ಕಳೆದ ವರ್ಷ ಕರ್ನಾಟಕ ಸರ್ಕಾರ ಕೊಡವರಿಗೆ ಸಂಬಂಧ ಪಟ್ಟ ಒಂದು ಆದೇಶ ಹೊರಡಿಸಿತ್ತು. ಆ ಒಂದು ಆದೇಶದ ಮೂಲಕ ಕೊಡವರಿಗೆ ಜುಮ್ಮ/ಬಾಣೆ ಜಮೀನಿನ ಮೇಲಿನ ಹಕ್ಕು ಉಳಿಸಿಕೊಡೋ ಒಳ್ಳೇ ಕೆಲಸಾನ ಸರ್ಕಾರ ಮಾಡ್ತು. ಆದ್ರೆ ತಲೆಮಾರುಗಳಿಂದ ಇದ್ದ ಹಕ್ಕನ್ನು ಮೊಟಕುಗೊಳಿಸಿ, ಕೊಡವರ ಬದುಕಿಗೆ ಮುಳುವಾಗಿದ್ದ 2004ರ ಎರಡು ಕಾಯ್ದೇನ ಹಿಂಪಡೆಯೋ ಸುತ್ತೋಲೆ ಹೊರಡ್ಸಿದ್ರೂ ಇನ್ನೂ ಜಾರಿಯಾಗಿಲ್ಲ. ಕೊಡಗಿನಲ್ಲಿ ಕೊಡವರ ಕಾಫಿ ತೋಟಗಳನ್ನು ಅವರವರ ಹೆಸರಿಗೆ ಅಧಿಕೃತಗೊಳಿಸಿರೋ ಆದೇಶ ಅಲ್ಲಿ ಜನರ ಕೈಗಿನ್ನೂ ಸಿಕ್ಕದೆ ಬೆಳೆಸಾಲ ಕೂಡಾ ಹುಟ್ತಿಲ್ಲ. ಇದು ಕೊಡವರ ಆರ್ಥಿಕ ಏಳಿಗೆಗೆ ಕೊಡಲಿ ಪೆಟ್ಟಾಗಿದ್ದು ಕೊಡಗಿನಲ್ಲೇ ಕೊಡವರ ಸಾರ್ವಭೌಮತ್ವಕ್ಕೆ ಧಕ್ಕೆ ಬಂದಂತಾಗಿರೋದು ಸರಿಯಲ್ಲ ಗುರು.
ತಲತಲಾಂತರದಿಂದ ಇದ್ದ ಹಕ್ಕು ಮೊಟಕು ಮಾಡೋದು ತಪ್ಪು
ಮೈಸೂರು ಮಹಾರಾಜರ ಕಾಲದಲ್ಲಿ ಸರ್ಕಾರಿ ಜಾಗದಲ್ಲಿ ವ್ಯವಸಾಯ ಮಾಡಲು ಜುಮ್ಮ ಮತ್ತು ಬಾಣೆ ಕಾಯ್ದೆಗಳ ಮೂಲಕ ಕೊಡವರಿಗೆ ಅವಕಾಶ ಮಾಡಲಾಯಿತು. ಕೊಡಗಿನಲ್ಲಿ ಅನೇಕರಿಗೆ ಈ ರೂಪದಲ್ಲಿ ಜಮೀನು ಸಿಕ್ತು. ಈಗ ಅರಣ್ಯ ಇಲಾಖೆಗೆ ಸೇರಿಕೊಂಡಿರೋ ಆ ಭೂಮಿಯ ಮೆಲಿನ ಹಕ್ಕನ್ನು ಮೊಟಕುಗೊಳಿಸೋ ಕೆಲ್ಸಾನ 2004ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಂದು ಆದೇಶದ ಮೂಲಕ ಮಾಡ್ತು. ಕೊಡವರು ತಮ್ಮ ನೆಲದ ಮೇಲೆ ತಲತಲಾಂತರದಿಂದ ಇರೋ ಹಕ್ಕನ್ನು ಹೀಗೆ ಕಿತ್ಕೊಳ್ಳೋದು ಸರೀನಾ ಅಂತ ಗೋಳಾಡ್ತಾ ಇದಾರೆ. ಇವರ ಗಾಯಕ್ಕೆ ಉಪ್ಪು ಸವರುವಂತೆ ತಲಕಾವೇರಿ ರಾಷ್ಟ್ರೀಯ ಉದ್ಯಾನವನ ಯೋಜನೆಯನ್ನು ಪ್ರಸ್ತಾಪಿಸಲಾಗುತ್ತಿದ್ದು, ಇದರ ಮೂಲಕ ತಮ್ಮ ನೆಲ ಹಾಗೂ ನೆಲೆಯನ್ನು ಕಳಕೊಳ್ಳೊ ಭಯ ಅಲ್ಲಿ ಜನರನ್ನು ಕಾಡ್ತಿದೆ.
ಕೊಡಗಿಗೆ ಕೊಡವನೇ ಅರಸ
ಕೊಡಗಿನಲ್ಲಿ ಕೊಡವರೇ ಸಾರ್ವಭೌಮ ಜನ, ಕೊಡವ ಭಾಷೆಯೇ ಸಾರ್ವಭೌಮ ಭಾಷೆ ಅನ್ನೋದರಲ್ಲಿ ಯಾರಿಗೂ ಸಂದೇಹ ಬೇಡ. ಇವಕ್ಕೆ ಮಾರಕವಾಗುವ ಯಾವುದೇ ರೀತಿಯ ಕ್ರಮ ಖಂಡಿತಾ ಸರಿಯಲ್ಲ ಗುರು. ನಮ್ಮ ನಾಡಿನಲ್ಲಿರೋ ವೈವಿಧ್ಯತೆಗಳನ್ನು ಉಳಿಸಿಕೊಳ್ಳೋದರ ಮೂಲಕವೇ ನಾವು ಏಕತೆಯನ್ನು ಸಾಧಿಸೋಕ್ಕೆ ಸಾಧ್ಯ ಒಂದು ಪ್ರದೇಶದ ಜನರ ಬದುಕು, ಏಳ್ಗೆ ಮತ್ತು ಸಂಸ್ಕೃತಿಗಳ ಮೇಲೆ ಮಾರಕವಾಗೋ ಅಂಥಾ ನಿರ್ಣಯಗಳನ್ನಾಗಲಿ, ನೀತಿಗಳನ್ನಾಗಲೀ ನಮ್ಮ ಸರ್ಕಾರಗಳು ತೊಗೋಬಾರದು.
ಕೊಡಗಿನಲ್ಲಿ ಕೊಡವ ಭಾಷೆ ಮತ್ತು ಸಂಸ್ಕೃತಿಗಳನ್ನು ನಾವು ಕಾಪಾಡಿಕೊಳ್ಳೋದು ನಮ್ಮ ಧರ್ಮ ಗುರು. ಆ ಕಾರಣದಿಂದಲೇ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳೋ ಮೊದಲು ಸರ್ಕಾರಗಳು ಹಿಂದೆ ಮುಂದೆ ಯೋಚ್ಸಿ, ಅದಕ್ಕೆ ಸಂಬಂಧ ಪಟ್ಟ ಜನರ ಜೊತೆ, ಜನ ಪ್ರತಿನಿಧಿಗಳ ಜೊತೆ ಮಾತುಕತೆ ಮಾಡಿ ಮುಂದುವರೀಬೇಕು ಗುರು. ಇಲ್ಲದೆ ಇದ್ರೆ ಅಂತಹ ಪ್ರದೇಶದ ಜನಗಳ ಸಾರ್ವಭೌಮತ್ವವನ್ನು ನಾವು ಕೊಂದು ಹಾಕಿದಂತೆ ಆಗುತ್ತೆ. ಏನೇ ಆಗಲಿ, ಕೊಡಗಿಗೆ ಕೊಡವನೇ ಸಾರ್ವಭೌಮ, ಕೊಡವ ನುಡಿ ಕೊಡಗಿನಲ್ಲಿ ಸಾರ್ವಭೌಮ ಭಾಷೆ ಆಗಿರಲೇ ಬೇಕು. ಅದೇ ಸರಿ.
