Showing posts with label ಬದಲಾವಣೆ. Show all posts
Showing posts with label ಬದಲಾವಣೆ. Show all posts

ಸಿದ್ದರಾಮಯ್ಯನವರೇ? ನೀವಾಗುವಿರಾ "ಮಾತು ತಪ್ಪದ ಮಗ"!


ಮುಖ್ಯಮಂತ್ರಿಗಳಾಗಲಿರುವ ಮಾನ್ಯ ಶ್ರೀ ಸಿದ್ದರಾಮಯ್ಯನವರೇ,

ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಹೊಸ ರಾಜ್ಯಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಹೀಗಾಗುವಲ್ಲಿ ತಮ್ಮ ಪಾತ್ರವೂ ದೊಡ್ಡದಿದೆ. ಸದರಿ ಸರ್ಕಾರದ ಮುಖ್ಯಸ್ಥರಾಗಿಯೂ ತಾವು ಆಯ್ಕೆಯಾಗಿದ್ದೀರಿ. ನಿಮ್ಮ ಪಕ್ಷವು ಈ ಬಾರಿ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ನಾಡಿಗೆ ನಿಜಕ್ಕೂ ಏಳಿಗೆಗೆ ಪೂರಕವಾದವುಗಳಾಗಿವೆ. ಇವುಗಳತ್ತ ತಮ್ಮ ಗಮನ ಸೆಳೆಯುವುದು ನಮ್ಮ ಉದ್ದೇಶ! ಏನೇ ಆಗಲಿ.. ಇವುಗಳನ್ನಾದರೂ ಮಾಡಿರಿ ಎನ್ನುವುದು ನಮ್ಮ ಒತ್ತಾಯ!!

ಕಾಂಗ್ರೆಸ್ ಪ್ರಣಾಳಿಕೆಯಂತೆ ಆಗಲೇ ಬೇಕಾದ್ದು!


ಇವೆಲ್ಲದರ ಜೊತೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನೂ ಸಂಪರ್ಕಿಸುವ ರೈಲು ಮಾರ್ಗಗಳನ್ನು ರಾಜ್ಯಕ್ಕೆ ತರಲು ಸಮಗ್ರ ಯೋಜನೆಯನ್ನು ರೂಪಿಸಿ ಕೇಂದ್ರಸರ್ಕಾರದಿಂದ ಜಾರಿಮಾಡಿಸಿ. ರಾಜ್ಯಕ್ಕೆ ಹೆಚ್ಚೆಚ್ಚು ವಿದ್ಯುತ್ ರೈಲು ಮಾರ್ಗಗಳನ್ನು ತರಲು ಮುಂದಾಗಿರಿ. 


ಏಳಿಗೆಗೆ ಬೇಕಾದ್ದು!

ಒಂದು ನಾಡಿನ ಏಳಿಗೆಗೆ ಬೇಕಾದ್ದು ಆ ನಾಡಿನ ರಸ್ತೆ, ರೈಲು, ನೀರು ಮೊದಲಾದ ಮೂಲಭೂತಸೌಕರ್ಯಗಳನ್ನು ಕಟ್ಟಿಕೊಡುವುದು. ಆ ನಾಡಿನ ಜನರ ಕಲಿಕೆಯನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ದುಡಿಮೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸುವುದು, ಆ ನಾಡಿನ ಜನರ ಕೌಶಲಗಳನ್ನು ಹೆಚ್ಚಿಸುವುದು. ಆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸಲು ಪೂರಕವಾದ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ವ್ಯವಸ್ಥೆಯನ್ನು ಕಟ್ಟುವುದು! ನಿಮ್ಮ ಸರ್ಕಾರದ ಆಡಳಿತದ ಅವಧಿಯಲ್ಲಿ ಈ ಎಲ್ಲವನ್ನೂ ಮಾಡಿ. ನಮ್ಮ ಜನರ ಕಲಿಕೆ ಅತ್ಯುತ್ತಮವಾಗಲು, ಜಗತ್ತಿನ ಅತ್ಯುತ್ತಮ ಕಲಿಕೆಯ ವ್ಯವಸ್ಥೆಗಳ ಸಾಲಿನಲ್ಲಿ ನಮ್ಮದನ್ನೂ ನಿಲ್ಲಿಸಬಲ್ಲಂತಹ ಕನ್ನಡದ ಕಲಿಕೆಯ ವ್ಯವಸ್ಥೆಯನ್ನು ಕಟ್ಟಲು ಬೇಕಾದ ದೀರ್ಘಾವಧಿ ಯೋಜನೆಯನ್ನು ಮಾಡಿರಿ. ನೀವು ಇತ್ತೀಚಿಗಷ್ಟೇ ನಾಡಿನ ಅನೇಕ ಹಿರಿಯ ಕವಿ-ಸಾಹಿತಿ-ಚಿಂತಕರುಗಳನ್ನು ಭೇಟಿಯಾಗಿ ಬಂದಿದ್ದೀರಿ. ಇದು  ಅವರುಗಳ ಮೇಲಿನ ಗೌರವದಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಗೌರವ ಅದೇ ಹಿರಿಯರು ತಾಯ್ನುಡಿ ಶಿಕ್ಷಣದ ಪರವಾಗಿ ಹೊಂದಿರುವ ನಿಲುವುಗಳ ಬಗ್ಗೆಯೂ ತಮಗಿರಲಿ ಎನ್ನುವುದು ನಮ್ಮ ಆಶಯ! 

ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸುವ, ಇಡೀ ಪ್ರಪಂಚದಲ್ಲಿ ನಮ್ಮನ್ನು ಉಳಿದವರಿಗಿಂತಲೂ ಬೇರೆಯಾಗಿಸಿರುವ ನಮ್ಮ ನುಡಿ, ಸಂಸ್ಕೃತಿ, ಆಚರಣೆ, ನಂಬಿಕೆಗಳನ್ನು ಪೊರೆಯುವ ಕ್ರಮಗಳನ್ನು ಕೈಗೊಳ್ಳಿರಿ. ಧರ್ಮ, ಜಾತಿ, ಆಚರಣೆ, ಒಳನುಡಿಗಳೇ ಮೊದಲಾದ ವಿಭಿನ್ನತೆಗಳನ್ನು ಕನ್ನಡತನದ ಮೂಲಕ ಒಗ್ಗೂಡಿಸಿ ಹಿಡಿದಿಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿರಿ. ಕನ್ನಡಿಗರಿಗೆ ತಮ್ಮದೇ ನೆಲದಲ್ಲಿ ಬದುಕು ನಡೆಸಲು ತೊಡಕಾಗದಂತಹ ಆಡಳಿತ ವ್ಯವಸ್ಥೆಯನ್ನು ಕಟ್ಟುವುದು ಒಂದು ಮುಖ್ಯವಾದ ಹೊಣೆಗಾರಿಕೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕಾರ್ಯನಿರ್ವಹಿಸಲಿ...

ಒಟ್ಟಾರೆ ನಾಡಿನ ಜನರ ನಿರೀಕ್ಷೆಗಳೇನೋ ಹೆಚ್ಚಾಗಿಯೇ ಇವೆ. ಇವುಗಳನ್ನು ಈಡೇರಿಸುವತ್ತ ಮುಂದಾಗಿ.. ಇದು ನಮ್ಮ ನಾಡಿನ ಹೊಸ ಮುಖ್ಯಮಂತ್ರಿಗಳಾಗುತ್ತಿರುವ ನಿಮ್ಮಿಂದ ನಮಗಿರುವ ನಿರೀಕ್ಷೆ! ಕಾಂಗ್ರೆಸ್ಸಿನವರು ಸಾಕಷ್ಟು ಭರವಸೆಗಳನ್ನು ನೀಡಿದ್ದೀರಾ! ಈ ಭರವಸೆಗಳು ಭರವಸೆಗಳಲ್ಲಾ... ನಾಡಿಗರಿಗೆ ಕೊಟ್ಟ ಮಾತು! ನೀವು  ಮಾತು ತಪ್ಪದ ಮಗನಾಗಿರಿ ಎಂಬುದು ನಮ್ಮ ಆಗ್ರಹ!

ಅಣ್ಣಾ ತಂಡ ರಾಜಕಾರಣಕ್ಕೆ: ಇದೇ ಸರಿಯಾದ ಹೆಜ್ಜೆ...

(ಫೋಟೋ ಕೃಪೆ: ಕನ್ನಡಪ್ರಭ ದಿನಪತ್ರಿಕೆ)
ಕಳೆದ ಹತ್ತುದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಶ್ರೀ ಅಣ್ಣಾ ಹಜಾರೆ ಮತ್ತು ತಂಡದವರು ಉಪವಾಸ ಕೊನೆಗೊಳಿಸಿದ್ದಾರೆ. ಬಹುಮುಖ್ಯವಾದ ಮಾತೆಂದರೆ, ತಮ್ಮ ಹೋರಾಟದ ರೀತಿಯನ್ನು ಬದಲಿಸಿ ಜನಾಂದೋಲನದ ಜೊತೆಗೆ ರಾಜಕಾರಣದ ಪ್ರವೇಶದ ಬಗ್ಗೆಯೂ ಒಲವು ತೋರಿದ್ದಾರೆ. ಈ ಹೇಳಿಕೆ ಭ್ರಷ್ಟಾಚಾರ ವಿರೋಧಿಸಿ ಅಣ್ಣಾ ಹಜಾರೆ ತಂಡಕ್ಕೆ ಬೆಂಬಲ ನೀಡುತ್ತಿದ್ದ ದೇಶದ ಜನರಲ್ಲಿ ಭಿನ್ನ ರೀತಿಯ ಪ್ರತಿಕ್ರಿಯೆಗೆ ಕಾರಣವಾಗಿದೆ. ಅಣ್ಣಾ ಹಜಾರೆ ತಂಡದ ಮೇಲೆ ಭರವಸೆಯೇ ಕಳೆದುಹೋದಂತೆ, ರಾಜಕಾರಣಕ್ಕೆ ಬಂದು ಇವರೂ ಹಾಳಾಗುತ್ತಾರೆ ಎನ್ನುವ ನಂಬಿಕೆಯಿಂದಾಗಿ ಭ್ರಮನಿರಶನಗೊಂಡ ಜನರೂ ಕಾಣುತ್ತಿದ್ದಾರೆ.

ಈಗಿಟ್ಟಿರೋದೇ ಸರಿಯಾದ ಹೆಜ್ಜೆ!

ಹೌದೂ... ಅಣ್ಣಾ ತಂಡ ಈಗಿಟ್ಟಿರುವುದೇ ಸರಿಯಾದ ಹೆಜ್ಜೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ ಮತ್ತು ಒಳಿತನ್ನು ಹಾರೈಸುತ್ತೇವೆ. ಕಳೆದ ವರ್ಷ ನಡೆದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ನಾವು ಏನ್‌ಗುರುವಿನಲ್ಲಿ ಹೀಗೆ ಬರೆದಿದ್ದೆವು. ಆ ಮಾತು ಇಂದಿಗೂ ಹೊಂದುವ ಮಾತೇ!
ಅಣ್ಣಾ ಹೋರಾಟದ ಬಗ್ಗೆ!
ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?
ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡುಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ! 
ಅಣ್ಣಾ ಹಜಾರೆ ತಂಡಕ್ಕೆ ಭಾರತದ ವ್ಯವಸ್ಥೆಗಳನ್ನು ಸರಿಮಾಡಬೇಕೆಂಬ ಹುಮ್ಮಸ್ಸು/ ಕಾಳಜಿ ಇರುವುದನ್ನೂ ಮತ್ತು ಇಡೀ ತಂಡದ ಸದಸ್ಯರುಗಳು ಪ್ರಾಮಾಣಿಕರಾಗಿದ್ದಾರೆ ಎನ್ನುವುದನ್ನೂ ಒಪ್ಪುವುದಾದಲ್ಲಿ, ಇವರು ಶುರುಮಾಡುವ ರಾಜಕೀಯ ಪಕ್ಷವೂ ವಿಭಿನ್ನವಾಗಿರುತ್ತದೆ ಎನ್ನುವುದನ್ನೂ ಒಪ್ಪಬಹುದು. ಆದರೆ ಈ ರಾಜಕೀಯ ಪಕ್ಷವು ನಿಜಕ್ಕೂ ನಾಡಿಗೆ ಒಳಿತು ಮಾಡುತ್ತದೆಯೋ ಅಥವಾ ಇರುವ ಮೂರು ಮತ್ತೊಂದರಲ್ಲಿ ಒಂದಾಗಿ ಸೇರಿಬಿಡುತ್ತದೆಯೋ ಎನ್ನುವುದು ಗೊತ್ತಾಗಬೇಕೆಂದರೆ ಹಲವಾರು ವಿಷಯಗಳ ಬಗ್ಗೆ ಈ ಪಕ್ಷ ಯಾವ ನಿಲುವು ಹೊಂದಿರುತ್ತದೆ ಎನ್ನುವುದು ಮುಖ್ಯ.

ಉಳಿದವಕ್ಕಿಂತ ಭಿನ್ನ?

ಇವರ ಉದ್ದೇಶಿತ ರಾಜಕೀಯ ಪಕ್ಷವು ಭಾರತದ ಸ್ವರೂಪದ ಬಗ್ಗೆ ಎಂತಹ ನಿಲುವು ಹೊಂದಿದೆ? ಇಲ್ಲಿನ ಅನನ್ಯತೆ, ವೈವಿಧ್ಯತೆಗಳನ್ನು ಗೌರವಿಸಿ ಪೊರೆಯಲು ಮುಂದಾಗುವುದೇ? ಭಾರತವನ್ನು ಒಂದು ಒಕ್ಕೂಟವೆಂದು ಪರಿಗಣಿಸಿ ರಾಜ್ಯಗಳ ಹಕ್ಕುಗಳಿಗೆ ಮಾನ್ಯತೆ ನೀಡುವುದೇ? ಇದು ಅಧಿಕಾರ ವಿಕೇಂದ್ರೀಕರಣದ ಪರವೋ ಅಥವಾ ಇರುವ ಅಧಿಕಾರವೆಲ್ಲಾ ಕೇಂದ್ರದ ಕೈಲಿರುವುದರ ಪರವಾಗಿ ಇರುತ್ತದೋ? ಭಾರತದಲ್ಲಿ ಸರ್ಕಾರವೇ ಮುಂದೆ ನಿಂತು ನಡೆಸುತ್ತಿರುವ ಹಿಂದೀ ಹೇರಿಕೆಯ  ಪರವೋ ಇಲ್ಲಾ ವಿರುದ್ಧವೋ?... ಇವಲ್ಲಾ ವಿಷಯಗಳಲ್ಲಿ ಅಣ್ಣಾ ಹಜ಼ಾರೆ ತಂಡ ಯಾವ ನಿಲುವನ್ನು ತೆಗೆದುಕೊಳ್ಳುತ್ತದೆ ಎನ್ನುವುದು, ಇವರ ಪಕ್ಷ ಉಳಿದವುಗಳಿಗಿಂತಲೂ ಭಿನ್ನವೋ ಇಲ್ಲವೋ ಎನ್ನುವುದನ್ನು ತೀರ್ಮಾನಿಸುತ್ತದೆ. ಅಣ್ಣಾ ಹಜಾರೆಯವರ ಪಕ್ಷ ಭಿನ್ನವಾಗಿರಲಿ ಎಂಬುದೇ ನಮ್ಮ ಆಶಯ. ಇವರಿಗೆ ಒಳ್ಳೆಯದಾಗಲಿ.

ಬ್ಯಾಂಗಲೋರ್ ಬೆಂಗಳೂರು ಆಗಲು ಇಷ್ಟು ವರ್ಷಾ ಯಾಕೆ ಬೇಕಾಯ್ತು ಗೊತ್ತಾ?


ಸುಮಾರು ೨೦೦೬ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಹಕ್ಕೊತ್ತಾಯವನ್ನು ಮಂಡಿಸಿ, ಇಂಗ್ಲೀಶಿನಲ್ಲಿ ತಪ್ಪಾಗಿ ಬರೆಯಲಾಗುತ್ತಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮೊದಲಾದ ನಮ್ಮೂರ ಹೆಸರುಗಳನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಬೇಕೆಂಬ ಸಲಹೆಯನ್ನು ರಾಜ್ಯಸರ್ಕಾರದ ಮುಂದಿಟ್ಟಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂಸಿಂಗ್‍ರವರು ಇದಕ್ಕೆ ಶಾಸನಾತ್ಮಕವಾಗಿ ತಿದ್ದುಪಡಿಯುಂಟು ಮಾಡಲು ಮುಂದಾಗಿದ್ದರು. ಇದೀಗ ಅಂದಿಟ್ಟಿದ್ದ ಆ ಹೆಜ್ಜೆ ಮುಂದಿನ ತಿಂಗಳಿಂದ ಜಾರಿಯಾಗಲಿದೆ ಮತ್ತು ಇದುವರೆಗೂ ಅದಕ್ಕಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಮ್ಮಲ್ಲೂ ಇಲ್ಲಾ! ಆಳುವವರಲ್ಲೂ ಇಲ್ಲಾ!!

ನೀವು ಸುಮ್ಮನೆ ಗಮನಿಸಿ ನೋಡಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ತಮ್ಮ ಊರುಗಳ ಹೆಸರುಗಳನ್ನು ಬದಲಿಸಿದ್ದಾರೆ. ಕೊಲ್ಕೋತ್ತಾ, ಚೆನ್ನೈ, ತಿರುವನಂತಪುರಂ, ಮುಂಬೈ, ವಡೋದರ, ಇಂದೋರ್... ಹೀಗೆ ತಮ್ಮ ಊರಿನ ಹೆಸರುಗಳನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ.ಇತ್ತೀಚಿನ ಈ ಬದಲಾವಣೆಗಳಲ್ಲೆಲ್ಲಾ ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಮಾತ್ರಾ... ನಮ್ಮ ರಾಜ್ಯವೇ.  ಈ ವಿಳಂಬದ ಸಮಸ್ಯೆ ನಮ್ಮಲ್ಲಿರಲು ಕಾರಣವೇನು ಎಂದರೆ ಕಣ್ಣಿಗೆ ರಾಚುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ. ರಾಜ್ಯ ರಾಜಕಾರಣದ ಯಾವ ಪಕ್ಷಕ್ಕೂ ಕನ್ನಡ, ಕನ್ನಡಿಗ, ಕನ್ನಡನಾಡಿನ ಏಳಿಗೆಯ ಪರಮಗುರಿಯೇ ಸಿದ್ಧಾಂತವಾಗಿಲ್ಲದಿರುವುದು ಮತ್ತು ಅಂತಹ ರಾಜಕೀಯ ಶಕ್ತಿಯ ಅಗತ್ಯವನ್ನು ಕನ್ನಡಿಗರು ಇನ್ನೂ ಕಂಡುಕೊಂಡಿಲ್ಲದಿರುವುದು ಇಂಥವಕ್ಕೆಲ್ಲಾ ಪ್ರಮುಖ ಕಾರಣಗಳೆಂದರೆ ತಪ್ಪಾಗಲಾರದು. ನಮ್ಮ ರಾಜಕಾರಣಿಗಳಲ್ಲೂ, ಜನರಲ್ಲೂ "ಕನ್ನಡತನವೇ ನಮ್ಮ ಮೂಲಗುರುತು" ಎನ್ನುವ ಅರಿವು ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವಾಸ್ತವವಾಗಿ ರಾಜ್ಯಸರ್ಕಾರ ನಮ್ಮೂರ ಹೆಸರುಗಳನ್ನು ಬದಲಿಸಲು ೨೦೦೬ರಲ್ಲೇ ಪ್ರಯತ್ನ ಪಟ್ಟರೂ ಇದು ಜಾರಿಯಾಗಲು ವಿಳಂಬವಾಗುತ್ತಿದೆ. ಹೀಗೆ ಆರು ವರ್ಷ ವಿಳಂಬವಾಗಲು ಇದ್ದ ಕಾರಣ, ರಾಜ್ಯಸರ್ಕಾರದ ಈ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಒಂದೆರಡು ಅರ್ಜಿಗಳು. ಕೇವಲ ಒಬ್ಬಿಬ್ಬರು, ಒಂದೊಂದು ಕೇಸುಗಳ ಮೂಲಕ ಆರುಕೋಟಿ ಜನರ ರಾಜ್ಯಸರ್ಕಾರವನ್ನೇ ತಡೆಹಿಡಿಯಬಲ್ಲರು ಎನ್ನುವುದನ್ನು ಗಮನಿಸಬೇಕಾಗಿದೆ.

ಇದು ಬರೀ ಊರುಗಳ ಹೆಸರು ಬದಲಿಸುವಲ್ಲಿ ಎದುರಾದ ತೊಡರುಗಳಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಗಬೇಕೆಂದಾಗಲೂ ವಿಳಂಬವಾಗಿತ್ತು. ಅದಕ್ಕೂ ನಾವು ಹೋರಾಡಬೇಕಾಯ್ತು. ಕೊನೆಯಲ್ಲಿ ಗಾಂಧಿ ಎನ್ನುವ ಒಬ್ಬರು ದೂರದ ಚೆನ್ನೈನ ಹೈಕೋರ್ಟಿನಲ್ಲಿ ಹಾಕಿ ಕೂತ ಒಂದು ಕೇಸಿನ ಪರಿಣಾಮವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಸಿಗದಂತಾಯ್ತು! ಈ ಕೇಸಿನ ವಿಷಯದಲ್ಲೂ ರಾಜ್ಯಸರ್ಕಾರ ಹೇಗೆ ನಡೆದುಕೊಂಡಿತೆಂಬುದನ್ನು ಮೈಸೂರಿನ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ

ಅಂದರೆ ನಮ್ಮಲ್ಲಿ ತುರ್ತಾಗಿ ಆಗಬೇಕಾದ್ದು ಕನ್ನಡತನದ ಜಾಗೃತಿಯೇ ಆಗಿದೆ. ಕನ್ನಡತನವನ್ನು ಕಡೆಗಣಿಸಿ ರಾಷ್ಟ್ರೀಯತೆಯೆನ್ನುವುದು ಹುಸಿತನವೇ ಆಗಿದೆ. ಕನ್ನಡತನದಿಂದಲೇ ಕನ್ನಡಿಗರ ಭಾರತೀಯತೆ, ನಮ್ಮತನದ ಉಳಿವಿನಲ್ಲೇ ರಾಷ್ಟ್ರದ ಹಿತವಿರುವುದು ಎನ್ನುವುದನ್ನು ಅರಿಯದಿದ್ದಲ್ಲಿ ನಾವು ಹೀಗೇ ಅನುಭವಿಸುತ್ತಲೇ ಇರಬೇಕಾಗುತ್ತದೆ... ನಾಡೂ ಹೀಗೇ ಇರುತ್ತದೆ! ಅಲ್ವಾ ಗುರೂ?

ಭಾರತವು ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಲಿ!

(ಫೋಟೋ: http://www.goodlightscraps.com/republic-day.php)
ನಾಳೆ ಭಾರತದ ೬೩ನೇ ಗಣರಾಜ್ಯದಿನೋತ್ಸವ. ೧೯೫೦ರ ಜನವರಿ ೨೬ರಂದು ಸಂವಿಧಾನವು ಜಾರಿಯಾದ ದಿನವನ್ನು ಹೀಗೆ ಪ್ರತಿವರ್ಷ ಗಣರಾಜ್ಯದಿನವನ್ನಾಗಿ ಆಚರಿಸಲಾಗುತ್ತದೆ. ಗುಲಾಮಗಿರಿಯ ನೂರಾರು ವರ್ಷಗಳ ನಂತರ ದೊರೆತ ಬಿಡುಗಡೆಯ ಸಂದರ್ಭದಲ್ಲಿ, ನಮ್ಮ ದೇಶದಲ್ಲಿ ಎಂತಹ ಆಡಳಿತ ವ್ಯವಸ್ಥೆಯಿರಬೇಕು ಎನ್ನುವುದನ್ನು ನಾವೇ ತೀರ್ಮಾನಿಸಿ, ರೂಪಿಸಿ, ಒಪ್ಪಿಕೊಂಡ ದಿನ ಇದು. ಈ ಸಂದರ್ಭದಲ್ಲಿ ದೆಹಲಿಯಂತೆಯೇ ದೇಶದ ಎಲ್ಲೆಡೆ ನಡೆಯುವ ಪೆರೇಡುಗಳ ನಡುವೆ ನಾವೇ ಒಪ್ಪಿಕೊಂಡಿರುವ ಈ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಆಲೋಚಿಸುವುದು ಸೂಕ್ತವಾಗಿದೆ.

ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಬೇಕು!

ಭಾರತ ಸಂವಿಧಾನದ ಮೊದಲಮಾತಿನಲ್ಲೇ ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಲು ಬದ್ಧರಾಗುತ್ತೇವೆ ಎನ್ನುವರ್ಥದ ಸಾಲುಗಳಿವೆ. ಮುಂದೆ ಮೊದಲ ಭಾಗದಲ್ಲಿ UNION OF STATES, ಭಾರತವೊಂದು ರಾಜ್ಯಗಳ ಒಕ್ಕೂಟ ಎನ್ನಲಾಗಿದೆ. ನಾವು ಒಟ್ಟಾರೆಯಾಗಿ ಭಾರತದ ಸ್ವರೂಪವನ್ನು ನೋಡಿದರೆ ಇದರಲ್ಲಿ ರಾಜ್ಯಗಳು ಮತ್ತಷ್ಟು ಸ್ವಾಯತ್ತತೆಯನ್ನು ಹೊಂದಿರಬೇಕಾಗಿತ್ತೇನೋ ಅನ್ನಿಸದಿರದು. ಭಾರತದ ಸಂವಿಧಾನದಲ್ಲಿಯೇ ಆಡಳಿತಾತ್ಮಕವಾದ ವಿಷಯಗಳನ್ನು ಮೂರು ಪಟ್ಟಿ ಮಾಡಿ ರಾಜ್ಯಪಟ್ಟಿ, ಕೇಂದ್ರ ಪಟ್ಟಿ ಹಾಗೂ ಜಂಟಿ ಪಟ್ಟಿಗಳಾಗಿಸಲಾಗಿದೆ. ಇರುವ ೨೧೧ ಆಡಳಿತದ ವಿಷಯಗಳಲ್ಲಿ ಕೇವಲ ೬೬ ಮಾತ್ರಾ ರಾಜ್ಯಗಳ ಪಾಲಿಗಿವೆ. ಪ್ರಜಾಪ್ರಭುತ್ವದ ಅರ್ಥವೇ ಜನತೆ ತಮ್ಮನ್ನು ತಾವು ಆಳಿಕೊಳ್ಳುವುದು ಎಂದಾಗಿರುವಾಗ ಹೆಚ್ಚು ಹೆಚ್ಚು ಅಧಿಕಾರ ವಿಕೇಂದ್ರೀಕರಣವಾಗಬೇಕಾದ ಅಗತ್ಯವಿದೆ. ಕೇಂದ್ರಸರ್ಕಾರವು ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಮೊದಲಾದ ವಿಷಯಗಳಿಗೆ ತನ್ನ ವ್ಯಾಪ್ತಿಯನ್ನು ಸೀಮಿತಗೊಳಿಸಬೇಕಾದ ಅಗತ್ಯವಿದೆ. ಇದಷ್ಟೇ ಅಲ್ಲದೆ ಈ ದಿಕ್ಕಿನಲ್ಲಿ ಮೊದಲಹೆಜ್ಜೆಯಾಗಿ, ಇಡೀ ಭಾರತದ ಏಕತೆಗೇ ಕಳಂಕಪ್ರಾಯವಾಗಿರುವ ಹುಳುಕಿನ ಭಾಷಾನೀತಿಯನ್ನು ಕೈಬಿಡಬೇಕಾಗಿದೆ. ನಿಜವಾದ ಸಮಾನ ಗೌರವದ, ಸಮಾನ ಅವಕಾಶದ ಸರಿಯಾದ ಒಕ್ಕೂಟವೊಂದು ರೂಪುಗೊಳ್ಳಬೇಕಾದೆ. ಅಂದರೆ ಒಕ್ಕೂಟ ವ್ಯವಸ್ಥೆಯಿಂದ ಒಪ್ಪುಕೂಟ ವ್ಯವಸ್ಥೆಯಾಗುವತ್ತ ಭಾರತ ಸಾಗಬೇಕಿದೆ.

ಅರವತ್ಮೂರು ವರ್ಷಗಳ ಹಿಂದೆ ರೂಪಿಸಿ ಜಾರಿಗೆ ತಂದ ಸಂವಿಧಾನ ಮತ್ತು ಭಾರತದ ವ್ಯವಸ್ಥೆಗಳು ಪರಾಮರ್ಶೆಗೆ ಒಳಗಾಗಬೇಕಾಗಿದೆ. ಮತ್ತಷ್ಟು ಸಭ್ಯ, ನಾಗರೀಕ, ಪ್ರಜಾಪ್ರಭುತ್ವಗಳ ಕಡೆಗೆ ಭಾರತ ನಡೆಯಲು ಹಾಗೂ ಅದಕ್ಕಾಗಿ ಮಾಡಿಕೊಳ್ಳಬೇಕಾದ ಬದಲಾವಣೆಗಳು, ಸಾಗಬೇಕಾದ ದಾರಿಗಳ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ. ಭಾರತ ದೇಶವು,  ಒಂದು ಸರಿಯಾದ ಒಪ್ಪುಕೂಟವಾಗಲು ಇಂತಹದ್ದೊಂದು ನಡೆ ಅತ್ಯಗತ್ಯವಾಗಿದೆ.

ದಾರಿ ತಪ್ಪಿದ ಸಂದೇಶ

ಬೆಂಗಳೂರಿನ ನಗರ ಪಾಲಿಕೆಗೆ ಚುನಾವಣೆಯ ದಿನಗಳು ಹತ್ತಿರ ಬರುತ್ತಿವೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮತದಾರರಲ್ಲಿ ಈ ಚುನಾವಣೆಯ ಪ್ರಾಶಸ್ತ್ಯ ಮತ್ತು ಅದರಲ್ಲಿ ಮತದಾರರ ಮುಖ್ಯ ಪಾತ್ರದ ಬಗ್ಗೆ ಜನ್ರಲ್ಲಿ ಜಾಗೃತಿ ಮೂಡಿಸಲು ಇತ್ತೀಚೆಗೆ ಒಂದು ಕಾರ್ಯಕ್ರಮ ಜರುಗಿತು. ಮತದಾನ ಬಹಳ ಮುಖ್ಯ ವಿಚಾರ, ಅದರಲ್ಲಿ ಜನರ ಪಾತ್ರ ಅತಿ ಮುಖ್ಯ, ಇದನ್ನು ಜನರಿಗೆ ತಿಳಿ ಹೇಳಬೇಕು, ಎಲ್ಲಾ ಸರಿ. ಆದರೆ ಬೆಂಗಳೂರಿನ ಮತದಾರರಿಗೆ ಜಾಗೃತಿಯ ವಿಷಯ ಹಿಂದಿಯಲ್ಲಿ "ಜಾಗ್ತೇ ರಹೋ" ಎಂದು ಹಿಂದಿ ಭಾಷೇಲಿ ಹೇಳಿದರೆ ಕೆಲ್ಸ ಆಗತ್ತಾ ಗುರು?

ಈ ಚುನಾವಣೆ ಬೆಂಗಳೂರಿನ ಪಾಲಿಕೆಗೇ ತಾನೆ?

ಅಲ್ಲಾ, ಈ ಚುನಾವಣೆ ಬೆಂಗಳೂರಿನ ಮಹಾನಗರ ಪಾಲಿಕೆಗೋ, ಅಥವಾ ಭೂಪಾಲ ನಗರಕ್ಕೋ? ಇದರ ಆಯೋಜಕರು ಈ ಪ್ರಶ್ನೆಗೆ ಉತ್ತರ ಕಂಡುಕೊಂಡ ಬಳಿಕ ಕಾರ್ಯಕ್ರಮ ನಡೆಸಿದ್ದರೆ ಚೆನ್ನಾಗಿರ್ತಿತ್ತು. ಚುನಾವಣೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು, ತಮ್ಮ ಮತ ಹಾಕಬೇಕು, ಚುನಾವಣೆಯನ್ನು ಯಶಸ್ವಿಗೊಳಿಸಬೇಕು, ಸರಿಯಾದ ನಗರಸಭಾ ಸದಸ್ಯರನ್ನು ಆಯ್ಕೆ ಮಾಡಬೇಕು, ಸರಿ. ಆದರೆ ಈ ಎಲ್ಲಾ ಸಂದೇಶಗಳನ್ನು ಒಂದೆರಡು ಪದಗಳಲ್ಲಿ ಜನರಿಗೆ ಹೇಳಲು ಹೊರಟು, ಬೆಂಗಳೂರಿನ ಈ ಚುನಾವಣೆಗೆ ಏನೇನೂ ಸಂಬಂಧವಿರದ ಹಿಂದಿ ಭಾಷೆಯನ್ನು ಬಳಸಿದರೆ ಹೇಗೆ?! ಇಲ್ಲಿ ಮತದಾರರಿಗೆ "ಎದ್ದೇಳು ಮತದಾರ" ಎಂದು ಹೇಳಿದರೆ ಕಾರ್ಯಕ್ರಮ ನಡೆಸಲು ಅಸಾಧ್ಯವಾಗುತ್ತಿತ್ತೇ? ಬೆಂಗಳೂರಿನ ಜನರಿಗೆ ಸಂದೇಶ ರವಾನಿಸಲು ಯಾವ ಭಾಷೆ ಸರಿಯಾದ್ದು ಎಂದೇ ಅರಿಯದ ಇವರು ಚುನಾವಣೆಯಂತ ಮುಖ್ಯ ಸಂದೇಶ ಕೊಡಲಾದೀತೇ?

ಆದೀತು.. ಇನ್ನೂ ಕಾಲ ಮಿಂಚಿಲ್ಲ. ಚುನಾವಣೆಗೆ ಮುನ್ನ ಇರುವ ಸಮಯದಲ್ಲಿ ಈ ಕಾರ್ಯಕ್ರಮದ ಹೆಸರು, ಅದರೊಳಗೆ ಹೇಳಬೇಕೆಂದಿರುವ ಸಂದೇಶಗಳನ್ನೆಲ್ಲಾ ಬೆಂಗಳೂರಿನ ಜನರಿಗೆ ಅರ್ಥವಾಗುವಂತೆ ಲಕ್ಷಣವಾಗಿ ಕನ್ನಡದಲ್ಲಿ ಹೇಳಿ ಜನರನ್ನು ತಲುಪಬಹುದು, ಸಂದೇಶವನ್ನು ಸರಿಯಾಗಿ ತಲುಪಿಸಬಹುದು. ಆಗ ನೋಡಿ, ನಿಜಕ್ಕೂ ಚುನಾವಣೆಯೆಂದರೆ ನಿದ್ದೆ ಮಾಡುವವರೂ ಎದ್ದು ಬಂದು ಮತ ಹಾಕ್ಯಾರು!

ಪ್ರಾದೇಶಿಕ ಪಕ್ಷವೇ ಪರಿಹಾರ!

ಚುನಾವಣೆ ಕಾಲದಲ್ಲಿ ನಾನಾ ತರದ ಸಮೀಕ್ಷೆ ನಡೆಯೋದು ಸಹಜ. ಇತ್ತೀಚಿನ ದಿನಗಳಲ್ಲೇ ಸ್ವಲ್ಪ ಮಹತ್ವ ಪಡ್ಕೊಳೋ ಅಂಥಾ ಒಂದು ವಿಷಯ ಕನ್ನಡಪ್ರಭದೋರು ಪ್ರಕಟಿಸಿದ ಸಮೀಕ್ಷೇಲಿ ಹೊರಬಂದಿದೆ. ಕರ್ನಾಟಕಕ್ಕೆ ಪ್ರಾದೇಶಿಕ ಪಕ್ಷ ಅಗತ್ಯವಿದೆಯೇ ಇಲ್ಲವೇ ಅನ್ನೋದಕ್ಕೆ ಜನ ತಮ್ಮ ಅಭಿಪ್ರಾಯ ತೋರ್ಸಿರೋದನ್ನು ನೋಡುದ್ರೆ ನಮ್ಮ ನಾಡಲ್ಲೊಂದು ಯೋಗ್ಯವಾದ ಪ್ರಾದೇಶಿಕ ಪಕ್ಷ ಹುಟ್ಟೋಕೆ ಕಾಲ ಪಕ್ವವಾಗಿದೆ ಅನ್ನುಸ್ತಿದೆ ಗುರು. ಅಂಥಾ ಒಂದು ಪಕ್ಷಾ ಹುಟ್ಕೊಂಡ್ರೆ ಅದು ಜನಮನ ಗೆಲ್ಲೋದು ಖಚಿತಾ ಗುರು!

ಕನ್ನಡಪ್ರಭದೋರು ಪ್ರಕಟಿಸಿದ ಸಮೀಕ್ಷೆಯ ಸಾರ...

ಮೊದಲ ಹಂತದ ಚುನಾವಣೆ ನಡೆದ ಪ್ರದೇಶಗಳಲ್ಲಿ ನಡೆಸಿದ ಸಮೀಕ್ಷೇಲಿ ಬೆಂಗಳೂರು ಬಿಟ್ಟು ಉಳಿದ ಜಿಲ್ಲೆಗಳ ಜನರಲ್ಲಿ ಅರ್ಧಕ್ಕರ್ಧ ಭಾಗ ಅಂದ್ರೆ ಶೇಕಡಾ. ೫೦ ರಷ್ಟು ಜನ ಅಂಥಾ ಪಕ್ಷದ ಅಗತ್ಯ ಇದೆ ಅಂದ್ರಂತೆ. ಒಟ್ಟಾರೆ ಶೇಕಡಾ ೩೬ ಜನತೆ ಇಂಥಾ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ ಅಂತ ಪ್ರತಿಪಾದನೆ ಮಾಡಿದಾರೆ. ಎರಡನೇ ಹಂತದ ಚುನಾವಣೆ ನಡೆಯೋ ಪ್ರದೇಶಗಳಲ್ಲಿರೋ ಜನರಲ್ಲಿ ಶೇಕಡಾ ೩೧ರಷ್ಟು ಮಂದಿ ಪ್ರಾದೇಶಿಕ ಪಕ್ಷಾ ಬೇಕು ಅಂದಿದಾರಂತೆ.

ಬರೀ ಮೂವತ್ತೈದು ಮಂದಿ ಅನ್ನೋ ಹಾಗಿಲ್ಲ!

ಇವತ್ತಿನ ಪರಿಸ್ಥಿತಿ ನೋಡಿ. ಭಾರೀ ಇತಿಹಾಸ ಇರೋ ರಾಷ್ಟ್ರೀಯ ಪಕ್ಷಗಳು ತಮ್ಮವು ಅನ್ನೋ ಕಾಂಗ್ರೆಸ್ಸು, ಬಿಜೆಪಿ ಒಂದು ಕಡೆ... ಅನುಕೂಲಕ್ ತಕ್ಕ ಹಾಗೆ ಒಂದ್ಸರ್ತಿ ರಾಷ್ಟ್ರೀಯ ಅಂತ್ಲೂ ಮತ್ತೊಮ್ಮೆ ಪ್ರಾದೇಶಿಕ ಅಂತ್ಲೂ ಅಂತಿರೋ ಜಾತ್ಯಾತೀತ ಜನತಾ ದಳದೋರು ಇನ್ನೊಂದು ಕಡೆ, ರಾಷ್ಟ್ರೀಯ ಪಕ್ಷಗಳು ಅನ್ನೋ ಭ್ರಮೇಲಿ ಉತ್ತರಪ್ರದೇಶದ್ದೋ ಮತ್ತೊಂದು ಪ್ರದೇಶದ್ದೋ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿಗಳಾಗಿರೋ ಇನ್ನೊಂದೆರಡು ಪಕ್ಷಗಳು ಮೂರನೇ ಕಡೆ... ಇದೆಲ್ಲಾ ಒಂದು ತೂಕವಾದ್ರೆ ಒಂದೆರಡು ಸೀಟುಗಳ ವಾಟಾಳ್ ಪಕ್ಷವೋ, ಬೇರು ಮಟ್ಟದ ಸಂಘಟನೆಯ ಕೊರತೆ ಇರೋ ಚಂಪಾ ಅವರ ಪಕ್ಷವೋ... ಹಿಂದೆಲ್ಲಾ ಸಿದ್ಧತೆ ಸರಿಯಿಲ್ಲದೆ, ತಳಹದಿ ಭದ್ರವಿಲ್ಲದೆ ನೆಲಕಚ್ಚಿದ ಇನ್ನಿತರ ಕನ್ನಡದ ಹೆಸರಿನ ಪಕ್ಷಗಳೋ... ಒಟ್ನಲ್ಲಿ ಕರ್ನಾಟಕದ ಜನತೆ ಮುಂದೆ, ಪ್ರಾದೇಶಿಕ ಪಕ್ಷ ಅನ್ನೋದು ಬಲಹೀನವಾದ ಬಡಬಡಿಕೆ ಥರ ಕಂಡಿದ್ದು, ಪರಿಣಾಮಕಾರಿ ರಾಜಕೀಯ ಶಕ್ತಿಯೊಂದು ಇರಕ್ಕೆ ಸಾಧ್ಯಾ ಅನ್ನೋ ಭರವಸೆಯ ಸಣ್ಣ ಬೆಳಕಿನ ಗೆರೆಯೂ ಕಾಣದೆ ಇರೋ ಕಗ್ಗತ್ತಲ ಸ್ಥಿತಿ ಇದೆ. ಇಂಥಾ ಸನ್ನಿವೇಶದಲ್ಲಿ ಈ ಮೂವತ್ತೈದರ ಆಸುಪಾಸಿನ ಅಂಕಿ ಅಂಶ ಕನ್ನಡಿಗರದ್ದೇ ಪ್ರಾದೇಶಿಕ ಪಕ್ಷ ಬೇಕು ಅನ್ನೋರ್ಗೆ ಭಾರಿ ಉತ್ಸಾಹದಾಯಕವಾಗಿದೆ ಗುರು!

ಕಾಲ ಕೂಡಿ ಬಂದಿದೆ!

ನಾಡು ನುಡಿಯ ಬಗ್ಗೆ ಸ್ಪಷ್ಟವಾದ ನೀತಿ ನಿಲುವು ಹೊಂದಿದ್ದು ಗಟ್ಟಿ ಸಿದ್ಧಾಂತದ ಬೆನ್ನೆಲುಬು ಇರೋಂಥಾ, ಕನ್ನಡ ನಾಡಿನ ಹಳ್ಳಿ ಹಳ್ಳಿಗಳಿಗೂ ಹಬ್ಬಿಕೊಂಡಿದ್ದು ನಾಡು ನುಡಿಯ ರಕ್ಷಣೆಗೆ ರಾಜಿರಹಿತವಾಗಿ ದುಡಿಯೋಂಥಾ ಒಂದು ಕನ್ನಡಿಗರ ಪಕ್ಷ ಹುಟ್ಟಕ್ಕೆ ಇದು ಸಕಾಲ! ಇಂಥಾ ಪಕ್ಷ ಒಂದು ಇದೆ, ಇವರಿಗೆ ಸ್ಪಷ್ಟವಾದ ನೀತಿ ನಿಲುವು ಇದೆ, ನಾಡು ಕಟ್ಟೋ ಕ್ಷಮತೆ ಇದೆ ಅನ್ನೋದು ಕನ್ನಡಿಗರಿಗೆ ಮನವರಿಕೆ ಆಗಿಬಿಟ್ರೆ ಈ ಮೂವತ್ತೈದು ಎಂಬತ್ತೈದು ಆಗೋದ್ರಲ್ಲಿ ಯಾವ ಅನುಮಾನವೂ ಇಲ್ಲಾ! ಕನ್ನಡಿಗರಲ್ಲಿ ಕನ್ನಡತನ ಜಾಗೃತಗೊಂಡರೆ ಇಂಥಾ ಒಂದು ರಾಜಕೀಯ ಪಕ್ಷ ಇಂದಲ್ಲಾ ನಾಳೆ ಹುಟ್ಟಿಕೊಳ್ಳೋದು ಖಂಡಿತಾ ಗುರು! ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳಿಗೇ ಹುಟ್ಟು ಕೊಟ್ಟಿರೋ ಕನ್ನಡಮ್ಮ ಇಂಥಾ ಒಂದು ಸ್ವಾಭಿಮಾನದ ಸಾಮ್ರಾಜ್ಯದ ಮರುಹುಟ್ಟಿಗೆ ಕಾರಣಳಾಗದೆ ಇರೋ ಅಷ್ಟು ಬಂಜೆ ಅಲ್ಲ ಗುರು!

ನಾಟಕ ನಡೆದೈತೆ! ಓಟಿನ ಬೇಟೆಗೆ ನಾಟಕ ಸಾಗೈತೆ!

ಕರ್ನಾಟಕ ರಾಜ್ಯ ಹುಟ್ಟಿ ಐವತ್ತು ವರ್ಷ ಆಗಿದ್ರೂ, ಅವತ್ತಿಂದ ಇವತ್ತಿನ ತನಕಾ ಹತ್ತಾರು ಚುನಾವಣೆ ನಡ್ದು, ನೂರಾರು ನಾಯಕ್ರುಗಳು, ನಾಕಾರು ರಾಜಕೀಯ ಪಕ್ಷಗಳು ದರ್ಬಾರು ನಡ್ಸುದ್ರೂ ನಮ್ಮ ಹಣೆಬರಹಾನ ಸುಧಾರಿಸಕ್ಕೆ ಇವುಗಳಿಂದ ಇನ್ನೂ ಆಗಿಲ್ಲ. ಕನ್ನಡ-ಕನ್ನಡಿಗ-ಕರ್ನಾಟಕ ಅನ್ನೋದನ್ನು ಕೇಂದ್ರವಾಗಿಸಿಕೊಂಡ ರಾಜಕಾರಣ ನಡೆದಿಲ್ಲ. ಹೋಗ್ಲಿ, ಈ ಪಕ್ಷಗಳೇ ಹೇಳ್ಕೊಳೋ ಹಾಗೆ ಬಡತನ ನಿರ್ಮೂಲನ ಮಾಡಿ ಜನ್ರುನ್ನ ಉದ್ಧಾರ ಮಾಡೊ ಯೋಜನೆಗಳೂ ಇವುಗಳ ಬತ್ತಳಿಕೆಯಿಂದ ಹೊರಗ್ ಬರ್ತಾ ಇಲ್ಲ. ಈಗ ಮತ್ತೊಂದು ಚುನಾವಣೆಯ ಹೊಸಿಲಲ್ಲಿ ಬಂದು ನಿಂತಿದೀವಿ. ಮತದಾನ ಮಾಡೋ ಮುನ್ನ ಒಂದು ಚೂರು ಆ ಬಗ್ಗೆ ಮಾತಾಡೋಣ.

ಪ್ರಣಾಳಿಕೆಯೆಂಬ ಟೊಳ್ಳು ಭರವಸೆಗಳು!

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್, ಭಾಜಪ ಮತ್ತು ಜನತಾದಳಗಳು ಮುಖ್ಯಸ್ಪರ್ಧಿಗಳಾಗಿದ್ದು, ಇವರಲ್ಲೇ ಯಾರಾದರೊಬ್ರು ಅಥ್ವಾ ಇಬ್ರು ನಾಳೆ ನಮ್ಮುನ್ ಆಳೋ ಸಾಧ್ಯತೆಗಳು ಹೆಚ್ಚು. ಈ ನಮ್ಮ ಭಾವಿ ಸರ್ಕಾರದೋರು ನಮ್ಮ ನಾಡಿನ ಏಳಿಗೆ ಬಗ್ಗೆ ಅದೇನು ಚಿಂತನೆ ಮಾಡ್ತಿದಾರೆ, ಅದೇನು ಭರವಸೆ ಕೊಡ್ತಿದಾರೆ ಅಂತ ನೋಡುದ್ರೆ ಎಷ್ಟು ಖಾಲಿತನ ಇವುಗಳಲ್ಲಿ ತುಂಬಿ ತುಳುಕಾಡ್ತಿದೆ ಅನ್ನೋದು ಅರ್ಥ ಆಗುತ್ತೆ ಗುರು! ಈ ಪಕ್ಷಗಳು [ಬಿಜೆಪಿ, ಕಾಂಗ್ರೆಸ್, ಜೆಡಿಎಸ್] ನೀಡಿರೋ ಭರವಸೆಗಳನ್ನು ಒಟ್ಟಾರೆ ನೋಡೋಣ ಬನ್ನಿ!

ನಾಡುನುಡಿ ಕಾಪಾಡೋ ಬಗ್ಗೆ!

ಮೂರೂ ಪಕ್ಷಗಳೋರು ಈ ಬಗ್ಗೆ ಏನು ನಿಲುವು ಇಟ್ಕೊಂಡಿದಾರೆ ಅಂತ ಕೇಳಣಾ ಅಂದ್ರೆ ಇವುಗಳಲ್ಲಿ ಒಂದಾದ್ರೂ ಮಹಾಜನ್ ವರದಿ, ನಂಜುಂಡಪ್ಪ ವರದಿ, ಸರೋಜಿನಿ ಮಹಿಷಿ ವರದಿಗಳ ಜಾರಿ ಬಗ್ಗೆ ಸ್ಪಷ್ಟವಾಗಿ ಮಾತಾಡಿಲ್ಲ. ಅಂತರ ರಾಜ್ಯ ನದಿ ನೀರು ಹಂಚಿಕೆಗೆ ರಾಷ್ಟ್ರೀಯ ಜಲ ನೀತಿ, ಅನಿಯಂತ್ರಿತ ವಲಸೆ ತಡೆ ಕಾಯ್ದೆಗಳನ್ನು ಮಾಡಲು ಕಾರ್ಯೋನ್ಮುಖರಾಗೋ ಬಗ್ಗೆ ಉಸಿರೆತ್ತಿಲ್ಲ.

ನಾಡಿನ ಏಳೆಗೆ ಬಗ್ಗೆ?

ಬಡತನದ ರೇಖೆಯನ್ನು ನಿರ್ಧರಿಸೋಕ್ಕೆ ಇರೋ ಆರ್ಥಿಕ ಮಟ್ಟವನ್ನು ಹೆಚ್ಚಿಸಿ ಇನ್ನಷ್ಟು ಜನರನ್ನು ಅದರೊಳ್ಗೆ ತರ್ತೀವಿ ಅಂತಾರೇ ಹೊರತು ಬಡತನದ ರೇಖೆಗಿಂತ ಹೇಗೆ ನಿಮ್ಮುನ್ ಮೇಲೆತ್ತುತ್ತೀವಿ ಅನ್ನಲ್ಲ. ಒಂದು ವರ್ಷ ಕಾಲ ನಿರುದ್ಯೋಗ ಭತ್ಯೆ ಕೊಡ್ತೀವಿ ಅಂತಾರೇ ಹೊರತು ನಿಮಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡ್ತೀವಿ ಅನ್ನಲ್ಲ. ಎರಡು ರೂಪಾಯಿಗೆ ಅಕ್ಕಿ ಕೊಡ್ತೀವಿ ಅಂತಾರೇ ಹೊರತು ಇಪ್ಪತ್ತು ರೂಪಾಯಿ ಅಕ್ಕಿಯನ್ನು ಕೊಳ್ಳಲು ನಿಮ್ಮನ್ನು ಶಕ್ತರನ್ನಾಗಿ ಮಾಡ್ತೀವಿ ಅನ್ನಲ್ಲ. ಸ್ವಯಂ ಉದ್ಯೋಗದ ಬಗ್ಗೆ ಮಾತನ್ನಾಡಿದ್ರೂ ಕೂಡಾ ನಮ್ಮ ನಾಡಿನಲ್ಲಿ ತಲೆ ಎತ್ತುತ್ತಿರುವ ಉದ್ದಿಮೆಗಳಲ್ಲಿ ಕನ್ನಡದವರಿಗೆ ಉದ್ಯೋಗ ಖಾತ್ರಿ ಕೊಡೋ ಬಗ್ಗೆ ಮಾತಾಡಲ್ಲ. ರೈತರಿಗೆ ಉಚಿತ ವಿದ್ಯುತ್ ಕೊಡ್ತೀವಿ ಅಂತಾರೆ ಹೊರತು ಅದರ ಸಬ್ಸಿಡಿ ದರವನ್ನು ಯಾರ ತಲೆ ಮೇಲೆ ಹಾಕ್ತೀವಿ ಅನ್ನಲ್ಲ. ರೈತರ ಬೆಳೆಗೆ ಮಾರುಕಟ್ಟೆ, ಸರಿಯಾದ ಬೆಲೆ ಸಿಗಲು ಬೇಕಾಗೋ ವ್ಯವಸ್ಥೆ, ಕೃಷಿಯಲ್ಲಿ ಉತ್ತಮ ಪದ್ದತಿಯ ತರಬೇತಿಗಳ ಮಾತಾಡಲ್ಲ. ಐವತ್ತು ಸಾವಿರ ಕೋಟಿ ಚೆಲ್ಲಿ ಬೆಂಗಳೂರು ನಗರಾನ ಮತ್ತಷ್ಟು ಬೆಳಸ್ತೀವಿ ಅಂತಾರೇ ಹೊರತು ಬೆಂಗಳೂರಿನಂತಹ ಇನ್ನೂ ನಾಕಾರು ನಗರ ಕಟ್ತೀವಿ ಅನ್ನಲ್ಲ. ಬಣ್ಣದ ಟಿವಿಯನ್ನು ಮನೆ ಮನೆಗೆ ತಲುಪುಸ್ತೀವಿ ಅಂತಾರೇ ಹೊರತು ಅಂಥಾ ಟಿವಿಯನ್ನು ನೀವೆ ಕೊಂಡುಕೊಳ್ಳುವಷ್ಟು ಆರ್ಥಿಕ ಸಬಲತೆಯನ್ನು ತಂದುಕೊಡ್ತೀವಿ ಅನ್ನಲ್ಲ. ಹಸಿದಿರೋನಿಗೆ ಅನ್ನ ಕೊಡಬೇಕು ಅನ್ನೋ ನೆಪ ಒಡ್ಡಿ ಅಕ್ಕಿ, ಟಿವಿ, ಬಿಟ್ಟಿ ಕರೆಂಟು, ಸಬ್ಸಿಡಿ ಅಂತಾ ಕೊಡೋಕೆ ಮುಂದಾಗೋರು ದೂರಗಾಮಿ ಯೋಜನೆಗಳ್ನೂ ಹೊಂದಿರಬೇಕಲ್ವಾ? ಹಸಿದವನಿಗೆ ಆ ಕ್ಷಣಕ್ಕೆ ಊಟ ಹಾಕುದ್ರೆ ಮಾತ್ರಾ ಸಾಲ್ದು, ತನ್ನ ಅನ್ನ ತಾನೇ ಗಳುಸ್ಕೊಳೋ ದಾರೀನೂ ತೋರಿಸ್ಬೇಕು ಗುರು!

ನಿಮ್ಮ ಮತ ಯಾರಿಗೆ?

ದುರದೃಷ್ಟವಶಾತ್ ಇಂದಿನ ಚುನಾವಣೆಯಲ್ಲಿ ನಾಡು ನುಡಿಯ ಏಳಿಗೆಯ ಬಗ್ಗೆ ಕಾಳಜಿ, ಕಳಕಳಿ, ಯೋಜನೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗುಳ್ಳ ಯಾವ ಪಕ್ಷವೂ ಕಾಣ್ತಿಲ್ಲ. ಹಾಗಾದ್ರೆ ಯಾರಿಗೆ ನಮ್ಮ ಮತ ನೀಡೋಣ? ಪಕ್ಷಗಳ ಹಂಗಿಲ್ಲದೆ ಯಾವ ಅಭ್ಯರ್ಥಿ ಕನ್ನಡ-ಕನ್ನಡಿಗ-ಕರ್ನಾಟಕಗಳ ಪರವಾದ ನಿಲುವುಗಳನ್ನು ಹೊಂದಿರ್ತಾರೋ ಅವರನ್ನು ಆರಿಸೋಣ. ಯಾರು ನಾಡು ನುಡಿಗಳ ಪರವಾಗಿ ವಿಧಾನ ಸಭೆಯಲ್ಲಿ ದನಿ ಎತ್ತುತ್ತಾರೋ ಅವರನ್ನು ಆರಿಸೋಣ. ಉತ್ತಮ ಆಡಳಿತಗಾರನಾಗಿರುವುದರ ಜೊತೆಯಲ್ಲಿ ಕನ್ನಡತನವನ್ನೂ ಹೊಂದಿರುವವರನ್ನು ಆರಿಸೋಣ. ಇಲ್ಲದಿದ್ದರೆ ಬೇಲಿ ಹಾಕದೆ ಹಣ್ಣಿನ ತೋಟ ಬೆಳಿಸಿದಂತಾಗುತ್ತೆ. ನಮ್ಮ ಜನಗಳ ಪಾಲಾಗಬೇಕಾದ ಕೆಲಸಗಳು, ಗುತ್ತಿಗೆಗಳು, ಸವಲತ್ತುಗಳು ಪರರ ಪಾಲಾಗುತ್ತೆ. ಮತ್ತೆ ನಾಡು ನುಡಿ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸ್ತಿಲ್ಲಾ ಅಂತಾ ಸಂಕಟ ಬಂದಾಗಲೆಲ್ಲಾ ನಾವು ಚಡಪಡಿಸಿ ಕೊರಗಬೇಕಾಗುತ್ತದೆ. ಏನಂತೀರಾ ಗುರು!

ಮುಂದಿನ ಸೋನಿಯಾಬಾದಿನಲ್ಲಿ ಇಂದು ರಾಜೀವ್ ವಿಮಾನ ನಿಲ್ದಾಣ!

ಹೈದರಾಬಾದಿನ ಹೊಸ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜೀವ್ ಗಾಂಧಿಯವರ ಹೆಸರನ್ನು ಇಟ್ಟಿದಾರೆ, ಗುರು (IBNLIVE ನಲ್ಲಿ ಚಿತ್ರ ನೋಡಿ). ಇದಕ್ಕೆ ತೆಲುಗರ ಆರಾಧ್ಯದೈವವಾದ ನಂ.ತಾ.ರಾಮರಾಯರ (ಎನ್ಟಿಆರ್) ಹೆಸರು ಇಡಬೇಕು ಅಂತಾ ತೆಲುಗುದೇಶಂ ಪಕ್ಷ ಪ್ರತಿಭಟನೆಯನ್ನೂ ಮಾಡಿದೆ. ಒಂದು ಕಾಲದಲ್ಲಿ ಕೇಂದ್ರದಲ್ಲಿ ಕುಳಿತು ಆಡಳಿತ ಮಾಡಿದ ರಾಜೀವ್ ಗಾಂಧಿಯವರ ಹೆಸರನ್ನು ಈ ನಿಲ್ದಾಣಕ್ಕೆ ಇಟ್ಟಿರುವುದು ಖಂಡಿತ ಸರಿಯಲ್ಲ ಗುರು!
ಯಾವ ಹೆಸರಿಡೋದು ಸರಿ?
ಒಂದು ಪ್ರದೇಶದ ವಿಶೇಷತೆಯನ್ನು ಸೂಚಿಸೋ ಹೆಸರನ್ನು ಆ ಪ್ರದೇಶದ ವಿಮಾನ ನಿಲ್ದಾಣಕ್ಕೆ, ಆಟದ ಮೈದಾನಕ್ಕೆ, ಅಣೆಕಟ್ಟೆಗೆ, ಊರಿಗೆ, ಕೇರಿಗೆ ಇಡಬೇಕು ಅನ್ನೋದು ಸರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಒಂದು ಪ್ರದೇಶದ ಜನರ ಬಳೆಕೇಲಿ ಇರೋ, ಅವರ ಭಾಷೇಲಿರೋ, ಅವರಿಗೆ ಸಂಬಂಧಪಟ್ಟ ಹೆಸರನ್ನೇ ಇಡೋದ್ರ ಮೂಲಕ ಆ ಜನಗಳಿಗೆ ಅಭಿಮಾನ ಮೂಡಿಸುವುದರ ಜೊತೆಗೆ ಹೊರಗಿನ ಜನರಿಗೆ ಆ ಪ್ರದೇಶದ ಹಿರಿಮೆಯ ಪರಿಚಯ ಮಾಡಿಕೊಟ್ಟ ಹಾಗೂ ಆಗುತ್ತೆ. ನಮ್ಮ ಊರಿನ ಬಗ್ಗೆ, ನಮ್ಮವರ ಬಗ್ಗೆ, ನಮ್ಮತನದ ಬಗ್ಗೆ ಹೇಳಿಕೊಳ್ಳಕ್ಕೆ ನಮಗೆ ಹೆಮ್ಮೆ ಆಗಲ್ವಾ? ಗುರು. ಇಂಥಾ ಒಂದು ಅವಕಾಶದಿಂದ ನಮ್ಮನ್ನು ದೂರ ಮಾಡೋದು ಸರೀನಾ ಗುರು? ಇನ್ನು ಇದಕ್ಕೆಲ್ಲಾ ಇಲ್ಲಿನವರ ಹೆಸರು ಬೇಡಾ ದಿಲ್ಲಿಯೋರ ಹೆಸ್ರನ್ನೇ ಇಡ್ತೀವಿ ಅನ್ನೋದಾದ್ರೆ ಈ ಪ್ರದೇಶದಿಂದ ಬಂದು ದಿಲ್ಲಿ ಮಟ್ಟಕ್ಕೆ ಬೆಳೆದೋರ ಹೆಸರಿಡೋದು ಸೂಕ್ತ ಅಲ್ವಾ? ಅದೂ ಅಲ್ದೆ ಎಲ್ಲದಕ್ಕೂ ರಾಷ್ಟ್ರನಾಯಕರ ಹೆಸರನ್ನೇ ಇಡ್ತೀವಿ ಅನ್ನೋದಾದ್ರೆ ನಮ್ಮ ನಾಡಿನ ಹಿರಿಮೆ, ಸಂಸ್ಕೃತಿ, ಹಿರಿಯರ ಹೆಸರನ್ನು ಬೇರೆ ಯಾವ ನಾಡಲ್ಲಾದ್ರೂ ಇಡಕ್ ಸಾಧ್ಯಾನಾ? ಅಂದ್ರೆ ಕೆಂಪೇಗೌಡರ ಹೆಸರನ್ನು ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡ್ತಾರ? ಅಷ್ಟಕ್ಕೂ ಈಗ ಹೈದರಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಂಧ್ರದವರಾದ ಎನ್.ಟಿ.ರಾಮರಾಯರ ಹೆಸರನ್ನೋ, ರಾಷ್ಟ್ರನಾಯಕರಾಗಿದ್ದ ಪಿ.ವಿ.ನರಸಿಂಹರಾಯರ ಹೆಸರನ್ನೋ, ಆಂಧ್ರಪ್ರದೇಶ ಹುಟ್ಟಲು ಕಾರಣರಾದ ಪೊಟ್ಟಿ ಶ್ರೀರಾಮಲು ಅವರ ಹೆಸರನ್ನು ಇಡಬಹುದಿತ್ತು? ದುರಾದೃಷ್ಟ ಹೀಗೆ ಮುಂದುವರಿದರೆ ನಿನ್ನೆಯ ಭಾಗ್ಯನಗರಿ ಇಂದು ಹೈದರಾಬಾದ್ ಆದಂತೆ ನಾಳೆ ಸೋನಿಯಾಬಾದ್ ಆದ್ರೂ ಅಚ್ಚರಿಯಲ್ಲ.
ಭಾರತದ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇರೋದನ್ನ ಮರೀಬಾರ್ದು ಗುರು. ಇಡೀ ಭಾರತದ ತುಂಬ ದಿಲ್ಲಿ ದೊರೆಗಳ ಹೆಸರನ್ನೇ ಇಟ್ಕೊಂಡು ಹೋಗ್ತೀವಿ, ಆ ಮೂಲಕ ಏಕತೆಯನ್ನು ಸಾಧಿಸ್ತೀವಿ ಅಂದುಕೊಳ್ಳೋದು ಮೂರ್ಖತನದ ಪರಮಾವಧಿ.
ಕರ್ನಾಟಕದಲ್ಲೂ ಇದೆ ಈ ರೋಗ!
ಆಂಧ್ರಕ್ಕೇ ಸೀಮಿತವಲ್ಲದ ಈ ರೋಗ ನಮ್ಮೂರುಗಳಲ್ಲೂ ನಮ್ಮ ಮಹಾನ್ ರಾಷ್ಟ್ರೀಯಪಕ್ಷಗಳ ಕಾರಣದಿಂದಾಗಿ ಸಕತ್ತಾಗೆ ಬೇರೂರಿದೆ ಗುರು. ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯದ ಹೆಸರನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೆಕಟ್ಟೆ ಅಂತ ಇಟ್ಟಿದ್ದಾರೆ. ಬೆಂಗಳೂರಿನ ಬಡಾವಣೆಗಳಿಗೆ ಇಂದಿರಾನಗರ, ರಾಜಾಜಿನಗರ, ರವೀಂದ್ರನಾಥ ಟ್ಯಾಗೂರ್ ನಗರ, ಜಯಪ್ರಕಾಶ ನಗರ, ಜಗಜೀವನರಾಂ ನಗರ, ಬಾಪೂಜಿ ನಗರ, ಗಾಂಧಿ ನಗರ, ಶಾಸ್ತ್ರಿ ನಗರ, ಸುಭಾಶ್ ನಗರ... ಇತ್ಯಾದಿ ಹೆಸರಿಟ್ಟಿರೋದು ಕಾಣುತ್ತೆ. ಜವಹರಲಾಲ್ ನೆಹರು ತಾರಾಲಯ, ಇಂದಿರಾ ಗಾಂಧಿ ಸಂಗೀತ-ಕಾರಂಜಿ, ಸಂಜಯ್ ಗಾಂಧಿ ಆಸ್ಪತ್ರೆ, ರಾಜೀವ್ ಗಾಂಧಿ ಕ್ರೀಡಾಂಗಣ, ಪಂಡಿತ್ ದೀನ ದಯಾಳ್ ರಸ್ತೆ... ಹೀಗೇ ಮುಂದುವರೆದು ಇವತ್ತು ರಸ್ತೆಗಳ, ಬಡಾವಣೆಗಳ ಹೆಸರುಗಳು, ನಾಳೆ ಶಾಲೆ ಕಾಲೇಜುಗಳ ಹೆಸರು, ಊರುಗಳ ಹೆಸರು, ಆಮೇಲೆ ಇಡೀ ನಾಡಿನ ಹೆಸರನ್ನೇ ಬದಲಾಯಿಸಿ ಅಂತಲೂ ಅನ್ನಬೌದು ಗುರು!
ಕೊನೆ ಹನಿ : ಹಾಗಾದ್ರೆ ಕನ್ನಡಿಗರಲ್ಲದವರ ಹೆಸರನ್ನೇ ಇಡಬಾರ್ದಾ ಅನ್ನಬೇಡಿ. ಇರಲಿ... ಇಡೋಣ... ಎಲ್ಲೋ ಊಟದ ಮಧ್ಯೇ ಇರೋ ಉಪ್ಪಿನ ಕಾಯಿ ಥರಾ. ಆದ್ರೆ ನಮ್ಮತನಾನೆ ಮರೆಸಿ ಊಟವಿಡೀ ಉಪ್ಪಿನಕಾಯಿ ಮಾಡೋ ಮಟ್ಟಿಗಲ್ಲ...

