್ ನಡೆಸುತ್ತಾ ಇತ್ತು. ಆ ಕಾಲ ಹೋಯ್ತು!).
ಏನ್ ಗುರು?

2 ಅನಿಸಿಕೆಗಳು:

ಸುನಿಲ್ ಜಯಪ್ರಕಾಶ್ ಅಂತಾರೆ...

>> ಕನ್ನಡದ್ದೇ ಆದ ಕೀಲಿಮಣೆ ಮಾಡ್ಕೊಂಡಿಲ್ಲ!

ಏನ್ ಗುರು, ಇಲ್ಲಿ ಸ್ವಲ್ಪ ತಿಳಿವಿನ ಅಗತ್ಯವಿದೆ. ಕನ್ನಡಕ್ಕೆ ಒಂದು ಕೀಲಿಮಣೆ ವಿನ್ಯಾಸ ಈಗಾಗಲೇ ಇದೆ, ಕ್ಲಿಕ್ಕಿ ನೋಡಿ, INSCRIPT ಅಂತ. ಬಹುಶಃ ನೀವು ಕನ್ನಡ ಅಕ್ಷರಗಳು ಅಚ್ಚಾಗಿರುವ ಕೀಲಿಮಣೆ ಸಿಗಲ್ಲ ಎಂದು ಹೇಳಬೇಕಿದ್ರಿ ಅನ್ಸತ್ತೆ.

ಇನ್-ಸ್ಕ್ರಿಪ್ಟಿನ ಬಗ್ಗೆ ಮಾತು ಮುಂದುವರಿಸುತ್ತಾ, ಇದರ ಕೆಲವು ಉಪಯೋಗಗಳು ಇಂತಿವೆ.
೧. ಎಲ್ಲ ಓಸ್ ಗಳಲ್ಲಿಯೂ ಇದಕ್ಕೆ ನೆರವಿದೆ.(ಸೋಲಾರಿಸ್ ನಲ್ಲಿಯೂ ಕೂಡ).
೨. ಇದೊಂದು ವೈಜ್ಞಾನಿಕ ವಿನ್ಯಾಸವಾಗಿದ್ದು ಬೇಗ ಬೇಗ ಟೈಪಬಹುದು.
೩. ಏನಾದರೂ ಟೈಪಬೇಕಿದ್ದಾಗ, ಕಡಿಮೆ ಕೀ-ಕುಟ್ಟುಗಳಿಂದ ಪದಗಳನ್ನು ಟೈಪಬಹುದು.
೪. ಯಾವ ಭಾರತೀಯ ಭಾಷೆಯಲ್ಲಿ ಬೇಕಾದರೂ ಟೈಪಬಹುದು.

ನನಗನ್ನಿಸುವ ಮಟ್ಟಿಗೆ ಇನ್-ಸ್ಕ್ರಿಪ್ಟಿನ ಒಂದೇ ಒಂದು ತೊಂದರೆ ಏನೆಂದರೆ ಅದು ಈಗಾಗಲೇ ಜನರಿಗೆ ಪರಿಚಿತವಾಗಿರುವ ಬರಹ, ನುಡಿ, ಕಗಪ ಮುಂತಾದ ಕೀಬೋರ್ಡಲೋಯೋಟುಗಳಿಗಿಂತ ಭಿನ್ನವಾಗಿದೆ. ಹಾಗಾಗಿ ಹೊಸಬರು ಕಲಿಯುವಾಗ ಕಷ್ಟವೆನಿಸಬಹುದು. ಆದರೆ ಕನ್ನಡ ಅಕ್ಷರಗಳು ಅಚ್ಚಾದ ಕೀಬೋರ್ಡ್ ಬಂದರೆ ಆ ತೊಂದರೆಯನ್ನು ನೀಗಿಸಿಕೊಳ್ಳಬಹುದು.

Anonymous ಅಂತಾರೆ...

INSCRIPTಊ ಇದೆ, TYPEWRITER ಕೀಲಿಮಣೇನೂ ಇದೆ. ಆದ್ರೆ ಇವುಗಳ ಕೈಲಿ ಕೆಲಸ ಮಾಡಿಸಬೇಕಾದರೆ ಬಳಕೆದಾರ ಪಡಬೇಕಾದ ಕಷ್ಟ ಎಷ್ಟಿದೆ ಎಂದರೆ ಯಾರೂ ಅದಕ್ಕೆ ಕೈ ಹಾಕುವುದಿಲ್ಲ! ಆದ್ದರಿಂದ ಇವುಗಳು ಇದ್ದರೂ ಇಲ್ಲದಂತೆಯೇ!

ಕನ್ನಡದ ಕೀಲಿಮಣೆ ಇಂಗ್ಲೀಷನ ಕೀಲಿಮಣೆಯನ್ನೇ ಆಧಾರವಾಗಿಟ್ಟುಕೊಂಡು ಮಾಡಬೇಕು ಎನ್ನುವ ಚಿಂತನೆಯಿಂದ ಹೊರಬರಬೇಕಾಗಬಹುದು.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails