Showing posts with label ಆಡಳಿತ. Show all posts
Showing posts with label ಆಡಳಿತ. Show all posts

ನೀವು ಕನ್ನಡ ಶಿವಯ್ಯ ಆಗ್ತೀರಾ?

 


ಅಂತೂ ಸಿದ್ದರಾಮಯ್ಯನವರ ಪರ್ವ ಮುಗಿದಂಗಾಯ್ತು ಗುರೂ! ಕನ್ನಡನಾಡಿಗೆ ಹೊಸ ಸಾರಥಿಯಾಗಿ ಶ್ರೀ ಡಿ. ಕೆ ಶಿವಕುಮಾರ್ ಅವರು ಇನ್ನೇನು ನೇಮಕವಾಗಲಿದ್ದಾರೆ.. ಅಭಿನಂದನೆಗಳು ಅವರಿಗೆ!


ಕನ್ನಡ ರಾಮಯ್ಯ!

ಶ್ರೀ ಸಿದ್ದರಾಮಯ್ಯನವರಿಗೆ ಅವರ ಕೆಲವುಕನ್ನಡ ಪರವಾದ ಕೆಲಸಗಳಿಂದ ಕನ್ನಡ ರಾಮಯ್ಯ ಅಂತಾರೆ. ಬೆಂಗಳೂರಿನ ನಮ್ಮ ಮೆಟ್ರೋ ಹೋರಾಟ ಗೆಲ್ಲೋದಕ್ಕೆ ಕಾರಣವೇ ಅವರು. ಇತ್ತೀಚಿಗೆ ಜಾರಿಯಾದ ನಾಮಫಲಕ ಕಾಯ್ದೆಯು ಜಾರಿಯಾದದ್ದೂ ಇವರದ್ದೇ ಕಾಲದಲ್ಲಿ. ಕನ್ನಡ ನಾಡಿನ ಕಲಿಕೆಯಲ್ಲಿರುವ ತ್ರಿಭಾಷಾನೀತಿಯನ್ನು ಕೈಬಿಟ್ಟು ದ್ವಿಭಾಷಾನೀತಿಯ ಜಾರಿಗೆ ಒಲವು ತೋರಿಸಿದವರು ಅವರು. ಕನ್ನಡದ ಕೆಲಸಗಳು ಸಾಕಷ್ಟಿದ್ದರೂ, ಕೆಲವನ್ನಾದರೂ ಧೈರ್ಯವಾಗಿ ಮಾಡಿದ್ದು ಶ್ರೀ ಸಿದ್ದರಾಮಯ್ಯನವರು. ಹೀಗಾಗಿ ಅವರನ್ನು ತುಸುಮಟ್ಟಿಗಾದರೂ ಕನ್ನಡ ರಾಮಯ್ಯ ಎನ್ನಬಹುದು...


ನೀವಾಗಿ ಕನ್ನಡ ಶಿವಯ್ಯ!

ಕನ್ನಡ ಪರ ಯಾವುದು, ಕನ್ನಡ ವಿರೋಧ ಯಾವುದು ಎಂಬುದರ ಬಗ್ಗೆ ಸರಿಯಾದ ಅರಿವು ಮೂಡಿಸಿಕೊಂಡು, ಕನ್ನಡಿಗರ ಪರವಾಗಿ ಕೆಲಸ ಮಾಡಲು ಡಿ ಕೆ ಶಿವಕುಮಾರ್ ಅವರು ಮನಸ್ಸು ಮಾಡಬೇಕಿದೆ. ಕನ್ನಡಪರ ದನಿಗಳಿಗೆ ಕಿವಿಯಾಗಬೇಕಿದೆ. ಮೊದಲಿಗೆ, ಏನಿಲ್ಲದಿದ್ದರೂ ತ್ರಿಭಾಷಾನೀತಿಯಂಥಾ ಕನ್ನಡ ವಿರೋಧಿ ನೀತಿಗಳನ್ನು ಕೈಬಿಡಲು ಮನಸ್ಸು ಮಾಡಬೇಕಿದೆ. 

ಈಗ ನಾಡಿನ ಮುಖ್ಯಮಂತ್ರಿಗಳಾಗಲಿರೋ ಶಿವಕುಮಾರ್ ಅವರನ್ನು ಎಲ್ಲಾ ಕನ್ನಡಪರರೂ ಕೇಳೋದು ಒಂದೇ ಪ್ರಶ್ನೆ! ನೀವಾಗ್ತೀರಾ, ಕನ್ನಡ ಶಿವಯ್ಯ? ಅವರೆಲ್ಲರ ಆಶಯವೂ ಒಂದೇ... ನೀವಾಗಿ ಕನ್ನಡ ಶಿವಯ್ಯ!

ನಿನ್ನದೂ ಇದೇ ಮಾತಲ್ವಾ ಗುರೂ!!   

ಕನ್ನಡದಲ್ಲಿ ಮಾಹಿತಿ - ಇದಕ್ಕುಂಟೇ ಸರ್ಕಾರಿ ನಿಯಮ?


ನಾವು ಪ್ರತಿದಿನ ಬಳಸುವ ವಸ್ತುಗಳ ಮೇಲೆ ಕನ್ನಡದಲ್ಲಿ ಮಾಹಿತಿ ಇರಬೇಕು ಎನ್ನುವುದು ಕನ್ನಡ ಗ್ರಾಹಕರ ಕೂಗಾಗಿದ್ದು ಇದೊಂದು ಅತ್ಯಂತ ಸಹಜವಾದ ಬೇಡಿಕೆಯಾಗಿದೆ. ವಾಸ್ತವದಲ್ಲಿ ಪರಿಸ್ಥಿತಿ ಹೀಗಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಎಷ್ಟೋ ಬಾರಿ ನಾವು ಬಳಸುವ, ನಮ್ಮೂರಿನಲ್ಲಿಯೇ ಕೊಳ್ಳಲಾದ ವಸ್ತುಗಳ ಮೇಲೂ ಅವುಗಳ ಹೆಸರು, ಬಳಕೆಯ ಮಾಹಿತಿಗಳು ಕನ್ನಡದಲ್ಲಿ ಇರುವುದಿಲ್ಲ. ಹೀಗೆ ಇರಬೇಕು ಎನ್ನಲು ಯಾವುದಾದರೋ ಕಾಯ್ದೆ ಕಾನೂನುಗಳಿವೆಯೇ? ಸರ್ಕಾರ ಈ ನಿಟ್ಟಿನಲ್ಲಿ ಯಾವುದಾದರೋ ನಿಯಮವನ್ನು ರೂಪಿಸಿದೆಯೇ? ಇಂಥಾ ನಿಯಮಗಳಿದ್ದೂ ಅದನ್ನು ಉಲ್ಲಂಘಿಸಲಾಗುತ್ತಿದೆಯೇ? ಈ ಎಲ್ಲವುಗಳ ಬಗ್ಗೆ ಸಂಬಂಧಿಸಿದವರಿಂದ ಮಾಹಿತಿಯನ್ನು ಕೋರಿ ಓದುಗರೊಬ್ಬರು ಅರ್ಜಿಯನ್ನು ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಕೇಳಿದ ಪಶ್ನೆಗಳು ಹೀಗಿವೆ: 

೧. ಕರ್ನಾಟಕ ರಾಜ್ಯಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಯಾವ ಭಾಷೆಯಲ್ಲಿ ಮುದ್ರಿಸಿರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ಕಾನೂನುಗಳೇನು?
೨. ಕರ್ನಾಟಕ ರಾಜ್ಯಸರ್ಕಾರವು, ಕರ್ನಾಟಕ ರಾಜ್ಯದಲ್ಲಿ ಮಾರಾಟವಾಗಲ್ಪಡುವ ಯಾವುದೇ ವಸ್ತು ಅಥವಾ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು, ಆ ಉತ್ಪನ್ನದ ಮೇಲೆ ಅಚ್ಚು ಹಾಕಿಸಬೇಕು ಎಂಬುದನ್ನೇನಾದರೂ ಕಡ್ಡಾಯ ಮಾಡಿದೆಯೇ? ಕಡ್ಡಾಯ ಮಾಡಿದ್ದ ಪಕ್ಷದಲ್ಲಿ, ಯಾವ ಭಾಷೆಯಲ್ಲಿ ಆ ಮಾಹಿತಿ ಇರಬೇಕು ಎಂಬುದಕ್ಕೆ ವಿಧಿಸಿರುವ ನಿಯಮ/ ಕಾನೂನುಗಳೇನು?
೩. ಒಂದು ಪಕ್ಷ, ಪ್ರಶ್ನೆ ೧ ಮತ್ತು ೨ ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ, ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಮೇಲೆ, ಅವುಗಳ ಹೆಸರನ್ನು ಮತ್ತು ಅವುಗಳ ಬಗ್ಗೆ ಮಾಹಿತಿಯನ್ನು ಯಾವ ನಿಯಮ/ಕಾನೂನಿಗೆ ಒಳಪಟ್ಟು ಮುದ್ರಿಸಬಹುದಾಗಿದೆ?
೪. ಒಂದು ಪಕ್ಷ, ಪ್ರಶ್ನೆ ೧ ಮತ್ತು ೨ರಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ನಮ್ಮ ರಾಜ್ಯದಲ್ಲಿ ಯಾವುದೇ ನಿಯಮ/ಕಾನೂನು ಇಲ್ಲದೆ ಇದ್ದರೆ, ಉತ್ಪನ್ನಗಾರರು ಉತ್ಪನ್ನಗಳ ಹೆಸರನ್ನು ಮತ್ತು ಉತ್ಪನ್ನಗಳ ಮಾಹಿತಿಯನ್ನು ಮುದ್ರಿಸುವುದು ಅವರ ವಿವೇಚನೆಗೆ ಬಿಟ್ಟದ್ದು ಎಂದು ಕರ್ನಾಟಕ ರಾಜ್ಯ ಸರ್ಕಾರ ಭಾವಿಸುತ್ತದೆಯೇ?

ಈ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಏನುತ್ತರ ನೀಡುವರೋ ಎಂಬುದು ಕುತೂಹಲಕಾರಿಯಾಗಿದೆ. ನಮ್ಮ ನಾಡಿನಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಮೇಲೂ ಕನ್ನಡದಲ್ಲಿ ಹೆಸರು ಮಾಹಿತಿ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಸದರಿ ಮಾಹಿತಿ ಕೋರಿಕೆ ಅರ್ಜಿ ಒಂದು ಮೆಟ್ಟಿಲಾಗಿದ್ದು ಇದರಲ್ಲಿ ಯಶಸ್ಸು ಸಿಗಲೆಂಬುದು ಹಾರೈಕೆ.

ಸಿಬಿಎಸ್‌ಇ: ಇನ್ಮುಂದೆ ಕಡಿವಾಣವಿಲ್ಲದ ಕುದುರೆ!

(ಚಿತ್ರಕೃಪೆ: ಉದಯವಾಣಿ)
ಇದುವರೆವಿಗೆ ರಾಜ್ಯಸರ್ಕಾರದ ಅನುಮತಿ (ನಿರಾಕ್ಷೇಪಣಾ ಪತ್ರ) ಇಲ್ಲದೆ ಸಿ.ಬಿ.ಎಸ್.ಇ ಶಾಲೆಗಳನ್ನು ಶುರುಮಾಡುವಂತಿಲ್ಲಾ ಎಂದಿದ್ದ ನಿಯಮವನ್ನು ಸಡಿಲ ಮಾಡಿರುವ ಕೇಂದ್ರದ ಕ್ರಮದಿಂದಾಗಿ, ರಾಜ್ಯಸರ್ಕಾರದ ಬಳಿಯಿದ್ದ ಒಂದೇ ಒಂದು ಅಂಕುಶವೂ ಇಲ್ಲದಂತಾಗಿರುವ ಕಳವಳಕಾರಿ ಸುದ್ದಿ ೨೭.೧೦.೨೦೧೩ರ ಉದಯವಾಣಿ ದಿನಪತ್ರಿಕೆಯಲ್ಲಿ ಬಂದಿದೆ.

ರಾಜ್ಯಸರ್ಕಾರದ ಬಳಿಯಿದ್ದ ಕಡಿವಾಣ

ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ ಶಾಲೆಗಳು ಸಿಬಿಎಸ್‌ಇ ಬೋರ್ಡ್ ಅಧೀನ ಬರುತ್ತವೆ ಮತ್ತು ಇವುಗಳನ್ನು ಆರಂಭಿಸಲು ರಾಜ್ಯಸರ್ಕಾರದ ಅನುಮತಿ ಕಡ್ಡಾಯ ಎನ್ನಲಾಗಿತ್ತು. 
ಮಾನ್ಯತೆ ನೀಡಲು ಸಿ.ಬಿ.ಎಸ್.ಇ ಬೋರ್ಡು ವಿಧಿಸಿರೋ ಕರಾರು...
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಇ) ತನ್ನ ಪಠ್ಯಕ್ರಮವನ್ನು ಅನುಸರಿಸಲು ಸಿದ್ಧವಾಗಿರೋ ವಿದ್ಯಾಸಂಸ್ಥೆಗಳಿಗೆ ಆಯಾ ರಾಜ್ಯಸರ್ಕಾರದಿಂದ ನಿರಪೇಕ್ಷಣಾ ಪತ್ರ (N.O.C) ಸಲ್ಲಿಸಬೇಕು ಅನ್ನೋ ನಿಯಮಾನ ಹೊಂದಿದೆ. ಖಾಸಗಿ, ಅನುದಾನಿತ, ಸರ್ಕಾರಿ ಯಾವುದೇ ಶಾಲೆಯಿದ್ದರೂ ಸರ್ಕಾರದ ಅನುಮತಿಯಿಲ್ಲದೆಯೇ ಮಾನ್ಯತೆಯನ್ನು ನೀಡುವಂತೆ ಇಲ್ಲ.
ನಿರಾಕ್ಷೇಪಣಾ ಪತ್ರ ಕೊಡಲು ಇರೋ ನಿಯಮಾ...
ಕರ್ನಾಟಕ ಸರ್ಕಾರವೂ ಕೂಡಾ ಸಿ.ಬಿ.ಎಸ್.ಇ ಶಾಲೆಗಳಿಗೆ ನಿರಾಕ್ಷೇಪಣಾ ಪತ್ರ ಕೊಡಕ್ಕೆ ಅಂತಾನೆ ಒಂದು ನಿಯಮಾನಾ 1989ರಲ್ಲೇ ಮಾಡಿದೆ. ಅದುಕ್ಕೆ ಆಗಿಂದಾಗ್ಗೆ ತಿದ್ದುಪಡಿಗಳನ್ನೂ ಮಾಡಿಕೊಂಡು ಬಂದಿದೆ. ಈ ನಿಯಮದಲ್ಲಿರೋ ಪ್ರಮುಖವಾದ ಅಂಶಗಳು ಹೀಗಿವೆ.
- ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಗೆ ಬದ್ಧರಾದ ಅಖಿಲ ಭಾರತ ಸೇವೆ, ಕೇಂದ್ರ ಸರ್ಕಾರದ ಸೇವೆ ಮತ್ತು ಕೇಂದ್ರ ಸರ್ಕಾರದ ಉದ್ದಿಮೆಗಳಿಗೆ ಸೇರಿದ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಇಲಾಖೆ/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
- ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದ ಹಾಗೂ ಅಂತರ ರಾಜ್ಯ ವರ್ಗಾವಣೆಗೆ ಒಳಪಡುವ ಬ್ಯಾಂಕ್‍ಗಳು, ಸಂಸ್ಥೆಗಳು (ಫರ್ಮುಗಳು) ಅಥವಾ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪೋಷಕರ ಮಕ್ಕಳಿದ್ದಲ್ಲಿ (ಇದನ್ನು ಪುಷ್ಟೀಕರಿಸಲು ಸಂಬಂಧಪಟ್ಟ ಬ್ಯಾಂಕ್/ ಸಂಸ್ಥೆಗಳಿಂದ ಧೃಡೀಕರಣ ಪತ್ರ ಸಲ್ಲಿಸುವುದು)
ಇದಕ್ಕೆ 2002ರಲ್ಲಿ ಒಂದು ತಿದ್ದುಪಡಿ ಮಾಡಿ, ‘ಕರ್ನಾಟಕ ರಾಜ್ಯಸರ್ಕಾರದ ಭಾಷಾನೀತಿಯನ್ನು ಕಾಲಕಾಲಕ್ಕೆ ನಿಗದಿಪಡಿಸಿದಂತೆ ಪಾಲಿಸತಕ್ಕದ್ದು’ ಎಂದು ಸೇರಿಸಿದ್ದಾರೆ. ಒಂದರಿಂದ ಐದನೇ ತರಗತಿಯವರೆಗೆ ಕಡ್ಡಾಯವಾಗಿ ಮಾತೃಭಾಷೆ ಅಥವಾ ಕನ್ನಡ ಮಾಧ್ಯಮವನ್ನು ಹೊಂದಿರತಕ್ಕದ್ದು.
ಇಂಥಾ ನಿಯಮವಿದ್ದಾಗಲೂ ರಾಜ್ಯಸರ್ಕಾರ ಇದನ್ನು ಕಟ್ಟುನಿಟ್ಟಾಗಿ ಜಾರಿಮಾಡುವಲ್ಲಿ ಪೂರ್ತಿ ಯಶಸ್ವಿಯಾಗದಿದ್ದರೂ, ಹೀಗೆ ಹೇಳಿಕೊಳ್ಳಲಿಕ್ಕಾದರೂ ಒಂದು ನಿಯಮವನ್ನು ರಾಜ್ಯಸರ್ಕಾರ ಮಾಡಿತ್ತು. ಇದೀಗ ರಾಜ್ಯಸರ್ಕಾರದ ಅನುಮತಿಯ ಅಗತ್ಯವಿಲ್ಲ ಎಂದು ಸಿಬಿಎಸ್‌ಇ ಬೋರ್ಡು ನಿಯಮ ಬದಲಾಯಿಸಿದೆ. ಇದರಿಂದಾಗಿ ರಾಜ್ಯದಲ್ಲಿ ಎಗ್ಗುಸಿಗ್ಗಿಲ್ಲದೆ ಸಿಬಿಎಸ್‌ಇ ಶಾಲೆಗಳು ಇನ್ಮುಂದೆ ಆರಂಭವಾಗಲಿವೆ.

ಇದು ಒಕ್ಕೂಟದ ಮೇಲಿನ ದಾಳಿ

ಕಲಿಕೆ ಎನ್ನುವುದು ೧೯೭೬ಕ್ಕೆ ಮೊದಲು ರಾಜ್ಯಪಟ್ಟಿಯಲ್ಲಿದ್ದದ್ದು ಇದೀಗ ಜಂಟಿಪಟ್ಟಿಯಲ್ಲಿದೆ. ಅಂದರೆ ಕೇಂದ್ರ ಮಾಡುವ ಕಟ್ಟಳೆಗಳೇ ಅಂತಿಮ. ಇಂಥಾ ನಿಯಮದಿಂದಾಗಿ ರಾಜ್ಯಗಳು ತನ್ನ ನಾಡಿನ ಪ್ರಜೆಗಳಿಗೆ ಏನು ಕಲಿಸಬೇಕು ಎನ್ನುವುದನ್ನು ಕೇಂದ್ರ ನಿರ್ಧರಿಸುತ್ತಿದೆ. ಇದು ಸರಿಯಾಗಬೇಕೆಂದರೆ ಒಕ್ಕೂಟ ವ್ಯವಸ್ಥೆಯಲ್ಲಿ ಶಿಕ್ಷಣವೆನ್ನುವುದು ರಾಜ್ಯಪಟ್ಟಿಗೆ ಮರಳಿ ಬರಬೇಕು. ಅಧಿಕಾರ ವಿಕೇಂದ್ರೀಕರಣ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎನ್ನುವುದಕ್ಕೆಲ್ಲಾ ಆಗ ಅರ್ಥ ಸಿಕ್ಕೀತು! ಒಕ್ಕೂಟ ವ್ಯವಸ್ಥೆಯ ಮೇಲಿನ ಈ ದಾಳಿಯನ್ನು ಕೊನೆಗೊಳಿಸಲು ರಾಜ್ಯಸರ್ಕಾರಗಳು ಒಟ್ಟಾಗಿ ದನಿಯೆತ್ತಬೇಕು.

ಕನ್ನಡ ನೆಲದಲ್ಲಿನ ಕೆಲಸ - ಕನ್ನಡಿಗರ ಹಕ್ಕು!


ನಾಳೆ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಿಂದೊಂದು ಮೆರವಣಿಗೆ ಹೊರಡಲಿದೆ. ಇದು ಸ್ವಾತಂತ್ರ್ಯ ಉದ್ಯಾನದವರೆಗೂ ಸಾಗಲಿದ್ದು "ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ..." ಎಂಬ ಹಕ್ಕೊತ್ತಾಯವನ್ನು ಹೊತ್ತು ಸಾಗಲಿದೆ. ಕರ್ನಾಟಕ ರಕ್ಷಣಾ ವೇದಿಕೆಯು ಏರ್ಪಡಿಸಿರುವ ಈ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಲಿದ್ದು ಕನ್ನಡಿಗರ ಬದುಕು ಹಸನುಗೊಳಿಸುವ ಸಲುವಾಗಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಇದೊಂದು ಮಹತ್ವದ ಹಕ್ಕೊತ್ತಾಯವಾಗಿದೆ.

ಈ ಹಕ್ಕೊತ್ತಾಯ ಅಸಹಜವೇನು?!

ನಮ್ಮ ನಾಡಲ್ಲಿರುವ ಸಂಪನ್ಮೂಲಗಳನ್ನು ಕಡಿಮೆ ಬೆಲೆಗೆ/ ಉಚಿತವಾಗಿ ಸರ್ಕಾರ ಕೊಡುವುದೇ ಇಲ್ಲಿನ ಜನರಿಗೆ ಕೆಲಸದ ಅವಕಾಶ ಸಿಗಬೇಕೆಂದು. ಆ ಮೂಲಕ ಜನರ ಬದುಕು ಆರ್ಥಿಕವಾಗಿ ಬಲಶಾಲಿಯಾಗಬೇಕೆಂದು. ಆದರೆ ಇಲ್ಲಿ ನಮ್ಮ ಜನ ಎಂದರೆ ಯಾರು ಎನ್ನುವುದರಲ್ಲೇ ಗೊಂದಲ ಹುಟ್ಟುಹಾಕಿದ ವ್ಯವಸ್ಥಿತ ಕ್ರಿಯೆ ನಡೆದಿದೆ. ಈ ಕಾರಣದಿಂದಾಗಿಯೇ ನಮ್ಮ ನಾಡಿಗೆ ಕೇಂದ್ರಸರ್ಕಾರಿ ಕಚೇರಿಗಳು, ಸಾರ್ವಜನಿಕ ಉದ್ದಿಮೆಗಳು ಬಂದಾಗ "ಓಹೋ ಆ ಸಂಸ್ಥೆ ಬಂತು... ಆಹಾ ಈ ಸಂಸ್ಥೆ ಬಂತು" ಎಂದು ಹಿಗ್ಗುವ ಹಾಗೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ! ಯಾಕೆಂದರೆ ಹೀಗೆ ಬರುವ ಉದ್ದಿಮೆಗಳು ಉದ್ದಿಮೆಯ ಜೊತೆಯಲ್ಲಿ ಸಾವಿರಾರು ಹೊರನಾಡಿನವರನ್ನು ನಮ್ಮ ನಾಡಿಗೆ ವಲಸೆ ಮಾಡಿಸಿದೆ. ನಮ್ಮ ಜನರ ಕೆಲಸದ ಅವಕಾಶಗಳನ್ನು ಕಳೆದು ಹಾಕುವುದರ ಜೊತೆಯಲ್ಲೇ ನಮ್ಮೂರಿನ ಜನಲಕ್ಷಣವನ್ನು ಇದು ಬದಲಿಸಿಹಾಕಿದೆ. ಭಾರತದ ಸಂವಿಧಾನದ ರೀತ್ಯಾ "ಕರ್ನಾಟಕದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು" ಎಂಬ ಈ ಹಕ್ಕೊತ್ತಾಯ ಅಸಂವಿಧಾನಿಕವಾದುದೂ, ರಾಷ್ಟ್ರೀಯವಾದಿಗಳ ರೀತ್ಯಾ ಇದು ಸಂಕುಚಿತ ಬುದ್ಧಿಯದ್ದೂ ಆಗಿ ಕಾಣಬಹುದು. ಆದರೆ ನ್ಯಾಯದ ದೃಷ್ಟಿಯಲ್ಲಿ ಅತ್ಯಂತ ಸಹಜವೂ, ಸರಿಯೂ ಆದುದಾಗಿದೆ. ಇಷ್ಟಕ್ಕೂ ನಮ್ಮೂರಿನ ಜನರಿಗೆ ಕೆಲಸ ಒದಗಿಸದ, ನಮ್ಮ ಜನರ ಬದುಕನ್ನು ಹಸನು ಮಾಡುವ ಉದ್ದೇಶವಿರದ ಯಾವುದೇ ಉದ್ದಿಮೆಯಾದರೂ ನಮ್ಮ ನಾಡಿಗೆ ಏಕೆ ಬೇಕು ಎಂಬುದು ಸರಳವಾದ ನೇರತರ್ಕವಾಗಿದೆ!

ಸರೋಜಿನಿ ಮಹಿಷಿ ವರದಿ ಮತ್ತು ಕೆಲಸದಲ್ಲಿ ಮೀಸಲು!

ಡಾ. ಸರೋಜಿನಿ ಮಹಿಷಿಯವರ ಮುಂದಾಳ್ತನದಲ್ಲಿ ಸ್ಥಳೀಯರಿಗೆ ಕೆಲಸದಲ್ಲಿ ಮೀಸಲಾತಿ ನೀಡುವ ಬಗ್ಗೆ ಒಂದು ಅಧ್ಯಯನ ನಡೆಸಿ ವರದಿಯನ್ನು ಕರ್ನಾಟಕ ರಾಜ್ಯಸರ್ಕಾರದ ವತಿಯಿಂದ ತರಿಸಿಕೊಳ್ಳಲಾಗಿತ್ತು. ವರದಿಯಲ್ಲಿ ಅಂದಿನ ಕಾಲಕ್ಕೆ ಹೊಂದುವಂತೆ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಮೀಸಲು ಇರಬೇಕು ಎಂದೂ ಬರೆಯಲಾಗಿತ್ತು. ಈ ವರದಿ ಸಲ್ಲಿಕೆಯಾಗಿ ೨೮ ವರ್ಷಗಳೇ ಆದವು. ಇದುವರೆಗಿನ ಯಾವುದೇ ಸರ್ಕಾರಕ್ಕೂ ಈ ವರದಿಯನ್ನು ಜಾರಿಮಾಡಲು ಸಾಧ್ಯವಾಗಿಲ್ಲ. ಒಂದು ಜನಪರವಾದ ವರದಿಯನ್ನು ಇದುವರೆವಿಗೂ ಜಾರಿ ಮಾಡಲಾಗದಿರುವುದಕ್ಕೆ ರಾಜಕೀಯ ಇಚ್ಚಾಶಕ್ತಿ ಮತ್ತು ಚಾಣಾಕ್ಷತನದ ಕೊರತೆ ಕಾರಣವೆನ್ನದೇ ವಿಧಿಯಿಲ್ಲಾ! "ಕರ್ನಾಟಕ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡಲಿ" ಎನ್ನುವುದು ಸರಿಯಾದ ಹಕ್ಕೊತ್ತಾಯವೇ ಆಗಿದೆ. ಇಲ್ಲವೇ ಸರ್ಕಾರಕ್ಕೆ ಈ ವರದಿಯನ್ನು ಜಾರಿ ಮಾಡಲು ತಾಂತ್ರಿಕವಾದ ಅಡ್ಡಿಗಳಿದ್ದರೆ ವರದಿಯನ್ನು ತಿರಸ್ಕರಿಸಲಿ.. ಇನ್ನು ಈ ವರದಿ ಇಂದಿನ ದಿನಕ್ಕೆ ಹೊಂದುವಂತಿಲ್ಲಾ ಎನ್ನುವುದಾದರೆ ಕೂಡಲೇ ತಜ್ಞರ ಸಮಿತಿಯನ್ನು ರಚಿಸಿ ಸಂವಿಧಾನದ ರೀತಿಯೇ ಸ್ಥಳೀಯರಿಗೆ ಕೆಲಸ ಕೊಡಿಸಿಕೊಡಬಲ್ಲ ನೀತಿಗಳನ್ನು ರೂಪಿಸಲು ಬೇಕಾದ ಸಲಹೆಗಳನ್ನು ಪಡೆದುಕೊಳ್ಳಲಿ. ಒಟ್ಟಿನಲ್ಲಿ ಆದಷ್ಟು ಬೇಗನೆ ಸರಿಯಾದ ತೀರ್ಮಾನ ಕೈಗೊಳ್ಳಲಿ. ಈ ಆಶಯದೊಡನೆ ನಾಳೆ ನಡೆಯಲಿರುವ ಮೆರವಣಿಗೆ ಯಶಸ್ವಿಯಾಗಲಿ. ಯಾರ ಬಗ್ಗೆಯೇ ಆಗಲಿ ನಿಜವಾದ ಕಾಳಜಿಯಿದ್ದರೆ ಅಂಥವರ ಆರ್ಥಿಕ ಸಬಲತೆಗಾಗಿ ದುಡಿಯುವುದು ಸೂಕ್ತವಾಗುತ್ತದೆ. ನಾಳಿನ ಪ್ರತಿಭಟನಾ ಕಾರ್ಯಕ್ರಮ ಕನ್ನಡಿಗರ ನಿಜವಾದ ಏಳಿಗೆಗೆ ಕಾರಣವಾಗಬಲ್ಲುದಾದ, ಅನಿಯಂತ್ರಿತ ವಲಸೆ ತಡೆ- ಬಡತನ ನಿರ್ಮೂಲನೆ - ಆರ್ಥಿಕ ಏಳಿಗೆಗಳಿಗೆ ಕಾರಣವಾಗಬಲ್ಲ ಮಹತ್ವದ ಕಾರ್ಯಕ್ರಮವಾಗಿದೆ. ಈ ಹೋರಾಟ ಗೆಲ್ಲಲಿ!

ಕೊನೆಹನಿ: ಜಪಾನಿನಲ್ಲಿನ ಕೆಲಸಗಳನ್ನು ಜಪಾನಿಯರಿಗೇ ಕೊಡಿ ಎನ್ನುವುದು, ಇಂಗ್ಲೇಂಡಿನಲ್ಲಿರುವ ಕಾರುಗಳ ನೇಮ್‌ಪ್ಲೇಟುಗಳನ್ನು ಇಂಗ್ಲೀಷಿನಲ್ಲಿ ಬರೆಯಲು ಬಿಡಿ ಎನ್ನುವುದು, ಜರ್ಮನಿಯಲ್ಲಿ ಎಲ್ಲಾ ಗ್ರಾಹಕಸೇವೆಗಳನ್ನು ಜರ್ಮನ್ ನುಡಿಯಲ್ಲಿ ಕೊಡಿ ಎನ್ನುವುದು ಅಸಹಜವಾಗುವುದಾದರೆ ಕನ್ನಡನಾಡಿನ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಕೆಲಸಗಳನ್ನು ಕೊಡಿ ಎನ್ನುವುದು ಕೂಡಾ ಅಸಹಜ ಎನ್ನಬಹುದು!

ಸಣ್ಣರಾಜ್ಯವಾಗೋದೆಂದರೆ ತಲೆ ಮೇಲೆ ಚಪ್ಪಡಿ ಎಳೆದುಕೊಂಡಂತೆ!

(ಫೋಟೋಕೃಪೆ: ಪ್ರಜಾವಾಣಿ)
"ಆಂಧ್ರಪ್ರದೇಶವನ್ನು ಒಡೆದು ತೆಲಂಗಣಾ ರಾಜ್ಯ ರಚನೆಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣೀ ಒಪ್ಪಿದೆ. ಈ ತೀರ್ಮಾನವನ್ನು ಪಕ್ಷದ ಹೈಕಮಾಂಡಿಗೆ ಬಿಡಲಾಗಿತ್ತು. ಇನ್ನೇನು ರಾಜ್ಯರಚನೆ ಘೋಷಣೆಯಾಗಲಿದೆ" ಎನ್ನುವ ಸುದ್ದಿ ಇಂದಿನ (೨೭.೦೭.೨೦೧೩)ರ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಅರೆರೆ... ಈ ಸುದ್ದಿ ಮುದ್ರಣ ಮಾಡಿದವರು ತಪ್ಪಾಗಿ ಮಾಡಿದ್ದಾರೆ, ಕೇಂದ್ರಸರ್ಕಾರ/ ಸಂಸತ್ತು ಒಪ್ಪಿದೆ ಅಂತಾ ಬರೆಯೋಕೆ ಕಾಂಗ್ರೆಸ್ ಪಕ್ಷ ಒಪ್ಪಿದೆ ಅಂತಾ ಬರ್ದಿದಾರೆ ಎಂದುಕೊಂಡು ಬೇರೆ ಬೇರೆ ಪತ್ರಿಕೆ ಓದಿದರೆ ಎಲ್ಲದರಲ್ಲೂ ಇದು ಹೀಗೇ ಇದೆ! ಇದನ್ನು ಓದಿದವರಿಗೆ ರಾಜ್ಯಗಳನ್ನು ಒಡೆಯೋ ಕೆಲಸ ಪಕ್ಕಾ ರಾಜಕೀಯದ್ದು ಎನ್ನಿಸಿದರೆ ತಪ್ಪೇನಿಲ್ಲಾ ಗುರೂ!

ತೆಲಂಗಣಾ ರಾಜಕೀಯ ಲೆಕ್ಕಾಚಾರ!

ತೆಲಂಗಣಾ ರಾಜ್ಯವೂ ಸೇರಿದಂತೆ ಹೊಸ ರಾಜ್ಯಗಳ ಬೇಡಿಕೆ ಇಂದು ನಿನ್ನೆಯದಲ್ಲಾ! ಇತ್ತೀಚಿನ ವರ್ಷಗಳಲ್ಲಿ ತೆಲಂಗಣಾ ಹೋರಾಟ ಮಾಡಿದಷ್ಟು ಸದ್ದು ಇನ್ಯಾವುದೂ ಮಾಡಿಲ್ಲ. ತೆಲಂಗಣಾ ರಾಷ್ಟ್ರಸಮಿತಿಯ ಚಂದ್ರಶೇಖರ್ ಅವರು ಅಮರಣಾಂತ ಉಪವಾಸ ಕುಳಿತದ್ದೂ, ಕೇಂದ್ರ ಗೃಹಮಂತ್ರಿಗಳಾಗಿದ್ದ ಚಿದಂಬರಂರವರು ರಾಜ್ಯ ರಚನೆಯ ಪ್ರಕ್ರಿಯೆಗೆ ಚಾಲನೆ ನೀಡುವ ಭರವಸೆ ನೀಡಿ ಉಪವಾಸ ಕೈಬಿಡುವಂತೆ ಮಾಡಿದ್ದೂ ಹಿಂದಾಗಿದೆ. ಇದೀಗ ೨೦೧೪ರ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಹೊಸ ರಾಜ್ಯವನ್ನು ಕಾಂಗ್ರೆಸ್ ಮುಂದಾಳ್ತನದ ಕೇಂದ್ರಸರ್ಕಾರ ಘೋಷಿಸಿಯೇ ಬಿಡುತ್ತದೆ ಎನ್ನುವ ವಾತಾವರಣ ಇದೆ. ೨೦೧೪ರ ಚುನಾವಣೆಗೆ ಮುನ್ನ ತೆಲಂಗಣಾ ರಾಜ್ಯ ಘೋಷಿಸಿದರೆ ಎಷ್ಟು ಲಾಭ/ ನಷ್ಟವಾದೀತು ಎಂಬ ಲೆಕ್ಕವನ್ನು ಕಾಂಗ್ರೆಸ್ ಮಾಡುತ್ತಿದ್ದರೆ ಈಗ ತೆಲಂಗಣಾ ಪರವಾಗಿರುವಂತೆ ತೋರಿಸಿಕೊಳ್ಳುತ್ತಿರುವ ಬಿಜೆಪಿ, ತೆಲಂಗಣಾ ರಚನೆಯಾಗದಿದ್ದರೆ... ನಾವು ಮಾಡ್ತೀವಿ ಎಂಬ ಭರವಸೆ ಕೊಟ್ಟು ಆ ಪ್ರದೇಶದಲ್ಲಿ ಎಷ್ಟು ಲೋಕಸಭೆಯ ಸೀಟುಗಳನ್ನು ಗಳಿಸಿಗೊಳ್ಳಬಹುದು ಎನ್ನುವ ಲೆಕ್ಕಾಚಾರ ಹಾಕುತ್ತಿದೆ. ಇಲ್ಲಿ ಈ ಎರಡೂ ರಾಜಕೀಯ ಪಕ್ಷಗಳು ತೆಲಂಗಣಾ ಜನರ ಹಿತ ಕಾಪಾಡುವ ಮಾತುಗಳನ್ನೇ ಆಡುತ್ತಿದ್ದರೂ ಆಳದಲ್ಲಿ ಇರುವುದು ಮುಂದಿನ ಲೋಕಸಭೆಯಲ್ಲಿ ಅಧಿಕಾರ ಹಿಡಿಯಬೇಕೆನ್ನುವ ತಂತ್ರವೇ ಆಗಿದೆ!

ಇನ್ನಷ್ಟು ಬೇಡಿಕೆಗಳು

ಇದಕ್ಕೆ ಒತ್ತು ನೀಡುವಂತೆ "ಹೊಸರಾಜ್ಯಗಳಿಗಾಗಿ ಒಕ್ಕೂಟ"ದ (Federation for new states) ಹೆಸರಲ್ಲಿ ಈಗಿರುವ ರಾಜ್ಯದಿಂದ ಬೇರೆಯಾಗಿ ತಮ್ಮದೇ ರಾಜ್ಯ ಕಟ್ಟಿಕೊಳ್ಳಲು ಬೇಡಿಕೆ ಇಟ್ಟಿರುವ ಕೆಲಪ್ರದೇಶಗಳ ನಾಯಕರು ದಿಗ್ವಿಜಯಸಿಂಗ್ ಅವರನ್ನು ಭೇಟಿಯಾಗಿ ಕೊಂಚ ಬೆದರಿಕೆ ಕೊಂಚ ಬೇಡಿಕೆ ಇಟ್ಟುಬಂದಿದ್ದಾರೆ ಎನ್ನುವ ಸುದ್ದಿ ಬಂದಿದೆ. ಗೂರ್ಖಾಲ್ಯಾಂಡ್, ಉತ್ತರಪ್ರದೇಶದ ನಾಲ್ಕು, ವಿದರ್ಭ ಮೊದಲಾದ ಹಳೆಯ ಬೇಡಿಕೆಗಳಿಗೆ ಹೊಸದನಿ ಬಂದಂತಾಗಿದೆ. ಒಂದು ಲೆಕ್ಕದಲ್ಲಿ ಈಗ ಎಲ್ಲೆಡೆಯಿಂದ ಎದ್ದಿರುವ "ತೆಲಂಗಣಾ ರಚಿಸಿದರೆ ನಾವೂ ಕ್ರಾಂತಿಯ ಹೋರಾಟಕ್ಕಿಳಿಯುತ್ತೇವೆ" ಎಂಬ ಕೂಗೂ ಕೂಡಾ ಎದ್ದಿದ್ದು ಇದು ಹೊಸದಾದ ರಾಜ್ಯ ಪುನರ್ವಿಂಗಡನಾ ಆಯೋಗವೊಂದರ ರಚನೆಗೆ ಕಾರಣವಾಗಲೂಬಹುದು! ಇದೇನೆ ಇದ್ದರೂ ಸಣ್ಣರಾಜ್ಯಗಳ ರಚನೆಗೆ ಇರುವ ಉದ್ದೇಶವೇ ಬೇರೆಯಾದುದಾಗಿದೆ. ಅಪಾಯದ ವಿಷಯವೆಂದರೆ ದೆಹಲಿಯ ಸಂಸತ್ತು ಒಂದು ರಾಜ್ಯದ ವಿಧಾನಸಭೆಯ ಮುಂದೆ ಈ ವಿಷಯವೇ ಹೋಗದಂತೆ ಮಾಡಿ, ತಾನೇ ತಾನಾಗಿ ಆ ರಾಜ್ಯವನ್ನು ಒಡೆಯಬಹುದು ಎಂಬುದಾಗಿದೆ.

ಸಣ್ಣ ರಾಜ್ಯ ಬೇಕೆನ್ನುವುದರ ಹಿಂದೆ...


ಕೆಲದಿನಗಳ ಹಿಂದೆ ಕರ್ನಾಟಕದ ರಾಜಕಾರಣಿಯೊಬ್ಬರು ಉತ್ತರ ಕರ್ನಾಟಕವನ್ನು ಬೇರೆ ರಾಜ್ಯ ಮಾಡಿದರೆ, ತಾವೋ ತಮ್ಮ ಮಗನೋ ಮುಖ್ಯಮಂತ್ರಿಯಾಗುತ್ತೇವೆ ಎಂಬರ್ಥದಲ್ಲಿ ಮಾತಾಡಿದ್ದರು. ಭಾಷಾಧಾರಿತ ರಾಜ್ಯಗಳನ್ನು ರಚಿಸಿದ ನಂತರ ಇಂತಹ ರಾಜ್ಯಗಳ ಭಾಗವಾಗಿದ್ದ ಕೆಲಪ್ರದೇಶಗಳಲ್ಲಿ ತಾವು ಬೇರೆಯೇ ರಾಜ್ಯವಾಗಬೇಕೆಂಬ ಬೇಡಿಕೆಯಾಯಿತು. ಮೊದಲಲ್ಲಿ ಇದಕ್ಕಾಗಿ ‘ತಮ್ಮ ಸಂಸ್ಕೃತಿ, ಉಡುಗೆ ತೊಡುಗೆ, ನಡೆನುಡಿಗಳು ಅನನ್ಯವಾಗಿದ್ದು ಇವು ಈಗಿರುವ ರಾಜ್ಯಕ್ಕಿಂತ ಬೇರೆಯೇ ಆಗಿದೆ’ ಎಂಬ ದನಿಯನ್ನು ಎತ್ತಲಾಯಿತು. ಮುಂದೆ ಈ ಕೂಗು ‘ಅಸಮಾನತೆ, ಆರ್ಥಿಕ ಬೆಳವಣಿಗೆ, ತಾರತಮ್ಯ ಮುಂತಾದ ಕಾರಣಗಳಾಗಿ’ ಬದಲಾಯ್ತು. ಇದಕ್ಕೆ ಪೂರಕವಾಗಿ "ಭಾರತೀಯತೆ ಎಂಬ ಗುರುತನ್ನು ಬಿಟ್ಟು ಇನ್ನೆಲ್ಲಾ ಗುರುತುಗಳೂ ಬಲಹೀನವಾಗುವುದು ಭಾರತದ ಒಗ್ಗಟ್ಟಿಗೆ ಸಾಧನ" ಎಂದು ನಂಬಿರುವಂತೆ ತೋರುವ ಬಿಜೆಪಿಯು ಹಿಂದಿನಿಂದಲೂ ಸಣ್ಣರಾಜ್ಯಗಳ ಪರವಾಗಿರುವುದಷ್ಟೇ ಅಲ್ಲದೆ ಭಾಷಾವಾರು ರಾಜ್ಯರಚನೆಯ ವಿರೋಧಿಯೂ ಆಗಿದ್ದು ಈ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂತು. "ಆಡಳಿತದ ದೃಷ್ಟಿಯಿಂದ ಸಣ್ಣರಾಜ್ಯಗಳು ಪರಿಣಾಮಕಾರಿ" ಎಂಬ ನಶೆಯ ಮದ್ದು ಇಂತಹ ಕೂಗಿಗೆ ಬಲತಂದಿತು. ಆದರೆ ಭಾರತದಲ್ಲಿ ಸಣ್ಣ ರಾಜ್ಯಗಳನ್ನು ರಚಿಸುವುದರ ಹಿಂದಿರುವ ಉದ್ದೇಶ ರಾಜ್ಯಗಳ ಉದ್ಧಾರವಂತೂ ಅಲ್ಲಾ! ಇಲ್ಲದಿದ್ದರೆ ಈಗಾಗಲೇ ಚಿಕ್ಕದಾಗಿರುವ ಗೋವಾ, ಜಾರ್ಖಂಡ್, ಚತ್ತೀಸಗಡಗಳಂತಹ ರಾಜ್ಯಗಳು ಉದ್ಧಾರವಾಗಿಬಿಡಬೇಕಾಗಿತ್ತು. ವಾಸ್ತವವಾಗಿ ದೊಡ್ಡರಾಜ್ಯಗಳು ಕೇಂದ್ರಸರ್ಕಾರದ ಮೇಲೆ ಹೊಂದಿರುವ ಹಿಡಿತವನ್ನು ಕಡಿಮೆ ಮಾಡಬೇಕೆನ್ನುವುದೇ ಸಣ್ಣ ರಾಜ್ಯಗಳನ್ನು ರಚಿಸಬೇಕೆಂಬ ಕೇಂದ್ರದ (ವಾಸ್ತವವಾಗಿ ರಾಷ್ಟ್ರೀಯ ಪಕ್ಷಗಳ) ಆಶಯದ ಹಿಂದಿರುವುದು ಎನ್ನಿಸುತ್ತದೆ.

ಸಣ್ಣರಾಜ್ಯ ಪರಿಣಾಮಕಾರಿ ಆಗಬೇಕೆಂದರೆ...

ಡಾ. ಬಿ ಆರ್ ಅಂಬೇಡ್ಕರ್ ಅವರು ಭಾಷಾವಾರು ರಾಜ್ಯರಚನೆಯ ಬಗ್ಗೆ ಮಾತಾಡುತ್ತಾ ಒಂದು ಭಾಷೆಯ ಹಲವು ರಾಜ್ಯಗಳು ಇದ್ದರೂ ಪರವಾಗಿಲ್ಲ, ಒಂದು ರಾಜ್ಯದಲ್ಲಿ ಹಲವು ಭಾಷೆಗಳಿರುವುದು ಸಮಸ್ಯಾತ್ಮಕ ಎಂದಿದ್ದರಂತೆ. ವಾಸ್ತವವಾಗಿ ಕನ್ನಡವಾಡುವ ಮೂರೋ, ಮರಾಟಿಯಾಡುವ ಎರಡೋ, ತೆಲುಗನ್ನಾಡುವ ಮೂರೋ ರಾಜ್ಯಗಳಾಗುವುದು ಅಂಥಾ ಸಮಸ್ಯೆಯೇನಲ್ಲಾ! ಸಮಸ್ಯೆಯಿರುವುದು ಭಾರತ ಮತ್ತು ಅಂತಹ ಪುಟ್ಟರಾಜ್ಯಗಳ ನಡುವಿನ ಸಂಬಂಧದಲ್ಲಿ. ಪುಟ್ಟ ರಾಜ್ಯವೊಂದು ಜನಸಂಖ್ಯೆಯ ಆಧಾರದ ಮೇರೆಗೆ ತನಗೆ ಹಂಚಿಕೆಯಾದ ಸಂಸದರ ಸಂಖ್ಯೆಯನ್ನು ಬಳಸಿಕೊಂಡೇ ಕೇಂದ್ರದಲ್ಲಿ ಲಾಬಿ ಮಾಡಿ ತನ್ನ ಹಿತ ಕಾಪಾಡಿಕೊಳ್ಳಬೇಕೆಂಬ ಪರಿಸ್ಥಿತಿಯಲ್ಲಿ! ಭಾರತವು ರಾಜ್ಯಗಳ ಸಮಾನ ಪ್ರಾತಿನಿಧಿತ್ವ ಮತ್ತು ಸಮಾನ ಗೌರವದ ಒಕ್ಕೂಟ ವ್ಯವಸ್ಥೆಯಾಗುವುದಾದಲ್ಲಿ ಸಣ್ಣ ರಾಜ್ಯಗಳು ಉಪಯೋಗಕರವಾದರೂ ಆಗಬಹುದು. ಇಂದಿನ ಸ್ಥಿತಿಯಲ್ಲಿ ರಾಜ್ಯವೊಂದು ಒಡೆದು ಹೋಗುವುದು ಎಂದರೆ ಕೇಂದ್ರದ ಮೇಲೆ ತನಗಿರುವ ಅಷ್ಟೋ ಇಷ್ಟೋ ಹಿಡಿತವನ್ನು ಕಳೆದುಕೊಳ್ಳುವುದು ಎಂದೇ ಅರ್ಥ. ಹಾಗಾಗೇ ಆಂಧ್ರವನ್ನು ಒಡೆಯಲು ಉತ್ಸಾಹ ತೋರುವ ದೊಡ್ಡರಾಜ್ಯದ ರಾಜಕಾರಣಿಗಳು ಇದೇ ಮಾತನ್ನು ತಮ್ಮ ರಾಜ್ಯದ ಬಗ್ಗೆ ಆಡಲಾರರು. ತೆಲಂಗಣಾ ಪರವಾದ ಬಿಜೆಪಿಯ ನರೇಂದ್ರಮೋದಿಯವರು ಗುಜರಾತನ್ನು ಮೂರು ರಾಜ್ಯ ಮಾಡಲು ಒಪ್ಪುವರೇ ಎಂಬುದು ಕುತೂಹಲಕಾರಿ. ಉತ್ತರ ಪ್ರದೇಶ, ಬಿಹಾರದ ರಾಜಕಾರಣಿಗಳಲ್ಲಿ ಕೆಲವರು ಸಂಸತ್ತಿನಲ್ಲಿ ತೆಲಂಗಣಾ ಪರವಾಗಿ ಮಾತಾಡಲು ಮುಂದಾಗುವಷ್ಟೇ ಉತ್ಸಾಹವನ್ನು ಮಾಯಾವತಿಯವರ ನಾಲ್ಕು ರಾಜ್ಯ ಮಾಡುವ ಪ್ರಸ್ತಾಪ ಕಂಡು ಬೆಚ್ಚಿ ಬೀಳುತ್ತಾರೆ ಎಂಬುದು ವಾಸ್ತವ. ಚಿಕ್ಕರಾಜ್ಯ ಆಡಳಿತಕ್ಕೆ ಒಳ್ಳೆಯದು ಎನ್ನುತ್ತಾ ಆಂಧ್ರವನ್ನು ಒಡೆಯಲು ಮುಂದಾಗುವ ಬಿಜೆಪಿ, ದೊಡ್ಡ ಉತ್ತರಪ್ರದೇಶವನ್ನು ಒಡೆಯುವುದನ್ನು ವಿರೋಧಿಸುವುದು ಯಾಕೆ ಎಂಬುದನ್ನು ಅರಿತರೆ ಇದರ ಹಿಂದಿನ ಹುನ್ನಾರ ತಿಳಿಯುತ್ತದೆ!

ಕೊನೆಹನಿ ೧:ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿಯದ ತೆಲಂಗಣಾ, ವಿದರ್ಭದಂತಹ ಪ್ರದೇಶಗಳ ಮಂದಿ "ನಾನು ಈಗಿರುವ ರಾಜ್ಯದಲ್ಲಿ ಎದುರಿಸುತ್ತಿರುವ ನನ್ನ ಸಮಸ್ಯೆಗೆ ಪರಿಹಾರ... ಪ್ರತ್ಯೇಕವಾಗುವುದು" ಎಂದುಕೊಂಡಿದ್ದಾರೆ. ಆದರೆ ಇವರನ್ನು ಬೆಂಬಲಿಸುತ್ತಿರುವ ಕೇಂದ್ರದ ಮಂದಿ "ಒಗ್ಗಟ್ಟಿನಲ್ಲಿ ತೊಡಕಿದೆ" ಅಂದರೆ "ಇವರ ಒಗ್ಗಟ್ಟಿನಲ್ಲಿ ಕೇಂದ್ರಸರ್ಕಾರದ ಸಾರ್ವಭೌಮತ್ವಕ್ಕೆ ತೊಡಕಿದೆ" ಎಂಬುದಾಗಿ ಭಾವಿಸಿ ಇದನ್ನು ಮುರಿಯಲು ಸಂಚು ಮಾಡುತ್ತಲೇ ಇರುತ್ತಾರೆ. ಅದೇ ಇಂದಿನ ಸಣ್ಣರಾಜ್ಯಗಳ ರಚನೆಗೆ ಮೂಲಕಾರಣ ಎನ್ನಬಹುದು.

ಕೊನೆಹನಿ ೨: ಇಬ್ಬರ ಜಗಳ ಮೂರನೆಯವರಿಗೆ ಲಾಭ ಎನ್ನುವುದನ್ನು ಬದಲಿಸಿ ತೆಲಂಗಣಾ, ರಾಯಲಸೀಮ ಮತ್ತು ಆಂಧ್ರದವರ ಮನೆಯೊಡಕಿನ ಲಾಭ ಕೇಂದ್ರಕ್ಕೆ ಎನ್ನಬಹುದು! ತೆಲಂಗಣಾ ಮತ್ತು ಆಂಧ್ರದವರಿಗೆ ರಾಜ್ಯ ಪಾಲುಮಾಡಿಕೊಟ್ಟ ಕೇಂದ್ರಕ್ಕೆ ಹೈದರಾಬಾದ್ ಲಾಭ ಎನ್ನಬಹುದು. ಯಾಕೆಂದರೆ ಹೈದರಾಬಾದ್ ಇನ್ಮೇಲೆ ಕೇಂದ್ರಾಡಳಿತ ಪ್ರದೇಶವಾಗುತ್ತದೆಯಂತೆ!

B-PAC: ಇದು ಕಾರ್ಪೊರೇಟ್ ರಾಜಕಾರಣ!

(ಫೋಟೋ ಕೃಪೆ: ಬಿ.ಪ್ಯಾಕ್ ಅಂತರ್ಜಾಲ ತಾಣ)
ಈ ಬಾರಿಯ ಚುನಾವಣೆಯಲ್ಲಿ ಬಿ.ಪ್ಯಾಕ್ ಎನ್ನುವ ಸರ್ಕಾರೇತರ ಸಂಸ್ಥೆಯೊಂದು ವಿಶೇಷಪಾತ್ರ ವಹಿಸಲು ಮುಂದಾಗಿರುವುದನ್ನು ಕಾಣಬಹುದಾಗಿದೆ. ಬಿ.ಪ್ಯಾಕ್ ಎಂದರೆ ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ. ಹಾಗೆಂದರೆ ಬೆಂಗಳೂರು ರಾಜಕೀಯ ಕ್ರಿಯಾಸಮಿತಿ ಎನ್ನಬಹುದು. ಈ ಸಂಸ್ಥೆಯನ್ನು ಮಾಡಿಕೊಂಡಿರುವುದು ರಾಜ್ಯದ ಪ್ರಮುಖ ಉದ್ದಿಮೆಗಳಲ್ಲಿ ಮುಖ್ಯವಾದ ಪಾತ್ರ ಹೊಂದಿರುವ ‘ಕೆಲವು ಗಣ್ಯ’ರು! ಈ ಸಂಸ್ಥೆಯ ಅಂತರ್ಜಾಲ ತಾಣವನ್ನು ನೋಡಿದರೆ ವಿವರ ತಿಳಿಯುತ್ತದೆ. ಸದರಿ ಗಣ್ಯರು ಬೆಂಗಳೂರನ್ನು ಉದ್ಧಾರ ಮಾಡಬೇಕೆಂಬ ಆಶಯದಿಂದ ಕಟ್ಟಿಕೊಂಡಿರುವ ಈ ಸಂಸ್ಥೆಯ ಮುಖ್ಯಉದ್ದೇಶ ಇದರ ಹೆಸರೇ ಹೇಳುವಂತೆ "ರಾಜಕೀಯ" ಲಾಬಿ! ಈ ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ನಡೆಗಳು ಹೀಗಿವೆ.

ಬಿ. ಪ್ಯಾಕ್ ಉದ್ದೇಶಗಳು!

