Showing posts with label ಸ್ವಾಭಿಮಾನ. Show all posts
Showing posts with label ಸ್ವಾಭಿಮಾನ. Show all posts

ಭಾರತದ ಸಂಸತ್ತಿಗೂ.. ಇವರಿಗೂ ಏನು ವ್ಯತ್ಯಾಸ?

(ಚಿತ್ರಕೃಪೆ: ೧೯೮೪ರ ಸಿಖ್ ವಿರೋಧಿ ದಂಗೆಯ ಪತ್ರಿಕಾ ವರದಿಯೊಂದರಿಂದ)
ಭಾರತದ ಸಂಸತ್ತಿನಲ್ಲಿ ಮಂಗಳವಾರದಿಂದೀಚಿಗೆ ದಕ್ಷಿಣ ಭಾರತೀಯರನ್ನು ಒಳಗೆ ಬಿಡುವುದಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವ ಸುದ್ದಿ ನೋಡಿ ಅಚ್ಚರಿಯಾಗಿದೆ. ದಕ್ಷಿಣ ಭಾರತೀಯರು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವ ಭೀತಿಗೆ ಕಾರಣವಾಗಿದೆ. 

ಹಿಂದೆ ಮಹಾತ್ಮಾಗಾಂಧಿಯವರ ಹತ್ಯೆಯಾದಾಗ ಕೈಗೆ ಸಿಕ್ಕಿದ ಚಿತ್ಪಾವನರೆಂದು ಕರೆಯಲಾಗುವ ಮರಾಟಿ ಬ್ರಾಹ್ಮಣರ ಮೇಲೆ ಅವರು ಚಿತ್ಪಾವನರೆಂಬ ಕಾರಣಕ್ಕೇ ಹಲ್ಲೆ ಮಾಡಲಾಗಿತ್ತು. ಇದೇ ರೀತಿ ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದುಹಾಕಿದ್ದಾಗ, ಹಂತಕರು ಸಿಖ್ ಸಮುದಾಯಕ್ಕೆ ಸೇರಿದ್ದರಿಂದಾಗಿ ಕಂಡಕಂಡಲ್ಲಿ ಕೈಗೆ ಸಿಕ್ಕ ಸಿಖ್ಖರನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಗೋಧ್ರಾದಲ್ಲಿ ನಡೆದ ಹತ್ಯೆಯ ಪ್ರತಿಧ್ವನಿಯಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಕೊಲ್ಲಲಾಯಿತು. ಅಮಾಯಕರನ್ನು ಕೊಲ್ಲಲಾಗಿದ್ದ ಈ ಘಟನೆಗಳನ್ನೂ ಎಂದಿಗೂ ಒಪ್ಪಲಾಗದ ಅಮಾನುಷ ಕೃತ್ಯವೆಂದೂ, ಜನಾಂಗೀಯ ದ್ವೇಶದಿಂದ ಮಾಡಿದ ಕಗ್ಗೊಲೆಯೆಂದೂ ಬಣ್ಣಿಸಲಾಗುತ್ತದೆ.  

ಇಲ್ಲೆಲ್ಲಾ ಹಾಗೆ ದ್ವೇಶದಿಂದ ನರಮೇಧಕ್ಕಿಳಿದವರನ್ನು "ಸಂವಿಧಾನ ವಿರೋಧಿಗಳು" "ಸಹಿಷ್ಣುತೆಯ ವಿರೋಧಿಗಳು" " ಭಾರತ ರಾಷ್ಟ್ರೀಯತೆಯ - ಒಗ್ಗಟ್ಟಿನ ವಿರೋಧಿಗಳು" "ದೇಶ ವಿರೋಧಿಗಳು" ಎಂದು ಇಡೀ ದೇಶ ಬಣ್ಣಿಸಿ ಖಂಡಿಸಿತು. ಇವೆಲ್ಲಾ ಕೃತ್ಯಗಳು ನಡೆದದ್ದು ಖಾಸಗಿ ವ್ಯಕ್ತಿಗಳಿಂದ... ಇದಕ್ಕೆ ಕುಮ್ಮಕ್ಕು ಕೊಟ್ಟವರು ಅಧಿಕಾರದಲ್ಲಿದ್ದವರು ಎಂಬ ದೂರಿದ್ದರೂ ಇದುವರೆವಿಗೆ ಯಾವುದೇ ಸರ್ಕಾರವೂ ಜನಾಂಗೀಯ ತಾರತಮ್ಯವನ್ನು ಸಮರ್ಥಿಸಿದ ಉದಾಹರಣೆಯಿಲ್ಲ! ಆದರೆ ದಕ್ಷಿಣ ಭಾರತದ ಹೆಸರನ್ನು ಹೊಂದಿರುವ ಸಾರ್ವಜನಿಕರನ್ನು ಸಂಸತ್ತಿನ ಕಲಾಪದಿಂದ ಹೊರಗಿಡುತ್ತಿರುವುದು ಮಾತ್ರಾ ಭಾರತ ಸರ್ಕಾರವೇ ಇಂಥಾ ತಾರತಮ್ಯಕ್ಕೆ ಮುಂದಾಗಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಹಿಂದೆ ಅಮೇರಿಕಾದಲ್ಲಿ ಉಗ್ರಗಾಮಿಗಳು ವಿಮಾನ ಕದ್ದು ಎತ್ತರದ ಕಟ್ಟಡಗಳೂ ಸೇರಿದಂತೆ ನಾಲ್ಕೈದು ಪ್ರಮುಖ ಜಾಗಗಳಿಗೆ ನುಗ್ಗಿಸಿ ಸಾವಿರಾರು ಜನರ ಸಾವಿಗೆ ಕಾರಣರಾದ ದಿನದಿಂದ ಆ ದೇಶಕ್ಕೆ ಹೋಗುವ ಮುಸ್ಲಿಮ್ ಹೆಸರಿನವರನ್ನೆಲ್ಲಾ ಸಿಕ್ಕಾಪಟ್ಟೆ ತಪಾಸಣೆ ಮಾಡೇ ಒಳಗೆ ಬಿಟ್ಟುಕೊಳ್ಳುವ ಏರ್ಪಾಟು ಶುರುವಾಯಿತು. ಅದೂ ಕೂಡಾ ಹೊರದೇಶಗಳಿಂದ ಬರುವವರಿಗೆ ಅನ್ವಯವಾಗುತ್ತಿತ್ತು. ಹಾಗೆ ತಪಾಸಣೆ ಮಾಡಿದರೇ ಹೊರತು ಒಳಗೆ ಬಿಟ್ಟುಕೊಳ್ಳಲ್ಲಾ ಎನ್ನಲಿಲ್ಲಾ! ಆದರೆ ಭವ್ಯ ಭಾರತದಲ್ಲಿ ಮಾತ್ರಾ, ಸಂಸತ್ತಿಗೆ ಪಾಸು ಪಡೆದು ಹೋಗುವ ಜನಸಾಮಾನ್ಯರ ಹಕ್ಕನ್ನು ದಕ್ಷಿಣ ಭಾರತೀಯರು ಎನ್ನುವ ಕಾರಣದಿಂದಲೇ ನಿರಾಕರಿಸಿರುವುದು ಸರಿಯಲ್ಲಾ! ಇಂತಹ ಕ್ರಮಗಳಿಂದ ಭಾರತದ ಸಂಸತ್ತು, ದಕ್ಷಿಣದವರಿಗೆ ನೀವು ಭಾರತೀಯರಲ್ಲಾ ಎನ್ನುತ್ತಿದೆಯೇನೋ ಎನ್ನುವ ಭಾವನೆಗೆ ಕಾರಣವಾಗುತ್ತಿದೆ. ಇಂಥಾ ನಡೆ ಅದ್ಯಾವುದೇ ಕಾರಣಕ್ಕಾಗಲಿ ಸಂಸತ್ ತೆಗೆದುಕೊಳ್ಳುವುದನ್ನು ಒಪ್ಪಲಾಗದು. ನಮ್ಮ ಜನರನ್ನು ಹೊರಗಿಡುವ ಸಂಸತ್ತಿಗೆ ನಾವೂ ಬರುವುದಿಲ್ಲಾ ಎನ್ನುವ ಗಟ್ಟಿ ನಿಲುವನ್ನು ತೆಗೆದುಕೊಂಡಾದರೂ ನಮ್ಮ ಸಂಸದರು ಈ ತಾರತಮ್ಯವನ್ನು ಇಲ್ಲವಾಗಿಸಬೇಕು.

ಸಮಸ್ಯೆಯ ಮೂಲವಿರುವುದು ಸಂವಿಧಾನದ ಮೂರನೇ ಕಾಲಂನಲ್ಲಿ ಬರೆಯಲಾಗಿರುವ "ರಾಜ್ಯಗಳ ಗಡಿ ನಿರ್ಣಯಿಸುವ ಹಕ್ಕು ಸಂಸತ್ತಿನದು" ಎನ್ನುವ ಮಾತಿನಲ್ಲಿ. ಈ ಅಂಶವನ್ನು ತಾಂತ್ರಿಕವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಶಾಸನಸಭೆಯ ನಿಲುವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಆಂಧ್ರಪ್ರದೇಶವನ್ನು ಒಡೆಯಲು ಭಾರತದ ಸಂಸತ್ತು ಮುಂದಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ/ ಒಕ್ಕೂಟದ ಸ್ಪೂರ್ತಿಗೆ ವಿಡಂಬನೆ. ಸಂಸತ್ತಿನಲ್ಲಿ ಉಳಿದೆಲ್ಲಾ ಸಂಸದರು ಒಂದಾಗಿ ಸೇರಿದರೆ ಯಾವೊಂದು ರಾಜ್ಯದ ಸಂಸದರ ಒಟ್ಟು ಸಂಖ್ಯೆಯೂ ಅದನ್ನು ಸಂಖ್ಯಾಬಲದಲ್ಲಿ ಮೀರಿಸಲಾಗದ್ದು ಗೊತ್ತಿರುವ ವಿಷಯವೇ! ಹೀಗಿದ್ದಾಗ ರಾಜ್ಯವೊಂದರ ಸಂಸದರ ಅಭಿಪ್ರಾಯಕ್ಕಾಗಲೀ, ಸದರಿ ರಾಜ್ಯದ ಶಾಸನಸಭೆಯ ನಿರ್ಣಯಕ್ಕಾಗಲೀ ಬೆಲೆಕೊಡದೆ ರಾಜ್ಯವೊಂದನ್ನು ಒಡೆದು ಹಾಕಿಬಿಡಬಹುದಾದಂಥಾ ಸ್ವಾತಂತ್ರ್ಯ ನಮ್ಮ ಸಂಸತ್ತಿಗೆ ಇರುವುದೇ ಸರಿಯಲ್ಲಾ!! ಅಲ್ವಾ ಗುರೂ? 

ಶ್...! ಸದ್ದು ಮಾಡದಿರು...

(ಚಿತ್ರಕೃಪೆ: http://dreamsleep.ca/fast-facts/)












ಹೊದ್ದು ಮಲಗಿಹರಯ್ಯಾ ಮುದ್ದು ಕನ್ನಡಿಗರು
ಗದ್ದಲವ ಮಾಡದಿರು...ನಿದ್ದೆ ಕೆಡಿಸದಿರು!
ನಾಡಹಬ್ಬದ ನೆಪದಿ ಡಿಂಡಿಮವ ಬಡಿಯದಿರು
ಕಹಳೆಗಳ ಊದದಿರು.. ಶ್! ಸದ್ದು ಮಾಡದಿರು

ಬಹುದಿನದ ನಿದ್ದೆಯಿದು - ಹಂಪಿ ಮೆರೆದಂದಿನದು
ಹೆಮ್ಮೆ ನೆಮ್ಮದಿ ತಂದಾ ಮೈಮರೆವ ನಿದಿರೆಯಿದು
ನುಗ್ಗಿದಾ ಎದುರಾಳಿ ಮುರಿದಿಟ್ಟ ನಾಳೆಗಳ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ನಿದ್ದೆಯಲ್ಲಿದ್ದಂತೇ ಹಂಪಿ ಮುಕ್ಕಾದರೇನು?
ರತ್ನ ಸಿಂಹಾಸನಕಿಂದು ತುಕ್ಕು ಹಿಡಿದರೇನು?
ಹಿರಿದು ನಾಡದು ಹರಿದು ಹೋಳಾದರೇನು...?
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಒಡೆದ ನಾಡೊಂದಾಗೆ ನೂರಾರು ತೊಡರುಗಳು
ಕೂಡಲಾಗದೆ ನೊಂದವೆಷ್ಟೋ ಒಡಹುಟ್ಟುಗಳು
ನುಂಗಿದರೂ ನೆರೆನಾಡು.. ಬೆಂಕಿ ಬಿದ್ದರೂ ಮನೆಗೆ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಬಿಡುಗಡೆಯು ತೊಡಿಸಿಹುದೇ ಮತ್ತೆ ಸಂಕೋಲೆ
ನುಡಿಜನರ ಹಿತಕಿಂತ ದೇಶವೇ ಮೊದಲೇ?
ತಾಯ್ನೆಲದೆ ತಾಯ್ನುಡಿಯ ಕಡೆಗಣನೆ ನಡೆದಿರಲು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಏಳಿಗೆಯ ಬಂಡಿಗಿದೆ ಕಲಿಕೆ, ದುಡಿಮೆಯ ಗಾಲಿ
ಕೈಬಿಟ್ಟು ನೆಲದ ನುಡಿ ಸಾಗುವುದೇ ಗಾಡಿ
ಬಿತ್ತಲಾರದೆ ಬೀಜ,ಮರವೆಂತು ಬಹುದು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ನಾಡಿನಾಳ್ವಿಕೆಯಲ್ಲಿ ಹೆರನುಡಿಯೇ ಮಿಗಿಲು
ಕನ್ನಡವೇ ಕಾಣದಿದೆ ಕವಿದು ಕಾರ್ಮುಗಿಲು
ಕಟ್ಟುವವ ಕಡೆಗಣಿಸಿ ಮೈಮರೆತಂತಿರಲು
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ದೇವನುಡಿ, ರಾಷ್ಟ್ರನುಡಿ, ದುಡಿಮೆನುಡಿ ಮೇರು
ತಾಯ್ನುಡಿಯೇ ಕೀಳೆಂದು ಬಗೆದಿಹರೆ ಇವರು?
ಕನ್ನಡದ ನುಡಿತೇರು ಎಳೆಯುವವರಾರು...
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಬಿರುಗಾಳಿಯಾಗಿಹುದು ತಡೆಯಿರದ ವಲಸೆ
ಕನ್ನಡಿಗರ ಹೆರುವೆಣಿಕೆ ಕುಸಿದು ಕುಲವಳಿಸೆ
ಕೊನೆಗಾಲ ಬಲುಸನಿಹ ಕಾಣಲಾರನೇ ಮರುಳಾ
ಹೊದ್ದು ಮಲಗಿಹನಿನ್ನೂ.. ಶ್! ಸದ್ದು ಮಾಡದಿರು!

ಹೊತ್ತೀತೆ ಎಲ್ಲೆಲ್ಲೂ ಎಚ್ಚೆತ್ತ ಸೊಡರುಗಳು
ಬೆಳಗೀತೆ ಕರುನಾಡು...ಕನ್ನಡಿಗರೊಡಲು
ಮೊಳಗೀತೆ ಒಕ್ಕೊರಲ ನುಡಿಕಹಳೆ ಮೊದಲು
ಹೊದ್ದು ಮಲಗಿಹನನ್ನು ಎಚ್ಚರಿಸದೇ ಇರಲು!

ಕನ್ನಡದ ಡಿಂಡಿಮವು ಮೊಳಗಲೆಂದೆಂದು
ಸಾವಂತೆ ಕವಿದಿರುವ ನಿದಿರೆ ತೊಲಗಲಿ ಸರಿದು
ಮೈಕೊಡವಿ ಕನ್ನಡಿಗ ಎಚ್ಚೆತ್ತುಕೊಳಲು
ಕರುನಾಡ ತುಂಬೆಲ್ಲಾ ಸಂತಸದ ಹೊನಲು!

ತನ್ನತನ ಮರೆತವರಿಗೆ.. ಇದಲ್ಲದೆ ಇನ್ನೇನು ತಾನೇ ಆದೀತು?

(ಫೋಟೋ ಕೃಪೆ: ಉದಯವಾಣಿ ದಿನಪತ್ರಿಕೆ)
(ಫೋಟೋ ಕೃಪೆ: ಕನ್ನಡ ಪ್ರಭ)

ಸುದ್ದಿ ಬಗ್ಗೆ ಹೇಳೋದೇನೂ ಇಲ್ಲಾ! ಹೇಳಬೇಕಾದ್ದು... ನಿನ್ನೆ ಅಂಚೆಇಲಾಖೆಯ ಮುಖ್ಯಸ್ಥರು ಕನ್ನಡ ಅಭಿವೃದ್ಧಿ ಪ್ರಾಧಿಕಾರದವರದವರಿಗೆ ನೀಡಿದ ಉದ್ಧಟತನದ ಉತ್ತರಗಳ ಹಿಂದಿರುವ "ಹಿಂದೀ ಸಾಮ್ರಾಜ್ಯಶಾಹಿ" ಮನಸ್ಥಿತಿಯ ಬಗ್ಗೆ! ಹೇಳಬೇಕಾದ್ದು... ಇಂಥಾ ಮೇಲರಿಮೆಯನ್ನು ಅವರಲ್ಲೂ, ಕೀಳರಿಮೆಯನ್ನು ನಮ್ಮಲ್ಲೂ ಹುಟ್ಟು ಹಾಕಿದ ಭಾರತದ ಹುಳುಕಿನ ಭಾಷಾನೀತಿಯ ಬಗ್ಗೆ! ಹೇಳಬೇಕಾದ್ದು ಕನ್ನಡನಾಡಿನ ಸರ್ಕಾರಿ ಕಛೇರಿಗಳಲ್ಲಿ ಕನ್ನಡ ನುಡಿಯ ಬಳಕೆ ಯಾವ ಪ್ರಮಾಣದಲ್ಲಿ ಆಗುತ್ತಿದೆ ಎಂದು ಪರಿಶೀಲಿಸಲೊಂದು ಪ್ರಾಧಿಕಾರವನ್ನು ಹೊಂದಿರಬೇಕಾದ ದುರಂತ ಪರಿಸ್ಥಿತಿಯ ಬಗ್ಗೆ! ಹೇಳಬೇಕಾದ್ದು... ಸತ್ತ ಹಾಗೆ ಇರೋ ಕನ್ನಡ ಜನರ ‘ಗುಲಾಮಗಿರಿಗೆ ಒಗ್ಗಿಕೊಂಡಂತಿರುವ’ ದುಸ್ಥಿತಿಯ ಬಗ್ಗೆ!

ಹೀಗಾಗಲು ಕಾರಣ ಭಾರತದ ಸಂವಿಧಾನ!

ಬಹುಭಾಷೆಗಳ ನಾಡಲ್ಲಿ ಒಂದೇ ಒಂದು ನುಡಿಯನ್ನು ಈ ದೇಶದ ಕೇಂದ್ರಸರ್ಕಾರದ ಆಡಳಿತ ಭಾಷೆಯನ್ನಾಗಿಸಿದ ಜನರು ಇಡೀ ದೇಶದ ತುಂಬಾ ಹರಡುತ್ತಿರುವ "ಬಹುಜನರ ಹಿತ" "ದೇಶದ ಒಗ್ಗಟ್ಟು" ಎಂಬ ತಲೆಸವರುವ ಮಾತುಗಳು ತೋರಿಕೆಯವು ಮಾತ್ರವೇ ಆಗಿದ್ದು ಇದರ ಹಿಂದೆ ವಾಸ್ತವದಲ್ಲಿ ಇರುವುದು ಉಳಿದೆಲ್ಲಾ ವೈವಿಧ್ಯತೆಗಳನ್ನು ಅಳಿಸಿಬಿಡುವ ಕ್ರೌರ್ಯವೇ ಆಗಿದೆ. ಇದರ ಪರಿಣಾಮವಾಗೇ ಅಚ್ಚಕನ್ನಡ ನಾಡೊಳಗಿರುವ ಅಂಚೆಕಛೇರಿಯಲ್ಲಿ ಕನ್ನಡವಿಲ್ಲದಿರುವುದು ತಪ್ಪಲ್ಲಾ! ಹಿಂದೀಯಲ್ಲಿ ಇಲ್ಲದಿದ್ದರೆ ತಪ್ಪು! ಹೀಗೆ ಭಾರತದ ಆಡಳಿತ ವ್ಯವಸ್ಥೆಯ ನೀತಿ ನಿಯಮಗಳು ಹೇಳುತ್ತವೆ. ಇಷ್ಟೇ ಅಲ್ಲದೆ ಕೋಟ್ಯಾಂತರ ರೂಪಾಯಿಗಳನ್ನು ಪ್ರತಿವರ್ಷ ಹಿಂದೀ ಬಳಕೆಯನ್ನು ಹೆಚ್ಚಿಸಲೆಂದೇ ಕೊಡುತ್ತಾ, ನಿನ್ನೆಗಿಂತಾ ಇಂದು ಎಷ್ಟು ಹೆಚ್ಚು ಹಿಂದೀ ಬಳಕೆಯಾಗಿದೆ ಎಂದು ಎಣಿಸುತ್ತಾ, ಹೆಚ್ಚು ಅನುಷ್ಠಾನ ಮಾಡಿದವರಿಗೆ ಬಡ್ತಿ ಬಹುಮಾನ ನೀಡುತ್ತಾ...  ದಿನೇದಿನೇ ಭಾರತದ ಹಿಂದೀಯೇತರ ಭಾಷೆಗಳನ್ನು ಕೊಲ್ಲಲು ಸ್ಕೆಚ್ಚು ಹಾಕಿಕೊಟ್ಟಿರುವುದೇ ಭಾರತದ ಸಂವಿಧಾನ! ಇದು ಬದಲಾಗಬೇಕೋ ಬೇಡವೋ ಎಂಬುದನ್ನು ಜನರು ತೀರ್ಮಾನಿಸಬೇಕಾಗಿದೆ. 

ದುರಂತ!

ಆದರೆ ಪರಿಸ್ಥಿತಿ, ‘ಸಂವಿಧಾನವೆನ್ನುವುದು ಬದಲಾಗದ ಪರಮ ಪವಿತ್ರಗ್ರಂಥ’ ಎಂದು ಭಾವಿಸಿಯೋ ಏನೋ ಕನ್ನಡದ ಜನ ಇದರ ಬಗ್ಗೆ ಯೋಚಿಸುತ್ತಿಲ್ಲಾ ಎನ್ನಿಸುವಂತಿದೆ. ಹಾಗೆ ಜನರನ್ನು ಎಚ್ಚರ ಮಾಡಿಸುವ ಕೆಲಸವನ್ನು ಈ ನೆಲದ ರಾಜಕೀಯ ಪಕ್ಷಗಳೂ ಮಾಡುತ್ತಿಲ್ಲಾ! ಇಷ್ಟಕ್ಕೂ ಕರ್ನಾಟಕ ಕೇಂದ್ರಿತ ರಾಜಕಾರಣವೇ ಇಲ್ಲದಿದ್ದಾಗ ಇದು ಸಹಜವೇ ಆಗಿದೆಯಲ್ಲವೇ!! ಕನ್ನಡಿಗರ ಮೇಲೆ ನಿತ್ಯ ಇಂಥಾ ಅತ್ಯಾಚಾರವಾಗುತ್ತಿದ್ದರೂ, ಅದು ಭಾರತ ಸರ್ಕಾರವು ಸಂವಿಧಾನದ ಹೆಸರಲ್ಲೇ ಮಾಡುತ್ತಿದ್ದರೂ ನಮಗಿನ್ನೂ ಮೈಮರೆವು... ಇದು ನಿಜಕ್ಕೂ ದುರಂತದ ಸಂಗತಿ!

