ಜುಲೈ 29ರ ಹಿಂದೂನಲ್ಲಿ ಇ.ಸಿ. ಥಾಮಸ್ ಅನ್ನೋರು ಭಾರತದಲ್ಲಿ ಯಾವುದೇ ನಿಜವಾದ ಸಂಶೋಧನೆಗಳು ನಡೆಯುತ್ತಿಲ್ಲ, ಹೊಸ ತಂತ್ರಜ್ಞಾನದ ಬೆಳವಣಿಗೆ ಆಗ್ತಿಲ್ಲ, ಹೊಸ-ಹೊಸ ವಸ್ತುಗಳು ತಯಾರಾಗ್ತಿಲ್ಲ ಅಂತ ಅಳಲು ತೋಡ್ಕೊಂಡಿದಾರೆ ನೋಡಿ:
India has no products which have revolutionised the world scene...
Nor do we have innovative companies such as Google, Apple or Microsoft. Our IT giants are really glorified sub-contractors to the elite corporations of the world. Our great manufacturing enterprises are just makers of products engineered by others.
ಥಾಮಸ್ ಹೇಳೋದು ನಿಜ ಅಂತ ನಮಗೆ ಗೊತ್ತೇ ಇದೆ. ಎಲ್ಲಿವೆ ಪ್ರಪಂಚವನ್ನೇ ಅಲ್ಲಾಡಿಸೋ ಭಾರತೀಯ ಕಂಪನಿಗಳು? ಏನಿದ್ರೂ ಅದು-ಇದು ಚಿಕ್ಕ-ಪುಟ್ಟ ಕೆಲಸಗಳ್ನ ಗುತ್ತಿಗೆ ತೊಗೊಂಡು ಜೀವನ ಮಾಡೋದ್ರಲ್ಲೇ ಇದೀವಲ್ಲ ಗುರು?
ಕನ್ನಡಿಗನಿಗೆ ಕರ್ನಾಟಕವೇ ಭಾರತಭಾರತದ ಬಗ್ಗೆ ಥಾಮಸ್ ಒಡ್ಡಿರೋಂಥಾ ಪ್ರಶ್ನೆಗಳ್ಗೆ ನಿಜವಾಗಲೂ ಉತ್ತರ ಕೊಡಬೇಕು ಅಂದ್ರೆ ಭಾರತದಲ್ಲಿರೋ ಭಾಷಾವಾರು ರಾಜ್ಯಗಳ್ನ ಮನಸ್ನಲ್ಲಿ ಇಟ್ಟುಕೊಳ್ದೇ ಇದ್ರೆ ಆಗಲ್ಲ. ಭಾರತ ಅಂದ್ರೆ ಅರ್ಥವಾದರೂ ಏನು? ಭಾಷಾವಾರು ರಾಜ್ಯಗಳ ಒಕ್ಕೂಟ. ಭಾರತದಲ್ಲಿ ಒಳ್ಳೇ ತಂತ್ರಜ್ಞಾನ ಹುಟ್ಬೇಕು ಅಂದ್ರೂ ಒಂದೇ ಕರ್ನಾಟಕದಲ್ಲಿ (ಹಾಗೇ ಪ್ರತಿಯೊಂದು ಭಾಷಾವಾರು ರಾಜ್ಯದಲ್ಲೂ) ಹುಟ್ಬೇಕು ಅಂದ್ರೂ ಒಂದೇ. ಭಾರತದೋರು ಉದ್ಯಮಶೀಲರಾಗಬೇಕು ಅಂದ್ರೂ ಒಂದೇ ಕನ್ನಡಿಗರು ಉದ್ಯಮಶೀಲರಾಗಬೇಕು ಅಂದ್ರೂ ಒಂದೇ.
