ನಮ್ಮ ಮೆಟ್ರೋ ಮತ್ತು ಅನಿಯಂತ್ರಿತ ವಲಸೆ!

ಬೆಂಗಳೂರಿನಲ್ಲಿ ಇನ್ನೇನು ಆರಂಭವಾಗೋ ಮೆಟ್ರೋ ರೈಲು ಸೇವೆಗೆ ನಮ್ಮ ಮೆಟ್ರೋ ಅನ್ನೋ ಹೆಸರನ್ನು ಕೊಟ್ಟಿದ್ದಾರೆ. ಅಲ್ಲಿ ಕನ್ನಡಕ್ಕೆ ಜಾಗವೇನೋ ಇದೆ. ಸಮಸ್ಯೆ ಏನಂದ್ರೆ ಕನ್ನಡನಾಡಲ್ಲಿ, ಕನ್ನಡಿಗರ ನಾಡಲ್ಲಿ ಪರಭಾಷೆಯ ಫಲಕಗಳಿಗೂ ಕನ್ನಡಕ್ಕಿರುವಷ್ಟೇ ಸ್ಥಾನಮಾನ, ಪ್ರಾಮುಖ್ಯತೆ ಕೊಡೋಕೆ ಮುಂದಾಗಿದೆ ಮೆಟ್ರೋ ಅನ್ನೋದು. ಹೌದು, ಈ ಫೋಟೋ ನೋಡಿ. ಇದು ನಮ್ಮ ಬೆಂಗಳೂರಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಕಟ್ತಿರೋ ನಮ್ಮ ಮೆಟ್ರೋ ರೈಲು ನಿಲ್ದಾಣ.


ಕನ್ನಡದಲ್ಲೇಕೆ ಇಷ್ಟು ಚಿಕ್ಕದಾಗಿದೆ?

ಇಲ್ಲಿ ಯಾಕೆ ಕನ್ನಡವನ್ನು ಇಷ್ಟು ಚಿಕ್ಕದಾಗಿ ಹಾಕಿದ್ದಾರೆ? ತ್ರಿಭಾಷಾ ಸೂತ್ರದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನವಾದ ಸೈಜು ಅಂತಾನಾ? ನೂರಕ್ಕೆ ತೊಂಬತ್ತರಷ್ಟು ಜನಕ್ಕೆ ಅನುಕೂಲವಾಗಬೇಕು ಅನ್ನೋ ಉದ್ದೇಶವಿದ್ದರೆ ಕನ್ನಡದಲ್ಲಿ ದೊಡ್ಡದಾಗಿ ಫಲಕಗಳನ್ನು ಹಾಕಬೇಡವೇ? ನಮ್ಮೂರಿನ ರೈಲು ಸಂಪರ್ಕ ನಮ್ಮ ಜನಕ್ಕೆ ಅನುಕೂಲ ಮಾಡಿಕೊಡಬೇಕು ಅನ್ನೋದಕ್ಕಿಂತ ಹಿಂದಿಯವರಿಗೆ ತೊಂದರೆಯಾಗಬಾರದು ಅನ್ನೋ ಮನಸ್ಥಿತಿ ಯಾಕೆ ನಮ್ಮ ಸರ್ಕಾರಕ್ಕೆ? ಇಷ್ಟಕ್ಕೂ ತಮಿಳು, ತೆಲುಗು, ಮಲಯಾಳಂ, ಉರ್ದು, ಮರಾಠಿ, ಕೊಂಕಣಿ ಮೊದಲಾದ ನುಡಿಗಳಿಗೆ ಇಲ್ಲದ ಯಾವ ಕೋಡು ಹಿಂದಿಗೆ ಇದೆ. ಯಾಕೆ ಹೀಗೆ ಹಾಕಿದ್ದೀರಾ? ಎಂಬ ಆಕ್ಷೇಪಕ್ಕೆ ತ್ರಿಭಾಷಾ ಸೂತ್ರದತ್ತ ಬೊಟ್ಟು ಮಾಡಿ ತೋರುವುದಾದರೆ ಅಂತಹ ತ್ರಿಭಾಷಾ ಸೂತ್ರವಾದರೂ ಏಕೆ ಬೇಕು? ಅಲ್ರೀ, ಕನ್ನಡದಲ್ಲಿ ಹಾಕಿದ್ದಾರಲ್ಲಾ? ಸಾಲ್ದಾ? ನಿಮಗ್ಯಾಕೆ ಬೇರೆದ್ರು ಮೇಲೆ ಕಣ್ಣು ಅಂತೀರಾ?

ಸಮಸ್ಯೆ ಮೇಲೆ ಕಾಣುವಷ್ಟು ಚಿಕ್ಕದಲ್ಲ!

ಇದು ಯಾವುದೋ ಒಂದು ಕೇಂದ್ರಸರ್ಕಾರಿ ಕಛೇರಿಯಲ್ಲ... ಇಡೀ ಬೆಂಗಳೂರಿನ ತುಂಬಾ ಹರಿದಾಡೋ ಮೆಟ್ರೋ ರೈಲುಗಳು ಅನ್ನೋ ಕಾರಣದಿಂದ ಕನ್ನಡಿಗರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇಷ್ಟು ದಿನ ಹಿಂದೀ ಕೇಂದ್ರಸರ್ಕಾರದ ಅಧಿಕೃತ ಸಂಪರ್ಕ ಭಾಷೆ, ಭಾರತದ “official language”ಗಳಲ್ಲೊಂದು ಅನ್ನೋ ನೆಪ ಹೇಳಿ ಕೇಂದ್ರಸರ್ಕಾರಿ ಕಛೇರಿಗಳಲ್ಲಿ, ರೈಲ್ವೇಯಲ್ಲಿ ಇದ್ದ ಹಿಂದೀ ದೇವತೆ ಈಗ ಮೆಟ್ರೋಗೂ ವಕ್ಕರಿಸ್ಕೊತಾ ಇರೋದನ್ನು ನೋಡುದ್ರೆ ಆತಂಕ ಆಗ್ತಾ ಇದೆ. ಕರ್ನಾಟಕ ಸರ್ಕಾರವೇ ಹೆಚ್ಚು ಪಾಲು ಹೂಡಿಕೆ ಮಾಡಿರುವ “ನಮ್ಮ ಮೆಟ್ರೋ”ಲಿ ಈಗ ತ್ರಿಭಾಷಾ ಸೂತ್ರವನ್ನು ಜಾರಿ ಮಾಡೋ ನೆಪದಲ್ಲಿ ಅನಿಯಂತ್ರಿತ ವಲಸೆಗೆ ಉತ್ತೇಜನ ಕೊಡ್ತಿದಾರೆ. ಭಾರತದ ಕೇಂದ್ರಸರ್ಕಾರದ ಅಂದಾಜು 15% ಈಕ್ವಿಟಿ ಪಾಲಿದೆ ಅನ್ನೋ ಒಂದೇ ಕಾರಣಕ್ಕೆ ಇಡೀ ಬೆಂಗಳೂರಿನ ಮುಖಚರ್ಯೆಯನ್ನು, ಬೆಂಗಳೂರಿನ ಆ ಮೂಲಕ ಕರ್ನಾಟಕದ ಮುಖಚರ್ಯೆಯನ್ನೇ ಬದಲಿಸಲು ಕಾರಣವಾಗಬಲ್ಲ ಈ ನಡೆಯ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ತುರ್ತು ನಮ್ಮ ಮುಂದಿದೆ.

ವಲಸೆ ಯಾಕೆ ಹೆಚ್ಚುತ್ತೆ ಅಂದ್ರೇ...

ಸುಮ್ಮನೆ ಯೋಚಿಸಿರಿ. ನೀವು ದೆಹಲಿ ನಗರಕ್ಕೆ ಹೋದರೆ ಅಲ್ಲಿನ ರೈಲು, ಬಸ್ಸು, ಬೀದಿಗಳಲ್ಲಿ ನಡೆಯುವಾಗ ನಿಮ್ಮ ಮನಸ್ಥಿತಿ ಹೇಗಿರುತ್ತದೆ ಎಂದು. ಈಗ ಮತ್ತೊಮ್ಮೆ ಯೋಚಿಸಿರಿ, ಅದೇ ದೆಹಲಿಯ ರೈಲು, ಬಸ್ಸು, ಕಛೇರಿ ಹಾಗೂ ಬೀದಿಗಳಲ್ಲಿ ಕನ್ನಡದಲ್ಲೂ ನಾಮಫಲಕಗಳು... ಕನ್ನಡದಲ್ಲಿ ವ್ಯವಹರಿಸುವ ಪಾಲಿಸಿ, ಕನ್ನಡದಲ್ಲೂ ವ್ಯವಹಾರ ಸಾಧ್ಯವಾಗುತ್ತದೆ ಎಂಬ ನಿಯಮ ಇದ್ದರೆ ಹೇಗಿರುತ್ತದೆ ಎಂದು. ಆಹಾ... ಇಡೀ ದಿಲ್ಲಿಯೇ ನಮ್ಮದೆನ್ನಿಸದೇ? ನಮ್ಮ ಮಕ್ಕಳು ಮರಿ ಕೋಳಿ ಕುರಿ, ಚಿಳ್ಳೆಪಿಳ್ಳೆಗಳಿಗೂ "ದಿಲ್ಲಿಗೆ ಹೋಗು ಮಾರಾಯಾ, ನೋ ಪ್ರಾಬ್ಲಮ್, ಅಲ್ಲಿ ಕನ್ನಡ ನಡ್ಯುತ್ತೆ" ಅಂತಾ ವಲಸೆ ಮಾಡ್ಸಲ್ವಾ? ಈಗ ಮೆಟ್ರೋ ಪಾಲನೆ ಮಾಡಕ್ ಮುಂದಾಗಿರೋ ಭಾಷಾನೀತಿಯಿಂದಲೂ ಇಂಥದೆ ಪರಿಣಾಮ ಆಗಲ್ವಾ?

ಈಗೇಳದಿದ್ದರೆ ಮುಂದೆ ಮಲಗಬೇಕಾದೀತು!

ಕನ್ನಡನಾಡಲ್ಲಿ ಕನ್ನಡದೋರಿಗಾಗಿ ಕನ್ನಡದಲ್ಲಿ ವ್ಯವಹಾರ ನಡ್ಸುದ್ರೆ ಸಾಲ್ದಾ? ಇಷ್ಟಕ್ಕೂ ಹಿಂದಿಗೆ ಇಲ್ಲಿ ಜಾಗ ಕೊಡೋದಾದ್ರೆ ತಮಿಳು, ಉರ್ದು, ಮಲಯಾಳಂ, ಒಡಿಯಾ, ಪಂಜಾಬಿ, ರಾಜಾಸ್ಥಾನಿ, ತೆಲುಗುಗಳಿಗೂ ಕೊಡಬೋದು ಅಲ್ವಾ? ಊಹೂಂ... ಕೇಂದ್ರಸರ್ಕಾರಕ್ಕೆ ಇರೋ ಗುರೀನೇ ಇವೆಲ್ಲಾ ವೈವಿಧ್ಯತೆಗಳನ್ನು ಅಳಿಸಿ ಹಿಂದೀನ ಇಡೀ ಭಾರತದ ತುಂಬಾ ಪ್ರತಿಷ್ಠಾಪಿಸೋ ಉಮ್ಮೇದಿ. ಇಲ್ಲೇ ಇರೋ ಕನ್ನಡಿಗನ ಹಿತ ಕಡೆಗಾಣಿಸಲ್ಪಟ್ಟರೂ ಸರಿಯೇ, ಹಿಂದಿಯವರಿಗೆ ಭಾರತದ ಯಾವ ಮೂಲೇಲೂ ತೊಡಕಾಗಬಾರದು ಅನ್ನೋ ಮನಸ್ಥಿತಿ. ಒಟ್ನಲ್ಲಿ ಹಿಂದೀ ವಸಾಹತುಶಾಹಿ ಮನಸ್ಥಿತಿಯನ್ನು ಕನ್ನಡಿಗರು ಗುರುತಿಸಿ ಮೊಳಕೆಯಲ್ಲೇ ಚಿವುಟದಿದ್ದರೆ ನಾಳೆ ನಮ್ಮ ಬದುಕು ಮತ್ತೊಮ್ಮೆ ಗುಲಾಮಗಿರಿಗೆ ಒಳಗಾಗಬೇಕಾದೀತು ಗುರೂ!

ಆಗಲೇ ಬೇಕಂದ್ರೆ ಹೀಗಾಗಲೀ..

