ಮಿಲನದ ಹಾಡಿಗೆ ಎಂಕನ ಭಾಷ್ಯ

ಹುಚ್ಚುಹಿಡಿದ ಭಕ್ತ ಒಬ್ಬ ಪ್ರತಿಯೊಂದರಲ್ಲೂ ತನ್ನ ಪ್ರೀತಿಯ ಭಗವಂತನ್ನ ಕಾಣೋಹಾಗೆ, ಪ್ರೀತಿಸುತ್ತಾ ಇರೋ ಒಬ್ಬನಿಗೆ ಎಲ್ಲೆಲ್ಲೂ ತನ್ನ ನಲ್ಲೆ ಕಂಡಂಗೆ ಎಂಕನಿಗೆ ಮಿಲನ ಚಿತ್ರದಲ್ಲಿ ಜಯಂತ ಕಾಯ್ಕಿಣಿ ಬರೆದಿರೋ ಒಂದು ಹಾಡಲ್ಲಿ ಬರೀ ಕನ್ನಡಿಗನಿಗೆ ಏಳಿಗೆಯ ಕಿವಿಮಾತೇ ತುಂಬಿತ್ತು ಅಂತ ನಮಗೆ ಬಂದು ಹೇಳಿದ. "ಅದೆಂಗ್ಲಾ ಎಂಕ?" ಅಂತ ಕೇಳಿದಾಗ ಔನು ಆ ಹಾಡಿಗೆ ಕೊಟ್ಟ ಭಾಷ್ಯ ಒಸಿ ಹಿಂಗಿತ್ತು:

ಈ ಹಾಡಲ್ಲಿ ಒಬ್ಬ ಕನ್ನಡಿಗ ತನ್ನ ಕನಸಿನ ಕರ್ನಾಟಕದೆಡೆಗೆ ಹೊರ್ಟಿರ್ತಾನೆ ಗುರು! ಅವನಿಗೆ ಕವಿ ಹೀಗೆ ಹೇಳ್ತಾನೆ:
ಕಿವಿಮಾತೊಂದು ಹೇಳಲೇ ನಾನಿಂದು ದಾರಿ ನಿಂತಾಗ ಸಾಗಲೇ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೇ ಬೇಕಿಂದು ||ಪ||

ಕನ್ನಡಿಗನಿಗೆ ಏಳಿಗೆಯ ದಾರಿ ನಿಂತುಹೋಗಿದೆ ಅನ್ನಿಸಿದೆ. ಅವನಿಗೆ ಕವಿ ಹೇಳಿರೋದು ಏನು ಅಂದ್ರೆ - ನೀನು ನಿನ್ನೆ ಏನೇ ಆಗಿರು (ವಿಜಯನಗರದ ಅರಸನೇ ಆಗಿರು, ಇಲ್ಲವೇ ಬ್ರಿಟಿಷರ ಕಾಲಾಳೇ ಆಗಿರು), ಆ ನೆನ್ನೆ ಅನ್ನೋದು ಈಗಿಲ್ಲ. ನಾಳೆ ನೀನೇನಾಗ್ತ್ಯಾ ಅನ್ನೋದು ತಿಳಿದಿಲ್ಲ. ಆದ್ರೆ ಒಂದು ಖಂಡಿತ ಏನಪ್ಪಾ ಅಂದ್ರೆ ನೀನು ಇವತ್ತು ನಿನ್ನತನವನ್ನ ಬಿಟ್ಟು ಬಾಳಕ್ಕಾಗಲ್ಲ, ನೀನು ನೀನಾಗೇ ಬಾಳಬೇಕು. ಅಂದ್ರೆ - ನೀನು ನಿನ್ನ ಕನ್ನಡತನವನ್ನ ಬಿಡದೇ ಬಾಳಬೇಕು. ಹೀಗೆ ನೀನಾಗಿ ಬಾಳುವುದು ಬಿಡುವುದು ಎಂಬ ಆಯ್ಕೆ ನಿನ್ನದಲ್ಲ. ನೀನಿಲ್ಲಿ ಅಸ್ವತಂತ್ರ. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ನೀನಾಗಿ ಬಾಳಲೇಬೇಕು.
ಹಸಿರಾಗಿದೆ ದ್ವೀಪವು ನಿನಗಾಗಿ ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ||೧||

