ಹೊಸಗನ್ನಡದ ಬೆಳವಣಿಗೆಗೆ ಹಳೆಗನ್ನಡದ ಕಲಿಕೆ ಬೇಕು

ಇತ್ತೀಚೆಗೆ ಬೆಂಗ್ಳೂರಿನ ಗೋಖಲೆ ಸಂಸ್ಥೇಲಿ ನಡೆದ ಹಳೆಗನ್ನಡ ಕಾವ್ಯ ಶಿಬಿರದಲ್ಲಿ ಹಳೆಗನ್ನಡ ಮತ್ತೆ ಕಲೀಬೇಕು ಅನ್ನೋ ಕರೆ ನೀಡಲಾಯ್ತು ಅಂತ 15ನೇ ಅಕ್ಟೋಬರಿನ ವಿ.ಕ ಪತ್ರಿಕೆ ವರದಿ ಮಾಡಿದೆ. ಕನ್ನಡದ ಪದಸಿರಿ ಬೆಳೀಬೇಕಾದ್ರೆ, ಕನ್ನಡಕ್ಕೆ ಸರಿಯಾದ ವ್ಯಾಕರಣ ಬರೀಬೇಕಾದ್ರೆ, ಕನ್ನಡದ ಹುಟ್ಟಿನ ನಿಜ ಏನು ತಿಳ್ಕೋಬೇಕದ್ರೆ ಹಳೆಗನ್ನಡಾನ ಆಳವಾಗಿ ಅಧ್ಯಯನ ಮಾಡದೆ ಸಾಧ್ಯವೇ ಇಲ್ಲ ಗುರು!

ಹಳೆಗನ್ನಡ ಹೊಸಗನ್ನಡಕ್ಕೆ "ಹೊಸ" ಪದಗಳ ಮೂಲ

ಇವತ್ತಿನ ದಿನ ಕನ್ನಡಕ್ಕೆ ಹೊಸ ಪದಗಳ್ನ ಸೇರ್ಸೋವಾಗ ಕನ್ನಡಿಗನ ಬಾಯಲ್ಲಿ ಹೊರಡಲಿ ಬಿಡಲಿ ಸಂಸ್ಕೃತದಿಂದ ಪದಗಳ್ನ ತಂದು ತುರುಕೋ ಗುಂಗಿಗೆ ನಾವು ಬಿದ್ದಿದೀವಿ. ಇದು ಬಿಟ್ಟು ಹಳೆಗನ್ನಡದಿಂದ ಎಷ್ಟೋ ಪದಗಳ್ನ ಮತ್ತೆ ಚಾಲ್ತಿಗೆ ತರಬೋದು ಗುರು! ಹೊಸ ಪದಗಳ್ನ ಹುಟ್ಟಿಸುವಾಗ ಬೇರೆ ಭಾಷೆಗಳಲ್ಲಿರೋ ಒಂದು ಪದಕ್ಕೆ ಕನ್ನಡದಲ್ಲೂ ಒಂದೇ ಪದ ಹುಡುಕೋರಿಗೆ ಹಳೆಗನ್ನಡದ ಅಧ್ಯಯನ ಸಕ್ಕತ್ ನೆರವಾಗತ್ತೆ.

ಕನ್ನಡದ ವ್ಯಾಕರಣದ ರಿಪೇರಿಗೆ ಹಳೆಗನ್ನಡ

ನಮ್ಮ ಇಂದಿನ ಕನ್ನಡದ ವ್ಯಾಕರಣದಲ್ಲಿ ನಮ್ಮದಲ್ಲದ ವ್ಯಾಕರಣದ ಅಂಶಗಳು ತುಂಬಿಹೋಗಿ ವ್ಯಾಕರಣ ಅನ್ನೋದು ಒಂದು ಕಬ್ಬಿಣದ ಕಡಲೆ ಆಗೋಗಿದೆ. ಕನ್ನಡಕ್ಕೆ ಒಂದು ತನ್ನದೇ ಆದ ವ್ಯಾಕರಣ ಅನ್ನೋದು ಇವತ್ತಿಗೂ ಸರಿಯಾಗಿ ಇಲ್ಲ. ಇದಕ್ಕೆ ಮೂಲ ಕಾರಣ ಕನ್ನಡದ ವ್ಯಾಕರಣವನ್ನ ಸಂಸ್ಕೃತದ ಒಂದು ಉಪವ್ಯಾಕರಣ ಅಂತ ಪರಿಗಣಿಸಿರೋದು. ಇದು ಬಿಟ್ಟು ಕನ್ನಡದ ವ್ಯಾಕರಣ ಬರಿಯೋರು ಹಳೆಗನ್ನಡದ ಅಧ್ಯಯನ ಮಾಡಬೇಕು ಗುರು! ಉದಾಹರಣೆಗೆ ಕನ್ನಡದಲ್ಲಿ ಐದನೇ ವಿಭಕ್ತಿ ಪ್ರತ್ಯಯ ಇದೆ ಅಂತ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಹೇಳ್ಕೊಡ್ತಿರೋದು ಕನ್ನಡದ ಕೊಲೆ ಗುರು! ಕನ್ನಡಿಗನ ನಾಲಿಗೆಯಲ್ಲಿ ಇವತ್ತಿಗೂ ಮಹಾಪ್ರಾಣಗಳು ಮತ್ತು ಒಂದು ಅಕ್ಷರಕ್ಕೆ ಬೇರೆ ಒಂದು ಅಕ್ಷರ ಒತ್ತಕ್ಷರವಾಗಿ ಬರೋದು ಬಹಳ ಕಡಿಮೆ. ಹಳೆಗನ್ನಡ ಸ್ವಲ್ಪ ಕಲ್ತ್ರೆ ಇನ್ನು ಮುಂದೆ "ಔನು ಹಳ್ಳಿ ಗುಗ್ಗು, ಅವನ ಬಾಯಲ್ಲಿ ಮಹಾಪ್ರಾಣ ಹೊರಳಲ್ಲ" ಅನ್ನೋ ಮಾತು ನಮ್ಮ ಬಾಯಲ್ಲಿ ಬರಲ್ಲ ಗುರು! ನಿಜಕ್ಕೂ ತಲೆತಲಾಂತರದಿಂದ ನಮ್ಮ ಬಾಯಲ್ಲಿ ಮಹಾಪ್ರಾಣ ಹೊರಳಿಲ್ಲ! ಹಳೆಗನ್ನಡದಲ್ಲಿ ಪದಗಳ ಸ್ವರೂಪ ಅರ್ಥವಾಗೋದು ಇವತ್ತಿನ ದಿನ ಹೊಸ ಪದಗಳ್ನ ಹುಟ್ಟಿಸೋದಕ್ಕೆ ಬಹಳ ಮುಖ್ಯಾಮ್ಮಾ!

ಹಳೆಗನ್ನಡ ಕನ್ನಡ ಜನಾಂಗದ ಇತಿಹಾಸಕ್ಕೆ ಕನ್ನಡಿ

ಹಳೆಗನ್ನಡದಲ್ಲಿರೋ ಬರಹಗಳ್ನ ಸರಿಯಾಗಿ ಅಧ್ಯಯನ ಮಾಡಿದಾಗಲೇ ನಮ್ಮ ಭಾಷೆಯ ನಿಜವಾದ ಮೂಲದ ಬಗ್ಗೆ ಸರಿಯಾದ ಮಾಹಿತಿ ದೊರಕೋದು. ಸಂಸ್ಕೃತದಿಂದ ಎಲ್ಲಾ ಭಾಷೆಗಳು ಹುಟ್ಟಿವೆ, ಅದ್ರಲ್ಲಿ ಕನ್ನಡವೂ ಒಂದು ಅಂತೆಲ್ಲ ತಪ್ಪು ತಿಳುವಳಿಕೆ ಇವತ್ತು ಮಾರುಕಟ್ಟೆಯಲ್ಲಿರೋದಕ್ಕೆ ಕಾರಣವೇ ಹಳೆಗನ್ನಡದಿಂದ ಕನ್ನಡಿಗರು ದೂರ ಇರೋದು.

ಇದೇ ಕನ್ನಡ ಜನಾಂಗದ ಜನಜೀವನ ಕೆಲ ಶತಮಾನಗಳ ಹಿಂದೆ ಹೇಗಿತ್ತು ಅಂತ ತಿಳ್ಕೊಳೋಕ್ಕೆ ಬೇಕಾದ ವಸ್ತು ಹಳೆಗನ್ನಡದ ಹೊತ್ತಿಗೆಗಳಲ್ಲೇ ಇರೋದು. ಜನರ ಆರ್ಥಿಕ ಪರಿಸ್ಥಿತಿ, ಇತಿಹಾಸ ಇವೆಲ್ಲಾ ತಿಳ್ಕೊಳಕ್ಕೆ ಇಷ್ಟ ಪಡೋರಿಗೂ ಹಳೆಗನ್ನಡ ಬೇಕೇ ಬೇಕು. ನಮ್ಮ ಇತಿಹಾಸ ಸರಿಯಾಗಿ ತಿಳ್ಕೊಳೋದು ನಮಗೆ ತುಂಬ ಮುಖ್ಯ ಗುರು! ಅದನ್ನ ನಾವು ಸರಿಯಾಗಿ ತಿಳ್ಕೊಳ್ದೇ ಹೋದ್ರೆ ಇನ್ನ್ಯಾರೋ ಬಂದು ತಮ್ಗೆ ಬೇಕಾಗೋ ಹಾಗೆ ಇತಿಹಾಸನ ನಮ್ಗೇ ಹೇಳ್ಕೊಡಕ್ಕ್ ಶುರು ಹಚ್ಕೋಳ್ತಾರೆ ಗುರು! ನಮ್ಮ ನಿಜವಾದ ಇತಿಹಾಸ ತಿಳ್ಕೊಂಡ್ರೆನೇ ನಾವು ಯಾರು ಅನ್ನೋದು ಅರ್ಥ ಆಗೋದು ಗುರು!

ಇವೆಲ್ಲಾ ಯಾಕೆ? ನಮ್ಮ ಬಗ್ಗೆ, ನಮ್ಮ ಇತಿಹಾಸದ ಬಗ್ಗೆ, ನಮ್ಮ ಲಿಪಿಯ ಬಗ್ಗೆ, ನಮ್ಮ ಪದಗಳ ಬಗ್ಗೆ, ನಮ್ಮ ವಿಶೇಷತೆಯ ಬಗ್ಗೆ ಒಂಚೂರು ಕುತೂಹಲ ನಿಮಗೆ ಇದ್ಯಾ? ಇದ್ದ್ರೆ ಹಳೆಗನ್ನಡದ ಅಧ್ಯಯನಕ್ಕೆ ಕೈ ಹಾಕು ಗುರು!

ಬಂಗಾರಪ್ಪನೋರು ಬಂಗಾರದಂಥಾ ಕೆಲಸ ಮಾಡಬೋದಿತ್ತು!

ಮೊನ್ನೆ ತಾನೆ ನಾಡಿನ ಮಾಜಿ ಮುಖ್ಯಮಂತ್ರಿಗಳಾದ ಸಾರೆಕೊಪ್ಪದ ಶ್ರೀ ಬಂಗಾರಪ್ಪನೋರು ಎಪ್ಪತ್ತೈದು ವರ್ಷ ಪೂರೈಸಿದ್ರು ಅಂತ ದೊಡ್ದ ಸಮಾರಂಭ ನಡೀತು. ಮಾನ್ಯ ಬಂಗಾರಪ್ಪನವರಿಗೆ ನಮ್ಮ ಅಭಿನಂದನೆಗಳು. ಎಲ್ಲಾ ಸರಿ, ಆದ್ರೆ ಔರು ತಮ್ಮದೇ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ನಮ್ಮ ನಾಡಿಗೆ ನಿಜವಾದ ನಾಯಕತ್ವ ಕೊಡೋ ಬದ್ಲು ಕೆಲಸಕ್ಕೆ ಬಾರದ, ನಾಡಿಗೆ ಒಂಚೂರೂ ಸಂಬಂಧವಿಲ್ಲದ ಸಮಾಜವಾದಿ ಪಕ್ಷಾನ ಸೇರಿರೋದು ಸರೀನಾ ಗುರು?

ಒಂದು ಕನ್ನಡಪರ ಪಕ್ಷ ಕಟ್ಟೋ ಶಕ್ತಿ ಬಂಗಾರಪ್ನೋರಿಗೆ ಇಲ್ವಾ?

ಬಂಗಾರಪ್ಪನೋರ ಹೋರಾಟದ ಬದುಕು, ಅವರ ಅಧಿಕಾರದ ದಿನಗಳ ಸಾಧನೆಗಳು, ಕಾವೇರಿ ನದಿ ನೀರು ಹಂಚಿಕೆಗೆ ವಿಷಯದಲ್ಲಿ ಅವರ ಸರ್ಕಾರ ತೊಗೊಂಡ ದಿಟ್ಟತನದ ನಿಲುವುಗಳು, ಹೊರಡಿಸಿದ ಸುಗ್ರೀವಾಜ್ಞೆ; ಔರು ಇದ್ದು, ಕಟ್ಟಿ, ಬೆಳೆಸಿದ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷ, ಕರ್ನಾಟಕ ಕಾಂಗ್ರೆಸ್ ಪಾರ್ಟಿ ಅನ್ನೋ ರಾಜಕೀಯ ಪಕ್ಷಗಳು; 1967ರಿಂದ 1996ರ ತನಕ ಸತತವಾಗಿ ಶಾಸಕರಾಗಿದ್ದು; ಲೋಕಸಭಾ ಸದಸ್ಯರಾಗಿರುವ ಅನುಭವಗಳು; ಇವೆಲ್ಲದರ ಜೊತೆಗೆ ಬಂಗಾರಪ್ನೋರಿಗೆ ಮೈತುಂಬಿ ಬಂದಿರೋ ಕೆಚ್ಚು, ಸಾಮರ್ಥ್ಯಗಳಿಗೆ ತಾವೇ ಒಂದು ರಾಜಕೀಯ ಪಕ್ಷ ಕಟ್ಟೋದು ಕಷ್ಟವೇನು ಆಗ್ತಿರಲಿಲ್ಲ ಗುರು!

ಕನ್ನಡಿಗರಿಗೆ ಸಂಬಂಧವಿಲ್ಲದ ಸಮಾಜವಾದಿ ಪಕ್ಷ


ಸಮಾಜವಾದಿ ಪಕ್ಷ ಯಾವುದೋ ದೂರದಲ್ಲಿನ ಮತ್ತು ಕನ್ನಡಿಗರಿಗೆ ಸಂಬಂಧ ಇಲ್ಲದ ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷ ಗುರು! ಉತ್ತರ ಪ್ರದೇಶದ ಈ ಪಕ್ಷಕ್ಕೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇರಕ್ಕೆ ಸಾಧ್ಯ? ಕನ್ನಡನಾಡಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳಿಗೆ ಉತ್ತರಪ್ರದೇಶದ ಇಲ್ಲವೇ ಅಲ್ಲೀ ಜನರ ಒಪ್ಪಿಗೆ ತೊಗೊಳೋ ಮೂರ್ಖತನವಾದರೂ ಯಾಕೆ? ಉತ್ತರಪ್ರದೇಶದ ಹೈಕಮ್ಯಾಂಡಿಗೆ ತಲೆಬಾಗಿಸಿ ನಡುದ್ರೆ ಅದು ನಮ್ಮನ್ನು ನಾವು ಆಳ್ಕೊಂಡಂಗಾ? ಖಂಡಿತ ಇಲ್ಲ ಗುರು! ಹಿಂದೆ ಕನ್ನಡಪರ ಪಕ್ಷಗಳ್ನ ಕಟ್ಟಿ ಕನ್ನಡಿಗರಿಗಾಗಿ ದುಡಿದಿದ್ದ ಬಂಗಾರಪ್ನೋರಿಗೆ ಇವೆಲ್ಲಾ ಮರೆತುಹೋಗಿತ್ತಾ ಅನ್ನೋ ಪ್ರಶ್ನೆ ಬರತ್ತೆ ಗುರು!

ಆ ಪಕ್ಷದ ಹೆಸರಿಟ್ಟುಕೊಳ್ಳೋದರ ಜೊತೆಗೆ ಹಾಗೆ ಸೇರಿಕೊಂಡ ಕಾರಣಕ್ಕಾಗೆ ಹೊಸದಾಗಿ ಅಲ್ಲಿನೋರ ಹಾಗೇ ಟೋಪಿ ಹಾಕ್ಕೊಳೋದು, ಕರ್ನಾಟಕದಲ್ಲಿ ತಾವು ಮಾಡೋ ಕಾರ್ಯಕ್ರಮದಲ್ಲಿ ಹಿಂದುಗಡೆ ನೇತಾಕಿರೋ ಬ್ಯಾನರ್ ಗಳಲ್ಲಿ ಹಿಂದಿ ಭಾಷೇನ ಬಳಸೋದು...ಇವೆಲ್ಲಾ ಕನ್ನಡತನಾನ ಹೆಜ್ಜೆ ಹೆಜ್ಜೆಯಾಗಿ ಗುಲಾಮಗಿರಿಗೆ ತಳ್ಳೋ ಪ್ರತೀಕಗಳಲ್ವಾ ಗುರು? ಈ ಸೈಕಲ್ ಗುಂಗಿಗೆ ಯಾಕಾದ್ರೂ ಬಿದ್ರು ಬಂಗಾರಪ್ನೋರು?

ನಮ್ಮದೇ ಪಕ್ಷಕ್ಕೆ ಮತವೂ ಬರುತ್ತೆ, ಮಾನವೂ ಬರುತ್ತೆ


ತಮ್ಮದೂ ರಾಷ್ಟ್ರೀಯ ಪಕ್ಷ, ಹಾಗನ್ನೋದ್ರಿಂದ ಕರ್ನಾಟಕದಲ್ಲಿ ಅಧಿಕಾರ ಗಿಟ್ಟುಸ್ಬೋದು ಅಂತ ನಮ್ಮ ನಾಯಕರುಗಳು ಅಂದ್ಕೊಂಡಿದ್ರೆ ಅದು ತಪ್ಪು ಲೆಕ್ಕಾಚಾರ ಆಗಿಬಿಡುತ್ತೆ ಗುರು! ತಮಾಷೆ ಅಂದ್ರೆ ಬಂಗಾರಪ್ಪನೋರು ಕರ್ನಾಟಕ ಕಾಂಗ್ರೆಸ್ ಪಾರ್ಟಿ ಕಟ್ಕೊಂಡು 1994ರ ಚುನಾವಣೇಲಿ ಹತ್ತು ವಿಧಾನಸಭಾ ಸ್ಥಾನ ಗಳಿಸಿದ್ರು. ಅದೇ 2005ರ ಚುನಾವಣೇಲಿ ಸಮಾಜವಾದಿ ಪಕ್ಷದ ಹೆಸರಲ್ಲಿ ಗಳಿಸಿದ್ದು ದೊಡ್ಡ ಸೊನ್ನೆ! ಸಮಾಜವಾದಿ ಪಕ್ಷಕ್ಕೆ ಸಿಕ್ಕಿರೋ ಮತಗಳು ಕೂಡಾ ಬರೀ 0.04% ಮಾತ್ರ. ಸಿದ್ದರಾಮಯ್ಯನೋರೂ ಜನತಾದಳದಿಂದ ಹೊರಗ್ ಬಂದಾಗ ಕಾಂಗ್ರೆಸ್ ಅನ್ನೋ ರಾಷ್ಟ್ರೀಯ ಪಕ್ಷದ ಮಡಿಲು ಸೇರೋ ಬದಲು ತನ್ನದೇ ಪಕ್ಷ ಹುಟ್ ಹಾಕಿದ್ರೂ, ಆ ಮೂಲಕ ಎರಡೇ ಸ್ಥಾನ ಗಳಿಸಿದ್ರೂ ಜನ ಅವರನ್ನು ಇನ್ನಷ್ಟು ಗೌರವದಿಂದ ನೋಡ್ತಾ ಇದ್ರೇನೋ ಗುರು!

ಇದೇ ಮಣ್ಣಿನ ಪಕ್ಷಗಳು ಬೇಕು
ಈ ಸತ್ಯಾನ ಬಂಗರಪ್ಪನೋರು, ಸಿದ್ಧರಾಮಯ್ಯನೋರು ಮಾತ್ರ ಅಲ್ಲ, ಆನೆ ಬೆನ್ನೇರಕ್ ಹೊರಟಿರೋ ಸಿಂಧ್ಯಾ ಅವರೂ ಸೇರಿದಂತೆ ನಾಡಿನ ಎಲ್ಲಾ ರಾಜಕಾರಣಿಗಳು ತಿಳ್ಕೋಬೇಕು. ಇವರುಗಳು ಕನ್ನಡಿಗರದ್ದೇ ಆದಂಥಾ (ಹೈಕಮಾಂಡ್ ಅಂತ ದಿಲ್ಲಿ ಕಡೆ, ಉತ್ತರಪ್ರದೇಶದ ಕಡೆ ಕಣ್ಣು ಕಿವಿ ಕೈ ಚಾಚೋ ಪರಿಸ್ಥಿತಿ ಇಲ್ಲದಂಥಾ) ಪಕ್ಷ ಕಟ್ಬೋದಾಗಿತ್ತಲ್ವಾ ಗುರು? ಅವತ್ತು ಇದ್ದ ಕಾವೇರಿ ಇವತ್ತಿಗೂ ಹಾಗೇ ಸಮಸ್ಯೆಯಾಗೇ ಇದೆ. ಅದನ್ನು ಪರಿಹರಿಸಕ್ಕೆ, ಕನ್ನಡ ಜನತೆಗೆ ನಿಜವಾದ ನಾಯಕತ್ವ ಕೊಡಕ್ಕೆ, ನಮ್ಮನ್ನು ನಾವು ಆಳಿಕೊಳ್ಳಕ್ಕೆ, ನಮ್ಮ ನಾಡಿಗೆ ಸಂಬಂಧ ಪಟ್ಟ ನಿಲುವುಗಳನ್ನು ನಮ್ಮೂರಲ್ಲೇ, ನಮ್ಮವರೇ ತೊಗೊಳ್ಳಕ್ಕೆ...ನಮ್ಮದೇ ಮಣ್ಣಿನ ಪಕ್ಷಗಳೇ ಕಟ್ಟಬೇಕು ಗುರು! ಇದನ್ನೆಲ್ಲಾ ಅರ್ಥ ಮಾಡ್ಕೊಂಡು ಬಂಗಾರಪ್ನೋರು ಕನ್ನಡಿಗರು ಎಂದೆಂದಿಗೂ ಮರೀದಿರೋ ಹಾಗೆ ಬಂಗಾರದಂಥಾ ಕೆಲಸ ಮಾಡಬೋದಿತ್ತು ಗುರು!

ಮಲೆಯಾಳಿ ಹಾವಳಿ: ಮಂಗಳೂರಾಯಿತು "ಮಂಗಳಾಪುರಂ"!

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ತುಂಬ್ಕೊಂಡಿರೋ ಮಲೆಯಾಳಿಗಳು ಮಾಡ್ತಿರೋ ರಂಪ 22ನೇ ಅಕ್ಟೋಬರ್ ವಿ.ಕ.ದಲ್ಲಿ ಹೀಗೆ ವರದಿ ಆಗಿದೆ:
ಮಂಗಳೂರು ರೈಲು ನಿಲ್ದಾಣ ಕರ್ನಾಟಕದಲ್ಲಿದೆಯೇ? ಕೇರಳದಲ್ಲಿದೆಯೇ? ಮಂಗಳೂರು ರೈಲು ನಿಲ್ದಾಣಕ್ಕೆ ಹೋದರೆ ಅಥವಾ ಫೋನ್ ಮಾಡಿದರೆ ಇಂತಹ ಸಂಶಯ ಹುಟ್ಟುವುದು ಸಾಮಾನ್ಯ. ಮಂಗಳೂರಿನ ರೈಲು ನಿಲ್ದಾಣದಲ್ಲೂ ಮಲಯಾಳಿ ಶೈಲಿ. ಇಲ್ಲಿ ಮಂಗಳೂರು - ಮಂಗಳಾಪುರಂ! ಕುಕ್ಕೆ ಸುಬ್ರಹ್ಮಣ್ಯ ರಸ್ತೆಯನ್ನು ಸುಬ್ರಹ್ಮಣ್ಯಂ ರಸ್ತೆ ಮಾಡಲಾಗಿದೆ.. ಥಟ್ಟನೆ ಬೋರ್ಡ್ ಓದಿದವರು ಇದ್ಯಾವ ಸುಬ್ರಹ್ಮಣ್ಯಂ? ಅಂದುಕೊಳ್ಳುವ ಸಾಧ್ಯತೆ ಇದೆ. ಕೂಲಿಯಿಂದ ಹಿಡಿದು ಅಧಿಕಾರಿಗಳವರೆಗೆ ಇಲ್ಲಿ ಮಾತಾಡುವ ಭಾಷೆ ಮಲೆಯಾಳಂ. ಕನ್ನಡ ಮಾತಾಡಿದರೂ ಮಲಯಾಳಿ ಶೈಲಿ. ತಪ್ಪು ತಪ್ಪು ಕನ್ನಡ. ಅಂಗಡಿಯ, ರೈಲಿನ ಬೋರ್ಡುಗಳಲ್ಲೂ ಮಲಯಾಳದ್ದೇ ಪ್ರಾಬಲ್ಯ. ಮಲಯಾಳ ಗೊತ್ತಿಲ್ಲದೇ ಮಂಗಳೂರು ರೈಲು ನಿಲ್ದಾಣದಲ್ಲಿ ವ್ಯವಹರಿಸಲು ಸಾಧ್ಯವಿಲ್ಲವೇನೋ ಎಂಬಂಥ ಸ್ಥಿತಿ.

ಕರ್ನಾಟಕದಲ್ಲಿ ನಮಗೆ ಬೆಂಗಳೂರು, ಮೈಸೂರು, ಮಂಗಳೂರು, ತುಮಕೂರು, ಚಿಕ್ಕಮಗಳೂರು, ಕಡೂರು, ತಿಪಟೂರು, ಬಾನಂದೂರು, ಹಿರೇಕೆರೂರು, ಹಲಸೂರು ಹೀಗೆ ಹಲವಾರು ಊರುಗಳು ಕಂಡು ಬರುತ್ತದೆ. ಒಂದು ಪ್ರದೇಶದಲ್ಲಿ ಹಲಸಿನ ಮರ ಹೆಚ್ಚಾಗಿ ಕಂಡು ಬಂದದ್ದಕ್ಕೆ ಅಲ್ಲಿ ಬಂದು ನೆಲೆಸಿದ ಮೂಲ ನಿವಾಸಿಗಳು ಅದಕ್ಕಿಟ್ಟ ಹೆಸರು "ಹಲಸೂರು". ಒಂದು ಜಾಗದಲ್ಲಿ ಹುಟ್ಟಿ, ಬದುಕಿ, ಬಾಳಿದ ಇತಿಹಾಸಗಳ, ಅಲ್ಲಿ ಕಂಡು ಬರುವ ವಿಶಿಷ್ಟತೆ ಮತ್ತು ಲಕ್ಷಣಗಳಿಂದಲೇ ಬಹುತೇಕ ಎಲ್ಲಾ ಪ್ರದೇಶಗಳು ತಮ್ಮ ತಮ್ಮ ಹೆಸರುಗಳನ್ನು ಪಡೆದಿವೆ. ಈ ರೀತಿ ಕನ್ನಡಿಗರು ತಾವು ನೆಲೆಸುವ ಜಾಗಗಳಿಗೆ ಅಲ್ಲಿನ ವಿಶೇಷಣಗಳನ್ನೊಳಗೊಂಡಂತೆ ಊರು, ಪಟ್ಟಣ, ಕೆರೆ, ಪಾಳ್ಯ, ನಗರ, ದುರ್ಗ, ಕೋಟೆ, ಹಳ್ಳಿ, ಏರಿ ಅಂತ ಸೇರಿಸಿ ಕರೆದುಕೊಂಡಿರುವುದು ಅತ್ಯಂತ ಸಹಜವಾದದ್ದೇ.

ವಲಸೆಯಿಂದ ನಮ್ಮ ಹೆಸರುಗಳಿಗೆ ಆಗ್ತಿರೋ ಕಿರುಕುಳ

ಕರ್ನಾಟಕಕ್ಕಾಗ್ತಿರೋ ನಿಯಂತ್ರಣವಿಲ್ಲದ ವಲಸೆ ಹುಟ್ಟುಹಾಕುತ್ತಿರೋ ಒಂದು ಗೊಂದಲ ಅಂದ್ರೆ ಊರುಗಳ ಹೆಸರುಗಳು ಹಾಳಾಗ್ತಿರೋದು. ನಾಣ್ಯ ಏಣಿಸಕ್ಕೆ ಪೀಣ್ಯಕ್ಕೆ ಬಂದಿರೋರು ಅದನ್ನ ಬೀಣ್ಯ ಮಾಡಕ್ಕೆ ಹೊರ್ಟಿರೋದು, ನಮ್ಮ ಹಲಸೂರನ್ನ ಅಲಸೂರು ಮಾಡಿರೋದು, ನೆಲಮಂಗಲ ನೀಲಮಂಗಲ ಆಗಿರೋದು, ದೊಡ್ಡಮಾಕಳಿ ದೊಡ್ಡಮ್ಮಕಾಳಿಯಾಗಿ ಅವತರಿಸಿರುವುದು [ಸಧ್ಯ, ಇನ್ನೂ ದೊಡ್ಡಮುಕಳಿ ಆಗದಿರುವುದು ನಮ್ಮ ಪುಣ್ಯ!] ಇವೇ ಈ ದುರಂತದ ಕೆಲವು ಉದಾಹರಣೆಗಳಾಗಿವೆ. ಇತ್ತೀಚೆಗೆ ನಮ್ಮ ಸಮೂಹ ಮಾಧ್ಯಮಗಳು ಕರ್ನಾಟಕವನ್ನು ಕರ್ನಾಟಕ್ ಮತ್ತು ಗರುಡವನ್ನು ಗರುಡ್ ಅನ್ನೋ ಮಟ್ಟಿಗೆ ಬೆಳದಿವೆ.

ಅಲ್ಲ - ವಲಸಿಗ್ರಿಂದ ಇಷ್ಟೆಲ್ಲಾ ಹೇಗೆ ಆಗತ್ತೆ ಅಂತೀರಾ? ಇಲ್ಲಿ ಕರ್ನಾಟಕದಲ್ಲಿ ವಲಸೆ ಬಂದಿರೋರು ಇಲ್ಲೀ ಆಡಳಿತ-ಗೀಡಳಿತ ಸೇರಿದ ಹಾಗೆ ಸಮಾಜದ ಎಲ್ಲಾ ಮುಖ್ಯ ಹುದ್ದೆಗಳಲ್ಲಿ ಒಕ್ಕರಿಸಿಕೊಂಡಿರೋದ್ರಿಂದ್ಲೇ ಇವೆಲ್ಲಾ ಆಗ್ತಿರೋದು ಗುರು. ವಲಸಿಗ್ರು ಬಂದ್ರೆ ತಾವೊಬ್ಬರೇ ಬರಲ್ಲ. ತಮ್ಮ ಇಡೀ ಕಾಗೆ ಬಳಗವನ್ನೆಲ್ಲಾ ಕರ್ಕೊಂಡ್ ಬರ್ತಾರಮ್ಮಾ! ನಗರ ಪಾಲಿಕೆಗಳಲ್ಲಿ ಲೆಕ್ಕ ಬರೆಯೋರಿಂದ ಹಿಡಿದು ಕಸ ಗುಡಿಸೋ ಕೆಲಸಕ್ಕೂ ತಂತಮ್ಮ ಭಾಷೆಯೋರ್ನೇ ಕರ್ಕೊಂಡ್ ಬಂದು ತುಂಬ್ತಾರೆ ಗುರು!

ನಾವು ಬೆಪ್ಪಮುಂಡೇವಂಗೆ ಎಲ್ಲಾ ನೋಡ್ಕೊಂಡು ನಮ್ಮ ಜಾಗಗಳ ಹೆಸ್ರುಗಳ್ನ ನಾವೇ ತಪ್ಪುತಪ್ಪಾಗಿ ಹೇಳ್ತಾ ನಮ್ಮತನವನ್ನ ಕಳ್ಕೋತಾ ಔರೇ ಇಲ್ಲೀ ಯಜಮಾನ್ರು ಅನ್ಕೊಂಡು ತಗ್ಗಿ ಬಗ್ಗಿ ಇಡೀ ಜೀವನ ಕಳೀತೀವಲ್ಲ, ಅದೇ ನಾವು ಮಾಡೋ ದೊಡ್ಡ ತಪ್ಪು ಗುರು! ವಲಸಿಗರಿಗೆ ನಾವು ಇಲ್ಲೀತನ ಕಲಿಸೋ ಬದ್ಲು ಔರಿಂದ ನಾವೇ ಔರಿಂದ ಕಲೀತೀವಲ್ಲ, ಅದಕ್ಕೆ ಬಡ್ಕೋಬೇಕು! ಔರು ಹೀಗೆ ಮಾಡ್ಕೊಂಡು ನಮ್ಮ ಇತಿಹಾಸವನ್ನೆಲ್ಲಾ ಅಳಿಸಿಹಾಕ್ತಾ ಇದ್ದರೂ ಸುಮ್ನೆ ಕೂತಿದೀವಲ್ಲ, ಅದು ಈಗ ಅಷ್ಟು ಗಂಭೀರವಾಗಿ ಕಾಣಿಸದೇ ಹೋದ್ರೂ ಒಂದು ದಿನ ನಮ್ಮ ಅಳಿವಿಗೆ ಅದೇ ಕಾರಣ ಆಗತ್ತೆ ಗುರು!

ಈಗೇನು ಮಾಡೋಣು?

ಇಷ್ಟೆಲ್ಲಾ ನೋಡ್ಕೊಂಡು ಸುಮ್ನೆ ಕೂತಿರಕ್ಕಾಗತ್ತಾ ಗುರು? ನಾವೇನು ಮಾಡ್ಬೇಕು? ಸರ್ಕಾರ ಏನ್ ಮಾಡ್ಬೇಕು?
 • ಇಂಥಾ ಆಭಾಸಗಳ್ನ ನೋಡಿದಾಗ ಸಂಭಂದ ಪಟ್ಟ ಅಧಿಕಾರಿಗಳಿಗೆ ಹೋಗಿ ಕ್ಯಾಕರಿಸಿ ಉಗೀಬೇಕು ಇಲ್ಲಾ ಬರೀಬೇಕು ಇಲ್ಲಾ ಮಿಂಚೆ-ಮಳೆ (ಈಮೇಲ್ ಸ್ಪ್ಯಾಮ್) ಸುರಿಸಬೇಕು
 • ಕರ್ನಾಟಕದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಉದ್ಯೋಗಗಳಿಗೆ ಕನ್ನಡಿಗರಿಗೆ ಆದ್ಯತೆ ಸಿಗೋಹಾಗೆ ಸರ್ಕಾರಾನ ಒತ್ತಾಯಿಸಬೇಕು
 • ರೈಲ್ವೆ, ದೂರ ಸಂಪರ್ಕ, ಅಂಚೆ ಇಲಾಖೆ ಹೀಗೆ ಕೇಂದ್ರ ಸರ್ಕಾರದ ಅಧೀನಕ್ಕೆ ಬರೋ ಎಲ್ಲಾ ಇಲಾಖೆಗಳಲ್ಲೂ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಆಗ್ತಿರೋ ಔಮಾನ, ಅಪಚಾರಗಳ್ನ ನಿಲ್ಲಿಸೋ ನಿಟ್ನಲ್ಲಿ ಒಂದು ಕಾವಲು ಸಮಿತೀನ ಕಟ್ಟಿ ಕರ್ನಾಟಕ ಸರ್ಕಾರ ತಾನು ಇದೀನಿ ಅಂತ ತೋರಿಸಿಕೊಳ್ಳಬೇಕು!

ಬೆಳಗಾವಿ ವಿಷಯದಲ್ಲಿ ಮತ್ತೆ ಕ್ಯಾಕರಿಸಿ ಉಗಿಸಿಕೊಂಡ ಮಹಾರಾಷ್ಟ್ರ

ಕಾಲು ಕೆರ್ಕೊಂಡು ಜಗಳಕ್ಕೆ ಬರೋ ಜಾಯಮಾನದ ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಬೆಳಾಗಾವಿಯ 865 ಹಳ್ಳಿಗಳ್ನ ಕೇಂದ್ರಾಡಳಿತಕ್ಕೆ ಒಳಪಡಿಸ್ಬೇಕು ಅಂತ ಭಾರತದ ದೊಡ್ಡ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಆಗಿರೋದ್ನ ಅಕ್ಟೋಬರ್ 26ನೇ ತಾರೀಕಿನ ದಿ ಹಿಂದು ವರದಿ ಮಾಡಿದೆ.

