ದಿಲ್ಲಿ ಗುಲಾಮಗಿರಿ: ಕಾಂಗ್ರೆಸ್ಸಿನದ್ದಾಯ್ತು, ಇನ್ನು ಬಿಜೆಪಿ ಸರದಿ!

ಬೆಂಗಳೂರಿನಲ್ಲಿ, ಬಡವರಿಗಾಗಿ ಹೊಸದಾದ ಸಾರಿಗೆ ಯೋಜನೆಯೊಂದನ್ನು, ತಮ್ಮ ಪಕ್ಷ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ್ದಕ್ಕಾಗಿ, ಶುರು ಮಾಡಿರೋ ಬಿ.ಜೆ.ಪಿಯೋರು ಅದಕ್ಕೆ ಅಟಲ್ ಸಾರಿಗೆ ಅಂತಾ ಹೆಸರಿಟ್ಟು ತಮ್ಮ ಸ್ವಾಭಿಮಾನ ಬರಡಾಗಿರೋದನ್ನು ಮತ್ತೊಮ್ಮೆ ಬಯಲು ಮಾಡಿಕೊಂಡಿದ್ದಾರೆ ಗುರು!

ಕಾಂಗ್ರೆಸ್ ಜೊತೆ ಇದ್ರಲ್ಲೂ ಪೈಪೋಟಿ!

ಒಂದು ಪ್ರದೇಶದ ಹೆಸರು ಆ ಪ್ರದೇಶದ ಸೊಗಡು, ನುಡಿ, ಸ್ವಾಭಿಮಾನ, ಇತಿಹಾಸಪ್ರಜ್ಞೆ, ಸಂಸ್ಕೃತಿಗಳನ್ನು ತೋರಿಸುತ್ತೆ. ಆದ್ರೆ ನಮ್ಮ ಕನ್ನಡನಾಡಿನಲ್ಲಿ ಹಿಂದಿನಿಂದಲೂ ಹೊಸದಾಗಿ ಒಂದು ಯೋಜನೆ ಶುರು ಮಾಡುದ್ರೆ ಅದಕ್ಕೆ ದಿಲ್ಲಿದೊರೆಗಳ ಹೆಸರನ್ನೇ ಇಡೋದು ಶೋಕಿಯಾಗಿಬಿಟ್ಟಿದೆ. ಹಾಗಾಗಿ ನಮ್ಮಲ್ಲಿ ಮಹಾತ್ಮಗಾಂಧಿ ರಸ್ತೆ, ಗಾಂಧಿನಗರಗಳಿಗೇನು ಕೊರತೆ ಇಲ್ಲ. ಹಾಗೇ ಕಾಂಗ್ರೆಸ್ಸಿನ ನಾಯಕರುಗಳ ಹೆಸರನ್ನೆಲ್ಲಾ ನಮ್ಮೂರ ಕೆರೆ, ಬೀದಿ, ಬಡಾವಣೆಗಳು, ಶಾಲೆಗಳು, ಅಣೆಕಟ್ಟೆಗಳು ಅಂಟಿಸಿಕೊಂಡುಕೂತಿವೆ. ಸುಮ್ಮನೆ ಈ ಪಟ್ಟಿ ನೋಡಿ : ಶಾಸ್ತ್ರೀನಗರ, ಜಯಪ್ರಕಾಶನಗರ, ರವೀಂದ್ರನಾಥ್ ಟ್ಯಾಗೂರ್ ನಗರ, ಸಂಜಯನಗರ, ಇಂದಿರಾನಗರ, ಗಾಂಧಿನಗರ, ರಾಜಾಜಿನಗರ, ಬಾಪೂಜಿನಗರ, ಭಗತ್ ಸಿಂಗ್ ನಗರ, ಆಜಾದ್ ನಗರ... ಹೀಗೆ ಸಾಗುತ್ತೆ ಪಟ್ಟಿ. ಆಲಮಟ್ಟಿ ಜಲಾಶಯಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿಗಳ ಹೆಸರು... ಇದೇನು ಗುರು? ಇದುವರೆಗೂ ಕಾಂಗ್ರೆಸ್ಸಿನೋರು ಮಾಡಿದ್ದನ್ನೇ ಈಗ ಬಿಜೆಪಿಯೋರು ಮಾಡಕ್ ಹೊಂಟವ್ರಲ್ಲಾ? ಆಗೆಲ್ಲಾ ಕಾಂಗ್ರೆಸ್ಸಿನೋರು ಜವಾಹರ್ ರೋಜಗಾರ್ ಯೋಜನೆ, ರಾಜೀವ್ ಗಾಂಧಿ ಖೇಲ್ ರತ್ನ ಅಂತೆಲ್ಲಾ ಅಂದ್ರೆ ಇದು ಗುಲಾಮಗಿರಿ ಅಂತಿದ್ದೋರು ಈಗ ಅವರು ಮಾಡಿದ್ದಾರೆ, ಅದ್ಕೆ ನಾವು ಮಾಡ್ತೀವಿ ಅನ್ನೋ ರೀತಿ ನಡ್ಕೊಳ್ಳೋ ಮಟ್ಟಕ್ ಇಳ್ದಿದಾರಲ್ಲಾ ಗುರು! ಅಲ್ಲಾ ಬೆಂಗಳೂರಿನ ಬಸ್ಸಿಗೂ ಅಟಲ್ ಬಿಹಾರಿ ವಾಜಿಪೇಯಿಯವರ ಹೆಸರು ಯಾಕೆ ಇಡ್ಬೇಕಾಗಿತ್ತು? ಇವರು ಕೊಡ್ತಿರೋ ಸಂದೇಶಾನಾದ್ರೂ ಏನು? ದಿಲ್ಲಿ ಗುಲಾಮಗಿರಿ ವಿಷ್ಯದಲ್ಲಿ ನಾವು ಕಾಂಗ್ರೆಸ್ಸಿನೋರಿಗಿಂತೇನು ಕಮ್ಮಿ ಇಲ್ಲಾ ಅಂತಾನಾ?
ಊಟವಾದ ಉಪ್ಪಿನಕಾಯಿ!
ಹಿಂದೊಮ್ಮೆ ಬಿಜೆಪಿಯೋರೆ ದಿಲ್ಲೀಲಿ ಕೂತಿದ್ದಾಗ ಹಳ್ಳಿಗಳಿಗೆ ಕೊಡಮಾಡಿದ ರಸ್ತೆ ಯೋಜನೇಗೆ "ಅಟಲ್ ಗ್ರಾಮ್ ಸಡಕ್ ಯೋಜನಾ" ಅನ್ನೋ ಹೆಸರಿಡಕ್ ಹೋಗಿದ್ದಾಗ, ಅಂದಿನ ಪ್ರಧಾನಿಗಳಾಗಿದ್ದ ವಾಜಪೇಯಿ ಅವ್ರೇ "ವ್ಯಕ್ತಿ ಹೆಸರು ಬೇಡಾ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನಾ ಅಂದ್ರೆ ಸಾಕು" ಅಂದಿದ್ರಂತೆ! ಪಾಪಾ, ಈಗಿನ ಕರ್ನಾಟಕದ ಬಿಜೇಪಿಯೋರ ಬಾಲಬಡುಕತನಾ ನೋಡುದ್ರೆ ವಾಜಪೇಯಿಯೋರೇ ಎಷ್ಟು ನೊಂದ್ಕೋತಾರೋ ಏನೋ? ಒಂದು ವರ್ಷ ಮುಗ್ದಿದ್ದಕ್ಕೇ ಹಿಂಗಾದ್ರೆ, ಇನ್ನು ನಾಲ್ಕು ವರ್ಷ ಮುಗ್ಯೋ ಅಷ್ಟ್ರಲ್ಲಿ ಮುಂದೆ ನಮ್ಮ ಹಳ್ಳಿದಾರಿ, ಕೆರೆಏರಿ, ದೊಡ್ಡಮೋರಿ... ಇಲ್ಲೆಲ್ಲಾ ಯಾರ್ಯಾರ ಹೆಸರು ನೋಡೋ ಭಾಗ್ಯ ಕನ್ನಡದೋರುದ್ ಆಗುತ್ತೋ ಗುರೂ? ಅಷ್ಟಕ್ಕೂ ರಾಷ್ಟ್ರಮಟ್ಟದ ನಾಯಕರ ಹೆಸರೇ ಬೇಕಂದ್ರೆ ಕರ್ನಾಟಕದಿಂದ ಹೋಗಿ ಅಲ್ಲಿ ಮಿಂಚಿದ ನಾಯಕರ ಹೆಸರಾಗಬೇಕಲ್ವಾ? ಇಷ್ಟಕ್ಕೂ ನಮ್ಮ ನಾಡಿಗರಲ್ಲದ ರಾಷ್ಟ್ರನಾಯಕರ ಹೆಸರನ್ನೇ ಇಡೋದಾದ್ರೆ ಅದನ್ನು ಒಂದು ಮಿತಿಯಲ್ಲಿ ಇಡೋದು ಬಿಟ್ಟು ಹಿಂಗೆ ಇರೋ ಬರೋದಕ್ಕೆಲ್ಲಾ ದಿಲ್ಲಿ ದೊರೆಗಳ ಹೆಸರನ್ನೇ ಇಡೋದು "ತನ್ನ ಬಗ್ಗೆ ತನಗೇ ಬೆಲೆಯಿಲ್ಲದ" ಮನಸ್ಥಿತಿಯನ್ನು ಎತ್ತಿ ತೋರ್ಸಲ್ವಾ ಗುರು! ಊಟಕ್ಕೆ ಉಪ್ಪಿನಕಾಯಿ ಇರಬೇಕೇ ಹೊರತು ಉಪ್ಪಿನಕಾಯಿಯೇ ಊಟ ಆದ್ರೆ ಹೆಂಗೆ ಗುರು?