ಹದಿಹರೆಯದ ಚೆಲುವೆ ಮೆಚ್ಚಿಸಕ್ಕೆ Google ಸಜ್ಜು!

ಅಂತರ್ಜಾಲದಲ್ಲಿ ಸಕ್ಕತ್ ಪ್ರಸಿದ್ಧಿ ಹೊಂದಿರುವ ಗೂಗಲ್ ಸಂಸ್ಥೆಯ ಬ್ಲಾಗರ್ ಮತ್ತು ಆರ್ಕುಟ್ ತಾಣಗಳು ಇತ್ತೀಚೆಗೆ ರೋಮನ್ ನಿಂದ ಕನ್ನಡಕ್ಕೆ ಲಿಪಿ-ಬದಲಾವಣೆ ಮಾಡೋ ತಂತ್ರಾಂಶವನ್ನ ಜೋಡಿಸಿಕೊಂಡಿವೆ. ಈಗ ಇವೆರಡು ಜನಪ್ರಿಯ ತಾಣಗಳಲ್ಲಿ "ಬರಹ" ಮುಂತಾದ ಯಾವುದೇ ವಿಶೇಷ ತಂತ್ರಾಂಶವಿಲ್ಲದೆ ಲಿಪಿ-ಬದಲಾವಣೆ ಸಾಧ್ಯವಾಗಿದೆ. ಪ್ರಪಂಚದಲ್ಲಿ ಬೆರಳೆಣಿಕೆಯಷ್ಟೇ ಭಾಷೆಗಳಿಗೆ ಈ ಸೌಲಭ್ಯ ಲಭ್ಯವಾಗಿದ್ದು ಕನ್ನಡವೂ ಈ ಪಟ್ಟಿಯಲ್ಲಿರೋದು ಖುಶಿ ತರುವ ಸುದ್ದಿ ಗುರು!

ಗೂಗಲ್ ಒಂದು ಬಹು-ಬಿಲಿಯನ್ ಡಾಲರ್ ವಹಿವಾಟಿರೋ ಬಹುರಾಷ್ಟ್ರೀಯ ಸಂಸ್ಥೆ. ಇದರ ಕಚೇರಿಗಳು ಬರೀ ಬೆಂಗ್ಳೂರಲ್ ಮಾತ್ರ ಅಲ್ಲ, ಅಮೇರಿಕ-ಗಿಮೇರಿಕ ಯೂರೋಪ್-ಗೀರೋಪಲ್ಲೆಲ್ಲಾ ಎರ್ರಾಬಿರ್ರಿ ಚೆಲ್ಲಾಡಿದಹಾಗಿವೆ. ಇವ್ರಿಗೇನು ತೀಟೆ ಕನ್ನಡದ ತಂತ್ರಾಂಶ ಮಾಡಕ್ಕೆ ಅನ್ನೋ ಪ್ರಶ್ನೆಗೆ ಉತ್ತರ ಇಷ್ಟೇ: ಕನ್ನಡ ಅಂತರ್ಜಾಲದಲ್ಲಿ ಸಕ್ಕತ್ ಬಳಕೆ ಆಗ್ತಿದೆ. ಕನ್ನಡದ ಅಂತರ್ಜಾಲ ತಾಣಗಳ್ನ ಮಾಡೋರು, ಬ್ಲಾಗುಜೀವಿಗಳು, ಆರ್ಕುಟ್ಟೋರು - ಇವ್ರೆಲ್ಲ ಎಷ್ಟ್ ಜನ ಇದಾರೆ ಅಂದ್ರೆ ಗೂಗಲ್ಗೆ ಇಲ್ಲಿ ಒಂದು ಒಳ್ಳೇ ಲಾಭದಾಯಕ ಮಾರುಕಟ್ಟೆ ಕಾಣಿಸಿದೆ, ಅಷ್ಟೆ. ಯಾವ ಮಣ್ಣು ಕನ್ನಡದ "ಸೇವೆ" ಗೋಸ್ಕರಾನೂ ಇವ್ರು ಈ ಕೆಲ್ಸ ಮಾಡಿಲ್ಲ, ಮಾಡಬೇಕಾಗೂ ಇಲ್ಲ. ಬರೀ ಸೇವೆ ಮಾಡುಸ್ಕೊಂಡು ಒಂದು ಮೂಲೇಲಿ ಬಿದ್ದಿರಕ್ಕೆ ಕನ್ನಡ ಏನು ಒಂದು ಮುದಿ ಹೆಂಗ್ಸಲ್ಲ ಗುರು, ಹದಿಹರೆಯದ ಚೆಲುವೆ! ಇವಳನ್ನ ಮೆಚ್ಚಿಸಕ್ಕೆ ಬ್ಲಾಗರ್ ಮತ್ತು ಆರ್ಕುಟ್ ಲೈನ್ ಹೊಡೀತಿವೆ. ಏನ್ ಗುರು?

ಅಂದಹಾಗೆ...ಅದೇನೋ ಹೇಳ್ತಾರಲ್ಲ, ಅಮೇರಿಕದೋರಿಗೂ ಅರ್ಥವಾಗಿದೆ ಈಗ ಕನ್ನಡದ ಮಾರುಕಟ್ಟೆ ಎಷ್ಟಿದೆ ಅಂತ. ಶಂಕದಿಂದ ಬಂದೈತಲ್ಲ ತೀರ್ಥ, ಇನ್ನು ನಾವೂ ನಮ್ಮ ಮಾರುಕಟ್ಟೆ ಲಾಭ ಪಡ್ಕೋಬೋದು, ರೈಟ್!

ಹೊರರಾಜ್ಯಗಳಲ್ಲೂ ಕೆಂಪು-ಹಳದಿ ಗಾಳಿಪಟ

"ಗಾಳಿಪಟ". ಇತ್ತೀಚೆಗೆ ಈ ಪದ ಯಾರಿಗ್ ಗೊತ್ತಿಲ್ಲ? ಮುಂಗಾರುಮಳೆ ಗಣೇಶ್ ಮತ್ತೆ ನಿರ್ದೇಶಕ ಯೋಗರಾಜ್ ಭಟ್ ಇವರಿಬ್ಬರ ಚಮತ್ಕಾರಾನ ಜನ ಮತ್ತೊಮ್ಮೆ ನಿರೀಕ್ಷಿಸಿ ಮೊನ್ನೆ ಈ ಚಿತ್ರ ಬಿಡುಗಡೆಯಾದ ದಿನ ಅದೇನು ನಾಮುಂದು ತಾಮುಂದು ಅಂತ ಚಿತ್ರಮಂದಿರಗಳಿಗೆ ನುಗ್ಗುದ್ರು ಗುರು!

ಈ ವರ್ಷ ಬಿಡುಗಡೆಯಾದ "ಪ್ರೀತಿ ಯಾಕೆ ಭೂಮಿ ಮೇಲಿದೆ?" ಒಟ್ಟು ತೊಂಬತ್ತೊಂಬತ್ತು ಪ್ರತಿ ಬಿಡುಗಡೆ ಆಗಿದ್ದರೆ "ಗಾಳಿಪಟ" ಎಪ್ಪತ್ತೈದು ಪ್ರತಿ ಬಿಡುಗಡೆ ಆಗ್ತಾ ಇದೆ. ಇದು ಹೈದರಾಬಾದ್, ಚೆನ್ನೈ, ಪುಣೆ, ಮುಂಬೈಗಳಲ್ಲೂ ಬಿಡುಗಡೆಯಾಗ್ತಿರೋ ಸುದ್ದಿ ಕನ್ನಡ ಚಲನ ಚಿತ್ರರಂಗದ ಮಾರುಕಟ್ಟೆ ಬೆಳೀತಿರೋ ಶುಭ ಸೂಚನೆಗಳಾಗಿವೆ. ಕನ್ನಡನಾಡಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಅಂತ ವಿತರಣೆಗೆ ತೊಗೊಳೋ ಚಿತ್ರರಂಗದ ಜನ ಹಾಗೇ ಹೊರರಾಜ್ಯದಲ್ಲೂ ಕನ್ನಡಕ್ಕೆ ಮಾರುಕಟ್ಟೆ ಇರುತ್ತೆ ಅಂತ ಇವತ್ತಾದರೂ ಮನವರಿಕೆ ಮಾಡಿಕೊಳ್ತಾ ಇರೋದು ಖುಷಿಯ ವಿಷಯ. ಒಟ್ನಲ್ಲಿ ಕನ್ನಡ ಮನರಂಜನಾ ಕ್ಷೇತ್ರವೆಂಬ ಗಾಳಿಪಟಾನೂ ಹೊಸ ಹೊಸ ಮಾರುಕಟ್ಟೇನ ಬೆಳುಸ್ಕೊಳ್ತಾ ಎಲ್ಲೆಯಿಲ್ಲದ ಅವಕಾಶಗಳ ಆಕಾಶದಲ್ಲಿ ಮತ್ತಷ್ಟು ಎತ್ತರಕ್ಕೇರಿಸಬೇಕು ಗುರು!



ಒಳ್ಳೇ ಫಸಲಾಗೋ ಮೊದಲು ಸುರಿಯೋ ಮಳೆಯಾಗಿ ಕಳೆದ ವರ್ಷ ಮುಂಗಾರುಮಳೆ ಸಖತ್ತಾಗ್ ಹೊಯ್ದಿದ್ದೇ ಹೊಯ್ದದ್ದು, ಹಳೆ ಕೊಳೆಯೆಲ್ಲ ತೊಳೆದುಹೋಗಿ ಝಗಝಗಸ್ತಾ ಇದೆಯೇನೋ ನಮ್ ಕನ್ನಡ ಚಿತ್ರರಂಗ ಅನ್ನೋ ಭರವಸೆಯ ಮಿಂಚುಗಳು ಮೂಡ್ತಾ ಇವೆ.

ದುನಿಯಾ ಮತ್ತು ಮುಂಗಾರುಮಳೆ ಕಳೆದ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರನ್ನು, ಹೊಸ ನಟರನ್ನು, ಹೊಸ ಸಾಹಿತ್ಯಕಾರರನ್ನು ಮಾತ್ರ ಪರಿಚಯ ಮಾಡಿಕೊಡ್ಲಿಲ್ಲ, ಇವು ಕನ್ನಡ ಚಿತ್ರರಂಗಕ್ಕಿರೋ ಬಹುದೊಡ್ದ ಮಾರುಕಟ್ಟೆಯ ಸಾಧ್ಯತೆಯನ್ನೂ ಅನಾವರಣ ಮಾಡಿದವು. ಉತ್ತಮ ಗುಣಮಟ್ಟದ ಸರಕನ್ನು ಉತ್ತಮವಾದ ಮಾರಾಟ ತಂತ್ರದ ಮೂಲಕ ಮಾರುಕಟ್ಟೆಗೆ ತಂದರೆ ಲಾಭಕರ ವಹಿವಾಟು ನಡೆಸೋಕ್ಕೂ ಸಾಧ್ಯ ಅನ್ನೋದನ್ನೂ ತೋರಿಸಿಕೊಡ್ತು. ಇಂದು ಕನ್ನಡ ಚಿತ್ರೋದ್ಯಮ ಒಳ ಮತ್ತು ಹೊರ ನಾಡುಗಳಲ್ಲಿ ನೂರಾರು ಕೋಟಿ ವಹಿವಾಟು ನಡೆಸಲು ಕಾರಣವಾಗಿದೆ.

ಸುಂದರವಾದ ವಿಷ್ಣುವರ್ಧನ್ ನಾಯಕನಾಗಿ, ಅತ್ಯುತ್ತಮವಾದ ನಿರೂಪಣೆ ಹೊಂದಿರೋ ಆಪ್ತಮಿತ್ರಕ್ಕಿಂತ ಹೆಚ್ಚಿನ ಮಾರುಕಟ್ಟೆಯನ್ನು ರಜನಿಕಾಂತರ ಚಂದ್ರಮುಖಿ ಹೇಗೆ ಪಡೆದುಕೊಳ್ಳಲು ಸಾಧ್ಯವಾಯಿತು? ಕನ್ನಡ ಚಿತ್ರರಂಗಕ್ಕೇ ಅಂತಹ ವಿಸ್ತಾರವಾದ ಮಾರುಕಟ್ಟೆ ಕನ್ನಡ ಚಿತ್ರಗಳಿಗೂ ಇದೆ ಎನ್ನುವ ಕಲ್ಪನೆಯೇ ಇರಲಿಲ್ಲವೇನೋ ಅನ್ಸುತ್ತೆ. ಹಿಂದೆಲ್ಲಾ ಯಾವುದು ಅಸಾಧ್ಯವಾಗಿತ್ತೋ ಇವತ್ತು ಅದು ಸಾಧ್ಯವಾಗ್ತಿದೆ. ಕನ್ನಡ ಚಿತ್ರಗಳು ಹೊರನಾಡಿನಲ್ಲಿ, ಹೊರದೇಶಗಳಲ್ಲಿ ಇದೀಗ ಬಿಡುಗಡೆಯಾಗುತ್ತಾ ಇರುವುದು ಒಳ್ಳೆ ಬೆಳವಣಿಗೆ ಗುರು. ಇದು ಕನ್ನಡ ಚಿತ್ರರಂಗದಲ್ಲೇ ಒಂದು ಆತ್ಮವಿಶ್ವಾಸಕ್ಕೆ ಆ ಮೂಲಕ ಹೊಸ ಹೊಸ ಸಾಹಸಗಳಿಗೆ ಪ್ರೇರಣೆಯಾಗಿರುವುದು ನಿಜ.

ಬೆಂಗಳೂರಿಗೆ ಉದ್ದಿಮೆ ಕಾರಿಡಾರ್: ಲಾಭ ಮಾತ್ರಾ ಚೆನ್ನೈಗೆ

ದಿಲ್ಲಿ-ಮುಂಬೈ ನಡುವೆ ಉದ್ದಿಮೆ ಕಾರಿಡಾರ್ ಯೋಜಿಸಿರೋ ಹಾಗೆ ದಕ್ಷಿಣ ಭಾರತದಲ್ಲೂ ಒಂದು ಉದ್ದಿಮೆ ಕಾರಿಡಾರ್ ಮಾಡೋ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿರೋ ಸುದ್ದಿ ನಮ್ಮ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತೆ ಗುರು. ಆದ್ರೆ ಈ ಕಾರಿಡಾರು ನಾಡಿಗೆ ಲಾಭ ತರ್ಬೇಕು ಅಂದ್ರೆ ಅದು ಚೆನ್ನೈ -ಬೆಂಗಳೂರು ಮಧ್ಯೆ ಅಲ್ಲಾ ಪುಣೆ - ಬೆಂಗಳೂರು ನಡುವೆ ಆಗಬೇಕು. ಅದೆಂಗಪ್ಪಾ ಅಂತ ವಸಿ ನೋಡ್ಮಾ ಬನ್ನಿ.

ಚೆನ್ನೈ-ಬೆಂಗಳೂರು ಕಾರಿಡಾರಿಗೆ ಹೂಂ ಅಂದ್ರೆ ಕನ್ನಡಿಗರ ಕೈಗೆ ಚಿಪ್ಪೇ ಗತಿ.
ಕೈಗಾರಿಕಾ ಕೇಂದ್ರವನ್ನಾಗಿ ಹೊಸೂರನ್ನು ಬೆಳೆಸಿದ ತಮಿಳುನಾಡು ಹತ್ತಿರದ ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೇ ಮುಂತಾದ ಸೌಕರ್ಯಗಳನ್ನು ಬಳಸಿಕೊಂಡೇ ಉದ್ಧಾರವಾಗಿ ಹೋಯಿತು. ಟೈಟಾನ್, ಅಶೋಕ್ ಲೈಲ್ಯಾಂಡ್, ಟಿವಿಎಸ್ ಮುಂತಾದ ಸಂಸ್ಥೆಗಳು ಅಲ್ಲಿ ಪ್ರಾರಂಭವಾದರೂ ಕನ್ನಡಿಗರಿಗೆ ಉದ್ಯೋಗಾವಕಾಶಗಳೂ ಗಿಟ್ಟಲಿಲ್ಲ, ಕರ್ನಾಟಕಕ್ಕೆ ಕಿಲುಬುಕಾಸಿನ ಆದಾಯವೂ ಹುಟ್ಟಲಿಲ್ಲ. ಅದಕ್ಕಿಂತ ಶೋಚನೀಯವಾದ ಸಂಗತಿಯೆಂದರೆ ಬೆಂಗಳೂರಿಗೆ ತಮಿಳರ ವಲಸೆ ಮತ್ತಷ್ಟು ಹೆಚ್ಚಾಯ್ತು ಅಷ್ಟೆ. ಈಗ ಯೋಜಿಸುತ್ತಿರುವ ಕಾರಿಡಾರ್ ಯೋಜನೆ ಕೂಡಾ ಹೆಸರಿಗೆ ಬೆಂಗಳೂರಿನಿಂದ ಚೆನ್ನೈ ತನಕ ಎಂದಿದ್ದರೂ ಈ ವಲಯ ಶೇಕಡಾ ನೂರರಷ್ಟು ಇರುವುದು ತಮಿಳುನಾಡಲ್ಲೇ. ಅತಿ ನಿರೀಕ್ಷಿತ ವಿದೇಶಿ ಬಂಡವಾಳ, ತೆರಿಗೆ, ಉದ್ಯೋಗಾವಕಾಶ, ಪೂರಕ ಉದ್ದಿಮೆಗಳು ಯಾವುದೂ ಕರ್ನಾಟಕಕ್ಕೆ ಗಿಟ್ಟದು. ಹಾಗಾಗಿ ಮೊಸರು ಮೂತಿಗೆ ಮೆತ್ತಿಸಿಕೊಂಡ ಮೇಕೆ ಆಗ್ತೀವಿ ಅಷ್ಟೆ.

ನಿಜವಾಗಿ ಆಗಬೇಕಾಗಿರೋದು ಬೆಂಗಳೂರು - ಪುಣೆ ಕಾರಿಡಾರು
ಕರ್ನಾಟಕದ ಅಧಿಕಾರಿಗಳು ಚರ್ಚೆ ಮಾಡ್ತಾ ಈ ಕಾರಿಡಾರನ್ನು ಬೆಳಗಾವಿವರೆಗೆ ವಿಸ್ತರಿಸಲು ಮನವಿ ಮಾಡ್ತಾರಂತೆ. ನಿಜ್ವಾಗ್ಲೂ ಕರ್ನಾಟಕ ಸರ್ಕಾರ ಚೆನ್ನೈ ಕಾರಿಡಾರಿನ ಬಗ್ಗೆ ಯಾವುದೇ ಆಸಕ್ತೀನೂ ತೋರುಸ್ದೆ, ದಕ್ಷಿಣ ಭಾರತಕ್ಕೆ ಕೊಡಮಾಡಲಿರುವ ಈ ಯೋಜನೆಯನ್ನು ತನ್ನದು ಮಾಡಿಕೊಳ್ಳಬೇಕು. ಕರ್ನಾಟಕದ ಹಿತ ಕಾಪಾಡಕ್ ಆಗೋದು ಇದ್ರಿಂದ ಮಾತ್ರ ಗುರು.

ಭಾರತಕ್ಕೂ ಲಾಭ ಇದ್ರಿಂದಲೇ...
ಈಗಾಗಲೇ ಯೋಜಿತವಾಗಿರೋ ದಿಲ್ಲಿ ಮುಂಬೈ ಕಾರಿಡಾರನ್ನು ಮುಂದೆ ವಿಸ್ತರಿಸುವ ಮೂಲಕ ಅದನ್ನು ದಿಲ್ಲಿ, ಮುಂಬೈ, ಬೆಂಗಳೂರು ಕಾರಿಡಾರ್ ಮಾಡಬೇಕು. ಆಟೋಮೊಬೈಲ್ ಕ್ಷೇತ್ರದಲ್ಲಿ ಟಾಟಾ, ಬಜಾಜ್, ಫೆರೋಡಿಯಾ ಬಜಾಜ್, ಕೈನೆಟಿಕ್ ತರಹದ ದೈತ್ಯ ಸಂಸ್ಥೆಗಳಿಗೆ ತವರಾಗಿರೋ ಪೂನಾ, ಅಲ್ಯುಮಿನಿಯಂ ತಯಾರಿಕೆ ಮತ್ತು ಅಚ್ಚು ಉದ್ದಿಮೆಗೆ ಹೆಸರಾದ ಬೆಳಗಾವಿ ಇದೇ ವಲಯದಲ್ಲಿ ಬರುತ್ತವೆ. ಉಕ್ಕು ತಯಾರಿಕೆಯ ತೋರಣಗಲ್ಲು, ಕರ್ನಾಟಕದ ಸುಮಾರು ಆರುನೂರು ಕಿಲೋಮೀಟರ್ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಕಾರಿಡಾರ್ ಲಕ್ಷಾಂತರ ಕನ್ನಡಿಗರಿಗೆ ಉದ್ಯೋಗ ನೀಡಲಿದೆ. ನಾವು ಮೈಮರೆಯದೆ ಸದುಪಯೋಗ ಮಾಡಿಕೋಬೇಕು ಅಷ್ಟೆ. ಈ ವಲಯದ ಉದ್ದಕ್ಕೂ ನೀರಿನ ಸೌಕರ್ಯ ಕಲ್ಪಿಸಲು ಕಾವೇರಿ, ಕೃಷ್ಣಾ, ತುಂಗಭದ್ರಾ ನದಿಗಳಿವೆ. ಉತ್ತಮ ರೈಲು ಸಂಪರ್ಕವಿದೆ. ನಾಲ್ಕು ದಾರಿಗಳ ಹೆದ್ದಾರಿ ಇದೆ. ಬೆಳಗಾವಿ ಮತ್ತು ಬೆಂಗಳೂರುಗಳಲ್ಲಿ ವಿಮಾನ ನಿಲ್ದಾಣಗಳಿವೆ. ಉದ್ದಿಮೆ ಆರಂಭಿಸಲು ಬೇಕಾದ ಹಿತಕರವಾದ ವಾಯುಗುಣ ನಮ್ಮಲ್ಲಿ ಇದೆ. ಮೇಲಾಗಿ ನೈಸರ್ಗಿಕ ವಿಕೋಪಗಳ ಭೀತಿ ಕಡಿಮೆ ಇದೆ. ಈ ಎಲ್ಲ ವಿಷಯಗಳನ್ನು ಮುಂದಿಟ್ಟು ನಮ್ಮ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹೇರಿ ಪುಣೆ-ಬೆಂಗಳೂರು ಉದ್ದಿಮೆ ಮೊಗಸಾಲೆಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಬೇಕು. ಕೇಂದ್ರದ ಹಣಕಾಸು ಸಚಿವರಾದ ಪಿ.ಚಿದಂಬರಂ ಇಡಿಯ ಭಾರತಕ್ಕೆ ಹಣಕಾಸು ಸಚಿವರೆಂಬುದನ್ನು ನೆನಪು ಮಾಡಿಕೊಟ್ಟು ಬರುವ ಮುಂಗಡ ಪತ್ರದಲ್ಲಿ ಈ ಯೋಜನೆ ಘೋಷಿತವಾಗುವಂತೆ ಮಾಡಬೇಕು ಗುರು.