ನಗೆಪಾಟಲಾಗ್ತಿರೋ ಮಹಾರಾಷ್ಟ್ರ ಸರ್ಕಾರ

ಬೆಳಗಾವಿ ಮರಾಠಿಗರ ಪಾಲಿಗೆ ಈಗಾಗಲೇ ಮುಗಿದು ಹೋದ ಅಧ್ಯಾಯ ಅಂತ ತಿಳ್ಕೊಂಡಿರೋ ಮರಾಠಿಗ್ರು ಹೇಗಾದ್ರೂ ಮಾಡಿ ಬೆಳಗಾವಿನ ಕರ್ನಾಟಕದಿಂದ ಬೇರ್ಪಡ್ಸಿ ನಂತ್ರ ಹೊಂಚು ಹಾಕಿ ತಾನು ಕಬಳಿಸಿಬಿಡಬೇಕು ಅನ್ನೋ ದುರ್ಬುದ್ಧಿಯ ಜತೆಗೆ, ದುರ್ಬಲವಾದ ತಮ್ಮ ಆಡಳಿತವನ್ನು ಜನರ ಮನಸ್ಸಿನಿಂದ ಮರೆಮಾಚಕ್ಕೆ ಆಗಿಂದಾಗ್ಗೆ ಬೆಳಗಾವಿ ಸಮಸ್ಯೆಯ ತಗಾದೆ ತೆಗೆದು ಅನುಕಂಪದ ಅಲೆಯನ್ನು ಹುಟ್ಟುಹಾಕೋದು, ಕಾಲಾನುಕಾಲಕ್ಕೆ ಆಳ್ವಿಕೆ ಮಾಡ್ಕೊಂಡು ಬಂದಿರೋ ಮಹಾರಾಷ್ಟ್ರ ಸರ್ಕಾರಗಳ ಕುತಂತ್ರದ ರಾಜಕೀಯ ದಾಳಗಳಲ್ಲೊಂದು ಸಹ ಆಗಿದೆ.

ಇದೇ ರೀತಿ ಕಳೆದ ವರ್ಷ ಸಹ, ಈವರ್ಗೆ ತಾವೇ ಕನ್ನಡಿಗರಿಗೆ ಎಸ್ಗಿರೋ ಮೋಸಗಳ್ನೆಲ್ಲಾ ಪಟ್ಟಿ ಮಾಡಿ, ಸಹೃದಯ ಕನ್ನಡಿಗರ ಮೇಲೆ ಭಾರತದ ಪ್ರಧಾನಿಗೆ ಸತ್ಯಕ್ಕೆ ಅಪಚಾರವೆಸಗುವಂತೆ ದೋಷಾರೋಪ ಮಾಡಿ ಎಲ್ರಿಂದ್ಲೂ ಉಗಿಸ್ಕೊಂಡಿದ್ರು. ಈಗ ಭಾರತದ ದೊಡ್ಡ ನ್ಯಾಯಲಯ ಅವರ ಅರ್ಜೀನ ಕಸದಬುಟ್ಟೀಗೆ ಎಸ್ದಿರೋದ್ರಿಂದ ಮತ್ತೆ ಎಲ್ಲರ ಮುಂದೆ ನಗೆಪಾಟಿಲಿಗಿಡಾಗಿದ್ದಾರೆ ಗುರು.

ಬೆಳಾಗಾವೀಲಿ ಮರಾಠಿಗರ ಕಿರೀಕು ಇವತ್ತಿಂದಲ್ಲ

ಮರಾಠಿಗರ ಈ ಕ್ಯಾತೆ ನೆನ್ನೆ ಮೊನ್ನೆದಲ್ಲ ಗುರು. 1956ರಲ್ಲಿ ಭಾಷಾವಾರು ಪ್ರಾಂತ್ಯಗಳು ವಿಂಗಡನೆಗೊಂಡು ರಾಜ್ಯಗಳು ಎಕೀಕರಣ ಆದಾಗಿಂದ ಬೆಳಗಾವೀಲಿ ನೆಲೆಗೊಂಡ ಮರಾಠಿ ನಾಯಕರು ರಾಜಕೀಯ ದುರುದ್ದೇಷದಿಂದ ಪಕ್ಕದ ಮಹಾರಾಷ್ಟ್ರ ಸರ್ಕಾರದ ಏಜೆಂಟ್ರತೆ ವರ್ತಿಸ್ತಾ ಸಾಂಸ್ಕೃತಿಕವಾಗಿ ಕನ್ನಡಿಗರ ಜೊತೆ ಬೆರೀದೆ ಆಗಿಂದಾಗ್ಗೆ ಕನ್ನಡಿಗರ್ನ ಕೆಣಕ್ತಾ ಕನ್ನಡಿಗರ ಭಾವನೆಗಳ್ನ ಕೆರ್ಳುಸ್ತಾ ಬೆಳಗಾವೀನ ಮಹಾರಾಷ್ಟ್ರಕ್ಕೆ ಸೇರಿಸ್ಬಿಡೋ ಅಲ್ಲಿನ ಸರ್ಕಾರಗಳ ಪ್ರಯತ್ನಕ್ಕೆ ಇಂಬು ನೀಡ್ತಾ ಬಂದಿದ್ದಾರೆ.

ಮೈಸೂರು-ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಭಾಷಾವಾರು ಪ್ರಾಂತ್ಯ ರಚನೆಯ ಪ್ರಕ್ರಿಯೆ ಸರಿಯಾಗಿ ನಡೀದೆ ಗಡಿ ವಿವಾದ ಭುಗಿಲೆದ್ದಾಗ 1966ರ ಕೊನೇಲಿ ಕೇಂದ್ರ ಸರ್ಕಾರದಿಂದ ಮೆಹರ್ಚಂದ್ ಮಹಾಜನ್ ಆಯೋಗ ನೇಮಿಸಲ್ಪಡ್ತು. ಆ ಆಯೋಗ ಮಾಡ್ಬೇಕು ಅಂತ ಒತ್ತಾಯ ಮಾಡಿದ್ದೂ ಮರಾಠಿಗರೇನೆ! ಅದು ನೀಡೋ ತೀರ್ಪಿಗೆ ನಾವು ತಲೆಬಾಗ್ತೀವಿ ಅಂತ ಹೇಳ್ಕೆ ನೀಡಿದ್ದ ಮಹಾರಾಷ್ಟ್ರದ ನಾಯಕರು ವರದಿ ಪ್ರಕಟ ಆದ್ಮೇಲೆ ಬೆಳಗಾವಿ ಕೈ ತಪ್ತಿದೆ ಅಂತ ಕೊಟ್ಟ ಮಾತಿಗೇ ತಿಲಾಂಜಲಿಯಿಟ್ಟು ಇವತ್ತಿನ ವರೆಗೂ ಗಡಿ ಸಮಸ್ಯೆ ಬಗೆಹರಿಯಕ್ಕೆ ಬಿಡದೆ ತನ್ನ ಹುಂಬತನ ಮುಂದುವರೆಸಿಕೊಂಡೇ ಬಂದಿದಾರೆ.

ಕನ್ನಡಿಗರ ಸೌಜನ್ಯಕ್ಕೆ ಮರಾಠಿಗರು ಕೊಟ್ಟಿರೋ ಬಹುಮಾನ

ಮಹಾಜನ್ ವರದಿ ಸರೀಗೆ ಜಾರಿಗೆ ಬಂದ್ರೆ ಬೆಳಗಾವಿ ನಮ್ಮಲ್ಲೆ ಉಳ್ಯತ್ತೆ, ಜತೆಗೆ ಮಹಾರಾಷ್ಟ್ರಕ್ಕೆ ಸೇರಿರೋ ಕೆಲವು ಅಚ್ಚ ಕನ್ನಡದ ಭಾಗಗಳು ನಮ್ಮದಾಗತ್ವೆ ಅನ್ನೋದೇನೋ ನಿಜ. ಆದರೆ ಫಲವತ್ತಾದ ನಿಪ್ಪಾಣಿ ಮತ್ತು ಖಾನಾಪುರದ ಕಾಡುಗಳ ಜತೆಗೆ ಈಗ ಕರ್ನಾಟಕದ ಭಾಗಾವಾಗಿರೋ ಕೆಲವು ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡ್ಬೇಕಾಗತ್ತೆ. ವರದಿ ಜಾರಿಗೆ ಒತ್ತಾಯಿಸ್ತಿರೋ ನಾವು ಮತ್ತು ನಮ್ಮ ನಾಯಕ್ರು ಇದ್ನ ಮರೆತಿಲ್ಲ, ಆ ಭಾಗಗಳು ಕೈ ಬಿಟ್ಟೂ ಹೋಗೋ ನೋವು ಎಲ್ಲರಲ್ಲೂ ಇದೆ. ಆದ್ರೆ ಅದೇ ಆಗಿರೋ ಒಪ್ಪಂದ ಅಂತ ಅದನ್ನ ಗೌರವಿಸಿ ನಾವು ಮುಚ್ಕೊಂಡಿಲ್ವಾ?

ಏಕೀಕರಣದ ಸಮಯದಲ್ಲಿ ಕೈ ಬಿಟ್ಟು ಹೋದ ಅಚ್ಚ ಕನ್ನಡದ ಪ್ರದೇಶಗಳಾದ ಸತಾರ, ಸೊಲ್ಲಾಪುರ, ಜತ್ತ, ಸಾಂಗ್ಲಿ, ನಾಂದೇಡ್, ಕೊಲ್ಲಾಪುರ, ಅಕ್ಕಲಕೋಟದಲ್ಲಿ ನೆಲಸಿರೋ ಕನ್ನಡಿಗರ ಸ್ಥಿತಿ ಈ ಮರಾಠಿ ನಾಯಕರ ಉಪಟಳದಿಂದ ಶೋಚನೀಯವಾಗಿದ್ದರೂ ಸಭ್ಯ ಕನ್ನಡಿಗರು ಯಾವುದೇ ದುಸ್ಸಾಹಸಗಳಿಗೆ ಎಡೆ ಕೊಡದೆ ಮರಾಠಿ ಬಾಂಧವರೊಡನೆ ಸಂಯಮದಿಂದ ಬಾಳ್ವೆ ನಡೆಸಿರುವುದು ನಮ್ಮ ಕನ್ನಡಿಗರ ಸುಸಂಸ್ಕೃತಿಗೆ ಹಿಡಿದ ಕೈಗನ್ನಡಿ ಗುರು!

ಮೇಲಿನದಕ್ಕೆ ವ್ಯತಿರಿಕ್ತವಾಗಿ ಬೆಳಗಾವಿಲಿ ನೆಲ್ಸಿರೋ ಮರಾಠಿ ಪುಂಡ್ರು ಸಂಪೂರ್ಣ ಕನ್ನಡ ವಿರೋದಿ ನೀತಿ ಅನುಸರಿಸ್ತಾ, ಎಲ್ಲಾ ಕನ್ನಡಪರ ಚಿಂತನೆಗಳನ್ನ, ಮಟ್ಟ ಹಾಕ್ತ, ಬೆಳಗಾವಿ, ನಿಪ್ಪಾಣಿ ಮತ್ತು ಖಾನಪುರ ಇನ್ನಿತರೆಡೆಗಳಲ್ಲಿ ಕನ್ನಡ ಶಾಲೆಗಳೂ ಸಹ ನಡೀದಂತೆ, ಕನ್ನಡದ ಮಕ್ಕಳನ್ನ ಬಲವಂತವಾಗಿ ಮರಾಠಿ ಶಾಲೆ ಸೇರ್ಸೋಕೆ ಪ್ರೇರೇಪಿಸ್ತ, ಬೆಳಗಾವಿಲಿ ಕನ್ನಡ ರಾಜ್ಯೋತ್ಸವಾನ ಕಪ್ಪು ದಿನ್ವಾಗಿ ಆಚರ್ಸಿ, ಕನ್ನಡದ ದ್ವಜವನ್ನು ಸುಟ್ಟು, ಕನ್ನಡದ ನಾಮ ಫ಼ಲಕಗಳಿಗೆ ಮಸಿ ಬಳ್ದು ಕನ್ನಡಿಗರ ಸ್ವಾಭಿಮಾನಕ್ಕೆ ಆಗಿಂದಾಗ್ಗೆ ಲಗ್ಗೆಯಿಡ್ತಿದಾರೆ. ಹೇಗಿದೆ ಸೌಜನ್ಯಕ್ಕೆ ಸಿಕ್ಕ ಬಹುಮಾನ?

ಈ ಬೇಡದ ತೊಂದರೆಗಳಿಗೆ ಹೇಗೆ ಕೊನೆ ಹಾಡೋದು?
ಮುಂದಿನ ನ್ಯಾಯಾಲಯದ ವಿಚಾರಣೆಗಳಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸ್ತಿರೋ ವಕೀಲ್ರು ಮಹಾರಾಷ್ಟ್ರ ಅನುಸರಿಸ್ತಿರೋ ಒತ್ತಡ ತಂತ್ರಕ್ಕೆ ಮಣೀದೆ ಕರ್ನಾಟಕದ ಸಮರ್ಥನೆಯನ್ನು ಪರಿಣಾಮಕಾರಿಯಾಗಿ ಮಂಡಿಸಿ ಸತ್ಯಕ್ಕೆ ದೂರ್ವಾದ ಮರಾಠಿಗರ ಆರೋಪಕ್ಕೆ ತಕ್ಕ ಉತ್ತರ ನೀಡ್ಬೇಕಿದೆ.

ವಾಸ್ತವವನ್ನು ತಿರುಚ್ತ, ತಮ್ಮ ಕುಚೋದ್ಯ, ಕಿಡಿಗೇಡಿತನಾನ ಸಮರ್ಥಿಸ್ಕೊಳ್ತಾ ಬೆಳಗಾವಿ ಕಬಳ್ಸೋಕೆ ಹುನ್ನಾರ ನಡೆಸ್ತಿರೋ ಮರಾಠಿಗರ ದೊಂಬಿ ಸಂಘಟನೆಗಳ್ನ ಅನುರ್ಜಿತಗೊಳ್ಸಿ ಅವಿವೇಕಿ ಕಪಟಿಗಳನ್ನ ಬೆಳಗಾವಿಯಿಂದ ಗಡೀಪಾರು ಮಾಡ್ಸೋಕೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಸಕ್ಕೆ ನಮ್ಮ ಸರ್ಕಾರ ಮುಂದಾಗ್ಬೇಕು.

ಮಹಾಜನ್ ವರದಿ ಅನುಷ್ಠಾನದ ಸಾಧ್ಕ ಬಾಧ್ಕಗಳ್ನ ಚರ್ಚಿಸಿ, ಕನ್ನಡಿಗರ ಮತ್ತು ನಮ್ಮನ್ನು ನಂಬಿರೋ ಮರಾಠಿಗರ ಒಳಿತಿಗೂ ಗಮ್ನ ಹರ್ಸೋಕೆ ನಮ್ಮ ಕರ್ನಾಟಕದ ಆಡಳಿತ, ಸೂಕ್ತ ಯೋಜ್ನೆಗಳನ್ನ ಸಿದ್ಧಪಡಿಸಿ ಶಾಶ್ವತವಾಗಿ ಈ ಸಮಸ್ಯೆನ ಮಟ್ಟಹಾಕಕ್ಕೆ ನೇರ ಮತ್ತು ದಿಟ್ಟ ಹೆಜ್ಜೆ ಇರಿಸ್ಬೇಕು ಗುರು. ಏನಂತ್ಯಮ್ಮಾ?

ವಿ.ವಿ.ಗಳೇ ಕಾಪಿ ಹೊಡುದ್ರೆ ಹೇಗೆ?

ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಎಲ್ಲಾ ವಿಭಾಗಗಳಲ್ಲೂ ಆಡಳಿತ ಕನ್ನಡದಲ್ಲೇ ಆಗಬೇಕು ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಕ್ಟೋಬರ್ 21ಕ್ಕೆ ಮೈಸೂರಲ್ಲಿ ಗದರು ಹಾಕಿದೆ. ಅಲ್ಲಾ - ಈ ವಿ.ವಿ.ಗಳಿಗೆ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಕನಿಷ್ಠ ತಿಳುವಳಿಕೇನೂ ಇಲ್ಲದಿದ್ದರೆ, ಅದಕ್ಕೆ ಬೇಕಾಗಿರೋದ್ನೆಲ್ಲಾ ಮಾಡ್ತೀವಿ ಅನ್ನೋ ಜವಾಬ್ದಾರಿ ಇಲ್ಲದಿದ್ದರೆ ಇವರೇನು ಕರ್ನಾಟಕವನ್ನ ಉದ್ಧಾರ ಮಾಡೋದು? ಇವರೇನು ಕನ್ನಡಿಗರನ್ನ ಉತ್ತಮ ಪ್ರಜೆಗಳಾಗಿಸೋದು? ಇವರು ಯಾವ ಸೀಮೆ ಪಾಠ ಕಲಿಸಾರು?

ಆಡಳಿತಕ್ಕಂತೂ ಬೇರೆ ಭಾಷೆ ಬೇಕಾಗೇ ಇಲ್ಲ

ಕರ್ನಾಟಕದ ವಿ.ವಿ.ಗಳು ಕನ್ನಡ ಕೈಬಿಟ್ಟರೆ ಕನ್ನಡಿಗರಿಗೆ ದಾರಿ ತೋರ್ಸೋರು ಯಾರು? ಹೀಗೆ ಬೇಜವಾಬ್ದಾರಿಯಿಂದ ನಡ್ಕೊಳೋ ಬದ್ಲು ಇವುಗಳು ಆಡಳಿತವನ್ನಂತೂ ಪೂರ್ತಿ ಕನ್ನಡದಲ್ಲಿ ಮಾಡ್ಬೇಕು. ಆಡಳಿತ ಕನ್ನಡದಲ್ಲಿ ಸಾಧ್ಯವಿಲ್ಲ ಅನ್ನೋದು ಬರೀ ಸುಳ್ಳು. ಆಡಳಿತಕ್ಕೆ ಬೇಕಗಿರೋ ಎಲ್ಲಾ ಪದಗಳು ಕನ್ನಡದಲ್ಲಿ ಈಗಾಗಲೇ ಇವೆ. ಹೊಸದಾಗಿ ಹುಟ್ಟಾಕ್ಬೇಕು ಅನ್ನೋ ಗೋಜೂ ಇಲ್ಲ.

ಇಂಗ್ಲೀಷ್ ಬಳಕೆಯ ಒಳಗುಟ್ಟು

ಇಲ್ಲಿ ಒಳಗುಟ್ಟೇನಪ್ಪಾ ಅಂದ್ರೆ ಎಲ್ಲಾ ಕಡೆ ಆಡಳಿತ ಅನ್ನೋದು ಇವತ್ತು ಪೂರ್ತಿ ಗಣಕಯಂತ್ರದ ನೆರವಿಂದ ಆಗ್ತಿದೆ. ಆದ್ರೆ ಆ ಗಣಕಕ್ಕೆ ಕನ್ನಡ ಬರೋದಿಲ್ಲ ಅನ್ನೋ ಪೆದ್ದತನ ನಮಗೆ ಇದೆಯಲ್ಲಾ? ಗಣಕಯಂತ್ರಕ್ಕೆ ಇಂಗ್ಲೀಷೇ ಬರೋದು, ಅದು ಥೇಮ್ಸಲ್ಲೇ ತೊಳ್ಕೊಳೋದು ಅನ್ನೋ ಮೂರ್ಖತನ ಇದೇ ವಿ.ವಿ.ಗಳಲ್ಲಿ ಪಾಠ ಮಾಡ್ತಿರೋ ಗಣಕ ವಿಭಾಗದ ಪ್ರೊಫೆಸರ್ಗಳಿಗೂ ಲೆಕ್ಚರರ್ ಗಳಿಗೂ ಇದೆ ಗುರು! ಇಂಥೋರಿಗೆ ಹೋಗಿ ಗಣಕಕ್ಕೆ ಯಾವ ಕೀಳರಿಮೇನೂ ಇಲ್ಲ, ಇರೋದು ನಮಗೇ ಅಂತ ಬುದ್ವಾದ ಯೋಳ್ಬೇಕು ಗುರು! ವಿ.ವಿ.ಗಳೇ ಹೀಗೆ ಸ್ವಂತ ಬುದ್ಧಿಯಿಂದ ಕನ್ನಡಾನ ಆಡಳಿತದಲ್ಲಿ ಬಳಸೋದಕ್ಕೆ ಬೇಕಾಗಿರೋದ್ನೆಲ್ಲಾ ಮಾಡದೆ ಇಂಗ್ಲೀಷಿನೋರಿಂದ ಕಾಪಿ ಹೊಡುದ್ರೆ ಇವು ವಿದ್ಯಾರ್ಥಿಗಳಿಗೆ ಏನು ಹೇಳ್ಕೊಟ್ಟಾವು?

ನಾವು ಯೋಚ್ನೆ ಮಾಡೋ ರೀತೀನೇ ಬದಲಾಗಬೇಕು

ಈಗ ನಮ್ಮ ಜನ "ಗಣಕದಲ್ಲಿ ಕನ್ನಡ ಬರ್ಸಕ್ಕಾಗಲ್ಲ, ಆದ್ದರಿಂದ ಆಡಳಿತ ಇಂಗ್ಲೀಷಲ್ಲಿ ಮಾಡೋಣ" ಅಂತ ಕಾರಣ ಕೊಡೋದು ಏನ್ ತೋರ್ಸತ್ತೆ ಅಂದ್ರೆ - ಗಣಕದಲ್ಲಿ ಕನ್ನಡ ಅನ್ನೋದು ಯಾರೋ ನಮಗೆ ಕೊಡಬೇಕಾಗಿರೋ ಕೊಡುಗೆ, ದೇವ್ರು ಸುರಿಸೋ ಮಳೆ ಇದ್ದಂಗೆ, ಇದ್ರೆ ಉಪಯೋಗುಸ್ಕೋತೀವಿ, ಇಲ್ದಿದ್ರೆ ನಾವೇನೂ ಮಾಡಕ್ಕಾಗಲ್ಲ ಅನ್ನೋ ಷಂಡತನ. ಇದು ಹೇಡಿಗಳ ಮಾತು. ಈ ಗುಂಗಿಗೆ ಬಿದ್ರೆ ನಾವು ಯಾವುದೇ ಸ್ವಂತ ಚಿಂತನೆ, ವಿಜ್ಞಾನ-ತಂತ್ರಜ್ಞಾನಗಳ್ನ ಹುಟ್ಟಿಸಕ್ಕಾಗೋದೇ ಇಲ್ಲ. ಹೊರರಾಜ್ಯದೋರು ಮತ್ತೆ ಹೊರದೇಶದೋರು ಒದ್ದ ಕಡೆ ಹೋಗೋ ಕಾಲ್ಚೆಂಡಾಗೋಗ್ತೀವಿ!

ನಾವು ಯೋಚ್ನೆ ಮಾಡೋ ರೀತೀನೇ ಬದಲಾಗಿ ಮೊದ್ಲು "ಆಡಳಿತ ಕನ್ನಡದಲ್ಲೇ ಆಗಬೇಕು" ಅನ್ನೋ ಭದ್ರವಾದ ನಿಲುವು ಇಟ್ಟುಕೋಬೇಕು. ಆಗ ಅದಕ್ಕೆ ಬೇಕಾಗಿರೋ ವಿಜ್ಞಾನ-ತಂತ್ರಜ್ಞಾನ, ಮಣ್ಣು-ಮಸಿ, ಗಣಕ-ಗಿಣಕ, ತಂತ್ರಾಂಶ-ಗಿಂತ್ರಾಂಶ ಎಲ್ಲಾನೂ ನಾವೇ ಹುಟ್ಟಿಸಬೇಕು. ಇಂಥದ್ದೊಂದು ಆಗಬೇಕು ಅನ್ನೋ ಬಯಕೆ ಇದ್ರೆ ತಾನೆ ಅದನ್ನ ಪೂರೈಸಕ್ಕೆ ಮನುಷ್ಯ ಕೆಲಸ ಮಾಡೋದು? ಆ ಬಯಕೇನೇ ಇಲ್ದೇ ಹೋದ್ರೆ ಕಡಲಲ್ಲಿ ನಿಯಂತ್ರಣ ತಪ್ಪಿದ ಹಡಗು ಹೇಗೆ ಗಾಳಿ ಬಂದ ಕಡೆ ತೂರತ್ತೋ ಹಾಗಾಗತ್ತೆ ಕರ್ನಾಟಕದ ಸ್ಥಿತಿ!

ಕನ್ನಡ-ಕನ್ನಡಿಗ-ಕರ್ನಾಟಕಗಳ್ನ ಕಡೆಗಣಿಸೋದು, ಇಲ್ಲಾ ಕನ್ನಡ ಅಂದ್ರೆ ಜುಟ್ಟಿಗೆ ಮಲ್ಲಿಗೆ ಹೂ ಮಾತ್ರ ಅನ್ಕೊಳೋದು ನಮ್ಮ ಏಳ್ಗೆಗೇ ಕೊಡ್ಲಿಯೇಟು ಅನ್ನೋದು ಬರೀ ಬಾಯ್ಮಾತಲ್ಲಾಮ್ಮಾ!

ವಿಮಾನ ನಿಲ್ದಾಣದ ಜಾಹೀರಾತುಗಳಲ್ಲಿ ಕನ್ನಡ ಮೆರೀಬೇಕು

ಫ್ರಾನ್ಸ್ ಮೂಲದ ಜೆ.ಸಿ.ಡುಕೋ (JCDecaux; ಇದು ಫ್ರೆಂಚ್ ಹೆಸರು, ಇದನ್ನು "ಜೆ.ಸಿ.ಡೆಕಾಕ್ಸ್" ಅನ್ನಬಾರದು.) ಅನ್ನೋ ಬಹುರಾಷ್ಟೀಯ ಕಂಪೆನಿಗೆ ನಮ್ಮ ಬೆಂಗಳೂರಿನ ಹೊಸ ವಿಮಾನ ನಿಲ್ದಾಣದ ಒಳಗೆ, ಹೊರಗೆ, ಹೋಗೋ-ಬರೋ ರಸ್ತೆ - ಎಲ್ಲಾ ಕಡೆ ಜಾಹೀರಾತಿನ ಗುತ್ತಿಗೆ ಸಿಕ್ಕಿದೆ. ಜೆ.ಸಿ.ಡುಕೋ ಪ್ರಪಂಚದಲ್ಲಿ 50ಕ್ಕಿಂತ ಹೆಚ್ಚು ವಿಮಾನ ನಿಲ್ದಾಣಗಳಲ್ಲಿ ಜಾಹೀರಾತು ನಿರ್ವಹಣೆ ಮಾಡ್ತಾ ಇರೋ ವಿಶ್ವದ ಎರಡನೇ ಅತಿ ದೊಡ್ಡ ಜಾಹೀರಾತು ಸಂಸ್ಥೆ.

ಇಂಥಾ ಸಂಸ್ಥೆ ಇದಕ್ಕೆ ಕೈಹಾಕಿದೆ ಅನ್ನೋದೇನೋ ಸರೀನೇ. ಆದರೆ ಇವರು ಜಾಹೀರಾತುಗಳಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ಕೊಡ್ತಾರೋ ಅಥವಾ ಕನ್ನಡಾನ ಕಸದ್ ಬುಟ್ಟೀಗ್ ಎಸ್ದು ಬೆಂಗ್ಳೂರಲ್ಲಿ ಇನ್ನಷ್ಟು ಇಂಗ್ಲೀಷು-ಹಿಂದಿ ತುಂಬೋ ಹಲ್ಕಾ ಕೆಲಸಕ್ಕೆ ಕೈಹಾಕ್ತಾರೋ? ಜಾಹೀರಾತನ್ನ ನಿರ್ಮಿಸೊ ಕೆಲ್ಸದಲ್ಲಿ ಕನ್ನಡಿಗರಿಗೆ ಸರಿಯಾಗಿ ಉದ್ಯೋಗವಕಾಶ ಕೊಡ್ತಾರೋ ಇಲ್ಲಾ ಇನ್ನಷ್ಟು ಕನ್ನಡೇತರರನ್ನ ತಂದು ಇಲ್ಲೀಗೆ ತುಂಬೋ ಪಕ್ಷಪಾತದ ಕೆಲಸ ಮಾಡ್ತಾರೋ? ನಮ್ಗೆ ಇಷ್ಟ ಇಲ್ಲದೇ ಇರೋದನ್ನ ಇವರು ಮಾಡೋ ಕಡೆಗೆ ವಾಲೋ ಮುಂಚೇನೇ ನಾವು ಎಚ್ಚೆತ್ತುಕೊಂಡು ಬೇಕಾದ ಕ್ರಮ ಕೈಗೊಳ್ಳೋದೇ ಲೇಸು ಗುರು!

ಪ್ಯಾರಿಸ್ಸಲ್ಲಿ ಫ್ರೆಂಚ್ ಹೇಗೋ ಹಾಗೇ ಬೆಂಗ್ಳೂರಲ್ಲಿ ಕನ್ನಡ

ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟ. ಇಲ್ಲಿನ ಪ್ರತಿ ರಾಜ್ಯಕ್ಕೂ ಅದರದೇ ಭಾಷೆ-ಸಂಸ್ಕೃತಿಗಳೂ ಇತಿಹಾಸ-ವರ್ತಮಾನ-ಭವಿಷ್ಯಗಳೂ ಇವೆ. ಬೆಂಗಳೂರು ಅನ್ನೋದು ಕನ್ನಡಿಗರು ಕಟ್ಟಿ ಬೆಳೆಸಿರೋ ಊರು. ಫ್ರಾನ್ಸಿಗೆ ಪ್ಯಾರಿಸ್ ಹೇಗೆ ರಾಜಧಾನಿಯೋ ಕರ್ನಾಟಕಕ್ಕೆ ಬೆಂಗಳೂರು ರಾಜಧಾನಿ. ಪ್ಯಾರಿಸ್ಸಲ್ಲಿ ಫ್ರೆಂಚಿಗೆ ಹೇಗೋ ಹಾಗೇ ಇಲ್ಲಿ ಕನ್ನಡಕ್ಕೆ ಅಗ್ರ ಸ್ಥಾನ ನೀಡಬೇಕು ಅನ್ನೊದನ್ನ ಜೆ.ಸಿ.ಡುಕೋ ಅರ್ಥ ಮಾಡ್ಕೊಬೇಕು. ಹಾಗಂತ ಇಲ್ಲಿ ಇಂಗ್ಲೀಷಲ್ಲಿ ಜಾಹೀರಾತುಗಳು ಇರಬಾರದು ಅಂತೇನಿಲ್ಲ. ಇರಲಿ, ಆದ್ರೆ ಜಾಹೀರಾತಿನ ತುಂಬ ಇಂಗ್ಲೀಷ್ನೇ ಮೆರಸಿ ಕನ್ನಡದಲ್ಲಿ ಆಟಕ್ಕುಂಟು-ಲೆಕ್ಕಕ್ಕಿಲ್ಲ ಅನ್ನೊ ರೀತಿಲಿ ಇವತ್ತಿನ ದಿನ ವೋಡಾಫೋನ್ ಮಾಡ್ತಿರೋ ನಾಡದ್ರೋಹದ ಕೆಲಸ ಇವರು ಮಾಡಬಾರದು.
ಪ್ಯಾರಿಸ್, ಲಂಡನ್, ಟೆಲವೀವ್, ಫ್ರಾಂಕ್ಫರ್ಟ್, ಆಮ್ಸ್‍ಟರ್‍ಡಾಮ್, ಬ್ಯಾಂಕಾಕ್, ಬೀಜಿಂಗ್, ಟೋಕಿಯೊ, ಹೀಗೆ ವಿಶ್ವದ ಯಾವುದೇ ಪ್ರಸಿದ್ಧ ವಿಮಾನ ನಿಲ್ದಾಣ ನೋಡಿ, ಇಳಿದ ಕೂಡಲೆ ಕಣ್ಣಿಗೆ ಬೀಳೋದು ಅಲ್ಲೀ ಭಾಷೆಯ ಜಾಹೀರಾತುಗಳೇ. ಎಲ್ಲಾ ಜಾಹೀರಾತಲ್ಲೂ ತಮ್ಮ ಭಾಷೆಗೆ ಅಗ್ರಸ್ಥಾನ, ನಂತರದ ಸ್ಥಾನ ಬೇರೆ ಭಾಷೆಗೆ. ನಮ್ಮ ಬೆಂಗಳೂರಲ್ಲೂ ಹಾಗೇ ಆಗಬೇಕು.

ಇವ್ರು ಕನ್ನಡಿಗರಿಗೆ ಕೆಲಸ ಕೊಡದೇ ಹೋದ್ರೆ ಇಲ್ಲಿಗೆ ಬರೋದೇ ಬೇಡ

ಜಾಹೀರಾತು ಅಳವಡಿಸೋದ್ರಿಂದ ಹಿಡಿದು ನಿರ್ವಹಣೆ ವರೆಗೆ ಇರೋ ಎಲ್ಲಾ ಕೆಲಸದಲ್ಲೂ ಕನ್ನಡಿಗರಿಗೆ ಆದ್ಯತೆ ಕೊಡಬೇಕು ಗುರು. ಬೆಂಗ್ಳೂರಿನ ವಿಮಾನ ನಿಲ್ದಾಣದಲ್ಲೂ ಇಲ್ಲೀ ಐ.ಟಿ. ಕಂಪನಿಗಳ ಥರಾ ಮಲೆಯಾಳಿಗಳು, ತಮಿಳ್ರು, ತೆಲುಗ್ರು, ಹಿಂದಿಯೋರು, ಬಂಗಾಳಿಗಳು ಬಂದು ತುಂಬ್ಕೋಬೇಕಾ? ಔರು ತಾವಷ್ಟೇ ಬರದೆ ತಮ್ಮ ಮನೆಯೋರ್ನೆಲ್ಲಾ, ತಮ್ಮ ಕಾಗೆ-ಬಳಗವನ್ನೆಲ್ಲಾ ಕರ್ದು ಇಲ್ಲೇ ವಲಸೆ ಮಾಡಿಸೋದ್ನ ಕೆಲಸ ಇಲ್ಲದ ಕನ್ನಡಿಗ ಹೊಟ್ಟೆಮೇಲೆ ತಣ್ಣೀರುಬಟ್ಟೆ ಇಟ್ಟುಕೊಂಡು ನೋಡಬೇಕಾ? ಖಂಡಿತ ಇಲ್ಲ ಗುರು! ಕನ್ನಡಿಗರಿಗೆ ಕಲ್ಸದಲ್ಲಿ ಆದ್ಯತೆ ಕೊಡದೆ ಹೋದ್ರೆ ಇವ್ರು ಎಂಥಾ ದೊಡ್ಡ ಕಂಪನೀನೇ ಆಗಿರಲಿ, ಒಂದು ದೊಡ್ಡ ನಮಸ್ಕಾರ!

ಕನ್ನಡ-ಕನ್ನಡಿಗ-ಕರ್ನಾಟಕಗಳಿಗೆ ಆದ್ಯತೆ ಕೊಟ್ರೆ ಸರಿ, ಇಲ್ಲದೇ ಹೋದರೆ...
ತನ್ನ ಜಾಹೀರಾತಲ್ಲಿ ಕನ್ನಡಮಯ ವಾತಾವರಣ ನಿರ್ಮಾಣ ಮಾಡಿ, ಕನ್ನಡದೋರಿಗೆ ಕೆಲ್ಸ ಕೊಡೋಹಾಗಿದ್ರೆ ಬಹುರಾಷ್ಟ್ರೀಯ ಕಂಪನಿಯಾದರೂ ಸ್ವಾಗತ, ಹೊರರಾಜ್ಯದ ಕಂಪನಿಯಾದರೂ ಸ್ವಾಗತ. ಕನ್ನಡ-ಕನ್ನಡಿಗ-ಕರ್ನಾಟಕಗಳ್ನ ಮರ್ತು ಬರೀ ಇಂಗ್ಲೀಷೋ ಹಿಂದೀನೋ ಮೆರೆಸೋಹಾಗಿದ್ರೆ ಕನ್ನಡಿಗ ಕಟ್ಟಿದ ಜಾಹೀರಾತು ಕಂಪನೀಗೂ ಕ್ಯಾಕರ್ಸಿ ಉಗೀಬೇಕು. ಏನ್ ಗುರು?

ಸರ್ಕಾರ (ಅನ್ನೋದು ಮತ್ತೆ ಹುಟ್ಕೊಂಡಾಗ) ಕಣ್ಮುಚ್ಚಿಕೊಂಡು ಕೂತ್ಕೋಬಾರ್ದು

ಈ ಕಂಪನಿ ಬಂದು ಬೆಂಗ್ಳೂರ್ನ ಇನ್ನಷ್ಟು ಹಾಳುಗೆಡವೋ ಮುಂಚೇನೇ ಕರ್ನಾಟಕ ಸರ್ಕಾರ ಸರಿಯಾಗಿ ಕ್ರಮ ತೊಗೊಂಡು ಈ ಕಂಪನಿಗೆ ಇಲ್ಲಿ ಆಟ ಆಡಬೇಕಾದ್ರೆ ನಿಯಮಗಳೇನು ಅಂತ ತಿಳಿಸಿಕೊಡಬೇಕು. ಹಾಡು-ಹಗಲಲ್ಲೇ ಕನ್ನಡಾನ ಜಾಹೀರಾತಿನ ಒಂದು ಮೂಲೇಲಿ ಕಾಟಾಚಾರಕ್ಕೆ ಹಾಕೋದು, ಇಲ್ಲಾ ಮರೆತೇ ಬಿಡೋದು, ಇಲ್ಲಾ ಇಂಗ್ಲೀಷಲ್ಲಿ ದೊಡ್ಡ ಅಕ್ಷರದಲ್ಲಿ ಬರೆದು ಕನ್ನಡದಲ್ಲಿ ಬೂದುಗಾಜು ಇಟ್ಟುಕೊಂಡು ನೋಡೋಹಾಗೆ ಹಾಕೋದು - ಇವೆಲ್ಲ ಮಾಡುದ್ರೆ ನೇರವಾಗಿ ಪ್ಯಾರಿಸ್ಸಿಗೆ ಒದ್ದು ಕಳುಸ್ತೀವಿ ಅಂತ ವಿವರ್ಸಿ ಹೇಳ್ಬೇಕು ಗುರು!