ಹಸಿರಾದ ದ್ವೀಪ ಅಂದರೆ ಕನಸಿನ ಕರ್ನಾಟಕ. ಹಸಿರು ಸಮೃದ್ಧಿಯ ಸೂಚಕ. ದ್ವೀಪ ಹೇಗೆ? ಹೇಗೆ ಎಂದರೆ ಇಡೀ ಪ್ರಪಂಚ ಎಂಬ ಸಾಗರದಲ್ಲಿರೋದರಿಂದ ದ್ವೀಪ. ಈ ಕನಸಿನ ಕರ್ನಾಟಕ - ಯಾವುದು ಗುರಿಯೋ ಆ ಕನಸಿನ ಕರ್ನಾಟಕ ನಿನಗಾಗೇ ಇದೆ, ಮತ್ತೊಬ್ಬನಿಗಲ್ಲ. ಮತ್ತೂ ಏನೆಂದರೆ ಆ ಹಸಿರಾದ ದ್ವೀಪ - ಎಂದರೆ ಸಮೃದ್ಧ ಕರ್ನಾಟಕ - ಮುಂದೆ ಇದ್ದೇ ಇದೆ. ಇದೆಯೋ ಇಲ್ಲವೋ ಎನ್ನುವ ಸಂದೇಹ ಬೇಡ. ಆ ಗುರಿಯ ಕಡೆಗೆ ನಸುನಗುತಲೇ ನೀನು ಗೆಲುವುಮೊಗದವನಾಗಿ ಸಾಗು! ಹೊಸ ಎಂದರೆ ಇವತ್ತಿನ ಜಾಗತೀಕರಣವಾಗಿರೋ. ತಂಗಾಳಿ ಯಾಕೆ ಅಂದರೆ ಅದರಿಂದ ಕನ್ನಡಿಗನಿಗೆ ಒಳಿತೇ ಆಗಿದೆ. ಅ ಹೊಸ ತಂಗಾಳಿ ಮೆಲುವಾಗಿ ಹೇಳಿದೆ. ಮೆಲುವಾಗಿ ಎಂದರೆ ಬುದ್ಧಿವಂತರ ಕಿವಿಗೆ ಮಾತ್ರ ಕೇಳಿಸುವ ಹಾಗೆ. ಏನು ಹೇಳಿದೆ? ಈ ಬಾಳುಂಟು ಬಾಳುವ ಸಲುವಾಗಿ. ಈ ಬಾಳು ಎಂದರೆ ಕನ್ನಡಿಗನಾಗಿ ಹುಟ್ಟಿರುವ ಈ ಬಾಳು. ಇದು ಬಾಳುವ ಸಲುವಾಗಿಯೇ ಇದೆ ಎಂದರೆ ನೀನು ಕನ್ನಡಿಗನಾಗಿಯೇ ಸದಾಕಾಲ ಬಾಳಬೇಕು ಎಂದರ್ಥ. ಬಾಳೇ ಬಾಳ್ತೀಯ, ಬಾಳದೆ ಹೇಗಿರಬಲ್ಲೆ ನೀನು? ಇದು ನಿನ್ನ ಕೈಯಲ್ಲಿ ಇಲ್ಲವೇ ಇಲ್ಲ!
ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು ಓಡಲೇಬೇಕು ನೀನಿಂದು ||೨||