ನಿಜಕ್ಕೂ ಹಾಗೆ ಪರಭಾಷಿಕರೂ ಭಾರತೀಯರೇ, ಅವರಿಗೂ ತೊಂದರೆಯಾಗಬಾರದು ಅನ್ನುವ ಕಾಳಜಿ ಇದ್ದಲ್ಲಿ ನಮ್ಮ ಮೆಟ್ರೋದಲ್ಲಿ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಸೂಚನಾ ಫಲಕಗಳನ್ನು ಹಾಕಬೇಕು. ಆದರೆ ಇದು ಮೊದಲಿಗೆ ದಿಲ್ಲಿಯಿಂದ ಆರಂಭವಾಗಬೇಕು. ಭಾರತದ ಎಲ್ಲಾ ಕಡೆ ಎಲ್ಲಾ ಭಾಷೆಯ ಫಲಕ ಹಾಕೋ ನೀತಿ ಜಾರಿಯಾಗೋದಾದ್ರೆ ಒಪ್ಪಬಹುದು. ಇಲ್ದಿದ್ರೆ ಕನ್ನಡದೋರು ದಿಲ್ಲಿಗೆ ಹೋಗಬೇಕು ಅಂದ್ರೂ ಹಿಂದೀ ಕಲೀಬೇಕು ಹಾಗೂ ದಿಲ್ಲಿಯವರು ಕರ್ನಾಟಕಕ್ಕೆ ಬರಬೇಕು ಅಂದ್ರೂ ಇಲ್ಲಿರೋ ಕನ್ನಡದೋರು ಹಿಂದೀ ಕಲೀಬೇಕು ಅನ್ನೋದು ದೇಶದ ಒಗ್ಗಟ್ಟು ಉಳ್ಸೋ ನೀತೀನಾ ಗುರೂ?

ಸುರಕ್ಷತಾ ಸಪ್ತಾಹದ ಸಂದೇಶ ಯಾರಿಗಾಗಿ?


ಭಾರತದಲ್ಲಿ ಮಾರ್ಚ್ 4ನೇ ತಾರೀಕನ್ನು ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇದೇ ದಿವಸ ನಲವತ್ತು ವರ್ಷಗಳ ಹಿಂದೆ ರಾಷ್ಟ್ರೀಯ ಸುರಕ್ಷತಾ ಸಂಸ್ಥೆಯನ್ನು ಆರಂಭಿಸಿದ ನೆನಪಿಗಾಗಿ ಈ ದಿನದ ಆಚರಣೆ. ನಮ್ಮ ರಾಜ್ಯ ಸರ್ಕಾರವೂ ಮಾರ್ಚ್ 4ರಿಂದ ಒಂದುವಾರ ಸುರಕ್ಷತಾ ಸಪ್ತಾಹವೆಂಬುದಾಗಿ ಆಚರಿಸುತ್ತದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲೂ ಸುರಕ್ಷತೆಯ ಬಗ್ಗೆ ಎಚ್ಚರ ಮೂಡಿಸುವಂತಹ ಬ್ಯಾನರ್ರುಗಳನ್ನು ಎದ್ದುಕಾಣುವಂತೆ ಹಾಕಿರುತ್ತಾರೆ.

ಕನ್ನಡ ಲಿಪಿಯಲ್ಲಿದ್ದೂ ಅರ್ಥವಾಗದ ಬ್ಯಾನರ್ರು...


ಕರ್ನಾಟಕ ಸರ್ಕಾರವು ಈ ಸುರಕ್ಷತಾ ವಾರವನ್ನು "ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ"ಯ ವತಿಯಿಂದ ಇಡೀ ರಾಜ್ಯದ ಎಲ್ಲಾ ಕಾರ್ಖಾನೆಗಳಲ್ಲಿ ಆಚರಿಸುತ್ತದೆ. ಪ್ರತಿವರ್ಷ ಒಂದೊಂದು ಘೋಷವಾಕ್ಯವನ್ನು ಇದು ಹೊಂದಿರುತ್ತದೆ. ಈ ಬಾರಿಯ ಘೋಷವಾಕ್ಯವನ್ನು ನೋಡಿ...

"ನಿವಾರಣಾತ್ಮಕ ಸುರಕ್ಷೆ ಮತ್ತು ಆರೋಗ್ಯ ಸಂಸ್ಕೃತಿಯ ಸುಸ್ಥಾಪನೆ ಮತ್ತು ನಿರ್ವಹಣೆ"

ಏನಾದ್ರೂ ಅರ್ಥವಾಯ್ತಾ? ಹೀಗಂದ್ರೇನು ಅನ್ನೋದು ಯಾವುದಾದ್ರೂ ಸಂಸ್ಕೃತ ಪಂಡಿತರಿಗೆ ಅರ್ಥವಾದೀತೋ ಏನೋ, ಕನ್ನಡಿಗರಿಗಂತೂ ಕಬ್ಬಿಣದ ಕಡಲೆಯೇ. ಹೀಗೆ ಬರೆದಿರೋರೂ ಕೂಡಾ ತಾವಾಗೇ ಬುದ್ಧಿ ಉಪಯೋಗಿಸಿ ಇದುನ್ನ ಬರೆದಿಲ್ಲ. ಭಾರತ ಸರ್ಕಾರ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಈ ಬಾರಿಯ ಘೋಷವಾಕ್ಯ ಅಂತಾ ಕೊಟ್ಟಿರೋದನ್ನು ಕನ್ನಡದಲ್ಲಿ ತರ್ಜುಮೆ ಮಾಡಿದೀವಿ ಅಂತಾ ಅಂದ್ಕೊಂಡು ಬರೆದಿದ್ದಾರೆ ಅನ್ಸುತ್ತೆ. ಇದೋ ನೋಡಿ ಮೂಲ ಸಂದೇಶ :
ಹೀಗೆ preventative safety ಅನ್ನೋದನ್ನು ನಿವಾರಣಾತ್ಮಕ ಸುರಕ್ಷೆ ಅಂತಾ ತರ್ಜುಮೆ ಮಾಡಿದ್ದಾರೆ, establish ಅನ್ನೋದನ್ನು ಸುಸ್ಥಾಪನೆ ಅಂತಾ ಮಾಡಿದ್ದಾರೆ. ಅದುನ್ನೆಲ್ಲಾ ಹೇಗಾದ್ರೂ ಸಹಿಸ್ಕೋಬೌದೇನೋ ಗುರೂ... ಕೆಳಗಡೆ ಬರೆದಿರೋ ಸ್ಲೋಗನ್ ನೋಡುದ್ರೆ ನಗಬೇಕೋ ಅಳಬೇಕೋ ಗೊತಾಗ್ತಿಲ್ಲಾ.

"ಅಪಘಾತ ಆಗುವುದಿಲ್ಲ, ಆದರೆ ಸಂಭವಿಸುತ್ತದೆ"

ಹೀಗಂದ್ರೇನು ಅಂತಾ ಬಡಪಾಯಿ ಕನ್ನಡದೋರಿಗೆ ಅರ್ಥವಾಗೋದು ಕಾಣೆ. ಇದು Accident do not happen, Accident is caused ಅನ್ನೋದ್ರ ಕನ್ನಡ ರೂಪ. ಆಗುವುದಕ್ಕೂ ಸಂಭವಿಸೋಕ್ಕೂ ಏನು ವ್ಯತ್ಯಾಸ ಗೊತ್ತಾಗಲ್ಲ. ಇದ್ಯಾಕೆ ಹೀಗೆ ಕರ್ನಾಟಕ ಸರ್ಕಾರದವರು ಬರೆಸಿದ್ದಾರೆ ಅಂತಾ ನಾವು ಯೋಚಿಸಿದರೆ ಈ ಬರಹಗಳನ್ನು ಸಿದ್ಧಪಡಿಸಿದವರಿಗೆ ಸಂಸ್ಕೃತದ ಪದಗಳ ಬಳಕೆ ಬಗ್ಗೆ ಇರೋ ವ್ಯಾಮೋಹ ಎಷ್ಟು ಅಂತಾ ತಿಳಿಯುತ್ತೆ. ಸಾಮಾನ್ಯ ಜನಕ್ಕೆ ಅರ್ಥವಾಗದಿದ್ದರೂ ಸರಿ, ತರ್ಜುಮೆ ಮಾಡಿಬಿಡಬೇಕು ಅನ್ನೋ ತುಡಿತ ಇರೋದು ಕಾಣುತ್ತೆ. ಬೇಕಾ? ಇದು ನಮಗೆ ಬೇಕಾ? ಹಲವಾರು ಸಾಮಾನ್ಯ ಕನ್ನಡಿಗರಲ್ಲಿ ಈಗಾಗಲೇ ಬೇರೂರಿರೋ ಕನ್ನಡದ ಬಳಕೆ ಬಗ್ಗೆ ಇರುವ ಕೀಳರಿಮೆ ರೋಗಕ್ಕೆ ಸರ್ಕಾರವೂ ನೀರೆರೆಯೋದು ಸರೀನಾ? ಗುರೂ...

ಇದೀಗ "ಏನ್ ಗುರು...ಕಾಫಿ ಆಯ್ತಾ?" ಹೊತ್ತಗೆ ಮಾರುಕಟ್ಟೆಯಲ್ಲಿ...


ಬನವಾಸಿ ಬಳಗವು ಹೊರತಂದಿರುವ ಏನ್ ಗುರು... ಕಾಫಿ ಆಯ್ತಾ? ಹೊತ್ತಗೆಯನ್ನು ಇದೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಆ ಮೂರೂ ದಿನಗಳಲ್ಲಿ ನಮ್ಮ ಬಳಗದ ಮಳಿಗೆಯು ಜೇನುಗೂಡಿನಂತಿತ್ತು. ನಮ್ಮ ಬಳಗದ ಗೆಳೆಯರಿಗಂತೂ ಮಳಿಗೆಗೆ ಬಂದವರೊಂದಿಗೆ ಮಾತಾಡಿದ ಸಖತ್ ಅನುಭವ ಸಿಗ್ತು. ಬನವಾಸಿ ಬಳಗ ಅಂದ್ರೇನು? ಏನ್ ಗುರು ಅನ್ನೋ ಹೆಸರು ಯಾಕೆ? ಅನ್ನೋ ಕುತೂಹಲದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾಗ ನಾವಿನ್ನೂ ದೊಡ್ಡಮಟ್ಟದ ಜನಸಮೂಹವನ್ನು ಮುಟ್ಟಬೇಕು ಅನ್ನೋದು ಮನವರಿಕೆ ಆಯ್ತು. ಮಾಧ್ಯಮಗಳಲ್ಲಿ ಬಹಳಷ್ಟು ಪ್ರಚಾರ ಕೂಡಾ ಸಿಗ್ತು. ಹಾಗಾಗಿ ಮೂರನೇ ದಿನವಂತೂ ಊಟಕ್ಕೂ ಹೋಗಲಿಕ್ಕಾಗದಷ್ಟು ಜನಜಂಗುಳಿ ನಮ್ಮ ಮಳಿಗೆಯಲ್ಲಿ.ಮೂರುದಿನದ ಆ ನುಡಿಹಬ್ಬದಲ್ಲಿ ಮೊದಲ ಬಾರಿ ಅಚ್ಚಾದ ಅಷ್ಟೂ ಪ್ರತಿಗಳು ಖರ್ಚಾದವು. ಒಟ್ಟಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಏನ್ ಗುರು ಹೊತ್ತಗೆ ಮುಗಿದಾಗ ಮರು ಮುದ್ರಣ ಮಾಡಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದೆವು.

ಹಾಗಾಗಿ ಬೆಳಗಾವಿಯ ವಿಶ್ವಕನ್ನಡ ಸಮ್ಮೇಳನಕ್ಕಾಗಿ ಎರಡನೇ ಬಾರಿ ಅಚ್ಚುಮಾಡಲಾಯಿತು. ಸಮ್ಮೇಳನಗಳಲ್ಲಿ ಮಾತ್ರಾ ಮಾರಾಟ ಮಾಡುವುದು ಸಾಲದೆನ್ನಿಸಿ ಇದೀಗ ಮಳಿಗೆಗಳಲ್ಲೂ ಏನ್ ಗುರು... ಕಾಫಿ ಆಯ್ತಾ? ಹೊತ್ತಗೆಯನ್ನು ಮಾರಾಟಕ್ಕೆ ಇಡುವ ಏರ್ಪಾಡನ್ನು ಮಾಡಿದ್ದೇವೆ.

ಬೆಂಗಳೂರಿನ ಜಯನಗರದಲ್ಲಿರುವ ಟೋಟಲ್ ಕನ್ನಡ ಡಾಟ್ ಕಾಮ್ ಮಳಿಗೆಯಲ್ಲಿ ಏನ್ ಗುರು ಹೊತ್ತಗೆಯನ್ನು ಮಾರಾಟಕ್ಕೆ ಇಡಲಾಗಿದೆ.. ನೀವು ಒಮ್ಮೆ ಭೇಟಿ ನೀಡಿ. ಹೊತ್ತಗೆಯನ್ನು ಖರೀದಿಸಿ. ನಿಮ್ಮ ಗೆಳೆಯರಿಗೂ ಕೊಳ್ಳಲು ಹೇಳಿ. ನಿಮ್ಮ ಗೆಳೆಯರಿಗೆ ಉಡುಗೊರೆಯಾಗಿ ನೀಡಲೊಮ್ಮೆ ಖರೀದಿಸಿ. ಅಂತರ್ಜಾಲದ ಮೂಲಕವೂ ನೀವು ಟೊಟಲ್ ಕನ್ನಡದಲ್ಲಿ ಹೊತ್ತಗೆಗಳನ್ನು ಕೊಳ್ಳಬಹುದು.