ಕನ್ನಡಿಗರು ಉದ್ಧಾರ ಆಗದೆ ದೂರದ ಪ.ಬಂಗಾಳ ಉದ್ಧಾರವಾದರೆ ನಮಗೇನು? ಪಕ್ಕದ ಮನೇಲಿ ಕೂಸು ಹುಟ್ಟಿತು ಅಂತ ಇಲ್ಲಿ ತೊಟ್ಟಿಲು ತೂಗೋ ಪೆದ್ದರೇನು ನಾವಲ್ಲವಲ್ಲ? ನಮಗೆ ಕರ್ನಾಟಕವೇ ಭಾರತ. ಕರ್ನಾಟಕದ ಹೊರಗಿರೋ ಭಾರತ ಕರ್ನಾಟಕದ 99% ಜನರಿಗೆ ಭಾರತವೇ ಅಲ್ಲ ಅಷ್ಟೇ ಅಲ್ಲ, ಅದು ಅವರ ಮಟ್ಟಿಗೆ ಇಲ್ಲವೇ ಇಲ್ಲ; ಔರು ಆ ಮಣ್ನ ತಮ್ಮ ಜೀವನದಲ್ಲೇ ಮೆಟ್ಟಲ್ಲ. ಆ ಕಾಲ್ಪನಿಕ ಭಾರತವನ್ನ ಮನಸ್ಸಲ್ಲಿಟ್ಕೊಂಡು ಇಲ್ಲಿ ನಾವು ಉತ್ರ ಕೊಡಕ್ಕೆ ಹೊರ್ಟಿರೋಂಥಾ ಗಂಭೀರ ಪ್ರಶ್ನೆಗಳ್ಗೆ ಉತ್ರ ಕೊಡಕ್ಕಾಗಲ್ಲ. ಆದ್ದರಿಂದ ಕರ್ನಾಟಕವನ್ನೇ ಕ್ಷೇತ್ರವಾಗಿಟ್ಟುಕೊಂಡು ಉತ್ರ ಕೊಡೋಣ.
ಇದೇ ಭಾರತದ ಬೇರೆ ರಾಜ್ಯಗಳ್ಗೂ ಅನ್ವಯಿಸತ್ತೆ ಅನ್ನೋದು ನಮ್ಮ ಉತ್ತರದ ವಿಶೀಷ. ಈ ಮೂಲಕವೇ ಭಾರತದ ಉದ್ಧಾರ ಸಾಧ್ಯ. ಇರೋ ವಿವಿಧತೇನ ಮರೆತರೆ ಚೊಂಬು!
ಎರಡು ಉತ್ತರಗಳುಕರ್ನಾಟಕದಲ್ಲಿ ಹೊಸಹೊಸ ತಂತ್ರಜ್ಞಾನ ಹುಟ್ಟಬೇಕು, ಅದ್ಭುತವಾದ ಕಂಪನಿಗಳು ಬರ್ಬೇಕು ಅಂದ್ರೆ ಏನೇನ್ ಇರ್ಬೇಕು ಅಂತ ಯೋಚ್ನೆ ಮಾಡಿದ್ರೆ ಮುಖ್ಯವಾಗಿ ಎರಡು ಅಂತ ಉತ್ರ ಸಿಗತ್ತೆ ಗುರು:
- ನಮ್ಮ ಬೇಕು-ಬೇಡಗಳ ಅರಿವು ಮತ್ತು ಉದ್ಯಮಶೀಲತೆ
- ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣ
ಈ ಎರಡನ್ನೂ ಸ್ವಲ್ಪ ವಿವರವಾಗಿ ನೋಡ್ಮ
, ಆಮೇಲೆ ಇವೆರ್ಡನ್ನ ಆಗುಮಾಡಿಸಕ್ಕೆ ನಾವಿಡಬೇಕಾದ ಮೊದಲ ಹೆಜ್ಜೆ ಏನು ಅಂತ ನೋಡ್ಮ.
