ನಾಳೆ ಉದ್ಘಾಟನೆಯಾಗಲಿರುವ "ಬಹುಭಾಷಿಕ ಭಾರತಕ್ಕಾಗಿ ಚಳವಳಿ"!


ನಾಳೆ ಅಂತರ್ರಾಷ್ಟ್ರೀಯ ತಾಯ್ನುಡಿ ದಿನಾಚರಣೆ. ಈ ದಿನವನ್ನು ವಿಭಿನ್ನವಾಗಿ ಆಚರಿಸಲಾಗುವ ಕಾರ್ಯಕ್ರಮವೊಂದು ನವದೆಹಲಿಯಲ್ಲಿ ನಾಳೆ ನಡೆಯಲಿದೆ. ಸಮಾನ ಗೌರವದ, ಸಮಾನ ಅವಕಾಶದ ಭಾರತಕ್ಕಾಗಿ ಹಂಬಲಿಸುತ್ತಿರುವ ಹಲವು ಮಂದಿ ನಾಳೆ ಮಧ್ಯಾಹ್ನ ನವದೆಹಲಿಯ ಪ್ರಗತಿ ಮೈದಾನದಲ್ಲಿ ವಿಶ್ವ ತಾಯ್ನುಡಿ ದಿನಾಚರಣೆಯನ್ನು ಆಚರಿಸುವುದರ ಒಟ್ಟೊಟ್ಟಿಗೆ ಭಾರತೀಯರ ಭಾಷಾಹಕ್ಕುಗಳನ್ನು ಎತ್ತಿಹಿಡಿಯುವ ಚಳವಳಿಯ ಘೋಷಣೆಯನ್ನೂ ಮಾಡಲಿದ್ದಾರೆ. ಈ ಚಳವಳಿಯ ಹೆಸರು "ಬಹುಭಾಷಿಕ ಭಾರತಕ್ಕಾಗಿ ಚಳವಳಿ" (Movement for Multi-lingual India).

ಈ  ಕಾರ್ಯಕ್ರಮದಲ್ಲಿ ಭಾರತದ ಬೇರೆ ಬೇರೆ ತಾಯ್ನುಡಿಯ ಜನರು ಒಟ್ಟಾಗಿ ಸೇರಲಿದ್ದು ಮುಂದಿನ ರೂಪುರೇಶೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬನವಾಸಿ ಬಳಗವೂ ಕೂಡಾ ಈ ಚಳವಳಿಯ ಜೊತೆ ಗುರುತಿಸಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಭರವಸೆ ಹೊಂದಿದೆ. ಬನವಾಸಿ ಬಳಗದ ಶ್ರೀ ರಾಘವೇಂದ್ರರವರು ಕನ್ನಡಿಗರ ಪ್ರತಿನಿಧಿಯಾಗಿ ಖುದ್ದಾಗಿ ಇದರಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಎಂಟು ಹತ್ತು ವರ್ಷಗಳಿಂದ ನಮ್ಮ ಭಾಷಾಹಕ್ಕುಗಳಿಗಾಗಿ ದನಿಎತ್ತಿರುವ ಬನವಾಸಿ ಬಳಗವು, ಸಂಬಂಧಿಸಿದ ಸರ್ಕಾರಗಳ ಮೇಲೆ ಸಾರ್ವಜನಿಕ ಸಹಿಸಂಗ್ರಹದ ಹಕ್ಕೊತ್ತಾಯ ಪತ್ರಗಳ ಮೂಲಕ ಒತ್ತಡ ಹಾಕುತ್ತಲೇ ಬಂದಿದೆ. ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬನವಾಸಿ ಬಳಗ ಹೊರತಂದಿರುವ "ಹಿಂದೀ ಹೇರಿಕೆ: ಮೂರು ಮಂತ್ರ - ನೂರು ತಂತ್ರ" ಹೊತ್ತಗೆಯು ಪರಿಣಾಮಕಾರಿಯಾಗಿದ್ದು ಅನೇಕ ಮಾಹಿತಿಪೂರ್ಣ ವಿಚಾರಗಳನ್ನು ಹೊಂದಿದೆ. ಇದೀಗ ಭಾರತದ ಹುಳುಕಿನ ಭಾಷಾನೀತಿಯ ಬದಲಾವಣೆಗಾಗಿ ಹೊರರಾಜ್ಯದ ಜನರೊಂದಿಗೆ ಸೇರಿ ಸಂಘಟಿತ ಹೋರಾಟಕ್ಕೆ ಬಳಗ ಮುಂದಾಗಿದೆ.

ಸಭೆಯಲ್ಲಾದ ತೀರ್ಮಾನಗಳ ಬಗ್ಗೆ, ಮುಂದಿನ ಹೋರಾಟದ ಸ್ವರೂಪಗಳ ಬಗ್ಗೆ ನಿಮ್ಮೊಂದಿಗೆ ಸೂಕ್ತಸಮಯದಲ್ಲಿ ಸೂಕ್ತ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ನೀವು ದೆಹಲಿಯಲ್ಲಿದ್ದರೆ ನಾಳಿನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಭಾರತದ ಸಂಸತ್ತಿಗೂ.. ಇವರಿಗೂ ಏನು ವ್ಯತ್ಯಾಸ?

(ಚಿತ್ರಕೃಪೆ: ೧೯೮೪ರ ಸಿಖ್ ವಿರೋಧಿ ದಂಗೆಯ ಪತ್ರಿಕಾ ವರದಿಯೊಂದರಿಂದ)
ಭಾರತದ ಸಂಸತ್ತಿನಲ್ಲಿ ಮಂಗಳವಾರದಿಂದೀಚಿಗೆ ದಕ್ಷಿಣ ಭಾರತೀಯರನ್ನು ಒಳಗೆ ಬಿಡುವುದಿಲ್ಲಾ ಎನ್ನುವ ನಿಲುವನ್ನು ತೆಗೆದುಕೊಂಡಿರುವ ಸುದ್ದಿ ನೋಡಿ ಅಚ್ಚರಿಯಾಗಿದೆ. ದಕ್ಷಿಣ ಭಾರತೀಯರು ಈ ದೇಶದ ಪ್ರಜೆಗಳೋ ಅಲ್ಲವೋ ಎನ್ನುವ ಭೀತಿಗೆ ಕಾರಣವಾಗಿದೆ. 