ಮಳಿಗೆಯ ವಿಳಾಸ : ಟೋಟಲ್ ಕನ್ನಡ ಡಾಟ್ ಕಾಮ್
ನಂ 638, 31ನೇ ಅಡ್ಡರಸ್ತೆ,
10 ಬಿ ಮುಖ್ಯರಸ್ತೆ (ಪವಿತ್ರ ಹೋಟಲ್ ಎದುರಿನ ರಸ್ತೆ)
ಜಯನಗರ 4ನೇ ಬ್ಲಾಕ್
ಬೆಂಗಳೂರು - 560 011

ಆನ್ ಲೈನ್ ಖರೀದಿಗೆ ಸಂಪರ್ಕಿಸಿ : http://shopping.totalkannada.com

ದೂರವಾಣಿ : 080 4146 0325

"ಎಲ್ಲರ ಕನ್ನಡ" ಓದುಕೂಟ 2011 - ಚನ್ನಾಗಿ ನಡೀತು!


ಬನವಾಸಿ ಬಳಗವು, ಕನ್ನಡ ಭಾಷಾಧ್ಯಯನ ವೇದಿಕೆಯೊಡಗೂಡಿ ಬೆಂಗಳೂರಿನ ರಾಷ್ಟ್ರೀಯ ನರರೋಗ ಮತ್ತು ಮಾನಸಿಕ ಆರೋಗ್ಯ ಸಂಸ್ಥೆಯ (ನಿಮ್ಹಾನ್ಸ್) ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ “ಎಲ್ಲರ ಕನ್ನಡ” ಓದುಕೂಟ – 2011 ಅತ್ಯಂತ ಯಶಸ್ವಿಯಾಗಿ ಜರುಗಿತು.

ಬನವಾಸಿ ಬಳಗದ ಶ್ರೀ ಕಿರಣ್ ಬಾ ರಾ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸಮಾಜದ ಏಳಿಗೆಯಲ್ಲಿ ನುಡಿ ಅಧ್ಯಯನದ ಮಹತ್ವವನ್ನು ತಿಳಿಸಿಕೊಟ್ಟರು. ಯಾವುದೇ ನಾಡಿನ ಏಳಿಗೆಗೆ ಆ ನಾಡಿನ ಜನರಲ್ಲಿನ ಕಲಿಕೆ ಮತ್ತು ದುಡಿಮೆಗಳು ಅತ್ಯುತ್ತಮವಾಗುವುದು ಅಗತ್ಯವಾಗಿರುವುದು ಜಗತ್ತು ಕಂಡುಕೊಂಡಿರುವ ಸತ್ಯ. ಅಂತೆಯೇ ಕನ್ನಡಿಗರ ಏಳಿಗೆಗೆ ಕನ್ನಡಿಗರ ಕಲಿಕಾ ವ್ಯವಸ್ಥೆ ಅತ್ಯುತ್ತಮವಾಗಬೇಕಾಗಿದೆ. ಇದರೊಟ್ಟಿಗೆ ಕನ್ನಡ ನುಡಿಯು ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಬಳಸಬಲ್ಲಷ್ಟು ಶಕ್ತವಾಗಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವು ಅತ್ಯಂತ ಮಹತ್ವಪೂರ್ಣವಾದದ್ದಾಗಿದೆ ಎಂಬ ನಿಲುವಿನ ಹಿನ್ನೆಲೆಯಲ್ಲಿ ಕನ್ನಡನಾಡಿನ ಭಾಷಾಧ್ಯಯನ ಕ್ಷೇತ್ರದಲ್ಲಿ ದುಡಿಯುವುತ್ತಿರುವವರನ್ನು ಒಂದೆಡೆ ಸೇರಿಸಿ ಸದರಿ ಕೆಲಸಕ್ಕೆ ವೇಗ ತಂದುಕೊಡುವ ಉದ್ದೇಶದಿಂದ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದರು.

ಸಮ್ಮೇಳನದಲ್ಲಿ ನಾಡಿನ ನಾನಾ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾಷಾಧ್ಯಯನದ ವಿದ್ಯಾರ್ಥಿಗಳು ಪಾಲ್ಗೊಂಡರು. ಸಮ್ಮೇಳನಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ, ಕನ್ನಡ ಭಾಷಾಧ್ಯಯನಕ್ಕೆ ಸಂಬಂಧಿಸಿದಂತೆ ಪಟ್ಟಿಮಾಡಿದ ಹತ್ತು ವಿಷಯಗಳನ್ನು ಕುರಿತು ಪ್ರಬಂಧಗಳನ್ನು ಬರಮಾಡಿಕೊಳ್ಳಲಾಗಿತ್ತು. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಮಂಡಿಸಲಾಯಿತು. ಉತ್ತಮವಾದ ಮೊದಲ ಮೂರು ಪ್ರಬಂಧಗಳಿಗೆ ಬಹುಮಾನ ನೀಡಲಾಯಿತು.

ಮೊದಲನೇ ಬಹುಮಾನ : ಕನ್ನಡ ನುಡಿಯ ಚರಿತ್ರೆ - ಶ್ರೀ. ಟಿ. ಮಂಜುನಾಥ್
ಎರಡನೇ ಬಹುಮಾನ : ಕನ್ನಡ ಧ್ವನಿ ರಚನೆ - ಶ್ರೀಯುತರಾದ ಡಾII ಬಿ ಎಸ್ ಸತ್ಯನಾರಾಯಣ
ಮೂರನೇ ಬಹುಮಾನ : ಕನ್ನಡ ಕಲಿಕೆ - ಕುಮಾರಿ ನೇತ್ರಾವತಿ

ನಾಡಿನ ಖ್ಯಾತ ಭಾಷಾವಿಜ್ಞಾನಿಗಳಾದ ನಾಡೋಜ ಡಾII ಡಿ ಎನ್ ಶಂಕರ್ ಭಟ್ ಹಾಗೂ ಡಾII ಕೆ ವಿ ನಾರಾಯಣ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಾII ಕೆ ವಿ ನಾರಾಯಣ ಅವರು ಉಪಸ್ಥಿತರಿದ್ದು ಸಮ್ಮೇಳನದಲ್ಲಿ ಭಾಗಿಯಾಗಿದ್ದವರಿಗೆ ಭಾಷಾಧ್ಯಯನ ನಡೆಸುವ ಬಗೆಯನ್ನು ವಿವರಿಸಿದರು. ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವು ಚುರುಕುಗೊಳ್ಳಲು ಅನುಕೂಲವಾಗುವಂತೆ ಯಾವ ಯಾವ ಕ್ಷೇತ್ರಗಳಲ್ಲಿ ಅಧ್ಯಯನವಾಗಬೇಕೆಂಬುದನ್ನು ಇಲ್ಲಿ ಚರ್ಚಿಸಲಾಯ್ತು.

ನಾಡಿನ ಹಿರಿಯ ಭಾಷಾವಿಜ್ಞಾನಿಗಳಾದ ಡಾII ಸಿ. ಎಸ್ ರಾಮಚಂದ್ರ, ಡಾII ಸಿ. ಪಿ. ನಾಗರಾಜ್, ಡಾII ಮಹೇಶ್ವರಯ್ಯ, ಡಾII ರಾಜೇಶ್ವರಿ ಮಹೇಶ್ವರಯ್ಯ, ಡಾII ಪಿ ಮಹದೇವಯ್ಯ, ಡಾII ಸುಬ್ಬುಕೃಷ್ಣ, ಡಾII ಅಶೋಕ್ ಕುಮಾರ್ ರಂಜೇರೆ, ಮೊದಲಾದವರು ಭಾಗವಹಿಸಿದ್ದರು. ನಾಳೆಯತ್ತ ಕನ್ನಡ ಕನ್ನಡಿಗ ಎನ್ನುವ ಘೋಷವಾಕ್ಯ ಹೊಂದಿದ್ದ ಈ ಸಮ್ಮೇಳನದಲ್ಲಿ ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವನ್ನು ಪ್ರೋತ್ಸಾಹಿಸುವ ಮೂಲಕ ಕನ್ನಡ ಭಾಷಾಧ್ಯಯನ ಕ್ಷೇತ್ರಕ್ಕೊಂದು ಹೊಸ ಮುನ್ನುಡಿಯನ್ನು ಬರೆಯಲಾಗಿದೆಯೆಂದು ಸಮ್ಮೇಳನದಲ್ಲಿ ಭಾಗವಹಿಸಿದ್ದವರು ಅಭಿಪ್ರಾಯ ವ್ಯಕ್ತಪಡಿಸಿದರು. ಯಾವುದೇ ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಮ್ಮೇಳನಗಳಿಗೆ/ ಸಿಂಪೋಸಿಯಂಗೆ ಸಾಟಿಯಾಗುವಂತೆ ಇಡೀ ಸಮ್ಮೇಳನವನ್ನು ಆಯೋಜಿಸಲಾಗಿತ್ತು ಎಂಬ ಅಭಿಪ್ರಾಯಗಳು ಸಮ್ಮೇಳನದಲ್ಲಿ ವ್ಯಕ್ತವಾದವು.

ಎಲ್ಲರ ಕನ್ನಡ ಓದುಕೂಟ - 2011

ಗುರು, ಕನ್ನಡ ಕನ್ನಡಿಗ ಕರ್ನಾಟಕಗಳ ಬಗ್ಗೆ ಕಾಳಜಿಯಿಟ್ಟು ದುಡಿಯುತ್ತಿರುವ ಸಂಸ್ಥೆ ನಿಮ್ಮ ಬನವಾಸಿ ಬಳಗ. ಕನ್ನಡ ನುಡಿಯ ಬಗ್ಗೆ ವೈಜ್ಞಾನಿಕ ಅಧ್ಯಯನವಾಗಬೇಕೆಂದು ಆ ನಿಟ್ಟಿನಲ್ಲಿ ದುಡಿಯತ್ತಿರುವ ಮತ್ತೊಂದು ಸಂಸ್ಥೆ ಕನ್ನಡ ಭಾಷಾಧ್ಯಯನ ವೇದಿಕೆ. ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನವನ್ನು ಉತ್ತೇಜಸುವ ದಿಕ್ಕಿನಲ್ಲಿ ಎರಡೂ ಸಂಸ್ಥೆಗಳು ಕೂಡಿ ಎಲ್ಲರ ಕನ್ನಡ ಓದುಕೂಟ – 2011ನ್ನು ಬರುವ ರವಿವಾರ ಮಾರ್ಚ್ 20ರಂದು ಬೆಂಗಳೂರಿನ ನಿಮಾನ್ಸ್ ಕನ್ವೆನ್ಷನ್ ಹಾಲ್ ನಲ್ಲಿ ಬೆಳಿಗ್ಗೆ 10ಕ್ಕೆ ಹಮ್ಮಿಕೊಂಡಿದ್ದೇವೆ.

ನುಡಿಯೆನ್ನುವುದು ಒಂದು ಜನಾಂಗದ ಸಂಸ್ಕೃತಿ, ಇತಿಹಾಸ, ಬದುಕುಗಳಿಗೆ ಹಿಡಿದ ಕನ್ನಡಿ. ಸಮಾಜವೊಂದರ ಏಳಿಗೆಯ ಜೀವನಾಡಿ ಅದರ ನುಡಿ. ಪ್ರಪಂಚದ ಮುಂದುವರೆದ ಜನಾಂಗಗಳೆಲ್ಲಾ ತಮ್ಮ ಕಲಿಕೆ, ದುಡಿಮೆಗಳನ್ನು ತಾಯ್ನುಡಿಯ ಸುತ್ತಲೇ ಕಟ್ಟಿಕೊಂಡಿರುವುದನ್ನು ಮುಂದುವರೆದ ದೇಶಗಳನ್ನು ನೋಡಿ ತಿಳಿಯಬಹುದು. ಕನ್ನಡಿಗರ ಏಳಿಗೆಗೂ ಕನ್ನಡವೇ ಸಾಧನ. ಆದರೆ ಕನ್ನಡ ನುಡಿಯು ಇಂದು ಕನ್ನಡಿಗರ ಕಲಿಕೆ ಬದುಕುಗಳನ್ನು ಕಟ್ಟಿಕೊಡಲು ಮತ್ತಷ್ಟು ಶಕ್ತವಾಗಬೇಕಾಗಿದೆ. ಹಾಗಾಗಲು, ನಮ್ಮ ನುಡಿಯ ವೈಜ್ಞಾನಿಕ ಅಧ್ಯಯನವೂ ವೇಗ ಪಡೆದುಕೊಳ್ಳಬೇಕಾಗಿದೆ ಎನ್ನುವ ಉದ್ದೇಶವಿಟ್ಟುಕೊಂಡು, ಕನ್ನಡ ನುಡಿಯ ವೈಜ್ಞಾನಿಕ ಅಧ್ಯಯನಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ.