ನಮ್ಮ ಬೇಕು-ಬೇಡಗಳ ಅರಿವು ಮತ್ತು ಉದ್ಯಮಶೀಲತೆ"ಇಂಥದ್ದು ಬೇಕು" ಅಂತ ಯಾರಿಗೆ ಮೊದ್ಲು ಅನ್ನಿಸತ್ತೋ ಔನಿಗೇ ಅದನ್ನ ಮಾಡಕ್ಕೆ ತುಡಿತ ಬರೋದು, ಅವನೇ ಮಾಡೋದು. ಇದನ್ನ ಸಕ್ಕತ್ ವರ್ಷದಿಂದ ನಾವು ಮಾಡದೇ ಮಾಡದೇ ತೊಮ್ಮೆಗಳಾಗಿರೋದ್ರಿಂದ ನಮಗೆ "ಇಂಥದ್ದು ಬೇಕು" ಅಂತ್ಲೂ ಹೊರಗಿನೋರೇ ಅರ್ಥಮಾಡ್ಕೊಂಬುಟ್ಟಿದಾರೆ!
- ಫಿನ್‍ಲ್ಯಾಂಡ್ ಜನಕ್ಕೆ (ನೋಕಿಯಾನೋರ್ಗೆ) ಕನ್ನಡಿಗರಿಗೆ ಮೊಬೈಲ್-ಫೋನು ಬೇಕು ಅಂತ ನಮಗಿಂತ ಮುಂಚೆ ಗೊತ್ತಾಗಿತ್ತು! ಅದಕ್ಕೆ ಔರೇ ಮೊದ್ಲು ಅದ್ನ ತಯಾರ್ಸಿದ್ದು, ನಾವು "ಅವರ ಅಂಗಡೀಲಿ ಪಟ್ನ ಕಟ್ಟಕ್" ಕೂತಿರೋದು ಈಗ!
- ಗಣಕಯಂತ್ರ ಅನ್ನೋದು ಬೇಕು ಅಂತ ಮೊದ್ಲು ಅನ್ನಿಸಿದ್ದು ಇಂಗ್ಲೀಷ್ ಮಾತಾಡೊರಿಗೆ, ಅದಕ್ಕೇ ಇವತ್ತೂ ಕನ್ನಡದ ಕೀಲಿಮಣಿ ಇಲ್ಲದೆ ಇಂಗ್ಲೀಷ್ ಕೀಲಿಮಣೆ ಮೇಲೇ ಇಲ್ಲಸಲ್ಲದ ದೊಮ್ಮರಾಟ ಮಾಡ್ಕೊಂಡು ಕನ್ನಡ ಬರೀತಿರೋದು.
- ಕರ್ನಾಟಕದ ಜನಕ್ಕೆ ಕನ್ನಡದ ಹಾಡುಗಳು ಬೇಕು ಅಂತ ನಮಗಲ್ದೆ ಇತ್ತೀಚೆಗೆ ಹೊರರಾಜ್ಯದೋರಿಗೆ ಅನ್ಸಿರೋದು ನೋಡಿದ್ರೆ ನಗು ಬರತ್ತೆ ಗುರು! ಅದಕ್ಕೇ ಔರು ಮುಂದುಬಂದು ಕನ್ನಡ ಎಫ್.ಎಂ. ಚಾನೆಲ್ಗಳ್ನ ತೆಗೀತಿರೋದು!
- ಅದೆಲ್ಲ ಹಾಳಾಗೋಗ್ಲಿ ಗುರು, ದಿನಸಿ ಅಂಗಡಿ, ತರ್ಕಾರಿ ಅಂಗಡೀನೂ ಇತ್ತೀಚೆಗೆ ಬೇರೆಯೋರು ಬಂದು ಇಡ್ತಿದಾರಲ್ಲ, ನಾವು ಅದ್ರಲ್ಲೂ ಪಟ್ನ ಕಟ್ಕೊಂಡ್ ಇರ್ತೀವಿ ಅಂತಿದೀವಲ್ಲ, ಈ ನಮ್ಮ ಕಾಲ್ಮೇಲೆ ನಾವೇ ಚಪ್ಪಡಿ ಎಳ್ಕೊಳೋ ಸೋಮಾರಿತನ ಮೊದ್ಲು ಹೋಗ್ಬೇಕು ಗುರು!
