Showing posts with label ಎಂಕ. Show all posts
Showing posts with label ಎಂಕ. Show all posts

ಹಿಂದಿಯೋರ ಮೇಲೇ “ಹಿಂದಿ ಹೇರಿಕೆ”!!!

ಹಿಂದೀ ಹೇರಿಕೆ ಬರೀ ಹಿಂದಿಯೇತರರ ಮೇಲೆ ಮಾತ್ರಾ ಆಗ್ತಿಲ್ಲ. ಹಿಂದೀ ಭಾಷಿಕರು ಅಂತ ಕರೆಸಿಕೊಳ್ತಾ ಇರೋ ಉತ್ತರ ಭಾರತದ ಬಹುತೇಕ ಎಲ್ಲಾ ಭಾಷಾ ಜನಗಳ ಮೇಲೆ ಹಿಂದೀ ಹೇರಿಕೆ ಆಗ್ತಾಯಿದೆ ಅಂದ್ರೆ ನಂಬ್ತೀರಾ? ಗುರೂ! ಹೌದು, ಉತ್ತರ ಭಾರತದಲ್ಲಿರೋ ಅನೇಕ ಭಾಷೆಗಳನ್ನು ಹಿಂದಿ ಅನ್ನೋ ಆಲದ ಮರದಡಿ ಹರವಿ (ಆಲದ ಮರದ ಕೆಳಗೆ ಏನೂ ಬೆಳ್ಯಲ್ಲಾ ಅನ್ನೋದು ಮರೀಬೇಡಿ) ಅವ್ರುನ್ನೆಲ್ಲಾ ಹಿಂದಿಯೋರೂ ಅಂದು ಅವರದಲ್ಲದ ನುಡೀನಾ ಅವರುಗಳ ಮೇಲೆ ಹೇರುತ್ತಾ ಇರೋದು ದಿಟಾ ಗುರು!!

ಅದೆಂಗೇ ಅಂತೀರಾ?

ಈ ಚಿತ್ರ ನೋಡಿ ಗುರುಗಳೇ. ಇದು ಕರ್ನಾಟಕದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಯೋರು ಅಪಾಯಾಕಾರಿಯಾದ ಕಸವನ್ನು ಸರಿಯಾದ ರೀತೀಲಿ ನಿರ್ವಹಿಸೋಕೆ ಅಂತಾ ರೂಪಿಸಿರೋ ಒಂದು ನಿಯಮದ ಅಂಗವಾಗಿರೋ ಸಣ್ಣ ಅಂಟುಚೀಟಿ.