ಮರಾಠಿ ಮಂದಿ ಇಟ್ಟಿರೋ ಛಲೋ ಹೆಜ್ಜಿ : ಶಾಲ್ಯಾಗ ಮರಾಠಿ ಕಡ್ಡಾಯ!


ಮಹಾರಾಷ್ಟ್ರದಾಗಿನ್ ಯಾವ್ದಾನಾ ಶಾಲೀ ಇರಲಿ, ಅದರಾಗ ಒಂದರಿಂದ ನಾಕನೇ ಇಯತ್ತೆ ಮಟ ಮರಾಠಿ ಕಡ್ಡಾಯ ಮಾಡಿ ಅಲ್ಲಿನ ಸರ್ಕಾರದಿಂದ ಒಂದ್ ಆದೇಶಾ ಹೊಂಟೇತ್ರಿ ಅನ್ನೋ ಸುದ್ದಿ ಬೆಂಗಳೂರಾಗಿನ ಡಿ.ಎನ್.ಎ ಅನ್ನೂ ಪತ್ರಿಕಾದಾಗ 27.05.2009ರಂದು ಬಂದೈತ್ರಿ ಸರಾ! ಹೀಂಗಾ ಮಾಡು ಮುನ್ನಾ ಅಲ್ಲೊಂದು ಸಮಿತಿ ಮಾಡ್ಯಾರಂತಾ, ಅದು ಇಂಥಾ ಎಲ್ಲಾ ಶಾಲಿಗಳ ಬಗ್ಗಿ ನಿಗಾ ಇಡ್ತೈತಂತ್ರೀಪಾ!!


ಕಾಗೇರಿ ಸಾಹೇಬ್ರಾ ತುಸಾ ಧೈರ್ಯ ಮಾಡ್ರೀಪಾ...

ನಮ್ಮ ನಾಡಿನ ಕಲಿಕಾ ಮಂತ್ರಿಗೊಳಾದ ವಿಶ್ವೇಶ್ವರ ಹೆಗ್ಡೆ ಕಾಗೇರಿಯೋರು ಮಾರಾಷ್ಟ್ರಾ ಸರ್ಕಾರದ ಕಡಿ ನೋಡಾರ ಹೀಂಗಾ ನಮ್ ಕರ್ನಾಟಕದಾಗಿನ ಶಾಲಿಗಳೊಳಗ ಕನ್ನಡ ಕಲ್ಸಾಕ ಬೇಕು ಅಂತ ನಮ್ಮೂರಾಗಿನ ಶಾಲಿಗಳೊಳಗ ಕನ್ನಡ ಕಲ್ಸೋಕ್ ಮುಂದಾಗ್ತಾರಾ ಅಂತ ನೋಡೋಣು. ಕಾಗೇರಿ ಸರಾ... ನಮ್ಮೂರಾಗಿನ ಶಾಲಿಗಳೊಳಗಾ ನಾವು ನಮ್ಮದಾ ನುಡಿ ಕಲುಸ್ರೀ ಅನ್ನೋ ಕಾಯ್ದಿ ಮಾಡೋ ಹಾಂಗಾ ಇಂದಿನ ವ್ಯವಸ್ಥಿ ಐತಿ ಅಂತಾ ಭಾಳ ಚಿಂತಿ ಮಾಡ್ಕೊಂತಾ ಕೂಡಬ್ಯಾಡ್ರೀ ಸಾಹೇಬ್ರಾ? ಇಕಾ, ಬರ್ರಲಾ ಹೊರಕ್ಕಾ... ಮುಂದಿನ ವಿಧಾನಸಭಾ ಅಧಿವೇಶನದಾಗಾ, ಇಂಥದ್ದಾ ಒಂದು ನಿಯಮಾ ಮಾಡ್ರಲಾ. ಇದು ನಮ್ಮೂರಾಗಿನ ಕನ್ನಡ ಮಾಧ್ಯಮವಲ್ಲದ ಶಾಲಿಗಳಗ ಅನ್ವಯಿಸ್ತದ ಅಂದ್ರ ಆ ಪಟ್ಯಾಗ ಈ ಸ್ಟೇಟು, ಸೆಂಟ್ರಲ್ಲು, ಇಂಟರ್ ನ್ಯಾಶನಲ್ಲು ಎಲ್ಲಾ ಶಾಲೀ ಬರಬೇಕದಾ ಮತ್ತಾ! ಏನರಾ ಅನ್ರೀ, ಒಟ್ನಾಗ ಈ ಮರಾಠ ಸರ್ಕಾರ ಏನೈತಿ, ಅದು ಛಲೋ ಕೆಲ್ಸಾ ಮಾಡೈತಿ, ಹಾಂಗಾ ಇಲ್ಲೂ ಆಗ್ಲಿ ಅನ್ನೋಣು ಗುರುಗಳಾ!

ಕನ್ನಡ ಚಿತ್ರದಲ್ಲಿ ದುಡ್ಡಿಲ್ಲ ಅನ್ನೋ ಮಲ್ಟಿಪ್ಲೆಕ್ಸಗಳು

ಕನ್ನಡ ಚಿತ್ರಗಳ ಪ್ರದರ್ಶನದಿಂದ ದುಡ್ಡು ಹುಟ್ಟಲ್ಲ ಆದ್ದರಿಂದ ಮಲ್ಟಿಪ್ಲೆಕ್ಸ್ ಮಾಲೀಕರು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಸಿದ್ದರಿಲ್ಲ ಅನ್ನೋ ಒಂದು ಸುದ್ದಿ ಇತ್ತೀಚಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿತ್ತು. ಜಗತ್ತಿನ ಮಲ್ಟಿಪ್ಲೆಕ್ಸ್ ಗಳ ಇತಿಹಾಸದಲ್ಲೇ ಚಿತ್ರವೊಂದು ಮಲ್ಟಿಪ್ಲೆಕ್ಸ್ ನಲ್ಲಿ ಒಂದು ವರ್ಷ ಪೂರ್ತಿ ಓಡಿದ ದಾಖಲೆ ಕೇವಲ ಕನ್ನಡ ಚಿತ್ರಕ್ಕೆ ಇದ್ರೂ ಈ ರೀತಿಯ ಹೇಳಿಕೆ ನೀಡೋ ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ ಮಾಲೀಕರ ಧೋರಣೆ ಕನ್ನಡದ ಮಾರುಕಟ್ಟೆ ಬಗ್ಗೆ ಅವರಿಗಿರೋ ತಪ್ಪು ಕಲ್ಪನೆ ತೋರಸಲ್ವಾ ಗುರು?ಇವರು ಹೇಳೊದೇ ನೋಡಿ

ಡೆಕ್ಕನ್ ಹೆರಾಲ್ಡ್ ನಲ್ಲಿ ಬಂದ ವರದಿಯಲ್ಲಿ ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್ ಮಾಲೀಕರ ಹೇಳಿಕೆಯನ್ನೇ ಗಮನಿಸಿ. ಒಬ್ಬರು ಹೇಳ್ತಾರೆ
The crowd comes here mainly for Hindi films. So screening Kannada movies won’t bring us that much of revenue.
ಇವರ ಮಾತಿನ ಅರ್ಥ ಕನ್ನಡಿಗರು ಕನ್ನಡ ಸಿನೆಮಾಗಳನ್ನು ಮಲ್ಟಿಪ್ಲೆಕ್ಸ್ ನಲ್ಲಿ ನೋಡಲ್ಲಾ ಅಂತೇನಾದ್ರೂ ಶಪಥ ಮಾಡಿದಾರಂತಾ ಗುರು? ಅಥವಾ ಕನ್ನಡಿಗರ ಬಳಿ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನೆಮಾ ನೋಡೋಷ್ಟು ಕಾಸು ಇಲ್ಲ ಅನ್ನೋದಾ ? ಕನ್ನಡ ಸಿನೆಮಾಗಳ ಪ್ರದರ್ಶನದಿಂದ ದುಡ್ಡು ಹುಟ್ಟಲ್ಲ ಅನ್ನೋದು ನಿಜ ಆದ್ರೆ ಮುಂಗಾರು ಮಳೆ, ಮಿಲನದಂತಹ ಕನ್ನಡ ಸಿನೆಮಾಗಳು ಅದೇಗೆ ಮಲ್ಟಿಪ್ಲೆಕ್ಸ್ ಗಳಲ್ಲೇ ಭರ್ತಿ ಒಂದು ವರ್ಷದ ಪ್ರದರ್ಶನ ಕಂಡಿದ್ದು ? ಜೋಗಿ, ಅಮೃತಧಾರೆ, ಆ ದಿನಗಳು, ಗಾಳಿಪಟ ಇನ್ನೂ ಮುಂತಾದ ಸಿನೆಮಾಗಳು 100ಕ್ಕೂ ಹೆಚ್ಚಿನ ದಿನದ ಪ್ರದರ್ಶನ ಕಂಡಿದ್ದು? ಕನ್ನಡ ಚಿತ್ರಗಳಿಂದ ಲಾಭ ಆಗದೇ, ಇವರಿಗೆಲ್ಲ ಕನ್ನಡದ ಮೇಲೆ ಅಭಿಮಾನ ಉಕ್ಕುಕ್ಕಿ ಹರಿದು ಇವರೆಲ್ಲ ಈ ಚಿತ್ರಗಳನ್ನು ತಿಂಗಳುಗಟ್ಟಲೇ ಪ್ರದರ್ಶನ ಮಾಡಿದ್ರು ಅಂತೇನಾದ್ರೂ ಅನ್ಸುತ್ತಾ ಗುರು?