ಇದು ಕೊಡಗಿನ ಸಮಸ್ಯೆ ಮಾತ್ರವಲ್ಲ, ಕರ್ನಾಟಕದ ಸಮಸ್ಯೆ
ಕೊಡಗಿನ ಜನರನ್ನ ಕಾಡ್ತಿರೋ ಈ ಸಮಸ್ಯೆ ಬರೀ ಕೊಡಗಿನ ಸಮಸ್ಯೆಯಲ್ಲ, ಇಡೀ ಕರ್ನಾಟಕದ ಸಮಸ್ಯೆ. ವೈವಿಧ್ಯತೇನ ಉಳಿಸಿಕೊಳ್ಳೋದ್ರಲ್ಲೇ ನಮ್ಮ ಏಳ್ಗೆ ಇರೋದು ಅಂತ ನಮ್ಮ ಸರ್ಕಾರಗಳಿಗೆ ಅರ್ಥವಾಗದೇ ಇರೋದೇ ಇದಕ್ಕೆ ಮೂಲ. ಅದೇಕೋ ಏನೋ "ವಿವಿಧತೆಯಲ್ಲಿ ಏಕತೆ, ವಿವಿಧತೆಯಲ್ಲಿ ಏಕತೆ" ಅಂತ ಮಂತ್ರ ಎಷ್ಟು ಸಾರಿ ಹೇಳ್ಕೊಂಡ್ರೂ ನಮ್ಮನ್ನಾಳೋರಿಗೆ ಆ ಮಂತ್ರದ ಅರ್ಥ ಗೊತ್ತಾಗಿರೋಹಂಗೆ ಕಾಣ್ತಿಲ್ಲ! ಕೊಡಗಿನ ಜನರೂ ಇದನ್ನು ಬರೀ ತಮ್ಮ ಸಮಸ್ಯೆ ಅಂತ ಅಂದುಕೊಳ್ಳದೆ ನಾಡಿನ ಎಲ್ಲ ಭಾಗಗಳ ಜನರನ್ನು ಜೊತೇಲಿಟ್ಟುಕೊಂಡು ಒಗ್ಗಟ್ಟಿಂದ ಇದಕ್ಕೆ ಪರಿಹಾರ ಹುಡುಕಬೇಕು. ಏನ್ ಗುರು?
3 ಅನಿಸಿಕೆಗಳು:
ಸಖತ್ ಆಗ್ ಬರ್ದಿದೀರಾ ಗುರೂ.. ಅದೆಲ್ಲಿಂದ ಹುಡುಕಿ ಹಾಕಿದೀರಾ ಆ ಫೋಟೋನಾ? ಕೊಡವ ಹೆಣ್ಣು ಮಗಳು ಕನ್ನಡದ ಹಳದಿ ಕೆಂಪು ಸೀರೆ ಉಟ್ಟಿರೋದು...ತನ್ನತನ ಕಾಪಾಡಿಕೊಂಡೇ ಕನ್ನಡತ್ವ ತನ್ನದು ಮಾಡಿಕೊಂಡಿರೋ ಸಂಕೇತ ಆಗಿದೆ ಮತ್ತು ಬರಹಕ್ಕೆ ಸೂಕ್ತವಾದ ಶೀರ್ಷಿಕೆಯಾಗಿದೆ. ಇಂಥಾ ವಿನ್ಯಾಸ ಮಾಡಿರೋ ನಿಮ್ಮ ಸಂಪಾದಕರಿಗೆ ಸಾವಿರ ಸಾವಿರ ಸಲಾಮು.
