ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡನಾಡಲ್ಲಿ ಒಂದು ಅದ್ಭುತವಾದ ಬೆಳವಣಿಗೆ ಆಗಿದೆ ಗುರು! ಆ ಬೆಳವಣಿಗೆ ಆಗುವಾಗ ಫಿಲಮ್ಮಲ್ಲಿ ತೋರ್ಸೋ ಹಾಗೆ ಏನು ಗಂಟೆಗಳು ಹೊಡ್ಕೊಳ್ಳಿಲ್ಲ, ಜೋರು ಮಳೆ ಬರಲಿಲ್ಲ, ಸಿಡಿಲು-ಗುಡುಗುಗಳಾಗಲಿಲ್ಲ. ಯಾರೂ ಅದನ್ನ ಗಮನಿಸಲೂ ಇಲ್ಲ. ಏನು ಆ ಬದಲಾವಣೆ ಅಂತೀರಾ? ಅದೇನೆಂದರೆ - ಒಬ್ಬ ಹೊಸಬ ನಮ್ಮ ನಡುವೆ ಹುಟ್ಟುಕೊಂಡಿದಾನೆ. ಈತ ಒಂದು ಹೊಸಬಗೆಯ ಕನ್ನಡಿಗ - ಹೊಸಗನ್ನಡಿಗ. ಇವನನ್ನ ಅರ್ಥ ಮಾಡ್ಕೊಳಕ್ಕೆ ಬಹಳ ಜನ ಪ್ರಯತ್ನ ಪಟ್ಟಿದಾರೆ, ಆದ್ರೆ ಔರಿಗೆ ಯಾಕೋ ಈ ಪಾಲ್ಟಿ ಅರ್ಥವೇ ಆಗ್ತಿಲ್ಲ!
ಇವತ್ತಿನ ದಿನ ಇವನ ಮೂರ್ತಿಯೂ ಚಿಕ್ಕದು, ಕೀರ್ತಿಯೂ ಚಿಕ್ಕದು. ಆದರೆ ನಾಳೆ ಇವನದೇ. ನಾಳಿನ ದಿನ ಇವನ ಮೂರ್ತಿ-ಕೀರ್ತಿಗಳೆರಡೂ ಇಡೀ ಜಗತ್ತನ್ನೇ ಹರಡುತ್ತವೆ, ಕಾದು ನೋಡಿ! ಇವನಿಂದಲೇ ಕನ್ನಡನಾಡಿನ ಏಳ್ಗೆ ಸಾಧ್ಯ! ಇವನಿಂದಲೇ ಭಾರತದ ಏಳ್ಗೆ ಸಾಧ್ಯ! ಇವನಿಂದಲೇ ಪ್ರಪಂಚದ ಎಲ್ಲಾ ಭಾಷಾವಾರು ಜನಾಂಗಗಳ ಏಳ್ಗೆ ಸಾಧ್ಯ! ಇವನಿಂದಲೇ ಈ ಜಗತ್ತಿಗೆ ನಾಲ್ಕೂ ಪುರುಷಾರ್ಥಗಳ ಸಾಧನೆ ಕಬ್ಬಿಣದ ಕಡಲೆ ಅನ್ನಿಸೋದು ನಿಲ್ಲೋದು! ಇವನು ಇವತ್ತು ಕೊಚ್ಚೆಯಲ್ಲಿ ಬಿದ್ದುಗೊಂಡೇ ಅರಳುತ್ತಿರೋ ತಾವರೆ! "ಯಾರಿವನು? ಈ ಮನ್ಮಥನು?" ಅಂತೀರಾ? ಈ ಪಾಲ್ಟಿ ಎಂಥೋನು ಅಂತ ಒಸಿ ನೋಡ್ಮ!