ಬೆಂಗಳೂರಿನ ಎಲ್ಲಾ ನಗರಪಾಲಿಕೆ ಸದಸ್ಯರುಗಳ ಆಯ್ಕೆಯಲ್ಲಿ, ಶಾಸಕರ ಆಯ್ಕೆಯಲ್ಲಿ, ಸಂಸದರ ಆಯ್ಕೆಯಲ್ಲಿ  ಸಾರ್ವಜನಿಕ ಆಡಳಿತದಲ್ಲಿ ಬಲಿಷ್ಠರಾದವರನ್ನು ಆರಿಸಿ ಬೆಂಬಲಿಸುವುದು. ಇವರು ಯಾವ ಪಕ್ಷಕ್ಕೆ ಸೇರಿದವರು ಎನ್ನುವುದು ಮುಖ್ಯವಲ್ಲಾ. ಬದಲಿಗೆ ಬಿ.ಪ್ಯಾಕ್ ಯೋಜನೆಗಳನ್ನು ಒಪ್ಪುವಂತವರಾಗಿದ್ದರೆ ಸಾಕು ಮತ್ತು ಪ್ರಮುಖವಾಗಿ ಕ್ರಿಮಿನಲ್‌ಗಳಾಗಿಲ್ಲದಿದ್ದರೆ ಸಾಕು.  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಇಂತಹ ಹದಿನಾಲ್ಕು ಅಭ್ಯರ್ಥಿಗಳಿಗೆ ತಮ್ಮ ಟ್ರಸ್ಟಿನಿಂದ ಚುನಾವಣೆಯಲ್ಲಿ ಖರ್ಚು ಮಾಡಲು ತಲಾ ಐದು ಲಕ್ಷ ರೂಪಾಯಿಗಳನ್ನೂ ಕೊಡುತ್ತಿದ್ದಾರೆ. ಒಂದೇ ಕ್ಷೇತ್ರದಲ್ಲಿ ಇಬ್ಬರು ಬೆಂಬಲಿತ ಅಭ್ಯರ್ಥಿಗಳಿದ್ದರೆ ತಲಾ ಮೂರು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಈ ಗುಂಪಿನ (ಕಮಿಟಿಯ) ಹಿಂದೆ ಇರುವವರು ಮೂಲತಃ ಬೆಂಗಳೂರಿನಲ್ಲಿ ಉದ್ದಿಮೆ ಹೊಂದಿರುವ ಗಣ್ಯರುಗಳು. ಕಾರ್ಪೋರೇಟ್ ವಲಯದ ದಿಗ್ಗಜರುಗಳು. ಇವರುಗಳ ಉದ್ದೇಶವನ್ನು ಕೇಳಿ ಬೆಂಗಳೂರಿಗರು ಅತಿಯಾಗಿ ಹಿಗ್ಗುವಂತೇನೂ ಇಲ್ಲಾ! ಯಾಕೆಂದರೆ ಇದೇ ಅಂತರ್ಜಾಲ ತಾಣದಲ್ಲಿ ಬೆಂಗಳೂರಿನ ಬಗ್ಗೆ ಏನನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ಭ್ರಷ್ಟಾಚಾರ ರಹಿತವಾದ ದಕ್ಷ ಆಡಳಿತದ ಪರವಾಗಿದ್ದೇವೆಂದು ಹೇಳುವ ಈ ತಂಡದವರು ಆಡಳಿತ ಸುಧಾರಣೆಯ ಅನೇಕ ಯೋಜನೆಗಳ ಜೊತೆಯಲ್ಲಿ ಮೂಲತಃ "ನಗರ ಆಳ್ವಿಕೆ (ಸಿಟಿ ಗವರ್ನೆನ್ಸ್)" ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದು ಬೆಂಗಳೂರಿನಲ್ಲಿ ಸಂಗ್ರಹವಾಗುವ ತೆರಿಗೆ ಹಣವನ್ನು ಬೆಂಗಳೂರಿಗಾಗೇ ಬಳಸುವ ಉದ್ದೇಶವನ್ನು ಹೊಂದಿದ್ದಾರೆ. ನಗರದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಪ್ರೊಫೆಶನಲ್ ತೆರಿಗೆ (೧೦೦%),  ಸ್ಟಾಂಪ್ ಡ್ಯೂಟಿ (೫೦%) ಮತ್ತು ರಸ್ತೆ ತೆರಿಗೆ(೫೦%)ಯನ್ನು ನಗರದ ಬಿಡಿಎ, ಬಿಬಿಎಂಪಿ ಹಾಗೂ ಇನ್ನಿತರ ಸಂಸ್ಥೆಗಳಿಗೇ ನೀಡಬೇಕೆನ್ನುವುದು ಇವರ ನಿಲುವು. 

ಇದು ತರವೇ?

ಈ ನಿಲುವುಗಳ ಹಿಂದೆ ಬೆಂಗಳೂರನ್ನು ಸಿಟಿ ಸ್ಟೇಟ್ ಮಾಡುವ ಒಂದು ಸ್ಪಷ್ಟ ಉದ್ದೇಶ ಕಾಣುತ್ತದೆ. ಇಡೀ ಕರ್ನಾಟಕದ ಒಟ್ಟು ಆದಾಯದಲ್ಲಿ ೬೦% ಬೆಂಗಳೂರಿನಲ್ಲೇ ಹುಟ್ಟುವುದರಿಂದ ಇವರು ಹೇಳುವುದು ಸರಿಯೆಂದೇ ಬೆಂಗಳೂರಿಗರಿಗೆ ತೋಚಬಹುದು. ಆದರೆ ಈ ನಡೆ ಇಡೀ ಕರ್ನಾಟಕದಿಂದ ಬೆಂಗಳೂರನ್ನು ಬೇರೆ ಮಾಡುವ ಅಪಾಯ ಹೊಂದಿದೆ. ರಾಜ್ಯಗಳಲ್ಲಿ ಸಂಗ್ರಹವಾಗುವ ಒಟ್ಟು ತೆರಿಗೆ ಹಣದ ಮೇಲೆ ಆಯಾ ರಾಜ್ಯಗಳಿಗೇ ಪೂರ್ತಿ ಹಕ್ಕು ಕೊಡಿ ಎನ್ನುವುದನ್ನು ಇದಕ್ಕೆ ಹೋಲಿಸಲಾಗದು. ಏಕೆಂದರೆ ರಾಜ್ಯವೊಂದರಲ್ಲಿ ಆ ರಾಜ್ಯದ ಸಂಪನ್ಮೂಲಗಳನ್ನು ಬಳಸಿ ಉತ್ಪಾದನೆ, ವ್ಯಾಪಾರ, ವಹಿವಾಟು, ಉದ್ದಿಮೆ ನಡೆಸಲಾಗುತ್ತದೆ. ಆ ಮೂಲಕ ತೆರಿಗೆ ಕೂಡಿಹಾಕಲಾಗುತ್ತದೆ. ಈ ತೆರಿಗೆಯಲ್ಲಿ ದೊಡ್ಡಪಾಲನ್ನು ಆ ರಾಜ್ಯದ ಅಭಿವೃದ್ಧಿಗಾಗಿ ಬಳಸಲು ರಾಜ್ಯ ಹೀಗೆ ಒತ್ತಾಯಿಸುತ್ತದೆ.

ಆದರೆ ಇದೇ ಮಾತನ್ನು ಬೆಂಗಳೂರಿನಂತಹ ನಗರದ ಬಗ್ಗೆ ಹೇಳಲಾಗದು. ಇಲ್ಲಿಗೆ ನೀರು ಮಂಡ್ಯದಿಂದ ಬರಬೇಕು.  ವಿದ್ಯುತ್ ಶಿವನಸಮುದ್ರದಿಂದ ಬರಬೇಕು. ಹಾಲು ಕೋಲಾರದಿಂದ ಬರಬೇಕು. ತರಕಾರಿ ಮತ್ತೊಂದರಿಂದ, ಜನರು ಮಗದೊಂದರಿಂದ... ಇದಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ರಾಜ್ಯಸರ್ಕಾರ ಮತ್ತು ಇಡೀ ರಾಜ್ಯದ ಕೊಡುಗೆಯ ಕಾರಣದಿಂದಲೇ ಬೆಂಗಳೂರು ಇಂದಿನ ಕಾರ್ಪೋರೇಟ್ ಬೆಂಗಳೂರಾಗಿ ಎದ್ದು ನಿಂತಿದೆ. ಇದಕ್ಕಾಗಿ ಎಲ್ಲಾ ಪ್ರದೇಶಗಳಿಂದಲೂ ಕೊಡುಗೆಯಿದೆ ಎನ್ನುವುದನ್ನು ಕಡೆಗಣಿಸಲಾಗದು. ರಾಜ್ಯಕ್ಕೆ ಇಂದು ಬೆಂಗಳೂರನ್ನು ಬೆಳೆಸಿದ ಹಾಗೆ, ಮತ್ತೊಂದು ಊರನ್ನೂ ಬೆಳೆಸುವ ಅವಕಾಶ ಇತ್ತು ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಬೆಂಗಳೂರನ್ನು ಕರ್ನಾಟಕದಿಂದ ಬೇರೆಯಾಗಿ ನೋಡಲಾಗದು ಎನ್ನುವ ಅರಿವಾಗುತ್ತದೆ. ಹಾಗಾಗಿ ಈ "ಸಿಟಿ ಸ್ಟೇಟ್" ಪರಿಕಲ್ಪನೆ ಸರಿಯೇ ಎಂಬುದು ಪ್ರಶ್ನಾರ್ಹವಾದುದಾಗಿದೆ. ಇಡೀ ರಾಜ್ಯವನ್ನೇ ಬೆಳೆಸಬೇಕಾದ ಹೊಣೆಗಾರಿಕೆ ಹೊಂದಿರುವ ಸರ್ಕಾರವು ತನ್ನ ಆದಾಯದ ದೊಡ್ಡಮೂಲವನ್ನೇ ಬಿಟ್ಟುಕೊಡಬೇಕೆನ್ನುವ ಮಾತನ್ನು ಒಪ್ಪಲಾಗದು!

ಬೆಂಬಲಿತರ ನಿಲುವೇನು?

ಇಷ್ಟಕ್ಕೂ ಈ ಸಂಸ್ಥೆಯವರು ಬೆಂಬಲ ನೀಡಿ ಶಿಫ಼ಾರಸ್ಸು ಮಾಡಿ, ಚುನಾವಣೆಯ ಕರ್ಚಿಗೆ ಹಣ ನೀಡುತ್ತಿರುವ ಅಭ್ಯರ್ಥಿಗಳು ಈ ಬಗ್ಗೆ ಏನನ್ನುತ್ತಾರೆ ಎನ್ನುವುದು ಕುತೂಹಲಕಾರಿಯಾದುದಾಗಿದೆ. ಯಾಕೆಂದರೆ ಸ್ಪಷ್ಟವಾಗಿಯೇ ಬಿ.ಪ್ಯಾಕ್‌ನವರು ತಮ್ಮ ನೀತಿಗಳನ್ನು ಒಪ್ಪಿದವರನ್ನು ಮಾತ್ರಾ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ. ಇವರಿಂದ ಬೆಂಬಲ ಪಡೆದವರು ಇವರ ನಿಲುವುಗಳನ್ನು ಒಪ್ಪಿದ್ದಾರೆ ಎನ್ನುವುದಾದರೆ ಅದನ್ನು ನೇರವಾಗಿ ಜನರ ಮುಂದಿಡಬೇಕಾದ್ದು ನ್ಯಾಯವಾದುದಾಗಿದೆ. ಬೆಂಗಳೂರನ್ನು ಕರ್ನಾಟಕದಿಂದ ಬೇರೆಯ ರೀತಿಯಲ್ಲಿ ನಡೆಸಿಕೊಳ್ಳುವ ಉದ್ದೇಶವಿದೆ ಎನ್ನುವುದನ್ನು ಹೇಳಿಕೊಳ್ಳಲಿ. ಸಿಟಿ ಸ್ಟೇಟ್ ಪರಿಕಲ್ಪನೆಯು ಚರ್ಚೆಗೊಳಗಾಗಲಿ

ಇವೆಲ್ಲಕ್ಕೂ ಮಿಗಿಲಾಗಿ ಕಾರ್ಪೋರೇಟ್ ವಲಯದವರು ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಜನತೆಯ ಹೆಸರಲ್ಲಿ ಮೂಗುತೂರಿಸುವುದು, ತಮ್ಮ ಮೂಗಿನ ನೇರದ ಬೇಡಿಕೆಗಳನ್ನು ಮುಂದಿಟ್ಟು ಅಭ್ಯರ್ಥಿಗಳ ಮೇಲೆ ಪ್ರಭಾವ ಬೀರುವುದು ಎಷ್ಟು ಸರಿ ಎಂಬುದನ್ನು ಜನರು ಯೋಚಿಸಬೇಕಾಗಿದೆ. ಈ ಗುಂಪಿನ ಆದ್ಯತೆಗಳೇನು, ಉದ್ದೇಶಗಳೇನು, ಕಾರ್ಯವೈಖರಿಯೇನು ಎನ್ನುವುದನ್ನೆಲ್ಲಾ ಸೂಚ್ಯವಾಗಿ ತಿಳಿಸುವ ಒಂದು ಫೋಟೋ ಇಲ್ಲಿದೆ... ನೋಡಿ!


ಈ ದಿಗ್ಗಜರು ನಡೆಸುತ್ತಿರುವ ಸಂವಾದ ಕಾರ್ಯಕ್ರಮದ ಈ ಫೋಟೋದಲ್ಲಿ ಗಮನಿಸಬೇಕಾದ ಅಂಶಗಳು ಎರಡು... ಒಂದಕ್ಷರ ಕನ್ನಡವೂ ಇದರಲ್ಲಿಲ್ಲ ಎನ್ನುವುದು ಮತ್ತು ಒಂದು ಸಂವಾದಕ್ಕೂ ಬೇರೆ ಬೇರೆ ಸಂಸ್ಥೆಗಳ ಪ್ರಾಯೋಜಕತ್ವ ಪಡೆದಿರುವುದು. ಇವರ ಕಲ್ಪನೆಯ ಬೆಂಗಳೂರಿನಲ್ಲಿ ಕನ್ನಡ ಕನ್ನಡಿಗರಿಗೆ ಸ್ಥಾನವೇನು ಮತ್ತು ರಾಜಕಾರಣದಲ್ಲಿ ಈ ಕಾರ್ಪೋರೇಟ್ ವಲಯದ ಉದ್ದೇಶಿತ ಹಿಡಿತವೇನು ಎಂಬುದು ಪ್ರಶ್ನೆಯಾಗಿ ಕಾಡುತ್ತದೆ. ಒಟ್ಟಾರೆ ಬಿ.ಪ್ಯಾಕ್ ಸಂಸ್ಥೆಯ ಅಜೆಂಡಾ ಬೆಂಗಳೂರನ್ನು ಕರ್ನಾಟಕದಿಂದ ಕಸಿದುಕೊಳ್ಳುವ ಹುನ್ನಾರದಂತೆ ತೋರಿದರೆ ಅಚ್ಚರಿಯಿಲ್ಲ!

ರಾಜಕೀಯ ಪಕ್ಷಗಳೇ! ಕೇಳ್ರಪ್ಪೋ ಕೇಳಿ.. ನಮಗೆ ಬೇಕಾದ್ದು ಇದು!

ಬರುವ ಮೇ ಐದರಂದು ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಪ್ರಮುಖವಾಗಿ ಕಾಂಗ್ರೆಸ್, ಜನತಾದಳ, ಭಾರತೀಯ ಜನತಾಪಕ್ಷ, ಕರ್ನಾಟಕ ಜನತಾಪಕ್ಷ ಮತ್ತು ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಕಣದಲ್ಲಿವೆ. ಈ ಎಲ್ಲಾ ಪಕ್ಷಗಳು ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಮಾಮೂಲಿನಂತೆ ಈ ಪ್ರಣಾಳಿಕೆಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಡುವ ಒಂದು ರೂಪಯಿ ಅಕ್ಕಿ, ಬಿಟ್ಟಿ ಕಂಪ್ಯೂಟರ್ ಮೊದಲಾದ ಕೊಡುಗೆಗಳ ಮಹಾಪೂರವೇ ಇದೆ. ನಿಜಕ್ಕೂ ಕರ್ನಾಟಕದ ಏಳಿಗೆಯ ಬಗ್ಗೆ ನಮ್ಮ ರಾಜಕೀಯ ಪಕ್ಷಗಳಿಗೆ ಎಷ್ಟರಮಟ್ಟಿಗೆ ಕಾಳಜಿಯಿದೆ ಎಂಬುದು ಪ್ರಶ್ನಾರ್ಹವಾಗಿದೆ. ಈ ಪಕ್ಷಗಳ ಪ್ರಣಾಳಿಕೆಯಲ್ಲಿ ಹೆಚ್ಚಾಗಿ ಅಗ್ಗದ ಜನಪ್ರಿಯತೆಯ ಯೋಜನೆಗಳನ್ನು ಬಿಟ್ಟರೆ ದೀರ್ಘಾವಧಿಯಲ್ಲಿ ಏನಾಗಬೇಕು ಎನ್ನುವ ಚಿಂತನೆಯೇ ಕಾಣದು. ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಾಡು ಏನಾಗಬೇಕು? ನಾಡಿನ ಏಳಿಗೆಯ ನಾನಾ ಮೆಟ್ಟಿಲುಗಳಾವುವು? ಅವುಗಳನ್ನು ಹೇಗೆ ಈಡೇರಿಸುತ್ತೇವೆ? ಎಂಬುದರ ಬಗ್ಗೆ ಎಳ್ಳಷ್ಟೂ ಭರವಸೆಗಳಿಲ್ಲದಿರುವುದು ಕಾಣುತ್ತದೆ.

ನಾಡಿಗೆ ಬೇಕಿರುವುದು!

ಕನ್ನಡನಾಡಿನ ಏಳಿಗೆಗೆ ಆಗಬೇಕಾದ ಮಹತ್ವವಾದ ಅನೇಕ  ವಿಷಯಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ ನೋಡಿ.

ಕನ್ನಡಮಾಧ್ಯಮದಲ್ಲಿನ ಕಲಿಕೆಯನ್ನು ಜಗತ್ತಿನ ಅತ್ಯುತ್ತಮ  ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಏನೇನೆಲ್ಲಾ ಆಗಬೇಕೋ ಅದೆಲ್ಲವನ್ನೂ ಮಾಡಬೇಕು. ಯಾವ ಕಡ್ಡಾಯ ಮಾಧ್ಯಮ ಕಲಿಕೆಯೂ ಇಲ್ಲಿರುವುದಿಲ್ಲ. ಆದರೆ ಜನರಿಗೆ ತಾಯ್ನುಡಿ ಕಲಿಕೆಯ ಮಹತ್ವವನ್ನು ತಾವೇ ಕಣ್ಣಾರೆ ಕಾಣುವಂತಹ ದೂರದೃಷ್ಟಿಯನ್ನು ಹೊಂದಿರುವ ವ್ಯವಸ್ಥೆಯನ್ನು ಕಟ್ಟಬೇಕು. ಪ್ರಪಂಚದ ಎಲ್ಲಾ ಬಗೆಯ ಜ್ಞಾನ ವಿಜ್ಞಾನವನ್ನು ಕನ್ನಡಕ್ಕೆ ತರುವ ಕೆಲಸವನ್ನು ಶುರುಮಾಡಬೇಕು. ಇದಕ್ಕೆ ಬೇಕಾದ ಗಡುವಿನೊಳಗೆ ಪೂರೈಸುವ ಕಾರ್ಯಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಬೇಕಿರುವ ಸಂಪನ್ಮೂಲಗಳನ್ನು ಹೊಂದಿಸುವುದು.

ಕರ್ನಾಟಕದ ಆಡಳಿತ ಭಾಷೆಯಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇಲ್ಲಿನ ಎಲ್ಲಾ ಸಾರ್ವಜನಿಕ ಕಚೇರಿಗಳಲ್ಲೂ ಕನ್ನಡದಲ್ಲಿ ಸೇವೆ ನೀಡುವುದು ಕಡ್ಡಾಯ. ಈ ನೆಲದಲ್ಲಿ ನೆಲೆಗೊಳ್ಳುವ ಯಾವುದೇ ಸಾರ್ವಜನಿಕ ಬಳಕೆಯ/ ಉಪಯುಕ್ತತೆಯ ಉದ್ದೇಶದ ಸಂಸ್ಥೆಗಳು ಕನ್ನಡದಲ್ಲಿ ವ್ಯವಹರಿಸತಕ್ಕದ್ದು.

ಈ ನಾಡಿಗಾಗಿ ಸಮಗ್ರವಾದ ನೀರಾವರಿ ಯೋಜನೆಗಳನ್ನು ರೂಪಿಸಿ ಗೊತ್ತುಮಾಡಿದ ಕಾಲಮಿತಿಯೊಳಗೆ ಜಾರಿಮಾಡತಕ್ಕದ್ದು. ರಾಜ್ಯದ ಒಳಗಿನ ಎಲ್ಲಾ ನದಿಗಳ ನೀರನ್ನು ಸದುಪಯೋಗ ಮಾಡಿಕೊಳ್ಳಲು, ನಮ್ಮ ನೆಲದ ಮೇಲೆ ಬೀಳುವ ಮಳೆಯ ಪ್ರತಿಯೊಂದು ನೀರಹನಿಯನ್ನೂ ವ್ಯರ್ಥವಾಗದಂತೆ ಸಂಗ್ರಹಿಸುವ ಹತ್ತಾರು ಯೋಜನೆಗಳನ್ನು ರೂಪಿಸಿ ಜಾರಿಮಾಡುವುದು. ವ್ಯವಸಾಯ, ಕೈಗಾರಿಕೆ, ಉದ್ದಿಮೆಗಾರಿಕೆಯೇ ಮೊದಲಾದ ದುಡಿಮೆಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಜಗತ್ತಿನ ಉತ್ಕೃಷ್ಟ ಕಾರ್ಯವಿಧಾನಕ್ಕೆ ಸಾಟಿಯಾಗಬಲ್ಲ ತರಬೇತಿ, ಸಂಶೋಧನೆಯಂತಹ ಮೂಲಭೂತ ಕೆಲಸಗಳು ನಡೆಯಲು ಏರ್ಪಾಟು ಮಾಡುವುದು.

ನಾಡಿನ ಒಳಗಿನ ಪ್ರತಿನಗರಗಳ ನಡುವಿನ ರಸ್ತೆ ರೈಲು ವಿಮಾನ ಸಂಪರ್ಕಗಳನ್ನು ಅತ್ಯುತ್ತಮಗೊಳಿಸುವುದು. ಎಲ್ಲಾ ರಸ್ತೆಗಳನ್ನೂ ಆರ್ಥಿಕ ಬೆಳವಣಿಗೆಗೆ ಹೆದ್ದಾರಿಗಳಂತೆ ರೂಪಿಸುವುದು. ಇಡೀ ನಾಡಿನ ಬೇರೆ ಬೇರೆ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಹುಟ್ಟಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜಿಸುವ ನೀತಿಯನ್ನು ರೂಪಿಸತಕ್ಕದ್ದು. ಯಾವುದೇ ಕಲಿಕೆಯನ್ನು ಮಾಡಿದವನಿಗೂ ತನ್ನ ಜಿಲ್ಲೆಯ ವ್ಯಾಪ್ತಿಯೊಳಗೇ ಅದಕ್ಕೆ ತಕ್ಕಂತಹ ಉದ್ಯೋಗಾವಕಾಶ ಇರುವಂತಹ ವ್ಯವಸ್ಥೆಯನ್ನು ಕಟ್ಟುವುದು. ಹೊಸದಾಗಿ ಉದ್ದಿಮೆ ಸ್ಥಾಪಿಸುವವರಿಗೆ ಅನುಕೂಲಕರವಾದ ನೀತಿಗಳನ್ನು ರೂಪಿಸುವುದು.

ರಾಜ್ಯದ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಅನುವಾಗುವಂತೆ ನಾನಾ ಯೋಜನೆಗಳನ್ನು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುವುದು. ಇಡೀ ರಾಜ್ಯಕ್ಕೆ ಸದಾಕಾಲ ಗುಣಮಟ್ಟದ ವಿದ್ಯುತ್ ಪೂರೈಸಲು ಬೇಕಾದ ಯೋಜನೆಗಳನ್ನು ರೂಪಿಸುವತ್ತಾ ದಾಪುಗಾಲಿಡುವುದು.

ಕೇಂದ್ರವು "ಭಾರತದ ದೇಶದ ಇಂದಿನ ಹುಳುಕಿನ ಭಾಷಾನೀತಿಯನ್ನು ಕೈಬಿಡತಕ್ಕದ್ದು. ಭಾರತದ ಆಡಳಿತ ಭಾಷೆಯಾಗಿ ಕನ್ನಡವನ್ನೂ ಪರಿಗಣಿಸತಕ್ಕದ್ದು. ಕನ್ನಡನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯತಕ್ಕದ್ದು. ಅಂತರರಾಜ್ಯ ವಲಸೆ ನಿಯಂತ್ರಣಕ್ಕೆ ಬಿಗಿನೀತಿಯನ್ನು ರೂಪಿಸತಕ್ಕದ್ದು" ಎಂಬ ನಿಟ್ಟಿನಲ್ಲಿ ಒತ್ತಾಯಿಸತಕ್ಕದ್ದು.

ಆರ್ಥಿಕ ಮತ್ತು ರಾಜಕೀಯ ಅಧಿಕಾರಗಳ ವಿಕೇಂದ್ರಿಕರಣಕ್ಕಾಗಿ ಕೇಂದ್ರವನ್ನು ಒತ್ತಾಯಿಸುವುದು. ಆಡಳಿತ ಪಟ್ಟಿಯನ್ನು ಮರು ರೂಪಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರಗಳನ್ನು ದಕ್ಕಿಸಿಕೊಳ್ಳುವುದು.

ಕರ್ನಾಟಕದಲ್ಲಿ ಭಾರತ ಸರ್ಕಾರ ಪ್ರಣೀತ ಕುಟುಂಬ ಯೋಜನೆಗೆ ವಿದಾಯ ಹೇಳತಕ್ಕದ್ದು. ನಮ್ಮ ನಾಡಿನ ಜನಸಂಖ್ಯೆ, ಜನದಟ್ಟಣೆ ಮತ್ತು ಹೆರುವೆಣಿಕೆಗಳನ್ನು (Target TFR) ನಾವೇ ತೀರ್ಮಾನಿಸತಕ್ಕದ್ದು.

ಕೊನೆಹನಿ: ಇವಿಷ್ಟನ್ನು ಮಾತ್ರವೇ ನಾವು ಜನಪರ ಎನ್ನುತ್ತಿಲ್ಲಾ. ಅಗ್ಗದ ಜನಪ್ರಿಯ ಯೋಜನೆಗಳನ್ನು ಒಮ್ಮೆಗೇ ಕೈಬಿಟ್ಟುಬಿಡಬೇಕು ಎನ್ನುತ್ತಿಲ್ಲಾ. ಭ್ರಷ್ಟಾಚಾರ ನಿಯಂತ್ರಣ ಮತ್ತು ಉತ್ತಮ ಆಡಳಿತಗಳ ಅಗತ್ಯವಿಲ್ಲಾ ಎನ್ನುತ್ತಿಲ್ಲಾ. ಅವೆಲ್ಲಾ ಬೇಕು. ಜೊತೆಯಲ್ಲಿ ದೀರ್ಘಾವಧಿ ಮತ್ತು ಶಾಶ್ವತವಾಗುವಂತಹ ಯೋಜನೆಗಳನ್ನು ರೂಪಿಸುವತ್ತ ನಮ್ಮ ರಾಜಕೀಯ ಪಕ್ಷಗಳು ಯೋಚಿಸಲಿ ಎನ್ನುತ್ತಿದ್ದೇವೆ.. ಇಂಥದ್ದೊಂದು ನಮ್ಮ ನಾಡಿಗೆ ಬೇಕು ಎನ್ನುವುದನ್ನು ಮತದಾರರು ಬಯಸುತ್ತಿದ್ದಾರೆ ಎಂದು ಹೇಳುತ್ತಿದ್ದೇವೆ...ಅಷ್ಟೇ!

ಕನ್ನಡಿಗರಿಗೆ ಕಹಿಯಾದ ಆರ್‌ಬಿಐ ನ ಬಿಟ್ಟಿ ಸಲಹೆ ಮತ್ತು ಕಾಫಿ ಡೇ ಕಾಫಿ!


ಇತ್ತೀಚಿಗೆ ನಡೆದ ಎರಡು ಘಟನೆಗಳು ನಾಡಿನಲ್ಲಿ ಕನ್ನಡದ ಸ್ಥಾನಮಾನಕ್ಕೆ ಮತ್ತು ಈ ದೇಶದ ವ್ಯವಸ್ಥೆಗಳಿಗೆ ಕನ್ನಡಿಗರ ಬಗ್ಗೆ ಇರುವ ಉದಾಸೀನತೆಗೆ ಉದಾಹರಣೆಯಾಗಿವೆ.

ಕೆಫೆ ಕಾಫಿಡೇನಲ್ಲಿ ಕನ್ನಡ ಹಾಡು ಕೇಳುವಂತಿಲ್ಲ!

ಕೆಲವು ಕನ್ನಡಿಗರು ಇತ್ತೀಚಿಗೆ ಕೆಫ಼ೆ ಕಾಫಿಡೇ ಎನ್ನುವ ಸರಣಿಯಂಗಡಿಯ ಒಂದು ಮಳಿಗೆಗೆ ಹೋಗಿದ್ದರಂತೆ. ಅದೂ   ಅರಸೀಕೆರೆಯ ಒಂದು ಅಂಗಡಿಗೆ. ಅಲ್ಲಿಗೆ ಬಂದ ಗಿರಾಕಿಗಳನ್ನು ಮನರಂಜಿಸುವ ಉದ್ದೇಶದಿಂದ ಹಾಡುಗಳನ್ನು ಹಾಕಿದ್ದರಂತೆ. ಆ ಹಾಡುಗಳು ಹಿಂದೀ ಹಾಡುಗಳಾಗಿದ್ದವಂತೆ. ಸರಿ.. ಈ ಗ್ರಾಹಕರು ಕನ್ನಡ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡದ್ದಕ್ಕೆ ಮಳಿಗೆಯವರು ಹಾಗೆ ಹಾಕಲು ತಮಗೆ ಕೇಂದ್ರ ಕಚೇರಿಯಿಂದ ಅನುಮತಿಯಿಲ್ಲ ಎಂದು ಮಾರುತ್ತರ ನೀಡಿದರಂತೆ. ಇದರಿಂದ ಆಘಾತಗೊಂಡ ಇವರು ತಮ್ಮ ಅನುಭವವನ್ನು ಏನು ಗುರುವಿನೊಂದಿಗೆ ಹಂಚಿಕೊಂಡರು. ನಂತರ ಕಾಫಿ ಡೇ ಸಂಸ್ಥೆಗೆ ಕನ್ನಡದ ಹಾಡುಗಳನ್ನು ಹಾಕಲು ಕೇಳಿಕೊಂಡು ಪತ್ರ ಬರೆದಿದ್ದಾರೆ. ಇವರಷ್ಟೇ ಅಲ್ಲದೇ ಇವರೊಂದಿಗೆ ದನಿಗೂಡಿಸಿ ನೂರಾರು ಮಂದಿ ಕೆಫೆ ಕಾಫಿಡೇ ಮಳಿಗೆಗಳಲ್ಲಿ ಕನ್ನಡದ ಹಾಡುಗಳನ್ನು ಹಾಕಲು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಕೆಫಿ ಕಾಫಿ ಡೇ ಸಂಸ್ಥೆಯ ಅಧಿಕಾರಿಗಳು ನೀಡಿರುವ ಉತ್ತರ ದಂಗು ಬಡಿಸುವಂತಿದೆ.