ಲೇಖನ ಸೊಗಸಾಗಿದೆ. ನಮ್ಮ ನಾಡಿನಲ್ಲಿರೋ ಯಾವ ಭಾಗದ ಜನರಿಗೆ ಯಾವ ಭಾಷೆ ಆಡುವವರಿಗೂ ಅನ್ಯಾಯ ಆಗಬಾರದು. ಅವರೆಲ್ಲರೂ ಕನ್ನಡಿಗರೇ. ಹಳದಿ ಕೆಂಪು ಸೀರೆ ಉಟ್ಟಿರುವ ಹೆಣ್ಣುಮಗಳ ಪಟ ಆಯ್ಕೆ ಮಾಡಿರುವುದು ತುಂಬ ಇಷ್ಟ ಆಯಿತು.
ನೀವು ಬರೆದಿರುವುದು ನಿಜ. ಅಲ್ಲಿನ ಜನರಿಗೆ ಕೆಲವೊಮ್ಮೆ ಮೂಲಭೂತ ಸೌಕರ್ಯ ಸಹ ದೊರಯುವುದಿಲ್ಲ. ರೋಡುಗಳು ಸರಿ ಇರುವುದಿಲ್ಲ. ಮತದಾನದ ಸಮಯದಲ್ಲಿ ಮಾತ್ರ ಬರುವ ರಾಜಕಾರಿಣಿಗಳು ಅಮೇಲೆ ಅತ್ತ ಸುಳಿಯುವುದೇ ಇಲ್ಲ. ಮೂಲಭೂತ ವೈದ್ಯ ಸೌಕರ್ಯ ಸಹ ದೊರೆಯದೆ ವಿದೇಶದವನೊಬ್ಬ ಸಾವಿಗೀಡಾದ ಬಗ್ಗೆ thatskannada ದಲ್ಲಿ ವರದಿಯಾಗಿತ್ತು. ನಮ್ಮ ಸರ್ಕಾರದವರು ಬರಿ ಬೆಂಗಳೂರು ಮೈಸೂರು ಹೊರತಾಗಿ ಇತರ ಪ್ರದೇಶಗಳ ಬಗ್ಗೆಯು ಗಮನ ಹರಿಸಬೇಕು. ಕೊಡಗಿನ ಜನರ ನೆಲ ಜಲ ಅವರು ಉಪಯೋಗಪಡಿಸಿಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡಬೇಕು.
ಸರಿಯಾಗಿ ಹೇಳಿದ್ರಿ ಗುರುಗಳೆ. ನಮ್ಮ ಸರ್ಕಾರ ಅದರಲ್ಲೂ ಅರಣ್ಯ ಮತ್ತು ಕಂದಾಯ ಇಲಾಖೆಗಳು ಬ್ರಿಟಿಶರ ಶೈಲಿಯಲ್ಲೇ ಹಲ್ಕಟ್ ಕೆಲಸ ಮಾಡ್ತಾನೇ ಇದವೆ. ಗಿರಿಜನರಿಗೆ ಮತ್ತು ಭೂಮಿಯಿಲ್ಲದವರಿಗೆ ಕೊಟ್ಟ ಕಿರುಕುಳದಿಂದ ನಕ್ಸಲ್ ಸಮಸ್ಯೆ ಹೆಚ್ಚಾಯ್ತು. ನಾಡು ಒಡೆಯೋ ಕೆಲ್ಸ ಮಾಡ್ತಿರುವ ಈ ಮೂರ್ಖರನ್ನ ನಿಲ್ಲಿಸಬೇಕು. ಕೊಡವರಿಗೆ ನ್ಯಾಯ ಸಿಗಲಿ.
ನಿಮ್ಮ ಅನಿಸಿಕೆ ಬರೆಯಿರಿ
"Anonymous" ಆಗಬೇಡಿ, ಯಾವುದಾದರೂ ಒಂದು ಹೆಸರಿಟ್ಟುಕೊಂಡು ಸೋಮಾರಿತನವನ್ನು ಎದುರಿಸಿ!