ಇನ್ನೊಬ್ರು ಅಂತಾರೆ:
We did think of screening old Rajkumar movies, but then again we were not too sure how the response will be.
ಕನ್ನಡ ಸಿನೆಮಾ ಪ್ರದರ್ಶನಾನೇ ಮಾಡದೇ ಪ್ರತಿಕ್ರಿಯೆ ಚೆನ್ನಾಗಿರಲ್ಲ ಅಂತಾ ಹೆಂಗೆ ಊಹಿಸಿಕೊಂಡ್ರು ಗುರು? ಸಿನೆಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೊಡೊದು ಸಿನೆಮಾ ನೋಡೋ ಪ್ರೇಕ್ಷಕರ ಕೈಯಲ್ಲಿ ತಾನೇ ಇರೋದು?

ಮಾರುಕಟ್ಟೆ ಗೆಲ್ಲೋಕೆ ಒಳ್ಳೆಯ ಪ್ರಚಾರ ತಂತ್ರ ಬೇಕು
ಇದೇ ವರದೀಲಿ ಹೆಚ್ಚಿನ ಕನ್ನಡ ನಿರ್ಮಾಪಕರಿಗೆ ತಮ್ಮ ಚಿತ್ರ ಪ್ರದರ್ಶಿಸಲು ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಸಿಕ್ತಾ ಇಲ್ಲ ಅನ್ನೋದನ್ನು ವಿವರಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಚಿತ್ರಗಳಿಗೆ ಯಾವತ್ತು ಸಿದ್ಧವಾಗಿ ಸಿಗೋ ಈ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರಗಳು ಕನ್ನಡ ಚಿತ್ರ ನಿರ್ಮಾಪಕರಿಗೆ ಮಾತ್ರ ಸಿಕ್ಕಲ್ಲ ಅನ್ನೋದು ಎಂತಾ ವಿಚಿತ್ರಾ ಅಲ್ವಾ ಗುರು? ಒಳ್ಳೆಯ ಅದೆಷ್ಟೋ ಕನ್ನಡ ಸಿನೆಮಾಗಳು ಮಾರುಕಟ್ಟೆಯಲ್ಲಿ ಗಲ್ಲಾಪೆಟ್ಟಿಗೆ ಸೂರೆ ಹೋಡಿತಾ ಇದ್ರು ಈ ಮಲ್ಟಿಪ್ಲೆಕ್ಸ್ ಗಳಲ್ಲಿ ಆ ಸಿನೆಮಾಗಳು ಯಾಕೆ ಪ್ರದರ್ಶನವಾಗಲ್ಲ? ಕೆಲವು ಮಲ್ಟಿಪ್ಲೆಕ್ಸ್ ಗಳು ತಮಿಳು, ಹಿಂದಿ, ಇಂಗ್ಲಿಷ್ ಚಿತ್ರಗಳಿಗೆ ವಿಶೇಷ ಪ್ರಿಮಿಯರ್ ಪ್ರದರ್ಶನವಿಟ್ಟುಕೊಳ್ಳುತ್ತೆ, ತಮಿಳು ಸಂಗೀತ ಕಲಾವಿದರನ್ನು ಕರೆಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತೆ, ಆದ್ರೆ ನಮ್ಮ ರಾಜ್ಯದ ಯಾವುದೇ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಮಾಡಿದ್ದು ನೀವೆಂದಾದರೂ ನೋಡಿದಿರಾ? ಈ ರೀತಿಯ ಪ್ರಚಾರ ತಂತ್ರ ಬಳಸಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮುಂದಾದ್ರೆ ಒಳ್ಳೆಯ ಕನ್ನಡ ಚಿತ್ರಗಳು ಅದ್ಯಾಕೆ ಓಡಲ್ಲ ಗುರು ?

ಒಳ್ಳೆ ಕನ್ನಡ ಸಿನೆಮಾಕ್ಕೆ ಅವಕಾಶ ಕೊಟ್ಟು, ಒಳ್ಳೆ ರೀತಿಲಿ ಪ್ರಚಾರ ಮಾಡಿದ್ರೆ ಕನ್ನಡ ಸಿನೆಮಾಗಳಿಂದ ಇನ್ನಷ್ಟು ದುಡ್ಡು ಮಾಡಬಹುದು ಅನ್ನೋದನ್ನ ಎಷ್ಟು ಬೇಗ ಇವರುಗಳು ಅರ್ಥ ಮಾಡ್ಕೋತಾರೋ ಅಷ್ಟು ಅವರಿಗೆ ಒಳ್ಳೇದು. ಹಾಗೇ, ಇವರ ಇವತ್ತಿನ ಧೋರಣೆಯನ್ನು ಪ್ರಶ್ನಿಸಬೇಕಾದವರು ಮತ್ತು ಪ್ರಶ್ನಿಸಬಹುದಾದವರು ಕನ್ನಡದ ಗ್ರಾಹಕರು ಮಾತ್ರ. ಗ್ರಾಹಕರಾಗಿ ನಾವೆಲ್ಲ ಈ ಚಿತ್ರಮಂದಿರಗಳ ಕನ್ನಡ ಚಿತ್ರ ವಿರೋಧಿ ಧೋರಣೆ ಪ್ರಶ್ನಿಸಿ, ಕನ್ನಡ ಚಿತ್ರಗಳ ಹೆಚ್ಚೆಚ್ಚು ಪ್ರದರ್ಶನಕ್ಕೆ ಆಗ್ರಹಿಸೋಣ. ಹಾಗೇ, ಒಳ್ಳೆಯ ಕನ್ನಡ ಚಿತ್ರಗಳು ಅಲ್ಲಿ ಬಂದಾಗ ನೋಡಿ ಪ್ರೋತ್ಸಾಹಿಸೋಣ. ಏನಂತೀಯಾ ಗುರು?

ಕೇಂದ್ರದಲ್ಲಿ ಮಂತ್ರಿಗಳಾಗೋ ಈ ಇಬ್ಬರು ಕನ್ನಡಿಗರು!

ಈ ಬಾರಿಯ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿರೋದು ಸರಿಯಷ್ಟೆ. ಈ ಸಾರಿ ಭಾಳ ವರ್ಷಗಳ ಮೇಲೆ ಸಂಪುಟ ದರ್ಜೆಯ ಸಚಿವರಾಗಿ ಕನ್ನಡಿಗರಾದ ಶ್ರೀ ಎಸ್.ಎಂ.ಕೃಷ್ಣ ಮತ್ತು ಶ್ರೀ. ವೀರಪ್ಪ ಮೊಯ್ಲಿಯವರುಗಳು ಆಯ್ಕೆಯಾಗಿರೋ ಸುದ್ದಿ ದಿನಪತ್ರಿಕೆಗಳಲ್ಲಿ ರಾರಾಜಿಸ್ತಾ ಇದೆ ಗುರು!


ಕರ್ನಾಟಕದ ಹಿರಿಯ ರಾಜಕಾರಣಿಗಳು


ಈ ಇಬ್ಬರು ಕಾಂಗ್ರೆಸ್ ಮುಖಂಡರಿಗೆ ನಮ್ಮ ಅಭಿನಂದನೆಗಳನ್ನು ಮೊದಲಾಗಿ ಸಲ್ಲಿಸುತ್ತೇವೆ. ಈ ಇಬ್ರೂ ಮೂರು ನಾಲ್ಕು ದಶಕಗಳಿಂದ ರಾಜಕಾರಣ ಮಾಡ್ಕೊಂಡು ಬಂದಿದ್ದಾರೆ. ಮಂತ್ರಿಗಳಾಗಿ ಈ ಬಾರಿ ನೇಮಕವಾಗೋ ಮುನ್ನ ಅನೇಕ ರಾಜಕೀಯ ಸ್ಥಾನಮಾನಗಳ ಅನುಭವ ಇವರಿಬ್ಬರಿಗೆ ಇದೆ. ಇಬ್ಬರೂ ಕರ್ನಾಟಕದ ರಾಜ್ಯ ರಾಜಕಾರಣದ ಉನ್ನತ ಪೀಠವಾದ ಮುಖ್ಯಮಂತ್ರಿ ಸ್ಥಾನದಲ್ಲಿ ದುಡಿದು ಅನುಭವ ಇರೋರೇ ಆಗಿದ್ದಾರೆ. ಎಸ್.ಎಂ ಕೃಷ್ಣರವರು ಮುಖ್ಯಮಂತ್ರಿಯಾಗಿದ್ದಾಗ ಅತಿಕ್ಲಿಷ್ಟಕರವಾದ ಡಾ. ರಾಜ್ ಅಪಹರಣದಂತಹ ಸನ್ನಿವೇಶಾನ ಎದುರಿಸಿದ್ದವರು.


ಇನ್ನು ವೀರಪ್ಪ ಮೊಯ್ಲಿಯವರು ಕೂಡಾ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ತೀವ್ರ ಹೋರಾಟ ನಡೆಸೇ ಉನ್ನತ ಶಿಕ್ಷಣಕ್ಕಾಗೆ ನಡೆಸೋ ಸಿ.ಇ.ಟಿಯನ್ನು ಜಾರಿಗೆ ತಂದಿದ್ದವರು. ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಕೂಡಾ ಕಾರ್ಯನಿರ್ವಹಿಸಿರೋ ಅನುಭವಾ ಇರೋರು ಇವರು. ಈ ಇಬ್ಬರ ಸೇರ್ಪಡೆಯಿಂದ ಖಂಡಿತವಾಗಿ ಕೇಂದ್ರಸರ್ಕಾರದ ಬಲ ಹೆಚ್ಚಿರೋದು ಸುಳ್ಳಲ್ಲ.

ಈ ಬಾರಿ ಎರಡು ಸಚಿವ ಸ್ಥಾನ ಯಾಕೆ?