ಕೊನೆಹನಿ: ಸಂವಿಧಾನ, ಆಡಳಿತ ಭಾಷಾ ಕಾಯ್ದೆಗಳು ಏನೇ ಹೇಳಲಿ, ಕೇಂದ್ರಸರ್ಕಾರಿ ಕಛೇರಿಗಳು ಹೇಗೇ ಕೆಲಸ ಮಾಡಲಿ... ಆ ರಾಜ್ಯದ ಭಾಷೆಯನ್ನು ಬಳಸುವ ವಿಷಯವಾಗಿ ಇಷ್ಟೊಂದು ಅಸಡ್ಡೆಯನ್ನು ತೋರಲು, ಯಾವುದೇ ಅಧಿಕಾರಿಗೆ ನಿರಭಿಮಾನಿ ಕನ್ನಡಿಗರ ಕನ್ನಡನಾಡಲ್ಲಿ ತೋರದೆ ಇನ್ನಾವುದೇ ರಾಜ್ಯದಲ್ಲೂ ತೋರಲು ಬಹುಶಃ ಧೈರ್ಯವಾಗುತ್ತಿರಲಿಲ್ಲ! ಹಾಗೆ ಮಾಡಿದ್ದ ಪಕ್ಷದಲ್ಲಿ ಇಷ್ಟು ಹೊತ್ತಿಗೆ ಆ ನಾಡಿನ ರಾಜಕೀಯ ಪಕ್ಷಗಳೂ, ಮಾಧ್ಯಮಗಳೂ ನಮ್ಮವರ ಹಾಗೆ ತಣ್ಣಗೂ ಇರುತ್ತಿರಲಿಲ್ಲ!

ಪ್ರಮಾಣವಚನದ ಭಾಷೆ ನಿಜಕ್ಕೂ ಸಮಸ್ಯೇನಾ?


ಕರ್ನಾಟಕದ ವಿಧಾನಸಭೆಯ ಚುನಾವಣೆಯಲ್ಲಿ ಗೆದ್ದವರು ಶಾಸಕರುಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊನ್ನೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಇಬ್ಬರು ಸಚಿವರು ಮರಾಟಿಯಲ್ಲೂ, ಖಮರುಲ್ ಇಸ್ಲಾಂ, ಅಶೋಕ್ ಖೇಣಿ,  ಸಂಜಯಪಾಟೀಲ್ ಮತ್ತು  ಉಮೇಶ್ ಜಾಧವ್‌ ಅವರುಗಳು ಇಂಗ್ಲೀಶ್ ಭಾಷೆಯಲ್ಲೂ, ಉಳಿದವರು ಕನ್ನಡದಲ್ಲೂ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೊಂದು ರೀತಿಯಲ್ಲಿ ಜೇನುಗೂಡಿಗೆ ಕಲ್ಲು ಹೊಡೆದಂತಾಗಿದ್ದು ಇದಕ್ಕೆ ಕೆಲವು ಜನರ ಕಿತಾಪತಿಯೂ, ಮತ್ತೆ ಕೆಲವರ "ಸ್ಪಂದನೆಯನ್ನೇ ಮರೆತ ಜಡತ್ವವೂ" ಜೊತೆಗೆ ಭಾರತದ ಭಾಷಾನೀತಿಯೂ ಕಾರಣವಾಗಿದೆ!!

ಬೇರೆ ಭಾಷೆಯಲ್ಲಿ ಪ್ರಮಾಣವಚನ ತಪ್ಪಾ?!

ಇಷ್ಟಕ್ಕೂ ಕರ್ನಾಟಕದ ವಿಧಾನಸಭೆಗೆ ಆಯ್ಕೆಯಾಗುವ ಸ್ಪರ್ಧಾಳುಗಳು ನಾನಾ ತಾಯ್ನುಡಿಯವರಾಗಿರುತ್ತಾರೆ. ಅವರವರ ತಾಯ್ನುಡಿಯಲ್ಲಿ ಪ್ರಮಾಣ ವಚನ ತೆಗೆದುಕೊಂಡರೆ ತಪ್ಪೇನು ಎನ್ನಿಸಬಹುದು. ಸಮಸ್ಯೆ ಇರುವುದು ಯಾವುದೋ ಭಾಷೆಯಲ್ಲಿ ಪ್ರಮಾಣವಚನ ತೆಗೆದುಕೊಳ್ಳುವುದರಲ್ಲ.. ಬದಲಾಗಿ ಕರ್ನಾಟಕದ ಸಾರ್ವಭೌಮತ್ವವನ್ನು ಅಳಿಸಿಹಾಕಿ ಕನ್ನಡಿಗರಿಗೆ ಸವಾಲೆಸೆಯುವ ಉದ್ದೇಶವನ್ನು, ಈ ಜನರು ಹೊಂದಿರುವುದಾದಲ್ಲಿ ಅದು ಸಮಸ್ಯೆಯಾಗಿ ಕಾಡುತ್ತದೆ. ಇದನ್ನು ಸ್ವಲ್ಪ ವಿಸ್ತರಿಸಿ ನೋಡೋಣ.

ಮರಾಟಿಯಲ್ಲಿ ಪ್ರಮಾಣವಚನ ಸ್ವೀಕರಿಸಿದವರು, ಕರ್ನಾಟಕವನ್ನು ಒಡೆದು ಮಹಾರಾಷ್ಟ್ರಕ್ಕೆ ಬೆಳಗಾವಿಯನ್ನು ಸೇರಿಸಲು ತುದಿಗಾಲಲ್ಲಿ ನಿಂತಿರುವ... ಅವಕಾಶ ಸಿಕ್ಕಾಗಲೆಲ್ಲಾ ಭಾಷೆಯ ಹೆಸರಲ್ಲಿ ಕನ್ನಡನಾಡನ್ನು ಕನ್ನಡಿಗರನ್ನು ದೂಷಿಸುವ ಎಂಇಎಸ್ ಪಕ್ಷದ ಮಂದಿ. ಬಹುವರ್ಷಗಳಿಂದ ನಮ್ಮ ನಾಡಲ್ಲಿ ನೆಲೆಸಿ ಇಲ್ಲಿನ ಮುಖ್ಯವಾಹಿನಿಯಲ್ಲಿ ಬೆರೆತಿರುವ ಮರಾಟಿಗರ ಮನಸ್ಸಲ್ಲಿ ಪ್ರತ್ಯೇಕತೆಯ ವಿಷಬೀಜ ಬಿತ್ತುತ್ತಿರುವ ಮಂದಿ. ಕನ್ನಡ ಧ್ವಜವನ್ನು ಸುಟ್ಟು, ಕರ್ನಾಟಕ ರಾಜ್ಯೋತ್ಸವಗಳಂದು ಕಪ್ಪುಬಾವುಟ ಹಾರಿಸುವ ಮಂದಿ. ಚುನಾವಣೆಯ ಪ್ರಚಾರಕ್ಕೆ ಬಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳು ಯಾರನ್ನು ಕುರಿತು, ‘ಇವರನ್ನು ಗೆಲ್ಲಿಸಿ, ಕರ್ನಾಟಕವನ್ನು ಬೆರಳತುದಿಯಲ್ಲಿ ಕುಣಿಸುತ್ತೇವೆ’ ಎಂದು ಸಾರಿದ್ದರೋ ಆ ಮಂದಿ. ಹಾಗಾಗಿ ಇವರ ಮರಾಟಿ ಭಾಷೆಯಲ್ಲಿನ ಪ್ರಮಾಣವಚನ ಸ್ವೀಕಾರ ಬರಿಯ ಭಾಷೆಗೆ ಸಂಬಂಧಿಸಿದ್ದಲ್ಲಾ! ಅದು ಕನ್ನಡಿಗರ ಸ್ವಾಭಿಮಾನಕ್ಕೆಸೆದ ಸವಾಲು! ಬೆಳಗಾವಿಯ ಅಭಿಮಾನಶೂನ್ಯ ಕನ್ನಡಿಗರ ಮುಖಕ್ಕೆತ್ತಿದ ಮಂಗಳಾರತಿ!

ಇನ್ನು ಖಮರುಲ್ ಇಸ್ಲಾಂ ಅವರು ನಡೆದುಕೊಂಡ ಬಗೆಯೂ ಖಂಡನೆಗೆ ಅರ್ಹವಾದುದೇ. ಧಾರ್ಮಿಕ ಅಲ್ಪಸಂಖ್ಯಾತರು ಎಂದಾಕ್ಷಣ ಅವರಿಗೇನೂ ಕೋಡಿಲ್ಲಾ! ಹಾಗೆಂದು ಅವರೂ ಭಾವಿಸಿರಲಿಕ್ಕಿಲ್ಲಾ!! ಆದರೆ ತಮ್ಮದು ಬೇರೆಯೇ ಐಡೆಂಟಿಟಿ, ನಾವು ಅಲ್ಪಸಂಖ್ಯಾತರು ಎಂದು ಸಾರುವ ಹುನ್ನಾರದ ನಡೆಯಾಗಿ ಇದು ಜನತೆಯ ಕಣ್ಣಿಗೆ ಕಾಣುತ್ತಿರುವುದರಲ್ಲಿ ಸುಳ್ಳಿಲ್ಲಾ! ನಾಡಿನ ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಬೇರೆಯಾಗಿಸುವ, ಆ ಮೂಲಕ ತಮ್ಮದೇನೋ ಬೇಳೆ ಬೇಯಿಸಿಕೊಳ್ಳುವ ಕುತಂತ್ರವೊಂದಲ್ಲದೆ ಇನ್ಯಾವ ಕಾರಣವನ್ನೂ ಖಮರುಲ್ ಇಸ್ಲಾಂ ಅವರ ಈ ನಡವಳಿಕೆಯಲ್ಲಿ ಕಾಣಲಾಗುತ್ತಿಲ್ಲಾ!!

ಬೀದರಿನ ಶಾಸಕರಾದ ಅಶೋಕ್ ಖೇಣಿಯವರು ಯಾಕೆ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಲಿಲ್ಲಾ ಎನ್ನುವುದು ಮಾತ್ರಾ ವಿಚಿತ್ರವಾದ ಸಂಗತಿಯಾಗಿದೆ. ಕನ್ನಡ ಮಕ್ಕಳ ಪಕ್ಷವೆನ್ನುವ ಹೆಸರಿಗೇ ಇವರ ನಡೆ ಕಳಂಕವೆನ್ನಿಸಿದರೆ ಆಶ್ಚರ್ಯವಿಲ್ಲಾ.. ಬಹುಶಃ ಇವರು ಇಂಗ್ಲೀಶನ್ನೇ "ಉದ್ದಿಮೆಗಳ ಭಾಷೆ" ಎಂದೋ, ಕನ್ನಡನಾಡಿನ ಏಕೈಕ ಗೌರವಾನ್ವಿತ ಭಾಷೆಯೆಂದೋ ತಿಳಿದಿರಬೇಕು.

ವ್ಯವಸ್ಥೆಯ ತಿಕ್ಕಲುತನ!

ಇನ್ನು ತಮಾಶೆಯೆಂದರೆ ಕನ್ನಡನಾಡಿನ ವಿಧಾನಸಭೆಯಲ್ಲಿ ಇವರೆಲ್ಲಾ ತಮಗೆ ಬೇಕಾದ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಅಧಿಕಾರವನ್ನು ಭಾರತೀಯ ಸಂವಿಧಾನವೇ ನೀಡಿದೆ ಎನ್ನುವುದು! ಭಾರತದ ಸಂಸತ್ತಿನಲ್ಲಿ ಇರಾನಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸುವುದು ಹೇಗೆ ಅಸಂಬದ್ಧವೋ ಹಾಗೇ ನಮ್ಮ ನಾಡಿನಲ್ಲಿ ಮರಾಟಿ, ತೆಲುಗು, ತಮಿಳು, ಹಿಂದೀ, ಇಂಗ್ಲೀಶ್ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸುವುದೂ ಅಸಂಬದ್ಧ ಎನ್ನುವುದು ನಮ್ಮ ಸಂವಿಧಾನ ರಕ್ಷಕರ ಕಣ್ಣಿಗೆ ಕಾಣುವುದಿಲ್ಲಾ. ಇದು ಯಾವ ಮಟ್ಟಕ್ಕೆ ಕುರುಡೆಂದರೆ ಇದೇ ನೆಲದ ತುಳುವಿನಲ್ಲಿ ಪ್ರಮಾಣವಚನವನ್ನು ಸ್ವೀಕರಿಸುವುದನ್ನು     "ಇದು ಸಂವಿಧಾನಬಾಹಿರ.. ಹಾಗಾಗಿ ಅಕ್ರಮ" ಎನ್ನಲಾಗಿದೆ.  ನಿನ್ನೆ ವಸಂತ್ ಬಂಗೇರಾರವರು ತುಳುಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಲು ಮುಂದಾಗಿದ್ದನ್ನು ತಡೆಯಲಾಯಿತು. ನಂಬಿ... ಕರ್ನಾಟಕದ ವಿಧಾನಸಭೆಯಲ್ಲಿ ಅಸ್ಸಾಮಿ, ಮಣಿಪುರಿ ಭಾಷೆಗಳಲ್ಲಿ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು.. ಹುಟ್ಟಿದಾಗಿನಿಂದ ಹೆಸರೇ ಕೇಳಿರದ ಮೈಥಿಲಿ,  ಡೋಗ್ರಿ, ಬೋಡೋ ಮೊದಲಾದ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಬಹುದು. ಆದರೆ ತುಳು, ಕೊಡವ ತೆಕ್ಕುಗಳಲ್ಲಿ ಸ್ವೀಕರಿಸುವಂತಿಲ್ಲಾ! ಇದನ್ನು ನಿಜವಾಗಿ ವ್ಯವಸ್ಥೆಯ ತಿಕ್ಕಲುತನ ಎನ್ನದೇ ಬೇರೇನೂ ಅನ್ನಲು ಸಾಧ್ಯವಿಲ್ಲಾ!

ಸರಿಯಾದ ವ್ಯವಸ್ಥೆಯಲ್ಲಿ...

ಹಾಗಾದರೆ ಕರ್ನಾಟಕದ ವಿಧಾನಸಭೆಯಲ್ಲಿನ ಶಾಸಕರಾಗುವವರು ಯಾವ ನುಡಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಭಾರತದ ಸಂಸತ್ತಿನಲ್ಲಿ ಹೇಗೆ ಎಂಟನೇ ಶೆಡ್ಯೂಲಿನಲ್ಲಿರುವ ಯಾವುದೇ ಭಾಷೆಯಲ್ಲಿ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು ಎಂದಿರುವುದನ್ನು ಹಾಗೇ ಕರ್ನಾಟಕದ ವಿಧಾನಸಭೆಗೆ ನೇರವಾಗಿ ಅನ್ವಯಿಸಲಾಗದು. ಕನ್ನಡನೆಲದ ಯಾವುದೇ ಭಾಷೆಯಲ್ಲಿ ಪ್ರಮಾಣವಚನ ತೆಗೆದುಕೊಳ್ಳುವ ಅವಕಾಶ ಇಲ್ಲಿನ ಶಾಸಕರಾಗುವವರಿಗೆ ಇರಬೇಕು. ಈ ನೆಲದ ನುಡಿಯೆಂದರೆ ಇಲ್ಲಿಗೆ ವಲಸೆ ಬಂದು ನೆಲೆಸಿದವರ ನುಡಿಗಳಲ್ಲಾ! ಅದು ಈ ನೆಲದ ನುಡಿಗಳಾದ ಕನ್ನಡ, ತುಳು, ಕೊಡವ ಮುಂತಾದವು ಮಾತ್ರಾ! ಹಾಗಾದರೆ ವಿಧಾನಸಭೆಯ ಕಲಾಪ ನಡೆಯಬೇಕಾದ ಭಾಷೆ? ನಿಸ್ಸಂದೇಹವಾಗಿ ಕನ್ನಡವೇ!! ಉಳಿದ ಭಾಷಿಕರು ನಿಜಕ್ಕೂ ಕನ್ನಡದಲ್ಲಿ ವ್ಯವಹರಿಸಲು ಅಶಕ್ತರಾಗಿದ್ದಲ್ಲಿ ನುಡಿಮಾರುಗರನ್ನು ಬಳಸಿಕೊಳ್ಳುವ ಅವಕಾಶವಂತೂ ಇದ್ದೇ ಇದೆಯಲ್ಲಾ!!

ಕನ್ನಡಿಗರ ವಿರೋಧ ಭಾಷೆಯ ಕುರಿತಲ್ಲಾ!

ನಿಜಕ್ಕೂ ಬೇರೆ ಬೇರೆ ಭಾಷೆಯ ಜನರೊಂದಿಗೆ ಸೌಹಾರ್ದಯುತವಾಗಿ ಬದುಕುವ ಜೀವನಶೈಲಿಯ ಕನ್ನಡಿಗರಿಗೆ ಸಹೃದಯತೆಯ ಪಾಠವನ್ನು ಯಾರೂ ಹೇಳಿಕೊಡಬೇಕಾದ ಅಗತ್ಯವಿಲ್ಲಾ. ಇಷ್ಟಕ್ಕೂ ಮರಾಟಿ, ಇಂಗ್ಲೀಶ್ ಭಾಷೆಗಳನ್ನು ಬಳಸಿ ಯಾರಾದರೋ ಪ್ರಮಾಣವಚನ ಸ್ವೀಕರಿಸಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲಾ. ಇದನ್ನು ಒಪ್ಪಲಾರದಷ್ಟು ಸಣ್ಣತನವೂ ಕನ್ನಡಿಗರಲ್ಲಿಲ್ಲಾ. ಇಲ್ಲಿ ವಿರೋಧವಿರುವುದು ನಮ್ಮ ನಾಡನ್ನು ಒಡೆಯುವ ಸಲುವಾಗೇ ತೊಡೆತಟ್ಟಿ ಸೆಣೆಸಲು ಸಜ್ಜಾಗಿರುವವರ ಸವಾಲಿಗೆ. ಕನ್ನಡ ಬಂದರೂ ಬೇಕೆಂದೇ ಅದನ್ನು ತಿರಸ್ಕರಿಸುವ, ಧಿಕ್ಕರಿಸುವ ಮನಸ್ಥಿತಿಯ ಬಗ್ಗೆ! ನಾಡಿನ ಜನರ ಒಗ್ಗಟ್ಟನ್ನು ಮುರಿದು ಲಾಭ ಮಾಡಿಕೊಳ್ಳಬಲ್ಲೇ ಎಂಬ ಹವಣಿಕೆಯ ಬಗ್ಗೆ! ಕನ್ನಡ ಬಳಸುವುದು ಕೀಳು ಎಂಬ ಕೀಳರಿಮೆಯನ್ನು ಜಗತ್ತಿಗೆ ಸಾರಲು ನಿಂತವರ ಬಗ್ಗೆ! ಕನ್ನಡ ನೆಲದಲ್ಲೇ ದಶಕಗಳಿಂದ ಬದುಕುತ್ತಿದ್ದರೂ ಕನ್ನಡ ಕಲಿಯುವುದಿಲ್ಲಾ ಎನ್ನುವ ಉದ್ಧಟತನದ ಬಗ್ಗೆ!

ಕೊನೆಹನಿ: ನೆಲಕಚ್ಚಿದ್ದ ಎಂಇಎಸ್ ಪಕ್ಷಕ್ಕೆ ಮತ್ತೆ ಜೀವ ತಂದುಕೊಡುತ್ತಿರುವುದು ಎಷ್ಟು ಬಾರಿಸಿದರೂ ಸತ್ತಂತೆಯೇ ಮಲಗಿ ಮೈಮರೆತು ಕರ ಕಮಲ ಸಂಜಾತರಾಗೇ ತಲೆಮೇಲೆ ಹೊರೆ ಹೊತ್ತಂತಿದ್ದು ಅದರಲ್ಲೇ ಧನ್ಯರಾಗುತ್ತಿದ್ದೇವೆನ್ನುವ ಭ್ರಮೆಯಲ್ಲಿರುವ ಬೆಳಗಾವಿಯ ಕನ್ನಡಿಗರೇ!

ಪರಭಾಷಿಕರ ಓಲೈಕೆ... ಇದ್ಯಾಕೋ ಅತಿಯಾಯ್ತು!


ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಭರಪೂರ ಪ್ರಚಾರದಲ್ಲಿ ತೊಡಗಿವೆ. ಹೀಗೆ ಮತಗಳನ್ನು ಬೇಡುವಾಗ ಈ ಪಕ್ಷಗಳು ಮತದಾರರನ್ನು ಯಾವ್ಯಾವ ರೀತಿಯಲ್ಲಿ ಓಲೈಸಲು ಸಾಧ್ಯವೋ ಅದೆಲ್ಲಾ ಬಗೆಯಲ್ಲಿ ಓಲೈಸಲು ಮುಂದಾಗುತ್ತವೆ. ಹೀಗೆ ಮಾಡುವಾಗ ಜಾತಿ, ಧರ್ಮ, ಪಂಗಡಗಳಷ್ಟೇ ಪರಿಣಾಮಕಾರಿಯಾಗಿ ಬಳಸಲಾಗುತ್ತಿರುವ ಅಸ್ತ್ರ ಭಾಷೆ. ಅಭಿವೃದ್ಧಿಯನ್ನು ಭಾಷಿಕ ಜನರಿಗೆ ಸೀಮಿತಗೊಳಿಸುವ ಉದಾಹರಣೆಗಳನ್ನೂ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಲಿವೆ. ನಾಡೊಂದರಲ್ಲಿ ನಾನಾ ಭಾಷೆಯ ಜನರು ಇರುವುದು ಸಹಜ. ಆದರೆ ಈ ಜನರ ಮತಕ್ಕಾಗಿ ಇವರುಗಳನ್ನು ಓಲೈಸಲು ಮುಂದಾಗುವಾಗ ಅದರಿಂದ ನಾಡಿನ ಮೇಲಾಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕಾಗುತ್ತದೆ. ವಲಸೆ ಬಂದು ಈ ನಾಡಿನಲ್ಲಿ ನೆಲೆಸಿದವರನ್ನು ಕನ್ನಡದ ಮುಖ್ಯವಾಹಿನಿಯಲ್ಲಿ ಬೆರೆಯದಂತೆ ಮಾಡುವ ಈ ಓಲೈಕೆಗಳು ನಾಳೆ ನಾಡನ್ನು ಮುಳುಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲಾ! ಇಷ್ಟೂ ಕಾಳಜಿ ಇಲ್ಲದ ರಾಜಕೀಯ ಪಕ್ಷಗಳಿಗೆ ಕನ್ನಡಿಗರು ತಮ್ಮ ಮತದಾನದ ಹಕ್ಕನ್ನು ಬಳಸಿ ಉತ್ತರ ಹೇಳಬೇಕಾಗಿದೆ. 