ನಮ್ಮ ಸಂಸ್ಥೆಯು ಭಾರತದಲ್ಲಿ ನಾನಾ ಕಡೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲೆಡೆ ಒಂದೇ ರೀತಿಯ ಒಳಾಂಗಣ ವಾತಾವರಣವನ್ನು ರೂಪಿಸಿಕೊಂಡಿದ್ದು, ಭಾರತದ ಎಲ್ಲಾ ೧೨೦ ಊರುಗಳಲ್ಲಿಯೂ ಹಿಂದೀ ಮತ್ತು ಇಂಗ್ಲೀಶ್ ಸಂಗೀತವನ್ನು ಮಾತ್ರಾ ಹಾಕುತ್ತೇವೆ ಮತ್ತು ಪ್ರಾದೇಶಿಕ ಭಾಷೆಗಳ ಸಂಗೀತವನ್ನು ಹಾಕುವುದಿಲ್ಲ..
ಎಂದು ಉತ್ತರಿಸಿದ್ದಾರೆ.

ಚೆಕ್ಕುಗಳನ್ನು ತುಂಬಲು ಹಿಂದೀ/ ಇಂಗ್ಲೀಶ್ ಪ್ರವೀಣರಾಗಬೇಕಂತೆ!

ಸಿಟಿಬ್ಯಾಂಕಿನಲ್ಲಿ ಹಿಂದೀ ಮತ್ತು ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಅಚ್ಚು ಹಾಕಿರುವುದರ ಬಗ್ಗೆ ಗ್ರಾಹಕರೊಬ್ಬರು ದೂರಿ, ಕನ್ನಡದಲ್ಲೂ ಚೆಕ್ಕುಗಳನ್ನು ಅಚ್ಚು ಹಾಕಿಸಿ ಎಂದು ಕೇಳಿಕೊಂಡಿದ್ದರು. ಇದಕ್ಕೆ ಬ್ಯಾಂಕಿನ ಅಧಿಕಾರಿಗಳು ಹೀಗೆ ಉತ್ತರ ನೀಡಿದ್ದಾರೆ.
ನಮಗೆ ರಿಜರ್ವ್ ಬ್ಯಾಂಕಿನಿಂದ ಬಂದಿರುವ ಜುಲೈ ೨೦೧೧ರ ಸೂಚನೆಯಂತೆ ಹಿಂದೀ/ ಇಂಗ್ಲೀಶುಗಳಲ್ಲಿ ಮಾತ್ರಾ ಚೆಕ್ಕುಗಳನ್ನು ಮುದ್ರಿಸಿದ್ದೇವೆ.
ಸರಿ, ಮತ್ತೊಬ್ಬ ಗ್ರಾಹಕರು ಭಾರತೀಯ ರಿಜರ್ವ್ ಬ್ಯಾಂಕಿಗೇ ಬರೆದು ಕೇಳಿದಾಗ ಅವರು ನೀಡಿದ ಉತ್ತರ ಹೀಗಿದೆ:

Key fields in a cheque are Name and Amount for which proficiency in English/ Hindi is required whereas for other fields such as date and account number which are numerical the same is not required The format of a cheque with payee’s name and amount is standard. Hence it is felt no need to print cheques in a trilingual format, unlike other printed material.
ಇದೇ ವಿಷಯವಾಗಿ ರಿಜರ್ವ್ ಬ್ಯಾಂಕಿನ ಒಂಬುಡ್ಸ್‍ಮೆನ್ ಅವರಿಗೆ ದೂರು ಸಲ್ಲಿಸಿದಾಗ ದೂರನ್ನು ತಿರಸ್ಕರಿಸಿ, ಬೇಕಾದರೆ ಯಾವುದಾದರೂ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಉತ್ತರಿಸಿದ್ದಾರೆ.

ಸಮಸ್ಯೆಯ ಮೂಲವಿರುವುದು ಸಂವಿಧಾನದಲ್ಲಿ

ಭಾರತದಲ್ಲಿ ಕನ್ನಡಿಗರು ಇರೋದು ಬರೀ ೫%. ಅಂದರೆ ಇಲ್ಲಿ ಭಾಷಿಕ ಅಲ್ಪಸಂಖ್ಯಾತರು. ಹಾಗಾಗಿ ಅಲ್ಪಸಂಖ್ಯಾತರಿಗೆ ಬದುಕುವ ಹಕ್ಕಿಲ್ಲಾ ಎಂದು ಭಾರತದ ವ್ಯವಸ್ಥೆಗಳು ತೀರ್ಮಾನಿಸಿರುವಂತಿದೆ. ಇಲ್ಲಿ ಪ್ರಜಾಪ್ರಭುತ್ವ ಎಂದರೆ "ಬಹುಸಂಖ್ಯಾತರ ಹಿತ ಮಾತ್ರಾ" ಎನ್ನುವುದೇ ಆಗಿರುವುದನ್ನು ಇದು ಎತ್ತಿ ತೋರಿಸುತ್ತಿದೆ. ಇದಕ್ಕೆಲ್ಲಾ ಮೂಲಕಾರಣವೇ ಭಾರತದ ಹುಳುಕಿನ ಭಾಷಾನೀತಿ. ಈ ದೇಶದಲ್ಲಿ ಹಿಂದೀ/ ಇಂಗ್ಲೀಶ್ ಮಾತ್ರವೇ ಆಡಳಿತ ಭಾಷೆಗಳು. ರಾಜ್ಯಗಳಿಗೆ ತಮ್ಮ ಆಯ್ಕೆಯ ಭಾಷೆಯನ್ನು ರಾಜ್ಯದ ಆಡಳಿತ ಭಾಷೆ ಮಾಡಿಕೊಳ್ಳಬಹುದಾದ ಹಕ್ಕನ್ನು... ಪಾಪಾ... ಘನ ಭಾರತ ಸರ್ಕಾರ ಕರುಣೆಯಿಂದ ಬಿಟ್ಟು ಕೊಟ್ಟಿದೆ. ಇಂಥಾ ಹೊಲಸು ವ್ಯವಸ್ಥೆ ಬದಲಾಗದೇ ಹೋದರೆ ನಿಧಾನವಾಗಿ ಕನ್ನಡ ಕೆಲಸಕ್ಕೆ ಬಾರದ ಭಾಷೆಯಾಗಿಬಿಡಲಿದೆ ಅಷ್ಟೇ! ಕರ್ನಾಟಕ ಸರ್ಕಾರವೂ ಸೇರಿದಂತೆ ಎಲ್ಲಾ ರಾಜ್ಯಗಳ ಸಂಸದರೂ, ರಾಜ್ಯಸರ್ಕಾರಗಳೂ ಈ ನಿಟ್ಟಿನಲ್ಲಿ ದನಿಯೆತ್ತಿ ಸಂವಿಧಾನಕ್ಕೆ ತಿದ್ದುಪಡಿ ತಂದು, ಭಾರತದ ಎಲ್ಲಾ ರಾಜ್ಯ ಭಾಷೆಗಳಿಗೂ ಆಡಳಿತ ಸ್ಥಾನ ಕೊಡಬೇಕೆಂದು ಒತ್ತಡ ತರಬೇಕಾಗಿದೆ. ಇದನ್ನೆಲ್ಲಾ ಕಂಡಾಗ ಕಡೇಪಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರವೆನ್ನುವ ಹಲ್ಲಿಲ್ಲದ ಹಾವು ಒಂಚೂರು ಭುಸುಗುಟ್ಟಾದರೂ ಭುಸುಗುಟ್ಟಬಾರದೇ ಎಂದನ್ನಿಸಿದರೆ ಅಚ್ಚರಿಯೇನಿಲ್ಲಾ ಗುರೂ!

ಕೊನೆಹನಿ: ಕೆಫೆ ಕಾಫಿ ಡೇ ಎನ್ನುವ ಕನ್ನಡಿಗರದ್ದೇ ಸಂಸ್ಥೆ ಕರ್ನಾಟಕದಲ್ಲೇ ಕನ್ನಡದಲ್ಲಿ ಹಾಡು ಹಾಕಲು ನಿರಾಕರಿಸುತ್ತಿದೆ. ಆದರೆ ಇದೇ ಸಂಸ್ಥೆ ಜ಼ೆಕೋಸ್ಲೋವಿಯಾದಲ್ಲಿ ಕೂಡಾ ಸರಣಿಮಳಿಗೆಗಳನ್ನು ಇತ್ತೀಚಿಗೆ ತೆರೆದು ನಡೆಸುತ್ತಿದೆ. ಅಲ್ಲಿ ಯಾವ ಭಾಷೆಯಲ್ಲಿ ಇದು ಸೇವೆ ನೀಡುತ್ತಿದೆ ಎನ್ನುವುದು ಕುತೂಹಲದ ವಿಷಯ. ಏಕೆಂದರೆ ಆ ದೇಶದ ಜನಸಂಖ್ಯೆ ನಮ್ಮ ಬೆಂಗಳೂರಿನಷ್ಟು ಮಾತ್ರಾ! ಅಂದರೆ ಬರೀ ಒಂದು ಕೋಟಿ ಜನರಿರುವ ದೇಶ ಅದು. ಇನ್ನು ಭಾರತದ ಅನೇಕ ಬ್ಯಾಂಕುಗಳು ಶ್ರೀಲಂಕಾದಂತಹ ದೇಶಗಳಲ್ಲಿ ಯಾವ ಭಾಷೆಯಲ್ಲಿ ಚೆಕ್ಕುಗಳನ್ನು ಅಚ್ಚು ಹಾಕಿಸುತ್ತವೆ ಎನ್ನುವುದು ಕುತೂಹಲದ ವಿಷಯವಾಗಿದೆ. ಕೆಲ ಲಕ್ಷಗಳಷ್ಟು ಜನಸಂಖ್ಯೆಯ ನಾಡುಗಳಲ್ಲಿ ಆಯಾ ಭಾಷೆಗಳಲ್ಲಿ ಸೇವೆ ನೀಡುವ ಇವುಗಳು, ಆರುಕೋಟಿ ಕನ್ನಡಿಗರಿಗಾಗಿ ಕನ್ನಡದಲ್ಲಿ ಗ್ರಾಹಕಸೇವೆಯನ್ನು ಕೊಡಲು ಯಾಕೆ ಹಿಂಜರಿಯುತ್ತವೆ ಎನ್ನುವುದು ಕಾಡುತ್ತಿಲ್ವಾ ಗುರೂ!?

ಅಕ್ರಮ ಮೀನುಗಾರಿಕೆ ಮತ್ತು ನಾಡಿನ ಸಂಪನ್ಮೂಲ ರಕ್ಷಣೆಯ ಹೊಣೆ!

(ಫೋಟೋ ಕೃಪೆ: ಗೂಗಲ್ ಅಂತರ್ಜಾಲ ತಾಣ)
ಕರ್ನಾಟಕ ರಾಜ್ಯದ ಅತಿ ದೊಡ್ಡ ನೈಸರ್ಗಿಕ ಬಂದರಾದ ಮಲ್ಪೆ ಮೀನುಗಾರಿಕೆಗೆ ಹೆಸರುವಾಸಿಯಾಗಿದೆ. ಇದು ಇಡೀ ಕರಾವಳಿಗೆ ಮೀನುಗಾರಿಕೆಯ ರಾಜಧಾನಿಯಿದ್ದಂತೆ! ಒಟ್ಟು ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ, ಕಡಲನ್ನೇ ದೈವವೆಂದು ತಿಳಿದು, ಮೀನುಗಾರಿಕೆಯಿಂದಲೇ ಬದುಕುತ್ತಿರುವ ಸಾವಿರಾರು ಮೀನುಗಾರ ಕುಟುಂಬಗಳು ನಮ್ಮ ಕರಾವಳಿಯಲ್ಲಿವೆ. ಇತ್ತೀಚಿಗೆ ಇವರುಗಳು ಸೇರಿ ನಡೆಸಿದ ಪ್ರತಿಭಟನೆಯೊಂದರ ಬಗ್ಗೆ ವರದಿಗಳು (ಹಿಂದೂ, ದಟ್ಸ್ ಕನ್ನಡ, ಗಲ್ಫ಼್ ಕನ್ನಡಿಗ) ಪ್ರಕಟವಾಗಿದೆ. ಮೇಲ್ನೋಟಕ್ಕೆ ಇದು ಮೀನುಗಾರಿಕೆ ಸಮಸ್ಯೆಯ ಹಾಗೆ ಕಂಡರೂ ಒಳಸುಳಿ ಬೇರೆಯೇ ಇದೆ. ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಇದು ಎತ್ತುವ ಪ್ರಶ್ನೆಗಳು ಅನೇಕ!

ಕರಾವಳಿ ಮೀನುಗಾರಿಕೆಗೆ ಇರುವ ನಿಯಮ!

ನಮ್ಮ ಕರಾವಳಿಯಲ್ಲಿ ಒಂದು ವಿಶೇಷ ತಳಿಯ ಮೀನಿದೆ. ಇದರ ಹೆಸರು "ಕಟ್ಲ್ ಫಿಶ್" ಅಂದರೆ ಕಪ್ಪೆ ಬೊಂಡಾಸೆ ಮೀನು. ಈ ಮೀನು ಹಿಡಿಯಲು ಸಾಂಪ್ರದಾಯಿಕ ಶೈಲಿಯನ್ನು ಇಲ್ಲಿನ ಮೀನುಗಾರರು ಬಳಸುತ್ತಿದ್ದಾರಂತೆ. ಆದರೆ ಇತ್ತೀಚಿಗೆ ಕೆಲವರ್ಷಗಳಿಂದ ತಮಿಳುನಾಡಿನಿಂದ ವಲಸೆ ಬಂದಿರುವ ಮೀನುಗಾರರು ಸಿಡಿಮದ್ದು ಸಿಡಿಸಿ ಒಟ್ಟೊಟ್ಟಿಗೆ ರಾಶಿ ರಾಶಿ ಮೀನುಗಳನ್ನು ಹಿಡಿದು ಹಾಕುತ್ತಿದ್ದಾರೆ ಎನ್ನುವುದು ಸ್ಥಳೀಯ ಮೀನುಗಾರರ ದೂರು! ಈ ಜಾತಿಯ ಮೀನುಗಳು ಮರಿಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೂ ಈ ಮೀನು ಹಿಡಿಯುವುದಿಲ್ಲ. ಏಕೆಂದರೆ ಇದರಿಂದ ಇವುಗಳ ಸಂತತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಈ ಸಮಯದಲ್ಲಿ ಮೀನುಗಾರಿಕೆಯನ್ನು ಅದರಲ್ಲೂ ವಿಶೇಷವಾಗಿ ಯಾಂತ್ರಿಕ ದೋಣಿ ಬಳಕೆಯೂ ಸೇರಿದಂತೆ ಎಲ್ಲಾ ಅಸಂಪ್ರದಾಯಿಕ ವಿಧಾನವನ್ನು ನಿಶೇಧಿಸಲಾಗಿದೆ. ಈಗಾಗಲೇ ಉಡುಪಿ ಜಿಲ್ಲಾ ಆಡಳಿತ ಸಿಡಿಮದ್ದು ಬಳಸಿ ಮೀನು ಹಿಡಿಯುವುದನ್ನು ನಿಶೇಧಿಸಿದೆ. ಹೀಗಿದ್ದರೂ ಪರರಾಜ್ಯದ ಮೀನುಗಾರರುಗಳು ಕಾನೂನು ಮುರಿಯುವ ಮೂಲಕ ಆ ಬಗೆಯ ಮೀನುಗಳ ಸರ್ವನಾಶಕ್ಕೆ ಕಾರಣವಾಗಿದ್ದಾರೆ ಎನ್ನುವುದು ನಮ್ಮ ಬೆಸ್ತರ ಕಾಳಜಿಯಾಗಿದೆ. ಈ ಕಾರಣದಿಂದಾಗಿ ಕೆಲದಿನಗಳ ಹಿಂದೆ ಒಂದು ಬಂದ್ ಕೂಡಾ ನಡೆದಿದೆ. ಇದಕ್ಕೆಂದೇ ನಮ್ಮ ಕರಾವಳಿಯ ಬೆಸ್ತರು ಹೊರರಾಜ್ಯದ ಬೆಸ್ತರ ದೋಣಿಗಳು ನಮ್ಮ ರಾಜ್ಯದ ಕಡಲಗಡಿಗೆ ಬಾರದಂತೆಯೂ, ಹೊರರಾಜ್ಯದ ಮೀನುಗಾರರಿಗೆ ಕಡಿವಾಣ ಹಾಕುವಂತೆಯೂ ರಾಜ್ಯಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದಕ್ಕೆ ಉತ್ತರವಾಗಿ ಶಾಸಕ ಶ್ರೀ ರಘುಪತಿಭಟ್ ಅವರು ಮಾತಾಡಿ "ಅನ್ಯರಾಜ್ಯದವರು ಇಲ್ಲಿಗೆ ಬಂದು ಮೀನುಗಾರಿಕೆ ನಡೆಸಬಾರದೆನ್ನುವ ಯಾವುದೇ ಕಾಯ್ದೆಯೂ ನಮ್ಮಲ್ಲಿಲ್ಲಾ, ಆದರೂ ಮುಖ್ಯಮಂತ್ರಿಗಳ ಬಳಿ ಹೇಳಿ ಮಸೂದೆ ಮಂಡಿಸುತ್ತೇನೆ" ಎಂದು ಸ್ವಲ್ಪ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರಂತೆ! ನಮ್ಮ ನಾಡಿನ ಸಂಪನ್ಮೂಲಗಳನ್ನು ಕಾಪಾಡಿಕೊಳ್ಳಲುಬೇಕಾದ ನೀತಿ ನಿಯಮಗಳನ್ನು ರೂಪಿಸಿಕೊಳ್ಳುವ ಹಕ್ಕು ನಮ್ಮ ರಾಜ್ಯಸರ್ಕಾರದ ಕೈಲಿರಬೇಕಾದ್ದು ನ್ಯಾಯವಲ್ಲವಾ ಗುರೂ!? ಹೊರನಾಡಿನ ಮೀನುಗಾರರು ನಮ್ಮ ಪ್ರದೇಶದೊಳಗೆ ಬರಬೇಕಾದರೆ ನಮ್ಮ ರಾಜ್ಯಸರ್ಕಾರದ ಅನುಮತಿ ಪಡೆದುಕೊಳ್ಳಬೇಕಲ್ಲವಾ? ಇವೆಲ್ಲವನ್ನೂ ಸರ್ಕಾರ ಗಮನಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಬದಲಾಗಬೇಕಾದ್ದು ಭಾರತದ ಸಂವಿಧಾನವೇ ಹೊರತು... ನ್ಯಾಯದ ಬೇಡಿಕೆಯಲ್ಲಾ!


ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಕಾರಣ ಕನ್ನಡವನ್ನು ಕನ್ನಡನಾಡಿನ ಹೈಕೋರ್ಟಿನ ಆಡಳಿತ ಭಾಷೆ ಮಾಡಲು ಆಗುವುದಿಲ್ಲ ಎನ್ನುವ ತೀರ್ಪನ್ನು ರಾಜ್ಯ ಉಚ್ಚನ್ಯಾಯಾಲಯ ನೀಡಿದೆಯೆನ್ನುವ ಸುದ್ದಿ ಬಂದಿದೆ. ಸಂವಿಧಾನದ ೩೪೮ನೇ ವಿಧಿಯ ಅನ್ವಯ ಈ ತೀರ್ಪು ಕೊಟ್ಟಿರುವುದಾಗಿ ನ್ಯಾಯಾಲಯ ಹೇಳಿದೆ. ತಮಾಶೆಯೆಂದರೆ "ನ್ಯಾಯವಾದಿಗಳು ಬೇರೆಬೇರೆ ರಾಜ್ಯಗಳ ನ್ಯಾಯಾಲಯದಲ್ಲಿ ವಾದ ಮಾಡಲು ಹೀಗಿರುವುದು ಅನುಕೂಲ" ಎನ್ನುವ ಮೂಲಕ ವೈವಿಧ್ಯತೆಯನ್ನು ನ್ಯಾಯಾಲಯವೂ ಶಾಪವೆಂದು ಪರಿಗಣಿಸಿರುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಏನಿದು ೩೪೮ನೇ ಕಾಲಂ? ಅದರಲ್ಲಿ ಏನು ಹೇಳಿದೆ?

ಭಾರತದ ಸಂವಿಧಾನ: ೩೪೮ನೇ ವಿಧಿ

ಸಂವಿಧಾನದ XVIIನೇ ಭಾಗವು ಭಾರತದ ಆಡಳಿತ ಭಾಷೆಯ ಬಗ್ಗೆ ಮಾತಾಡುತ್ತದೆ. ಇದರ ಅಡಿಯಲ್ಲಿ ೩೪೩ರಿಂದ ೩೫೧ನೇ ವಿಧಿಯವರೆಗಿನ ಕಾಲಮುಗಳಲ್ಲಿ ಈ ಬಗ್ಗೆ ಬರೆಯಲಾಗಿದೆ. ಸಮಾನತೆಯೇ ಜೀವಾಳ ಎಂದು ಹೇಳುವ ಭಾರತ ಸಂವಿಧಾನದಲ್ಲಿನ ಹಸಿ ತಾರತಮ್ಯ ಈ ಕಾಲಂಗಳಲ್ಲಿ ಬರೆದಿರುವುದು ಎದ್ದು ಕಾಣುತ್ತದೆ. ಹಿಂದೀಯನ್ನು ಭಾರತದ ಆಡಳಿತ ಭಾಷೆಯೆಂದು ಘೋಷಿಸಿರುವುದರ ಜೊತೆಯಲ್ಲಿ ಹಿಂದೀಯ ಪ್ರಚಾರಕ್ಕಾಗಿ ದುಡಿಯಬೇಕಾದ್ದು ಭಾರತ ಸರ್ಕಾರದ ಕರ್ತವ್ಯ ಎಂದು ಹೇಳಿದೆ. ಆದರೆ ೩೪೮ರಲ್ಲಿ ಮಾತ್ರಾ ನ್ಯಾಯಾಲಯದ ಭಾಷೆ ಇಂಗ್ಲೀಶ್ ಮಾತ್ರಾ ಆಗಿರಬೇಕೆಂದು ಹೇಳಲಾಗಿದೆ. ಈ ವಿಧಿಯಲ್ಲಿ ರಾಜ್ಯಗಳ ಆದೇಶ, ಕಾನೂನು ಕಾಯ್ದೆಗಳೆಲ್ಲಾ ಇಂಗ್ಲೀಶಿನಲ್ಲಿಯೇ ಇರಬೇಕೆಂದೂ ಹೇಳುತ್ತಿದೆ. ಭಾರತದ ರಾಷ್ಟ್ರಪತಿಗಳು ಅನುಮತಿ ನೀಡಿದರೆ ಹಿಂದೀ ಅಥವಾ ಇತರೆ ಭಾಷೆಗಳನ್ನು ಬಳಸಬಹುದೆಂದು ಹೇಳಲಾಗಿದೆ.


348. Language to be used in the Supreme Court and in the High Courts and for Acts, Bills, etc.—
(1) Notwithstanding anything in the foregoing provisions of this Part, until Parliament by law otherwise provides—

(a) all proceedings in the Supreme Court and in every High Court,
(b) the authoritative texts—
(i) of all Bills to be introduced or amendments thereto to be moved in either House of Parliament or in the House or either House of the Legislature of a State,
(ii) of all Acts passed by Parliament or the Legislature of a State and of all Ordinances promulgated by the president or the Governor of a State, and
(iii) of all orders, rules, regulations and bye-laws issued under this Constitution or under any law made by Parliament or the Legislature of a State, shall be in the English language.
(2) Notwithstanding anything in sub-clause (a) of clause (1), the Governor of a State may, with the previous consent of the President, authorise the use of the Hindi language, or any other language used for any official purposes of the State, in proceedings in the High Court having its principal seat in that State: Provided that nothing in this clause shall apply to any judgment, decree or order passed or made by such High Court.
ಈ ವಿಧಿಯ ಎರಡನೇ ಭಾಗದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗಳ ಪೂರ್ವಾನುಮತಿಯೊಡನೆ ಇಂಗ್ಲೀಶ್ ಅಲ್ಲದ ಬೇರೆ ನುಡಿಯನ್ನು ಬಳಸಲು ಅನುಮತಿ ನೀಡಬಹುದು ಎಂದಿದೆ. ತಮಾಶೆಯೆಂದರೆ ಹೀಗೆ ಬರೆಯುವಾಗ ಹಿಂದೀ ಅಥವಾ ಬೇರಾವುದೇ ಭಾಷೆಯನ್ನು ಎಂದು ಬರೆಯಲಾಗಿದೆ. ಯಾಕೆ ಹೀಗೆ ಹಿಂದೀಯೊಂದನ್ನೇ ಹೆಸರಿಸಿದ್ದಾರೆ ಎಂದರೆ ೩೪೩ನೇ ವಿಧಿಯಲ್ಲಿ ಹಿಂದೀ ಭಾರತದ ಆಡಳಿತ ಭಾಷೆ ಎನ್ನುವುದೇ ಕಾರಣವಾಗಿದೆ.

ಬದಲಾಗಲಿ ಹುಳುಕಿನ ಭಾಶಾ ನೀತಿ! ಬದಲಾಗಲಿ ಸಂವಿಧಾನ!!

ಹೌದೂ! ಕನ್ನಡನಾಡಿನ ನ್ಯಾಯಾಲಯದ ಆಡಳಿತದಲ್ಲಿ ಕನ್ನಡ ಭಾಷೆಯನ್ನೇ ಬಳಸಬಾರದು ಎನ್ನುವ, ಕನ್ನಡನಾಡಿನ ವಾಹನಗಳ ನಂಬರ್ ಪ್ಲೇಟ್ ಕನ್ನಡದಲ್ಲಿರುವುದೇ ಅಪರಾಧ ಎನ್ನುವ, ಕನ್ನಡ ನಾಡಿನ ಬ್ಯಾಂಕುಗಳಲ್ಲಿ ಕನ್ನಡವಿಲ್ಲದಿದ್ದರೂ ಸರಿ ಹಿಂದೀ ಇಂಗ್ಲೀಶ್ ಇರಬೇಕೆನ್ನುವ, ಕನ್ನಡನಾಡಿನ ಮೆಟ್ರೋದಲ್ಲಿ ಹಿಂದೀ ಇರಬೇಕೆನ್ನುವ, ಕನ್ನಡನಾಡಿನ ವಿಮಾನ ನಿಲ್ದಾಣದಲ್ಲಿ ಕನ್ನಡವನ್ನು ಇರುವೆ ಗಾತ್ರದ ಅಕ್ಷರಗಳ ಮೂರನೇ ಸ್ಥಾನಕ್ಕೆ ದೂಡಿರುವ... ಭಾಷಾನೀತಿ ಹುಳುಕಿನದ್ದು ಎನ್ನದೇ ಬೇರೆ ದಾರಿಯಿಲ್ಲ. ಈ ಭಾಷಾನೀತಿ ಬದಲಾಗದಿದ್ದರೆ ಹಿಂದೀಯೇತರರು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿಯೇ ಬದುಕಬೇಕಾಗುತ್ತದೆ. ಸಂವಿಧಾನದ ೮ನೇ ಕಲಮ್ಮಿನಲ್ಲಿ ಸೂಚಿತವಾಗಿರುವ ಎಲ್ಲಾ ೨೨ ಭಾಷೆಗಳೂ ಭಾರತದ ಆಡಳಿತ ಭಾಷೆಗಳು ಎನ್ನುವ ಬದಲಾವಣೆ, ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ಎನ್ನುವ ಬದಲಾವಣೆ ಭಾರತದ ಸಂವಿಧಾನಕ್ಕೆ ತುರ್ತಾಗಿ ಆಗಬೇಕಾಗಿದೆ! ಹೌದಲ್ವ ಗುರೂ!?

ಸ್ವಾತಂತ್ರ್ಯ ದಿನವೆಂದರೆ ತೋರಿಕೆಯ ಮೇಲ್ಪದರದ ಆಚರಣೆ ಮಾತ್ರಾನೇ?