’ಕನ್ನಡ ಕಲಿ’ ಕಾರ್ಯಕ್ರಮದಲ್ಲಿ ನೀವಿದ್ದರೆ ಚಂದ

ಬೆಂಗಳೂರಿನ ನಾನಾ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಕನ್ನಡ ಬಾರದ ಆದರೆ ಕಲಿಯಲು ಆಸಕ್ತಿಯಿರುವ ಬೇರೆ ಭಾಷೆಯವರಿಗೆ ಕನ್ನಡವನ್ನು ಕಲಿಸುವ ಕಾರ್ಯಕ್ರಮ "ಕನ್ನಡ ಕಲಿ"

ಕನ್ನಡ ಕಲಿ ಎನ್ನುವುದು "ನನಗೆ ಕನ್ನಡ ಗೊತ್ತಿಲ್ಲ" ಎನ್ನುವುದರಿಂದ "ಏನ್ ಗುರು, ಕಾಫಿ ಆಯ್ತಾ?" (I dont know kannadaದಿಂದ ಸುಲಲಿತವಾಗಿ ಕನ್ನಡದಲ್ಲಿಯೇ ಸಂಭಾಷಣೆ ಮಾಡೋ ಹಂತ) ತನಕ ಪರಭಾಷಿಕನ ಕೈ ಹಿಡಿದು ಜೊತೆ ಸಾಗುವ ಪಯಣ.
ಕರ್ನಾಟಕಕ್ಕೆ ಬರುವ ಬೇರೆ ಭಾಷೆಯವರಿಗೆ ಕನ್ನಡ ಕಲಿಯೋದರಿಂದ ಬಹಳ ಪ್ರಯೋಜನ ಆಗ್ತಾ ಇದೆ. ಅದಕ್ಕೆ ಈಗ ಕನ್ನಡ ಕಲಿಯೊಕ್ಕೆ ಬಹಳ ಜನ ಆಸಕ್ತಿ ತೋರಿಸುತ್ತಿರುವುದು ಒಂದೆಡೆಯಾದರೆ ಕಲಿಸಬೇಕೆಂಬ ಉತ್ಸಾಹಿಗಳ ದಂಡು ಇನ್ನೊಂದೆಡೆ ಇದೆ. ಈ ಇಬ್ಬರ ನಡುವಿನ ಸೇತುವೆಯಾಗಿದೆ, ಬನವಾಸಿ ಬಳಗದ ಈ ಕನ್ನಡ ಕಲಿ ಕಾರ್ಯಕ್ರಮ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ಕೊಡೋದಕ್ಕೆ ಒಂದು ಚಿಕ್ಕ ಸಮಾರಂಭವನ್ನು ಆಯೋಜಿಸಲಾಗಿದೆ.
ಇದೇ ಜನವರಿ ಆರನೇ ತಾರೀಕಿನ ಭಾನುವಾರದಂದು ಸಂಜೆ 4 ಗಂಟೆಗೆ ಬಸವನಗುಡಿಯಲ್ಲಿ ಬಿ.ಪಿ.ವಾಡಿಯಾ ರಸ್ತೆಯಲ್ಲಿರೋ "ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್"ನ ಮನೋರಮಾ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಕಲಿ ನಡೆದು ಬಂದ ದಾರಿ, ಈ ಕಾರ್ಯಕ್ರಮ ನಡೆಸುವಲ್ಲಿನ ಅನುಭವಗಳು, ಇದನ್ನು ಹೇಗೆ ನಮ್ಮ ಸಂಸ್ಥೆಗಳಲ್ಲಿ ನಡೆಸಬಹುದು ಅನ್ನೋದೋರ ಬಗ್ಗೆ ಮಾಹಿತಿ ಹಂಚಿಕೊಳ್ಳೋಣ. ಜೊತೆಗೆ ಕನ್ನಡ ಕಲಿ ಮೂಲಕ ಕನ್ನಡ ಕಲಿತವರ ಅನುಭವಗಳನ್ನೂ ಕೇಳೋಣ.
ಈ ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿ ಚಂದ. ಅವತ್ತಿನ ಕಾರ್ಯಕ್ರಮಕ್ಕೆ ನೀವು ಬರಲೇಬೇಕು. ನಮ್ಮನ್ನೆಲ್ಲಾ ಭೇಟಿ ಆಗಲೇ ಬೇಕು, ನಮ್ಮ ಜೊತೇಲಿ ಒಂದೆರಡು ಗಂಟೆ ಕಳೀಲೇ ಬೇಕು. ಬರ್ತಿರಾ ಅಲ್ವಾ?

2008ರ ವರ್ಷ ಭವಿಷ್ಯ

ಎರಡು ಸಾವಿರದ ಎಂಟು ಬಂದಿದೆ, ಏನ್ ಗುರು ಓದುಗರಿಗೆಲ್ಲಾ ಛಳಿಗಾಲದ ಬೆಚ್ಚನೆಯ ಶುಭಾಶಯಗಳು.
ಈ ಶುಭ ಸಂದರ್ಭದಲ್ಲಿ ಬರಲಿರುವ ವರ್ಷದ ರಾಶಿ ಭವಿಷ್ಯವನ್ನು ನಿಮಗಾಗಿ "ಏನ್ ಗುರು" ತರುತ್ತಿದೆ.
ಇನ್ನೂ ಏನು ಯೋಚನೆ ಮಾಡ್ತಿದೀರಾ? ಎಚ್ಚರ ಮಾಡಿಕೊಳ್ಳಿ.
ಛಳಿ ಕೊಡವಿ ಏಳಿ, ಭವಿಷ್ಯ ನೋಡ್ಕಳಿ...

ಕುರಿ : ಕಳೆದ ವರ್ಷದಲ್ಲಿ ನಿಮಗೆ ಒದಗಿ ಬಂದಿದ್ದ ಕೆಟ್ಟಕಾಲಕ್ಕೆ ಕಾರಣ, ನೀವು ವರ್ಷದ ಮೊದಲನೆ ದಿನ ಬೆಂಗಳೂರಿನ ಫೋರಂನಲ್ಲಿ ಮೈ ಮರೆತು ಎಲ್ಲ ಸಿಬ್ಬಂದಿಗಳ ಜೊತೆ ಹಿಂದಿಯಲ್ಲಿ ಮಾತಾಡಿದ್ದು ಮತ್ತು ಹಿಂದಿ ನಮ್ಮ ರಾಷ್ಟ್ರಭಾಷೆ ಅಂತ ಅವರಂದಾಗ ಕುರಿ ತರಹ ತಲೆ ಹಾಕಿದ್ದು. ಈ ಸಾರಿಯಾದರೂ ನೀವು ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಮಾಡಲು ಹೋದಾಗ, ಕನ್ನಡದಲ್ಲೇ ವ್ಯವಹರಿಸಿದರೆ ಮಿತ್ರಲಾಭ.
ಎತ್ತು : ಗಾಣದ ಎತ್ತಿನಂತೆ ದುಡಿಯುವ ಸ್ವಭಾವದ ನಿಮ್ಮ ಬದುಕಲ್ಲಿ ಈ ವರ್ಷ ಒಳ್ಳೇ ಪ್ರತಿಫಲ ಸಿಗುವ ಸೂಚನೆಗಳಿವೆ. ಈ ಬಾರಿಯ ರಾಜ್ಯೋತ್ಸವಕ್ಕೆ ಮೊದಲು ನಿಮ್ಮ ಸಂಸ್ಥೆಯಲ್ಲಿ ಕಡಿಮೆಯೆಂದರೆ ಇಬ್ಬರು ಪರಭಾಷಿಕರಿಗೆ (ಪರದೇಶಿಗಳಿಗೆ) ಕನ್ನಡ ಕಲಿಸಿ. ಕೊನೆಪಕ್ಷ ಮಾತಾಡೋ ಅಷ್ಟಾದ್ರೂ ಕಲಿಸಿ. ಇಲ್ಲಾಂದ್ರೆ ಸಾಯೋತಂಕಾ ಹಿಂಗೇ ಕತ್ತೆ ಥರಾ ದುಡ್ಕೊಂಡು ಇರಬೇಕಾಗುತ್ತೆ.
ಜೋಡಿ : ಈ ಬಾರಿ ನಿಮಗೆ ಮದುವೆ ಯೋಗ ಇದೆ. ಮದುವೆ ಮಾಡ್ಕೊಬೇಕಾದ್ರೆ ಛತ್ರದ ಹೊರಗೆ ಬರೆಸಿಹಾಕೋ ಹೂವಿನ ಅಲಂಕಾರದ ಸ್ವಾಗತ ಕಮಾನನ್ನು ಕನ್ನಡದಲ್ಲೇ ಮಾಡ್ಸಿ. ಕರೆಯೋಲೆ ಕನ್ನಡದಲ್ಲಿರಲಿ. ಕನ್ನಡಿಗರು ಕನ್ನಡದಲ್ಲಿ ಕರೆಯೋಲೆ ಕೊಡದಿದ್ರೆ ಅಂಥಾ ಮದುವೆಗಳಿಗೆ ಹೋಗಲ್ಲ ಅಂತ ತೀರ್ಮಾನ ಮಾಡ್ಕೊಳ್ಳಿ. ಹೀಗಾದ್ರೆ ನೀವು ಬಹಳ ದಿನಗಳಿಂದ ಬಯಸ್ತಿದ್ದ ನಿಮ್ಮ ಪ್ರೇಮ ಫಲಿಸೀತು. ನಿಮ್ಮ ಬಾಳಸಂಗಾತಿಯ ಭೇಟಿ ಆದೀತು.
ಏಡಿ : ಅಡ್ಡಾದಿಡ್ಡಿ ಸಾಗ್ತಿದೆ ಬದುಕು ಅಂದ್ಕೋತಾ ಇದ್ರೆ ಈ ವರ್ಷದಲ್ಲಿ ಅದು ನೆಟ್ಟಗೆ ಸಾಗೊ ಲಕ್ಷಣಗಳಿವೆ. ಕೊಡೈಕೆನಾಲು, ಮೂನಾರಿಗೆ ಹನಿಮೂನಿಗೆ ಅಂತ ಹೊರಟಿರೋ ನಿಮ್ಮ ಗೆಳೆಯನನ್ನು ಮಡಿಕೇರಿಗೋ, ಕಾರವಾರಕ್ಕೋ ಕಳ್ಸಿಕೊಡಿ. ನೀವೂ ಕೂಡಾ ನೆಟ್ಟಗೆ ಹಂಪಿ, ಬನವಾಸಿ ಕಡೆಗೆ ಒಂದು ಪ್ರವಾಸ ಹೋಗಿಬನ್ನಿ. ಬಾಳುವ ರೀತಿ ನೀತಿ ಒಳ್ಳೇತರಹ ಬದಲಾದೀತು.

ಸಿಂಹ : ಕನ್ನಡದ ಅಭಿಮಾನದಿಂದ ನಾನಾ ಕೆಲಸಗಳನ್ನು ಮಾಡ್ತಾ ಇರೋ ತಾವು ತಮ್ಮ ಗೆಳೆಯರ ಮಧ್ಯೆ ಸಿಂಹದ ಹಾಗೇ ಪೌರುಷ ತೋರುಸ್ತಿರಬಹುದು. ಆದರೆ ಅಭಿಮಾನದ ಜೊತೆ ಅಧ್ಯಯನವೂ ಮುಖ್ಯ. ಕನ್ನಡದ ಇತಿಹಾಸ, ಹಿರಿಮೆಗಳ ಬಗ್ಗೆ ಕಲಿತು, ಕಲಿತಿದ್ದರ ಸಿಂಹಾವಲೋಕನ ಮಾಡಿದರೆ ನಿಮ್ಮ ಅಭಿಮಾನಕ್ಕೆ ಅರ್ಥ ಸಿಗುತ್ತೆ.
ಹುಡುಗಿ : ಈ ವರ್ಷದ ನಿಮ್ಮ ಭವಿಷ್ಯ ಭವ್ಯವಾಗಿದೆ. ಹಿಂದಿ ಮಾತಾಡುದ್ರೆ ಏಕತೆ, ಹಿಂದಿ/ ಇಂಗ್ಲಿಷು ಮಾತೋಡೋರು ಮಾತ್ರಾ ಲೆವೆಲ್ಲು ಅಂದ್ಕೊಂಡು ಅಂಥಹಾ ಹುಡುಗರನ್ನೇ ಮೆರೆಸೋದನ್ನು ಈ ರಾಶಿಯ ಹೆಣ್ ಮಕ್ಕಳು ಕೈಬಿಡಬೇಕಾಗುತ್ತೆ. ಕನ್ನಡದ ಸಂಸ್ಕೃತಿಯನ್ನು ಮೆರೆಸೋ ಜೀವನ ಶೈಲಿಯನ್ನು ತಾವೂ ಬಿಟ್ಟು ಹೋಗದೆ, ತಮ್ಮ ಸಂಗಾತಿಯೂ ಬಿಟ್ಟು ಹೋಗದ ಹಾಗೆ ನೋಡ್ಕೊಂಡ್ರೆ ಪುತ್ರಲಾಭ. ಅಂದ್ರೆ ಮುಂದಿನ ದಿನಗಳಲ್ಲಿ ದೊಡ್ಡವರಾದ ಮೇಲೆ ಮಕ್ಕಳು ಕೈ ಬಿಟ್ಟು ಹೋಗೋದು ತಪ್ಪುತ್ತೆ.
ತಕ್ಕಡಿ : ಹಿಂದೆ ಎಂದಾದ್ರೂ ನಿಮ್ಮ ಕಛೇರಿಯಲ್ಲಿ ಕೆಲಸ ಖಾಲಿ ಇದ್ದಾಗ ಕನ್ನಡದ ಹುಡುಗರ ರೆಫೆರೆನ್ಸ್ ಕೊಡದೆ ಹೋಗಿದ್ದರೆ ಈ ವರ್ಷ ನಿಮಗೆ ಸಖತ್ ಲತ್ತೆ ಹೊಡ್ಯೋದು ಹದಿನಾರಾಣೆ ಸತ್ಯ. ಈ ವರ್ಷದ ಕ್ಯಾಂಪಸ್ ಇಂಟರ್ವ್ಯೂಗೆ ಒರಿಸ್ಸಾ, ಆಂಧ್ರ ಅಂತ ಹೋಗೋ ಬದಲು ಕರ್ನಾಟಕದ ಕಾಲೇಜುಗಳಿಗೆ ಹೋದರೆ ನೀವೂ ನಿಮ್ಮ ಸಂಸ್ಥೇನೂ ಉದ್ಧಾರವಾಗೋದ್ರಲ್ಲಿ ಅನುಮಾನವೇ ಇಲ್ಲ.
ಚೇಳು : ನಿಮ್ಮ ಚೂಪಾದ ಬುದ್ಧಿಯನ್ನು ಕನ್ನಡಪರ ಹೋರಾಟಗಾರರನ್ನು, ಕನ್ನಡಪರ ಮನಸ್ಸುಗಳನ್ನು ಹೀಗಳೆಯೋಕ್ಕೆ ಬಳಸದೆ ನಾಡು ಕಟ್ಟೋ ಕೆಲಸದ ಕಡೆ ಹರಿಬಿಡಿ. ಕನ್ನಡಪರ ಅನ್ನೋದು ರಾಷ್ಟ್ರೀಯತೆಗೆ ವಿರುದ್ಧವಾದದ್ದು ಅನ್ನೋ ನಂಬಿಕೆ ಏನಾದ್ರೋ ಇದ್ರೆ ಮೊದಲು ಬದ್ಲಾಯ್ಸಿಕೊಳ್ಳಿ. ನಿಜವಾದ ರಾಷ್ಟ್ರೀಯತೆ ಕರ್ನಾಟಕತ್ವವೇ ಎಂದು ಮನಗಾಣಿರಿ. ಹೀಗಾದಲ್ಲಿ ಈ ವರ್ಷ ನಿಮ್ಮ ತುರಿಕೆ ಮತ್ತು ಹೊಟ್ಟೆಯಲ್ಲಿನ ಉರಿ ರೋಗಗಳು ವಾಸಿಯಾಗುತ್ವೆ.
ಬಿಲ್ಲು: ನಿಮ್ಮ ಬಾಸನ್ನ ಮೆಚ್ಚುಸ್ಬೇಕು ಅಂತಾ ಕನ್ನಡದ ವಿಷಯದಲ್ಲಿ ಬಿಲ್ಲಿನ ಥರಾ ಬಗ್ಗುದ್ರೆ ಬೆನ್ನು ಮುರ್ದು ಹೋಗುತ್ತೆ. ಹೋದವರ್ಷ ಯುಗಾದಿಗೆ ನಿಮ್ಮ ಕಛೇರಿಲಿ ರಜಾ ಕೊಡದೆ ಹೋಳೀಗೆ, ಬೈಸಾಖಿಗೆ ಕೊಡ್ತಾ ಇದ್ರೂ "ಹಾಜಿ.. ಹಾಜಿ" ಅಂತ ಡೊಗ್ಗು ಸಲಾಮು ಹಾಕಿದ್ರೆ ಈ ವರ್ಷಾನಾದ್ರು ಬದಲಾಗಿ. ನಮ್ಮತನಾನ ಬಲಿಕೊಟ್ಟು ಕನ್ನಡ ಸಂಸ್ಕೃತಿಯನ್ನು ಹಾಳು ಮಾಡೋ ಕೆಲಸಕ್ಕೆ ನೀವು ಕಾರಣರಾದರೆ ಏಳರಾಟದ ಶನಿ ನಿಮ್ಮ ಬೆನ್ನೇರೋದು ಖಚಿತ.
ಮೊಸಳೆ : ಕನ್ನಡಕ್ಕೆ ಹಾಗಾಗ್ತಿದೆ ಹೀಗಾಗ್ತಿದೆ ಅಂತ ಕಣ್ಣೀರು ಸುರಿಸದೆ ಇವತ್ತಿಂದ್ಲೆ ಕನ್ನಡ ದಿನಪತ್ರಿಕೆಗಳನ್ನು ಕೊಂಡ್ಕೊಳ್ಳೋದ್ನ ಶುರು ಮಾಡಿ. ಈ ವರ್ಷ ಒಂದೆರಡು ಸಖತ್ ಕನ್ನಡ ಸಿನಿಮಾ ನೋಡುದ್ರೆ, ಕನ್ನಡ ಹಾಡುಗಳನ್ನೇ ಹಾಕೋ FMಗಳನ್ನೇ ಕೇಳುತಿದ್ರೆ, ಇವತ್ತಿಂದ ಯೋಗ್ಯ ಕನ್ನಡಿಗನಾಗಿ ಬದುಕೋ ಸಂಕಲ್ಪ ಮಾಡುದ್ರೆ ಜ್ಞಾನ ಪ್ರಾಪ್ತಿ, ಮನರಂಜನಾ ಸುಖ ಲಭ್ಯ.
ಕೊಡ : ನಿಮ್ಮ ಕನ್ನಡ ಪ್ರೇಮ ಪರಿಪೂರ್ಣವಾಗೋ ಕಾಲ ಹತ್ತಿರವಾಗುತ್ತಿದೆ. ಇವತ್ತೇ ಒಂದು ಕೋರ್ಟ್ ಅಫಿಡವಿಟ್ ಮಾಡ್ಸಿ ನಿಮ್ಮ ಸಹಿಯನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಿ. ಬರೀ ನೂರೈವತ್ತು ರೂಪಾಯಿ ಖರ್ಚಾಗುತ್ತೆ. ಬ್ಯಾಂಕುಗಳಲ್ಲಿ, ಚೆಕ್ಕುಗಳಲ್ಲಿ, ಎಲ್ಲ ಕಛೇರಿಗಳ ಅರ್ಜಿಗಳನ್ನು ಕನ್ನಡದಲ್ಲೇ ತುಂಬಿ. ಕನ್ನಡದ ಸಹಿ ಮತ್ತು ಅರ್ಜಿ ಒಪ್ಪಲ್ಲ ಅನ್ನೋ ಅಧಿಕಾರ ಯಾರಿಗೂ ಇಲ್ಲ ಅಂತ ಮನವರಿಕೆ ಮಾಡಿಕೊಂಡ್ರೆ ಬಾಳೂ ಪರಿಪೂರ್ಣವಾಗುತ್ತೆ.
ಮೀನು : ಕನ್ನಡಿಗರು ಭೇಟಿಯಾದಾಗ ಟುಸ್ಸು ಪುಸ್ಸು ಇಂಗ್ಲಿಷಲ್ಲಿ ಮಾತಾಡ್ದೆ ಕನ್ನಡದಲ್ಲೇ ಮಾತಾಡ್ಸೋದ್ನ ಇವತ್ತಿಂದಲೇ ಶುರು ಹಚ್ಕೊಳ್ಳಿ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ದಿದ್ರೆ ನುಂಗಿ ಹಾಕೋಕ್ಕೆ ತಿಮಿಂಗಲಗಳು ಕಾಯ್ತಾ ಇರ್ತವೆ ಅಂತ ಅರ್ಥ ಮಾಡಿಕೊಂಡು ಸದಾ ಒಗ್ಗಟ್ಟಾಗಿರಿ. ಆಗ ನಿಮ್ಮ ಸಂತತಿ ಸಾವಿರವಾಗುತ್ತದೆ.
ರಾಹುಕಾಲ: ಗುಳಿಕ ಕಾಲ: ಯಮಗಂಡ ಕಾಲ : ಕನ್ನಡದ ಕೆಲಸಕ್ಕೆ ಇವ್ಯಾವುದು ಈ ವರ್ಷ ಅಡ್ಡಿ ಮಾಡಲ್ಲ. ನಿಸ್ಸಂಕೋಚವಾಗಿ ಮುಂದುವರೆಯಿರಿ.