ಪರಭಾಷಿಕರ ಓಲೈಕೆ

ಸೌಹಾರ್ದತೆಯ ಹೆಸರಲ್ಲಿ ಕನ್ನಡಿಗರ ಮೇಲೆ ಪರಭಾಷೆಗಳನ್ನು ಹೇರುವುದು ನಿರಂತರವಾಗಿ ನಡೆದೇ ಇದೆ. ನಾವು ಸಹಿಸಿಕೊಳ್ಳುತ್ತಿರುವ ಕಾರಣದಿಂದಲೇ ನಮ್ಮ ಹಿತವನ್ನು ಅಳಿಸಲು ಈ ರಾಜಕಾರಣಿಗಳು ಹೇಸದೆ ಇರುವುದು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆ ಅಂಥದ್ದೊಂದು ದೊಡ್ಡ ಘಟನೆ. ಸಾಂಸ್ಕೃತಿಕ ವಿನಿಮಯ ಮಣ್ಣುಮಸಿ ಎಂದು ಏನೆಲ್ಲಾ ಹೇಳಿ ಪ್ರತಿಭಟನೆಯನ್ನು ಹತ್ತಿಕ್ಕಿ ಕನ್ನಡಿಗರ ತಲೆ ಸವರಲಾಯಿತೆಂದರೆ ಈ ಹಿಂದೆ ಅದನ್ನು ವಿರೋಧಿಸಿದ್ದ ದೊಡ್ಡ ಸಾಹಿತಿಗಳೇ ಇದ್ದಕ್ಕಿದ್ದಂತೆ ರಿವರ್ಸ್‌‌ಗೇರ್ ಹಾಕಿಕೊಂಡು ತಾವು ಬೂಟಾಟಿಕೆಯವರೆಂದು ಸಾಬೀತು ಮಾಡಿಕೊಂಡರು. ಕನ್ನಡಿಗರ ಕಣ್ಮಣಿಯನ್ನು ಅಪಹರಿಸಿ ಒಬ್ಬ ಕಾಡುಗಳ್ಳನಿಂದ ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬೇಡಿಕೆಯನ್ನು ಇಡಿಸಿದ್ದ ನೆನಪು ಹಸಿರಾಗಿರುವಾಗಲೇ ಸ್ಥಾಪನೆಯಾದ ಆ ವಿಗ್ರಹ ತಮಿಳರ ಪಾಲಿಗೆ ಬೆಂಗಳೂರಿನಲ್ಲಿ ದೊಡ್ಡ ಗೆಲುವಿನ ಸಂಕೇತವಾಗಿ, ದೊಡ್ಡ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿ ತಲೆಯೆತ್ತಿತು. ಇದೇ ತಿರುವಳ್ಳುವರ್ ಪ್ರತಿಮೆಯ ಎದುರು ಈ ಬಾರಿಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಹಲವಾರು ತಮಿಳು ರಾಜಕಾರಣಿಗಳು ಸೇರಿ ಕರ್ನಾಟಕದಲ್ಲಿ ತಮಿಳರ ಹಿತಕಾಯುವ ಪ್ರತಿಜ್ಞೆ ಮಾಡಿದ್ದೇ ಇದಕ್ಕೆ ಸಾಕ್ಷಿಯಾಗಿದೆ. ಈ ರಾಜಕಾರಣಿಗಳ ಬದ್ಧತೆ ತಮಿಳರ ಹಿತಕಾಯುವುದಷ್ಟೇ ಆಗಿರುವಂತೆ ಅವರ ಮಾತುಗಳಿದ್ದುದನ್ನು ನೋಡಬಹುದು. ಇದು ತಮಿಳು ಅಭ್ಯರ್ಥಿಗಳ ಕತೆಯಾದರೆ ಅದಕ್ಕೆ ಕಾರಣಕರ್ತರು ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿದ ಬಿಜೆಪಿ ಸರ್ಕಾರದವರು.

ಇದೀಗ ತಮಿಳರ ಓಲೈಕೆಯಲ್ಲಿ ಮುಂದಾಗಿರುವ ಪಕ್ಷಗಳ ನಡೆಗಳನ್ನು ನೋಡಿದರೆ ತಮಿಳು ಭವನದ ಭರವಸೆ ಕೊಟ್ಟಿರುವ, ಮಾತುಮಾತಿಗೆ ಕನ್ನಡಪರ ಎಂದುಕರೆದುಕೊಳ್ಳುತ್ತಿರುವ ಕರ್ನಾಟಕ ಜನತಾ ಪಕ್ಷ ಮುಂಚೂಣಿಯಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹ್ಯಾರಿಸ್ ಶಾಂತಿನಗರದಲ್ಲಿ ತಮಿಳಿನಲ್ಲಿ ಭಾಷಣ ಮಾಡುತ್ತಿರುವುದಲ್ಲದೆ ಇವರ ಜೊತೆ ಸ್ಟಾರ್ ಕ್ಯಾಂಪೇನರ್, ‘ಕನ್ನಡವನ್ನು ಇಂಗ್ಲೀಶಿನಲ್ಲಿ ಮಾತಾಡುವ’ ಅಚ್ಚ ಕನ್ನಡತಿ ರಮ್ಯಾರವರೂ ತಮಿಳಿನಲ್ಲಿ ಮಾತನಾಡಿದ್ದಲ್ಲದೆ ಅದಕ್ಕೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಇವರ ಮಾತಿನಂತೆ ಭಾರತದ ಯಾವ ಭಾಷೆಯನ್ನಾದರೂ ಎಲ್ಲಾದರೂ ಬಳಸುವುದು ತಪ್ಪಲ್ಲಾ! ತನ್ನತನದ ಅರಿವಿರದ ನಿರಭಿಮಾನಿ ಮತಿಗೇಡಿಗಳ ಬಾಯಿಂದ ಮತ್ತೇನು ತಾನೇ ನಿರೀಕ್ಷೆ ಮಾಡಲಾದೀತು! ಹೀಗೆ ತಮಿಳರ ಓಲೈಕೆಯನ್ನು ಎಗ್ಗುಸಿಗ್ಗಿಲ್ಲದೆ ಮಾಡುವವರು ತಮಿಳುನಾಡಿನೊಂದಿಗಿನ ವಿವಾದಗಳಾದ ಕಾವೇರಿ ನೀರುಹಂಚಿಕೆಯ ಬಗ್ಗೆ, ಹೊಗೇನಕಲ್ ನಡುಗಡ್ಡೆಯ ವಿವಾದದ ಬಗ್ಗೆ ಯಾವ ಮಾತನ್ನೂ ಆಡುವುದಿಲ್ಲಾ!

ಇನ್ನು ತೆಲುಗರ ಓಲೈಕೆಗಾಗಿ ಆಂಧ್ರದಿಂದ ಚಿರಂಜೀವಿಯನ್ನು, ಕಿರಣ್‌ಕುಮಾರ್ ರೆಡ್ಡಿಯವರನ್ನು ಕಾಂಗ್ರೆಸ್ಸಿನವರು ಕರೆಸಿದ್ದಾರೆ. ತುಂಗಭದ್ರಾ ನದಿಗೆ ಕದ್ದು ಕಾಲುವೆ ಮಾಡಿಕೊಳ್ಳುತ್ತಿರುವ ಆರೋಪವಿರುವ, ಕೃಷ್ಣಾ ನದಿನೀರು ಹಂಚಿಕೆಯಲ್ಲಿ ಎದುರಾಳಿಯಾಗಿ ನಮ್ಮ ನೀರಿಗೆ ಎರವಾಗಿರುವ, ಗಡಿ ಒತ್ತುವರಿ ಮಾಡಿಕೊಂಡದ್ದನ್ನು ಕಣ್ಣುಮುಚ್ಚಿ ನೋಡಿಕೊಂಡಿರುವ ಆಂಧ್ರಪ್ರದೇಶದ ನಾಯಕರುಗಳಾಗಿರುವ ಇವರುಗಳು ಹೇಗೆ ಕನ್ನಡನಾಡಿನ ಹಿತದ ಬಗ್ಗೆ ಮಾತಾಡಬಲ್ಲರು? ತೆಲುಗರನ್ನು ಓಲೈಸುವ ಪ್ರಯತ್ನದಲ್ಲಿ ಇದೀಗ ಬಿಜೆಪಿಯವರು ಅದ್ಯಾರೋ ಕೃಷ್ಣಾರೆಡ್ಡಿ ಎನ್ನುವವರನ್ನು ಕರೆಸುತ್ತಿದ್ದಾರಂತೆ. ಇನ್ನು ಕನ್ನಡಿಗರ ಹೆಮ್ಮೆಯ, ಕೃಷ್ಣಾ ಕಾವೇರಿ ಹೋರಾಟದಲ್ಲಿ ಸಾಯಬೀಳೋ ಹೋರಾಡಿದ, ಶ್ರೀ ವೆಂಕಯ್ಯನಾಯ್ಡು ಎನ್ನುವ ರಾಜ್ಯಸಭಾ ಸದಸ್ಯರನ್ನೂ ಬಿಜೆಪಿ ತೆಲುಗಲ್ಲಿ ಪ್ರಚಾರ ಮಾಡಲು ಬಳಸಿಕೊಂಡಿದೆ. ಇನ್ನು ಮರಾಠಿ ಭಾಷಿಕರನ್ನು ಓಲೈಸಲು ಮಹಾರಾಷ್ಟ್ರ ಮುಖ್ಯಮಂತ್ರಿಗಳಾದ ಶ್ರೀ ಪೃಥ್ವಿರಾಜ ಚೌಹಾಣ್ ಅವರನ್ನು ಕರೆಸಿದ್ದಾರೆ. ಈ ಯಪ್ಪಾ ‘ಬೆಳಗಾವಿ ವಿವಾದ ಇನ್ನೂ ಜೀವಂತ, ಎರಡೂ ರಾಜ್ಯಗಳು ಸುಪ್ರಿಂಕೋರ್ಟ್ ತೀರ್ಮಾನಕ್ಕೆ ಬದ್ಧರು’ ಎಂದೆಲ್ಲಾ ಮಾತಾಡಿದ್ದಾರೆ. ಇಷ್ಟಲ್ಲದೆ ನಮ್ಮೂರಿಗೆ ಬಂದು ಬಾಯಿಗೆ ಬಂದಂತೆ ಮಾತಾಡಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಆರ್. ಆರ್ ಪಾಟೀಲರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಲು ರಾಯಭಾರ ಮಾಡಿದ್ದಾರೆ. ಇಷ್ಟೇ ಸಾಲದೆಂಬಂತೆ ಕೊಂಕಣಿ ಜನರ ಓಲೈಕೆಗಾಗಿ ಗೋವಾದಿಂದ ಮನೋಹರ್ ಪರಿಕ್ಕಾರ್ ಅವರನ್ನು ಕರೆಸಿದ್ದಾರೆ. ಹೀಗೆ ಕರೆಸಿದವರು ಇವರನ್ನೊಮ್ಮೆ ಮಹದಾಯಿ ನೀರಿನಲ್ಲಿ ೪ ಟಿಎಂಸಿ ಕುಡಿಯಲು ಬಳಸಿಕೊಳ್ಳುತ್ತೇವೆ, ಕಳಸಾ ಬಂಡೂರ ಯೋಜನೆಗೆ ಅಡ್ಡಗಾಲಿಕ್ಕಬೇಡಿ ಎನ್ನಲಿ ನೋಡೋಣ! ಇನ್ನು ಮಲಯಾಳಿಗಳ ಓಲೈಕೆಗಾಗಿ ಕೇರಳ ಮುಖ್ಯಮಂತ್ರಿ ಉಮ್ಮಾನ್ ಚಾಂಡಿಯವರನ್ನು ಕರೆಸಿದ್ದಾರೆ.

ಇದೆಂಥಾ ಕರ್ಮ ಕನ್ನಡಿಗರದ್ದು!

ಇಂಥಾ ಘಟನೆಗಳು ನೆರೆಯ ತಮಿಳುನಾಡಿನಲ್ಲಿ ನಡೆದಿದ್ದರೆ ಅಲ್ಲಿಯ ಜನರು ಇವರನ್ನೆಲ್ಲಾ ಬೀದಿಬೀದಿಗಳಲ್ಲಿ ಅಟ್ಟಾಡಿಸಿಕೊಳ್ಳುತ್ತಿದ್ದರೋ ಏನೋ? ನಮ್ಮ ಕನ್ನಡಿಗರು ಕಡೇಪಕ್ಷ ಮತವೆಂಬ ಬಾರುಕೋಲನ್ನಾದರೂ ಸರಿಯಾಗಿ ಪ್ರಯೋಗಿಸುತ್ತಾರೆ ಎನ್ನುವ ಬಗ್ಗೆಯೂ ಅನುಮಾನವಿದೆ. ಇವೆಲ್ಲಾ ಏನೂ ಒಂದೇ ದಿನದಲ್ಲಿ ಆಗುತ್ತಿರುವುದಲ್ಲಾ. ಇದಕ್ಕೆ ಈ ರಾಜಕಾರಣಿಗಳಷ್ಟೇ ಕಾರಣವಲ್ಲಾ! ತನ್ನತನವ ಮರೆತು ಸಹಿಷ್ಣುತೆಯ ಪಾಠಕ್ಕೆ ನಿರಂತರವಾಗಿ ತಲೆ ತೊಳಿಸಿಕೊಂಡ ಕನ್ನಡಿಗರೇ ಕಾರಣ ಎಂದರೆ ತಪ್ಪಿಲ್ಲಾ! ಕನ್ನಡಿಗರ ಸಮಸ್ಯೆಗಳು ಯಾವ ರಾಜಕೀಯ ಪಕ್ಷಕ್ಕೂ ಸಮಸ್ಯೆಯಲ್ಲಾ ಎಂದರೆ ಇದಕ್ಕೆ ಹೊಣೆ ತಲೆ ಮೇಲೆ ತಲೆ ಬಿದ್ದರೂ ನಾವು ಇವರ ಕೈಬಿಡುವುದಿಲ್ಲಾ ಎನ್ನುವ ನಂಬಿಕೆಯೇ ಕಾರಣ!! ಎಂದಿಗೆ ಕನ್ನಡಿಗರು ಒಂದು ಓಟ್ ಬ್ಯಾಂಕ್ ಆಗುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೇ! ಕನ್ನಡಿಗರು ಜಾತಿ, ಧರ್ಮ, ರಾಷ್ಟ್ರೀಯ ಪಕ್ಷಗಳ ಬಾಲಬಡುಕರಾಗಿ ಇರುವತನಕವೂ ಇದು ತಪ್ಪಿದ್ದಲ್ಲಾ! ಇನ್ನಾದರೂ ಕನ್ನಡದ ಜನರು ನಾಡು ನುಡಿ ಕೇಂದ್ರಿತ ರಾಜಕಾರಣವನ್ನು ಕಟ್ಟಿಕೊಳ್ಳದಿದ್ದರೆ ಈ ನಾಡನ್ನು ನೆರೆರಾಜ್ಯಗಳಿಗೆ, ವಲಸಿಗರಿಗೆ ಹರಿದುಹಂಚಿಕೊಡುವುದನ್ನು ನೋಡುವ ದಿನಗಳು ದೂರವಿಲ್ಲಾ!! ಸ್ವಾಭಿಮಾನ ಇಲ್ಲದ ಜನಾಂಗವೊಂದು ತನ್ನ ಅಳಿವನ್ನು ಅಸಹಾಯಕವಾಗಿ ನೋಡುವುದನ್ನು ನಿಲ್ಲಿಸಿ, ಹೊಸ ಸ್ವಾಭಿಮಾನ, ಹೊಸ ಹುರುಪು, ಹೊಸ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ದಿನಗಳು ಬೇಗ ಬರಲಿ!!

ಕನ್ನಡಿಗರ ಕಣ್ಮಣಿಯ ನೆನಪಲ್ಲಿ...


(ವಿಡಿಯೋ ಕೃಪೆ: ಯೂಟ್ಯೂಬ್)

ಇಂದು ಡಾ. ರಾಜ್‌ಕುಮಾರ್ ಹುಟ್ಟಿದ ದಿನ. ಕನ್ನಡಪರರ ಪಾಲಿಗೆ ನಾಡಪರ ಬದ್ಧತೆಯನ್ನು ಮರುಖಾತ್ರಿ ಪಡಿಸುವ ದಿನವಿದು ಎಂದರೆ ತಪ್ಪಾಗಲಾರದು. ತನ್ನ ಚಿತ್ರಗಳಿಂದ, ಚಿತ್ರಗಳಲ್ಲಿನ ಪಾತ್ರಗಳಿಂದ ನಮ್ಮೆಲ್ಲರ ಮೈಮನಗಳನ್ನು ಆವರಿಸುವ ರಾಜ್ ಅವರು ನಮ್ಮ ಸಮಕಾಲೀನರು ಎನ್ನುವುದೇ ಒಂದು ಹೆಮ್ಮೆಯ ವಿಷಯ. ಈ ದಿನ ಅವರನ್ನು ನೆನೆಸದ ಕನ್ನಡಿಗರೇ ಇಲ್ಲಾ! ರಾಜ್! ಮತ್ತೊಮ್ಮೆ ಹುಟ್ಟಿ ಬನ್ನಿ ಎನ್ನದ ಮನವೇ ಇಲ್ಲಾ!

ತಾವು ಅಭಿನಯಿಸಿದ ಪಾತ್ರಗಳು ಎಂಥವೇ ಇರಲಿ.. ಎಂದಿಗೂ ಸಭ್ಯತೆಯನ್ನು ಮೀರದ ಪಾತ್ರಗಳು ಅವಾಗಿರುತ್ತಿದ್ದವು. ಕನ್ನಡಜನತೆಯ ಇತಿಹಾಸವನ್ನು ಮತ್ತೆ ಕಣ್ಮುಂದೆ ಕಟ್ಟಿಕೊಟ್ಟು ನಾವೇನೂ ಕುರಿಮರಿಗಳಲ್ಲಾ... ದೊಡ್ಡದನ್ನು ಸಾಧಿಸಲೆಂದೇ ಹುಟ್ಟಿರುವ ಸಿಂಹಗಳು ಎಂಬುದನ್ನು ಸದಾ ನೆನಪಿಸುವ ಮಯೂರ ಚಿತ್ರದ ಈ ದೃಶ್ಯ ಸದಾ ಪ್ರೇರಕ, ಸ್ಪೂರ್ತಿದಾಯಕ. ಡಾ. ರಾಜ್ ಹುಟ್ಟುಹಬ್ಬದ ಶುಭಾಶಯಗಳು!!

ಇಂಗ್ಲೀಶ್ ಬೇಕೆನ್ನೋ ಈ ಸಮೀಕ್ಷೆಯ ಉದ್ದೇಶವೇನು?

ಇದೇ ನವೆಂಬರ್ ಹತ್ತರ ವಿಜಯಕರ್ನಾಟಕದ ಮುಖಪುಟದಲ್ಲೊಂದು ಸಮೀಕ್ಷೆ "ಕರ್ನಾಟಕ ರಾಜ್ಯೋತ್ಸವ  ಸಂದರ್ಭದಲ್ಲಿ ನಡೆಸಲಾದ ವಿಶೇಷ ಸಮೀಕ್ಷೆ"ಯೊಂದು  ಪ್ರಕಟವಾಗಿದೆ. ಈ ಸಮೀಕ್ಷೆಯನ್ನು ವಿಜಯ ಕರ್ನಾಟಕ - ಲೀಡ್ ಕ್ಯಾಪ್ ನಡೆಸಿದೆಯೆಂದು ಹೇಳಲಾಗಿದೆ. ಇದರಲ್ಲಿ ಕನ್ನಡನಾಡಿನ ನಾಲ್ಕು ನಗರಗಳ ಗೃಹಿಣಿಯರು ಪಾಲ್ಗೊಂಡು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ಇದನ್ನು ಎರಡು ಆಯಾಮಗಳಲ್ಲಿ  ನಾವು ನೋಡಬಹುದು.

ಸಮೀಕ್ಷೆ ಯಾರದ್ದು?!

ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರು ಯಾರು? ಇವರುಗಳ ಸಂಖ್ಯೆ ಎಷ್ಟು? ಯಾವ ಯಾವ ಊರಿನ ಎಷ್ಟು ಜನ ಪಾಲ್ಗೊಂಡಿದ್ದರು? ಹೀಗೆ ಪಾಲ್ಗೊಂಡವರು ಯಾವ ವರ್ಗದವರು? ಬಡವರು, ಮಾಧ್ಯಮವರ್ಗದವರು, ಶ್ರೀಮಂತರು, ಮುಂದುವರೆದವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮೇಲ್ಜಾತಿಯವರು, ಕೆಳಜಾತಿಯವರು, ವಲಸಿಗರು, ಕನ್ನಡ ತಾಯ್ನುಡಿಯವರು, ಕನ್ನಡೇತರ ತಾಯ್ನುಡಿಯವರು.. ಹೀಗೆ ಯಾವುದನ್ನು ಪ್ರತಿನಿಧಿಸುವ ಗುಂಪು ಇದು? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತವೆ.  ಇವೆಲ್ಲಾ ವಿವರಗಳಿಲ್ಲದಿದ್ದರೆ ಸಾಮಾನ್ಯವಾಗಿ ಇಂತಹ ಸಮೀಕ್ಷೆಗಳ ಉದ್ದೇಶವನ್ನೇ ಅನುಮಾನಿಸುವಂತಾಗಿ... ಇದ್ಯಾವುದೋ ಇಂಗ್ಲೀಶ್ ಪರವಾದ ಲಾಬಿ ಎನ್ನಿಸಿಬಿಡುತ್ತದೆ.
ಯಾಕೆ ಹೀಗನ್ನಿಸುತ್ತದೆ ಎಂದರೆ, ಸಮೀಕ್ಷೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳನ್ನು ಒಮ್ಮೆ ನೋಡಿ. ಇದು ಕನ್ನಡದ ಬಳಕೆ, ಉಪಯುಕ್ತತೆಗಳ ಬಗ್ಗೆ ಮಾತಾಡದೇ ಇಂಗ್ಲೀಶ್ ಮಾತಾಡಲು ಬಾರದಿರುವ ಬಗ್ಗೆ ಮುಜುಗರ ಆಗಿದೆಯೇ? ಇಂಗ್ಲೀಶ್ ಭಾಷೆಯ ಬಳಕೆ, ಮನದಲ್ಲಿರುವ ಇಂಗ್ಲೀಶ್, ಮನೆಯೊಳಗೆ ಇಂಗ್ಲೀಶ್ ಮಾತಾಡುವವರು, ಇಂಗ್ಲೀಶ್ ಪ್ರಮುಖ ಭಾಷೆ ಎನ್ನುವುದಕ್ಕೆ ನೀಡಿರುವ ಕಾರಣಗಳು ಮತ್ತು ಇಂಗ್ಲೀಶ್ ಕಲಿಕೆ ಎನ್ನುವ ತಲೆಬರಹದಡಿ ನಡೆಸಲಾದ ಸಮೀಕ್ಷೆಯಾಗಿದೆಯೇ ಹೊರತು ಕನ್ನಡದ ನೆಲೆಯಲ್ಲಿ ನಡೆದಿಲ್ಲ. ಬಹುಶಃ ಇಂಗ್ಲೀಶ್ ಎಂದಿರುವ ಕಡೆಯಲ್ಲೆಲ್ಲಾ ಕನ್ನಡ ಎಂದಿದ್ದರೆ... ಇವರನ್ನು ಅನುಮಾನಿಸದೇ ಇರಬಹುದಿತ್ತು! ಒಟ್ಟಾರೆಯಾಗಿ ಸಮೀಕ್ಷೆಯ ಉದ್ದೇಶವೇ ಅನುಮಾನ ಹುಟ್ಟಿಸುವಂತಿದೆ. ಇರಲಿ... ಈ ಸಮೀಕ್ಷೆಯಲ್ಲಿ ದಿಟವೇ ಇಲ್ಲ ಎಂದೇನೂ ಇಲ್ಲಾ! ಇರುವ ದಿಟಗಳ ಬಗ್ಗೆ ನೋಡಿದಾಗ ಇಂತಹ ಪರಿಸ್ಥಿತಿಗೆ ಕಾರಣ ಹುಡುಕಿಕೊಳ್ಳುವುದು ಕನ್ನಡಿಗರಿಗೆ ತುಂಬಾ ಅಗತ್ಯವಾದುದಾಗಿದೆ.

ಯಾವುದು ಇದರ ಮೂಲ?