ಬೆಳಗಾವಿ ಕುಂದಾ ಒಳಗಿರೋ ಪಾಠ

"ಬೆಳಾಗಾವಿ ಕುಂದಾ" ಬೆಳಗಾವಿ ಹೊರಗೆ ಬಂದು ಕರ್ನಾಟಕದ ಬೇರೆಬೇರೆ ಕಡೆಗಳಲ್ಲಷ್ಟೇ ಅಲ್ಲ, ಹೊರದೇಶಗಳಿಗೂ ಮಾರಾಟ ಆಗೋ ದಿನ ಕೊನೆಗೂ ಬಂದಿದೆ ಅಂತ ಪ್ರಜಾವಾಣಿ ವರದಿ ನೋಡಿ ಬಾಯಲ್ಲಿ ನೀರು ಗುರು! ಇದನ್ನ ನಮ್ಮ ಬೆಳಾಗಾವಿ ಮಂದಿ ಒಂದು ದೊಡ್ಡ ಉದ್ದಿಮೆಯಾಗಿ ಶುರು ಮಾಡ್ಕೊಂಡಿರೋದು ಸಕ್ಕತ್ ಗುರು! ನಮ್ಮ ನಮ್ಮ ಜಾಗಗಳ ವಿಶೇಷತೆಗಳ್ನ ಹಿತ್ತಲ ಗಿಡಗಳು ಅಂತ ಬಿಟ್ಟಾಕೋ ಬದ್ಲು ಅದ್ರಿಂದ ಹೇಗೆ ದುಡ್ಡು ಮಾಡ್ಕೋಬೋದು, ಹೇಗೆ ಇಡೀ ಪ್ರಪಂಚಕ್ಕೆ ಅದರ ಚಟ ಹಿಡಿಸೋದು ಅಂತ ಯೋಚ್ನೆ ಮಾಡೋದು ಸಕ್ಕತ್ ಮುಖ್ಯಾಮ್ಮಾ!

ಹಿತ್ತಲ ಗಿಡವನ್ನ ಇಡೀ ಪ್ರಪಂಚಕ್ಕೆ ಹಬ್ಬಿಸಬೇಕು

ಇವತ್ತಿನ ದಿನ ಯಾವುದೇ ಒಳ್ಳೇ ಬಹುರಾಷ್ಟ್ರೀಯ ಕಂಪನಿ ತೊಗೊಂಡ್ರೂ ಅದು ತನ್ನ ಸುತ್ತಮುತ್ತಲ ಸಂಪನ್ಮೂಲ-ಸಾಮರ್ಥ್ಯ-ಬೇಡಿಕೆಗಳ್ನ ಬಳಸಿಕೊಂಡೇ ಮುಂದೆ ಬಂದಿರೋದು. ಉದ್ದಿಮೆಯಲ್ಲಿ ಗೆಲುವು ಸಾಧಿಸಿರೋರು ಯಾರೂ ಸುತ್ತಮುತ್ತಲಲ್ಲಿರೋ ಸಂಪನ್ಮೂಲಗಳ್ನ, ಸುತ್ತಮುತ್ತಲ ಜನರ ಸಾಮರ್ಥ್ಯಗಳ್ನ, ಸುತ್ತಮುತ್ತಲ ಜನರ ಬೇಡಿಕೆಗಳ್ನ ಕಡೆಗಣಿಸಿಲ್ಲ ಗುರು! ಅವರೆಲ್ಲಾ ಸುತ್ತಮುತ್ತಲಲ್ಲಿರೋದನ್ನ ಸರಿಯಾಗಿ ನಿಭಾಯಿಸೋ ಕಲೆ ಕಲ್ತು ಇಡೀ ಪ್ರಪಂಚವನ್ನೇ ಮಾರುಕಟ್ಟೆಯಾಗಿ ಬದಲಾಯಿಸಿಕೊಂಡೌರೆ ಗುರು.

ಇದಕ್ಕೆ ಇತ್ತೀಚೆಗೆ ಕರ್ನಾಟಕಕ್ಕೂ ಲಗ್ಗೆ ಇಟ್ಟಿರೋ ಪೀಜಾ ಕಂಪನಿಗಳೇ ಉದಾಹರಣೆ. ಇವತ್ತಿನ ದಿನ ಮೂರು ಹೊತ್ತೂ ಊಟ ಮಾಡೋ ಮಾಲೀಕರಿರೋ ಪೀಜಾ ಕಂಪನಿಗಳ್ಯಾವೂ ಈ ನೆಲದಲ್ಲಿ ಹುಟ್ಟಿರೋವಲ್ಲ. ಇಡೀ ಪ್ರಪಂಚಕ್ಕೇ Pizza Hut, Dominos ಮುಂತಾದೋರು ಪೀಜಾ ಮಾರ್ತಾರೆ? ಯಾಕೆ? ಯಾಕೇಂದ್ರೆ ಮೊದ್ಲು ಔರು ತಮ್ಮ ತಮ್ಮ ನಾಡಿನಲ್ಲಿ ಹೇಗೆ (ಅತೀ ಕಡಿಮೆ ದುಡ್ಡಲ್ಲಿ, ಅತೀ ಹೆಚ್ಚು ರುಚಿಯಿರೋಹಾಗೆ) ಪೀಜಾ ತಯಾರಿಸೋದು, ಹೇಗೆ ಜನ ನಾಮುಂದು-ತಾಮುಂದು ಅಂತ ಕೊಂಡ್ಕೊಳೋಹಂಗೆ ಮಾರೋದು ಅನ್ನೋ ವಿದ್ಯೇನ ಸಕ್ಕತ್ತಾಗಿ ಕಲ್ತುಕೊಂಡ್ರು, ಅದಕ್ಕೆ. ಅದು ಬಿಟ್ಟು ಇಟಲಿ ಜನ "ಛೆ! ಛೆ! ಪೀಜಾ ಎಷ್ಟೇ ಆದರೂ ಹಿತ್ತಲ ಗಿಡ!" ಅಂದ್ಕೊಂಡಿದ್ದರೆ ಇವತ್ತು ಇಡೀ ಪ್ರಪಂಚಕ್ಕೆ ಹರಡುಕೊಳ್ಳಕ್ಕೆ ಆಗ್ತಿತ್ತಾ? ಖಂಡಿತ ಇಲ್ಲಾಮ್ಮಾ!

ಸುತ್ತಮುತ್ತಲಲ್ಲಿರೋದ್ನ ಮರೆತರೆ ಕೈಗೆ ಚಿಪ್ಪೇ

ಆದ್ದರಿಂದ ಇವತ್ತೂ ಕನ್ನಡಿಗರು ವ್ಯಾಪಾರದಲ್ಲಿ ಗೆಲುವು ಸಾಧಿಸಕ್ಕೆ ಮೊದಲನೇ ಹೆಜ್ಜೇನೇ ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋದು:
 • ನನ್ನ ಸುತ್ತಮುತ್ತ ಸಿಗೋ ಸಂಪನ್ಮೂಲಗಳು ಯಾವುವು?
 • ನನ್ನ ಸುತ್ತಮುತ್ತ ಇರೋರ ಸಾಮರ್ಥ್ಯಗಳು ಯಾವುವು?
 • ನನ್ನ ಸುತ್ತಮುತ್ತ ಇರೋರ ಬೇಡಿಕೆಗಳು ಯಾವುವು?
 • ಇವುಗಳ್ನ ಬಳಸಿಕೊಂಡು ನಾನು ಹೇಗೆ ಇಡೀ ಪ್ರಪಂಚದಿಂದ ದುಡ್ಡು ಮಾಡಬಹುದು?
 • ನಾನೂ ದುಡ್ಡು ಮಾಡ್ಕೊಂಡು ನನ್ನ ಸುತ್ತಮುತ್ತ ಇರೋರ ಜೀವನಾನೂ ಹೇಗೆ ಹಸನಾಗಿಸೋದು?
ಮನುಷ್ಯನ ಬುದ್ಧಿಗೆ ಸುಲಭವಾಗಿ ಅರ್ಥವಾಗೋದು ಸುತ್ತಮುತ್ತಲ ವಿಷಯಗಳೇ. ಕಣ್ಣಿಗೆ ಕಾಣದಿರೋ ಸಂಪನ್ಮೂಲಗಳು, ಕಣ್ಣಿಗೆ ಕಾಣದ ಜನರ ಸಾಮರ್ಥ್ಯಗಳ್ನ, ಕಣ್ಣಿಗೆ ಕಾಣದ ಜನರ ಬೇಡಿಕೆಗಳ್ನೇ ಆಧಾರವಾಗಿಟ್ಟುಕೊಂಡು ಉದ್ಧಾರ ಆಗಕ್ಕೆ ಸಾಧ್ಯವಿಲ್ಲ ಗುರು! ನಮ್ಮ ನಾಡ್ನ, ನಮ್ಮ ನುಡೀನ, ನಮ್ಮ ಜನರನ್ನ, ಔರ ಸಾಮರ್ಥ್ಯಗಳ್ನ, ಔರ ಬೇಡಿಕೆಗಳ್ನ ಅರ್ಥ ಮಾಡ್ಕೊಳ್ದೇ, ಅದರಿಂದ ಪಡೀಬೇಕಾದ ಲಾಭವನ್ನ ಪಡ್ಕೊಳ್ದೆ ನಾವು ಈ ಜಾಗತೀಕರಣದ ಯುಗದಲ್ಲಿ ಏನೂ ಕಿಸ್ಯಕ್ಕಾಗಲ್ಲ ಗುರು!

ಕಾವೇರೀನ ಸಮುದ್ರದ ಪಾಲು ಮಾಡಾಕ ನಮ್ಮ ಕಡಿಯಿಂದ ಕಸಗೊಂಡ್ರನಾ?

ಎರಡು ವರ್ಷದಾಗ ಪುಗಸಟ್ಟಿ ಸಮುದ್ರಕ್ಕ ತಮಿಳುನಾಡಿಂದ ಹೊಂಟಿರೋ ಕಾವೇರಿ ನೀರು 500 ಟಿ.ಎಂ.ಸಿ ಅಂತ 15ನೇ ಅಕ್ಟೋಬರ ತಾರೀಕಿನ ಕನ್ನಡಪ್ರಭದ ವರದಿ ಹೇಳಾಕ್ ಹತ್ತೈತ್ರೀಯಪ್ಪಾ. ವರ್ಷಕ್ಕ ಬರೋಬ್ಬರಿ 250 ಟಿ.ಎಂ.ಸಿ ನೀರು ಉಣಾಕ ಉಡಾಕ ಇಲ್ಲದಾಂಗ ಸಮುದ್ರ ಸೇರಕ್ ಹತ್ತೈತಿ ಅಂದ್ರ ಯಾರಿಗ್ ತಾನ ಹೊಟ್ಟಿ ಉರಿಯಂಗಿಲ್ರೀ?
ಮೊನ್ನಿ ಕಾವೇರಿ ನ್ಯಾಯಮಂಡಲಿ ಮಂದಿ ಕೊಟ್ಟಿರೋ ಕಡೀ ತೀರ್ಪಿನಾಗ ತಮಿಳುನಾಡಿನ ಪಾಲು 419 ಟಿಎಂಸಿ ನೀರಾದರ ನಮ್ ಕರ್ನಾಟಕಕ್ ಸಿಗೋದು 270 ಟಿ.ಎಂ.ಸಿ. ಅಂದರ, ಈ ತಮಿಳುನಾಡು ಮಂದಿ ಸುಖಾಸುಮ್ನೆ ಸಮುದ್ರಕ್ಕ ಸೋರಿಕಿ ಮಾಡ್ತಿರೋದು ಕರ್ನಾಟಕದ ಒಂದು ವರ್ಷದ್ ಬಾಬ್ತು ಆಗಿರೋ 250 ಟಿ.ಎಂ.ಸಿ ಯಷ್ಟು ನೀರನ್ನ ಗುರು!

ಈ ಪರಿ ಚೆಲ್ಲೋ ನೀರು ಉಳೀತಂದ್ರ ನಮ್ಮ ನೀರಿನ ಸಮಸ್ಯೆ ಬಗೆಹರಿದಂಗೇ ಆತಲ್ಲೋ ಗುರು?

ತಮಿಳು ಮಂದಿ ಭಾಳ ನೀರು ಕೇಳಾಕ್ ಹತ್ತಾರ ಗುರು!


ಕಾವೇರಿ ನದಿಯಾಗ ಒಂದು ವರ್ಷದಾಗ ಹರಿಯೋ ನೀರು ಅಜಮಾಸು 740 ಟಿಎಂಸಿ ಐತಿ. ತಮಿಳುನಾಡು ವರ್ಷಕ್ 566 ಟಿಎಂಸಿ ನೀರು ಬೇಕಂತೈತಿ. ತಮಿಳುನಾಡಾಗ್ ಹುಟ್ಟಿ ಕಾವೇರಿಯಾಗ ಕೂಡೋ ನೀರಿನ ಪ್ರಮಾಣ 252 ಟಿಎಂಸಿ ಅಷ್ಟ್ ಐತಿ. ಅಂದ್ರ ತಮಿಳುನಾಡಾಗ್ ಹುಟ್ಟೋ ಅಷ್ಟೂ ನೀರು ಸಮುದ್ರದ ಪಾಲೇ ಆದಂಗ್ ಆತಲ್ರೀಪಾ! ಏನ್ ಅನ್ಯಾಯಾ ಗುರು!

ನೀರು ರಗಡ್ ಬಂದು ನದಿ ತುಂಬಿ ಉಳಕಿ ನೀರು ಸಮುದ್ರಕ್ ಹೋದ್ರ ಏನ್ ತ್ರಾಸು ಅಂತೀರೇನ್ರೀಪಾ? ಹೀಂಗಾ ಪೋಲಾಗೋ ನೀರಿನ ಒಂದೊಂದು ಹನಿನೂ ಸರೀಗ್ ಬಳಸ್ಕೊಂಡ್ರ, ಅಂಥ ಒಂದ್ ಛಲೋ ತೀರ್ಮಾನಕ್ಕ ನಾವ್ ಎರಡೂ ರಾಜ್ಯಗಳ್ ಬಂದ್ವೂ ಅಂದ್ರ ಈ ನೀರು ಹಂಚಿಕಿ ಕಿತ್ತಾಟ ಇರಂಗೇ ಇಲ್ಲಾ ಅನ್ನಿಸ್ತೈತಿ. ಖರೀ ಅಂದ್ರಾ... ಸಮುದ್ರಾ ಸೇರಾಕ್ ಹತ್ತಿರೋ ಈ 250 ಟಿಎಂಸಿ ನೀರೇನು ಸಮುದ್ರದ ದಡದಾಗ್ ಹುಟ್ಟೋದಲ್ಲ. ಕಾವೇರಿ ನದಿ ಕೂಡಾ ನಡನಡಕ್ಕ ಸೇರ್ಕೊಂತಾ, ಹರಕೊಂತಾ ಬರೂದು. ಈ ನೀರನ್ನ ಹಿಡಿದಿಟ್ಟುಕೊಂಡು ನೀರಿಲ್ಲದ ಕಾಲದಾಗ ಬಳಸಿಕೊಂಡ್ರಾ, ನಾವಿಬ್ರೂ ಬಡ್ದಾಡೋದು ತಪ್ಪತೈತಿ ಗುರು!

ಆಷ್ಟು ಕೇಳೋ ಮಂದಿ 340 ಟಿಎಂಸಿ ನೀರು ಚೆಲ್ಲಾಕ ಹತ್ತಾರ!


ತಮಿಳುನಾಡಾಗ ಭೂಮಿ ಒಳಗಿರೋ ನೀರಿನ ಪ್ರಮಾಣ 150 ಟಿಎಂಸಿ, ಕೊಲೆರೂನ್ ಅಣಿಕಟ್ಟಿ ಸೋರಿಕಿ 102 ಟಿಎಂಸಿ, ಟೈಲ್ ಮತ್ತ ರೆಗ್ಯುಲೇಟರ್ ಸೋರಿಕಿ 88 ಟಿಎಂಸಿ, ಅಂದಾಜು ಮಳೀನೀರು 50 ಟಿಎಂಸಿ... ಹೀಂಗ ಖಾಲಿ ಕಳ್ಕೊಳೋ ನೀರಿನ ಪ್ರಮಾಣ 340 ಟಿಎಂಸಿ. ಈ ಪರೀ ನೀರ್ ಸೋರಿಕಿ ಆಗೂದನ್ನ ಖರೇನಾ ತಪ್ಪುಸಿದ್ರ ತಮಿಳುನಾಡು, ಕರ್ನಾಟಕದ ಪ್ರಾಣ ಹಿಂಡಿ ನೀರು ಬಸಿಯೋದು ತಪ್ತೈತಿ. ಹಾಲು ಕೊಡೋ ದನದ್ ಮೊಲಿಯಾಗ ರಕ್ತ ಹಿಂಡೋದ್ ತಪ್ತೈತಿ!

ಎರಡೂ ಕಡೀ ಮಂದಿ ನೀರು ಚೆಲ್ಲೋ ಬದಲು ಕೂಡಿಡೋದ ಪರಿಹಾರ


ನಮ್ ಕರ್ನಾಟಕದಾಗ ಮ್ಯಾಕೀದಾಟು ಅನ್ನೂ ಕಡೀ ಕಟ್ಟೋಣು ಅಂತ ಇರೋ ಅಣಿಕಟ್ಟಿ ಕಟಗೊಂಡ್ರ, ತಮಿಳು ನಾಡು, ಕರ್ನಾಟಕ ಎರಡೂ ಕಡೀ ಕಾವೇರಿ ನದೀ ಹರಿಯೋ ದಾರೀಮಟ ಈಟೀಟೇ ಸಣ್ಸಣ್ಣ ಅಣಿಕಟ್ಟುಗಳನ್ನು ಕಟಗೊಂಡ್ರಾ, ಹಾಂಗ್ ಆ ನೀರನ್ನ ಹಿಡಿದಿಟ್ಟುಕೊಂಡರಾ ಈ ತಲೀನೋವು ಹೋಗಂಗಿಲ್ಲೇನು?

ಈ ನೀರು ಹಂಚಿಕಿ ರಾಜ್ಯ ರಾಜ್ಯಗಳಿಗೆ ಅಂತ್ ಅನ್ನೂ ಬದಲು ತಾಲೂಕವಾರು ಹಂಚಿಕೆ ಮಾಡುದ್ರಾ ಛಲೋ ಅಲ್ಲೇನು? ಆಯಾ ಪ್ರದೇಶದಾಗ ಹುಟ್ಟೋ ನೀರನ್ನ ಅಲ್ಲಲ್ಲೇ ಕೂಡಿಟ್ಟುಕೊಂಡು ಬಳ್ಸೋ ಪದ್ದತಿ ಛಲೋ ಅನ್ನುಸ್ತೈತಿ... ಏನಂತೀ ಗುರೂ?
ತಮಿಳುನಾಡಾಗ ಕಾವೇರಿ ನದಿಗೆ ಇರೋದು ೯೩ ಟಿಎಂಸಿ ನೀರು ಹಿಡ್ದಿಡೋ ಮೆಟ್ಟೂರು ಅಣಿಕಟ್ಟಿ ಒಂದಾ. ಮತ್ ನಮ್ಮ ಕರ್ನಾಟಕದಾಗ್ ಇರೋ ಕೆ.ಆರ್.ಎಸ್ ನಾಗ ಹಿಡುಸೋದು ಅದಕ್ಕಿಂತಲೂ ಕಡಿಮೇನೆ. ಅವೆರಡೂ ತುಂಬಿ ತುಳಕಾಕ್ ಹತ್ತದ್ರಾ ಮ್ಯಾಗಿಂದೆಲ್ಲಾ ಖರೇ ಸಮುದ್ರದ ಪಾಲಾಕ್ಕೈತಿ.

ಕರ್ನಾಟಕ ಸರ್ಕಾರ ಮತ್ತ ತಮಿಳುನಾಡು ಸರ್ಕಾರಗಳು ಮಾತುಕತಿ ಬಾಗ್ಲಾ ಮತ್ ತಗೀಬೇಕು. ಎರಡೂ ಕಡೀ ನೀರಾವರಿ ತಜ್ಞರನ್ನು ಎದ್ರಾಬದ್ರಾ ಕುಂಡ್ರುಸಿ ಮಾತುಕತಿ ಆಡಬೇಕು. ಪರಿಹಾರ ಕಂಡ್ಕೋಬೇಕು. ಇದ್ ಆಗೂಣಿಲ್ಲಾ ಅನ್ನೂದಾದ್ರ, ದಿಲ್ಲಿಯಾಗಿನ ನಮ್ ಕೇಂದ್ರ ಸರ್ಕಾರ, ಎರಡೂ ರಾಜ್ಯಗಳಿಗ ನೀರು ಹಂಚಿಕೀನಾ ವೈಜ್ಞಾನಿಕವಾಗಿ ರೂಪಿತವಾದ ಸೂತ್ರದ ಮೂಲಕ ಮಾಡಬೇಕು. ಅದಕ್ಕೂ ಮೊದಲ, ನಮ್ಮ ಕೇಂದ್ರ ಸರ್ಕಾರ ರಾಜ್ಯ ರಾಜ್ಯಗಳ ನಡೂಕಿನ ನದಿ ನೀರಿನ ತಗಾದಿ ಪರಿಹಾರ ಮಾಡಕ್ಕ ಒಂದ್ "ರಾಷ್ಟ್ರೀಯ ಜಲನೀತಿ"ನ ಹುಟ್ ಹಾಕ್ಬೇಕು. ಏನಂತೀ ಗುರು?

ಕೊನೀ ಹನಿ
ದೇಶ ದೇಶಗಳ ಮಧ್ಯದಾಗೇ, ನದಿ ನೀರು ಹಂಚಿಕಿ ಒಪ್ಪಂದ ಸಾಧ್ಯ ಆಗೋಣಿರೂವಾಗ, ಒಂದೇ ದೇಶದ ಎರಡು ರಾಜ್ಯಗಳ ತಗಾದೀಗೂ ಒಂದ್ ಪರಿಹಾರ ಕಂಡುಕೊಳ್ಳೋದು ತ್ರಾಸ್ ಆಗಂಗಿಲ್ಲಾ ಅನ್ಸತೈತಿ ಗುರು! ನಮ್ಮ ಸರ್ಕಾರಗಳು ತುಸಾ ಮನಸ್ ಮಾಡಬೇಕ್ ಅಷ್ಟೆ.

"ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ"

ನಮ್ಮ ನಾಡಿನ ಹಿರಿಯ ಸಾಹಿತಿಗಳು, ಸಂಶೋದಕರು ಮತ್ತು ಚಿಂತಕರು ಆದ ಡಾ.ಚಿದಾನಂದ ಮೂರ್ತಿಯವರು ನಮ್ಮ ಕನ್ನಡ ನಾಡಿನ ವಿಸ್ತಾರ, ಅದರ ಸಂಸ್ಕೃತಿಯ ವ್ಯಾಪ್ತಿ, ಎರಡು ಸಾವಿರ ವರ್ಷಗಳ ಇತಿಹಾಸ, ಅದರ ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನು, "ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ " ಎಂಬ ಕಿರು ಗ್ರಂಥದ ಮೂಲಕ ಸಂಕ್ಷಿಪ್ತವಾಗಿ ಆದರೆ ಸಮಗ್ರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ನಿಜವಾದ ಅರಿವು, ಸ್ವಾಭಿಮಾನವನ್ನು ಮೂಡಿಸಿ ಅವರನ್ನು ಜಾಗೃತಗೊಳಿಸುವ ಸಲುವಾಗಿ ೧೯೮೭ ರ ರಲ್ಲಿ ಮೊದಲು ಪ್ರಕಾಶಗೊಂಡ ಈ ಪುಸ್ತಕ, ಇತ್ತೀಚಿನ ಪರಿಶ್ಕೃತ ಮುದ್ರಣದೊಂದಿಗೆ ಸುಮಾರು ಐವತ್ತೈದು ಸಾವಿರ ಪುಸ್ತಕಗಳಿಗೂ ಮೀರಿದ ಮಾರಟದ ದಾಖಲೆ ಹೊಂದಿರುವುದು ಈ ಪುಸ್ತಕದ ವೈಶಿಷ್ಟ್ಯ ಗುರು. ಅಷ್ಟೇ ಅಲ್ಲದೆ ಇದು ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು ಬಾಷೆಗಳಿಗೂ ಅನುವಾದಗೊಂಡಿರುವ ಜನಪ್ರಿಯ ಕೃತಿಯಾಗಿದೆ.

ಸ್ವಾಭಿಮಾನ ಮತ್ತು ಸಮನ್ವಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಮೂಲಕ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಕದಂಬರಿಂದ ಉಗಮವಾದ ಕರ್ನಾಟಕ ಸಂಸ್ಕೃತಿ, ಬಾದಾಮಿ ಚಾಲುಕ್ಯರ ಆಳ್ವಿಕೆ, ಹ್ಯುಯೆನ್ ತ್ಸಾಂಗ್ ರಂತ ವಿದೇಶಿ ಪ್ರವಾಸಿಗರು ಅಂದು ಕನ್ನಡ ನಾಡಿನ ವೈಭವವನ್ನು ತಮ್ಮ ದಾಖಲೆಗಳಲ್ಲಿ ಹಿಡಿದಿಟ್ಟಿರುವ ಮಾತುಗಳು, ಇದಕ್ಕೆ ಸಾಕ್ಶ್ಯ ನುಡಿಯುವ ಸಮಕಾಲೀನ ಶಾಸನಾಧಾರಗಳು, ಕವಿಯೂ-ಕ್ಷಾತ್ರ ಪರಂಪರೆಯುಳ್ಳವನಾಗಿದ್ದ ಪಂಪ, ಸ್ವಾಭಿಮಾನದ ವಚನಕಾರರು, ನಮ್ಮ ರಾಜ ಮನೆತನದವರು ಹೇಗೆ ಸರ್ವ ಧರ್ಮೀಯರಾಗಿದ್ರು - ಅವರಿಂದ ಸಂತರು-ಕವಿ-ಕಲಾವಿದರ ಪೋಷಣೆ, ಅವರಲ್ಲಿ ಪ್ರೇರೇಪಣೆಗೊಂಡ ನಾಡು-ನುಡಿಗಳ ಬಗೆಗಿನ ಪ್ರೇಮ, ಅದರಿಂದುಂಟಾದ ಭಾಷೆ-ಸಾಹಿತ್ಯದ ಬೆಳವಣಿಗೆ, ಕರ್ನಾಟಕ ಸಂಗೀತದ ಸೊಗಡು, ನಮ್ಮ ನೃತ್ಯ, ಚಿತ್ರಕಲೆ ಮತ್ತು ವಾಸ್ತು ಶಿಲ್ಪಗಳು ಸಾರುವ ಸೊಗಸು, ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರ ಏಕೀಕರಣ ಚಳವಳಿ ಹೀಗೆ ಇನ್ನೂ ಹಲವಾರು ಕುತೂಹಲಕರ-ಆಸಕ್ತಿಯುತ ವಿಷಯಗಳನ್ನು ನಮ್ಮ ಕಣ್ಣು ಮುಂದೆ ತೆರೆದಿಟ್ಟು ಹೃದಯವನ್ನು ತುಂಬಿಸುತ್ತಾರೆ.

ಕರ್ನಾಟಕದಲ್ಲಿ ಕನ್ನಡ ಸಂಸ್ಕೃತಿಯನ್ನು ಪ್ರೀತಿಸಿದರೆ ಅದು ಭಾರತ ಸಂಸ್ಕೃತಿಯನ್ನು ಕಾಪಾಡಿದಂತೆ

ಪುಸ್ತಕದಲ್ಲಿ ಮೂರ್ತಿಯವರು ಕನ್ನಡಿಗರ ಜಾಗೃತಿಯನ್ನು ಬಡಿದೆಬ್ಬಿಸುತ್ತ ಈ ಕೆಳಗಿನ ಮಾತುಗಳನ್ನು ಉಲ್ಲೇಖಿಸುತ್ತ ಭಾರತ ಸಂಸ್ಕೃತಿಯೆಂದರೇನೆಂದು ಅಮೂಲ್ಯವಾದ ಮತ್ತು ಮಹತ್ವಪೂರ್ಣವಾದ ಮಾತುಗಳನ್ನು ದಾಖಲಿಸಿದ್ದಾರೆ.
" ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ. "

ಜಾಗೃತನಾಗಬೇಕಿರುವ ಕನ್ನಡಿಗ


ಅಧುನಿಕ ಕರ್ನಾಟಕದ ಸ್ಥಿತಿಗತಿಗಳನ್ನು ವಿಷ್ಲೇಶಿಸುತ್ತ, ಅದರ ಸಮಸ್ಯೆಗಳನ್ನು ಮೆಲಕು ಹಾಕುತ್ತ, ನಮ್ಮ ನೆಲ-ಜಲ-ಗಡಿ-ಬದುಕುನ್ನು ಹಸನು ಮಾಡಿಕೊಳ್ಳದೆ, ನಮ್ಮ ಭಾಷೆ-ಸಂಸ್ಕೃತಿಯ ಗಟ್ಟಿತನವನ್ನು ಉಳಿಸಿ ಕಾಪಾಡಿಕೊಳ್ಳದೆ ಸ್ವಾಭಿಮಾನವನ್ನು ಕಳೆದುಕೊಂಡು ನಿರಭಿಮಾನಿಯಾಗಿರುವ ಕನ್ನಡಿಗನು ಇಂದು ಜಾಗೃತನಾಗಬೇಕಾಗಿರುವ ವಿಷಯವನ್ನು ಮೂರ್ತಿಯವರು ಈ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ.

ಚಿಕ್ಕ ಹುಲಿಮರಿಯೊಂದು ಕುರುಬನ ಕೈಗೆ ಸಿಕ್ಕು ಅದು ಕುರಿಗಳ ಜತೆ ಹುಲ್ಲು ತಿಂದು ಮ್ಯಾ ಮ್ಯಾ ಎಂದು ಅರಚುತ್ತ ಬೆಳೆಯುತ್ತದೆ. ಒಮ್ಮೆ ದೊಡ್ಡ ಹುಲಿಯೊಂದು ಅಟ್ಟಿಸಿಕೊಂಡು ಬಂದಾಗ ಉಳಿದ ಕುರಿಗಳಂತೆ ಅದೂ ಹೆದರಿ ಓಡುತ್ತದೆ. ಅಚ್ಚರಿಗೊಂಡ ದೊಡ್ಡ ಹುಲಿ, ಮರಿ ಹುಲಿಯನ್ನು ಹಿಡಿದು ಒಂದು ಕೊಳದಲ್ಲಿ ಅದರ ಮುಖವನ್ನು ತೋರಿಸಿ ಅದು ಸಹ ಹುಲಿ ಮರಿಯೇ ಎಂದು ಹೇಳಿ ಅದಕ್ಕೆ ಗರ್ಜಿಸುವುದನ್ನು ಪರಿಚಯಿಸುತ್ತದೆ. ಸ್ವಸ್ವರೂಪ ಜ್ಞಾನವನ್ನು ಪಡೆವ ಹುಲಿ ಮರಿ ಮುಂದೊಂದು ದಿನ ವನರಾಜನಾಗಿ ಮೆರೆಯುತ್ತದೆ ಎಂಬ ಉದಾಹರಣೆಯ ಮೂಲಕ ಹುಲಿತನವನ್ನು ಮರೆತ ಕನ್ನಡಿಗರಿಗೆ, ಈ ನಾಡು ನಿಮಗೆ ಸುಲಭವಾಗಿ ದಕ್ಕಿದ್ದಲ್ಲ, ನಿಮ್ಮ ಹಿರಿಯರ ತ್ಯಾಗ-ಬಲಿದಾನಗಳಿಂದ ಬೆಳೆದ ಈ ನಾಡಿನಲ್ಲಿ ಇಂದು ನೀವು ಇಲಿಗಳಾಗಿದ್ದೀರಿ. ನೀವು ಸಹ ವೀರರು, ನಿಜವಾದ ಹುಲಿಗಳು, ನಿಮ್ಮ ಸ್ವಸ್ವರೂಪವನ್ನು ಅರಿಯಿರಿ ನೈಜ ಹುಲಿ ಕನ್ನಡಿಗರಾಗಿ ಎಂಬ ವಿಚಾರಪೂರ್ವಕವಾದ ಕರೆ ನೀಡಿದ್ದಾರೆ.

ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತ ಓದುಗರೊಬ್ಬರು ಹೇಳುತ್ತಾರೆ: ಆಂಗ್ಲ ಮೋಹದಲ್ಲಿ , ಆತ್ಮ ವಿಸ್ಮೃತಿಯಲ್ಲಿರುವ ನಮ್ಮ ಯುವ ಜನಾಂಗಕ್ಕೆ ಇಂತಹ ಪುಸ್ತಕವೊಂದರ ಅಗತ್ಯ ತುಂಬ ಇತ್ತು. ಅಧ್ಯಾಪಕ ಮಿತ್ರರು ತಮ್ಮ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಓದಲು ಸೂಚಿಸಬೇಕು.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು -೫೬೦೦೦೨ ವತಿಯಿಂದ ಪ್ರಕಟವಾದ ಮತ್ತು ಇಲ್ಲಿ ದೊರಕುವ ಈ ಪುಸ್ತಕವನ್ನು ಕೊಂಡು ಓದಿ, ಸಮಸ್ತ ಕನ್ನಡಿಗರಿಗೂ ಪರಿಚಯಿಸಿ. ಹೊಸ ಕನ್ನಡ ನಾಡಿನ ಅಭ್ಯುದಯಕ್ಕಾಗಿ ಕಂಕಣಬದ್ಧರಾಗಿ!

ಮನೆ-ತಂಗುದಾಣಗಳಲ್ಲಿ ಕನ್ನಡ ಮೆರೀಬೇಕು

ಮೈಸೂರಲ್ಲಿ ಮನೆ-ತಂಗುದಾಣಗಳು [ಹೋಮ್ ಸ್ಟೇಗಳು] ದೊಡ್ಡ ಯಶಸ್ಸು ಕಂಡಿವೆ ಅಂತ ಅಕ್ಟೋಬರ್ 9ರ ಡೆಕನ್ ಹೆರಾಲ್ಡ್ ವರದಿ ಮಾಡಿದೆ. ಈ ಹೊಸ ಉದ್ದಿಮೆ ಮನೆ ಮತ್ತು ಖಾಲಿ ಜಾಗಗಳನ್ನು ಹೊಂದಿರೋ ಹೆಚ್ಚು ಹೆಚ್ಚು ಮೈಸೂರಿಗರರಿಗೆ ಪ್ರವಾಸೋದ್ಯಮದಿಂದ ಲಾಭ ಪಡ್ಕೊಳಕ್ಕೆ ನಾಂದಿ ಹಾಡಿದೆ ಅನ್ನೋದು ಸಕ್ಕತ್ ಒಳ್ಳೇದು ಗುರು! ಆದರೆ ಈ ತಂಗುದಾಣಗಳ್ನ ನಡೆಸೋರು ಕನ್ನಡತನವನ್ನ ಬಿಡದೇ ಈ ಕೆಲಸ ಮಾಡಬೇಕಾಗಿರೋದು ಬಹಳ ಮುಖ್ಯ. ಈ ತಂಗುದಾಣಗಳಲ್ಲಿ ಕನ್ನಡದ ವಾತಾವರಣ ಇರೋಹಾಗೆ ಮಾಡೋ ಹೊಣೆ ಸರ್ಕಾರದ್ದೂ ಹೌದು. ಇಲ್ಲದೇ ಹೋದ್ರೆ ಬೇರೆ ಭಾಷೆಯೋರು ಮೈಸೂರಲ್ಲಿ ಮನೇಮೇಲೆ ಮನೆ ಮಾಡ್ಕೊಂಡು ದುಡ್ಡು ಮಾಡ್ಕೋತಾರೆ, ನಾವು ಪೆದ್ದಮುಂಡೇವಂಗೆ ಔರ ಮನೇಲೇ ಕೆಲಸಕ್ಕೆ ಕೈ ಚಾಚಬೇಕಾಗತ್ತೆ, ಅಷ್ಟೆ!

ಎಣ್ಣೆ ಬಂದಾಗ ಕನ್ನಡಿಗರು ಕಣ್ಮುಚ್ಚಿಕೊಂಡಿರಬಾರದು

ಹೊರ ರಾಜ್ಯದೋರು ಮೈಸೂರಿಗೆ ಎದ್ನೋ ಬಿದ್ನೋ ಅಂತ ಬಂದು 60x40 ಸೈಟುಗಳ್ನ ತೊಗೊಂಡು ಈ ಉದ್ದಿಮೆಗೆ ಇಳಿಯಕ್ಕೆ ಮುಂಚೆ ಕನ್ನಡಿಗರು ಈ ಅವಕಾಶಾನ ತಮ್ಮ ತೆಕ್ಕೆಗೆ ತೊಗೋಬೇಕು ಗುರು! ಈಗ ಎಚ್ಚರವಾಗದೆ ಹೋದರೆ ಹೊರಗಿಂದ ಬಂದು ಉದ್ಯಮ ಸ್ಥಾಪಿಸಿಕೊಳ್ಳೋರ ಮುಂದೆ ನಾವು ಕೆಲಸಕ್ಕೆ ಅವರ ಕೈ ಹಿಡೀಬೇಕಾದ ದಿನ ಬರತ್ತೆ, ಅಷ್ಟೆ!