ಹಿಂದೆ ಮಹಾತ್ಮಾಗಾಂಧಿಯವರ ಹತ್ಯೆಯಾದಾಗ ಕೈಗೆ ಸಿಕ್ಕಿದ ಚಿತ್ಪಾವನರೆಂದು ಕರೆಯಲಾಗುವ ಮರಾಟಿ ಬ್ರಾಹ್ಮಣರ ಮೇಲೆ ಅವರು ಚಿತ್ಪಾವನರೆಂಬ ಕಾರಣಕ್ಕೇ ಹಲ್ಲೆ ಮಾಡಲಾಗಿತ್ತು. ಇದೇ ರೀತಿ ೧೯೮೪ರಲ್ಲಿ ಇಂದಿರಾಗಾಂಧಿಯವರನ್ನು ಅವರ ಅಂಗರಕ್ಷಕರೇ ಗುಂಡಿಟ್ಟು ಕೊಂದುಹಾಕಿದ್ದಾಗ, ಹಂತಕರು ಸಿಖ್ ಸಮುದಾಯಕ್ಕೆ ಸೇರಿದ್ದರಿಂದಾಗಿ ಕಂಡಕಂಡಲ್ಲಿ ಕೈಗೆ ಸಿಕ್ಕ ಸಿಖ್ಖರನ್ನು ಕೊಂದು ಹಾಕಿದ ಘಟನೆ ನಡೆದಿತ್ತು. ಗೋಧ್ರಾದಲ್ಲಿ ನಡೆದ ಹತ್ಯೆಯ ಪ್ರತಿಧ್ವನಿಯಾಗಿ ಗುಜರಾತಿನಲ್ಲಿ ಸಾವಿರಾರು ಜನರನ್ನು ಕೊಲ್ಲಲಾಯಿತು. ಅಮಾಯಕರನ್ನು ಕೊಲ್ಲಲಾಗಿದ್ದ ಈ ಘಟನೆಗಳನ್ನೂ ಎಂದಿಗೂ ಒಪ್ಪಲಾಗದ ಅಮಾನುಷ ಕೃತ್ಯವೆಂದೂ, ಜನಾಂಗೀಯ ದ್ವೇಶದಿಂದ ಮಾಡಿದ ಕಗ್ಗೊಲೆಯೆಂದೂ ಬಣ್ಣಿಸಲಾಗುತ್ತದೆ.  

ಇಲ್ಲೆಲ್ಲಾ ಹಾಗೆ ದ್ವೇಶದಿಂದ ನರಮೇಧಕ್ಕಿಳಿದವರನ್ನು "ಸಂವಿಧಾನ ವಿರೋಧಿಗಳು" "ಸಹಿಷ್ಣುತೆಯ ವಿರೋಧಿಗಳು" " ಭಾರತ ರಾಷ್ಟ್ರೀಯತೆಯ - ಒಗ್ಗಟ್ಟಿನ ವಿರೋಧಿಗಳು" "ದೇಶ ವಿರೋಧಿಗಳು" ಎಂದು ಇಡೀ ದೇಶ ಬಣ್ಣಿಸಿ ಖಂಡಿಸಿತು. ಇವೆಲ್ಲಾ ಕೃತ್ಯಗಳು ನಡೆದದ್ದು ಖಾಸಗಿ ವ್ಯಕ್ತಿಗಳಿಂದ... ಇದಕ್ಕೆ ಕುಮ್ಮಕ್ಕು ಕೊಟ್ಟವರು ಅಧಿಕಾರದಲ್ಲಿದ್ದವರು ಎಂಬ ದೂರಿದ್ದರೂ ಇದುವರೆವಿಗೆ ಯಾವುದೇ ಸರ್ಕಾರವೂ ಜನಾಂಗೀಯ ತಾರತಮ್ಯವನ್ನು ಸಮರ್ಥಿಸಿದ ಉದಾಹರಣೆಯಿಲ್ಲ! ಆದರೆ ದಕ್ಷಿಣ ಭಾರತದ ಹೆಸರನ್ನು ಹೊಂದಿರುವ ಸಾರ್ವಜನಿಕರನ್ನು ಸಂಸತ್ತಿನ ಕಲಾಪದಿಂದ ಹೊರಗಿಡುತ್ತಿರುವುದು ಮಾತ್ರಾ ಭಾರತ ಸರ್ಕಾರವೇ ಇಂಥಾ ತಾರತಮ್ಯಕ್ಕೆ ಮುಂದಾಗಿದೆ ಎನ್ನುವ ಆತಂಕಕ್ಕೆ ಕಾರಣವಾಗಿದೆ.

ಹಿಂದೆ ಅಮೇರಿಕಾದಲ್ಲಿ ಉಗ್ರಗಾಮಿಗಳು ವಿಮಾನ ಕದ್ದು ಎತ್ತರದ ಕಟ್ಟಡಗಳೂ ಸೇರಿದಂತೆ ನಾಲ್ಕೈದು ಪ್ರಮುಖ ಜಾಗಗಳಿಗೆ ನುಗ್ಗಿಸಿ ಸಾವಿರಾರು ಜನರ ಸಾವಿಗೆ ಕಾರಣರಾದ ದಿನದಿಂದ ಆ ದೇಶಕ್ಕೆ ಹೋಗುವ ಮುಸ್ಲಿಮ್ ಹೆಸರಿನವರನ್ನೆಲ್ಲಾ ಸಿಕ್ಕಾಪಟ್ಟೆ ತಪಾಸಣೆ ಮಾಡೇ ಒಳಗೆ ಬಿಟ್ಟುಕೊಳ್ಳುವ ಏರ್ಪಾಟು ಶುರುವಾಯಿತು. ಅದೂ ಕೂಡಾ ಹೊರದೇಶಗಳಿಂದ ಬರುವವರಿಗೆ ಅನ್ವಯವಾಗುತ್ತಿತ್ತು. ಹಾಗೆ ತಪಾಸಣೆ ಮಾಡಿದರೇ ಹೊರತು ಒಳಗೆ ಬಿಟ್ಟುಕೊಳ್ಳಲ್ಲಾ ಎನ್ನಲಿಲ್ಲಾ! ಆದರೆ ಭವ್ಯ ಭಾರತದಲ್ಲಿ ಮಾತ್ರಾ, ಸಂಸತ್ತಿಗೆ ಪಾಸು ಪಡೆದು ಹೋಗುವ ಜನಸಾಮಾನ್ಯರ ಹಕ್ಕನ್ನು ದಕ್ಷಿಣ ಭಾರತೀಯರು ಎನ್ನುವ ಕಾರಣದಿಂದಲೇ ನಿರಾಕರಿಸಿರುವುದು ಸರಿಯಲ್ಲಾ! ಇಂತಹ ಕ್ರಮಗಳಿಂದ ಭಾರತದ ಸಂಸತ್ತು, ದಕ್ಷಿಣದವರಿಗೆ ನೀವು ಭಾರತೀಯರಲ್ಲಾ ಎನ್ನುತ್ತಿದೆಯೇನೋ ಎನ್ನುವ ಭಾವನೆಗೆ ಕಾರಣವಾಗುತ್ತಿದೆ. ಇಂಥಾ ನಡೆ ಅದ್ಯಾವುದೇ ಕಾರಣಕ್ಕಾಗಲಿ ಸಂಸತ್ ತೆಗೆದುಕೊಳ್ಳುವುದನ್ನು ಒಪ್ಪಲಾಗದು. ನಮ್ಮ ಜನರನ್ನು ಹೊರಗಿಡುವ ಸಂಸತ್ತಿಗೆ ನಾವೂ ಬರುವುದಿಲ್ಲಾ ಎನ್ನುವ ಗಟ್ಟಿ ನಿಲುವನ್ನು ತೆಗೆದುಕೊಂಡಾದರೂ ನಮ್ಮ ಸಂಸದರು ಈ ತಾರತಮ್ಯವನ್ನು ಇಲ್ಲವಾಗಿಸಬೇಕು.