ಈ ಅಂಟುಚೀಟೀನಾ ಸಂಬಂಧಪಟ್ಟ ಉತ್ಪಾದಕರು/ ಬಳಕೆದಾರರು (ಕಾರ್ಖಾನೆಯೋರು) ಬಹಳಾ ಮುತುವರ್ಜಿಯಿಂದ, ಬಿಸಾಕಲೆಂದು ಕೂಡಿಟ್ಟ ಅಪಾಯಕಾರಿ ಕಸದ ಡಬ್ಬಿಯ ಮೇಲೆ ಅಂಟಿಸಬೇಕು. ಇದರ ಮೇಲೆ ದೊಡ್ಡದಾಗಿ ಭವ್ಯ ಭಾರತದ ಮಹತ್ಸಾಧನೆಯಾದ ತ್ರಿಭಾಷಾ ಸೂತ್ರದ ಅನ್ವಯ ಮೂರು ಭಾಷೇಲಿ ಮುದ್ರಿಸಿದ್ದಾರೆ. ಕನ್ನಡದಲ್ಲಿ (?) “ಅಪಾಯಕಾರಿ ತ್ಯಾಜ್ಯ” ವೆಂದೂ, ಇಂಗ್ಲೀಷಿನಲ್ಲಿ “hazardous waste” ಎಂದೂ ಬರೆದಿದಾರೆ. ಆದ್ರೆ ದೇವನಾಗರೀ ಲಿಪಿಯಲ್ಲಿ ಬರೆದಿರೋ ಸಾಲುಗಳೇನು? ಅದು ಯಾವ ಭಾಷೇದು? ಅಂತಾ ವಸಿ ನೋಡು ಗುರು... “ಪರಿಸಂಕಟಮಯ ಅಪಶಿಷ್ಟ” ಅನ್ನೋದು ಯಾವ ಭಾಷೆ ಗುರೂ? ಇದನ್ನು ವಿನ್ಯಾಸ ಮಾಡಿರೋ ಮಹನೀಯರು ಹಿಂದೀ ಅಂತಾನೆ ಈ ಪದ ಬಳಸಿರೋದು. ಯಾವ ಹಿಂದೀ ಭಾಷಿಕರು ಇದನ್ನು ಬಳುಸ್ತಾರೆ? ಬಳುಸದ್ ಬಿಡಿ, ಯಾವ ಹಿಂದಿಯವನಿಗೆ ಇದು ಅರ್ಥವಾಗುತ್ತೆ? ಹಿಂದೀನೂ ಬಿಡಿ, ಹಿಂದೀ ಅನ್ನೋ ದೇವತೆ(?) ಇದುವರೆಗೂ ನುಂಗಿ ನೀರು ಕುಡ್ದಿರೋ ಭೋಜ್‍ಪುರಿ, ರಾಜಸ್ಥಾನಿ, ಪಹಾಡಿ, ಬ್ರಿಜ್ ಭಾಷಾ, ಅವಧಿ... ಮುಂತಾದ ೪೯ ಭಾಷೆಗಳಲ್ಲಿ ಯಾವ ಭಾಷೇಲಿ ಇದನ್ನು ಬಳುಸ್ತಾರೆ ಅಂತಾ ಕೇಳುದ್ರೆ... ‘ಊಹೂಂ ಯಾವ ಭಾರತೀಯ ಭಾಷೇಯ ಜನರೂ ಈ ಪದಗಳನ್ನು ತಮ್ಮ ನಿತ್ಯ ಜೀವನದಲ್ಲಿ ಬಳಸಲ್ಲ’ ಅನ್ನೋದೇ ಉತ್ತರವಾಗಿದೆ ಗುರು. ಮತ್ಯಾಕೆ ಇವರು ಹೀಗೆ ಈ ಪದಗಳ್ನ ಬಳಸಿದಾರೆ? ಇದ್ಯಾವ ಭಾಷೇದೂ?

ಕಪ್ಪು ನಾಯೀನ ಬಿಳೀ ಮಾಡೊ ಪ್ರಯತ್ನ!