ಈ ಓದುಕೂಟಕ್ಕೆಂದೇ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ, ಕರ್ನಾಟಕದ ನಾನಾ ವಿಶ್ವವಿದ್ಯಾಲಯಗಳಲ್ಲಿ ಭಾಷಾ ಅಧ್ಯಯನದಲ್ಲಿ ತೊಡಗಿರುವ ಉತ್ಸಾಹಿಗಳು, ನಾಡಿನ ಹಿರಿಯ ಭಾಷಾವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧಗಳನ್ನು ಸಿದ್ಧಪಡಿಸಿದ್ದು, ಸದರಿ ಸಮ್ಮೇಳನದಲ್ಲಿ ಆಯ್ದಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಅತ್ಯುತ್ತಮ ಪ್ರಬಂಧಗಳಿಗೆ ಬಹುಮಾನ ನೀಡುವ ಕಾರ್ಯಕ್ರಮವೂ ಇದೆ. ಈ ಮೂಲಕ ಕನ್ನಡದ ವೈಜ್ಞಾನಿಕ ಅಧ್ಯಯನ ಕ್ಷೇತ್ರದಲ್ಲೊಂದು ಹೊಸ ಅಧ್ಯಾಯವನ್ನು ಆರಂಭಿಸಲು ಮುಂದಾಗುತ್ತಿದ್ದೇವೆ. ಹಾಗೆಯೇ, ಭಾಷಾ ವಿಜ್ಞಾನದಲ್ಲಿ ಆಗಬೇಕಾದ ಕೆಲಸಗಳೇನು, ಅಧ್ಯಯನ ಮಾಡುವ ರೀತಿ ಎಂತಹುದು, ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯನ್ನು ಭಾಷಾ ವಿಜ್ಞಾನದ ವಿಧ್ಯಾರ್ಥಿಗಳಿಗೆ ಈ ಸಮ್ಮೇಳನ ಕೊಡಲಿದೆ.

ಕನ್ನಡಿಗರ ಏಳಿಗೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾದ ಈ ಕಾರ್ಯಕ್ರಮಕ್ಕೆ ತಮ್ಮನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಬರುವವರು ಮುಂಚೆಯೇ ನೋಂದಾಯಿಸಿಕೊಳ್ಳಬೇಕಾಗಿರುವುದರಿಂದ ತಮ್ಮ ವಿವರಗಳನ್ನು kacheri@banavasibalaga.org ವಿಳಾಸಕ್ಕೆ ಮಿಂಚೆ ಕಳಿಸುವ ಮೂಲಕ ಖಚಿತಪಡಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಬರುವ ಶುಕ್ರವಾರ ಅಂದರೆ 18ನೇ ಮಾರ್ಚ್ ನೋಂದಾಯಸಿಕೊಳ್ಳಲು ಕೊನೆಯ ದಿನವಾಗಿದೆ.

ಗಮನಿಸಿ: ಈ ಕಾರ್ಯಕ್ರಮಕ್ಕೆ ಮೊದಲೇ ನೋಂದಾಯಿಸಿಕೊಂಡವರಿಗೆ ಮಾತ್ರವೇ ಅವಕಾಶವಿರುವ ಕಾರಣ, ತಪ್ಪದೇ ತಮ್ಮ ಬರುವಿಕೆಯನ್ನು ಮೇಲೆ ಕೊಟ್ಟ ವಿಳಾಸಕ್ಕೆ ಮಿಂಚೆ ಕಳಿಸುವಮೂಲಕ ನಿಕ್ಕಿ ಮಾಡಿಕೊಳ್ಳಿ.

ಕನ್ನಡ ಇಷ್ಟಕ್ಕೇ ಲಾಯಕ್ಕಾಗಬೇಕಾ?


ಎರಡನೇ ವಿಶ್ವಕನ್ನಡ ಸಮ್ಮೇಳನ ಸಮಾರೋಪದ ಹಂತಕ್ಕೆ ಬಂದಿದೆ. ಈ ಸಮ್ಮೇಳನದಲ್ಲಿ ಅನೇಕ ಕನ್ನಡಿಗ ಸಾಧಕರು ಭಾಗವಹಿಸಿ ನಾಡಿಗೆ ಸಂದೇಶ ನೀಡಿದರು. ಹೆಚ್ಚಾಗಿ ಮನರಂಜನೆ, ಸಾಹಿತ್ಯ ಕ್ಷೇತ್ರಗಳ ಸುತ್ತಲೇ ವಿಶ್ವಕನ್ನಡ ಸಮ್ಮೇಳನ ನಡೆದಂತಿತ್ತು. ಹಲವರ ಮಾತುಗಳು ಸ್ಪೂರ್ತಿ ನೀಡುವಂತಿದ್ದವು. ಆದರೆ ಮುಖ್ಯವಾಗಿ ನಾರಾಯಣ ಮೂರ್ತಿಗಳ ಸಂದೇಶಗಳನ್ನು ಗಮನಿಸಿದರೆ ಇವರ ಕಣ್ಣಿನಲ್ಲಿ ಕನ್ನಡವೆಂದರೆ ಏನು? ಇದಕ್ಕಿರಬೇಕಾದ ಸ್ಥಾನಮಾನವೇನು? ಅನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತದೆ.

ಕನ್ನಡವೆಂದರೆ... ಇಷ್ಟೇನಾ?

ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು. ನನ್ನ ತಾಯಿಗೆ ಪತ್ರ ಬರೆಯೋದು ಕನ್ನಡದಲ್ಲೇ. ನನ್ನ ಮಕ್ಕಳು ಶಾಲೆಯಲ್ಲಿ ಎರಡನೇ ಭಾಷೆಯಾಗಿ ಕನ್ನಡವನ್ನೇ ಓದಿದ್ದು. ನನ್ನ ಭಾವನೆಯ ಭಾಷೆ ಕನ್ನಡ. ನನಗೆ ಸಿಟ್ಟು ಬಂದರೆ, ಸಂತೋಷವಾದರೆ ಅದನ್ನು ತೋರಿಸೋದು ಕನ್ನಡದಲ್ಲೇ. ನನ್ನ ಮನೆಯ ಮಾತು ಕನ್ನಡ. ನನಗೆ ನಮ್ಮ ಊರಿನ ಕಾಫಿ ಕುಡಿದಾಗ ಸಮಾಧಾನವಾಗುತ್ತದೆ. ನಾನು ಕನ್ನಡದ ಕಾದಂಬರಿಗಳನ್ನು ಓದಿದ್ದೇನೆ. ಅನಂತಮೂರ್ತಿ, ಎಸ್.ಎಲ್.ಭೈರಪ್ಪನವರ ಪುಸ್ತಕಗಳನ್ನು ಓದಿದ್ದೇನೆ. ಇತ್ಯಾದಿಯಾಗಿ ತಮ್ಮ ಬದುಕಿನಲ್ಲಿ ಕನ್ನಡದ ಪಾತ್ರವನ್ನು ವಿವರಿಸಿದ್ದಾರೆ.

ಆದರೆ ವ್ಯವಹಾರದ ಭಾಷೆಯಾಗಿ ಕನ್ನಡ ಬಳಸಲು ಆಗದು, ಅದಕ್ಕೆ ಇಂಗ್ಲೀಷೇ ಆಗಬೇಕು ಅನ್ನೋ ಮಿತಿಯ ಚಿಂತನೆಯನ್ನು ತೋರಿದ್ದಾರೆ. ಕನ್ನಡಿಗರು ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಬಳಸಿ, ಮನೆಯಲ್ಲಿ ಮಾತಾಡಿಕೊಂಡರೆ ಸಾಕು ಎನ್ನುವ ಅನಿಸಿಕೆ ಮೂಡುವಂತಹ ಮಾತುಗಳನ್ನು ಆಡಿದ್ದಾರೆ. ಒಟ್ಟಾರೆಯಾಗಿ ಇವರಂದಂತೆ ಆಗುವುದೆಂದರೆ... ಕನ್ನಡವನ್ನು ಕನ್ನಡಿಗರು ತಮ್ಮ ಮನೆಯ ಮಟ್ಟಿಗೆ ಸೀಮಿತ ಮಾಡಿಕೊಳ್ಳಬೇಕು. ಆ ಮೂಲಕ ತಮ್ಮ ಭಾವನೆಗಳ ಅಭಿವ್ಯಕ್ತಿಗೆ, ಸಾಹಿತ್ಯಕ್ಕೆ, ಮನೆಯಲ್ಲಿ , ಮಾತಾಡಲಿಕ್ಕೆ ಕನ್ನಡ ಬಳಸಿದರೆ ಸಾಕು ಅನ್ನುವ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿರುವಂತಿದೆ. ಇಷ್ಟೇ ಅಲ್ಲದೆ ಇದು ಕರ್ನಾಟಕ ರಾಜ್ಯ ಸರ್ಕಾರದ ಕಲಿಕೆಯಲ್ಲಿನ ಭಾಷಾನೀತಿಯನ್ನು ತಪ್ಪೆನ್ನುವಂತಿತ್ತು.

ಕಲಿಕೆಗೆ ಯೋಗ್ಯವಲ್ಲವೇ ಕನ್ನಡ!

ಕಲಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಇವರು ಇಂಗ್ಲೀಷ್ ಮಾಧ್ಯಮದ ಪರವಾಗಿ ದನಿ ಎತ್ತಿದ್ದರು. ಇವರ ಅನಿಸಿಕೆಗೆ ಇನ್ಫೋಸಿಸ್ ಸಂಸ್ಥೆಯ ಬಡ ಕೆಲಸಗಾರ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲಾಗದೇ ಇವರ ಶಿಫಾರಸ್ಸಿಗೆ ಮಾಡಿದ ಮನವಿ ಕಾರಣವಂತೆ. ಆ ನಂತರ ತಾವು ಕಲಿಕೆಗೆ ಸಂಬಂಧಿಸಿದ ಸಭೆಯೊಂದರಲ್ಲಿ ಭಾಗವಹಿಸಿದ್ದಾಗ, ಆ ಸಭೆಯಲ್ಲಿದ್ದವರ ಮಕ್ಕಳೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಾರೆ ಎನ್ನುವುದನ್ನು ಕಂಡುಕೊಂಡು, ಬಡವರ ಮಕ್ಕಳಿಗೂ ಇಂಗ್ಲೀಷ್ ಮಾಧ್ಯಮದಲ್ಲಿ ಓದುವ ಅವಕಾಶ ಇರಬೇಕು ಅನ್ನೋದನ್ನು ಹೇಳಿದರಂತೆ. ಆ ಮೂಲಕ ಕನ್ನಡಿಗರಿಗೆಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆಂದೂ, ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಬೇಕೆಂದೂ ಹೇಳುತ್ತಾ ಇರುವರೇನೊ ಎನ್ನುವ ಅನಿಸಿಕೆ ಮೂಡಿಸಿದರು.

ಇದ್ದಲ್ಲೇ ಇರೋಣವೇ? ತಿದ್ಕೊಂಡು ಮುಂದೆ ಹೋಗೋಣವೇ?

ಕನ್ನಡನಾಡಲ್ಲಿ ಇಂದು ಇವರು ಹೇಳುತ್ತಿರುವ ಮಿತಿಗಳು ಇರುವುದೇ ದಿಟವಾದಲ್ಲಿ ನಾಳೆಗೆ ಇವರು ನೀಡುತ್ತಿರುವ ಪರಿಹಾರ ಕನ್ನಡಿಗರ ಏಳಿಗೆಗೆ ಮಾರಕವೋ ಪೂರಕವೋ ನಿಜಕ್ಕೂ ಚರ್ಚೆಯಾಗಬೇಕಾಗಿದೆ. ಇಷ್ಟಕ್ಕೂ ನಮ್ಮ ಮಕ್ಕಳಿಗೆ ಇಂಗ್ಲೀಷ್ ಭಾಷೇನಾ ಕಲಿಸಕ್ಕೆ ಯಾರು ಬೇಡಾ ಅಂದಿದಾರೆ? ಗಣಿತ, ವಿಜ್ಞಾನ, ಸಮಾಜಗಳನ್ನೂ ಇಂಗ್ಲೀಷಲ್ಲಿ ಕಲಿಸಬೇಕಾ? ಹಾಗೆ ಕಲಿತು ನಮ್ಮ ಮಕ್ಕಳು ನಿಜಕ್ಕೂ ಬುದ್ಧಿವಂತರಾಗ್ತಾರಾ? ಕನ್ನಡದ ಮಕ್ಕಳನ್ನು ಎಳೆವೆಯಿಂದಲೇ ಕನ್ನಡದಿಂದ ಬೇರೆ ಮಾಡಿದರೆ ಅವಕ್ಕೆಂಥಾ ಅಡಿಪಾಯ ಸಿಕ್ಕೀತು ಗುರೂ? ನಾಳಿನ ವಿಶ್ವವು, ಜ್ಞಾನಾಧಾರಿತ ಪೈಪೋಟಿಯ ವಿಶ್ವವಾಗುತ್ತದೆಯೆಂಬ ಸನ್ನಿವೇಶದಲ್ಲಿ ನಮ್ಮ ಮುಂದಿನ ಪೀಳಿಗೆ ಅದಕ್ಕೆ ಸಜ್ಜಾಗುವುದೆಂತು? ನಾಳಿನ ಜ್ಞಾನಾಧಾರಿತ ಉದ್ದಿಮೆಗಳ ಮೂಲಕ ಸಾಧಿಸುವ ಏಳಿಗೆಗೂ ಇಂಗ್ಲೀಷ್ ಮಾಧ್ಯಮವೇ ದಾರಿಯೆಂದು ನಾರಾಯಣ ಮೂರ್ತಿಗಳು ಹೇಳುವರೇನು? ಅಥವಾ ನಮಗೆ ಜ್ಞಾನಾಧಾರಿತ ಏಳಿಗೆ ಬೇಕಿಲ್ಲ ಅನ್ನುವುದಾದರೆ ಕನ್ನಡ ನಾಡಿನ ತಾತ್ಕಾಲಿಕ ಏಳಿಗೆಯತ್ತ ಮಾತ್ರವೇ ಇವರ ಚಿಂತನೆಗಳು ನಿಂತಂತಾಗುವುದಿಲ್ಲವೇ? ಇಂದು ಕನ್ನಡದಲ್ಲಿ ಜ್ಞಾನ ವಿಜ್ಞಾನಗಳು ಇನ್ನೂ ಎಳವೆಯಲ್ಲಿವೆ. ಹಾಗಾದರೆ ಈಗಿನ ಕಲಿಕೆಯ ಮಟ್ಟವನ್ನು ಮೇಲೆ ತರುವ ಯೋಚನೆ ಮಾಡುವುದು ಬಿಟ್ಟು ಈಗಿರುವುದನ್ನಷ್ಟೇ
ಬಳಸಿಕೊಳ್ಳುತ್ತಾ ಇಂಗ್ಲೀಷ್ ಮಾತಾಡಬಲ್ಲ, ಕಾಲ್ ಸೆಂಟರ್ ಮಟ್ಟದ ಪೀಳಿಗೆಯನ್ನೇ ನಾಳೆಗೂ ಹುಟ್ಟು ಹಾಕುವುದು ತರವೋ? ಸಮ್ಮೇಳನದಲ್ಲಿ ಡಾ. ಅನಂತಮೂರ್ತಿಯವರು ಆಡಿದ ಮುನ್ನಡೆಯ ಮಾತುಗಳು ನಮ್ಮವರ ಕಣ್ತೆರೆಸೀತೆ?