ಈಗ ಇರೋ ಸ್ವಂತ ಜಾಗ ಮತ್ತು ಸಣ್ಣ ಬಂಡವಾಳದಿಂದ ಈ ಉದ್ಯಮದ ಅನುಭವ ತೊಗೊಂಡು ಆಮೇಲೆ ದೊಡ್ಡ ಹೋಟಲ್-ಗೀಟಲ್ ಸ್ಥಾಪನೆಗೆ ಧೈರ್ಯ ಮತ್ತು ಮನಸ್ಥಿತಿಗಳ್ನ ಈ ಮನೆ-ತಂಗುದಾಣಗಳು ಕೊಡಬಲ್ಲವು ಗುರು! ಇದಕ್ಕೆ ದುಡ್ಡಿಲ್ಲ ಅಂತ ಕೈಕಟ್ಟಿ ಕೂರೋದೂ ಬೇಕಾಗಿಲ್ಲ. ಸಾಲ ಕೊಡಕ್ಕೆ ತಯಾರಿಗಿರೋ ಬ್ಯಾಂಕುಗಳು ಸಾಲುಗಟ್ಟಿ ನಿಂತಿವೆ ಗುರು!

ಕನ್ನಡ ವಾತಾವರಣಕ್ಕಾಗೇ ಹೊರಗಿನೋರು ಬರೋದು

ಪ್ರವಾಸಿಗನ ಕಣ್ಣು-ಕಿವಿ-ಮೂಗು-ನಾಲಿಗೆ ಮತ್ತು ಮನ ಏನಾದ್ರೂ ಹೊಸದನ್ನ ಸವಿಯಕ್ಕೆ ಹವಣಿಸುತ್ತಿರುತ್ತವೆ. ಪ್ರವಾಸದ ಉದ್ದೇಶವೇ ಹೊಸ ಅನುಭವ. ಹಾಗಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳನ್ನ ನೋಡಕ್ಕೆ ಬರೋ ಪ್ರವಾಸಿಗನಿಗೆ ಅದರ ಅನುಭವ ಈ ವಾಸದ ತಂಗುದಾಣಕ್ಕೆ ಬಂದ ತಕ್ಷಣವೇ ಕಾಣಿಸಬೇಕು. ವಾತಾವರಣದಿಂಡ ಇಲ್ಲಿನ ಸ್ಥಳೀಯತೆ, ಇಲ್ಲಿನ ಸಂಸ್ಕೃತಿ, ಇಲ್ಲಿನ ಬದುಕು ಪರಿಚಯಿಸಿ ಕೊಡೋಹಾಗಿರಬೇಕು.

ಉದಾಹರಣೆಗೆ, ಹೊರದೇಶದಿಂದ ಬರುವ ಪ್ರವಾಸಿಗನಿಗೆ WELCOME ಫಲಕ ತೂಗಿಹಾಕೋ ಬದಲು, ಮನೆಯ ಅಂಗಳದಲ್ಲಿ ಬಣ್ಣ ಬಣ್ಣ್ದದ ರಂಗೋಲಿ ಔನ್ನ ಸ್ವಾಗತಿಸಬೇಕು. ತಿಂಡಿಗೆ ಕಾರ್ನ್ ಫ್ಲೇಕ್ ಇಡೋ ಬದ್ಲು ಬಿಸಿಬಿಸಿ ಇಡ್ಲಿ ತಟ್ಟೆ ಅವನ ಮುಂದೆ ಬರಬೇಕು. ಇದ್ರಿಂದ ಅವನ ಮನಸ್ಸು ಇಲ್ಲಿನ ಇತರ ವಿಚಾರಗಳ್ನ ತಿಳ್ಕೊಳಕ್ಕೆ ಚಡಪಡಿಸೋ ಹಾಗೆ ಆಗತ್ತೆ ಗುರು. ತಂಗುದಾಣದ ಪರಿಚಾರಕರು ಎಲ್ಲವನ್ನೂ ಸಮರ್ಥವಾಗಿ ತಿಳಿಹೇಳೋದ್ನೂ ಸಹ ಕಲೀಬೇಕು.

ಹಂಗಂತ ಏಸಿ ರೂಮು ಮತ್ತು ಈಜುಕೊಳ ಸೇವೆ ಇರಬಾರದು ಅಂತೇನಿಲ್ಲ. ಕೊಡಬೇಕು, ಆದರೆ ಕನ್ನಡತನವನ್ನು ಕಡೆಗಣಿಸಬಾರದು. ಏಸಿ ಹಾಕಿದ್ರೆ ಕನ್ನಡ ಮಾತಾಡಬಾರದು ಅಂತೇನಿಲ್ಲವಲ್ಲ? ಏಸಿ ಏನು ಕೆಟ್ಟೋಗಲ್ಲ ತಾನೆ? ಅಥವಾ ಈಜುಕೊಳದ ಸುತ್ತ ಜನ ಕನ್ನಡ ಮಾತಾಡ್ತಿರಬಾರದು ಅಂತೇನಿಲ್ಲವಲ್ಲ? ಪ್ರವಾಸಿಗನಿಗೆ ಬೇಕಾಗಿರೋದೇ ಕನ್ನಡದ ವಾತಾವರಣ ಗುರು!

ಇಷ್ಟು ಒಳ್ಳೇ ಅನುಭವ ಕೊಟ್ಟು ಕನ್ನಡದ ವಾತಾವರಣಾನ ಪ್ರವಾಸಿಗನಿಗೆ ಕೊಟ್ರೆ ಔನು ತನ್ನ ಜಾಗಕ್ಕೆ ಹೋಗಿ ಕನ್ನಡದ ಕಂಪ್ನ ಬೀರ್‍ತಾನೆ ಗುರು! ಹಾಗೇ ಕನ್ನಡದ ನಾಲ್ಕು ಮಾತೂ ಆಡ್ತಾನೆ. ಹೇಗೆ ಜರ್ಮನಿಗೆ ಹೋದ್ರೆ ನಾವುಗಳು ಬಂದು ಖುಷಿಯಿಂದ ನಾಲ್ಕು ಪದ ಜರ್ಮನ್ ಮಾತಾಡ್ತೀವೋ ಹಾಗೆ!

ಕನ್ನಡೇತರರಿಗೆ ಈ ತಂಗುದಾಣಗಳ್ನ ತೆಗಿಯಕ್ಕೆ ಒಪ್ಪಿಗೆ ಸಿಗಬಾರದು

ಪಂಜಾಬದಿಂದ ಬಂದು ಪಂಜಾಭೀ ಡಾಬಾ ಇಡ್ತೀನಿ ಅನ್ನೋನಿಗಾಗಲಿ, ಚಿಟ್ಟಿನಾಡು ಅಥವ ಆಂದ್ರ ಊಟ ಹಾಕ್ತೀನಿ ಅನ್ನೋನಿಗಾಗಲಿ ಮೈಸೂರಿನ ನಗರಾಡಳಿತದೋರು ಮನೆ ತಂಗುದಾಣ ತೆಗಿಯಕ್ಕೆ ಒಪ್ಪಿಗೇನೇ ಕೊಡಬಾರದು. ಅರ್ಜಿ ಹಾಕ್ತಾ ಇರೋರು ಕನ್ನಡಿಗರು ಅಂತ ಖಚಿತಪಡಿಸಿಕೊಂಡೇ ಮುಂದುವರೀಬೇಕು ಗುರು! ಈ ರೀತಿಯ ತಂಗುದಾಣಗಳು ಕನ್ನಡತನ ಬಿಂಬಿಸೋ ಹಾಗೆ, ಕನ್ನಡ ಭಾಷೆ ಸಂಸ್ಕೃತಿ ಮತ್ತು ಬದುಕನ್ನು ಪರಿಚಯಿಸಿಕೊಡೋ ಹಾಗೆ ಮಾಡೋದು ಸರ್ಕಾರದ ಹೊಣೆ. ಸರ್ಕಾರದ ಕೈಲಿ ಹಾಗೆ ಮಾಡಿಸೋದು ನಮ್ಮ ಹೊಣೆ. ಇಂಥಾ ಮನೆ-ತಂಗುದಾಣಗಳಲ್ಲಿ ಕನ್ನಡದ ವಾತಾವರಣ ಇಲ್ಲದೆ ಇರೋದು ನಮ್ಮ ಕಣ್ಣಿಗೆ ಬಿದ್ದರೆ ಅವರಿಗೆ ಬುದ್ಧಿ ಹೇಳಿ, ಸರ್ಕಾರಕ್ಕೂ ದೂರು ಸಲ್ಲಿಸೋದು ನಮ್ಮ-ನಿಮ್ಮ ಕರ್ತವ್ಯ ಗುರು!

ಥೂ! ಇದು ಮೈಸೂರು ಮಲ್ಲಿಗೆಯಲ್ಲ, ತಮಿಳು ಮಲ್ಲಿಗೆ!

ತಮಿಳರು ಕೊಯಮತ್ತೂರಿನ ಯಾವುದೋ ಮಲ್ಲಿಗೆ ಹೂನ ಮೈಸೂರು ಮಲ್ಲಿಗೆ ಅಂತ ಮಾರಾಟ ಮಾಡಿ ಅದನ್ನ ಬೆಳೆಯೋರು ಅವರೇ ಅಂತ ಕೂಡ ಹೇಳ್ತಿದಾರೆ ಅಂತ ಅಕ್ಟೋಬರ್ 14ರ ಕನ್ನಡಪ್ರಭ ವರದಿ ಮಾಡಿದೆ. ಮೈಸೂರು ಮತ್ತು ಸುತ್ತಮುತ್ತಲ ರೈತರು ಮಲ್ಲಿಗೆ ಬೆಳೆಯೋದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿರೋ ಹಿನ್ನೆಲೇಲಿ ಈ ಥರಾ ನಡೀತಿರೋದು ಕಾನೂನುಬಾಹಿರವೂ ಹೌದು, ಕನ್ನಡಿಗರ ಭವಿಷ್ಯಕ್ಕೆ ಬಹಳ ರೀತಿಗಳಲ್ಲಿ ಒಳ್ಳೇದೂ ಅಲ್ಲ ಗುರು. ಇಲ್ಲಿ ಜನ ಸಾಯ್ತಾ ಬಿದ್ದಿದ್ದರೂ ಕಾವೇರಿ ನೀರ್ನ ತಲೆತಲಾಂತರಗಳಿಂದ ಮೋಸದಿಂದ ತಮ್ಮಕಡೆಗೆ ಎಳ್ಕೊಂಡ ತಮಿಳುನಾಡಿನ ಜನ ನೀರು ಕೊಡ್ತಿರೋ ನಮಗೇ ಚಳ್ಳೇಹಣ್ಣು ತಿನ್ನಿಸ್ತಾ ಇದಾರಲ್ಲ ಗುರು! ಹೇಗಿದೆ ನಮ್ಮ ವಿಶ್ವಮಾನವತ್ವಕ್ಕೆ ಉಡುಗೊರೆ?!

ತಮಿಳು ಮಲ್ಲಿಗೆಯಿಂದ ಮೈಸೂರು ಮಲ್ಲಿಗೆಗೆ ಕೆಟ್ಟ ಹೆಸರು

ಮೈಸೂರು ಮಲ್ಲಿಗೆ ಹೆಸರಿನ ಪ್ರಕಾರ ಈ ಹೂವು ಬೆಳೆಯೋದು ಮೈಸೂರಿನ ಕೆಲವು ಭಾಗಗಳಲ್ಲಿ ಮಾತ್ರ. ಕನ್ನಡದ ಮಣ್ಣಿಗಿರೋ ಭೌಗೋಳಿಕ ಮತ್ತು ರಾಸಾಯನಿಕ ಗುಣಗಳು ಈ ಮಲ್ಲಿಗೆ ಹೂವಿಗೆ ಅದರ ವಿಶಿಷ್ಟ ಕಂಪನ್ನು ನೀಡತ್ತೆ. ಮೈಸೂರು ಮಲ್ಲಿಗೆ ಅಂತ ಹೆಸರು ಉಪ್ಯೋಗ್ಸಿ ತಮಿಳ ಮಲ್ಲಿಗೆ ತಂದು ಮಾರ್ತಿರೋದ್ರಿಂದ ಯಾರಿಗೂ ಮೈಸೂರಲ್ಲಿ ಇತ್ತೀಚೆಗೆ ಸಿಗ್ತಿರೋ ಮಲ್ಲಿಗೆ ಇಷ್ಟ ಆಗ್ತಿಲ್ಲ. ಹೇಗೆ ತಾನನೆ ಇಷ್ಟವಾದೀತು? ಮೈಸೂರು ಮಲ್ಲಿಗೆಗಿರುವ ಮನಸೆಳೆಯುವ ಸುವಾಸನೆ ಈ ತಮಿಳು ಮಲ್ಲಿಗೆಗೆ ಸ್ವಲ್ಪವೂ ಇಲ್ಲ! ಹೀಗಾಗಿ ಮೈಸೂರಿನ ನಿಜವಾದ ಮಲ್ಲಿಗೆಗೆ ಅದರ ಬೆಳೆಗಾರರಿಗೆ ಮತ್ತು ಮಾರಾಟಗಾರರಿಗೆ ಕೆಟ್ಟ ಹೆಸರು ಬರ್ತಿದೆ ಗುರು! ಹೀಗೇ ಮುಂದುವರೆದರೆ ಮೈಸೂರ ಮಲ್ಲಿಗೆ ಕೊಂಡ್ಕೊಳ್ಳೋರೇ ಕಡಿಮೆಯಾಗಿಹೋಗೋ ದಿನ ಬರಬಹುದು. ಮೈಸೂರು ಮಲ್ಲಿಗೆಯ ವಿಶಿಷ್ಟ ಇತಿಹಾಸ ಮಣ್ಣಪಾಲಾಗ್ಬೋದು. ಮುಂದೆ ಮೈಸೂರಲ್ಲಿ ಮಲ್ಲಿಗೆ ಕೊಳ್ಬೇಕು ಅಂದ್ರೆ ತಮಿಳರು ಹೇಳಿದ ಬೆಲೆಯನ್ನೇ ತೆರಬೇಕಾಗತ್ತೆ, ಅದೂ ಸುವಾಸನೆಯಿಲ್ಲದ, ಕನ್ನಡದ ಮಣ್ಣಿನಲ್ಲಿ ಬೆಳೆಯದ ತಮಿಳು ಮಲ್ಲಿಗೆಗೆ!

ತಮಿಳ್ನಾಡಿನ ಮಲ್ಲಿಗೇನ ಮೈಸೂರು ಮಲ್ಲಿಗೆ ಅಂತ ಕರಿಯೋದು ಕಾನೂನಿನ ಉಲ್ಲಂಘನೆ

ಇದೇ ವರ್ಷದ ಸೆಪ್ಟೆಂಬರ್ 27ರಂದು ಮೈಸೂರು ಮಲ್ಲಿಗೆಯನ್ನ ಬೆಳೆಯೋ ಹಕ್ಕು ಮೈಸೂರು ಮತ್ತು ಸುತ್ತಮುತ್ತಲ ಕನ್ನಡಿಗರಿಗೇ ಕಾದಿರಿಸಿದೆ ಅಂತ ಕಾನೂನೇ ಹೊರಡಿಸಲಾಯಿತು. ದಿ ಹಿಂದೂ ವರದಿ ಪ್ರಕಾರ:
The bond between city and the flower has now grown stronger with Mysore Mallige getting the Geographical Indication (GI) tag, which will provide exclusive rights to the local community to cultivate the crop for 10 years.

ಅಂದರೆ - ಮೈಸೂರಿನ ಕೆಲ ಭಾಗಗಳಲ್ಲಿ ಬೆಳ್ಯೋ ಮಲ್ಲಿಗೆ ಹೂವ್ನ ಇನ್ನು 10 ವರ್ಷ ಮೈಸೂರಿನ ಜನರಿಗೆ ಮಾತ್ರ ಬೆಳ್ಯೋ ಹಕ್ಕು ಇರತ್ತೆ ಅಂತ ಗುರು! ಹಿಂಗೆಲ್ಲಾ ಕಾವಲು ನಿಂತಿರೋ ಕಾನೂನು ಇದ್ದಾಗ್ಲೇ ನಮ್ಮ ಪಕ್ಕದ ತಮಿಳ್ರು ನಮ್ಮ ಮಲ್ಲಿಗೇನ ಔವ್ರು ಬೆಳ್ದಿರೋದಲ್ದೆ, ಮೈಸೂರು ಮಲ್ಲಿಗೆ ಅವರದ್ದೇ ಅಂತ ಬೇರೆ ಹೇಳ್ತಿದಾರಲ್ಲ, ಇದು ಹಾಡಹಗಲಲ್ಲೇ ಮಾಡ್ತಿರೋ ಅಪರಾಧ ಗುರು! ಇಂತಹ ಅಪಾರಾಧಗಳಿಂದ ಕರ್ನಾಟಕ-ತಮಿಳುನಾಡಿನ ಮಧ್ಯೆ ಸಂಬಂಧಗಳು ಇನ್ನೂ ಹದಗೆಡತ್ತೆ ಅಷ್ಟೆ.

ಮೈಸೂರು ಮಲ್ಲಿಗೆಗಿರೋ ಸಾವಿರಾರು ಕೋಟಿ ರೂ ಮಾರುಕಟ್ಟೇನ ಕನ್ನಡಿಗರು ಕೈಬಿಡಬಾರದು

ಇಷ್ಟೆಲ್ಲಾ ಆಗ್ತಿರೋದಕ್ಕೆ ನಮ್ಮ ಕನ್ನಡಿಗರು ಮೈಸೂರು ಮಲ್ಲಿಗೆ ಬೆಳೆಯೋದು ನಿಲ್ಲಿಸ್ತಾ ಇರೋದೂ ಕಾರಣ ಗುರು. ನಮ್ಮ ಮಣ್ಣಿನಲ್ಲಿ ಮಾತ್ರ ಬೆಳೆಯೋಂಥಾ ಈ ಹೋಲಿಕೆಯಿಲ್ಲದ ಹೂವಿನ ಸುತ್ತ ಒಂದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬೇಕು ಗುರು! ಮೂಗೊಳಗೆ ತುರುಕಿಕೊಂಡರೂ ಒಂಚೂರೂ ವಾಸನೆಯಿಲ್ಲದ ಟ್ಯೂಲಿಪ್ ಹೂ ಹಿಡ್ಕೊಂಡು ಡಚ್ ಜನ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿರುವಾಗ ನಮ್ಮ ಮೈಸೂರಿನ ರೈತರಿಗೇನು ಬಂದಿದೆ ಧಾಡಿ? ಸಾವಿರಗಟ್ಲೆ ಎಕರೆ ಮೈಸೂರು ಮಲ್ಲಿಗೆ ಬೆಳೀಬೇಕು, ದೇಶವಿದೇಶಗಳಿಗೆ ಮಾರಾಟ ಮಾಡ್ಬೇಕು. ಮಲ್ಲಿಗೆ ಜಡೆ, ಮಲ್ಲಿಗೆ ಸೆಂಟು, ಚಿಕ್ಕಮಲ್ಲಿಗೆ, ದೊಡ್ಡಮಲ್ಲಿಗೆ, ಮಲ್ಲಿಗೆ ಬೊಕ್ಕೆ, ಮದುವೆ ಹಾರ, ರಾಜಕಾರಣಿಗಳಿಗೆ ಹಾರ, ಮಲ್ಲಿಗೆ ಅದು, ಮಲ್ಲಿಗೆ ಇದು ಅಂತ ಇಡೀ ಪ್ರಪಂಚವನ್ನೇ ಮೈಸೂರು ಮಲ್ಲಿಗೆಯಿಂದ ಮೋಡಿ ಮಾಡಿ ದುಡ್ಡು ಸಂಪಾದಿಸಬೇಕು ಗುರು!

ಮುಂದಿನ ಹೆಜ್ಜೆ ಏನು?

ತಮಿಳರ ಈ ಮಲ್ಲಿಗೇನ ಮಾರುಕಟ್ಟೇಲಿ ಕಂಡರೆ ಅದನ್ನ ಕೊಳ್ಳದೆ ಮೂಸಿ ನೋಡಿ, ಇಲ್ಲವೇ ಎಲ್ಲೀದು ಅಂತ ಕೇಳಿ ಬಿಸಾಕಬೇಕು. ಮೈಸೂರು ಮಲ್ಲಿಗೆ ಅಂತ ಸುಳ್ಳು ಹೇಳೋ ತಮಿಳರನ್ನ ಪೋಲೀಸರಿಗೆ ಒಪ್ಪಿಸಬೇಕು ಗುರು! ನಮ್ಮ ಸರ್ಕಾರ ಎಚ್ಚೆತ್ಕೊಂಡು ತಮಿಳ್ನಾಡಿನ ಜನ ಹೀಗೆ ಮಾಡ್ತಿರೋದು ಕಾನೂನು ಉಲ್ಲಂಘನೆ ಅಂತ ತಮಿಳ್ನಾಡು ಸರ್ಕಾರದ ಗಮನಕ್ಕೆ ತಂದು ಈ ವಿಷಯದಲ್ಲಿ ನಮಗೆ ನ್ಯಾಯ ಸಿಗೋವರೆಗೂ ನೆಮ್ಮದಿಯ ಉಸಿರು ಬಿಡಬಾರದು ಗುರು!

ಹೊರಲಾರದ ಇಂಗ್ಲೀಷ್ ಹೊರೆಯಿಂದ ಭಾರತ ತರಗತಿಯಲ್ಲಿ ನಪಾಸು!

ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರೋ ಪಟ್ಟಿ ಪ್ರಕಾರ ಸಂಶೋಧನೆ ಮತ್ತು ಅಭಿವೃದ್ಧಿ (R&D) ವಿಷಯದಲ್ಲಿ ಭಾರತ ಮೆಕ್ಸಿಕೊ ದೇಶಕಿಂತಲೂ ಹಿಂದಿದೆ ಅಂತ ಅಕ್ಟೋಬರ್ 8ರ ಬಿಜಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಇದಕ್ಕೆ ಕಾರಣ ಸಂಶೋಧನೆ ಮಾಡುವ ಯೋಗ್ಯತೆಯನ್ನ ನಮ್ಮ ವ್ಯವಸ್ಥೆ ಎಲ್ಲರಿಗೂ ಕೊಡದೆ ಕೆಲವರಿಗೆ ಮಾತ್ರ ಕೊಟ್ಟಿರುವುದು ಅಂತ ಅದೇ ವರದಿ ಹೇಳತ್ತೆ. ಜನಸಂಖ್ಯೆ ಮತ್ತು ವಿಸ್ತೀರ್ಣಗಳ್ನ ನೋಡಿದರೆ ಭಾರತ ಅಲ್ಲ ಮೆಕ್ಸಿಕೋನ ಮೀರಿಸಬೇಕಾಗಿರೋದು - ಕರ್ನಾಟಕ! ಎಷ್ಟು ಹಿಂದುಳಿದಿದೀವಿ ನಾವು ಅಂತ ಅರ್ಥವಾಯಿತಾ?

ಲಕ್ಷಾಂತರ ಪದವೀಧರರು ಪ್ರತಿ ವರ್ಷ ಕಾಲೇಜುಗಳಿಂದ ಹೊರ ಬಂದ್ರೂ, ಅವರಿಂದ ಇಡೀ ವಿಶ್ವ ಬೆರಗಾಗುವಂಥಾ ಉತ್ಪನ್ನಗಳ ಸೃಷ್ಟಿ ಆಗಲಿ ಸಂಶೋಧನೆಗಳಾಗಲಿ ಆಗ್ತಿಲ್ಲ ಅನ್ನೋದು ಕಟುಸತ್ಯ. ಹಾಗಿದ್ರೆ ನಮ್ಮ ದೇಶದ ಜನರಲ್ಲಿ ಆ ಸಾಮರ್ಥ್ಯವೇ ಇಲ್ವಾ? ಸಾಮರ್ಥ್ಯ ಖಂಡಿತವಾಗಿಯೂ ಇದೆ, ಆದರೆ ಸಮಸ್ಯೆಯ ಮೂಲವಿರೋದು ಪ್ರತಿಭೆಗಲ್ಲದೆ ಇಂಗ್ಲೀಷಿಗೆ ಮಣೆ ಹಾಕೋ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗುರು! ಈ ಸುದ್ದಿಯಿಂದ ಕನ್ನಡಿಗರು (ಅಷ್ಟೇ ಅಲ್ಲ, ಇತರ ಭಾರತೀಯರು ಕೂಡ) ಏನು ಕಲೀಬೇಕು, ಏನು ಮಾಡಬೇಕು ಅಂತ ನೋಡ್ಮ.

ಕೋಟಿಗಟ್ಟಲೆ ಪ್ರತಿಭಾವಂತರಿಗೆ ಕೊಳ್ಳಲಾರದ ಇಂಗ್ಲೀಷ್ ಟಿಕೆಟ್ಟು
ಇವತ್ತು ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಪಡಿಸೋ ಕೆಲವೇ ಕೆಲವು ಸಂಸ್ಥೆಗಳಲ್ಲಿ ಎಲ್ಲ ಅಧ್ಯಯನ ವ್ಯವಸ್ಥೆಯೂ ಇಂಗ್ಲೀಷಿನಲ್ಲಿದೆ. ಅಷ್ಟೇ ಅಲ್ಲದೆ ಇಂಥ ಯಾವುದೇ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಇಂಗ್ಲೀಷಲ್ಲೇ ಪರೀಕ್ಷೆ ಪಾಸ್ ಆಗ್ಬೇಕು, ಅದೂ ಸಾಲದು ಅನ್ನೋಹಾಗೆ ಪ್ರವೇಶ ಪಡೆಯೋಕೆ ಕಟ್ಟಬೇಕಾಗಿರೊ ಫೀಸು ಕೂಡಾ ಬಡವರ, ಮಧ್ಯಮ ವರ್ಗದವರ ಎಟುಕಿಗೆ ನಿಲುಕದ್ದು. ಹೀಗಿರುವಾಗ ಹಳ್ಳಿಗಳ ದೇಶವಾದ ಭಾರತದ ಆರ್ಥಿಕವಾಗಿ ಹಿಂದುಳಿದಿರುವ, ಇಲ್ಲವೆ ಇಂಗ್ಲೀಷ್ ಭಾಷೆ ಮೇಲೆ ಪ್ರಭುತ್ವ ಇಲ್ಲದಿರೋ ಅಸಂಖ್ಯಾತ ಪ್ರತಿಭಾವಂತರು ಮೂಲೆಗುಂಪಾಗುತ್ತಿದ್ದಾರೆ ಅನ್ನೋದು ಕಟು ಸತ್ಯ. ಇವರನ್ನೆಲ್ಲ ಬಿಟ್ಟು ಮುಂದೆ ಹೋಗ್ತೀನಿ ಅನ್ನೋ ವ್ಯವಸ್ಥೆ ಎಲ್ಲೀವರೆಗೆ ಇರತ್ತೋ ಅಲ್ಲೀವರೆಗೆ ಮೆಕ್ಸಿಕೋನೂ ನಮ್ನ ಮೀರಿಸತ್ತೆ, ಗಿಕ್ಸಿಕೋನೂ ಮೀರಿಸತ್ತೆ ಗುರು!

ಎಲ್ಲರಿಗೂ ಸಮಾನ ಅವಕಾಶಕ್ಕೆ ಕಲಿಕೆ ತಾಯ್ನುಡಿಯಲ್ಲೇ ಇರಬೇಕು
ತಂತ್ರಜ್ಞಾನದ ಬಾನಿನಲ್ಲಿ ಭಾರತವನ್ನ ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಅಂದ್ರೆ ಅಗತ್ಯವಾಗಿ ಬೇಕಾಗಿರೋದು ಯಾರನ್ನೂ ಮರೆಯದ, ಕಡೆಗಣಿಸದ ವ್ಯವಸ್ಥೆ, ಅಂದ್ರೆ ತಂತ್ರಜ್ಞಾನ ಅಭಿವೃದ್ಧಿಯ ಈ ಯಜ್ಞದಲ್ಲಿ ನಾಡಿನ ಎಲ್ಲರೂ ಕೊಡುಗೆ ನೀಡಲು ಸಾಧ್ಯವಾಗುವಂಥಾ ಒಂದು ಶಿಕ್ಷಣ ವ್ಯವಸ್ಥೆ. ಅಂದ್ರೆ ತಂತ್ರಜ್ಞಾನ ಇರಲಿ, ವಿಜ್ಞಾನ ಇರಲಿ ಅಥವಾ ಮತ್ತೊಂದಿರಲಿ, ಈ ಎಲ್ಲ ವಿಷಯಗಳ ಕಲಿಕೆಗೂ, ಕಲಿಕೆಯ ವಸ್ತುಗಳಿಗೂ ನಾಡಿನ ಸರ್ವರಿಗೂ ಸಮಾನ ಅವಕಾಶ ಇರಬೇಕು.

ಹಾಗೇ ಅದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ, ಎಲ್ಲರೂ ಸರಿಯಾಗಿ ಗ್ರಹಿಸಲು ಸಾಧ್ಯವಾಗುವ ಭಾಷೆಯಲ್ಲಿರಬೇಕು. ಅಂತಹ ಭಾಷೆ ಯಾವುದು? ಇಂಗ್ಲಿಷೋ? ಇಲ್ಲ ಹುಟ್ಟಿದಾಗಿನಿಂದಲೇ ಬಂದಿರೊ ತಾಯಿ ನುಡಿಯೊ? ವಿಷಯ ಸರಳವಾಗಿದೆ ಗುರು. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರದ ವಿಷಯಗಳು ಕಲಿಕೆಗೆ ಕನ್ನಡದಲ್ಲೇ ಲಭ್ಯವಾಗಬೇಕು.

ಇಂಗ್ಲೀಷಲ್ಲೇ ಯಾಕೆ ಸಾಧ್ಯವಿಲ್ಲ?

ಕೆಲವರಿಗೆ ಇದೆಲ್ಲಾ ಇಂಗ್ಲೀಷಲ್ಲೇ ಆಗೋ ದಿನ ಬರತ್ತೆ ಅನ್ನೋ ತಪ್ಪು ತಿಳುವಳಿಕೆ ಇದೆ. ಅಂಥೋರು ಈ ಅಂಶಗಳ್ನ ಮನಸ್ಸಿನಲ್ಲಿ ಮೆಲಕು ಹಾಕಲಿ:
 • ಕಲಿಕೆಯ ಎಲ್ಲ ಅವಕಾಶಗಳು ಎಲ್ಲರಿಗೂ ಇಂಗ್ಲೀಷಲ್ಲಿ ದೊರಕಬೇಕು ಅಂದ್ರೆ ದೇಶದ ಜನರಿಗೆ ಮೊದಲು ಇಂಗ್ಲೀಷ್ ಕಲಿಸಬೇಕು. ಯಾಕೆಂದ್ರೆ ದೇಶದ ಜನಸಂಖ್ಯೆಯಲ್ಲಿ ಇಂಗ್ಲೀಷ್ ಬಲ್ಲವರ ಸಂಖ್ಯೆ ಶೇಕಡಾ 10 ಇರಬಹುದಷ್ಟೆ. ಅದು ನಮ್ಮ ರಾಜ್ಯಕ್ಕೂ ಅನ್ವಯಿಸುತ್ತದೆ. ಅಂದ್ರೆ ನಮ್ಮ ನಾಡಿನ ಐದೂವರೆ ಕೋಟಿ ಜನರಲ್ಲಿ ಒಂದು 55 ಲಕ್ಷಜನಕ್ಕೆ ಇಂಗ್ಲೀಷ್ ಗೊತ್ತು. ಬ್ರಿಟಿಶರು ನಮ್ಮನ್ನ 300 ವರ್ಷ ಆಳಿದ ಮೇಲೆ ಈ ನಾಡಿನ ಶೇಕಡಾ 10 ರಷ್ಟು ಜನಕ್ಕೆ ಇಂಗ್ಲಿಷ್ ಬರುತ್ತೆ. ಉಳದಿರೊ ಜನಕ್ಕೆ ಇಂಗ್ಲಿಷ್ ಕಲಿಸೊ ಹೊತ್ತಿಗೆ ನಮ್ಮ ಐವತ್ತೋ, ಅರವತ್ತೋ ತಲೆಮಾರು ಸರಿದು ಹೊಗಿರುತ್ತೆ! ಅಮೇಲೆ ಏನ್ ಮಣ್ಣ ಸಂಶೋಧನೆ, ಅಭಿವೃದ್ಧಿ ಮಾಡ್ತಿವಿ? ಅಷ್ಟು ವರ್ಷ ಹಿಂದುಳಿದರೆ ನಾವು ಬದುಕೋದೇ ಇಲ್ಲ!
 • 90 ಪ್ರತಿಶತ ಜನ ಮಾತಾಡೋ ಭಾಷೆಲಿ ಇಂಥದೊಂದು ವ್ಯವಸ್ಥೆ ತರೋದು ಸುಲಭವೋ? ಇಲ್ಲವೇ ಶೇಕಡಾ 10 ಜನ ಮಾತಾಡೋ ಭಾಷೇಲೋ?
 • ಒಂದು ಜನಾಂಗ, ಆ ಜನಾಂಗ ಮಾತಾಡೋ ಭಾಷೆ, ಅವರ ಸಂಸ್ಕೃತಿ ಒಂದಕೊಂದು ತಳಕು ಹಾಕಿಕೊಂಡಿರುತ್ತವೆ. ಶಿಕ್ಷಣ ಅನ್ನೊದು ಆ ಶಕ್ತೀನ ಪಡಕೊಳ್ಳೊದಕ್ಕೆ ಇರೋ ಸಾಧನ. ಆ ಶಿಕ್ಷಣ ವ್ಯವಸ್ಥೆ ಮಾತೃಭಾಷೆಯಲ್ಲಿದ್ದಾಗ ಮಾತ್ರ ವಿದ್ಯಾರ್ಥಿಗೆ ಆತ್ಮ ವಿಶ್ವಾಸ ಪಡೆದು, ತನ್ನಲ್ಲಿರುವ ಸಂಪೂರ್ಣ ಸಾಮರ್ಥ್ಯವನ್ನು ಹೊರಗೆಡವಲು ಸಾಧ್ಯವಾಗೊದು ಮತ್ತು ಸಾಧ್ಯವಾದಾಗಲೇ ನಮ್ಮ ನೆಲದಿಂದ ಹೆಚ್ಚು ಹೆಚ್ಚು ಉತ್ಪನ್ನಗಳೂ, ಪೇಟೆಂಟುಗಳೂ ಬರಲು ಸಾಧ್ಯವಾಗೊದು.
 • ಕನ್ನಡಿಗನ ಬೌದ್ಧಿಕ ವಿಕಾಸಕ್ಕೆ, ತಲೆ ಚುರುಕಾಗಿ ಕೆಲ್ಸಮಾಡೋಕೆ ಆತನ ಮಾತೃಭಾಷೇಲಿ ಶಿಕ್ಷಣ ಭಾಳ ಮುಖ್ಯ. ಇದನ್ನ ನಾವಲ್ಲ ಹೇಳ್ತಿರೊದು, ಜಗತ್ತಿನಾದ್ಯಂತ ಆಗಿರೊ ನೂರಾರು ಸಾವಿರಾರು ಸಮೀಕ್ಷೆಗಳು ಸಾರಿ ಸಾರಿ ಹೇಳ್ತಾ ಇವೆ. ಇದನ್ನ ವಿಶ್ವಸಂಸ್ಥೇನೂ ಹೇಳ್ತಾ ಬಂದಿದೆ, ಗಾಂಧೀಜಿಯವರೂ ಬಹಳ ಹಿಂದೇನೇ ಹೇಳಿದ್ದಾರೆ.
ನಾವು-ನೀವು ಇದಕ್ಕಾಗಿ ಏನು ಮಾಡಬಹುದು?