ಈ ಸಮೀಕ್ಷೆಯಲ್ಲಿ ವಲಸಿಗರ ಜೊತೆ ಮಾತಾಡಲು ಇಂಗ್ಲೀಶ್ ಬೇಕು ಎನ್ನುವುದನ್ನು ಗಮನಿಸಿದರೆ ಇದು ಮಧ್ಯಮ, ಮೇಲ್ವರ್ಗದ ಇಂಗ್ಲೀಶ್ ಬಾರದ ಗೃಹಿಣಿಯರ ಅನಿಸಿಕೆ ಮಾತ್ರಾ ಎನ್ನಲು ಅಡ್ಡಿಯಿಲ್ಲ! ಯಾಕೆಂದರೆ ಕೆಳವರ್ಗದ ಜನಕ್ಕೆ ವಲಸಿಗರೊಂದಿಗೆ ಮಾತಾಡುವ ಸಂದರ್ಭವಿದ್ದರೂ ಅಂತಹ ವಲಸಿಗರಿಗೇ ಇಂಗ್ಲೀಶ್ ಬರುತ್ತಿರುವ ಸಾಧ್ಯತೆ ಕಡಿಮೆ! ಇನ್ನು ಶಾಲೆಗಳ ಜೊತೆ ಇಂಗ್ಲೀಶ್ ನುಡಿಯಲ್ಲಿ ವ್ಯವಹರಿಸಬೇಕು ಎನ್ನುವ ಪರಿಸ್ಥಿತಿಯಿದ್ದಲ್ಲಿ ಅದು ಶೋಚನೀಯ! ಮಕ್ಕಳಿಗೆ ಇಂಗ್ಲೀಶ್ ಕಲಿಸುವ ಶಾಲೆಗಳು ಪೋಶಕರಿಂದಲೂ ಇಂಗ್ಲೀಶಿನ ಬಳಕೆ/ ವ್ಯವಹಾರವನ್ನು ನಿರೀಕ್ಷೆ ಮಾಡುತ್ತಿವೆ ಎನ್ನುವುದು ಈ ಅಭಿಪ್ರಾಯದ ಹಿಂದಿರುವುದು. ಇದೆಷ್ಟು ಸರಿ? ಇದಕ್ಕೇನು ಪರಿಹಾರ? ಇನ್ನು ಮಕ್ಕಳ ಜೊತೆ ಮಾತಾಡಲು ಇಂಗ್ಲೀಶ್ ಬೇಕು ಎನ್ನುವುದಂತೂ ಕನ್ನಡದ ಬಗ್ಗೆ ಕೀಳರಿಮೆ ಹಾಗೂ ಇಂಗ್ಲೀಶಿನ ಬಗ್ಗೆ ಇರುವ ಮೇಲರಿಮೆಯ ಫಲ ಎನ್ನಬಹುದು!

ಇನ್ನು ಮಾರುಕಟ್ಟೆಯಲ್ಲಿ ಇಂಗ್ಲೀಶ್ ಬೇಕು ಎನ್ನಿಸುವ ಅನಿಸಿಕೆಯೂ ಕೂಡಾ ಯಾವ ಮಾರುಕಟ್ಟೆ ಎನ್ನುವ ಯೋಚನೆಗೆ ಹಚ್ಚುತ್ತದೆ. ಬೆಂಗಳೂರಿನಲ್ಲಂತೂ ಗಾಂಧಿಬಜಾರ್, ಕೋರಮಂಗಲ, ಮಲ್ಲೇಶ್ವರ, ಕೃಷ್ಣರಾಜ ಮಾರುಕಟ್ಟೆಯೂ ಸೇರಿದಂತೆ ಎಲ್ಲೂ ಇಂಗ್ಲೀಶಿನ ಅಗತ್ಯ ಬೀಳದು. ಇನ್ನು ಯಾವುದೋ ಮಾಲ್‌ಗಳನ್ನು ಲೆಕ್ಕಕ್ಕಿಟ್ಟುಕೊಂಡಿದ್ದರೆ ಇಂತಹ ಮಾಲುಗಳಲ್ಲೂ ಕನ್ನಡ ನಡೆಯದು ಎನ್ನುವ ಪರಿಸ್ಥಿತಿ ಎಲ್ಲಿದೆ? ಕನ್ನಡ ಬಾರದೆ ಇಲ್ಲೆಲ್ಲಾ ವ್ಯವಹರಿಸಲು ಆಗುವುದಿಲ್ಲಾ ಎನ್ನುವ ಪರಿಸ್ಥಿತಿಯಂತೂ ಇಲ್ಲಾ! ಇವುಗಳನ್ನೆಲ್ಲಾ ಗಮನಿಸಬೇಕಾಗುತ್ತದೆ.

ಸಮೀಕ್ಷೆ ಒಂದು ಎಚ್ಚರಿಕೆಯ ಗಂಟೆ!

ಒಟ್ಟಾರೆ ನೋಡಿದಾಗ ಈ ಸಮೀಕ್ಷೆಯನ್ನು ಒಂದು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬಹುದು! ಕಲಿಕೆಯಲ್ಲಿ ಕನ್ನಡವಿಲ್ಲದಿದ್ದರೆ... ಮಾರುಕಟ್ಟೆಯಲ್ಲಿ ಕನ್ನಡವಿಲ್ಲದಿದ್ದರೆ... ವಲಸಿಗನಿಗೆ ಕನ್ನಡ ಕಲಿಸದಿದ್ದರೆ... ಏನೆಲ್ಲಾ ಆದೀತು? ಹೇಗೆ ಕನ್ನಡಿಗರಿಂದ ಕನ್ನಡ ಮರೆಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಇಲ್ಲಿ ಪರಿಸ್ಥಿತಿ ಸುಧಾರಿಸುವುದು ಗೃಹಿಣಿಯರು, ಮಕ್ಕಳು ಮರಿ ಇಂಗ್ಲೀಶ್ ಕಲಿಯುದರಿಂದಲ್ಲಾ! ಕನ್ನಡವನ್ನು ಪರಿಣಾಮಕಾರಿಯಾಗಿ ಕಲಿಕೆ, ದುಡಿಮೆ, ಮಾರುಕಟ್ಟೆಗಳ ನುಡಿಯಾಗಿಸಿ ಸಾರ್ವಭೌಮತ್ವವನ್ನು ಗಟ್ಟಿಗೊಳಿಸುವುದರಿಂದ! ಇನ್ನೊಂದು ವಿಷಯವೆಂದರೆ ಇಂತಹ "ಇದು ಹೀಗೇ" ಎನ್ನುವ ಸಮೀಕ್ಷೆಗಳಿಂದಾಗುವ ಉಪಯೋಗವೇನು? ಕನ್ನಡಿಗರಲ್ಲಿ ಇನ್ನಷ್ಟು ಕೀಳರಿಮೆ ತುಂಬುವ ಪ್ರಯತ್ನವೇ ಇದು ಎನ್ನಿಸುತ್ತದೆ. ಇನ್ನಷ್ಟು ಕನ್ನಡಿಗರು ಇಂಗ್ಲೀಶ್ ಕಲಿಯದೆ ಬದುಕೇ ಇಲ್ಲ ಎಂದುಕೊಳ್ಳುವ, ಅದಕ್ಕಾಗಿ ಇಂಗ್ಲೀಶ್ ಪತ್ರಿಕೆ ಕೊಳ್ಳಲಿ (ತಮ್ಮ ಇಂಗ್ಲೀಶ್ ಮಾರುಕಟ್ಟೆ ಹೆಚ್ಚಲಿ), ಇಂಗ್ಲೀಶ್ ವಾಹಿನಿ ನೋಡಲಿ (ತಮ್ಮ ಇಂಗ್ಲೀಶ್ ವಾಹಿನಿಗಳ ಟಿಆರ್‌ಪಿ ಹೆಚ್ಚಲಿ) ಎನ್ನುವ ಲಾಬಿಗಳು ಇಲ್ಲಿ ಕೆಲಸ ಮಾಡಿವೆಯೇನೋ ಎನ್ನಿಸುತ್ತದೆ! ಹೌದಲ್ವಾ ಗುರೂ?!

ಕೆಂಪೇಗೌಡ ವಿಮಾನ ನಿಲ್ದಾಣ: ಬದಲಾದ ಹೆಸರು ಮೂಡಿಸಿದ ಪ್ರಶ್ನೆಗಳು!

( BIALನ ಚಿಹ್ನೆ ಹೀಗಾಗಬಹುದೇ? - ಕಾಲ್ಪನಿಕ ಚಿತ್ರ)
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಇನ್ನೇನು "ಕೆಂಪೇಗೌಡ ಅಂತರರಾಷ್ತ್ರೀಯ ವಿಮಾನ ನಿಲ್ದಾಣ" ಎಂದಾಗಲಿದೆ ಎನ್ನುವ ಸುದ್ದಿ ಇತ್ತೀಚಿಗೆ ಪ್ರಕಟವಾಗಿದೆ. ನಮ್ಮೂರಿನ ವಿಮಾನ ನಿಲ್ದಾಣದ ಹೆಸರನ್ನು ನಮಗೆ ಬೇಕಾದಂತೆ ಇಟ್ಕೊಳ್ಳೋ ಅವಕಾಶ ಸಿಕ್ಕಿದ್ದು ಸಂತಸದ ವಿಷಯ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಹೆಸರಿಡುವಂತೆ ದನಿ ಎತ್ತಿ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಂಡ ಕರ್ನಾಟಕ ರಕ್ಷಣಾ ವೇದಿಕೆಗೆ ಇದೊಂದು ಹುಮ್ಮಸ್ಸಿನ ಯಶಸ್ಸು! ಅಭಿನಂದನೆಗಳು!!

ಹೆಸರಿಡಲು ಇರುವ ಅಡ್ಡಿಗಳು!

ನಮಗೆ ಬೇಕಾದ ಹೆಸರುಗಳನ್ನು ನಮ್ಮೂರಿನ ವಿಮಾನ ನಿಲ್ದಾಣಕ್ಕೆ ಇಡಲು ಅದೆಷ್ಟು ಸಮಯ ಬೇಕಾಯಿತು? ಅದೆಷ್ಟು ತೊಡಕುಗಳು ಎನ್ನುವುದನ್ನು ಗಮನಿಸಿ ನೋಡಿದಾಗ ಈ ತೊಡಕುಗಳು ಬರೀ ವಿಮಾನ ನಿಲ್ದಾಣದ ಹೆಸರಿಡುವಲ್ಲಿ ಮಾತ್ರಾ ಆಗಿಲ್ಲಾ ಎನ್ನುವುದು ಕಾಣುತ್ತದೆ. ನಮ್ಮೂರಿನ ಹೆಸರುಗಳ ಬದಲಾವಣೆಯ ಕಥೇನೇ ನೋಡಿ. ಬೆಂಗಳೂರಾಗಲು ನಾವಿನ್ನೂ ಎಷ್ಟು ಕಾಯಬೇಕೋ ಎನ್ನಿಸುವಂತಿದೆ. "ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವಾ ಹೂಡಿ" ಬರುವಂತೆ ಆಗಾಗ ಬರುವ ಪತ್ರಿಕಾ ವರದಿಗಳು ನಮ್ಮಲ್ಲಿ ಆಶಾಭಾವನೆಗೆ ಕಾರಣವಾಗುತ್ತಿದೆಯಷ್ಟೇ ಹೊರತು ಇನ್ನೂ ಆಸೆ ಫಲಿಸುತ್ತಿಲ್ಲಾ ಎನ್ನುವಂತಿದೆ... ಪರಿಸ್ಥಿತಿ. ಮೂಲತಃ ಇರುವ ತೊಡಕುಗಳಲ್ಲಿ ಪ್ರಮುಖವಾದದ್ದು.. ನಮ್ಮ ಜನರಲ್ಲಿ ಇನ್ನೂ ಎಚ್ಚರವಾಗಿರದ ಕನ್ನಡತನ! ನಮ್ಮವರೇ ಇಲ್ಲಿನ ಕಟ್ಟಡ, ಯೋಜನೆ, ಬೀದಿ, ಅಣೇಕಟ್ಟೆ, ಉದ್ಯಾನವನ, ಬಡಾವಣೆಗಳಿಗೆ ಹೆಸರಿಡುವಾಗ ಸೂಚಿಸೋದು ಕನ್ನಡೇತರರ ಹೆಸರನ್ನೇ ಅನ್ನುವ ಹಾಗಿದೆ. ಮಹಾತ್ಮಗಾಂಧಿ ರಸ್ತೆ, ಕಸ್ತೂರ್ ಬಾ ರಸ್ತೆ, ಇಂದಿರಾಗಾಂಧಿ ವೃತ್ತ, ದೋನಿ ವೃತ್ತ,  ರಾಜಾಜಿನಗರ, ಜಯಪ್ರಕಾಶನಗರ, ರಾಜೀವ್ ಗಾಂಧಿನಗರ, ಲಾಲ್ ಬಹಾದ್ದೂರ್ ಶಾಸ್ತ್ರಿ ಅಣೇಕಟ್ಟೆ, ಇಂದಿರಾಗಾಂಧಿ ಉದ್ಯಾನವನ, ನೆಹರೂ ತಾರಾಲಯ, ದೀನದಯಾಳ ಉಪಾಧ್ಯಾಯ ರಸ್ತೆ, ಅಟಲ್ ಸಾರಿಗೆ, ವಿವೇಕಾನಂದನಗರ, ರಾಮಕೃಷ್ಣ ನಗರ, ಶಾರದಾದೇವಿನಗರ... ಹೀಗೆ! ಅಂದರೆ ರಾಷ್ಟ್ರೀಯ(?) ನಾಯಕರುಗಳ ಹೆಸರನ್ನು ಇಡಲೇಬಾರದು ಎನ್ನುವುದು ನಮ್ಮ ನಿಲುವಲ್ಲ! ಎಲ್ಲೋ ಅಪರೂಪಕ್ಕೊಂದು ಹೀಗೆ ಇಟ್ಟಿದ್ದರೆ ಪರ್ವಾಗಿರಲಿಲ್ಲ! ಆದರೆ ಹಾಗಾಗದೆ ಏನೇ ಹೊಸದು ಬಂದರೂ ಪರಭಾಷಿಕರ ಹೆಸರಲ್ಲೇ ಬರೋದು ಒಳ್ಳೇದಲ್ಲಾ ಅನ್ನೋದು ನಮ್ಮ ನಿಲುವು. ಇನ್ನೂ ನಮ್ಮ ಕನ್ನಡದ ಸಮಾಜವನ್ನೇ ಬೆಳಗಿದ ಅನೇಕ ಕನ್ನಡಿಗ ನಾಯಕರುಗಳ ಹೆಸರುಗಳೇ ಪ್ರಮುಖವಾಗಿ ಬಳಕೆಯಲ್ಲಿ ತಂದಿಲ್ಲದಿರುವಾಗ ಇದ್ಯಾಕಪ್ಪಾ ಈ ಪ್ರವಾಹ ನಮ್ಮ ಮೇಲೆ ಎನ್ನಿಸುತ್ತದೆ! ಇನ್ನು ಎರಡನೆಯ ಅಡ್ಡಿ, ಹೀಗೆ ಹೆಸರನ್ನು ನಾವು ಇಡಬೇಕೆಂದುಕೊಂಡರೂ ಅದಕ್ಕೆ ಒಪ್ಪಿಗೆ ಕೊಡಬೇಕಾದವರು ದೆಹಲಿ ದೊರೆಗಳು! ತಪ್ಪು ಉಚ್ಚರಣೆಯ ನಮ್ಮೂರ ಹೆಸರುಗಳನ್ನು ಬದಲಾಯಿಸಲು ನಮಗೆ ಸ್ವಾತಂತ್ರವಿಲ್ಲ! ನಮ್ಮೂರ ವಿಮಾನ ನಿಲ್ದಾಣಕ್ಕೆ ಹೆಸರಿಡಬೇಕೆಂದರೆ ಕೇಂದ್ರ ಅನುಮತಿ ಕೊಡಬೇಕು! ಇದೆಲ್ಲಾ ನೋಡಿದಾಗ ಭಾರತದಲ್ಲಿ ರಾಜ್ಯಗಳಿಗೆ ಇಂಥಾ ವಿಷಯಗಳಲ್ಲಾದರೂ ಸ್ವಲ್ಪ ಅಧಿಕಾರ ಇರಬೇಕು ಅನ್ನಿಸೋಲ್ವಾ ಗುರೂ!

ಬ್ಯಾಂಗಲೋರ್ ಬೆಂಗಳೂರು ಆಗಲು ಇಷ್ಟು ವರ್ಷಾ ಯಾಕೆ ಬೇಕಾಯ್ತು ಗೊತ್ತಾ?


ಸುಮಾರು ೨೦೦೬ರಲ್ಲಿ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಹಕ್ಕೊತ್ತಾಯವನ್ನು ಮಂಡಿಸಿ, ಇಂಗ್ಲೀಶಿನಲ್ಲಿ ತಪ್ಪಾಗಿ ಬರೆಯಲಾಗುತ್ತಿರುವ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ ಮೊದಲಾದ ನಮ್ಮೂರ ಹೆಸರುಗಳನ್ನು ಸರಿಪಡಿಸುವ ಕ್ರಮಕ್ಕೆ ಮುಂದಾಗಬೇಕೆಂಬ ಸಲಹೆಯನ್ನು ರಾಜ್ಯಸರ್ಕಾರದ ಮುಂದಿಟ್ಟಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಧರಂಸಿಂಗ್‍ರವರು ಇದಕ್ಕೆ ಶಾಸನಾತ್ಮಕವಾಗಿ ತಿದ್ದುಪಡಿಯುಂಟು ಮಾಡಲು ಮುಂದಾಗಿದ್ದರು. ಇದೀಗ ಅಂದಿಟ್ಟಿದ್ದ ಆ ಹೆಜ್ಜೆ ಮುಂದಿನ ತಿಂಗಳಿಂದ ಜಾರಿಯಾಗಲಿದೆ ಮತ್ತು ಇದುವರೆಗೂ ಅದಕ್ಕಿದ್ದ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಮ್ಮಲ್ಲೂ ಇಲ್ಲಾ! ಆಳುವವರಲ್ಲೂ ಇಲ್ಲಾ!!

ನೀವು ಸುಮ್ಮನೆ ಗಮನಿಸಿ ನೋಡಿ. ಬೇರೆ ಬೇರೆ ರಾಜ್ಯಗಳಲ್ಲಿಯೂ ತಮ್ಮ ಊರುಗಳ ಹೆಸರುಗಳನ್ನು ಬದಲಿಸಿದ್ದಾರೆ. ಕೊಲ್ಕೋತ್ತಾ, ಚೆನ್ನೈ, ತಿರುವನಂತಪುರಂ, ಮುಂಬೈ, ವಡೋದರ, ಇಂದೋರ್... ಹೀಗೆ ತಮ್ಮ ಊರಿನ ಹೆಸರುಗಳನ್ನು ಬದಲಿಸಿಕೊಂಡ ಅನೇಕ ಉದಾಹರಣೆಗಳಿವೆ.ಇತ್ತೀಚಿನ ಈ ಬದಲಾವಣೆಗಳಲ್ಲೆಲ್ಲಾ ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದು ಮಾತ್ರಾ... ನಮ್ಮ ರಾಜ್ಯವೇ.  ಈ ವಿಳಂಬದ ಸಮಸ್ಯೆ ನಮ್ಮಲ್ಲಿರಲು ಕಾರಣವೇನು ಎಂದರೆ ಕಣ್ಣಿಗೆ ರಾಚುವುದು ರಾಜಕೀಯ ಇಚ್ಛಾಶಕ್ತಿಯ ಕೊರತೆ. ರಾಜ್ಯ ರಾಜಕಾರಣದ ಯಾವ ಪಕ್ಷಕ್ಕೂ ಕನ್ನಡ, ಕನ್ನಡಿಗ, ಕನ್ನಡನಾಡಿನ ಏಳಿಗೆಯ ಪರಮಗುರಿಯೇ ಸಿದ್ಧಾಂತವಾಗಿಲ್ಲದಿರುವುದು ಮತ್ತು ಅಂತಹ ರಾಜಕೀಯ ಶಕ್ತಿಯ ಅಗತ್ಯವನ್ನು ಕನ್ನಡಿಗರು ಇನ್ನೂ ಕಂಡುಕೊಂಡಿಲ್ಲದಿರುವುದು ಇಂಥವಕ್ಕೆಲ್ಲಾ ಪ್ರಮುಖ ಕಾರಣಗಳೆಂದರೆ ತಪ್ಪಾಗಲಾರದು. ನಮ್ಮ ರಾಜಕಾರಣಿಗಳಲ್ಲೂ, ಜನರಲ್ಲೂ "ಕನ್ನಡತನವೇ ನಮ್ಮ ಮೂಲಗುರುತು" ಎನ್ನುವ ಅರಿವು ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.

ವಾಸ್ತವವಾಗಿ ರಾಜ್ಯಸರ್ಕಾರ ನಮ್ಮೂರ ಹೆಸರುಗಳನ್ನು ಬದಲಿಸಲು ೨೦೦೬ರಲ್ಲೇ ಪ್ರಯತ್ನ ಪಟ್ಟರೂ ಇದು ಜಾರಿಯಾಗಲು ವಿಳಂಬವಾಗುತ್ತಿದೆ. ಹೀಗೆ ಆರು ವರ್ಷ ವಿಳಂಬವಾಗಲು ಇದ್ದ ಕಾರಣ, ರಾಜ್ಯಸರ್ಕಾರದ ಈ ನಿಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಒಂದೆರಡು ಅರ್ಜಿಗಳು. ಕೇವಲ ಒಬ್ಬಿಬ್ಬರು, ಒಂದೊಂದು ಕೇಸುಗಳ ಮೂಲಕ ಆರುಕೋಟಿ ಜನರ ರಾಜ್ಯಸರ್ಕಾರವನ್ನೇ ತಡೆಹಿಡಿಯಬಲ್ಲರು ಎನ್ನುವುದನ್ನು ಗಮನಿಸಬೇಕಾಗಿದೆ.

ಇದು ಬರೀ ಊರುಗಳ ಹೆಸರು ಬದಲಿಸುವಲ್ಲಿ ಎದುರಾದ ತೊಡರುಗಳಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸಿಗಬೇಕೆಂದಾಗಲೂ ವಿಳಂಬವಾಗಿತ್ತು. ಅದಕ್ಕೂ ನಾವು ಹೋರಾಡಬೇಕಾಯ್ತು. ಕೊನೆಯಲ್ಲಿ ಗಾಂಧಿ ಎನ್ನುವ ಒಬ್ಬರು ದೂರದ ಚೆನ್ನೈನ ಹೈಕೋರ್ಟಿನಲ್ಲಿ ಹಾಕಿ ಕೂತ ಒಂದು ಕೇಸಿನ ಪರಿಣಾಮವಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕರೂ ಸಿಗದಂತಾಯ್ತು! ಈ ಕೇಸಿನ ವಿಷಯದಲ್ಲೂ ರಾಜ್ಯಸರ್ಕಾರ ಹೇಗೆ ನಡೆದುಕೊಂಡಿತೆಂಬುದನ್ನು ಮೈಸೂರಿನ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ. 

ಅಂದರೆ ನಮ್ಮಲ್ಲಿ ತುರ್ತಾಗಿ ಆಗಬೇಕಾದ್ದು ಕನ್ನಡತನದ ಜಾಗೃತಿಯೇ ಆಗಿದೆ. ಕನ್ನಡತನವನ್ನು ಕಡೆಗಣಿಸಿ ರಾಷ್ಟ್ರೀಯತೆಯೆನ್ನುವುದು ಹುಸಿತನವೇ ಆಗಿದೆ. ಕನ್ನಡತನದಿಂದಲೇ ಕನ್ನಡಿಗರ ಭಾರತೀಯತೆ, ನಮ್ಮತನದ ಉಳಿವಿನಲ್ಲೇ ರಾಷ್ಟ್ರದ ಹಿತವಿರುವುದು ಎನ್ನುವುದನ್ನು ಅರಿಯದಿದ್ದಲ್ಲಿ ನಾವು ಹೀಗೇ ಅನುಭವಿಸುತ್ತಲೇ ಇರಬೇಕಾಗುತ್ತದೆ... ನಾಡೂ ಹೀಗೇ ಇರುತ್ತದೆ! ಅಲ್ವಾ ಗುರೂ?

ಸಾಹಿತ್ಯ ಸಮ್ಮೇಳನದ ನಿರ್ಣಯಗಳೂ... ಭಾರತದ ಭಾಶಾನೀತಿಯೂ...