ಈಗ್ಲೂ ಕಾಲ ಮಿಂಚಿಲ್ಲ. ನಿಜವಾದ ಉದ್ಯಮಶೀಲ ಬುದ್ಧಿ ಇರೋನಿಗೆ ಇವತ್ತೂ ಸುತ್ತ ಮುತ್ತ ನೋಡಿದ್ರೆ ಐಡಿಯಾಗಳ್ಗೇನು ಕಮ್ಮಿಯಿಲ್ಲ. ಉದ್ಯಮಶೀಲತೆ ಬೆಳಸಿಕೊಳ್ಳೋದು ಬಹಳ ಮುಖ್ಯ ಗುರು! ಕಂಪನಿ ಗಿಂಪನಿ ತೆಗ್ಯೋದೆಲ್ಲ ನಂ ಕೆಲಸ ಅಲ್ಲ, ನಾವೇನಿದ್ರೂ ಔರ್ ಕೈಕೆಳ್ಗೆ ಕೆಲ್ಸಾ ಮಾಡ್ಕೊಂಡಿರೋದಕ್ಕೇ ಲಾಯಕ್ಕು ಅಂದ್ಕೊಳೋದ್ನ ನಾವು ಮೊದ್ಲು ಬಿಡಬೇಕು.
ಉನ್ನತಶಿಕ್ಷಣಾನೂ ಸೇರಿ ನಮ್ಮ ನುಡಿಯಲ್ಲೇ ನಮ್ಮ ಎಲ್ಲಾ ಶಿಕ್ಷಣಅಲ್ಲಿ-ಇಲ್ಲಿ, ಔರ್-ಇವರಿಗೆ ಚಿಲ್ಲರೆ ಕೆಲಸ ಮಾಡ್ಕೊಂಡು ಜೀವನ ಕಳೀತೀನಿ ಅಂದ್ರೆ ಯಾವ ಹೆಚ್ಚಿನ ಜ್ಞಾನವೂ ಬೇಕಾಗಿಲ್ಲ. ಆದ್ರೆ ಪ್ರಪಂಚದಲ್ಲಿ ಎಲ್ರಿಂದ್ಲೂ ಮೆಚ್ಚುಗೆ ಪಡೆಯೋಂಥಾ ವಸ್ತುಗಳ್ನ ತಯಾರಿಸ್ತೀನಿ, ಅತ್ಯುತ್ತಮ ತಂತ್ರಜ್ಞಾನ ಹುಟ್ಟಿಸ್ತೀನಿ ಅನ್ನೋ ನಮ್ಮ ಗುರಿ ಸಾಧಿಸಕ್ಕೆ ನಿಜವಾದ ತಿಳುವಳಿಕೆ ಬೇಕೇ ಬೇಕು. ಈ ನಿಜವಾದ ತಿಳುವಳಿಕೆ, ನಿಜವಾದ ಜ್ಞಾನಾನ ನಮ್ಮ ನುಡಿಯಲ್ಲೇ ಕಲಿಯಕ್ಕೆ ಸಾಧ್ಯ.
ಇದಕ್ಕೆ ಇಸ್ರೇಲ್, ಜಪಾನ್, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್...ಮುಂತಾದ ದೇಶಗಳೇ ಉದಾಹರಣೆಗಳು. ಇವರು ಯಾರೂ ತಮ್ಮ ನುಡಿ ಬಿಟ್ಟು ಬೇರೆ ಒಂದ್ರಲ್ಲಿ ಶಿಕ್ಷಣ ಪಡ್ಕೋತೀನಿ ಅನ್ನಲ್ಲ. ನಮ್ಮ ನುಡಿಯಲ್ಲಿ ಕಲಿಯೋದೇ ಸುಲಭ ಅಂತ ಪ್ರಪಂಚದ ವಿಜ್ಞಾನಿಗಳು ಬೊಡ್ಕೋತಾನೇ ಇದಾರೆ, ಆದ್ರೆ ನಮ್ಮ ಶಿಕ್ಷಣ ವ್ಯವಸ್ಥೆ ಕಟ್ಟೋರ್ ಕಿವೀಗೂ ಬೀಳ್ತಿಲ್ಲ, ಇವತ್ತು ಕಾಸಿಗಾಗಿ ಇಂಗ್ಲೀಷಿಗೆ ಮೊರೆ ಹೋಗ್ತಿರೋರ್ ಕಿವೀಗೂ ಬೀಳ್ತಿಲ್ಲ.