ಕನ್ನಡತನವೇ ಇವನ ಗುರುತು
ಯಾರಾದ್ರೂ "ಯಾರಪ್ಪಾ ನೀನು?" ಅಂದ್ರೆ ಇವನು "ನಾನೊಬ್ಬ ಕನ್ನಡಿಗ" ಅಂತ ಗುರುತಿಸಿಕೋತಾನೆ. ಕನ್ನಡತನವೇ ಇವನ ಗುರುತು. ಕನ್ನಡತನವೇ ಇವನ ಭಾರತೀಯತೆ. ಕನ್ನಡತನವೇ ಇವನ ಜಾತಿ. ಸಂತೆಯಲ್ಲಿ ಮನೆಯೋರ್ನ ಗುರುತಿಸೋಹಾಗೆ, ಗಾಡಿ-ನಿಲ್ದಾಣದಲ್ಲಿ ತನ್ನ ಕಾರು ಗುರುತಿಸೋ ಹಾಗೆ ಎಲ್ಲಿಗೆ ಹೋದರೂ ಇವನು ಕನ್ನಡಿಗನ್ನ ಗುರುತಿಸ್ತಾನೆ! ಯಾರು ಕನ್ನಡಿಗ, ಯಾರು ಕನ್ನಡೇತರ ಅಂತ ಇವನು "ಥಟ್ ಅಂತ" ಹೇಳ್ತಾನೆ! ಹತ್ತು ಜನ ಇದ್ದರೆ ಅವರಲ್ಲಿ ಕನ್ನಡಿಗರೆಷ್ಟು ಅನ್ನೋ ಪ್ರಶ್ನೇನ ಇವನ ಮನಸ್ಸು ಇವನ ಅರಿವಿಲ್ಲದೆಯೇ ಕೇಳತ್ತೆ! ಜಗತ್ತಿನಲ್ಲಿ ಯಾರುಯಾರು ಏನೇನೇ ಸಾಧಿಸಲಿ, "ಅವನು ಕನ್ನಡಿಗನಾ?", ಇಲ್ಲವೇ "ಕನ್ನಡಿಗ ಇದನ್ನೇ ಸಾಧಿಸಬೇಕಾದ್ರೆ ಏನಾಗಬೇಕು?" ಅನ್ನೋ ಪ್ರಶ್ನೆಗಳು ಇವನ ಮನಸ್ಸನ್ನ ಕಾಡುತ್ತವೆ! ಇವನ ಕನ್ನಡತನಕ್ಕೆ ಧಕ್ಕೆ ಬರುವ ಯಾವ ಚಿಂತನೆಗೂ ಇವನು ಸೊಪ್ಪು ಹಾಕಲ್ಲ. ಅಧ್ಯಾತ್ಮವೇ ಇರಲಿ, ರಾಷ್ಟ್ರೀಯತೆಯೇ ಇರಲಿ, ಜಾಗತೀಕರಣವೇ ಇರಲಿ - ಇದ್ಯಾವುದನ್ನೂ ಇವನು ಬಿಟ್ಟುಕೊಡದೆ ಎಲ್ಲದಕ್ಕೂ ಕನ್ನಡವೇ ಸಾಧನ, ಕನ್ನಡವೇ ಏಣಿ ಅನ್ನೋದು ಇವನಿಗೆ ಅರ್ಥವಾಗಿದೆ.
ಕರ್ನಾಟಕದಲ್ಲಿ ಕನ್ನಡದ ಪಾತ್ರ ಏನು ಅಂತ ಇವನಿಗೆ ಗೊತ್ತು
ಹಿಂದೆ ಏನೇ ಆಗಿರಲಿ, ಕನ್ನಡಕ್ಕೆ ಇವತ್ತು ಕರ್ನಾಟಕದಲ್ಲಿ ಏನೇ ಸ್ಥಾನ ಇರಲಿ, ಸರಿಯಾದ್ದೇನು ಅಂತ ಇವನಿಗೆ ಗೊತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಅನ್ನೋ ಅರಿವು ಇವನಿಗಿದೆ. ಈ ರಾಜ್ಯ ಕನ್ನಡಿಗರಿಗಾಗಿಯೇ ಇರೋದು ಅಂತ ಇವನಿಗೆ ಗೊತ್ತಿದೆ. ಬೀದೀಲಿರೋ ಬೋರ್ಡುಗಳಿಂದ ಹಿಡಿದು ಉನ್ನತ ಶಿಕ್ಷಣದ ವರೆಗೂ ಎಲ್ಲವೂ ಕನ್ನಡದಲ್ಲಿರಬೇಕಾದ್ದೇ ಸರಿ ಅಂತ ಇವನಿಗೆ ಗೊತ್ತಿದೆ. ಕೆಲಸದಲ್ಲಾಗಲಿ ಕಲಿಕೆಯಲ್ಲಾಗಲಿ ಮನರಂಜನೆಯಲ್ಲಾಗಲಿ ಮತ್ತೊಂದರಲ್ಲಾಗಲಿ ಕನ್ನಡವೇ ಇಲ್ಲಿ ಮುಂಚೂಣಿಯಲ್ಲಿರಬೇಕು ಅನ್ನೋದು ಇವನ ನಿಲುವು.