ಮತ್ತೊಂದು ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಶಾಲೆಗಳಲ್ಲಿ ಮಕ್ಕಳಿಂದ ಸಂಭ್ರಮದ ಕಾರ್ಯಕ್ರಮ, ಊರೂರುಗಳಲ್ಲಿ ಶಿಸ್ತಿನ ಸರ್ಕಾರಿ ಕಾರ್ಯಕ್ರಮ. ಇಂಥಾ ಕಾರ್ಯಕ್ರಮಗಳಲ್ಲಿ ಸ್ವಾತಂತ್ರ್ಯವೆಂದರೆ ಆಂಗ್ಲರಿಂದ ಬಿಡುಗಡೆ ಪಡೆದು ಇಂತಿಷ್ಟು ವರ್ಷಗಳಾದವು ಎಂದು ನೆನಪಿಸಿಕೊಳ್ಳುತ್ತಾ... ಹೀಗೆ ಆಂಗ್ಲರನ್ನು ಓಡಿಸಿ ನಮ್ಮನ್ನು ನಾವು ಆಳಿಕೊಳ್ಳುತ್ತಿರುವುದೇ ಪರಮ ಭಾಗ್ಯವೆಂದೂ, ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಜೀವವನ್ನಾದರೂ ತೆತ್ತೇವು ಎಂಬಂತಹ ಭಾಷಣಗಳು ಕೇಳಿಸುವುದು ಕೂಡಾ ಸಹಜ.

ಸ್ವಾತಂತ್ರ್ಯ ದಿನಾಚರಣೆಯೆಂದರೆ...

ನಮ್ಮ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಕಾರು, ಸ್ಕೂಟರ್, ಬೈಕು, ಆಟೋಗಳ ಮೇಲೆ ದೊಡ್ಡ ದೊಡ್ಡ ಬಾವುಟಗಳನ್ನು ಕಟ್ಟಿಕೊಂಡು ಊರೆಲ್ಲಾ ಸುತ್ತೋದು, ಮೈಕೈ ಮುಖದ ಮೇಲೆಲ್ಲಾ ಮೂರು ಬಣ್ಣಗಳನ್ನು ಬಳಸಿಕೊಳ್ಳೋದು, ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡೋದು, ಸಂಗೀತ ಮನರಂಜನೆಯ ಕಾರ್ಯಕ್ರಮಗಳನ್ನು ಏರ್ಪಡಿಸೋದು... ಹೀಗೆ ಜನಸಾಮಾನ್ಯರ ಆಚರಣೆ. ಅದೇ ಸರ್ಕಾರದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳಿಂದ ಕೆಂಪುಕೋಟೆ ಮೇಲಿನ ಭಾಷಣ. ಆ ಭಾಷಣಗಳಲ್ಲಿ ಭ್ರಷ್ಟಾಚಾರ ಅಳಿಯಬೇಕು, ಭ್ರಾತೃತ್ವ ಉಳಿಯಬೇಕು, ಸವಾಲುಗಳನ್ನು ಗೆಲ್ಲಬೇಕೆನ್ನುವ ಮಾತುಗಳು ಮಾಮೂಲಿಯಾಗಿವೆ. ಹಾಗಾದರೆ ಇವೆಲ್ಲಾ ಬೇಡ ಅನ್ನೋ ಅನಿಸಿಕೆ ನಮದಲ್ಲ. ಈ ಸಂಭ್ರಮವೆಲ್ಲಾ ಇಷ್ಟಕ್ಕೇ ಮುಗಿದುಹೋಗುವುದನ್ನು ನೋಡ್ತಿದ್ರೆ ಇವೆಲ್ಲಾ ಶಿವನಿಲ್ಲದ ಸೌಂದರ್ಯದ ಹಾಗೆ ಅಂತಾ ಅನ್ನಿಸೋದಿಲ್ವಾ ಗುರೂ!

ಸ್ವಾತಂತ್ರ್ಯಕ್ಕೂ ಬೇಕಿದೆ ಸಾರ್ಥಕತೆ!

ಆಂಗ್ಲರು ಭಾರತ ಬಿಟ್ಟು ಹೋದರು ಅನ್ನೋ ಮಾತನ್ನು "ಆಂಗ್ಲರು ಇದುವರೆಗೂ ನಮ್ಮನ್ನು ಆಳುತ್ತಿದ್ದರು, ಇನ್ಮುಂದೆ ಅವರು ವಾಪಸ್ಸು ಇಂಗ್ಲೇಂಡಿಗೆ ಹೋಗ್ತಾರೆ" ಎನ್ನುವಷ್ಟಕ್ಕೇ ಸೀಮಿತಗೊಂಡಂತೆ ಇಂದಿನ ಸ್ವಾತಂತ್ರ್ಯ ದಿನಾಚರಣೆ! ಜನರಿಗೆ ಸಂಬಂಧಪಟ್ಟ ನಿರ್ಣಯಗಳು ಆದಷ್ಟೂ  ಕೆಳಹಂತದಲ್ಲೇ ಆಗಬೇಕೆನ್ನುವ ವಿಕೇಂದ್ರೀಕರಣ ಜಾರಿಯಾಗದೆ, ಎಲ್ಲದರ ಮೇಲೂ ಕೇಂದ್ರದ ಹಿಡಿತವಿರುವುದು ಸ್ವಾತಂತ್ರ್ಯವೇ? ಅಧಿಕಾರವೆನ್ನುವುದು ಕೆಳಹಂತದಿಂದ ಮೇಲಕ್ಕೆ ಬಿಟ್ಟುಕೊಟ್ಟದ್ದಾಗಿರದೆ, ಕೆಳಗಿನ ಹಂತಕ್ಕೆ ಮೇಲಿನಿಂದ ದಾನ ಕೊಡಲ್ಪಟ್ಟಿದ್ದಾಗುವುದಾದರೆ ಸ್ವಾತಂತ್ರ್ಯವೇ? ಒಂದು ಕಡೆ ಸರ್ಕಾರವೇ ಹೆಚ್ಚಿನ ಜನರು ಬಳಸುವ ಭಾಷೆ ಎನ್ನುವ ಕಾರಣದಿಂದ ಉಳಿದವುಗಳ ಬಗ್ಗೆ ಅಸಹನೆ, ಅಗೌರವ, ದಬ್ಬಾಳಿಕೆಗಳನ್ನು ಜಾರಿಯಲ್ಲಿಡುತ್ತಿರುವುದು ಕಾಣುತ್ತಿದ್ದರೆ ಇನ್ನೊಂದೆಡೆ ಇಂಥದ್ದೇ ಹೆಚ್ಚಿನ ಜನರು ಆಚರಿಸುವ ಧರ್ಮ ಎನ್ನುವ ಹೆಚ್ಚುಗಾರಿಕೆಯ ಕಾರಣದಿಂದ ಉಳಿದವರ ಬಗ್ಗೆ ಅಸಹನೆ, ಅಪನಂಬಿಕೆ, ಅಪಪ್ರಚಾರಗಳನ್ನು ಇದೇ ಮೂರುಬಣ್ಣ ಬಳಿದುಕೊಂಡು ದೇಶಭಕ್ತಿಯ ಗುತ್ತಿಗೆ ತೆಗೆದುಕೊಂಡಂತೆ ಆಡುತ್ತಿರುವವರು ಮಾಡುತ್ತಿರುವುದು ಕಾಣುತ್ತಿದೆ.

ಭಾರತದಲ್ಲಿ ನಿಜವಾದ ಒಪ್ಪುಕೂಟ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಸಮಾಜದಲ್ಲಿ ತನ್ನದಲ್ಲದ ನಂಬಿಕೆ ಹೊಂದಿರುವವರನ್ನು ಅವಹೇಳನ ಮಾಡುವ, ಅಸಹನೆ ತೋರುವ ಪ್ರವೃತ್ತಿಗಳು ನಿಲ್ಲಬೇಕಾಗಿದೆ. ಭ್ರಷ್ಟಾಚಾರದಂತಹ ಪಿಡುಗುಗಳಿಗೆ ಲೋಕ್‌ಪಾಲ್, ಜನಲೋಕ್‌ಪಾಲ್‌ನಂತಹ ಮೇಲುಮೇಲಿನ ಪರಿಹಾರಗಳಾಚೆ ವಿಕೇಂದ್ರೀಕರಣದ, ಪಾರದರ್ಶಕತೆಯ, ಹೊಣೆ ತಪ್ಪಿಸಿಕೊಳ್ಳಲಾರದಂತಹ ವ್ಯವಸ್ಥೆಗಳನ್ನು ರೂಪಿಸಿಕೊಳ್ಳಬೇಕಾಗಿದೆ. ಇವೆಲ್ಲಾ ಆಗುವ ನಿಟ್ಟಿನಲ್ಲಿ ಬೇಕಾಗಿರುವ ಜನಜಾಗೃತಿ ಮೂಡಿಸುವ ಕೆಲಸಗಳು ಹೆಚ್ಚೆಚ್ಚು ಆಗದೆ ಬರೀ ತೋರಿಕೆಯ ಆಚರಣೆಗಳು ನಡೆಯುತ್ತಿದ್ದಲ್ಲಿ ಸ್ವಾತಂತ್ರ್ಯಕ್ಕೇನು ಸಾರ್ಥಕತೆ ಸಿಕ್ಕೀತು? ಕಪ್ಪುಬಿಳುಪಿನ ಫೋಟೋ ಬಣ್ಣದ್ದಾಗಿದ್ದು ಬಿಟ್ಟರೆ ಬೇರೇನೂ ಬದಲಾಗಲಿಲ್ಲಾ ಅನ್ನಿಸೋಲ್ವಾ ಗುರೂ?!

"ಸಕಾಲ" - ಸರ್ಕಾರಿ ಕೆಲಸ, ಆಗಲಿ ಇನ್ನು ಸುಲಭ!


ರಾಜ್ಯದ ಆಡಳಿತದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಯ ನಿರೀಕ್ಷೆಯನ್ನು ಹುಟ್ಟು ಹಾಕಿದಂತಹ ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ - ೨೦೧೧ ಇದೀಗ "ಸಕಾಲ" ಯೋಜನೆಯಾಗಿ ಏಪ್ರಿಲ್ ೨ರಿಂದ ರಾಜ್ಯಾದ್ಯಂತ ಜಾರಿಯಾಗಿದೆ. ಒಟ್ಟು ಹನ್ನೊಂದು ಇಲಾಖೆಗಳ ಒಂದುನೂರಾ ಐವತ್ತೊಂದು ಸೇವೆಗಳನ್ನು ನಿಗದಿತ ಸಮಯದಲ್ಲಿ ಮುಗಿಸಿಕೊಡುವ ಬದ್ಧತೆಯ ಘೋಷಣೆಯು ಜನರಲ್ಲಿ ಹೊಸ ಭರವಸೆ ಹುಟ್ಟಲು ಕಾರಣವಾಗಿದೆ. ಈಗಾಗಲೇ ಇಂತಹ ಕಾಯ್ದೆಯನ್ನು ಜಾರಿಮಾಡಿರುವ  ಮಧ್ಯಪ್ರದೇಶ, ಬಿಹಾರಗಳ ಸಾಲಿಗೆ ರಾಜ್ಯವೂ ಸೇರಿದ್ದು, ಕರ್ನಾಟಕದ ಭಾರತೀಯ ಜನತಾಪಕ್ಷದ ಸರ್ಕಾರ ನಿಜಕ್ಕೂ ಒಂದು ಸಾರ್ಥಕವಾದ ಕೆಲಸಾ ಮಾಡಿ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಸರ್ಕಾರಿ ಕೆಲಸ ದೇವರ ಕೆಲಸ!

ಜನರಿಗೆ ಸರ್ಕಾರಿ ಕಚೇರಿಗಳಲ್ಲಿ ಬೇಕಾದಷ್ಟು ಕೆಲಸಗಳಾಗಬೇಕಿರುತ್ತವೆ. ಸಾಮಾನ್ಯವಾಗಿ ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ದೇವರೇ ಬಂದು ಮಾಡಿಕೊಡಬೇಕಾದ ಕೆಲಸ ಎಂದು ವ್ಯಂಗ್ಯವಾಡುವಷ್ಟು ನಿಧಾ...ನವಾಗಿ ನಡೆಯುತ್ತದೆ ಎನ್ನುವುದು ಜನರ ದೂರಾಗಿತ್ತು. ಒಂದು ಕಡತ ಒಬ್ಬ ಅಧಿಕಾರಿಯಿಂದ ಮುಂದಿನ ಅಧಿಕಾರಿಯ ಟೇಬಲ್ ತಲುಪಬೇಕೆಂದರೆ ಅದೆಷ್ಟು ಸಮಯ ಬೇಕಾಗುತ್ತೋ ಎಂದು ಜನ ನಿರಾಸೆಯಿಂದ ನಿಟ್ಟುಸಿರು ಬಿಡಬೇಕಾದ ಕೆಟ್ಟಕಾಲ ಮುಗಿಯೋ ಒಳ್ಳೆಕಾಲ ಇನ್ಮುಂದೆ ಬರಲಿದೆ ಎನ್ನುವ ಭರವಸೆಯು, ಈ ಕಾಯ್ದೆಯ ಕಾರಣದಿಂದಾಗಿ ಜನರಲ್ಲಿ ಮೂಡಿದೆ.

ಈ ಕಾಯ್ದೆಯಡಿ ಬರುವ ಹನ್ನೊಂದು ಇಲಾಖೆಗಳು ತಾವು ನೀಡುವ ಪ್ರತಿಯೊಂದು ಸೇವೆಗೂ ಇಂತಿಷ್ಟೇ ಸಮಯ ಸಾಕು ಎಂದು ಕಾಲಮಿತಿಯನ್ನು ಹಾಕಿಕೊಂಡಿದ್ದಾವೆ. ಇಡೀ ಕಾಯ್ದೆಯು "ಮಾಹಿತಿ ಹಕ್ಕು ಕಾಯ್ದೆ - ೨೦೦೫"ರ ಮುಂದುವರಿಕೆಯಂತೆ ಕಾಣುತ್ತಿದೆ. ಜನರಿಗೆ ಯಾವುದೇ ಇಲಾಖೆ ತಮ್ಮ ಕೆಲಸಗಳನ್ನು ಮಾಡಿಕೊಡುವುದು  "ಆ ಇಲಾಖೆಯ ನೌಕರರು ನಮಗೆ ಮಾಡುವ ಉಪಕಾರವಲ್ಲಾ" ಎನ್ನುವ ಸಂದೇಶವನ್ನು ನೀಡುತ್ತಿರುವ ಸಕಾಲದಲ್ಲಿ, ಜನರು ತಾವು ಬಯಸಿದ ಸೇವೆ ಇಂತಿಷ್ಟೇ ಸಮಯದಲ್ಲಿ ಪಡೆದುಕೊಳ್ಳುವ ಹಕ್ಕನ್ನು ಹೊಂದಿರುವುದನ್ನು ಎತ್ತಿ ಹಿಡಿಯಲಾಗಿದೆ. ಯಾವುದೇ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಸಹಕಾರಿಯಾಗಿರುವ ಸಕಾಲ ವ್ಯವಸ್ಥೆಯಲ್ಲಿ ಜನರು ಬಯಸಿದ ಸೇವೆಯನ್ನು ಪಡೆಯುವಲ್ಲಿ ತಡವಾದಲ್ಲಿ ದೂರು ನೀಡುವ ವ್ಯವಸ್ಥೆಯೂ ಇದೆ. ನಿಗದಿತ ಸಮಯಕ್ಕಿಂತಾ ಹೆಚ್ಚು ಸಮಯ ತೆಗೆದುಕೊಂಡಲ್ಲಿ ದಿನವೊಂದಕ್ಕೆ ೨೦ ರೂಪಾಯಿ ಪರಿಹಾರವಾಗಿ ನೀಡಬೇಕಾದ ಹೊಣೆಗಾರಿಕೆಯನ್ನೂ ಸಂಬಂಧಿಸಿದ ನೌಕರರಿಗೆ ಹೊರಿಸಲಾಗಿದೆ. ಮೇಲ್ಮನವಿ, ದೂರು ಇತ್ಯಾದಿಗಳನ್ನು ಸಲ್ಲಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಶಿಸ್ತನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಇದನ್ನು ಜಾರಿ ಮಾಡಲು ಕಾರಣವಾದ ಸರ್ಕಾರಕ್ಕೆ ಅಭಿನಂದನೆಗಳು! ಜನರು ಕಟ್ಟುವ ತೆರಿಗೆ ಹಣದಿಂದಲೇ ರೂಪುಗೊಳ್ಳುವ ಇಂತಹ ಯೋಜನೆಗಳು ಯಶಸ್ವಿಯಾದರೆ ಸರ್ಕಾರವು ಜನರಿಂದ ತೆರಿಗೆ ಕಟ್ಟಿಸಿಕೊಂಡ ಋಣವನ್ನು ಸ್ವಲ್ಪಮಟ್ಟಿಗೆ  ತೀರಿಸಿಕೊಂಡಂತಾಗುತ್ತದೆ. ಅದಕ್ಕೇ ಸರ್ಕಾರಿ ಕೆಲಸ ದೇವರ ಕೆಲಸವಾಗದೆ ಜನರ ಕೆಲಸ ಎನ್ನುವಂತಾಗಬೇಕು ಎನ್ನುವುದು ಸರಿಯಾಗಿದೆ!

ಸಕಾಲದ ಸರಿ ಜಾರಿಯಾಗಲಿ!

ಸಕಾಲ ಕುರಿತಾಗಿ ಮಾಹಿತಿ ಪಡೆಯಲು ಮಿಂಬಲೆತಾಣವನ್ನು ರೂಪಿಸಲಾಗಿದೆ. ಈ ತಾಣ ತೆರೆದುಕೊಳ್ಳುವುದೇ ಇಂಗ್ಲೀಶಿನಲ್ಲಿ! ಪಕ್ಕದಲ್ಲಿ ಕೆಟ್ಟ ಕನ್ನಡದಲ್ಲಿ ಒಂದು "ಕನ್ನಡ ಅವತರಣ"ವಿದೆ. ಅಲ್ಲಿ "ಸೆವೆಗಳ ಸ್ಥಾನ-ಮಾನ ಪರಿಶಿಲಿಸಿ" ಎಂದು ಕೂಡಾ ಬರೆಯಲಾಗಿದೆ. ಕರ್ನಾಟಕದಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಹೊಂದಿರುವ ಸರ್ಕಾರ, ತನ್ನ ತಾಣದಲ್ಲಿ ಇಂತಹ ನಿರ್ಲಕ್ಷ್ಯ ತೋರಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಿಜಕ್ಕೂ ತಾನು ರೂಪಿಸಿರುವ ಜನಪರವಾದ ಕಾಯ್ದೆ/ ಯೋಜನೆ ಜನರನ್ನು ಮುಟ್ಟಬೇಕಾದರೆ ಜನರ ಭಾಷೆಯಲ್ಲಿ "ಸರಿಯಾಗಿ" ಇರಬೇಕಾದ್ದು ಬಹುಮುಖ್ಯ ಎನ್ನುವುದನ್ನು ಸಂಬಂಧಿಸಿದ ಅಧಿಕಾರಿಗಳು ಮನಗಂಡರೆ ಒಳ್ಳೆಯದು. ಅನ್ನ ಅರೆ ಬೆಂದಿರುವುದಕ್ಕೆ ಸಾಕ್ಷಿಯಾದ ಅಗುಳಿನಂತೆ ಈ ತಾಣದ ಮುಂಪಟ ಇರದಿರಲಿ ಎನ್ನುವುದು ನಮ್ಮ ಆಶಯ. ಅತ್ಯುತ್ತಮ ಯೋಜನೆಗಳೂ ಕೂಡಾ ಯಶಸ್ವಿಯಾಗಲು ಅತ್ಯುತ್ತಮ ರೀತಿಯಲ್ಲಿ ಜಾರಿಗೊಳ್ಳಬೇಕಾಗುತ್ತದೆಯಾದ್ದರಿಂದ ಸರ್ಕಾರ ಈಗಿರುವ ಕುಂದುಕೊರತೆಗಳನ್ನು ನಿವಾರಿಸಿ ಸಕಾಲವನ್ನು ಪರಿಣಾಮಕಾರಿಯಾಗಿ ಮಾಡಲಿ. ಹೌದಲ್ವಾ ಗುರೂ?

ತಂತ್ರಜ್ಞಾನ ಕನ್ನಡಕ್ಕೆ ಬದಲಿಯಲ್ಲ!

ನೀವು ಸುಮ್ಮನೆ ಗಮನಿಸಿ ನೋಡಿ... ಬೆಂಗಳೂರು ಟ್ರಾಫಿಕ್ ಪೊಲೀಸಿನವರದ್ದೊಂದು ಮಿಂಬಲೆ ತಾಣವಿದೆ. ಅಲ್ಲೂ ಜನರಿಗೆ ಅನುಕೂಲವಾಗುವಂತಹ ನಾನಾ ಸೇವೆಗಳು ತಂತ್ರಜ್ಞಾನದ ಕಾರಣದಿಂದಾಗಿ ದೊರಕಿಸಿಕೊಡಲಾಗಿದೆ. ದುರಂತವೆಂದರೆ ಅಲ್ಲಿ ಕನ್ನಡಕ್ಕೆ ಮಾತ್ರಾ ಮನ್ನಣೆಯಿಲ್ಲ! ಕನ್ನಡದಲ್ಲಿ ಸೇವೆ ಕೊಡ್ರೀ ಅಂದ್ರೆ ಆ ತಂತ್ರಜ್ಞಾನ ಇಲ್ಲಾ, ಈ ಮೊಬೈಲ್ ಕಂಪನಿಯವರು ಕನ್ನಡ ಕೊಡ್ತಿಲ್ಲಾ.. ಇಂಥಾ ಅದ್ಭುತ ಸೌಕರ್ಯ ಕೊಡ್ತಿದೀವಿ, ಇಲ್ಲೂ ಕನ್ನಡ ಕನ್ನಡಾ ಅಂತೀರಾ... ಹಾಳೂ ಮೂಳೂ ಅನ್ನೋ ನೆಪಗಳನ್ನು ಹೇಳ್ತಾರೆ. ಇದೇ ರೀತಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಿಂಬಲೆಯಲ್ಲೂ ಇದೇ ಗೋಳು! ಯಾಕ್ರೀ ಟಿಕೆಟ್ ಕನ್ನಡದಲ್ಲಿಲ್ಲಾ ಅಂದ್ರೆ ತಂತ್ರಜ್ಞಾನ ಇಲ್ಲಾ ಅಂತಾರೆ! ಕನ್ನಡದೋರು ಆರೂವರೆ ಕೋಟಿ ಇದ್ದೀವಿ ಇದ್ದೀವಿ ಅಂತಾ ಹೇಳ್ಕೊಳ್ಳೋದು ಯಾಕೆ? ಇಷ್ಟು ಜನಸಂಖ್ಯೆ ಒಂದು ತಂತ್ರಜ್ಞಾನ ರೂಪಿಸಿ ಜಾರಿಗೆ ತರೋರಿಗೆ ಸಾಲದಾ? ನಮ್ಮ ಉದ್ದೇಶ ಇಂಥದ್ದು ನಮಗೆ ಕನ್ನಡದಲ್ಲಿ ಸೇವೆ ಬೇಕು ಅಂತಾ ನಮ್ಮ ರಾಜ್ಯದ ಸಂಸ್ಥೆಗಳು, ಇಲಾಖೆಗಳು ತಂತ್ರಜ್ಞಾನಾನಾ ತರಕ್ ಆಗಲ್ವಾ? ಒಂದಂತೂ ನಿಜಾ! ಕನ್ನಡ ಕಡೆಗಣಿಸಿ ಕನ್ನಡವಿಲ್ಲದೆ ಕೊಡುವ ಯಾವ ತಂತ್ರಜ್ಞಾನವೂ ಕನ್ನಡದೋರಿಗೆ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ! ತಂತ್ರಜ್ಞಾನಾ ಅನ್ನೋದು ಕನ್ನಡಾನ ಬಳಸದೆ ಇರೋಕೆ ಒಂದು ನೆಪವಾಗೋದನ್ನು ಎಂದಿಗೂ ಒಪ್ಪಕ್ಕಾಗಲ್ಲಾ ಗುರೂ! ಸಕಾಲವೂ ಕೂಡಾ ತನ್ನ ಮೊದಲ ಆದ್ಯತೆಯನ್ನು ಕನ್ನಡಕ್ಕೆ ನೀಡಿದಾಗ ಮಾತ್ರಾ ಅದು ಯಶಸ್ವಿಯಾಗುತ್ತದೆ ಮತ್ತು ಸಾರ್ಥಕವಾಗುತ್ತದೆ!

ಉತ್ತರ ನೀಡದ ಮೆಟ್ರೋ: ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರು!


ಓದುಗರೊಬ್ಬರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಬಳಸಲಾಗುತ್ತಿರುವ ಭಾಷಾನೀತಿಯನ್ನು ಕುರಿತು "ಮಾಹಿತಿ ಹಕ್ಕು ಕಾಯ್ದೆ ೨೦೦೫"ರ ಅಡಿಯಲ್ಲಿ ಮಾಹಿತಿ ಕೋರಿ ಒಂದು ಅರ್ಜಿಯನ್ನು ೨೦೧೧ರ ಅಕ್ಟೋಬರ್ ತಿಂಗಳಲ್ಲಿ ಸಲ್ಲಿಸಿದ್ದರು. ನಮ್ಮ ಮೆಟ್ರೋ ಅಧಿಕಾರಿಗಳು ಇದಕ್ಕೆ ಸ್ಪಂದಿಸದೇ ಹೋದ್ದರಿಂದ ಮೊದಲ ಮೇಲ್ಮನವಿಯನ್ನು ನಮ್ಮ ಮೆಟ್ರೋದ ಸಂಬಂಧಪಟ್ಟ ದೂರು ಅಧಿಕಾರಿಗೆ ನವೆಂಬರ್ ತಿಂಗಳಲ್ಲಿ ಸಲ್ಲಿಸಿದ್ದ ಬಗ್ಗೆ ನಮ್ಮೊಂದಿಗೆ ಮಾಹಿತಿ ಹಂಚಿಕೊಂಡಿದ್ದರು.

ಹೀಗೆ ಸಲ್ಲಿಸಲಾದ ಮೇಲ್ಮನವಿಗೆ ಮೂವತ್ತು ದಿನಗಳೊಳಗಾಗಿ ಉತ್ತರಿಸಬೇಕಾದ ಹೊಣೆಗಾರಿಕೆ ಸಂಬಂಧಿಸಿದ ಅಧಿಕಾರಿಗಳಿಗಿತ್ತು. ವಿಶೇಷ ಸಂದರ್ಭದಲ್ಲಿ ಕಾರಣಸಹಿತ ೪೫ ದಿನಗಳವರೆಗೂ ಸಮಯಾವಕಾಶವನ್ನು ತೆಗೆದುಕೊಳ್ಳಬಹುದಿತ್ತು. ಸಕಾರಣವಾಗಿ ಅರ್ಜಿಯನ್ನು ತಿರಸ್ಕರಿಸುವ ಅವಕಾಶವೂ ಇತ್ತು. ಆದರೆ ಅಂತಹ ಯಾವುದೇ ಕ್ರಮ ತೆಗೆದುಕೊಂಡರೂ, ಸಂಬಂಧಿಸಿದ್ದವರು ಅರ್ಜಿದಾರರಿಗೆ ನಿಗದಿತ ಸಮಯದೊಳಗೆ ತಿಳಿಸಬೇಕಿತ್ತು. ಆದರೆ ಇವರ ಮೊದಲ ಮೇಲ್ಮನವಿಗೆ ಮೂವತ್ತು ದಿನಗಳೊಳಗಾಗಿ ಯಾವುದೇ ರೀತಿಯ ಉತ್ತರ ಬಂದಿಲ್ಲವಂತೆ. ಹಾಗಾಗಿ ಅರ್ಜಿದಾರರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರಂತೆ. 

ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರು! ಎರಡನೇ ಮೇಲ್ಮನವಿ

ಹಾಗಾಗಿ ಅರ್ಜಿದಾರರು ಮುಂದಿನ ಹಂತಕ್ಕೆ ಈ ಅರ್ಜಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದರ ಅಂಗವಾಗಿ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ ದೂರಿನ ಮೂಲಕ ಎರಡನೇ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ಸದರಿ ಅರ್ಜಿಯ ವಿಚಾರಣೆಗೆ ಸಾಕಷ್ಟು ಕಾಲಾವಕಾಶವನ್ನೇ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆದರೆ ಯಾರಿಗೆ ಮೊದಲ ಅರ್ಜಿಯನ್ನು, ಮೇಲ್ಮನವಿಯನ್ನು ಸಲ್ಲಿಸಲಾಗಿತ್ತೋ ಆ ಅಧಿಕಾರಿಗಳನ್ನು ಆಯೋಗವು ಅರ್ಜಿದಾರರ ಎದುರಿನಲ್ಲೇ ವಿಚಾರಣೆಗೆ ಒಳಪಡಿಸಬೇಕೆನ್ನುತ್ತದೆ ಕಾನೂನು. ಆರ್.ಟಿ.ಐಗೆ ಸ್ಪಂದಿಸದಿರುವುದು ಕೂಡಾ ನಿರಾಕರಣೆ ಎನ್ನುತ್ತದೆ ಕಾನೂನು. ನೋಡೋಣ... ಇದೆಲ್ಲೆಯವರೆಗೆ ಕರೆದೊಯ್ಯುತ್ತದೆಯೋ ಅಲ್ಲಿಯವರೆಗೂ ಹೋಗುತ್ತೇನೆ ಎಂದಿದ್ದಾರೆ ಅರ್ಜಿದಾರರು. ನಾವೂ ಕೂಡಾ "ಗೆಳೆಯರೇ, ನಿಮಗೆ ಶುಭವಾಗಲಿ" ಎನ್ನೋಣ್ವಾ ಗುರೂ!