ಸಮಸ್ಯೆಯ ಮೂಲವಿರುವುದು ಸಂವಿಧಾನದ ಮೂರನೇ ಕಾಲಂನಲ್ಲಿ ಬರೆಯಲಾಗಿರುವ "ರಾಜ್ಯಗಳ ಗಡಿ ನಿರ್ಣಯಿಸುವ ಹಕ್ಕು ಸಂಸತ್ತಿನದು" ಎನ್ನುವ ಮಾತಿನಲ್ಲಿ. ಈ ಅಂಶವನ್ನು ತಾಂತ್ರಿಕವಾಗಿ ಬಳಸಿಕೊಂಡು, ಆಂಧ್ರಪ್ರದೇಶದ ಶಾಸನಸಭೆಯ ನಿಲುವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಆಂಧ್ರಪ್ರದೇಶವನ್ನು ಒಡೆಯಲು ಭಾರತದ ಸಂಸತ್ತು ಮುಂದಾಗಿರುವುದು ನಿಜಕ್ಕೂ ಪ್ರಜಾಪ್ರಭುತ್ವದ/ ಒಕ್ಕೂಟದ ಸ್ಪೂರ್ತಿಗೆ ವಿಡಂಬನೆ. ಸಂಸತ್ತಿನಲ್ಲಿ ಉಳಿದೆಲ್ಲಾ ಸಂಸದರು ಒಂದಾಗಿ ಸೇರಿದರೆ ಯಾವೊಂದು ರಾಜ್ಯದ ಸಂಸದರ ಒಟ್ಟು ಸಂಖ್ಯೆಯೂ ಅದನ್ನು ಸಂಖ್ಯಾಬಲದಲ್ಲಿ ಮೀರಿಸಲಾಗದ್ದು ಗೊತ್ತಿರುವ ವಿಷಯವೇ! ಹೀಗಿದ್ದಾಗ ರಾಜ್ಯವೊಂದರ ಸಂಸದರ ಅಭಿಪ್ರಾಯಕ್ಕಾಗಲೀ, ಸದರಿ ರಾಜ್ಯದ ಶಾಸನಸಭೆಯ ನಿರ್ಣಯಕ್ಕಾಗಲೀ ಬೆಲೆಕೊಡದೆ ರಾಜ್ಯವೊಂದನ್ನು ಒಡೆದು ಹಾಕಿಬಿಡಬಹುದಾದಂಥಾ ಸ್ವಾತಂತ್ರ್ಯ ನಮ್ಮ ಸಂಸತ್ತಿಗೆ ಇರುವುದೇ ಸರಿಯಲ್ಲಾ!! ಅಲ್ವಾ ಗುರೂ? 

ವಿರೋಧವೇನೋ ಸಂವಿಧಾನ ಬದ್ಧ! ಆದರೆ "ನಿಶೇಧ" ಅಲ್ವಲ್ಲಾ ಗುರುಗಳೇ!

(ಚಿತ್ರಕೃಪೆ: ಪ್ರಜಾವಾಣಿ ದಿನಪತ್ರಿಕೆ)
ಕಳೆದ ವಾರದಲ್ಲೊಂದು ದಿನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಾಡಿನ ಹಿರಿಯ ಸಾಹಿತಿ ಚಿಂತಕರೆಂದು ಹೆಸರಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಬರೆದ ಬರಹವೊಂದು ಪ್ರಕಟವಾಯಿತು. “ಡಬ್ಬಿಂಗ್ ವಿರೋಧ, ಸಂವಿಧಾನ ಬದ್ಧ” ಎಂಬ ತಲೆಬರಹದ ಬರಹದಲ್ಲಿ ಶ್ರೀಯುತರು ಡಬ್ಬಿಂಗ್ ವಿರೋಧವಾಗಿ ಮಾತನಾಡುತ್ತಾ ಡಬ್ಬಿಂಗ್ ಮೇಲಿನ ನಿಶೇಧವನ್ನು ಸಮರ್ಥಿಸುತ್ತಿರುವುದು ಕಂಡಿತು. ಇವರ ಮಾತುಗಳನ್ನು ಒಂದೊಂದಾಗಿ ಬಿಡಿಸಿ ನೋಡಿದರೆ ಇದರ ಪೊಳ್ಳುತನ ತಿಳಿಯುವುದಷ್ಟೇ ಅಲ್ಲದೆ ಡಬ್ಬಿಂಗ್ ವಿರೋಧದ ತಮ್ಮ ನಿಲುವಿನ ಬೆಂಬಲಕ್ಕಾಗಿ ಹೇಗೆ ಸಂವಿಧಾನವನ್ನು ಗುರಾಣಿಯಂತೆ ಬಳಸಲು ತಪ್ಪು ತಪ್ಪಾಗಿ ಬಳಸಿದ್ದಾರೆ ಎಂಬುದು  ತಿಳಿಯುತ್ತದೆ.