ಭಾರತ ಅಂದ್ರೆ ಏನು ಅಂತ ಇವನಿಗೆ ಗೊತ್ತು
ಭಾರತ ಅಂದ್ರೆ ಎಲ್ಲಾಕಡೆ ಬರೀ ಹಿಂದಿ ಇರಬೇಕು ಅಂತ ವಾದಿಸೋರಿಗೆ, ಕರ್ನಾಟಕದಲ್ಲೇ ಕನ್ನಡಕ್ಕೆ ಎರಡನೇ ಸ್ಥಾನ ಕೊಡೋರಿಗೆ ಇವನು ಕಿವಿ ಕೊಡಲ್ಲ. ಭಾರತ ಅಂದ್ರೆ ಭಾಷಾವಾರು ರಾಜ್ಯಗಳ ಒಕ್ಕೂಟ, ಇಲ್ಲಿ ಬಲಿಷ್ಠವಾದ ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಗುಜರಾತು - ಹೀಗೆ ಎಲ್ಲಾ ಭಾಷಾವಾರು ರಾಜ್ಯಗಳು ಉದ್ಧಾರವಾಗೋದೇ ಭಾರತದ ಉದ್ಧಾರ ಅಂತ ಇವನಿಗೆ ಗೊತ್ತಿದೆ. "ಕರ್ನಾಟಕದಲ್ಲಿ ಭಾರತ ಇದೆ" ಅನ್ನೋದು ಇವನ ನಿಲುವು. ಕರ್ನಾಟಕದ ಉದ್ಧಾರವಾಗದೆ ಭಾರತದ ಉದ್ಧಾರ ಸಾಧ್ಯವಿಲ್ಲ ಅನ್ನೋದು ಇವನ ನಿಲುವು. ಯಾವುದೇ ವಿಷಯದಲ್ಲಾಗಲಿ ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಮೊದಲನೇ ಸ್ಥಾನ ಹೋಗಿ ಎರಡನೇ ಸ್ಥಾನ ಯಾವುದರಿಂದ ಸಿಗುವುದೋ ಅದು ತನ್ನ ಉಳಿವಿಗೇ ಮಾರಕ ಅಂತ ಇವನಿಗೆ ಗೊತ್ತು, ಅದನ್ನು ಇಲ್ಲವಾಗಿಸುವುದು ಇವನ ಜೀವನದ ಧ್ಯೇಯ.
ಜಾಗತೀಕರಣದ ಲಾಭ ಪಡ್ಕೊಳಕ್ಕೆ ಕನ್ನಡವೇ ಸಾಧನ ಅನ್ನೋದು ಇವನ ನಿಲುವು
ಜಾಗತೀಕರಣದ ಈ ಯುಗದಲ್ಲಿ ಕನ್ನಡಕ್ಕೆ ಹಿಂದೆಂದೂ ಇಲ್ಲದ ಪ್ರಾಮುಖ್ಯತೆ ಇದೆ ಎನ್ನುವುದು ಇವನ ನಿಲುವು. ಸೋಮಾರಿಗಳು, ದೂರದೃಷ್ಟಿಯಿಲ್ಲದೋರು ಹೇಳೋಹಾಗೆ ಇವನು ಜಾಗತೀಕರಣದಲ್ಲಿ ಗೆಲ್ಲಕ್ಕೆ ಇಂಗ್ಲೀಷೇ ಸಾಧನ ಅನ್ನಲ್ಲ. ಜಾಗತೀಕರಣದಿಂದ ಲಾಭ ಪಡ್ಕೊಳಕ್ಕೆ ನಿಜವಾದ ಜ್ಞಾನವೇ ಸಾಧನ, ಆ ನಿಜವಾದ ಜ್ಞಾನ ಕನ್ನಡಿಗರನ್ನು ವ್ಯಾಪಿಸಬೇಕಾದರೆ ಅದು ಕನ್ನಡದಲ್ಲೇ ಸಾಧ್ಯ ಅಂತ ಇವನಿಗೆ ಸಕ್ಕತ್ತಾಗಿ ಮನವರಿಕೆ ಆಗಿದೆ. ಇವತ್ತಿನ ದಿನ "ಇಂಗ್ಲೀಷು! ಇಂಗ್ಲೀಷು!" ಅಂತ ಜನಕ್ಕೆ ಹತ್ತಿರೋ ಹುಚ್ಚು ನೋಡಿದರೆ ಇವನಿಗೆ ಮುಗುಳ್ನಗೆ ಬರತ್ತೆ!
