ಮೋಡಿ ಮಾಡಲಾಗದ ಮೋದಿ!

ಮೊನ್ನೆ ಚುನಾವಣಾ ಪ್ರಚಾರಕ್ಕೆ ಅಂತ ಕರ್ನಾಟಕಕ್ಕೆ ಬಂದ, ಗುಜರಾತಿನ ನರೇಂದ್ರ ಮೋದಿಯವರ ಭಾಷಣಕ್ಕೆ ಕಾರ್ಕಳದಲ್ಲಿ ನೀರಸ ಪ್ರತಿಕ್ರಿಯೆ ಬಂತಂತೆ! ಅಲ್ಲಾ ಗುರು, ನಮಗೆ ಅರ್ಥವಾಗದ ಭಾಷೇಲಿ ಭಗವಂತನೇ ಬಂದು ಉಪದೇಶ ಕೊಟ್ರೂ ಅದು ಜನರನ್ನು ಮುಟ್ಟಲ್ಲಾ ಅನ್ನೋದು ಈ ಜನಗಳಿಗೆ ಅರ್ಥವಾಗೋದು ಯಾವಾಗ ಅಂತಾ?

ನೀರಸ ಪ್ರತಿಕ್ರಿಯೆಗೆ ಕಾರಣ?

ಬೇರೆ ಪ್ರದೇಶಗಳ ನಾಯಕರುಗಳ್ನ ನಮ್ಮೂರಿಗೆ ಕರುಸ್ದಾಗ ಅವರ ಭಾಷಣಾನ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳೋದು ವಾಡಿಕೆ. ಆದ್ರೆ ಮೊನ್ನೆ ಹುಬ್ಬಳ್ಳಿ ಸಭೇಲಿ ಮೋದಿಯವ್ರು ಹಿಂದೀಲಿ ಮಾತಾಡಿದ್ನ ನೋಡುದ್ ಜನ "ಈ ಬಿಜೆಪಿಯವರು ಹಿಂದಿ ಭಕ್ತರು. ಇವ್ರು ಹೊರ್ಗಿಂದ ಕರ್ಕೊಂಡ್ ಬರೋ ನಾಯಕ್ರುಗಳ ಮಾತೂ ಹಿಂದೀಲಿರೋದು ಖಂಡಿತಾ" ಅಂತ ಅಂದ್ಕೊಂಡ್ರೋ ಏನೋ, ಒಟ್ನಲ್ಲಿ ಜನ ಹೆಚ್ಚು ಸೇರಿರಲಿಲ್ಲ. ಇನ್ನು ಮಾತು ಶುರು ಮಾಡಕ್ ಮೊದ್ಲು ಮೋದಿಯೋರು ತರ್ಜುಮೆ ಬೇಕಾ ಅಂದ್ರಂತೆ, ಒಂದಷ್ಟು ಜನ ಬೇಡಾ ಅಂದ್ರಂತೆ. ಇವ್ರು ಬೇಕಾ ಅಂದಂಗ್ ಮಾಡುದ್ರು ಅವ್ರು ಬೇಡ ಅಂದಂಗ್ ಮಾಡುದ್ರು ಅಷ್ಟೆ. ಇನ್ನು ಅವರು ಎಷ್ಟೇ ಸೊಗಸಾಗಿ ಮಾತಾಡುದ್ರೂ ಜನಕ್ ಅರ್ಥ ಆಗ್ಬೇಕಲ್ಲಾ? ಇದ್ ಬದ್ ಜನ್ವೂ ಆಕಳಿಸ್ಕೊಂಡು ಮನೆಗೋದ್ರು..

ಯಾಕೆ ತರ್ಜುಮೆ ಬೇಕಿತ್ತು?

ಪ್ರಜಾಪ್ರಭುತ್ವದ ನಿಜವಾದ ಅರ್ಥವೇ ಜನರಿಂದ ಆಳ್ವಿಕೆ ಅಂತ. ನಮ್ಮುನ್ ನಾವು ಆಳ್ಕೊಳೋ ವ್ಯವಸ್ಥೇಲಿ ನಮ್ಮಿಂದ ಆರ್ಸಿ ಬರೋರು ಏನೇನು ಮಾಡ್ತಾರೆ, ಏನೇನು ಮಾತಾಡ್ತಾರೆ ಅಂತ ತಿಳ್ಕೊಳೊ ಹಕ್ಕು ಅವ್ರುನ್ನ ಪ್ರಶ್ನೆ ಮಾಡೋ ಹಕ್ಕು ಜನಕ್ಕಿರುತ್ತೆ. ಈ ಸಂವಹನ ಪ್ರಕ್ರಿಯೇಲಿ ಭಾಷೆಗೆ ಅತಿ ಹೆಚ್ಚಿನ ಮಹತ್ವ ಇದೆ. ನಮ್ಮ ಭಾಷೆ ಆಡೋರುನ್ನ ನಮ್ಮೋರು ಅಂದುಕೊಳ್ಳೋದು, ನಮ್ಮ ಸಮಸ್ಯೆಗಳನ್ನು ಅರ್ಥ ಮಾಡ್ಕೋಳ್ಳೋರು ಅಂದ್ಕೊಳ್ಳೋದೂ, ಸಮಸ್ಯೆಗಳ್ನ ಪರಿಹರುಸ್ತಾರೆ ಅನ್ನೋ ಭರವಸೆ ಹುಟ್ಟೋದು ಸಹಜವಾದದ್ದು. ಅಂತಾದ್ರಲ್ಲಿ ನಮ್ಮದಲ್ಲದ ನುಡಿ ಆಡೋರು ಸ್ವರ್ಗಾನೆ ತಂದು ಕೊಡ್ತೀನಿ ಅಂದ್ರೂ ಜನರ ಮನಸ್ಸನ್ನ ಗೆಲ್ಲಕ್ಕೆ ಆಗಲ್ಲ ಗುರು!

ಹಾಗಾದ್ರೆ ಕಾರ್ಕಳದಲ್ಲಿ ಏನು ಮಾಡ್ಬೇಕಿತ್ತು?

ಅನುಮಾನಾನೆ ಬೇಡ. ಕಾರ್ಕಳದಲ್ಲಿ ತುಳುವಿನಲ್ಲಿ ಭಾಷಣದ ತರ್ಜುಮೆ ಆಗಬೇಕಿತ್ತು. ಈ ಮಣ್ಣಲ್ಲೇ ಹುಟ್ಟಿರೋ ಕೊಡವ, ತುಳು ಭಾಷೆಗಳಲ್ಲಿ ಆಯಾ ಪ್ರದೇಶಗಳಲ್ಲಿ ಪ್ರಚಾರ ಮಾಡೋದೆ ಸರಿಯಾದದ್ದು. ಕನ್ನಡ ನಾಡಿನಲ್ಲೇ ಇರುವ ಈ ಒಳನುಡಿಗಳಿಗೆ ಸಲ್ಲಬೇಕಾದ ಗೌರವ ಸಲ್ಲಿಸೋದು ಖಂಡಿತಾ ಸರಿ ಗುರು! ಅಷ್ಟಕ್ಕೂ ವೈವಿಧ್ಯತೆಯಲ್ಲಿ ಏಕತೆ ಅನ್ನೋದನ್ನ, ಪ್ರತಿ ಪ್ರದೇಶದ ಅನನ್ಯತೆ ಕಾಪಾಡಿಕೊಳ್ಳಬೇಕು ಅನ್ನೋದನ್ನ ತಾನೆ ನಾವು ಪ್ರತಿಪಾದುಸ್ತಿರೋದು? ಗುರು!

ಕನ್ನಡ ಬೇಡ! ಕನ್ನಡದೋರ ಬೆಂಬಲ ಬೇಕನ್ನೋ ಮಲ್ಯ!!

ಇದೇನಪ್ಪ ಇಷ್ಟ ಬೇಗ ಮತ್ತೆ ಐ.ಪಿ.ಎಲ್ ಬಗ್ಗೆ ಏನ್ ಗುರು ಬರ್ದಿದ್ದಾರೆ ಅಂತ ಅಚ್ಚರಿ ಪಡಬೇಡಿ. ನಮ್ಮ ಬೆಂಗಳೂರಿನ ರಾಯಲ್ ಛಾಲೆಂಜರ್ಸ್ ತಂಡಾನ ಪರಿಚಯಿಸೋ ಸಲುವಾಗಿ ತಂಡದ ವ್ಯವಸ್ಥಾಪಕರು ಮಾಡಿರೋ ಹಾಡು ಹಿಂದೀಲಿರೋದೆ ಇದಕ್ಕೆ ಕಾರಣ ಗುರು!
ಅಭಿಮಾನಿಗಳ ಕನ್ನಡ ಹಾಡು!

ನಮ್ಮ ತಂಡಾನ ಹುರಿದುಂಬಿಸೋಕೆ ತಂಡದ ಅಭಿಮಾನಿಗಳೇ ಸೇರಿ ಮಾಡಿರೋ ತಾಕತ್ತು ಅನ್ನೋ ಕನ್ನಡದ ಹಾಡು ಇವತ್ತು ಕರ್ನಾಟಕದ ಜನರ ನಾಲಿಗೆ ಮೇಲೆ ನಲೀತಿದೆ. ತಾಕತ್ತು ಅನ್ನೋ ಸಕ್ಕತ್ತು ಹಾಡು ರೇಡಿಯೊದಲ್ಲಿ, ಟಿವಿಯಲ್ಲಿ, ಇಂಟರ್ನೆಟ್ಟಲ್ಲಿ... ಹೀಗೆ ಎಲ್ಲ ಕಡೆ ಕೇಳ್ತಾ ಇದೀವಿ. ಅಷ್ಟೆ ಅಲ್ಲ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೀತಾ ಇರೋ ನಮ್ಮ ಪಂದ್ಯಗಳಲ್ಲಿ ತಾಕತ್ತು ಹಾಡು ಜೋರಾಗಿ ಕೇಳಿ ಬರ್ತಿದೆ!
ಅಭಿಮಾನಿಗಳನ್ನು ನೋಡಾದ್ರೂ ಕಲೀಬಾರ್ದಾ?
ಅಭಿಮಾನಿಗಳಿಗೆ ಇರೋ ಬುದ್ಧಿ ನಮ್ಮ ತಂಡದ ಮಾಲೀಕರಿಗೆ ಇಲ್ವಲ್ಲ ಗುರು! ಯಾರನ್ನ ಮೆಚ್ಚಸೋಕೆ ಹಿಂದೀಲಿ ಆ ಹಾಡು ಮಾಡಿದಾರೆ? ನಮ್ಮ ಜನರನ್ನ ಮೆಚ್ಚಿಸೋಕಾ? ಅದೇ ಉದ್ದೇಶ ಆಗಿದ್ದಿದ್ರೆ ಕನ್ನಡದಲ್ಲಿ ಮಾಡಿರೋರು. ಇಷ್ಟಕ್ಕೂ ಇವತ್ತು ಬೆಂಗಳೂರು ತಂಡಾನ ಹುರಿದುಂಬಿಸುತ್ತಿರೋರು ಯಾರು ಗುರು? ಕರ್ನಾಟಕದಲ್ಲಿರುವ ನಾವುಗಳು ತಾನೆ? ನಮ್ಮೂರ ತಂಡ ಅಂದ್ರೆ ನಮ್ಮ ತಂಡ ಅನ್ಕೊಂಡಿರೋ ನಮ್ಮ ಭಾಷೇಲಿ ಹಾಡು ಮಾಡೋದು ಬಿಟ್ಟು, ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಮಾಡೋ ಹುಂಬತನ ಯಾಕ್ ಗುರು?
ಹಿಂದಿ ಹಾಡು ಅಖಿಲ ಭಾರತದೋರ ಬೆಂಬಲ ಗಳ್ಸಕ್ಕಾ?
ಈ ಹಾಡು ಹಿಂದೀಲಿರೋದು ಬೇರೆಯವರ ಬೆಂಬಲ ಗೆಲ್ಲೋಕಾ? ಬೆಂಗಳೂರು ದಿಲ್ಲಿ ಮಧ್ಯೆ ಒಂದು ಪಂದ್ಯ ಆದ್ರೆ, ದಿಲ್ಲಿ ಜನತೆ ಯಾರನ್ನ ಬೆಂಬಲಿಸ್ತಾರೆ? ದಿಲ್ಲೀನ ತಾನೆ? ಬೆಂಗಳೂರೋರು ನಮ್ ಭಾಷೇಲಿ ಹಾಡು ಮಾಡಿದಾರೆ, ಅವ್ರು ಗೆಲ್ಲಲಿ ಅಂತಾರಾ? ಕೊನೆಗೆ ಬೆಂಗಳೂರು ತಂಡ ಗೆಲ್ಲಲಿ ಅಂತ ಚಪ್ಪಾಳೆ ತಟ್ಟೋರು ನಮ್ಮ ಜನಾ ತಾನೆ? ಹಾಗಿದ್ದಲ್ಲಿ ಇಲ್ಲಿನ ತಂಡಕ್ಕೆ ಒಳ್ಳೆದಾಗಲಿ ಅಂತ ಹಾರೈಸಿ ಮಾಡೋ ಹಾಡು ಕನ್ನಡದಲ್ಲಿ ತಾನೆ ಇರಬೇಕು? ಇನ್ನೂ ಅವ್ರುಗಳು "ಕನ್ನಡದವ್ರು ದಿಕ್ಕೆಟ್ಟ ಮುಂಡೇವು, ಅವರ ಭಾಷೇಲಿ ಒಂದು ಹಾಡು ಮಾಡಕ್ಕೂ ಆಗದೋರು" ಅಂತಾ ಆಡ್ಕೊಂಡು ನಗ್ತಾರೆ ಅಷ್ಟೆ!
ಅಂತರ ರಾಷ್ಟ್ರೀಯ ಆಟಗಾರರನ್ನು ಮೆಚ್ಚಿಸೋಕಾ?
ಹೋಗಲಿ, ಈ ಹಾಡು ಹಿಂದೀಲಿರೋದು ನಮ್ಮ ತಂಡದಲ್ಲಿರೋ ವಿದೇಶಿ ಆಟಗಾರರನ್ನು ಮೆಚ್ಚಿಸೋಕಾ? ಅಲ್ಲಾ ಜಾಕ್ ಕಾಲಿಸ್ ಆಗಲೀ, ಮಾರ್ಕ್ ಬೌಚರ್ ಆಗಲೀ ಅಥ್ವಾ ಟೇಲರ್ ಆಗಲಿ, ಅವರಿಗೆ ಹಿಂದೀನೂ ಒಂದೇ ಕನ್ನಡಾನೂ ಒಂದೇ ಅಲ್ವೇನ್ರಿ? ಅಷ್ಟ್ರ ಮೇಲೆ ಅವ್ರಿಗೆ ಇದೇನಾದ್ರೂ ಅರ್ಥ ಆದ್ರೂ, ಇಡೀ ಭಾರತಕ್ಕೆಲ್ಲಾ ಒಂದೇ ಭಾಷೆ ಅಂತ ತಪ್ಪು ತಿಳ್ಕಳಲ್ವಾ ಗುರು? ಹಾಗಿದ್ದಲ್ಲಿ ಯಾರನ್ನ ಮೆಚ್ಚಿಸೋಕೆ ಈ ಹಿಂದಿ ಹಾಡು?
ಮೊದ್ಲು ಮನೆ ಗೆದ್ದು ಆಮೇಲೆ ಊರು ಗೆಲ್ಲಬೇಕು!
ಮೊಹಾಲಿಯಂತ ತಂಡಗಳು ತಮ್ಮೋರನ್ನ ಪ್ರೋತ್ಸಾಹಿಸಲು ತಮ್ಮ ಮಣ್ಣಿನ ಸೋಗಡಿರೋ ಪಂಜಾಬಿ ಭಾಂಗ್ಡಾ ಶೈಲಿ ಹಾಡು ಮಾಡಿ ತಮ್ಮ ಭಾಷೆನ ಬಳುಸ್ತಿಲ್ವಾ? ಅಲ್ಲಿ ಹಂಗಿದ್ರೆ ಇಲ್ಲಿ ನಮ್ಮ ಮಲ್ಯ ಸಾಹೇಬರ ರಾಯಲ್ ಛಾಲೆಂಜರ್ಸ್ ತಂಡದೋರು ನಮಗೆ ಸಂಬಂಧವೇ ಇಲ್ಲದ ಹಿಂದೀಲಿ ಹಾಡು ಮಾಡಿ ನಮ್ಮ ತಲೆ ಮೇಲೆ ಹಾಕ್ತಾ ಇದಾರಲ್ಲ ಗುರು!
ಇವ್ರು ಏನೇ ತಿಪ್ಪರಲಾಗ ಹಾಕುದ್ರೂ ತಾಕತ್ತು ಹಾಡಿಗಿರೋ ಜನಪ್ರಿಯತೆ ಇವ್ರ ಹಿಂದಿ ಹಾಡಿಗೆ ಸಿಗಲ್ಲ. ಈ ತಾಕತ್ತಿನ ಹಾಡು ಬೆಂಗಳೂರಿನ ತಂಡಕ್ಕೆ ಬೆಂಬಲ ಹುಟ್ಸಕ್ಕೆ ಕನ್ನಡವೇ ಸಾಧನ ಅಂತ ಸಾರ್ತಿದೆಯಲ್ಲಾ ಗುರು! ತಾಕತ್ತು ಹಾಡಿಗೆ ಸಿಕ್ಕಿರೋ ಜನಪ್ರಿಯತೆ ನೋಡಾದ್ರು ರಾಯಲ್ ಛಾಲೆಂಜರ್ಸ್ ತಂಡದ ಎಲ್ಲ ಪ್ರಚಾರದ ವ್ಯವಸ್ಥೇಲಿ ಕನ್ನಡಕ್ಕೆ ಮಹತ್ವ ನೀಡಬೇಕು. ಇದ್ರಿಂದ ಅವ್ರಿಗೇ ಲಾಭ. ಇಷ್ಟಕ್ಕೂ ಕನ್ನಡ ಹಾಡು ಇರಬೇಕು ಅಂತಿರೋದು ನಮ್ಮ ಬೆಂಗಳೂರಿನ ತಂಡಕ್ಕೆ ತಾನೆ? ನಮ್ಮೂರಿನ ತಂಡದ ಹಾಡಲ್ಲದೆ ಇನ್ಯಾವ ತಂಡದ ಹಾಡು ಕನ್ನಡದಲ್ಲಿ ಇರಕ್ಕೆ ಸಾಧ್ಯಾ ಗುರು?