ಎಲ್ಲವೂ ಕೊನೆಗೆ "ನಾವೇನು ಮಾಡಬಹುದು?" ಅನ್ನೋದಕ್ಕೇ ಬರುತ್ತೆ ಗುರು. ಇಷ್ಟಾದರೂ ಮಾಡಬಹುದಲ್ಲ?
 • ನಮ್ಮನಮ್ಮ ಪರಿಣಿತಿಯ ಕ್ಷೇತ್ರದಲ್ಲಿ ವಿಷ್ಯಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡೋದು ಹಾಗೂ ಅಂತಹ ಪ್ರಯತ್ನ ಮಾಡ್ತಿರೊರಿಗೆ ಎಲ್ಲ ರೀತಿಯ ಬೆಂಬಲ ನೀಡೊದು
 • ಐ.ಟಿ ಕಂಪನೀನೇ ಇರಲಿ, ಮತ್ತೊಂದು ಕಂಪನಿಯಿರಲಿ, ಕಾಲೇಜೇ ಇರಲಿ ನಮ್ಮ ಸ್ನೇಹಿತರೋಡನೆ ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನ ಕನ್ನಡದಲ್ಲೇ ಚರ್ಚಿಸಿ, ಆ ಮೂಲಕ ಕನ್ನಡದಲ್ಲಿ ತಾಂತ್ರಿಕ ಚರ್ಚೆ ಸಾಧ್ಯವಾಗಿಸೋದು
 • ನಮ್ಮ ಘನ ಸರಕಾರ ಇದೆಲ್ಲ ಆಗದಿರೋ ಮಾತು ಅನ್ನೊ ಕೀಳರಿಮೆ ಬಿಟ್ಟು ಸರಿಯಾದ ಶಿಕ್ಷಕರ ನೇಮಕ, ಸರಿಯಾದ ಪಠ್ಯಕ್ರಮದ ಯೋಜನೆ ಹಾಗೂ ಅತಿ ಮುಖ್ಯವಾಗಿ ಕನ್ನಡದಲ್ಲಿ ಉನ್ನತ ಶಿಕ್ಷಣ ಜಾರಿಗೆ ತರಲು ತಜ್ಞರ ಮುಂದಾಳುತನದಲ್ಲಿ ಸಾಗಬೇಕಾದ ದಾರಿಯ ಬಗ್ಗೆ ಚಿಂತಿಸೋ ಹಾಗೆ ಮಾಡೋದು

ಇವತ್ತು ಮಕ್ಕಳಿಗೆ ಹೇಳ್ಕೊಡ್ತಾ ಇರೋದು ನಿಜಕ್ಕೂ ಕನ್ನಡದ ವ್ಯಾಕರಣಾನಾ?

ಇವತ್ತಿನ ದಿನ ಕನ್ನಡದ ವ್ಯಾಕರಣದ ನಿಜವಾದ ಸ್ವರೂಪ ಏನು ಅಂತ ಅರ್ಥ ಮಾಡ್ಕೊಂಡಿರೋ ಪ್ರಾಯಶಃ ಒಬ್ಬನೇ ಒಬ್ಬ ಕನ್ನಡಿಗ-ಭಾಷಾವಿಜ್ಞಾನಿ ಅಂದರೆ ಮೈಸೂರಿನಲ್ಲಿ ವಾಸ ಮಾಡ್ತಿರೋ ಶ್ರೀ ಡಿ.ಎನ್. ಶಂಕರಭಟ್ಟರು. ಕನ್ನಡ ವ್ಯಾಕರಣ ಅಂದರೆ ಸಂಸ್ಕೃತ ವ್ಯಾಕರಣದ ಒಂದು ಉಪವ್ಯಾಕರಣ ಅಂತ ಪರಿಗಣಿಸೋ ಮೂರ್ಖತನವನ್ನ ಖಂಡಿಸಿ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" (ಇದು ಅವರ ಒಂದು ಪುಸ್ತಕದ ಹೆಸರೂ ಕೂಡ) ಅಂತ ವಾದಿಸುತ್ತಾ ಹೇಳಿಕೊಡುತ್ತಾ ಬಂದ ಮಹಾನ್ ಭಾಷಾವಿಜ್ಞಾನಿ ಶ್ರೀ ಶಂಕರಭಟ್ಟರು. ಇವರು ಕನ್ನಡ ಮಾತ್ರವಲ್ಲದೆ ಸಂಸ್ಕೃತ ಮತ್ತು ಇಂಗ್ಲೀಷ್ ಭಾಷಾತಜ್ಞರೂ ಕೂಡ.

ಅವರು ಬರೆದಿರೋ "ಭಾಷೆಯ ಬಗ್ಗೆ ನೀವೇನು ಬಲ್ಲಿರಿ" ಅನ್ನೋ ಪುಸ್ತಕದಿಂದ ಒಂದು ತುಣುಕನ್ನು ಇಲ್ಲಿ ನೋಡಿ. ಕನ್ನಡದ ವ್ಯಾಕರಣ ಹೇಳ್ಕೊಡ್ತೀವಿ ಅಂತ ಹೊರಟಿರೋ ಕನ್ನಡದ ಪಠ್ಯಪುಸ್ತಕಗಳು ನಿಜವಾಗಲೂ ಕನ್ನಡದ ವ್ಯಾಕರಣ ಹೇಳ್ಕೊಡ್ತಿವೆಯೋ ಅಥವಾ ಸಂಸ್ಕೃತದ ವ್ಯಾಕರಣ ಹೇಳ್ಕೊಡ್ತಿವೆಯೋ ನೀವೇ ನಿರ್ಧಾರ ಮಾಡಿ:

ನಮ್ಮ ಶಾಲಾ ವ್ಯಾಕರಣಗಳ ಮುಖ್ಯ ದೋಷವೇನೆಂದರೆ, ಅವು ಹೊಸಗನ್ನಡದ ಸ್ವರೂಪವೇನೆಂಬುದನ್ನು ಸ್ಪಷ್ಟವಾಗಿ ತಿಳಿಸಲು ಯತ್ನಿಸುವ ಬದಲು, ಕೇಶಿರಾಜ, ಪಾಣಿನಿ ಮೊದಲಾದವರು ಚರ್ಚಿಸಿದ ಅತೀ ಕ್ಲಿಷ್ಟವಾದ ಮತ್ತು ಹೊಸಗನ್ನಡಕ್ಕೆ ಸ್ವಲ್ಪವೂ ಸಂಬಂಧಿಸದಂತಹ ನೂರಾರು ವಿಷಯಗಳನ್ನು ವಿದ್ಯಾರ್ಥಿಗಳ ತಲೆಯೊಳಗೆ ತುಂಬಲು ಯತ್ನಿಸುತ್ತವೆ.

ಸಂಸ್ಕೃತ ಭಾಷೆಗೆ ಸಂಬಂಧಿಸಿದಂತಹ ಗುಣ, ವೃದ್ಧಿ, ಶ್ಚುತ್ವ, ಷ್ಟುತ್ವ, ಜಶ್ತ್ವ, ಮೊದಲಾದ ಸಂಧಿಕಾರ್ಯಗಳನ್ನು ಹೇಳಿಕೊಡುವ ಈ ವ್ಯಾಕರಣಗಳಿಗೆ ಕನ್ನಡದ ಉದಾಹರಣೆಗಳು ಸಿಗುವುದು ಅಸಂಭವವೇ. ಹಾಗಾಗಿ ಎಂಟನೇ ತರಗತಿಗೆ ಸಿದ್ಧವಾದ ವ್ಯಾಕರಣಗಳಲ್ಲಿ ೠವಿಲ್ಲ, ಅಮ್ಮಯ, ಷಡೂರ್ಮಿ ಮೊದಲಾದ, ಕನ್ನಡದ ಮಟ್ಟಿಗೆ ತೀರ ವಿಚಿತ್ರವಾಗಿ ಕಾಣಿಸುವ ಪದಗಳ ಪ್ರಯೋಗ ಕಾಣಸಿಗುತ್ತದೆ. ಇವನ್ನೆಲ್ಲ ಪರೀಕ್ಷೆಗಾಗಿ ಬಾಯಿಪಾಠ ಮಾಡಬೇಕಾಗಿರುವ ವಿದ್ಯಾರ್ಥಿಗಳಿಗೆ ವ್ಯಾಕರಣವೆಂಬುದೊಂದು ವಿಚಿತ್ರವಾದ ವಿಷಯವೆನಿಸಿದರೆ ತಪ್ಪೇನು?

ಹಾಗಾಗಿ, ಶಾಲಾ ವ್ಯಾಕರಣಗಳನ್ನು ಬರೆಯುವವರು ಮತ್ತು ಅವರಿಗೆ ಮಾರ್ಗದರ್ಶನ ಮಾಡುವ ಪಠ್ಯಪುಸ್ತಕ ಸಮಿತಿಯವರು ಈ ವ್ಯಾಕರಣಗಳನ್ನು ಬರೆಯುವುದರ ಮತ್ತು ಕಲಿಸುವುದರ ಉದ್ದೇಶವೇನೆಂಬುದನ್ನು ಮೊದಲಿಗೇನೇ ನಿರ್ಧರಿಸಿಕೊಳ್ಳಬೇಕು. ತಮ್ಮ ತಾಯಿನುಡಿಯ ಸ್ವರೂಪವೇನೆಂಬುದನ್ನು ತಿಳಿದುಕೊಳ್ಳಲು ಮತ್ತು ಆ ಭಾಷೆಯಲ್ಲಿ ಬರಹದ ಮೂಲಕ ತಮ್ಮ ಮನಸ್ಸಿನಲ್ಲಿರುವ ವಿಷಯವನ್ನು ಇತರರಿಗೆ ಸರಿಯಾಗಿ ಅರ್ಥವಾಗುವ ಹಾಗೆ ತಿಳಿಸಲು ಹಾಗು ಇತರರು ಬರೆದುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ವ್ಯಾಕರಣವನ್ನು ಕಲಿಸುವ ಅವಶ್ಯಕತೆ ಇದೆ. ಅವರು ಯಾವ ರೀತಿಯ ಬರಹವನ್ನು ಬಳಸುತ್ತಿದ್ದಾರೆ, ಬಳಸಬೇಕಾಗಿದೆ ಎಂಬುದರ ಮೇಲೆ ಈ ವ್ಯಾಕರಣದ ರಚನೆ ಅವಲಂಬಿಸಿರಬೇಕು.

ಹೊಸಗನ್ನಡದ ವ್ಯಾಕರಣದಲ್ಲಿ ಹೊಸಗನ್ನಡದ ವಿಚಾರಗಳನ್ನು ಮಾತ್ರವೇ ವಿವರಿಸಬೇಕು. ಸಂಸ್ಕೃತದ, ಇಲ್ಲವೇ ಹಳೆಗನ್ನಡದ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಹೇಳುವುದರಿಂದ ಪ್ರಯೋಜನವೇನಾದರೂ ಇದೆಯೆಂದು ಈ ವಿದ್ವಾಂಸರ ಮತವಾದರೆ, ಆ ವಿಷಯಗಳಿಗಾಗಿ ಬೇರೆಯೇ ಪುಸ್ತಕವನ್ನು ಬರೆಯುವುದು ಉತ್ತಮ. ಇವೆಲ್ಲವನ್ನೂ ಹೊಸಗನ್ನಡ ವ್ಯಾಕರಣದಲ್ಲೇ ಸೇರಿಸುವುದರಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲವಲ್ಲದೆ ಬೇರೇನೂ ಮೂಡಲಾರದು.

ಹೆಚ್ಚಿನ ಮಾಹಿತಿಗಾಗಿ ಭಟ್ಟರ ಪುಸ್ತಕಗಳನ್ನು ಕೊಂಡು ಓದಿ. ಒಟ್ಟಿನಲ್ಲಿ ನಮ್ಮ ಕನ್ನಡದ ವ್ಯಾಕರಣಕಾರರಿಗೂ ಕನ್ನಡ ಸಂಸ್ಕೃತದಿಂದಲೇ ಬಂದಿರಬೇಕು ಅನ್ನೋ ತಪ್ಪು ತಿಳುವಳಿಕೆ ಹಿಂದಿನಿಂದಲೂ ಇದೆ. ಆದರೆ ನಿಜಕ್ಕೂ ನೋಡಿದರೆ ಸಂಸ್ಕೃತಕ್ಕೂ ಕನ್ನಡಕ್ಕೂ ಯಾವ ಭಾಷಾವೈಜ್ಞಾನಿಕ ನಂಟೂ ಇಲ್ಲ. ಕನ್ನಡ ಸ್ಪ್ಯಾನಿಷ್ಷು, ಪೋರ್ಚುಗೀಸು, ಅರಬ್ಬಿ, ತಮಿಳು, ತೆಲುಗು, ಮಲಯಾಳಿ, ಇಂಗ್ಲೀಷು - ಇವೆಲ್ಲವುಗಳಿಗಿಂತ ಹೆಚ್ಚಾಗಿ ಸಂಸ್ಕೃತದಿಂದ ಪದಗಳ್ನ ಎರವಲು ಪಡೆದಿರುವುದೇನೋ ನಿಜ. ಹಾಗೆಂದ ಮಾತ್ರಕ್ಕೆ ಸಂಸ್ಕೃತದಿಂದಲೇ ಕನ್ನಡ ಹುಟ್ಟಿ ಬಂದಿರೋದು ಅನ್ನೋದು ಶುದ್ಧ ತಪ್ಪು. ಕನ್ನಡ ವ್ಯಾಕರಣವನ್ನ ಸಂಸ್ಕೃತ ವ್ಯಾಕರಣದ ಒಂದು "ಅಪಭ್ರಂಶ" ಅಂದುಕೊಳ್ಳೋದಂತೂ ಭಾಷಾವಿಜ್ಞಾನದ ಕೊಲೆಯೇ. ಆ ಕೊಲೆ ಕೇಶೀರಾಜನಿಂದ ಹಿಡಿದು ಇಲ್ಲೀವರೆಗೆ ಕನ್ನಡದ ವ್ಯಾಕರಣಕಾರರೆಲ್ಲರೂ ಮಾಡಿದಾರೆ ಗುರು! ಆ ಕೊಲೆ ನಿಲ್ಲಬೇಕು ಅಂತ ಧೈರ್ಯವಾಗಿ ಕೂಗುಹಾಕಿರೋ ಒಬ್ಬರೇ ಒಬ್ಬರೂಂದ್ರೆ ಶ್ರೀ ಶಂಕರಭಟ್ಟರು.

ನಿಜಕ್ಕೂ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ. ಸಂಸ್ಕೃತದ ವ್ಯಾಕರಣವನ್ನ ಕನ್ನಡಕ್ಕೆ ಹೊಂದಿಸೋದಕ್ಕೆ ಹೊರಟಂತಹ ಇಲ್ಲೀವರೆಗಿನ ಎಲ್ಲಾ ವ್ಯಾಕರಣಕಾರರೂ ಈ ಕೆಲಸದಲ್ಲಿ ಸೋತಿದ್ದಾರೆ ಗುರು! ಇಂದಿಗೂ ನಿಜವಾದ ಕನ್ನಡದ ವ್ಯಾಕರಣ ಅನ್ನೋದು ಇಲ್ಲ. ಇರೋದೆಲ್ಲಾ ಸಂಸ್ಕೃತವ್ಯಾಕರಣದ "ಅಪಭ್ರಂಶ"ಗಳೇ. ಸಂಸ್ಕೃತ-ಕನ್ನಡಗಳ ನಡುವೆ ಮೂರ್ಖರು ಹೇಳೋ ನಂಟನ್ನು ತಳ್ಳಿಹಾಕಿ ನಿಜವಾದ ಕನ್ನಡ ವ್ಯಾಕರಣ ಬರಿಯಕ್ಕೆ ಕನ್ನಡನಾಡಿನಲ್ಲಿ ಭಾಷಾವಿಜ್ಞಾನದ ಕ್ಷತ್ರಿಯರು ಎಚ್ಚೆತ್ತುಕೋಬೇಕು ಗುರು!

ಹಿಂದೆ ಕನ್ನಡದಲ್ಲಿ ವೈಜ್ಞಾನಿಕ ಸಾಹಿತ್ಯ ಇರಲಿಲ್ಲ ಅಂತ ಯಾವನ್ ಹೇಳಿದ್ದು?

ಕನ್ನಡದ ಪ್ರಾಚೀನ ಕೃತಿಗಳಲ್ಲಿ ವಿಜ್ಞಾನ ಸಾಹಿತ್ಯ ಹೇರಳವಾಗಿತ್ತು ಅಂತ 10ನೇ ಅಕ್ಟೋಬರ್ ವಿ.ಕ. ದಲ್ಲಿ ಬಂದಿರುವ ಸುದ್ದಿ ಕನ್ನಡಿಗರೆಲ್ಲರಿಗೂ ಕಣ್ತೆರೆಸುವಂಥದ್ದು ಗುರು. ಭಾರತದಲ್ಲಿ ಹಿಂದೆ ಇದ್ದ ಸಾಹಿತ್ಯವೆಲ್ಲಾ ಬರೀ ಸಂಸ್ಕೃತದ್ದು, ಅದರಲ್ಲೂ ವಿಜ್ಞಾನ ಅಂದ್ರೆ ಬರೀ ಸಂಸ್ಕೃತದಲ್ಲಿ ಮಾತ್ರ ಇದ್ದಿದ್ದು ಅನ್ಕೊಂಡಿರೋರ ನಂಬಿಕೆಗೆ ವಿ.ಕ.ದ ಆ ಒಂದು ವರದಿ ನೀರೆರಚಿದೆ ಗುರು! ಕನ್ನಡದಲ್ಲಿ ಎಲ್ಲವೂ ಚೆನ್ನಾಗಿ ನಡ್ಕೊಂಡು ಹೋಗ್ತಿದ್ದಿದ್ದು ಹೇಗೆ ಹದಗೆಡ್ತು, ಇವತ್ತಿನ ಇಂಗ್ಲೀಷ್ ಹುಚ್ಚು ಮುಂದುವರೆದರೆ ನಾವು ಯಾವ ಅದ್ಭುತ ಕೊಡುಗೆಯನ್ನ ನಮ್ಮ ಮುಂದಿನ ಪೀಳಿಗೆಯೋರಿಗೆ ಕೊಟ್ಟು ಹೋಗ್ತೀವಿ ಅನ್ನೋದನ್ನ ಸ್ವಲ್ಪ ನೋಡೋಣ.

ಯಾವನ್ ಹೇಳಿದ್ದು ವೈಜ್ಞಾನಿಕ ಸಾಹಿತ್ಯ ಬರೀ ಸಂಸ್ಕೃತದಲ್ಲಿತ್ತು ಅಂತ?

ವಿಜಯನಗರದ ಅರಸರ ಆಡಳಿತದವರೆಗೆ ಕನ್ನಡದಲ್ಲಿ ಲಭ್ಯವಿದ್ದ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಗ್ರಂಥಗಳ ಬಗ್ಗೆ ಉಲ್ಲೇಖ ಕಂಡು ಬರುತ್ತದೆ. ಇದು ಬಹಳ ಸಂತೋಷದ ಸಂಗತಿ. ಹಿಂದೆ ಬರೀ ಸಂಸ್ಕೃತದಲ್ಲಿ ಮಾತ್ರ ವೈಜ್ಞಾನಿಕ ಬರಹಗಳಿದ್ದವು ಎಂದುಕೊಂಡಿದ್ದೆವು! ಆದರೆ ಕನ್ನಡದಲ್ಲೂ ಇವೆಲ್ಲವೂ ಇದ್ದವು ಎಂದು ಸಾರುವ ಈ ಕೆಳಗಿನ ದಾಖಲೆಗಳು ಕನ್ನಡಿಗನ ಕೀಳರಿಮೆಯನ್ನು ಕಿತ್ತೊಗೆಯುವ ಪ್ರಬಲ ಅಸ್ತ್ರವಾಗಬೇಕಿದೆ. ಈ ದಾಖಲೆಗಳು ಕನ್ನಡ ಕೇವಲ ರೆಕ್ಕೆ-ಪುಕ್ಕ ಇರದ ಭಾಷೆ ಆಗಿರಲಿಲ್ಲ, ತಲತಲಾಂತರಗಳಿಂದ ಕನ್ನಡಿಗನ ಬುದ್ಧಿಮತ್ತೆಯಿಂದ, ಪ್ರಖರವಾಗಿ ಕಂಗೊಳಿಸುತ್ತಿದ್ದಂತಹ, ಬಲವಾಗಿ-ಗಟ್ಟಿಯಾಗಿ ನೆಲೆಯೂರಿದ್ದ ಭಾಷೆ-ಸಂಸ್ಕೃತಿ ಅಂತ ಸಾಬೀತು ಮಾಡತ್ವೆ ಗುರು!

ಆ ಬರಹ ತಿಳಿಸಿಕೊಡೋ ಹಾಗೆ ಅಂದು ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಕಂಡು ಬರುವ ದಾಖಲೆಗಳಲ್ಲಿ ಕೆಲವು ಉದಾಹರಣೆಗಳು ಹೀಗಿವೆ:
 • ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಗಜಶಾಸ್ತ್ರ.
 • ಕ್ರಿ.ಶ.942-1025ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಲೋಕೋಪಕಾರ ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ
 • ಕ್ರಿ.ಶ. 1040 ರಲ್ಲಿ ಚಂದ್ರರಾಜನೆಂಬುವವರಿಂದ ಮದನತಿಲಕವೆಂಬ ಕಾಮಶಾಸ್ತ್ರದ ಪುಸ್ತಕವು ರಚಿತವಾಗಿದೆ.
 • ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ ಎಂಬುವವರು ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ರಚಿಸಿದ್ದರು.
 • ಕ್ರಿ.ಶ. 1120 ರ ವೇಳೆಗೆ ರಾಜಾದಿತ್ಯರು ಗಣಿತ ಗ್ರಂಥಗಳನ್ನು ರಚಿಸಿದ್ದರು. ಇದು ಕೇವಲ ಸಾಮಾನ್ಯ ಗಣಿತವಾಗಿರದೆ, ಶ್ರೇಣಿಗಳ ಗಣಿತವಾಗಿತ್ತು ಎನ್ನುವುದು ಗಮನಾರ್ಹವಾದದ್ದು.
 • ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರವೆಂಬ ಗ್ರಂಥ ಕನ್ನಡದಲ್ಲಿ ದೊರಕಿರುವ ಮೊದಲ ವೈದ್ಯ ಶಾಸ್ತ್ರ ಗ್ರಂಥವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 • ಕ್ರಿ.ಶ. 1300 ರಲ್ಲಿ ಮಳೆ, ಬೆಳೆ ,ನೀರು ,ಹವಾಮಾನ, ವಾಯುಗುಣ, ಬಿತ್ತನೆ ಮತ್ತು ಅಂತರ್ಜಲ ಇರುವ ಸ್ಥಳವನ್ನು ಕರಾರುವಕ್ಕಾಗಿ ಕಂಡು ಹಿಡಿಯುವ ಬಗೆ ಇತ್ಯಾದಿಗಳನ್ನು ಕುರಿತ ವಿಷಯಗಳನ್ನು ರಟ್ಟಶಾಸ್ತ್ರ ಎಂಬ ಪುಸ್ತಕದಲ್ಲಿ ರಟ್ಟಕವಿ ಎಂಬ ಕೃಷಿ ವಿಜ್ಞಾನಿ ಹಿಡಿದಿಟ್ಟಿದ್ದಾರೆ.

ಕನ್ನಡದ ಜಾಗ ಇಂಗ್ಲೀಷ್ ತೊಗೊಂಡಾಗ ಕನ್ನಡಿಗನಿಗೆ ಬಡಿದ ಮಂಕು

ಒಳ್ಳೊಳ್ಳೆ ಕನ್ನಡದ ರಾಜಮನತನಗಳು ನಮ್ಮನ್ನು ಆಳುತ್ತಿದ್ದಾಗ ಈ ಕನ್ನಡದ ವೈಜ್ಞಾನಿಕ ಸಾಹಿತ್ಯ ಹೊರಬರುತ್ತಿತ್ತು ಎಂದು ನಾವು ಕಂಡ್ಕೋಬಹುದಾಗಿದೆ. ಅಂದಿನ ಜ್ಞಾನ-ತಂತ್ರಜ್ಞಾನದ ಉದಾಹರಣೆಯನ್ನು ಇಂದು ನಮಗೆ ಲಭ್ಯವಿರುವ ಅಂದಿನ ಕಾಲದ ಸ್ಮಾರಕಗಳಾದ ವಿಜಯನಗರದ ಹಂಪೆ, ಗಂಗರ ಕಾಲದ ತಲಕಾಡಿನ ದೇವಸ್ಥಾನ, ಹೊಯ್ಸಳರ ಬೇಲೂರು-ಹಳೇಬೀಡುಗಳಲ್ಲಿನ ಶಿಲ್ಪಕಲೆ ಮುಂತಾದವುಗಳ ಮೂಲಕ ಕಾಣಬಹುದಾಗಿದೆ. ನಮ್ಮ ಮೇಲಿನ ಮೊಗಲರ, ಬ್ರಿಟೀಷರ ಆಕ್ರಮಣ ನಂತರದಲ್ಲಿ, ತನ್ನ ಭಾಷೆಯಲ್ಲಿ ಕಲಿಯುತ್ತ ಬುದ್ಧಿವಂತರಾಗುತ್ತಿದ್ದ ಕನ್ನಡಿಗನನ್ನು ಬಗ್ಗು ಬಡಿಯಲು ವಿದ್ಯಾಭ್ಯಾಸದಲ್ಲಿ ಇಂಗ್ಲೀಷ್ ಹೇರಿಕೆ ಮಾಡಿ ನಮ್ಮನ್ನು ಅವರ ಗುಲಾಮರಾಗಿಸಿದ್ದ ತಂತ್ರಗಾರಿಕೆ ಕನ್ನಡಿಗನಿಗೆ ತನ್ನ ಭಾಷೆಯಲ್ಲಿ ವಿಜ್ಞಾನ-ತಂತ್ರಜ್ಞಾನದ ನೇರ ಸಂಶೋಧನೆಗೆ ಹೊಡೆತ ಬಿದ್ದು, ಕನ್ನಡ-ಕನ್ನಡಿಗನ ಪತನಕ್ಕೆ ನಾಂದಿಯಾಯಿತು. ವಿಪರ್ಯಾಸವೆಂದರೆ ಈ ರೀತಿಯ ಇನ್ನೂ ಹಲವಾರು ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧ ಪಟ್ಟ ಉಪಯುಕ್ತ ಗ್ರಂಥಗಳು ಅಂದೇ ನಮ್ಮ ಹಿರಿಯರು ನಮಗೆ ಕನ್ನಡದಲ್ಲಿ ಲಭ್ಯವಾಗಿಸಿದ್ದನ್ನು, ಸ್ವಾತಂತ್ರ್ಯಾನಂತರವೂ ನಾವೆಲ್ಲರೂ ಮರೆತು, ಕಣ್ಣು ಮುಚ್ಚಿ, ಈಗಿನ ನಮ್ಮ ಎಲ್ಲಾ ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ತಿಳಿಯಲು-ಕಲಿಯಲು ಇಂಗ್ಲೀಷನ್ನು ಅಪ್ಪಿಕೊಂಡಿರುವುದು.

ಇವತ್ತು ವಿಜ್ಞಾನವನ್ನ ಕನ್ನಡಕ್ಕೆ ತರದಿದ್ದರೆ ನಾವು ಬಿಟ್ಟುಹೋಗೋದು ಬರೀ ಸೊನ್ನೆ!

ಎಷ್ಟೋ ಜನ ಇವತ್ತಿಗೂ ಕನ್ನಡಾಂದ್ರೆ ಬರೀ ನಾಟಕ, ಕವಿತೆ, ಕಾದಂಬರಿ - ಹೀಗೆ ಬರೀ ಜುಟ್ಟಿಗೆ ಮಲ್ಲಿಗೆ ಹೂ ಅಂತ ಮಾತ್ರ ತಿಳ್ಕೊಂಡಿದಾರೆ. ಆದರೆ ಇದು ನಮ್ಮ ಏಳ್ಗೆಗೆ ಪೂರಕವಲ್ಲ. ಹೊಟ್ಟೆಗೆ ಹಿಟ್ಟಿಲ್ಲದ ಕನ್ನಡಿಗನಿಗೆ ಈ ಮಲ್ಲಿಗೆ ಹೂ ಇದ್ರೇನು ಬಿಟ್ರೇನು? ಕನ್ನಡಿಗರು ನಿಜವಾಗಲೂ ಉದ್ಧಾರವಾಗಬೇಕಾದ್ರೆ ವಿಜ್ಞಾನ-ತಂತ್ರಜ್ಞಾನಗಳು ಕನ್ನಡಕ್ಕೆ ಬರಬೇಕು. ಹೊಸ ಹೊಸ ಸಂಶೋಧನೆಗಳು ನೇರವಾಗಿ ಕನ್ನಡದಲ್ಲೇ ಆಗಬೇಕು. ವಿಜ್ಞಾನ-ತಂತ್ರಜ್ಞಾನಗಳಿಗೆ ಇಂಗ್ಲೀಷೇ ಸಾಧನ ಅಂದುಕೊಂಡಿರೋದು ನಮ್ಮ ಕೀಳರಿಮೆಯೂ ಹೌದು, ನಮ್ಮ ಏಳ್ಗೆಗೆ ಮಾರಕವೂ ಹೌದು.

ಹಿಂದೆ ವಿಜಯನಗರದ ಅರಸರ ಕಾಲದಲ್ಲಿ, ಹೊಯ್ಸಳರ ಕಾಲದಲ್ಲಿ, ಚಾಲುಕ್ಯರ ಕಾಲದಲ್ಲಿ... ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಸಾಹಿತ್ಯ ಇಲ್ಲದೆ ಹೋಗಿದ್ದರೆ ಯಾವ ಹಂಪೆಯೂ ಇರುತ್ತಿರಲಿಲ್ಲ, ಯಾವ ಬೇಲೂರು-ಹಳೆಬೀಡುಗಳೂ ಇರುತ್ತಿರಲಿಲ್ಲ. ನಿಜಕ್ಕೂ ಒಂದು ದೊಡ್ಡ ಸೊನ್ನೆಯೇ ನಮ್ಮ ಹಿಂದಿನವರು ನಮಗೆ ಬಿಟ್ಟು ಹೋಗುತ್ತಿದ್ದರು.

ಇನ್ನು ಮುಂದೆಯೂ ನಾವೇನಾದರೂ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ್ನ ಕನ್ನಡದಲ್ಲಿ ತರದೇ ಹೋದರೆ, ಕರ್ನಾಟಕದ ಮೂಲೆಮೂಲೆಗಳಲ್ಲಿನ ಪ್ರತಿಭೆಯನ್ನು ಇಂಗ್ಲೀಷೆಂಬ ಕತ್ತಿಯಿಂದ ಮೊಗ್ಗಾಗಿರುವಾಗಲೇ ಕೊಲ್ಲುವುದನ್ನು ನಿಲ್ಲಿಸದೇ ಹೋದರೆ ಇವತ್ತಿಂದ 300-400 ವರ್ಷ ಆದಮೇಲೆ ನಾವು ಯಾವ ಅದ್ಭುತ ಸಾಧನೆಗಳ್ನ ಕನ್ನಡ ವಂಶದಲ್ಲಿ ಹುಟ್ಟಿದೋರಿಗೆ ಬಿಟ್ಟು ಹೋಗ್ತೀವಿ ಗೊತ್ತಾ? ಬರೀ ಒಂದು ದೊಡ್ಡ ಸೊನ್ನೆ!

ಮೈಸೂರು ದಸರಾ ಅಂತರ್ಜಾಲ ತಾಣದಲ್ಲಿ ಕನ್ನಡವೇ ಮೂಲೆಗುಂಪು!

ನಮ್ಮ ನಾಡಹಬ್ಬ ಮೈಸೂರು ದಸರಾದ ಬಗ್ಗೆ ಮಾಹಿತಿ ನೀಡೋ http://www.mysoredasara.com ಅನ್ನೋ ಅಂತರ್ಜಾಲ ತಾಣದಲ್ಲಿ ಕನ್ನಡವನ್ನು ಕಡೆಗಣಿಸಿರೋದು ಖಂಡಿತಾ ತಪ್ಪು. ಪ್ರವಾಸಿಗಳ್ನ ಸೆಳೆಯೋಕೆ ಮತ್ತು ಅವರಿಗೆ ಅನುಕೂಲ ಮಾಡಿಕೊಡಬೇಕು ಅಂತ ಅವರುಗಳ ಭಾಷೇಲಿ ಇರ್ಲೇಬೇಕು, ನಿಜ. ಆದ್ರೆ ಕನ್ನಡದಲ್ಲಿ ಇಲ್ಲದೇ ಇರೋದು ಅಥ್ವಾ ಇದ್ರೂ ಕೆಟ್ಟದಾಗಿ ಅರೆಬರೆ ಇರೋದು ಮಾತ್ರ ಖಂಡಿತ ತಪ್ಪು ಗುರು! ಅದ್ಯಾಕೆ ನಮ್ಮ ಜನಕ್ಕೆ ನಮ್ಮ ಭಾಷೇನ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಾಗಿಡಬೇಕು ಅನ್ನೋ ರೋಗವೋ ಗೊತ್ತಿಲ್ಲ! ಅಥವಾ ಕನ್ನಡಿಗರಿಗೆ ಮೈಸೂರು ದಸರಾ ಬಗ್ಗೆ ಮಾಹಿತಿ ಬೇಡವೇ ಬೇಡ ಅನ್ನೋದು ಅವರ ತೀರ್ಮಾನವೇನು? ಏನು ಪೆದ್ದತನ!

ತಾಣದಲ್ಲಿ ಕಡೆಗಣಿಸಲಾದ ಕನ್ನಡ

ಆ ಇಡೀ ತಾಣವನ್ನು ರೂಪಿಸಿರೋದು ಇಂಗ್ಲಿಷ್ ಭಾಷೇಲಿ. ಗೂಗಲ್ ಟ್ರಾನ್ಸ್‍ಲೇಟ್ ಬಳಸಿ ವಿಶ್ವದ ಎಂಟು ಭಾಷೆಗಳಲ್ಲಿ ಮಾಹಿತಿ ಸಿಗೋಹಾಗೆ ಮಾಡಿ ಕನ್ನಡವನ್ನ ಮೂಲೆಗೆ ತಳ್ಳಿದಾರಲ್ಲ, ಇವರಿಗೇನು ಬಂತು? ತಾಣದಲ್ಲಿ ಯಾರಿಗೂ ಕಾಣದಂತೆ ಮೂಲೇಲಿರೋ ಆ ಕನ್ನಡದ ಕೊಂಡಿ ಒತ್ತಿದರೆ ಮೊದಲ ಪುಟ ಕನ್ನಡದಲ್ಲಿ ಕಾಣುತ್ತೆ, ಆದರೆ ಅಲ್ಲಿಂದ ಯಾವ ಲಿಂಕೂ ತೆರೆದುಕೊಳ್ಳಲ್ಲ. ಜೊತೆಗೆ ಕಾಗುಣಿತದ ತಪ್ಪುಗಳು ಸಾಕಷ್ಟಿವೆ (ಸ್ಥಳಾವಕಾಶ = ಸ್ಥಳವಕಾಶ. ದಸರಾ ಸುದ್ದಿ = ದಸರಾ ಸುದ್ದ)!

ನಮ್ಮತನಾನ ತೋರಿಸಿಕೊಳ್ಳೋದೇ ಪ್ರವಾಸೋದ್ಯಮದ ಬೆನ್ನೆಲುಬು ಅಂದಾಗ ಈ ನಮ್ಮತನದಲ್ಲಿ ನಮ್ಮ ಭಾಷೇನೂ ಬರತ್ತೆ ಅನ್ನೋ ಬುದ್ಧಿ ಬೇಡವಾ? ಇಡೀ ಪ್ರಪಂಚದ ಕಣ್ಣಿಗೆ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಎರಡನ್ನೂ ತೋರ್ಸೋ ಒಳ್ಳೇ ಅವಕಾಶ ಇದು. ಇದನ್ನೆಲ್ಲ ಬಿಟ್ಟು ಪ್ರವಾಸಿಗಳಿಗೆ ಬರೀ ಅವರತನವನ್ನೇ ತೋರಿಸಿಕೊಡಕ್ಕೆ ದಸರಾ ಯಾಕೆ ಮಣ್ಣು ಹುಯ್ಕೊಳಕ್ಕೆ? ನಮ್ಮೂರಿನ ಬಗ್ಗೆ ಇರೋ ನಮ್ಮದೇ ಅಂತರ್ಜಾಲ ತಾಣದಲ್ಲಿ ನಮ್ಮ ಭಾಷೇನೇ ನಾವು ಕಡೆಗಣುಸ್ತಾ ಇದೀವಿ ಅಂದ್ರೆ ಇದು ಎಂಥಾ ಕೀಳರಿಮೆ ಗುರು?! ಅಥವಾ ಜರ್ಮನ್ ಪ್ರವಾಸಿಯೊಬ್ಬ ಇದನ್ನ ನೋಡಿ "ನಿಮ್ಮದು ಅಂತ ಯಾವ ಭಾಷೇನೂ ಇಲ್ಲವಾ?" ಅಂದ್ರೆ ಏನ್ ಮಾಡ್ತಾರಂತೆ ಆ ತಾಣವನ್ನ ಮಾಡಿರೋ ಭೂಪತಿಗಳು?