ಕನ್ನಡಿಗ ಇವತ್ತಿನ ದಿನ ನಾಲ್ಕು ಗೋಡೆಗಳ ನಡುವ ಒಬ್ಬೊಬ್ಬನೇ ಇದ್ದಾನೆ, ಇತರ ಕನ್ನಡಿಗರೊಡನೆ ಒಗ್ಗೂಡಿಲ್ಲ. ಆ ನಾಲ್ಕುಗೋಡೆಗಳ ಬಾಗಿಲಿನಾಚೆಗೆ ಬಾಳು - ಎಂದರೆ ಜೀವನ - ಅವನನ್ನು ಬಾ ಎಂದು ಕರೆದಿದೆ. ಇಲ್ಲಿ ಕನ್ನಡಿಗ ಎಂದರೆ ಒಬ್ಬನೇ ಅಲ್ಲ, ಕೋಟಿಗಟ್ಟಲೆ ಜನ. ಇವರೆಲ್ಲ ಬಾಗಿಲಿನಾಚೆಗೆ ಬಂದಾಗಲೇ ಅದು ಬಾಳು. ಎಂದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಗೂಡಿನಿಂದ ಹೊರಬಂದು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟನ್ನೇ ಇಲ್ಲಿ ಬಾಳು ಎಂದಿರುವುದು. ಒಗ್ಗಟ್ಟಿಲ್ಲದೆ ತನ್ನ ನಾಲ್ಕು ಗೋಡೆಯೊಳಗೆ ಕೂತಿರುವುದು ಬಾಳೇ ಅಲ್ಲ, ಸಾವು! ಹೀಗೆ ಒಗ್ಗಟ್ಟೆಂಬ ಬಾಳು ಕೂಗಿದಾಗ ನೀನು ಸಂತಸದಿಂಡ ಓಗೊಟ್ಟು ಓಡಲೇಬೇಕು ಇಂದು - ಎಂದರೆ ನಿನಗೆ ಓಡದೆ ಬೇರೆ ದಾರಿಯಿಲ್ಲ; ಓಡದೆ ಇರುವುದು ನಿನ್ನ ನಿಯಂತ್ರಣದಲ್ಲಿಲ್ಲ!
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದೂ
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು ||೩||

ಸಮಯ - ಎಂದರೆ ಹಿಂದು, ಇಂದು ಮತ್ತು ಮುಂದು - ಇವೆಲ್ಲವೂ ನಿನಗಾಗಿ ಸಾವಿರ ಕಣ್ಣಿನ ನವಿಲಾಗಿ ನಿಂತಿದೆ. ಕಣ್ಣೇಕೆ ಎಂದರೆ ಅದು ನಿನ್ನನ್ನು ನೋಡುತ್ತಿರುವುದರಿಂದ. ಎಂದರೆ ನಿನ್ನ ಹಿಂದಿನವರು, ಇಂದಿನವರು ಮತ್ತು ಮುಂದಿನವರು - ಇವೆರಲ್ಲಾ ನಿನ್ನನ್ನು ಅಸಂಖ್ಯಾತ ಕಣ್ಣುಗಳಿಂದ ನೋಡುತ್ತಿದ್ದಾರೆ, ನಿನ್ನ ಪ್ರತಿಯೊಂದು ಹೆಜ್ಜೆಯನ್ನೂ ಆಲಿಸುತ್ತಿದ್ದಾರೆ. ಇಡೀ ಸಮಯವನ್ನು ಒಂದು ನವಿಲೆಂದಿರುವುದು ಅದರ ಅಂದವನ್ನು ಸೂಚಿಸಲು. ಹೀಗೆ ಸಮಯವೆನ್ನುವುದೇ ಹೆಪ್ಪುಗಟ್ಟಿ ನಿನ್ನನ್ನು ನೋಡುತ್ತಿದ್ದಾಗ ಹಗುರಾಗಿ ಕಣ್ಣನ್ನು ತೆರೆದು ನೀನು ಅದನ್ನು ನೋಡಲೇಬೇಕು ಬಂದು. ಹಗುರಾಗಿ ಏಕೆ ಎಂದರೆ ಪೂರ್ತಿ ನೋಡಲು ಹೊರಟರೆ ನಿನ್ನ ಕಣ್ಣು ಸುಟ್ಟುಹೋದೀತು, ಅದಕ್ಕೆ. ನೋಡಲೇ ಬೇಕು ಎಂದರೆ ಮತ್ತೆ ನಿನಗೆ ನೋಡದೆ ಆಯ್ಕೆಯೇ ಇಲ್ಲ ಎಂಬ ಅರ್ಥ. ಇಡೀ ಸಮಯವೇ ನಿನ್ನ ಮುಂದೆ ನಿಂತಿದ್ದಾಗ ನೀನು ನೋಡದೆ ಇರಲಾರೆ ಎನ್ನುವುದು ಕವಿವಾಣಿ. ಇಲ್ಲೂ ನೋಡುವುದು ಬಿಡುವುದು ನಿನ್ನ ಹತೋಟಿಯಲ್ಲಿಲ್ಲ; ಅಸ್ವತಂತ್ರನು ನೀನು.
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ ||೪||