ಬಣ್ಣ ಕಳಚಿದ ಕಳಗಗಳು!

ಚುನಾವಣೆ ಹತ್ರಾ ಆಗ್ತಿರೋ ಹಾಗೆಲ್ಲಾ ಒಂದೊಂದು ರಾಜಕೀಯ ಪಕ್ಷದ ಮುಖವೂ ಹೊಸ ಹೊಸ ಮೇಕಪ್ಪಲ್ಲಿ ಕಂಗೊಳುಸ್ತಾ ಇರೋವಾಗ ಕರ್ನಾಟಕದಲ್ಲಿ ಕಾಲೂರಕ್ಕೆ ಪ್ರಯತ್ನ ಮಾಡ್ತಿರೋ ಅಣ್ಣಾಡಿಎಂಕೆ, ಡಿಎಂಕೆ ಪಕ್ಷಗಳು ಬಾಯಿಬಿಟ್ಟು ’ತಮಿಳುನಾಡಿನ ಹಿತ ಕಾಪಾಡೋರಿಗೆ ಮಾತ್ರಾ ನಮ್ಮ ಬೆಂಬಲ, ನಮ್ಮ ಹೈಕಮಾಂಡು ಚೆನ್ನೈಲಿದೆ’ ಅಂತಂದು ಬಣ್ಣಗೇಡಾದ್ವಲ್ಲಾ ಗುರು! ಅಂತೂ ಕರ್ನಾಟಕದಲ್ಲಿ ಯಾಕೆ ರಾಜಕೀಯ ಮಾಡಕ್ಕೆ ಬಂದಿದೀವಿ ಅಂತ ಇಲ್ಲಿರೋ ದ್ರಾವಿಡ ಕಳಗಗಳು ಇವತ್ತಾದ್ರೂ ಹೇಳ್ಕೋತಿರೋದು, ನಮ್ಮ ಜನರ ಕಣ್ತೆರಸಬೇಕು...
ಚೆನ್ನೈ ಹೈಕಮಾಂಡ್!

ಅಣ್ಣಾಡಿಎಂಕೆ ಪಕ್ಷದೋರು ಅಂತಾರೆ " ಕರ್ನಾಟಕದಲ್ಲಿ ಬಿಜೆಪಿ ಹೊಗೆನಕಲ್ಲಿನ ವಿಷಯದಲ್ಲಿ ಮಾತಾಡ್ತಾ ಇದಾರೆ, ಇವರ ನಿಲುವು ತಮಿಳುನಾಡಿನ ಹಿತಕ್ಕೆ ಮಾರಕ. ಹೀಗಾಗಿ ಕರ್ನಾಟಕದಲ್ಲಿರೋ ಏಐಡಿಎಂಕೆಗೆ ಬಿಜೆಪಿ ಜೊತೆ ಮೈತ್ರಿ ಬೇಕಾಗಿಲ್ಲ. ಆದ್ರೂ ನಮ್ಮ ಚೆನ್ನೈ ಹೈಕಮಾಂಡ್ ಹೇಳ್ದ ಹಾಗೆ ಕೇಳ್ತೀವಿ" ಅಂತಾ..

ಇನ್ನು ಕಳೆದ ಬಾರಿ ಕಾಂಗ್ರೆಸ್ ಜೊತೆಯಿದ್ದ ಕರ್ನಾಟಕ ರಾಜ್ಯ ದ್ರಾವಿಡ ಮುನ್ನೇತ್ರ ಕಳಗದ ಮುಖಂಡರು ನೇರವಾಗೇ ಬೆದರಿಕೆ ಹಾಕ್ತಾರೆ "ತಮಿಳರಿಗೆ ಪ್ರಾತಿನಿಧ್ಯ ಕೊಡದ ಯಾವ ರಾಜಕೀಯ ಪಕ್ಷಕ್ಕೂ ನಮ್ಮ ಬೆಂಬಲವಿಲ್ಲಾ... ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷವಾದ ಪ್ರಾತಿನಿಧ್ಯ ಕೊಡಬೇಕು. ಇಲ್ಲದಿದ್ದರೆ ಇದು ಸಮಸ್ಯೆಗಳಿಗೆ ಕಾರಣವಾದೀತು" ಅಂತ. ಜೊತೇಲೆ ನಾವು ಚೆನ್ನೈಗೆ ವರದಿ ಕೊಡ್ತೀವಿ, ನಮ್ಮ ಹೈಕಮಾಂಡ್ ಹೇಳಿದ್ ಹಾಗೆ ಕೇಳ್ತೀವಿ ಅಂತಾರೆ.
ಇನ್ನು ಬಿಜೆಪಿ ಜೊತೆ ಮೈತ್ರಿ ಬಗ್ಗೆ ಮಾತಾಡ್ತೀನಿ ಅನ್ನೋ ಜಯಲಲಿತಮ್ಮನೋರು ರಾಜ್ಯದಲ್ಲಿರೋ ನಾಯಕರಿಗೆ "ಮಾತುಕತೆಯೆಲ್ಲಾ ನಿಮ್ ಜೊತೆ ಅಲ್ಲಾ, ದಿಲ್ಲಿ ಹೈಕಮಾಂಡ್ ಜೊತೆ" ಅನ್ನೋದ್ನ ಗುಜರಾತಿನ ಮೋದಿ ಜೊತೆ ಚರ್ಚೆ ಮಾಡೋದ್ರ ಮೂಲಕ ತೋರ್ಸಿಕೊಡ್ತಾರೆ.
ಚುನಾವಣಾ ಮೈತ್ರಿ ಭಾಜಪ ಜೊತೆ ಯಾಕೆ ಬೇಡ ಗೊತ್ತಾ?
ಅಣ್ಣಾಡಿಎಂಕೆ ಪಕ್ಷದ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಕೃಷ್ಣರಾಜುರವರು ಅಂತಾರೆ "ಕರ್ನಾಟಕದಲ್ಲಿ ನಾವೇನೋ ಬಿಜೆಪಿ ಜೊತೆ ಕೈ ಜೋಡ್ಸಮಾ ಅಂತಲೇ ಇದ್ವಿ, ಆದ್ರೆ ಅವ್ರು ಈಗ ಹೊಗೆನಕಲ್ ವಿಷ್ಯದಲ್ಲಿ ಪರವಾಗಿ, ಕರ್ನಾಟಕದ ಪರವಾಗಿ ದನಿ ಎತ್ಬುಟ್ರು. ಅದಕ್ಕೇ ಅವ್ರು ಜೊತೆ ಮೈತ್ರಿ ಬೇಡ ಅನ್ನೋದು ಕರ್ನಾಟಕ ರಾಜ್ಯದ ಅಣ್ಣಾಡಿಎಂಕೆಯ ಅಭಿಪ್ರಾಯ ಅಂದಿದಾರೆ. ಏನ್ ಗುರು! ಇಂಥೋರೆಲ್ಲಾ ಇಡೀ ಕರ್ನಾಟಕದ ತಮಿಳರ ಪ್ರತಿನಿಧಿಗಳು ಆಗಿಬಿಟ್ರೆ, ಕರ್ನಾಟಕದ ತಮಿಳರೆಲ್ಲಾ ಇವ್ರ್ ಥರಾ ಆಗ್ಬಿಟ್ರೆ ಇವ್ರೆಲ್ಲಾ ಆಗ ನಮ್ಮ ಪಾಲಿಗೆ ಸೆರಗಲ್ಲಿ ಕಟ್ಕೊಳೋ ಕೆಂಡ ಆಗೋದ್ರಲ್ಲಿ ಯಾವ ಸಂಶಯಾನೂ ಇಲ್ಲಾ.

ಈ ಕಳಗಗಳ ನಿಯತ್ತು ಯಾರ ಕಡೆಗಿದೆ? ಗುರು!
ತಕ್ಕಳ್ಳಪ್ಪಾ... ಅಂತೂ ಇಂತೂ ಈ ಕಳಗಗಳು ಅನ್ನ ಕೊಡ್ತಿರೋ ಮಣ್ಣಿನ ಬಗ್ಗೆ ತಮಗೆಷ್ಟು ನಿಯತ್ತಿದೆ ಅಂತಾ ತೋರ್ಸೇ ಬಿಟ್ವಲ್ಲಾ! ಕನ್ನಡನಾಡಲ್ಲಿ ಅನ್ನ ಬಟ್ಟೆ ಅರಸ್ಕೊಂಡು ಹೊಟ್ಟೆಪಾಡಿಗ್ ವಲಸೆ ಬಂದಿರೋರು ಇಲ್ಲಿ ನೆಲಜಲ, ಜನರ ಪರವಾಗಿರಬೇಕು, ಇಲ್ಲಿನ ಮುಖ್ಯವಾಹಿನೀಲಿ ಬೆರೀಬೇಕು ಅನ್ನೋದನ್ನೇ ಈ ಪಕ್ಷಗಳು ಮರುತ್ವಲ್ಲಾ ಗುರು? ನೂರಾರು ವರ್ಷಗಳ ಹಿಂದೆ ಬಂದಿರೋ ಬೇರೆ ಭಾಷೆಯೋರು ಇಲ್ಲಿ ಕೂತು ತಮ್ಮ ಬದ್ಧತೇನ ಅವರ ತವರಿನ ಬಗ್ಗೆ ಇಟ್ಕೊಂಡು, ಅದರ ಬಗ್ಗೆ ಇಲ್ಲೇ ರಾಜಕೀಯ ಮಾಡ್ತೀವಿ ಅನ್ನೋದು ಎಷ್ಟು ಸರಿ ಗುರು?
ಕಲೀಬೇಕಾದ್ ಪಾಠ!
ಕನ್ನಡದೋರು ಈ ಪಕ್ಷಗಳ ನಾಡವಿರೋಧಿ ನಿಲುವನ್ನು ಗುರುತಿಸಬೇಕು ಮತ್ತು ಎಚ್ಚೆತ್ಕೋಬೇಕು. ಯಾವ ರಾಜಕೀಯ ಪಕ್ಷಗಳು ಇವ್ರು ಜೊತೆ ಮೈತ್ರಿ ಮಾಡ್ಕೋತಾರೋ ಅವ್ರಿಗೆ ಮತ ಕೊಡಲ್ಲಾ ಅಂತ ನಿರ್ಧಾರ ಮಾಡ್ಕೊಂಡು, ಆಯಾ ಪಕ್ಷದೋರು ಮತ ಕೇಳಕ್ ಬಂದ್ರೆ ಮುಖದ್ ಮೇಲೆ ಹೊಡದಂಗೆ ಹೇಳಬೇಕು.
ನಮ್ಮ ನಾಡಲ್ಲಿರೋ ವಲಸಿಗ್ರು ಮೊದಲು ಮುಖ್ಯವಾಹಿನೀಲಿ ಬೆರೆಯಬೇಕು. ಯಾವುದೋ ನಾಕು ತಲೆಮಾರಿನ ಹಿಂದಿನೋರು ತಮಿಳ್ರಾಗಿದ್ರೂ ಅಂತಾ ತಮ್ಮನ್ನು ಹಾಗೇ ತಿಳ್ಕೊಂಡು ಬರೀ ತಮಿಳು ಸಿನಿಮಾ, ತಮಿಳು ರಾಜಕೀಯ ಪಕ್ಷಗಳು ಅಂತ ಅಂದಂದುಕೊಂಡೇ ತಮ್ಮ ನಿಯತ್ತನ್ನು ಆ ನಾಡಿಗೆ ಮೀಸಲಾಗಿಸಬಾರ್ದು. ತಮ್ಮ ನಿಯತ್ತನ್ನು ಅನ್ನ, ಬದುಕು ಕೊಡ್ತಿರೋ ನಾಡಿಗೆ ತೋರುಸ್ಬೇಕು. ಆಗ ಕನ್ನಡದೋರ ವಿಶ್ವಾಸಾನು ಗಳುಸ್ಕೋಬೌದು. ಕನ್ನಡದವ್ರಾಗೂ ಇರಬೌದು. ಮುಖ್ಯವಾಗಿ ಮನೆಮುರಿಯೋ ಕಳಗಗಳಿಗೆ ಮತ ಕೊಡ್ಲೇಬಾರ್ದು.
ಇನ್ನು ಕರ್ನಾಟಕದಲ್ಲಿರೋ ಮಹಾ ರಾಜಕೀಯ ಪಕ್ಷಗಳು ಇಂಥಾ ಪಕ್ಷಗಳ ಜೊತೆ ಯಾವ ತೆರನಾದ ಮೈತ್ರಿಗೂ ಮುಂದಾಗಬಾರ್ದು. ಯಾವ ಪಕ್ಷದ ಜೊತೆನೂ ಮೈತ್ರಿ ಮಾಡ್ಕೊಳ್ಳೋಕೆ ಮುಂದಾಗಕ್ಕೂ ಮೊದಲು ತಮ್ಮ ತತ್ವ ಸಿದ್ಧಾಂತಗಳನ್ನು ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿಸಿಕೋ ಬೇಕು. ಅಲ್ವಾ ಗುರು?

ಇವರದ್ದು ಬರೀ ನಟನೆ ಗುರು!