ಇವನದು ದೊಡ್ಡ-ದೊಡ್ಡ ಕನಸುಗಳು
ಕನ್ನಡ-ಕನ್ನಡಿಗ-ಕರ್ನಾಟಕಗಳ ವಿಷಯದಲ್ಲಿ ಹಿಂದೆಂದೂ ಕೇಳಬರದಂತಹ ಕನಸುಗಳು ಇವನದು. ಇಡೀ ಪ್ರಪಂಚವೇ ಮೆಚ್ಚುವಂಥವರಾಗಬೇಕು ನಾವು ಕನ್ನಡಿಗರು, ಯಾವ ಕ್ಷೇತ್ರದಲ್ಲೂ ನಾವು ಕಡಿಮೆಯಿರಬಾರದು, ಇಡೀ ಜಗತ್ತೇ ಕನ್ನಡ ಕಲಿಯಕ್ಕೆ ನಾಮುಂದು-ತಾಮುಂದು ಅಂತ ಬರಬೇಕು ಅನ್ನೋದು ಇವನ ಗುರಿ. ಇದೆಲ್ಲಾ ಅಸಾಧ್ಯ ಅನ್ನೋರ ಮುಖಕ್ಕೆ ಉಗೀತಾನೆ, ಹೇಗೆ ಸಾಧ್ಯ, ಯಾವಾಗ ಸಾಧ್ಯ, ಏನು ಮಾಡಿದರೆ ಸಾಧ್ಯ ಅಂತ ತೋರಿಸಿಕೊಡ್ತಾನೆ!
ಒಗ್ಗಟ್ಟು ಕನ್ನಡಿಗರ ಏಳ್ಗೆಗೆ ಮುಖ್ಯ ಅಂತ ಇವನಿಗೆ ಗೊತ್ತಿದೆ
ಹಿಂದಿನವರಿಗೂ ಇವನಿಗೂ ಇದೊಂದು ಬಹಳ ಮುಖ್ಯವಾದ ಬದಲಾವಣೆಯೋ ಏನೋ! ಇವನಿಗೆ ಕನ್ನಡಿಗರ ಒಗ್ಗಟ್ಟು ಬಹಳ ಮುಖ್ಯ ಅನ್ನೋ ಅರಿವಾಗಿದೆ. ಕನ್ನಡಿಗರ ಒಗ್ಗಟ್ಟಿಗಾಗಿ ಇವನ ಮನಸ್ಸು ಹಾತೊರೆಯುತ್ತದೆ. ಕನ್ನಡಿಗರಲ್ಲಿ ಒಡಕುಂಟುಮಾಡುವ ಯಾವುದೊಂದನ್ನು ಕಂಡರೂ ಇವನ ರಕ್ತ ಕುದಿಯುತ್ತದೆ, ಕಣ್ಣು ಕೆಂಪಾಗುತ್ತದೆ! ಈ ಒಗ್ಗಟ್ಟಿಗಾಗಿ ಇವನು ಹಾತೊರೆಯುವುದು ಇವನಲ್ಲಿರೋ ಯಾವುದೋ ಒಂದು ಕೊರತೆಯಿಂದ ಪ್ರೇರಿತವಾಗದೆ ಮುಂದೆ ಮಾಡಬೇಕಾದ ಅದ್ಭುತವಾದ ಕೆಲಸಗಳಿಂದ ಪ್ರೇರಿತವಾಗಿದೆ. ಶಕ್ತಿಯಿಲ್ಲದ ಕಾರಣ ಇವನು ಒಗ್ಗಟ್ಟಾಗುತ್ತಿಲ್ಲ, ಇರುವ ಶಕ್ತಿ ಮಿತಿಯಿಲ್ಲದೆ ಬೆಳೆಯಲಿ ಎಂದು ಒಗ್ಗಟ್ಟಾಗುತ್ತಿದ್ದಾನೆ, ತನ್ನ ಚೌಕಾಸಿಯಿಲ್ಲದ ಕನಸುಗಳ್ನ ನನಸಾಗಿಸಕ್ಕಾಗಿ ಒಗ್ಗಟ್ಟಾಗುತ್ತಿದ್ದಾನೆ.