ಕನ್ನಡಿಗನ ಮೇಲೆ ಕವಿದಿರುವ ಮೋಡಕ್ಕೆ ಒಂದು ಬೆಳ್ಳಿಯ ಅಂಚಿದೆ, ಆದ್ದರಿಂದ ಮೋಡ ಬಾನಲ್ಲಿ ನಗುವ ಬೀರಿದೆ. ಮೋಡ ಇವತ್ತಿನ ತೊಂದರೆಗಳು. ಆ ತೊಂದರೆಗಳೇ ಏಳಿಗೆಗೆ ಬೇಕಾದ್ದೆಲ್ಲವನ್ನೂ ತುದಿಯಲ್ಲಿ ಹೊಂದಿರುವುದರಿಂದ ಬೆಳ್ಳಿಯ ಅಂಚಿರುವುದು. ಹೀಗಿರುವಾಗ ನಿನ್ನ ಬಾಳಿನ ಸಂಗೀತವನ್ನ. ಸಂಗೀತ ಎಂದರೆ ಲಯಬದ್ಧವಾದ ಮತ್ತು ಎಲ್ಲರಿಗೂ ಇಷ್ಟವಾಗುವಂಥ ಒಂದು ಗುಂಪುಗಾಯನ. ಇಂತಹ ಒಗ್ಗಟ್ಟಿನ ಗುಂಪುಗಾಯನದಲ್ಲಿ ನಿನ್ನ ಪಾಲನ್ನು ನೀನು ಹಾಡಲೇಬೇಕು. ಹಾಡದೆ ಆಯ್ಕೆ ನಿನಗಿಲ್ಲ ಇಲ್ಲಿ!
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ ||೫||

ಆ ನಿನ್ನ ಕನಸಿನ ಕರ್ನಾಟಕ ಯಾವುದಿದೆಯೋ ಅದರ ಕಡೆಗೆ ನೀನು ಮಿಂಚುವ ಅಲೆಗಳ ನದಿಯಾಗಿ ಬೇಗನೆ ಚಲಿಸು. ಮಿಂಚುವ ಅಲೆ ಏತಕ್ಕೆ ಎಂದರೆ ಸೂರ್ಯನ ಶಕ್ತಿಯನ್ನು ಬಿಂಬಿಸುವುದರಿಂದ. ನದಿ ಬೇಗ ಏತಕ್ಕೆ ಚಲಿಸುತ್ತದೆ ಎಂದರೆ ಕಲ್ಲು-ಬಂಡೆಗಳ ಅಡಚಣೆಗಳಿಂದ. ಹೀಗೆ ಬೇಗ ಬೇಗನೆ ನದಿಯಾಗಿ ಹರಿದು ನೀನು ನಿನ್ನ ಪಾಲಿನ ಆಟವನ್ನು ಆಡಲೇಬೇಕು. ಏನು ಆಟ? ಈ ಬಾಳೆಂಬ ಆಟ - ಯಾವುದರಲ್ಲಿ ನೀನು ಕನಸಿನ ಕರ್ನಾಟಕವನ್ನು ಕಟ್ಟಲು ಹೊರಟಿದೆಯೋ ಆ ಆಟ. ಆಡಲೇಬೇಕು ಎಂದರೆ ಅದು ಕವಿ ಕನ್ನಡಿಗನಿಗೆ ಮಾಡಿರುವ ಆಜ್ಞೆಯಲ್ಲ, ಅವನ ಅಸ್ವತಂತ್ರತೆಯನ್ನ ಸೂಚಿಸುತ್ತಿದೆ. ಆ ಆಟವನ್ನು ನೀನು ಆಡುವುದಿಲ್ಲ ಎಂದುಕೊಂಡರೂ ನೀನು ಆಡಲೇಬೇಕು. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ಆಡಲೇಬೇಕು, ಕನ್ನಡಿಗನಾಗಿ ಬಾಳಲೇಬೇಕು, ನಿಂತ ದಾರಿಯಲ್ಲಿ ಮುಂದೆ ಸಾಗಲೇಬೇಕು, ಒಗ್ಗಟ್ಟಾಗಲೇಬೇಕು, ನಿನ್ನ ಕನಸಿನ ಕರ್ನಟಕವನ್ನು ನೀನು ಹೋಗಿ ಮುಟ್ಟಲೇಬೇಕು; ನಿನಗಿಲ್ಲಿ ಆಯ್ಕೆಯಿಲ್ಲ, ಇದಾವುದೂ ನಿನ್ನ ಹತೋಟಿಯಲ್ಲಿಲ್ಲ; ಎಲ್ಲಾ ಆಗಲೇಬೇಕು!