(ಫೋಟೋ ಕೃಪೆ : ಕನ್ನಡಪ್ರಭ)
ಕಳೆದ ಮೂರು ದಿನದಿಂದ ಗಂಗಾವತಿಯಲ್ಲಿ ನಡೆಯುತ್ತಿದ್ದ ಕನ್ನಡದ ನುಡಿಹಬ್ಬಕ್ಕೆ ನಿನ್ನೆ ತೆರೆ ಬಿದ್ದಿದೆ. ಲಕ್ಷಾಂತರ ಜನರು ಸೇರಿದ್ದ ಈ ಸಮ್ಮೇಳನದ ಉದ್ಘಾಟನೆಯ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಶ್ರೀ ಸಿ.ಪಿ.ಕೆ ಯವರು ಮಾಡಿದ ಭಾಷಣ ಕೇಳಿ ಅಂತೂ ಭಾರತದ ಹುಳುಕಿನ ಭಾಶಾನೀತಿಯ ಬಗ್ಗೆ ಸಾಹಿತ್ಯ ಸಮ್ಮೇಳನವು ದನಿ ಎತ್ತಿರುವುದು ಅರ್ಥಪೂರ್ಣವಾಗಿದೆ ಎನ್ನಿಸಿತ್ತು.

ಮೊದಲ ದಿನದ ಭಾಷಣದಲ್ಲಿ...

(ಫೋಟೋ ಕೃಪೆ : ಉದಯವಾಣಿ)
ಮೊದಲ ದಿನದ ಭಾಷಣದಲ್ಲಿ ಸಿಪಿಕೆಯವರು ಕನ್ನಡಕ್ಕೆ ಐದು ಕಂಟಕಗಳಿವೆ ಎಂದು ಹೆಸರಿಸಿದ್ದರು. ಈ ಐದು ಪಂಚ ಮಹಾ ಕಂಟಕಗಳಲ್ಲಿ ಮೂರನೆಯದಾಗಿ ಕಾಣಿಸಿಕೊಂಡಿದ್ದು ಭಾರತದ ಹುಳುಕಿನ ಭಾಶಾನೀತಿಗೆ ಸಂಬಂಧಿಸಿದ್ದ ಈ ಮಾತುಗಳು:-

ಇಂಗ್ಲೀಶ್ ಮರದ ದೊಣ್ಣೆ ಹಿಂದೀ ಕಬ್ಬಿಣದ ದೊಣ್ಣೆ. ನಮಗೆ ಇಂಗ್ಲೀಶಿಗಿಂತ ಹಿಂದೀಯೇ ಅಪಾಯಕಾರಿ. ಕೇಂದ್ರಸರ್ಕಾರ ಹಿಂದಿಯನ್ನು ಹೇರುತ್ತಿದೆ. ಕರ್ನಾಟಕದ ಎಲ್ಲಾ ಕೇಂದ್ರಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ಸೇವೆ ಕಡ್ಡಾಯವಾಗಿ ಸಿಗಬೇಕು.

ನಿಜವಾಗಿ ನೋಡಿದರೆ ನುಡಿಹಬ್ಬವು ಕನ್ನಡ ನುಡಿಗೆ, ನುಡಿಯ ಸಾಹಿತ್ಯಕ್ಕೆ ಸಂಬಂಧ ಪಟ್ಟಿದ್ದಾಗಿದೆ. ಇದರಲ್ಲಿ ಭಾಶೆಗೆ ತಗುಲಿರುವ ಅಪಾಯದ ಬಗ್ಗೆ ಎಚ್ಚರಿಸುವಂತಹ, ಭಾಶೆಯ ಏಳಿಗೆಗೆ ಬೇಕಿರುವ ವಿಷಯಗಳ ಬಗ್ಗೆಯಂತೂ ಪ್ರಮುಖವಾಗಿ ಚರ್ಚೆಯಾಗಬೇಕಾಗಿದೆ. ಹಾಗಾಗಿ ನಾಳಿನ ಕನ್ನಡ ನುಡಿಯ, ಜನರ ಅಸ್ತಿತ್ವಕ್ಕೆ ಮಾರಕವಾಗಿರುವ ಭಾರತದ ಭಾಶಾನೀತಿಯ ಬಗ್ಗೆ ಸಮ್ಮೇಳನದಲ್ಲಿ ದನಿ ಎತ್ತಿದ್ದು ಅರ್ಥಪೂರ್ಣವೇ ಆಗಿತ್ತು.

ಸಿ ಪಿ ಕೆಯವರು ಈ  ವಿಷಯದ ಬಗ್ಗೆ ಮಾತಾಡಿದ್ದು ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಒಂದು ಮಹತ್ವದ ಬೆಳವಣಿಗೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ದನಿ ಎತ್ತಿದ್ದು, ಶಾಸ್ತ್ರೀಯ ಭಾಶೆಯ ಸ್ಥಾನಮಾನದ ಬಗ್ಗೆ, ಅದಕ್ಕಾಗಿ ರೂಪಿಸುವ ಯೋಜನೆಗಳ ಬಗ್ಗೆ ಮಾತಾಡಿದ್ದು ಪ್ರಸ್ತುತವೇ ಆಗಿದೆ.

ನಿರ್ಣಯಗಳಲ್ಲಿ ಕಾಣದಾದ ಮೊದಲ ದಿನದ ನಿಲುವು!

ಮೂರನೇ ದಿನ ಕೈಗೊಳ್ಳಲಾದ ನಿರ್ಣಯಗಳನ್ನು ಗಮನಿಸಿ ನೋಡಿದರೆ, ಸಮ್ಮೇಳನವು ಇನ್ನಷ್ಟು ಮೂಲಭೂತವಾದ ಗಂಭೀರವಾದ ನಿರ್ಣಯಗಳನ್ನು ಕೈಗೊಳ್ಳಬೇಕಿತ್ತು ಅನ್ನಿಸದಿರದು. ಶಾಲೆಗಳ ಮುಚ್ಚುವಿಕೆಯ ವಿರುದ್ಧವಾದ ನಿಲುವು ಅಷ್ಟಕ್ಕೇ ಸೀಮಿತವಾಗದೆ ಮತ್ತಷ್ಟು ಮೇಲುಸ್ತರದಲ್ಲಿದ್ದು ಕರ್ನಾಟಕದಲ್ಲಿ ತಾಯ್ನುಡಿ ಕಲಿಕೆಯನ್ನು ಬಲಗೊಳಿಸುವುದರತ್ತ ಸಲಹೆ ನೀಡುವಂತೆ ಇರಬೇಕಿತ್ತು. ಹಾಗೆ ಕನ್ನಡ ಮತ್ತಿತರ ಹಿಂದೀಯೇತರ ಭಾಷೆಗಳ ಅಳಿವಿಗೆ ಕಾರಣವಾಗಿರುವ "ಭಾರತದ ಹುಳುಕಿನ ಭಾಷಾನೀತಿ" ಬದಲಾಗಬೇಕು ಎನ್ನುವ ನಿರ್ಣಯವೂ ಇರಬೇಕಿತ್ತು ಅನ್ನಿಸದಿರದು. ಇಂದು ಕರ್ನಾಟಕ, ನಾಳೆ ಒಂದೊಂದೇ ಭಾಷಿಕ ಜನಾಂಗಗಳು ಈ ಹುಳುಕಿನ ಭಾಶಾನೀತಿಯ ಬಗ್ಗೆ, ಹಿಂದೀ ಹೇರಿಕೆಯ ಬಗ್ಗೆ ದನಿ ಎತ್ತಿ ಇದನ್ನು ತಮ್ಮ ತಮ್ಮ ರಾಜ್ಯಗಳ ರಾಜಕಾರಣದ ಕೇಂದ್ರ ವಿಷಯವನ್ನಾಗಿಸಿದಾಗ, ಭಾರತವು ತನ್ನ ಕೆಟ್ಟ ಭಾಶಾನೀತಿಯನ್ನು ಕೈಬಿಟ್ಟು, ಸಮಾನತೆಯ, ಸಮಾನ ಅವಕಾಶದ, ಸಮಗೌರವದ ಭಾಷಾ ನೀತಿಯನ್ನು ರೂಪಿಸಲು ಮುಂದಾದೀತು. ಹೌದಲ್ವಾ ಗುರೂ!

ಕನ್ನಡಿಗ: ಸಾಧುಂಗೆ ಸಾಧು....


ಇದು ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದ ಬರಹ. ಇದರ ಪ್ರಮುಖ ಸಾಲುಗಳು ಮೂಲತಃ ಕಪ್ಪೆ ಅರಭಟ್ಟನ್ನ ವರ್ಣಿಸುದ್ರೂ ಇದನ್ನು ಸಾಮಾನ್ಯವಾಗಿ ನಾವೆಲ್ಲಾ ಬಳಸೋದು ಕನ್ನಡಿಗನನ್ನು ವರ್ಣಿಸೋಕೇ ಎಂದೇ... ಏಳನೇ ಶತಮಾನದ ಈ ಶಾಸನದಲ್ಲಿ ಹೀಗಿದೆ:
ಸಾಧುಂಗೆ ಸಾಧು
ಮಾಧುರ್ಯಂಗೆ ಮಾಧುರ್ಯನ್
ಬಾಧಿಪ್ಪ ಕಲಿಕೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ... 
ಅಂದರೆ ಈತನು ಸಾಧುಗಳಿಗೆ ಸಾಧುವೂ, ಮಧುರವಾಗಿ ವ್ಯವಹರಿಸುವವರೊಡನೆ ಮಧುರವಾಗಿ ವ್ಯವಹರಿಸುವವನೂ, ತೊಂದರೆಕೊಡುವವರಿಗೆ ಕಲಿಯುಗ ಯಮನೂ ಆಗಿರುವನು ಮತ್ತು ಈತ ಮಾಧವನಲ್ಲದೆ ಬೇರಾರೂ ಅಲ್ಲಾ... ಎಂದು. ಇಂತಹ ಹೊಗಳಿಕೆಗೆ ಅಂದಿನ ಕನ್ನಡಿಗ ಪಾತ್ರನಾಗಿದ್ದ ಎನ್ನುವುದನ್ನು ನೆನೆದಾಗ ಮನ ಹಿಗ್ಗುತ್ತದೆ. 

ಈಗ್ಯಾಕಪ್ಪಾ ಈ ಮಾತು ಅಂದರೆ...

ಹೌದು, ಈಗ್ಯಾಕಪ್ಪಾ ಈ ಮಾತೂ ಅಂದ್ರೆ, ಇತ್ತೀಚಿಗೆ ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯಲ್ಲೊಂದು ಸುದ್ದಿ ಪ್ರಕಟವಾಗಿತ್ತು. ಅದು ವಿಕೀಲೀಕ್ಸ್ ಲೀಕ್ ಮಾಡಿದ ಸುದ್ದಿ. ಅದರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ಼್ ಅಮೇರಿಕಾಗೆ ಹೋಗಲು ಬಯಸುವವರು ವೀಸಾಗಾಗಿ ಅರ್ಜಿ ಸಲ್ಲಿಸಿದಾಗ ಯಾವ ಭಾಷಿಕರಿಗೆ ಸರಳವಾಗಿ ವೀಸಾ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ಇದೆ. "ಇಂಗ್ಲೀಷೇತರ ಅರ್ಜಿದಾರ ದಕ್ಷಿಣ ಭಾರತೀಯರಲ್ಲಿ, ಕನ್ನಡಿಗರಿಗೆ ವೀಸಾ ಸಿಗೋದು ಸುಲಭ.. ಯಾಕೆಂದರೆ ಇವರಲ್ಲಿ ಮಾಹಿತಿ ನೀಡುವಲ್ಲಿ ಪ್ರಮಾದವೆಸಗುವರ ಪ್ರಮಾಣ ಉಳಿದವರಿಗಿಂತಾ ಕಡಿಮೆ, ಇವರು ಆರ್ಥಿಕವಾಗಿ ಸಬಲರು" ಎಂದು ಈ ವರದಿಯಲ್ಲಿ ಪ್ರಕಟವಾಗಿದೆ. 


ಕನ್ನಡಿಗರು ಪ್ರಾಮಾಣಿಕರು ಅನ್ನೋದು ಕನ್ನಡಿಗರು ಸಹೃದಯರು, ಶಾಂತಿಪ್ರಿಯರು, ಸಹನಶೀಲರು ಎಂಬೆಲ್ಲಾ ಬಿರುದುಗಳಂತೆಯೇ ಒಂದು ವಿಶೇಷಣವಾಗಿದ್ದು ನಾವೆಲ್ಲಾ ಹೆಮ್ಮೆ ಪಡಲು ಕಾರಣವಾಗಿದೆ. ಜೊತೆಯಲ್ಲೇ ನಮ್ಮ ಮೇಲಾಗುವ ದಬ್ಬಾಳಿಕೆಯ ವಿರುದ್ಧ ದನಿ ಎತ್ತಿದಾಗೆಲ್ಲಾ ಕನ್ನಡಿಗರನ್ನು ಸುಮ್ಮನಾಗಿಸಲೆಂದೇ ಇಂತಹ ವಿಶೇಷಣಗಳು ಬಳಕೆಯಾಗುತ್ತಿರುವುದನ್ನು ಕಂಡಾಗ ಈ ಮತ್ತೊಂದು ಬಿರುದಿನ ಬಗ್ಗೆ ಆತಂಕವೂ ಆಗುತ್ತಿದೆ ಗುರೂ!

ವಲಸಿಗ ಕನ್ನಡ ಕಲಿಯೋಲ್ಲಾ ಅನ್ನೋದು ಧರ್ಮಾನಾ?

ಇಂದು (೦೭.೦೬.೨೦೧೧) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರಕ್ಕೆ ಸಲ್ಲಿಸಿರೋ ಒಂದು ವರದಿಯ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ವರದಿಯಲ್ಲಿ ಸರ್ಕಾರಕ್ಕೆ ಹಲವಾರು ಶಿಫಾರಸ್ಸುಗಳನ್ನು ಚಂದ್ರು ಅವರು ನೀಡಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಒಂದು ಸಲಹೆ "ಕರ್ನಾಟಕದಲ್ಲಿ ವಲಸೆ ಬಂದು ನೆಲೆಸುವ ಪರಭಾಷಿಕರು ವರ್ಷವೊಂದರಲ್ಲಿ ಕನ್ನಡ ಕಲಿಯಬೇಕು. ೭ನೇ ತರಗತಿ ಹಂತದ ಕನ್ನಡ ಪರೀಕ್ಷೆಯನ್ನು ಪಾಸು ಮಾಡಬೇಕು" ಎನ್ನುವುದು. ಇಲ್ಲಿ ಇಂತಹ ಪರೀಕ್ಷೆ ಬೇಕಾ? ಹೇಗೆ ಪರೀಕ್ಷೆ ಮಾಡಬೇಕು? ಹೇಗೆ ಒಂದು ವರ್ಷದ ಅವಧಿ ಕಂಡು ಹಿಡಿಯಬೇಕು? ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮುಂದೇನು? ಅಸಲಿಗೆ, ಪರೀಕ್ಷೆ ಬೇಕಾ? ಎನ್ನುವುದನ್ನೆಲ್ಲಾ ಬದಿಗಿಟ್ಟು ನೋಡಿದಲ್ಲಿ ಈ ನಡೆಯ ಹಿಂದೆ "ವಲಸಿಗರು ಕನ್ನಡ ಕಲಿಯಬೇಕು" ಎನ್ನುವ ಕಾಳಜಿಯನ್ನು ಗುರುತಿಸಬಹುದಾಗಿದೆ. ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಅರ್ಥ ಮಾಡಿಕೊಂಡವರಿಗೆ ಚಂದ್ರು ಅವರ ಸಲಹೆ ಮೆಚ್ಚುಗೆಯಾಗುತ್ತದೆ.

ಪ್ರತಿಕ್ರಿಯೆ ಮತ್ತದರ ಹಿಂದಿನ ಮನಸ್ಥಿತಿ

ಹಾಗಾಗಿ ಇವತ್ತು ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಅಂದ್ರೆ ಅದು ಎಂಥೆಂಥಾ ವರದಿಗೆ, ಪ್ರತಿಕ್ರಿಯೆಗೆ ಕಾರಣವಾಗುತ್ತೇ ಅನ್ನೋದನ್ನು ನೀವು ಬೆಂಗಳೂರು ಮಿರರ್ ಪತ್ರಿಕೆಯನ್ನು ನೋಡೇ ಅರಿಯಬೇಕು. ಬೆಂಗಳೂರ್ ಮಿರರ್ ಪತ್ರಿಕೆ ವರದಿ ಮಾಡಿರೋ ಶೈಲಿಯನ್ನು ನೋಡಿ. ಈ ಪತ್ರಿಕೆಯಲ್ಲಿ ಸುದ್ದಿಯನ್ನು ನೀಡಿರುವ ಶೈಲಿಯೇ ಕೆಣಕುವಂತಹ, ಆಕ್ಷೇಪದ ದನಿಯಲ್ಲಿದೆ ಎಂದು ಅನ್ನಿಸುವುದು ಸಹಜ. ಇದಕ್ಕೆ ಬಂದಿರುವ ಪ್ರತಿಕ್ರಿಯೆಗಳಲ್ಲಿ ಕೆಲವು ಹೀಗಿವೆ ನೋಡಿ:ನಮ್ಮ ನಾಡಲ್ಲಿ ಬಂದವರು ನಮ್ಮ ನುಡಿಯನ್ನು ಕಲೀರಿ ಅಂದರೆ ಹರಿದು ಬಂದ ಈ ಕಮೆಂಟುಗಳನ್ನು ತಲೆಕೆಟ್ಟವರು ಬರೆದಿದ್ದಾರೆ ಎಂದು ಸುಲಭವಾಗಿ ತಳ್ಲಿ ಹಾಕಿಬಿಡಬಹುದು. ಆದರೆ ಇಂಥಾ ಮನಸ್ಥಿತಿಗೆ ಯಾರು ಕಾರಣ ಎಂದು ನೋಡಿದರೆ ಕಾಣುವುದು ಭಾರತದ ಭಾಷಾನೀತಿ. ಹೆಚ್ಚಿನದಾಗಿ ಇಲ್ಲಿ ಚಂದ್ರು ಶಿಫಾರಸ್ಸನ್ನು ವಿರೋಧಿಸಿ ಬಂದಿರೋ ಕಮೆಂಟುಗಳೆಲ್ಲಾ ಹಿಂದಿಯ ಪರವಾಗಿರುವುದು ಅಚ್ಚರಿಯಾಗಿ ಕಂಡರೂ ಅದು ಹಾಗಿಲ್ಲದೇ ಅದಕ್ಕೊಂದು ಕಾರಣವಿದೆ.

ಹುಳುಕಿನ ಭಾಷಾನೀತಿ!

ಭಾರತ ಅಳವಡಿಸಿಕೊಂಡಿರೋ ಭಾಷಾನೀತಿಯಿಂದಾಗಿ ಇಂದು ಭಾರತದ ಯಾವಮೂಲೆಯಲ್ಲಿದ್ದರೂ ಕಡ್ಡಾಯವಾಗಿ ಹಿಂದಿಯನ್ನು ಕಲಿಸಲಾಗುತ್ತದೆ. ಆ ಪ್ರಜೆ ತನ್ನ ಜೀವಮಾನದಲ್ಲೆಂದೂ ತನ್ನೂರು ಬಿಟ್ಟು ಹೊರಹೋಗದಿದ್ದರೂ ಹಿಂದಿಯನ್ನು ಓದಿ, ಕಲಿತು ಪಾಸಾಗಬೇಕಾಗಿದೆ. ಆದರೆ ಕನ್ನಡನಾಡಿಗೆ ಬದುಕಲು ಬರುವವರು ಕನ್ನಡ ಕಲಿಯಬೇಕಾದ್ದು ಕಡ್ಡಾಯವಲ್ಲ. ಮನರಂಜನೆ, ಆಡಳಿತ, ಜಾಹೀರಾತು, ಗ್ರಾಹಕಸೇವೆ ಎಲ್ಲದರಲ್ಲಿ ಹಿಂದಿಯನ್ನು ತುರುಕುವ ಮೂಲಕ ಭಾರತ ಸಾಧಿಸಿರುವುದೇನೆಂದರೆ "ಈ ದೇಶದ ಯಾವ ಮೂಲೆಗೆ ಹೋದರೂ ಹಿಂದಿಯವನಿಗೆ ಅನಾನುಕೂಲವಾಗಬಾರದು" ಎಂಬುದನ್ನು! ರಾಜ್ಯಸರ್ಕಾರವೇ ತ್ರಿಭಾಷಾ ಸೂತ್ರಾ ಅಂತಾ ಒಪ್ಕೊಂಡು ಮೆಟ್ರೋದಲ್ಲಿ ಹಿಂದೀನಾ ಬಳಸಕ್ ಶುರು ಮಾಡುದ್ರೆ ಯಾಕೆ ಅವರಿಗಾದ್ರೂ ಕನ್ನಡ ಕಲೀಬೇಕಾಗುತ್ತೇ? ಆದರೆ ಈ ಸಹಜ ನ್ಯಾಯ ಭಾರತ ಸರ್ಕಾರದ ಭಾಷಾನೀತಿಯ ಕಾರಣದಿಂದ ಇಂದು ಭಾರತದಲ್ಲಿ ಇಲ್ಲವಾಗಿದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆ ಕಲಿಯುವುದು ಕಡ್ಡಾಯ ಅಂತಾ ಕೇಂದ್ರಸರ್ಕಾರವಂತೂ ಎಂದಿಗೂ ಹೇಳಲಾರದು. ಆಡಳಿತ ಭಾಷೆಯಾಗಿ ಹಿಂದಿ/ ಇಂಗ್ಲೀಷ್ ಇರೋದ್ರಿಂದ ಕೇಂದ್ರಸರ್ಕಾರ ಕರ್ನಾಟಕದಲ್ಲಿರೋ ಕನ್ನಡಿಗರಿಗೆ ಹಿಂದಿಯನ್ನು ಕಡ್ಡಾಯ ಮಾಡೀತೇ ಹೊರತು ಪರಭಾಷಿಕರಿಗೆ ಕನ್ನಡವನ್ನಲ್ಲ. ಅರವತ್ತು ವರ್ಷಗಳಿಂದ ತಲೆಯಲ್ಲಿ ತುಂಬುತ್ತಾ ಬಂದಿರುವ ಹಿಂದಿ ಭಾರತದ ರಾಷ್ಟ್ರಭಾಷೆ, ಹಿಂದೀ ರಾಷ್ಟ್ರಪ್ರೇಮದ ಸಂಕೇತ, ಭಾರತದ ಒಗ್ಗಟ್ಟಿಗೆ ಸಾಧನ ಎಂಬೆಲ್ಲಾ ಸಿಹಿಲೇಪಿತ ವಿಷದ ಗುಳಿಗೆಗಳು ನಮ್ಮವರ ತಲೆಯಲ್ಲೇ ಹೊಕ್ಕಿರುವಾಗ ಪರಭಾಶಿಕರಿಂದ ಬಂದಿರೋ ಈ ಪ್ರತಿಕ್ರಿಯೆಗಳು ಹೀಗಿಲ್ಲದೇ ಇನ್ನು ಹೇಗೆ ಇರಲು ಸಾಧ್ಯಾ ಗುರೂ?

ವಲಸಿಗನ ಧರ್ಮ!