ಬೆಳಗಾವಿ ಸಮ್ಮೇಳನದಲ್ಲಿ "ಏನ್ ಗುರು... ಕಾಫಿ ಆಯ್ತಾ?"

ಇಂದಿನಿಂದ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ಶುರುವಾಗಲಿದೆ. ಸಮ್ಮೇಳನ ಯಶಸ್ವಿಯಾಗಲೆಂದು ಬನವಾಸಿ ಬಳಗವು ಹಾರೈಸುತ್ತದೆ.
ಏನ್ ಗುರು ಕಾಫಿ ಆಯ್ತಾ?

ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಪುಸ್ತಕಕ್ಕೆ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತ್ತು. ಮೂರನೇ ದಿನದ ಸಂಜೆಯ ಹೊತ್ತಿಗೆ ಅಚ್ಚಾದ ಅಷ್ಟೂ ಪ್ರತಿಗಳು ಮಾರಾಟವಾಗಿದ್ದವು. ಇದರಿಂದ ಉತ್ತೇಜಿತರಾದ ನಾವು ಮತ್ತೊಮ್ಮೆ ಪುಸ್ತಕವನ್ನು ಅಚ್ಚು ಮಾಡಿದ್ದೇವೆ. ಹಾಗಾಗಿ ಏನ್‍ಗುರು ಇದೀಗ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಬೆಳಗಾವಿಯಲ್ಲಿ ಏರ್ಪಡಿಸಲಾಗಿರುವ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲೂ ಸಿಗುತ್ತಿದೆ.

ಟೋಟಲ್ ಕನ್ನಡ ಪುಸ್ತಕ ಮಳಿಗೆಯಲ್ಲಿ ಏನ್ ಗುರು ಕಾಫಿ ಆಯ್ತಾ ಪುಸ್ತಕ ದೊರೆಯುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸುವರು ಖಂಡಿತಾ ಟೋಟಲ್ ಕನ್ನಡ ಮಳಿಗೆಗೆ ಭೇಟಿ ಕೊಡಿ. ಹೊತ್ತಗೆಗಳನ್ನು ಕೊಳ್ಳಿರಿ.

ಸ್ಥಳ : ಟೋಟಲ್ ಕನ್ನಡ.ಕಾಂ
ಪುಸ್ತಕ ಮಳಿಗೆ ಸಂಖ್ಯೆ 222,
ಲಿಂಗರಾಜ್ ಕಾಲೇಜು ಮೈದಾನ,
ಬೆಳಗಾವಿ

ವಿಶ್ವ ಕನ್ನಡ ಸಮ್ಮೇಳನ ಮತ್ತು ಕನ್ನಡಿಗರ ಏಳಿಗೆ

ವಿಶ್ವ ಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಇನ್ನೇನು ಶುರುವಾಗಲಿದೆ. ಇದುನ್ನ ಯಾರು ಉದ್ಘಾಟನೆ ಮಾಡಬೇಕು ಅನ್ನೋ ವಿಷಯದಲ್ಲೇ ಕರ್ನಾಟಕದ ಜನರು ಕಳೆದು ಹೋಗಿದ್ದಾರೇನೋ ಅನ್ನಿಸುವಂತೆ ಚರ್ಚೆಗಳು ನಡೀತಾ ಇವೆ. ಇದೇ ಸಂದರ್ಭದಲ್ಲಿ ವಿಶ್ವ ಕನ್ನಡ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು ಒಂದು ಜಾಹೀರಾತನ್ನು ಹೊರಡಿಸಿದೆ.

ಈ ಜಾಹೀರಾತಲ್ಲಿ ವಿಶ್ವ ಕನ್ನಡ ಸಮ್ಮೇಳನ ಯಾಕೆ? ಏನು? ಅಂತನ್ನೋದ್ರು ಬಗ್ಗೆ ನಮ್ಮ ಸರ್ಕಾರ ಏನಂದುಕೊಂಡಿದೆ ಅನ್ನೋದು ಕಾಣುತ್ತೆ. ಏಕೀಕರಣವಾಗಿ ಕರ್ನಾಟಕ ಐವತ್ತು ವರ್ಷ ಆಯ್ತು. ಈ 50 ವರ್ಷಗಳಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತಷ್ಟು ಪ್ರಜ್ವಲಿಸಿದೆಯಂತೆ. ಇದೀಗ ಕನ್ನಡ ಶಾಸ್ತ್ರೀಯ ಭಾಷೆಯಾಗಿದೆ (!). ಇದಕ್ಕೆಲ್ಲಾ ಕಾರಣ ಕನ್ನಡದ ಹಿರಿಯ ಪರಂಪರೆ ಮತ್ತು ಸಾಂಸ್ಕೃತಿಕ ಗರಿಮೆ. ಇಂತಹ ಗರಿಮೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಸಲುವಾಗಿಯೂ, ಕನ್ನಡತನದ ಮೇರುಸ್ಥಿತಿಗೆ ಕಾರನವಾದವರನ್ನು ಗೌರವಿಸುವ ಸಲುವಾಗಿಯೂ, ನಮ್ಮ ನಿನ್ನೆಯ ಹಾದಿಯನ್ನು ನೆನೆದು ಮುಂದಿನ ಹಾದಿಯನ್ನು ನಿಚ್ಚಳಗೊಳಿಸುವ ಸಲುವಾಗಿಯೂ ಈ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಲಾಗುತ್ತಿದೆಯೆಂದು ರಾಜ್ಯಸರ್ಕಾರ ಹೇಳಿಕೊಳ್ಳುತ್ತಿದೆ.

ವಿಶ್ವ ಕನ್ನಡ ಸಮ್ಮೇಳನವೆಂದರೆ…

ಒಂದು ನಾಡಿನ ಜನರ ಕಲಿಕೆ, ದುಡಿಮೆಗಳು ಆ ನಾಡಿನ ಏಳಿಗೆಗೆ ಸಾಧನಗಳಾಗುತ್ತವೆ ಎಂಬುದು ಜಗತ್ತು ಕಂಡುಕೊಂಡಿರುವ ಸತ್ಯ. ನಾಡಿನ ಜನರ ನಡುವೆ ಇರುವ ಸಹಕಾರದ ಒಗ್ಗಟ್ಟು, ಸಾಧಿಸಬೇಕೆಂಬ ಛಲಗಳೂ ಕೂಡಾ ನಾಡಿನ ಏಳಿಗೆಯ ದಿಕ್ಕಿನೆಡೆ ಒಯ್ಯುವ ಪ್ರಮುಖವಾದ ಸಾಧನಗಳಾಗಿವೆ. ಅಂದರೆ ಈ ನಾಲ್ಕು ವಿಷಯಗಳೇ ಯಾವುದೇ ನಾಡಿನ ಏಳಿಗೆಗೆ ಆಧಾರಸ್ತಂಭಗಳಾಗಿವೆ ಎಂದರೆ ತಪ್ಪಾಗಲಾರದು. ಈ ನಾಲ್ಕೂ ಆಧಾರ ಸ್ತಂಭಗಳಲ್ಲಿ ಹಾಸುಹೊಕ್ಕಾಗಿರುವುದು ಆ ನಾಡಜನರ ತಾಯ್ನುಡಿ. ಅಂದರೆ ಪ್ರತ್ಹಿಯ್ಗೊಂದ್ಗು ಸಮಾಜದ ಏಳಿಗೆಯಲ್ಲೂ ಆ ಸಮಾಜದ ತಾಯ್ನುಡಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದಲೇ ಕನ್ನಡ ಎನ್ನುವುದು ನಮಗೆ ಮಹತ್ವದ್ದಾಗಿದೆ. ಈ ಕಾರಣದಿಂದಲೇ ವಿಶ್ವ ಕನ್ನಡ ಸಮ್ಮೇಳನವೆನ್ನುವುದು ಈ ನಾಲ್ಕೂ ಕಂಬಗಳನ್ನು ಬಲಪಡಿಸುವ ಸಾಧನವಾಗಬೇಕಾಗಿದೆ.

ಕನ್ನಡಿಗರಲ್ಲಿ ಒಗ್ಗಟ್ಟು…

ವಿಶ್ವ ಕನ್ನಡ ಸಮ್ಮೇಳನ ಅಂದಾಕ್ಷಣ ಅದು ಕನ್ನಡ ನುಡಿಹಬ್ಬವೆಂದಾಗಲೀ, ಸಾಹಿತ್ಯ ಸಮ್ಮೇಳನದಂತೆ ಎಂದಾಗಲೀ, ಕನ್ನಡಿಗರ ಇತಿಹಾಸ, ಸಂಸ್ಕೃತಿ, ಹಿರಿಮೆಗಳ ವಸ್ತುಪ್ರದರ್ಶನವಾಗಲೀ ಮಾತ್ರವಲ್ಲ. ವಿಶ್ವ ಕನ್ನಡ ಸಮ್ಮೇಳನವೆಂಬುದು ಸರಿಯಾಗಿ ಬಳಸಿಕೊಂಡರೆ ಕನ್ನಡಿಗರಲ್ಲಿ ಒಗ್ಗಟ್ಟು ಮೂಡಿಸುವ ಒಂದು ಅತ್ಯುತ್ತಮ ಸಾಧನ ಆಗಲಿದೆ. ಇಂತಹ ಸಮ್ಮೇಳನವನ್ನು ಕರ್ನಾಟಕದ ಜನರ ಪ್ರತಿನಿಧಿಯಾದ ನಮ್ಮ ರಾಜ್ಯ ಸರ್ಕಾರವೇ ನಡೆಸುತ್ತಿರುವುದು ಅತ್ಯಂತ ಸರಿಯಾದುದಾಗಿದೆ. ಇದು ನಾಲ್ಕು ಕಂಬಗಳಲ್ಲಿ ಒಗ್ಗಟ್ಟೆಂಬ ಕಂಬವನ್ನು ಬಲಪಡಿಸುವ ಕಡೆಗೊಂದು ಹೆಜ್ಜೆಯನ್ನು ಇಟ್ಟಂತಾಗಿದೆ ಎನ್ನಬಹುದು. ಇನ್ನು ಉಳಿದ ಮೂರು ಕಂಬಗಳನ್ನು ಬಲಪಡಿಸುವುದು… ಈ ಸಮ್ಮೇಳನವನ್ನು ಹೇಗೆ ನಡೆಸುತ್ತಾರೆ? ಏನೇನು ಕಾರ್ಯಕ್ರಮ ಮಾಡುತ್ತಾರೆ? ಯಾವ ಸಂದೇಶ ಕೊಡುತ್ತಾರೆ? ಯಾವ ತೆರನಾದ ಚಿಂತನೆ ಅಲ್ಲಿ ನಡೆಸುತ್ತಾರೆ? ಅಸಲಿಗೆ ಅಲ್ಲಿ ಚಿಂತನೆಯನ್ನು ನಡೆಸುತ್ತಾರಾ? ಎಂಬುದರ ಮೇಲೆ ಅವಲಂಬಿಸಿದೆ.