ಮೋದಿ ಗೆಲುವಿನ ಚಿತ್ತಾರ

ಇತ್ತೀಚೆಗೆ ನಡೆದ ಗುಜರಾತಿನ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಮುಂದಾಳ್ತನದಲ್ಲಿ ಭಾಜಪ ಜಯಭೇರಿ ಬಾರಿಸಿದ್ದು ಯಾಕಪ್ಪಾ ಅಂತ ಸಕ್ಕತ್ ವಿಶ್ಲೇಷಣೆಗಳು ನಡೀತಿವೆ. ನಿಜಕ್ಕೂ ಮೋದಿ ಗೆಲುವಿನ ಒಳಗುಟ್ಟು ಏನು ಅಂತ ನೋಡ್ಮ.

ಗುಜರಾತ್, ಗುಜರಾತ್, ಗುಜರಾತ್

ಈ ಬಾರಿ ಚುನಾವಣೆಯಲ್ಲಿ ಮೋದಿ ಅವರು ಮುಖ್ಯ ಅಸ್ತ್ರವಾಗಿ ಬಳಸಿದ್ದು ಇಡೀ ಭಾರತಕ್ಕೆ ಅನ್ವಯಿಸುವ ಯಾವುದೇ ಸಿದ್ಧಾಂತವನ್ನಲ್ಲ, ಬದಲಾಗಿ ಪ್ರತ್ಯೇಕವಾಗಿ ಗುಜರಾತ್ ರಾಜ್ಯದ ಏಳಿಗೆಯನ್ನು ಮತ್ತು ಎಲ್ಲಾ ರೀತಿಯಲ್ಲೂ ಸ್ಥಳೀಯತೆಯ ಮಂತ್ರವನ್ನು. ಮೋದಿಯ ಚುನಾವಣೆ ಪ್ರಚಾರದಲ್ಲಿ ಕೇಳಿಬಂದಿದ್ದು ಬರೀ "ಗುಜರಾತ್, ಗುಜರಾತಿ".

"ಗುಜರಾತಿ ಅಸ್ಮಿತಾ" ಮತ್ತು "Vibrant Gujarat" ಎಂಬ ಘೋಷಣೆಗಳು ಗುಜರಾತಿನಲ್ಲಿ ಈ ಬಾರಿ ಭಾಜಪದ ಮೂಲಮಂತ್ರವಾಗಿದ್ದವೇ ಹೊರತು ಗುಜರಾತಿಗಳಿಗೆ ಅರ್ಥವಾಗದ ಮತ್ತು ಸಂಬಂಧ ಎಲ್ಲಿ ಅಂತ ಹುಡುಕಬೇಕಾದ "ಭಾರತೀಯ ಅಸ್ಮಿತಾ" ಅಥವಾ "Vibrant India" ಗಳಲ್ಲ. "ಭಾರತಾನ ಹಂಗ್ ಉದ್ಧಾರ ಮಾಡ್ತೀನಿ ಹಿಂಗ್ ಉದ್ಧಾರ ಮಾಡ್ತೀನಿ" ಅಂತ ಗುಜರಾತಿನಲ್ಲಿ ಎಷ್ಟು ಬಡ್ಕೊಂಡ್ರೂ ಉಪಯೋಗವಿಲ್ಲ ಅಂತ ಅರ್ಥ ಮಾಡ್ಕೊಂಡು ಗುಜರಾತಿಗೇ ತಮ್ಮ ಬದ್ಧತೆ ಇರೋದು ಅಂತ ತೋರಿಸಿಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು. ಪಕ್ಷ ರಾಷ್ಟ್ರೀಯ ಆದ್ರೂ ನಿಜವಾದ ಕೆಲಸ ಸ್ಥಳೀಯವಾಗೇ ಇರಬೇಕು ಅನ್ನೋದನ್ನ ಅರ್ಥ ಮಾಡ್ಕೊಂಡು ಅದಕ್ಕೆ ತಕ್ಕಂತೆ ನಡ್ಕೊಂಡಿದ್ದೇ ಮೋದಿ ಗೆಲುವಿನ ಗುಟ್ಟು.

ನಿಜವಾದ ಏಳಿಗೆಗೆ ಮಂತ್ರ ಸ್ಥಳೀಯತೆ

ಮೋದಿ ಅವರು "2010ರ ವೇಳೆಗೆ ಗುಜರಾತ್ ವಿಶ್ವದ ಅಭಿವೃದ್ಧಿ ಹೊಂದಿರುವ ದೇಶಗಳ ಜೊತೆ ಹೆಮ್ಮೆಯಿಂದ ಸ್ಪರ್ಧೆಗೆ ಇಳಿಯಬೇಕು" ಅಂತ ಘೋಷಿಸಿದ್ದಾರೆ. ಇಲ್ಲೆಲ್ಲೂ ಮೋದಿ ಭಾರತ ಅನ್ನುತ್ತಿಲ್ಲ. ಬೇರೆ ದೇಶಗಳ ಜೊತೆಗೇ ಪೈಪೋಟಿ ಮಾಡಬೇಕಾಗಿರೋದು ಗುಜರಾತೇ ಹೊರತು ಭಾರತ ಅಲ್ಲ ಅನ್ನೋ ವೈಜ್ಞಾನಿಕ ಸಂದೇಶವನ್ನ ಕೊಟ್ಟಿದ್ದಾರೆ. ನಿಜಕ್ಕೂ ಭಾರತವನ್ನ ಜರ್ಮನಿಗೋ ಫ್ರಾನ್ಸಿಗೋ ಹೋಲಿಸೋದು ಮೂರ್ಖತನವೇ ಸರಿ.

ಅರೆ, ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಕತೆಗೆ ಮಹತ್ವ ನೀಡತೊಡಗಿತು ಅಂತ ಗಾಬರಿಯಾಗಬೇಡಿ. ಗುಜರಾತಿನ ಏಳಿಗೆಯಿಂದ ಭಾರತದ ಏಳಿಗೆ ಅನ್ನೋದನ್ನು ಮೋದಿ ಮಾತಾಡ್ತಿರೋದನ್ನು ಗಮನಿಸಿ. ಗುಜರಾತಿನ ಅಸ್ಮಿತಾ ಅನ್ನುತ್ತಾ ಗುಜರಾತಿ ಸಂಸ್ಕೃತಿಯ ಅನನ್ಯತೆ ಮತ್ತು ಸ್ವಾಭಿಮಾನದ ಉದ್ದೀಪನೆಯೊಂದಿಗೆ ಏಳಿಗೆ ಆಗೋಣ ಎನ್ನುತ್ತಿರುವುದನ್ನು ಗಮನಿಸಿ. ಇದಕ್ಕಿಂತ ಮುಖ್ಯವಾಗಿ ಇಂಥಾ ನಿಲುವಿನಿಂದ ಜಯಗಳಿಸಿದ್ದನ್ನೂ ಗಮನಿಸಿ. ಕಾರಣ ಏನೇ ಇರಲಿ, ಈ ನಿಲುವು ಸರಿಯಾದದ್ದಾಗಿದೆ ಮತ್ತು ಆ ಕಾರಣದಿಂದಲೇ ಜನರ ಮನಸ್ಸನ್ನು ತಟ್ಟಿದೆ ಅನ್ನೋದು ಮಾತ್ರ ಸತ್ಯ.

ಕನ್ನಡತನದಿಂದಲೇ ಭಾರತೀಯತೆ

ಕನ್ನಡ, ಕರ್ನಾಟಕ, ಕನ್ನಡಿಗರ ಏಳಿಗೆ ಅಂತ ಮಾತೋಡದನ್ನು ಸಂಕುಚಿತತೆ, ಪ್ರಾದೇಶಿಕತೆ, ದೇಶದ ಏಳಿಗೆಗೆ ಮಾರಕ ಅಂತೆಲ್ಲಾ ಕೊಂಕು ಮಾತಾಡೋ ಜನ ಅರ್ಥ ಮಾಡ್ಕೋಬೇಕಿರೋದು ಕೂಡಾ ಇದನ್ನೇ. ಗುಜರಾತಿನೋರು ಗುಜರಾತನ್ನು, ಕರ್ನಾಟಕದೋರು ಕರ್ನಾಟಕವನ್ನು... ಉದ್ಧಾರ ಮಾಡಿದರೆ ಸಾಕು, ಭಾರತ ತಾನೇ ತಾನಾಗಿ ಉದ್ಧಾರವಾಗುತ್ತೆ ಅಂತ ಆಲೂರು ವೆಂಕಟರಾಯರಂತಹ ಮಹನೀಯರು ಹೇಳಿದ್ದೂ ಕೂಡಾ ಇದನ್ನೇ. ಗುಜರಾತಿನ ಜನ ಗುಜರಾತಿಗಳಾಗಿ ಒಗ್ಗೂಡಿ ಏಳಿಗೆ ಹೊಂದುವುದೇ ಭಾರತದ ಏಳಿಗೆಗೆ ದಾರಿ. ಅಂತೆಯೇ ತನ್ನತನದ ಹಿರಿಮೆಯನ್ನು ಅರಿತು ನಡೆಯುವ ಮೂಲಕ ಭಾರತೀಯನಾಗಿರುವುದೇ ನಿಜವಾದ ರಾಷ್ಟ್ರೀಯತೆ. ಏನ್ ಗುರು?

"ನಮಸ್ಕಾರ! ಹೇಗಿದೀರಾ?"

ಮುಂಬೈನ DNA ಅನ್ನೋ ಇಂಗ್ಲೀಷ್ ಪತ್ರಿಕೇಲಿ ಈ ಹಿಂದೆ ನಮಗೆ "ಕನ್ನಡ ಗೊತ್ತಿಲ್ಲ" ಅಂತಿದ್ದ ಬೆಂಗಳೂರಿನ ವಲಸಿಗರು ಇವತ್ತು "ನಮಸ್ಕಾರ ಹೇಗಿದೀರಾ?" ಅನ್ನುತ್ತ ಕನ್ನಡ ಕಲೀತಿದಾರೆ ಅನ್ನೋ ಸುದ್ದಿ ವರದಿ ಆಗಿದೆ.

ನಿಧಾನವಾಗಾದರೂ ಕನ್ನಡ ಕಲಿಯೋ ನಿರ್ಧಾರ ತೊಗೊಂಡು ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆಯಲು ಒಲವು ತೋರುಸ್ತಿರೋ ವಲಸಿಗರಿಗೆ ಬೆನ್ನು ತಟ್ಟಿ ಹುರಿದುಂಬಿಸಬೇಕು ಗುರು! ಆಷ್ಟೇ ಅಲ್ಲದೆ ಇವರ ಕನ್ನಡ ಕಲಿಯುವ ಉತ್ಸಾಹ, ಕನ್ನಡದ ಪ್ರಾಮುಖ್ಯದ ತಿಳುವಳಿಕೆ, ಕನ್ನಡ ತಮ್ಮ ಬದುಕಿನ ಭಾಗ ಆಗ್ಬೇಕು ಅನ್ನೋ ನಿಲುವು, ಕನ್ನಡಿಗರೊಡನೆ ಬೆರೀಬೇಕು ಅನ್ನೋ ಆಸೆ, ಕನ್ನಡ ಸಂಸ್ಕೃಯಲ್ಲಿ ಒಂದಾಗಕ್ಕೆ ಇವ್ರು ತೋರುಸ್ತಿರೋ ಹವಣಿಕೆ - ಇವೆಲ್ಲಾ ಹೊಗಳಿಕೆಗೆ ಪಾತ್ರ ಗುರು!

ಒಂದು ಪ್ರದೇಶದ ಸಾಮಾಜಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ, ಅಲ್ಲಿನ ಆಡಳಿತ, ಶಿಕ್ಷಣ, ಕಾನೂನು ಸುವ್ಯವಸ್ಥೆ, ಸುಧಾರಣೆಗೆ ಮತ್ತು ಪೂರ್ಣ ಒಗ್ಗಟ್ಟಿಗೆ ಅಲ್ಲಿನ ಭಾಷೆ ಮತ್ತು ಸಂಸ್ಕೃತಿ ಉತ್ತಮ ವಾಹಕವಾಗಿರುತ್ತದೆ. ಹಾಗಾಗಿ ವಲಸಿಗರು ತಾವು ನೆಲಸುವ ಪ್ರದೇಶದ ಭಾಷೆ ಮತ್ತು ಸಂಸ್ಕೃತಿಗೆ ಸಹಮತ ತೋರುವುದು ಆಯಾ ಪ್ರದೇಶದ ಏಳಿಗೆಗೆ ಬಹುಮುಖ್ಯವಾಗಿ ಬೇಕಾದ ಒಗ್ಗಟ್ಟನ್ನು ಒದಗಿಸುತ್ತೆ ಗುರು. ವಲಸಿಗನಿಗೆ ಇದು ಸ್ಥಳೀಯನ ಸ್ನೇಹದ ಜತೆಗೆ, ಅಲ್ಲಿರುವ ಅವಕಾಶ, ತನ್ನನ್ನು ತೊಡಗಿಸಿಕೊಳ್ಳುವ ಸಾಮರ್ಥ್ಯಕ್ಕೆ ಸಾಣೆ ಹಿಡಿಯುತ್ತದೆ. ತಾನು ಈ ಊರಿನಲ್ಲಿ ಒಬ್ಬಂಟಿಯಲ್ಲ, ಎಲ್ಲರೊಡನೆ ಒಬ್ಬ ಎಂಬ ಹೆಮ್ಮೆಯನ್ನು ಸಂಪಾದಿಸಿಕೊಡುತ್ತೆ ಗುರು. ಇದು ವಲಸಿಗನಿಗೂ ಒಳ್ಳೇದು, ನಮಗೂ ಒಳ್ಳೇದು.

ಬೆಂಗಳೂರು-ಕರ್ನಾಟಕಕ್ಕೆ ಸಂಬಂಧಪಟ್ಟ ಈ ಸುದ್ಧಿ ಮುಂಬೈನಲ್ಲಿ ವಲಸಿಗರು ಮರಾಠಿ ಕಲಿಯಕ್ಕೆ, ಹಾಗೆಯೇ ಕೋಲ್ಕೋತ್ತಾದಲ್ಲಿ ಬಂಗಾಳಿ ಕಲಿಯಕ್ಕೆ, ಪ್ರೇರಕ ಆಗಬೇಕು. ಭಾರತ ಹಲವು ಭಾಷೆ-ಹಲವು ಸಂಸ್ಕೃತಿಗಳ ರಾಜ್ಯಗಳ ಒಕ್ಕೂಟ. ಈ ಒಕ್ಕೂಟದ ಒಳಿತಿನ ದೃಷ್ಟಿಯಿಂದ, ವಲಸಿಗರು ತಾವು ವಲಸೆ ಹೋದ ಜಾಗದ ನಾಡು-ನುಡಿ-ನಡೆಗಳ್ನ ಗೌರವಿಸಿ ಅವುಗಳಲ್ಲಿ ಒಂದಾಗೋದು ಬಹಳ ಮುಖ್ಯವಾದ ಪಾತ್ರ ವಹಿಸಿದೆ ಗುರು!

ಬೆಳಗಾವಿ ಚುನಾವಣೆಯಾಗ ಕನ್ನಡದ ಬಾವುಟ ಮತ್ತ ಪಟಪಟಿಸಲಿಕ್ಕ ಹತ್ತೇತ್ರಿ!

ಇಡೀ ಕರ್ನಾಟಕದಾಗ ಎಲ್ಲ ಕಡೀ ಮೊನ್ನಿ ಆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದೈತ್ರಿ. ಇದರ ಫಲಿತಾಂಶಕ್ಕ ಮಂದಿ ಉಸಿರ ಹಿಡ್ದು ಕಾಯಾಕ್ ಹತ್ತಿದ್ರೋ ಇಲ್ಲೋ ತಿಳೀವಲ್ದು. ಆದ್ರ ನಮ್ ಬೆಳಗಾವಿ ನಗರದಾಗ್ ಏನಾಗ್ತದಾ ಅಂತ ಚಾಮರಾಜ ನಗರದಿಂದ ಕಲ್ಬುರ್ಗಿ ಮಟ, ಬಳ್ಳಾರಿಯಿಂದ ಕಾರವಾರದ ಮಟ ನಮ್ ಕನ್ನಡ್ ಮಂದಿ ಭಾಳ ಕಾಯಾಕ್ ಹತ್ತಿದ್ ಮಾತ್ರಾ ಖರೆ ಐತಿ.

ಇಡೀ ಬೆಳಗಾವ್ಯಾಗ ಇರೋ 58 ಸ್ಥಾನದಾಗ, 27 ಕನ್ನಡ ಮಂದಿ ಪಾಲಾಗೈತಿ. ಎಮ್.ಇ.ಎಸ್. ಮಂದಿಗ 18 ಸಿಕ್ಕೈತಿ. ಬೆಳಗಾವೀನ್ ಮಾರಾಷ್ಟ್ರಕ್ ಸೇರ್ಸೋಣು ಅಂತ ಠರಾವ್ ಪಾಸ್ ಮಾಡಿದ್ದ ಮಾಜಿ ಮೇಯರ್ ವಿಜಯ್ ಮೋರೆ, ಶಿವಾಜಿ ಸುಂಠೇಕರ್, ಪ್ರಕಾಶ್ ಶಿರೋಳಗಿ...ಮುಸುಡಿಗೆ ಮತ್ ಮಸಿ ಬಳ್ದಿರೋದ್ ಅಂತೂ ಖರೇ ಐತಿ. ಹ್ಞಾಂ...ಈ ಸರ್ತಿ ಮಸಿ ಬಳ್ದಿರೋರು ಮಾತ್ರಾ ರಕ್ಷಣಾ ವೇದಿಕಿ ಮಂದಿ ಅಲ್ಲಾ ಮತ್ತಾ...

ವಾರ್ಡ್ ನಂ.15ರಾಗ ವಿಜಯ್ ಮೋರೆ ಮಣ್ ಮುಕ್ಕಿದ್ರಾ ಉಳಿದ್ ಕಡೀಗೆ ಶಿವಾಜಿ ಸುಂಠಕರ್, ಎಂ.ಇ.ಎಸ್. ನ ಬೆನ್ ಹಿಂದ ನಿಂತಿರೋ ಶಿವಸೇನಾದ ಪ್ರಕಾಶ್ ಶಿರೋಳ್ಕರ್, ಕನ್ನಡದವ್ರೇ ಆಗಿದ್ರೂ ಅಧಿಕಾರದ್ ಹಪಾಹಪಿಗ್ ಬಿದ್ದು ಎಂ.ಇ.ಎಸ್. ಮಂದೀನ್ ಒಳ್ಗೊಳ್ಗೇ ಬೆಂಬಲ ಕೊಟ್ಟು ಕನ್ನಡದ ಹಿತ ಕಡೆಗಣಿಸಿದ್ದ ಸುನಿಲ್ ಕುಡಚಿ... ಈ ಮಂದೀಗೆಲ್ಲಾ ನಮ್ ಬೆಳಗಾವಿ ಜನಾ ಛಲೋ ನೀರ್ ಇಳ್ಸಿದಾರ್ರೀ... ಯಪ್ಪಾ. ಮಸ್ತ್ ಅಂದ್ರ ಇದ್ರಾಗ್ ನಮ್ ಕನ್ನಡಾ ಮಂದಿ ಕೂಡ ಮರಾಠಿ ಮಂದೀನೂ ಅದಾರ ಮತ್ತಾ... ಮುಂದ ಬೆಳಗಾವೀನಾಗ್ ಯಾರೇ ಮೇಯರ್ ಆದ್ರೂ ಕನ್ನಡ ವಿರೋಧಿ ನಿರ್ಣಯ ಮಂಡ್ಸಕ್ ಆಗಂಗಿಲ್ಲ ಅನ್ನೋದೆ ನಮ್ ಜಯಾ ಕಣ್ರೀಪಾ...

ಈ ಸ್ಥಿತಿ ಎದುಕ್ ಬಂತಪಾ? ಇದಕ್ಕ ಪರಿಹಾರ ಏನಪಾ?

ಏನಾರ ಆಗ್ಲಿ, ಈಗ್ ನಮಗಾ ಇಂಥಾ 'ಹೋರಾಡ್ ಗೆಲ್ಲೋ' ಸ್ಥಿತಿ ಎದುಕ್ ಬಂತ್ ಅಂತ ಗೊತ್ತೇನು? ನಮ್ ಚೆನ್ನವ್ವ, ನಮ್ ರಾಯಣ್ಣ ಹುಟ್ಟಿದ್ ನಾಡಿನಾಗ ಇಂಥ ಸ್ಥಿತಿ ಎದುಕ್ ಬಂತಪಾ ಅಂತ ತುಸಾ ಚಿಂತಿ ಮಾಡೀರೇನು?