ಆ ತಾಣದಲ್ಲಿ ಕನ್ನಡ ರಾರಾಜಿಸೋಹಾಗೆ ಮಾಡಬೇಕು

ನಮ್ಮತನವನ್ನ ಬರೀ ಅಡುಗೆಮನೆ-ಬಚ್ಚಲುಮನೆಗಳಿಗೇ ಮೀಸಲಿಡಬೇಕು ಅನ್ನೋ ಮನೆಹಾಳು ಬುದ್ಧಿ ಬಿಸಾಕಿ ಕೂಡಲೇ ಆ ತಾಣದಲ್ಲಿ ಈ ಕೆಳಗಿನ ಬದಲಾವಣೆಗಳಾಗಬೇಕು ಅಂತ ಆ ತಾಣ ಮಾಡಿರೋರ್ಗೆ ಒಸಿ ಬರಿಯೋಣ ಗುರು:
 • ಈ ತಾಣವನ್ನು ತೆರೆದ ಕೂಡಲೇ ಕನ್ನಡದ ಅಕ್ಷರಗಳು ಕಾಣಬೇಕು
 • ಬದಿಯಲ್ಲಿ ಭಾಷಾ ಆಯ್ಕೆ ಅಂತ ಬೇರೆ ಬೇರೆ ಭಾಷೆಗಳ ಆಯ್ಕೆಯ ಪಟ್ಟಿ ಇರಬೇಕು
 • ಎಲ್ಲ ಲಿಂಕುಗಳೂ ಕನ್ನಡದ ಆಯ್ಕೆ ಇದ್ದಾಗಲೂ ಕೆಲಸ ಮಾಡಬೇಕು.
ಕನ್ನಡದಲ್ಲಿ ಮಾಡಿ ಅಂದ್ರೆ ಕನ್ನಡದಲ್ಲಿ ಅದಾಗಲ್ಲ, ಇದಾಗಲ್ಲ, ಎಲ್ಲರಿಗೂ ಕಾಣೋಹಾಗೆ ಮಾಡಕ್ಕಾಗಲ್ಲ, ತಂತ್ರಾಂಶ ಇಲ್ಲ, ಗಿಂತ್ರಾಂಶ ಇಲ್ಲ, ಅದು-ಇದು, ಮಣ್ಣು-ಮಸಿ ಅಂತ ಉತ್ತರ ಕೊಡೋಕೆ ಮುಂದೆ ಬಂದ್ರೆ ಎಲ್ಲಕ್ಕೂ ನಮ್ಮಹತ್ತಿರ ಉತ್ರ ಇದೆ ಅಂತ ಹೇಳ್ಬೇಕು ಗುರು! ಈ ತಂತ್ರಾಂಶ-ಗಿಂತ್ರಾಂಶದ ತೊಂದರೆಗಳೆಲ್ಲ ಕುಣೀಲಾರದೇ ಇರೋರಿಗೆ ಮಾತ್ರ. ಕುಣೀಲೇಬೇಕು ಅಂತಿದ್ರೆ ತಂತ್ರಾಂಶವೂ ಬರತ್ತೆ, ಮಣ್ಣು-ಮಸೀನೂ ಬರತ್ತೆ ಅನ್ನೋದಕ್ಕೆ ಕನ್ನಡದಲ್ಲಿ ಇವತ್ತಿನ ದಿನ ಇರೋ ಸಾವಿರಗಟ್ಲೆ ಬ್ಲಾಗುಗಳೇ ಸಾಕ್ಷಿ ಗುರು!

ಕನ್ನಡದ ಪುಸ್ತಕಗಳಿಗೆ ಡಿಮಾಂಡಪ್ಪೋ ಡಿಮಾಂಡು!

ಈ ಬಾರಿಯ ಬೆಂಗ್ಳೂರು-ಪುಸ್ತಕೋತ್ಸವದಲ್ಲಿ ಕನ್ನಡ ಪುಸ್ತಕ ಪ್ರಕಾಶಕರ ಮತ್ತು ಮಾರಾಟಗಾರರ ಸಂಖ್ಯೆ ಸಕ್ಕತ್ ಹೆಚ್ಚಾಗಿದೆ ಅಂತ ಪ್ರಜಾವಾಣಿ ವರದಿ ಮಾಡಿದೆ. ಹೋದ ವರ್ಷ ಶುರುವಾದ ಈ ಪುಸ್ತಕ ಸಂತೇಲಿ ಕನ್ನಡ ಪುಸ್ತಕೋದ್ಯಮಿಗಳಿಗೆ ಬರೀ 15 ಮಳಿಗೆಗಳು ಇದ್ದವು. ಅದೇ ಈ ವರ್ಷ ನೋಡಿ, ಇಡಕ್ಕೆ ನಿರ್ಧರಿಸಿರೋ ಸುಮಾರು 300 ಮಳಿಗೆಗಳಲ್ಲಿ 50 ಮಳಿಗೆ ಕನ್ನಡ ಪುಸ್ತಕೋದ್ಯಮಕ್ಕೇ ನೀಡಲಾಗಿದೆ. ಕರ್ನಾಟಕದಲ್ಲಿ, ಅದೂ ಬೆಂಗ್ಳೂರಲ್ಲಿ ಕನ್ನಡ ಪುಸ್ತಕಗಳಿಗೆ ಬೇಡಿಕೆ ಸಕ್ಕತ್ತಿದೆ, ಮತ್ತೆ ಹೆಚ್ತಾನೂ ಇದೆ ಗುರು!

ಕನ್ನಡಿಗರು ಕನ್ನಡದ ಪುಸ್ತಕಗಳ್ನೇ ಹೆಚ್ಚಾಗಿ ಓದಬೇಕು

ಮನುಷ್ಯ ಪುಸ್ತಕವನ್ನ ಓದೋದು ಗ್ನಾನ ಸಂಪಾದನೆ ಮತ್ತು ಹೊಸ ವಿಷಯಗಳ್ನ ತಿಳ್ಕೊಳೋ ಹಂಬಲ, ಮನರಂಜನೆ ಮತ್ತು ಸುದ್ದಿ-ಸಮಾಚಾರಗಳಿಗಾಗಿ. ಈ ಅವಷ್ಯಕತೆಗಳ್ನ ಸರಿಯಾಗಿ ಪೂರೈಸಕ್ಕಾಗೋದು ಅವನ ಭಾಷೇಲೇ ಅನ್ನೋದು ಯಾವ ಚಿಪಣಿ-ತಂತ್ರಗ್ನಾನವೂ ಅಲ್ಲ! ಮನುಷ್ಯನ ಮಾನಸಿಕ ಹಾಗು ಬೌದ್ಧಿಕ ವ್ಯವಸ್ಥೆಗಳ್ನ ಹತ್ತಿರದಿಂದ ನೋಡಿದ್ರೆ ಒಂದು ಅಂಶ ಸ್ಪಷ್ಟ ಆಗತ್ತೆ. ಅದೇನಪ್ಪಾಂದ್ರೆ ಮನುಷ್ಯ ಓದುವಾಗ, ಮಾತಾಡುವಾಗ, ಒಳಮನಸ್ಸಿನಲ್ಲಿ ಆ ವಿಚಾರಗಳ್ನ ಯೋಚನೆ ಮಾಡೋದು ಅವನ ಸ್ವಂತ ಭಾಷೆಯಲ್ಲೇ. ಇಲ್ಲಿ ಕನ್ನಡವೇ ಆ ಭಾಷೆ. ಕನ್ನಡಿಗನ ಬುದ್ದಿಗೆ ನೇರವಾಗಿ ನಾಟೋದು ಅವನ ಸ್ವಂತ ಭಾಷೇನೇ. ಹೆಚ್ಚು ಕಾಲ ನೆನಪಲ್ಲಿ ಉಳಿಯೋದೂ ಅದು ಅವನ ಭಾಷೇಲಿದ್ರೇನೇ. ಇದು ಮನುಷ್ಯನ ಸಹಜ ಗುಣ ಗುರು.

ಅನುವಾದ, ಅನುವಾದ, ಅನುವಾದ!

ಕನ್ನಡದಲ್ಲಿ ಓದೋದೇ ನಮಗೆ ಒಳ್ಳೇದು ಅಂದಮೇಲೆ ಬೇರೆಬೇರೆ ಭಾಷೆಗಳಲ್ಲಿರೋ ಗ್ನಾನವನ್ನ ನಮ್ಮದಾಗಿಸಿಕೊಳಕ್ಕೆ ಒಂದು ಏರ್ಪಾಡಿರಬೇಕಲ್ಲ? ಅದೇ ಅನುವಾದ. ಬೇರೆ ಭಾಷೆಗಳ ಪುಸ್ತಕಗಳು ಹೇರಳವಾಗಿ ಕನ್ನಡಕ್ಕೆ ಅನುವಾದ ಆಗಬೇಕು ಗುರು! ಇವತ್ತಿನ ದಿನ ಯೂರೋಪಿನ ಭಾಷೆಗಳಲ್ಲಿ ಅದೆಷ್ಟು ಅನುವಾದಗಳಾಗತ್ವೆ ಅಂತ ನೋಡಿದರೆ "ಅಬ್ಬಾ!" ಅನ್ನೋಹಾಗಾಗತ್ತೆ!

ಯೂರೋಪಲ್ಲಿ ಅನುವಾದ ಅನ್ನೋದೇ ಒಂದು ದೊಡ್ಡ ಉದ್ಯಮ. ನೆದರ್ಲ್ಯಾಂಡ್ಸು, ಜರ್ಮನಿ, ಫ್ರಾನ್ಸ್, ಇಸ್ರೇಲ್, ಜಪಾನ್ - ಈ ದೇಶಗಳಲ್ಲಿ ನಿಮಗೆ ಆಯಾ ದೇಶದ ಭಾಷೆಗಳ್ನ ಬಿಟ್ಟು ಬೇರೆ ಭಾಷೆಯ ಪುಸ್ತಕಗಳೇ ಸಿಗಲ್ಲ ಅಂದ್ರೆ ನಂಬ್ತೀರಾ? ನಿಜ ಗುರು! ಯಾಕೆ? ಯಾಕೇಂದ್ರೆ ಔರಿಗೆ ಗೊತ್ತು ತಿಳುವಳಿಕೆಗಾಗಲಿ ಮನರಂಜನೆಗಾಗಲಿ ಅವರ ನುಡಿಯೇ ಸರಿಯಾದ ಸಾಧನ ಅಂತ! ಮುಕ್ತವಾಗಿ ಅಲ್ಲಿಂದಿಲ್ಲೀಗೆ ಇಲ್ಲಿಂದಲ್ಲೀಗೆ ಅನುವಾದಗಳು ನಡೀತಾನೇ ಇರ್ತವೆ ಯೂರೋಪಲ್ಲಿ.

ಭಾಷಾವಾರು ರಾಜ್ಯಗಳ ಒಕ್ಕೂಟವಾಗಿರೋ ಭಾರತದಲ್ಲಿ ಕೂಡ ಅನುವಾದ-ಉದ್ಯಮಕ್ಕೆ ಸಕ್ಕತ್ ಸ್ಕೋಪಿದೆ. ಆದರೂ ಇದನ್ನ ಸಮರ್ಪಕವಾಗಿ ಬಳಸಿಕೊಂಡು ನಾವು ದುಡ್ಡೂ ಮಾಡ್ಕೋತಿಲ್ಲ, ನಮ್ಮ ಜನರ ಗ್ನಾನವೂ ಹೆಚ್ತಿಲ್ಲ! ಆದ್ದರಿಂದ ಕನ್ನಡದಲ್ಲಿ ಇವತ್ತು ಸಿಗದೇ ಇರೋ ಸಾಹಿತ್ಯ ಬೇರೆ ಭಾಷೆಗಳಲ್ಲಿ ಇದ್ದರೆ ಅವುಗಳ್ನ ಹೆಚ್ಚುಹೆಚ್ಚು ಕನ್ನಡಕ್ಕೆ ಅನುವಾದ ಮಾಡಬೇಕು, ಓದಿ ನಾವು ಮುಂದುವರೀಬೇಕು ಗುರು.

ಹೊಟ್ಟೆ! ಕನ್ನಡವಿಲ್ಲದೆ ನೀ ಕೆಟ್ಟೆ!

ಇದೇ ತಿಂಗಳ ೬ನೇ ತಾರೀಖಿನ ಡೆಕ್ಕನ್ ಹೆರಾಲ್ಡು ಇಂದಿರಾನಗರದ ಕ್ಲಬ್ ನಡೆಸಿದ ಆಹಾರ ಮೇಳದಲ್ಲಿ ಕರ್ನಾಟಕದ ಆಹಾರದಲ್ಲಿ ಇರೋ ವಿವಿಧತೆ ಮತ್ತೆ ಬೇಡಿಕೆಯನ್ನ ವರದಿ ಮಾಡಿದೆ.
One hears about every kind of Indian cuisine, but rarely about Karnataka cuisine. The first food festival presented by the Indiranagar Club in its series of "Taste of India" showcased Karnataka cuisine in its different varieties. As many as 30 veg and non-veg items were on offer at the buffet held at the back lawns of the club. A diner could choose from any of the 30 dishes at an unbelievable rate of Rs 100 only per head.

ಕರ್ನಾಟಕಕ್ಕೆ ಆಗ್ತಿರೋ ಅನಿಯಂತ್ರಿತ ವಲಸೆ ಯಾವ ಗೊಂದಲವನ್ನು ಉಂಟುಮಾಡಿದೆಯೋ ಅದರಲ್ಲಿ ಮೂರ್ಖರಂತೆ ಕನ್ನಡದ ತಿಂಡಿ-ತಿನಿಸುಗಳನ್ನು ಮರೆತರೆ ನಮ್ಮ ಆರೋಗ್ಯ ಮಟೇಸು ಗುರು! ಈ ಹಿನ್ನೆಲೆಯಲ್ಲಿ ಕನ್ನಡನಾಡಿನ ವೈವಿಧ್ಯಮಯ ಆಹಾರ ಪದ್ಧತಿಯನ್ನ ಪರಿಚಯಿಸ್ಲಿಕ್ಕೆ ಇಂತಹ ಮೇಳಗಳು ಬೇಕು. ನಮ್ಮ ರಾಜ್ಯದ ಆಹಾರ ಪದ್ಧತಿಯ ರುಚಿ ಮೆಟ್ರೋ ಕನ್ನಡಿಗರಿಗೂ, ಕನ್ನಡೇತರರಿಗೂ ತೋರಿಸಬೇಕು ಗುರು!

ಹೊರಗಿನವರ ತಿಂಡಿ-ತಿನಿಸುಗಳು ನಮ್ಮ ಆರೋಗ್ಯಕ್ಕೆ ಅಷ್ಟೇನು ಒಳ್ಳೇದಲ್ಲ

ಇತ್ತೀಚೆಗೆ ಬೆಂಗ್ಳೂರಂಥಾ ಪಟ್ಟಣಗಳಲ್ಲಿ ಯಾವ ಹೋಟೆಲ್ಲಿಗೆ ಹೋದರೂ ನಮ್ಮ ಮೊಸರನ್ನವೋ, ದೋಸೆಯೋ, ಇಡ್ಲಿಯೋ, ಹುಗ್ಗಿಯೋ ಕೇಳಿದ್ರೆ ಹೋಟೆಲ್ಲಿನ ಮಾಲೀಕರಿಂದ ಹಿಡಿದು, ಸಿಬ್ಬಂದಿಗಳು ಬಾಯಿ ಬಾಯಿ ಬಿಟ್ಟು ನೋಡ್ತಾರೆ. ಸಂಜೆ ಆದ್ಮೇಲಂತೂ ಕೇಳಲೇಬೇಡಿ! "ನಾರ್ತಿಂಡ್ಯನ್ನು ಇಲ್ಲಾ ಚೈನೀಸು ಇಲ್ಲಾ ಮೆಕ್ಸಿಕನ್ನು ಮಾತ್ರ ಇರೋದು. ಬೇಕಾ?" ಅನ್ನೋ ಹೋಟಲ್ಗಳೇ ಹೆಚ್ಚು! ಅಲ್ಲ - ಇವೆಲ್ಲ ಇರಬಾರದು ಅಂತೇನು ನಾವು ಹೇಳ್ತಿಲ್ಲ. ಆದರೆ ನಮಗೆ ಬೇಕಾದ್ದು ಸಿಗದೇನೇ ಹೋದ್ರೆ?

ಇರಬೇಕು, ಹೋಟೆಲ್ಗಳಲ್ಲಿ ವಿವಿಧತೆ ಇರಬೇಕು, ಬೇರೆ ಬೇರ ತರ ಊಟ ಸಿಗ್ಬೇಕು, ಅಂದ ಮಾತ್ರಕ್ಕೆ ನಮ್ಮ ಊಟಾನೇ ಸಿಗೋಲ್ಲ ಅಂದ್ರೆ ನ್ಯಾಯ ಅಲ್ಲ. ದಿನ ದಿನ ಪಿಜಾ ತಿನ್ನೋದು, ದಿನ ದಿನ ಪನ್ನೀರ್ ತಿನ್ನೋದು ನಮಗೆ ಆಗುತ್ತಾ? ನಮ್ಮ ಆರೋಗ್ಯ ಏನಾಗ್ಬೇಕು?

ಆಹಾರ ಪದ್ದತಿಗಳಿಗೂ ಸುತ್ತಮುತ್ತಲ ಭೌಗೋಳಿಕ ಸ್ಥಿತಿಗೂ ಇರುವ ನಂಟನ್ನು ಒಡೆಯಬಾರದು

ಯಾವುದೇ ಪ್ರದೇಶದ ಆಹಾರ ಪದ್ಧತಿ ಆಯಾ ಪ್ರದೇಶದ ಹವಾಮಾನಕ್ಕೂ, ಜನಾಂಗದ ಬದುಕಿನ ರೀತಿಗೂ ಅವಲಂಬಿಸಿರುತ್ತೆ ಗುರು. ಪ್ರಪಂಚದಲ್ಲೆಲ್ಲ ಹವಾಮಾನಕ್ಕೆ ತಕ್ಕಂತೆ, ಜನಾಂಗಕ್ಕೆ ತಕ್ಕಂತೆ ಆಹಾರ, ಉಡಿಗೆ, ತೊಡಿಗೆಗಳು ಬೇರೆಬೇರೆಯೇ ಆಗಿರ್ತವೆ. ಈ ವಿವಿಧತೆ ಲಕ್ಷಾಂತರ ವರ್ಷಗಳಿಂದ ಇದೆ. ಹಾಗಾಗಿ ನಮ್ಮ ಪೂರ್ವಜರು ಅಭ್ಯಸಿಸಿ ನಮಗೆ, ನಮ್ಮ ದೇಹಕ್ಕೆ ಹೊಂದುವ ಅತಿ ಹಿತವಾದ ಆಹಾರ ಪದ್ಧತಿಯನ್ನು ನಮಗಾಗಿ ಬಿಟ್ಟು ಹೋಗಿದ್ದಾರೆ.

ರಾಗಿ ಮುದ್ದೆ, ಸೊಪ್ಪಿನ ಸಾರು, ಜೋಳದ ರೊಟ್ಟಿ, ಕುಟ್ ಚಟ್ನಿ , ಅನ್ನ, ಸಾರು ಇದ್ರಲ್ಲಿ ನಮ್ಮ ದೇಹಕ್ಕೆ ಒಗ್ಗೋ ಪೌಷ್ಟಿಕತೆನೂ ಇದೆ, ರುಚಿನೂ ಇದೆ. ಯಾವ ತರದ ಊಟ ಬೇಕು! ಕರಾವಳಿ, ಮಲೆನಾಡು, ಉತ್ತರ ಕರ್ನಾಟದ ಊಟ, ಮುದ್ದೆ ಊಟ..ಎಷ್ಟು ವಿವಿಧತೆ ಇದೆ! ಇದ್ನೆಲ್ಲ ಬಿಟ್ಟು ಎಣ್ಣೆಲ್ಲಿ ಮೆತ್ತಿದ ಊಟಕ್ಕೋ, ಬ್ರೆಡ್ ಊಟಕ್ಕೋ ನಿಮ್ಮ ದೇಹವನ್ನ ಒಪ್ಪಿಸಿ ಅಂತ ಒತ್ತಾಯ ಮಾಡ್ತಿರೋ ಇವತ್ತಿನ ಹೋಟೆಲ್ಗಳು ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕರವಾಗಿವೆ ಅಂತ ಯೋಚ್ನೆ ಮಾಡು ಗುರು!

ಹಾಗಾದರೆ ನಾವೇನು ಮಾಡಬೇಕು?

ನಮ್ಮ ಆಹಾರ ಪದ್ಧತಿ ನಮ್ಮ ಸಂಸ್ಕೃತಿಯ ದ್ಯೋತಕವೂ ಹೌದು. ನಮ್ಮೂರಿನ ಹೋಟೆಲ್ಗಳಲ್ಲಿ ನಮ್ಮ ಊಟ ಸಿಗೋಲ್ಲ ಅಂದ್ರೆ ಅಂತ ಹೋಟೆಲ್ ಇದ್ರೇನು ..ಬಿಟ್ರೇನು ಗುರು? ನಮ್ಮ ಹೋಟೆಲ್ ಉದ್ಯಮಿಗಳು ನಮ್ಮತನ ಮೆರೆಸಬೇಕು, ನಮ್ಮ ಕರ್ನಾಟಕದ ಆಹಾರ ಪದ್ಧತಿಗಳಿಗೆ ಆದ್ಯತೆ ಕೋಡ್ಬೇಕು. ಉತ್ತರದ ಬೀದರಿನಿಂದ ಹಿಡಿದು, ದಕ್ಷಿಣದ ಮೈಸೂರಿನವರೆಗೂ ನಮ್ಮಲ್ಲಿ ವಿಧ ವಿಧವಾದ ರುಚಿಕರ ತಿಂಡಿ-ತಿನಿಸುಗಳು, ಆಹಾರ ಪದ್ಧತಿಗಳಿವೆ. ಇವನ್ನೆಲ್ಲ ನಮ್ಮ ಹೋಟೆಲ್ ಉದ್ಯಮಿಗಳು ಅವರ ಮೆನುನಲ್ಲಿ ಹಾಕಿದ್ರೆ ಅವ್ರಿಗೇ ಲಾಭ ಅನ್ನೋದನ್ನ ಕಲಿತ್ಕೋಬೇಕು.

ನಾವೂ ಅಷ್ಟೆ! ಕನ್ನಡೇತರರ ಜೊತೆ ಹೊರಗೆ ಊಟಕ್ಕೆ ಹೋದಾಗ ನಮ್ಮ ಆಹಾರಗಳನ್ನ ಅವರಿಗೆ ಪರಿಚಯಿಸೋ ಜವಾಬ್ದಾರಿ ತಗೋಬೇಕು. ನಮ್ಮ ಕನ್ನಡದ ಆಹಾರಕ್ಕೆ ಆದ್ಯತೆ ಕೊಡ್ಬೇಕು. ಹೊರಗಿನಿಂದ ಬಂದೋರಿಗೂ ಕನ್ನಡ ನಾಡಿನ ಆಹಾರ ಪದ್ದತಿಗಳಿಗೆ ಒಗ್ಗದೆ ಆರೋಗ್ಯವಿಲ್ಲ ಗುರು! ಊಟ-ತಿಂಡಿಯಲ್ಲೂ ಕನ್ನಡವೇ ಸತ್ಯ, ಅನ್ಯವೆನಲದೇ ಮಿಥ್ಯ ಗುರು! ಆಗೀಗ ಹಾಳು-ಮೂಳು ತಿಂದ್ರೆ ತಪ್ಪೇನಿಲ್ಲ. ಆದ್ರೆ ಹೊರಗೆ ಹೋದಾಗೆಲ್ಲಾ ತಿನ್ನಕ್ಕ ನಮ್ಮ ಕನ್ನಡದ ತಿಂಡಿ-ತಿನಿಸುಗಳು ಇಲ್ಲದೇ ಇರೋದು ನಮ್ಮ ಆರೋಗ್ಯಕ್ಕೆ ಸಕ್ಕತ್ ಹಾನಿಕರ ಗುರು. ಹೋಟೆಲಿಗರಿಗೆ ಇದನ್ನ ಅರ್ಥ ಮಾಡಿಸಬೇಕು, ಅಷ್ಟೆ.

ಬೊಮ್ಮಾಯಂಥೋರು ಇಲ್ಲದಿದ್ದರೆ ಇವತ್ತು ಕರ್ನಾಟಕ ಇರ್ತಿರಲಿಲ್ಲ

ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ. ಸೋಮಪ್ಪ ರಾಯಪ್ಪ ಬೊಮ್ಮಾಯಿಯವರು ನಿನ್ನೆ ರಾತ್ರಿ ತೀರಿಕೊಂಡಿದ್ದಾರೆ. ಈ ನಮ್ಮ ಕನ್ನಡ ನಾಡು ಹರಿದು ಹಂಚಿ ಹೋಗಿದ್ದಾಗ ನಾಡಿನಾದ್ಯಂತ ನಡೆದ ಅತಿಹಿರಿದಾದ ಒಂದು ಧ್ಯೇಯದ, ದೀರ್ಘವಾದ ಹೋರಾಟದ, ಕರ್ನಾಟಕ ಏಕೀಕರಣ ವೆನ್ನುವ ಯಜ್ಞದಲ್ಲಿ ತಮ್ಮ ಪಾಲಿನ ಹವಿಸ್ಸನ್ನು ಸಮರ್ಪಿಸಿದ್ದ ಈ ಹಿರಿಯರಿಗೆ ನಮ್ಮ ಶ್ರದ್ಧಾಂಜಲಿ. ಹಾಗೇ ಯಾವ ಶಿಕ್ಷಣ ಮತ್ತು ರಾಜಕೀಯ ವ್ಯವಸ್ಥೆಗಳು ಕರ್ನಾಟಕ ಏಕೀಕರಣದ ಇತಿಹಾಸವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಿ ನಮ್ಮನ್ನು ಕತ್ತಲೆಯಲ್ಲಿ ಇಟ್ಟಿವೆಯೋ ಅವುಗಳಿಗೆ ಧಿಕ್ಕಾರ, ಧಿಕ್ಕಾರ, ಧಿಕ್ಕಾರ!

ಕರ್ನಾಟಕ ಏಕೀಕರಣ ಮತ್ತು ಬೊಮ್ಮಾಯಿ

ಕರ್ನಾಟಕ ನಮಗೇನು ಬಿಟ್ಟಿ ಸಿಕ್ಕಿಲ್ಲ, ನಮ್ಮ ಹಿಂದಿನವರು ಜೀವಗಳನ್ನು ತೆತ್ತಿ ಎಡೆಬಿಡದೆ ಹೋರಾಡಿದ್ದರ ಫಲವೇ ಇಂದಿನ ಕರ್ನಾಟಕ. ಕನ್ನಡಿಗರಿಗೇಂತ್ಲೇ ಮೀಸಲಾದ ಒಂದು ರಾಜ್ಯ ಸಾಧ್ಯವಾಗಿರೋದು ಸಾವಿರಾರು ಹಿರಿಯರ ತ್ಯಾಗದಿಂದ ಅನ್ನೋದನ್ನು ಸದಾ ನೆನಪಿಟ್ಕೋಬೇಕು ಗುರು. ಆಲೂರ ವೆಂಕಟರಾಯರು, ಬೆನಗಲ್ ರಾಮರಾಯರು, ಕಡಪಾ ರಾಘವೇಂದ್ರ ರಾಯರು, ಮುದವೀಡು ಕೃಷ್ಣರಾಯರು, ಶಂಕರಗೌಡ ಪಾಟೀಲರು, ಹುತಾತ್ಮ ರಂಜಾನ್ ಸಾಬ್, ಕಯ್ಯಾರ ಕಿಞ್ಞಣ್ಣ ರೈ, ಅಂದಾನಪ್ಪ ದೊಡ್ಡಮೇಟಿಯವರಂತಹ ಅನೇಕ ವ್ಯಕ್ತಿಗಳು, ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಏಕೀಕರಣ ಪರಿಷತ್ತುಗಳಂತಹ ನಾನಾ ಸಂಘ ಸಂಸ್ಥೆಗಳು ಕನ್ನಡ ನಾಡಿನ ಒಗ್ಗೂಡುವಿಕೆಗೆ ದುಡಿದದ್ದನ್ನು ನಾವು ಕೃತಜ್ಞತೆಯಿಂದ ನೆನೆಯಬೇಕಾಗಿದೆ ಗುರು.

ನಾಡಿನ ಏಕೀಕರಣವನ್ನು ಒತ್ತಾಯಿಸಿ ನಡೆಯುತ್ತಿದ್ದ ಶಂಕರಗೌಡ ಪಾಟೀಲರ ಅಮರಣಾಂತ ಉಪವಾಸ ಸತ್ಯಾಗ್ರಹ 23 ದಿನಗಳನ್ನು ದಾಟಿ ಮುನ್ನಡೆದಿದ್ದ ಸಮಯದಲ್ಲಿಯೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯ ಸಭೆ ನಡೆದಿತ್ತು. ಆಗ ಅಲ್ಲಿಗೆ ದಾಳಿಯಿಟ್ಟ ಸಾವಿರಾರು ಏಕೀಕರಣ ಪರ ಹೋರಾಟಗಾರರು ಅಧ್ಯಕ್ಷರಾದ ಎಸ್. ನಿಜಲಿಂಗಪ್ಪನವರೂ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರಿಗೆ ಬಳೆ ತೊಡಿಸಿ ಚಪ್ಪಲಿ ಸೇವೆ ಮಾಡಿದಾಗ ನಡೆದ ಗೋಲಿಬಾರು ಏಕೀಕರಣದ ಹೋರಾಟದ ಪ್ರಮುಖವಾದ ಘಟನೆ. ಈ ಸಂದರ್ಭದಲ್ಲಿ ಬಂಧಿಸಲ್ಪಟ್ಟ ಹೋರಾಟಗಾರರ ಪರವಾಗಿ ಕಾನೂನು ಹೋರಾಟ ನಡೆಸಿ ಅವರ ಬೆಂಬಲವಾಗಿ ನಿಂತವರು ಶ್ರೀ. ಬೊಮ್ಮಾಯಿಯವರು. ಇವರಿಗೆ ನಮ್ಮ ಹೃದಯತುಂಬಿದ ಶ್ರದ್ಧಾಂಜಲಿಗಳು.

ಏಕೀಕರಣದ ಕತೆಯನ್ನ ಮುಚ್ಚಿಹಾಕಿರೋ ವ್ಯವಸ್ಥೆಗೆ ಧಿಕ್ಕಾರ!

ನಮ್ಮ ಕರ್ನಾಟಕ ರಾಜ್ಯವನ್ನ ಬಹಳ ಕಷ್ಟ ಪಟ್ಟು ನಾವು ಪಡೆದಿರೋದು ಗುರು. ಇದು ಯಾರೋ ನಮಗೆ ಬಿಸಾಕಿದ ಭಿಕ್ಷೆಯಲ್ಲ. ಈ ಹೋರಾಟಕ್ಕೆ, ಹೋರಾಟದ ಇತಿಹಾಸಕ್ಕೆ, ಅಂತಹ ಇತಿಹಾಸ ಕಟ್ಟಿದ ನಮ್ಮ ಹಿರಿಯರಿಗೆ ಸಿಗಬೇಕಾದ ಗೌರವ, ಮಾನ್ಯತೆ ನೀಡದಿದ್ದರೆ ನಾವು ನಾಡದ್ರೋಹಿಗಳಾಗ್ತೀವಿ ಗುರು! ಕರ್ನಾಟಕ ಏಕೀಕರಣದ ಬಗ್ಗೆ ನಾವೂ ತಿಳಿದುಕೊಂಡು, ನಮ್ಮ ಮಕ್ಕಳಿಗೂ ಕೂಗಿ ಕೂಗಿ ಹೇಳಬೇಕಿದೆ: "ಕರ್ನಾಟಕ ನಮಗೇನು ಬಿಟ್ಟಿ ಸಿಕ್ಕಿಲ್ಲ. ಸಾವಿರಾರು ಹಿರಿಯರು ತಮ್ಮ ಜೀವನವನ್ನು ತೆತ್ತು ನಮಗಾಗಿ ಕೊಡಿಸಿದ ನಮ್ಮದೇ ನಾಡು!" ಅಂತ!

ಏನು? ಕರ್ನಾಟಕ ಏಕೀಕರಣದ ಬಗ್ಗೆ ನೀವು ಏನೂ ಓದಿಲ್ಲ ಅಂದ್ರಾ? ಅದು ಆಶ್ಚರ್ಯವೇನಲ್ಲ. ಬಹಳ ವ್ಯವಸ್ಥಿತವಾಗೇ ಇತಿಹಾಸದ ಪುಟಗಳಿಂದ ನಮ್ಮ ನಾಡಿನ ಏಕೀಕರಣದ ಕತೆಯನ್ನ ಕಿತ್ತೆಸೆಯಲಾಗಿದೆ ಗುರು! ಆ ಶಿಕ್ಷಣ ವ್ಯವಸ್ಥೆಗೆ ಇವತ್ತು ಧಿಕ್ಕಾರ! ಆ ರಾಜಕೀಯ ವ್ಯವಸ್ಥೆಗೆ ಧಿಕ್ಕಾರ! ನಮ್ಮನ್ನು ನಮ್ಮ ನಾಡಿನ ಇತಿಹಾಸದಿಂದಲೇ ಮರೆಮಾಡಿದವರಿಗೆಲ್ಲಾ ಧಿಕ್ಕಾರ! ನಮ್ಮನ್ನು ಇಷ್ಟು ದಿನ ಕತ್ತಲಲ್ಲಿಟ್ಟ ಕೇಡುಗರಿಗೆಲ್ಲಾ ಧಿಕ್ಕಾರ! ನಮ್ಮ ನಾಡು ಐತಿಹಾಸಿಕ ಬಂಜರುಭೂಮಿ ಎಂದು ನಮಗನಿಸುವಂತೆ ಮಾಡಿರುವವರಿಗೆಲ್ಲಾ ಇವತ್ತು ಬರಬಾರದ್ದು ಬರ!

ಕರ್ನಾಟಕ ಏಕೀಕರಣದ ಕತೆ ಓದಿ ತಿಳ್ಕೊಳಕ್ಕೆ ನವಕರ್ನಾಟಕ ಪ್ರಕಾಶನದೋರು ಪ್ರಕಟಿಸಿರುವ ಡಾ. ಎಚ್. ಎಸ್. ಗೋಪಾಲರಾಯರ "ಕರ್ನಾಟಕ ಏಕೀಕರಣ ಇತಿಹಾಸ" ಅನ್ನೋ ಹೊತ್ತಗೆ ಕೊಂಡು ಓದಿ. ಬೆಂಗ್ಳೂರಲ್ಲಿ "ಅಂಕಿತ ಪುಸ್ತಕ"ದಲ್ಲಿ ಸಿಗತ್ತೆ.

ಚೂರು-ಪಾರಾದರೂ ಪೂಜೆಗೆ ಇಲ್ಲಿ ಕನ್ನಡವೇ ಭೂಷಣ!

ಮುಂಗಾರು ಮಳೆಯಲ್ಲಿ ಭರ್ಜರಿಯಾಗಿ ನಮ್ಮನ್ನು ನೆನೆಸಿದ್ದು ಇನ್ನೂ ಹಸಿ ಹಸಿಯಾಗಿರುವಾಗಲೇ ನಟಿ ಪೂಜಾ ಗಾಂಧಿ ಸೊಗಸಾಗಿ ಕನ್ನಡ ಕಲೀತಿದಾರೆ ಅಂತ ಎಲ್ಲೆಲ್ಲೂ ಸುದ್ದಿ ಕೇಳಿ ಸಕ್ಕತ್ ಖುಷಿಯಾಗ್ತಿದೆ ಗುರು!

powered by ODEO
ಪೂಜಾ ಗಾಂಧಿ (ಸಂಜನಾ ಗಾಂಧಿ) ಒಂದೇ ವರ್ಷದೊಳಗೆ ಕನ್ನಡ ಕಲಿತು, ಮಾಧ್ಯಮಗಳಿಗೆ ನೀಡ್ತಿರೋ ಸಂದರ್ಶನಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕನ್ನಡ ಮಾತಾಡ್ತಾ ಇದಾರೆ ಅನ್ನೋದು ನಾವು ಖುಷಿ ಪಡೋ ವಿಷಯ. ಈ ಸಂದರ್ಭದಲ್ಲಿ ಔರು ಆಡೋ ತಪ್ಪು ತಪ್ಪು ಮಾತುಗಳೂ ಕೂಡಾ ನಮಗೆ ಆಪ್ತವೆನ್ನಿಸುತ್ತವೆ. ಒಟ್ನಲ್ಲಿ ತಾನು ವಲಸೆ ಬಂದ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕಾದ ಅಗತ್ಯವನ್ನು ಈ ಜಾಣೆ ಬೇಗ ಅರ್ಥ ಮಾಡ್ಕೊಂಡು ಉಳಿದವರಿಗೆ ಮಾದರಿಯಾಗಿದಾಳೆ ಗುರು...

ಈಕೆ ಮೊನ್ನೆ ಮೊನ್ನೆ ದೂರದರ್ಶನದ ಒಂದು ಕಾರ್ಯಕ್ರಮದಲ್ಲಿ ಮಾತಾಡ್ತಾ... ಇಲ್ಲಿನ ಭಾಷೆ, ಸಂಸ್ಕೃತಿಗಳನ್ನು ಕಲಿತರೆ ತಾನೆ ಇಲ್ಲಿನ ಜನ ಅರ್ಥ ಆಗೋದು, ಹಾಗಾದಾಗ್ಲೆ ತಾನೆ ಮನಮುಟ್ಟುವಂತೆ ಅಭಿನಯಿಸಕ್ಕೆ ಆಗೋದು ಅಂತ ಹೇಳಿದಾರೆ. ಎಷ್ಟು ನಿಜವಾದ ಮಾತು ಗುರು! ಕರ್ನಾಟಕಕ್ಕೆ ವಲಸೆ ಬಂದಿರೋರಿಗೆಲ್ಲಾ ಈ ಬುದ್ಧಿ ಇರಬೇಕಾಗಿರೋದೇ ಸಹಬಾಳ್ವೆಯ ಮೂಲಮಂತ್ರ ಅಲ್ವಾ ಗುರು?