ಹೌದು, ವಲಸಿಗನಿಗೊಂದು ಧರ್ಮವಿದೆ. ತಾನು ವಲಸೆ ಹೋಗುವ ಪ್ರದೇಶದ ನುಡಿ, ಸಂಸ್ಕ್ರುತಿಗಳಿಗೆ ಧಕ್ಕೆ ತರದೆ ಪೂರಕವಾಗಿ ನಡೆದುಕೊಂಡು ಆಯಾ ನಾಡಿನ ಮುಖ್ಯವಾಹಿನಿಯಲ್ಲಿ ಬೆರೆಯಬೇಕು ಎನ್ನುವುದೇ ಅದು. ಯಾರಿಗೂ ಇನ್ನೊಂದು ನಾಡಿನ ಅನನ್ಯತೆಯನ್ನು ಅಳಿಸುವ ಹಕ್ಕಿಲ್ಲ. ಹಾಗಾಗಿ ಆಯಾ ಪ್ರದೇಶದ ನುಡಿಯನ್ನು ಕಲಿತು ಅದರಲ್ಲಿ ವ್ಯವಹರಿಸಲೇ ಬೇಕಾಗಿದೆ. ಇಂತಹ "ಬೇಕು"ವನ್ನು ವಲಸಿಗನಿಂದ ನಿರೀಕ್ಷಿಸುವುದು ಆಯಾ ನಾಡಿಗರ ಹಕ್ಕಾಗಿದೆ. ಇಷ್ಟಕ್ಕೂ ವಲಸಿಗರು ಕರ್ನಾಟಕದಲ್ಲಿದ್ದ ಮೇಲೆ ಕನ್ನಡ ಕಲೀರಿ ಅಂತಾ ಯಾರಾದ್ರೂ ಯಾಕೆ ಹೇಳಬೇಕು? "ಯಾವ ನಾಡಿನಲ್ಲಿ ನಾವು ಬದುಕುತ್ತೇವೋ ಆ ನಾಡಿನ ಭಾಷೆಯನ್ನು ಕಲಿತೇ ಕಲೀತೀವಿ" ಅನ್ನೋದು ಸಹಜ ಧರ್ಮವಲ್ಲವೇ? ನಾನ್ಯಾಕೆ ಕನ್ನಡ ಕಲೀಬೇಕು ಅನ್ನುವ ಉದ್ಧಟತನ ತೋರುವುದು ತಪ್ಪಲ್ಲವೇ? ಬೆಂಗಳೂರು ಭಾರತದ ಸ್ವತ್ತು ಅನ್ನೋದನ್ನು "ನಿಮ್ಮೂರಲ್ಲಾ ಇದು, ಇದು ಇಡೀ ಇಂಡಿಯಾಗೆ ಸೇರಿದ್ದು... ಇಲ್ಲಿ ನಾವು ನಿಮ್ಮ ಭಾಷೆ ಕಲಿಯಲ್ಲಾ, ಅದೇನು ಮಾಡ್ಕೋತೀರೋ ಮಾಡ್ಕೊಳ್ಳೀ" ಅನ್ನುವಂತಹ ಅನಿಸಿಕೆಯಿಂದಾಗಿ ಆಡಿದರೆ, ಆ ಮಾತುಗಳು ವಲಸಿಗ ಧರ್ಮಕ್ಕೆ ವಿರುದ್ಧವಾಗಿಲ್ಲವೇ? ಇಂಥಾ ಮನಸ್ಥಿತಿಗೆ ಕಾರಣವಾಗಿರೋ ಭಾರತದ ರೀತಿ ನೀತಿ, ಕಾಯ್ದೆ ಕಾನೂನುಗಳು ಬದಲಾಗಬೇಡವೇ?

ಕನ್ನಡ ಚಿತ್ರರಂಗದ ರಣಧೀರ!

ಮೈಸೂರು ರಾಜ್ಯದ ದೊರೆಯೇ ರಣಾಧೀರ ನಾಯಕನೇ
ನಿನ್ನಂಥವರಾರು ಇಲ್ವಲ್ಲೋ ಲೋಕದಾ ಮ್ಯಾಲೆ!
ನಿನ್ನಂಥೋರ್ ಯಾರೂ ಇಲ್ವಲ್ಲೋ!!
ಹಿಂದೆ ಇನ್ನೂರು ದಂಡು! ಮುಂದೆ ಮುನ್ನೂರು ದಂಡು
ನಿನ್ನಂಥೋರ್ ಯಾರೂ ಇಲ್ಲಲ್ಲೋ ಲೋಕದ ಮ್ಯಾಲೆ!!
ತಿರುಚನಾಪಳ್ಳಿಯೊಳಗೆ ಕೊಬ್ಬಿದಾ ಮಲ್ಲಜಟ್ಟಿ
ಉಟ್ಟಾ ಚಡ್ಡಿಯನ್ನು ದಿಡ್ಡಿ ಬಾಗಿಲ ಮೇಲೆ
ತೂಗಿ ಬಿಟ್ಟನಂತಾ ಕೇಳಿ ಕಿಡಿಕಿಡಿಯಾದಾ ದೊರೆಯೇ!!
ಮಲ್ಲರ ಮಾನಾ ಕಾಯುವೆನೆಂದು
ಮಲ್ಲ ವೇಷವಾ ತೊಟ್ಟುಕೊಂಡು ತಿರುಚನಾಪಳ್ಳಿಗೆ
ಹೋಗಿ ಚಡ್ಡಿ ತೆಗೆದೆಳೆದಾ ದೊರೆಯೇ!!
ಮಲ್ಲಾಯುದ್ಧದಲ್ಲಿ ಸಮನಿಲ್ಲಾ ನಮ್ಮಾ ದೊರೆಗೆ
ತೋರ್ಯಾರೋ ಕೈಯ್ಯಾಚಳಕಾ!
ನೋಟಕ್ಕೆ ಕಾಣಾದಂತೆ ಸೊಂಟಾದೊಳಗಿದ್ದ ಮಹಾ
ನರಸಿಂಹಾನೆಂಬೋ ಕತ್ತಿಯಿಂದಾ
ರುಂಡಾಬೇರೇಯಾಗದಂತೆ ಕಡಿದರೋ
ನಮ್ಮಾ ರಣಧೀರಾ ನಾಯಕಾ!!
(ಸಿ. ವೀರಣ್ಣ - ನಾಟಕ: ಹುತ್ತವ ಬಡಿದರೆ).

ಕನ್ನಡಿಗರ ಕಣ್ನಮುಂದೆ ಮಯೂರ, ಪುಲಿಕೇಶಿ, ರಣಧೀರ ಕಂಠೀರವ, ಶ್ರೀಕೃಷ್ಣದೇವರಾಯರನ್ನು ತಾನೇ ಅವರಾಗಿ ತಂದಿಟ್ಟವರು ಡಾ. ರಾಜ್‍ಕುಮಾರ್. ಇವತ್ತು ನಮ್ಮ ರಾಜಣ್ಣನ ಹುಟ್ಟುಹಬ್ಬ. ಇಡೀ ನಾಡು ರಾಜಣ್ಣ ಮತ್ತೊಮ್ಮೆ ಹುಟ್ಟಿಬಾ ಎಂದು ಮನದುಂಬಿ ಹಂಬಲಿಸುತ್ತಿದೆ.

ರಾಜ್‍ರಿಂದ ಪಡೆಯಬೇಕಾದ ಪ್ರೇರಣೆ..

ಡಾ ರಾಜ್ ಬರೀ ತೆರೆಯಮೇಲಷ್ಟೇ ರಣಧೀರನಲ್ಲ. ಕನ್ನಡ ಚಿತ್ರರಂಗ ನೆಲೆಯಿಲ್ಲದೆ ಮದ್ರಾಸನ್ನು ಅವಲಂಬಿಸಿ ತಮಿಳು ತೆಲುಗು ಚಿತ್ರರಂಗದ ಆಲದ ಮರದಡಿ ಟಿಸಿಲೊಡೆಯಲು ತಡವರಿಸುತ್ತಿದ್ದಾಗ, ಅದಕ್ಕೆ ತನ್ನದೇ ಅಸ್ತಿತ್ವ ಕಟ್ಟಿಕೊಳ್ಳಲು ನೆರವಾದದ್ದು ನಮ್ಮ ರಾಜ್. ಕನ್ನಡಿಗರ ಉಳಿವು ನಮ್ಮ ಉದ್ದಿಮೆಗಾರಿಕೆಯು ಹೆಚ್ಚುವುದರಲ್ಲಿ ಮಾತ್ರವೇ ಅಡಗಿದೆ ಎನ್ನುವುದನ್ನು ಮನಗಂಡು ಬಾಲಕೃಷ್ಣ, ನರಸಿಂಹರಾಜು, ಜಿ.ವಿ.ಅಯ್ಯರ್ ಅವರೊಡನೆ ಸೇರಿ, ಊರೂರು ಅಲೆದು ನಾಟಕ ಪ್ರದರ್ಶನ ನೀಡಿ, ಹಣ ಒಟ್ಟುಮಾಡಿ ತೆಗೆದ ಚಿತ್ರವೇ ರಣಧೀರ ಕಂಠೀರವ. ನೋಡ್ರೀ.. ಆ ಮುಖದಲ್ಲಿ ಅದೇ ಸ್ವಾಭಿಮಾನ ಹೇಗೆ ತುಂಬಿ ತುಳುಕುತ್ತಿದೆ. ಆ ಕಣ್ಣಲ್ಲಿ ಜಗತ್ತನ್ನೇ ಗೆಲ್ಲುವ ಛಲ ಹೇಗೆ ಉಕ್ಕುತ್ತಿದೆ... ಇಂದು ಕನ್ನಡಿಗರಿಗೆ ಬೇಕಿರುವುದು ಇಂತಹ ಎದೆಗಾರಿಕೆಯೇ. ಹೊಸದನ್ನು ಮಾಡುವ, ಸವಾಲು ಎದುರಿಸಿ ಗೆಲ್ಲುವ ದಿಟ್ಟತನ, ನನ್ನತನ ಬಿಡೆನೆಂಬ ಛಲಗಾರಿಕೆಗಳೇ ಕನ್ನಡಿಗರನ್ನು, ಕನ್ನಡನಾಡನ್ನೂ ಉದ್ಧರಿಸಬಲ್ಲವು. ರಾಜ್ ನಮ್ಮೊಡನೆ ಇಲ್ಲದಿದ್ದರೇನಂತೆ? ರಾಜ್ ಎಂಬ ಶಕ್ತಿ ನಮಗೆ ಪ್ರೇರಣೆಯಾಗಿದೆಯಲ್ಲವಾ? ಈ ಮಾತು ಕನ್ನಡಚಿತ್ರರಂಗಕ್ಕೂ ಅನ್ವಯಿಸುತ್ತೆ ಗುರೂ...

ಯುವಜನೋತ್ಸವ ಮರೆತ ಏಕತೆಯ ಮೂಲಮಂತ್ರ!

ನಮ್ಮದು ಕನ್ನಡಪರ ಸರ್ಕಾರ ಅಂತಾ ಗಂಟೆಗೊಮ್ಮೆ, ಗಳಿಗೆಗೊಮ್ಮೆ ಬಡ್ಕೊಳ್ಳೋ ಘನ ಕರ್ನಾಟಕ ರಾಜ್ಯಸರ್ಕಾರವೇ ಮಾಡಿರೋ ಈ ಕೆಲಸವನ್ನು ನೋಡಿ. ನಿನ್ನೆಯ (10.11.2010ರ) ವಿಜಯಕರ್ನಾಟಕದಲ್ಲಿ ಇಂಥದ್ದೊಂದು ಜಾಹೀರಾತನ್ನು ಹಾಕಲಾಗಿದೆ. ಇದರಲ್ಲಿ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ಯುವಕರಿಗೆ ಕರೆಕೊಡಲಾಗಿದೆ. ಆದರೆ ಈ ಯುವಜನೋತ್ಸವದಲ್ಲಿ ಭಾಷಣ ಸ್ಪರ್ಧೆ ಮತ್ತು ಏಕಾಂಕ ನಾಟಕ ಸ್ಪರ್ಧೆಗಳು ಹಿಂದಿ/ ಇಂಗ್ಲೀಷಿನಲ್ಲಿರಬೇಕಂತೆ! ಇಲ್ಲಿ ಬೇರೆಬೇರೆ ಹಂತಗಳಲ್ಲಿ ಗೆದ್ದು ಮುಂದೆ ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿ, ಅಲ್ಲೂ ಬಹುಮಾನ ಗೆಲ್ಲಿ, ಹೊರದೇಶದಲ್ಲಿ ನಿಮ್ಮ ಪ್ರತಿಭೆ ತೋರಿಸೋ ಅವಕಾಶ ಗಿಟ್ಟುಸಿಕೊಳ್ಳಿ ಅಂತಾ ನಮ್ಮ ಹಳ್ಳಿಹಳ್ಳಿಯಲ್ಲಿ ಕರೆಕೊಟ್ಟಿದ್ದುನ್ನ ನೋಡಿ ನಮ್ ಜನರೇನಾದ್ರೂ ಹಿಗ್ಗುದ್ರೆ ಬಾಯಿಗೆ ಮಣ್ಣಾಕ್ಕೊಂಡಂಗೇನೆ! ಏಕಂದ್ರೆ ನೀವು ನಾಟಕ ಮಾಡಬೇಕಾದ್ದು ಹಿಂದೀ/ ಇಂಗ್ಲಿಷಲ್ಲಿ ಅಂತಿದೆ ಈ ಜಾಹೀರಾತು. ಇದುನ್ ಹೊರಡ್ಸಿರೋದು ನಮ್ಮ ಕನ್ನಡನಾಡಿನ, ಕನ್ನಡಿಗರನ್ನು ಮುನ್ನಡೆಸುವ, ಜಗತ್ತಿನ ಕೆಡುಕುಗಳಿಂದ ಕನ್ನಡಿಗರನ್ನು ಕಾಯಬೇಕಾದ ಘನ ಕರ್ನಾಟಕ ರಾಜ್ಯಸರ್ಕಾರ!

ರಾಷ್ಟ್ರೀಯ ಅಂತಂದ್ರೆ ಹಿಂದೀ/ ಇಂಗ್ಲೀಷಾ?

ಹೌದೂ, ಭಾರತದ ಮೂಲೆಮೂಲೆಗಳ ಪ್ರತಿಭೆಗಳನ್ನು ಬೆಳಕಿಗೆ ತರಲು ಹೊರಟವರಿಗೆ ಭಾಷೆಯ ಮಿತಿ ಹಾಕುವಂತಹ ಈ ಕಟ್ಟಳೆಯಾದ್ರೂ ಯಾಕೆ ಬೇಕಿತ್ತು? ಇಲ್ಲಿ ಭಾರತದ ಎಲ್ಲಾ ನುಡಿಗಳಿಗೂ ಸ್ಥಾನ ಕೊಡಬೇಕಲ್ವಾ? ಇಲ್ಯಾಕೆ ಕನ್ನಡದಲ್ಲಿ ನಾಟಕ ಮಾಡುವುದು, ಭಾಷಣ ಮಾಡುವುದು ತಪ್ಪಾಗುತ್ತೆ? ವೈವಿಧ್ಯತೆ, ನಾನಾ ಭಾಗಗಳ ನಾನಾ ಸಂಸ್ಕೃತಿಯ ಜನರನ್ನು ಪರಸ್ಪರ ಪರಿಚಯಿಸಿ ರಾಷ್ಟ್ರೀಯ ಏಕತೆಯನ್ನು ಹೆಚ್ಚಿಸಲು ಈ ಯುವಜನೋತ್ಸವ ನಡೆಸಲಾಗುತ್ತದೆ ಅನ್ನುವ ಕೇಂದ್ರಸರ್ಕಾರದ ಮೂಲೋದ್ದೇಶವೇ ಇಂಗ್ಲೀಷ್/ ಹಿಂದೀ ಮಾತ್ರಾ ಬಳಸಿ ಅನ್ನುವ ಈ ನಿಲುವಿಂದ ಅರ್ಥಹೀನವಾಗುವುದಿಲ್ಲವೇ? ಎಲ್ಲಾ ಭಾಷೆಗಳಿಗೆ ಸಮಾನ ಗೌರವ ಕೊಡುತ್ತೇವೆ, ವೈವಿಧ್ಯತೆಯಲ್ಲಿ ಏಕತೆ ಸಾಧಿಸುತ್ತೇವೆ ಎನ್ನುವ ನಾಡಿನಲ್ಲಿ ಹೀಗಿರುವುದು ಸರಿಯೇ? ಇದು ಏಕತೆಗೆ ಪೂರಕವೇ? ಹಿಂದಿ/ ಇಂಗ್ಲೀಷ್ ಅರಿಯದ ಭಾರತೀಯರಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಹಕ್ಕೇ ಇಲ್ಲವೇ? ಏನಂತೀರಾ ಗುರೂ?

ನಾಡಹಬ್ಬದ ನಲ್ಮೆಯ ಹಾರೈಕೆಗಳು



ಎಲ್ಲ ಕನ್ನಡ ಬಾಂಧವರಿಗೂ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ ಹಾರೈಕೆಗಳು. ಈ ಸುದಿನ ನಮ್ಮ ನಿನ್ನೆಗಳನ್ನು ನೆನಪು ಮಾಡುತ್ತಾ ಇಂದು ಪ್ರೇರಣೆ ನೀಡಿ ನಾಳೆಗಳನ್ನು ಕಟ್ಟಲು ನೆರವಾಗಲಿದೆಯೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ಬನವಾಸಿ ಬಳಗವು ನಿಮ್ಮ ಮುಂದೆ ಒಂದು ಧ್ವನಿಮುದ್ರಿಕೆಯನ್ನು ಪ್ರಸ್ತುತಪಡಿಸುತ್ತಿದೆ. ಇದನ್ನು ಕೇಳಿ, ನೋಡಿ. ಇದರಲ್ಲಿ ನಮ್ಮ ನಾಡಿನ ಹೆಮ್ಮೆಯ ಇತಿಹಾಸದ ಪ್ರಮುಖ ಘಟ್ಟಗಳಲ್ಲಿ ಕೆಲವುಗಳ ಬಗ್ಗೆ ಮಾತಾಡಲಾಗಿದೆ. ನೀವೂ ಕೇಳಿ. ನಿಮ್ಮ ಪರಿಚಿತರಿಗೂ ಕೇಳಿಸಿ.

ಇತಿಹಾಸದ ಪ್ರಾಮುಖ್ಯತೆ

ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ, ಲೋಕಮಾನ್ಯ ಬಾಲಗಂಗಾಧರ ತಿಲಕರ ಸಹವರ್ತಿಯಾಗಿ, ಕರ್ನಾಟಕ ಪ್ರಾಂತ್ಯದಲ್ಲಿ ದುಡಿಯಲು ಮುಂದಾಗಿದ್ದ ಶ್ರೀ ಆಲೂರು ವೆಂಕಟರಾಯರನ್ನು ಒಂದು ಪ್ರಶ್ನೆ ಕಾಡುತ್ತಿತ್ತಂತೆ. ನೆರೆಯ ಆಂಧ್ರ, ಮಹಾರಾಷ್ಟ್ರ ಮೊದಲಾದ ಪ್ರದೇಶಗಳ ಹೋರಾಟಗಾರರಿಗೆ ಇರುವ ಪ್ರೇರಣೆ ಕನ್ನಡಿಗರಿಗೆ ಇಲ್ಲವಲ್ಲಾ, ಕನ್ನಡಿಗರಲ್ಲಿ ಕೆಚ್ಚೇ ಇಲ್ಲವಲ್ಲಾ ಅನ್ನಿಸುತ್ತಿತ್ತಂತೆ. ಇದರ ಬೇರು ಹುಡುಕಿದಾಗ ಅವರು ಕಂಡುಕೊಂಡ ಸತ್ಯ... ತೆಲುಗರಿಗೆ ಪ್ರತಾಪರುದ್ರದೇವ, ನನ್ನಯ್ಯಭಟ್ಟರ ಇತಿಹಾಸವೂ, ಮಹಾರಾಷ್ಟ್ರೀಯರಿಗೆ ರಾಮದಾಸ, ಶಿವಾಜಿಯ ಇತಿಹಾಸವೂ ಕೊಡುವ ಸ್ಪೂರ್ತಿ, ಉಕ್ಕೇರಿಸುವ ರಾಷ್ಟ್ರೀಯತೆಯ ಭಾವನೆಗಳು ಕನ್ನಡಗರಲ್ಲೇ ಅದೇ ಪರಿಣಾಮ ಮಾಡಲಾರದು. ಕನ್ನಡದ ಜನರಲ್ಲಿ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಲು ಪರಿಣಾಮಕಾರಿಯಾದ ಸಾಧನ... ನಮ್ಮ ಹಿರಿಯರ ಕಥನ ಮತ್ತವರ ಸಾಧನೆಗಳು ಮಾತ್ರಾ. ಅಂತಹ ಹಿರಿಮೆ ಮತ್ತು ಹಿನ್ನೆಲೆಗಳು ಕನ್ನಡಿಗರಿಗೆ ಇಲ್ಲವೇ? ಎಂಬ ಪ್ರಶ್ನೆ ಕಾಡತೊಡಗಿತಂತೆ. ಒಂದೊಮ್ಮೆ ಆನೆಗೊಂದಿಯಿಂದ ಕಂಡ ಪಾಳುಹಂಪೆಯತ್ತ ಆಸಕ್ತರಾಗಿ, ಅಲ್ಲಿಗೆ ಭೇಟಿ ನೀಡಿದಾಗ ನಮ್ಮ ಕನ್ನಡಿಗರ ನಿನ್ನೆಗಳು ಇಂತಹ ಸೊಬಗಿನದ್ದೇ ಎನ್ನಿಸಿತಂತೆ. ನಂತರ ಇತಿಹಾಸ, ಶಾಸನಗಳ ಆಳವಾದ ಅಧ್ಯಯನ ಕೈಗೊಂಡು ಆಲೂರರು ಕರ್ನಾಟಕ ಗತವೈಭವ ಎಂಬ ಹೊತ್ತಗೆಯನ್ನು ಬರೆದರಂತೆ. ಮುಂದೆ ಈ ಹೊತ್ತಗೆ ಕನ್ನಡನಾಡಿನ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಕೈದೀವಿಗೆಯಾದದ್ದು ನಿಜ.
ಒಟ್ಟಿನಲ್ಲಿ ನಿನ್ನೆಯ ನಮ್ಮವರ ಸಾಧನೆಗಳು, ನಮ್ಮ ನಾಡಿನ ಇತಿಹಾಸ ನಮ್ಮಲ್ಲಿ ಸ್ಪೂರ್ತಿ ತುಂಬಿ ಇಂದು ನಾವೂ ಏನಾದರೂ ಸಾಧಿಸಬೇಕೆಂಬ ಉತ್ಸಾಹ ಮತ್ತು ಛಲಕ್ಕೆ ಕಾರಣವಾಗಲಿ. ಸಾಧನೆಯ ಶಿಖರವೇರಲು ನಮಗೂ ಯೋಗ್ಯತೆಯಿದೆ ಎನ್ನುವ ಮನವರಿಕೆಯು ಆತ್ಮವಿಶ್ವಾಸಕ್ಕೆ ಕಾರಣವಾಗಲಿ ಎಂಬುದೇ ಹೀಗೆ ಇತಿಹಾಸದ ಪುಟಗಳನ್ನು ತಿರುವಿ ಹಾಕುವುದರ ಉದ್ದೇಶವಾಗಿದೆ.

ಮಾಹಿತಿಗಳ ಮೂಲ

ಈ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ಇಂತಹ ಒಂದು ಪ್ರಯತ್ನ ಮಾಡಿ ನಿಮ್ಮ ಮುಂದಿಡಲಾಗಿದೆ. ಈ ಮಾತುಗಳಿಗೆ ಅನೇಕ ಗ್ರಂಥಗಳ ಅಧ್ಯಯನವೇ ಆಧಾರವಾಗಿದೆ. ಮುಖ್ಯವಾಗಿ ಆಲೂರು ವೆಂಕಟರಾಯರು ಬರೆದಿರುವ ಕರ್ನಾಟಕ ಗತವೈಭವ, ಅಂದಿನ ಮೈಸೂರು ರಾಜ್ಯಸರ್ಕಾರ ಸಾಹಿತ್ಯ ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ವತಿಯಿಂದ ಹೊರತಂದಿದ್ದ ಕರ್ನಾಟಕದ ಪರಂಪರೆ - I & II, ಹಂಪಿ ವಿಶ್ವವಿದ್ಯಾಲಯದ ಪ್ರವಾಸಿ ಕಂಡ ವಿಜಯನಗರ, ಡಾ. ಚಿದಾನಂದ ಮೂರ್ತಿಗಳ ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ ಎನ್ನುವ ಹೊತ್ತಗೆಗಳು ಪ್ರಮುಖವಾದವು.