ವಿರೋಧದ ಕಾರಣಗಳು
೧. ಡಬ್ಬಿಂಗ್ ಚಿತ್ರಗಳು ಸೃಜನಶೀಲತೆಯನ್ನು ಹೊಂದಿರುವುದಿಲ್ಲ. ಆದ್ದರಿಂದ ಇದಕ್ಕೆ ನನ್ನ ವಿರೋಧವಿದೆ ಎಂದಿರುವ ಶ್ರೀಯುತರ ಅಭಿಪ್ರಾಯವನ್ನು ಗೌರವಿಸುತ್ತಾ ಅವರಿಗೇ ಆಗಲೀ ಮತ್ತೊಬ್ಬರಿಗೇ ಆಗಲಿ ಡಬ್ಬಿಂಗ್ ಚಿತ್ರ ವಿರೋಧಿಸುವ ಸ್ವತಂತ್ರ ಇದ್ದೇ ಇದೆ ಎನ್ನಬೇಕಾಗಿದೆ. ಏಕೆಂದರೆ ಡಬ್ಬಿಂಗ್ ಬೇಕು ಎನ್ನುವ ಸ್ವಾತಂತ್ರ್ಯವನ್ನು ಈ ನಾಡಿನಲ್ಲಿ ಹತ್ತಿಕ್ಕಲಾಗುತ್ತಿದೆಯೇ ಹೊರತು ಬೇಡ ಎನ್ನುವ ಸ್ವಾತಂತ್ರ್ಯವನ್ನಲ್ಲಾ! ಶ್ರೀಯುತರು ಮುಂದುವರೆಯುತ್ತಾ ತಾವೇ ತಾವಾಗಿ ಎದುರಾಳಿಗಳ ಪ್ರಶ್ನೆಗಳನ್ನೆತ್ತಿ ಉತ್ತರಿಸುವ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಾಸ್ತವವಾಗಿ ಕನ್ನಡ ಚಿತ್ರಗಳು ಸೃಜನಶೀಲವಾಗಿಲ್ಲದಿರುವುದಕ್ಕೆ ಡಬ್ಬಿಂಗ್ ಚಿತ್ರಗಳು ಬರಬೇಕೆನ್ನುವ ವಾದವೇ ಇಲ್ಲದಿರುವಾಗ ಹಾಗೊಂದು ಪ್ರಶ್ನೆ ಹುಡುಕಿ ಅದಕ್ಕೊಂದು ಉತ್ತರ ನೀಡಿರುವುದು ಇವರು ವಿಷಯ ವಿಶ್ಲೇಷಣೆಗಿಳಿಯದೆ ಸುಮ್ಮನೇ ಅನಿಸಿಕೆಯೊಂದನ್ನು ರೂಪಿಸಿಕೊಂಡು ಅದಕ್ಕೆ ಸಮರ್ಥನೆ ಹುಡುಕುತ್ತಿರುವಂತೆ ಅನ್ನಿಸುತ್ತದೆ. ಕನ್ನಡ ಚಿತ್ರಗಳು ಅದ್ಭುತವಾಗಿದ್ದರೂ, ಸೃಜನಶೀಲತೆ ಅಲ್ಲಿ ಸಾಕಾರವಾಗುತ್ತಿದ್ದರೂ, ಜಗತ್ತಿನಲ್ಲೇ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮ ನಮ್ಮ ಮುಂದೆ ತಂದಿಡುತ್ತಿದ್ದರೂ “ಡಬ್ಬಿಂಗ್ ಚಿತ್ರಗಳನ್ನು ನೋಡಬೇಕು” ಎಂದು ಕನ್ನಡದ ಪ್ರೇಕ್ಷಕ ಬಯಸುವುದು ಅಪರಾಧವೇನೂ ಅಲ್ಲಾ! ಆಗಲೂ ತನ್ನ ತಾಯ್ನುಡಿಗೆ ಡಬ್ ಆದ ಕಾರ್ಯಕ್ರಮಗಳನ್ನು ನೋಡುವ ಆಯ್ಕೆ ಕನ್ನಡಿಗನಿಗೆ ಸಿಗಲೇಬೇಕಲ್ಲವೇ? ಇದೇ ರೀತಿ ‘ಜಾಗತೀಕರಣದ ಯುಗದಲ್ಲಿ ಕನ್ನಡ ಚಿತ್ರಗಳಿಗೆ ಎದುರಾಗಿ ಡಬ್ಬಿಂಗ್ ಚಿತ್ರಗಳನ್ನು ಇಡುವ ಬದಲಿಗೆ ಕೆಟ್ಟ ಕನ್ನಡ ಚಿತ್ರಗಳಿಗೆ, ಒಳ್ಳೆಯ ಕನ್ನಡ ಚಿತ್ರಗಳನ್ನು ಎದುರಾಗಿಸುವುದು ಒಳಿತೆಂ’ದು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆ ಕೇಂದ್ರಿತ ಮನೋಭಾವ ಸೃಜನಶೀಲತೆಗೆ ಮಾರಕ ಎಂದೂ ಹೇಳಿ ಇಡೀ ವಿಷಯವನ್ನು ಗೊಂದಲಮಯವಾಗಿಸಿದ್ದಾರೆ. ಕಲೆ, ಸೃಜನಶೀಲತೆಗಳೇ ಸರಕಾಗಿರುವ ಚಿತ್ರೋದ್ಯಮ ಇವರ ಮಾತನ್ನು ಒಪ್ಪಿದರೆ, ನಾಳೆಯಿಂದ ಯಾವ ಸಿನಿಮಾಕ್ಕೂ ಟಿಕೆಟ್ ಇಟ್ಟು ತೋರಿಸುವ ಹಾಗಿರುವುದಿಲ್ಲಾ! ಯಾಕೆಂದರೆ ಸೃಜನಶೀಲ ಚಿತ್ರಗಳು ತೆರೆಕಾಣಲೂ ಕೂಡಾ ವ್ಯಾಪಾರ ಮಾಡಬೇಕು. ಇವರಿಗೆ ಅದೇಕೆ ವ್ಯಾಪಾರ, ಮಾರುಕಟ್ಟೆ, ಗ್ರಾಹಕ ಎಂದೊಡನೆ “ಅದು ಕೆಟ್ಟದ್ದು” ಎಂದೆನ್ನಿಸುತ್ತದೆ ಎಂಬುದಕ್ಕೆ ಉತ್ತರವಿಲ್ಲಾ!