ವಲಸಿಗರಿಗೆ ಕನ್ನಡ ಮಾತಾಡಕ್ಕೆ ಪ್ರೋತ್ಸಾಹ ಕೊಡಬೇಕು

ವಲಸಿಗರು ಹೊಸ ಭಾಷೆ ಕಲಿತು ಮಾತಾಡಕ್ ಶುರು ಮಾಡ್ದಾಗ ನಾವು ಕನ್ನಡಿಗರು (ಅದರಲ್ಲೂ ಪೇಟೆಯೋರು) ಸಾಮಾನ್ಯವಾಗಿ "ಪಾಪ, ಕಷ್ಟ ಪಟ್ಕೊಂಡು ಮಾತಾಡ್ತಾ ಇದಾರೆ" ಅಂತ್ಲೋ "ಅತಿಥಿ ದೇವೋ ಭವ" ಅಂತ್ಲೋ "ಹೊರಗಿನವರಿಗೆ ಅನುಕೂಲ ಮಾಡಿಕೊಡಬೇಕು" ಅಂತ್ಲೋ "ಬೇರೆ ಬೇರೆ ಭಾಷೆ ಜನಾ ಸೇರಿದ್ದಾಗ ಎಲ್ರುಗೂ ಅರ್ಥ ಆಗೋ ಭಾಷೇಲೆ ಮಾತಾಡ್ಬೇಕು" ಅಂತ್ಲೋ ಇಂಗ್ಲಿಷ್ನೋ ಅವರದೇ ಭಾಷೇನೋ ಕಲಿತು ಬಳಸೋ ಭರದಲ್ಲಿ ಕನ್ನಡ ಕಲಿಸೋದ್ನ ಮರ್ತೇ ಬಿಡೋದು ವಾಡಿಕೆ. ಅವರ ಎದುರಲ್ಲಿ ಕನ್ನಡದವರ ಜೊತೇನೂ ಬೇರೆ ಭಾಷೇಲಿ ಮಾತಾಡಿಬಿಡೋದು ಕನ್ನಡಿಗರ ಮನೆಗೆ-ಮಾರಿ ಪರರಿಗೆ ಅಪಕಾರಿ ಬುದ್ಧಿ ಗುರು!

ಆದರೆ ಹೇಗೆ ಪೂಜಾ ಗಾಂಧಿ ತಪ್ಪು ತಪ್ಪಾಗಿಯೇ ಕನ್ನಡ ಮಾತಾಡುದ್ರೂ ಪ್ರೀತಿಯಿಂದ ಖುಷಿ ಪಟ್ಕೊಂಡು ಮೆಚ್ಕೋತೀವೋ ಹಾಗೆ ನಮ್ಮ ನಡುವಿನ ಪರಭಾಷಿಕ ಕನ್ನಡದಲ್ಲಿ ಮಾತಾಡೋಕೆ ಪ್ರಯತ್ನ ಪಟ್ಟಾಗಲೂ ಬೆನ್ನು ತಟ್ಟಿ ಪ್ರೋತ್ಸಾಹ ಕೊಡ್ಬೇಕೇ ಹೊರತು ತಮಾಷೆ ಮಾಡಬಾರದು, ಇಲ್ಲಾ ಕನ್ನಡ ಮರೆತು ಇಂಗ್ಲೀಷಲ್ಲೋ ಅವರದೇ ಭಾಷೆಯಲ್ಲೋ ಮಾತಾಡಬಾರದು ಗುರು! ಪರಭಾಷಿಕನಿಗೆ ಇದು ಕನ್ನಡ ನಾಡು, ಇಲ್ಲಿ ಕನ್ನಡ ಕಲಿಯೋದ್ರ ಮೂಲಕವೇ ತನ್ನ ಏಳಿಗೆ ಅನ್ನೋದನ್ನು ಮನವರಿಕೆ ಮಾಡಿಕೊಡೋ ಹಾಗೆ ನಾವು ನಡ್ಕೋಬೇಕು ಗುರು! ಕನ್ನಡದಲ್ಲಿ ಮಾತಾಡೋದು ಸರಿಯಾದ ನಡವಳಿಕೆ ಅಲ್ಲಾ ಅನ್ನೋ ಭ್ರಮೇನ ಕಳಚಿ ಒಗೀಬೇಕು ಗುರು!

ನಾಮಫಲಕಗಳ ಕನ್ನಡೀಕರಣ: ಮಂತ್ರಕ್ಕಿಂತ ಉಗುಳೇ ಹೆಚ್ಚು!

ಹೆಚ್ಚೂ-ಕಡಿಮೆ ಒಂದು ವರ್ಷದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆ ವರ್ಷದ ನವೆಂಬರ್ ಒಂದನೇ ತಾರೀಕಿನ ಒಳಗೆ ಬೆಂಗಳೂರಿನ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಪೂರ್ತಿ ಅನುಷ್ಠಾನ ಆಗಬೇಕು ಅಂತ ಗಡುವು ಹಾಕಿತ್ತು. ಅವತ್ತು ಬುಸುಗುಟ್ಟಿದ್ದ ಆ ಹಾವು, ಇವತ್ತಿನ ತನಕ ಕಚ್ಚಿಲ್ಲ ಅನ್ನೋದೇ ಸ್ವಾರಸ್ಯ ಗುರು!

"ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಬರೀ "ಕನ್ನಡ ವರದಿ ಪ್ರಾಧಿಕಾರ" ಆಗಿದ್ದರೆ ಸುಖವಿಲ್ಲ

ನಮ್ಮ ಸರ್ಕಾರ 1992ರ ಜುಲೈ 6ನೇ ತಾರೀಕು ಒಂದ್ ಆದೇಶ ಹೊರಡ್ಸೋ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರನ ಹುಟ್ ಹಾಕ್ತು. ಈ ಸಂಸ್ಥೆಯ ಉದ್ದೇಶಗಳೇನಪ್ಪಾ ಅಂದ್ರೆ [ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ 'ಕನ್ನಡ-ಕನ್ನಡಿಗ-ಕರ್ನಾಟಕ' ಹೊತ್ತಿಗೆ] -
 • ರಾಜ್ಯ ಸರ್ಕಾರದ ಭಾಷಾ ನೀತೀನ ಅನುಷ್ಠಾನಕ್ ತರಕ್ಕೆ ಕಾರ್ಯವಿಧಾನ ರೂಪಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಜಾರಿಗೊಳಿಸಕ್ಕೆ ಕ್ರಮ ತೊಗೊಳ್ಳೋದು
 • ಕನ್ನಡವನ್ನ ಆಡಳಿತ ಭಾಷೆ ಮಾಡಕ್ಕಿರೋ ಅಡ್ಡಿ ಆತಂಕ ಗುರುತ್ಸಿ ಸರ್ಕಾರಕ್ಕೆ ಅದ್ನ ನಿವಾರ್ಸೋ ಸಲಹೆ ಕೊಡೋದು
 • ಕನ್ನಡ ಅನುಷ್ಠಾನ ಸರ್ಯಾಗಿ ಆಗಿಲ್ಲದಿದ್ದರೆ ಅಂಥೋರ ಮೇಲೆ ಕ್ರಮ ತೊಗೊಳ್ಳಿ ಅಂತ ಸರ್ಕಾರಕ್ಕೆ ವರದಿ ಕೊಡೋದು.

ಕ.ಅ.ಪ್ರಾ.ದ ವ್ಯಾಪ್ತಿಗೆ ಸರ್ಕಾರ ಮತ್ತದರ ಅಧೀನ ಸಂಸ್ಥೆಗಳು ಬರ್ತವೆ. ಕನ್ನಡ ಅನುಷ್ಠಾನಕ್ ಸಂಬಂಧಿಸಿದ ಹಾಗೆ ಕಾಲಕಾಲಕ್ಕೆ ಸರ್ಕಾರ ವಹಿಸೋ ಎಲ್ಲ ವಿಷ್ಯಗಳೂ ಬರ್ತವೆ. ಆದ್ರೆ ಈ ಪ್ರಾಧಿಕಾರಕ್ಕೆ ಸಲಹೆ, ವರದಿ ಕೊಡುವ ಅಧಿಕಾರವಿದೆಯೇ ಹೊರ್ತು ಕ್ರಮ ತೊಗೊಳ್ಳೋ ಅಧಿಕಾರ ಇಲ್ಲ ಗುರು! ಆದ್ದರಿಂದ ಪ್ರಾಧಿಕಾರ ಏನು ಬಡ್ಕೊಂಡ್ರೂ ಜನ ಹಾಡು-ಹಗಲಲ್ಲೇ ಅದನ್ನ ಉಲ್ಲಂಘನೆ ಮಾಡ್ತಾನೇ ಇರ್ತಾರೆ ಗುರು!

ಕನ್ನಡ ನಾಮಫಲಕ ಮತ್ತು ಸರಕಾರದ ಆದೇಶ

24-ಎ, ನಾಮಫಲಕ ಪ್ರದರ್ಶನ ಅನ್ನೋ ಒಂದು ಆದೇಶದಲ್ಲಿ ದಿನಾಂಕ 11.01.1985ರಲ್ಲಿ ಕರ್ನಾಟಕದಲ್ಲಿ ಇರೋ ಎಲ್ಲ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕ ಕನ್ನಡದಲ್ಲೇ ಇರಬೇಕು, ಅಕಸ್ಮಾತ್ ಬೇರೆ ಭಾಷೆ ಬಳ್ಸೋ ಪ್ರಮೇಯ ಇದ್ದಲ್ಲಿ ಮೊದಲು ದೊಡ್ಡದಾಗಿ ಕನ್ನಡದಲ್ಲಿ, ಅದರ ಕೆಳಗೆ ಇತರೆ ಭಾಷೇಲಿ ಬರೀಬೇಕು ಅನ್ನುತ್ತೆ ಆ ಆದೇಶ. ಇದನ್ನ ಜಾರಿಗೆ ತರಬೇಕು ಅನ್ನೋ ದೃಷ್ಟಿಯಿಂದಲೇ ಕ.ಅ.ಪ್ರಾ.ದ ಅಧ್ಯಕ್ಷರು ಅಂಥ ಒಂದು ಹೇಳಿಕೆ ಕೊಟ್ಟಿರೋದು. ತಮಾಷೆ ಅಂದ್ರೆ ಇದಕ್ಕೆ ತಪ್ಪಿದರೆ ತೆರಬೇಕಾದ ದಂಡ ಬರೀ 50 ರೂಪಾಯಿ (1985ರಲ್ಲಿ)! [ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ 'ಕನ್ನಡ-ಕನ್ನಡಿಗ-ಕರ್ನಾಟಕ' ಹೊತ್ತಿಗೆ]

ಪ್ರಾಧಿಕಾರ ಹೇಳಿದ್ದು ನಿಜಕ್ಕೂ ಜಾರಿಗೆ ಬರಬೇಕಾದರೆ ಏನೇನಾಗಬೇಕು?

ನಿಜವಾಗ್ಲೂ ಈ ಆದೇಶ ಸರಿಯಾಗಿ ಜಾರಿಯಾಗಬೇಕಾದ್ರೆ ಎರಡು ಕೆಲಸ ಆಗಬೇಕು ಗುರು! ಮೊದಲನೇದು ನಗರ ಪಾಲಿಕೆಗಳಿಗೆ, ವಿಧಾನ ಸಭೆಯಲ್ಲಿನ ಶಾಸಕಾಂಗಕ್ಕೆ ಇಂಥಾ ವಿಷಯದಲ್ಲಿ ಕ್ರಮ ತೊಗೊಳ್ಳೋ, ಕಾನೂನು ಮಾಡೊ ಅಧಿಕಾರ ಇದೆ ಗುರು! ಇಲ್ಲೆಲ್ಲಾ ಕನ್ನಡದ ಬಗ್ಗೆ ಕಾಳಜಿಯಿರೋ ಜನ ಕುಂತ್ರೆ ಕೆಲ್ಸ ಸಲೀಸು. ಹಾಗೆ ಕೂರೋ ಹಾಗ್ ಮಾಡೊ ಶಕ್ತಿ ಇರೋದೂ ಕೂಡಾ ನಮಗೇನೆ.

ಎರಡನೇ ಕೆಲಸ ಅಂದರೆ ಗ್ರಾಹಕನೇ ದೇವ್ರು ಅನ್ನೋ ಅಸ್ತ್ರಾನ ನಾವೂ ನೀವೂ ಸರಿಯಾಗ್ ಬಳಸಿ ಕನ್ನಡದಲ್ಲೇ ಸೇವೆ ಕೊಡಿ ಅಂತಾ ಒತ್ತಾಯಿಸ್ಬೇಕು. ಕನ್ನಡದಲ್ಲಿ ವ್ಯವಹರಿಸ್ದೆ ಇದ್ರೆ, ಕನ್ನಡ ನಾಮಫಲಕ ಹಾಕ್ದೆ ಇದ್ರೆ ನಿಮ್ಮ ಅಂಗಡೀಗೆ ಬರಲ್ಲ ಅನ್ನೋ ಸಂದೇಶ ಕೊಡ್ಬೇಕು. ಹೋದಲ್ಲೆಲ್ಲಾ ಕನ್ನಡದಲ್ಲೇ ಮಾತಾಡಬೇಕು.

ಸರಿಯಾದ್ ಅಧಿಕಾರ ಕೊಡ್ದೆ ಒಂದಲ್ಲ ನೂರು ಪ್ರಾಧಿಕಾರಗಳನ್ನು ಹುಟ್ ಹಾಕುದ್ರೂ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನ ಸಾಧ್ಯಾನಾ ಗುರೂ? ಈ ನಾಮಫಲಕದ ಒಂದು ಸಣ್ಣ ನಿಯಮ ಅನುಷ್ಠಾನ ಮಾಡಕ್ಕೆ ಅಂಗಡಿ-ಮುಂಗಟ್ಟುಗಳಿಗೆ ಪರವಾನಿಗೆ ಕೊಡೋ ಮಹಾನಗರ ಪಾಲಿಕೆ, ಕನ್ನಡತನ ಕಾಪಾಡಕ್ಕೇ ಇರೋ ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ಸಚಿವರು, ನಮ್ಮನ್ನಳೋ ಸರ್ಕಾರಗಳು, ಎಲ್ಲಕ್ಕಿಂತ ಹೆಚ್ಚಿನದಾಗಿ ನಾವೂ ನೀವೂ ಒಟ್ಟಾಗಿ ಸೇರುದ್ರೆ ಸಾಧ್ಯ ಆಗಲ್ಲ ಅಂತೀರಾ?

ಮುಂದಿನ ಮಹಾನಗರ ಪಾಲಿಕೆ ಚುನಾವಣೆ: ಒಂದು ಒಳ್ಳೇ ಅವಕಾಶ

ಈಗ ಒಂದು ಸುಲಭದ ಅವಕಾಶ ನಮ್ಗೆ ಒದಗಿ ಬಂದಿದೆ. ಇನ್ನೇನು ಸಧ್ಯದಲ್ಲೇ ಮಹಾನಗರ ಪಾಲಿಕೆ ಚುನಾವಣೆಗಳು ನಡ್ಯೋದ್ರಲ್ಲಿವೆ. ನಮ್ಮ ರಾಜಕೀಯ ಪಕ್ಷಗಳು ಇಂಥಾ ಒಂದು ಕನ್ನಡ ಅನುಷ್ಠಾನದ ಭರವಸೇನ ತಮ್ಮ ಪ್ರಣಾಳಿಕೇಲಿ ಸೇರಿಸಬೇಕು ಅಂತ ಒತ್ತಾಯ್ಸೋಣ. ಯಾರು ಕನ್ನಡದ ಹಿತ ಕಾಪಾಡಕ್ಕೆ ಬದ್ಧರಾಗಿರ್ತಾರೋ ಅಂಥೋರಿಗೇ ನಮ್ಮ ಮತ ಹಾಕೋಣ. ಬರೀ ಉಗುಳೇ ಆಯಿತಲ್ಲ, ಮಂತ್ರ ಎಲ್ಲಿ ಅಂತ ಕೇಳೋಣ! ಏನ್ ಗುರು?

ಪ್ರವಾಸೋದ್ಯಮಕ್ಕೆ ನಮ್ಮತನವೇ ಸರಕು

ಕೊನೆಗೂ ಮೈಸೂರಲ್ಲಿ ಪ್ರವಾಸೋದ್ಯಮಕ್ಕೆ ಸರಿಯಾಗಿ ಪ್ರೋತ್ಸಾಹ ಕೊಟ್ಟು ಒಂದು ಸಕ್ಕತ್ತಾಗಿರೋ "ಬ್ರಾಂಡ್ ಇಮೇಜ್" ಕೊಡಬೇಕು ಅಂತ ಅಧಿಕಾರಿಗಳು ತೀರ್ಮಾನ ತೊಗೊಂಡಿದಾರೆ ಅಂತ ಇವತ್ತಿನ ದಿ ಹಿಂದು ನಲ್ಲಿ ವರದಿ. ನಮ್ಮತನಕ್ಕೆ ಕೊನೆಗೂ ಮಾರುಕಟ್ಟೆ ಇದೆ ಅಂತ ನಮ್ಮ ತಲೆಯೊಳಗೆ ಹೋಗ್ತಿರೋದು ನಿಜಕ್ಕೂ ಒಳ್ಳೇ ಬೆಳವಣಿಗೆ ಗುರು!

ಪ್ರವಾಸೋದ್ಯಮ ಬೆಳೆಸಬೇಕಾದ್ರೆ ನಮ್ಮತನವೇ ಮುಖ್ಯ
ಮೈಸೂರಿಗೆ ಪ್ರವಾಸಕ್ಕೆ ಬರೋ ಜನ ನಮ್ಮತನವನ್ನ ನೋಡಕ್ಕೆ ಇಷ್ಟ ಪಡ್ತಾರೇ ಹೊರತು ಅವರತನವನ್ನಲ್ಲ. ಬರೀ ಅರಮನೆ, ಹಳೇ ಕಟ್ಟಡಗಳು ಮಾತ್ರ ಅಲ್ಲ, ಮೈಸೂರಿನ ಚಿಕ್ಕಚಿಕ್ಕ ವಿಶೇಷತೆಗಳ್ನ ಮೆರೆಸಬೇಕು ಅಂತ ಕೊನೆಗೂ ಅರ್ಥವಾಗಿದೆಯಲ್ಲ ಅಂತ ಸಕ್ಕತ್ ಖುಷಿಯಾಗ್ತಿದೆ ಗುರು! ನಮ್ಮತನವನ್ನ ಬಿಟ್ಕೊಡ್ತಾ ಹೋದಷ್ಟೂ ಪ್ರವಾಸಿಗರು ಕಡ್ಮೆ ಆಗ್ತಾ ಹೋಗ್ತಾರೆ ಅಂತ ನಮಗೆ ಗೊತ್ತಾಗಿದೆಯಲ್ಲ, ಅದು ಒಳ್ಳೇದು ಗುರು!

ಮೈಸೂರುಪಾಕ್, ಮೈಸೂರು ಮಲ್ಲಿಗೆ, ಮೈಸೂರು ರೇಶ್ಮೆ, ಮೈಸೂರು ಪೇಟ, ಮೈಸೂರೆಲೆ (ವಿಳ್ಳೇದೆಲೆ), ಮೈಸೂರು ಕರಕುಶಲಕಲೆ, ಮೈಸೂರು ಚಿತ್ರಕಲೆ - ಇವುಗಳ್ನ ಕೊನೆಗೂ ಹೊರರಾಜ್ಯದೋರ ಮುಂದೆ, ವಿದೇಶೀಯರ ಮುಂದೆ ತಂದಿಡೋದು ಕೀಳರಿಮೆಯೇನಲ್ಲ, ಬದಲಾಗಿ ಅದನ್ನ ನೋಡಕ್ಕೆ ಔರು ಇಷ್ಟ ಪಡ್ತಾರೆ ಅಂತ ಅರ್ಥವಾಗಿದೆಯಲ್ಲ ನಮಗೆ, ಇದು ಸಕ್ಕತ್ ಸರಿಯಾಗಿದೆ ಗುರು!

"ಬೇರೇದನ್ನ" ನೋಡಕ್ಕೇ ಜನ ಎಲ್ಲೀಗೇ ಆಗ್ಲಿ ಪ್ರವಾಸಕ್ಕೆ ಹೋಗೋದು. ಹೋಟೆಲಲ್ಲಿ ಬ್ರೆಡ್ಡು-ಬೆಣ್ಣೆ ತಿನ್ನಕ್ಕೆ ಬರಲ್ಲ ಔರು, ಇಡ್ಲಿ-ದೋಸೆಗಳ್ನ ತಿನ್ನಕ್ಕೆ. ಏನೋ ಹೊಸದನ್ನ ನೋಡಕ್ಕೆ ಬರ್ತಾರೇ ಹೊರತು ಅವರ ದೇಶದಲ್ಲೇ, ಅವರ ರಾಜ್ಯದಲ್ಲೇ ಸಿಗೋದನ್ನಲ್ಲ.

ನಮ್ಮ ಭಾಷೆಗೂ ಮಾರುಕಟ್ಟೆ ಇದೆ ಅನ್ನೋದನ್ನ ಮರೀಬಾರದು

ಪ್ರವಾಸ ಬರೋರಿಗೆ ಹೋದ ಜಾಗದ ಭಾಷೆ ಕೇಳಿಬರೋದು, ಕಾಣಬರೋದೂ ಬಹಳ ಮುಖ್ಯ ಗುರು. ಇವೂ ಪ್ರವಾಸಿಗರ ಮನಸ್ಸಿನಲ್ಲಿ ಆ ಜಾಗದ ವಿಶೇಷತೆಯನ್ನ ಹೆಚ್ಚಿಸುತ್ತೆ ಗುರು. ಇಂಗ್ಲೀಷಲ್ಲೂ ಸೂಚನೆಗಳು ಇರ್ಲಿ, ಆದ್ರೆ ಮೊಸ್ರನ್ನದ ತುಂಬಾ ಉಪ್ಪಿನಕಾಯಿ ಆದಂಗೆ ಬರೀ ಇಂಗ್ಲೀಷೇ ಆದರೆ ಪೆದ್ದತನ ಗುರು! ಇಂಗ್ಲೀಷ್ನ ಎಲ್ಲಿಡಬೇಕೋ ಅಲ್ಲಿಡಬೇಕೇ ಹೊರತು ತಲೇಮೇಲಿಟ್ಕೋಬಾರದು! ಮೈಸೂರೆಲೆ ಮಾರೋ ಕಡೆ "Beetle leaf" ಅಂತ ದೊಡ್ಡದಾಗಿ ಹಾಕಿ ಕನ್ನಡವನ್ನೇ ಮರೀಬಾರದು, ಅಥವಾ ಹಿಂದೀ ಹುಚ್ಚಿನಲ್ಲಿ "ಪಾನ್" ಅಂತ ಬರೀಬಾರದು ಗುರು! ಅದು ಪೆದ್ದತನವಾದೀತು!

ಇದನ್ನ ಅರ್ಥ ಮಾಡ್ಕೊಂಡಿದಾರಾ ನಮ್ಮ ಅಧಿಕಾರಿಗಳು? ಅಥವಾ ಕನ್ನಡದಲ್ಲಿ ಏನಾದ್ರೂ ಮಾತಾಡಿದರೆ, ಕನ್ನಡದಲ್ಲಿ ಏನಾದರೂ ಸೂಚನೆಗಳ್ನ ಹಾಕಿದರೆ ಜನಕ್ಕೆ ಬೇಜಾರಾಗತ್ತೆ ಅಂತ ಇನ್ನೂ ಅನ್ಕೊಂಡಿದಾರೋ? ಈ ಒಂದು ಪೆದ್ದತನಾನ ಮೀರ್ತಾರಾ ನಮ್ಮ ಮೈಸೂರಿನ ಅಧಿಕಾರಿಗಳು? ಕಾದು ನೋಡೋ ಬದ್ಲು ಹೋಗಿ ಔರಿಗೆ ಕನ್ನಡವನ್ನ ಮೆರಸಕ್ಕೆ ಹಿಂಜರೀಬೇಡಿ ಅಂತ ಹೇಳೋಣ್ವಾ ಗುರು?

ಕನ್ನಡಿಗರ ಕೀಳರಿಮೆಗೊಂದು ಆಸ್ಪತ್ರೆ!

ನಮ್ ಬೆಂಗಳೂರಿನ ಬಸವನಗುಡೀಲಿರೋ ಶೇಖರ್ ಆಸ್ಪತ್ರೆ ಒಂದು ಮಾದರಿ ಆಸ್ಪತ್ರೆ ಗುರು! ಕನ್ನಡ ನಾಡಿನ ಎಲ್ಲ ವ್ಯವಸ್ಥೇನೂ, ಸೌಕರ್ಯಾನೂ ಪರಭಾಷಿಕರ ಪಾದಸೇವೆಗೇ ಮೀಸಲು ಅನ್ಕೊಂಡಿರೋಂಥಾ ಕನ್ನಡಿಗರಿಗೆ ಈ ಆಸ್ಪತ್ರೆ ಒಂದು ಪಾಠ ಗುರು!
ಹ್ಯಾಗೆ ಅಂತೀರಾ?

"ನಮ್ಮ ನಾಡಿನ ಅನುಕೂಲಗಳು ನಮಗಲ್ಲ, ನಮ್ಮ ಸ್ಥಳಗಳು ನಮ್ಮದಲ್ಲ ; ಇಲ್ಲಿ ನಾವೇ ಅಪರಿಚಿತರು, ನಮ್ಮ ಕನ್ನಡ ಭಾಷೆ ಬರೀ ಅಡಿಗೆಮನೆಗೆ ಮೀಸಲು" ಅನ್ಸೋ ವಾತಾವರಣಾನ ಬೆಂಗಳೂರಲ್ಲಿ ಕೀಳರಿಮೆ-ಕನ್ನಡಿಗರು ತಾವೇ ತರ್ತಾ ಇರೋವಾಗ.... ಬಸವನಗುಡಿ ರಸ್ತೇಲಿರೋ ಈ ಆಸ್ಪತ್ರೆ ಬೆಂಗಳೂರು ನಿಜವಾಗಲೂ ಕನ್ನಡದೋರ್ದು ಅನ್ನೋದನ್ನ ಮತ್ತೆ ನೆನಪಿಸಿಕೊಡೋದು ಮಾತ್ರಾ ಹದಿನಾರಾಣೆ ನಿಜಾ ಗುರು!

ಆಸ್ಪತ್ರೆ ಹೆಸರಿನ ನಾಮಫಲಕ ಮುಖ್ಯರಸ್ತೆ ಕಡೆ ದೊಡ್ಡದಾಗಿ ಹೊಳೆಯೋ ನಿಯಾನ್ ದೀಪಗಳಿಂದ ಹೇಗ್ ಕಂಗೊಳುಸ್ತಿದೆ ನೋಡೂ ಗುರೂ... ಒಳಗ್ ಬರ್ತಿದ್ ಹಾಗೆ ನಿಮ್ ಕಣ್ಣು, ಹೃದಯ ತುಂಬ್ಸೋದು 'ಕನ್ನಡಕ್ಕೆ ಆದ್ಯತೆ' ಅನ್ನೋ ಆತ್ಮೀಯ ಫಲಕ.

ಈ ಆಸ್ಪತ್ರೆಯ ಹೆಚ್ಚಿನ ಸಿಬ್ಬಂದಿಗಳು ಕನ್ನಡಿಗರು, ಇವರ ಜೊತೆ ಇರೋ ಕೆಲ ಪರಭಾಷಾ ಸಿಬ್ಬಂದಿಗಳಿಗೂ ಕನ್ನಡ ಬರುತ್ತೆ. ಯಾಕೇಂದ್ರೆ ಇಲ್ಲಿ ಕೆಲ್ಸ ಬೇಕು ಅಂದ್ರೆ ಕನ್ನಡ ಕಲಿತಿರ್ಲೇಬೇಕು ಗುರೂ...ಇಲ್ಲಿನ ಎಲ್ಲ ತಜ್ಞ ವೈದ್ಯರುಗಳೂ ಕನ್ನಡಿಗರು ಅಥವಾ ಕನ್ನಡ ಬಲ್ಲವರೇ ಆಗಿದ್ದಾರೆ.

ಈ ವಾತಾವರಣಕ್ಕೆ ಕಾರಣ ಈ ಆಸ್ಪತ್ರೆಯ ಯಜಮಾನರಾದ ಡಾ. ಪಿ.ವಿಷ್ಣುಮೂರ್ತಿ ಐತಾಳ್ ಅವರು. ಮೂಳೆತಜ್ಞರಾದ ಐತಾಳರು ಕನ್ನಡದ ಬಗ್ಗೆ ಹೊಂದಿರೋ ಅಭಿಮಾನ ಮತ್ತು ಸುತ್ತಮುತ್ತಲ ಜನರಿಗೆ ಅರ್ಥವಾಗೋ ಭಾಷೇಲೇ ಸೇವೆ ಕೊಡಬೇಕು ಅನ್ನೋ ಸಾಮಾನ್ಯ ಜ್ಞಾನಾನ ಔರು ಉಳಿಸಿಕೊಂಡು ಬಂದಿರೋದೇ, ಇವತ್ತು ಅವರ ಆಸ್ಪತ್ರೇಲಿ ಕನ್ನಡ ಮೆರೆಯೋದಕ್ಕೆ ಕಾರಣ. ರೋಗಿಗಳಿಗೆ ತಮ್ಮ ರೋಗದ ಜೊತೆ ಹೊಡೆದಾಡೋದ್ರ ಜೊತೆಗೆ ಯಾವುದೋ ಹೊರದೇಶದ ಭಾಷೆ ಜೊತೆಗೆ ಹೋರಾಡೋದು ತಪ್ತಿರೋದು ಸಕ್ಕತ್ ಒಳ್ಳೇದು ಗುರು! ಮುಂದಿನ ದಿನಗಳಲ್ಲಿ ಇಲ್ಲಿ ಬಳಸುವ ಅರ್ಜಿಗಳು, ನಮೂನೆಗಳು... ಹೀಗೆ ಎಲ್ಲವನ್ನು ಕನ್ನಡದಲ್ಲಿ ಮಾಡಿಸುವ ಉತ್ಸಾಹವನ್ನು ಆಡಳಿತ ಮಂಡಲಿ ಹೊಂದಿದೆ ಅಂತ ಆಡಳಿತಾಧಿಕಾರಿ ಶ್ರೀಧರ್ ಹೇಳ್ತಾರೆ.

ಕೊನೆ ಗುಟುಕು

ಅಲ್ಲಾ... ಒಂದು ಸಂಸ್ಥೆ ಸರ್ಯಾಗಿ ಇರಬೇಕಾದ್ರೆ ಯಜಮಾನ ನೆಟ್ಟಗಿರಬೇಕು ಅನ್ನೋದು ಹೇಗೆ ನಿಜವೋ ಹಾಗೇ ಈ ನಮ್ಮ ನಾಡು ಸರಿಯಾಗಿರಬೇಕಾದ್ರೆ ನಮ್ನ ಆಳೋ (ಇಲ್ಲವೇ ಆಳಬೇಕೂಂತಿರೋ) ರಾಜಕಾರಣಿಗಳು ನೆಟ್ಟಗಿರಲೇಬೇಕು ಅನ್ನೋದು ಸ್ಪಷ್ಟ ಗುರು! ಕನ್ನಡದ ಬಗ್ಗೆ ತಾವೇ ಕೀಳರಿಮೆ ಇಟ್ಕೊಂಡಿರೋ ನಮ್ಮ ರಾಜಕಾರಣಿಗಳು ಈ ಆಸ್ಪತ್ರೆಗೆ ಹೋಗಿ ಒಸಿ ಚಿಕಿತ್ಸೆ ಮಾಡಿಸಿಕೊಳೋದು ಲೇಸು ಗುರು!

ನಾವು ಕೀಳು ಜನ ಅಲ್ಲ, ಕೀಳರಿಮೆ ಜನ!

ಮೊನ್ನೆಮೊನ್ನೆ ಪ್ರಜಾವಾಣೀಲಿ ಬಂದ ವರದಿ ಪ್ರಕಾರ ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಮಾಡಿದರೆ ಉನ್ನತ ಹುದ್ದೆಗಳಿಗೆ ಏರಕ್ಕೆ ತೊಂದರೆಯೇನಿಲ್ಲ ಅಂತ ನ್ಯಾಯಾಧೀಶರು ಅಭಿಪ್ರಾಯ ನೀಡಿದಾರೆ. ಇದು ನಿಜ, ಗುರು. ಕನ್ನಡ ಮಾಧ್ಯಮದಲ್ಲಿ ಓದಿದರೆ ಏನೋ ಊನವಾಗಿಹೋಗತ್ತೆ ಅಂತ ಕನ್ನಡಿಗರು (ಹೆಚ್ಚಾಗಿ ನಗರಗಳಲ್ಲಿರೋರು) ಅಂದುಕೊಂಡಿರೋದು ಅವೈಜ್ಞಾನಿಕ. ಇದು ಇಡೀ ಕರ್ನಾಟಕ ಸೇರಿ ನಿಧಾನವಾಗಿ ತೊಗೋತಿರೋ ವಿಷ.

ವಿಶ್ವ ಸಂಸ್ಥೆಯ ಸಂಶೋಧನೆಯ ಪ್ರಾಕಾರವೂ ತಾಯ್ನುಡಿಯಲ್ಲಿ ಕಲಿಕೆ ಬಹುಮುಖ್ಯ. ಜರ್ಮನಿ, ಜಪಾನ್, ಚೀನ ಮುಂತಾದವುಗಳ ಏಳ್ಗೆ-ಸಾಧನೆಗಳ ಹಿಂದೆ ದೊಡ್ಡದೇನು ಗುಟ್ಟಿಲ್ಲ ಗುರು. ಇವರೆಲ್ಲರ ಶಿಕ್ಷಣ ವ್ಯವಸ್ಥೆ ಅವರವರ ತಾಯ್ನುಡಿಯಲ್ಲಿಯೇ ಇದೆ ಅನ್ನೋದೇ ಅವರ ಏಳ್ಗೆಗೆ ಅತಿಮುಖ್ಯವಾದ ಕಾರಣ. ಇಂತಹ ವ್ಯವಸ್ಥೆ ಇಟ್ಟ್ಕೊಂಡಿರೋ ದೇಶಗಳಿಂದ ಹೊರಬಂದಿರೋ ಪೇಟೆಂಟುಗಳ ಸಂಖ್ಯೆ, ಹೊಸ ತತ್ವಾನ್ವೇಷಣೆಗಳ ಸಂಖ್ಯೆಗೆ ಭಾರತದಿಂದ ಹೊರಬಂದಿರೋದನ್ನ ಹೋಲಿಸಿದರೆ ನಾಚಿಕೆ ಆಗತ್ತೆ ಗುರು! ಈ ದೇಶಗಳಿಗೂ ಭಾರತಕ್ಕೂ ಇರೋ ವೆತ್ಯಾಸ ಏನಪ್ಪಾ ಅಂದ್ರೆ ಶಿಕ್ಷಣ ವ್ಯವಸ್ಥೆ! ನಾವು ಜರ್ಮನ್ನರಿಗಿಂತ, ಜಪಾನಿಗಳಿಗಿಂತ, ಚೀನಾದೋರಿಗಿಂತ ಕೀಳು ಜನರೇನಲ್ಲ, ಆದರೆ ಪ್ರಾಯಶಃ ಪ್ರಪಂಚದಲ್ಲಿ ಮಿಗಿಲಿಲ್ಲದಷ್ಟು ಕೀಳರಿಮೆಯಿರೋ ಜನರು ನಾವು, ಅಷ್ಟೆ!

ಸುಟ್ಟಾಕ್ಬೇಕು ಆ ಕೀಳರಿಮೇನ! ಕನ್ನಡಿಗರಷ್ಟೆ ಅಲ್ಲ, ಭಾರತದೋರೆಲ್ಲ ಇಂಗ್ಲೀಷಿಗೆ ಕಣ್ಮುಚ್ಚಿಕೊಂಡು ಮೊರೆ ಹೋಗೋದು ಪೆದ್ದತನಾನೂ ಹೌದು, ನಮ್ಮ ಮಕ್ಕಳಿಗೆ ಮಾಡ್ತಿರೋ ಮೋಸಾನೂ ಹೌದು. ನಿಧಾನವಾಗಿ ಇದನ್ನ ರಿಪೇರಿ ಮಾಡ್ಬೇಕು, ಕನ್ನಡದ ಮಾಧ್ಯಮಕ್ಕೆ ನಮ್ಮ ಮಕ್ಕಳನ್ನ ಸೇರಿಸೋದು ಹೆಚ್ಚಬೇಕು, ಕನ್ನಡದ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಚೆನ್ನಾಗಿ ಆಗಬೇಕು, ನಮ್ಮ ಮಕ್ಕಳನ್ನ ಜಾಗತೀಕರಣದಲ್ಲಿ ನಿಜವಾದ ಆಟಗಾರರಾಗಕ್ಕೆ ಅನುವು ಮಾಡ್ಕೊಡಬೇಕು, ಇವತ್ತಿನಂಗೆ ಬರೀ ತ್ಯಾಪೆ ಕೆಲಸಗಾರರಾಗಿರ್ಲಿ ಅಂತ ಬಿಡಬಾರದು ಗುರು!