ಕೊನೆಹನಿ: ಈ ಬಾರಿ ಕೇವಲ ಇತಿಹಾಸದ ವೀರಪರಂಪರೆಯ ಒಂದು ಮಗ್ಗುಲಿನ ಬಗ್ಗೆ ಮಾತ್ರಾ ಮಾತನ್ನಾಡಲಾಗಿದೆ. ಕಲೆ, ಸಾಹಿತ್ಯ, ಸಂಗೀತ, ದಾರ್ಶನಿಕತೆ, ಆಧುನಿಕ ಕರ್ನಾಟಕದ ಹಿರಿಮೆ, ಧಾರ್ಮಿಕತೆ, ಸಾಧಕರು, ತಂತ್ರಜ್ಞಾನ, ನಮ್ಮ ನಾಡಿನ ಸಂಪನ್ಮೂಲಗಳು... ಹೀಗೆ ಅನೇಕ ಮಗ್ಗಲುಗಳಲ್ಲಿಯೂ ಕರ್ನಾಟಕ ಅತ್ಯಂತ ಶ್ರೀಮಂತ. ಈ ಪುಣ್ಯಭೂಮಿ ನಮ್ಮದೆಂಬ ಹಿರಿಮೆ ನಮ್ಮೆಲ್ಲರಲ್ಲಿರಲಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

ಸದ್ಯಕ್ ಇವ್ರು ಕರ್ನಾಟಕದ ಮುಖ್ಯಮಂತ್ರಿಗಳಾಗಿರಲಿ ಸಾಕು.


ದಿನಾಂಕ 03.10.2010ರ ಪ್ರಜಾವಾಣಿಯ 5ನೇ ಪುಟದಲ್ಲಿ ಬಂದಿರೋ ಸುದ್ದಿಯಂತೆ ಕರ್ನಾಟಕ ರಾಜ್ಯಸರ್ಕಾರವು ಭಾರತದ ಕೇಂದ್ರಸರ್ಕಾರಕ್ಕೆ ಭಾರತ ದೇಶದ ಹೆಸರನ್ನು ಇಂಡಿಯಾ ಎಂಬುದರ ಬದಲಾಗಿ ಭಾರತ ಎಂದೇ ನಾಮಕರಣ ಮಾಡಲು ಪ್ರಸ್ತಾಪ ಸಲ್ಲಿಸುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಯಡ್ಯೂರಪ್ಪನವರು ಹೇಳಿಕೆ ನೀಡಿದ್ದಾರೆ. ಮಾಸ್ತಿ ಸಮಗ್ರ ಸಾಹಿತ್ಯ ಅವಲೋಕನ ಎಂಬ ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ. ಅರೆರೆ... ಮಾಸ್ತಿ ಪುಸ್ತಕಕ್ಕೂ ಇಂಡಿಯಾ ಹೆಸರಿಗೂ ಏನಪ್ಪಾ ಸಂಬಂಧಾ? ಅನ್ನೋ ಅಚ್ಚರಿಗೆ ಉತ್ತರ ಸಿಕ್ಕಿಲ್ಲದಿದ್ದರೂ ಸದರಿ ಕಾರ್ಯಕ್ರಮದ ಮತ್ತೊಬ್ಬ ಅತಿಥಿಗಳಾಗಿದ್ದ ಹಿರಿಯರೂ ಕನ್ನಡದ ಕೆಚ್ಚಿನ ಹೋರಾಟಗಾರರೂ, ಖ್ಯಾತ ಚಿಂತಕರೂ ಆಗಿರುವ ಶ್ರೀ. ಚಿದಾನಂದಮೂರ್ತಿಯವರು ಆಡಿದ ಮಾತಿಗೆ, ನೀಡಿದ ಸಲಹೆಗೆ ಸ್ಪಂದಿಸಿ ನಮ್ಮ ಮುಖ್ಯಮಂತ್ರಿಗಳು ಹೀಗಂದಿದಾರಂತೆ!

ನಮ್ಮೂರ ಹೆಸರು ಬದಲಾವಣೆ ಏನಾಯ್ತು ಯಜಮಾನ್ರೇ?

2005ರ ಡಿಸೆಂಬರ್ 11ನೇ ತಾರೀಕಿನಂದು ಕರ್ನಾಟಕ ರಾಜ್ಯಸರ್ಕಾರವು, ಬ್ಯಾಂಗಲೂರ್ ಎಂಬ ಹೆಸರನ್ನು ಬೆಂಗಳೂರು ಎಂಬುದಾಗಿ ಬದಲಾಯಿಸಲು ಹಿರಿಯ ಸಾಹಿತಿಗಳಾದ ಶ್ರೀ. ಯು.ಆರ್.ಅನಂತಮೂರ್ತಿಯವರು ನೀಡಿರುವ ಸಲಹೆಯನ್ನು ಜಾರಿಗೆ ತರುತ್ತೇವೆಂದು ಘೋಷಿಸಿತು. ಅದಕ್ಕೆ ಪೂರಕವಾಗಿ 2006ರ ಸೆಪ್ಟೆಂಬರ್ 27ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂತಹ ಒಂದು ಗೊತ್ತುವಳಿಯನ್ನು ಅಂಗೀಕರಿಸಲಾಯಿತು. ಸದರಿ ಗೊತ್ತುವಳಿಯನ್ನು ಒಪ್ಪಿಕೊಂಡ ಘನ ಕರ್ನಾಟಕ ರಾಜ್ಯಸರ್ಕಾರ ನವೆಂಬರ್ ಒಂದರಂದು ಬ್ಯಾಂಗಲೂರ್ ಹೆಸರನ್ನು ಬೆಂಗಳೂರು ಎಂಬುದಾಗಿ ಘೋಷಿಸಿತು. ಜೊತೆಗೆ ಮಂಗಳೂರು, ಬೆಳಗಾವಿ, ಮೈಸೂರು, ಶಿವಮೊಗ್ಗ, ಹೊಸಪೇಟೆ, ಹುಬ್ಬಳ್ಳಿ, ಚಿಕ್ಕಮಗಳೂರು, ಕಲ್ಬುರ್ಗಿ, ವಿಜಾಪುರ, ಬಳ್ಳಾರಿ, ತುಮಕೂರು ಮತ್ತು ಕಾಪುಗಳ ಹೆಸರನ್ನೂ ಬದಲಿಸುವ ಘೋಷಣೆ ಹೊರಬಿತ್ತು. ಆಮೇಲೆ ಅದನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಒಪ್ಪಿಗೆಗಾಗಿ ಕಳಿಸಲಾಯಿತು. ಇದೆಲ್ಲಾ ಶುರುವಾಗಿದ್ದು ಧರಂಸಿಂಗ್ ಅವರ ಕಾಲದಲ್ಲಾದರೂ ಎಚ್.ಡಿ.ಕುಮಾರಸ್ವಾಮಿಯವರ ಕಾಲದಲ್ಲಿ ಗೃಹಸಚಿವಾಲಯಕ್ಕೆ ಕಳಿಸಲಾಯಿತು. 2007ರ ಜುಲೈ 14ರ ದಿನಪತ್ರಿಕೆಗಳಲ್ಲಿ ಬೆಳಗಾವಿ ಒಂದು ಬಿಟ್ಟು ಉಳಿದ ಹೆಸರುಗಳ ಬದಲಾವಣೆಗೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿರೋ ಸುದ್ದಿ ಬಂತು. ಆಮೇಲೇನಾಯಿತು ಅಂತಾ ಇವತ್ತಿನ ತನಕಾ ಗೊತ್ತಿಲ್ಲಾ. ಕರ್ನಾಟಕ ರಾಜ್ಯಸರ್ಕಾರದ ಮುಖ್ಯಮಂತ್ರಿಗಳಾದ ಯಡ್ಯೂರಪ್ಪನವರು ಈ ಬಗ್ಗೆ ಚಕಾರ ಎತ್ತಿರೋ ಸುದ್ದಿ ಇಲ್ಲೀ ತನಕ ಬಂದಂಗಿಲ್ಲ. ತಾವೇ ಮನೆ ಯಜಮಾನ ಆಗಿರೋ ಕರ್ನಾಟಕದಲ್ಲಿರೋ ಊರುಗಳ ಹೆಸರುಗಳನ್ನು ಬದಲಾವಣೆ ಮಾಡಿಸೋಕೆ ಯಾವುದೇ ಆಸಕ್ತಿ ತೋರಿಸದೆ ಈಗ ಭಾರತದ ನಾಮಕರಣಕ್ಕೆ ಮುಂದಾಗಿರೋದು ನೋಡುದ್ರೆ, ಇವರು ತಮ್ಮನ್ನೇನು ಕರ್ನಾಟಕದ ಮುಖ್ಯಮಂತ್ರಿಗಳು ಅಂದ್ಕೋಡಿದಾರಾ ಅಥ್ವಾ ಭಾರತದ ಮುಖ್ಯಮಂತ್ರಿಗಳು ಅಂದ್ಕೊಂಡಿದಾರಾ ಅನ್ಸುತ್ತಲ್ವಾ ಗುರೂ!

ಎಲ್ಲಾ ಓ.ಕೆ. ಇದೊಂದು ಸಾಲು ಯಾಕೆ?


ಕರ್ನಾಟಕದಲ್ಲಿ ಸದ್ಯಕ್ಕೆ ಸಕ್ಕತ್ ಧೂಳೆಬ್ಬಿಸಿರೋ ರಾಜಕೀಯದ ಸುದ್ದಿ ಅಂದ್ರೆ ಗಣಿ. ಅದ್ರಲ್ಲೂ ಬಳ್ಳಾರಿ ಗಣಿ. ಇದೇ ವಿಷಯವಾಗಿ ಕಾಂಗ್ರೆಸ್ಸಿನೋರು ಒಂದು ಪಾದಯಾತ್ರೇನಾ ಹಮ್ಮಿಕೊಂಡ್ರು ಅಂತಾ ಸುದ್ದಿ ಬಂತು. ಕಾಂಗ್ರೆಸ್ ಪಕ್ಷದ ವತಿಯಿಂದ ಈ ಪಾದಯಾತ್ರೆ ಬಗ್ಗೆ ಒಂದು ಪತ್ರಿಕಾ ಜಾಹೀರಾತು ಕೂಡಾ ಮೇಲಿನ ಚಿತ್ರದಂತೆ ಪತ್ರಿಕೆಗಳಲ್ಲಿ ಪ್ರಕಟವಾಯ್ತು.

ಎಲ್ಲಾ ಓಕೆ! ಇದೊಂದು ಸಾಲು ಯಾಕೆ?

ನೋಡ್ರಪ್ಪಾ ಗುರುಗೋಳೇ, ಈ ಗಣಿಗಾರಿಕೆ ಅಕ್ರಮದ ಬಗ್ಗೆ ಆಗಲೀ, ಇದುನ್ನ ಯಾರು ಮಾಡ್ತಿದಾರೆ ಅನ್ನೋದಾಗ್ಲೀ, ಕಾಂಗ್ರೆಸ್ಸು ಪಾದಯಾತ್ರೆ ಮಾಡ್ತಿರೋದು ಸರೀನಾ? ತಪ್ಪಾ? ಇದರ ಹಿಂದೆ ಇನ್ನೇನಾದ್ರೂ ಉದ್ದೇಶ ಇದ್ಯಾ? ಅನ್ನೋದಾಗ್ಲೀ ಈ ನಮ್ಮ ಬರಹದ ವ್ಯಾಪ್ತಿಯಲ್ಲಿ ಇಲ್ಲಾ. ನಮ್ಮ ನಾಡನ್ನು ದಶಕಗಳ ಕಾಲ ಆಳಿದ ರಾಜಕೀಯ ಪಕ್ಷವೊಂದರ ಗುಲಾಮಗಿರಿ ಮನಸ್ಥಿತಿ ಬಗ್ಗೆ ಮಾತ್ರಾ ನಿಮ್ಮ ಗಮನ ಸೆಳೆಯೋದು ನಮ್ಮ ಉದ್ದೇಶ. ಅಲ್ಲಾ ಅಂಥಾ ಬಂಗಾರದಂಗೆ ನಾಡರಕ್ಷಣಾ ನಡಿಗೆ ಅಂತಾ ಹೆಸರಿಟ್ಟುಕೊಂಡು, ದೊಡ್ಡ ಬ್ಯಾನರ್ರು, ಪುಟದಗಲದ ಅಡ್ವಟೈಸ್‍ಮೆಂಟು ಹಾಕಿಸಿರೋ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯೋರು ಅದ್ಯಾಕೆ ಅಷ್ಟು ಅವಲಕ್ಷಣವಾಗಿ "ಬಳ್ಳಾರಿ ಚಲೋ, ಕರ್ನಾಟಕ ಬಚಾವೋ" ಅಂತಾ ಬರೆದಿದ್ದಾರೆ ಅನ್ಸಲ್ವಾ ಗುರೂ? ಹೋಗ್ಲಿ, ದಿಲ್ಲಿಯಲ್ಲಿ ಕೂತಿರೋ ತಮ್ಮ ಹೈಕಮಾಂಡ್ ದಣಿಗಳನ್ನು ಮೆಚ್ಚಿಸೋ ಉದ್ದೇಶ ಇದೆ ಅಂತಾಗಿದ್ರೆ ಇದುನ್ನ ಕನ್ನಡ ಲಿಪಿಯಲ್ಲಿ ಯಾಕೆ ಬರೆಸಿದ್ದಾರೆ? ಕನ್ನಡದೋರಿಗೆ ಹಿಂದೀ ಕಲಿಸೋಕೆ ಇದುನ್ನೂ ಒಂದು ಅವಕಾಶ ಅಂದ್ಕೊಂಬುಟ್ರಾ ಅಂತಾ ಅನ್ಸಲ್ವಾ? ನಾಡು ನುಡಿ ಬಗ್ಗೆ ಕಾಳಜಿ ಜೊತೆಗೆ ಚೂರು ಸ್ವಾಭಿಮಾನಾನೂ ಕರ್ನಾಟಕ ಕಾಂಗ್ರೆಸ್ಸೂ ಸೇರಿದಂತೆ ರಾಜ್ಯದಲ್ಲಿರೋ ರಾಷ್ಟ್ರೀಯ ಪಕ್ಷಗಳಿಗೆ ಇರಬೇಕಲ್ವಾ? ಇದುನ್ನೆಲ್ಲಾ ನೋಡುದ್ರೆ ಕರ್ನಾಟಕದ ರಾಜಕಾರಣ ಕನ್ನಡ ಕೇಂದ್ರಿತ ಆಗಬೇಕಾಗಿದೆ ಅನ್ಸುತ್ತಲ್ವಾ? ಗುರೂ!

ಕನ್ನಡ ಚಿತ್ರರಂಗ: ಇಲ್ಲಿ ಆಟಕ್ಕೂ ಇಲ್ಲಾ, ಲೆಕ್ಕಕ್ಕೂ ಇಲ್ಲಾ!


ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಏರ್ಪಡಿಸಿದ್ದ ಹನ್ನೊಂದನೇ ಚಿತ್ರೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶ್ರೀಲಂಕಾ ದೇಶದಲ್ಲಿ ನಡೆಸಲಾಗುತ್ತಿದೆಯೆಂಬ ಕಾರಣಕ್ಕಾಗಿ- ಶ್ರೀಲಂಕಾ ತಮಿಳರ ಬೆಂಬಲಾರ್ಥವಾಗಿ - ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯೋರು ಬಹಿಷ್ಕರಿಸಿದ್ದಾರೆ. ಇದರಲ್ಲಿ ಯಾವ ಬಾಲಿವುಡ್ ಸೋದರರೂ ಭಾಗವಹಿಸಬಾರದೆಂದೂ, ಹಾಗೊಮ್ಮೆ ಭಾಗವಹಿಸಿದರೆ ಅಂಥವರ ಚಿತ್ರಗಳನ್ನು ದಕ್ಷಿಣ ಭಾರತದಲ್ಲಿ ಬಹಿಷ್ಕರಿಸಲಾಗುವುದೆಂದೂ, ಇಡೀ ದಕ್ಷಿಣ ಭಾರತದ ನಾಕೂ ಭಾಷೆಗಳ ಚಿತ್ರರಂಗದೋರು ಇನ್ಮುಂದೆ ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಬಾರದೆಂದು ತೀರ್ಮಾನಿಸುವುದರೊಂದಿಗೆ ಆ ದೇಶದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲವೆಂದೂ ಕೊಟ್ಟಿರೋ ಹೇಳಿಕೆ ದಿನಾಂಕ 29.05.2010ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿದೆ ಗುರೂ!

ಐ.ಐ.ಎಫ್.ಐ ಅಂದ್ರೆ ಹಿಂದಿ ಚಿತ್ರೋದ್ಯಮದೋರ ಸ್ವತ್ತಾ?

ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡಮಿ ಎನ್ನೋ ಹೆಸರಿನ (International Indian Film Academy IIFA) ಸಂಸ್ಥೆ ಕೆಲವು ವರ್ಷಗಳ ಹಿಂದೆ ಜನ್ಮ ತಳೆದಿದೆ. ಈ ಸಂಸ್ಥೆಯೋರು ಪ್ರತಿವರ್ಷಾ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಭಾರತೀಯ ಚಿತ್ರೋತ್ಸವಗಳ್ನ ಏರ್ಪಡಿಸಿ ಭಾರತೀಯ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿ ಕೊಡೋ ಘನವಾದ ಉದ್ದೇಶ ಹೊಂದಿದಾರೆ. ಹಾಗಂತ ತಮ್ಮ ಅಂತರ್ಜಾಲ ತಾಣದಲ್ಲಿ ಬರೆದೂಕೊಂಡಿದ್ದಾರೆ. ಆದರೆ ಇವರ ಕಣ್ಣಲ್ಲಿ ಭಾರತ ಅಂದ್ರೆ ಉತ್ತರ ಭಾರತ, ಭಾರತೀಯ ಚಿತ್ರ ಅಂದ್ರೆ ಹಿಂದೀ ಚಿತ್ರಗಳು. ಬೇರೆ ಬೇರೆ ದೇಶಗಳಲ್ಲಿ ಇವರು ನಡೆಸಿರೋ ಇದುವರೆಗಿನ ಎಲ್ಲಾ ಹತ್ತು ಪ್ರಶಸ್ತಿ ಪ್ರದಾನ ಸಮಾರಂಗಳಲ್ಲಿಯೂ ಪ್ರಶಸ್ತಿ ಗಳಿಸಿದ್ದಿರಲಿ, ಪ್ರಶಸ್ತಿಗೆ ನಾಮಕರಣವಾದ ಚಿತ್ರಗಳೂ ಕೂಡಾ ಹಿಂದೀ ಭಾಷೆಯವೆ. ಹೀಗೆ ಪ್ರಪಂಚಕ್ಕೆಲ್ಲಾ ಭಾರತೀಯ ಚಿತ್ರರಂಗ ಅಂದ್ರೆ ಹಿಂದೀದು ಅನ್ನೋ ಅಪಪ್ರಚಾರ ಮಾಡ್ತಾ ಇರೋ ಈ ಸಂಸ್ಥೆ ಮತ್ತು ಹಿಂದಿ ಚಿತ್ರೋದ್ಯಮದ ಮಂದಿಯ ಕಣ್ಣಿಗೆ ಭಾರತದ ಇತರೆ ಭಾಷಾ ಚಿತ್ರಗಳು ಆಟಕ್ಕೆ ಇಲ್ಲವಾಗಿದೆ. ಇವರು ಒಂದುಕಡೆ ಭಾರತೀಯ ಚಿತ್ರರಂಗ ಅಂದ್ರೆ ಹಿಂದೀ ಅಂತಾ ಸಾರಕ್ ಮುಂದಾಗಿದ್ರೆ ಇನ್ನೊಂದು ಕಡೆ ದಕ್ಷಿಣ ಭಾರತದ ಚಿತ್ರೋದ್ಯಮ ಅಂದ್ರೆ ತಮಿಳು ಅನ್ನೋ ಹುಂಬತನಕ್ಕೆ ತಮಿಳು ಚಿತ್ರರಂಗದೋರು ಮುಂದಾಗಿದಾರೆ!

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಂದ್ರೆ ತಮಿಳರ ಸ್ವತ್ತಾ?
ಒಂದು ಕಡೆ ಹಿಂದೀ ಚಿತ್ರೋದ್ಯಮ ಕನ್ನಡವನ್ನೂ ಸೇರಿಸಿ ಭಾರತದ ಉಳಿದೆಲ್ಲಾ ಚಿತ್ರರಂಗಗಳನ್ನು ಆಟಕ್ಕಿಲ್ಲದಂತೆ ಮಾಡ್ತಿದ್ರೆ ಇನ್ನೊಂದು ಕಡೆ ತಮಿಳು ಚಿತ್ರೋದ್ಯಮ ನಮ್ಮುನ್ನ ಚಿನ್ನತಂಬಿ ಅಂತಾ ದೊಡ್ಡಣ್ಣನ ಮನಸ್ಥಿತಿ ತೋರುಸ್ತಿದೆ. ತಮಿಳರ ಮೇಲೆ ಶ್ರೀಲಂಕಾದಲ್ಲಿ ದೌರ್ಜನ್ಯಾ ನಡೀತು ಅಂತಾ ತಮಿಳುನಾಡಿನ ಕೆಲವು ತಮಿಳು ಸಂಘಟನೆಗಳೋರು ದನಿ ಎತ್ತಿದ್ದಕ್ಕೆ ಆ ದನಿಗೆ ತಮ್ಮ ದನಿಯನ್ನು ಸೇರಿಸಲು ತಮಿಳು ಚಿತ್ರರಂಗ ಮುಂದಾಗಿದ್ದಿದ್ರೆ, ಅದು ಅವರಿಷ್ಟ ಅನ್ಬೋದಿತ್ತು. ಆದ್ರೆ ಇಡೀ ದಕ್ಷಿಣ ಭಾರತದ ನಾಲ್ಕೂ ರಾಜ್ಯಗಳ ಚಿತ್ರರಂಗದೋರನ್ನು ಪ್ರತಿನಿಧಿಸೋ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳೀದು ಈ ನಿಲುವು ಅಂತಾ ಹೇಗಂದ್ರು ಇವ್ರು? ಈ ನಿಲುವಿಗೆ ನಾಲ್ಕೂ ರಾಜ್ಯಗಳ ಎಲ್ಲಾ ನಟರ, ತಂತ್ರಜ್ಞರ, ವಿತರಕರ, ಪ್ರದರ್ಶಕ ಸೋದರರ ಸಮ್ಮತಿ ಇದೆ ಅಂತಾರಲ್ಲಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರುನ್ನಾ ಕೇಳಿ ಇಂಥಾ ಹೇಳಿಕೆ ಕೊಟ್ಟಿದಾರಾ? ಕಾವೇರಿ ಗಲಾಟೆ ಸಂದರ್ಭದಲ್ಲಿ, ಇದೇ ದ.ಭಾ.ಚ.ವಾ.ಮಂ ಅವ್ರು ಹೇಳ್ದೆ ಕೇಳ್ದೆ ಕನ್ನಡದೋರುನ್ನಾ ಮಂಡಳಿಯಿಂದ ಕಿತ್ತು ಬಿಸಾಕುದ್ರಲ್ಲಾ ಆಗೆಲ್ಲಿ ಹೋಗಿತ್ತು ಈ ಸೋದರ ಬಾಂಧವ್ಯ? ಇದುನ್ನೆಲ್ಲಾ ಸಹಿಸಿಕೊಂಡು ಕೂತಿರೋಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೋರಿಗೂ, ಕನ್ನಡ ಚಿತ್ರರಂಗದೋರಿಗೂ ಸ್ವಾಭಿಮಾನಾ ಸತ್ತು ಹೋಗಿದೆಯಾ? ಗುರೂ!

ಈ "ನೋ ಪಾರ್ಕಿಂಗ್" ಬೋರ್ಡು ಮಸ್ತಾಗಿದೆ ನೋಡಿ!



ಇವು ನಮ್ ಬೆಂಗಳೂರಲ್ಲೇ ಒಂದು ಬಡಾವಣೇಲಿ ಕಾಣೋ "ನೋ ಪಾರ್ಕಿಂಗ್" ಬೋರ್ಡುಗಳು ಗುರೂ! ಬೋ ಅಚ್ಚರಿ ಜೊತೇಗೆ ಖುಶಿ ಆಯ್ತು ಇವುನ್ನ ನೋಡಿ. ಯಾರಪ್ಪಾ ಈ ಕೆಲ್ಸ ಮಾಡಿರೋರು ಅಂತಾ ಇಚಾರ್ಸಮಾ ಅಂತಾ ಮನೆ ಯಜಮಾನ್ರುನ್ನ ಕೇಳುದ್ರೆ ಅವ್ರೇಳಿದ್ ಇಷ್ಟು.