ಹೇಳಿ ಕೇಳಿ ಕರ್ನಾಟಕದಲ್ಲಿ ಕಾಂಗ್ರೆಸ್ಸು ಗೆದ್ದಿರೋದೇ ಆರು ಸ್ಥಾನಗಳನ್ನು. ಅಂಥಾದ್ರಲ್ಲಿ ಇಬ್ಬಿಬ್ಬರಿಗೆ ಹೆಂಗಪ್ಪಾ ಸಂಪುಟ ದರ್ಜೆ ಸ್ಥಾನಾ ಸಿಕ್ತು. ಹಾಗ್ ನೋಡುದ್ರೆ ಕಳೆದ್ ಸಾರ್ತಿಗಿಂತ ಈ ಸಲ ಸೀಟು ಗೆದ್ದಿರೋದು ಕಮ್ಮೀನೆ. ಇದಕ್ಕೆ ಎರಡು ಕಾರಣ ಇರಬೌದು ಗುರು! ಮೊದಲನೇದು ಈ ಬಾರಿ ಕಾಂಗ್ರೆಸ್ಸು ಭಾರಿ ಮುಂದಾಲೋಚನೆಯಿಂದಾಗಿ ಒಳ್ಳೊಳ್ಳೆ ಅನುಭವ ಇರೋ ನಾಯಕರುಗಳನ್ನೇ ಆರಿಸಿ ಮಂತ್ರಿ ಮಾಡಿದಾರೆ. ಆ ಮೂಲಕ ಒಳ್ಳೇ ಆಡಳಿತ ಕೊಟ್ಟು ಮುಂದಿನ ದಿನಗಳಲ್ಲಿ ಒಳ್ಳೇ ಹೆಸರು ಮಾಡಿ, ಭಾವಿ ಯುವ ನಾಯಕನ ಪ್ರವೇಶಕ್ಕೆ ಒಳ್ಳೇ ವೇದಿಕೆ/ ಪೀಠಿಕೆ ಹಾಕ್ಕೊಡೊ ಉದ್ದೇಶ. ಅಂದ್ರೆ ಕನ್ನಡಿಗ ಕಾಂಗ್ರೆಸ್ಸಿಗರಲ್ಲಿ ಆ ಮಟ್ಟದ ಮುತ್ಸದ್ದಿಗಳು ಇವ್ರು ಅಂತಾ ಆಯ್ತು. ಇದಕ್ಕಿಂತ ಮುಖ್ಯವಾದ ಇನ್ನೊಂದು ಕಾರಣ ಅಂದ್ರೆ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಆಗಿರೋ ಕನ್ನಡತನದ ಜಾಗೃತಿ. ಕಾವೇರಿ ಐತೀರ್ಪು, ಶಾಸ್ತ್ರೀಯ ಭಾಷಾ ಸ್ಥಾನಮಾನ ಇತ್ಯಾದಿಗಳೆದುರಾದಾಗೆಲ್ಲಾ ಕನ್ನಡಿಗರು ಸಿಡಿದು ನಿಂತು ಪ್ರತಿಭಟನೆ ಮಾಡಿ ದಿಲ್ಲೀ ಹೊಸ್ತಿಲು ಮೆಟ್ಟಿ ಬಂದಿದ್ದೂ ಒಂದು ದೊಡ್ಡ ಕಾರಣ. ಇದು ಭಾರತ ಒಕ್ಕೂಟದಲ್ಲಿ ನಿರಂತರವಾಗಿ ಕನ್ನಡದೋರಿಗೆ ಅನ್ಯಾಯ ಮಾಡ್ತಾ ಇರೋದ್ನ ನಾವಿನ್ನು ಸಹಿಸಲ್ಲ ಅನ್ನೋ ಸಂದೇಶ ಕೊಟ್ಟಿರೋದೂ ಕಾರಣವಾಗಿದೆ. ಹೌದಲ್ವಾ ಗುರು?


ಸಮಾನ ಗೌರವದ ಒಕ್ಕೂಟ ವ್ಯವಸ್ಥೆ ಕಟ್ಟಬಲ್ಲ ಪಕ್ಷಗಳೇ ಇಂದಿನ ಅಗತ್ಯ!

ಲೋಕಸಭಾ ಚುನಾವಣೇಲಿ ಈ ಬಾರಿ ಕಾಂಗ್ರೆಸ್ಸಿನ ’ಕೈ’ ಮೇಲಾಗಿದೆ. ಕಾಂಗ್ರೆಸ್ ಜೊತೆಗೆ ಅನೇಕ ಪ್ರಾದೇಶಿಕ ಪಕ್ಷಗಳೂ ಮೇಲುಗೈ ಸಾಧಿಸಿವೆ. ಈ ಹೊತ್ನಲ್ಲೇ ಲೋಕಸಭಾ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಷಯಗಳಿಗೆ ಮಹತ್ವ ಕೊಟ್ಟು, ರಾಷ್ಟ್ರೀಯ ದೃಷ್ಟಿಕೋನ ಇಟ್ಕೊಂಡು ಇಡೀ ಭಾರತಾನ ಮುನ್ನಡ್ಸೋ ಶಕ್ತಿ ಪ್ರಾದೇಶಿಕ ಪಕ್ಷಗಳಿಗೆ ಇರಲ್ಲ, ಅದಕ್ಕೆ ರಾಷ್ಟ್ರೀಯ ಪಕ್ಷಗಳೇ ಲಾಯಕ್ಕು ಅಂತ ನಮ್ಮಲ್ಲಿ ತುಂಬಾ ಜನಕ್ಕೆ ಅನ್ಸಿರೋದ್ನ ನಾವು ನೋಡ್ತಿದೀವಿ. ಹಾಗಾದ್ರೆ ಕೇಂದ್ರಸರ್ಕಾರ ನಡ್ಸೋಕೆ ಪ್ರಾದೇಶಿಕ ಪಕ್ಷಗಳಿಗೆ ಅಸಾಧ್ಯವಾ? ನೋಡ್ಮಾ ಬಾ ಗುರು!

ಇಂದಿನ ರಾಜಕೀಯ ಪಕ್ಷಗಳು

ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನಕ್ಕೆ ಒಲವು ಯಾಕಪ್ಪಾ ಅಂದ್ರೆ ಇವುಕ್ಕೆ ಇಡೀ ಭಾರತದ ಹಿತದ ಬಗ್ಗೆ ಕಾಳಜಿ, ಇಡೀ ಭಾರತಾನ ಉದ್ಧಾರ ಮಾಡೋ ದೃಷ್ಟಿಕೋನ ಇರುತ್ತೆ. ಒಂದೇ ಪಕ್ಷ ರಾಜ್ಯ-ಕೇಂದ್ರಗಳಲ್ಲಿರೋದು ಆ ರಾಜ್ಯಕ್ಕೆ ಒಳ್ಳೇದು ಮಾಡುತ್ತೆ. ಅಧಿಕಾರಕ್ಕಾಗಿ ಕಚ್ಚಾಡೋ ಚಿಕ್ಕ ಪುಟ್ಟ ಪಕ್ಷಗಳ ಗುಂಪು ಅದಾಗಿರಲ್ಲ ಅನ್ನೋದು ಒಂದೆಡೆಯಾದರೆ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳು ಅಂತರ ರಾಜ್ಯ ಸಮಸ್ಯೆಗಳನ್ನು ಬಗೆಹರಿಸಲು ಅಶಕ್ತ. ಅವುಗಳಲ್ಲಿ ಹೈಕಮಾಂಡ್ ಸಂಸ್ಕೃತಿ ಇದೆ ಅನ್ನೋದು ಈ ಪಕ್ಷಗಳ ಮಿತಿಯಾಗಿದೆ. ಇನ್ನೊಂದೆಡೆ ಪ್ರಾದೇಶಿಕ ಪಕ್ಷಗಳ ಹೆಚ್ಚುಗಾರಿಕೆಯೆಂದರೆ ಇವು ರಾಜ್ಯದ ಹಿತಾಸಕ್ತಿ ಬಗ್ಗೆ ಗಟ್ಟಿ ನಿಲುವು ತೆಗೆದುಕೊಳ್ತವೆ, ನಾಡಿನ ಜನಗಳ ಹಕ್ಕುಗಳಿಗಾಗಿ ದನಿ ಎತ್ತುತ್ತವೆ, ಜೊತೆಗೇ ಹೈಕಮಾಂಡಿನ ಬಾಧೆ ಇವುಕ್ಕಿಲ್ಲ ಅನ್ನೋದಾಗಿದೆ. ಆದರೆ ಇಂದಿನ ದಿನ ಬಹಳಷ್ಟು ಪ್ರಾದೇಶಿಕ ಪಕ್ಷಗಳು ಸ್ವಾರ್ಥ ನಾಯಕತ್ವದಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡಿವೆ. ಅಧಿಕಾರಕ್ಕಾಗಿ ಸಮಯಸಾಧಕತನ ತೋರುಸ್ತಿವೆ ಅನ್ನಿಸುವ ಪಕ್ಷಗಳನ್ನು, ಅವುಗಳ ನಾಯಕರನ್ನೂ ಕಂಡಾಗ ಜನಕ್ಕೆ ಪ್ರಾದೇಶಿಕ ಪಕ್ಷ ಅನ್ನೋದು ಬ್ಲಾಕ್ ಮೇಲ್ ತಂತ್ರಗಾರಿಕೇಲಿ ತೊಡಗಿವೆ ಅನ್ನಿಸದೇ ಇರದು. ಹಾಗಾದರೆ ಭಾರತಕ್ಕೆ ಅಗತ್ಯವಾಗಿರೋದು ಎಂತಹ ಪಕ್ಷಗಳು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋದು ಹ್ಯಾಗೆ?

ಸರಿಯಾದ ಒಕ್ಕೂಟದಲ್ಲಿ...


ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡುವ, ಕನ್ನಡಿಗರ ಏಳಿಗೆಯ ಕನಸು ಕಾಣುವ, ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ಪ್ರಾದೇಶಿಕ ಪಕ್ಷವೇ ಕರ್ನಾಟಕದ ಪಾಲಿಗೆ ಸರಿಯಾದ ರಾಜಕೀಯ ಪಕ್ಷ. ಇದೇ ನಮ್ಮ ನಾಡನ್ನು ದಿಲ್ಲಿಯಲ್ಲಿ ಯೋಗ್ಯವಾಗಿ ಪ್ರತಿನಿಧಿಸಬಲ್ಲ ಪಕ್ಷ. ಆದರೆ ಇಂತಹ ಪಕ್ಷಕ್ಕೆ ಇಡೀ ಭಾರತಾನ ಮುನ್ನಡ್ಸೋ ಸಾಮರ್ಥ್ಯ ಇರಲು ಸಾಧ್ಯವೇ? ಹಣಕಾಸು ನೀತಿ ಬಗ್ಗೆ, ರಕ್ಷಣೆಯ ಬಗ್ಗೆ, ಅಂತರರಾಷ್ಟ್ರೀಯ ಸಂಬಂಧಗಳ ಬಗ್ಗೆ ಇವುಗಳು ಇಡೀ ಭಾರತವನ್ನು ಒಳಗೊಳ್ಳುವಂಥಾ ದಾರಿತೋರುಕ ಸೂತ್ರ ನೀಡಲು/ ಹೊಂದಿರಲು ಸಾಧ್ಯವೇ? ಅನ್ನೋದೆ ಎಲ್ಲರ ಮುಂದಿರೋ ಪ್ರಶ್ನೆ. ಇದು ಸಾಧ್ಯ ಮತ್ತು ಇಂದು ಇವುಗಳಿಂದಲೇ ಮತ್ತಷ್ಟು ಪರಿಣಾಮಕಾರಿ ಪರಿಹಾರ/ ನೀತಿ ನಿಲುವು ಸಾಧ್ಯ ಅನ್ನೋದೇ ಈ ಪ್ರಶ್ನೆಗಳಿಗೆ ಉತ್ತರವಾಗಿದೆ. ತಾನು ಪ್ರತಿನಿಧಿಸೋ ನೆಲದ ಬಗ್ಗೆ ಸಹಜ ಕಾಳಜಿ ಹೊಂದಿರೋ ಅಂತಹ ಪಕ್ಷಗಳು ಪ್ರತಿ ರಾಜ್ಯದಲ್ಲೂ ಹುಟ್ಟಿಕೊಳ್ಳಬೇಕು. ಹಾಗಾದ್ರೆ ಅವು ಹೊಡೆದಾಡಿ ಸಾಯ್ತವೆ ಅಂದ್ಕೋಬೇಡಿ. ಇಂತಹ ಸನ್ನಿವೇಶದಲ್ಲಿಯೇ ಪ್ರತಿ ರಾಜ್ಯಕ್ಕೂ ಅನ್ವಯವಾಗುವಂತಹ ಸಮಾನ ಗೌರವದ ಒಂದೇ ಮಾನದಂಡದ ರೀತಿನೀತಿಗಳನ್ನು ಇವು ಒಗ್ಗೂಡಿ ರೂಪಿಸಿಕೊಳ್ಳಲೇ ಬೇಕಾಗುತ್ತದೆ. ಮತ್ತು ರೂಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ’ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಒಂದೇಪಕ್ಷ ಇರೋದು ಆ ರಾಜ್ಯಕ್ಕೆ ಒಳ್ಳೇದು, ಒಂದು ರಾಜ್ಯದ ಕೇಂದ್ರ ಮಂತ್ರಿ ತನ್ನ ರಾಜ್ಯಕ್ಕೆ ಹೆಚ್ಚು ಒಳ್ಳೇದು ಮಾಡ್ತಾನೆ’ ಅನ್ನೋ ಪಕ್ಷಪಾತ, ತಾರತಮ್ಯಗಳು ಅಳಿಯುತ್ತವೆ. ಇಂತಹ ಪಕ್ಷಗಳ ಒಂದು ಮೈತ್ರಿ ಭಾರತದಲ್ಲಿ ತಲೆಯೆತ್ತಬೇಕು. ಯಾವ ಪ್ರದೇಶಕ್ಕೂ ನಾವು ಭಾರತದಲ್ಲಿರೋದ್ರಿಂದ ಅನ್ಯಾಯವಾಗುತ್ತಿದೆ ಅನ್ನಿಸದೇ ಇರೋವಂತಹ ನೀತಿಗಳು ರೂಪುಗೊಳ್ಳಬೇಕಿವೆ. ಇಂತಹ ಮೈತ್ರಿ ಪಕ್ಷಗಳು ಇಡೀ ಭಾರತಕ್ಕೆ ಹೊಂದಿಕೆಯಾಗೋ ಆರ್ಥಿಕ ನೀತಿ, ರಕ್ಷಣಾ ನೀತಿ, ವಿದೇಶಾಂಗ ನೀತಿ, ಆಡಳಿತ ನೀತಿಗಳನ್ನು ರೂಪಿಸುತ್ತವೆ. ಯಾವ ಒಕ್ಕೂಟದಲ್ಲಿ ಸಂಖ್ಯಾಬಲದ ಮೇಲಾಟವಿರುವುದಿಲ್ಲವೋ, ಅತಿ ಚಿಕ್ಕ ರಾಜ್ಯಕ್ಕೂ ಅತಿ ದೊಡ್ಡ ರಾಜ್ಯಕ್ಕೂ ಸಮಾನವಾದ ಪ್ರಾತಿನಿಧ್ಯ, ಪ್ರಭಾವ ಇರಲು ಸಾಧ್ಯವೋ ಅಂತಹ ಒಕ್ಕೂಟ ವ್ಯವಸ್ಥೆಯನ್ನು ರೂಪಿಸಬಲ್ಲ ಶಕ್ತಿ ಇಂತಹ ಮೈತ್ರಿಕೂಟಕ್ಕಿರಬೇಕಾಗಿದೆ.

ಕೊನೆಹನಿ : ಇಂತಹ ದೃಷ್ಟಿಕೋನವನ್ನೇ ಹೊಂದಿದ್ದು ಸಮಾನ ಗೌರವದ ಒಕ್ಕೂಟ ವ್ಯವಸ್ಥೆ ಕಟ್ಟಲು ಬದ್ಧವಾಗೋದಾದ್ರೆ ಇಂದಿನ ರಾಷ್ಟ್ರೀಯ ಪಕ್ಷಗಳೂ ನಾಡಿನ ಏಳಿಗೆಯನ್ನು ಸಾಧಿಸಬಲ್ಲವು ಅನ್ನೋದು ದಿಟವಾಗಿದೆ! ಕಾಂಗ್ರೆಸ್ಸು, ಬಿಜೆಪಿಗಳು ಈ ಬಗ್ಗೆ ತಮ್ಮ ನೀತಿ ನಿಲುವುಗಳನ್ನು ಸ್ವಲ್ಪ ಪರಾಮರ್ಷೆ ಮಾಡ್ಕೊಳ್ಳೋದು ಒಳ್ಳೇದು ಗುರು!

ಚುನಾವಣೆ ಫಲಿತಾಂಶ : ಗೆದ್ದ ಸ್ಥಳೀಯತೆ!

ತಿಂಗಳುಗಟ್ಟಲೆ ನಡೆದ ಲೋಕಸಭಾ ಚುನಾವಣಾ ಪ್ರಕ್ರಿಯೆ ಅಂತೂ ಮುಗಿದಿದೆ. ಬಲು ಕುತೂಹಲದಿಂದ ಜನರು ಕಾಯ್ತಿದ್ದ ಫಲಿತಾಂಶಗಳು ಪ್ರಕಟವಾಗಿದೆ. ಜೊತೇಲೆ ಕೇಂದ್ರಸರ್ಕಾರದಲ್ಲಿ ಆಳೋರು ಯಾರು ಅನ್ನೋದು ತೀರ್ಮಾನವಾಗಿದೆ. ಈ ಚುನಾವಣೆಯಲ್ಲಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬಂದಿರೋ ಫಲಿತಾಂಶಗಳು ಒಳ್ಳೆ ಸೂಚನೆ ಕೊಡ್ತಿದೆ ಗುರು!

ನೈಜ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ!