೨. ಡಬ್ಬಿಂಗ್ ಚಿತ್ರಗಳು ಬರುವುದರಿಂದ ಸ್ವಂತ ಚಿತ್ರನಿರ್ಮಾಣ ನಿಂತು ಕಾರ್ಮಿಕರ ಬದುಕುವ ಹಕ್ಕು ಕಿತ್ತುಕೊಂಡಂತಾಗುತ್ತದೆ ಎನ್ನುವ ಮಾತುಗಳನ್ನು ಆಡಿರುವ ಶ್ರೀಯುತರು, ವಾಸ್ತವವಾಗಿ ನಿರೀಕ್ಷಿಸುತ್ತಿರುವುದಾದರೋ ಏನನ್ನು? ಚಿತ್ರರಂಗದಲ್ಲಿ ಹಣ ಹೂಡುವವರು ತಮಗೆ ಯಾವುದು ಲಾಭದಾಯಕವೋ  ಅದನ್ನು ತಾನೇ ಮಾಡುತ್ತಾರೆ. ನಿಮಗೆ ಲಾಭದ ದಾರಿ ಮುಚ್ಚುತ್ತೇವೆ, ನಷ್ಟವಾದರೂ ಇದೇ ದಾರಿಯಲ್ಲಿ ಸಾಗಿ ಸಾವಿರಾರು ಕಾರ್ಮಿಕರನ್ನು ಉಳಿಸಿ ಎನ್ನುವ ನಿಲುವು ಸರಿಯಾದುದೇ ಎಂದು ಪ್ರಾಜ್ಞರು ಯೋಚಿಸಬೇಕು. ನಿರ್ಮಾಪಕನಿಗೆ ತನ್ನ ಆಯ್ಕೆಯ ಚಿತ್ರ ಮಾಡುವ ಹಕ್ಕನ್ನು ಕಿತ್ತುಕೊಳ್ಳುವುದು ಅವರ ಬದುಕುವ ಹಕ್ಕನ್ನು ಕಿತ್ತುಕೊಂಡಂತಾಗದೇ? ಡಬ್ಬಿಂಗ್ ಚಿತ್ರಗಳು ಮತ್ತು ತುಟಿಚಲನೆ, ಗುಣಮಟ್ಟದ ಕೊರತೆ ಮುಂತಾಗಿ ಹೇಳುವ ಬರಗೂರರು ಅಂತಹ ಚಿತ್ರಗಳನ್ನು ಒಪ್ಪುವ, ತಿರಸ್ಕರಿಸುವ ಅಥವಾ ಮೆಚ್ಚುವ ಅವಕಾಶವನ್ನೇ ನಿರಾಕರಿಸುವುದನ್ನು ಹೇಗೆ ತಾನೇ ಸಮರ್ಥಿಸಿಕೊಳ್ಳಬಲ್ಲರು?

೩. ಇನ್ನು ಕನ್ನಡದ ಬೆಳವಣಿಗೆ ಮತ್ತು ಡಬ್ಬಿಂಗ್ ಎನ್ನುವ ವಿಷಯವಾಗಿ ಮಾತಾಡುತ್ತಾ, ಡಬ್ಬಿಂಗಿನಿಂದ ಕನ್ನಡ ಬೆಳವಣಿಗೆ ಆಗದು ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಯಾವ ಆಧಾರವನ್ನೂ ನೀಡಿಲ್ಲಾ. ವಾಸ್ತವವಾಗಿ ಕನ್ನಡದ ಮಕ್ಕಳು/ ಜನರು ತಮ್ಮ ಇಷ್ಟದ ಪರಭಾಷೆಯ ಕಾರ್ಯಕ್ರಮಗಳನ್ನು/ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡುವ ಅವಕಾಶ ದೊರೆಯುವುದಕ್ಕಿಂತಾ ದೊಡ್ಡದು ಬೇರೇನು ಬೇಕು? ನಮ್ಮ ಮಕ್ಕಳು ಚಿಕ್ಕಂದಿನಿಂದಲೂ ಮನರಂಜನೆಗಾಗಿ ಪರಭಾಷೆಯನ್ನು ಅವಲಂಬಿಸದೆ ಕನ್ನಡಕ್ಕೆ ಅಂಟಿಕೊಳ್ಳುವುದಕ್ಕಿಂತಾ ದೊಡ್ಡ ಇನ್ನಾವ ಕನ್ನಡದ ಬೆಳವಣಿಗೆ ಬೇಕಾಗಿದೆ? ಡಬ್ಬಿಂಗ್ ಚಿತ್ರಗಳಲ್ಲಿ ನಾನಾ ಬಗೆಯ ಕನ್ನಡಕ್ಕೆ ಅವಕಾಶವಿಲ್ಲ ಎನ್ನುವುದರ ಅರ್ಥವಾದರೂ ಏನು? ಯಾಕೆ ಅದು ಸಾಧ್ಯವಾಗುವುದಿಲ್ಲಾ? ಯಾಕೆ ತುಟಿಚಲನೆಗಾಗೇ ಡೈಲಾಗ್ ಬರೀಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವೇ ಇಲ್ಲಾ! ಪ್ರಪಂಚದಲ್ಲಿ ಡಬ್ ಮಾಡುವ ಎಲ್ಲೆಡೆಯೂ ಇರದ ಇಂತಹ ನಿಯಮವನ್ನು ತಡೆಗಾಗಿಯೇ ಬಳಸುತ್ತಿರುವಂತೆ ತೋರುತ್ತದೆ. ವಾಸ್ತವವಾಗಿ ಹಾಗೆ ತುಟಿಚಲನೆಗೆ ಸಂಪೂರ್ಣವಾಗಿ ಹೊಂದಿಸಿ ಡಬ್ ಮಾಡುವುದು ಎಂದಿಗೂ ಎಲ್ಲಿಯೂ ಯಾರಿಗೂ ಸಾಧ್ಯವೇ ಆಗದ ಕ್ರಿಯೆ! ಯಾರಾದರೂ ಇಂಗ್ಲೀಶ್ ಸಿನಿಮಾಗೆ ಕನ್ನಡದ ಡೈಲಾಗ್ ಕೂಡಿಸಿ ಬರೆಯಲು ಸಾಧ್ಯವೇ? ಫ್ರೆಂಚ್ ಸಿನಿಮಾಗೆ  ಜಪಾನೀಸ್ ಭಾಷೆ ಕೂಡಿಸಲು ಸಾಧ್ಯವೇ? ಡಬ್ ಸಿನಿಮಾ ಎಂದರೇ ತುಟಿಚಲನೆ ಹೊಂದಿಕೆಯಾಗಿರುವುದಿಲ್ಲ ಎನ್ನುವುದನ್ನು ನೋಡುಗ ತಿಳಿದೇ ಇರುತ್ತಾನೆ ಮತ್ತು ಈ ಹೊಂದಾಣಿಕೆಯಿಲ್ಲದೆ ಇರುವುದೇ ಅವನು ಡಬ್ಬಿಂಗ್ ಸಿನಿಮಾವನ್ನು ಮೆಚ್ಚದಿರಲು ಕಾರಣವಾಗಬಹುದು ಎಂಬುದನ್ನು ಅದ್ಯಾಕೋ ಚಿತ್ರರಂಗದ ಮಂದಿ ಯೋಚಿಸುವುದಿಲ್ಲ!