ಕನ್ನಡಿಗರ ಕಲಿಕೆ…

ಪ್ರಪಂಚದಲ್ಲಿ ಮುಂದುವರೆದಿರೋ ದೇಶಗಳಲ್ಲೆಲ್ಲಾ ಕಲಿಕೆ ತಾಯ್ನುಡಿಯಲ್ಲೇ ಆಗುತ್ತಿರುವುದನ್ನು ನಾವು ಇಂಗ್ಲೇಂಡ್, ಜಪಾನ್, ಇಸ್ರೇಲ್, ಜರ್ಮನಿ, ಫ್ರಾನ್ಸ್ ಮೊದಲಾದ ದೇಶಗಳನ್ನು ನೋಡುವ ಮೂಲಕವೂ, ವಿಜ್ಞಾನಿಗಳ ಅಧ್ಯಯನ ಹಾಗೂ ಮಾತುಗಳನ್ನು ನಂಬುವ ಮೂಲಕವೂ ಅರಿಯಬಹುದಾಗಿದೆ. ಹಾಗಾಗಿ ಕನ್ನಡಿಗರು ಏಳಿಗೆ ಹೊಂದಲು, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಸಾಧಿಸಲು ಕನ್ನಡದಲ್ಲಿಯೇ ಕಲಿಕೆ ಮಾಡಬೇಕಾಗಿದೆ. ಹಾಗೆಂದಾಕ್ಷಣ, ನಾಳೆಯಿಂದ ಕರ್ನಾಟಕದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುತ್ತೇವೆ ಎನ್ನುವುದು ದುಡುಕಿನ ಮಾತಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ನಮ್ಮ ಮಕ್ಕಳ ಅರಿವು, ಕಲಿಕೆಯ ಮಟ್ಟ ಹೆಚ್ಚಿ ಜಗತ್ತಿನ ಅತ್ಯುತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬಂತಹ ವಾತಾವರಣವನ್ನು ಹುಟ್ಟುಹಾಕಬೇಕಾಗಿದೆ. ಹಾಗಾಗ ಬೇಕೆಂದರೆ ಮೊದಲನೆಯದಾಗಿ ಇಂದು ನಾವು ಕಲಿಕೆಯಲ್ಲಿ ಬಳಸುತ್ತಿರುವುದು ಸರಿಯಾದ ಕನ್ನಡವೇ? ಈಗಿನ ನಮ್ಮ ನುಡಿಯು ಎಲ್ಲಾ ಕ್ಷೇತ್ರಗಳಲ್ಲೂ ಬಳಕೆಯಾಗಬಲ್ಲ ಸಾಮರ್ಥ್ಯ ಹೊಂದಿದೆಯೇ? ಅಂತಹ ಕ್ಷೆತ್ರಗಲಾವುವು? ಅಂತಹ ಸಾನರ್ಥ್ಯ ಗಳಿಸಿಕೊಡುವುದು ಹೇಗೆ? ಕನ್ನಡದ ವ್ಯಾಕರಣ ಎಂಥದು? ಕನ್ನಡದಲ್ಲಿ ಪದಗಳನ್ನು ಹುಟ್ಟುಹಾಕುವುದು ಹೇಗೆ? ಹಾಗೆ ಹುಟ್ಟು ಹಾಕಲಾಗುವ ಪದಗಳನ್ನು ಕಲಿಕೆಯಲ್ಲಿ ತರುವುದು ಹೇಗೆ? ಇತ್ಯಾದಿಗಳ ಚಿಂತನೆಗೆ ಹಚ್ಚಬಲ್ಲಂತಹ ಕನ್ನಡ ನುಡಿಯ ವೈಜ್ಞಾನಿಕವಾದ ಅಧ್ಯಯನವಾಗಬೇಕಾಗಿದೆ. ನಾಡಿನ ಈಗಿನ ಕಲಿಕಾ ಪದ್ದತಿಯಲ್ಲಿ ಸುಧಾರಣೆ ತರುವ ಜೊತೆಜೊತೆಯಲ್ಲೇ, ಎಲ್ಲಾ ಹಂತದ ಕಲಿಕೆಯನ್ನೂ ಕನ್ನಡಕ್ಕೆ ತರುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಕನ್ನಡ ಶಾಲೆಗಳ ಗುಣಮಟ್ಟದ ಜೊತೆಯಲ್ಲೇ ಕಲಿಕಾ ಪದ್ಧತಿಯ, ಕಲಿಯುವ ವಿಷಯಗಳ ಗುಣಮಟ್ಟವನ್ನೂ ಹೆಚ್ಚಿಸುವುದು ಹೇಗೆ? ಎಂಬುದಕ್ಕೆ ಪ್ರಪಂಚದ ಬೇರೆ ಬೇರೆ ಯಶಸ್ವಿ ಸಮಾಜಗಳ ಪದ್ಧತಿಯನ್ನು ಅಧ್ಯಯನ ಮಾಡಬೇಕಾಗಿದೆ, ಅಲ್ಲಿನ ಒಳಿತನ್ನು ಅಳವಡಿಸಿ ನಮ್ಮ ನಾಡಿಗೆ ಹೊಂದಿಕೆಯಾಗುವ ಕಲಿಕಾ ವ್ಯವಸ್ಥೆಯನ್ನು ಕಟ್ಟಬೇಕಾಗಿದೆ. ಇದಾಗದ ಹೊರತು ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲ ಕನ್ನಡಿಗರ ಸಂಖ್ಯೆ ಹೆಚ್ಚುವುದು ಬಲು ಕಷ್ಟದ್ದಾಗಿದೆ.

ಕನ್ನಡಿಗರ ದುಡಿಮೆ…

ಕಲಿಕೆಯ ತಳಪಾಯವನ್ನು ಸರಿಪಡಿಸುವುದು ದುಡಿಮೆಯನ್ನು ಹೆಚ್ಚಿಸುವ ಒಂದು ಸಾಧನವಾಗಿದೆ. ಇದರ ಜೊತೆಗೆ ಸರ್ಕಾರ ತಾನು ಹೊಂದಿರುವ ಹಲವಾರು ನೀತಿಗಳನ್ನು ಮರು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಜನರಲ್ಲಿ ದುಡಿಯಬೇಕೆನ್ನುವ ಸಂಸ್ಕೃತಿಯನ್ನೇ ಕೊಂದುಹಾಕುವ ಯೋಜನೆಗಳನ್ನು ಕೈಬಿಡಬೇಕಾಗಿದೆ. ಸಬ್ಸಿಡಿಯೆನ್ನುವುದು ದುಡಿಮೆಗೆ ಉತ್ತೇಜಿಸುತ್ತಿದೆಯೋ ಅಥವಾ ಜನರನ್ನು ಸೋಮಾರಿಗಳಾಗಿ ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕಾಗಿದೆ. ನಮ್ಮ ಸರ್ಕಾರದ ಯೋಜನೆಗಳಿಂದಾಗಿ ಪ್ರತಿಯೊಂದನ್ನು ಸರ್ಕಾರವೇ ಪುಗಸಟ್ಟೆ ಕೊಡಲಿ ಎಂಬ ಮನಸ್ಥಿತಿಯನ್ನು ನಮ್ಮ ಜನರಲ್ಲಿ ಹುಟ್ಟು ಹಾಕದಂತೆ ಎಚ್ಚರ ವಹಿಸಬೇಕಾಗಿದೆ.
ಚೆನ್ನಾಗಿ ದುಡಿದರೆ ಚೆನ್ನಾಗಿ ಸಂಪಾದಿಸಬಹುದು ಎನ್ನುವುದನ್ನು ಜನಕ್ಕೆ ಮನವರಿಕೆ ಮಾಡಿಕೊಡುವಂತಹ ವ್ಯವಸ್ಥೆ ರೂಪಿಸುವಂತಹ ನ್ತೀತಿ ನಮ್ಮ ಸರ್ಕಾರದ್ದಾಗಬೇಕಾಗಿದೆ. ವೃತ್ತಿ ಕೌಶಲ್ಯ ಹೆಚ್ಚಿಸುವ, ದುಡಿಮೆಯನ್ನು ಉತ್ತೇಜಿಸುವ, ಉದ್ಯಮಗಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ತರಬೇತಿ, ಮಾರ್ಗದರ್ಶನ ಹಾಗೂ ಸಹಕಾರವನ್ನು ನೀಡುವಂತಹ ನೀತಿಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಯಾವ ಕ್ಷೇತ್ರದಲ್ಲಿ ಇಂದು ಕನ್ನಡಿಗರು ಹಿಂದುಳಿದಿದ್ದಾರೋ ಅಂಥಾ ಕ್ಷೇತ್ರಗಳನ್ನು ಗುರುತಿಸಿ, ಹೊರನಾಡಿನ ಪರಿಣಿತರ ಸಹಾಯ/ ಸೇವೆ ಪಡೆದು ಅಂತಹ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯವಿರುವ ವಾತಾವರಣ/ ವ್ಯವಸ್ಥೆಯನ್ನು ಕಟ್ಟಬೇಕಾಗುತ್ತದೆ. ಕನ್ನಡಿಗರು ಪ್ರಪಂಚದ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ, ಇಡೀ ವಿಶ್ವಕ್ಕೇ ಅವನ್ನು ಮಾರಬಲ್ಲಂತಹ ಕ್ಷಮತೆ, ಯೋಗ್ಯತೆಗಳನ್ನು ಗಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಯೋಚಿಸಿ, ತಕ್ಕಂಥಾ ಯೋಜನೆಗಳನ್ನು ರೂಪಿಸಬೇಕಾಗಿದೆ.

ಕನ್ನಡಿಗರಲ್ಲಿ ಸಾಧಿಸುವ ಛಲ…

ಸಾಧಕರನ್ನು ಕಂಡು ಇಂತಹ ಸಾಧನೆಗಳನ್ನು ನಾವೂ ಮಾಡಬೇಕು ಎನ್ನುವ ಛಲವನ್ನು ಪ್ರತಿಯೊಂದು ಕನ್ನಡದ ಮನಸ್ಸಿನಲ್ಲಿ ಹುಟ್ಟುಹಾಕಲು ಏನು ಮಾಡಬೇಕು? ಈ ವಿಷಯವಾಗಿ ನಮ್ಮ ಇತಿಹಾಸದಿಂದ ಹೇಗೆ ಪ್ರೇರಣೆ ಪಡೆಯಬೇಕು? ನಮ್ಮ ಹಿಂದಿನವರ ಸೋಲುಗಳಿಂದ ಏನು ಕಲಿಯಬೇಕು? ಇಂದಿನ ನಮ್ಮ ಸಾಧಕರ ಅನುಭವದ ಲಾಭ ಮುಂದಿನ ಜನಾಂಗಕ್ಕೆ ತಲುಪಿಸುವ ಬಗೆ ಎಂತು? ನಮಗೂ ಗೆಲ್ಲುವ ಯೋಗ್ಯತೆಯಿದೆ, ಜಗತ್ತಿನ ಯಾವ ಮುಂದುವರೆದ ನಾಡಿಗೂ ನಾವು ಕಡಿಮೆಯಿರಬಾರದು ಎನ್ನುವ ಛಲ ಹುಟ್ಟು ಹಾಕುವುದು ಹೇಗೆ? ಎಂಬುದರ ಬಗ್ಗೆ ಚಿಂತನೆ ಯೋಜನೆಯಾಗಬೇಕಾಗಿದೆ.
ವ್ಯರ್ಥವಾಗದಿರಲಿ ವಿಶ್ವ ಕನ್ನಡ ಸಮ್ಮೇಳನ

ಹೌದೂ, ವಿಶ್ವಕನ್ನಡ ಸಮ್ಮೇಳನವೆನ್ನುವುದು ಕನ್ನಡಿಗರ ನಿನ್ನೆಗಳ ಬಗ್ಗೆ ಗಮನ ಹರಿಸುವುದಕ್ಕಿಂತಲೂ ಹೆಚ್ಚಾಗಿ ನಾಳೆಗಳನ್ನು ಹಸನುಗೊಳಿಸುವ ಬಗ್ಗೆ ಚಿಂತನೆಗೆ ಹಚ್ಚುವಂತಾಗಲಿ. ಕನ್ನಡಿಗರು ವಿಶ್ವದ ಮುಂದುವರೆದ ನಾಡುಗಳ ಸಮಸಮನಾಗಿ ನಿಲ್ಲುವಂತಾಗಲು ಬೇಕಿರುವ ವಿಷಯಗಳ ಬಗ್ಗೆ ಚರ್ಚೆ ನಡೆಸುವಂತಾಗಲೀ. ಸಮ್ಮೇಳನದಲ್ಲಿ ತೋರಿಸುವ ಇತಿಹಾಸ, ಸಂಸ್ಕೃತಿಗಳು ನಮ್ಮ ಮೈಮನಗಳಲ್ಲಿ ಹೆಮ್ಮೆ, ಸ್ಪೂರ್ತಿಗಳನ್ನು ಹುಟ್ಟುಹಾಕಲಿ. ಸಾಧಕರ ಮಾತುಗಳು ಮತ್ತಷ್ಟು ಸಾಧಕರನ್ನು ಹುಟ್ಟುಹಾಕುವಂತಿರಲಿ. ಕರ್ನಾಟಕ ರಾಜ್ಯ ಸರ್ಕಾರ ಬೊಕ್ಕಸದಿಂದ ವೆಚ್ಚ ಮಾಡುತ್ತಿರುವ ಪ್ರತಿಯೊಂದು ಪೈಸೆಯೂ ನಾಡಿನ ನಾಳಿನ ಏಳಿಗೆಗೆ ಹೂಡಿದ ಬಂಡವಾಳವಾಗಲಿ. ಕನ್ನಡಿಗರ ಸಂಸ್ಕೃತಿಯೆಂಬುದು ‘ಇತಿಹಾಸದ ಸವಿಯ ಮೆಲುಕು ಹಾಕುವಿಕೆ’ ಮಾತ್ರವಾಗದಿರಲಿ. ಇಡೀ ಸಮ್ಮೇಳನದ ಕಾರ್ಯಕ್ರಮಗಳು ವ್ಯರ್ಥವಾದ ವೈಭವೀಕರಣವಾಗಿರದೆ ಅರ್ಥಪೂರ್ಣವಾಗಿರಲಿ. ವಾಸ್ತವವಾಗಿ ನಾವಿರುವ ಹಂತ, ಸಾಗಬೇಕಾದ ದಾರಿ, ಎದುರಿಸಬೇಕಾದ ಎಡರು ತೊಡರುಗಳು, ಅವನ್ನು ದಾಟಿದ ನಂತರ ದಕ್ಕಿಸಿಕೊಳ್ಳುವ ಭವ್ಯವಾದ ನಾಳೆಗಳತ್ತ ಕನ್ನಡಿಗರನ್ನು ಕೊಂಡೊಯ್ಯುವಂತಿರಲಿ. ಹೌದಲ್ವಾ ಗುರೂ!