ವಲಸಿ ಕಣ್ರೀಯಪ್ಪಾ... ತಡೀ ಇಲ್ಲದ್ ವಲ್ಸಿ. ಹಾಂಗ್ ನಮ್ ಊರುಗಳಿಗೆ ಗುಳೆ ಬರೋ ಮಂದೀಗ ಭಾಳ ಕಾಳಜಿ ಮಾಡಿ ಅವರ ಭಾಷ್ಯಾಗೆ ಮಾತಾಡೊ ನಮ್ ಸೌಜನ್ಯ, ವಲ್ಸಿ ಬಂದ್ ಮಂದಿ ನಮ್ ನಮ್ ಕೂಡಾ ಬೆರೀಬೇಕು ಅನ್ನೋ ಅನಿವಾರ್ಯ ಹುಟ್ ಹಾಕ್ದೆ ಇರೋ ನಮ್ ದೊಡ್ ತನ... (ದಡ್ ತನಾ ಅಂತ ಓದ್ಕೊಳ್ರೀ ಯಪ್ಪಾ..) ಇದಾ ನೋಡ್ರಿ ಮೂಲ. ಒಂದ್ ಛಲೋ ಊರ್ ಐತಿ ಅಂದ್ರಾ ಬಾಜೂಕಿನ್ ಮಂದಿ ಹೊಟ್ಟೀಪಾಡ್ ಹುಡುಕ್ಕೊಂತಾ ಅಲ್ಲಿಗ್ ಬರೋದೈತಲ್ರೀ, ಹಾಂಗಾ ನಮ್ ಬೆಳಗಾವೀಗೂ ಮರಾಠಿ ಮಂದಿ ವಲಸಿ ಬಂದಾರ್ರೀ... ಬಂದ್ ಮಂದಿ ಇಡೀ ಬೆಳಗಾವೀನೆ ನಮ್ದ್ ಮಾಡ್ಕೋ ಬೇಕಂತಾ ಎಂ.ಇ.ಎಸ್ ಕಟಗೊಂಡ್, ಕನ್ನಡದವ್ರ ತಲೀನ ಧರ್ಮ ಅಂತ ಕೆಡ್ಸಿ ನಮ್ಮೋಲ್ಲೇ ಒಡುಕ್ ಹುಟ್ಸಿ ಬ್ಯಾಳೀ ಬೇಯ್ಸ್ಕೊಂತಿದ್ರು. ಇದಾ ಮೊದಲ್ರೀ.. ನಮ್ ಕನ್ನಡ್ ಮಂದಿ ಜಾತಿ, ಧರ್ಮ ಅನ್ನೂದ್ನೆಲ್ಲಾ ದೂರಾ ತಳ್ಳಿ ಕೆಂಪು ಹಳ್ದಿ ಬಾವುಟಾನ ಎತ್ ಹಿಡ್ದಿದ್ದು. ನೀವಾ ನೋಡ್ಲಿಕ್ ಹತ್ತೀರಲ್ಲಾ...ಹ್ಯಾಂಗ್ ಆತೂ ಅಂತಾ?

ನಾಳಿ ನಮ್ ಬೆಂಗಳೂರಿನಾಗ್ ನಗರ ಪಾಲಿಕೆ ಚುನಾವಣಿ ನಡೀಲಿಕ್ ಐತಿ. ವಲಸಿ ಬಂದ ಬ್ಯಾರೀ ಭಾಷೀ ಮಂದೀನ ಯಾವ್ ಪಾರ್ಟೀನು ನಿಲ್ಸಕ್ ಕೊಡೋದನ್ನು ನಾವೂ ನೀವೂ ಕೂಡಿ ತಡೀಬೇಕಾಗೈತಿ. ಹಾಗೂ ಯಾರಾನ ನಿಂತ್ರಂದ್ರ ಅಂಥ ಮಂದೀಗ್ ಮತ ಹಾಕೋಣಿಲ್ಲ ಅಂತ ಒಂದ್ ಛಲೋ ತೀರ್ಮಾನ ಮಾಡೋಣು... ಏನಂತೀ ಗುರೂ?

ವಲಸಿಗರಿಗೆ ಕನ್ನಡ ಕಲಿಸದೇ ಇರುವುದು ನಮ್ಮ ಏಳ್ಗೆಗೇ ಮಾರಕ

ಮೊನ್-ಮೊನ್ನೆ ಡೆಕನ್ ಹೆರಾಲ್ಡಲ್ಲಿ ಕನ್ನಡದ ಕಲಿಕೆ ಹೇಗೆ ಕನ್ನಡ ಬರದೇ ಇರೋರ ಮನೆಮನೆಗೆ ತಲುಪ್ತಾ ಇದೆ ಅಂತ ಒಂದು ವರದಿ ಬಂದಿತ್ತು. ನಿಧಾನವಾಗಾದರೂ ವಲಸಿಗರಿಗೆ ಕನ್ನಡ ಕಲಿಸಬೇಕು ಅನ್ನೋ ಬುದ್ಧಿ ಕನ್ನಡ ಜನಾಂಗಕ್ಕೆ ಬರ್ತಿರೋದು ಬಹಳ ಒಳ್ಳೇದು ಗುರು! ಈ ವಿಷ್ಯಕ್ಕೆ ಕೊಡಬೇಕಾದ ಗೌರವ ಇಲ್ಲೀವರೆಗೆ ಕನ್ನಡಿಗರು ಕೊಟ್ಟಿಲ್ದೇ ಇರೋದ್ರಿಂದ ಸಕ್ಕತ್ ಕಷ್ಟಕ್ಕೆ ಸಿಕಾಕೊಂಡಿದೀವಿ! ಆದ್ರಿಂದ ಇದನ್ನ ಒಸಿ ಬೂದ್ಗಾಜ್ ಇಟ್ಟು ನೋಡ್ಮ.

ವಲಸಿಗರು ಸ್ಥಳೀಯ ಭಾಷೆ ಕಲೀದೇ ಇರೋದು ನಾಡಿನ ಏಳ್ಗೆಗೆ ಮಾರಕ

ನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಟಲಿ, ಯಾಕೆ ಇಡೀ ಯೂರೋಪು, ಇನ್ನು ಈಕಡೆ ಇಸ್ರೇಲು - ಇವೆಲ್ಲ ಪ್ರಪಂಚದಲ್ಲಿ ಸಕ್ಕತ್ ಬೆಳ್ವಣಿಗೆ ಹೊಂದಿರೋ ದೇಶಗಳು. ಇವುಗಳ್ಗೆಲ್ಲ ಕಾಮನ್ನಾಗಿರೋ ಇನ್ನೊಂದು ವಿಷ್ಯ ಏನು ಅಂದ್ರೆ - ಇಲ್ಲೆಲ್ಲ ಜೀವನದ ಎಲ್ಲಾ ಹಂತಗಳಲ್ಲೂ, ಕೆಲಸಗಳಲ್ಲೂ ಸ್ಥಳೀಯ ಭಾಷೆಗಳ್ನೇ ಬಳಸ್ತಾರೆ. ಸಮಾಜದಲ್ಲಿ ಎಲ್ಲಾ ವ್ಯವಹಾರಗಳಷ್ಟೇ ಅಲ್ಲ, ಎಲ್ಲಾ ರೀತಿಯ ಉನ್ನತ ಶಿಕ್ಷಣ (ಇಂಜಿನಿಯರಿಂಗು, ಮೆಡಿಕಲ್ಲು ಕೂಡ) ಮತ್ತು ಉದ್ಯೋಗಗಳು - ಇದ್ಯಾವ್ದೂ ಔರೌರ ಭಾಷೇಲಲ್ದೆ ಬೇರೆ ಒಂದು ಭಾಷೇಲಿ ಮಾಡಬೇಕು ಅನ್ನೋ ಕೆಟ್ಟ ಯೋಚನೇನ ಔರು ಮನಸ್ಸಿಗೇ ತಂದ್ಕೊಂಡಿಲ್ಲ! ಒಟ್ನಲ್ಲಿ ಇವುಗಳ ಏಳ್ಗೆಗೆ ಇವುಗಳು ತಂತಮ್ಮ ಭಾಷೆಗಳ್ನ ಚೆನ್ನಾಗಿ "ಇಟ್ಕೊಂಡ್" ಇರೋದು ಬಹಳ ಮುಖ್ಯವಾದ ಕಾರಣ ಅನ್ನೋದು ಸ್ಪಷ್ಟ.

ಈ ದೇಶಗಳಿಗೂ ವಲಸಿಗರು ಬರದೆ ಏನಿಲ್ಲ. ಆದರೆ ಇವುಗಳಲ್ಲಿ ಅಲ್ಲಲ್ಲೀ ಭಾಷೆ ಕಲೀದೆ ವಲಸಿಗರ್ಗೆ ಬದುಕೋದೇ ಕಷ್ಟ ಅಂತ ನಿಮಗೆ ಗೊತ್ತಿದ್ಯಾ? ಅಲ್ಲಿಗೆ ಹೋಗೋ ಜನ ಅಲ್ಲಲ್ಲೀ ಭಾಷೆ ಕಲ್ತೇ ಕಲೀತಾರೆ. ಯಾಕೆ? ಯಕೇಂದ್ರೆ ಅಲ್ಲೀ ಜನ (ಸರ್ಕಾರಾನೂ ಸೇರಿದಂತೆ) ತಂತಮ್ಮ ಭಾಷೆಗಳ್ನ ಅಷ್ಟು ಗೌರವಿಸಿ, ಅದನ್ನ ಕಲೀದೇ ಇರೋರು ಒಳಗೆ ಬಂದ್ರೆ ಔರು ನಿಧಾನವಾಗಿ ಸ್ಥಳೀಯರಲ್ಲಿ "ಒಬ್ಬರಾ"ಗದೆ ಅವರದೇ "ರಾಜ್ಯ" ಮಾಡ್ಕೊಳಕ್ಕೆ ಶುರು ಮಾಡ್ತಾರೆ ಅನ್ನೋದ್ನ ಅರ್ಥ ಮಾಡ್ಕೊಂಡಿರೋದೇ ಮುಖ್ಯವಾದ ಕಾರಣ.

ಇದನ್ನ ನಾವೂ ಸರಿಯಾಗಿ ಅರ್ಥ ಮಾಡ್ಕೊಳ್ದೇ ಹೋದ್ರೆ ನಾವೇ ಸರ್ವನಾಶ ಆಗಿಹೋಗೋಂಥಾ ಪರಿಸ್ಥಿತಿ ಇವತ್ತು ನಮ್ಮ ಮುಂದೆ ಐತೆ ಗುರು!

ಇವತ್ತಿನ ದಿನ ಬೆಂಗ್ಳೂರಲ್ಲಿ (ಮತ್ತು ನಿಧಾನವಾಗಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮುಂತಾದ ಜಾಗಗಳಲ್ಲಿ) ವಲಸಿಗ್ರು ಬಂದು ಕನ್ನಡವನ್ನೇ ಮೂಲೆಗುಂಪು ಮಾಡಕ್ಕೆ ಹೊರ್ಟಿರೋದಕ್ಕೆ ನಮ್ಮ ಪೆದ್ದತನಾನೇ ಕಾರಣ, ನಮ್ಮ ಅತಿಯಾದ ವಿನಯಶೀಲತೇನೇ ಕಾರಣ ಗುರು! ಇದು ಹೀಗೇ ಮುಂದುವರೆದರೆ ಕನ್ನಡನಾಡು ಕನ್ನಡಿಗರದಾಗಿ ಉಳೀದೆ ಹಿಂದಿಯೋರ್ದೋ ತಮಿಳ್ರುದೋ ತೆಲುಗ್ರುದೋ ಬಂಗಾಳಿಗಳ್ದೋ ಆಗಿ ಚೂರುಚೂರಾಗೋಗತ್ತೆ ಗುರು. ಇದರಿಂದ ಕನ್ನಡಿಗರು ಸರ್ವನಾಶ ಆಗೋಗ್ತಾರೆ ಗುರು!

ಇದ್ನ ತಡೆಗಟ್ಟಕ್ಕೆ ಸರ್ಕಾರ ಮಾಡ್ಬೇಕಾಗಿರೋದು

ಇದನ್ನ ತಡೆಗಟ್ಟೋ ಕೆಲಸವನ್ನ ಕರ್ನಾಟಕ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಮೂಲಕ ಸರಿಯಾಗಿ ಮಾಡ್ಕೊಂಡ್ ಹೋದ್ರೆ ಕನ್ನಡಕ್ಕೆ (ಮತ್ತು ಅದರ ಮೂಲಕ ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ) ನಿಜವಾದ ರಕ್ಷಣೆ ಕೊಟ್ಟಂಗಾಗತ್ತೆ ಗುರು.

ನಮ್ಮ ಸರ್ಕಾರ ವಲಸಿಗರಿಗೆ ಕಡ್ಡಾಯವಾಗಿ ಕನ್ನಡ ಕಲೀಲೇಬೇಕು ಅನ್ನೋ ನಿಯಮ ಮಾಡ್ಬೇಕು. ವಲಸಿಗರು ಕನ್ನಡಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿ ಕಡೆಗಣಿಸಕ್ಕೆ ಬಿಡಬಾರದು (CBSE/ICSE ನೌರು ಇದ್ನ ಸಕ್ಕತ್ತಾಗಿ ಕಲ್ತಿದಾರೆ!). ಹಾಗೇ ಕನ್ನಡದಲ್ಲಿ ಮಾತ್ರ ಸರ್ಕಾರದ ಯಾವುದೇ ಇಲಾಖೆ ಜೊತೆ ಸುಲಭವಾಗಿ ವ್ಯವಹಾರ ಮಾಡಕ್ಕಾಗೋದು ಅನ್ನೋ ವ್ಯವಸ್ಥೆ ಜಾರಿಗೆ ತರ್ಬೇಕು. ಒಟ್ನಲ್ಲಿ ಕರ್ನಾಟಕದಲ್ಲಿ ಕನ್ನಡವಿಲ್ದೆ ಬದುಕಕ್ಕೇ ಕಷ್ಟ ಅನ್ನೋ ದಿನ ಬರ್ಬೇಕು ಗುರು. ಇದರಿಂದ ವಲಸಿಗರ್ಗೆ ಕಷ್ಟ ಕೊಡಬೇಕು ಅನ್ನೋದು ಉದ್ದೇಶವಾಗಿರಬಾರದು, ನಮಗೆ - ಅಂದ್ರೆ ಕನ್ನಡಿಗರಿಗೆ ಒಳ್ಳೇದಾಗಬೇಕು ಅನ್ನೋದೇ ಉದ್ದೇಶವಾಗಿರ್ಬೇಕು. ಕನ್ನಡನಾಡಲ್ಲಿ ವಲಸಿಗರಿಗೆ ಹೂವಿನ ಹಾಸಿಗೆ ಹಾಸಿಕೊಟ್ಟು ಕನ್ನಡಿಗರ್ನೇ ಮುಳ್ಳ ಮೇಲೆ ಬಿದ್ದುಗೊಳ್ಳಿ ಅಂತ ಹೇಳ್ತಿರೋ ಇವತ್ತಿನ ವ್ಯವಸ್ಥೇನ ಬದಲಾಯಿಸಬೇಕು ಗುರು!

ನಾವು-ನೀವು ಮಾಡಬೇಕಾಗಿರೋದು

ನಾಡಿನ ಏಳ್ಗೆಗಾಗಿ ಇನ್ನೇನು ಮಾಡದೇ ಹೋದರೂ ನಾವು ಹೊರಗಿನೋರ್ನ ಕನ್ನಡದಲ್ಲಿ ಮಾತಾಡಿಸೋದಕ್ಕಾದರೂ ಪ್ರಯತ್ನ ಪಡಬೋದಲ್ಲ? ಇದರ ಮೂಲಕಾನೇ ಕನ್ನಡ ಕಲಿಸಬೋದಲ್ಲ? ಎಷ್ಟೇ ಆದರೂ ಔರಿಗೂ ಅಕ್ಕ-ಪಕ್ಕ ಕೇಳಿ ಸೊಲ್ಪ ಕನ್ನಡ ಬಂದೇ ಬರ್ತಿರತ್ತೆ. ಔರ್ನ ಕನ್ನಡದಲ್ಲಿ ಮಾತಾಡ್ಸೋ ಪ್ರಯತ್ನ ಮಾಡದೆ ಔರೌರ್ನ ಔರೌರ್ ಭಾಷೇಲೇ ಮಾತಾಡಿಸ್ತೀವಲ್ಲ, ಅದೇ ನಾವು ಮಾಡೋ ಮೊದಲನೇ ತಪ್ಪು. ಇದ್ನ ತಿದ್ಕೋಬೇಕು ಗುರು. ಮೊದ್ಲಿಂದ್ಲೇ ಕನ್ನಡಾನ ನಾವು ಬಿಟ್ಕೊಟ್ಬುಟ್ರೆ ಔರಿಗೆ ಮೊದಲನೇ ಸೆಕೆಂಡಿಂದಾನೇ "ಓಹೋ ಇವರಿಗೇ ಕನ್ನಡ ಬೇಡ!" ಅನ್ನಿಸಿಬಿಡುತ್ತೆ. ಹೀಗಾಗಬಾರ್ದು.

ಹಾಗೇ ಕನ್ನಡ ಕಲ್ಸೋದನ್ನ ಕನ್ನಡಿಗರು "ಸಮಾಜಸೇವೆ" ಅಂತ ಯೋಚ್ನೆ ಮಾಡ್ದೆ ಅದನ್ನ ಒಂದು ಉದ್ಯಮ ಅಂತ ತೊಗೋಬೇಕು. ಇದೊಂದು ಹಳೇ ರೋಗ. ಕನ್ನಡಕ್ಕೆ ಸಂಬಂಧಪಟ್ಟಿದ್ದೆಲ್ಲ "ಸೇವೆ" ಅಂದ್ಕೊಳೋ ಅವಷ್ಯಕತೇನೇ ಇಲ್ಲ. ಇದೂ ಒಂದು ಉದ್ಯಮ. ಇದರಲ್ಲಿ ಸಕ್ಕತ್ ದುಡ್ಡಿದೆ ಗುರು! ಅಲ್ಲ - ಅದೆಲ್ಲಿಂದ್ಲೋ ಪ್ಯಾರಿಸ್ಸಿಂದ (Alliance Francaise), ಬರ್ಲಿನ್ನಿಂದ (Goethe Institut - Max Mueller Bhavan) ಬಂದು ನಮ್ಗೇ ಬೇರೆ ದೇಶಗಳ ಭಾಷೆ ಕಲಿಸ್ತಾ ಇರುವಾಗ ಕನ್ನಡನಾಡಲ್ಲೇ ಕನ್ನಡ ಕಲಿಸೋದನ್ನ ಒಂದು ಉದ್ಯಮ ಮಾಡ್ಕೊಂಡು ದುಡ್ಡು ಮಾಡ್ಕೊಳೋ ಯೋಗ್ತೇನೂ ನಮ್ಗೆ ಇಲ್ವಾ? ಖಂಡಿತ ಇದೆ ಗುರು!

ಇನ್ನು ನಮ್ಮ ನಮ್ಮ ಕಂಪನಿಗಳಲ್ಲಿ ಕನ್ನಡ-ಕಲಿ ಕಾರ್ಯಕ್ರಮಗಳ್ನ ನಡಿಸಕ್ಕೆ ಸಹಾಯ ಮಾಡಬೇಕು. ಮ್ಯಾನೇಜ್ಮೆಂಟಿನೋರು ಒಪ್ಪಲ್ಲ ಅಂತ ಮೊದಲಿಂದ್ಲೇ ಕೈಕಟ್ಟಿ ಕೂತ್ಕೋಬಾರ್ದು. [ಬನವಾಸಿ ಬಳಗದಿಂದ ಕನ್ನಡ-ಕಲಿ ಕಾರ್ಯಕ್ರಮಗಳನ್ನು ನಡೆಸೋದಕ್ಕೆ ನೆರವು ಬೇಕಾಗಿದ್ದರೆ ನಮಗೆ ಕೂಡ್ಲೆ ಮಿಂಚಿಸಿ.]

ಲಕ-ಲಕ ಅಂತ ಹೊಳೆಯುತ್ತಿದೆ ನಮ್ಮ ಕನ್ನಡ ಚಿತ್ರೋದ್ಯಮ!

ಕನ್ನಡ ಚಿತ್ರರಂಗ ಎಂದೂ ಕಾಣದ ಯಶಸ್ಸು ಕಾಣುತ್ತ ಇದೆ ಅಂತ ಡೆಕ್ಕನ್ ಹೆರಾಲ್ಡನ ಆಗಸ್ಟ ೫ರ ಸುದ್ದಿ ಹೇಳತ್ತೆ. ತೆಲುಗು ಚಿತ್ರರಂಗಕ್ಕೆ ರೀಮೆಕ್ ಮಾಡಕ್ಕೆ ಈಗ ಕನ್ನಡ ಚಿತ್ರರಂಗ ಸ್ಪೂರ್ತಿ ಅಂತ ಇನ್ನೊಂದು ಸುದ್ದಿ ಹೇಳತ್ತೆ. ನಾವೇನು ಕಮ್ಮಿ ಅಂತ ಆಂಗ್ಲ ಸುದ್ಧಿ ವಾಹಿನಿಗಳು ಕನ್ನಡ ಹೊಸ ಮುಖಗಳ ಬಗ್ಗೆ ಸುದ್ದಿ ಹಾಕ್ತಾ ಇವೆ.

ಯಶಸ್ಸನ್ನು ಗಲ್ಲಾಪೆಟ್ಟಿಗೆಯಲ್ಲಿ ಮಾಡಿರುವ ಹಣಗಳಿಕೆ ಮತ್ತು ಅದರ ಮೇಲೆ ಮಾಡಿರುವ ಬಂಡವಾಳದ ಸಮೀಕರಣದಲ್ಲಿ ಅಳೆದರೆ, ಇವತ್ತು ಭಾರತ ಚಿತ್ರರಂಗದಲ್ಲಿ ಕನ್ನಡ ಚಿತ್ರಗಳು ಕಾಣುತ್ತಿರುವ ಯಶಸ್ಸು ಬೇರೆ ಭಾಷೆಗಳಲ್ಲಿ ಆಗ್ತಾ ಇಲ್ಲ. ಕನ್ನಡ ಚಿತ್ರ ಒಂದು ಚಿತ್ರಮಂದಿರದಲ್ಲಿ ತೆರೆ ಕಂಡರೆ ಕನಿಷ್ಠ ೧೦೦ ದಿನದ ಪ್ರದರ್ಶನ ಕಾಣ್ತಾ ಇದೆ ಅಂತಾನೇ ಎಲ್ಲರ ಗಮನ ನಮ್ಮ ಮೇಲೆ ಬಂದಿದೆ.
ಹಿಂದೆ, ಸುಮ್ಕೆ ಒಂದು ಕನ್ನಡ ಚಿತ್ರ ನೋಡಿರದ ಯಾವ ಪರಭಾಷಿಕ "ಕನ್ನಡ ಚಿತ್ರನಾ, ಬೊ ಕಳಪೆ ಇರತ್ತೆ, ಗುಣಮಟ್ಟ ಸ್ವಲ್ಪಾನೂ ಇರೋದಿಲ್ಲ" ಅಂತ ಅಡಸಾ-ಉಡಾಸ ಮಾತು ಆಡ್ತಾ ಇದ್ದನೊ, ಅವನೇ ಇವತ್ತು ಕನ್ನಡ ಚಿತ್ರಗಳನ್ನು ನೋಡ್ತಾ ಇರೋದೇ ಇದ್ಕೆ ಸಾಕ್ಷಿ.