ಸಂವಿಧಾನದ ತಪ್ಪು ವ್ಯಾಖ್ಯಾನ

ಇನ್ನು ಬರಗೂರರು ಸಂವಿಧಾನವನ್ನು ಉದ್ಗರಿಸಿ ಡಬ್ಬಿಂಗ್ ನಿಶೇಧವನ್ನು ಎತ್ತಿಹಿಡಿಯುವ ವ್ಯರ್ಥಸಾಹಸಕ್ಕೆ ಮುಂದಾಗಿದ್ದಾರೆ. ಸಂವಿಧಾನದ ನಾಲ್ಕು ವಿಧಿಗಳ ಬಗ್ಗೆ ಮಾತಾಡಿದ್ದಾರೆ. ೧೯ (ಜಿ), ೧೯ (೬), ೨೧, ೨೩ ಮತ್ತು ೨೪ನ್ನು ಎತ್ತಿ ಆಡಿದ್ದಾರೆ. ಡಬ್ಬಿಂಗ್ ನಿಶೇಧವನ್ನು ಸಮರ್ಥಿಸಲು ಸಂವಿಧಾನವನ್ನೂ ಬಿಡದೆ ಬಳಸಿಕೊಂಡಿರುವ ಶ್ರೀಯುತರು ಈ ಭರದಲ್ಲಿ ತಮಗೆ ಬೇಕಾದಂತೆ ಟಿಪ್ಪಣಿ ನೀಡಿದ್ದಾರೆ ಮತ್ತು ಕನ್ನಡನಾಡಲ್ಲಿರುವ ಅಸಾಂವಿಧಾನಿಕ ಡಬ್ಬಿಂಗ್ ತಡೆಯೆನ್ನುವುದು ಎಲ್ಲಾ ರೀತಿಯಲ್ಲೂ ಸಂವಿಧಾನಕ್ಕೆ ವಿರುದ್ಧವಾದುದು ಎನ್ನುವುದನ್ನೇ ಮರೆತಿರುವಂತೆ ನಡೆದುಕೊಳ್ಳುತ್ತಿರುವುದು ಮಾತ್ರಾ ದುರಂತ! ಭಾರತೀಯ ಸಂವಿಧಾನದ ೧೯(ಜಿ) ತನ್ನ ಪ್ರಜೆಗಳಿಗೆ ಯಾವುದೇ ನ್ಯಾಯಬದ್ಧ ವ್ಯಾಪಾರ ಮಾಡುವ ಹಕ್ಕಿದೆ ಎನ್ನುತ್ತದೆ. ಡಬ್ಬಿಂಗ್ ಕಾನೂನುಬದ್ಧವಾದ ಕ್ರಿಯೆಯಾದ್ದರಿಂದ ಇದನ್ನು ಸಂವಿಧಾನ ಎತ್ತಿ ಹಿಡಿಯುತ್ತದೆನ್ನುವ ಬರಗೂರರ ಮಾತುಗಳು ಒಪ್ಪಬೇಕಾದ್ದೇ! ಆದರೆ ಅವರ ಮುಂದಿನ ಮಾತುಗಳನ್ನು ಸಾಣೆ ಹಿಡಿಯಬೇಕಾಗಿದೆ.

೧೯(೬)ರ ಪ್ರಕಾರ ಸರ್ಕಾರಕ್ಕೆ ಯಾವುದನ್ನೇ ನಿಶೇಧಿಸುವ ಹಕ್ಕಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧವಾಗಬೇಕು ಎನ್ನುವ ಅರ್ಥದಲ್ಲಿ ಶ್ರೀಯುತರು ಬರೆದಿದ್ದಾರೆ. ಇಲ್ಲಿ ಸರ್ಕಾರಕ್ಕೆ “ನ್ಯಾಯೋಚಿತ ನಿಶೇಧ” ಹೇರುವ ಅವಕಾಶವಿದೆ ಎನ್ನುತ್ತಾ ಹಾಗಾಗಿ ಡಬ್ಬಿಂಗ್ ನಿಶೇಧ ಮಾಡಬಹುದು ಎಂದಿದ್ದಾರೆ. ಈ ನ್ಯಾಯೋಚಿತ ನಿಶೇಧ ಅನ್ನುವುದರ ವ್ಯಾಖ್ಯಾನವಾದರೂ ಏನು? ಯಾವುದರಿಂದ ಸಮಾಜದ ಸ್ವಾಸ್ಥ್ಯ/ ಜನರ ಆರೋಗ್ಯ/ ಬದುಕು ಹಾನಿಗೊಳಗಾಗುತ್ತೋ ಅಂಥದ್ದನ್ನು ಇದರಡಿಯಲ್ಲಿ ಸರ್ಕಾರ ನಿಶೇಧ ಮಾಡಿರೋದನ್ನು ಕಾಣಬಹುದು. ಒಂದಂಕಿ ಲಾಟರಿ, ಸರಾಯಿ, ಗುಟ್ಕಾ ಮೊದಲಾದವು... ಈ ಪಟ್ಟಿಯಲ್ಲಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ಸರ್ಕಾರ ಸಮರ್ಥನೆ ನೀಡಿರುವುದೂ ಕೂಡಾ ಇವು ನಿಯಂತ್ರಿಸಲಾಗದಂತಹ... ಆರೋಗ್ಯಕ್ಕೆ/ ಬದುಕಿಗೆ ಹಾನಿಕರವಾದವು ಎಂದೇ.  ಇಲ್ಲಿ ಡಬ್ಬಿಂಗ್ ಎನ್ನುವುದು ಹೇಗೆ ಹಾನಿಕರ ಎನ್ನುವುದನ್ನು ಇಡೀ ಜಗತ್ತು ಒಪ್ಪುವಂತೆ ವಿವರಿಸದೆ ಸರ್ಕಾರ ಇಂಥಾ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದಲ್ಲಿ ಚೀಮಾರಿಗೊಳಗಾಗುವುದು ನಿಶ್ಚಿತ.