ಇಂದು ಹಿಂದೀ ಭಾಷೆ ಅಂತಾ ಕರೀತಿರೋದ್ರಲ್ಲಿ ಒಟ್ಟು ೪೯ ಭಾಷೆಗಳು ಅಡಕವಾಗಿವೆ. ಹಿಂದೀ ಭಾಷೆ ಮಾತಾಡೋರ ಸಂಖ್ಯೆ ಜಾಸ್ತಿ ಅಂತಾ ಬಿಂಬಿಸಿ ಹಿಂದೀನ ಎಲ್ಲರ ಮೇಲೆ ಹೇರೋ ಪ್ರಯತ್ನಾನ ಭಾರತ ಸರ್ಕಾರ ಹಿಂದಿನಿಂದಲೂ ಮಾಡ್ಕೊಂಡೇ ಬಂದಿದೆ. ಇಂಥಾ ಪ್ರಯತ್ನದ ಅಂಗವಾಗಿ ಪಂಜಾಬಿ ಭಾಷೇನೂ ಹಿಂದೀನೇ ಅಂತ ಅಂದು, ಅದರಿಂದ ಪಂಜಾಬು ಹತ್ತುರಿದದ್ದೂ ಆಗಿ ಕೊನೆಗೆ ಪಂಜಾಬಿ ಭಾಷೆಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲೊಂದು ಜಾಗ ಸಿಕ್ಕಿದ್ದು ಇತಿಹಾಸ. ಇರಲಿ, ಹೀಗೆ ೪೯ ಬೇರೆ ಬೇರೆ ನುಡಿಗಳನ್ನು ನುಂಗಿ ಆ ನುಡಿಗಳೆಲ್ಲವೂ ಹಿಂದೀನೇ ಅನ್ನೋವಾಗ ಜನರು ಯಾವ ಪದಾನ ಬಳುಸ್ಬೇಕು ಅನ್ನೋ ಗೊಂದಲಾ ಹುಟ್ಕೊಂಡ್ತು. ಕೆಲವರು ಅಪಾಯ ಅಂತಾ ಅಂದ್ರೆ, ಇನ್ನು ಕೆಲವರು ಖತ್ರಾ ಅಂದ್ರು. ಅದಕ್ಕೇ ಹೀಗಾಗೋದ್ ಬ್ಯಾಡಾ ಅಂತಾ ಕೇಂದ್ರಸರ್ಕಾರದೋರು ಹಿಂದೀ ಅಂದ್ರೆ ಇಂಥದ್ದು, ಇದು ಸ್ಟಾಂಡರ್ಡ್ ಹಿಂದಿ, ಇದುನ್ನೇ ಇನ್ಮೇಲೆ ನೀವೆಲ್ಲಾ ಬಳುಸ್ಬೇಕು, ಅಂತಾ ಹೇಳಕ್ಕೇ ಅಂತಲೇ “Centre for Hindi Directorate” ಅಂತಾನೆ ಒಂದು ಇಲಾಖೆ ತೆಕ್ಕೊಂಡು ಕೂತಿದೆ. ಇವ್ರು ಹಿಂದೀಲಿ ಯಾವ ಪದ ಬಳುಸ್ಬೇಕು ಅಂತಾ ತೀರ್ಮಾನ ಮಾಡ್ತಾರೆ. ಹೊಸಪದಗಳನ್ನು ಹುಟ್ಟು ಹಾಕ್ತಾರೆ. ಒಟ್ಟಾರೆ ಜನರು ಬಳಸದ ತಥಾ, ಪರಂತು, ಕೇವಲ್, ಅನುಸಾರ್ ಮುಂತಾದ ಪದಗಳನ್ನು ಹುಟ್ಟು ಹಾಕೋರಿಗೆ ಏನನ್ನಬೇಕು ಗುರು?

ಹಿಂದಿಯೋರ ಮೇಲೇ ಹಿಂದಿ ಹೇರಿಕೆ

ಈಗೆ ಹೇಳಿ ಗುರುಗಳೇ, ಹಿಂದಿಯೋರ ಮೇಲೇ ಹಿಂದಿ ಹೇರಿಕೆ ಆಗ್ತಿದ್ಯೋ ಇಲ್ವೋ ಅಂತಾ. ಭಾಷಾ ವಿಜ್ಞಾನ ಅಂದ್ರೇನು? ಭಾಷೇ ಅಂದ್ರೇನು? ಇದು ಸಮಾಜದಲ್ಲಿ ಯಾವ ಪಾತ್ರ ವಹಿಸುತ್ತೆ? ಅನ್ನೋದನ್ನೆಲ್ಲಾ ಮರ್ತು ಒಂದು ದೇಶ ಅಂದಮೇಲೆ ಒಂದು ಭಾಷೇ ಬೇಡ್ವಾ? ಒಂದು ಭಾಷೆ ಅಂದಮೇಲೆ ಅದರಲ್ಲಿ ಎಲ್ರೂ ಬಳ್ಸೋ ಸ್ಟಾಂಡರ್ಡ್ ಪದಗಳೇ ಇರಬೇಕಲ್ವಾ? ಇದುಕ್ ಒಂದು ಸಣ್ಣ ಉದಾಹರಣೆ : ಇಡೀ ಕರ್ನಾಟಕ 'ಇದೆ' ಅನ್ನೋ ಪದಾನಾ ಇನ್ಮುಂದೆ 'ಇದೆ' ಅಂತಾನೇ ಅನ್ನಬೇಕು, ಅದಾವ, ಐತಿ, ಐತೆ, ಉಂಟು ಅನ್ನೋದನ್ನೆಲ್ಲಾ ಬಳುಸ್ಬಾರ್ದು ಅಂದ್ರೆ ಹೆಂಗೆ? ಈಗ ಹಾಗೇ ಇದೆ ಕೇಂದ್ರದ ಈ ಪ್ರಯತ್ನ. ದೇಶದಲ್ಲಿ ಒಗ್ಗಟ್ಟು ಮೂಡಿಸಲು ಆಗೋದು ನಮ್ಮ ನಡುವೆ ಈಗಾಗಲೇ ಇರೋ ಸಮಾನವಾದದ್ದನ್ನು ಎತ್ತಿ ಹಿಡಿಯುವ ಮೂಲಕವೇ ಹೊರತು ಇಲ್ಲದ ಸಮಾನತೇನಾ ಹೇರೋದ್ರ ಮೂಲಕ ಅಲ್ಲಾ ಅಲ್ವಾ ಗುರು?