ಮೊನ್ನೆ ಹೊಗೆನಕಲ್ ಹೋರಾಟಕ್ಕೆ ಬರ್ದೆ ಇರೋದ್ರ ಬಗ್ಗೆ ಡಾ.ವಿಷ್ಣುವರ್ಧನ್ ಅವ್ರು ತಮ್ ಮನ್ಸಾಗಿನ ಮಾತು ಹೇಳವ್ರೆ. ಪಾಪ, ನಿಜಾನೆ ಹೇಳ್ತಾ ಇದಾರೆ. ಇದರ ಅರ್ಥ ಇವ್ರು ಸಿನಿಮಾ ನಟರು ಅನ್ನೋದು ಬಿಟ್ರೆ ಬೇರ್ಯಾವ ಗುರುತೂ ಇಲ್ಲ. ಇವ್ರುನ್ನೇನಾದ್ರೂ ನಾಡುನುಡಿ ಕಾಪಾಡೊ ನಾಯಕತ್ವ ಇರೋರು ಅಂತ ಅಂದ್ಕೊಂಡ್ರೆ ತಪ್ಪಾಯ್ತುದೆ ಗುರು. ಸಿನಿಮಾದೋರು ಅಂದ್ರೆ ನಾಡುನುಡಿ ಓರಾಟಕ್ಕೆ ಬರ್ಲೇ ಬೇಕು ಅಂತ ನಾವೇನಾರಾ ಅನ್ಕಂಡಿದ್ರೆ ಮಹಾ ದಡ್ರಾಯ್ತೀವಿ.
ನಾಡುನುಡಿ ಬಗ್ಗೆ ಕಾಳಜಿ ಬರೀ ನಟನೆ!
ನಮ್ ಸಿನಿಮಾದೋರು ಎಂತಾ ಮಹನೀಯರು ಅಂದ್ರೆ ಇವ್ರು ಬಾಯಿ ಬಿಟ್ರೆ ನಾಡು-ನುಡಿ ಬಗ್ಗೆ ಮುತ್ತುಗಳು ಉದುರುತ್ವೆ. ತಮ್ಮ ಸಿನಿಮಾಗಳಲ್ಲಿ ಪುಂಖಾನುಪುಂಖವಾಗಿ ನಾಡಪ್ರೇಮದ ಬಗ್ಗೆ ಭಾಷಣ ಕೊರೀತಾರೆ. ತಾಯಿಗಾಗಿ ನಾಡಿಗಾಗಿ ಪ್ರಾಣ ಕೊಡ್ತೀವಿ ಅಂತ್ಲೂ ತಪ್ಪದೆ ಅಂತಿರ್ತಾರೆ. ಇದೇನ್ರಣ್ಣಾ ಸಿನಿಮಾದಲ್ಲಿ ಇಂಗಿಂಗಂದಿದ್ರೆ, ಈಗ ಕನ್ನಡದೋರ ಓರಾಟ ಅಂದ್ರೆ ತಲೆ ತಪ್ಪುಸ್ಕೊಂಡು ಮಾಯಾ ಆಗ್ಬುಟ್ರಲ್ಲಾ ಅಂತಂದ್ರೋ " ಅಯ್ಯೋ ಬಡ್ಡೇತ್ತವಾ, ಕಲೆಗೆ ಬಾಸೆ ಇಲ್ಲ, ಕಲಾವಿದ್ರನ್ನ ಇಂಗೆಲ್ಲಾ ನಾಡು ನುಡಿ ಅಂತ ಓರಾಟಕ್ ಎಳೀಬಾರ್ದು ಕಣ್ರಲಾ" ಅಂತ ಭಾಷಣ ಕುಟ್ತಾರೆ. ಜೊತೆಗೆ ಯಾವತ್ಗೂ ಅನಿವಾರ್ಯ ಆಗದ ಹೊರತು, ಹೊರಗಿಂದ ಒತ್ತಡ ಬೀಳದ ಹೊರ್ತು ತಾವಾಗೇ ನಾಡುನುಡಿ ಅಂತ ಹೋರಾಟಕ್ ಇಳ್ದಿರೋ ಮಾನುಬಾವ್ರು ಈಗ್ಯಾರೂ ಇದ್ದಂಗ್ ಇಲ್ಲ. ಇದೇನ್ ಇವತ್ತು ನಿನ್ನೆ ಕತೆ ಅಲ್ಲ ಅಥ್ವಾ ಯಾರೋ ಒಬ್ರು ಇಂಗವ್ರೆ ಅನ್ನೋಂಗೂ ಇಲ್ಲ.

ಕನ್ನಡದ ಹೆಸ್ರಲ್ಲೇ ಮಂತ್ರಿಗಳಾದೋರು!
ನಮ್ಮ ಕನ್ನಡ ಚಿತ್ರರಂಗದಾಗಿನ ಅದೆಷ್ಟೊ ಜನ ನಾಯಕ್ರುಗಳು ಕನ್ನಡ ಕನ್ನಡ ಅನ್ಕಂಡೇ ಉದ್ಧಾರ ಆಗ್ಬುಟ್ಟವ್ರೆ.
ಅಷ್ಟೇ ಅಲ್ಲ ಕನ್ನಡದವ್ರು ಅಂದ್ರೆ ಯಾವ್ದಕ್ಕೊ ಹೆದರದ ಧೀರರು. ಬನ್ನಿ ಒಟ್ಟಾಗಿ ಹೋರಾಟ ಮಾಡೋಣ ಅಂತ ಹಾಡ್ಕೊಂಡು ಸೈಕಲ್ ಹೊಡೀತಾರೆ. ಹೀಗ್ ಹೇಳ್ಕೊಂಡ್ ಹೇಳ್ಕೊಂಡೇ ಚುನಾವಣೆ ಗೆಲ್ತಾರೆ, ಸಂಸದರಾಗ್ತಾರೆ, ಮಂತ್ರಿಗಳೂ ಆಗ್ತಾರೆ. ಇಕೊಳ್ಳಿ, ಇವ್ರ್ ಒಂದು ವರ್ಸೆ ನೋಡಿ.ಅಬ್ಬಾ ಎಂಥಾ ನಾಡ ಪ್ರೇಮಾನಪ್ಪ ಇವ್ರುದ್ದು. ಸಿದ್ಧವೋ ಸಿದ್ಧವೋ ಕನ್ನಡಕ್ಕೆ ಸಾಯಲು ಅಂತ ಹಾಡ್ಕೊಂಡು ಕುಣಿದ ಈ ಮಹಾನುಭಾವರ ನಾಡಪ್ರೇಮಕ್ಕೇನು ಕೊರತೆ ಇಲ್ಲ. ಕನ್ನಡ ಕನ್ನಡ ಅಂತಾ ಅಂದಂದೆ ಜನ್ರಿಂದ ಚಪ್ಪಾಳೆ ಗಿಟ್ಟುಸ್ಕೊಂಡಿದ್ದೇನು, ಸೀಟಿ ಹೊಡುಸ್ಕೊಂಡಿದ್ದೇನು...ಇಕಾ ನೋಡುದ್ರಲ್ಲಾ, ಅದೇನೇನೋ ಆಗ್ತೀನಿ ಅನ್ನೋರು "ಮನುಷ್ಯ ಆದ್ರೆ, ನಾಡು ನುಡಿ ಕಾಪಾಡಕ್ಕೆ ಮುಂದಾಗಿ ಕನ್ನಡಿಗರ ಹೋರಾಟಕ್ಕೆ ಬತ್ತೀನಿ" ಅಂತ ಅನ್ಲಿಲ್ವಲ್ಲಾ ಅಂತಾ ನೀವು ಕ್ಯಾತೆ ತೆಗೀಬೇಡಿ. ಹೋರಾಟಕ್ಕೆ ಇಳ್ಯಲ್ಲ ಅನ್ನೋರು ಸಿನಿಮಾದಲ್ಲಿ "ಸಿದ್ಧವೋ ಬದ್ಧವೋ ಕನ್ನಡಕ್ಕೆ ಸಾಯಲು" ಅಂತನ್ನೋದು ಬರಿ ಅರಚಾಟ ಆಗುತ್ತೆ, ಮೊದ್ಲು ನಿಲ್ಲುಸ್ಲಿ ಅನ್ನೋ ನಿಮ್ಮ ಮಾತು ನಿಜಾನೆ, ಆದ್ರೂ "ಇಡೀ ಕನ್ನಡದ ಜನರೆಲ್ಲಾ ಇಷ್ಟು ವರ್ಷ ಮನೆ ಮಕ್ಕಳಿಗಿಂತ ಹೆಚ್ಚು ಜ್ವಾಪಾನ ಮಾಡಿ ಅನ್ನ, ಬಟ್ಟೆ, ಹೆಸರು ಸಂಪತ್ತು ಎಲ್ಲಾ ಕೊಟ್ಟವ್ರಲ್ಲಾ, ಈ ಜನರ ಸಮಸ್ಯೆ ನಮ್ದೂನೂವೆ ಅನ್ನೋ ಗ್ಯಾನಾನೆ ಇದ್ದಂಗಿಲ್ಲಾ ಕಣ್ರಪಾ ಇವ್ರುಗೆ. ಅದಿಕ್ಕೆಯಾ ಹಂಸಲೇಕಪ್ಪೋರು ದಿಲ್ಲಿನಾಗ್ ಕಾವೇರಿ ಓರಾಟಕ್ ಓಗಿದ್ದಾಗ ಇನ್ ಮ್ಯಾಕೆ ಯಾವನ್ಗೂನೂವೆ ನಾಡುನುಡಿ ಅಂತಾ ಹಾಡ್ ಬರ್ಕೊಡಕ್ಕಿಲ್ಲ ಅಂದ್ರು" ಅಂತಾ ಗೊಣಗಿ ಶಾಪ ಹಾಕ್ಬೇಡಿ. ಪಾಪ, ಅವ್ರೂ ಎಷ್ಟೇ ಆದ್ರೂ ಕನ್ನಡದವ್ರೇ ತಾನೆ!
ನಿಜಕ್ಕೂ ದಡ್ಡರು ಅಂದ್ರೆ ನಾವೇಯಾ...

ಅಲ್ಲಿ ಚೆನ್ನೈನಲ್ಲಿರೋ ಸಿನಿಮಾ ಜನರೆಲ್ಲಾ ಒಟ್ಗೆ ಸೇರ್ಕೊಂಡು ಕನ್ನಡದವ್ರ್ ಬಗ್ಗೆ ಥೂ ಛೀ ಅಂತ ಕಛಡವಾಗಿ ಮಾತಾಡ್ತಾ ಔರೆ, ಮನ್ಸಿಗ್ ಬಂದಂಗೆ ಸಂಗ ಸಂಸ್ತೆಗಳಿಂದ ಕನ್ನಡ ಸಿನಿಮಾದವ್ರ್ನ ತೆಗುದ್ ಬಿಸಾಕ್ತಾ ಇರೋದ್ನ ನೋಡ್ಕಂಡೂ ತುಟಿಕ್ ಪಿಟಿಕ್ ಅನ್ದೋರು ನಾಡಪರ ಓರಾಟಕ್ಕೆ ಮುಂದಾಯ್ತಾರೆ ಅಂತ ನಂಬ್ಕಂಡಿರೋ ನಾವೇ ಅಲ್ವರಾ ದಡ್ರು?
ಸಿನಿಮಾನೆ ಬ್ಯಾರೆ, ನಟನೇನೆ ಬ್ಯಾರೆ, ಜೀವನಾನೆ ಬ್ಯಾರೆ ಅಂತ ನಾವು ಅರ್ತ ಮಾಡ್ಕೊಂಬುಟ್ರೆ ಈ ಈರೋಗಳು ತಕ್ಕತೈ ಅಂತ ಕುಣುದ್ರೆ ಉಬ್ಬದೂ ಇಲ್ಲ, ಓರಾಟಕ್ಕೆ ಬರ್ಲಿಲ್ಲಾ ಅಂತ ಎದೆ ಎದೆ ಬಡ್ಕೊಳೋದೂ ಇಲ್ಲಾ... ಇವ್ರುನ್ನೂ ಒಟ್ಟೆಪಾಡಿಗೆ ಬಣ್ಣಕಟ್ಟೊ ಸಾಮಾನ್ಯದೋರು, ನಾಡುನುಡಿ ಕಾಪಾಡಕ್ಕೆ ಬೂಮಿಗ್ ಬಂದಿರೋ ದ್ಯಾವ್ರುಗಳಲ್ಲ ಅಂತ ನಮ್ ಜನ ಅರ್ತ ಮಾಡ್ಕೊಂಬುಟ್ರೆ ಓರಾಟಕ್ ಈ ನಟ ಬರ್ಲಿಲ್ಲ, ಆ ನಟ ಬರ್ಲಿಲ್ಲ ಅಂತ ಪ್ರತಿಭಟನೆ ಮಾಡಿ ನಮ್ ಮೂಗುನ್ನ ನಾವೇ ಕುಯ್ಕಳೋ ಕೆಲ್ಸ ಮಾಡೋದ್ ತಪ್ತದೆ. ಕನ್ನಡದೋರ್ ಒಗ್ಗಟ್ಟು ಮುರಿಯೋದೂ ತಪ್ತದೆ. ಏನಂದೀರಾ ಗುರು?

ತಾಕತ್ತು! ಈ ಹಾಡು ಸಕ್ಕತ್ತು!

ಇಂಡಿಯನ್ ಪ್ರೀಮಿಯರ್ ಲೀಗಿನಲ್ಲಿ ಸೆಣುಸ್ತಾ ಇರೋ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರನ್ನು ಉತ್ತೇಜಿಸಕ್ಕೇ ಅಂತ ಸಕ್ಕತ್ತಾಗಿರೋ ಒಂದು ಹಾಡನ್ನು ಅಭಿಮಾನಿಗಳು ಮಾಡಿದಾರೆ! ಈ ಹಾಡು ಎಲ್ರು ಮನ್ಸನ್ ಗೆದ್ದು ಸಖತ್ ಮಿಂಚ್ತಿದೆ ಗುರು.
ಮೊದಲಿಗೆ, ಈ ತಂಡದೋರ ಬಟ್ಟೆ ಬಣ್ಣಾನೂ ಹಳದಿ, ಕೆಂಪು ಆಗಿರೋದುನ್ನ ನೋಡ್ತಿದ್ರೆ ಖುಷಿಯಾಗುತ್ತೆ. ಬೇರೆ ಬೇರೆ ದೇಶದ ಆಟಗಾರರನ್ನು ಈ ತಂಡ ಒಳಗೊಂಡಿದೆ, ಈ ಲೀಗಿನ ಪಂದ್ಯಗಳು ಭಾರತದ ಎಲ್ಲಾ ಮೂಲೆ ಮೂಲೆಲಿರೋ ಜನರೂ ನೋಡ್ತಾರೆ. ಅದರ ಜೊತೆಗೆ ಈ ಹಾಡನ್ನ ಕೂಡಾ!
ಕನ್ನಡದಲ್ಲಿರೋದು ಹೆಮ್ಮೆ, ಕೀಳರಿಮೆ ಅಲ್ಲ!
ಈ ತಂಡಕ್ಕಾಗಿ ಕಟ್ಟಿರೋ ಹಾಡು ಕನ್ನಡದಲ್ಲಿರೋದು, ಹಾಗಿಟ್ಟುಕೊಳ್ಳೋದನ್ನೇ ತಮ್ಮ ವಿಶೇಷತೆಯಾಗಿ ಮೆರುಸ್ತಾ ಇರೋದು ನಿಜವಾಗ್ಲೂ ನಾವು ಕನ್ನಡಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಇರೋ ಬಳಕೆಯ ಸಾಧ್ಯತೇನಾ ಕಣ್ ಬಿಟ್ ನೋಡ್ತಿರೋ ಸೂಚನೆ ಗುರು!
ಇಂಟರ್ ನ್ಯಾಷನಲ್ ಆಟ, ಇಂಟರ್ ನ್ಯಾಷನಲ್ ಆಟಗಾರ್ರು ಅಂತ ಇಲ್ಲಿ ಕನ್ನಡಾನ ಕಡೆಗಣಿಸ್ದೆ ಇರೋದು ನಮಗೆಲ್ಲ ಪಾಠವಾಗಬೇಕಿದೆ. ನಿಜಾ ಹೇಳ್ಬೇಕು ಅಂದ್ರೆ ಈ ಹಾಡಿಗೆ, ಈ ತಂಡಕ್ಕೆ ಒಂದು ಖಳೆ ಬಂದಿರೋದೆ ಆ ಹಾಡಲ್ಲಿ ಸ್ಥಳೀಯ ಸೊಗಡನ್ನ ತನ್ನದಾಗಿಸಿಕೊಂಡಿದ್ದಕ್ಕೇ. ಏನಂತೀ ಗುರು!
ಇದು ಕ್ಲಬ್ ಕ್ರಿಕೆಟ್ ಆಗಿದ್ರೂ ಕೂಡಾ, ಆಟ ನೋಡಕ್ ಬರೋರೆಲ್ಲಾ ಕೈಯ್ಯಲ್ಲಿ ಹಳದಿ ಕೆಂಪು ಬಾವುಟ ಹಿಡ್ಕೊಂಡ್ ಬನ್ನಿ ಅಂತಿರೋದನ್ನು ನೀವು ಗಮನಿಸಿ ನೋಡುದ್ರೆ, ಇದಕ್ಕಿರೋ ಮಹತ್ವಾ ರಾಷ್ಟ್ರೀಯ ಕ್ರಿಕೆಟ್ಟಿಗಿಂತ ಜಾಸ್ತಿ ಗುರು! ಸುಮ್ಮನೆ ಊಹಿಸಿಕೊಳ್ಳಿ, ಚಿನ್ನಸ್ವಾಮಿ ಕ್ರೀಡಾಂಗಣದ ತುಂಬಾ.... ಹಳದಿ ಕೆಂಪಿನ ಬಾವುಟಗಳು ರಾರಾಜಿಸ್ತಾ ಇದ್ರೆ, ಅದುನ್ನ ದೂರದರ್ಶನದಲ್ಲಿ ನೋಡ್ತಾ ಇದ್ರೆ ನಾಡಿನ ಮೂಲೆ ಮೂಲೇಲಿರೋ ಕನ್ನಡದೋರ ಮನಸ್ಸುಗಳು ಹೇಗೆ ಹಿಗ್ಗುತ್ವೆ, ಹೇಗೆ ಒಗ್ಗೂಡುತ್ವೆ ಅಂತಾ!

ಛೇ! ಇವರದ್ದೂ ಒಂದು ಪ್ರಾದೇಶಿಕ ಪಕ್ಷಾನಾ?

’ಇಲ್ಲಿನ ನಾಡು ನುಡಿ ಕಾಪಾಡಕ್ಕೆ ಈ ರಾಷ್ಟ್ರೀಯ ಪಕ್ಷಗಳಿಂದ ಆಗದ ಕೆಲ್ಸ, ನಮ್ಗೊಂದು ನಮ್ಮದೇ ಮಣ್ಣಿನ ಪ್ರಾದೇಶಿಕ ಪಕ್ಷ ಇದ್ರೆ ಚೆನ್ನ’ ಅಂತ ನಾಡಿನ ಜನ್ರು ಅಂದ್ಕೊತಾ ಇದಾರೆ ಅನ್ನೋ ಸುಳಿವು ಸಿಕ್ಕಿದ್ದೇ ತಡ ಜಾತ್ಯಾತೀತ ಜನತಾ ದಳದ ಮಹಾದಂಡನಾಯಕರಾದ ಶ್ರೀಮಾನ್ ದೇವೇಗೌಡ್ರ ಸುಪುತ್ರರೂ, ಅಂದಿನ ಸರ್ಕಾರದ ದಂಡನಾಯಕರೂ ಆಗಿದ್ದ ಶ್ರೀಯುತ ಕುಮಾರ ಸ್ವಾಮಿಯೋರು... ಕಣ್ಣೀರು ಸುರಿಸುತ್ತಾ "ಹೌದು, ನಮ್ಮ ಪಕ್ಷಾನೂ ಸೇರಿದ ಹಾಗೆ ಯಾವ ರಾಷ್ಟ್ರೀಯ ಪಕ್ಷಗಳೂ ಈ ನಾಡಿಗೆ ನ್ಯಾಯ ಒದುಗುಸ್ತಿಲ್ಲ, ಇದರಿಂದ ನಾನಂತೂ ಸಖತ್ ಬೇಸತ್ತು ಹೋಗಿದೀನಿ, ನಾನೇ ಒಂದು ಪ್ರಾದೇಶಿಕ ಪಕ್ಷ ಕಟ್ಬೇಕು ಅಂತ ಗಂಭೀರವಾಗಿ ಯೋಚುಸ್ತಿದೀನಿ" ಅಂದ್ಬಿಟ್ರು. ಇದನ್ನು ಮಾಡಕ್ ಅವ್ರು ಪ್ರಯತ್ನ ಪಟ್ರೋ ಇಲ್ವೋ ಒಟ್ನಲ್ಲಿ ಅಂಥಾ ಒಂದು ಪಕ್ಷಾ ಅಂತು ಅವ್ರುಗೆ ಇವತ್ತಿನ ತನಕಾ ಕಟ್ಟಕ್ ಅಗಿಲ್ಲ.


ಪ್ಲೇಟ್ ಬದಲಾಯ್ಸಿದ ಕುಮಾರಣ್ಣ!

ಆರು ತಿಂಗಳ ಹಿಂದೆ ತಮ್ಮ ಪಕ್ಷಾನೂ ರಾಷ್ಟ್ರೀಯ ಪಕ್ಷದ ಸಾಲಲ್ಲಿ ನಿಲ್ಲಿಸಿದ್ದ ಇವ್ರು, ಈಗ ಚುನಾವಣೆ ಹತ್ರ ಆಗ್ತಿದ್ ಹಾಗೇ ತಮ್ಮದು ಪ್ರಾದೇಶಿಕ ಪಕ್ಷಾ ಅಂತ ಊರೂರು ಅಲಕೊಂಡು ಮತ ಕೇಳ್ತಿರೋದು ನೋಡಿದ ಜನ "ಇದೇನ್ರಣಾ, ರಾಷ್ಟ್ರೀಯ ಪಕ್ಷ ಅಂದ್ರೆ ಗಿಟ್ತಿಲ್ಲ ಅಂತ ಪ್ರಾದೇಶಿಕ ಪಕ್ಷಾ ಅನ್ನೋಕ್ ಹೊಂ‍ಟವ್ರಲ್ಲಾ ಇವ್ರು" ಅಂತ ಮುಸಿಮುಸಿ ನಗ್ತಾವ್ರೆ ಗುರು! ಅನುಕೂಲಕ್ ತಕ್ಕ ಹಾಗೆ ಪ್ಲೇಟ್ ಬದಲಾಯುಸ್ತಿರೋ ಕುಮಾರಣ್ಣ ಮತ ಬೇಕು ಅಂದ್ರೆ ಏನೇನೆಲ್ಲಾ ಮಾಡಕ್ ಮುಂದಾಗ್ತಾರೆ ಅನ್ನಕ್ಕೆ ಇಲ್ಲಿದೆ ನೋಡಿ ಸ್ಯಾಂಪಲ್ಲು.

ಪರಭಾಷೆಯೋರ ಓಲೈಕೆ

ಹೊಟ್ಟೆ ಪಾಡಿಗಾಗಿ ವಲಸೆ ಬರೋ ಬೇರೆ ಭಾಷೆಯೋರು ಇಲ್ಲಿನ ಮುಖ್ಯವಾಹಿನೀಗೆ ಬರಬೇಕಾದ್ದು ಅವ್ರ ಧರ್ಮವಾದ್ರೆ, ಅವರುಗಳು ಹಾಗೆ ಬರೋಕೆ ನಾವು ಉತ್ತೇಜನ ಕೊಡಬೇಕಾದ್ದು ನಮ್ಮ ಕರ್ತವ್ಯ ಗುರು. ಆದರೆ ಅಧಿಕಾರ ಹಿಡೀಬೇಕು ಅಂತ ಪರಭಾಷಿಕರ ಓಲೈಕೆಗೆ ಮುಂದಾಗಿರೋ ಜಾತ್ಯಾತೀತ ಜನತಾ ದಳದೋರ ಬೆಂಗಳೂರಿನ ಶಾಂತಿನಗರದ ಸಭೆಯಲ್ಲಿ ಮಿರಮಿರ ಮಿಂಚಿದ್ದು ಮಾತ್ರಾ ತಮಿಳು ಗುರು.

’ಬಾಯಲ್ಲಿ ಭಗವದ್ ಗೀತೆ ಬಗಲಲ್ಲಿ ಬಾಕು’ ಅನ್ನೋಕೆ ಇದಕ್ಕಿಂತ ಉದಾಹರಣೆ ಬೇಕಾ? ಹೀಗೆ ಹೊರಗಿಂದ ಬಂದವ್ರನ್ನು ಹೊರಗಿನವರಾಗೇ ಉಳ್ಸಬೇಕು ಅಂತಾ ಹುನ್ನಾರ ಮಾಡೋದು ನಾಡಿನ ಹಿತಕ್ಕೆ ಮಾರಕವಾಗಲ್ವಾ? ಇಂಥಾ ನಡವಳಿಕೆಗಳಿಂದ್ಲೇ ಬೆಂಗಳೂರಿನ ಬಡಾವಣೆಗಳಿಗೆ, ರಸ್ತೆಗಳಿಗೆ ಬೇರೆ ಭಾಷೆಯೋರ ಹೆಸರುಗಳು ಬರೋದು, ಬೆಂಗಳೂರಿನಲ್ಲಿ ನಾವೆಂದೂ ಕಂಡು ಕೇಳರಿಯದ ತಿರುವಳ್ಳುವರ್ ಪ್ರತಿಮೆ ನಿಲ್ಲುಸ್ತೀವಿ ಅನ್ನೋದು, ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅಂತಾ ಕೂಗೆಬ್ಬಿಸೋದು ನಡ್ಯೋದು ಗುರು.

ದುರಂತವೆಂದರೆ ಇಂತಹ ಓಲೈಕೆಯ ನಡವಳಿಕೆ ರಾಷ್ಟ್ರೀಯ ಪಕ್ಷಗಳಿಂದ ಮಾತ್ರಾ ಆಗ್ತಿಲ್ಲ, ನಾವು ಈ ಮಣ್ಣಿನ ಮಕ್ಕಳು ಅಂತ ಹೇಳ್ಕೊಳ್ತಿರೋರಿಂದ್ಲೂ ಆಗ್ತಿದೆ. ಎಲ್ಲಿಲ್ಲಿ ಯಾವ್ಯಾವ ಪರಭಾಷಿಕ್ರು ಇದಾರೋ ಅಲ್ಲಲ್ಲಿ ಅವರವರ ಭಾಷೇಲಿ ಮತ ಕೇಳೋದು ಮಹಾತಂತ್ರಗಾರಿಕೆ ಥರಾ ಕಾಣ್ಸುದ್ರೂ, ತಾತ್ಕಾಲಿಕವಾಗಿ ಮತಗಳ್ನ ತಂದುಕೊಟ್ರೂ ಕನ್ನಡಿಗರ ಕಣ್ಣಲ್ಲಿ ಇವ್ರುಗಳ್ನ ಕೀಳು ಮಾಡಿಬಿಡುತ್ತೆ ಅನ್ನೋದು ಇವರಿಗೆ ಯಾಕೋ ಅರಿವಾಗ್ತಿಲ್ಲ ಗುರು. "ಕನ್ನಡಿಗರನ್ನು, ಕರ್ನಾಟಕವನ್ನು ರಾಷ್ಟ್ರೀಯ ಪಕ್ಷಗಳು ಹಾಳು ಮಾಡಿಬಿಡ್ತವೆ. ಪ್ರಾದೇಶಿಕ ಪಕ್ಷಗಳನ್ನು ಬೆಳೆಸಿ. ನಮ್ಮದು ಪ್ರಾದೇಶಿಕ ಪಕ್ಷ. ನಮಗೇ ಮತ ಕೊಡಿ, ನಾವು ಉದ್ಧಾರ ಮಾಡ್ತೀವಿ" ಅನ್ನೋರ ನಿಜವಾದ ಬಣ್ಣ ಇದು. ಮತ ಬೇಕು ಅಂದ್ರೆ ಇವತ್ತು ತಮಿಳಲ್ಲಿ ಸಭೆ ಮಾಡಕ್ಕೆ, ಪ್ರಚಾರಕ್ಕೆ ಮುಂದಾಗೊ ಮಾನಗೇಡಿಗಳು ನಾಳೆ ಇಲ್ಲಿರೋ ತಮಿಳ್ರನ್ನು ಸಂತೋಷ ಪಡ್ಸಕ್ಕೆ ತಮಿಳುನಾಡಿಗೆ ಹೊಗೆನಕಲ್ಲನ್ನೂ ಬಿಟ್ಟುಕೊಟ್ಟಾರು, ಕಾವೇರೀನೂ ಬಿಟ್ಟಾರು, ನಿಪ್ಪಾಣಿನ್ನೂ ಕೊಟ್ಟಾರು, ಬೆಳಗಾವಿನೂ ಕೊಟ್ಟಾರು. ಅಷ್ಟ್ಯಾಕೆ, ಕನ್ನಡ-ಕರ್ನಾಟಕ-ಕನ್ನಡಿಗರ ಬಗ್ಗೆ ಒಂದೇ ಒಂದು ಅಕ್ಷರಾನಾದ್ರೂ ಈ ಪಕ್ಷದ ಪ್ರಣಾಳಿಕೆಯಲ್ಲಿ ಇರುತ್ತಾ ಅನ್ನೋ ಅನುಮಾನ ಕನ್ನಡಿಗರನ್ನು ಕಾಡ್ತಿದೆ ಗುರು.

ನಿಜವಾದ ಪ್ರಾದೇಶಿಕ ಪಕ್ಷ ಹೀಗಿರುತ್ತೆ

ಇಲ್ಲಿನ ಜನರಿಂದ ಹುಟ್ಟಿದ, ಇಲ್ಲಿನ ಜನರ ಹಿಡಿತದಲ್ಲಿರುವ, ಕನ್ನಡ-ಕನ್ನಡಿಗ-ಕರ್ನಾಟಕಗಳ ಹಿತಾಸಕ್ತಿಯನ್ನು ತನ್ನ ಕೇಂದ್ರವಾಗಿ ಮಾಡಿಕೊಂಡು ನಾಡು, ನುಡಿ, ಗಡಿ, ನದಿ, ಉದ್ಯೋಗ, ಉದ್ದಿಮೆ... ಎಲ್ಲ ಕ್ಷೇತ್ರಗಳಲ್ಲಿ ಹೇಗೆ ಕ-ಕ-ಕಗಳ ಹಿತಕ್ಕೆ ಪೂರಕವಾಗಿ ಇಂಥಿಂಥಾ ನಿಲುವು ಇಟ್ಕೊಂಡಿದೀವಿ, ಹೀಗ್ ಹೀಗೆ ನಡ್ಕೋತೀವಿ, ವಲಸಿಗರನ್ನು ಮುಖ್ಯವಾಹಿನಿಗೆ ತರೋಕೆ ಮುಂದಾಗ್ತೀವಿ ಅಂತ ಜನರ ಮುಂದೆ ಹೋಗೋರು ನಿಜವಾದ ಪ್ರಾದೇಶಿಕ ಪಕ್ಷದೋರು ಗುರು.

ಮಾತಲ್ಲಿ ನಮ್ಮದು ಪ್ರಾದೇಶಿಕ ಪಕ್ಷ ಅನ್ನೋದು, ನಮಗೇ ಮತ ಹಾಕಿ ಅನ್ನೋದು... ನಡವಳಿಕೇಲಿ ಮಾತ್ರಾ ಭಾಷಾ ಅಲ್ಪಸಂಖ್ಯಾತರನ್ನು ಓಲೈಸೋದು, ಅಧಿಕಾರಕ್ಕಾಗಿ ಬಗೆ ಬಗೆ ಬಣ್ಣ ಕಟ್ಟೋದು ಎಷ್ಟು ಕೀಳಲ್ವಾ ಗುರು!

ದಕ್ಷಿಣ ಭಾರತ ಚಿತ್ರೋದ್ಯಮ ಅಂದ್ರೆ ತಮಿಳು ಚಿತ್ರೋದ್ಯಮಾನಾ?

ಇತ್ತೀಚೆಗೆ ನಮ್ಮ ಮತ್ತು ತಮಿಳುನಾಡಿನ ನಡುವೆ ಹೊಗೇನಕಲ್ ವಿಚಾರದಲ್ಲಿ ಎದ್ದಿದ್ದ ಹೊಗೆ ಇನ್ನೂ ಮೂಗಿಂದ ಹೊರಗ್ ಹೋಗೇ ಇಲ್ಲ. ಆಗ್ಲೇ ಈ ಹೊಗೆಯ ಕಾರಣವಾಗಿದ್ದ ಬೆಂಕಿಗೆ ಬೇಡದ ಒಂದು ಅರ್ಥ (ಅನರ್ಥ ಅಂದರೂ ಸರಿ!) ಕಲ್ಪಿಸ್ಕೊಂಡು ತಮಿಳುನಾಡಿನ ಚಿತ್ರೋದ್ಯಮದೋರು ತುಪ್ಪವೇ ಸುರ್ದಂತಾಗಿದೆ ಗುರು!

ದಕ್ಷಿಣ ಭಾರತದ ಎಲ್ಲಾ ಭಾಷೆ ಚಲನಚಿತ್ರಗಳ ಯೋಗಕ್ಷೇಮ ಕಾಪಾಡುವ ಉದ್ದೇಶ ಮುಂದಿಟ್ಕೊಂಡು ವಿವಾದಿತ ಹೊಗೇನಕಲ್ ವಿಷಯದ ಕಾರಣ ಕೊಟ್ಕೊಂಡು ಕನ್ನಡ ಚಿತ್ರೋದ್ಯಮಿಗಳ ಮೇಲೆ ಅಸಂಬದ್ಧ ಕ್ರಮ ಕೈಗೊಂಡಿರೋದು ನೋಡಿದ್ರೆ ವ್ಯವಸ್ಥೆಯ ಉದ್ದೇಶವೇ ಸರಿ ಇಲ್ವೇನೋ ಅಂತ ಅನ್ಸತ್ತೆ ಗುರು!

ಈ ಮಂಡಳಿ ಯಾರದ್ದು? ಯಾರಿಂದ? ಯಾರಿಗೋಸ್ಕರ?
ಇಲ್ಲಿ ನೋಡಿದ್ರೆ ಈ ಮಂಡಳೀಲಿ ಯಾರ್ಯಾರೆಲ್ಲಾ ಇದಾರೆ ಅಂತ ಕಾಣತ್ತೆ:

Film producers, studio owners, film exhibitors, film distributors and others connected with the film industry are the members of this...

ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳ ಈ ಈ ಜನ್ರು ಸೇರಿ ಈ ಮಂಡಳಿ ರಚಿಸಿದಾರೆ ಗುರು. ಹಾಗಾಗಿ ಈ ಮಂಡಳಿ ಎಲ್ಲಾ ಭಾಷೆಯ ಚಿತ್ರೋದ್ಯಮಿಗಳ್ಗೂ ಸೇರಿದ್ದು. ಇವ್ರಿಂದ್ಲೇ ನಿರ್ಮಾಣವಾಗಿರೋ ಈ ಮಂಡಳಿ ಇವರ ಚಿತ್ರೋದ್ಯಮವನ್ನ ಎಲ್ಲೆಡೆ ಕಾಪಾಡುವ ಹಾಗೂ ಉದ್ದಾರ ಆಗಲು ಸಹಾಯ ಮಾಡುವ ಉದ್ದೇಶ ಇಟ್ಕೊಂಡಿದೆ ಅಂತ ಇಲ್ಲೇ ಕಾಣತ್ತೆ:


In brief, they are to encourage and develop the film industry in all its branches in South India and so far as possible to work in conjunction with other similar associations; to watch, protect and extend the rights and privileges of its members and of film trade in general; to encourage and facilitate film production, distribution and exhibition of films ; and to do various other things for the purpose of assisting the persons in this line of activity.

ಹಾಗಾಗಿ ಈ ಮಂಡಳಿ ಇರೋದೇ ದಕ್ಷಿಣ ಭಾರತ ಚಲನಚಿತ್ರೋದ್ಯಮಗಳ ಉದ್ದಾರಕ್ಕಾಗಿ ಅಂತ ಇಲ್ಲಿ ಅನ್ಕೊಬೇಕಿದೆ ಗುರು!

ಆದ್ರೆ ಮಂಡಳಿ ಮಾಡ್ತಿರೋದೇನು?
ಈ ಮಂಡಳಿಯ ಯೋಜನೆಯಡಿ ನಿಜಕ್ಕೂ ಯಾರಿಗೆ ಲಾಭ ಸಿಗ್ತಿದೆ? ಯಾವ್ಯಾವ ಭಾಷೆಯ ಚಿತ್ರಗಳ್ಗೆ ಹೊಸ ಹೊಸ ಮಾರುಕಟ್ಟೆಗಳಲ್ಲಿ ಪ್ರದರ್ಶನವಾಗಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ? ಯಾವ ಯಾವ ಭಾಷೆಯ ಚಿತ್ರೋದ್ಯಮಗಳಿಗೆ ಎಲ್ಲೆಲ್ಲಿ ಮಾರುಕಟ್ಟೆ ಹೆಚ್ಚಿಸುವಲ್ಲಿ ಸಹಾಯ ದೊರಕಿದೆ? ಹೀಗೆಲ್ಲಾ ಪ್ರಶ್ನೆ ಹಾಕೊಂಡು ನಮ್ಮ ಸುತ್ತ ನೋಡಿದ್ರೆ ಕರ್ನಾಟಕದಲ್ಲಿ ದಿನೇ-ದಿನೇ ಪರಭಾಷಿಕ ಚಿತ್ರಗಳ ಸಂಖ್ಯೆ ಎಷ್ಟು ಹೆಚ್ತಿದೆ, ಗುಣಮಟ್ಟ ಹಾಗೂ ಬೇಡಿಕೆಯ ಪ್ರಕಾರ ಕಡಿಮೆಯೇ ಅಲ್ಲದ ಕನ್ನಡ ಚಿತ್ರಗಳು ಹೊರರಾಜ್ಯಗಳ ಮಾರುಕಟ್ಟೆಯಲ್ಲಿ ಎಷ್ಟು ಕಷ್ಟ ಅನುಭವಿಸ್ತಿರೋದು ಕಾಣತ್ತೆ ಗುರು! ಇಲ್ಲೆಲ್ಲಾ ಈ ಮಂಡಳಿ ನಮ್ಮ ಚಿತ್ರೋದ್ಯಮಕ್ಕೆ ನಿಜಕ್ಕೂ ಏನ್ ಸಹಾಯ ಮಾಡಿದೆ ಗುರು! ಇದಕ್ಕೆ ಮಂಡಳಿ ಏನ್ ಮಾಡ್ದೇ ಇದ್ರೂ ಅಸಂಬದ್ದ ವಿಷಯಕ್ಕೆ ಮಾತ್ರ ಮೂಗು ತೂರ್ಸ್ತಿದೆ ಗುರು!

ವಿವಾದ ಕಾರಣವಷ್ಟೇ!
ಇಷ್ಟೆಲ್ಲಾ ಸಾಲ್ದು ಅಂತ ಹೊಗೇನಕಲ್ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ನಡೆದ ಪ್ರತಿಭಟನೆಗಳ್ನ ವಿರೋಧಿಸಕ್ಕೆ ಬಲಿ-ಪಶುವಾಗಿ ಕನ್ನಡದ ಹಲವಾರು ಚಿತ್ರೋದ್ಯಮಿಗಳ್ನ ಮಂಡಳಿಯಿಂದ ಅಮಾನತುಗೊಳಿಸಿದಾರೆ ಗುರು! ಇದಲ್ದೇ ಸಲ್ಲದ ವಾದವನ್ನೂ ಮಂಡಿಸಿದಾರೆ ತಮಿಳು ಮೂಲದೋರಾದ ಮಂಡಳಿ ಅಧ್ಯಕ್ಷರು. ಮಂಡಳೀಲಿ ಕನ್ನಡದ ಉದ್ಯಮಿಗಳು ಇರೋದ್ರಿಂದ ಮಂಡಳಿಗೆ ನಷ್ಟವೇ ಹೆಚ್ಚು ಅನ್ನೋ ಈ ನಿಲುವು ನಿಜಕ್ಕೂ ತರವಲ್ಲ ಗುರು! ವಿವಾದವಾಗಿರೋ ವಿಚಾರದಲ್ಲಿ ಒಂದು ರಾಜ್ಯ ಪ್ರತಿಭಟನೆ ಮಾಡಿದರೆ ಅದರ ಸ್ವಾರ್ಥದ ಲಾಭ ಪಡ್ಯಕ್ಕೆ ಇದನ್ನ ಉಪ್ಯೋಗ್ಸಿ ಕನ್ನಡ ಚಿತ್ರೋದ್ಯಮಿಗಳ್ನೇ ಹೊರಹಾಕಿದ್ರೆ ನಾವು ಮಂಡಳಿಯ ಅಸ್ತಿತ್ವವನ್ನೇ ಪ್ರಶ್ನಿಸಬೇಕು ಗುರು! ಸತ್ಯವನ್ನ ಕೇಳಲೇ ಬಯಸದ ಈ ಮಂಡಳಿ ಯಾರಿಗೆ ಬೇಕು ಗುರು?

ಇಷ್ಟಕ್ಕೂ ಮಂಡಳಿಯಿಂದ ಲಾಭ ಪಡೆಯದೇ ಕನ್ನಡ ಚಿತ್ರೋದ್ಯಮ ಇಷ್ಟೆಲ್ಲಾ ಸಾಧಿಸಿದೆ ಅಂದ್ರೆ ಇವರ ಸಹಾಯ ನಿಜಕ್ಕೂ ನಮಗೆ ಬೇಕೇ ಅನ್ನೋದೇ ಮುಖ್ಯ ಪ್ರಶ್ನೆ ಆಗೋಗಿದೆ ಗುರು!


ಅಂತರ್ಜಾಲಿಗ ಕನ್ನಡಿಗರಿಗೆ ಅಕ್ಕರೆಯ ಆಹ್ವಾನ!


ಅಂತರ್ಜಾಲಿಗ ಕನ್ನಡಿಗರೇ,
ನೀವು ಈಗ ಬೆಂಗಳೂರಿನಲ್ಲಿದ್ದು, ನಮ್ಮ ನಾಡುನುಡಿಗಳ ಏಳಿಗೆಗಾಗಿ ಮಿಡಿಯುತ್ತಿರುವ ಮನಸ್ಸು ಹೊಂದಿರುವವರೇ? ಹಾಗಾದರೆ, ನಾವೂ ನೀವು ಕೂಡಿ ನಾಡಿನ ಬಗ್ಗೆ ಇರೋ ಕಳಕಳಿಯನ್ನು ಹಂಚಿಕೊಳ್ಳೋಣ.
ಬನ್ನಿ, ಬನವಾಸಿ ಬಳಗ ನಿಮಗೆ ಅಕ್ಕರೆಯ ಆಹ್ವಾನ ನೀಡುತ್ತಿದೆ. ನಾವೆಲ್ಲರೂ ಇದೇ ಏಪ್ರಿಲ್ ತಿಂಗಳ 13ನೇ ತಾರೀಕಿನಂದು ಬೆಂಗಳೂರಿನ ನೃಪತುಂಗ ರಸ್ತೆಯ ಯವನಿಕಾ ಎದುರು ಇರುವ ಮಿಥಿಕ್ ಸೊಸೈಟಿಯ ಸಭಾಂಗಣದಲ್ಲಿ ಬೆಳಗ್ಗೆ 11:00ಕ್ಕೆ ಭೇಟಿಯಾಗೋಣ. ಅಲ್ಲಿ ಬಿಸಿ ಬಿಸಿ ಕಾಫಿ ಕುಡೀತಾ, ಒಂದೆರಡು ಘಂಟೆ ಕಾಲ ವಿಚಾರ ವಿನಿಮಯ ಮಾಡ್ಕೊಳೋಣ.
ಹೌದಲ್ಲಾ, ನಾವು ಒಬ್ರುನ್ ಒಬ್ರು ನೋಡಿ ಒಂದು ವರ್ಷಕ್ಕಿಂತ ಜಾಸ್ತಿ ಸಮಯ ಆಯ್ತು. ನೆನಪಿದೆಯಾ? ಕಾವೇರಿ ನ್ಯಾಯ ಮಂಡಳಿ ತೀರ್ಪು ನಮ್ಮ ರಾಜ್ಯದ ವಿರುದ್ಧವಾಗಿ ಬಂದಾಗ ನಾಡ ಹಿತದ ಪರವಾಗಿ ಧ್ವನಿ ಎತ್ತಿ, ನಾಡು ನುಡಿಯ ಪ್ರಶ್ನೆ ಬಂದಾಗ ನಮಗಿರುವ ಕಳಕಳಿಯನ್ನು ನಾವೆಲ್ಲ ಒಂದಾಗಿ ತೋರಿಸಿದ್ದೆವು. ನಮ್ಮ ನಾಡು ನುಡಿಗೆ ಧಕ್ಕೆ ಬಂದಾಗ, ನಾಡಿನ ನೆಮ್ಮದಿಗೆ ಭಂಗ ಉಂಟಾದಾಗ ನಾವು ಬೀದಿಗಿಳಿದು "ಮೊದಲು ನಾನು ಕನ್ನಡಿಗ: ಆನಂತರವೇ ಇನ್ನೆಲ್ಲ" ಎಂದು ದನಿ ಎತ್ತಿದ್ದೆವು. ಅಂದು ಮಹಾತ್ಮಾ ಗಾಂಧಿ ಪ್ರತಿಮೆಯ ಬಳಿ ನಾವೆಲ್ಲ ಸೇರಿದ್ದೆವಲ್ವಾ?
ಈಗ ಮತ್ತೆ ನಾವೆಲ್ಲಾ ಸೇರೋಣ. ನಾವೆಲ್ಲ ಸೇರಿ ನಮ್ಮ ತಾಯಿನಾಡಿನ ಏಳಿಗೆಗೆ ನಾವು ಯಾವ ರೀತಿ ಕಾಣಿಕೆ ನೀಡಬಹುದು? ಹೇಗೆ ಶ್ರಮಿಸಬಹುದು? ನಾವೆಲ್ಲ ಒಂದಾಗಬೇಕಾದ, ಕೂಡಿ ಕೆಲಸ ಮಾಡಬೇಕಾದ ಅಗತ್ಯ ಏನು? ನಾಡಿನ ಪ್ರತಿ ಕೈಗಳಿಗೂ ದುಡಿಯಲು ಕೆಲಸವೇನೋ ಬೇಕು? ಈ ಗುರಿಯತ್ತ ನಮ್ಮ ನಾಡು ಸಾಗುವಲ್ಲಿ ನಮ್ಮ ಪಾತ್ರವೇನು? ನಮ್ಮ ಊರಲ್ಲಿ ನಮ್ಮ ಭಾಷೇಲೇ ಎಲ್ಲ ರೀತಿಯ ಗ್ರಾಹಕ ಸೇವೆ ಲಭ್ಯವಾಗುತ್ತಿಲ್ಲ. ಹಾಗಿದ್ರೆ ಏನು ಮಾಡ್ಬೇಕು? ಈ ಎಲ್ಲದರ ಬಗ್ಗೆ ಮಾತಾಡೋಣ.
ಕನ್ನಡ-ಕನ್ನಡಿಗ-ಕನ್ನಡಿಗರ ಬಗ್ಗೆ ಇರುವ ಆಸೆ, ಕನಸು, ಗುರಿಗಳ ಬಗ್ಗೆ ಚರ್ಚಿಸೋಣ. ಹಾಗಿದ್ದರೆ ತಡ ಯಾಕೆ? ಬನ್ನಿ, ಜೊತೆಗೆ ಸಮಾನ ಮನಸ್ಸಿನ ಕನ್ನಡಿಗರನ್ನೂ ಕರೆ ತನ್ನಿ. ಒಂದು ಆತ್ಮೀಯ ಸಂವಾದ ಮಾಡೋಣ. ಇದು ಬನವಾಸಿ ಬಳಗದ ಪ್ರಸ್ತುತಿ.

ರಾಷ್ಟ್ರೀಯ ಪಕ್ಷಗಳಿಗೆ ನಾಡಪರ ನಿಲ್ಲಲಾಗದ ಸಮಸ್ಯೆ!

ಕನ್ನಡನಾಡು ಹುಟ್ಟಿದಾಗಿಂದ ಎದ್ರುಸ್ತಾ ಇರೋ ನೂರಾರು ಸಮಸ್ಯೆಗಳಿಗೆ ಪರಿಹಾರ ಕೊಡಕ್ಕೆ ಇಲ್ಲೀತಂಕ ಯಾವ ರಾಜಕೀಯ ಪಕ್ಷಗಳಿಗೂ ಅಗಿಲ್ಲ ಅನ್ನೋದು ಸತ್ಯ ಗುರು. ಇದ್ಯಾಕೆ ದೇಶದಲ್ಲಿರೋ ಎಲ್ಲಾ ಸಮಸ್ಯೆಗಳೂ ಕನ್ನಡನಾಡಿಗೇ ವಕ್ಕರಿಸಿಕೊಳ್ಳುತ್ತೆ? ನದಿ, ಗಡಿ, ಉದ್ದಿಮೆ, ವಲಸೆ ಎಲ್ಲಾ ಸಮಸ್ಯೆಗಳೂ ನಮ್ಮನ್ನೇ ಯಾಕೆ ಕಾಡ್ತವೇ? ನಮ್ಮ ನೆರೆಯ ಆಂಧ್ರ, ತಮಿಳುನಾಡು, ಕೇರಳ, ಗೋವಾ, ಮಹಾರಾಷ್ಟ್ರಗಳು ನಮ್ಮ ಪಾಲಿಗೆ ಯಾಕೆ ಪಂಚಭೂತಗಳಾಗಿವೆ? ಕನ್ನಡನಾಡು ಜಗಳಗಂಟ ನಾಡೇ? ಕನ್ನಡಿಗರು ಕಿರಿ ಕಿರಿ ಜನವೇ? ಇದಕ್ಕೆಲ್ಲಾ ಯಾರು ಕಾರಣ? ಅನ್ನೋ ಪ್ರಶ್ನೆಗಳು ಭೂತಾಕಾರ ತಾಳಿ ಕಾಡುತ್ವೆ ಗುರು.

ಗಡಿ ಮತ್ತು ಕನ್ನಡಿಗರ ಅಸ್ತಿತ್ವ

ಏಕೀಕರಣವಾದಾಗ ಬಳ್ಳಾರಿಯ ಮೂರು ತಾಲೂಕುಗಳು, ಹೊಸೂರು, ಕಾಸರಗೋಡು, ಅಕ್ಕಲಕೋಟ, ಸೋಲಾಪುರ ಮೊದಲಾದ ಕನ್ನಡ ಮಾತಾಡೋ ಪ್ರದೇಶಗಳು ಕೈ ಬಿಟ್ಟು ಹೋದವು.ಆಮೇಲೆ ಶುರುವಾದ ಗಡಿ ತಕರಾರುಗಳು ಇವತ್ತಿನ ತನಕಾ ಹಂಗೇ ಎಳ್ಕೊಂಡು ಬರ್ತಾನೆ ಇವೆ. ಈ ದಿನ, ಅಂದು ಯಾವ್ಯಾವ ಪ್ರದೇಶಗಳನ್ನು ನಾವು ನಮ್ಮದು ಅಂದಿದ್ದು ನೆರೆ ರಾಜ್ಯಗಳ ಪಾಲಾದವೋ ಅಲ್ಲೆಲ್ಲಾ ಕನ್ನಡವೂ ಮಾಯವಾಗ್ತಾ ಬಂತು. ಸೊಲ್ಲಪುರ, ಅಕ್ಕಲಕೋಟೆ, ಆಂಧ್ರದಲ್ಲಿರೋ ರಾಯಪುರ, ಆಲೂರು, ಅದೋನಿ ತಾಲೂಕುಗಳು, ಕಾಸರಗೋಡು... ಹೀಗೆ ಎಲ್ಲೆಡೆಯೂ ಎದ್ದಿದ್ದ ’ನಾವು ಕರ್ನಾಟಕದಲ್ಲಿ ಸೇರ್ಕೋತೀವಿ’ ಅನ್ನೋ ಒತ್ತಾಸೆಯ ಕೂಗನ್ನು ಸದ್ದಿಲ್ಲದಂತೆ ವ್ಯವಸ್ಥಿತವಾಗಿ ಇಲ್ಲವಾಗಿಸಲಾಯಿತು. ನೆರೆ ರಾಜ್ಯಗಳು ಇಂತಹ ಪ್ರದೇಶಗಳಿಗೆ ಒಳನಾಡಿನಿಂದ ವಲಸೆ ಮಾಡ್ಸಿ ಅಲ್ಲೆಲ್ಲಾ ಕನ್ನಡಿಗರನ್ನು ಅಲ್ಪಸಂಖ್ಯಾತರನ್ನಾಗಿಸಿದವು. ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಅಲ್ಲಿನ ಕನ್ನಡದ ಮಕ್ಕಳನ್ನು ತಮ್ಮ ತಾಯ್ನುಡಿಯಿಂದ ದೂರಮಾಡಲಾಯಿತು. ಇದಕ್ಕೆ ತಮಿಳುನಾಡಿನ ಹೊಸೂರು ಜ್ವಲಂತ ಉದಾಹರಣೆಯಾಗಿ ನಿಂತಿದೆ. ಅದೇ ನಮ್ಮ ನಾಡಿನ ಗಡಿ ಭಾಗಗಳನ್ನು ನಾವು ಗಮನಕ್ಕೇ ತೆಗೆದು ಕೊಳ್ಳಲಿಲ್ಲ. ಅಂದು ಒಳನಾಡಾಗಿದ್ದ, ಇಂದು ಗಡಿಯಾಗಿರುವ ಬಳ್ಳಾರಿ, ಬೀದರ್ ಮೊದಲಾದ ಪ್ರದೇಶಗಳಲ್ಲಿ ಇಂದು ಪರಭಾಷಿಕರ ಪ್ರಾಬಲ್ಯ ಹೆಚ್ಚಿರೋದು ಮತ್ತು ಕನ್ನಡದ ಅವಗಣನೆ ಆಗ್ತಿರೋದು ಕಣ್ಣಿಗೆ ರಾಚುತ್ತವೆ. ಯಾಕೆ ನಮ್ಮೂರಲ್ಲಿ ಪರಭಾಷಿಕರು ಬಲ ಪಡ್ಕೊಂಡ್ರು? ಯಾಕೆ ಹೊರನಾಡಿನಲ್ಲಿ ಕನ್ನಡದೋರು ಮೂಲೆಗುಂಪಾದರು? ನಮ್ಮ ನಾಡಿನ ರಾಜಕಾರಣದಲ್ಲಿ ಪರಭಾಷೆಯೋರು ಉನ್ನತ ಹುದ್ದೆಗೆ ಏರೋಕೂ ಹೇಗೆ ಸಾಧ್ಯವಾಯ್ತು?

ಉದ್ದಿಮೆಗಳಲ್ಲಿ ಕನ್ನಡಿಗ

ಬೆಳವಣಿಗೆಯ ಹೆಸರಲ್ಲಿ ಕರ್ನಾಟಕದೊಳಗೆ ಹುಟ್ಟಿಕೊಂಡ ಐ.ಟಿ.ಐ- ಬಿ.ಇ.ಎಂ.ಎಲ್- ಬಿ.ಎಚ್.ಇ.ಎಲ್- ಎಚ್.ಏ.ಎಲ್ ಮೊದಲಾದ ಕೇಂದ್ರ ಸರ್ಕಾರಿ ಸಾಮ್ಯದ ಸಾರ್ವಜನಿಕ ಉದ್ದಿಮೆಗಳು ಆರಂಭವಾದಾಗಿನಿಂದಲೂ ಇಲ್ಲಿ ಕನ್ನಡಿಗರಿಗೆ ಆದ್ಯತೆಯೇ ಇಲ್ಲದ್ದನ್ನು ನಾವು ನೋಡಿಯೇ ಇದ್ದೀವಿ. ಯಾಕೆ ಹೀಗೆ? ಇಂತಹ ಉದ್ದಿಮೆಗಳಲ್ಲಿ ನೇಮಕಾತಿ ಆಗೋ ಹಿರಿಯ ಅಧಿಕಾರಿಗಳು ಬರೋದೆ ಕೇಂದ್ರದಿಂದ ನೇಮಕ ಆಗಿ. ಅಲ್ಯಾರು ಹೇಗೆ ನೇಮಕ ಆಗ್ತಾರೆ ಅಂತಲೂ, ಹೇಗೆ ರಾಜಕೀಯ ಪಕ್ಷಗಳ ಕೈವಾಡಗಳು ಇಂತಹ ನೇಮಕಾತಿಗಳಲ್ಲಿ ಇರ್ತವೇ ಅಂತಲೂ ಎಲ್ರೂಗು ಗೊತ್ತಿರೋದೆ. ಒಂದ್ಸಾರ್ತಿ ಮೇಲಧಿಕಾರಿಯಾಗಿ ಪರಭಾಷಿಕ ನುಸುಳಿದ ಮೇಲೆ ಮುಗೀತಲ್ಲಾ... ದೊಡ್ಡ ಅಧಿಕಾರಿಯಿಂದ ಕಸ ಗುಡಿಸೋರ ತನಕ ಆ ಅಧಿಕಾರಿ ತನ್ನ ಭಾಷಿಕರನ್ನೇ ತುಂಬುಸ್ಕೊಂಡಿದ್ದನ್ನು ನಾವೆಲ್ಲಾ ಇವತ್ತು ನೋಡ್ತಿದೀವಿ. ದಕ್ಷಿಣ ಭಾರತದ ರೇಲ್ವೇ ಇಲಾಖೆ ಮದ್ರಾಸಲ್ಲಿ ಶುರುವಾಗಿದ್ದರ ಪರಿಣಾಮವಾಗಿ ಬೆಂಗಳೂರು, ಹುಬ್ಬಳ್ಳಿಯಂತಹ ಊರುಗಳಲ್ಲಿ ದೊಡ್ದ ದೊಡ್ಡ ತಮಿಳು ಕಾಲನಿಗಳೇ ಹುಟ್ಟಿಕೊಂಡವು.

ಅವರನ್ನ ಅವರೇ ಆಳಿಕೊಳ್ಳೊ ಸ್ವಾತಂತ್ರ

ನಮ್ಮ ನೆರೆಯ ಯಾವ ರಾಜ್ಯಾನೆ ನೋಡಿ ಅಲ್ಲಿರೋ ರಾಷ್ಟ್ರೀಯ ಪಕ್ಷಗಳೂ ಆ ಪ್ರದೇಶದ ಹಿತ ಕಾಯೋದನ್ನು ಮೊದಲ ಆದ್ಯತೆ ಮಾಡ್ಕೊಂಡ್ವು. ಕೆಲವೇ ಕಾಲದಲ್ಲಿ ಕಳಗಗಳು, ದೇಶಂಗಳೂ, ಸೇನೆಗಳೂ ಹುಟ್ಟಿಕೊಂಡು ಆಯಾ ಮಣ್ಣಿನ ಪರವಾಗಿ ದನಿ ಎತ್ತಕ್ಕೆ ಶುರುಮಾಡುದ್ವು. ಆದ್ರೆ ಕರ್ನಾಟಕದಲ್ಲಿ? ಇಲ್ಲಿರೋ ರಾಷ್ಟ್ರೀಯ ಪಕ್ಷಗಳೋರು ’ಪ್ರಾದೇಶಿಕ ಪಕ್ಷಗಳು ದೇಶದ ಏಕತೆಗೆ ಮಾರಕ’ ಅನ್ನೋ ರಾಷ್ಟ್ರೀಯ ಪಕ್ಷಗಳ ವಾದಾನ ನಿಧಾನ ವಿಷದಂತೆ ಜನಗಳ ತಲೇಲಿ ತುಂಬಿ ’ದೇಶ ಬೇರೆ, ರಾಜ್ಯ ಬೇರೆ, ದೇಶ ರಾಜ್ಯಕ್ಕಿಂತ ದೊಡ್ಡದು, ಈ ದೇಶದೋರೆಲ್ಲಾ ಒಂದೇ ತಾಯಿ ಮಕ್ಳು’ ಅಂತಾ ಹೇಳ್ಕೊಂಡೇ ತಮ್ಮ ಬೇಳೆ ಬೆಯ್ಸಿಕೊಂಡ್ರು. ಆಮೇಲೆ ನೋಡಿ ಶುರುವಾಯ್ತು, ಚುನಾವಣೆ ಬಂದಾಗ ನಮ್ಮದು ರಾಷ್ಟ್ರೀಯವಾದಿ ಪಕ್ಷ ಅಂತೊಬ್ರು, ನಮ್ಮ ಪಕ್ಷಕ್ಕೆ ನೂರಿಪ್ಪತ್ತು ವರ್ಷದ ಇತಿಹಾಸ ಇದೆ, ಸ್ವಾತಂತ್ರ ಹೋರಾಟದ ಅನುಭವ ಇದೆ ಅಂತಿನ್ನೊಬ್ರು... ಹೇಳ್ಕೊಂಡ್ ಹೇಳ್ಕೊಂಡೇ ಅಧಿಕಾರ ಅನುಭವಿಸಕ್ಕೆ ಮುಂದಾದ್ರು. ಆದರೆ ಇಷ್ಟು ವರ್ಷ ಇವ್ರ್ ಯಾರೂ "ಈ ಭಾಗಗಳು ಕನ್ನಡನಾಡಿಗೆ ಸೇರಬೇಕು" " ಈ ಗಡಿಭಾಗದ ಸಮಸ್ಯೆ ಇಲ್ಲದಂತಾಗಲು ನಮ್ಮ ಗಡಿಭಾಗದ ಊರುಗಳಲ್ಲಿ ಕನ್ನಡಿಗರ ಸಂಖ್ಯೆ ಹೀಗೆ ಹೆಚ್ಚುಸ್ಬೇಕು" "ಹೊರನಾಡ ಕನ್ನಡಿಗರು ನಮ್ಮೊಂದಿಗೆ ಇಂದಲ್ಲಾ ನಾಳೆ ಸೇರಲೇ ಬೇಕು ಎಂಬ ಕೂಗಿಗೆ ನಮ್ಮ ಬೆಂಬಲ ಇದೆ" "ನಮ್ಮ ನಾಡಿನ ಉದ್ದಿಮೆಗಳಲ್ಲಿ ಅಧಿಕಾರಿಗಳು ಕನ್ನಡಿಗರೇ ಆಗಿರಬೇಕು" ಅಂತ ದನಿ ಎತ್ಲಿಲ್ಲ. ಹಾಗೆ ದನಿ ಎತ್ತಕ್ಕೆ ಇವುಗಳಿಗೆ ಸಾಧ್ಯವೂ ಇಲ್ಲ.

ರಾಷ್ಟ್ರೀಯ ಪಕ್ಷಗಳ ಅಸಹಾಯಕತೆ

ಯಾಕಂದ್ರೆ ಇಲ್ಲಿ ಯಡ್ಯೂರಪ್ಪನೋರು ಕೆಮ್ಮಬೇಕು ಅಂದ್ರೆ ಅಲ್ಲಿ ಅಡ್ವಾಣಿಯೋರು ’ತಮಿಳುನಾಡಲ್ಲಿ ಪಕ್ಷ ಯಾರ ಜೊತೆ ಹೊಂದಾಣಿಕೆ ಮಾಡ್ಕೊತಿದೆ, ಯಾರು ಈ ಸಾರಿ ಸರ್ಕಾರ ರಚಿಸಕ್ಕೆ ನಮಗೆ ಬೆಂಬಲ ಕೊಡಬಹುದು’ ಅಂತೆಲ್ಲಾ ಲೆಕ್ಕ ಹಾಕಿ ಅಪ್ಪಣೆ ಕೊಡಬೇಕು. ಇಲ್ಲಿ ಕೃಷ್ಣ ಅವ್ರು ಕರುಣಾನಿಧಿ ಬಗ್ಗೆ ಖಾರವಾಗಿ ಗುಡುಗುದ್ರೂ ದಿಲ್ಲೀ ಸರ್ಕಾರಾನ ಕರುಣಾನಿಧಿ ಒಂದ್ಸರ್ತಿ ಬೆದರ್ಸುದ್ರೆ ’ಇಲ್ಲ ಇಲ್ಲ ನಾ ಹೇಳಿದ್ದು ಹಾಗಲ್ಲ ಹೀಗೆ' ಅಂತ ತಮ್ ಮಾತುನ್ನ ಬದಲಿಸಬೇಕು. ಆಡೋದು ಮಾತ್ರಾ ನಮಗೆ ರಾಷ್ಟ್ರೀಯ ಹಿತಾಸಕ್ತಿ ಮುಖ್ಯಾ ಅಂತ ನಿಜವಾಗ್ಲೂ ಕಾಪಾಡಕ್ ಮುಂದಾಗೋದು ತಮ್ಮ ಪಕ್ಷಗಳ ’ಕೇಂದ್ರದಲ್ಲಿ ಅಧಿಕಾರ ಹಿಡೀಬೇಕು’ ಅನ್ನೋ ಹಿತಾಸಕ್ತಿನಾ. ಇಂಥಾ ಸನ್ನಿವೇಶದಲ್ಲಿ ದಿಲ್ಲಿಯಲ್ಲಿ ಸಲ್ಲಲಾಗದೇ ಇಲ್ಲಿ ನಮ್ಮದು ಪ್ರಾದೇಶಿಕ ಪಕ್ಷ ಅನ್ನೋ ಮಾತಾಡ್ತಿರೋ ಪಕ್ಷಾನೂ ದಿಲ್ಲಿಯೋ ಇಲ್ಲಿಯೋ ಅಂತ ಪರದಾಡ್ತಾ ತಮ್ಮ ನಿಲುವನ್ನು ಗೊಂದಲವಾಗಿಸಿಕೊಂಡಿರೋದೂ ಕಾಣ್ತಿದೆ.
ಕನ್ನಡ ನಾಡಿನ ಜನತೆ ತಮ್ಮ ಏಳಿಗೆಯು ಎಂದೆಂದಿಗೂ ಈ ರಾಷ್ಟ್ರೀಯ ಪಕ್ಷಗಳಿಂದ ಆಗಲ್ಲ ಅನ್ನೋದ್ನ ಮನವರಿಕೆ ಮಾಡ್ಕೊಳ್ಳೋದೆ ನಮ್ಮ ನಾಡ ಮುಂದಿರೋ ಸವಾಲುಗಳನ್ನು ಗೆಲ್ಲೋ ಮೊದಲ ಹೆಜ್ಜೆ. ಏನಂತೀರಾ ಗುರು?

ನಮ್ಮ ಸಮಸ್ಯೆಗೆಲ್ಲಾ ಕನ್ನಡ ಕೇಂದ್ರಿತ ರಾಜಕಾರಣವೇ ಪರಿಹಾರ!

ಅಬ್ಬಬ್ಬಾ! ಅಂತೂ ಇಂತೂ ತಮಿಳುನಾಡು ತನ್ನ ಮೊಂಡುತನಾನ ಬಿಟ್ಟು ಹೊಗೆನಕಲ್ ಯೋಜನೇನ ಮುಂದೂಡಿದೆ. ಸದ್ಯಕ್ ಎದೆ ಮೇಲೆ ಹತ್ತಿ ಕೂತಿದ್ದ ಭೂತ ಇಳಿದಂಗಾಗಿದೆ. ಆದ್ರೆ ಕನ್ನಡಿಗರು ಇಷ್ಟಕ್ಕೇ ಗೆದ್ವಿ ಅನ್ಕೊಂಡು ಸುಮ್ನಿದ್ರೆ ಆಗಲ್ಲ. ಈಗಾಗಿರೋದು ಮುಂದಾಗಬಹುದಾದ ಮಹಾ ಅನಾಹುತದ ಮುನ್ಸೂಚನೆ ಕೊಡ್ತಿಲ್ವಾ ಗುರು? ನಿಜವಾದ ಆಕ್ರಮಣ ಶುರು ಮಾಡೋ ಮೊದಲು ಶತ್ರುಗಳ ಬಲಾ ಅಳ್ಯಕ್ಕೆ ಚೂರು ಸ್ಯಾಂಪಲ್ ನೋಡಕ್ ಮುಂದಾಗೋ ಹಾಗೆ ನಮ್ಮ ಪ್ರತಿಕ್ರಿಯೆ ಹೆಂಗಿರಬೋದು ಅಂತ ಈಗ ನೋಡಿದಾರೆ. ಮುಂದಿನ ದಿನಗಳಲ್ಲಿ ಸರ್ಯಾಗಿ ಸಿದ್ಧತೆ ಮಾಡ್ಕೊಂಡೇ ಅವ್ರೂ ಮುಂದಾಗ್ತಾರೆ. ಅಷ್ಟರೊಳಗೆ ಕನ್ನಡಿಗರು ನಮ್ಮ ಬಲಾನ ಹೆಚ್ಚುಸ್ಕೊಳ್ಳಲೇ ಬೇಕು ಗುರು.

ಚಳವಳಿಗಳು ಜ್ವರದ ಮದ್ದು ಮಾತ್ರಾ!

ರೈಲ್ವೇ ನೇಮಕಾತಿ ವಿಷ್ಯಾನೆ ಇರಲಿ, ಬೆಳಗಾವಿ ಗಡಿ ವಿಷ್ಯಾನೆ ಇರಲಿ, ಕಾವೇರಿ ತೀರ್ಪೇ ಇರಲಿ, ಹೊಗೆನಕಲ್ ವಿಷ್ಯಾನೆ ಇರಲಿ ನಾವು ಪ್ರತಿ ಬಾರಿಯೂ ಬೀದಿಗಿಳಿದು ಹೋರಾಟವನ್ನು ಮಾಡಿದಾಗಲೇ ಚೂರು ಪಾರು ಪರಿಹಾರ ಸಿಕ್ಕಿರೋದು... ಸತ್ಯಾನೆ ಗುರು.
ಕಾವೇರಿ ಐತೀರ್ಪು ಇಂದಿಗೂ ಗೆಜೆಟ್ಟಲ್ಲಿ ಪ್ರಕಟವಾಗದೆ ಇರೋಕೆ ಅಂದು ನಾಡಿನಾದ್ಯಾಂತ ಭುಗಿಲೆದ್ದ ಚಳವಳಿಯೇ ಕಾರಣ. ರೇಲ್ವೇ ಇಲಾಖೆ ತನ್ನ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡಿದ್ದೂ ಕನ್ನಡಿಗರ ಸಂಘಟಿತ ಹೋರಾಟದಿಂದಲೇ ಅನ್ನೋದ್ರಲ್ಲಿ ಅನುಮಾನ ಇಲ್ಲ. ಇದೀಗ ಕರುಣಾನಿಧಿಯವರು ಹೊಗೆನಕಲ್ ಯೋಜನೇನ ಮುಂದೂಡಕ್ಕೂ ಇದೇ ಕಾರಣ. ಕಳೆದ ಒಂದೆರಡು ತಿಂಗಳಿಂದ ನಡೀತಿದ್ದ ಶಾಂತಿಯುತ ನಿರಶನಗಳು ಮಾಡದ ಪರಿಣಾಮವನ್ನು ಕನ್ನಡಿಗರು ಬೀದಿಗಿಳಿದು ನಡೆಸಿದ ಹೋರಾಟ ಮಾಡಿರೋದು ಸತ್ಯಾ. ಆದ್ರೆ ಇಂಥಾ ಹೋರಾಟಗಳು ತಾತ್ಕಾಲಿಕ ಪರಿಹಾರ ಒದಗಿಸಿ ಕೊಡಲು ಮಾತ್ರಾ ಶಕ್ತ ಅನ್ನೋದು ಅವುಗಳಿಗೆ ಇರೋ ಮಿತಿ ಗುರು.

ರೋಗದ ಮೂಲಕ್ಕೆ ಮದ್ದು ಬೇರೆ ಇದೆ ಗುರು!

ಆದ್ರೆ ಪ್ರತಿ ಸಲವೂ ಹೀಗೆ ಹೋರಾಟ ಮಾಡೆ ನ್ಯಾಯ ದೊರಕುಸ್ಕೋತೀವಿ ಅನ್ನೋದಕ್ಕೆ ಆಗಲ್ಲ. ಯಾಕಂದ್ರೆ, ಹೋರಾಟಗಳಿಗಿಂತ ನ್ಯಾಯಾಲಯಗಳಲ್ಲಿ ಮಾಡೋ ವಾದಗಳು ಮುಖ್ಯ.
ಅದಕ್ಕಿಂತ ಮುಖ್ಯವಾದದ್ದು ರಾಜಕೀಯ ಬಲ. ಈ ಬಲದ ಮೂಲಕ ಕೇಂದ್ರ ಸರ್ಕಾರದ ಮೇಲೆ ಇಟ್ಕೊಳ್ಳೋ ಹಿಡಿತ ಮುಖ್ಯ.
ಆಯಕಟ್ಟಿನ ಜಾಗಗಳಲ್ಲಿ ಕೆಲ್ಸಮಾಡೋ ಅಧಿಕಾರಿಗಳಾಗಿ ನಮ್ಮವರಿದ್ದರೆ ಸತ್ಯಾನ ಹೆಕ್ಕಿ ತೆಗ್ಯೋಕೆ ಸಾಧ್ಯ. ಮಾಧ್ಯಮಗಳಲ್ಲಿ ನಮ್ಮ ನಿಲುವನ್ನು ಸರಿಯಾಗಿ ತೋರುಸ್ಬೇಕು ಅಂದ್ರೆ ಅಲ್ಲೂ ನಮ್ಮವರಿರಬೇಕು.
ನಮ್ಮ ನಾಡಿನ ಅರ್ಥಿಕ ಚಟುವಟಿಕೆಗಳ ಮೇಲಿನ ಹಿಡಿತ ನಮ್ಮದೇ ಆಗಿರಬೇಕು ಗುರೂ!

ತಮಿಳುನಾಡೋರು ಮಾಡಿರೋದು ಇದನ್ನೇ...

ತಮಿಳುನಾಡು ಹಿಂದಿನಿಂದ ಮಾಡ್ಕೊಂಡ್ ಬಂದಿರೋದು ಇದನ್ನೇ. ತನ್ನ ಪರವಾಗಿ ವಾದ ಮಾಡಕ್ಕೆ ಕರ್ನಾಟಕದೋರು ನಾರಿಮನ್ ಥರದ ಕನ್ನಡೇತರರನ್ನು ಅವಲಂಬಿಸ್ಬೇಕು. ಆದ್ರೆ ತಮಿಳುನಾಡಿನ ವಕೀಲರಾದ ಪರಾಶರನ್ ತಮಿಳರೇ ಗುರು. ಕೇಂದ್ರದ ಮೇಲೆ ಹಿಡ್ತ ಇಟ್ಕೊಂಡಿರೋರು ಕರ್ನಾಟಕದ ಸಂಸದರಲ್ಲ, ತಮಿಳುನಾಡಿನೋರು. ಕೇಂದ್ರದಲ್ಲಿ ಯಾವ್ದೇ ಸರ್ಕಾರ ಇರಲಿ, ಅದುನ್ನ ತನ್ನ ತಾಳಕ್ಕೆ ತಕ್ಕಂತೆ ಕುಣ್ಸೋ ತಾಕತ್ತಿರೋದು ತಮಿಳುನಾಡಿನ ರಾಜಕೀಯ ಪಕ್ಷಗಳಿಗೇ ಗುರು.
ಇದಕ್ಕೆ ಕಾರಣಾನೂ ಅಲ್ಲಿರೋ ಪಕ್ಷಗಳು ತಮಿಳರ, ತಮಿಳುನಾಡಿನ ಹಿತವನ್ನು ಕೇಂದ್ರದಲ್ಲಿ ಇಟ್ಕೊಂಡು ಕಟ್ಟಿರೋ ಪಕ್ಷಗಳು. ತಮಿಳರಿಗೆ ಅನ್ಯಾಯ ಮಾಡ್ತಿದಾರೆ, ತಮಿಳು ಸಂಸ್ಕೃತಿಯನ್ನ ಹಾಳುಮಾಡ್ತಿದಾರೆ ಅನ್ನೋದೆ ಒಬ್ರುಗೆ ಇನ್ನೊಬ್ರನ್ನ ಹಣಿಯೋಕೆ ಇರೋ ಅಸ್ತ್ರ. ಈಗ್ಲೇ ನೋಡಿ, ಜಯಮ್ಮ ಕರುಣಾನಿಧಿಯೋರು ನೆರೆ ರಾಜ್ಯಗಳ ಪರ ಪಕ್ಷಪಾತ ಮಾಡ್ತಾರೆ ಅಂತ ಆರೋಪಾ ಮಾಡ್ತಿದಾರೆ.
ಆದ್ರೆ ನಮ್ಮ ನಾಡಲ್ಲಿ ಪರಿಸ್ಥಿತಿ ಇದಕ್ಕೆ ಪೂರ್ತಿ ವಿರುದ್ಧವಾಗಿದೆ. ಈಗ ಹೇಳಿ, ನಾವು ತಮಿಳುನಾಡು ನಮ್ಮ ಮೇಲೆ ಅನ್ಯಾಯ ಮಾಡ್ತಿದೆ ಅಂತಾ ಹೋರಾಟವೊಂದನ್ನೇ ನೆಚ್ಕೊಂಡ್ರೆ ನ್ಯಾಯ ಸಿಗುತ್ತಾ?ಗುರು.

ಮುಂದಾಗಬೇಕಾಗಿರೋದು...

ಇವತ್ತಿನ ದಿನ ಯಾವ ಹೋರಾಟಗಾರರು ನಾಡು ನುಡಿ ಬಗ್ಗೆ ಪ್ರಾಮಾಣಿಕ ಕಾಳಜಿ ಇಟ್ಕೊಂಡು ಹೋರಾಟ ಮಾಡ್ತಿದಾರೋ ಅವರು ನಾಡಿನ ಉಳಿವಿಗಾಗಿ ರಾಜಕೀಯಕ್ಕೆ ಬರೋ ಮನಸ್ಸು ಮಾಡಬೇಕು. ಕನ್ನಡದ ಜನತೆ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆಗೆ ನಿಲ್ಲೋ ಅಭ್ಯರ್ಥಿಗಳಿಗೆ ನಾಡಿನ ಬಗ್ಗೆ ಇರೋ ಕಾಳಜಿ, ಬದ್ಧತೇನ ಸಾಣೆ ಹಿಡಿದು ನೋಡೇ ಮತ ಹಾಕ್ಬೇಕು. ಕನ್ನಡಿಗರು ದೊಡ್ಡ ಮತಬ್ಯಾಂಕ್ ಆಗಿ ನಾಡಿನ ಪರ ಕಾಳಜಿ ಇರೋರನ್ನೇ ಗೆಲ್ಲುಸ್ಬೇಕು. ಇದರಿಂದ ರಾಜಕೀಯವಾಗಿ ಬಲ ಗಳಿಸಿಕೋಬೇಕು. ಇದುನ್ನ ಮೊದಲನೆ ಹೆಜ್ಜೆ ಮಾಡ್ಕೊಂಡು ವ್ಯಾಪಾರ, ವಹಿವಾಟು, ಉದ್ಯೋಗ, ಉದ್ದಿಮೆ, ಆಡಳಿತ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡಿಗರ ಹಿಡಿತವನ್ನು ಸಾಧಿಸಬೇಕು. ಆಗ ನಮ್ಮ ಪಾಲಿಗೆ ನ್ಯಾಯನೂ ಸಿಗುತ್ತೆ. ನಮ್ಮ ಮೇಲಾಗ್ತಿರೋ ಅನ್ಯಾಯಗಳೂ ಕೊನೆಯಾಗುತ್ತೆ. ಏನಂತೀ ಗುರು?

ಹೊಗೇನಕಲ್ಲಿಂದ ಸವಾಲು: "ಕನ್ನಡಿಗರು ಷಂಡರಾ?"

ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ. ಆದ್ರೆ ಅವತ್ತಿಗೂ ಇವತ್ತಿಗೂ ಎದ್ದ್ ಕಾಣ್ತಿರೋ ವ್ಯತ್ಯಾಸ ಏನಪ್ಪಾ ಅಂದ್ರೆ - ಅವತ್ತು ಅವರ ಕಿರುಕುಳ ನಿಲ್ಲಿಸಿ ಕರ್ನಾಟಕವನ್ನ ರಕ್ಷಿಸೋ ಗಂಡಸರು ಸರಿಯಾದ ಸ್ಥಾನಗಳಲ್ಲಿ ಇದ್ದರು; ಇವತ್ತು ಅಂತಾ ಗಂಡಸರು ಇದ್ದರೂ ಅವರಿಗೇ ಎಲ್ಲರೂ ತೊಂದರೆ ಕೊಡೋರೇ!

ಇತ್ತೀಚೆಗೆ ಕರ್ನಾಟಕಕ್ಕೆ ಸೇರಿದ ಹೊಗೇನಕಲ್ ನಡುಗಡ್ಡೆ ತಮಿಳ್ನಾಡಿಗೆ ಸೇರಿದೆ ಅನ್ನೋ ಸುಳ್ಳು ಹಬ್ಬಿಸಿ ಅಲ್ಲಿ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗೆ ತಮಿಳ್ನಾಡು ಕೈಹಾಕಿದೆ. ಔರೂ ನೋಡುದ್ರು - ಈ ಕನ್ನಡಿಗರು ಪೆದ್ದುಮುಂಡೇವು, ಷಂಡ್ರು, ಇವ್ರಿಗೆ ತಮ್ಮ ಹೆಂಡತೀನ ಹೊತ್ತುಕೊಂಡು ಹೋದ್ರೂ ಗೊತ್ತಾಗಲ್ಲ, ಗೊತಾಗ್ತಿದ್ರೂ ಏನೂ ಕಿಸಿಯಕ್ ಆಗಲ್ಲ, ನಮ್ಮ ತೀಟೆ ನಾವು ತೀರುಸ್ಕೊಳಮ ಅಂತ. ಕಾವೇರಿ ನದಿನೀರು ಹಂಚಿಕೆ ವಿಷಯ ಇನ್ನೂ ನ್ಯಾಯಾಲಯದಲ್ಲಿ ಇರುವಾಗ್ಲೇ ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳ್ಕೊಳೋ ಈ ತಮಿಳ್ರು ಹೇಗೆ ಹೊಗೇನಕಲ್ ನಲ್ಲಿ ಯೋಜನೆಗೆ ಕೈ ಹಾಕುದ್ರು? ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ಇಲ್ಲದೇ ಇರೋ ಪರಿಸ್ಥಿತಿ ನೋಡಿ ತಮ್ಮ ತೀಟೆ ತೀರಿಸಿಕೊಳ್ಳೋ ಖದೀಮರು ಇವ್ರು!

ನಾವು ಇನ್ನು ಎಚ್ಚೆತ್ತುಕೊಳ್ಳಬೇಕಷ್ಟೆ! ತಮಿಳ್ನಾಡಿಂದ ನಮಗೆ ಏನೇನು ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ಯಾಕ್ ತೊಂದ್ರೆ ಆಗ್ತಿದೆ ಅಂತ ಅರ್ಥ ಮಾಡ್ಕೋಬೇಕು. ನಮ್ಮ ರಾಜಕಾರಣಿಗಳು ಕರ್ನಾಟಕವನ್ನ ಮಾರ್ಕೋತಿದಾರಲ್ಲ, ಇದನ್ನ ನಿಲ್ಲಿಸೋದು ಹೇಗೆ ಅಂತ ಅರ್ಥ ಮಾಡ್ಕೋಬೇಕು. ಇನ್ನೇನು ಕರ್ನಾಟಕದಲ್ಲಿ ಚುನಾವಣೆ ನಡ್ಯೋದ್ರಲ್ಲಿದ್ಯಲ್ಲ, ಕೇಳ್ಬೇಕು ನಮ್ಮ ರಾಜಕಾರಣಿಗಳ್ನ - "ಥೂ! ನಿಮ್ಮ ಜನುಮಕ್ಕೆ ನಾಚಿಕೆ ಆಗಬೇಕು! ಕಾವೇರಿ ತೀರ್ಪಲ್ಲಿ ನಮಗೆ ಕೆರ ತೊಗೊಂಡು ಹೊಡ್ದಿದಾರಲ್ಲ, ನಮ್ಮ ನೀರೆಲ್ಲಾ ತಮಿಳರಿಗೆ ಬರ್ದು ಕೊಟ್ಟಿದಾರಲ್ಲ, ಅದಕ್ಕೆ ನೀವ್ ಏನ್ ಮಾಡ್ತೀರಿ? ಹೊಗೇನಕಲ್ನ ತಮಿಳ್ನಾಡಿಗೆ ಸೇರಿಸಕ್ಕೆ ಹೊರ್ಟಿದಾರಲ್ಲ ತಮಿಳ್ರು, ಅದಕ್ಕೆ ಏನ್ ಕಿಸೀತೀರಿ?" ಅಂತ.

ಇಲ್ಲಾ ನಮ್ಮ ಟೀಷರ್ಟುಗಳ ಮೇಲೆ ಬರಿಸಿಕೊಳ್ಳಬೇಕು, ನಮ್ಮ ಮನೆ ಗೋಡೆಗಳ ಮೇಲೆ ಎಲ್ರುಗೂ ಕಾಣೋಹಂಗೆ ಬರುಸ್ಕೋಬೇಕು, ಅಂತರ್ಜಾಲದಲ್ಲೆಲ್ಲಾ ಒಪ್ಪಿಕೋಬೇಕು - "ಹೌದು! ನಾವು ಕನ್ನಡಿಗರು ಪೆದ್ದುಮುಂಡೇವು, ಷಂಡ್ರು" ಅಂತ. ಏನ್ ಗುರು?

ಜೊತೆಗೆ ಇದ್ನೂ ಓದಿ: ಹೊಗೇನಕಲ್ಲಿಗೇ ಹೊಗೆ!

ದಿಲ್ಲಿ ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟೊತ್ತುವ ಗುಲಾಮರು!

ಮೊನ್ನೆ ಕರ್ನಾಟಕದಾಗೆ ವಿಧಾನ ಸಭಾ ಚುನಾವಣೆ ಅಂತಿದ್ ಹಾಗೇ ಭಾರತದ ರಾಷ್ಟ್ರೀಯ ಪಕ್ಷಗಳ ಬಾಲಂಗೋಚಿಗಳಾದ ಕರ್ನಾಟಕದ ಶಾಖೆಗಳು ಅಂದ್ರೆ ಅಂಗಗಳು ನಡ್ಕೊಂಡಿದ್ ನೋಡಿ ತಾಯಿ ರಾಜರಾಜೇಶ್ವರಿ ಧನ್ಯಳಾದಳು ಕಣ್ರಪ್ಪಾ!
ಅರುಣ್ ಜೇಟ್ಲಿಯ ಮುಂದೆ ಮಂಡಿಯೂರಿದ ಭಾಜಪ ಮುಖಂಡರು!
ಕರ್ನಾಟಕದಲ್ಲಿ ಚುನಾವಣೆ ತಂತ್ರ ರೂಪ್ಸೋ ಜವಾಬ್ದಾರೀನ ಭಾರತೀಯ ಜನತಾ ಪಕ್ಷದೋರು ಅರುಣ್ ಜೇಟ್ಲಿ ಅವರಿಗೆ ಒಪ್ಸಿರೋ ಸುದ್ದಿ ಬಂದಿದೆ ಗುರು! ಜೊತೆಗೆ ಗುಜರಾತಿನ ನರೇಂದ್ರ ಮೋದಿಯೋರು ಕೂಡಾ ಚುನಾವಣಾ ಪ್ರಚಾರಾನ ಒಂಥರಾ ಶುರು ಹಚ್ಕಂಡವ್ರೆ. ಅಲ್ಲಾ, ಯಡಿಯೂರಪ್ಪ, ಅನಂತ್ ಕುಮಾರು, ಈಶ್ವರಪ್ಪ ಮುಂತಾದ ಘನಂದಾರಿ ನಾಯಕರಿಗೆಲ್ಲಾ ಈ ತಂತ್ರಗಾರಿಕೆ ಕೆಲ್ಸ ಗೊತ್ತಿಲ್ವಾ? ಇದಕ್ಕೆ ದಿಲ್ಲಿಯೋರು ನೇಮಕ ಮಾಡ್ದೋರೆ ಯಾಕಾಗಬೇಕು ಅಂತಾ? ಇದ್ರ ಮಧ್ಯೆ ನಿಮ್ ಜೊತೆ ಏನ್ ಮಾತು? ಆಡೋದಾದ್ರೆ ರಾಷ್ಟ್ರೀಯ ನಾಯಕರ ಜೊತೆ ಆಡ್ತೀವಿ ಅಂತ ನಮ್ಮ ಜೊತೆ ಹೊಂದಾಣಿಕೆ ಮಾಡ್ಕೊಳೀ ಅಂತಾ ಅರುಣ್ ಜೇಟ್ಲಿ ಮುಂದೆ ಸಂಯುಕ್ತ ಜನತಾ ದಳದೋರು ಅಳ್ತಾ ಇರೋ ಸುದ್ದೀನೂ ಬಂತು ಗುರು! ಅಲ್ಲಾ, ರಾಜ್ಯದೊಳಗಡೆ ಒಬ್ಬ ಯೋಗ್ಯ ನಾಯಕನೂ ಇಲ್ಲಾ ಅಂದ್ರೆ ನಾಳೆ ಇವ್ರು ನಮ್ ನಾಡುನ್ನ ಹೇಗೆ ಅಳ್ತಾರೆ? ಇವ್ರು ಪ್ರತಿಯೊಂದಕ್ಕೂ ದಿಲ್ಲಿ ಕಡೆ ಮುಖ ಮಾಡಿ ನಿಲ್ಲೋದು ಖಂಡಿತಾ ಗುರು.
ರಾಹುಲ್ ಗಾಂಧಿ ಎದ್ರು ಕೈ ಹೊಸೆಯುವ ಕಾಂಗ್ರೆಸ್ಸಿನ ಮಹಾನಾಯಕರು!

ಚುನಾವಣೆ ಅಂತಿದ್ ಹಾಗೆ ಶುರುವಾದ "ಡಿಸ್ಕವರಿ ಆಫ್ ಇಂಡಿಯಾ" ಜಾತ್ರೆ ನೋಡ್ಬೇಕಿತ್ತು. ರಾಹುಲ್ ಗಾಂಧಿ ವಯಸ್ಸಿಗಿಂತ ಹೆಚ್ಚಿನ ರಾಜಕೀಯ ಅನುಭವ ಇರೋ ಕೃಷ್ಣ, ಖರ್ಗೆ, ಧರಂಸಿಂಗ್, ಎಂ.ಪಿ.ಪ್ರಕಾಶ್, ಸಿದ್ದರಾಮಣ್ಣ ಎಲ್ಲ ಹೆಂಗ್ ಹಿಂದೆ ಮುಂದೆ ಸಾಮಂತರುಗಳ ಅಲೀತಿದ್ರೂ ಅನ್ನೋದ್ನ ನೋಡುದ್ರೆ ಸ್ವಾಭಿಮಾನ, ಆತ್ಮಗೌರವ, ನಾಯಕತ್ವ ಅನ್ನೋ ಪದಗಳಿಗೆ ಹೊಸಾ ಅರ್ಥ ಬರೀಬೇಕು ಅನ್ನುಸ್ಬುಡ್ತು ಗುರು. ಕರ್ನಾಟಕದಾಗಿನ ಸಮಸ್ಯೆಗಳ್ನ ರಾಹುಲ್ ಮುಂದೆ ಇಟ್ಟು ದಾರಿ ತೋರ್ಸಿ ಅಂತ ಬೇಡ್ಕೊತಾ ಇದ್ದುದ್ನ ನೋಡಿ, ಜೀವ ತಂಪಾಯ್ತು ಗುರು. ಜೊತೆಗೆ, ಯುವ ಕಾಂಗ್ರೆಸ್ಸಿನೋರು ಯುವಕರಿಗೇ ಅವಕಾಶ ಕೊಡಿ ಅಂತಾ ರಾಹುಲ್ ಗಾಂಧಿಗೆ ದುಂಬಾಲು ಬಿದ್ದ ಇನ್ನೊಂದು ಸುದ್ದಿ ಬಂತು ಗುರು!
ಅಮರಸಿಂಗ್ ಅಪ್ಪಣೆಗೆ ಕಾದ ಸಮಾಜವಾದಿಯ ಬಂಗಾರಪ್ಪ!
ಕರ್ನಾಟಕದಲ್ಲಿ ಜಾತ್ಯಾತೀತ ಜನತಾ ದಳದೋರ ಜೊತೆ ಹೊಂದಾಣಿಕೆ ಮಾಡ್ಕೊಬೇಕು ಅಂತಾ ನಮ್ಮ ಸಾರೆಕೊಪ್ಪದ ಬಂಗಾರಪ್ಪನವರಿಗೆ ಅನ್ಸುದ್ರೆ ಪಾಪ ಅವ್ರು ದಿಲ್ಲೀಗೆ ಹತ್ರದಲ್ಲಿರೋ ಅಮರ್ ಸಿಂಗ್ ಮೂಲಕ ಮಾತಾಡ್ತಾರೆ. ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷದ ರಾಜಕಾರಣಿ ಅಮರ್ ಸಿಂಗ್ ದಿಲ್ಲೀಲಿ ದ್ಯಾವೇಗೌಡ್ರ ಜೊತೆ ಮಾತುಕತೆ ನಡ್ಸಿದ ಸುದ್ದೀನು ಬಂತು ಗುರು! ಮಾತುಕತೆ ಏನಾಯ್ತೋ? ಹೊಂದಾಣಿಕೆ ಮಾಡ್ಕೋಬೇಕೋ? ಬ್ಯಾಡ್ವೋ? ಅಂತನ್ನೋ ಚಿಕ್ಕ ತೀರ್ಮಾನ ಕೂಡ ತೊಗಳ್ಳಕ್ ಆಗದ ಬಂಗಾರಪ್ಪನವ್ರು ನಾಳೆ ಗದ್ದುಗೆ ಹಿಡುದ್ರೆ ’ಅಣ್ಣಾ! ಕರ್ನಾಟಕದ ಈ ವರ್ಷದ ಬಜೆಟ್ ಇದು, ಇದುನ್ ಒಸಿ ಮಂಡುಸ್ಲಾ?’ ಅಂತಾ ಉತ್ತರದೋರ್ ಮುಂದೆ ಪ್ರಶ್ನೆ ಇಟ್ಟಾರು...
ಕಣ್ ಕಣ್ ಬಿಡ್ತಿರೋ ಜಾತ್ಯಾತೀತ ಜನತಾದಳದೋರು!
ಇಷ್ಟೆಲ್ಲಾ ನಡೀತಾ ಇರ್ಬೇಕಾದ್ರೆ ಅಲ್ಲಿ ಅಪ್ಪ ದ್ಯಾವೇಗೌಡ್ರು ದಿಲ್ಲೀಲಿ ನಮ್ಮದೂ ರಾಷ್ಟ್ರೀಯ ಪಕ್ಷ ಅಂತಾ ಕಿರುಲ್ತಿದ್ರೆ ಮಗಾ ಕುಮಾರಣ್ಣ ಇಲ್ಲಿ... ನಮ್ಮದು ಪ್ರಾದೇಶಿಕ ಪಕ್ಷಾ ಅಂತಾ ಇದಾರೆ. ಒಂದ್ಸರ್ತಿ ಕನ್ನಡ ನಮ್ಮ ಉಸ್ರು ಅನ್ನೋರು ಇನ್ನೊಂದು ಕಡೆ ನಿಪ್ಪಾಣಿ ಸಭೇಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಅಂತಾ ನಿರ್ಣಯ ತೊಗೋತಾರೆ. ನಾವು ಕನ್ನಡದೋರು ಅಂದ್ಕೊಂಡೆ ತಮ್ಮ ಪಕ್ಷದ ವತಿಯಿಂದ ವಿಧಾನ ಸಭಾ ಕ್ಷೇತ್ರಗಳ್ನ ತಮಿಳ್ರಿಗೆ, ತೆಲುಗ್ರಿಗೆ ಕೊಟ್ಕೊಂಡು ಬರ್ತಿದಾರೆ.
ಇಂತಿರ್ಪ ಕನ್ನಡ ನಾಡ ರಾಜಕಾರಣದ ಕುರಿದೊಡ್ಡೀಲಿ...
ಕವಿ ನಿಸಾರ್ ಅಹಮದ್ ಅವರ ಕುರಿಗಳು ಕವಿತೆ ಇವ್ರುನ್ ನೋಡೇ ಬರ್ದಿರೋ ಹಾಗಿದೆ!
ನಮ್ಮ ಕಾಯ್ವ ಕುರುಬರೂ...
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು
ದಿಲ್ಲಿನಾಗೆ ಕೂತಿರೋ ಶಾನುಭೋಗರು ಗೀಚಿದ್ದಕ್ಕೆ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಸಹಿ ಹಾಕ್ಕೊಂಡ್ ಕೂತಿರೋದ್ನ ನೋಡ್ತಿರೋ ನಾವು? ಮಂದೆಯಲಿ ಸ್ವಂತತೆ ಮರೆತು ತಲೆ ತಗ್ಗಿಸಿ ನಡು ಬಗ್ಗಿಸಿ, ದನಿ ಕುಗ್ಗಿಸಿ ಅಂಡಲೆಯುವ ನಾವೂ ನೀವೂ ಅವರೂ ಇವರೂ ಕುರಿಗಳೂ ಸಾರ್ ಕುರಿಗಳು... ನಾವು ಕುರಿಗಳು! ಏನಂತೀರಾ ಗುರು?
Related Posts with Thumbnails