ಇದು ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

ಶ್ರೀಮತಿ ಹೇಮಾಮಾಲಿನಿಯವರನ್ನು ರಾಜ್ಯಸಭೆಗೆ ಬಿಜೆಪಿಯೋರು ಕಣಕ್ಕಿಳಿಸಿರೋದನ್ನು ಸಮರ್ಥಿಸಿ ನಿನ್ನೆಯ (02.03.2011ರ) ಹೊಸದಿಗಂತ ದಿನಪತ್ರಿಕೆಯ 6ನೇ ಪುಟದಲ್ಲಿ ಶ್ರೀ ಸಂತೋಶ್ ತಮ್ಮಯ್ಯ ಅನ್ನೋರು ಬರೆದಿರೋ ಅಂಕಣ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ದಡ್ಡಿ ಎಂದು ಕರೆದಿದ್ದಾರೆ ಅನ್ನೋದನ್ನು ಕೇಂದ್ರವಾಗಿಸಿಕೊಂಡು ಹೇಮಾ ಉಮೇದುವಾರಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಇರಾದೆ ಈ ಬರಹದಲ್ಲಿ ಕಾಣ್ತಿದೆ.

ಸಮರ್ಥನೆಗೆ ಸಲ್ಲದ ವಾದ!

ಬರಹದಲ್ಲಿ ನಿಜಕ್ಕೂ ಹೇಮಮಾಲಿನಿಯವರು ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವುದಕ್ಕೆ ಮೂರು ಥರದ ಸಮರ್ಥನೆ ಕೊಡಲಾಗಿದೆ. ಮೊದಲನೆಯದು, ಇವರು ಯಾಕೆ ಸ್ಪರ್ಧಿಸಬಾರದು? ಎನ್ನುವ ನೆಲೆಗಟ್ಟಿನದ್ದು. ಎರಡನೆಯದು ಭಾರತೀಯತೆ, ಕಲಾ ಹಿನ್ನೆಲೆ ಮೊದಲಾದ ಅರ್ಹತೆಗಳನ್ನು ಮುಂದುಮಾಡಿರುವುದು ಮತ್ತು ಮೂರನೆಯದು ಇದಕ್ಕೆ ಆಕ್ಷೇಪ ಎತ್ತಿರುವವರ ಕುಂದುಗಳನ್ನೆತ್ತಿ ತೋರಿರುವುದು. ಈ ಮೂರೂ ಸಮರ್ಥನೆಗಳು ಸಾಗಿರುವ ದಾರಿ ಬರಹಗಾರರ ಪೂರ್ವಾಗ್ರಹ/ ಪೂರ್ವ ಪಕ್ಷಪಾತತನಗಳನ್ನು ಎತ್ತಿ ತೋರಿಸುತ್ತಿವೆ ಎಂಬುದು ಹದಿನಾರಣೆ ಸತ್ಯವಾದ ಸಂಗತಿಯಾಗಿದೆ.

ಯಾಕೆ ಸ್ಪರ್ಧಿಸಬಾರದು?

ಸಂವಿಧಾನದಲ್ಲಿ ಹೇಳಿರುವಂತಹ ‘ರಾಜ್ಯಸಭೆಗೆ ಸ್ಪರ್ಧಿಸಲು ಬೇಕಾದ ಅರ್ಹತೆಯ’ ಬಗ್ಗೆ ಇದರಲ್ಲಿ ಮಾತಾಡಿದ್ದಾರೆ. 30ವರ್ಷ ವಯಸ್ಸು ಆಗಿರಬೇಕು, ಭಾರತೀಯರಾಗಿರಬೇಕು, ದೀವಾಳಿಯಾಗಿಲ್ಲ, ಕ್ರಿಮಿನಲ್ ಅಲ್ಲಾ, ತಲೆ ನೆಟ್ಟಗಿದೆ… ಇತ್ಯಾದಿ ನಿಯಮಗಳನ್ನು ಹೇಮಾಮಾಲಿನಿಯವರು ಪೂರೈಸುತ್ತಾರೆ ಎನ್ನುತ್ತಾ ಅವರನ್ನು ಕಣಕ್ಕಿಳಿಸಿರುವುದನ್ನು ಸಮರ್ಥಿಸಿದ್ದಾರೆ. ಅವರು ಕನ್ನಡಿಗರಾಗಿರಬೇಕಾದ ಅಗತ್ಯವೇನಿಲ್ಲಾ, ಏಕೆಂದರೆ ಅರವತ್ತು ವರ್ಷದಿಂದ ಕನ್ನಡಿಗರು ಅಲ್ಲಿ ಹೋಗಿ ಕಿಸಿದಿರುವುದೇನು ಎಂದು ಸಾರಾಸಗಟಾಗಿ ಹಿಂದಿನ ಎಲ್ಲಾ ರಾಜ್ಯಸಭಾ ಸದಸ್ಯರನ್ನು, ಅವರ ಸಾಧನೆಯನ್ನೂ ಪಕ್ಕಕ್ಕೆ ಸರಿಸಿಬಿಡುತ್ತಾರೆ. ವೆಂಕಯ್ಯನಾಯ್ಡು ಅವರಿಂದ ಕರ್ನಾಟಕಕ್ಕೆ ಸಕ್ಕತ್ ಒಳ್ಳೇದಾಗಿದೆ ಹಾಗಾಗಿ ಹೇಮಾ ಆಯ್ಕೆ ಸರಿಯೆಂದೂ ವಾದಿಸಿದ್ದಾರೆ. ವೆಂಕಯ್ಯನಾಯ್ಡು ಅವರು ಕೃಷ್ಣಾ ನದಿ ನೀರು ಹಂಚಿಕೆಗೆ ಕರ್ನಾಟಕಕ್ಕೆ ಸಹಾಯ ಮಾಡಿದ್ದಾರೆ ಎಂದೂ ಘೋಷಿಸಿಬಿಡುತ್ತಾರೆ. ಸರಿ, ಹಾಗಾದರೆ ಕೃಷ್ಣಾ ತೀರ್ಪಿನಲ್ಲಿ ನೂರು ಟಿಎಂಸಿಯಷ್ಟು ಕಡಿಮೆ ನೀರು ನಮಗೆ ಸಿಕ್ಕಿದ್ದು ಯಾಕೆ? ಹೋಗಲೀ, ನಾಳೆ ಹೇಮಾಮಾಲಿನಿಯವರು ಕಾವೇರಿ, ಹೊಗೇನಕಲ್ ಇತ್ಯಾದಿ ಸಮಸ್ಯೆಗಳ ಚರ್ಚೆ ಸಂಸತ್ತಿನಲ್ಲಿ ನಡೆಯುವಾಗ ಯಾವ ರಾಜ್ಯದ ಪರ ವಹಿಸುತ್ತಾರೆ? ಕರ್ನಾಟಕದ ಪರ ದನಿ ಎತ್ತಬಲ್ಲರೇ? ಕರ್ನಾಟಕದ ಸಮಸ್ಯೆಗಳ ಬಗ್ಗೆ ಏನು ತಿಳಿದಿದೆ ಅವರಿಗೆ? ಕರ್ನಾಟಕದ ಪರ ನಿಲ್ಲಬೇಕಾದ ಅನಿವಾರ್ಯತೆಯಾದರೂ ಏನಿದೆ? ಅದಕ್ಕೇ ನಾವು ಹೇಳಿದ್ದು... ಬರೀ ಭಾರತೀಯರಾದ್ರೆ ಸಾಲದು, ಕರ್ನಾಟಕದ ಕಡೆಗೊಂದು ಪ್ರಶ್ನಾತೀತ ಬದ್ಧತೆ ಇರಬೇಕು ಅಂತಾ.

ಉತ್ತಮ ಅಭ್ಯರ್ಥಿಯ ಅರ್ಹತೆ!

ಹೇಮಾಮಾಲಿನಿಯವರು ಸಂವಿಧಾನವು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳಿಗೆ ಇರಬೇಕೆಂದು ನಿಗದಿಪಡಿಸಿದ ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದಾರೆ ಎನ್ನುವುದರಲ್ಲಿ ಸಂದೇಹವೇನಿಲ್ಲ. ಆದರೆ ಇವರನ್ನು ರಾಜ್ಯಸಭೆಗೆ ಕಳಿಸಲು ಇದೆಲ್ಲಾ ಮಾನದಂಡಗಳಿಗೂ ಮಿಗಿಲಾದ ಅರ್ಹತೆ ಇರಬೇಕಾಗುತ್ತದೆ ಎಂಬುದನ್ನು ಮರೆಮಾಚುತ್ತಿದ್ದಾರೆ. ಜೊತೆಗೆ ಭಾರತದಲ್ಲಿ ರಾಜ್ಯಸಭೆಯೆನ್ನುವ ಸಂಸತ್ತಿನ ಮೇಲ್ಮನೆಯನ್ನು ಯಾಕೆ ಸ್ಥಾಪಿಸಲಾಗಿದೆ? ಇದು ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಬಲಪಡಿಸಬಲ್ಲದು? ಎಂಬುದನ್ನು ಲೆಕ್ಕಕ್ಕಿಲ್ಲದ ವಿಷಯವಾಗಿಸುತ್ತಿದ್ದಾರೆ. ಇವರೊಬ್ಬ ಶ್ರೇಷ್ಠ ಕಲಾವಿದೆಯಾಗಿದ್ದಾರೆ ಎನ್ನುವುದೇ ಮಾನದಂಡವಾಗಿದ್ದಲ್ಲಿ ಬಿ.ಜಯಶ್ರೀಯವರಂತೆ ನಾಮಕರಣಗೊಂಡ ಸದಸ್ಯೆಯಾಗಬಹುದಿತ್ತಲ್ಲವೇ? ಅದಕ್ಕೂ ಕೋಟಾ ಇದೆಯಲ್ಲಾ? ಕರ್ನಾಟಕದಿಂದ ರಾಜ್ಯಸಭೆಗೆ ಹೋದ ಕನ್ನಡಿಗರು ಅಯೋಗ್ಯರಾಗಿದ್ದಾರೆ ಅಂದ ಮಾತ್ರಕ್ಕೆ ಅಭ್ಯರ್ಥಿಯ ಅಯೋಗ್ಯತನವನ್ನೇ ಮಾನದಂಡವಾಗಿಸಬಾರದಲ್ಲವೇ? ಇಲ್ಲಿನವರು ಯೋಗ್ಯರಿಲ್ಲಾ ಅದಕ್ಕೆ ಅಲ್ಲಿನವರನ್ನು ಕಣಕ್ಕಿಳಿಸುತ್ತಿದ್ದೇವೆ ಎನ್ನುವ ಮಾತಿಗೆ “ಇಡೀ ಕರ್ನಾಟಕದಿಂದ ಒಬ್ಬರೂ ಯೋಗ್ಯರು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ?” ಎಂದು ಕೇಳಿರುವುದು ಸರಿಯಾಗೇ ಇದೆಯಲ್ಲವೇ?