ಉಚ್ಚ ನ್ಯಾಯಾಲಯದಲ್ಲಿ ಕನ್ನಡ: ರಾಜ್ಯಸರ್ಕಾರದ ಒಳ್ಳೆ ಹೆಜ್ಜೆ!


ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಕನ್ನಡದಲ್ಲಿ ತೀರ್ಪು ನೀಡಿದ ಹಲವು ನ್ಯಾಯಾಧೀಶರಿಗೆ ಸನ್ಮಾನ ಮಾಡುವ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯ ಕಾನೂನು ಮಂತ್ರಿಗಳು, ನಾಡಿನ ಹೈಕೋರ್ಟಿನಲ್ಲಿ ಕನ್ನಡದಲ್ಲೇ ಕಲಾಪ ನಡೆಯುವಂತೆ, ತೀರ್ಪು ನೀಡುವಂತಹ ವ್ಯವಸ್ಥೆ ಜಾರಿಗೊಳಿಸಲು ಬೇಕಿರುವ ಅಗತ್ಯ ಕಾನೂನು ತಿದ್ದುಪಡಿಯನ್ನು ಮಾಡಲು ರಾಜ್ಯಸರ್ಕಾರವು ಮುಂದಾಗುವುದಾಗಿ ತಿಳಿಸಿದರು. ಕೋರ್ಟುಗಳಲ್ಲಿ ಬಳಸುವ ಭಾಷೆಗಳ ಬಗ್ಗೆ ಭಾರತದ ಸಂವಿಧಾನ ಹೀಗೆನ್ನುತ್ತದೆ ನೋಡಿ:

ಸಂವಿಧಾನದ ಪುಟಗಳಲ್ಲಿ...

ಭಾರತೀಯ ಸಂವಿಧಾನದ XVIIನೇ ಭಾಗದ ಮೂರನೇ ಅಧ್ಯಾಯದ ೩೪೮ನೇ ವಿಧಿಯು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ಭಾಷೆ ಮತ್ತು ಮುಂತಾದವುಗಳ ಬಗ್ಗೆ ಹೀಗೆ ಹೇಳುತ್ತದೆ.
ಭಾರತ ಸಂವಿಧಾನ : : ಅಧ್ಯಾಯ ೩: ವಿಧಿ ೩೪೮
೧. ಕೆಳಗೆ ಹೇಳಿರುವ ಎಲ್ಲಾ ಅಂಶಗಳು ಇಂಗ್ಲೀಷಿನಲ್ಲಿ ಇರತಕ್ಕದ್ದು.
(a) ಸರ್ವೋಚ್ಚ ನ್ಯಾಯಾಲಯದ ಮತ್ತು ರಾಜ್ಯಗಳ ಉಚ್ಚ ನ್ಯಾಯಲಯಗಳ ನಡಾವಳಿಗಳು
(b) ಈ ಕೆಳಕಂಡ ವಿಷಯಗಳ ಅಧಿಕೃತ ಹೊತ್ತಗೆಗಳು
I. ಸಂಸತ್ತಿನ ಎರಡೂ ಸದನಗಳಲ್ಲಿ ಹಾಗೂ ರಾಜ್ಯದ ಶಾಸಕಾಂಗದಲ್ಲಿ ಮಂಡಿಸಲಾಗುವ ಅಥವಾ ಬದಲಾವಣೆಗೊಳಗಾಗುವ ಮಸೂದೆ.
II. ಸಂಸತ್ತಿನಲ್ಲಿ ಪಾಸಾಗುವ ಎಲ್ಲಾ ಕಾಯ್ದೆಗಳು ಅಥವಾ ರಾಜ್ಯದ ಶಾಸಕಾಂಗ ಪಾಸು ಮಾಡುವ ಕಾಯ್ದೆಗಳು ಮತ್ತು ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಹೊರಡಿಸುವ ತೀರ್ಮಾನಗಳು.
III. ಈ ಸಂವಿಧಾನದಲ್ಲಿರುವ ಆದೇಶಗಳು, ನಿಯಮಗಳು, ರೆಗ್ಯೂಲೇಟರ್‌ಗಳು ಮತ್ತು ಬೈ-ಲಾಗಳು ಮತ್ತು ಪಾರ್ಲಿಮೆಂಟ್ ಅಥವಾ ರಾಜ್ಯಸರ್ಕಾರಗಳು ಮಾಡುವ ಕಾನೂನುಗಳು
೨. ಈ ನಿಯಮದ ಅನ್ವಯ ಉಚ್ಚ ನ್ಯಾಯಾಲಯ ತೀರ್ಪು, ಡಿಕ್ರೀ ಅಥವಾ ಆದೇಶ ನೀಡಿಲ್ಲದೇ ಇದ್ದ ಪಕ್ಷದಲ್ಲಿ ಅಧಿನಿಯಮ(೧)ರ  ಉಪ ಅಧಿನಿಯಮ (ಎ)ನಲ್ಲಿ ಹೇಳಿರುವದನ್ನು ಹೊರತುಪಡಿಸಿ, ರಾಜ್ಯಪಾಲರು, ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ಹಿಂದಿ ಭಾಷೆ ಅಥವಾ ಬೇರೆ ಯಾವುದೇ ಭಾಷೆಯನ್ನು ರಾಜ್ಯದ ಆಡಳಿತದ ಉದ್ದೇಶಕ್ಕಾಗಿ, ಆ ರಾಜ್ಯದ ಒಳಗೇ ಇರುವ ಉಚ್ಚ ನ್ಯಾಯಾಲಯದ ನಡಾವಳಿಗಳಿಗಾಗಿ ಉಪಯೋಗಿಸಲು ಅಧಿಕಾರವನ್ನು ನೀಡಬಹುದು: 
(೩) ಅಧಿನಿಯಮ (೧)ರ ಉಪ ಅಧಿನಿಯಮ (ಬಿ)ನಲ್ಲಿ ಹೇಳಿರುವುದನ್ನು ಹೊರತುಪಡಿಸಿ ಒಂದು ರಾಜ್ಯವು ಇಂಗ್ಲೀಷ್ ಅಲ್ಲದೇ ಬೇರೆ ಭಾಷೆಯನ್ನು ಕೋರ್ಟಿನ ತೀರ್ಪು, ಆದೇಶ, ನಿಯಮಗಳಿಗಾಗಿ ಬಳಸಿದ್ದರೆ ಅಂತಹವುಗಳ ಇಂಗ್ಲೀಶ್ ಭಾಷೆಯ ಅಧಿಕೃತ ತರ್ಜುಮೆಯು ರಾಜ್ಯಪಾಲರ ಅಂಕಿತ ಪಡೆದುಕೊಂಡು ರಾಜ್ಯಪತ್ರದಲ್ಲಿ ಪ್ರಕಟವಾದ ತರ್ಜುಮೆಯದ್ದಾಗಿರುತ್ತದೆ.
ಅಂದರೆ  ಉಚ್ಚ ನ್ಯಾಯಾಲಯದ ಕಲಾಪವು ಇಂಗ್ಲೀಶಿನಲ್ಲಿರತಕ್ಕದ್ದು ಎನ್ನುವುದು ಮೂಲವಾಗಿದ್ದು, ರಾಜ್ಯ ಭಾಷೆಯಲ್ಲಿ ಬೇಕಾದರೆ ರಾಷ್ಟ್ರಪತಿಗಳ ಒಪ್ಪಿಗೆ ಪಡೆದು ರಾಜ್ಯಪಾಲರು ಅಧಿಕಾರ ನೀಡಬಹುದು ಎನ್ನಲಾಗಿದೆ. ಇದನ್ನು ಕಂಡಾಗ, ಒಂದು ನಾಡಿನ ವ್ಯವಸ್ಥೆಯನ್ನು ಜನಗಳ ಭಾಷೆಯಲ್ಲಿ ನಡೆಸುವುದು ಸರಿಯಾದ ವಿಧಾನ ಎಂದು ಭಾರತ ಸರ್ಕಾರ ಏಕೆ ಅರಿಯದೇ ಹೋಯಿತು? ಜನರ ಭಾಷೆಯಲ್ಲಿ ಕೋರ್ಟ್ ಕಲಾಪ ನಡೆಸಲು ಅವರಿಂದ ಇವರಿಂದ ಒಪ್ಪಿಗೆ ಪಡೆಯಬೇಕೆನ್ನುವ ತಿರುಗಣೆಯ ಸರ್ಕಸ್ ಯಾಕೆ? ಎಂದನ್ನಿಸದೇ ಇರದು.

ಏನಾದರೂ, ಕರ್ನಾಟಕ ರಾಜ್ಯಸರ್ಕಾರ ಮತ್ತು ಕಾನೂನು ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರು ಈಗ ಹೈಕೋರ್ಟಿನಲ್ಲೂ ಕನ್ನಡ ತರಲು ಮುಂದಾಗಿರುವುದು ಮೆಚ್ಚುಗೆಯ ವಿಷಯವಾಗಿದೆ. ಜನರ ಭಾಷೆಯಲ್ಲಿ ಆಡಳಿತ ನಡೆಸುವುದು ಜನಕ್ಕೂ, ಆಡಳಿತ ಯಂತ್ರಕ್ಕೂ, ಸರ್ಕಾರಕ್ಕೂ ಸಲೀಸು ಮತ್ತು ಅನುಕೂಲಕರವಾಗಿದೆ ಎನ್ನುವುದೇ ಸತ್ಯವಾಗಿದೆ. ಅಲ್ವಾ ಗುರೂ?

ಜನಲೋಕಪಾಲ್ ಮತ್ತು ಭ್ರಷ್ಟಾಚಾರ ನಿರ್ಮೂಲನೆ


ಭಾರತೀಯರಿಗೆ, ಸದ್ಯಕ್ಕೆ ಭ್ರಷ್ಟ ರಾಜಕಾರಣಿಗಳ ವಿರುದ್ಧವಾಗಿ ಬ್ರಹ್ಮಾಸ್ತ್ರವಾಗಿ ಕಾಣಿಸುತ್ತ ಇರೋದು, ಪರಮ ಪ್ರಾಮಾಣಿಕ ಎನ್ನಿಸಿರುವ, ಮಾಜಿ ಸೈನಿಕರಾಗಿರುವ, ಅನೇಕ ಸಾಮಾಜಿಕ ಹೋರಾಟಗಳ ಮಹಾಸೇನಾನಿ ಶ್ರೀ ಅಣ್ಣಾ ಹಜ಼ಾರೆಯವರು. ಕಳೆದ ಏಪ್ರಿಲ್‍ನಲ್ಲಿ ಇವರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದು "ಜನಲೋಕ್ ಪಾಲ್ ಮಸೂದೆ"ಯನ್ನು ಜಾರಿ ಮಾಡಲು ಒತ್ತಾಯಿಸಿ. ಕೇಂದ್ರಸರ್ಕಾರ ಅಣ್ಣಾ ಬೇಡಿಕೆಗಳಿಗೆ ಮಣಿದು ಲೋಕ್‍ಪಾಲ್ ಮಸೂದೆಯ ಕರಡು ಸಮಿತಿಯನ್ನು ರಚಿಸಿ ಅದರಲ್ಲಿ ಸಂಸದರಲ್ಲದ ಐವರನ್ನು ಸೇರಿಸಿಕೊಂಡಿತು. ಈ ಸಮಿತಿಯು ಕರಡು ಪ್ರತಿ ಸಿದ್ಧಪಡಿಸುವಲ್ಲಿ ಒಮ್ಮತಕ್ಕೆ ಬರುವಲ್ಲಿ ಇನ್ನೂ ಸಫಲವಾಗಿರಲಿಲ್ಲ. ಅಷ್ಟರಲ್ಲಿ ಬಾಬಾ ರಾಮ್‍ದೇವ್ ನಡೆಸಿದ ಅಮರಣಾಂತ ಉಪವಾಸ ಸತ್ಯಾಗ್ರಹ ಮತ್ತು ಅದನ್ನು ಸರ್ಕಾರ ಎದುರಿಸಿದ ರೀತಿಯನ್ನು ಕಂಡು, ಸಮಿತಿಯ ಐವರು ಸಂಸದೇತರ ಸದಸ್ಯರು ಸಮಿತಿಯ ಕರಡು ತಯಾರಿಕಾ ಸಭೆಯನ್ನು ಬಹಿಷ್ಕರಿಸಿದರು. ಕೊನೆಗೆ ಸರ್ಕಾರ ಸಂಸತ್ತಿನ ಮುಂದೆ ತನ್ನದೇ ಲೋಕ್‍ಪಾಲ್ ಮಸೂದೆಯ ಕರಡನ್ನು ಮಂಡಿಸಿತು. ಇದನ್ನು ಒಪ್ಪದ ಸಮಿತಿಯ ಅಣ್ಣಾ ಹಜ಼ಾರೆಯವರು ಇದೀಗ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಾ ಕುಳಿತಿದ್ದಾರೆ. ಏನ್‍ಗುರು, ಏಪ್ರಿಲ್ ತಿಂಗಳಲ್ಲಿ ಅಣ್ಣಾ ಉಪವಾಸವನ್ನು ಬೆಂಬಲಿಸಿ ಒಂದು ಬರಹವನ್ನು ಪ್ರಕಟಿಸಿತ್ತು.. "ಈ ಹೋರಾಟ ಗೆಲ್ಲಲೇ ಬೇಕು" ಎಂದು. ಹೌದು, ಭ್ರಷ್ಟಾಚಾರದ ವಿರುದ್ಧದ ಹೋರಾಟ ಗೆಲ್ಲಲೇಬೇಕು. ಆದರೆ ದಿನಗಳೆದಂತೆ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಮತ್ತೊಂದು ಮಗ್ಗುಲಿನಿಂದ ಹೋರಾಟವನ್ನು ನೋಡಿದಾಗ ಬೇರೆಯೇ ಆಯಾಮ ಕಾಣುತ್ತಿದೆ! ನಮ್ಮ ನಿಲುವಿನಲ್ಲಿ ಭ್ರಷ್ಟಾಚಾರ ಅಳಿಯಬೇನ್ನುವುದರ ಬಗ್ಗೆ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಅಣ್ಣಾ ಹಜ಼ಾರೆಯವರು ಅನುಸರಿಸುತ್ತಿರುವ ಕ್ರಮ, ಭ್ರಷ್ಟಾಚಾರ ತಡೆಗೆ ಯೋಚಿಸುತ್ತಿರುವ ಒಂಬಡ್ಸ್‍ಮನ್ ಹುದ್ದೆ ಸೃಷ್ಟಿಯ ಪರಿಣಾಮಕಾರಿತನದ ಬಗ್ಗೆ, ಭ್ರಷ್ಟಾಚಾರವನ್ನು ಅಳಿಸಲು ಸಾಗಬೇಕಾದ ದಾರಿಯ ಬಗ್ಗೆ... ಬೇರೆಯೇ ಅನಿಸಿಕೆ ಮೂಡುತ್ತಿದೆ.

ಭ್ರಷ್ಟಾಚಾರ ಅಳಿಯಬೇಕು!

ಅಣ್ಣಾ ಮತ್ತವರ ಬೆಂಬಲಿಗರ ಮೂಲೋದ್ದೇಶವಾದ ಭ್ರಷ್ಟಾಚಾರ ಅಳಿಯಬೇಕು, ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ ಕೂಡಿಟ್ಟಿರುವ ಭಾರತದ ಹಣ ಹಿಂತಿರುಗಿ ತರಬೇಕೆನ್ನುವ ಬೇಡಿಕೆಯ ಬಗ್ಗೆ ಎರಡನೇ ಮಾತಿಲ್ಲ. ಭಾರತವು ಟ್ರಾನ್ಸ್‍ಪರೆನ್ಸಿ ಇಂಟರ್ ನ್ಯಾಶನಲ್ ಸಂಸ್ಥೆಯು ಬಿಡುಗಡೆ ಮಾಡಿರುವ ೨೦೧೦ರ ಪ್ರಪಂಚದಲ್ಲಿ ಭ್ರಷ್ಟಾಚಾರ ಕಡಿಮೆ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ೮೭ನೇ ಸ್ಥಾನದಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಡೆನ್ಮಾರ್ಕ್, ಸಿಂಗಾಪುರ್, ಆಸ್ಟೇಲಿಯಾ, ನ್ಯೂಜಿಲಾಂಡ್ ಮೊದಲಾದವು ಇವೆ. ಈ ಪಟ್ಟಿಯ ಮೇಲಿನ ಸ್ಥಾನದಲ್ಲಿ ಭಾರತ ಇರಬೇಕೆನ್ನುವುದು ನಮ್ಮಾಸೆಯೂ ಹೌದು. ದೇಶದ ಜನಸಾಮಾನ್ಯರು ಭ್ರಷ್ಟಾಚಾರದಿಂದ ಅನುಭವಿಸುತ್ತಿರುವ ಪಾಡು ಇಲ್ಲವಾಗಬೇಕೆನ್ನುವ ಬಗ್ಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ.

ಆದರೆ ಜನ್‍ಲೋಕಪಾಲ್ ವ್ಯವಸ್ಥೆಯು ಇಂಥಾ ಗುರಿ ಮುಟ್ಟಲು ಪರಿಣಾಮಕಾರಿಯಾಗಬಲ್ಲುದೇ? ಇಂತಹ ಮಸೂದೆ ರೂಪಿಸಲು ಹೋರಾಡುತ್ತಿರುವವರು ಅನುಸರಿಸುತ್ತಿರುವ ಮಾರ್ಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಾರದೇ? ಲೋಕಪಾಲರೆಂಬ ಪೋಲೀಸಿನ ಸೃಷ್ಟಿಗಿಂತಲೂ ಭ್ರಷ್ಟಾಚಾರ ಇಲ್ಲವಾಗಿಸಲು ಪರಿಣಾಮಕಾರಿಯಾದ ವಿಧಾನವಿಲ್ಲವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಸಮಾಧಾನದ ಉತ್ತರ ಕಂಡುಕೊಳ್ಳಬೇಕಾಗಿದೆ.

ಭ್ರಷ್ಟರನ್ನು ಶಿಕ್ಷಿಸುವ ಸಾಧನಕ್ಕಿಂತ ಭಷ್ಟತನ ಮಾಡಲಾಗದಂತಹ ವ್ಯವಸ್ಥೆ ಪರಿಣಾಮಕಾರಿ!

ಭ್ರಷ್ಟಾಚಾರ ಇಲ್ಲವಾಗಿಸಲು ಒಂದು ದಾರಿ ಭ್ರಷ್ಟರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದು. ಇದರಲ್ಲಿನ ತೊಡಕೆಂದರೆ ಹಾಗೆ ಶಿಕ್ಷಿಸುವವರು ಯಾರು? ಅವರೂ ಭ್ರಷ್ಟರಾಗುವುದಿಲ್ಲ ಎನ್ನಲು ಏನು ಭರವಸೆ? ಆಕಸ್ಮಾತ್ ಅವರೂ ಭ್ರಷ್ಟರಾದರೆ ಮುಂದೇನು? ಕಳ್ಳರನ್ನು ಹಿಡಿಯಲು ಪೊಲೀಸ್, ಪೊಲೀಸ್ರೇ ಕಳ್ಳರಾದರೆ ಅಂತಹಾ ಕಳ್ಳ ಪೊಲೀಸ್ರನ್ನು ಹಿಡಿಯಲು ಮತ್ತೊಂದು ಪೊಲೀಸ್.. ಅವರನ್ನು ಹಿಡಿಯ್ತಲು ಮತ್ತೊಂದು ಇಲಾಖೆ... ಹೀಗೆ ಕೊನೆಯಿರದ ಸುಳಿಯಿದು. ಆದರೆ ಇಂತಹಾ ವ್ಯವಸ್ಥೆಯೇ ಬೇಡವೇ? ಬೇಕು... ಇಂತಹ ವ್ಯವಸ್ಥೆಯೂ ಬೇಕು. ಅದು ಭ್ರಷ್ಟಾಚಾರ ನಿಯಂತ್ರಣದ ವ್ಯವಸ್ಥೆಯ ಒಂದು ಅಂಗವಾಗಿ ಅಷ್ಟೆ. ಆದರೆ ನಮಗೆ ಬೇಕಿರುವುದು ಇದಕ್ಕಿಂತಾ ಪರಿಣಾಮಕಾರಿಯಾದ ದಾರಿ. ಅದು ಭ್ರಷ್ಟತೆಗೆ ಅವಕಾಶವನ್ನೇ ಇಲ್ಲವಾಗಿಸುವ ವ್ಯವಸ್ಥೆ. ಇದರಲ್ಲಿ ತಂತ್ರಜ್ಞಾನದ ಉಪಯೋಗವನ್ನು ಬಳಸಿಕೊಳ್ಳುವುದು ಒಂದೊಳ್ಳೆ ಸಾಧನ. ಪ್ರತಿಯೊಂದನ್ನೂ ತಾನೇ ಮಾಡುತ್ತೇನೆನ್ನುವ ಸರ್ಕಾರ ಸರಿಯಾದ ಕಟ್ಟುಪಾಡು, ನೀತಿ ನಿಯಮ ರೂಪಿಸಲಷ್ಟೇ ತನ್ನ ಪಾತ್ರವನ್ನು ಸೀಮಿತಿಗೊಳಿಸಿಕೊಳ್ಳುವುದು ಮತ್ತೊಂದು ವಿಧಾನ.
ಉದಾಹರಣೆಗೆ ಹೇಳಬೇಕೆಂದರೆ ರಸ್ತೆಗಳಲ್ಲಿ ಅಲ್ಲಲ್ಲಿ ಜಂಕ್ಷನ್‍ಗಳಿದ್ದು ಪ್ರತಿಯೊಂದಕ್ಕೂ ಟ್ರಾಫಿಕ್ ಸಿಗ್ನಲ್ ಹಾಕಿ, ಅದನ್ನು ದಾಟುವವರಿಗೆ ದಂಡ ಹಾಕುವ ಪೋಲೀಸನನ್ನು, ಅವನು ಭ್ರಷ್ಟಾಚಾರ ಮಾಡದಂತೆ ತಡೆಯಲು ಇನ್ಸ್‍ಪೆಕ್ಟರ್‍‍ನನ್ನು ನೇಮಿಸುತ್ತಾ ಹೋಗುವುದಕ್ಕಿಂತಾ ದಾರಿಯಲ್ಲಿ ಸಿಗ್ನಲ್‍ಗಳೇ ಇರದ, ಫ್ಲೈ ಓವರ್‌ಗಳನ್ನು ನಿರ್ಮಿಸುವುದು ಹೇಗೆ ಹೆಚ್ಚು ಪರಿಣಾಮಕಾರಿಯೋ ಹಾಗೇ ಭ್ರಷ್ಟತೆಗೆ ಅವಕಾಶ ನೀಡದ... ಸರ್ಕಾರದ ಹಸ್ತಕ್ಷೇಪ ಕಡಿಮೆಯಿರುವ... ಲೈಸೆನ್ಸ್ ರಾಜ್‍ ಇಲ್ಲದ ವ್ಯವಸ್ಥೆಯನ್ನು ಕಟ್ಟುವುದು ಹೆಚ್ಚು ಪರಿಣಾಮಕಾರಿಯಾದ ರೀತಿ. ಇದಾಗದ ಹೊರತು ಲೋಕಪಾಲರಂತಹ ಎಷ್ಟೇ ಸಂಸ್ಥೆಗಳು ಬಂದರೂ, ದಿನಕ್ಕೆ ನೂರಾರು ಭ್ರಷ್ಟ್ರರನ್ನು ಜೈಲಿಗಟ್ಟಿದರೂ, ಭ್ರಷ್ಟರಿಗೆ ಮರಣದಂಡನೆಯೇ ಶಿಕ್ಷೆಯೆಂದರೂ ಹೆಚ್ಚು ಪರಿಣಾಮವಾಗದು. ಯಾಕೆಂದರೆ ‘ದುಡ್ಡು ತಿನ್ನುವ ಅವಕಾಶವಿದೆ, ತಿಂದರೆ ತಲೆ ತೆಗೆಯುತ್ತೇವೆ’ ಎನ್ನುವ ವ್ಯವಸ್ಥೆಯಿದ್ದರೆ ತಲೆ ಉಳಿಸಿಕೊಂಡು ತಿನ್ನುವ ಮತ್ತೊಂದು ಕಳ್ಳದಾರಿ ಹುಡುಕುತ್ತಾರೆಯೇ ಹೊರತು ಶಿಕ್ಷೆಯ ಭಯದಿಂದ ತಿನ್ನದೇ ಇರುವುದನ್ನಲ್ಲ!

ಅಣ್ಣಾ ಹೋರಾಟದ ಬಗ್ಗೆ!

ಮೂಲತಃ ಉಪವಾಸ, ಸತ್ಯಾಗ್ರಹ ಎನ್ನುವುದೆಲ್ಲಾ ಅಸಂವಿಧಾನಿಕ ಅನ್ನುವುದಕ್ಕಿಂತಲೂ, ನಮಗೆ ನೀತಿನಿಯಮ ರೂಪಿಸಿಕೊಳ್ಳಲು ಸಂವಿಧಾನ, ಪ್ರಜಾಪ್ರಭುತ್ವಗಳು ಅವಕಾಶ ಕೊಟ್ಟಿರುವಾಗಲೂ ಆ ಹಾದಿ ಕಠಿಣವೆಂದು ಅದನ್ನು ಬಿಟ್ಟು ಬಳಸುವ ಅಡ್ಡದಾರಿಯಾಗಬಾರದು ಎನ್ನುವ ಕಳಕಳಿ ನಮ್ಮಲ್ಲಿರಬೇಕಾಗಿದೆ. ಕಾನೂನು ಮಾಡುವ ಅಧಿಕಾರ ಶಾಸಕಾಂಗಕ್ಕೆ ಇದ್ದಾಗ ಉಪವಾಸದ ಬೆದರಿಕೆಯ ಮಾರ್ಗದಿಂದ ಕಾನೂನು ಮಾಡುವ ಅಧಿಕಾರ ಗಿಟ್ಟಿಸಿಕೊಳ್ಳುತ್ತೇನೆ ಎನ್ನುವುದು ಎಷ್ಟು ಸರಿ? ಜನಜಾಗೃತಿ ಮೂಡಿಸಲು ಸತ್ಯಾಗ್ರಹ ಮಾಡುತ್ತೇನೆ ಎನ್ನುವುದನ್ನು ಹೇಗಾದರೂ ಬೆಂಬಲಿಸಬಹುದೇನೋ, ಆದರೆ ಕಾನೂನು ಮಾಡಲು ಉಪವಾಸ ಮಾಡುತ್ತೇನೆ ಎನ್ನುವುದು ಅರಗಿಸಿಕೊಳ್ಳಲಾಗದ ಅಡ್ಡ ಪರಿಣಾಮಕ್ಕೆ ಕಾರಣವಾದೀತು. ‘ನಾನು ಹೇಳುವ ಶರತ್ತುಗಳನ್ನು ಒಪ್ಪಿಕೊಳ್ಳಿ, ಇಲ್ಲದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎನ್ನುವುದಕ್ಕೂ ‘ನಾ ಹೇಳಿದಂತೆ ನಡೆಯಿರಿ, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವುದಕ್ಕೂ ಹೆಚ್ಚಿನ ವ್ಯತ್ಯಾಸ ಕಾಣದು. ಅಣ್ಣಾ ಹಜ಼ಾರೆಯವರ ಪ್ರಾಮಾಣಿಕತೆ, ಬದ್ಧತೆಗಳೇನೆ ಇದ್ದರೂ... ಅವರ ಉಪವಾಸದ ಉದ್ದೇಶವು ಜನಜಾಗೃತಿಯಲ್ಲದೆ, ‘ತನ್ನ ಮಾತಿನಂತೆ ಮಸೂದೆ ಮಂಡಿಸಲೇಬೇಕು’ ಎನ್ನುವುದಾದರೆ ಒಪ್ಪುವುದು ಹೇಗೆ?