ಹೊಸ ಅಲೆ
ಮುಖ್ಯವಾಗಿ ೨೦೦೪ ನಂತರ ಕನ್ನಡ ಚಿತ್ರೊದ್ಯಮ ಬಹಳಷ್ಟು ರೀತಿಯಲ್ಲಿ ಬೆಳದಿದೆ. ಹೊಸ ಪ್ರತಿಭೆಗಳು ಎಲ್ಲಾ ರಂಗದಲ್ಲಿ ಗುರುತಿಸಿ, ಮನ್ನಣೆ ಕೊಟ್ಟಿದೆ, ಅದ್ಕೆ ನೋಡು ಬಂದೊರೆಲ್ಲ ಹೊಸ ಪ್ರಯೋಗ ಮಾಡ್ತಾ ಅವ್ರೆ. ಇದು ಒಂದು ಹೊಸ ತರಹದ ಆರೋಗ್ಯಕರ ಸ್ಪರ್ಧೆಯನ್ನು ಎರ್ಪಡಿಸಿದೆ. ಪ್ರತಿಯೊಬ್ಬನೂ ಒಳ್ಳೆ ಗುಣಮಟ್ಟದ ಚಿತ್ರ ಮಾಡಲೇ ಬೇಕು, ಇಲ್ಲಾಂದ್ರೆ ಉಳಿಗಾಲವಿಲ್ಲ ಅನ್ನೋ ಜವಾಬ್ದಾರಿಯನ್ನು ತಂದಿದೆ. ಏನೇ ಹೇಳು ಗುರು, ಇಂದು ಕನ್ನಡ ಚಿತ್ರರಂಗದ ಸರ್ವತೋಮುಖ ಬೆಳವಣಿಗೆಗೆ ಕಾಣ್ತಾ ಇದೆ.

ಮಾರುಕಟ್ಟೆ ವಿಸ್ತರಣೆ
ಕನ್ನಡ ಚಿತ್ರ ಅಂದ್ರೆ ಕೇವಲ ಬಿ.ಕೆ.ಟಿ. ಕೇಂದ್ರಗಳಿಗೆ ಮಾತ್ರ ಅನ್ನೋ ಕಾಲ ಹೋಗಿದೆ. ಈಗ ದೇಶವಿದೇಶಗಳಲ್ಲಿ ಕನ್ನಡ ಚಿತ್ರಗಳು ಎಕಕಾಲದಲ್ಲಿ ತೆರೆ ಕಂಡು, ಅಲ್ಲಿ ಕೂಡ ಭರ್ಜರಿ ಯಶಸ್ಸನ್ನು ಕಾಣುತ್ತಾ ಇವೆ. ಅದಕ್ಕೆ ನೋಡು ಗುರು ಪುಣೆಯಲ್ಲಿ/ಅಮೇರಿಕಾ/ಲಂಡನ್/ಚೆನ್ನೈಯಲ್ಲಿ ಕೂಡ ಮುಂಗಾರು ಮಳೆ ಚಿತ್ರ ಜಯಭೇರಿ ಬಾರಿಸಿದೆ. ನಾವು ಬೇರೆ ಚಿತ್ರಗಳಿಗೆ ಇಲ್ಲಿ ಮಾರುಕಟ್ಟೆ ಕೊಟ್ಟು, ನಾವು ಅವರ ಮಾರುಕಟ್ಟೆಯ ಲಾಭ ಪಡೆಯದಿದ್ದರೆ ಅದು ನಮ್ಮ ಮೂರ್ಖತನವನ್ನು ತೋರಿಸುತ್ತದೆ ಅಷ್ಟೆ. ಒಟ್ಟಿನಲ್ಲಿ ಯಶಸ್ಸು ಹೀಗೆ ಇರಬೇಕಾದರೆ ಮಾರುಕಟ್ಟೆ ವಿಸ್ತಾರ ಆಗಲೇಬೇಕು.

ಹೆಚ್ಚಿದ ಬಂಡವಾಳ
ಮಾರುಕಟ್ಟೆ ವಿಸ್ತರಣೆ ಆದರೆ ಸ್ವಾಭಾವಿಕವಾಗಿ ಚಿತ್ರದ ಮೇಲೆ ಹಾಕುವ ಬಂಡವಾಳ ಕೂಡ ಹೆಚ್ಚಾಗುತ್ತದೆ. ಇದರಿಂದ ಉತ್ತಮ ತಂತ್ರಜ್ಞಾನವನ್ನು ನಮ್ಮ ಕನ್ನಡ ಚಿತ್ರಗಳಲ್ಲಿ ಕಾಣಬಹುದು. ಚಿತ್ರಕ್ಕೆ ಎಷ್ಟು ಖರ್ಚಾದರೂ ಚಿಂತೆ ಇಲ್ಲಾ, ಗುಣಮಟ್ಟದಲ್ಲಿ ರಾಜಿ ಬೇಡ ಅನ್ನುವ ಹೊಸ ಪ್ರಜ್ಞೆ ಮೂಡಿದೆ. ನಾಳೆ ಕನ್ನಡ ಚಿತ್ರೋದ್ಯಮ ಒಂದು ಲಾಭದಾಯಕ ಉದ್ಯಮ ಎಂದು ಅನಿಸಿದರೆ "ಕೊಲಂಬಿಯಾ","ವಾರ್ನರ್ " ಮುಂತಾದ ಹಾಲಿವುಡ್ ಚಿತ್ರ ನಿರ್ಮಾಣದವರೂ ಕೈ ಹಾಕ್ತಾರೆ, ಹಾಕಬೇಕು ಕೂಡ.

ಪ್ರಚಾರ
ಪ್ರತಿ ಚಿತ್ರಗಳೂ ಇಂದು ತಮ್ಮ ಪ್ರಚಾರಕ್ಕೆ ಎಲ್ಲಾ ಮಾಧ್ಯಮಗಳನ್ನು ಬಳಸಿಕೊಳ್ತವ್ರೆ. ಅದರಲ್ಲೂ ಎಫ್.ಎಮ್, ಟಿ.ವಿ. ವಾಹಿನಿಗಳು ಮತ್ತು ಪತ್ರಿಕೆಗಳು ಹೊಸ ಹೊಸ ಕನ್ನಡ ಚಿತ್ರಗಳ ಜೊತೆ ಒಪ್ಪಂದ ಮಾಡಿಕೊಂಡು ಅದರ ಬಗ್ಗೆ ಪ್ರಚಾರ ಕೊಟ್ಟು, ಹೆಚ್ಚು ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನ ಮಾಡ್ತಾನೆ ಅವ್ರೆ. ಅದ್ಕೆ ನೋಡಿ, ಚಿತ್ರ ತೆರೆಗೆ ಬರೋ ಮುಂಚೇನೇ ಅದರ ಹಾಡುಗಳು ಜನಪ್ರಿಯ ಆಗ್ತಾ ಇರೋದು. ಒಟ್ಟಾರೆ ಇದು ಕೂಡ ಒಂದು ಒಳ್ಳೆಯ ಹೆಜ್ಜೆ ಅಂತ ಹೇಳಬಹುದು.

ಹೆಚ್ಚು ಚಿತ್ರಮಂದಿರ
ಮೇಲೆ ಹೇಳಿದ ಹಾಗೆ ಚಿತ್ರೋದ್ಯಮದಲ್ಲಿ ಹೆಚ್ಚು ಚಿತ್ರಗಳು ಯಶಸ್ಸು ಕಂಡರೆ ಅದಕ್ಕೆ ಪೂರಕವಾಗಿ ಹೆಚ್ಚಿನ ಚಿತ್ರಮಂದಿರಗಳು ಇರಬೇಕು. ಕರ್ನಾಟಕದಲ್ಲಿ ಹೆಚ್ಚು ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಮೀಸಲು ಇರಬೇಕು. ಕನ್ನಡ ಚಿತ್ರಗಳು ಇರದ್ದಿದಾಗ ಮಾತ್ರ ಪರಭಾಷೆಗೆ ಬಿಡಬೇಕು. ಇಲ್ಲಾಂದ್ರೆ, ತೆರೆಗೆ ಬರಬೇಕಾಗಿರೋ ಚಿತ್ರಗಳಿಗೆ ಹೊಡೆತ ಬೀಳ್ತದೆ. ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಗುನ್ನ.

ಕೊನೆ ಗುಟುಕು
Hollywood Economics ಹೇಳೋ ಹಾಗೆ
"The success rates for R-rated movies is just 6% ,where as 13% for G-PG rated movies are hit and 10% percent of PG13 movies are hits."

ಏನಪ್ಪಾ ಅಂದ್ರೆ, ತೆರೆಕಾಣೋ ೧೦೦ ಚಿತ್ರಗಳಲ್ಲಿ , ಕೇವಲ ೧೦% ಮಾತ್ರ ಯಶಸ್ಸನ್ನು ಹೊಂದುತ್ತವೆ. ಇನ್ನಾ ಸರಳವಾಗಿ ಹೇಳ್ಬೇಕು ಅಂದ್ರೆ, ಕನ್ನಡ ಚಿತ್ರರಂಗದಲ್ಲಿ ತೆರೆ ಕಾಣೊ ಚಿತ್ರಗಳೆಲ್ಲ ಮುಂಗಾರುಮಳೆ-ದುನಿಯಾ ಆಗಲಾರವು.ಇದನ್ನ ನಾವು ಮರೀಬಾರ್ದು.

ಬಾನಲ್ಲೂ ನೀನೇ, ಭುವಿಯಲ್ಲು ನೀನೇ, ಸಿಂಗಾಪುರ್ ಏರ್ಲೈನ್ಸಲ್ಲೂ ನೀನೇ!

ಕಳೆದ ಭಾನುವಾರದ ವಿ.ಕ.ದಲ್ಲಿ ಶ್ರೀ ವಿಶ್ವೇಶ್ವರ ಭಟ್ಟರು ಸಿಂಗಾಪುರ್ ಎರಲೈನ್ನ್ ನಲ್ಲಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಕನ್ನಡದ್ ಮೆನು ನೋಡಿ ಸಕ್ಕತ್ ಸಂತೋಷ ಪಟ್ಟು ಬರ್ದಿದಾರೆ. ಸಂತೋಷದ್ ವಿಷ್ಯಾನೇ, ಗುರು!

2004-2005 ರಲ್ಲಿ "ವಿಮಾನಗಳಲ್ಲಿ ಕನ್ನಡ" ಅನ್ನೋ ಬಗ್ಗೆ ಸಕ್ಕತ್ ಚರ್ಚೆಯಾಗಿ ವಿಮಾನಗಳಲ್ಲಿ ಓಡಾಡೋ ಬಹಳ ಕನ್ನಡಿಗರು ಬಳಗದ ಜೊತೆ ಸೇರಿ ಒಗ್ಗಟ್ಟಿಂದ ಲುಫ್ತಾನ್ಸಾ ಮತ್ತೆ ಸಿಂಗಾಪುರ್ ಎರಲೈನ್ಸಗಳ ಗ್ರಾಹಕ ಸೇವೆನೋರಿಗೆ ಕನ್ನಡದಲ್ ಸೇವೆ ಕೊಡಿ ಅಂತ ಮಿಂಚೆಗಳ ಹೊಳೆ ಹರಿಸಿ ಕೇಳ್ಕೊಂಡಿದ್ವು. ಅದಕ್ಕೆ ಸ್ಪಂದಿಸಿ ಸಿಂಗಾಪುರ್ ಎರಲೈನ್ಸ್ ನೋರು 2005 ಮಾರ್ಚಿಯಿಂದ ಕನ್ನಡದಲ್ಲಿ ಮೆನು ಇಡ್ತೀವಿ ಅಂತ ನಮಗೆ ಮಾತು ಕೊಟ್ಟಿದ್ರು:
From: SAA_Feedback@singaporeair.com.sg

Thank you for your email reply dated 19 February.

I appreciate the time and effort taken to convey your feedback to us. I have highlighted your comments to the relevant Departmental Heads for their attention and consideration.

I am also pleased to share with you that menu cards in KannaDa will be made available from March 2005 onwards.

Thank you for flying with Singapore Airlines. We look forward to welcoming you on board our flights again soon.

Yours sincerely

Chin Hsiang San (Ms)
Manager Customer Services

ಕೊಟ್ಟ ಮಾತ್ನ ಸಿಂಗಾಪುರ್ ಏರ್ಲೈನ್ಸ್ ನೋರು ಉಳಿಸಿಕೊಂಡಿದಾರೆ ಅನ್ನೋದು ಒಳ್ಳೇ ಸುದ್ದಿ ಗುರು!

ಇವತ್ತಿನ ದಿನ ಬೆಂಗಳೂರಿಂದ ಹುಬ್ಬಳ್ಳಿಗೆ ಹೋಗೋ ವಿಮಾನಗಳಲ್ಲಿ ಕನ್ನಡ ಇಲ್ಲ, ಇರೋದು ಹಿಂದಿ ಮತ್ತೆ ಇಂಗ್ಲೀಷು. ಇದಕ್ಕೆ ಒಪ್ಪಿಕೊಂಡು ಯಾಕ್ ಕೂತ್ಕೋಬೇಕು? ಗಿರಾಕೀಗ್ ಬೇಕಾಗಿರೋದನ್ನ ಕಂಪನಿಯೋರು ಕೊಡಬೇಕೋ ಇಲ್ಲಾ ಔರು ಕೊಟ್ಟಿದ್ನ ಗಿರಾಕಿಗಳು ಇಸ್ಕೋಬೇಕೋ? ಹಿಂದೀನಂತೂ ಇಂತಾ ಕಡೆಯಲ್ಲಾ ಮೆರ್ಸಿ ಮೆರ್ಸಿ ಅದಕ್ಕೆ ಇಲ್ಲದ ಒಪ್ಪುಗೆ ಭಾರತದಲ್ಲಿ ಇದೆ ಅನ್ನೋ ಸುಳ್ನ ಪ್ರಪಂಚಕ್ಕೆಲ್ಲಾ ಇಲ್ಲೀವರೆಗೂ ಹೇಳ್ಕೊಂಡ್ ಬಂದಿರೋದಂತೂ ಮನೆಹಾಳು ಕೆಲ್ಸಾನೇ ಗುರು! ಬೆಂಗಳೂರಿಂದ ಚೆನ್ನೈಗೆ ಹೋಗೋ ವಿಮಾನಗಳಲ್ಲೂ ಹಿಂದೀಲಿ ಮಾತಾಡೋರ್ನ ಕೂರ್ಸಿ, ಹಿಂದೀಲಿ ಸೂಚನೆಗಳ್ನ ಕೊಡಿಸೋ ಪೆದ್ದತನ ಮೊದ್ಲು ಶುರುವಾಗಿದ್ದು ಇಂಡಿಯನ್ ಏರ್ಲೈನ್ಸ್ ನಿಂದ. ಅದೇ ರೋಗ ಈಗ ಜೆಟ್ಟು-ಕಿಂಗ್ಫಿಷರ್ರುಗಳಿಗೂ ಅಂಟ್ಕೊಂಡಿದೆ, ಲುಫ್ತಾನ್ಸಾ-ಗಿಫ್ತಾನ್ಸಾಗಳ್ಗೂ ಅಂಟ್ಕೊಂಡಿದೆ ಅಷ್ಟೆ.

ಕರ್ನಾಟಕದ ಯಾವುದೇ ಊರಿಂದ/ಊರಿಗೆ ಹಾರೋ ಈ ಹಕ್ಕಿಗಳಿಗೆ ಬಂದಿರೋ ರೋಗಕ್ಕೆ ಮದ್ದು ಇದ್ದೇ ಇದೆ, ಕುಡುಸ್ಬೇಕು, ಅಷ್ಟೆ:

"ವಿಮಾನದಲ್ಲಿ ಓಡಾಡುವಾಗ ಕನ್ನಡದಲ್ಲಿ ಮಾತಾಡೋದು ಅಂದ್ರೇನು? ಛೆ! ಛೆ!...ಇಷ್ಟು ಮೇಲೆ ಬಂದು ಕನ್ನಡ ಮಾತಾಡೋದು ಅಂದ್ರೇನು!" ಅಂದುಕೊಳ್ಳೋಷ್ಟು ಕೀಳರಿಮೇನ ಹೂತಾಕ್ಬೇಕು! ಕೇಳಬೇಕು, ಕನ್ನಡದಲ್ಲಿ ಸೇವೆ ಕೊಡಿ ಅಂತ ಒತ್ತಾಯ ಮಾಡ್ಬೇಕು! ಪಡ್ಕೊಳೋದು ನಮ್ಮ ಹಕ್ಕು, ಕೊಡೋದು ನಿಮ್ಮ ಕರ್ತವ್ಯ ಅಂತ ಗದರುಹಾಕ್ಬೇಕು! ಮೆನು ಅಷ್ಟೇ ಅಲ್ಲ, ಅಲ್ಲಿಟ್ಟಿರೋ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿ, ಬಾಂಗೆಳತಿಯರ/ಗೆಳೆಯರ ಮಾತು, ಅಲ್ಲಿಲ್ಲಿ ಅಂಟಿಸಿರೋ ಸೂಚನೆಗಳು, ಹತ್ತೋ ಪಾಸು, ಔರು ಕೊಡೋ ತಿಂಡಿಗಳ ಕವರ್ಗಳ ಮೇಲೆ ಬರ್ದಿರೋ ಮಾಹಿತಿ, ಮನರಂಜನೆ, ಕಾಗದದ್ ಲೋಟದ ಮೇಲೆ ಬರ್ದಿರೋ ಹಾಳು-ಮೂಳು, ಎಲ್ಲವೂ ಕನ್ನಡದಲ್ಲೇ ಇರಬೇಕು ಅಂತ ಒತ್ತಾಯ ಮಾಡ್ಬೇಕು.

ಅದು ಬಾನೇ ಆಗಲಿ ಭುವಿಯೇ ಆಗಲಿ, ಕನ್ನಡದಲ್ಲಿ ಸೇವೆ ಪಡ್ಕೊಳೋದು ನಮ್ಮ ಹಕ್ಕು. ಕಾನೂನು ಕೂಡ ಇದನ್ನೇ ಹೇಳೋದು. ಕನ್ನಡದಲ್ಲಿ ಸೇವೆ ಕೊಡಲ್ಲ ಅಂದ್ರೆ ಅಂತೌರಿಗೆ ಕನ್ನಡ ನಾಡಲ್ಲಿ ಯಾಪಾರ ಮಾಡಕ್ಕೆ ಹಕ್ಕೇ ಇಲ್ಲ ಗುರು!

ಇನ್ನೂ ಲುಫ್ತಾನ್ಸಾ ಆಗ್ಲಿ ಬೇರೆ ವಿಮಾನ ಸಂಸ್ಥೆಗಳಾಗ್ಲಿ ಉತ್ರ ಕೊಟ್ಟಿಲ್ಲ. ನೆ.ನ.ಪಿ.ರ.ಲಿ.!

ಬಸ್ ಮನರಂಜನೆ ಇನ್ನು ಕನ್ನಡದಲ್ಲಿ ಮಾತ್ರ

ಇಲ್ಲೀ ವರೆಗೆ ಕರ್ನಾಟಕದ ಒಂದು ಊರಿಂದ ಇನ್ನೊಂದು ಊರಿಗೆ ಹೋಗೋ "ಕರಾರಸಾಸಂ" ಬಸ್ಸುಗಳಲ್ಲಿ ನಮಗೆ ಒಂಚೂರೂ ಸಂಬಂಧವಿಲ್ಲದ ಭಾಷೆಗಳ ಚಿತ್ರಗಳನ್ನು, ಹಾಡುಗಳನ್ನು ಹಾಕ್ತಿದ್ರಲ್ಲ, ಆ ಅಸಂಬದ್ಧತೆಗೆ ಇನ್ನೇನು ತೆರೆ ಬೀಳಲಿದೆ. ಕೊನೆಗೂ ಕರಾರಸಾಸಂಗೆ ಜ್ಞಾನೋದಯ ಆಗಿ ಇನ್ನು ಮೇಲೆ ಕಡ್ಡಾಯವಾಗಿ ಮನರಂಜನೆ ಕನ್ನಡದಲ್ಲೇ ಇರಬೇಕು ಅಂತ ಸುತ್ತೋಲೆ ಹೊರಡಿಸಿದೆ.

ಬೇರೆ ರಾಜ್ಯಗಳ ನಡುವ ಓಡಾಡುವ ಬಸ್ಸುಗಳಲ್ಲಿ ಮಾತ್ರ ಪ್ರಯಾಣಿಕರು ಕೇಳಿದರೆ ಬೇರೆ ಭಾಷೆಯಲ್ಲಿ ಮನರಂಜನೆ ಸಿಗತ್ತಂತೆ. ಇದು ಸಾಧುವೇ ಸರಿ. ಇನ್ನು ಕನ್ನಡಿಗರು ಚೆನ್ನೈಗೆ ಹೋಗ್ತಿದ್ರೆ "ನಮಗೆ ಕನ್ನಡ ಚಿತ್ರ ಬೇಕು" ಅಂತ ಕೇಳಬೇಕಷ್ಟೆ. ಕೇಳಿದರೆ ಇಲ್ಲ ಅನ್ನೋಹಂಗಿಲ್ಲ. ಇಬ್ಬರು ಹಿಂದಿಯೋರು ಎದ್ದು ಹಿಂದಿ ಬೇಕು ಅಂದ್ರೆ, ಇಲ್ಲಾ ಇಬ್ಬರು ತಮಿಳ್ರು ಎದ್ದು ತಮಿಳ್ ಬೇಕು ಅಂದ್ರೆ ಮಿಕ್ಕ ನಲವತ್ತು ಜನ ಕನ್ನಡದೋರು ಸುಮ್ಕೆ ಕೂತಿರಬಾರ್ದು, ಅಷ್ಟೆ. ಎದ್ದು ಹಕ್ಕು ಚಲಾಯಿಸಿಕೊಳ್ಳಬೇಕು. ಸೊಲ್ಪ ಮುನ್ನುಗ್ಗೋದನ್ನ ಕಲೀಬೇಕಷ್ಟೆ. "ಅಯ್ಯೋ ಔರು ಬೇಜಾರ್ ಮಾಡ್ಕೊತಾರೆ" ಅನ್ಕೊಂಡ್ ಕೂತಿದ್ದಕ್ಕೇ ಇಷ್ಟು ತಡವಾಗಿ ಕರಾರಸಾಸಂಗೆ ಬುದ್ಧಿ ಬರ್ತಿರೋದು.
Related Posts with Thumbnails