ಇವನು ನಿಜದಿಂದ ದೂರ ಹೋಗಿಲ್ಲ, ಬರೀ ಕನಸುಗಾರನಲ್ಲ
ಇಷ್ಟೆಲ್ಲ ಕನಸು ಕಂಡರೂ ಇವನು ನಿಜದಿಂದ ದೂರ ಹೋಗಿಲ್ಲ. ಇವತ್ತು ಮತ್ತು ನಾಳೆ ಎರಡನ್ನೂ ಅರ್ಥ ಮಾಡಿಕೊಂಡಿದ್ದಾನೆ. ಇವತ್ತು ಏನಿದೆ, ನಾಳೆ ಏನಾಗಬೇಕು ಎನ್ನುವುದು ಅವನಿಗೆ ಗೊತ್ತಿದೆ. ಇವತ್ತಿನ ಪರಿಸ್ಥಿತಿ ರಾತ್ರೋ ರಾತ್ರಿ ಬದಲಾಗಲ್ಲ, ಸಾಕಷ್ಟು ಸಮಯ ಬೇಕು ಅನ್ನೋದು ಇವನಿಗೆ ಗೊತ್ತಿದೆ. ಆಡಳಿತದಲ್ಲಿ ಇವತ್ತು ಕನ್ನಡದ ಸ್ಥಾನ ಏನು, ಶಿಕ್ಷಣದಲ್ಲಿ ಏನು ಕತೆ, ಉದ್ಯೋಗದಲ್ಲಿ ಏನು ಕತೆ, ಕನ್ನಡಿಗನ ಇವತ್ತಿನ ಸಮಸ್ಯೆಗಳೇನು, ಕರ್ನಾಟಕ ಎದುರಿಸುತ್ತಾ ಇರೋ ತೊಂದರೆಗಳೇನು - ಅಂತೆಲ್ಲಾ ಇವನಿಗೆ ಗೊತ್ತಿದೆ. ಇವೆಲ್ಲ ಗೊತ್ತಿದ್ದರೂ ಇವನು ತನ್ನ ಕನಸುಗಳ್ನ ನನಸಾಗಿಸೋ ಕೆಲಸ ಕೈಬಿಟ್ಟಿಲ್ಲ, ಇವನ ಎದೆಗುಂದಿಲ್ಲ. ನಿಧಾನವಾಗಿ ಒಗ್ಗಟ್ಟಿಂದ ತನ್ನ ಕನಸನ್ನು ನನಸಾಗಿಸ್ತಾ ಇದಾನೆ. ಬಹಳ ವೃತ್ತಿಪರ ರೀತಿಯಲ್ಲಿ ಕನ್ನಡಕ್ಕಾಗಿ ಕೆಲಸ ಮಾಡ್ತಿದಾನೆ. ಈತ ಬರೀ ಕನಸುಗಾರನಲ್ಲ. ಆ ಕನಸನ್ನು ನನಸಾಗಿಸೋದಕ್ಕೆ ಹಗಲು-ಇರುಳು ಕೆಲಸ ಮಾಡ್ತಿದಾನೆ.
ಇಂಥಾ ಒಬ್ಬ ಕನ್ನಡಿಗ ಹುಟ್ಟಿದಾನೆ. ಮನೆಮನೆಯಲ್ಲೂ ಹುಟ್ಟಿದಾನೆ ಗುರು! ಅಂದಹಾಗೆ ನವೆಂಬರ್ ಒಂದಕ್ಕೆ ಇವನೂ ಕನ್ನಡದ ಬಾವುಟ ಹಾರಿಸದೆ ಇರಲ್ಲ!