ಅವರನ್ನು ಬೆಂಬಲಿಸುವ ರಾಜಕೀಯ ಪಕ್ಷಗಳಾದರೂ ಈಗಲೇ ತಮ್ಮ ಪಕ್ಷಗಳ ಆರು ಸಂಸದರ ರಾಜಿನಾಮೆ ಪಡೆದು, ಆ ಕ್ಷೇತ್ರಗಳಿಂದ ಇವರನ್ನು ಕಣಕ್ಕಿಳಿಸಿ, ಚುನಾವಣೆ ಗೆಲ್ಲಿಸಿ ಸಂಸತ್ತಿಗೆ ಕಳಿಸಲಿ. ಸಂಸದರಾದ ಮೇಲೆ ಜನಲೋಕಪಾಲ ಮಸೂದೆಯ ಕರಡು ಪ್ರತಿಯನ್ನು ಜನಕ್ಕೆ ಉಪಯೋಗವಾಗುವ ಹಾಗೆ ತಮ್ಮ ಅನಿಸಿಕೆಯಂತೆ, ಬೇಕಾದ ಹಾಗೆ ರಚಿಸಲಿ. ಅಂತಹ ಕರಡು ಎರಡೂ ಸದನಗಳಲ್ಲಿ ಅಂಗೀಕಾರವಾಗಿ ಕಾಯ್ದೆಯಾಗಲೀ... ಇದೇ ಸರಿಯಾದ ದಾರಿ. ಇಂದು ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಅಣ್ಣಾ ಹಜ಼ಾರೆಯವರು ಮೂಡಿಸುತ್ತಿರುವ ಜಾಗೃತಿ ನಾಳೆಯ ಚುನಾವಣೆಗಳ ಮತದಾನದ ಮುಖ್ಯ ವಿಷಯವಾಗಲಿ... ಅದಲ್ಲದೇ ಸತ್ಯಾಗ್ರಹಗಳ ಮೂಲಕ, ಬಂದ್‍ಗಳ ಮೂಲಕ, ನಾವುಗಳೇ ರೂಪಿಸಿಕೊಂಡ ಕಾನೂನುಗಳನ್ನು ಮುರಿಯುವ ಮೂಲಕ ಸಾಧಿಸಲು ಮುಂದಾಗುವುದು ಸರಿಯೇ ಎಂಬುದೇ ನಾವು ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆ!

"e - ಆಡಳಿತ" ಅಂದ್ರೆ ಇಂಗ್ಲೀಶ್ ಆಡಳಿತಾನಾ?

- ವಿಕ್ರಮ್ ಹೆಗ್ಡೆ, ರಾಷ್ಟ್ರೀಯ ಕಾನೂನು ವಿದ್ಯಾಲಯದಿಂದ ಕಾನೂನು ಪದವೀಧರರು




E-governance ಅಥವಾ E- ಆಡಳಿತದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕೇಳಿಬರ್ತಿದೆ ಅಲ್ವ? ಏನು ಈ ಇ- ಗವರ್ನೆನ್ಸ್ ಅಂದರೆ? ಸಾಮಾನ್ಯವಾಗಿ ಎಲ್ಲರೂ ಇದನ್ನ electronic governance ಅಂತ ವಿಸ್ತರಿಸಿ, ಸರ್ಕಾರೀ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ದೊರಕಿಸುವುದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಆದರೆ ನಮ್ಮ ರಾಜ್ಯದಲ್ಲಿ ಇದನ್ನು ಅಳವಡಿಸಿರುವ ಪರಿ ನೋಡಿದ್ರೆ ಬೇರೇನೇ ಅಭಿಪ್ರಾಯ ಬರಬಹುದು. ಇ-ಗವರ್ನೆನ್ಸ್ ನ ವಿಸ್ತಾರ ರೂಪ English governance ಇದ್ದಿರಬಹುದೇನೋ ಎಂದೆನಿಸುತ್ತೆ. ಕುಶಾಲಿಗಲ್ಲ! ಅಂಕಿ ಅಂಶಗಳ ಸಹಿತ ವಿವರಿಸುತ್ತೇನೆ ನೋಡಿ.

ಕರ್ನಾಟಕದ ತಾಣಗಳ ಹಣೆಬರಹ!

ಇಲ್ಲಿ ನೋಡಿ. ಇದರಲ್ಲಿ ಕರ್ನಾಟಕದ ಎಲ್ಲ ಇ-ಗವರ್ನೆನ್ಸ್ ಯೋಜನೆಗಳ ಪಟ್ಟಿ ಇದೆ. ಈ ವೆಬ್ಸೈಟ್ ಯಾವ ಭಾಷೆಯಲ್ಲಿದೆ ನೋಡಿ. ಎಲ್ಲಾದರೂ 'ಕನ್ನಡ ಆವೃತ್ತಿ' ಅಂತ ಕೊಂಡಿಯಾದ್ರೂ ಕಂಡು ಬರುತ್ತಿದೆಯಾ? ಹೋಗಲಿ, ಇವರ E - ಆಡಳಿತ ಹುಡುಕಿಕೊಂಡು ಯಾರಾದರೂ ಆ ತಾಣಗಳಿಗೆ ಹೋದ್ರೆ ಅವರಿಗೆ ಸಿಗೋದು ಏನು ಗೊತ್ತಾ? ಅಲ್ಲಿರುವ ೧೫ ಕೊಂಡಿಗಳಲ್ಲಿ ೪ ಮಾತ್ರ ಕನ್ನಡ ಆವೃತ್ತಿಗೆ ಅವಕಾಶ ಮಾಡಿಕೊಡುತ್ತವೆ. ನೆನಪಿರಲಿ ಇವು ಯಾವು ನೇರವಾಗಿ ಕನ್ನಡದಲ್ಲಿ ಮೂಡಿ ಬರಲ್ಲ. ಬಂದಮೇಲೆ ಕನ್ನಡ ಆವೃತ್ತಿ ಎಲ್ಲಿ ಸಿಗಬಹುದು ಅಂತ ನಾವೇ ಹುಡುಕಿಕೊಳ್ಳಬೇಕು.

ಅಲ್ಲೇ police constable ಸೇರ್ಪಡೆಗೆ ಪ್ರಕಟಣೆ ಇದೆ ನೋಡಿ. ಇದು ಕೂಡಾ ಕನ್ನಡದಲ್ಲಿಲ್ಲ. ಆ ವೆಬ್ಸೈಟ್ ಬರೀ ಇಂಗ್ಲಿಶಿನಲ್ಲಿದೆಯ? ಇಲ್ಲ, ಇನ್ನೊಂದು ಭಾಷೆ ಕೂಡ ಇದೆ. ಹಿಂದಿ. ಏನಿದರ ಅರ್ಥ?

ಇನ್ನೊಂದು ನೋಡಿ. ಇದು ಎಲ್ಲ ಜಿಲ್ಲಾಡಳಿತಗಳ ಅಂತರ್ಜಾಲ ತಾಣಗಳ ಪಟ್ಟಿ. ಕೆಲವು ಜಿಲ್ಲಾ ಪಂಚಾಯ್ತಿಗಳ ವೆಬ್ಸೈಟ್ ಕೂಡಿ ಒಟ್ಟು ೩೪ ಇವೆ. ಇದರಲ್ಲಿ ಎಷ್ಟು ಕನ್ನಡದಲ್ಲಿದೆ?

ಸೊನ್ನೆ.

ಇಲಾಖೆಗಳ ಅಂತರ್ಜಾಲ ತಾಣಗಳು? ಇದರಲ್ಲಿ ನಾನು ನೋಡಿದ ಪೈಕಿ ನಾಲ್ಕೈದು ಬಿಟ್ಟರೆ ಮತ್ತೆಲ್ಲ English governance ರೂಪದಲ್ಲೇ ಇವೆ.

ತಂತ್ರಜ್ಞಾನ ಜನರ ಬದುಕನ್ನು ಸರಳಗೊಳಿಸಬೇಕು!

ನಿಜವಾಗಿಯೂ ತಂತ್ರಜ್ಞಾನ ಎಲ್ಲೆಲ್ಲಿ ಸಾಧ್ಯನೋ ಅಲ್ಲೆಲ್ಲ ಉಪಯೋಗಿಸಿಕೊಳ್ಳಬೇಕು. ಇನ್ನು ಹೇಳ್ಬೇಕು ಅಂದ್ರೆ ಜನರು ಸರ್ಕಾರಿ ಕಚೇರಿ ತಿರುಗಾಡೋ ಪ್ರಸಂಗವೇ ಬರಬಾರದು. ಆದರೆ ಈ ಸೌಕರ್ಯನ ಬರೀ ಇಂಗ್ಲಿಷ್ ಭಾಷೇಲಿ ಕೊಟ್ರೆ ಏನು ಪ್ರಯೋಜನ ಹೇಳಿ?

ಇದನ್ನ ಈ ಮುಂಚೆ ಒಮ್ಮೆ ನಾನು ನಮ್ಮ ನ್ಯಾಯಾಲಯಗಳ ವಿಷಯದಲ್ಲಿ ಒಬ್ಬ ನ್ಯಾಯಮೂರ್ತಿಗಳ ಹತ್ತಿರ ಕೇಳಿದಾಗ "ಕನ್ನಡ ಆವೃತ್ತಿನೂ ಇರುತ್ತೆ, ನಿಮಗೆ ಸರಿಯಾಗಿ ಹುಡುಕಲಿಕ್ಕೆ ಬಂದಿರುವುದಿಲ್ಲ" ಅಂದರು. ಕಾನೂನು ಕಲಿಕೆಯ ಮೊದಲನೆಯ ಸಾಲಿನಲ್ಲಿದ್ದ ನಾನು ಹೀಗೇ ಇರಬಹುದೇನೋ ಎಂದುಕೊಂಡೆ. ಇರಲಿ, ನಾನು ಈ ವಿಷಯದಲ್ಲಿ ದಡ್ಡನೇ ಆಗಿರಬಹುದು. ಆದರು ದಡ್ಡನಿಗೂ ತಿಳಿವಂತೆ ಸೌಲಭ್ಯಗಳನ್ನು ದೊರಕಿಸುವುದು ಸರಕಾರದ ಕರ್ತವ್ಯವಲ್ಲವೇ?

ಇನ್ನು UID ಬರುತ್ತಿದೆ. ಯೋಜನೆಯ ಪ್ರಕಾರ ನಡೆದರೆ ಮುಂದೆ ಹೆಚ್ಚು ಹೆಚ್ಚು ಸರಕಾರೀ ಸೌಲಭ್ಯಗಳು ಇ-ಗವರ್ನೆನ್ಸ್ ಮೂಲಕವೇ ಲಭ್ಯವಾಗುತ್ತವೆ. ಆಗಲೂ ಇದೇ ಧೋರಣೆ ಮುಂದುವರೆದರೆ ಕನ್ನಡಿಗರಿಗೆ ಬಹಳ ಅನಾನುಕೂಲವೇ ಆದೀತು.

ಕಲಿಕೆಯ ಮಾಧ್ಯಮ ಮತ್ತು ರಾಜ್ಯಸರ್ಕಾರದ ಹೊಣೆಗಾರಿಕೆ!

ಕರ್ನಾಟಕ ರಾಜ್ಯಸರ್ಕಾರದ ಶಿಕ್ಷಣ ಮಂತ್ರಿಗಳಾದ ಮಾನ್ಯಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ರಾಜ್ಯದಲ್ಲಿ ಆರನೇ ತರಗತಿಯಿಂದ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರು ಮಾಡುವ ಬಗ್ಗೆ ತುಮಕೂರಿನಲ್ಲಿ ನೀಡಿರುವ ಹೇಳಿಕೆ ದುರದೃಷ್ಟಕರವಾಗಿದೆ. ಶ್ರೀಯುತರು ತಮ್ಮ ಹೇಳಿಕೆಯಲ್ಲಿ “ಜನರಿಂದ ಬೇಡಿಕೆ ಬಂದಲ್ಲಿ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಆರನೇ ತರಗತಿಯಿಂದ ಆರಂಭಿಸುತ್ತೇವೆ. ಇದು ಸರ್ಕಾರದ ಭಾಷಾನೀತಿಗೆ ವಿರುದ್ಧವಾಗಿಲ್ಲ, ಏಕೆಂದರೆ ಸರ್ಕಾರದ ಭಾಷಾನೀತಿ ಒಂದರಿಂದ ಐದನೇ ತರಗತಿಯವರೆಗಿನ ಕಲಿಕೆಗೆ ಮಾತ್ರಾ ಅನ್ವಯವಾಗುತ್ತದೆ” ಎಂದಿದ್ದಾರೆ. ಮಂತ್ರಿಗಳ ಹೇಳಿಕೆಗಳನ್ನು ಗಮನಿಸಿದಾಗ ಸರ್ಕಾರವು ಶಿಕ್ಷಣದಲ್ಲಿನ ಭಾಷಾನೀತಿಯ ಬಗ್ಗೆ ಹೊಂದಿರುವ ನಿಲುವನ್ನು ಸಡಿಲಗೊಳಿಸುತ್ತಿರುವುದು ಕಾಣುತ್ತದೆ ಮತ್ತು ತಪ್ಪುದಾರಿಯೆಡೆಗೆ ನಾಡನ್ನು ಒಯ್ಯುತ್ತಿರುವಂತೆ ತೋರುತ್ತದೆ.

ಶಿಕ್ಷಣ ವ್ಯವಸ್ಥೆ ಮತ್ತು ಸರ್ಕಾರ

ಕನ್ನಡ ಜನರ ಪ್ರತಿನಿಧಿಯಾಗಿ ನಮ್ಮ ರಾಜ್ಯಸರ್ಕಾರವಿದೆ. ಈ ನಾಡಿನ ಪ್ರಜೆಗಳನ್ನು ಪೊರೆಯುವ ಹೊಣೆಯೊಂದಿಗೆ ನಾಡಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಹೊಣೆಗಾರಿಕೆಯೂ ಸರ್ಕಾರದ್ದು. ಇಂಥಾ ಹೊಣೆಗಾರಿಕೆಯ ಅಂಗವೇ ನಾಡಿನ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು. ಸರ್ಕಾರವು ತನ್ನ ನಾಡಿನ ಮಕ್ಕಳಿಗೆ ಕಲಿಕೆಯಲ್ಲಿ ಏನಿರಬೇಕು ಎಂದೂ, ಪ್ರಪಂಚದ ಎಲ್ಲ ಅರಿಮೆ ತನ್ನ ನಾಡಿನ ಮಕ್ಕಳಿಗೆ ಸಿಗುವಂತೆ ಮಾಡಲು ಏನೇನು ಮಾಡಬೇಕು ಎಂದೂ ಯೋಚಿಸಿ, ಯೋಜಿಸಿ ಜಾರಿಗೊಳಿಸಬೇಕು. ಪ್ರಜಾಪ್ರಭುತ್ವ ರಾಷ್ಟ್ರವೊಂದರಲ್ಲಿ ಇಂಥಾ ಮೂಲಭೂತ ಹೊಣೆಗಾರಿಕೆ ಆಯಾ ನಾಡಿನ ಸರ್ಕಾರಗಳು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕರ್ನಾಟಕದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ರಾಜ್ಯಸರ್ಕಾರ ಹೊತ್ತಿರುವುದು ಸರಿಯಾಗಿದೆ. ಆದರೆ ನಿಭಾಯಿಸುತ್ತಿರುವ ರೀತಿ ನಿರಾಶಾದಾಯಕವಾಗಿದೆ.

ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ...

ಪ್ರಪಂಚದ ಮುಂದುವರೆದ ನಾಡುಗಳಲ್ಲೆಲ್ಲಾ ಕಲಿಕೆಯೆಂಬುದು ತಾಯ್ನುಡಿಯಲ್ಲೇ ಇರುವುದನ್ನು ನಾವು ಬಹುತೇಕ ಕಡೆ ನೋಡಬಹುದು. ಜಪಾನ್, ಚೀನಾ, ಇಂಗ್ಲೇಂಡು, ಫ್ರಾನ್ಸ್, ಜರ್ಮನಿ... ಮೊದಲಾದ ಅನೇಕ ದೇಶಗಳು ಇದಕ್ಕೆ ಉದಾಹರಣೆಯಾಗಿ ನಿಂತಿವೆ. ಯುನೆಸ್ಕೋ ಕೂಡಾ ತಾಯ್ನುಡಿಯಲ್ಲಿನ ಕಲಿಕೆಗೆ ಒತ್ತು ನೀಡಿ ನಿಲುವನ್ನು ಘೋಷಿಸಿದೆ. ಪ್ರಪಂಚದ ನಾನಾ ವಿಜ್ಞಾನಿಗಳು, ಮನಶ್ಶಾಸ್ತ್ರಜ್ಞರು, ಭಾಷಾ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಈ ಬಗ್ಗೆ ಗೊಂದಲವಿಲ್ಲದ ಒಂದೇ ತೆರನಾದ ಅನಿಸಿಕೆ ಹೊಂದಿದ್ದಾರೆ. ಕರ್ನಾಟಕ ರಾಜ್ಯಸರ್ಕಾರವೂ ಸುಪ್ರಿಂಕೋರ್ಟಿನ ಒಂದು ಆಶಯದಂತೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತುಕೊಟ್ಟು ಭಾಷಾನೀತಿ ರೂಪಿಸಿಕೊಂಡಿದೆ. ಹಾಗಾಗಿ ತಾಯ್ನುಡಿಯಲ್ಲಿ ಕಲಿಕೆಯು ಪರಿಣಾಮಕಾರಿ ಎನ್ನುವುದರ ಬಗ್ಗೆ ಈ ಹಿನ್ನೆಲೆಯಲ್ಲಿ ಯಾವ ಅಪಸ್ವರವೂ ಇಲ್ಲ ಎನ್ನುವುದು ವಾಸ್ತವವಾಗಿದೆ. ಅಷ್ಟೇ ಏಕೆ ಯಾವುದೇ ವಿಷಯವನ್ನು ನಮ್ಮ ತಾಯ್ನುಡಿಯಲ್ಲಿ ಕಲಿಯುವುದು ಸಮರ್ಪಕವೂ ಸುಲಭವೂ ಆಗಿದೆಯೆನ್ನುವುದು ಎಲ್ಲರಿಗೂ ಅನುಭವ ವೇದ್ಯವಾಗಿದೆ.

ಕರ್ನಾಟಕದ ಪರಿಸ್ಥಿತಿ

ಕರ್ನಾಟಕದಲ್ಲಿ ಇಂದೂ ಸುಮಾರು ನೂರಕ್ಕೆ ೮೫ಕ್ಕೂ ಹೆಚ್ಚು ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುತ್ತಿದ್ದಾರೆ. ಆದರೆ ಅನೇಕರಲ್ಲಿ “ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಯುವುದರಿಂದ ಉನ್ನತ ಶಿಕ್ಷಣ ಸರಳವಾಗುತ್ತದೆ, ಮಕ್ಕಳು ಬುದ್ಧಿವಂತರಾಗುತ್ತಾರೆ, ಒಳ್ಳೆಯ ಕೆಲಸಗಳು ಸಿಗುತ್ತವೆ” ಎನ್ನುವ ಅನಿಸಿಕೆಯಿದೆ. ವಾಸ್ತವವಾಗಿ ಇವುಗಳಲ್ಲಿ ಕೆಲವಲ್ಲಿ ಹುರುಳೂ ಇಲ್ಲದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದಲ್ಲಿ ಮಾತ್ರವೇ ಉನ್ನತ ಶಿಕ್ಷಣವಿರುವಾಗ ಅದಕ್ಕೆ ಹೋಗುವಾಗ ತೊಡಕಾಗುತ್ತದೆ ಎನ್ನುವುದು ದಿಟ. ವಾಸ್ತವವಾಗಿ ಉನ್ನತ ಶಿಕ್ಷಣವೂ ಸೇರಿದ ಹಾಗೆ ಎಲ್ಲ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕೆಂಬುದೇ ಸರಿಯಾದದ್ದಾದರೂ ಇಂದು ಪರಿಸ್ಥಿತಿ ಹಾಗಿಲ್ಲ ಅನ್ನುವುದು ವಾಸ್ತವ. ಹಾಗಾದರೆ ಈ ಕಲಿಕಾಮಾಧ್ಯಮ ಬದಲಾವಣೆಯೆನ್ನುವುದನ್ನು ಸಲೀಸಾಗಿ ಆಗಿಸುವಂತಹ ಒಂದು ತಾತ್ಕಾಲಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ. ಒಂದು ಹಂತದವರೆಗೆ ಕನ್ನಡದಲ್ಲಿ ಕಲಿಕೆ ನಡೆಯಿಸಿ, ಇಂಗ್ಲೀಶ್ ಭಾಷೆಯನ್ನು ಸರಿಯಾಗಿ ಕಲಿಸುವುದರ ಮೂಲಕ ತೊಡಕನ್ನು ಕಡಿಮೆ ಮಾಡಿಸಬಹುದಾಗಿದೆ. ಕನ್ನಡದಲ್ಲೇ ಕಲಿತ ಪೋಶಕರನೇಕರು ತಾವು ಇಂಗ್ಲೀಶ್ ಬರದೆ ಅನುಭವಿಸಿದ್ದ ಪಾಡು ನೆನೆದು ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸಲು ಸಜ್ಜಾಗುತ್ತಾರೆ. ಹಾಗೆ ಮಾಡುವ ಭರದಲ್ಲಿ ಮಗುವಿನ ವಾತಾವರಣವನ್ನೇ ಬದಲಿಸಲೂ ಮುಂದಾಗುತ್ತಾರೆ. ಹೀಗೆ ಪರಿಸರದ ನುಡಿಯೇ ಬದಲಾಗುವುದಾದರೆ ಮಗುವಿನ ಇಂಗ್ಲೀಶಿನಲ್ಲಿನ ಕಲಿಕೆ ಸಲೀಸೇ.. ಆದರೆ ಇಡೀ ಕನ್ನಡನಾಡಿನ ಪರಿಸರವನ್ನು ಬದಲಿಸಲಾಗದಲ್ಲಾ? ಇಂದು ಪರಿಸರದಲ್ಲಿ ಇಂಗ್ಲೀಶಿನ ಗಂಧಗಾಳಿಯಿಲ್ಲದ ಮಗುವನ್ನು ಇಂಗ್ಲೀಶ್ ಮಾಧ್ಯಮದ ಕಲಿಕೆಗೆ ಒಡ್ಡುವುದು ’ಈಜು ಬಾರದ ಕೂಸನ್ನು ನೀರಲ್ಲಿ ಮುಳುಗಿಸಿ ಕೊಂದಂತೆ’! ಹಾಗಾಗಿ ಪೋಶಕರು ಇಂಗ್ಲೀಶ್ ಮಾಧ್ಯಮಕ್ಕೆ ಸೇರಿಸುವ ಮುನ್ನ ತಮ್ಮ ಮಕ್ಕಳು ಕನ್ನಡವೂ ಬಾರದ, ಇಂಗ್ಲೀಶಿನಲ್ಲೂ ಪರಿಣಿತಿಯಿಲ್ಲದೇ ಎಡಬಿಡಂಗಿಗಳಾಗುವ ಅಪಾಯವನ್ನು ಮನಗಾಣಬೇಕಾಗಿದೆ. ಇದನ್ನು ತಿಳಿಸಿ ಹೇಳುವವರಾರು? ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿಯಲಿ, ಆದರೆ ಇಂಗ್ಲೀಶ್ ಮಾಧ್ಯಮಕ್ಕೆ ಮುಂದೆ ಬದಲಾಗುವಾಗ ತೊಡಕಾಗದಂತೆ ಜೊತೆಯಲ್ಲಿ ಇಂಗ್ಲೀಶನ್ನೂ ಕಲಿಸುತ್ತೇವೆ ಎನ್ನುವ ಭರವಸೆಯನ್ನು ಕೊಡಬೇಕಾದದ್ದು ಕರ್ನಾಟಕ ರಾಜ್ಯ ಸರ್ಕಾರ.

ಬುದ್ಧಿವಂತರಾಗುತ್ತಾರೆ ಅನ್ನೋ ಮಾರುಕಟ್ಟೆ ತಂತ್ರ!

ಮಕ್ಕಳು ಬುದ್ಧಿವಂತರಾಗುತ್ತಾರೆ ಎನ್ನುವುದು ಇಂಗ್ಲೀಶ್ ಮಾಧ್ಯಮ ಶಾಲೆಗಳು ತಮ್ಮ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಹಬ್ಬಿಸಿರುವ ಪೊಳ್ಳು ವದಂತಿ. ವಾಸ್ತವವಾಗಿ ತಾಯ್ನುಡಿಯಲ್ಲಿ ಕಲಿತ ಮಕ್ಕಳು “ಕಾನ್ಸೆಪ್ಚುಯಲ್ ಥಿಂಕಿಂಗ್”ನಲ್ಲಿ (ತಿರುಳು ಚಿಂತನೆ/ ಕಲಿಕೆಯಲ್ಲಿ) ಅತ್ಯುತ್ತಮರಾಗಿರುತ್ತಾರೆ ಎನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಟುಸ್ ಪುಸ್ ಇಂಗ್ಲೀಶ್ ಮಾತಾಡುವುದನ್ನೇ ಬುದ್ಧಿವಂತಿಕೆ ಎಂದು ನಂಬುವ ಅಮಾಯಕ ತಾಯ್ತಂದೆಯರು ಇಂಗ್ಲೀಶ್ ಮಾಧ್ಯಮದ ಮೊರೆ ಹೋಗುವುದು ಸಹಜ. ಈ ಪೊಳ್ಳನ್ನು ದೂರಮಾಡುವ ಹೊಣೆಗಾರಿಕೆ ಯಾರದ್ದು? ಕರ್ನಾಟಕ ರಾಜ್ಯ ಸರ್ಕಾರದ್ದು.. ಅಲ್ಲವೇ?

ಒಳ್ಳೇ ದುಡಿಮೆಯ ಅವಕಾಶ

ಇನ್ನು ಮೂರನೆಯ ಅನಿಸಿಕೆ ಎಂದರೆ ಒಳ್ಳೆಯ ಕೆಲಸಗಳು ಸಿಗುತ್ತವೆ ಎನ್ನುವುದು. ಹೌದೂ, ಓದಿನಲ್ಲಿ ಹೆಚ್ಚಿನ ಅಂಕ ಪಡೆದು, ಸಂದರ್ಶನದಲ್ಲಿ ಚೆನ್ನಾಗಿ ಪಾಲ್ಗೊಳ್ಳುವವರಿಗೆ ಒಳ್ಳೆ ಕೆಲಸ ಸಿಗುವುದು ಸಹಜ. ಆದರೆ ಹೀಗೆ ಒಳ್ಳೆಯ ಅಂಕ ಗಳಿಸಲಾಗಲೀ, ಸಂದರ್ಶನದಲ್ಲಿ ಚೆನ್ನಾಗಿ ಮಾಡಲಾಗಲೀ ಬೇಕಿರುವುದು ಆತ್ಮವಿಶ್ವಾಸ ಮತ್ತು ಅರಿವು ಎನ್ನುವುದು ಇಂತಹ ಸಂದರ್ಶನಗಳನ್ನು ಎದುರಿಸಿದ ಮತ್ತು ನಡೆಸುತ್ತಿರುವವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಜನರು, ಒಳ್ಳೆಯ ಕೆಲಸ ದಕ್ಕಿಸಿಕೊಳ್ಳಲು ಇಂಗ್ಲೀಶ್ ಭಾಷೆಯ ಕಲಿಕೆ ಸಾಕೋ, ಇಂಗ್ಲೀಶ್ ಮಾಧ್ಯಮದಲ್ಲಿ ಕಲಿಕೆ ಬೇಕೋ ಎಂಬುದನ್ನು ಯೋಚಿಸಿ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಇಂತಹ ಪರಿಣಿತಿಯನ್ನು, ನಿಮ್ಮ ಮಕ್ಕಳಿಗೆ ಅವರು ’ಕನ್ನಡ ಮಾಧ್ಯಮದಲ್ಲಿ ಕಲಿಕೆಯನ್ನು ಮಾಡುತ್ತಿರುವಾಗಲೂ’ ಒದಗಿಸಿಕೊಡುವ ಹೊಣೆಗಾರಿಕೆ ನಮ್ಮದು ಎನ್ನಬೇಕಾಗಿದೆ. ಯಾರು ಹೀಗೆನ್ನಬೇಕೆಂದರೆ ಅದು ಕರ್ನಾಟಕ ರಾಜ್ಯಸರ್ಕಾರ.

ಯಾವ ಕಟ್ಟುಪಾಡನ್ನೂ ಒಪ್ಪಬೇಕಿಲ್ಲ!