ಇನ್ನು ಸಂವಿಧಾನದ ೨೩, ೨೪ನೇ ಕಾಲಮ್ಮುಗಳನ್ನು ಸಂಬಂಧವೇ ಇಲ್ಲದಿದ್ದರೂ ಎಳೆದುತಂದಿದ್ದಾರೆ. ೨೩ನೇ ಕಾಲಮ್ಮು ಜೀತಪದ್ದತಿ ಹಾಗೂ ಅಕ್ರಮ ಮಾನವ ಸಾಗಣೆಗಳ ನಿಶೇಧಗಳ ಬಗ್ಗೆ, ಸೇವಾ ಕಾಯ್ದೆಯಾದ ಎಸ್ಮಾ ಬಗ್ಗೆ ಮಾತಾಡಿದೆ.  ೨೪ನೇ ಕಾಲಮ್ಮಿನಲ್ಲಿ ಬಾಲಕಾರ್ಮಿಕ ಪದ್ದತಿ ನಿಶೇಧದ ಬಗ್ಗೆ ಮಾತಾಡಲಾಗಿದೆ. ಇದಕ್ಕೂ ಡಬ್ಬಿಂಗಿಗೂ ಅದೆಲ್ಲಿಂದ ಸಂಬಂಧವಿದೆಯೋ ಬಲ್ಲವರೇ ಹೇಳಬೇಕು.

ಸಿಸಿಐನ ವ್ಯಾಪ್ತಿ ಮತ್ತು ಮನರಂಜನೆ

ಇನ್ನು ಕಡೆಯದಾಗಿ ಭಾರತೀಯ ಸ್ಪರ್ಧಾ ಆಯೋಗದ ಬಗ್ಗೆಯೂ ತಪ್ಪುತಪ್ಪಾದ ಮಾಹಿತಿ ನೀಡಿದ್ದಾರೆ. ಸಿಸಿಐ ಗ್ರಾಹಕ ಹಕ್ಕು ಮತ್ತು ಸರಕುಗಳಿಗೆ ಸಂಬಂಧಿಸಿದ್ದು ಎಂಬುದು ಸರಿಯಲ್ಲಾ. ಮೂಲತಃ ಸಿಸಿಐ ಅಡಿಯಲ್ಲಿ ಮನರಂಜನೆಯೂ ಕೂಡಾ ಬರುತ್ತಿದ್ದು ಜನರಿಂದ ಹಣಪಡೆದು ನೀಡುವ ಯಾವುದೇ ಸೇವೆಯೂ ಕೂಡಾ ಗ್ರಾಹಕ ಸೇವೆಯೇ ಆಗಿದೆ ಎನ್ನುತ್ತಾ ಹಾಗಾಗಿ ಚಲನಚಿತ್ರವೂ ಸೇರಿದಂತೆ ಇಡೀ ಮನೋರಂಜನಾ ವಲಯವೂ ಸಿಸಿಐ ವ್ಯಾಪ್ತಿಯ ಅಡಿಯಲ್ಲಿ ಬರುತ್ತದೆಂದು ಬರೆಯಲಾಗಿದೆ.

ಸಿಸಿಐ ಕಾಯ್ದೆಯ ೫೪ನೇ ಕಾಲಮ್ಮಿನಲ್ಲಿ ಯಾವುದನ್ನೇ ಆಗಲಿ ಸಿಸಿಐ ವ್ಯಾಪ್ತಿಯಿಂದ ಹೊರಗಿಡುವ ಅಧಿಕಾರ ಕೇಂದ್ರಸರ್ಕಾರಕ್ಕಿದೆ ಎಂದಿರುವ ಶ್ರೀಯುತರು ಅರೆಸತ್ಯವೊಂದನ್ನು ಮಾತ್ರಾ ಮಾತಾಡಿದ್ದಾರೆ. ಮುಂದುವರೆಯುತ್ತಾ ಇದೇ ಕಾಲಮ್ಮಿನಲ್ಲಿ ಯಾವ ಯಾವ ಸಂದರ್ಭಗಳಲ್ಲಿ ಕೇಂದ್ರಸರ್ಕಾರ ಇಂಥಾ ಕ್ರಮಕ್ಕೆ ಮುಂದಾಗಬಹುದು ಎಂದೂ ವಿವರಿಸುತ್ತಾ ಸರ್ಕಾರದ ಭದ್ರತೆಗೆ, ಜನತೆಯ ಹಿತಕ್ಕೆ ಧಕ್ಕೆ ತರುವಂತಿದ್ದರೆ, ಅಂತರದೇಶೀಯ ಒಪ್ಪಂದಗಳಿಗೆ ಧಕ್ಕೆ ತರುವಂತಿದ್ದರೆ, ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕಾಗಿ ದುಡಿಯುವ ಯಾವುದೇ ಸಂಸ್ಥೆಯಾಗಿದ್ದರೆ ವಿನಾಯ್ತಿ ನೀಡಬಹುದು.. ಅದೂ ಕೂಡಾ ಸಾರ್ವಭೌಮತ್ವದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿನಾಯ್ತಿ ನೀಡಬಹುದು ಎನ್ನಲಾಗಿದೆ ಅಷ್ಟೇ!


ಇಷ್ಟಕ್ಕೂ ಕೇಂದ್ರವೋ ರಾಜ್ಯವೋ ಮತ್ತೊಂದು ಸರ್ಕಾರ ಡಬ್ಬಿಂಗನ್ನು ನಿಶೇಧ ಮಾಡಿದ್ದ ಪಕ್ಷದಲ್ಲಿ ಇವರಾಡಿದ ಮಾತುಗಳನ್ನು ಒಪ್ಪಬಹುದಾಗಿತ್ತು. ಅಂತಹ ಯಾವ ನಿಶೇಧವೂ ಇಲ್ಲದಿದ್ದರೂ ಚಿತ್ರರಂಗದ ದೊಣೇನಾಯಕರ ಪರ ವಹಿಸಿರುವುದು ಅಚ್ಚರಿಯೆನ್ನಿಸುತ್ತದೆ. ಒಟ್ಟಾರೆ ಶತಾಯ ಗತಾಯ ಡಬ್ಬಿಂಗ್ ತಡೆಯಲೇ ಬೇಕೆನ್ನುವ ಉಮ್ಮೇದಿನಲ್ಲಿ ಬರಗೂರು ರಾಮಚಂದ್ರಪ್ಪನವರಂಥಾ ಹಿರಿಯರೂ ಕೂಡಾ ಈ ದೇಶದ ಸಂವಿಧಾನ, ಜನಸಾಮಾನ್ಯರ ಆಯ್ಕೆಸ್ವಾತಂತ್ರ್ಯ, ಸ್ಪರ್ಧೆಗಳ ಮೂಲ ಆಶಯಗಳನ್ನೇ ಮರೆತವರಂತೆ ನಡೆದುಕೊಂಡಿರುವುದು ಮಾತ್ರಾ ವಿಷಾದನೀಯ.

ಕಿರಣ್ ಬಾಟ್ನಿಯವರ ಹೊಸ ಇಂಗ್ಲೀಶ್ ಹೊತ್ತಗೆ ಮಾರುಕಟ್ಟೆಗೆ!