ಕನ್ನಡದಲ್ಲೇ ಒಳ್ಳೇ ಕಲಿಕೆ ಕೊಡೋಂಥಾ ವ್ಯವಸ್ಥೆ ಇವತ್ತು ಇಲ್ಲಾಂತ ನಮಗೂ ಗೊತ್ತಿದೆ. ಆದರೆ ಆ ವ್ಯವಸ್ಥೆ ಕಟ್ಟದೆ ಬೇರೆ ದಾರಿಯೇ ಇಲ್ಲ. ಕನ್ನಡದಲ್ಲೇ ಉನ್ನತ ಶಿಕ್ಷಣವೂ ಸಿಗಬೇಕು, ಕನ್ನಡದಲ್ಲೇ ಇಂಜಿನಿಯರಿಂಗು, ಕನ್ನಡದಲ್ಲೇ ಮೆಡಿಕಲ್ಲುಗಳು ಕಲಿಯೋ ಹಾಗಿರಬೇಕು. ಅದೇ ನಿಜವಾದ ವ್ಯವಸ್ಥೆ, ಆ ವ್ಯವಸ್ಥೆಯಿಂದ್ಲೇ ನಮ್ಮ ಕನಸು ನನಸಾಗಕ್ಕೆ ಸಾಧ್ಯ.
ಇದಕ್ಕೆ ನಾವಿಡಬೇಕಾದ ಮೊದಲ ಹೆಜ್ಜೆಯೇನು?
ಉದ್ಯಮಶೀಲತೆ ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಕಟ್ಟಬೇಕು. ಇವೆಲ್ಲ ಆಗಬೇಕಾದ್ರೆ ನಾವು ಇಡ್ಬೇಕಾದ ಮೊದಲ ಹೆಜ್ಜೆ ಏನು? ಇದಕ್ಕೂ ಉತ್ರಾನ ಥಾಮಸ್ಸೇ ಕೊಟ್ಟಿದಾರೆ:
We should ensure that the best of us do not become available to the highest bidder.
ಇವತ್ತಿನ ದಿನ ಈ ರೀತಿ ಯೋಚ್ನೆ ಮಾಡ್ತಾ ಇರೋ ನಮ್ಮ-ನಿಮ್ಮಂಥವರು ಸಮಾಜದಲ್ಲಿ ಮೇಲ್ದರ್ಜೆಯೋರು ಅಂತ ಅನ್ನಿಸಿಕೊಂಡಿದೀವಿ. ನಮ್ಮ ಮುಂದೆ highest bidder ಗಳಿಗೆ ಕಡಿಮೆ ಏನು ಇಲ್ಲ. ಆದರೆ ಬರೀ ದುಡ್ಡಿಗೆ ಮುಗಿದುಬಿದ್ದು ನಾವು ನಮ್ಮ ಜೀವನವನ್ನ ಹಾಳು ಮಾಡಿಕೊಳ್ಳದೆ ನಾಡು ಕಟ್ಟಕ್ಕೆ ಏನು ಮಾಡಬೇಕು ಅಂತ ಗಂಭೀರವಾಗಿ ಯೋಚ್ನೆ ಮಾಡಬೇಕಾಗಿದೆ
, ಹೀಗೆ ಚಿಂತನೆ ಮಾಡೋರೆಲ್ಲ ಒಗ್ಗೂಡಿ ಒಂದೊಂದೇ ಇಟ್ಟಿಗೆ ಇಟ್ಟು ಕನ್ನಡದ ಮನೇನ ಕಟ್ಟಾಬೇಕಿದೆ.
ಕಟ್ಮ ಬರ್ತ್ಯಾ ಗುರು?