ಬೆಂಗಳೂರಾಗೆ ಯಾವ ರೋಡಲ್ ನೋಡುದ್ರೂಮೆ ಎಲ್ಲಾರ್ ಮನೆ ಗೇಟಿನ್ ಮೇಲೆ ನೋ ಪಾರ್ಕಿಂಗ್ ಅನ್ನೋ ಬೋರ್ಡು ತಗುಲಾಕಿರ್ತಾರೆ. ಇಂಥಾ ಬೋರ್ಡಲ್ಲೂ ಕನ್ನಡತನದ ನೆನಪು ಮಾಡಿಕೊಡೋ ಕೆಲಸಾನಾ ಆ ಬಡಾವಣೇಲಿರೋ ಒಂದು ಸಂಸ್ಥೆಯೋರು ಮಾಡ್ತಾ ಔರಂತೆ.. ಓದ್ ವರ್ಸಾ ಆರಂಕುಸವಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಸಮಂ, ಎಲ್ಲಾದರೂ ಇರು ಎಂತಾದರೂ ಇರು ಕನ್ನಡವಾಗಿರು ಅನ್ನೋ ಥರದ ಕವಿವಾಣಿಗಳ್ನ ಬಳ್ಸಿ ಇಂಥಾ ಬೋರ್ಡ್ ಮಾಡಿದ್ರಂತೆ. ಈ ಸಲ ಅದೇ ಬಡಾವಣೆಯಲ್ಲಿದ್ದ ಸಿ. ಅಶ್ವತ್ ಅವರನ್ನು ನೆನಪು ಮಾಡ್ಕೊಂಡು, ಜೊತೇಲಿ ವಿಷ್ಣೂನ ನೆನುಸ್ಕೊಳ್ಳೋ ಹಾಗೆ ಬೋರ್ಡ್ ಮಾಡವ್ರೆ!

ಬಸವನಗುಡಿಯಲ್ಲೊಂದು ಕನ್ನಡದ ಗುಡಿ!

ಬೆಂಗಳೂರು ದಕ್ಷಿಣದಲ್ಲಿ ಬಸವನಗುಡಿ ಇದೆ. ಇದರಲ್ಲಿ ನರಸಿಂಹರಾಜಾ ಕಾಲೋನಿ ಅನ್ನೋ ಪ್ರದೇಶಾನೂ ಇದೆ. ಇಲ್ಲಿ ಸುಮಾರು ವರ್ಷಗಳಿಂದ ಒಂದು ಗೆಳೆಯರ ಗುಂಪು ಸೇರ್ಕೊಂಡು ಸಂಗ ಮಾಡ್ಕಂಡವ್ರೆ. ಕಟ್ಟೆ ಬಳಗ ಅಂತಾ... ಈ ಕಟ್ಟೆಬಳಗದೋರು ಇಡೀ ಬಡಾವಣೆಯಲ್ಲಿ "ಗೇಟಿನ ಮುಂದೆ ಗಾಡಿ ನಿಲ್ಲುಸ್ಬೇಡಿ" ಅನ್ನೋ ಬೋರ್ಡುನ್ನ ಹಾಕವ್ರೆ, ಅದೂ ಪುಗಸಟ್ಟೆಯಾಗಿ. ಏನ್ ಪಸಂದಾಗ್ ಕಾಣ್ತೈತೆ ಗೊತ್ತಾ ಗುರೂ? ಬರ್ರಿ, ಒಂದ್ ದಪಾ ಎನ್.ಆರ್.ಕಾಲನಿ ಒಳಗಡೆ ಓಡಾಡಿ. ಇಂಥಾ ಕೆಲ್ಸಾನಾ ನಾವೂ ನಮ್ ನಮ್ ಬಡಾವಣೇಲಿ ಮಾಡಬೌದು ಅನ್ನೋ ಸಂದೇಶಾನಾ ಈ ಜನಾ ಕೊಡ್ತಾ ಅವ್ರೇ ಗುರೂ...

ಹೊಗೇನಕಲ್: ಸಂಧಾನಕ್ಕೆ ಬಲಿಯಾಗದಿರಲಿ ನಾಡಹಿತ!


ವಿವಾದಕ್ಕೆ ಕಾರಣವಾಗಿರೋ ಹೊಗೇನಕಲ್‍ನ ಕುಡಿಯುವ ನೀರು ಪೂರೈಕೆ ಯೋಜನೆಯ ಕಾಮಗಾರಿ ಬಗ್ಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು ಅಂತಾ ಕರ್ನಾಟಕ ರಾಜ್ಯಸರ್ಕಾರದ ಗೃಹಮಂತ್ರಿಗಳಾದ ಡಾII ವಿ.ಎಸ್.ಆಚಾರ್ಯ ಅವ್ರು ನೀಡಿರೋ ಹೇಳಿಕೆ, ಇವತ್ತಿನ (01.05.2010ರ) ದಿನಪತ್ರಿಕೆಗಳಲ್ಲಿ ಬಂದಿದೆ. ಭಾಳಾ ಸಂತೋಷ. ಅಂತರರಾಜ್ಯ ಸಂಬಂಧಗಳು ಮಾತುಕತೆ ಮೂಲಕ ಬಗೆಹರಿಯೋದು ಭಾಳಾ ಸಂತೋಷದ ವಿಷಯಾನೇ ಗುರೂ!
ಆದ್ರೆ ಮೂಲತಃ ಅಂತರರಾಜ್ಯ ವಿವಾದಗಳು ಯಾಕೆ ಹುಟ್ಟಿಕೊಳ್ಳುತ್ವೆ ಅನ್ನೋದ್ನ ಸ್ವಲ್ಪ ನೋಡೋಣ. ಯಾವುದೇ ಒಂದು ಸಂಪನ್ಮೂಲದ ಮೇಲೆ ಒಂದಕ್ಕಿಂತ ಹೆಚ್ಚು ರಾಜ್ಯದೋರು ಹಕ್ಕು ಸಾಧಿಸಕ್ಕೆ ಮುಂದಾದಾಗ ತಾನೆ ವಿವಾದ ಹುಟ್ಟೋದು? ಸೌಹಾರ್ದಯುತವಾಗಿ ಬಗೆಹರಿಯೋದು ಅಂದ್ರೆ ‘ಇಲ್ಲಿ ನಾವು ಸ್ವಲ್ಪ ಬಿಟ್ಟುಕೊಡ್ತೀವಿ - ನೀವೂ ಸ್ವಲ್ಪ ಬಿಟ್ಟುಕೊಡಿ. ನಾವೂ ಸ್ವಲ್ಪ ಗಳುಸ್ಕೊತೀವಿ - ನೀವೂ ಗಳಿಸಿಕೊಳ್ಳಿ' ಅನ್ನೋದು. ಈ ಸಣ್ಣ ವಿಷಯಾನಾ ಯಾಕಪ್ಪಾ ಹೇಳಬೇಕಾಯ್ತು ಅಂದ್ರೆ ನಮ್ಮ ಕರ್ನಾಟಕದ ಇಂದಿನ ಸರ್ಕಾರ ಬಹುಶಃ ಸಂಧಾನ ಅಂದ್ರೆ ನೆರೆಯವರ ಮುಂದೆ ಮಂಡಿಯೂರಿ ಕುಳಿತು ನಾಡಿನ ಹಿತ ಹಾಗೂ ಸ್ವಾಭಿಮಾನಾನ ಅವರುಗಳ ಪದತಲಕ್ಕೆ ಅರ್ಪಿಸುವುದು ಅಂದುಕೊಂಡಿರೋ ಹಾಗೆ ಕಾಣುತ್ತೆ.

ಕೊಡೋದೇನು? ಪಡ್ಯೋದೇನು?

`ನೀವು ಕುಡಿಯೋ ನೀರಿಗೆ ನಾವು ಅಡ್ಡಿ ಮಾಡಲ್ಲ, ನಮ್ಮ ವಿದ್ಯುತ್ ಯೋಜನೆಗೆ ನೀವು ಅಡ್ಡಿ ಮಾಡಬೇಡಿ' ಎನ್ನುತ್ತಿರೋ ಮಾತಿನ ಹಿಂದೆ ಎಂಥಾ ಅಪಾಯ ಇದೆ ನೋಡಿ. ಇದರಿಂದ ತಮಿಳುನಾಡಿನ ಕುಡಿಯೋ ನೀರಿನ ಯೋಜನೆಗೆ ನಾವು ಅಡ್ಡಿ ಮಾಡುತ್ತಿದ್ದೇವೆ ಅಂತಾ ಸರ್ಕಾರವೇ ಒಪ್ಪಿಕೋತಾಯಿದೆ. `ನಮ್ಮ ನೆಲದಲ್ಲಿ ನಾವು ವಿದ್ಯುತ್ ಯೋಜನೆ ಮಾಡಕ್ಕೆ ನೀವು ಅಡ್ಡಿ ಮಾಡಬೇಡಿ, ಆಗ ನಿಮ್ಮ ನೆಲದಲ್ಲಿ ನೀವು ಕುಡಿಯೋ ನೀರಿನ ಯೋಜನೆ ಮಾಡಿಕೊಳ್ಳಕ್ಕೆ ನಮ್ಮ ಅಡ್ಡಿ ಇಲ್ಲಾ' ಅಂತಾ ತಾನೆ ಇವರು ಹೇಳಬೇಕಾದ್ದು. ಸರ್ಕಾರದ ನಿಲುವು ಮಾತ್ರಾ `ಹೊಗೇನಕಲ್ ಯೋಜನೆಗೆ ನಮ್ಮ ತಕರಾರು ನೀರು ಹಂಚಿಕೆಗೆ ಸಂಬಂಧಿಸಿದ್ದು, ಗಡಿ ಒತ್ತುವರಿಗೆ ಸಂಬಂಧಿಸಿದ್ದಲ್ಲಾ, ಇದ್ದರೂ ಅದು ಆದ್ಯತೆಯ ವಿಷಯವಲ್ಲಾ' ಅನ್ನೋ ಹಾಗಿದೆ. ಈ ಲೆಕ್ಕದಲ್ಲಿ ಸಂಧಾನಕ್ಕೆ ಮುಂದಾದರೆ ಕೊನೆಗೆ ಕಳೆದುಕೊಳ್ಳೋದು ಕರ್ನಾಟಕವೇ ಹೊರತು ತಮಿಳುನಾಡಲ್ಲ. ಯಾಕಂದ್ರೆ ಇಂದಿನ ಈ ಉದ್ದೇಶಿತ ಸಂಧಾನ ಸೂತ್ರ `ನಮ್ಮ ನೆಲದಲ್ಲಿ ನಮಗೆ ವಿದ್ಯುತ್ ಯೋಜನೆಗೆ ಅಡ್ಡಿ ಮಾಡಬೇಡಿ, ಆಗ ನಮ್ಮ ನೆಲವನ್ನು ನೀವು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕುಡಿಯೋನೀರು ಯೋಜನೆ ಮಾಡಲು ನಾವು ಬಿಡ್ತೀವಿ' ಅಂದ ಹಾಗಿದೆಯಲ್ಲಾ ಗುರೂ!

ವಿವಾದದಲ್ಲಿರೋ ಸೂಕ್ಷ್ಮ!

ಕರ್ನಾಟಕ ಸರ್ಕಾರ ಬ್ರಿಟೀಷರ ಕಾಲದ ಟ್ರೋಪ್‍ಶೀಟ್ ಇಟ್ಕೊಂಡು ಹೊಗೇನಕಲ್ ತನಗೆ ಸೇರಿದ್ದು ಅಂತಾ ತಕರಾರು ಮಾಡ್ತಿದೆ. ಇದು ಸರಿಯಲ್ಲಾ... ಅನ್ನೋದು ತಮಿಳುನಾಡಿನ ನಿಲುವು. ಇದರಲ್ಲಿ ಈ ಟ್ರೋಪ್‍ಶೀಟ್ ಯಾವ್ದೋ ಓಬಿರಾಯನ ಕಾಲದ್ದು ಅನ್ನೋ ಒಳದನಿ ಕೇಳುತ್ತೆ. ಆದರೆ ಈ ಓಬೀರಾಯನ ಸೂತ್ರಾ, 1924ರ ಮೈಸೂರು-ಮದ್ರಾಸಿನ ಕಾವೇರಿ ಒಪ್ಪಂದಕ್ಕೆ ಅನ್ವಯ ಆಗಲ್ವಂತೆ. ತಮಿಳುನಾಡಿಗೆ 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಕೂಡಲೇ 1924ರ ಒಪ್ಪಂದ ಸಹಜವಾಗಿ ರದ್ದಾಗುತ್ತೆ ಅನ್ನೋದು ಮರೆತುಹೋಗುತ್ತೆ ಪಾಪ!
1997ರಲ್ಲೇ ಕರ್ನಾಟಕ ಸರ್ಕಾರ ಮತ್ತು ಕೇಂದ್ರಸರ್ಕಾರ ಈ ಯೋಜನೆಗಳಿಗೆ ಒಪ್ಪಿವೆ. ತಮಿಳುನಾಡು ಕರ್ನಾಟಕವು ಮೇಕೆದಾಟಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಾನೂನು ತೊಡಕು ಒಡ್ಡಲ್ಲ, ಕರ್ನಾಟಕ ಹೊಗೇನಕಲ್ ಯೋಜನೆಗೆ ಅಡ್ಡಿ ಮಾಡಲ್ಲಾ ಅನ್ನೋ ಒಪ್ಪಂದಕ್ಕೆ ಅಂದಿನ ಸಭೆಯಲ್ಲಿ ಬರಲಾಗಿತ್ತು. ಈಗ ಕರ್ನಾಟಕ ತಕರಾರು ಮಾಡೋದು ತಪ್ಪು ಅನ್ನೋ ಪ್ರಚಾರಾನೂ ನಡೀತಿದೆ. ನಿಜಕ್ಕೂ ನಮ್ಮ ಇಂದಿನ ವಿರೋಧ ಅಂದಿನ ಒಪ್ಪಂದದ ಉಲ್ಲಂಘನೇನಾ? ಸರ್ಕಾರವೇ ಇಂಥಾ ಗೊಂದಲಕ್ಕೆ ಕಾರಣವಾಗ್ತಿದೆ. 1997ರ ಒಪ್ಪಂದದ ಬಗ್ಗೆ ಗೊತ್ತಿದ್ದೋರಿಗೆ ಈಗ ಕರ್ನಾಟಕ ಸರ್ಕಾರ ಇನ್ಯಾವ ಹೊಸಸಂಧಾನದ ಪ್ರಸ್ತಾಪ ಇಡ್ತಿದೆ ಅಂತಾ ಗೊಂದಲ ಆಗೋದು ಸಹಜಾನೆ ಆಗಿದೆ.

ಸಮಗೌರವದ ಸಂಧಾನ ಸಾಧ್ಯವಾಗಲಿ!

ಕರ್ನಾಟಕ ಸರ್ಕಾರವು ಬಿಜೆಪಿ ಮತ್ತು ಡಿಎಂಕೆಗೆ ಹೇಗೆ ವಿವಾದ ಬಗೆಹರಿಸಿದ ಗೌರವ ದಕ್ಕುತ್ತೆ ಅನ್ನೋ ರಾಜಕೀಯ ಲಾಭದ ಬಗ್ಗೆ ಗಮನಕೊಡುತ್ತಾ, ಚಿನ್ನತಂಬಿ ಪೆರಿಯತಂಬಿ ನಾಟಕ ಮುಂದುವರೆಸುತ್ತಾ, ಕನ್ನಡನಾಡಿನ ಜನರ ಕಿವಿ ಮೇಲೆ ಲಾಲ್‍ಬಾಗ್ ಇಡೋ ಪ್ರಯತ್ನಾನಾ ಕೈಬಿಟ್ಟು ಈ ವಿಷಯವಾಗಿ ನಿಲುವು ತೆಗೆದುಕೊಳ್ಳಬೇಕಾಗಿದೆ. ನಾವು ಅಂದು ಒಪ್ಪಿದ್ದ ಕುಡಿಯುವ ನೀರಿನ ಯೋಜನೆಗೆ ಇಂದಿಗೂ ನಮ್ಮ ವಿರೋಧ ಇಲ್ಲ. ಆ ಒಪ್ಪಂದದಂತೆಯೇ ತಮಿಳುನಾಡು ಕೂಡಾ ಮೇಕೆದಾಟು ವಿದ್ಯುತ್ ಯೋಜನೆಗೆ ತಕರಾರು ಮಾಡದಿರಲಿ. ನಾವು ಕುಡಿಯುವ ನೀರು ಯೋಜನೆಗೆ ಅಡ್ಡಿ ಮಾಡುವುದು ಬೇಡ.
ಆದರೆ ತಮಿಳುನಾಡು ಈ ಯೋಜನೆಗಾಗಿ ಕನ್ನಡದ ನೆಲವನ್ನು ಅತಿಕ್ರಮಿಸುವುದನ್ನು ವಿರೋಧಿಸಲೇಬೇಕಾಗಿದೆ. ಎರಡೂ ರಾಜ್ಯಗಳ ಗಡಿಯನ್ನು ಜಂಟಿಯಾಗಿ ಸರ್ವೇ ಮಾಡಲೇಬೇಕು ಎನ್ನುವುದು ನಮ್ಮ ನಿಲುವಾಗಲಿ. ಸಂಧಾನದ ವಿಷಯವೇನೆಂದರೆ ಈ ಸರ್ವೇ ಬೇಕಾದರೆ ಕೇಂದ್ರಸರ್ಕಾರದ ಮಧ್ಯಸ್ಥಿಕೆಯಲ್ಲಿ ನಡೀಲಿ ಅನ್ನೋದಾಗಬೇಕು ಅಷ್ಟೆ. ನಿಜಕ್ಕೂ ಇಲ್ಲಿ ಆದ್ಯತೆಯ ವಿಷಯ ನೀರು ಬಳಕೆಯದ್ದಲ್ಲ, ಗಡಿ ಅತಿಕ್ರಮಣದ್ದು ಅನ್ನೋದನ್ನು ಸರ್ಕಾರ ಮರೆಯದಿರಲಿ. ಇಲ್ಲದಿದ್ದರೆ ಸಂಧಾನದ ಹೆಸರಲ್ಲಿ ಕೊನೆಗೆ ನಡೆಯೋದು ಕನ್ನಡಿಗರ ಶರಣಾಗತಿಯೇ, ಕಳೆದುಕೊಳ್ಳೋದು ಕರ್ನಾಟಕವೇ ಅನ್ನೋದಾಗುತ್ತೆ.

ಸಾಕು ಪ್ರತಿಮೆಯ ಉಪಮೆಯ ನಾಟಕ!

ಸರ್ಕಾರ ಪ್ರತಿಮೆಗಳ ವಿವಾದವನ್ನು ಬಗೆಹರಿಸಿದಂತೆ ಇದನ್ನೂ ಬಗೆಹರುಸ್ತೀವಿ ಅಂತಾ ಪದೇ ಪದೇ ಹೇಳ್ಕೊಳ್ಳೋ ಮೂರ್ಖತನಾನ ನಿಲ್ಲುಸ್ಲಿ. ಪ್ರತಿಮೆಗಳ ಸ್ಥಾಪನೆ ವಿಚಾರದಲ್ಲಿ ಇದ್ದ ವಿರೋಧವನ್ನು ಎರಡೂ ರಾಜ್ಯಗಳ ನಡುವಿನ, ಎರಡೂ ಜನಾಂಗಗಳ ನಡುವಿನ ಹತ್ತಾರು ವಿವಾದಗಳಿಂದ ಬೇರೆಯಾಗಿಸಿ "ಪ್ರತಿಮೆ ಸ್ಥಾಪಿಸಿದ್ದರಿಂದ ಸೌಹಾರ್ದ ಹೆಚ್ಚಿತು" ಅನ್ನೋ ಬೂಟಾಟಿಕೆಯ ಆತ್ಮವಂಚನೆ ಮಾಡಿಕೊಳ್ತಿರೋ ರಾಜ್ಯಸರ್ಕಾರ ಅರಿಯಬೇಕಾದ್ದು ಸಾಕಷ್ಟಿದೆ. ತಮಿಳುನಾಡು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನದ ಪ್ರಯೋಜನ ಸಿಗಲು, ತನ್ನಗೆ ಸಂಬಂಧವೇ ಇರದಿದ್ದರೂ ತೊಡಕುಂಟು ಮಾಡ್ತಿರೋ ಕಿತಾಪತಿ ಅರ್ಜಿಯನ್ನು ಇನ್ನೂ ವಾಪಸ್ಸು ತೆಗೆಸದಿರುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವೇನು? ತಮಿಳುನಾಡು, ಹೊಗೇನಕಲ್ ಜಂಟೀ ಸಮೀಕ್ಷೆಗೆ ಒಪ್ಪಿ ಒಟ್ಟಾಗಿ ಸಮೀಕ್ಷೆ ಮಾಡಿ, ಈ ಯೋಜನೆಯ ಕಾಮಗಾರಿಯನ್ನು ತಮ್ಮ ನೆಲಕ್ಕೆ ಸೀಮಿತಗೊಳಿಸುವುದು ಸೌಹಾರ್ದತೆ ಹೆಚ್ಚಿಸೋ ಕ್ರಮವಲ್ಲವೇನು? ಇದೆಲ್ಲಾ ಬಿಟ್ಟು ಹಿಂದೆಯೇ ಆಗಿಹೋಗಿದ್ದ ಒಪ್ಪಂದವನ್ನು ಇವತ್ತು ಮಾಡಿಕೊಳ್ಳೋ ಹಾಗೆ ಸಂಧಾನಕ್ಕೆ ಮುಂದಾಗೋದು ಕರ್ನಾಟಕ ಸರ್ಕಾರಕ್ಕೆ ಶೋಭೆ ತಂದೀತೇನು? ಸರ್ಕಾರ 1997ರ ಒಪ್ಪಂದಕ್ಕೂ ಇಂದಿನ ಸಂಧಾನಕ್ಕೂ ಇರೋ ವ್ಯತ್ಯಾಸ ಏನು ಅಂತಾ ಜನಗಳ ಮುಂದೆ ಇಡೋ ಪ್ರಾಮಾಣಿಕತೆ ತೋರಿಸಲಿ ಗುರೂ! ಇದಕ್ಕೂ ಮೊದಲಿಗೆ ಕರ್ನಾಟಕ ಸರ್ಕಾರ ಮಾಡ್ಬೇಕಾದ ಒಂದು ಕೆಲ್ಸ ಇದೆ. ತಮಿಳುನಾಡು - ಇಡೀ ಹೊಗೇನಕಲ್ ಯೋಜನೆ ಧರ್ಮಪುರಿ ಭಾಗದ ಫ್ಲುರೋಸಿಸ್ ಅನ್ನೋ ಪೀಡೆಗೆ ಬಲಿಯಾಗಿರೋ ಜನಕ್ಕೆ ಶುದ್ಧ ಕುಡಿಯೋ ನೀರು ಒದಗಿಸೋ ಮಾನವೀಯ ಯೋಜನೆ, ಇದಕ್ಕೆ ಕರ್ನಾಟಕ ಅಡ್ಡಿ ಮಾಡಲು ಮುಂದಾಗಿರೋ ರಾಕ್ಷಸ - ಅನ್ನೋ ಅಪಪ್ರಚಾರ ಮಾಡ್ತಿರೋದನ್ನು ಗಮನಿಸಿ ನಮ್ಮ ರಾಜ್ಯದ ನಿಲುವನ್ನು ಸ್ಪಷ್ಟವಾಗಿ ಪ್ರಚುರಪಡಿಸಬೇಕಾಗಿದೆ. ಇದೆಲ್ಲಾ ಇವರು ಮಾಡ್ತಾರಾ? ಇವ್ರಿಂದ ಆಗುತ್ತಾ? ಗುರೂ!!!
Related Posts with Thumbnails