( ಚಿತ್ರಕೃಪೆ: http://kiranbatni.com/)

ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಬ್ಲಾಗನ್ನು ಆರಂಭಿಸಿ, ಕನ್ನಡ ಅಂತರ್ಜಾಲ ತಾಣದಲ್ಲೊಂದು ಹೊಸಅಲೆಗೆ ಕಾರಣರಾದ, ಹೊಸಪೀಳಿಗೆಯ ಯುವ ಚಿಂತಕರಾದ ಶ್ರೀ ಕಿರಣ್ ಬಾಟ್ನಿಯವರು ಇಂಗ್ಲೀಷಿನಲ್ಲಿ ಬರೆದಿರುವ ಹೊಸ ಹೊತ್ತಗೆ "ದಿ ಪಿರಮಿಡ್ ಆಫ಼್ ಕರಪ್ಶನ್" ಬಿಡುಗಡೆಗೆ ಸಿದ್ಧವಾಗಿದೆ. ಇದೇ ಫ಼ೆಬ್ರವರಿ ೧೫ರಂದು ಬೆಳಗ್ಗೆ ೯:೦೦ಗಂಟೆಗೆ ಅಂತರ್ಜಾಲದ ಮೂಲಕವೂ ಪುಸ್ತಕ ಬಿಡುಗಡೆಯನ್ನು ಹೊಸಬಗೆಯಲ್ಲಿ ಆಚರಿಸಲಾಗುತ್ತಿದೆ.

ಕಿರಣ್ ಬಾಟ್ನಿ ಮತ್ತು ನಾಡಪರ ಚಿಂತನೆ

ಮೂಲತಃ ಮೈಸೂರಿನವರಾದ ಕಿರಣ್, ದೆಹಲಿಯ ಐಐಟಿಯಲ್ಲಿ ಎಂ.ಟೆಕ್ ಪದವೀಧರರು. ಇಪ್ಪತ್ತೈದಕ್ಕೂ ಹೆಚ್ಚು ದೇಶಗಳಲ್ಲಿ ಸುತ್ತಾಟ ನಡೆಸಿರುವ ಇವರು ಸದಾ ತಮ್ಮ ಹೊಸತನದ ಚಿಂತನೆಗಳಿಂದ ಜನಮನ ಸೆಳೆದಿದ್ದು, ಅಧ್ಯಾತ್ಮ ಮತ್ತು ಲೌಕಿಕ ಬದುಕಿನ ದಿಟಗಳ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನವನ್ನೂ ನಡೆಸುತ್ತಿರುವ ಕಿರಣ್ ಬಾಟ್ನಿಯವರು ನಾಡು, ನುಡಿ, ಏಳಿಗೆ, ಏರ್ಪಾಟುಗಳ ಬಗ್ಗೆ ಸಾಕಷ್ಟು ಮಹತ್ವದ ಬರಹಗಳನ್ನು ಬರೆದಿದ್ದಾರೆ. ಇಂಗ್ಲೀಷಿನಲ್ಲಿ "ಕರ್ನಾಟಿಕ್" ಎಂಬ ಬ್ಲಾಗನ್ನು ನಡೆಸುತ್ತಿರುವ ಕಿರಣ್, ಹೊನಲು ಹೆಸರಿನ ಕನ್ನಡದ ವಿಶಿಷ್ಟವಾದ ತಾಣವನ್ನು ನಡೆಸುತ್ತಿದ್ದು ಇಲ್ಲಿ ಕನ್ನಡದಲ್ಲಿಯೇ ಅರಿಮೆಯ ಬರಹಗಳನ್ನು ಬರೆಯುವ ಬರಹಗಾರರ ದಂಡೊಂದು ತಯಾರಾಗುತ್ತಿದೆ. ಇದೀಗ ಕಿರಣ್ ಬಾಟ್ನಿ ಬರೆದಿರುವ "ಪಿರಮಿಡ್ ಆಫ಼್ ಕರಪ್ಶನ್" ಹೊತ್ತಗೆ ಮಾರುಕಟ್ಟೆಗೆ ಬರುತ್ತಿದ್ದು ಇದು ಇವರ ಮೊದಲ ಇಂಗ್ಲೀಷ್ ಹೊತ್ತಗೆಯಾಗಿದೆ.

ಕನ್ನಡದಲ್ಲಿ "ಮಂದಿಯಾಳ್ವಿಕೆಯಲ್ಲಿ ಕನ್ನಡಿಗ" ಹೊತ್ತಗೆಯನ್ನು ಬರೆದಿರುವ ಕಿರಣ್, ಡಾ ಡಿ ಎನ್ ಶಂಕರಬಟ್ಟರ "ಕನ್ನಡ ನುಡಿಯರಿಮೆಯ ಇಣುಕುನೋಟ" ಹೊತ್ತಗೆಯ ಸಂಪಾದಕರೂ ಆಗಿದ್ದಾರೆ. ಇಂಗ್ಲೀಷಿನಲ್ಲಿ ಬರೆಯುವ ಮೂಲಕ ತಮ್ಮ ನಿಲುವುಗಳನ್ನು ಇಂಗ್ಲೀಷ್ ಓದಬಲ್ಲ ಕನ್ನಡದ ಒಂದು ವರ್ಗವನ್ನು ಮಾತ್ರವಲ್ಲದೆ, ಕನ್ನಡೇತರರನ್ನೂ ತಲುಪುವ ಉದ್ದೇಶವನ್ನು ಶ್ರೀ ಕಿರಣ್ ಬಾಟ್ನಿ ಹೊಂದಿದ್ದಾರೆ. ಈ ಹೊತ್ತಗೆಯನ್ನು "ಅಂತರ್ಜಾಲ"ದ ಮೂಲಕ ಕೊಳ್ಳಬಹುದಾಗಿದೆ. ಭ್ರಷ್ಟಾಚಾರದ ಬಗ್ಗೆ ಹೊಸನೋಟವನ್ನು ಬೀರುವ ಸದರಿ ಹೊತ್ತಗೆಯು ಭ್ರಷ್ಟಾಚಾರದ ಬಗ್ಗೆ ಓದುಗರಿಗೆ ಈಗಾಗಲೇ ಇರಬಹುದಾದ ನಂಬಿಕೆಗಳ ಬುಡವನ್ನೇ ಅಲುಗಿಸಬಲ್ಲದಾಗಿದೆ.

ಈ ಹೊತ್ತಗೆಯನ್ನು ಮುಂದಾಗಿ ಕೊಳ್ಳಲು ಈ ತಾಣಕ್ಕೆ ಭೇಟಿ ನೀಡಿ.
Related Posts with Thumbnails