ಈ ಚುನಾವಣೇಲಿ ಯಾವ ಪ್ರಾದೇಶಿಕ ಪಕ್ಷ ಆ ಪ್ರದೇಶದ ಏಳಿಗೆಯ ಬಗ್ಗೆ ಮಾತಾಡಿ ಕಾಳಜಿ ತೋರಿಸಿದೆಯೋ ಅಂಥಾ ಪಕ್ಷ ಚೆನ್ನಾಗಿ ಸಾಧನೆ ಮಾಡಿರೋದು ಒಳ್ಳೇ ಬೆಳವಣಿಗೆಯಾಗಿದೆ. ಒರಿಸ್ಸಾದ ಬೆಳವಣಿಗೇನ ಚುನಾವಣೆ ವಿಷಯ ಮಾಡ್ಕೊಂಡಿದ್ದ ಬಿಜು ಜನತಾದಳ 21ಕ್ಕೆ 14 ಗೆದ್ದು ಜಯಭೇರಿ ಹೊಡ್ದಿರೋದನ್ನು ನೋಡುದ್ರೆ ಇದು ಮನವರಿಕೆ ಆಗುತ್ತೆ. ಅದೇ ಥರ ಬಿಹಾರದ ನಿತೀಶ್ ಕುಮಾರ್ ಅವರ ಜನತಾದಳವೂ 40ರಲ್ಲಿ 20 ಗೆದ್ದು ಉತ್ತಮ ಸಾಧನೆ ಮಾಡ್ತು. ಈ ಎರಡು ಪಕ್ಷಗಳು ಮಾತಾಡಿದ್ದೇ ತಮ್ಮ ರಾಜ್ಯಗಳಿಗೆ ಕೇಂದ್ರಸರ್ಕಾರದಿಂದ ಸಿಗಬೇಕಾದ್ದನ್ನು ಸಿಗೋ ಹಾಗೆ ಮಾಡ್ತೀವಿ ಅಂತ. ಇದರ ಜೊತೆಗೆ ತಮ್ಮ ಪಕ್ಷ, ವ್ಯಾಪ್ತಿಯ ದೃಷ್ಟಿಯಲ್ಲಿ ಪ್ರಾದೇಶಿಕ(?) ಅನ್ನುಸ್ಕೊಂಡಿದ್ದು ವೈಯುಕ್ತಿಕ ಲಾಭವನ್ನಷ್ಟೆ ಗುರಿಯಾಗಿಟ್ಟುಕೊಂಡವೇನೋ ಅನ್ನುವಂತಿರೋ ಲಾಲೂ ಅವರ ರಾಷ್ಟ್ರೀಯ ದಳ (4/40) , ದೇವೇಗೌಡರ ಜಾತ್ಯಾತೀತ ಜನತಾದಳ (3/28), ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕಶಕ್ತಿ ಪಕ್ಷಗಳು (0/40) ಹೇಳ ಹೆಸರಿಲ್ಲವಾದದ್ದನ್ನೂ ಗಮನಿಸಬೇಕಾಗಿದೆ. ರಾಷ್ಟ್ರೀಯ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿಗಳು ಗೆದ್ದಿರೋದು ಸರಿಯಾದ ಪ್ರಾದೇಶಿಕ ಪಕ್ಷಗಳು ಇಲ್ಲದೇ ಇರೋದ್ರಿಂದಲೇ ಅನ್ನುವ ಹಾಗೆ ತೋರುತ್ತಿದೆ. ಇದಷ್ಟೇ ಅಲ್ಲದೆ ಗುಜರಾತಿನಲ್ಲಿ ಬಿಜೆಪಿ ಜಯ ಸಾಧಿಸಲು ಕಾರಣ ನರೇಂದ್ರ ಮೋದಿಯವರ ’ಗುಜರಾತಿ ಅಸ್ಮಿತಾ, ಗುಜರಾತಿ ಏಳಿಗೆ’ಯ ಸ್ವಾಭಿಮಾನದ ಮಂತ್ರಗಳಿಂದಲೇ ಅನ್ನೋದೆ ಆಗಿದೆ. ಇದರ ಹಾಗೇ ಆಂಧ್ರಪ್ರದೇಶದಲ್ಲಿ ರಾಜಶೇಖರ ರೆಡ್ಡಿಯವರಾಗಲೀ, ರಾಜಸ್ಥಾನದ ಅಶೋಕ್ ಗೆಹ್ಲೋಟ್ ಅವರಾಗಲೀ ರಾಷ್ಟ್ರೀಯ ಪಕ್ಷದಲ್ಲಿದ್ದರೂ ತಮ್ಮ ರಾಜ್ಯ ಕೇಂದ್ರಿತ ರಾಜಕಾರಣದಿಂದಲೇ ಯಶಸ್ಸು ಗಳಿಸಿದ್ದಾರೆ ಅನ್ನೋದ್ರಲ್ಲೂ ದಿಟವಿದೆ ಅನ್ಸಲ್ವಾ ಗುರು!

ನಾಗರೀಕ ಸೇವಾ ಪರೀಕ್ಷೆಗಳು : ಕನ್ನಡಿಗರ ನೆರವಿಗೊಂದು ಸೇವಾಸಂಸ್ಥೆ!

ಮೊನ್ನೆ ಏನ್ ಗುರುವಿನಲ್ಲಿ ಪ್ರಕಟವಾದ ಬರಹಕ್ಕೆ ಪ್ರತಿಕ್ರಿಯೆಯಾಗಿ ಭಾಷಾಂತರ ಅಧ್ಯಯನ ಸಂಸ್ಥೆಯ ರವೀಂದ್ರನಾಥ್ ಎಂಬ ಓದುಗರು ಒಳ್ಳೇ ಮಾಹಿತಿ ಕೊಟ್ಟಿದಾರೆ. ಇದರ ಸಾರಾನ ನಮ್ಮೆಲ್ಲಾ ಓದುಗರ ಅನುಕೂಲಕ್ಕಾಗಿ ಇಲ್ಲಿ ಹಾಕ್ತಿದೀವಿ :

ಬರೀ ಕನ್ನಡಿಗ್ರು ಮಾತ್ರಾ ಕಮ್ಮಿ ಅಲ್ಲ!

ಯು.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಮುಖ್ಯವಾಗಿ ಮೂರು ಥರದ ಪ್ರಶ್ನೆಪತ್ರಿಕೆಗಳಿರ್ತವೆ. ಭಾಷಾ ಸಾಹಿತ್ಯ ಅನ್ನೋದ್ರಲ್ಲಿ ಒಂದು ಭಾಷೆಯನ್ನು ಆರಿಸಿಕೊಳ್ಳಬಹುದು. ಇದರಲ್ಲಿ ಕನ್ನಡವನ್ನು ಆರಿಸಿಕೊಳ್ಳೋರ ಸಂಖ್ಯೆ 5%ಕ್ಕಿಂತಲೂ ಕಮ್ಮಿ. ಇನ್ನು ಮಾಧ್ಯಮವಾಗಿ ಕನ್ನಡ. ಎರಡನೇ ಥರದ ವಿಷಯಗಳಂದ್ರೆ ಕಡ್ಡಾಯವಾಗಿ ಇರೋವು. 2006ರಲ್ಲಿ ಇದರಲ್ಲಿ ಕನ್ನಡವನ್ನು ಆರಿಸಿಕೊಂಡಿರೋರ ಸಂಖ್ಯೆ ಒಟ್ಟು 7461 ಜನಕ್ಕೆ ಬರೀ 8 . ಮತ್ತೊಂದು ವಿಷಯವೆಂದ್ರೆ ಐಚ್ಚಿಕ ವಿಷಯಗಳಲ್ಲಿ ಕನ್ನಡವನ್ನು ಆರಿಸಿಕೊಂಡಿರೋರ ಸಂಖ್ಯೆ 2006ರಲ್ಲಿ ಒಟ್ಟು 13382 ಜನಕ್ಕೆ ಬರೀ 9 ಜನ. ಓದುಗರು ನೀಡಿರೋ ಈ ಮಾಹಿತೀ ಆಧಾರದ ಮೇಲೆ ನೋಡುದ್ರೆ, ಅನ್ಸೋದೇನಪ್ಪಾ ಅಂದ್ರೆ ಕನ್ನಡದೋರು ಇಂಥಾ ಮಹತ್ವದ ಪರೀಕ್ಷೆಗಳಲ್ಲಿ ಭಾಗವಹಿಸೋದ್ರಲ್ ಮಾತ್ರಾ ಹಿಂದೆ ಅಲ್ಲ. ಇದರ ಜೊತೆಗೆ ಕನ್ನಡದ ಬಳಕೇನೂ ಹಿಂದೆ ಅಂತ.

ಕನ್ನಡಿಗರ ಸಹಾಯಕ್ಕೊಂದು ಸೇವಾಸಂಸ್ಥೆ

ಬೆಂಗಳೂರಿನ ರಾಜಾಜಿ ನಗರದಲ್ಲಿರೋ ಭಾಷಾಂತರ ಅಧ್ಯಯನ ಸಂಸ್ಥೆಯೋರು ಹಿಡಿದು ಪ್ರತಿವರ್ಷ ನಡೆದ ಈ ಪರೀಕ್ಷೆಗಳ ಪ್ರಬಂಧ, ಸಾಮಾನ್ಯಜ್ಞಾನ, ಪ್ರಮುಖ ವಿಷಯಗಳು... ಇವೆಲ್ಲದರ ಬಗ್ಗೆ ಕನ್ನಡದಲ್ಲಿ ಉತ್ತರ ಬರೆದು ಅಂತರ್ಜಾಲದಲ್ಲಿ ಎಲ್ರಿಗೂ
ಉಚಿತವಾಗಿ ಸಿಗುವಂತೆ ಪ್ರಕಟಿಸೋ ಮೊದಲ ಹೆಜ್ಜೇನಾ ಇಡಲು ಮುಂದಾಗಿದ್ದೀವಿ. ಎಲ್ಲರೂ ಸಹಕಾರ ನೀಡಿ ಅಂದಿದ್ದಾರೆ. ಇವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಗುರು!

ಯು.ಪಿ.ಎಸ್.ಸಿ : ಇಲ್ಲಿ ಕನ್ನಡಿಗರು ಮುನ್ನುಗ್ಗಬೇಕು!!