ಅಲ್ಲ - "ಅದೆಂಗ್ಲಾ ಎಂಕ?" ಅಂತ ಕೇಳಿದ ತಕ್ಷಣ ಇಷ್ಟೆಲ್ಲಾ ಹೇಳಿದನಲ್ಲ, ಎನಾದರೂ ಅರ್ಥವಾಯಿತಾ ಗುರು? ಸುಮ್ಮನೆ ಹೋಗಿ ಪೂಜಾ ಗಾಂಧೀನೂ ಐಟಂ ಹಾಡ್ನೂ ನೋಡ್ಕೊಂಡ್ ಬಾರ್ಲಾ ಅಂದ್ರೆ ಯೇನೋ ಬುಟ್ಟ ಸಿದ್ಧಾಂತ!

9 ಅನಿಸಿಕೆಗಳು:

Anonymous ಅಂತಾರೆ...

ಸ್ವತ: ಜಯಂತ್ ಕಾಯ್ಕಿಣಿಯವರಿಗೆ ಇದನ್ನು ನೋಡಿದರೆ ಮಾತು ಹೊರಡೊಲ್ಲ. ಅಷ್ಟು ಚೆನ್ನಾಗಿದೆ ನಿವು ಕೊಟ್ಟಿರೋ ಪದ್ಯದ ತಾತ್ಪರ್ಯ.

Anonymous ಅಂತಾರೆ...

super baraha guru !

milana-da haadanna yeshto sali kelidini,, aadre adaralli iro e saalina taatparya adbhutavaagide !!

enguru unique annodu adakke !

Anonymous ಅಂತಾರೆ...

ಎಂಕಣ್ಣನಿನಗೆ ನಾಡಿನ ಬಗ್ಗೆ, ನುಡಿಯ ಬಗ್ಗೆ ತುಂಬಾ ಕಾಳಜಿ ಇದೆ. ಇದು ಹೀಗೆ ಮುಂದುವರೆಯಲಿ ಮತ್ತು ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಲಿ.

ಜಯಪ್ರಕಾಶ ನೇ ಶಿವಕವಿ.

Anonymous ಅಂತಾರೆ...

ಸಕ್ಕತ್ತಾಗಿದೆ. ಏನ್ಗುರು ವಲ್ಲಿ ಬಂದಿರುವ ಬರಹಗಳ್ಳಲ್ಲಿ ಇದು ತುಂಬ ಮೇಲ್ಮಟ್ಟದಲ್ಲಿದೆ.
ಎಂಕಣ್ಣ ಹಾಡಿನ ತಿರುಳನ್ನು ಚೆನ್ನಾಗಿ ಬಿಡಿಸಿದ್ದಾನೆ.

Madhu ಅಂತಾರೆ...

Sakkathagidhe Guru..!!!

Anonymous ಅಂತಾರೆ...

suuuppeerrrr agide guru...

Anonymous ಅಂತಾರೆ...

chennagide guru.. Song is either for Heartbeat or Karnataka.. it is really heart touching... I never realised like YENKANNA... enguru' ge thumba Thanks.

Satish

Anonymous ಅಂತಾರೆ...

kannada bhaashe baage namma kelavu cosmopoliton kannadigarannu badidu ebbisuva inta lekhanagalu mattashtu barabeku.

Unknown ಅಂತಾರೆ...

Ondu Adbhutha parikalpane..
Kaviya manada maathugalige jeeva tumbide..

ನಿಮ್ಮ ಅನಿಸಿಕೆ ಬರೆಯಿರಿ

"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!

Related Posts with Thumbnails