ಇಬ್ಬರು ಹೆಂಡಿರ ಮುದ್ದಿನ ಲಾಯರ್!

ಇತ್ತೀಚೆಗೆ ಕರ್ನಾಟಕದಲ್ಲಿನ ("ಕೆಳ") ನ್ಯಾಯಲಯಗಳಲ್ಲಿ "ಆದಷ್ಟೂ" ಕನ್ನಡದಲ್ಲೇ ಕೆಲಸ ನಡೀಬೇಕು ಅಂತ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ರು. ನ್ಯಾಯಾಲಯ ಇದನ್ನ ಯಶಸ್ವಿಗೊಳಿಸೋಕ್ಕೆ ಅಲ್ಲಿನ ವಕೀಲರಿಂದಲೇ ಸಾಧ್ಯ ಅಂತ ಹೇಳಿ, ವಕೀಲರ ಮೇಲೆ ತಮ್ಮ ವಾದಗಳಲ್ಲಿ ಕನ್ನಡದ ಬಳಕೆಯ ಮೇಲೆ ಹೆಚ್ಚಿನ ಒತ್ತಡ ತಂದಿದೆ. ವಕೀಲರು ಇದರಲ್ಲಿ ಮುಖ್ಯವಾದ ಪಾತ್ರ ವಹಿಸಿದಾರೆ ಅನ್ನೋದು ನಿಜವಾದರೂ ನ್ಯಾಯಲಯಗಳಲ್ಲಿ ಕನ್ನಡದ ಅನುಷ್ಠಾನ ಅಂದ್ರೆ ಅದು ಬರೀ ವಕೀಲರು ಉಪಯೋಗಿಸೋ ಭಾಷೆಯಲ್ಲಿ ಬದಲಾವಣೆ ಮಾತ್ರ ಅಲ್ಲ; ನ್ಯಾಯಾಲಯಗಳಲ್ಲಿ ಕಾನೂನಿಗೆ ಸಂಬಂಧ ಪಟ್ಟ ಪ್ರತಿಯೊಂದು ಕಡತಾನೂ, ನ್ಯಾಯಾಂಶಗಳೂ, ಒಳಾಡಳಿತವೂ, ಭಾರತೀಯ ಸಂವಿಧಾನವೂ, ಕಾನೂನು ಪುಸ್ತಕಗಳೂ - ಎಲ್ಲವೂ ಕನ್ನಡದಲ್ಲಿರಬೇಕು.

ಒಂದು ವ್ಯವಸ್ಥೆ ಸುಗಮವಾಗಿ ನಡೀಬೇಕು ಅಂದ್ರೆ ಅದರಲ್ಲಿರೋ ಜನರು ಒಂದೇ ಭಾಷೆ ಮಾತಾಡ್ತಾ ಇರಬೇಕು ಅನ್ನೋದು ಸ್ಪಷ್ಟ. ಕಾನೂನಿಗೆ ಸಂಬಂಧ ಪಟ್ಟ ಎಲ್ಲಾ ಕಡತಗಳು, ನ್ಯಾಯಾಂಶಗಳು, ನಮ್ಮ ಸಂವಿಧಾನ, ಇವೆಲ್ಲಾ ಇಂಗ್ಲಿಷಿನಲ್ಲೇ ಇದ್ರೆ ಕರ್ನಾಟಕದ ಜನರಿಗೆ ಏನ್ ಅರ್ಥ ಆಗತ್ತೆ ಗುರು? ಅರ್ಥವಾಗದ ಭಾಷೇಲಿರೋ ನ್ಯಾಯವನ್ನ ವಕೀಲಿ ಕಲೀತಿರೋರು ಅದೆಷ್ಟು ಚೆನ್ನಾಗಿ ಕಲಿತಾರು? ಆ ವ್ಯವಸ್ಥೆಯಲ್ಲಿರೋ ಲೋಪದೋಷಗಳ್ನ ಅದೆಷ್ಟು ತಿದ್ದಾರು? ವಕೀಲರಾದಮೇಲೆ ಇಂಗ್ಲೀಷ್ ಬಾರದ ಗಿರಾಕಿಗಳಿಗೆ ಅದೆಷ್ಟು ನ್ಯಾಯ ಕೊಡಿಸಾರು? "ಇಬ್ಬರು ಹೆಂಡಿರ ಮುದ್ದಿನ ಪೋಲೀಸ್" ಇದ್ದಂಗೆ ಈಕಡೆ ಕನ್ನಡದ ಜನ, ಆಕಡೆ ಇಂಗ್ಲೀಷಿನ ಪುಸ್ತಕಗಳು - ಇವುಗಳ ನಡುವೆ ವಕೀಲನ ಕತೆ ಏನಾಗಬೇಕು? ಈ ಇಂಗ್ಲೀಷ್ಮಯ ವ್ಯವಸ್ಥೆಯಿಂದ ನ್ಯಾಯ ಬೇಕಾದೋರಿಗೂ ಕಷ್ಟ, ಕೊಡೋರಿಗೂ ಕಷ್ಟ, ಕೊಡಿಸೋರಿಗೂ ಕಷ್ಟ!

ಕೊನೆ ಗುಟುಕು

ಕಾನೂನು ಅರ್ಥವಾಗೋದು ಇಂಗ್ಲೀಷ್ ಬರೋರಿಗೆ ಮಾತ್ರ ಅನ್ನೋ ಹುಚ್ಚುತನ ನಮ್ಮಲ್ಲಿ ಇರೋದ್ರಿಂದ್ಲೇ ಇತ್ತೀಚೆಗೆ ಬಿಟ್ಟಿ ಕಾನೂನು ಸಲಹೆ ಕೊಡೋ ಕೇಂದ್ರಗಳು ಹುಟ್ಟಿಕೊಂಡಿವೆ ಅನ್ನಿಸುತ್ತೆ! ಈ ನಾಟಕಗಳ್ನೆಲ್ಲಾ ಬಿಟ್ಟು ನ್ಯಾಯಾಲಯಗಳು ಸಂಪೂರ್ಣವಾಗಿ ಕನ್ನಡೀಕರಣಗೊಳ್ಳಬೇಕು ಗುರು!

1 ಅನಿಸಿಕೆ:

Anonymous ಅಂತಾರೆ...

ಕಾನೂನು ಅರ್ಥವಾಗೋದು ಇಂಗ್ಲೀಷ್ ಬರೋರಿಗೆ ಮಾತ್ರ ಅನ್ನೋ ಹುಚ್ಚುತನ ಕೇವಲ ಕಾನೂನಿಗಸ್ಟೆ ಸೀಮಿತವಾಗಿರದೆ ಬೇರೆಲ್ಲಾ ಕ್ಷೇತ್ರಗಳಲ್ಲೂ ಬೇರೂರಿಬಿಟ್ಟಿದೆ. ಇದನ್ನ ಬುಡಸಮೇತ ಕಿತ್ತು ಕನ್ನಡದಿಂದಲೇ ಕನ್ನಡಿಗರಿಗೆ ಎಲ್ಲವೂ ದಕ್ಕುವುದು ಎಂಬೋ ಸಸಿಗಳಿಗೆ ನೀರೆರೆದು ಪೋಷಿಸಬೇಕು.
ಇದಕ್ಕಾಗಿ ನಿಮ್ಮ ಜೊತೆ ನಾನೆಂದಿಗೂ,

ವಿನೋದ್.

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails