ಕಲಿಕೆ ರಾಜ್ಯದ ಪಟ್ಟೀಲೇ ಇರಬೇಕು

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯೋರು ಕಳೆದ ವರ್ಷ ಕೇಂದ್ರ ಸರ್ಕಾರಕ್ಕೆ ಮಾಡಿದ ಮನವಿಯೊಂದರ ಬಗ್ಗೆ ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಗಳು ಬರ್ತಾ ಇವೆ. ಏನಪ್ಪಾ ಈ ಮನವಿ ಅಂದ್ರೆ - 1976ರಲ್ಲಿ ಶಿಕ್ಷಣವನ್ನ ರಾಜ್ಯದ-ಪಟ್ಟಿ (state-list) ಇಂದ ಕಿತ್ತಿ ಜಂಟಿ ಪಟ್ಟಿಯೊಳ್ಗೆ (concurrent-listಗೆ) ಸೇರ್ಸಿದ್ದು ಸರಿಯಲ್ಲ, ವಾಪಸ್ ರಾಜ್ಯದ ಪಟ್ಟಿಗೆ ಸೇರಿಸ್ಬೇಕು ಅನ್ನೋದು. ಇದಾದರೆ ಭಾರತದ ಎಲ್ಲಾ ಭಾಷಾವಾರು ರಾಜ್ಯಗಳಿಗೂ ಸಕ್ಕತ್ ಒಳ್ಳೇದು ಗುರು.

ಭಾಷಾವಾರು ರಾಜ್ಯಗಳ ಒಕ್ಕೂಟವಾಗಿರೋ ನೂರು ಕೋಟಿ ಜನರ ಭಾರತದಲ್ಲಿ ದೇಶದ ಎಲ್ಲಾ ಮೂಲೆಗಳಿಗೂ ಶಿಕ್ಷಣ ಸಮರ್ಪಕವಾಗಿ ತಲುಪಿಸೋ ಕೆಲಸಾನ ದಿಲ್ಲೀಲಿ ಕೂತ್ಕೊಂಡಿರೋ ಕೇಂದ್ರ ಸರ್ಕಾರ ಹೇಗೆ ಮಾಡೀತು?! ಕೇಂದ್ರ ಸರ್ಕಾರ ಕೂಡಲೆ ಈ ಮನವಿಗೆ ಗೌರವ ಕೊಟ್ಟು ಶಿಕ್ಷಣವನ್ನ ರಾಜ್ಯ ಪಟ್ಟಿಗೆ ಹಿಂತಿರುಗಿಸ್ಬೇಕು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಆದಾಗ ಶಿಕ್ಷಣ ರಾಜ್ಯ ಸರ್ಕಾರಗಳ ಹೊಣೆ-ಪಟ್ಟಿಯಲ್ಲಿತ್ತು. ಅದೇ ಸರಿ ಗುರು! ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಣ ಜಂಟಿ ಪಟ್ಟಿಯಲ್ಲಿರೋದು ಪ್ರತಿಯೊಂದು ರಾಜ್ಯದಲ್ಲೂ ಶಿಕ್ಷಣ ಪ್ರಭಾವಶಾಲಿಯಾಗಿಲ್ಲದೇ ಇರೋದಕ್ಕೆ ಒಂದು ಮುಖ್ಯವಾದ ಕಾರಣ. ಹೇಗೆ ಅಂತ ನೋಡ್ಮ.

ಕಲಿಕೆಯ "ಏನು" ಮತ್ತು "ಹೇಗೆ" ಗಳ ನಿರ್ಧಾರ ಸ್ಥಳೀಯವಾಗಿ ಆಗಬೇಕು

ಪ್ರತಿಯೊಂದು ಜನಾಂಗಾನೂ ಶಿಕ್ಷಣದ ಮೂಲಕ ಏನು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಅನ್ನೋದರ ನಿರ್ಧಾರ ಸ್ಥಳೀಯವಾಗೇ ಆಗಬೇಕು ಗುರು. ಉದಾಹರಣೆಗೆ ನಮ್ಮ ಇತಿಹಾಸದಲ್ಲಿ ಏನೇನಾಗಿತ್ತು, ಅದ್ರಿಂದ ನಾವು ಏನು ಕಲೀಬಹುದು, ನಮ್ಮ ನುಡಿಯ ಒಳಗುಟ್ಟುಗಳು ಮತ್ತು ವ್ಯಾಕರಣ, ನಮ್ಮ ರಾಜ್ಯದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳು, ನಮ್ಮ ಹಿಂದೆ ಈ ನೆಲವನ್ನು ತುಳಿದ ದಿಗ್ಗಜರು, ನಮ್ಮಲ್ಲಿ ಹಿಂದೆ ಇದ್ದ ಜ್ಞಾನ-ವಿಜ್ಞಾನಗಳು, ನಮ್ಮ ಹಿಂದಿನೋರು ನಮಗೆ ಬಿಟ್ಟುಹೋದ ಜ್ಞಾನದ ಬಳುವಳಿಗಳು - ಇದನ್ನೆಲ್ಲಾ ಸರಿಯಾಗಿ ಒಬ್ಬ ಕನ್ನಡಿಗ ಅಲ್ಲದೆ ದಿಲ್ಲಿ ಇಂದ ಬಂದೋನು ಹೇಗೆ ಮಾಡಾನು? ಔನಿಗೇನು ಗೊತ್ತಿರತ್ತೆ ಮಣ್ಣು ಇಲ್ಲೀ ಬಗ್ಗೆ? ಒಟ್ಟಿನಲ್ಲಿ ನಮ್ಮ ಕಲಿಕೆಯ ವಸ್ತು ನಿರ್ಧಾರ ಮಾಡೊಕ್ಕೆ ನಾವೇ ಸರಿಯಾದೋರು ಹೊರತು ನಾವ್ಯಾರು ಅಂತ ಸರಿಯಾಗಿ ಗೊತ್ತೇ ಇಲ್ಲದೋರಲ್ಲ.

ಇನ್ನು ಕಲಿಕೆ ಹೇಗೆ ಕೊಡಬೇಕು ಅಂತ ನಿರ್ಧರಿಸೋದಕ್ಕೂ ರಾಜ್ಯವೇ ಸರಿ. ಈ ಕಲಿಕೆಯ ವಿಧಾನ ಅಂದಾಗ ಎರಡು ಮುಖ್ಯವಾದ ಅಂಶಗಳು ಮನಸ್ಸಿಗೆ ಬರತ್ವೆ:
  • ಯಾವ್ದೇ ಒಂದು ವಿಷ್ಯಾನ ಮನುಷ್ಯ ಸರಿಯಾಗಿ ಅರ್ಥ ಮಾಡ್ಕೊಳೋದು ಅವನ ಹತ್ತಿರದ ವಸ್ತುಗಳೊಡನೆ ಅದರ ಸಂಬಂಧ ಕಂಡಾಗ್ಲೇ ಗುರು! ಉದಾಹರ್ಣೆಗೆ ನಮ್ಮ ಒಂದು ಮಗುವಿಗೆ ಗಣಿತದಲ್ಲಿ ಏಣಿಸೋದು ಕಲಿಸುವಾಗ ಐದು ಲಾಡು ಮತ್ತೆ ತಂದು ಮುಂದೆ ಇಡಬೇಕೇ ಹೊರತು ಐದು ಆಗ್ರಾ-ಪೇಟ ಅಲ್ಲ! ದೂರದೋರು ಇದನ್ನೆಲ್ಲ ನಿರ್ಧಾರ ಮಾಡೋದ್ರಿಂದ ಒಂದು ಗಂಡಾಂತರವೇನಪ್ಪಾ ಅಂದ್ರೆ ನಿಧಾನವಾಗಿ ನಮ್ಮ ನಿಜವಾದ ಪರಿಸರವೇ ಮರ್ಥೋಗತ್ತೆ! ಇದೇ ಮುಂದುವರೆದರೆ ಹತ್ತಿರದ್ದೆಲ್ಲ ಹುಳುಕು, ಹತ್ತಿರದ್ದೆಲ್ಲ ಕೊಳಕು ಅನ್ನಿಸಕ್ಕೆ ಶುರುವಾಗತ್ತೆ. ಇದರಿಂದ ಕನ್ನಡಿಗ (ಹಾಗೇ ತಮಿಳ, ಹಾಗೇ ತೆಲುಗ...) ನಶಿಸಿಹೋಗ್ತಾನೆ ಗುರು!
  • ಇನ್ನು ಕಲಿಕೆಯಲ್ಲಿ ಭಾಷೆಯ ಪಾತ್ರಾನಂತೂ ಹೊಸದಾಗಿ ಹೇಳಬೇಕಾಗೇ ಇಲ್ಲ. ಕಲಿಕೆ ಪ್ರಭಾವಶಾಲಿಯಾಗಕ್ಕೆ ಅದು ನಮ್ಮ ಭಾಷೆಯಲ್ಲಿರ್ಬೇಕು. ಇದನ್ನ ನಾವಲ್ಲದೆ ಕೇಂದ್ರದೋರು ಏನು ಮಾಡಾರು ಗುರು?
ಮುಂದೆ ಏನು?

ಕೇಂದ್ರ ಸರ್ಕಾರ ಈ ಮನವಿಯನ್ನ ಗಂಭೀರವಾಗಿ ಪರಿಗಣಿಸಿ ಕೂಡಲೆ ಶಿಕ್ಷಣವನ್ನ ರಾಜ್ಯದ ಪಟ್ಟಿಗೆ ಸೇರಿಸಬೇಕು. ಇದರ ಜೊತೆ ಕರ್ನಾಟಕವೂ ಸೇರಿದಂತೆ ಎಲ್ಲಾ ರಾಜ್ಯದ ಸರ್ಕಾರಗಳೂ ಕೇಂದ್ರದ ಮೇಲೆ ಒತ್ತಡ ತಂದು ತಂತಮ್ಮ ನಾಡಿಗರಿಗೆ (ನಾಡಿಗ = ನಾಡಿನಲ್ಲಿ ವಾಸಿಸುವವ) ಒಳ್ಳೇ ಶಿಕ್ಷಣ ಕೊಟ್ಟು ಅವರ ಏಳ್ಗೆಗೆ ಕಾರಣವಾಗ್ಬೇಕು. ಶಿಕ್ಷಣದ ವಿಚಾರದಲ್ಲಿ ಇದು ಎಂತಹ ಮುಖ್ಯ ಅಂಶ ಅಂತ ಅರ್ಥ ಮಾಡ್ಕೊಂಡು ನಾವು ನೀವೂ ಸರ್ಕಾರಗಳ ಮೇಲೆ ಒತ್ತಾಯ ಹಾಕ್ಬೇಕು. ಏನ್ ಗುರು?

0 ಅನಿಸಿಕೆಗಳು:

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails