Showing posts with label ವ್ಯಕ್ತಿಗಳು. Show all posts
Showing posts with label ವ್ಯಕ್ತಿಗಳು. Show all posts

ಕಿರಣ್ ಬಾಟ್ನಿಯವರ ಹೊಸ ಇಂಗ್ಲೀಶ್ ಹೊತ್ತಗೆ ಮಾರುಕಟ್ಟೆಗೆ!

( ಚಿತ್ರಕೃಪೆ: http://kiranbatni.com/)

ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಬ್ಲಾಗನ್ನು ಆರಂಭಿಸಿ, ಕನ್ನಡ ಅಂತರ್ಜಾಲ ತಾಣದಲ್ಲೊಂದು ಹೊಸಅಲೆಗೆ ಕಾರಣರಾದ, ಹೊಸಪೀಳಿಗೆಯ ಯುವ ಚಿಂತಕರಾದ ಶ್ರೀ ಕಿರಣ್ ಬಾಟ್ನಿಯವರು ಇಂಗ್ಲೀಷಿನಲ್ಲಿ ಬರೆದಿರುವ ಹೊಸ ಹೊತ್ತಗೆ "ದಿ ಪಿರಮಿಡ್ ಆಫ಼್ ಕರಪ್ಶನ್" ಬಿಡುಗಡೆಗೆ ಸಿದ್ಧವಾಗಿದೆ. ಇದೇ ಫ಼ೆಬ್ರವರಿ ೧೫ರಂದು ಬೆಳಗ್ಗೆ ೯:೦೦ಗಂಟೆಗೆ ಅಂತರ್ಜಾಲದ ಮೂಲಕವೂ ಪುಸ್ತಕ ಬಿಡುಗಡೆಯನ್ನು ಹೊಸಬಗೆಯಲ್ಲಿ ಆಚರಿಸಲಾಗುತ್ತಿದೆ.

ಕಿರಣ್ ಬಾಟ್ನಿ ಮತ್ತು ನಾಡಪರ ಚಿಂತನೆ

ಮೂಲತಃ ಮೈಸೂರಿನವರಾದ ಕಿರಣ್, ದೆಹಲಿಯ ಐಐಟಿಯಲ್ಲಿ ಎಂ.ಟೆಕ್ ಪದವೀಧರರು. ಇಪ್ಪತ್ತೈದಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಟ ನಡೆಸಿರುವ ಇವರು ಸದಾ ತಮ್ಮ ಹೊಸತನದ ಚಿಂತನೆಗಳಿಂದ ಜನಮನ ಸೆಳೆದಿದ್ದು, ಅಧ್ಯಾತ್ಮ ಮತ್ತು ಲೌಕಿಕ ಬದುಕಿನ ದಿಟಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನವನ್ನೂ ನಡೆಸುತ್ತಿರುವ ಕಿರಣ್ ಬಾಟ್ನಿಯವರು ನಾಡು, ನುಡಿ, ಏಳಿಗೆ, ಏರ್ಪಾಟುಗಳ ಬಗ್ಗೆ ಸಾಕಷ್ಟು ಮಹತ್ವದ ಬರಹಗಳನ್ನು ಬರೆದಿದ್ದಾರೆ. ಇಂಗ್ಲೀಷಿನಲ್ಲಿ "ಕರ್ನಾಟಿಕ್" ಎಂಬ ಬ್ಲಾಗನ್ನು ನಡೆಸುತ್ತಿರುವ ಕಿರಣ್, ಹೊನಲು ಹೆಸರಿನ ಕನ್ನಡದ ವಿಶಿಷ್ಟವಾದ ತಾಣವನ್ನು ನಡೆಸುತ್ತಿದ್ದು ಇಲ್ಲಿ ಕನ್ನಡದಲ್ಲಿಯೇ ಅರಿಮೆಯ ಬರಹಗಳನ್ನು ಬರೆಯುವ ಬರಹಗಾರರ ದಂಡೊಂದು ತಯಾರಾಗುತ್ತಿದೆ. ಇದೀಗ ಕಿರಣ್ ಬಾಟ್ನಿ ಬರೆದಿರುವ "ಪಿರಮಿಡ್ ಆಫ಼್ ಕರಪ್ಶನ್" ಹೊತ್ತಗೆ ಮಾರುಕಟ್ಟೆಗೆ ಬರುತ್ತಿದ್ದು ಇದು ಇವರ ಮೊದಲ ಇಂಗ್ಲೀಷ್ ಹೊತ್ತಗೆಯಾಗಿದೆ.

ಕನ್ನಡದಲ್ಲಿ "ಮಂದಿಯಾಳ್ವಿಕೆಯಲ್ಲಿ ಕನ್ನಡಿಗ" ಹೊತ್ತಗೆಯನ್ನು ಬರೆದಿರುವ ಕಿರಣ್, ಡಾ ಡಿ ಎನ್ ಶಂಕರಬಟ್ಟರ "ಕನ್ನಡ ನುಡಿಯರಿಮೆಯ ಇಣುಕುನೋಟ" ಹೊತ್ತಗೆಯ ಸಂಪಾದಕರೂ ಆಗಿದ್ದಾರೆ. ಇಂಗ್ಲೀಷಿನಲ್ಲಿ ಬರೆಯುವ ಮೂಲಕ ತಮ್ಮ ನಿಲುವುಗಳನ್ನು ಇಂಗ್ಲೀಷ್ ಓದಬಲ್ಲ ಕನ್ನಡದ ಒಂದು ವರ್ಗವನ್ನು ಮಾತ್ರವಲ್ಲದೆ, ಕನ್ನಡೇತರರನ್ನೂ ತಲುಪುವ ಉದ್ದೇಶವನ್ನು ಶ್ರೀ ಕಿರಣ್ ಬಾಟ್ನಿ ಹೊಂದಿದ್ದಾರೆ. ಈ ಹೊತ್ತಗೆಯನ್ನು "ಅಂತರ್ಜಾಲ"ದ ಮೂಲಕ ಕೊಳ್ಳಬಹುದಾಗಿದೆ. ಭ್ರಷ್ಟಾಚಾರದ ಬಗ್ಗೆ ಹೊಸನೋಟವನ್ನು ಬೀರುವ ಸದರಿ ಹೊತ್ತಗೆಯು ಭ್ರಷ್ಟಾಚಾರದ ಬಗ್ಗೆ ಓದುಗರಿಗೆ ಈಗಾಗಲೇ ಇರಬಹುದಾದ ನಂಬಿಕೆಗಳ ಬುಡವನ್ನೇ ಅಲುಗಿಸಬಲ್ಲದಾಗಿದೆ.

ಈ ಹೊತ್ತಗೆಯನ್ನು ಮುಂದಾಗಿ ಕೊಳ್ಳಲು ಈ ತಾಣಕ್ಕೆ ಭೇಟಿ ನೀಡಿ.

ಮರೆಯಾದ ಯಶವಂತ ಹಳಿಬಂಡಿ!

(ಚಿತ್ರಕೃಪೆ: ಕಣಜ)

ಹಿರಿಯ ಹಾಡುಗಾರರಾದ ಶ್ರೀ ಯಶವಂತ ಹಳಿಬಂಡಿಯವರು ಇಂದು ತೀರಿಕೊಂಡಿದ್ದಾರೆ. ಅರವತ್ತೆರಡು ವರ್ಷ ವಯಸ್ಸಿನ ಹಳಿಬಂಡಿಯವರು "ಪಾತರಗಿತ್ತಿ ಪಕ್ಕಾ, ನೋಡಿದ್ಯೇನೇ ಅಕ್ಕಾ" "ಹೋಗೂ ಮನಸೇ ಹೋಗು, ನಲ್ಲೇ ಇರುವಲ್ಲಿ ಹೋಗು" "ನಾನು ಚಿಕ್ಕವನಾಗಿದ್ದಾಗ ಅಪ್ಪಾ ಹೇಳುತ್ತಿದ್ದರೂ..." ಮೊದಲಾದ ಹಾಡುಗಳಿಂದ ಕನ್ನಡನಾಡಿನ ಮನೆ ಮನೆಯನ್ನು ತಲುಪಿದ್ದವರು. ಕನ್ನಡ ಭಾವಗೀತೆಯ ಕ್ಷೇತ್ರ ಇವರ ನಿಧನದಿಂದ ಸೊರಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಕೋರುತ್ತದೆ.

ಕನ್ನಡ ನುಡಿಯರಿಮೆಯ ಇಣುಕುನೋಟ: ಶಂಕರಬಟ್ಟರ ಹೊಸಹೊತ್ತಗೆ ಮಾರುಕಟ್ಟೆಗೆ!


ಇತ್ತೀಚಿಗೆ ಕರ್ನಾಟಕ ಸರ್ಕಾರದಿಂದ ಪಂಪ ಪ್ರಶಸ್ತಿ ಪಡೆದಿರುವ ನಾಡಿನ ಹೆಮ್ಮೆಯ ಭಾಷಾವಿಜ್ಞಾನಿ ನಾಡೋಜ ಡಾ. ಡಿ ಎನ್ ಶಂಕರ ಬಟ್ಟರ ಹೊಸಹೊತ್ತಗೆಯೊಂದು ಬಿಡುಗಡೆಯಾಗಿದೆ. ಯುವಚಿಂತಕ ಶ್ರೀ ಕಿರಣ್ ಬಾಟ್ನಿಯವರು ಸಂಪಾದಿಸಿರುವ ಕನ್ನಡ ನುಡಿಯರಿಮೆಯ ಇಣುಕುನೋಟ ಹೆಸರಿನ ಈ ಹೊತ್ತಗೆ ಕನ್ನಡ ಸಮಾಜಕ್ಕೆ ದಾರಿತೋರುಕವಾದುದಾಗಿದೆ. ತಮ್ಮ ಎಡೆಬಿಡದ ಹತ್ತಾರು ವರ್ಷಗಳ ಅಧ್ಯಯನದ ಸಾರವನ್ನು ಎಳೆಯರಿಗೂ ಅರ್ಥವಾಗುವಂತೆ ತಿಳಿಯಾಗಿ ತಿಳಿಸಬಲ್ಲ ಸಾಮರ್ಥ್ಯವಿರುವ ಬಟ್ಟರ ಬರಹದ ಶೈಲಿ ಈ ಹೊತ್ತಗೆಯಲ್ಲೂ ಇದ್ದು ಓದುಗರಿಗೆ ಸರಳವಾಗಿ ಅರಿಮೆಯನ್ನು ತಲುಪಿಸುತ್ತದೆ. ಈ ಹೊತ್ತಗೆಯು ಮಡಿಕೇರಿಯಲ್ಲಿನ "೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಮೊದಲಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಬನವಾಸಿ ಬಳಗ ಪ್ರಕಾಶನದ ಮಳಿಗೆಯಲ್ಲಿ ಮಾರಾಟಕ್ಕೆ ಸಿಗುತ್ತಿರುವ ಈ ಹೊತ್ತಗೆಯ ಮೊದಲಲ್ಲಿ ಸಂಪಾದಕರಾದ ಕಿರಣ ಬಾಟ್ನಿಯವರು ಹೀಗೆ ಬರೆದಿದ್ದಾರೆ.

ಇಣುಕುನೋಟದ ಮುನ್ನುಡಿಯಲ್ಲಿ...

ಬರಹದ ಕನ್ನಡವು ಕಾಲಕಾಲಕ್ಕೆ ಮಾರ್ಪಡುತ್ತಲೇ ಬಂದಿದೆ. ಬರಿಗೆಮಣೆ (ಅಕ್ಶರಮಾಲೆ), ಪದಬಳಕೆ, ಹಾಗೂ ಒಡ್ಡವದಲ್ಲಾದ ಮಾರ್ಪಾಡುಗಳು ಒಂದು ಬಗೆಯವಾದರೆ, ಬರವಣಿಗೆಯ ಇಟ್ಟಳದಲ್ಲಾದ ಮಾರ್ಪಾಡುಗಳು ಇನ್ನೊಂದು ಬಗೆಯವು ಎನ್ನಬಹುದು. ಆದರೆ ಇವೆರಡು ಬಗೆಯ ಮಾರ್ಪಾಡುಗಳು ಒಂದನ್ನೊಂದು ಬೆಂಬಲಿಸಿಯೇ ನಡೆದಿವೆ ಎನ್ನಬಹುದು. ಎತ್ತುಗೆಗೆ, ೞ-ಕಾರ ಮತ್ತು ಱ-ಕಾರಗಳು ಚಲಾವಣೆಯಲ್ಲಿದ್ದಾಗ ಬರವಣಿಗೆಯನ್ನು ಹೆಚ್ಚು-ಕಡಿಮೆ ದಾರ್ಮಿಕ ವಿಶಯಗಳನ್ನು ಪದ್ಯರೂಪದಲ್ಲಿ ಹೇಳುವುದಕ್ಕಾಗಿ ಮಾತ್ರವೇ ಬಳಸಲಾಗುತ್ತಿತ್ತು; ಆದರೆ, ಕಾಲ ಕಳೆದಂತೆ ಈ ಬರಿಗೆಗಳು ಕಾಣೆಯಾದವಶ್ಟೇ ಅಲ್ಲ, ದರ್ಮಕ್ಕೆ ನಂಟಿರದ ವಿಶಯಗಳನ್ನು ಪದ್ಯವಲ್ಲದ ಒಡ್ಡವಗಳಲ್ಲಿ ಹೇಳುವಂತಹ ಬರವಣಿಗೆಗಳೂ ಕಾಣಿಸಿಕೊಂಡವು.


ಇವತ್ತಿನ ದಿನವಂತೂ ಹೊಚ್ಚಹೊಸದಾದ ಅರಿಮೆಗಳನ್ನು ಆಯಾ ಅರಿಮೆಯ ವಲಯಗಳಲ್ಲಿ ಕೆಲಸ ಮಾಡುತ್ತಿರುವವರು ಬರವಣಿಗೆಗೆ ಇಳಿಸಬೇಕಾದ ಪರಿಸ್ತಿತಿಯಿದೆ. ಒಂದಲ್ಲ ಒಂದು ಬಗೆಯ ನಲ್ಬರಹ(ಸಾಹಿತ್ಯ)ಕ್ಕಾಗಿ ಮಾತ್ರ ಬಳಸಲಾಗುತ್ತಿದ್ದ ಕನ್ನಡವಿಂದು ಹಿಂದೆಂದೂ ಇಡದ ಹೆಜ್ಜೆಯನ್ನು ಇಡಬೇಕಿದೆ. ಕವಿತೆ, ನಾಟಕ, ಕಾದಂಬರಿ ಮುಂತಾದವುಗಳನ್ನು ಬರೆಯುವವರು ಮಾತ್ರ ಬಳಸುತ್ತಿದ್ದ ಕನ್ನಡವನ್ನು ಇಂದು ಇವಾವುದರ ಗಂದವೂ ಇಲ್ಲದ ಅರಿಗರು, ಇಂಜಿನಿಯರುಗಳು, ಡಾಕ್ಟರುಗಳು, ಮುಂತಾದವರು ತಂತಮ್ಮ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಂಡು ಕನ್ನಡವನ್ನು ಜಪಾನೀಸ್, ಕೊರಿಯನ್, ಜರ್ಮನ್, ಹೀಬ್ರೂ, ಮುಂತಾದ ನುಡಿಗಳ ಸಾಲಿನಲ್ಲಿ ನಿಲ್ಲಿಸಬೇಕಿದೆ.


ಇದನ್ನೆಲ್ಲ ಅರಿತು, ಈ ಬೆಳವಣಿಗೆಗಳು ಆಗದಿದ್ದರೆ ಕನ್ನಡಿಗರು ಪಡಲಿರುವ ಕಶ್ಟವನ್ನೆಲ್ಲ ಮನಗಂಡು, ನಲ್ಬರಹವನ್ನು ಬಿಟ್ಟು ಬೇರೆಲ್ಲೂ ಕನ್ನಡದ ಬಳಕೆ ಆಗುತ್ತಿಲ್ಲವೆಂದು ಕಣ್ಣೀರು ಸುರಿಸುವುದೊಂದೇ ನಮ್ಮ ಪಾಡೆಂದು ನಂಬಲು ತಯಾರಿಲ್ಲದ ಕನ್ನಡದ ಯುವಕರ ಪಡೆಯೊಂದು ಮೆಲ್ಲನೆ ಎದ್ದುನಿಲ್ಲುತ್ತಿದೆ, ಮತ್ತು ಅದರಿಂದ ಕನ್ನಡದಲ್ಲಿ ಹಿಂದೆಂದೂ ಕಂಡಿರದ ರೀತಿಯ ಬರವಣಿಗೆಗಳು ಇಂದು ಮೂಡುತ್ತಿವೆ.ಆದರೆ ಹಿಂದೆಯೂ ಆಗಿರುವಂತೆ, ಬರವಣಿಗೆಯ ಇಟ್ಟಳದಲ್ಲಾಗುತ್ತಿರುವ ಈ ಬೆಳವಣಿಗೆಯು ಬರಿಗೆಮಣೆ, ಪದಬಳಕೆ ಮತ್ತು ಬರವಣಿಗೆಯ ಒಡ್ಡವದಲ್ಲಿಯೂ ಮಾರ್ಪಾಡುಗಳನ್ನು ಚಿಗುರಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಮಾರ್ಪಾಡುಗಳಿಂದ ಈಗ ‘ಎಲ್ಲರ ಕನ್ನಡ’ವೊಂದು ರೂಪುಗೊಳ್ಳುತ್ತಿದೆ. ಇದರಲ್ಲಿ ಕನ್ನಡಿಗರ ಉಲಿಕೆಯಲ್ಲಿಲ್ಲದ ಮಹಾಪ್ರಾಣಗಳಿಲ್ಲ, ಋಕಾರವಿಲ್ಲ, ವಿಸರ್ಗವಿಲ್ಲ; ಐ-ಕಾರ, ಔ-ಕಾರಗಳಿಲ್ಲ. ಹಾಗೆಯೇ, ‘ಎಲ್ಲರ ಕನ್ನಡ’ವೆಂದರೆ ನಿಜಕ್ಕೂ ಎಲ್ಲರದಾಗಿದ್ದು, ಅತಿ ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸುವ ಬದಲು ಆದಶ್ಟು ಕನ್ನಡದ ಪದಗಳನ್ನೇ ಬಳಸಲಾಗುತ್ತದೆ, ಹೊಸ ಪದಗಳನ್ನು ಕನ್ನಡದಲ್ಲೇ ಕಟ್ಟಲಾಗುತ್ತದೆ.

ಕನ್ನಡವನ್ನು ಮುಂಬೊತ್ತಿಗೆ ಸಜ್ಜಾಗಿಸುವ ಹೊಣೆ ಕೆಲವು ಜಾತಿಗಳ ಬೆರಳೆಣಿಕೆಯ ಮಂದಿಯದಲ್ಲ, ಎಲ್ಲರದೂ ಆಗಿದೆಯೆಂದು ಕಂಡುಕೊಂಡರೆ ಈ ಮಾರ್ಪಾಡುಗಳು ಏತಕ್ಕೆ ಬೇಕೆಂದು ತಾನಾಗಿಯೇ ತಿಳಿದು ಬರುತ್ತದೆ.

ಕನ್ನಡ ಸಮಾಜದ ಬಗ್ಗೆ ಕಾಳಜಿಯಿರುವ, ಕನ್ನಡಿಗರ ಏಳಿಗೆಗೆ ದಾರಿ ಹುಡುಕುತ್ತಿರುವ ಮಂದಿಗೆ ಈ ಹೊತ್ತಗೆ ದಾರಿದೀಪವಾದರೆ ನುಡಿಯರಿಮೆಯನ್ನು ಸಾಮಾನ್ಯರೂ ಅರಿಯಲು ಅತ್ಯಂತ ಸಹಕಾರಿಯಾಗಿದೆ. ಇದು ನಿಮ್ಮಲ್ಲಿರಲೇಬೇಕಾದ ಹೊತ್ತಗೆ.

ಕಡೆಗಾನು ಹುಡಿಯಾಗಿ: ಜಿ ಎಸ್ ಶಿವರುದ್ರಪ್ಪ

(ಫೋಟೋಕೃಪೆ: http://kannada.yahoo.com/)

ಬೇಡಿಕೆ


ನಿನ್ನಡಿಯ ಹುಡಿ ನನ್ನ
ಮುಡಿಯ ಸಿಂಗರಿಸಿರಲಿ,
ಕಡೆಗಾನು ಹುಡಿಯಾಗಿ
ನಿನ್ನಡಿಗೆ ಸಲಲಿ.

ನಿನ್ನೊಲವಿನಂಬುಧಿಗೆ
ನನ್ನೆದೆಯ ಕರೆಯತೊರೆ
ಸಂತತವು ಹೊನಲಾಗಿ
ಹರಿಯುತಿರಲಿ.

ನಿನ್ನ ಕರುಣೆಯ ಕಿರಣ
ನಾನೆಂಬ ಹಿರಿಮಂಜ
ಕರಗಿಸುತ ಹೊಳೆ ಹೊಳೆದು
ಬೆಳಗುತಿರಲಿ.

ನನ್ನ ದೋಷಗಳೆಲ್ಲ
ನಿನ್ನ ಕ್ಷಮೆಯಾಯುಧದಿ
ಸಿಡಿಸಿಡಿದು ಹುಡಿಯಾಗಿ
ಹೋಗುತಿರಲಿ.

ಮುನ್ನ ಗುಣಗಳನುಳಿದು
ನಿನ್ನ ಗುಣದಲಿ ಬೆರೆದು
ಹೊಳೆ ಕಡಲಿಗಿಳಿವಂತೆ
ನಾನಳಿಯಲಿ.

- ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ

ಪುಸ್ತಕ: ಸಮಗ್ರ ಕಾವ್ಯ
ಪ್ರಕಾಶಕರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕೃಪೆ: ಕಣಜ 

ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಈ ಕವಿತೆ ಅವರ ಕೊನೆಯಾಸೆಯಂತೆ ತೋರುತ್ತಿದೆ! ಇವರಿಗೆ ನಮ್ಮ ಮನದುಂಬಿದ ಕಂಬನಿಗಳು. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ..

ಕಳಚಿದ ಕೊನೆಯ ಕೊಂಡಿ!


ಮೈಸೂರು ಅರಸರ ವಂಶಜರಾದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಿನ್ನೆ ನಿಧನರಾಗಿದ್ದಾರೆ. ಪ್ರಜಾಪ್ರಭುತ್ವವಾಗಿ ಬದಲಾದ ನಂತರ ಮೈಸೂರು ಹೇಗೇ ಬದಲಾದರೂ... ಅಂದಿನ ಮೈಸೂರು ರಾಜ್ಯದ ಏಳಿಗೆಗಾಗಿ ಮೈಸೂರು ಒಡೆಯರ್ ವಂಶಸ್ಥರು ಮಾಡಿದ ಒಳಿತನ್ನು ಮರೆಯಲಾಗದು. ಸ್ವತಂತ್ರರಾಷ್ಟ್ರವೊಂದಕ್ಕಿರುವ ಎಲ್ಲಾ ಲಕ್ಷಣಗಳನ್ನೂ ರೂಢಿಸಿಕೊಂಡಿದ್ದ ಅಂದಿನ ಮೈಸೂರು ತನ್ನದೇ ಆದ ಉದ್ದಿಮೆಗಳನ್ನು, ಬ್ಯಾಂಕು, ವಿದ್ಯುತ್, ಗಣಿ, ಶಿಕ್ಷಣ ವ್ಯವಸ್ಥೆಗಳೆಲ್ಲವನ್ನೂ ಹೊಂದಲು ಸಾಧ್ಯವಾಗಿದ್ದು ಮೈಸೂರು ರಾಜವಂಶಸ್ಥರ ಜನಪರ ಕಾಳಜಿಯಿಂದಾಗಿಯೇ. ಮೊದಲ ಜನಪ್ರತಿನಿಧಿ ಸಭೆಯನ್ನು ಹೊಂದುವ ಮೂಲಕ ಜನರನ್ನು ಆಡಳಿತದಲ್ಲಿ ತೊಡಗಿಸಿಕೊಂಡಿತ್ತು ಅಂದಿನ "ಮಾದರಿ ಮೈಸೂರು".

ಭಾರತದಲ್ಲೇ ಅತ್ಯಂತ ಮುಂದುವರೆದ ನಾಡೆಂದು ಗುರುತಿಸಲಾಗುತ್ತಿದ್ದ ಮೈಸೂರಿನ ಉನ್ನತಿಗೆ ಅದನ್ನಾಳಿದ ರಾಜರುಗಳೇ ಕಾರಣವೆಂದರೆ ತಪ್ಪಾಗದು. ತಮ್ಮ ನೀರಾವರಿ ಯೋಜನೆಗಳೂ ಸೇರಿದಂತೆ ಹಲವಾರು ಮುಂದಾಲೋಚನೆಯ ಜನಪರ ಯೋಜನೆಗಳಿಂದಾಗಿ ಇಂದಿಗೂ ಅದೆಷ್ಟೋ ಮನೆಗಳ ಒಲೆ ಹೊತ್ತಲು ಕಾರಣರಾದ ಮೈಸೂರು ಅರಸು ವಂಶಜರೆಂದರೆ ಈ ಭಾಗದ ಜನರಲ್ಲಿ ಪ್ರೀತಿ ತುಂಬಿದ ಗೌರವ, ಭಕ್ತಿ.

ಈ ಎಲ್ಲ ಪ್ರೀತಿ, ಭಕ್ತಿ ಮತ್ತು ಗೌರವಗಳಿಗೆ ತಾನೂ ಪಾತ್ರರಾಗಿದ್ದ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಾವು ರಾಜ್ಯದ ಜನರಿಗೆ ಅಪಾರ ನೋವಿನ ಅನಿರೀಕ್ಷಿತ ಆಘಾತ ತಂದಿದೆ. ರಾಜಾಡಳಿತ ಇಲ್ಲದಿದ್ದರೂ ರಾಜ ಹೋದಾಗ ಮತ್ತೇನೋ ಕಳೆದುಕೊಂಡ ಭಾವ.. ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ.

ರಾಜಕಾರಣದ "ತೋರುಮುಖ"ಗಳು!


ನಮ್ಮ ನಾಡಿನ ರಾಜಕಾರಣಿಗಳಲ್ಲಿ ಕೆಲವರನ್ನು ಬಹಳ ಶುದ್ಧಹಸ್ತರು, ಪ್ರಾಮಾಣಿಕರು ಎಂದು ಗುಣಗಾನ ಮಾಡುತ್ತಾ ಅವರ ಸಾರ್ವಜನಿಕ ಬದುಕಿನ ವೈಯುಕ್ತಿಕ ಪರಿಶುದ್ಧತೆಯನ್ನು ಕೊಂಡಾಡುವುದನ್ನು ಕಾಣಬಹುದಾಗಿದೆ. ಚುನಾವಣೆಗಳಲ್ಲಿ ಇವರ ಮುಖ ತೋರಿಸಿ ‘ಇವರ ನಾಯಕತ್ವದ ಪಕ್ಷವನ್ನು ಪಟ್ಟಕ್ಕೆ ತನ್ನಿರಿ’ ಎನ್ನುವ ಮಾತುಗಳನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಹೀಗೆ ರಾಜಕೀಯ ಪರಿಶುದ್ಧರು ಎಂದು ರಾಜಕೀಯ ಪಕ್ಷಗಳು ಚುನಾವಣೆಗೆ ಸದರಿ "ತೋರುಮುಖ"ಗಳನ್ನು ತೋರಿಸುವುದು ನಮ್ಮ ನಾಡಿನ ರಾಜಕೀಯ ಪಕ್ಷಗಳ ಒಂದು ತಂತ್ರವೇ ಆಗಿದೆ ಅನ್ನಿಸುತ್ತದೆ ಗುರೂ!

ಇವರು ಶುದ್ಧಹಸ್ತರೆಂದೇ ಜನಪ್ರಿಯರು!

ಈ ಪಟ್ಟಿಯಲ್ಲಿರುವವರ ದಕ್ಷತೆ, ಆಡಳಿತ ಮತ್ತು ಮುತ್ಸದ್ದಿತನದ ಬಗ್ಗೆ ಇಲ್ಲಿ ಯಾವ ವಿಶ್ಲೇಷಣೆಯನ್ನೂ, ಅಭಿಪ್ರಾಯವನ್ನೂ ಕೊಡುತ್ತಿಲ್ಲ. ಅದು ಈ ಬರಹದ ಹೊರಗಿನ ವ್ಯಾಪ್ತಿಯದ್ದು ಮತ್ತು ಈ ತೋರುಮುಖದ ನಾಯಕರುಗಳು ವೈಯುಕ್ತಿಕವಾಗಿ ಶುದ್ಧಹಸ್ತರೂ ಇರಬಹುದು. ಅದನ್ನೂ ಕಡೆಗಣಿಸುತ್ತಿಲ್ಲ. ಈ ಬರಹದ ಉದ್ದೇಶವೇ ಇಂತಹ "ತೋರುಮುಖ"ದ ಪರಿಶುದ್ಧ ರಾಜಕಾರಣ ಬರೀ ಓಳು ಅನ್ನೋದರತ್ತ ತಮ್ಮ ಗಮನ ಸೆಳೆಯುವುದು ಮಾತ್ರವೇ ಆಗಿದೆ! ಈ ಮುನ್ಮಾತಿನೊಡನೆ ವಿಷಯಕ್ಕೆ ಹೋಗೋಣ.

ಇಂಥಾ ತೋರುಮುಖಗಳು ಎಲ್ಲಾ ಪಕ್ಷಗಳಲ್ಲೂ ಇವೆ. ಕಾಂಗ್ರೆಸ್ ಪಕ್ಷದಲ್ಲಿ ಇಂದಿನ ಪ್ರಧಾನಮಂತ್ರಿಗಳಾಗಿರುವ ಡಾ.ಮನಮೋಹನ್ ಸಿಂಗ್‌ರವರನ್ನು ಇವರು ತುಂಬಾ ಓದಿಕೊಂಡಿದ್ದಾರೆ, ತುಂಬಾ ದೊಡ್ಡ ಆರ್ಥಿಕ ತಜ್ಞ, ಪರಮ ಪ್ರಾಮಾಣಿಕ ಎನ್ನಲಾಗುತ್ತದೆ. ಇಂಥಾ ಪಾವಿತ್ರ್ಯತೆಯ ಬಿರುದಿನ ಈ ವ್ಯಕ್ತಿ ಕಾಂಗ್ರೆಸ್ ಪಕ್ಷದ ತೋರುಮುಖ! ಇವರಂತೆಯೇ ಶುದ್ಧಹಸ್ತರೆಂದು ಕಾಂಗ್ರೆಸ್ ಪಕ್ಷದಲ್ಲಿ ಹೆಸರಾಗಿರುವುದು ಶ್ರೀ ಏ.ಕೆ.ಆಂಟೋನಿಯವರು. ಶ್ರೀ.ರಾಜೀವ್‌ಗಾಂಧಿಯವರನ್ನಂತೂ ಮಿ.ಕ್ಲೀನ್ ಎಂದೇ ಬಿಂಬಿಸಲಾಗಿತ್ತು! ಚುನಾವಣೆಯ ಸಂದರ್ಭಗಳಲ್ಲಿ ಇಡೀ ಪಕ್ಷದ ಭ್ರಷ್ಟರನ್ನೆಲ್ಲಾ ತೆರೆಮರೆಗೆ ತಳ್ಳಿ ಈ ತೋರುಮುಖಗಳನ್ನು ಮುಂದೊಡ್ಡಿ ಚುನಾವಣೆ ಎದುರಿಸುವುದು ಸಾಮಾನ್ಯ. ಇದರಂತೆಯೇ ಕರ್ನಾಟಕದಲ್ಲಿ ಶ್ರೀ ಸಿದ್ದರಾಮಯ್ಯನವರು. ಇವರ ಮೇಲೆ ಯಾವ ಭ್ರಷ್ಟಾಚಾರದ ಆರೋಪವೂ ಇಲ್ಲಾ ಎನ್ನುವುದನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಾ ಜನರಲ್ಲಿ ತನ್ನ ಶುದ್ಧತೆಗೆ ಪ್ರಮಾಣ ಒದಗಿಸಲು ಯತ್ನಿಸುತ್ತದೆ. ಈ ಹಪಾಹಪಿಯ ಪರಿಣಾಮವೇ ಸಂಪುಟದಲ್ಲಿ ಬರೀ ಶುದ್ಧಹಸ್ತರಿಗೆ ಮಾತ್ರಾ ಸ್ಥಾನ ಎನ್ನುವ ಸರ್ಕಸ್!!

ಇನ್ನು ಭಾರತೀಯ ಜನತಾಪಕ್ಷದ ಅತಿ ದೊಡ್ಡ ತೋರುಮುಖವೆಂದರೆ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರದ್ದು! ಇವರು ಐವತ್ತರ ದಶಕದಿಂದಲೂ ರಾಜಕಾರಣದಲ್ಲಿದ್ದು ಭಾರತದ ಪ್ರಧಾನಮಂತ್ರಿಗಳೂ ಆಗಿದ್ದವರು. ಇವರನ್ನು ಬಿಜೆಪಿ ತನ್ನ ಪಕ್ಷದ ಪರಿಶುದ್ಧತೆಯ ಸಂಕೇತವಾಗಿ ಬಿಂಬಿಸುತ್ತಾ ಬಂದಿದ್ದು ತನ್ನೆಲ್ಲಾ ಚುನಾವಣೆಗಳಲ್ಲಿ ಇದನ್ನು ಯಶಸ್ವಿಯಾಗಿ ಬಳಸಿದೆ. ಹಾಗೇ ಶ್ರೀ ನರೇಂದ್ರಮೋದಿಯವರದ್ದು ಮತ್ತೊಂದು ತೋರುಮುಖ! ಬ್ರಹ್ಮಚಾರಿ ಎನ್ನುವುದನ್ನು ದೇಶಕ್ಕಾಗಿ ತ್ಯಾಗವೆಂದೂ ಕೆಲವರು ಬಿಂಬಿಸುತ್ತಾರೆ!

ತೋರುಮುಖಗಳು ಗಾಂಧೀಜಿ ಹೇಳಿದ ಕೋತಿಗಳಂತೆ!

ಹೀಗೆ ಪ್ರತಿಯೊಂದು ಪಕ್ಷದಲ್ಲೂ ಪರಿಶುದ್ಧತೆಯ ಪ್ರತೀಕವಾಗಿ ಚುನಾವಣೆಗಳಲ್ಲಿ ಜನರ ಮುಂದೊಡ್ಡಲು ತೋರುಮುಖಗಳಿವೆ. ಆದರೆ ಪ್ರಶ್ನೆಯೇನೆಂದರೆ ಈ ನಾಯಕರುಗಳ ಪರಿಶುದ್ಧತೆ ಇವರಷ್ಟಕ್ಕೆ ಮಾತ್ರಾ ಸೀಮಿತವೇ ಎನ್ನುವುದು. ಇವರ ಪಕ್ಷದಲ್ಲೇ ಇದ್ದು, ಪಕ್ಷದ ಚುನಾವಣೆಗಳಿಗಾಗಿ ದುಡ್ಡು ಕೂಡಿಹಾಕುವ, ಪರಮ ಭ್ರಷ್ಟಾಚಾರದಲ್ಲಿ ತೊಡಗಿ ಲೂಟಿ ಹೊಡೆಯುತ್ತಿರುವ, ಮಾಡಬಾರದ್ದನ್ನು ಮಾಡುತ್ತಿರುವ ಅನೇಕಾನೇಕ ಜನರು ಇವರದೇ ನಾಯಕತ್ವದ ಪಕ್ಷ ಮತ್ತು ಸರ್ಕಾರಗಳಲ್ಲಿ ಸಕ್ರಿಯರಾಗಿದ್ದರು, ಸಕ್ರಿಯರಾಗಿದ್ದಾರೆ ಎನ್ನುವುದು ಪರಮಸತ್ಯವಾಗಿದೆ. ಇಂಥಾ ಕಡುಭ್ರಷ್ಟರ ವಿಷಯದಲ್ಲಿ ಸದರಿ ತೋರುಮುಖಗಳದ್ದು ಕಿವುಡು, ಕುರುಡು ಮತ್ತು ಬೀಗ ಬಿದ್ದ ಬಾಯಿ ಎಂಬುದನ್ನು ಇದು ಎತ್ತಿ ತೋರುತ್ತದೆ.

ಅಸಹಾಯಕತೆಯೇ ಅಪಾಯಕಾರಿ!

ಭಾರತದ ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಹಣಬಲ, ತೋಳ್ಬಲಗಳದ್ದೇ ಮೇಲುಗೈ ಎನ್ನುವ ಪರಿಸ್ಥಿತಿಯಿದ್ದಾಗ ಇಂತಹ ಭ್ರಷ್ಟರ ಅಗತ್ಯವೂ ಪಕ್ಷಗಳಿಗೆ ಅನಿವಾರ್ಯವಾಗಿದೆ. ರಾಷ್ಟ್ರೀಯ ಪಕ್ಷಗಳಿಗೆ ಹೀಗೆ ಹಣಹೊಂದಿಸಲು ಇಡೀ ದೇಶದಾದ್ಯಂತ ಜಾಲವಿದ್ದರೆ ಪ್ರಾದೇಶಿಕ ಪಕ್ಷಗಳ ಅವಕಾಶದ ವ್ಯಾಪ್ತಿ ಆಯಾರಾಜ್ಯಕ್ಕೆ ಸೀಮಿತ. ಹೀಗಾಗೇ ಪ್ರಾದೇಶಿಕ ಪಕ್ಷಗಳ ಭ್ರಷ್ಟತೆ ಕಣ್ಣಿಗೆ ರಾಚುತ್ತದೆ ಎನ್ನುವುದೂ ಕೂಡಾ ಒಂದು ಲೆಕ್ಕದಲ್ಲಿ ಸತ್ಯವೇ ಅನ್ನಿಸುತ್ತದೆ! ಹೀಗೆ ಪ್ರತಿಯೊಂದು ಪಕ್ಷದಲ್ಲೂ ಸಂಪನ್ಮೂಲ ಜೋಡಿಸುವ, ಉದ್ದಿಮೆಗಳೊಂದಿಗೆ ಸಂಪರ್ಕ ಹೊಂದಿರುವ ಜನರಿದ್ದೇ ಇರುತ್ತಾರೆ. ಇಂತಹವರು ಕಾಂಗ್ರೆಸ್ಸಿನಲ್ಲೂ ಬಿಜೆಪಿಯಲ್ಲೂ ಮತ್ತೊಂದರಲ್ಲೂ ಇರುವಾಗ ಆ ಪಕ್ಷದ ತೋರುಮುಖಗಳು ತೆಪ್ಪಗಿರುವುದು ಅವರ ಒಳ್ಳೆಯತನವಲ್ಲಾ! ಅದು ಅಸಹಾಯಕತೆ ಮತ್ತು ನಾಯಕತ್ವ ಗುಣದ  ಕೊರತೆ ಎನ್ನಿಸುವುದರಲ್ಲಿ ಸಂಶಯವಿಲ್ಲ! ಇಷ್ಟರಜೊತೆಗೆ ಹೇಳಲೇಬೇಕಾದ ಮಾತೆಂದರೆ ಭ್ರಷ್ಟರೆಂದೇ ಗುರುತಿಸಲಾಗುತ್ತಿರುವವರ ಭ್ರಷ್ಟತೆಗಿಂತಲೂ ಈ ಮಂದಿಯ ಅಸಹಾಯಕತೆ ನಾಡಿಗೆ ಹೆಚ್ಚು ಅಪಾಯಕರ! ಏನಂತೀರಾ ಗುರೂ?

ಸಿದ್ದರಾಮಯ್ಯನವರೇ? ನೀವಾಗುವಿರಾ "ಮಾತು ತಪ್ಪದ ಮಗ"!


ಮುಖ್ಯಮಂತ್ರಿಗಳಾಗಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರೇ,

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹೊಸ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗುವಲ್ಲಿ ತಮ್ಮ ಪಾತ್ರವೂ ದೊಡ್ಡದಿದೆ. ಸದರಿ ಸರ್ಕಾರದ ಮುಖ್ಯಸ್ಥರಾಗಿಯೂ ತಾವು ಆಯ್ಕೆಯಾಗಿದ್ದೀರಿ. ನಿಮ್ಮ ಪಕ್ಷವು ಈ ಬಾರಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ನಾಡಿಗೆ ನಿಜಕ್ಕೂ ಏಳಿಗೆಗೆ ಪೂರಕವಾದವುಗಳಾಗಿವೆ. ಇವುಗಳತ್ತ ತಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ! ಏನೇ ಆಗಲಿ.. ಇವುಗಳನ್ನಾದರೂ ಮಾಡಿರಿ ಎನ್ನುವುದು ನಮ್ಮ ಒತ್ತಾಯ!!

ಕಾಂಗ್ರೆಸ್ ಪ್ರಣಾಳಿಕೆಯಂತೆ ಆಗಲೇ ಬೇಕಾದ್ದು!


ಇವೆಲ್ಲದರ ಜೊತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಸಂಪರ್ಕಿಸುವ ರೈಲು ಮಾರ್ಗಗಳನ್ನು ರಾಜ್ಯಕ್ಕೆ ತರಲು ಸಮಗ್ರ ಯೋಜನೆಯನ್ನು ರೂಪಿಸಿ ಕೇಂದ್ರಸರ್ಕಾರದಿಂದ ಜಾರಿಮಾಡಿಸಿ. ರಾಜ್ಯಕ್ಕೆ ಹೆಚ್ಚೆಚ್ಚು ವಿದ್ಯುತ್ ರೈಲು ಮಾರ್ಗಗಳನ್ನು ತರಲು ಮುಂದಾಗಿರಿ. 


ಏಳಿಗೆಗೆ ಬೇಕಾದ್ದು!

ಒಂದು ನಾಡಿನ ಏಳಿಗೆಗೆ ಬೇಕಾದ್ದು ಆ ನಾಡಿನ ರಸ್ತೆ, ರೈಲು, ನೀರು ಮೊದಲಾದ ಮೂಲಭೂತಸೌಕರ್ಯಗಳನ್ನು ಕಟ್ಟಿಕೊಡುವುದು. ಆ ನಾಡಿನ ಜನರ ಕಲಿಕೆಯನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ದುಡಿಮೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ಕೌಶಲಗಳನ್ನು ಹೆಚ್ಚಿಸುವುದು. ಆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸಲು ಪೂರಕವಾದ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಕಟ್ಟುವುದು! ನಿಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಎಲ್ಲವನ್ನೂ ಮಾಡಿ. ನಮ್ಮ ಜನರ ಕಲಿಕೆ ಅತ್ಯುತ್ತಮವಾಗಲು, ಜಗತ್ತಿನ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳ ಸಾಲಿನಲ್ಲಿ ನಮ್ಮದನ್ನೂ ನಿಲ್ಲಿಸಬಲ್ಲಂತಹ ಕನ್ನಡದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲು ಬೇಕಾದ ದೀರ್ಘಾವಧಿ ಯೋಜನೆಯನ್ನು ಮಾಡಿರಿ. ನೀವು ಇತ್ತೀಚಿಗಷ್ಟೇ ನಾಡಿನ ಅನೇಕ ಹಿರಿಯ ಕವಿ-ಸಾಹಿತಿ-ಚಿಂತಕರುಗಳನ್ನು ಭೇಟಿಯಾಗಿ ಬಂದಿದ್ದೀರಿ. ಇದು  ಅವರುಗಳ ಮೇಲಿನ ಗೌರವದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಗೌರವ ಅದೇ ಹಿರಿಯರು ತಾಯ್ನುಡಿ ಶಿಕ್ಷಣದ ಪರವಾಗಿ ಹೊಂದಿರುವ ನಿಲುವುಗಳ ಬಗ್ಗೆಯೂ ತಮಗಿರಲಿ ಎನ್ನುವುದು ನಮ್ಮ ಆಶಯ! 

ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ, ಇಡೀ ಪ್ರಪಂಚದಲ್ಲಿ ನಮ್ಮನ್ನು ಉಳಿದವರಿಗಿಂತಲೂ ಬೇರೆಯಾಗಿಸಿರುವ ನಮ್ಮ ನುಡಿ, ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಪೊರೆಯುವ ಕ್ರಮಗಳನ್ನು ಕೈಗೊಳ್ಳಿರಿ. ಧರ್ಮ, ಜಾತಿ, ಆಚರಣೆ, ಒಳನುಡಿಗಳೇ ಮೊದಲಾದ ವಿಭಿನ್ನತೆಗಳನ್ನು ಕನ್ನಡತನದ ಮೂಲಕ ಒಗ್ಗೂಡಿಸಿ ಹಿಡಿದಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ. ಕನ್ನಡಿಗರಿಗೆ ತಮ್ಮದೇ ನೆಲದಲ್ಲಿ ಬದುಕು ನಡೆಸಲು ತೊಡಕಾಗದಂತಹ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಒಂದು ಮುಖ್ಯವಾದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಲಿ...

ಒಟ್ಟಾರೆ ನಾಡಿನ ಜನರ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಇವುಗಳನ್ನು ಈಡೇರಿಸುವತ್ತ ಮುಂದಾಗಿ.. ಇದು ನಮ್ಮ ನಾಡಿನ ಹೊಸ ಮುಖ್ಯಮಂತ್ರಿಗಳಾಗುತ್ತಿರುವ ನಿಮ್ಮಿಂದ ನಮಗಿರುವ ನಿರೀಕ್ಷೆ! ಕಾಂಗ್ರೆಸ್ಸಿನವರು ಸಾಕಷ್ಟು ಭರವಸೆಗಳನ್ನು ನೀಡಿದ್ದೀರಾ! ಈ ಭರವಸೆಗಳು ಭರವಸೆಗಳಲ್ಲಾ... ನಾಡಿಗರಿಗೆ ಕೊಟ್ಟ ಮಾತು! ನೀವು  ಮಾತು ತಪ್ಪದ ಮಗನಾಗಿರಿ ಎಂಬುದು ನಮ್ಮ ಆಗ್ರಹ!

ಕನ್ನಡಿಗರ ಕಣ್ಮಣಿಯ ನೆನಪಲ್ಲಿ...


(ವಿಡಿಯೋ ಕೃಪೆ: ಯೂಟ್ಯೂಬ್)

ಇಂದು ಡಾ. ರಾಜ್‌ಕುಮಾರ್ ಹುಟ್ಟಿದ ದಿನ. ಕನ್ನಡಪರರ ಪಾಲಿಗೆ ನಾಡಪರ ಬದ್ಧತೆಯನ್ನು ಮರುಖಾತ್ರಿ ಪಡಿಸುವ ದಿನವಿದು ಎಂದರೆ ತಪ್ಪಾಗಲಾರದು. ತನ್ನ ಚಿತ್ರಗಳಿಂದ, ಚಿತ್ರಗಳಲ್ಲಿನ ಪಾತ್ರಗಳಿಂದ ನಮ್ಮೆಲ್ಲರ ಮೈಮನಗಳನ್ನು ಆವರಿಸುವ ರಾಜ್ ಅವರು ನಮ್ಮ ಸಮಕಾಲೀನರು ಎನ್ನುವುದೇ ಒಂದು ಹೆಮ್ಮೆಯ ವಿಷಯ. ಈ ದಿನ ಅವರನ್ನು ನೆನೆಸದ ಕನ್ನಡಿಗರೇ ಇಲ್ಲಾ! ರಾಜ್! ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನದ ಮನವೇ ಇಲ್ಲಾ!

ತಾವು ಅಭಿನಯಿಸಿದ ಪಾತ್ರಗಳು ಎಂಥವೇ ಇರಲಿ.. ಎಂದಿಗೂ ಸಭ್ಯತೆಯನ್ನು ಮೀರದ ಪಾತ್ರಗಳು ಅವಾಗಿರುತ್ತಿದ್ದವು. ಕನ್ನಡಜನತೆಯ ಇತಿಹಾಸವನ್ನು ಮತ್ತೆ ಕಣ್ಮುಂದೆ ಕಟ್ಟಿಕೊಟ್ಟು ನಾವೇನೂ ಕುರಿಮರಿಗಳಲ್ಲಾ... ದೊಡ್ಡದನ್ನು ಸಾಧಿಸಲೆಂದೇ ಹುಟ್ಟಿರುವ ಸಿಂಹಗಳು ಎಂಬುದನ್ನು ಸದಾ ನೆನಪಿಸುವ ಮಯೂರ ಚಿತ್ರದ ಈ ದೃಶ್ಯ ಸದಾ ಪ್ರೇರಕ, ಸ್ಪೂರ್ತಿದಾಯಕ. ಡಾ. ರಾಜ್ ಹುಟ್ಟುಹಬ್ಬದ ಶುಭಾಶಯಗಳು!!

ಮರಾಠಿ ಹುಲಿ ಬಾಳಾ ಠಾಕ್ರೆ ಇನ್ನಿಲ್ಲ!


ಮಹಾರಾಷ್ಟ್ರ ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಪ್ರಬೋಧಂಕರ್ ಠಾಕ್ರೆಯವರ ಮಗನಾಗಿ ೧೯೨೬ರಲ್ಲಿ ಹುಟ್ಟಿದ ಶ್ರೀ ಬಾಳಾಠಾಕ್ರೆ ಇಂದು ನಿಧನರಾಗಿದ್ದಾರೆ. ಮಹಾರಾಷ್ಟ್ರದಲ್ಲಿ "ಮರಾಠಿ ಕೇಂದ್ರಿತ" ರಾಜಕೀಯ ಶಕ್ತಿಯಾದ ಶಿವಸೇನೆಯನ್ನು ಹುಟ್ಟುಹಾಕಿದವರು ಈತ. ಇವರ ನಿಧನದಿಂದಾಗಿ ಇತಿಹಾಸದ ಒಂದು ಯುಗ ಮುಗಿದು ಹೋದಂತಾಯ್ತು! ಇವರ ಆತ್ಮಕ್ಕೆ ಶಾಂತಿ ಸಿಗಲಿ!

ಬಾಳಾಠಾಕ್ರೆಯವರು ೧೯೬೦ರ ದಶಕದಲ್ಲಿ ಮುಂಬೈ ಕೇಂದ್ರಾಡಳಿತ ಪ್ರದೇಶವಾಗಬೇಕು ಎನ್ನುವ ಕೂಗಿಗೆ ಸವಾಲಾಗಿ ಎದ್ದು ನಿಂತು ಮರಾಠಿ ಜನರನ್ನು ಒಗ್ಗೂಡಿಸಿ ಮರಾಠಿ ಸ್ವಾಭಿಮಾನವನ್ನು ಜಾಗೃತಗೊಳಿಸಿ ದೊಡ್ಡ ರಾಜಕೀಯ ಶಕ್ತಿಯನ್ನು ಕಟ್ಟಿದವರು. ಹಿಂದುತ್ವದ ಸಿದ್ಧಾಂತ ಮತ್ತು ಮರಾಠಿ ಸಿದ್ಧಾಂತಗಳ ನಡುವಿನ ಗೊಂದಲದಲ್ಲಿ ಕಳೆದುಹೋದವರಂತೆ ಕೆಲವೊಮ್ಮೆ ನಡೆದುಕೊಂಡ ಇವರು, ಮಹಾರಾಷ್ಟ್ರದ ಕನ್ನಡಿಗರನ್ನು ಅನೇಕ ಸಲ ಅನೇಕ ರೀತಿಯಲ್ಲಿ ಕಾಡಿದ್ದರೂ ಕೂಡಾ... ರಾಷ್ಟ್ರೀಯ ಪಕ್ಷಗಳಿಂದ ಮರಾಠಿಗರಿಗೆ ಕೆಲಕಾಲವಾದರೂ ಮುಕ್ತಿ ಕೊಡಿಸಿದ ಹಿರಿಮೆ ಇವರದ್ದು! ಮರಾಠಿ - ಮರಾಠಿಗ - ಮಹಾರಾಷ್ಟ್ರ ಎನ್ನುವುದನ್ನು ರಾಜಕೀಯ ಶಕ್ತಿಕೇಂದ್ರವಾಗಿಸಿದ ಹಿರಿಮೆ ಇವರದ್ದು. ಮರಾಠಿ ಜನರಲ್ಲಿ ಸ್ವಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಇವರದ್ದು ದೊಡ್ಡ ಸಾಧನೆ!

ಇವರ ಆತ್ಮಕ್ಕೆ ಶಾಂತಿ ಸಿಗಲಿ!

ಕನ್ನಡಮ್ಮನ ಕಿರೀಟದಿ ಹೊಳೆವ ಮುತ್ತು!


ಇವತ್ತು ಕನ್ನಡಿಗರ ಕಣ್ಮಣಿ ರಾಜಣ್ಣನ ಹುಟ್ಟುಹಬ್ಬ. ಡಾ.ರಾಜಕುಮಾರ್ ನಮ್ಮ ನಾಡು ಕಂಡ ಅದ್ಭುತವಾದ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇವ್ರು ತಮ್ಮ ಸರಳತೆ, ವಿನಯ ಮತ್ತು ನಡವಳಿಕೆಗಳಿಂದಲೂ, ತಾವು ಮಾಡಿದ ಪಾತ್ರಗಳಿಂದಲೂ ನಮ್ಮ ಮನಸ್ಸಲ್ಲಿ ಸದಾ ಉನ್ನತ ಸ್ಥಾನದಲ್ಲಿದಾರೆ ಅನ್ನೋದು ನಿಜವೇ ಆದರೂ ಕಲಾವಿದನೊಬ್ಬ ಹೇಗೆ ತನ್ನ ಇತಿಮಿತಿಯಲ್ಲೇ ನಾಡಿನ ಋಣ ತೀರಿಸಲು ಸಾಧ್ಯ ಅನ್ನೋದನ್ನು ಇವ್ರು ತೋರಿಸಿಕೊಟ್ಟಿದಾರೆ ಗುರು!


ಕನ್ನಡ ನಾಡಿಗೆ ರಾಜ್ ಕೊಡುಗೆ!

ಕನ್ನಡಿಗರ ಇತಿಹಾಸಾನ ಜನರಿಗೆ ಮುಟ್ಟಿಸೋದ್ರಲ್ಲಿ ರಾಜಣ್ಣಂದು ಮಹತ್ವದ ಕೊಡುಗೆ. ಕನ್ನಡದ ಮೊದಲ ದೊರೆ ಮಯೂರ ವರ್ಮ, ಪರಮೇಶ್ವರ ಇಮ್ಮಡಿ ಪುಲಿಕೇಶಿ, ರಣಧೀರ ಕಂಠೀರವ, ಶ್ರೀ ಕೃಷ್ಣದೇವರಾಯ... ಹೀಗೆ ನಮ್ಮ ನಾಡಿನ ಮಹಾನ್ ರಾಜರುಗಳನ್ನು, ಕನ್ನಡಿಗರ ಶೌರ್ಯ-ಸಾಹಸ-ಹಿರಿಮೆ-ವೈಭವಗಳನ್ನು ನಮ್ಮ ಕಣ್ಣ ಮುಂದೆ ತಂದಿಟ್ಟಿದ್ದು ಇವ್ರೇ. ಇದರ ಮೂಲಕವೇ ಕೋಟಿ ಕೋಟಿ ಕನ್ನಡಿಗರಲ್ಲಿ ಕನ್ನಡತನದ ದೀವಿಗೆ ಬೆಳಗಿತು ಅಂದರೆ ಸುಳ್ಳಲ್ಲ.

ಸಮಾಜದಲ್ಲಿ ಆದರ್ಶವೇ ಮೈವೆತ್ತಂತೆ ಪಾತ್ರಗಳನ್ನು ಮಾಡುವ ಮೂಲಕ ಅದೆಷ್ಟೋ ಜನತೆಗೆ ಮಾದರಿಯಾಗಿದ್ದುದು, ಬಂಗಾರದ ಮನುಷ್ಯನಂತಹ ಚಿತ್ರದ ಮೂಲಕ ಅದೆಷ್ಟೋ ಜನ ಹಳ್ಳಿಗಳ ಏಳಿಗೆಗೆ ಕಂಕಣ ತೊಡುವಂತಾಗಿದ್ದುದು ನಮ್ಮ ರಾಜಕುಮಾರರ ಹಿರಿಮೆ. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಅಭಿನಯಿಸದ ಪಾತ್ರವಿಲ್ಲ ಎಂಬಂತೆ ಸಾಮಾಜಿಕ, ಪೌರಾಣಿಕ, ಜಾನಪದ, ಐತಿಹಾಸಿಕವೂ ಸೇರಿದಂತೆ ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಿದ್ದು, ಡಾ.ರಾಜ್.

ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿನುಡಿಯೋ...

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು
ಮೆಟ್ಟಿದರೇ ಕನ್ನಡ ಮಣ್ಣಾ ಮೆಟ್ಟಬೇಕು...

ಎನ್ನುತ್ತಾ ಕನ್ನಡಿಗನಾಗಿರುವುದು ಹೆಮ್ಮೆ, ನಮ್ಮ ನಾಡು ಪವಿತ್ರವಾದದ್ದು, ನಮ್ಮ ನುಡಿ ಶ್ರೇಷ್ಠವಾದದ್ದು ಎಂಬ ಭಾವನೆಯನ್ನು ಕನ್ನಡಿಗನ ಮನಮನಗಳಲ್ಲಿ ಜಾಗೃತಗೊಳಿಸಿದ್ದು ಡಾ.ರಾಜ್ ಹಿರಿಮೆ.

ಒಬ್ಬ ನಟನಾಗಿ ನಾಡಿಗರನ್ನು ಒಗ್ಗೂಡಿಸುವ ಮೂಲಕ ತಾಯಿನಾಡಿನ ಋಣ ತೀರಿಸುವ ತನ್ನ ಪಾಲಿನ ಕರ್ತವ್ಯವನ್ನು ಅದ್ಭುತವಾಗಿ ನಿರ್ವಹಿಸಿದ್ದು ಡಾ. ರಾಜ್ ಕುಮಾರ್ ಅವರ ಸಾಧನೆ. "ನಾನು ನಾಡುನುಡಿ ಅಂತ ಹೇಳಿದ್ದು ಬರೀ ಪಾತ್ರವಾಗಿ, ನಾಡಪರ ಹೋರಾಟಕ್ಕೂ ನಂಗೂ ಸಂಬಂಧ ಇಲ್ಲ" ಅಂತ ಎಂದಿಗೂ ಹೇಳದೆ ನಾಡು ನುಡಿ ನಾಡಿಗರ ಸಂಕಷ್ಟದಲ್ಲಿ ತನ್ನ ಕೈಲಾದ ಸೇವೆ ಮಾಡಿದ್ದು ಇವರ ಹೆಗ್ಗಳಿಕೆ.

ಕನ್ನಡಮ್ಮನ ಹೊನ್ನ ಕಿರೀಟದಲ್ಲಿ ಸದಾ ಮಿರುಗುವ ಅತ್ಯಮೂಲ್ಯ ಮುತ್ತುಗಳ ರಾಜ ನಮ್ಮ ಮುತ್ತುರಾಜ... ಇವರಿಗೆ ನಮ್ಮದೊಂದು ಗೌರವ ತುಂಬಿದ ಪ್ರೀತಿಯ ನಮನ ಗುರು!

ಸಜ್ಜನ ರಾಜಕಾರಣಿ ಡಾ. ಆಚಾರ್ಯರಿಗೆ ಶ್ರದ್ಧಾಂಜಲಿ

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ, ಮಾಜಿ ಗೃಹಮಂತ್ರಿಗಳಾಗಿದ್ದ ಮೃದುಮಾತಿನ, ಸಜ್ಜನ ರಾಜಕಾರಣಿ, ವೈದ್ಯರಾಗಿದ್ದ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (ಡಾ. ವಿ ಎಸ್ ಆಚಾರ್ಯ) ಇವರು ನಿಧನರಾಗಿದ್ದು ರಾಜ್ಯ ರಾಜಕಾರಣದ ಬಾನಿನಿಂದ ಹೊಳೆವ ತಾರೆಯೊಂದು ಕಳಚಿದಂತಾಗಿದೆ.

ಉಡುಪಿ ಜಿಲ್ಲೆಯವರಾದ ಇವರು ತಮ್ಮ ೨೮ನೇ ವಯಸ್ಸಿನಲ್ಲೇ ರಾಜಕೀಯಕ್ಕಿಳಿದು ಜನತಾ ಪಕ್ಷ, ಭಾರತೀಯ ಜನತಾ ಪಕ್ಷಗಳಲ್ಲಿ ತೊಡಗಿಕೊಂಡಿದ್ದರು. ಭಾರತೀಯ ಜನತಾ ಪಕ್ಷವು ಅಧಿಕ್ಕಾರಕ್ಕೇರಿದಾಗ ಮುಜರಾಯಿ ಇಲಾಖೆ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಪಶುಸಂಗೋಪನಾ ಇಲಾಖೆ, ಯೋಜನಾ ಆಯೋಗ ಖಾತೆ, ಐಟಿ ಬಿಟಿ ಖಾತೆ, ಗೃಹಖಾತೆಯೇ ಮೊದಲಾದ ಖಾತೆಗಳನ್ನು ನಿರ್ವಹಿಸಿದ ಅನುಭವ ಇವರಿಗಿತ್ತು. ಶ್ರೀಯುತರ ನಿಧನದಿಂದಾಗಿ ನೊಂದಿರುವ ಅವರ ಕುಟುಂಬ ವರ್ಗದವರಿಗೆ ಈ ಅನಿರೀಕ್ಷಿತ ಆಘಾತದಿಂದ ಹೊರಬರಲೆಂದೂ... ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದೂ ಬನವಾಸಿ ಬಳಗ ಕೋರುತ್ತಾ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತದೆ.

ಕರಗಿ ಹೋದ ಕರಿಬಸವಯ್ಯ!


(ವಿಡಿಯೋ ಕೃಪೆ: ಸುವರ್ಣ ನ್ಯೂಸ್ - ಯೂ ಟ್ಯೂಬ್ ಮೂಲಕ)

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾದ ಶ್ರೀ ಕರಿಬಸವಯ್ಯನವರು ಇನ್ನಿಲ್ಲ ಎನ್ನುವ ಸುದ್ದಿ ಬಿತ್ತರವಾಗುತ್ತಿದೆ. ಇದು ಸುಳ್ಳಾಗಿರಲಿ ಎನ್ನುವ ಆಶಯ ಎಲ್ಲಾ ಕನ್ನಡಿಗರದ್ದು!! ಕನಕಪುರ ರಸ್ತೆಯಲ್ಲಿ ಆದ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದ ಈ ಕಲಾವಿದರು ಇಂದು ತೀರಿಕೊಂಡ ಸುದ್ದಿ ಆಘಾತಕಾರಿಯಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ!! ಬನವಾಸಿ ಬಳಗದ ಶ್ರದ್ಧಾಂಜಲಿಗಳು!!

ಬೆಡಗಿನ ರಾಜಕಾರಣಿ ಬಂಗಾರಪ್ಪನವರಿನ್ನಿಲ್ಲ!

ಮಾಜಿ ಮುಖ್ಯಮಂತ್ರಿಗಳೂ ಹಿಂದಿನ ಕ್ರಾಂತಿರಂಗ, ಕರ್ನಾಟಕ ಕಾಂಗ್ರೆಸ್ ಪಕ್ಷದ ಸ್ಥಾಪಕರೂ ಆಗಿದ್ದ ಶ್ರೀ ಸಾರೆಕೊಪ್ಪದ ಬಂಗಾರಪ್ಪನವರು ನಿನ್ನೆ ರಾತ್ರಿ ತೀರಿಕೊಂಡಿದ್ದಾರೆ.

ಕರ್ನಾಟಕ ರಾಜಕಾರಣದ ಅತ್ಯಂತ ಬೆಡಗಿನ ರಾಜಕಾರಣಿಯಾಗಿದ್ದ ಬಂಗಾರಪ್ಪನವರು ಹಿಂದೊಮ್ಮೆ ಸ್ವಂತ ಪಕ್ಷ ಕಟ್ಟಿ ಹತ್ತು ಶಾಸಕರನ್ನು ಗೆಲ್ಲಿಸಿಕೊಂಡಿದ್ದರು.

ಕಾವೇರಿ ತೀರ್ಪಿನ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ಶ್ರೀಯುತರು ತಮ್ಮ ಗಟ್ಟಿ ನಿಲುವಿನಿಂದಾಗಿ ನಾಡಿನಲ್ಲಿ ಹೆಸರು ಗಳಿಸಿದ್ದರು. ಹೀಗೆ ಸುಗ್ರೀವಾಜ್ಞೆ ಹೊರಡಿಸಿದ ಕಾರಣಕ್ಕೆ ಅಧಿಕಾರ ಕಳೆದುಕೊಳ್ಳಲೂ ಸಿದ್ಧವಾಗಿದ್ದ ಇವರು ನಾಡಪರವಾಗಿ ಅಂದು ತೋರಿದ್ದ ಗಟ್ಟಿತನ ಇಂದಿನವರಿಗೂ ಮಾದರಿಯಾಗಿದೆ.

ಇವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಬನವಾಸಿ ಬಳಗ ಶ್ರದ್ಧಾಂಜಲಿ ಅರ್ಪಿಸುತ್ತದೆ.

ಕಂಬಾರರಿಗೆ ಇದೆಂಥಾ ಮರುಳಯ್ಯಾ... ಇದು ಎಂಥಾ ಮರುಳು!!

(ಕೃಪೆ: ಕನ್ನಡಪ್ರಭ ಮತ್ತು ಅಂತರ್ಜಾಲದ ಫೋಟೋ)

ಮೊನ್ನೆ ಮೊನ್ನೆ ತಾನೇ ಜ್ಞಾನಪೀಠ ಪ್ರಶಸ್ತಿ ಗಳಿಸಿಕೊಂಡ ಕನ್ನಡದ ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರರು ‘ಕನ್ನಡ ಶಾಲೆಗಳನ್ನು ಮುಚ್ಚುವ’ ಸರ್ಕಾರದ ನಿಲುವಿನ ವಿರುದ್ಧವಾಗಿ ಬಹು ಉಗ್ರವಾಗಿ ದನಿಯೆತ್ತಿದ್ದನ್ನು ಕಂಡು ತಲೆದೂಗಿದ್ದ ಕನ್ನಡಿಗರೆಲ್ಲಾ ಇದೀಗ ಬೆಚ್ಚಿ ಬೀಳುವಂಥಾ ಶಾಕ್ ಒಂದನ್ನು ಕಂಬಾರರು ನೀಡಿದ್ದಾರೆ. ವಿಷಯ ಏನಪ್ಪಾ ಅಂದ್ರೆ, ಶಬ್ದ ಹಿಂದೀ ಸಾಹಿತ್ಯದ ಕಾರ್ಯಕ್ರಮದಲ್ಲಿ ಶ್ರೀಯುತ ಕಂಬಾರರು ಶ್ರೀಮಾನ್ ಸಿದ್ದಲಿಂಗಪಟ್ಟಣಶೆಟ್ಟಿಯವರ ಜೊತೆ ಸೇರ್ಕೊಂಡು, ‘ಇಂಗ್ಲೀಶಿನ ಬದಲಾಗಿ ಸಂವಹನ ಭಾಷೆಯಾಗಿ ಹಿಂದಿಯನ್ನು ಬಳಸಬೇಕು’ ಎಂದಿದ್ದಾರೆ ಅಂತಾ ನಿನ್ನೆಯ (೧೯.೧೨.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಯಾಗಿದೆ.

ಚಿಂತನೆಯ ಬರಡುತನ ಮತ್ತು ಕೀಳರಿಮೆಯ ನರಳಾಟ!

ಆ ಕಾರ್ಯಕ್ರಮದಲ್ಲಿ ಮಾತಾಡಿದ ಈ ಇಬ್ಬರ ಮಾತುಗಳನ್ನು ನೋಡಿದಾಗ, ಇವರುಗಳಿಗೆ ವಿಚಾರ ಮಾಡುವ ಶಕ್ತಿಯೇ ಇಲ್ಲವೇನೋ ಎನ್ನಿಸಿದರೆ ಆಶ್ಚರ್ಯವಿಲ್ಲ. ಇವರಿಗೆ ಇಂಗ್ಲೀಶನ್ನು ಬಳಸುವುದರ ಬಗ್ಗೆ ಇರುವ ಆಕ್ಷೇಪಣೆ ಹಿಂದೀ ಬಳಕೆಯ ಬಗ್ಗೆ ಇಲ್ಲದಿರುವುದನ್ನು ಕಂಡಾಗ ಅಚ್ಚರಿ ಆಗುತ್ತದೆ. ‘ರಾಷ್ಟ್ರೀಯ ವಿಷಯಗಳನ್ನು ಮಾತಾಡುವಾಗ ಇಂಗ್ಲೀಶ್ ಬೇಡಾ, ಹಿಂದೀ ಇರಲಿ, ಪರಕೀಯ ಭಾಷೆ ಮಾತಾಡೋದ್ರಿಂದ ನೈಜಭಾವನೆಗಳ ಹಂಚಿಕೆ ಅಸಾಧ್ಯ’ ಎನ್ನುವ ಇವರು ಇಂಗ್ಲೀಶನ್ನು ಪರಕೀಯಗೊಳಿಸಿ ಹಿಂದೀಯನ್ನು ನಮ್ಮದೆನ್ನುತ್ತಿರುವುದು ತಮಾಶೆಯ ಮಾತಾಗಿದೆ. ಸರಿ, ಕಂಬಾರರೇ, ಹಿಂದೀಯನ್ನು ಭಾರತೀಯ ಎನ್ನುವ ಕಾರಣದಿಂದ ನಮ್ಮದು ಎಂದು ನಾವಂದುಕೊಳ್ಳುವಂತೆ (ನಾವಲ್ಲಾ... ನೀವು!) ಹಿಂದೀ ಭಾಷೆಯವರು ಕನ್ನಡವನ್ನು ಇಂಗ್ಲೀಶಿನ ಬದಲು ಒಪ್ಪುವರೇನು? ಒಮ್ಮೆ ಯೋಚಿಸಿ ನೋಡಿ. ಸ್ಥಳೀಯ ವಿಷಯಕ್ಕೆ ಕನ್ನಡ, ರಾಷ್ಟ್ರೀಯ ವಿಷಯಕ್ಕೆ ಹಿಂದೀ, ಅಂತರರಾಷ್ಟ್ರೀಯ ವಿಷಯಕ್ಕೆ ಇಂಗ್ಲೀಶ್ ಅನ್ನುವ ಕೀಳರಿಮೆಯ ಕೆಸರಿನ ನರಳಾಟದಂತೆ ಈ ಮಾತುಗಳು ಕೇಳಿದರೆ ಅಚ್ಚರಿ ಪಡಬೇಕಿಲ್ಲ! ವಾಸ್ತವದಲ್ಲಿ ಕನ್ನಡಿಗರಿಗೆ, ಕನ್ನಡವಲ್ಲದೆ ಬೇರೆಲ್ಲವೂ ಪರಕೀಯವೇ ಆಗಿದೆ. ಇಂಗ್ಲೀಶ್ ಭಾಷೆಯನ್ನು ಕಣ್ಣು ಚುಚ್ಚುವ ಸೂಜಿಯಂತೆ ಕಾಣುತ್ತಿರುವ ಇವರಿಗೆ ಹಿಂದೀ ಚಿನ್ನದ ಸೂಜಿಯಿದ್ದಂತೆ ಎಂಬುದೇಕೆ ಅರಿವಾಗುತ್ತಿಲ್ಲವೋ ಆಶ್ಚರ್ಯಕರವಾಗಿದೆ. ನಿಜಕ್ಕೂ ಹಿಂದೀ ಉಳಿದೆಲ್ಲಾ ಭಾರತೀಯ ಭಾಷೆಗಳಿಗೆ ಚರಮಗೀತೆ ಎನ್ನೋದನ್ನು ಗುರುತಿಸುವಲ್ಲಿ ಇವರು ವಿಫಲವಾಗ್ತಿರೋದು ವಿಚಿತ್ರವೆನ್ನಿಸುತ್ತಿದೆ!!

ಸಾಹಿತ್ಯ ಪ್ರಸಾರಕ್ಕೆ ಬೇಕಿರೋದು ಅನುವಾದ!

ಇಬ್ಬರು ಭಾರತೀಯರು ಭೇಟಿಯಾಗಿ ಇಂಗ್ಲೀಶಿನಲ್ಲಿ ಮಾತಾಡುವುದು ಕೃತಕವಾಗಿ ಕಾಣಿಸುವ ಇವರಿಗೆ, ಇಬ್ಬರು ಭಾರತೀಯರು (ಉದಾ: ಕನ್ನಡಿಗನೊಬ್ಬ ಮತ್ತು ತೆಲುಗಿನವನೊಬ್ಬ) ಹಿಂದೀಯಲ್ಲಿ ಮಾತಾಡಿದರೂ ಅದು ಕೃತಕವಾಗಿ ಕಾಣಿಸದೇ? "ಹಿಂದೀಯಲ್ಲಿ ಮಾತಾಡುವುದು ನಮ್ಮತನ ಇಟ್ಟುಕೊಂಡಂತೆಯೂ, ಇಂಗ್ಲೀಶಲ್ಲಿ ಮಾತಾಡುವುದು ನಮ್ಮತನ ಬಿಟ್ಟಂತೆಯೂ ಅನ್ನಿಸುತ್ತಿದೆ.." ಎಂಬ ಗಾಳಿಯಲ್ಲಿ ತೇಲಾಡೋ ಹಗುರವಾದ ಮಾತಾಡೋ ಇವರು ಅದೇಕೆ ಹಾಗೆ ಎಂದು ವಿವರಿಸಬಲ್ಲರೇನು? ಸಾಹಿತ್ಯ ಪ್ರಚಾರಕ್ಕೆ ಹಿಂದೀ ಕಲಿಯಬೇಕು ಅನ್ನುವ ಇವರ ಮಾತು ಹಾಸ್ಯಾಸ್ಪದವಾಗಿದೆ. ಅಲ್ಲಾ, ಶೇಕ್ಸ್‍ಪಿಯರ್ ತನ್ನ ಸಾಹಿತ್ಯದ ಹಿರಿಮೆಯನ್ನು ಭಾರತೀಯರಿಗೆ ತಿಳಿಸಲು ಹಿಂದೀ ಕಲಿತಿದ್ನಾ? ಕನ್ನಡದ ಮೇರು ಸಾಹಿತಿಗಳಿಗೆ ಹಿಂದೀ ಬರದ ಕಾರಣ ಅವರ ಸಾಹಿತ್ಯ ಉತ್ತರ ಭಾರತ ತಲುಪಲು ವಿಫಲವಾಗಿದೆ ಎನ್ನುವ ಮಾತುಗಳು ಕೀಳರಿಮೆಯದ್ದಲ್ಲವೇನು? ಕನ್ನಡ ಸಾಹಿತ್ಯದ ಹಿರಿಮೆ ಉಳಿದವರಿಗೆ ತಲುಪಬೇಕೆಂದಿದ್ದರೆ ಅದು ಅವರವರ ಭಾಷೆಗೆ ಅನುವಾದವಾದರೆ ಸಾಕು ಅನ್ನುವ ಆಲೋಚನೆಯೇ ಬೇಡವೇ? ಹೋಗಲೀ, ಹಿಂದೀ ಸಾಹಿತಿಗಳು ದಕ್ಷಿಣದವರನ್ನು ತಲುಪಲು ಏನಾಗಬೇಕೆಂದು ಇವರು ಯೋಚಿಸಬಲ್ಲರೇ? ಹಾಗಾಗಲು ದಕ್ಷಿಣದವರೆಲ್ಲಾ ಹಿಂದೀ ಕಲೀಲಿ ಅಂದರೂ ಅನ್ನಬಹುದೇನೋ? ಕುವೆಂಪುರವರು ಕನ್ನಡದಲ್ಲಿ ರಾಮಾಯಣ ದರ್ಶನ ಬರೆಯದೆ ಹಿಂದೀ ಕಲಿತು ಅದರಲ್ಲಿ ಬರೆಯಬೇಕಿತ್ತು ಅಂದಿದ್ದರೂ ಅಚ್ಚರಿ ಪಡುವಂತಿಲ್ಲ... ಅಲ್ವಾ ಗುರೂ!

"ಸರಸ್ವತಿ ಸಮ್ಮಾನ್" ಪುರಸ್ಕೃತ ಸರಸ್ವತಿಪುತ್ರನಿಗೆ ಅಭಿನಂದನೆಗಳು!

(ಫೋಟೋ ಕೃಪೆ: ವಿಕಿಪೀಡಿಯಾ)
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿ, ಕನ್ನಡದ ಅತ್ಯಂತ ಪ್ರಭಾವಶಾಲಿ ಕಾದಂಬರಿಕಾರರೆನ್ನಿಸಿದ ಕನ್ನಡಿಗ ಶ್ರೀ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರಿಗೆ ೨೦೧೧ರ ಸಾಲಿನ ಪ್ರತಿಷ್ಟಿತ ಸರಸ್ವತಿ ಸಮ್ಮಾನ ಪ್ರಶಸ್ತಿ ದೊರೆತಿದೆ. ಇವರು ಶಾಸ್ತ್ರೀಯ ಸಂಗೀತವನ್ನು ವಸ್ತುವಾಗಿಸಿಕೊಂಡು ಬರೆದಿದ್ದ "ಮಂದ್ರ" ಕಾದಂಬರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದು ಇಡೀ ಕನ್ನಡ ಸಾರಸ್ವತ ಲೋಕಕ್ಕೆ ಸಂದ ಗೌರವವಾಗಿದ್ದು, ಪ್ರಶಸ್ತಿಗೆ ಪಾತ್ರರಾಗಿರುವ ಶ್ರೀ ಎಸ್.ಎಲ್.ಭೈರಪ್ಪನವರಿಗೆ ಬನವಾಸಿ ಬಳಗದ ಅಭಿನಂದನೆಗಳು.

ನಲಿವಿನ ಹಾರೈಕೆಗಳು ನೆಚ್ಚಿನ ಕಂಬಾರ ಅವರಿಗೆ !

ಕನ್ನಡನಾಡಿನ ಹೆಮ್ಮೆಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಅವರಿಗೆ ಈಗ ಜ್ಞಾನಪೀಠ ಪ್ರಶಸ್ತಿಯ ಗರಿ. ಇದು ಕರ್ನಾಟಕಕ್ಕೆ ಎಂಟನೆ ಬಾರಿ ಸಂದ ಗೌರವ. ಜಾನಪದ ಸೊಗಡನ್ನು ತಮ್ಮ ಬರವಣಿಗೆಯಲ್ಲಿ ಮೈದಾಳಿಕೊಂಡು ಬಂದಿರುವ ಚಂದ್ರಶೇಖರ ಕಂಬಾರರು ಹಲವು ಪ್ರತಿಭೆಗಳ ಸಂಗಮ. ಕವಿ, ನಾಟಕಕಾರ, ಚಿತ್ರನಟ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಅಧ್ಯಾಪಕ, ಜಾನಪದ ತಜ್ಞ, ಆಡಳಿತಗಾರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಕನ್ನಡ ಸಾಹಿತ್ಯ ಲೋಕದ ಸಿರಿಯನ್ನು ಹೆಚ್ಚಿಸಿದವರು ಇವರು. ಕುವೆಂಪು, ಶಿವರಾಮ ಕಾರಂತ, ದ ರಾ ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ ಕೃ ಗೋಕಾಕ, ಗಿರೀಶ್ ಕಾರ್ನಾಡ್ ಮತ್ತು ಯು ಆರ್ ಅನಂತಮೂರ್ತಿಯವರ ನಂತರ ಈಗ ಕಂಬಾರರು ಕರ್ನಾಟಕಕ್ಕೆ ಗೌರವ ತಂದಿದ್ದಾರೆ. ಅವರಿಗೆ ಬನವಾಸಿ ಬಳಗ ಮನದುಂಬಿ ಶುಭಾಶಯಗಳನ್ನು  ಸಲ್ಲಿಸುತ್ತದೆ.

ಡಬ್ಬಿಂಗ್ ಬೇಕೆನ್ನೋ ಫೂಲ್‍ಗಳು ಅರ್ಥ ಮಾಡ್ಕೋಬೇಕು - ಶಿವಣ್ಣ!


ಅಂತೂ ಕನ್ನಡ ಚಿತ್ರರಂಗ ಡಬ್ಬಿಂಗ್ ಎದುರಿಸೋ ಉದ್ದೇಶದಿಂದ ತನ್ನ ಮತ್ತೊಂದು ಅಸ್ತ್ರವನ್ನು ಬಿಟ್ಟಿರೋ ಹಾಗಿದೆ. ನಮ್ಮ ನೆಚ್ಚಿನ ಡಾ. ರಾಜ್‍ರ ದೊಡ್ಡಮಗನೂ ಸ್ವತಃ ನಟನೂ ಆಗಿರುವ ಶ್ರೀ ಶಿವರಾಜ್‍ಕುಮಾರ್ ಅವರು ಡಬ್ಬಿಂಗ್ ಬಗ್ಗೆ ತಮ್ಮ ಅಭಿಪ್ರಾಯಾನಾ ‘ಹೀಗೆ’ ಹೇಳಿದಾರೆ ಅಂತಾ ನಾಡಿನ ಖ್ಯಾತ ಚಲನಚಿತ್ರ ತಿಂಗಳ ಪತ್ರಿಕೆ ರೂಪತಾರಾ ಪ್ರಕಟಿಸಿದೆ. ಓದುಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದಂತಿರುವ ಈ ಸಂದರ್ಶನದಲ್ಲಿ ಡಬ್ಬಿಂಗ್ ಬಗ್ಗೆ "ಕನ್ನಡಕ್ಕೆ ಡಬ್ಬಿಂಗ್ ತರಬೇಕೆಂದು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಶಿವಣ್ಣ ಯಾಕೆ ಮಾತಾಡುತ್ತಿಲ್ಲ?" ಎಂದು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ ಮತ್ತೂ ಮುಂದುವರೆಯುತ್ತಾ ಶಿವಣ್ಣ "ಡಬ್ಬಿಂಗ್ ಬೇಕು ಅಂತಾ ಒತ್ತಾಯ ಮಾಡ್ತಿರೋ ಫೂಲ್‍ಗಳು ಒಂದು ವಿಷಯ ಅರ್ಥ ಮಾಡ್ಕೋಬೇಕು. ನಮ್ಮ ಭಾಷೆ ಚಿತ್ರಗಳು ಬೇರೆ ಕಡೆ ಬಿಡುಗಡೆ ಮಾಡಲ್ಲ. ಹಾಗಿರುವಾಗ ಅವರ ಚಿತ್ರಗಳನ್ನು ನಾವು ಮೆರೆಸಬೇಕಾ. ಸ್ಯಾಟಲೈಟ್ ರೈಟ್‍ನಿಂದ ದುಡ್ಡು ಬರುತ್ತೆ ಅನ್ನೋ ಕಾರಣಕ್ಕೆ ಈ ಕೆಲಸ ಮಾಡಬೇಡಿ. ದುಡ್ಡು ಸಂಪಾದಿಸಬೇಕು ಅಂದ್ರೆ ನಿಯತ್ತಾಗಿರಬೇಕು. ಆಗ ದುಡಿದ ದುಡ್ಡು ಸಹಾ ಅರಗುತ್ತೆ. ಇದನ್ನು ನಾನು ಕನ್ನಡಿಗರ ಪರವಾಗಿ ಹೇಳ್ತಿದ್ದೇನೆ" ಎಂದಿದ್ದಾರೆ.

ರಿಮೇಕ್ ಬಗ್ಗೆ...

ಮತ್ತೊಂದು ಪ್ರಶ್ನೆ ರಿಮೇಕ್ ಬಗ್ಗೆ ಇದ್ದು ಹೀಗಿದೆ: ರಿಮೇಕ್‍ಗಳ ಬಗ್ಗೆ ನಿಮ್ಮ ಸದ್ಯದ ನಿಲುವೇನು?" (ಎರಡೂ ಪ್ರಶ್ನೆಗಳನ್ನು ಕೇಳಿರುವ ವಿಧಾನದಲ್ಲಿರೋ ವ್ಯತ್ಯಾಸ ಗಮನಿಸಿ. ಡಬ್ಬಿಂಗ್ ಬಗ್ಗೆ - ಯಾಕೆ ಸುಮ್ಮನಿದ್ದೀರಾ? ಎಂದಿದ್ದರೆ ರಿಮೇಕ್ ಬಗ್ಗೆ - ಸದ್ಯದ ನಿಲುವು ಕೇಳ್ತಿದಾರೆ. ಪಾಪ ಓದುಗರೇ ಕೇಳಿರೋ ಪ್ರಶ್ನೆಗಳಂತೆ ಇವು!). ಇದಕ್ಕೆ ಶಿವಣ್ಣ "ನಾನು ರಿಮೇಕ್ ಮಾಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಮಾತನಾಡೋದು ತಪ್ಪಾಗಬಹುದು. ಸಿನಾಮಾನ ನಂಬಿ ಬದುಕೋ ಸಾಕಷ್ಟು ಜನ ಇದ್ದಾರೆ. ರಿಮೇಕೋ, ಸ್ವಮೇಕೋ ಸಿನಿಮಾಗಳು ಬರುತ್ತಿದ್ದರೆ ಮಾತ್ರಾ ಅವರೆಲ್ಲರ ಹೊಟ್ಟೆ ತುಂಬೋಕೆ ಸಾಧ್ಯ. ಆ ದೃಷ್ಟಿಯಿಂದ ಏನೂ ಹೇಳಲು ಸಾಧ್ಯವಿಲ್ಲ. ಇನ್ನು ನಾನಂತೂ ಸ್ವಮೇಕ್ ಮಾಡುತ್ತಲೇ ಇದ್ದೇನೆ. ಚಿತ್ರ ಹಿಟ್ ಆಯಿತೋ ಫ಼್ಲಾಪ್ ಆಗುತ್ತಿದೆಯೋ ಬೇರೆ ಮಾತು. ನನ್ನ ನಿರ್ಧಾರ ಮಾತ್ರಾ ಬದಲಾಗಿಲ್ಲ" ಎಂದಿದ್ದಾರೆ.

ಎರಡೂ ಉತ್ತರಗಳಲ್ಲಿರೋ ಅನುಕೂಲ ಸಿಂಧುತ್ವ ಗಮನಿಸಿದಿರಾ? ಇರಲಿ ಬನ್ನಿ ಈಗ ಶಿವಣ್ಣನವರನ್ನು ಮಾತಾಡಿಸೋಣ.

ಹಿರಿಯರು ಅಂದಿದ್ರೂ ಅಂತಾ...

ಹಿರಿಯರು ಡಬ್ಬಿಂಗ್ ಬೇಡಾ ಅಂದಿದಾರೆ ಅದಕ್ಕೆ ಬೇಡಾ ಅಂದುಬುಟ್ರೆ ಹೆಂಗೆ ಶಿವಣ್ಣಾ? ಹಿರಿಯರು ಬೇಡಾ ಅಂದಿದ್ದ ಸಂದರ್ಭ ಎಂಥದ್ದು? ಯಾಕೆ ಬೇಡಾ ಅಂದಿದ್ರು? ಇವತ್ತಿನ ಪರಿಸ್ಥಿತಿ ಹಂಗೇ ಇದೆಯಾ? ಇಷ್ಟಕ್ಕೂ ಆವತ್ತು ಹಿರಿಯರು ಬೇಡಾ ಅಂದಿದ್ದು ಸರೀನಾ ಅಂತಾ ಈಗಿನವರು ವಿಚಾರ ಮಾಡಬೇಕಲ್ವಾ? ಹಿಂದೆ ನಮ್ಮ ತಾತನ ಕಾಲದಲ್ಲಿ ಪ್ಯಾಂಟ್ ಹಾಕ್ಕೋಂಡ್ರೇ ಮೊಕಕ್ ಉಗೀತಿದ್ರು, ಪ್ಯಾಂಟ್ ಹಾಕ್ಕೋಬಾರ್ದು ಪಂಚೇ ಉಟ್ಕಳ್ಳಿ ಅಂತಿದ್ರು... ಈಗಲೂ ಹಂಗೇ ಮಾಡಬೇಕಾ? ಕಾಲಕ್ಕೆ ತಕ್ಕಂತೆ ಕುಣಿಯಬೇಕು ಅಂತಾ ಅಣ್ಣಾವ್ರೇ ಹೇಳಿಲ್ವಾ?

ಇದೇನು ಬೆದರಿಕೇನಾ ಶಿವಣ್ಣಾ?

ಇಷ್ಟಕ್ಕೂ ಈಗ ಜಬರ‍್‍ದಸ್ತಿ ಮಾಡ್ತಾ ಇರೋದು ಯಾರು? ಕಾನೂನು ಬಾಹಿರವಲ್ಲದ ಒಂದು ಕೆಲಸಾನಾ, ಕಾನೂನು ಬಾಹಿರವಾಗಿ ಬ್ಯಾನ್ ಮಾಡ್ತೀನಿ ಅನ್ನೋಕೆ ಚಲನಚಿತ್ರರಂಗವೇನು ಯಾರದೋ ಪಾಳೇಗಾರಿಕೇನಾ? ಡಬ್ಬಿಂಗ್ ಅವಶ್ಯಕತೆ ಇದೆಯೋ ಇಲ್ವೋ ಅಂತಾ ಹೇಳೋಕೆ ನಾನೂ ನೀವೂ ತಾನೇ ಏನು ಅಧಿಕಾರ ಹೊಂದಿದೀವಿ? ಈಗ ಪ್ರೇಕ್ಷಕರಾದ ನಾವು ಡಬ್ಬಿಂಗ್ ಬೇಕು ಅಂತಿದೀವಿ. ನಮ್ಮ ಬೇಡಿಕೆ ಪೂರೈಸಲು ಆಗುವವರು ಪೂರೈಸುತ್ತಾರೆ. ಯಾರಿಗೆ ಬೇಕೋ ಅವರು ಅಂಥಾ ಸಿನಿಮಾ ನೋಡ್ಕೋತಾರೆ. ಅಂಥಾ ಸಿನಿಮಾಗಳು ವ್ಯಾವಹಾರಿಕವಾಗಿ ಲಾಭ ಅನ್ಸುದ್ರೆ ಉಳೀತಾವೆ, ಇಲ್ದಿದ್ರೆ ಇಲ್ಲಾ. ಈಗ ಚಿತ್ರರಂಗದೋರು ತೆಗಿತಾ ಇರೋ ರಿಮೇಕುಗಳನ್ನು ನಾವು ತಡ್ಯಕ್ಕೆ ಬೀದಿಗಿಳೀತೀವಿ, ಯಾವ ಲೆವೆಲ್ಲಿಗಾದ್ರೂ ಇಳೀತೀವಿ ಅನ್ನೋಕಾಗುತ್ತಾ? ಹುಡುಗ್ರು ಹಿಟ್ ಆಗೋದಾದ್ರೆ ಸಂತೋಷ... ಎಲ್ಲೀ ತನಕ ಜನರಿಗೆ ಸಿನಿಮಾ ನೋಡೋ, ಗೆಲ್ಲಿಸೋ, ಸೋಲಿಸೋ ಸ್ವಾತಂತ್ರವಿದೆಯೋ ಅಲ್ಲೀ ತನಕ ಎಲ್ಲಾ ಸರೀನೆ. ಅದು ಬಿಟ್ಟು, ಇದುನ್ನಾ ತಡೀತೀವಿ, ಇದುನ್ನಾ ಬ್ಯಾನ್ ಮಾಡ್ತೀವಿ ಅಂತಾ ಅನ್ನೋಕೆ ತಮ್ಮದೇನು ಜನರಿಂದ ರಾಜ್ಯ ಆಳಕ್ಕೆ ಅಂತಾ ಆರಿಸಲ್ಪಟ್ಟ ಸರ್ಕಾರಾನಾ? ಅಷ್ಟಕ್ಕೂ ಈ ದೇಶದಲ್ಲಿ ಸಂವಿಧಾನ, ಕಾನೂನು ಅಂತಾ ಇರೋದು ತಮ್ಮ ಗಮನದಲ್ಲಿಲ್ವಾ? ಕಾನೂನು ಏನೇ ಇದ್ಕೊಳ್ಲಿ, ನಾವು ಬೀದಿಗೆ ಇಳಿದು ಹೋರಾಟ ಮಾಡ್ತೀವಿ ಅಂದ್ರೇನರ್ಥ? ಅಂದಹಾಗೆ ಯಾವ ಲೆವೆಲ್ಲಿಗೆ ಬೇಕಾದ್ರೂ ಇಳೀತೀವಿ ಅಂತೀರಲ್ಲಾ? ಇದೇನು ಬೆದರಿಕೇನಾ ಶಿವಣ್ಣಾ? ಇಂಥಾ ಬೆದರಿಕೆಯಿಂದಾ ಕನ್ನಡಿಗರಿಗೆ ತಮ್ಮ ನುಡಿಯಲ್ಲೇ ಮನರಂಜನೆ ಪಡೆದುಕೊಳ್ಳೋ ಹಕ್ಕನ್ನು ನಿರಾಕರಿಸೋದು ತಪ್ಪಲ್ವಾ?

ಕನ್ನಡತನಾ ಅಂದ್ರೆ...

ಇನ್ನು ನಮ್ಮಂಥಾ ಬರೀ ಕನ್ನಡ ಮಾತ್ರಾ ಗೊತ್ತಿರೋ ಕನ್ನಡಿಗರಿಗೆ ಇವರುಗಳ ಕನ್ನಡತನಾನೇ ಅರ್ಥವಾಗದು. ಕನ್ನಡದಲ್ಲಿ ಎಲ್ಲಾ ಭಾಷೆಯ ಚಿತ್ರ ನೋಡೋದು ಕನ್ನಡತನವೋ? ಕನ್ನಡಿಗರೆಲ್ಲಾ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಅವವೇ ಭಾಷೇಲಿ ನೋಡೋದು ಕನ್ನಡತನವೋ? ಬೇರೆ ಭಾಷೆ ಚಿತ್ರಗಳು ನಮ್ಮಲ್ಲಿ ಬಿಡುಗಡೆ ಆಗ್ತಿವೆ ಅದುಕ್ಕೆ ಡಬ್ಬಿಂಗ್ ಬೇಡಾ... ಕನ್ನಡದವುನ್ನ ಬೇರೆ ಕಡೆ ಬಿಡುಗಡೆ ಮಾಡಲ್ಲ, ಅದುಕ್ಕೆ ನಮ್ ಸಿನಿಮಾ ಡಬ್ ಆಗ್ಲೀ ಅನ್ನೋದು ಬೂಟಾಟಿಕೆ ಅನ್ಸಲ್ವಾ? ಕರ್ನಾಟಕದ ಆಚೆ ಇರೋ ಕನ್ನಡಿಗರು ಕನ್ನಡದಲ್ಲಿ ಸಿನಿಮಾ ನೋಡದೇ ಅವರಿರೋ ರಾಜ್ಯಗಳ ಭಾಷೇಲಿ ಡಬ್ ಆದ ರೂಪದಲ್ಲಿ ನಮ್ಮ ಸಿನಿಮಾ ನೋಡಲೀ ಅನ್ನೋದಾದರೆ, ಇದೇ ನ್ಯಾಯಾ ಪರಭಾಷಾ ಚಿತ್ರಗಳಿಗೂ ಅನ್ವಯವಾಗಲ್ವಾ? ಪರಭಾಷಾ ಚಿತ್ರಗಳನ್ನು ಅವವೇ ಭಾಷೇಲಿ ನೋಡಬೇಕು ಅನ್ನುವಂತೆ ‘ನಮ್ಮಲ್ಲಿ ಪರಭಾಷಾ ಚಿತ್ರಗಳು ಬಿಡುಗಡೆಯಾಗ್ತಿರುವಾಗ ಡಬ್ಬಿಂಗ್ ಯಾಕೆ?’ ಅನ್ನೋ ನೀವು, ಕನ್ನಡಿಗರೆಲ್ಲಾ ಪರಭಾಷೆಗಳನ್ನು ಕಲಿತುಕೊಂಡು ಆಯಾಭಾಷೆಯಲ್ಲಿ ಆಯಾ ಸಿನಿಮಾ ನೋಡಿ ಅನ್ನೋದಾಗಲೀ, ಭಾಷೆ ಬರದಿದ್ರೂ ಆ ಭಾಷೇಲೇ ನೋಡಿ ಅನ್ನೋದಾಗ್ಲೀ ನಿಮ್ಮ ಸ್ವಾರ್ಥದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮಾಡ್ತಿರೋ ಮೋಸ ಅಲ್ವಾ ಶಿವಣ್ಣಾ? ಇದುನ್ನಾ ಕನ್ನಡತನಾ ಅನ್ನಕ್ ಆದೀತಾ? ಆಯ್ತು.. ಕನ್ನಡಚಿತ್ರರಂಗದ ದೊಣೇನಾಯಕರೇ ಈಗ ಕೊರಿಯನ್, ಜಪಾನೀಸ್ ಸಿನಿಮಾಗಳು ಇಲ್ಲಿ ಬಿಡುಗಡೆ ಆಗ್ತಿಲ್ಲಾ... ಇವುನ್ನಾ ಡಬ್ ಮಾಡ್ಬೋದಾ?

ನಿಯತ್ತಿನ ಸಂಪಾದನೇ ಅಂದ್ರೆ...

ಯಾವುದೇ ವಿಷಯದ ಬಗ್ಗೆ ನಿಮಗಿಂತಾ ಬೇರೆಯಾದ ಅಭಿಪ್ರಾಯ ಹೊಂದಿರೋದು ಮೂರ್ಖತನಾ ಅನ್ನೋದು ಎಷ್ಟು ಸರೀ ಶಿವಣ್ಣಾ? ಇನ್ನು ಡಬ್ಬಿಂಗ್‍ನಿಂದಾ ಸಂಪಾದಿಸೋ ದುಡ್ಡು ನಿಯತ್ತಿನದಲ್ಲಾ ಅಂತೀರಲ್ಲಾ? ಇದೇ ಮಾತುನ್ನಾ ಫ್ರೇಮ್ ಟೊ ಫ್ರೇಮ್ ರಿಮೇಕ್ ಮಾಡೋ ಬಗ್ಗೆ ಯಾಕೆ ಹೇಳಲ್ಲಾ? ಇತ್ತೀಚಿಗೆ ನಿಮ್ಮದೇ ಕುಟುಂಬದ "ಜಾಕಿ" ಬೇರೆ ಭಾಷೆಗೆ ಡಬ್ ಆದಾಗ ಹೆಮ್ಮೆ ಪಟ್ಕೊತೀರಲ್ಲಾ? ಅದ್ಯಾವ ಸೀಮೆ ನ್ಯಾಯಾ? ಹಾಗೆ ಬೇರೆ ಭಾಷೆಗೆ ಡಬ್ ಮಾಡಿ ಸಂಪಾದಿಸೋ ದುಡ್ಡು ನಿಯತ್ತಿಂದಲ್ಲಾ ಅನ್ನಕ್ ಆಗುತ್ತಾ? ಕಾನೂನು ಬಾಹಿರವಲ್ಲದ ಮಾರ್ಗದಲ್ಲಿ ಸಂಪಾದಿಸೋ ಎಲ್ಲಾನೂ ನಿಯತ್ತಿನ ಸಂಪಾದನೇನೇ ಅಲ್ವಾ ಶಿವಣ್ಣಾ?

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಅಣ್ಣಾವ್ರು, ಪ್ರೇಕ್ಷಕರನ್ನು ಅಭಿಮಾನಿ ದೇವರುಗಳು ಅಂತಿದ್ರೂ... ತಾವು ಫೂಲ್‍ಗಳು ಅಂದ್ರೀ ಅಂತಿದೆ ರೂಪತಾರಾ?ನಂಬಕ್ಕಾಗ್ತಿಲ್ಲಾ... ಹಿರಿಯರು ಡಬ್ಬಿಂಗ್ ಬೇಡಾ ಅಂದ್ರು ಅದ್ಕೆ ಬೇಡಾ ಅಂತಾ ಆ ಪಾಟಿ ಗೌರವಾ ಕೊಡ್ತಿರೋ ನೀವು, ನಿಮ್ಮದಲ್ಲದ ಅಭಿಪ್ರಾಯ ಇಟ್ಕೊಂಡೋರ ಬಗ್ಗೆ ಹಿಂಗೆಲ್ಲಾ ಅನ್ನೋದನ್ನು ಹಿರಿಯರು ಮೆಚ್ಚುತ್ತಿದ್ರು ಅಂತೀರಾ ಶಿವಣ್ಣಾ?

ಕನ್ನಡ ಚಿತ್ರರಂಗದ ರಣಧೀರ!

ಮೈಸೂರು ರಾಜ್ಯದ ದೊರೆಯೇ ರಣಾಧೀರ ನಾಯಕನೇ
ನಿನ್ನಂಥವರಾರು ಇಲ್ವಲ್ಲೋ ಲೋಕದಾ ಮ್ಯಾಲೆ!
ನಿನ್ನಂಥೋರ್ ಯಾರೂ ಇಲ್ವಲ್ಲೋ!!
ಹಿಂದೆ ಇನ್ನೂರು ದಂಡು! ಮುಂದೆ ಮುನ್ನೂರು ದಂಡು
ನಿನ್ನಂಥೋರ್ ಯಾರೂ ಇಲ್ಲಲ್ಲೋ ಲೋಕದ ಮ್ಯಾಲೆ!!
ತಿರುಚನಾಪಳ್ಳಿಯೊಳಗೆ ಕೊಬ್ಬಿದಾ ಮಲ್ಲಜಟ್ಟಿ
ಉಟ್ಟಾ ಚಡ್ಡಿಯನ್ನು ದಿಡ್ಡಿ ಬಾಗಿಲ ಮೇಲೆ
ತೂಗಿ ಬಿಟ್ಟನಂತಾ ಕೇಳಿ ಕಿಡಿಕಿಡಿಯಾದಾ ದೊರೆಯೇ!!
ಮಲ್ಲರ ಮಾನಾ ಕಾಯುವೆನೆಂದು
ಮಲ್ಲ ವೇಷವಾ ತೊಟ್ಟುಕೊಂಡು ತಿರುಚನಾಪಳ್ಳಿಗೆ
ಹೋಗಿ ಚಡ್ಡಿ ತೆಗೆದೆಳೆದಾ ದೊರೆಯೇ!!
ಮಲ್ಲಾಯುದ್ಧದಲ್ಲಿ ಸಮನಿಲ್ಲಾ ನಮ್ಮಾ ದೊರೆಗೆ
ತೋರ್ಯಾರೋ ಕೈಯ್ಯಾಚಳಕಾ!
ನೋಟಕ್ಕೆ ಕಾಣಾದಂತೆ ಸೊಂಟಾದೊಳಗಿದ್ದ ಮಹಾ
ನರಸಿಂಹಾನೆಂಬೋ ಕತ್ತಿಯಿಂದಾ
ರುಂಡಾಬೇರೇಯಾಗದಂತೆ ಕಡಿದರೋ
ನಮ್ಮಾ ರಣಧೀರಾ ನಾಯಕಾ!!
(ಸಿ. ವೀರಣ್ಣ - ನಾಟಕ: ಹುತ್ತವ ಬಡಿದರೆ).

ಕನ್ನಡಿಗರ ಕಣ್ನಮುಂದೆ ಮಯೂರ, ಪುಲಿಕೇಶಿ, ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯರನ್ನು ತಾನೇ ಅವರಾಗಿ ತಂದಿಟ್ಟವರು ಡಾ. ರಾಜ್‍ಕುಮಾರ್. ಇವತ್ತು ನಮ್ಮ ರಾಜಣ್ಣನ ಹುಟ್ಟುಹಬ್ಬ. ಇಡೀ ನಾಡು ರಾಜಣ್ಣ ಮತ್ತೊಮ್ಮೆ ಹುಟ್ಟಿಬಾ ಎಂದು ಮನದುಂಬಿ ಹಂಬಲಿಸುತ್ತಿದೆ.

ರಾಜ್‍ರಿಂದ ಪಡೆಯಬೇಕಾದ ಪ್ರೇರಣೆ..

ಡಾ ರಾಜ್ ಬರೀ ತೆರೆಯಮೇಲಷ್ಟೇ ರಣಧೀರನಲ್ಲ. ಕನ್ನಡ ಚಿತ್ರರಂಗ ನೆಲೆಯಿಲ್ಲದೆ ಮದ್ರಾಸನ್ನು ಅವಲಂಬಿಸಿ ತಮಿಳು ತೆಲುಗು ಚಿತ್ರರಂಗದ ಆಲದ ಮರದಡಿ ಟಿಸಿಲೊಡೆಯಲು ತಡವರಿಸುತ್ತಿದ್ದಾಗ, ಅದಕ್ಕೆ ತನ್ನದೇ ಅಸ್ತಿತ್ವ ಕಟ್ಟಿಕೊಳ್ಳಲು ನೆರವಾದದ್ದು ನಮ್ಮ ರಾಜ್. ಕನ್ನಡಿಗರ ಉಳಿವು ನಮ್ಮ ಉದ್ದಿಮೆಗಾರಿಕೆಯು ಹೆಚ್ಚುವುದರಲ್ಲಿ ಮಾತ್ರವೇ ಅಡಗಿದೆ ಎನ್ನುವುದನ್ನು ಮನಗಂಡು ಬಾಲಕೃಷ್ಣ, ನರಸಿಂಹರಾಜು, ಜಿ.ವಿ.ಅಯ್ಯರ್ ಅವರೊಡನೆ ಸೇರಿ, ಊರೂರು ಅಲೆದು ನಾಟಕ ಪ್ರದರ್ಶನ ನೀಡಿ, ಹಣ ಒಟ್ಟುಮಾಡಿ ತೆಗೆದ ಚಿತ್ರವೇ ರಣಧೀರ ಕಂಠೀರವ. ನೋಡ್ರೀ.. ಆ ಮುಖದಲ್ಲಿ ಅದೇ ಸ್ವಾಭಿಮಾನ ಹೇಗೆ ತುಂಬಿ ತುಳುಕುತ್ತಿದೆ. ಆ ಕಣ್ಣಲ್ಲಿ ಜಗತ್ತನ್ನೇ ಗೆಲ್ಲುವ ಛಲ ಹೇಗೆ ಉಕ್ಕುತ್ತಿದೆ... ಇಂದು ಕನ್ನಡಿಗರಿಗೆ ಬೇಕಿರುವುದು ಇಂತಹ ಎದೆಗಾರಿಕೆಯೇ. ಹೊಸದನ್ನು ಮಾಡುವ, ಸವಾಲು ಎದುರಿಸಿ ಗೆಲ್ಲುವ ದಿಟ್ಟತನ, ನನ್ನತನ ಬಿಡೆನೆಂಬ ಛಲಗಾರಿಕೆಗಳೇ ಕನ್ನಡಿಗರನ್ನು, ಕನ್ನಡನಾಡನ್ನೂ ಉದ್ಧರಿಸಬಲ್ಲವು. ರಾಜ್ ನಮ್ಮೊಡನೆ ಇಲ್ಲದಿದ್ದರೇನಂತೆ? ರಾಜ್ ಎಂಬ ಶಕ್ತಿ ನಮಗೆ ಪ್ರೇರಣೆಯಾಗಿದೆಯಲ್ಲವಾ? ಈ ಮಾತು ಕನ್ನಡಚಿತ್ರರಂಗಕ್ಕೂ ಅನ್ವಯಿಸುತ್ತೆ ಗುರೂ...

ಈ ನಮ್ಮ ಹುಡುಗನ ಸಾಧನೆ ಸ್ಫೂರ್ತಿ ಕೊಡಲಿ!

ಚಾರ್ಟರ್ಡ್ ಅಕೌಂಟೆಂಟ್ ಆಗೋದು ಅಷ್ಟು ಸುಲಭದ ಮಾತಲ್ಲ, ಇದರ ಪರೀಕ್ಷೆಯನ್ನು ಪಾಸು ಮಾಡೋರ ಸಂಖ್ಯೆಯೇ ನೂರಕ್ಕೆ ಹತ್ತರ ಆಸುಪಾಸಿನಲ್ಲಿದೆ. ಅಂಥಾದ್ರಲ್ಲಿ ಕೆ.ಎನ್.ಸುಜಯ್ ಎಂಬ ನಮ್ಮ ಹುಡುಗ... ನವೆಂಬರ್ 2010ರಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲನೇ ರ‍್ಯಾಂಕು ಗಳಿಸಿದ್ದಾನೆ ಎಂದರೆ ಅಚ್ಚರಿ, ಖುಷಿ ಆಗುತ್ತೆ ಗುರೂ!

ಖುಷಿ ಯಾಕೆಂದರೆ...

ಸುಜಯ್ ಬಗ್ಗೆ ಟೈಮ್ಸ್ ಆಫ಼್ ಇಂಡಿಯಾ ದಿನಪತ್ರಿಕೆಯಲ್ಲಿ 14.02.2010ರಂದು ಬಂದಿರೋ ಈ ಸುದ್ದಿ ನೋಡಿದರೆ ಖುಷಿ ಆಗದೇ ಇರುತ್ಯೇ?

ಹೌದು! ಖುಷಿ ಪಡಲು ನಾನಾ ಕಾರಣಗಳಿವೆ.

ಈ ಹುಡುಗ ಸುಜಯ್ ಒಬ್ಬ ಕನ್ನಡಿಗ.

ಇವ ನಮ್ಮ ಕುಣಿಗಲ್ ಹುಡುಗ.

ಇವನೊಬ್ಬ ರೈತನ ಮಗ.

ಇವ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ.

ಇವ ಕಲಿತಿದ್ದು ಸರ್ಕಾರಿ ಕಾಲೇಜಿನಲ್ಲಿ...

ಇವ ಗಳಿಸಿದ್ದು ಅಖಿಲ ಭಾರತ ಮಟ್ಟದ ಸಿ.ಎ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕು.

ಕನ್ನಡ ಮಾಧ್ಯಮದಲ್ಲಿಯೇ ಕಲಿತು ಯಶಸ್ವಿಯಾದ ನಾರಾಯಣಮೂರ್ತಿ, ಸಿ ಎನ್ ಆರ್ ರಾವ್, ಡಾ. ಚಂದ್ರಶೇಖರ್, ಡಾ ರಮಣರಾವ್ (ನಿಜಕ್ಕೂ ಈ ಪಟ್ಟಿ ತುಂಬಾ ದೊಡ್ಡದು... ) ಇವರುಗಳ ಸಾಲಿನಲ್ಲಿ ಈ ಯಶಸ್ವಿ ಹುಡುಗನೂ ನಿಂತಿದ್ದಾನೆ. ಇವನಿಗೆ ಒಳಿತಾಗಲಿ. ಇವನ ಈ ಸಾಧನೆ ನಮ್ಮೆಲ್ಲಾ ಕನ್ನಡ ಮಕ್ಕಳಿಗೂ, ತಾಯ್ತಂದೆಯರಿಗೂ ಸ್ಪೂರ್ತಿಯಾಗಲಿ. ಏನಂತೀ ಗುರೂ!

ಗೂಡುಬಿಟ್ಟ ಹಾಡು ಕೋಗಿಲೆ!


ಇಡೀ ಭಾರತವನ್ನು ತನ್ನ ಹಾಡಿನಿಂದ, ತನ್ನ ಕಂಚಿನ ಕಂಠದಿಂದ ಮೋಡಿ ಮಾಡಿದ ಹಾಡು ಕೋಗಿಲೆ, ಕನ್ನಡಿಗ ಭಾರತ ರತ್ನ ಶ್ರೀ ಪಂಡಿತ್ ಭೀಮಸೇನಜೋಷಿಯವರು ಇನ್ನಿಲ್ಲವಾಗಿದ್ದಾರೆ. ಮೂಲತಃ ಗದುಗಿನವರಾದ ಇವರು ಹಾಡುಗಾರಿಕೆಯಲ್ಲಿ ಹೊಸ ಮಜಲನ್ನು ಹುಟ್ಟುಹಾಕಿದ ಗಾರುಡಿಗ. ಇವರನ್ನು ನೆನೆಯುತ್ತಾ ಬನವಾಸಿ ಬಳಗವು ತನ್ನ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ.
Related Posts with Thumbnails