ಈ ಬದಲಾವಣೆ ಮಾಡುವಾಗ ಕೆಲವು ದಿನ ಇಂಗ್ಲೀಷಿನ ಶಿಕ್ಷಣ ವ್ಯವಸ್ಥೆ ಇಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ಆದರೆ ಅದನ್ನೇ ಶಾಶ್ವತವಾಗಿ ನಂಬಿಕೊಳ್ಳದೆ ಜೊತೆಜೊತೆಗೇ ಕನ್ನಡದ ಶಿಕ್ಷಣ ವ್ಯವಸ್ಥೇನ ಭದ್ರ ಮಾಡ್ಕೋಬೇಕು ಗುರು. ಇದು ನಮ್ಮ ನಿಮ್ಮೆಲ್ಲರ ಕರ್ತವ್ಯ.

ಸರಿಯಾದ ವ್ಯವಸ್ಥೆಯಲ್ಲಿ ಉಗ್ರರಿಗೆ ಮಂಪರು ಪರೀಕ್ಷೆ ಅಲ್ಲ, ಮಾತಿನ ಪರೀಕ್ಷೆ ಸಾಕು!

ಕರ್ನಾಟಕದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದ ಕಾನೂನು ಬಾಹಿರ ವಲಸಿಗ್ರು ಚುನಾವಣಾ ಗುರುತಿನ ಚೀಟೀನೂ ಗಿಟ್ಟಿಸಿಕೊಂಡು ನೆಲ್ಸಿದಾರೆ, ಜುಮ್ಮಂತ ಓಡಾಡ್ಕೊಂಡಿದಾರೆ ಅಂತ ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಒಂದು ಸುದ್ದಿ ಬಂದಿತ್ತು. ಇವ್ರು ಬಾಂಗ್ಲಾದೇಶದೋರು ಅಂತ ಯಾಕ್ ಗೊತ್ತಾಗ್ಲಿಲ್ಲ ನಿಮಗೆ ಅಂದ್ರೆ ಪೋಲೀಸರು ಕೊಡೋ ಉತ್ತರ - "ಇವರಿಗೆ ಬೆಂಗಾಳಿ ಭಾಷೆ ಬರೋದ್ರಿಂದ ಇವರನ್ನು ಭಾರತೀಯರಲ್ಲ ಅಂತ ನಿರ್ಧರಿಸೋದೂ ಕಷ್ಟ". ಅಲ್ಲ ಗುರು - ಕರ್ನಾಟಕದಲ್ಲಿ ಇವರು ಕನ್ನಡದೋರೋ ಅಲ್ಲವೋ ಅಂತ ಗುರುತಿಸಿದ್ದರೆ ಸಾಕಾಗ್ತಾ ಇರಲಿಲ್ಲವಾ?

ಮೈಸೂರಲ್ಲಿ ಮಾತಿನ ಪರೀಕ್ಷೆ ಸಾಕು!

ಇನ್ನೊಂದು ಘಟನೆ ನೋಡಿ: ಹೋದ ವರ್ಷ ಇಬ್ಬರು ಬಾಂಗ್ಲಾದೇಶದ ಉಗ್ರರು ಮೈಸೂರಲ್ಲಿ ಸಿಕ್ಕಾಕೊಂಡಿದ್ರು. ಇವರು ಹೇಗೆ ಸಿಕ್ಕಾಕೊಂಡಿದ್ದರಪ್ಪಾ ಅಂದ್ರೆ ನೆಲೆಸಿರೋರು ಕನ್ನಡ ಕಲಿತಿರಲೇಬೇಕು ಅನ್ನೋ ಪರಿಸ್ಥಿತಿ ಇದೆ ಅಂತ ಮೈಸೂರಿನ ಪೋಲಿಸ್ ಅಧಿಕಾರಿಗಳಿಗೆ ಗೊತ್ತಿತ್ತು. ಆ ಉಗ್ರರಿಗೆ ಎರಡಕ್ಷರವೂ ಕನ್ನಡ ಬರದೇ ಇದ್ದಿದ್ದರಿಂದ ಸುಲಭವಾಗಿ ಸೆರೆಸಿಕ್ಕರು! (ಹೆಚ್ಚು ಮಾಹಿತಿಗೆ 30/10/2006ರ ಪ್ರಜಾವಾಣಿ ನೋಡಿ).

ಮೈಸೂರಿನ ಪೋಲೀಸರೂ ಭಾಷೆಯನ್ನ ಲೆಕ್ಕಕ್ಕೇ ತೊಗೊಳ್ದೆ ಹೋಗಿದ್ರೆ ಅ ಉಗ್ರರನ್ನ ಅಷ್ಟು ಸುಲಭವಾಗಿ ಹಿಡಿಯಕ್ಕಾಗ್ತಿರ್ಲಿಲ್ಲ ಗುರು! ಕರ್ನಾಟಕದಲ್ಲಿ ಕಾನೂನುಬಾಹಿರವಾಗಿ ಓಡಾಡ್ತಿರೋರು ಇತ್ತೀಚೆಗೆ ಬಂದಿರ್ತಾರೆ, ಔರ್ನ ಹಿಡಿಯೋದಕ್ಕೆ ಔರ ಬಾಯಿ ಬಿಡಿಸಿದರೆ ಸಾಕು ಅನ್ನೋದು ಯಾವ ಬ್ರಹ್ಮವಿದ್ಯೇನೂ ಅಲ್ಲ ಗುರು! ಭಾಷೆ ಅನ್ನೋದು ವಲಸಿಗರಿಗೆ - ಅದರಲ್ಲೂ ಅನಿಯಂತ್ರಿತವಾಗಿ ವಲಸೆ ಬರೋರಿಗೆ ಒಂದು ಗೋಡೆ. ಆ ಗೋಡೇನ ಸಾಮಾನ್ಯವಾಗಿ ಅಲ್ಲಿ-ಇಲ್ಲಿ ಕಿತಾಪತಿ ಮಾಡಕ್ಕೆ, ಬಾಂಬಿಡಕ್ಕೆ ಬರೋ ಉಗ್ರರಿಗೆ ಏರಕ್ಕಾಗಲ್ಲ ಅನ್ನೋದು ಪ್ರಪಂಚದಲ್ಲಿ ಎಲ್ಲರೂ ಅರ್ಥ ಮಾಡಿಕೊಂಡಿರೋ ವಿಷಯ.

ಸರಿಯಾದ ವ್ಯವಸ್ಥೆಯಲ್ಲಿ ಹೊರಗಿಂದ ಬಂದ ಉಗ್ರ ಬಾಯಿ ಬಿಟ್ಟರೆ ಸಿಕ್ಕ!

ವಲಸೇನ ಹದ್ದುಬಸ್ತಲ್ಲಿ ಇಟ್ಟುಕೊಳ್ಳೋ ವ್ಯವಸ್ಥೆ ಕರ್ನಾಟಕದಲ್ಲಿ ಇದ್ದಿದ್ದರೆ ಕರ್ನಾಟಕದ ಹೊರಗಿಂದ ಬಂದ ಉಗ್ರರನ್ನ ಹಿಡಿಯೋದಕ್ಕೆ ಮಂಪರು ಪರೀಕ್ಷೆ ಯಾಕೆ, ಪ್ರಾಯಶಃ ಮಾತಿನ ಪರೀಕ್ಷೆ ಸಾಕಾಗ್ತಿತ್ತು ಗುರು! ಸರಿಯಾದ ವ್ಯವಸ್ಥೆಯಲ್ಲಿ ಉಗ್ರ ಯಾವನಾದ್ರೂ ಇಲ್ಲೀಗೆ ಕಿತಾಪತಿ ಮಾಡಕ್ಕೆ ಬಂದ್ರೆ ಔನು ಕನ್ನಡ ಬರದೇ ಸಿಕ್ಕಿಹಾಕಿಕೊಳ್ಳಲೇ ಬೇಕು! ನಿಜಕ್ಕೂ ಇಲ್ಲಿ ನೆಲಸಲಿಕ್ಕೆ, ಇಲ್ಲೀ ಜನರೊಡನೆ ಬೆರತು ಜೀವನ ಮಾಡಕ್ಕೆ ಬರೋನು ಕನ್ನಡ ಕಲಿಯೋ ಪರಿಸ್ಥಿತಿ ಎಲ್ಲಾ ಕಡೆಯೂ ಇದ್ದಿದ್ದರೆ ಇದು ಸಾಧ್ಯವಾಗ್ತಾ ಇತ್ತು ಗುರು! ಆದ್ರೆ ಇವತ್ತು ಬೆಂಗಳೂರಲ್ಲಂತೂ ಯಾರು ಬೇಕಾದರೂ ಯಾವ್ ಭಾಷೆ ಬೇಕಾದರೂ ಮಾತಾಡ್ಕೊಂಡು ಏನು ಬೇಕಾದರೂ ಮಾಡ್ಕೊಂಡು ತಿರುಗಾಡಬಹುದು ಅನ್ನೋ ಪರಿಸ್ಥಿತಿಗೆ ನಾವು ಕನ್ನಡಕ್ಕೆ ಕೊಡಬೇಕಾದ ಗೌರವ, ಸ್ಥಾನಗಳ್ನ ಕೊಡದೇ ಇರೋದೇ ಕಾರಣ.

ಈ ರಾಜ್ಯಕ್ಕೆ ವಲಸೆ ಬಂದ ಜನ ಮೊದಲಿಗೆ ಕನ್ನಡ ಕಲೀಬೇಕು, ಕನ್ನಡ ಸಂಸ್ಕೃತಿಯ ಅರಿವು ಪಡ್ಕೋಬೇಕು, ಕನ್ನಡಿಗರಾಗಬೇಕು. ಆದರೆ ಇವ್ಯಾವೂ ಇಲ್ಲದೆ ಇವರು ಯಾರು ಅಂತಾನೂ ಯೋಚ್ನೆ ಮಾಡದೆ ಔರಿಗೆ ಚುನಾವಣಾ ಗುರುತಿನ ಚೀಟೀನೂ ನಮ್ಮ ವ್ಯವಸ್ಥೆ ಕೊಟ್ಟಿದೆ ಅಂದ್ರೆ ವಲಸೆ ಎಷ್ಟು ಕೈಮೀರಿಹೋಗಿದೆ ಅಂತ ಅರ್ಥವಾಗತ್ತೆ!

ಕೊನೆ ಗುಟುಕು

ಅಂದಹಾಗೆ ಹೋದ ವರ್ಷ ಮೈಸೂರಲ್ಲಿ ಮಾತಿನ ಪರೀಕ್ಷೆ ಕೆಲಸ ಮಾಡಿದೆ ಅಂದ್ರೆ ವಲಸೆ ನಿಯಂತ್ರಣದಲ್ಲಿದೆ ಅಂತಲ್ಲ, ವಲಸೆ ಆಗ ಇನ್ನೂ ಕೈಮೀರಿ ಹೋಗಿರಲಿಲ್ಲ ಅಂತಷ್ಟೇ ಅರ್ಥ. ಕರ್ನಾಟಕದಲ್ಲಿ ವಲಸೆ ಕೈಮೀರಿ ಹೋಗದೇ ಇರೋಹಾಗೆ ನೋಡ್ಕೊಳೋ ಜವಾಬ್ದಾರಿ ಜನಸಾಮಾನ್ಯರದೂ ಹೌದು, ಸರ್ಕಾರದ್ದೂ ಹೌದು. ಇದನ್ನ ಒಂದು ನಿಜವಾದ ಸಮಸ್ಯೆ ಅಂತ ಅರ್ಥ ಮಾಡ್ಕೋಬೇಕು, ಅಷ್ಟೆ!

ಬೆಳಗಾವಿ ಚುನಾವಣೆಯಾಗ ಕನ್ನಡದ ಬಾವುಟ ಮತ್ತ ಪಟಪಟಿಸಲಿಕ್ಕ ಹತ್ತೇತ್ರಿ!

ಇಡೀ ಕರ್ನಾಟಕದಾಗ ಎಲ್ಲ ಕಡೀ ಮೊನ್ನಿ ಆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಬಂದೈತ್ರಿ. ಇದರ ಫಲಿತಾಂಶಕ್ಕ ಮಂದಿ ಉಸಿರ ಹಿಡ್ದು ಕಾಯಾಕ್ ಹತ್ತಿದ್ರೋ ಇಲ್ಲೋ ತಿಳೀವಲ್ದು. ಆದ್ರ ನಮ್ ಬೆಳಗಾವಿ ನಗರದಾಗ್ ಏನಾಗ್ತದಾ ಅಂತ ಚಾಮರಾಜ ನಗರದಿಂದ ಕಲ್ಬುರ್ಗಿ ಮಟ, ಬಳ್ಳಾರಿಯಿಂದ ಕಾರವಾರದ ಮಟ ನಮ್ ಕನ್ನಡ್ ಮಂದಿ ಭಾಳ ಕಾಯಾಕ್ ಹತ್ತಿದ್ ಮಾತ್ರಾ ಖರೆ ಐತಿ.

ಇಡೀ ಬೆಳಗಾವ್ಯಾಗ ಇರೋ 58 ಸ್ಥಾನದಾಗ, 27 ಕನ್ನಡ ಮಂದಿ ಪಾಲಾಗೈತಿ. ಎಮ್.ಇ.ಎಸ್. ಮಂದಿಗ 18 ಸಿಕ್ಕೈತಿ. ಬೆಳಗಾವೀನ್ ಮಾರಾಷ್ಟ್ರಕ್ ಸೇರ್ಸೋಣು ಅಂತ ಠರಾವ್ ಪಾಸ್ ಮಾಡಿದ್ದ ಮಾಜಿ ಮೇಯರ್ ವಿಜಯ್ ಮೋರೆ, ಶಿವಾಜಿ ಸುಂಠೇಕರ್, ಪ್ರಕಾಶ್ ಶಿರೋಳಗಿ...ಮುಸುಡಿಗೆ ಮತ್ ಮಸಿ ಬಳ್ದಿರೋದ್ ಅಂತೂ ಖರೇ ಐತಿ. ಹ್ಞಾಂ...ಈ ಸರ್ತಿ ಮಸಿ ಬಳ್ದಿರೋರು ಮಾತ್ರಾ ರಕ್ಷಣಾ ವೇದಿಕಿ ಮಂದಿ ಅಲ್ಲಾ ಮತ್ತಾ...

ವಾರ್ಡ್ ನಂ.15ರಾಗ ವಿಜಯ್ ಮೋರೆ ಮಣ್ ಮುಕ್ಕಿದ್ರಾ ಉಳಿದ್ ಕಡೀಗೆ ಶಿವಾಜಿ ಸುಂಠಕರ್, ಎಂ.ಇ.ಎಸ್. ನ ಬೆನ್ ಹಿಂದ ನಿಂತಿರೋ ಶಿವಸೇನಾದ ಪ್ರಕಾಶ್ ಶಿರೋಳ್ಕರ್, ಕನ್ನಡದವ್ರೇ ಆಗಿದ್ರೂ ಅಧಿಕಾರದ್ ಹಪಾಹಪಿಗ್ ಬಿದ್ದು ಎಂ.ಇ.ಎಸ್. ಮಂದೀನ್ ಒಳ್ಗೊಳ್ಗೇ ಬೆಂಬಲ ಕೊಟ್ಟು ಕನ್ನಡದ ಹಿತ ಕಡೆಗಣಿಸಿದ್ದ ಸುನಿಲ್ ಕುಡಚಿ... ಈ ಮಂದೀಗೆಲ್ಲಾ ನಮ್ ಬೆಳಗಾವಿ ಜನಾ ಛಲೋ ನೀರ್ ಇಳ್ಸಿದಾರ್ರೀ... ಯಪ್ಪಾ. ಮಸ್ತ್ ಅಂದ್ರ ಇದ್ರಾಗ್ ನಮ್ ಕನ್ನಡಾ ಮಂದಿ ಕೂಡ ಮರಾಠಿ ಮಂದೀನೂ ಅದಾರ ಮತ್ತಾ... ಮುಂದ ಬೆಳಗಾವೀನಾಗ್ ಯಾರೇ ಮೇಯರ್ ಆದ್ರೂ ಕನ್ನಡ ವಿರೋಧಿ ನಿರ್ಣಯ ಮಂಡ್ಸಕ್ ಆಗಂಗಿಲ್ಲ ಅನ್ನೋದೆ ನಮ್ ಜಯಾ ಕಣ್ರೀಪಾ...

ಈ ಸ್ಥಿತಿ ಎದುಕ್ ಬಂತಪಾ? ಇದಕ್ಕ ಪರಿಹಾರ ಏನಪಾ?

ಏನಾರ ಆಗ್ಲಿ, ಈಗ್ ನಮಗಾ ಇಂಥಾ 'ಹೋರಾಡ್ ಗೆಲ್ಲೋ' ಸ್ಥಿತಿ ಎದುಕ್ ಬಂತ್ ಅಂತ ಗೊತ್ತೇನು? ನಮ್ ಚೆನ್ನವ್ವ, ನಮ್ ರಾಯಣ್ಣ ಹುಟ್ಟಿದ್ ನಾಡಿನಾಗ ಇಂಥ ಸ್ಥಿತಿ ಎದುಕ್ ಬಂತಪಾ ಅಂತ ತುಸಾ ಚಿಂತಿ ಮಾಡೀರೇನು?

ವಲಸಿ ಕಣ್ರೀಯಪ್ಪಾ... ತಡೀ ಇಲ್ಲದ್ ವಲ್ಸಿ. ಹಾಂಗ್ ನಮ್ ಊರುಗಳಿಗೆ ಗುಳೆ ಬರೋ ಮಂದೀಗ ಭಾಳ ಕಾಳಜಿ ಮಾಡಿ ಅವರ ಭಾಷ್ಯಾಗೆ ಮಾತಾಡೊ ನಮ್ ಸೌಜನ್ಯ, ವಲ್ಸಿ ಬಂದ್ ಮಂದಿ ನಮ್ ನಮ್ ಕೂಡಾ ಬೆರೀಬೇಕು ಅನ್ನೋ ಅನಿವಾರ್ಯ ಹುಟ್ ಹಾಕ್ದೆ ಇರೋ ನಮ್ ದೊಡ್ ತನ... (ದಡ್ ತನಾ ಅಂತ ಓದ್ಕೊಳ್ರೀ ಯಪ್ಪಾ..) ಇದಾ ನೋಡ್ರಿ ಮೂಲ. ಒಂದ್ ಛಲೋ ಊರ್ ಐತಿ ಅಂದ್ರಾ ಬಾಜೂಕಿನ್ ಮಂದಿ ಹೊಟ್ಟೀಪಾಡ್ ಹುಡುಕ್ಕೊಂತಾ ಅಲ್ಲಿಗ್ ಬರೋದೈತಲ್ರೀ, ಹಾಂಗಾ ನಮ್ ಬೆಳಗಾವೀಗೂ ಮರಾಠಿ ಮಂದಿ ವಲಸಿ ಬಂದಾರ್ರೀ... ಬಂದ್ ಮಂದಿ ಇಡೀ ಬೆಳಗಾವೀನೆ ನಮ್ದ್ ಮಾಡ್ಕೋ ಬೇಕಂತಾ ಎಂ.ಇ.ಎಸ್ ಕಟಗೊಂಡ್, ಕನ್ನಡದವ್ರ ತಲೀನ ಧರ್ಮ ಅಂತ ಕೆಡ್ಸಿ ನಮ್ಮೋಲ್ಲೇ ಒಡುಕ್ ಹುಟ್ಸಿ ಬ್ಯಾಳೀ ಬೇಯ್ಸ್ಕೊಂತಿದ್ರು. ಇದಾ ಮೊದಲ್ರೀ.. ನಮ್ ಕನ್ನಡ್ ಮಂದಿ ಜಾತಿ, ಧರ್ಮ ಅನ್ನೂದ್ನೆಲ್ಲಾ ದೂರಾ ತಳ್ಳಿ ಕೆಂಪು ಹಳ್ದಿ ಬಾವುಟಾನ ಎತ್ ಹಿಡ್ದಿದ್ದು. ನೀವಾ ನೋಡ್ಲಿಕ್ ಹತ್ತೀರಲ್ಲಾ...ಹ್ಯಾಂಗ್ ಆತೂ ಅಂತಾ?

ನಾಳಿ ನಮ್ ಬೆಂಗಳೂರಿನಾಗ್ ನಗರ ಪಾಲಿಕೆ ಚುನಾವಣಿ ನಡೀಲಿಕ್ ಐತಿ. ವಲಸಿ ಬಂದ ಬ್ಯಾರೀ ಭಾಷೀ ಮಂದೀನ ಯಾವ್ ಪಾರ್ಟೀನು ನಿಲ್ಸಕ್ ಕೊಡೋದನ್ನು ನಾವೂ ನೀವೂ ಕೂಡಿ ತಡೀಬೇಕಾಗೈತಿ. ಹಾಗೂ ಯಾರಾನ ನಿಂತ್ರಂದ್ರ ಅಂಥ ಮಂದೀಗ್ ಮತ ಹಾಕೋಣಿಲ್ಲ ಅಂತ ಒಂದ್ ಛಲೋ ತೀರ್ಮಾನ ಮಾಡೋಣು... ಏನಂತೀ ಗುರೂ?

ಗಾಂಧಿ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಕೆ

ಗಾಂಧಿ ಜಯಂತಿಯ ಈ ದಿನ "The Selected Works of Gandhi, Vol 6, The Voice of Truth" ಅನ್ನೋ ಹೊತ್ತಗೆಯಿಂದ ಮೋಹನದಾಸ ಕರಮಚಂದ ಗಾಂಧಿಯವರು ತಾಯ್ನುಡಿಯಲ್ಲಿ ಶಿಕ್ಷಣದ ಬಗ್ಗೆ ಹೇಳಿರೋದನ್ನ ಮತ್ತೊಮ್ಮೆ ನೆನೆಸಿಕೊಂಡು ಅವರ ತತ್ವಗಳ್ನ ಕಾರ್ಯರೂಪಕ್ಕೆ ತರೋದಕ್ಕೆ ಕೈಹಾಕೋದೇ ಆ ಮಹಾನುಭಾವನಿಗೆ ತೋರಿಸಬೇಕಾದ ಗೌರವ. ಸುಮ್ನೆ "ರಘುಪತಿರಾಘವ ರಾಜಾ ರಾಂ" ಅಂತ ಹಾಡು ಹೇಳಿ ಚಪ್ಪಾಳೆ ತಟ್ಟಿ ಚಾಕ್ಲೇಟ್ ತಿಂದು ಮನೇಗೆ ಹೋಗಿ ಎಲ್ಲಾ ಮರ್ತುಬಿಡೋದಲ್ಲ!

[ಗಾಂಧಿಯವರ ಮಾತುಗಳ ಕನ್ನಡಿಸುವಿಕೆ: ಬನವಾಸಿ ಬಳಗ]

ವಿದೇಶೀಯರಿಗೆ ಇಲ್ಲದಿರೋ ಕೀಳರಿಮೆ ನಮಗ್ಯಾಕೆ?
"ಇಂಗ್ಲೀಷ್ ಬಾರದ ಯಾರಿಗೂ ಒಬ್ಬ ಬೋಸ್ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವು ಅಂದುಕೊಂಡುಬಿಟ್ಟಿದ್ದೇವೆ. ಇದಕ್ಕಿಂತ ಹೆಚ್ಚಿನ ಮೂಢನಂಬಿಕೆ ಇರಲು ಸಾಧ್ಯವೆ ಎಂದು ನನಗನಿಸುತ್ತದೆ! ಈ ನಮ್ಮ ಅಸಹಾಯಕತೆಯ ಅನುಭವ ಯಾವ ಜಪಾನಿನವನಿಗೂ ಇಲ್ಲ..."

ಪ್ರತಿದಿನ ಹಿಡೀತಿರೋ ಗೆದ್ದಲಿಗಿಂತ ತಾತ್ಕಾಲಿಕ ಗೊಂದಲವೇ ವಾಸಿ
"ತಕ್ಷಣವೇ ಕಲಿಕೆ ಮಾಧ್ಯಮದ ವಿಷಯದಲ್ಲಿ ಎಚ್ಚರ ವಹಿಸಿ ಪ್ರಾದೇಶಿಕ ಭಾಷೆಗಳಿಗೆ ಕೊಡಬೇಕಾದ ಸ್ಥಾನವನ್ನು ಕೊಡಬೇಕು. ಪ್ರತಿದಿನವೂ ಅನ್ಯಾಯವಾಗಿ ಹಿಡಿಯುತ್ತಿರುವ ಗೆದ್ದಲನ್ನು ಹೋಗಲಾಡಿಸುವಲ್ಲಿ ತಾತ್ಕಾಲಿಕವಾಗಿ ಉನ್ನತಶಿಕ್ಷಣದಲ್ಲಿ ಗೊಂದಲದ ವಾತಾವರಣ ಹುಟ್ಟಿದರೂ ಅದೇ ನನಗೆ ಪ್ರಿಯವು."

ವಿದೇಶೀ ಭಾಷೆಯಲ್ಲಿ ಕಲಿಕೆ ಕೊಡೋದ್ರಿಂದ ಆಗೋ ಕೆಟ್ಟ ಪರಿಣಾಮಗಳು
"ಶಾಲೆಯೆನ್ನುವುದು ಎರಡನೆಯ ಮನೆಯಿದ್ದಂತಿರಬೇಕು. ಮಗು ಮನೆಯಲ್ಲಿ ಪಡೆಯುವ ಸಂಸ್ಕಾರಗಳಿಗೆ ಶಾಲಾ ಶಿಕ್ಷಣ ಪೂರಕವಾಗಿದ್ದರೇ ಉತ್ತಮ ಪರಿಣಾಮ ಸಾಧ್ಯ. ಕಲಿಕೆ ಬೇರೊಂದು ಭಾಷೆಯಲ್ಲಿದ್ದರೆ ಈ ಪೂರಕ ವಾತಾವರಣ ಇರುವುದಿಲ್ಲ. ಎಷ್ಟೇ ಒಳ್ಳೆಯ ಉದ್ದೇಶವಿದ್ದರೂ ಈ ಪೂರಕ ವಾತಾವರಣಕ್ಕೆ ಹುಳಿ ಹಿಂಡುವವರು ಜನರಿಗೆ ವೈರಿಗಳೇ. ಇಂತಹ ಶಿಕ್ಷಣ ವ್ಯವಸ್ಥೆಗೆ ಸ್ವೇಚ್ಛೆಯಿಂದ ತಲೆಬಾಗಿಸುವುದು ನಮ್ಮ ತಾಯಂದಿರಿಗೆ ತೋರಿಸಿದ ಅಗೌರವಕ್ಕೆ ಸಮಾನ. ಈ ಬೇರೆಭಾಷೆಯ ಕಲಿಕೆಯ ಕೆಟ್ಟ ಪರಿಣಾಮಗಳು ಇಷ್ಟೇ ಅಲ್ಲ, ಇನ್ನೂ ವ್ಯಾಪಕವಾಗಿವೆ. ಇದರಿಂದ ಜನಸಾಮಾನ್ಯರಿಗೂ ಕಲಿತವರಿಗೂ ನಡುವೆ ಒಂದು ದೊಡ್ಡ ಕಂದರವೇ ಹುಟ್ಟಿಕೊಂಡಿದೆ. ಜನರು ನಮ್ಮನ್ನು ಪರಕೀಯರೆಂದು ಭಾವಿಸುತ್ತಿದ್ದಾರೆ."

ಕೂಡಲೇ ಪರಿಹಾರ ಕೊಡಬೇಕು

"ವಿದೇಶೀ ಮಾಧ್ಯಮದಲ್ಲಿ ಕಲಿಕೆ ಎನ್ನುವುದು ನಮ್ಮ ಮಿದುಳುಗಳಿಗೆ ಆಯಾಸ ತರಿಸಿ, ನಮ್ಮ ಯುವಕರ ನರಗಳ ಮೇಲೆ ಬೇಡದ ಒತ್ತಡ ತಂದು, ಅವರನ್ನು ಕೇವಲ ಅನುಕರಣೆ ಮತ್ತು ಉರು-ಹೊಡೆಯುವಿಕೆಗಳಲ್ಲಿ ಪಳಗಿಸಿ, ನಿಜವಾದ ಚಿಂತನೆ ಮತ್ತು ಕೆಲಸಗಳಿಗೆ ಅಯೋಗ್ಯರನ್ನಾಗಿಸಿ, ತಮ್ಮ ಕಲಿಕೆಯನ್ನು ತಮ್ಮ ಮನೆಯವರ ಇಲ್ಲವೇ ಸಮಾಜದ ಉಪಯೋಗಕ್ಕಾಗಿ ಬಳಸುವ ಯೋಗ್ಯತೆಯನ್ನೇ ಕಿತ್ತುಕೊಂಡಿದೆ. ವಿದೇಶೀ ಮಾಧ್ಯಮವು ನಮ್ಮ ಯುವಕರನ್ನು ತಮ್ಮ ನಾಡಿನಲ್ಲೇ ವಿದೇಶೀಯರನ್ನಾಗಿಸಿದೆ. ಇವತ್ತಿನ ವ್ಯವಸ್ಥೆಯಲ್ಲಿರುವ ದೊಡ್ಡ ದುರಂತವಿದು. ನನ್ನ ಕೈಯಲ್ಲಿ ಅಧಿಕಾರವಿದ್ದಿದ್ದರೆ ಇವತ್ತೇ ನಮ್ಮ ಯುವಕ-ಯುವಕಿಯರ ಮೆಲೆ ಹೇರಲಾಗುತ್ತಿರುವ ವಿದೇಶೀ ಮಾಧ್ಯಮದ ಕಲಿಕೆಯನ್ನು ನಿಲ್ಲಿಸಿ ಎಲ್ಲಾ ಶಿಕ್ಷಕರು ಮತ್ತು ಪ್ರೊಫೆಸರುಗಳೂ ತಾಯ್ನುಡಿಯಲ್ಲಿ ಕಲಿಕೆಯನ್ನು ಕೊಡುವ ಹಾಗೆ ಮಾಡುತ್ತಿದ್ದೆ (ಅವರು ಕೆಲಸ ಕಳೆದುಕೊಳ್ಳುವ ಸಂದರ್ಭ ಬಂದರೂ ಸರಿ!). ಪಠ್ಯಪುಸ್ತಕಗಳಿಲ್ಲ ಎಂದು ಕೈಕಟ್ಟಿ ಕೂರುತ್ತಿರಲಿಲ್ಲ; ಅವುಗಳು ಈ ಬದಲಾವಣೆಯ ಹಿಂದೆಯೇ ಬಂದಾವು. ಈ ಅನಿಷ್ಟಕ್ಕೆ ಕೂಡಲೇ ಪರಿಹಾರವನ್ನು ಕೊಡಬೇಕಿದೆ."

ಓದಿದ್ದಾಯಿತು, ಇನ್ನು ಕಾರ್ಯರೂಪಕ್ಕೆ ತರೋ ಬಗ್ಗೆ ಯೋಚ್ನೆ ಮಾಡೋಣ ಗುರು!

ನಾಟಕ ಶಾಲೆ ಸುತ್ತ ಕೇಂದ್ರದ ನಾಟಕ

ಕರ್ನಾಟಕದಲ್ಲಿ ರಾಷ್ಟ್ರೀಯ ನಾಟಕ ಶಾಲೆ ಶುರು ಮಾಡಕ್ಕೆ ಒಪ್ಪಿಗೆ ಕೊಡದೆ ಮೀನ-ಮೇಷ ಎಣಿಸುತ್ತ ಹೇಗೆ ಕೇಂದ್ರ ಸರ್ಕಾರ ಇದಕ್ಕೆ ತೊಡಕಾಗಿದೆ ಅಂತ 26ನೇ ಸೆಪ್ಟಂಬರ್ ದಿನ ಪ್ರಜಾವಾಣೀಲಿ ವರದಿ ಬಂದಿತ್ತು. ಕರ್ನಾಟಕಕ್ಕೆ ರಾಷ್ಟ್ರೀಯ ಶಾಲೆ ದೊರಕಿಸಲು ಸತತವಾಗಿ ಪ್ರಯತ್ನ ಮಾಡ್ತಿರೋ ರಂಗಕರ್ಮಿ ಪ್ರಸನ್ನ ಔರು ಈ ಕೂಡಲೇ ಕೇಂದ್ರ ಸರ್ಕಾರದೋರು ಎಚ್ಚತ್ತುಕೊಂಡು ನಾಟಕಶಾಲೆ ಶುರು ಮಾಡದೇ ಇದ್ದರೆ ದೆಹಲಿಗೆ ಬಂದು ಒಂದೇ ತಪ್ಪ ಉಪವಾಸ ಸತ್ಯಾಗ್ರಾಹ ಮಾಡ್ತೀನಿ ಅಂತ ಹೇಳಿದಾರೆ.

ಹಿಂದೆ ಕೂಡ ಬೆಂಗಳೂರಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಪ್ರಸನ್ನ ರಾಷ್ಟ್ರೀಯ ಕನ್ನಡ ನಾಟಕ ಶಾಲೆಯ ಜತೆಗೆ ಭಾರತ ಸಂವಿಧಾನದ 8ನೇ ಪರಿಚ್ಚೇಧದಲ್ಲಿ ಕೊಟ್ಟಿರೋ ಎಲ್ಲಾ ಆಡಳಿತ ಭಾಷೆಗಳ ರಾಷ್ಟ್ರೀಯ ನಾಟಕ ಶಾಲೆಗಳ್ನ ಸ್ಥಾಪನೆ ಮಾಡ್ಬೇಕು ಅಂತ ಒತ್ತಾಯಿಸಿದ್ದರು. ಆಮೇಲೆ ತೀವ್ರಗೊಂಡಿದ್ದ ಇವರ ಸತ್ಯಾಗ್ರಹದ ಬಿಸಿ ಸಂಬಂಧಪಟ್ಟ ಕೇಂದ್ರ ಸರ್ಕಾರದ ದಂಡು ಅವರ ಬಳಿಗೆ ದೌಡಾಯ್ಸಿ ಬರುವಂತೆ ಮಾಡಿತ್ತು. ಬಂದವರೆಲ್ಲರೂ ಆದಷ್ಟು ಬೇಗ ರಾಷ್ಟ್ರೀಯ ಕನ್ನಡ ನಾಟಕ ಶಾಲೆ ಮತ್ತು ಇತರ ರಾಜ್ಯಗಳ ಆಯಾ ಭಾಷೆಯ ಶಾಲೆ ತೆರೆಯುವುದಕ್ಕೆ ಭರವಸೆ ನೀಡಿ ತೆರಳಿದ್ದರು. ನಂತ್ರ ಕರ್ನಾಟಕಕ್ಕೆ ವಿಶೇಷ ಅಧಿಕಾರಿ ಒಬ್ಬರನ್ನ ನೇಮ್ಸೋ, ನಾಟಕ ಶಾಲೆಗೆ ನಮ್ಮ ಸರ್ಕಾರ ನೀಡಿದ ಸ್ಥಳ ಪರೀಕ್ಷೇ ಮಾಡೋ ನಾಟ್ಕ ಸಹ ನಡೀತು. ಆದ್ರೆ ಇವರ ಭರವಸೆ ಯೋಗ್ತೆ ನಮಗೆ ಗೊತ್ತಿಲ್ಲವೆ? ಯಾವ ಮಣ್ಣೂ ನಡೀಲಿಲ್ಲ. ಈಗ ಪರಿಸ್ಥಿತಿ ಮೊದ್ಲಂಗೇ ಇದೆ!

ಭಾರತದ ಎಲ್ಲಾ ಭಾಷಾವಾರು ಜನಾಂಗಗಳಿಗೂ ಸಮನಾದ ಅವಕಾಶ ಸಿಗಬೇಕು ಗುರು. ನಮ್ಮನಮ್ಮ ಭಾಷೇಲಿ ನಾಟಕ, ಕಲೆಗಳಿಗೆ ಪ್ರೋತ್ಸಾಹ ಸಿಗಬೇಕು. ಇದೇ ಅಲ್ಲವೇ ಭಾರತದ ಭಾಷೆ-ಸಂಸ್ಕೃತಿಗಳಲ್ಲಿರೋ ವೈವಿಧ್ಯಗಳಿಗೆ ಕೊಡೋ ನಿಜವಾದ ಗೌರವ?

ಪ್ರಸನ್ನ ಅವರ ಈ ಕೆಲ್ಸಕ್ಕೆ ರಂಗಭೂಮಿಗೆ ಸಂಬಂದಪಟ್ಟ ಎಲ್ರೂ ಸಹಕಾರ ನೀಡಿ ಈ ಹೋರಾಟದಲ್ಲಿ ತೊಡಗಿಸಿಕೊಬೇಕು. ನಮ್ಮ ರಾಜ್ಯ ಸರ್ಕಾರ ಸಹ ಔರ್ನ ಎಲ್ಲಾ ರೀತೀಲಿ ಬೆಂಬಲಿಸಬೇಕು ಗುರು! ಕೂಡ್ಲೇ ಇದಕ್ಕ್ಕೆ ಒಂದು ಒಳ್ಳೆ ಜಾಗ ಕೊಡಕ್ಕೆ ನಿರ್ಧಾರ ಮಾಡ್ಬೇಕಿದೆ. ಪ್ರಸನ್ನ ಅವರೆ, ನಾವು ನಿಮ್ಮ ಜೊತೆ ಇದೀವಿ!
Related Posts with Thumbnails