ಇವೆಲ್ಲಾ ಮಾಡುತ್ತಲೇ ಕನ್ನಡದಲ್ಲಿ ಕಲಿಕೆಯನ್ನು ಇಂದು ಪ್ರಾಥಮಿಕ ಹಂತದವರೆಗೆ ಕಡ್ಡಾಯ ಎನ್ನುವ ನಿಲುವನ್ನು ಹೊಂದಿದ್ದರೂ ಕಡ್ಡಾಯದ ಕಟ್ಟುಪಾಡು ಬಿಟ್ಟು ಕನ್ನಡದ ಕಲಿಕೆಯನ್ನು ಉನ್ನತ ಶಿಕ್ಷಣದವರೆಗೂ ವಿಸ್ತರಿಸಬೇಕಾದ ಹೊಣೆ ಸರ್ಕಾರದ್ದೇ ಆಗಿದೆ. ಹಾಗಿರುವಾಗ ’ನಮ್ಮ ಭಾಷಾನಿಯಮ ಬರೀ ಐದನೇ ತರಗತಿವರೆಗೆ ಮಾತ್ರಾ ಅನ್ವಯವಾಗುತ್ತೆ, ಹಾಗಾಗಿ ಆರರಿಂದ ಇಂಗ್ಲೀಶ್ ಮಾಧ್ಯಮ ಮಾಡ್ತೀವಿ’ ಅನ್ನೋದು ಆತ್ಮವಂಚನೆ ಮಾತ್ರವಲ್ಲಾ, ಆತ್ಮವಿಶ್ವಾಸದ ಕೊರತೆಯೂ ಹೌದು. ಸರ್ಕಾರಕ್ಕೆ ಕನ್ನಡ ಮಾಧ್ಯಮದ ಕಲಿಕೆಯಿಂದ ಕನ್ನಡಿಗರ ಬದುಕನ್ನು ಹಸನುಗೊಳಿಸಲು ಅಸಾಧ್ಯ ಅನ್ನಿಸಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಮಾಧ್ಯಮ ಆರಂಭಿಸಲಿ. ಹಾಗೆ ಆರಂಭಿಸುವ ಮುನ್ನ ಪರಿಸರದ ನುಡಿಯಲ್ಲಿನ ಕಲಿಕೆಗಿಂತಾ ಪರಭಾಷಾ ಮಾಧ್ಯಮವೊಂದರ ಮೂಲಕ ಯಾವುದೇ ಜನಾಂಗದ ಕಲಿಕೆ ಅತ್ಯುತ್ತಮವಾಗುತ್ತದೆ ಎನ್ನುವುದಕ್ಕೆ ಒಂದು ವೈಜ್ಞಾನಿಕ ಅಧ್ಯಯನದ ಆಧಾರ ಕೊಡಲಿ. ಈ ಹೊಣೆಗಾರಿಕೆ ಕರ್ನಾಟಕ ಸರ್ಕಾರದ್ದು!

ಬಲು ಮುಖ್ಯವಾಗಿ ಮೇಲಿನ ಮೂರು ಕಾರಣಗಳಿಂದಾಗಿ ಕನ್ನಡಿಗ ಪೋಶಕರು ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೇರಿಸುವತ್ತ ಒಲವು ತೋರುತ್ತಿದ್ದಾರೆ. ತಾಯಿ ತಂದೆಯರಿಗೆ ತಮ್ಮ ಮಕ್ಕಳ ಕಲಿಕಾ ಮಾಧ್ಯಮವನ್ನು ತೀರ್ಮಾನಿಸುವ ಹಕ್ಕಿದೆ ಎನ್ನುವುದು ಖಂಡಿತಾ ಒಪ್ಪುವಂತಹುದ್ದೇ ಆಗಿದೆ. ಇಂಗ್ಲೀಶ್ ಭಾಷೆಯಲ್ಲಿನ ಪರಿಣಿತಿ ತಂದುಕೊಡುವ ಲಾಭಕ್ಕೂ, ಇಂಗ್ಲೀಶ್ ಮಾಧ್ಯಮದ ಕಲಿಕೆ ಉಂಟುಮಾಡುವ ನಷ್ಟಕ್ಕೂ ನಡುವಿನ ವ್ಯತ್ಯಾಸವನ್ನು ಮನದಟ್ಟು ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ಸಮಾನತೆಯ ಆಕರ್ಶಕವಾದ “ಸಿರಿವಂತರಿಗೆ ಸಿಗುತ್ತಿರುವ ಇಂಗ್ಲೀಶ್ ಮಾಧ್ಯಮದ ಕಲಿಕೆ ಬಡವರಿಗೂ ಸಿಗಲಿ” ಎಂಬ ಬಣ್ಣದ ಮಾತಿನ ಸೆಳೆತಕ್ಕೆ ಸಿಕ್ಕಿಕೊಳ್ಳುವುದು ಸುಲಭವಾಗಿದೆ,

ರಾಜ್ಯದ ನಿಯಮ ಯಾರನ್ನೋ ನೋಡಿ ನಿಕ್ಕಿಯಾಗದು

ಅಂತೆಯೇ ಜನರು ಇಂದು “ಕನ್ನಡಪರರು ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮಕ್ಕೆ ಕಳಿಸಿ ನಮ್ಮ ಮಕ್ಕಳನ್ನು ಉದ್ಧಾರವಾಗಲು ಬಿಡುತ್ತಿಲ್ಲ” ಎನ್ನುವ ಘೋಷಣೆ ಸಲೀಸಾಗಿ ನಂಬುವುದು ಕೂಡಾ ಸಹಜ. ಇಂದು ಯಾರೇ ತಾಯ್ನುಡಿಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಿಲ್ಲವಾದಲ್ಲಿ ಅದು ಅವರು ತಮ್ಮ ಮಕ್ಕಳಿಗೆ ಬಗೆಯುತ್ತಿರುವ ದ್ರೋಹ ಎಂದರೆ ತಪ್ಪಾಗಲಾರದು. ಯಾರೋ ಕೆಲವರು (ಇದು ಹಲವರಾದರೂ...) ತಮ್ಮ ಮಕ್ಕಳಿಗೆ ಇಂಗ್ಲೀಶ್ ಮಾಧ್ಯಮದ ಶಿಕ್ಷಣ ಕೊಡಿಸಿಬಿಟ್ಟರು ಎನ್ನುವುದು ರಾಜ್ಯಸರ್ಕಾರದ ಶಿಕ್ಷಣ ನೀತಿಯನ್ನೇ ತೀರ್ಮಾನಿಸುವುದು ಸರಿಯಲ್ಲ. ಹಾಗಾಗಿ ರಾಜ್ಯಸರ್ಕಾರ ಕನ್ನಡದಲ್ಲೇ ಎಲ್ಲಾ ಹಂತದ ಶಿಕ್ಷಣವನ್ನು ನೀಡಲು ಯೋಜನೆ ರೂಪಿಸಿ ಜಾರಿಮಾಡಲಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅವರ ಆಯ್ಕೆಯ ವಿದೇಶಿ ಭಾಷೆಯನ್ನು ಪ್ರಾಥಮಿಕ ಹಂತದ ನಂತರ ಒಂದು ಭಾಷೆಯಾಗಿ ಕಲಿಸಲು ಏರ್ಪಾಟು ಮಾಡಲಿ. ಈಗ ಇನ್ನೂ ಉನ್ನತ ಶಿಕ್ಷಣವು ಇಂಗ್ಲೀಶಿನಲ್ಲಿ ಮಾತ್ರಾ ಲಭ್ಯವಿರುವುದರಿಂದ, ಕನ್ನಡ ಮಾಧ್ಯಮದ ಮಕ್ಕಳಿಗೆ-ಇಂಗ್ಲೀಶ್ ಮಾಧ್ಯಮ ಕಲಿಕೆಗೆ ಬದಲಾಗುವಾಗ-ಆದಷ್ಟು ತೊಡಕನ್ನು ಕಡಿಮೆ ಮಾಡುವಂತಹ ಯೋಜನೆಗಳನ್ನು ತಾತ್ಕಾಲಿಕವಾಗಿ ರೂಪಿಸಿ ಜಾರಿಗೊಳಿಸಲಿ. ಇದೆಲ್ಲಾ ಬಿಟ್ಟು, ತಾನೇ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ಶುರುಮಾಡೋ ಮೂಲಕ, ಕನ್ನಡದ ಮಕ್ಕಳ ಕಲಿಕೆಯನ್ನು ಅವರ ಪರಿಸರದಲ್ಲಿಲ್ಲದ ಭಾಷೆಯೊಂದರಲ್ಲಿ ಮಾಡಿಸುವ ಮೂಲಕ, ಒಳ್ಳೇ ಕೆಲಸ – ಒಳ್ಳೇ ಓದು – ಬುದ್ಧಿವಂತಿಕೆ ಎನ್ನುವ ಬಣ್ಣದ ಸಕ್ಕರೆಕಡ್ದಿಯ ಮಾತುಗಳ ಮೂಲಕ... ಜನರನ್ನು ಏಳಿಗೆಯ ದಾರಿಯಿಂದ ಮತ್ತಷ್ಟು ದೂರ ಒಯ್ಯುವುದು ನಿಶ್ಚಿತ.

ಜನರೆಂದರೆ ಯಾರ್ ಯಾರು ಕಾಗೇರಿಯವರೇ?

ಇವತ್ತಿನ (೦೩.೦೭.೨೦೧೧ರ) ಕನ್ನಡಪ್ರಭ ದಿನಪತ್ರಿಕೆಯ ಒಂಬತ್ತನೇ ಪುಟದಲ್ಲಿ ಮಾನ್ಯ ಶಿಕ್ಷಣಮಂತ್ರಿಗಳಾದ ಶ್ರೀ ವಿಶ್ವೇಶ್ವರಹೆಗ್ಡೆ ಕಾಗೇರಿಯವರ "ಬುಲೆಟ್ ಸಂದರ್ಶನ"ವೊಂದು ಪ್ರಕಟವಾಗಿದೆ. ಸರ್ಕಾರ ಇಂಗ್ಲೀಶ್ ಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಚರ್ಚೆ ಆರಂಭಿಸಿರುವ ಹಿನ್ನೆಲೆಯಲ್ಲಿ ಇದು ಕುತೂಹಲಕರವಾಗಿದ್ದು, ಒಂದು ಥರ ಸರ್ಕಾರದ ಮುಂದಿನ ನಡೆಯ ದಿಕ್ಸೂಚಿಯೂ ಆಗಿದೆ. ಇಡೀ ಸಂದರ್ಶನದ ಪ್ರಮುಖ ಮಾತುಗಳು ಇಂತಿವೆ.

ಸಾಹಿತಿಗಳಷ್ಟೇ... ಜನತೆಯಲ್ಲ!

ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯಲು ತಾವು ಸಿದ್ಧ ಎಂಬುದನ್ನು ಮಂತ್ರಿಗಳು ಸಾಬೀತು ಮಾಡುತ್ತಿರುವಂತೆ ಇವರ ಮಾತುಗಳಿವೆ. ಇಂಗ್ಲೀಶ್ ಮಾಧ್ಯಮ ಶಾಲೆಗಳಿಗೆ ಸಾಹಿತಿಗಳು ಮಾತ್ರಾ ವಿರೋಧ ತೋರಿಸಿದ್ದಾರೆ, ಇವರಷ್ಟೇ ನಾಡಿನ ಜನತೆಯಲ್ಲ... ಹಳ್ಳಿಗಾಡಿನ ಜನರೂ ಕೂಡಾ ಅವರ ಅಭಿಪ್ರಾಯ ಹೇಳಲಿ... ಇತ್ಯಾದಿಯಾಗಿ ಮಂತ್ರಿಗಳು ಮಾತಾಡಿದ್ದಾರೆ. ಇದಲ್ಲದೆ ಮಾಧ್ಯಮಗಳಿಗೆ ಜನರ ಅಭಿಪ್ರಾಯ ನಿರೂಪಿಸುವ ಹೊಣೆಗಾರಿಕೆಯನ್ನೂ ವಹಿಸಿದ್ದಾರೆ. ಈ ಪ್ರಯತ್ನವು ಸಾಹಿತಿಗಳ ಬಾಯಿ ಮುಚ್ಚಿಸುವ "ನಿಮ್ಮ ಮಕ್ಕಳು ಇಂಗ್ಲೀಶ್ ಮಾಧ್ಯಮದಲ್ಲಿ ಓದಬಹುದು, ಬಡವರ ಮಕ್ಕಳು ಓದಬಾರದಾ?" ಎಂಬಂತಹ ಮತ್ತೊಂದು ಅಸ್ತ್ರವಾಗಿದೆ. ಇರಲಿ... ಕಾಗೇರಿಯವರು ಆಡಿರುವ ಮಾತುಗಳತ್ತ ನೋಡೋಣ.

ಜನರ ಶಿಕ್ಷಣದ ಬಗ್ಗೆ ಮಾತಾಡಬೇಕಾದವರು ಯಾರು?

ಕಾಗೇರಿಯವರು ಹೇಳಿದ ಹಾಗೆ ಸಾಹಿತಿಗಳು ಮಾತ್ರವೇ ಕನ್ನಡ ಜನರೆಲ್ಲಾ ಅಲ್ಲಾ ಸರಿ, ಹಾಗಾದ್ರೆ ನಾಡಿನ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತಾಡೋ, ದಿಕ್ಕುತೋರಿಸೋ ಹೊಣೆಗಾರಿಕೆ ಯಾರದ್ದು? ನಮ್ಮಂಥಾ ಸಾಮಾನ್ಯರು ಮಾತಾಡುದ್ರೂ ಕಾಗೇರಿಯವರು ಮೊದಲನೇ ಪ್ರಶ್ನೆಯಾಗಿ "ನಿಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೀರಾ?" ಅಂದಾರು... ಮತ್ತೂ ಮುಂದುವರೆದು "ನೀವು ಹೇಳೋದು ಇಡೀ ಕನ್ನಡ ಜನರ ಮಾತಾ?" ಅಂದಾರು. ತಾಯ್ನುಡಿಯಲ್ಲಿ ಕಲಿಕೆ ಒಳ್ಳೇದು ಅಂತಾಗಲೀ, ಸರ್ಕಾರವೇ ಇಂಗ್ಲೀಶ್ ಶಾಲೆ ತೆಗೀಬಾರದು ಅನ್ನೋಕಾಗಲೀ ಸರ್ಕಾರ ನಿರ್ಧಾರ ತೆಗೆದುಕೊಳ್ಳೋಕೆ ಶಿಕ್ಷಣತಜ್ಞರು, ಸಮಾಜತಜ್ಞರೂ ಮುಂತಾದವರ ಸಲಹೆ ತೆಗೆದುಕೊಳ್ಳಬೇಕಲ್ಲವೇ? ಏನಂತಾರೆ ಕಲಿಕೆಯ ಬಗ್ಗೆ ಪ್ರಪಂಚದ ತಜ್ಞರು? ಏನನ್ನುತ್ತೆ ಯುನೆಸ್ಕೋ? ಪ್ರಪಂಚದಲ್ಲಿರೋ ನಾನಾ ದೇಶಗಳಲ್ಲಿ ಎಂಥಾ ವ್ಯವಸ್ಥೆಯಿದೆ? ಇವೆಲ್ಲವನ್ನೂ ಅಧ್ಯಯನ ಮಾಡಿ ಸರ್ಕಾರ ನಿರ್ಧಾರ ತೊಗೊಳ್ಳೋಕೆ ಮುಂದಾಗುತ್ತೇನು? ಒಂದು ನಿರ್ಧಾರ ತೊಗೊಂಡು... ಅದನ್ನು ವಿರೋಧ ಮಾಡಿದೋರುನ್ನೆಲ್ಲಾ ಒಂದಲ್ಲಾ ಒಂದು ಮಾತೆತ್ತಿ ಕೆಳಗೆ ಮಾಡಿ ತಾವಂದುಕೊಂಡಿದ್ದನ್ನು ಜಾರಿ ಮಾಡೋದ್ರಲ್ಲಿ ಈ ಸರ್ಕಾರಕ್ಕೆ ಈಗಾಗಲೇ ಅನುಭವ ಇದೆಯಲ್ಲಾ? ಆಗ ತಿರುವಳ್ಳುವರ್ ಪ್ರತಿಮೆ ನಿಲ್ಲಿಸಬೇಡಿ ಅಂದಾಗ ಜನರ ಹೋರಾಟದ ಕತ್ತು ಹಿಸುಕಿ, ಸಾಹಿತಿಗಳಿಂದ ಪತ್ರಿಕೆಗಳಲ್ಲಿ ದಿನಕ್ಕೊಂದು ಪತ್ರ ಬರೆಸಿ, ಅದನ್ನೇ ಜನಾಭಿಪ್ರಾಯ ಅಂದಿದ್ದನ್ನು ಜನರು ಮರೀತಾರಾ ಗುರೂ? ಪಾಪಾ! ಆಗ ಈ ಸಾಹಿತಿಗಳೇ ಅವರಿಗೆ ಇಡೀ ಕನ್ನಡ ಜನತೆ ಆಗಿದ್ರಾ?

ಯು.ಕೆ ವೀಸಾಗೆ ಕನ್ನಡ ಗೊತ್ತಿದ್ರೂ ಸಾಕು!


ಹೊರದೇಶಗಳಿಗೆ ಹೋಗೋ ಮೊದಲು ಆಯಾ ದೇಶಗಳಿಂದ ವೀಸಾ ಪಡೆದುಕೊಳ್ಳೋದು ಸಾಮಾನ್ಯ ವಿಧಾನ. ಹೀಗೆ ಯುನೈಟೆಡ್ ಕಿಂಗ್‍ಡಮ್ ದೇಶಕ್ಕೆ ಹೋಗೋ ಜನಕ್ಕೆ ವೀಸಾ ಪಡೆದುಕೊಳ್ಳಲು ಅನುಕೂಲ ಮಾಡಿಕೊಡೋಕೆ ಒಂದು ಅಂತರ್ಜಾಲ ತಾಣ ಇದೆ. ಕನ್ನಡಿಗರು ಯು.ಕೆ ವೀಸಾ ದಕ್ಕಿಸಿಕೊಳ್ಳಲು ಅನುಕೂಲ ಆಗೋ ಹಾಗೆ ಈ ತಾಣ ಕನ್ನಡದಲ್ಲೂ ಇದೆ. ಇಗೋ ನೋಡಿ ಆ ತಾಣ.

ಗ್ರಾಹಕ ಸೇವೆಯ ಮಹತ್ವ!

ತನ್ನ ಗ್ರಾಹಕರಿಗಾಗಿ ಸದಾ ಮಿಡಿಯೋರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದಕ್ಕೆ ಯು.ಕೆ ಸರ್ಕಾರದೋರು ಮತ್ತು ವಿ.ಎಫ಼್.ಎಸ್ ಗ್ಲೋಬಲ್ ಸಂಸ್ಥೆಯೋರು ಒಟ್ಟಾಗಿ ಭಾರತದಲ್ಲಿ ಆರಂಭಿಸಿರೋ ಈ ಸಂಸ್ಥೆಯ ಅಂತರ್ಜಾಲ ತಾಣ ಕಂಡಾಗ ತಿಳಿಯುತ್ತೆ. ಜೊತೆಗೆ ಒಮ್ಮೆಲೇ.. ನಮ್ಮೋರು ಹೆಂಗೆ ನಡ್ಕೊತಾ ಇದಾರೆ ಅನ್ನೋದು ನೆನಪಾಗಿ ಬೇಸರವಾಗುತ್ತೆ. ನೀವೇ ನೋಡಿ ನಮ್ಮ ನೈರುತ್ಯ ರೈಲ್ವೇ ವಲಯದ ಈ ಅಂತರ್ಜಾಲ ತಾಣವನ್ನು. ಈ ತಾಣ ಇರೋದು ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆಗಳೆಂದೂ, ಅಧಿಕೃತ ಸಂಪರ್ಕ ಭಾಷೆಗಳೆಂದೂ ಘೋಷಿಸಲಾಗಿರುವ ಹಿಂದೀ ಮತ್ತು ಇಂಗ್ಲೀಶಿನಲ್ಲಿ ಮಾತ್ರಾ. ಬೇಕಾರೆ ತೊಗೊಳ್ಳೀ ಇಲ್ಲಾ ನೆಗೆದು ಬಿದ್ದು ಸಾಯ್ರಿ...ಅನ್ನಬಹುದೇನೋ ನಮ್ಮ ರೈಲ್ವೇ...


ಭಾರತೀಯ ರೈಲ್ವೇ ಇಲಾಖೆಯ ನೈರುತ್ಯ ವಲಯದಲ್ಲಿ ಹೆಚ್ಚಿನ ಭಾಗ ಬರೋದು ನಮ್ಮ ಕರ್ನಾಟಕದಲ್ಲೇ... ಇದರ ಕೇಂದ್ರಕಛೇರಿ ಇರೋದೂ ಹುಬ್ಬಳ್ಳಿಯಲ್ಲೇ... ಈ ವಲಯದಲ್ಲಿ ಓಡಾಡೋ ಪ್ರಯಾಣಿಕರಲ್ಲಿ ಅತಿ ಹೆಚ್ಚಿನ ಸಂಖ್ಯೆಯವರು ಕನ್ನಡದೋರೇ... ಆದರೆ ಇವರಿಗೆಲ್ಲಾ ಅನುಕೂಲ ಮಾಡಿಕೊಡಬೇಕು ಅನ್ನೋ ಆಶಯವೇ ರೈಲ್ವೇ ಇಲಾಖೆಗೆ ಇಲ್ಲ. ನಿಜಕ್ಕೂ ನಿಮಗೇನಾದರೂ ಕೆಲಸ ಆಗಬೇಕಿದ್ದರೆ ಹಿಂದೀ ಕಲೀರಿ... ಇಲ್ಲಾ ಇಂಗ್ಲೀಶ್ ಕಲೀರಿ ಎನ್ನೋ ಧೋರಣೆ ಇದರದ್ದು. ಯಾಕೆ ಹೀಗೇ? ಕನ್ನಡದಲ್ಲಿ ಮಾಹಿತಿ ಕೊಟ್ಟಿದ್ರೆ ಇವರದ್ದೇನು ಗಂಟು ಹೋಗ್ತಿತ್ತೂ? ನಿಜವಾದ ಗ್ರಾಹಕಸೇವೆ ನೈರುತ್ಯ ರೈಲ್ವೇಯ ಗ್ರಾಹಕರಿಗೆ ಸಿಗ್ತಿರಲಿಲ್ವಾ? ಅಂತೀರಾ... ಊಹೂಂ, ಗ್ರಾಹಕರಿಗೆ ಅನುಕೂಲವೋ ತೊಡಕೋ ಏನಾದರೆ ಭಾರತ ಸರ್ಕಾರಕ್ಕೇನು? ಸಂವಿಧಾನದ ಆಶಯದಂತೆ ಭಾಷಾನೀತಿ, ಭಾಷಾನೀತಿಯಂತೆ ಎಲ್ಲಾ ಇಲಾಖೆಗಳು, ಇಲಾಖೆಯ ನಿಯಮದಂತೆ ಅಂತರ್ಜಾಲ ತಾಣ. ಇಲ್ಲಿ ಗ್ರಾಹಕ ಅನ್ನೋ ಪದವೇ ಮಾಯಾ! ಇದಕ್ಕೆಲ್ಲಾ ಕಾರಣ ಏನೆಂದರೆ... ಭವ್ಯ ಭಾರತ ಅಪ್ಪಿಕೊಂಡಿರೋ ರೋಗಗ್ರಸ್ತ ಭಾಷಾನೀತಿ.. ಹೇಳಿ ಗುರುಗಳೇ.... ಇದು ಬದಲಾಗಬೇಕೋ ಬೇಡವೋ?

ಗಾಡಿಗಳ ಮೇಲೆ ಕನ್ನಡದ ಫಲಕ ಕಾನೂನು ಬದ್ಧವಾಗಲಿ!

ಕರ್ನಾಟಕದಲ್ಲಿ ಓಡಾಡೋ ವಾಹನಗಳಲ್ಲಿ ಅನೇಕವು ಕನ್ನಡದಲ್ಲಿ ಇರುತ್ತವೆ. ಇಂಥವನ್ನು ನೋಡ್ದಾಗ ನಮಗೆ ಹೆಮ್ಮೆಯೂ ಆಗುತ್ತೆ. ನಾಡಿನ ಮೇಲಿನ ಅಭಿಮಾನದಿಂದ ನಮ್ಮ ಜನರೂ ಕೂಡಾ ತಮ್ಮ ಗಾಡಿಗಳ ನಂಬರ್ರನ್ನು ಕನ್ನಡದಲ್ಲಿ ಬರೆಸಿರುತ್ತಾರೆ.

ಅಷ್ಟೇ ಏಕೆ? ಬೆಂಗಳೂರಿನಲ್ಲಿ ಓಡಾಡೊ ಬಿಟಿಎಸ್ ಬಸ್ಸುಗಳಲ್ಲೂ ನೀವು ಕನ್ನಡದ ಅಂಕಿಗಳ ಬಳಕೆ ನೋಡಿರಬಹುದು. ರಾಜ್ಯೋತ್ಸವ ಬಂದಾಗ ಕನ್ನಡದಲ್ಲಿ ಅಂಕಿ ಬರೆಸುವ ಒಂದು ಕಾರ್ಯಕ್ರಮವನ್ನೂ ಕೆಲ ಸಂಘಟನೆಗಳು ಹಮ್ಮಿಕೊಳ್ಳುತ್ತಾ ಬಂದಿವೆ.

ಆದರೆ ಇದು ಭಾರತದಲ್ಲಿ ಕಾನೂನು ಬಾಹಿರವಾದದ್ದು ಅಂತಾ ನಿಮಗೆ ಗೊತ್ತಾ ಗುರೂ!


ಸಾರಿಗೆ ಇಲಾಖೆಯ ಕಾಯ್ದೆ

ಭಾರತದ ಸಾರಿಗೆ ಇಲಾಖೆಯು ವಾಹನಗಳ ನಾಮಫಲಕ ಹೇಗಿರಬೇಕೆಂದು ಒಂದು ನಿಯಮ ಮಾಡಿದೆ. ಅದರಲ್ಲಿ ಹೀಗಿದೆ ನೋಡಿ.
All motorised road vehicles are tagged with a registration or licence number in India. The Licence plate (commonly known as number plates) number is issued by the district-level Regional transport office (RTO) of respective states — the main authority on road matters. The licence plates are placed in the front and back of the vehicle. By law, all plates are required to be in modern Hindu-Arabic numerals with Roman alphabet.

ಅಂದರೆ ಕರ್ನಾಟಕದಲ್ಲಿ ನಾವು ಕನ್ನಡದಲ್ಲಿ ನಮ್ಮ ಗಾಡಿಗಳಿಗೆ ಕನ್ನಡದಲ್ಲಿ ನಾಮಫಲಕ ಬರೆಸೋದು ಕಾನೂನು ಬಾಹಿರವಾದದ್ದಾಗಿದೆ. ಬೇರೆ ಬೇರೆ ದೇಶಗಳಲ್ಲಿ ವಾಹನಗಳ ನೋಂದಣಿ ಫಲಕ ಹೇಗಿರುತ್ತೆ ಅಂತಾ ಮಾಹಿತಿ ವಿಕಿಪೀಡಿಯಾದಲ್ಲಿದೆ. ನೋಡಿ. ಎಂಥಾ ದುರಂತಾ ನೋಡಿ, ನಮ್ಮ ನಾಡಲ್ಲಿ ನಾವು ದುಡ್ಡು ಕೊಟ್ಟು ಕೊಂಡುಕೊಳ್ಳೋ ಗಾಡಿಯ ನೋಂದಣಿ ಸಂಖ್ಯೆಯನ್ನು ನಮ್ಮ ನುಡಿಯಲ್ಲಿ ಬರೆಯೋದು ಕಡ್ಡಾಯ ಅಂತಾ ಇರೋ ದೇಶಗಳ ನಡುವೆ "ಹಾಗೆ ಬರೆಯೋದು ಕಾನೂನು ಬಾಹಿರ" ಅನ್ನೋ ವ್ಯವಸ್ಥೆ ಭಾರತದ್ದು!

ನಿಜಕ್ಕೂ ಕೇಂದ್ರದ ಸಾರಿಗೆ ಕಾಯ್ದೆಯಲ್ಲಿ ವಾಹನಗಳ ನಾಮಫಲಕಗಳಲ್ಲಿ ಇಂಗ್ಲೀಷ್ ಮತ್ತು ಆಯಾ ರಾಜ್ಯದ ಭಾಷೆ ಕಡ್ಡಾಯ ಅಂತಾ ಮಾಡಿದ್ದಿದ್ರೆ ಸರಿ ಇರ್ತಿತ್ತು. ಆಗ ನಮ್ಮ ನಾಡಲ್ಲಿ ನಮ್ಮ ನುಡಿಯನ್ನು ಬಳಸೋದು ಅಪರಾಧ ಅನ್ನೋ ವಿಕೃತಿಗೆ ಅವಕಾಶ ಆಗ್ತಾ ಇರಲಿಲ್ಲ. ಆದರೂ ನಮ್ಮ ಪುಣ್ಯವೆಂದರೆ ಕೇಂದ್ರದ ಆಡಳಿತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಬರೆಯೋದು ಕಡ್ಡಾಯ ಅನ್ನೋ ದಿನಗಳು ಇನ್ನೂ ಬಂದಿಲ್ಲ ಅಂತಾ ಸಮಾಧಾನ ಮಾಡ್ಕೋಬೇಕಾಗಿದೆ ಅಲ್ವಾ ಗುರೂ!!
Related Posts with Thumbnails