ಕರ್ನಾಟಕದಿಂದ ಭಾರತ ಸರ್ಕಾರದ ನಾಗರೀಕ ಸೇವಾ ಹುದ್ದೆಗಳಾದ ಐ.ಎ.ಎಸ್ಸು, ಐ.ಆರ್.ಎಸ್ಸು, ಐ.ಪಿ.ಎಸ್ಸುಗಳಿಗೆ ಈ ಬಾರಿ 12 ಜನರು ಆಯ್ಕೆಯಾಗಿರೋ ಸುದ್ದಿ 2009ರ ಮೇ ತಿಂಗಳ 5ನೇ ತಾರೀಕಿನ ದಿನಪತ್ರಿಕೆಗಳಲ್ಲಿ ವರದಿಯಾಗಿದೆ ಗುರು! ವ್ಹಾವ್!! ಎಂಥಾ ಒಳ್ಳೇ ಸುದ್ದಿ ಅಂತಾ ಖುಷಿ ಆದ್ರೂ ಜೊತೇಲೇ ನಮ್ಮವರ ಒಟ್ಟು ಸಂಖ್ಯೆ ಕಂಡಾಗ ಆತಂಕಾನೂ ಆಗುತ್ತೆ. ಆಡಳಿತ ಕ್ಷೇತ್ರದ ಇಂಥಾ ಪ್ರಭಾವಶಾಲಿ ಹುದ್ದೆಗಳಲ್ಲಿ ನಮ್ಮವರ ಸಂಖ್ಯೆ ಇನ್ನಷ್ಟು ಹೆಚ್ಚಬೇಕು! ಮತ್ತಷ್ಟು ಹೆಚ್ಚಬೇಕು.
ನಾಗರೀಕ ಸೇವಾ ಹುದ್ದೆಗಳಲ್ಲಿ ಕನ್ನಡಿಗರು ಇರಬೇಕು!!

ನಿಜವಾಗಿ ನಾಡಿನ ರೀತಿ ನೀತಿ ನಿಯಮಾವಳಿಗಳನ್ನು ಇಂದು ರೂಪಿಸಿ, ನಿರ್ದೇಶಿಸೋದ್ರಲ್ಲಿ ಈ ಅಧಿಕಾರಿಗಳದ್ದೇ ದೊಡ್ಡಪಾತ್ರ. ನಮ್ಮ ನಾಡಿಗೆ ಸಂಬಂಧಿಸಿದ ಹಾಗೆ ಯಾವ್ದೇ ಪಾಲಿಸಿ ಮಾಡುದ್ರೂ ಅದರ ಹಿಂದೆ ಈ ಅಧಿಕಾರಿಗಳಿದ್ದೇ ಇರ್ತಾರೆ. ಇಂಥಾ ಮಹತ್ವದ ಹುದ್ದೆಗಳಲ್ಲಿ ಕರ್ನಾಟಕದಿಂದ ಈ ಬಾರಿ ಆಯ್ಕೆಯಾಗಿರೋದು ಬರೀ 12 ಜನ ಅನ್ನೋದು ಭಾಳಾ ಆತಂಕ ಹುಟ್ಸತ್ತೆ ಗುರು! ಈ ಬಾರಿ ಇಡೀ ಭಾರತದ ಎಲ್ಲೆಡೆಯಿಂದ ಸೇರಿ ಒಟ್ಟು 791 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಕನ್ನಡಿಗರ ಸಂಖ್ಯೆ 12. ಅಂದರೆ ಬರೀ 1.51% ಮಾತ್ರ. ಸುಮ್ಮನೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕರ್ನಾಟಕದ ಜನಸಂಖ್ಯೆ ಎಷ್ಟಪ್ಪಾ ಅಂತ ನೋಡುದ್ರೆ ಸಾಕು ಈ ಪ್ರಮಾಣ ಎಷ್ಟು ಕಮ್ಮಿ ಅಂತ ಕಾಣುತ್ತೆ. ಇಂದಿಗೆ 117 ಕೋಟಿ ಸಂಖ್ಯೆಯಲ್ಲಿ ಕರ್ನಾಟಕದೋರು ಸುಮಾರು 5.3 ಕೋಟಿ ಅಂದ್ರೆ ಅಂದಾಜು 4.5%. ಈ ಲೆಕ್ಕದಲ್ಲಿ ನೋಡುದ್ರೆ ಕಡಿಮೆ ಅಂದ್ರೆ 35 ಜನರಾದ್ರೂ ಆಯ್ಕೆಯಾಗಬೇಕಿತ್ತು.
ಹೌದೂ! ನಮ್ಮ ಕನ್ನಡದ ಯುವಕ/ ಯುವತಿಯರು ಅತಿ ಹೆಚ್ಚಿನ ಸಂಖ್ಯೇಲಿ ಈ ನಾಗರೀಕ ಸೇವಾ ಪರೀಕ್ಷೆಗಳನ್ನು ತೊಗೋಬೇಕು. ಹೆಚ್ಚೆಚ್ಚು ಜನ ಈ ಸೇವೆಗೆ ಆಯ್ಕೆಯಾಗಬೇಕು. ಇದು ನಾಳಿನ ಕನ್ನಡನಾಡಿಗೆ ಒಳ್ಳೇದು ಗುರು!

ಕೈಯ್ಯಲ್ಲಿ ಕನ್ನಡ ಪತ್ರಿಕೆ ಇಟ್ಕೊಂಡೇ ಏರ್ ಪೋರ್ಟಿಗೆ ಹೋಗೋಣ!


ಒಂದು ಪ್ರದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಲಿ, ಇನ್ಮುಂದೆ ಆ ವಿಮಾನ ನಿಲ್ದಾಣದ ಆವರಣದಲ್ಲಿ ಆ ಪ್ರದೇಶದ ಜನರ ಭಾಷೆಯ ಪತ್ರಿಕೆಗಳನ್ನು ಮಾರಬಾರ್ದು ಅನ್ನೋ ಆದೇಶ ಹೊರಡಿಸಿದೆ ಅನ್ನೋ ಅಂಥಾ ಒಂದು ಸುದ್ದೀನಾ ಎಂದಾದರೂ ಯಾವುದಾದರೂ ಪತ್ರಿಕೇಲಿ ಕಾಣಕ್ಕೆ ಸಾಧ್ಯಾನಾ ಗುರು? ಬಿಡ್ರಿ ತಮಾಷೇನಾ, ಪ್ರಪಂಚದ ಯಾವ ಮೂಲೇಲೂ ಇಂಥ ಸುದ್ದಿ ನೋಡಕ್ಕೆ ಆಗಲ್ಲಾ ಅನ್ತಾ ಇದೀರಾ?

ಇಲ್ಲಿರೋದು ಹೀಗೇ...

ಹಾಗಾದ್ರೆ ಬನ್ನಿ... ಭರತ ವರ್ಷದ ಭರತ ಖಂಡದ ಜಂಬೂ ದ್ವೀಪದ ದಂಡಕಾರಣ್ಯದ ಗೋದಾವರಿಯ ದಕ್ಷಿಣ ದಂಡೆಯಲ್ಲಿರುವ ಕರ್ನಾಟಕವೆಂಬ ರಾಜ್ಯದ ರಾಜಧಾನಿ ಬೆಂಗಳೂರಿಗೆ. ಅಲ್ಲಿಂದ ಸೀದಾ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ! ನಮ್ಮ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಪತ್ರಿಕೆಗಳಿಗೆ ನಿಷೇಧ ಹೇರಿರೋದನ್ನು ಖಂಡುಸ್ತೀನಿ ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರು ಅವ್ರು ಅಂದಿದಾರೆ ಅನ್ನೋ ಸುದ್ದಿ ದಟ್ಸ್ ಕನ್ನಡ ಪತ್ರಿಕೆಯ 2009ರ ಮೇ 3ನೇ ತಾರೀಕಿನ ಒಂದು ವರದಿ ಹೇಳ್ತಿದೆ ಗುರು! ಪ್ರಪಂಚದ ಬೇರೆ ಯಾವ ದೇಶದ ವಿಮಾನ ನಿಲ್ದಾಣದಲ್ಲೂ ಇಲ್ದಿರೋ ಇಂತಹ ಅತಿರೇಕಗಳನ್ನು ಪ್ರಶ್ನಿಸಿ, ಬದಲಾಯಿಸೋ ಶಕ್ತಿ ಇರೋದು ಅಲ್ಲಿಗೆ ಹೋಗೊ ಕನ್ನಡದ ಗ್ರಾಹಕನಿಗೆ ಮಾತ್ರ ಗುರು.

ಅದಕ್ ಈಗ ನಾವು ಏನ್ ಮಾಡೋಣ ಅಂತೀರಾ?

ವಿಮಾನ ನಿಲ್ದಾಣಕ್ಕ ಹೋದಾಗಲೆಲ್ಲ ಅಲ್ಲಿನ ಅಂಗಡಿಗಳಲ್ಲಿ ಕನ್ನಡ ಪತ್ರಿಕೆಗಳಿಗೆ ಆಗ್ರಹಿಸೋಣ. ಕನ್ನಡ ಪತ್ರಿಕೆಗಳನ್ನ ಮಾರಕ್ಕೆ ಅವಕಾಶ ಮಾಡ್ಕೊಡಬೇಕು ಅಂತ ವಿಮಾನ ನಿಲ್ದಾಣದವರಿಗೆ ದೂರು ಕೊಡೋಣ. ವಿಮಾನದ ಒಳಗೆ ಕನ್ನಡದ ಪತ್ರಿಕೆಗಳಿಗೆ, ಕನ್ನಡ ಮನರಂಜನೆಗಾಗಿ ಒತ್ತಾಯಿಸೋಣ. ಪತ್ರಿಕೆಗಳಿಗೆ ಪತ್ರ ಬರೆಯೋ ಮೂಲಕ ಇನ್ನಷ್ಟು ಜನರು ನಿಲ್ದಾಣದಲ್ಲಿ ಕನ್ನಡಕ್ಕಾಗಿ ಒತ್ತಾಯಿಸುವ ಜಾಗೃತಿ ತನ್ನಿ. ಹೋರಾಟಗಳಿಗೆ ಇರೋ ಶಕ್ತಿ ಗ್ರಾಹಕನ ದೂರು ಪತ್ರಕ್ಕೂ ಇದೇ ಅನ್ನೋದು ನೆನಪಲ್ಲಿಟ್ಟುಕೊಂಡ್ರೆ ಖಂಡಿತ ನಾವೂ ಬದಲಾವಣೆ ತರಬೋದು! ಏನಂತೀ ಗುರು?