ಆಕ್ಷೇಪ ಎತ್ತಿದವರ ಕೊರತೆಗಳ ಜಾಡಿನಲ್ಲಿ…

ಮಹಾಭಾರತ, ಭಗವದ್ಗೀತೆಯ ಉಕ್ತಿಗಳನ್ನು ಎತ್ತಿ ಆಡುತ್ತಾ ಸಂತೋಶ್ ಅವರು ಮೊದಲಿಗೆ ಗಿರೀಶ್ ಕಾರ್ನಾಡ್ ಅವರನ್ನು, ಅವರ ಅರಿವನ್ನೂ ಅರ್ಜುನನ ಪ್ರಜ್ಞಾವಾದವೆನ್ನುತ್ತಾ ಅದು ಅಪಕ್ವ, ಅಪ್ರಬುದ್ಧವೆಂದೂ, ಹಿಂದೂ ವಿರೋಧಿಯೆಂದೂ ಸ್ಥಾಪಿಸುವ ಯತ್ನ ಮಾಡಿದ್ದಾರೆ. ಅಲ್ಲಿಂದ ಕಾರ್ನಾಡ್ ಅವರು ಹೇಮಾಮಾಲಿನಿಯವರನ್ನು ಖಂಡಿಸಿ, ಗೆಳೆಯ ಮರುಳುಸಿದ್ದಪ್ಪನವರನ್ನು ಬೆಂಬಲಿಸಲು ಕನ್ನಡವನ್ನು ಅಸ್ತ್ರವಾಗಿ ಬಳಸಿದ್ದಾರೆ ಎಂಬ ನಿಲುವಿಗೆ ಬರುತ್ತಾರೆ. ಕರ್ನಾಟಕದ ಜ್ಞಾನಪೀಠಪ್ರಶಸ್ತಿ ವಿಜೇತರ ಪೈಕಿ ಏಳನೆಯವರಾದ ಕಾರ್ನಾಡರ ನಿಲುವು ಸಿದ್ಧಾಂತಗಳನ್ನು ಒಪ್ಪೋದೂ ಬಿಡೋದೂ ಜನಕ್ಕೆ ಬಿಟ್ಟಿದ್ದು. ನಾನಾ ವಿಷಯಗಳಲ್ಲಿ ಕಾರ್ನಾಡರು ನಡೆದುಕೊಂಡಿರುವುದಕ್ಕೂ, ಅವರ ನಿಲುವುಗಳಿಗೂ ಅಸಮ್ಮತಿ ಹೊಂದುವ ಅಧಿಕಾರ ಇದ್ದೇ ಇದೆ. ಆದರೆ ರಾಜ್ಯಸಭೆಗೆ ಪರಭಾಷಿಕರನ್ನು ಕಳಿಸೋದಕ್ಕೆ ಸಮರ್ಥನೆಯಾಗಿ ಕಾರ್ನಾಡರ ತೂಕ ಅಳೆಯೋಕೆ ಮುಂದಾಗೋದಾಗಲೀ, ಅವರು ಆಸೆಪಟ್ಟು ಕೈತಪ್ಪಿದ್ದಕ್ಕಾಗಿ ರಾಜ್ಯಸಭೆಗೆ ಹೇಮಮಾಲಿನಿಯವರನ್ನು ವಿರೋಧಿಸುತ್ತಿದ್ದಾರೆ ಎನ್ನುವುದಾಗಲೀ ಸೊಂಟದ ಕೆಳಗಿನ ಆಕ್ರಮಣವೇ ಆಗಿಲ್ಲವೇ? ಸೈದ್ಧಾಂತಿಕ ವಿರೋಧ ಏನೇ ಇರಲಿ, ನಾಡಿನ ಹಿರಿಯ ಜ್ಞಾನಪೀಠ ಪ್ರಶಸ್ತಿ ಪಡೆದು, ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಹೀನಾಯವಾಗಿಸಿ ಬರಹ ಬರೆದಿರೋದು ಇಡೀ ಕನ್ನಡಿಗರನ್ನು ಅಪಮಾನಿಸಿದಂತೆ ಅಲ್ಲವೇ? ಒಟ್ಟಾರೆ ವೈಯುಕ್ತಿಕವಾಗಿ ಆಕ್ರಮಣ ಮಾಡೊ ಈ ಪ್ರಯತ್ನ ವಿಷಯಾಂತರದ ಪ್ರಯತ್ನಗಳಲ್ಲದೇ ಮತ್ತೇನಲ್ಲ.

ಹುಸಿ ರಾಷ್ಟ್ರೀಯತೆಯೋ? ಕುರುಡು ಪಕ್ಷ ನಿಷ್ಠೆಯೋ?

“ದೇಶ ಮೊದಲು, ಭಾರತೀಯತೆ ಮೊದಲು. ಉಳಿದದ್ದೆಲ್ಲಾ ಪ್ರಾದೇಶಿಕ ರಾಷ್ಟ್ರವಾದದ ಮಹಲುಗಳು,ಅಮಲುಗಳು” ಇತ್ಯಾದಿ ಮಾತಾಡುವವರಿಗೆ ಹಿಡಿದಿರುವುದು ಹುಸಿ ರಾಷ್ಟ್ರೀಯತೆಯ ಅಮಲಲ್ಲದೇ ಮತ್ತೇನು? ಕನ್ನಡತನವೆನ್ನುವುದನ್ನು ಭಾರತೀಯತೆಯೇ ಎಂದು ಯೋಚಿಸಲಾಗದ, ಎರಡೂ ಒಂದಕ್ಕೊಂದು ಮುಖಾಮುಖಿಯಾಗುವ ಎದುರಾಳಿಗಳು ಎಂಬಂತೆ ಭ್ರಮಿಸುವ ಇಂಥಾ ಮನಸ್ಥಿತಿಗೇನೆಂದು ಹೇಳುವುದು? ಅಷ್ಟಕ್ಕೂ ಭಾರತೀಯತೆಯೊಂದೇ ನಮ್ಮ ಜನಪ್ರತಿನಿಧಿಗಿರಬೇಕಾದ ಮಾನದಂಡ ಎನ್ನುವುದು ಆಳದಲ್ಲಿ ವೈವಿಧ್ಯತೆಯನ್ನು ವಿರೋಧಿಸುವ ಮನಸ್ಥಿತಿಯೇ ಆಗಿದೆ. “ರಾಜ್ಯಸಭಾ ಅಭ್ಯರ್ಥಿಯಾಗೋರು ಹಳಗನ್ನಡ, ನಡುಗನ್ನಡ ಕಲಿತಿರಬೇಕೆಂದು ಸಂವಿಧಾನ ಹೇಳಿಲ್ಲ, ಇವರ ಸ್ಪರ್ಧೆಯನ್ನು ವಿರೋಧಿಸುವುದು ಸಂವಿಧಾನ ವಿರೋಧಿ” ಎಂದು.. ಈಗ ಭಾರತೀಯ ಸಂವಿಧಾನಕ್ಕೆ ಬಲು ನಿಷ್ಠೆ ತೋರಿಸುತ್ತಿರುವಂತೆ ಬೊಬ್ಬಿರಿಯುತ್ತಿರುವ ಇದೇ ಜನರು ಹಿಂದೆಲ್ಲಾ ಎಲ್ಲಾ ವಿಷಯಗಳಲ್ಲೂ ಸಂವಿಧಾನಕ್ಕೆ ಹಾಗೇ ನಿಷ್ಠೆ ತೋರಿದ್ದಾರೇನು? ತಾವು ಪ್ರತಿಪಾದಿಸೋ ಹಿಂದುತ್ವದ ಹೋರಾಟಗಳಿಗೆಲ್ಲಾ ಇದೇ ಸಂವಿಧಾನದ ಬದ್ಧತೆಯ ಮಾತಾಡ್ತಾರೇನು? ಊಹೂಂ... ಆಗೆಲ್ಲಾ ಭಾರತದ ಸಂವಿಧಾನ ಬದಲಾಯಿಸಬೇಕು ಅಂತಾರೆ. ಇಂಥಾ ಅನುಕೂಲಕ್ಕೆ ತಕ್ಕ ವಾದಾ ಮಾಡೋದನ್ನು ಜನರು ಗುರುತಿಸಲಾರರಾ ಗುರೂ?

ಇವರ ಸಿದ್ಧಾಂತವೇ ವೈವಿಧ್ಯತೆ ಒಪ್ಪಿಲ್ಲ!

ಭಾರತೀಯ ಸಂವಿಧಾನವು ರಾಜ್ಯಸಭಾ ಅಭ್ಯರ್ಥಿಗಳು ತಾವು ಪ್ರತಿನಿಧಿಸುವ ರಾಜ್ಯದವರೇ ರಾಜ್ಯದವನಾಗಿರಬೇಕು ಎಂದಿದುದನ್ನು ತಿದ್ದಿದೋರು ಯಾರು? ಇದೇ ಬಿಜೆಪಿಯವರೇ ತಾನೇ? ರಾಜ್ಯಸಭೆಗೆ ಆಯಾ ರಾಜ್ಯದ ಮತದಾರರ ಪಟ್ಟಿಯಲ್ಲಿರುವ ಮತದಾರರು ಮಾತ್ರವೇ ಆಯಾ ರಾಜ್ಯದಿಂದ ರಾಜ್ಯಸಭೆಗೆ ಸ್ಪರ್ಧಿಸಬಹುದು ಅನ್ನುವ ಕಟ್ಟಳೆಯಿತ್ತು. ವಾಜಪೇಯಿ ನೇತೃತ್ವದ ಎನ್.ಡಿ.ಎ ಸರ್ಕಾರ ರಾಜ್ಯಸಭೆಯ ಆಯ್ಕೆ ಮಾನದಂಡವನ್ನು ತಿಳಿಸುವ ಪೀಪಲ್ಸ್ ರೆಪ್ರಸೆಂಟೇಟಿವ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಆಯಾ ರಾಜ್ಯದವರೇ ಆಗಿರಬೇಕು ಅನ್ನುವ ಕಾನೂನು ತೆಗೆದು ರಾಜ್ಯಸಭೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಅನ್ನುವ ಬದಲಾವಣೆ ತಂದಿತು. ಆ ತಿದ್ದುಪಡಿ ಇಲ್ಲಿದೆ (ಪುಟ 4 ಅನ್ನು ಗಮನಿಸಿ)
In order to be chosen a member of Rajya Sabha, a person (a) must be a citizen of India, (b) must not be less than 30 years of age. Under the Representation of the People Act, 1951, a person had to be an elector in a parliamentary constituency in the State from where he seeks election to Rajya Sabha. It may, however, be mentioned that the Representation of the People (Amendment) Act, 2003, which amended Section 3 of the Representation of the People Act, 1951, has done away with the requirement of being a resident of State or Union territory from which a person seeks to contest elections to RajyaSabha.
ಇವತ್ತು ಅದೇ ಪಕ್ಷದ ಸರ್ಕಾರ ಕರ್ನಾಟಕದಿಂದ ವೆಂಕಯ್ಯನಾಯ್ಡುವಿನ ನಂತರ ಹೇಮಾಮಾಲಿನಿಯೆಂಬ ಕನ್ನಡೇತರರನ್ನು ಕರ್ನಾಟಕದ ಪ್ರತಿನಿಧಿಗಳಾಗಿ ರಾಜ್ಯಸಭೆಗೆ ಕಳಿಸುತ್ತಿದೆ. ಇದಕ್ಕೆ ಕಾರಣ ಇರೋದೇ ಬಿಜೆಪಿಯ ಮೂಲ ಸಿದ್ಧಾಂತದಲ್ಲಿ ಅನ್ನಿಸಲ್ವಾ ಗುರೂ? ಇಲ್ದಿದ್ರೆ ಕಣ್ಣೆದುರು ಕಾಣೋ ಕನ್ನಡವನ್ನು, ಕರ್ನಾಟಕವನ್ನು ಕಡೆಗಣಿಸೋ ಥರಾ ಯಾಕೆ ನಡ್ಕೋತಿದ್ರು? ಪ್ರತಿ ಪ್ರದೇಶದ ಅನನ್ಯತೆಯನ್ನು ಉಳಿಸೋಕೊಳ್ಳೋ ಮನಸ್ಥಿತಿಯೇ ಇಲ್ಲದೆ ಎಲೇ ಮೇಲಿರೋ ಅನ್ನ, ಸಾರು, ಪಾಯಸ, ಕೋಸಂಬರಿ, ಉಪ್ಪಿನಕಾಯಿ, ಚಿತ್ರಾನ್ನ, ಹೋಳಿಗೆ ಎಲ್ಲಾನೂ ಊಟಾನೇ ಅಂತಾ ಕಲಸಿಬಿಡೋ ಮನಸ್ಥಿತಿ ತೋರುಸ್ತಿದ್ರಾ ಗುರೂ?

ಹೇಮಾಮಾಲಿನಿಯ ಸ್ಪರ್ಧೆಯನ್ನು ಬೆಂಬಲಿಸುತ್ತಿರುವವರು ಹಾಗೆ ಮಾಡಲು ನಿಜಕ್ಕೂ ಇರುವ ಕಾರಣವಾದರೂ ಏನೆಂದು ಹುಡುಕಿದರೆ ಕಾಣುವುದು ಇಲ್ಲಾ ಬಿಜೆಪಿಯೆಡೆಗಿನ ಪಕ್ಷನಿಷ್ಠೆ. ಅದಲ್ಲದಿದ್ದಲ್ಲಿ ರಾಜ್ಯಸಭೆ ಯಾಕಿದೆ? ಪ್ರಜಾಪ್ರಭುತ್ವ ಎಂದರೇನು? ಜನ ಪ್ರತಿನಿಧಿ ಎಂದರೇನು? ಎಂಬ ಅರಿವಿರದ ಹುಸಿ ರಾಷ್ಟ್ರೀಯತೆಯ ಮಾಯೆಯ ಪೊರೆ. ನೀವೇನಂತೀರಾ ಗುರೂ!
Related Posts with Thumbnails