ಕೊನೆಹನಿ : ವಿಮಾನನಿಲ್ದಾಣಕ್ಕೆ ಹೋಗೋವಾಗ ಮರೆಯದೆ ಒಂದೆರಡು ಕನ್ನಡ ಪತ್ರಿಕೆಗಳನ್ನು ಕೊಂಡೊಯ್ಯೋಣ. ಲಾಂಜಿನಲ್ಲಿ ಕುಳಿತೋ, ವಿಮಾನದ ಒಳಗೋ ಓದಿ ಅದನ್ನು ಅಲ್ಲೇ ಬಿಟ್ಟೇಳೋಣ.

ಹೊತ್ತಿಗೆ ರೂಪದಲ್ಲಿ "ಏನ್ ಗುರು"2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ. ಆದ್ರೆ ನಾವು ಮುಟ್ಟಬೇಕಾದ ಜನರ ಸಂಖ್ಯೆ ಇನ್ನೂ ಬಹಳವಿದೆ. ಅವರಲ್ಲಿ ಬಹಳ ಮಂದಿಯನ್ನು ಅಂತರ್ಜಾಲದಿಂದ ಇಂದು ಮುಟ್ಟವುದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಹೊತ್ತಿಗೆಯ ಮೂಲಕ ಮುಟ್ಟಲು ಆಗುತ್ತದೆ. ಆ ಕಾರಣದಿಂದ ಇದೀಗ ಹೊತ್ತಿಗೆಯ ರೂಪದಲ್ಲಿ ಏನ್ ಗುರುವನ್ನು ಹೊರತರಲಾಗುತ್ತಿದೆ. ಶುರುವಾದಾಗಿನಿಂದ 2008ರ ಕೊನೆಯವರೆಗಿನ ಬರಹಗಳನ್ನು ಆಯ್ದು ಹೆಕ್ಕಿ, ಈ ಹೊತ್ತಿಗೆಯನ್ನು ಸಿದ್ಧಪಡಿಸಲಾಗಿದೆ. ಇನ್ನೆರಡು ವಾರದಲ್ಲಿ ನಿಮ್ಮ ಕೈಸೇರಲಿದೆ.


ಈ ಹೊತ್ತಿಗೆಯನ್ನು ಅಚ್ಚು ಹಾಕಿಸಲು ಅಗತ್ಯವಿರುವ ನೆರವು ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಬನವಾಸಿ ಬಳಗ ನೆನೆಯುತ್ತದೆ. ಈ ಹೊತ್ತಿಗೆಯು ನಿಮ್ಮ ಆತ್ಮೀಯರಿಗೆ ನೀವು ನೀಡಲಿರುವ ಅತ್ಯುತ್ತಮ ಉಡುಗೊರೆಯಾಗಲಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿರಿ. ಹೊತ್ತಿಗೆ ಕೊಳ್ಳಬಯಸುವವರು ಮುಂದಾಗಿ ನಮಗೆ ಮಾಹಿತಿ ಬರೆಯಿರಿ.

ಐ.ಪಿ.ಎಲ್ ಕಂಡುಕೊಂಡ ಕನ್ನಡದ ಮಾರುಕಟ್ಟೆ


ಈ ಬಾರಿಯ ಐ.ಪಿ.ಎಲ್ ಪಂದ್ಯಗಳು ದಕ್ಷಿಣ ಆಫ್ರಿಕಾದಲ್ಲಿ ನಡೀತಾ ಇರೋದು ಸರಿಯಷ್ಟೆ. ನಮ್ಮ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದೋರೂ ನಿನ್ನೆ ಒಂದು ಮ್ಯಾಚನ್ನು ಮುಂಬೈ ಇಂಡಿಯನ್ಸ್ ತಂಡದ ಜೊತೆ ಆಡಿದ್ರು. ಈ ಆಟಾನಾ ಆಸಕ್ತಿಯಿಂದ ನೋಡ್ತಾ ಇದ್ದಾಗ, ಅಲ್ಲಿ ವೀಕ್ಷಕರ ನಡುವೆ ಇದ್ದ ಕನ್ನಡದಲ್ಲಿ ಬರೆದ ಒಂದು ಬರವಣಿಗೆ, ಮ್ಯಾಚಿಗಿಂತ ಹೆಚ್ಚಿನ ಆಸಕ್ತಿ ಹುಟ್ಟುಹಾಕ್ತು. ಇದು ರಾಯಲ್ ಚಾಲೆಂಜರ್ಸ್ ತಂಡದ ಆಟ ನೋಡ್ತಿದ್ದ ಕನ್ನಡದೋರ್ ಮೈಯಲ್ಲಿ ರೋಮಾಂಚನ ಹುಟ್ಟುಹಾಕ್ತು ಗುರು! ಆ ಕ್ಯಾಮೆರಾದವ್ರು ಕೂಡಾ ಆಗಾಗ ಇದನ್ನು ತೋರಿಸುತ್ತಾ, ಅಭಿಮಾನಿಯೊಬ್ಬರ ಕೈಯ್ಯಲ್ಲಿದ್ದು ಆಫ್ರಿಕಾದ ಗಾಳೀಲಿ ಹಾರಾಡ್ತಿದ್ದ ಕನ್ನಡದ ಬಾವುಟಾನೂ ತೋರುಸ್ತಿದ್ರು. ಇಷ್ಟೂ ಸಾಲದೂ ಅಂತಾ ಕಡೆಗೆ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದ್ದ ರಾಬಿನ್ ಉತ್ತಪ್ಪನ ಹತ್ರ ಪಂದ್ಯದ ವೀಕ್ಷಕ ವಿವರಣೆಕಾರರು ಕನ್ನಡದಲ್ಲಿ ಮಾತೂ ಆಡುಸ್ಬುಟ್ರು ಗುರು!!

ಐ.ಪಿ.ಎಲ್ ಅರಿತ ಮನಗೆಲ್ಲೋ ತಂತ್ರ!

ಇದೆಲ್ಲಾ ಏನೋ ಆಕಸ್ಮಿಕ ಅಂತ ಆಗ ಅನ್ನುಸ್ತಿದ್ರೂ ನಿಜವಾಗ್ಲೂ ಐ.ಪಿ.ಎಲ್ ನವರು ಉದ್ದೇಶಪೂರ್ವಕವಾಗಿ ಹಿಂಗ್ ಮಾಡಿರಬೋದಾ ಅನ್ಸಿದ್ದು ಸುಳ್ಳಲ್ಲಾ ಗುರು! ನೀವೇ ನೋಡಿ, ಬೆಂಗಳೂರು ತಂಡ ಆಡೋ ಮ್ಯಾಚುಗಳು ಅಂತ ಕರ್ನಾಟಕದೋರೂ, ಕನ್ನಡದೋರೂ ಈ ಪಂದ್ಯಾವಳಿಗಳನ್ನು ನೋಡೋದ್ರಿಂದಲೇ ಐಪಿಎಲ್ ನ ಜನಪ್ರಿಯತೆ, ಅದರಿಂದಾಗಿ ಸಿಗೋ ಆದಾಯ ಎಲ್ಲ ಹೆಚ್ಚದು. ನಿಜವಾಗ್ಲೂ ವ್ಯಾಪಾರಿ ಆದವನು ಯಾವೆಲ್ಲಾ ತಂತ್ರಗಳು ತನ್ನ ವ್ಯಾಪಾರಾ ಹೆಚ್ಸುತ್ತೋ ಅದ್ಯಾವ್ದುನ್ನೂ ಬಿಡಲ್ಲ. ಹಾಗೇ ಕನ್ನಡದಲ್ಲಿ ಮಾತಾಡ್ಸೋದ್ರಿಂದ, ಬೆಂಗಳೂರು ತಂಡದ ಬಗ್ಗೆ ಇಡೀ ಕನ್ನಡನಾಡಿನ, ಕನ್ನಡದೋರ ಮನ್ಸಲ್ಲಿ ಇದು ನಮ್ ತಂಡ ಅನ್ನೋ ಭಾವನೇನಾ ಹುಟ್ಟುಹಾಕಿದ್ರೆ ತಾನೆ ಕರ್ನಾಟಕದ ಜನ ಇದನ್ನು ನೋಡೋದು? ಹಾಗನ್ನಿಸೋಕೆ ಏನೇನು ಬೇಕೋ ಅದೆಲ್ಲಾನೂ ಮಾಡ್ತಿದಾರೆ ಇವ್ರು ಅನ್ಸಲ್ವಾ ಗುರು? ಚೆನ್ನೈ ಆಡೋ ಪಂದ್ಯಗಳಲ್ಲಿ ತಮಿಳಲ್ಲಿ ಮಾತಾಡ್ಸೋದೂ, ಮುಂಬೈ ತಂಡದೋರ ಹತ್ರಾ ಮರಾಠೀಲಿ ಮಾತಾಡ್ಸೋದೂ ಆಯಾ ರಾಜ್ಯಗಳಲ್ಲಿ ಈ ಪಂದ್ಯಾವಳಿಗಳ ನೋಡುಗರ ಸಂಖ್ಯೇನಾ ನಿಜವಾಗ್ಲೂ ಹೆಚ್ಚುಸುತ್ತೆ. ಒಟ್ಟಾರೆ ಇಂತಹ ಕ್ರಮಗಳಿಂದಾಗಿ ಐ.ಪಿ.ಎಲ್ ಪಂದ್ಯಗಳ ನೋಡುಗರ ಸಂಖ್ಯೆ ಹೆಚ್ಚೋದೂ, ಇಡೀ ಪಂದ್ಯಾವಳಿ ಯಶಸ್ಸು ಗಳಿಸಲು ಇದು ನೆರವಾಗೋದೂ ಖಂಡಿತ. ಏನಂತೀ ಗುರು?
Related Posts with Thumbnails