ನಮ್ಮೂರ ವ್ಯವಸ್ಥೆ ಇರಬೇಕಾದ್ದು ಯಾರಿಗಾಗಿ?

ಮೊನ್ನೆಮೊನ್ನೆಯಿಂದ ನಮ್ಮ ಎಂಕ ಕೈಯ್ಯಲ್ಲಿ ಎರಡು ಫೋಟೋ ಇಟ್ಕೊಂಡು ಎದ್ರುಗೆ ಸಿಕ್ಕವ್ರನ್ನೆಲ್ಲಾ ತಡ್ದು ತಡ್ದು ಅವರ ಮುಖಕ್ಕೆ ಈ ಎರಡನ್ನೂ ಹಿಡೀತಾ ಇದಾನೆ! ಇದ್ಯಾಕ್ರಣ್ಣ ನಮ್ಮೂರಲ್ಲಿ ಇಂಗೈತೆ? ಅಂತಾ ಕೇಳ್ತಾ ಇದಾನೆ. ನೀವಾದ್ರೂ ಎಂಕಂಗೆ ಉತ್ತರ ಹೇಳ್ತೀರಾ ಸ್ವಲ್ಪ ನೋಡಿ!

ಇದು ಮೊದಲನೇದು ಬೆಂಗಳೂರಿನಲ್ಲಿ ಪೊಲೀಸರು ಜಾರಿಗೆ ತಂದಿರೋ ಆಟೋಚಾಲಕರ ಕಡ್ಡಾಯ ಗುರುತಿನದು. ನಮ್ಮ ಈ ಫಲಕ 100% ಇಂಗ್ಲಿಷಿನಲ್ಲಿದೆ. ಹಾಗೇ ಇರಬೇಕು ಅನ್ನೋದು ನಿಯಮ. ನಮ್ಮೂರಿಗೆ ಬಂದಿರೋ ಪರಭಾಷಿಕರಿಗೆ ಮಾಹಿತಿ ಅರ್ಥ ಆಗಬೇಕು ಅನ್ನೋದು ಇದರ ಉದ್ದೇಶವಂತೆ.



ಈ ಇನ್ನೊಂದು ಫೋಟೋ ಜಪಾನ್ ದೇಶದ್ದು. ಇದರಲ್ಲಿರೋ ಮಾಹಿತಿ ಪೂರ್ತಿ ಜಪಾನಿ ಭಾಷೇಲಿದೆ. ಅಂಕೆಗಳನ್ನು ಬಿಟ್ಟರೆ ಪ್ರವಾಸಿಗರಿಗೆ ಅರ್ಥವಾಗೋ ಅಂಥದ್ದು ಇದರಲ್ಲಿ ಏನೇನೂ ಇಲ್ಲ. ಅಂತರರಾಷ್ಟ್ರೀಯ ವಿಶ್ವಪರಂಪರೆಯ ತಾಣದಲ್ಲಿ ಒಂದಾದ ನಗರದಲ್ಲೇ ಇಂಥಾ ವ್ಯವಸ್ಥೆ ಇದೆ ಅಂದ್ರೆ ನಂಬಲೇ ಬೇಕು ಗುರು!



ಈ ಜಪಾನಿ ಭಾಷೇಲಿರೋ ಫೋಟೋ ಜಪಾನಿನ ಕ್ಯೋತೋ ಅನ್ನೋ ಊರಿನದು. ಈ ಊರು ಜಪಾನಿನ ಸಂಸ್ಕೃತಿಯನ್ನು ಪ್ರತಿಬಿಂಬಿಸೋ ಅಲ್ಲಿನ ಇತಿಹಾಸಾನ ಸಾರೋ ಒಂದು ಪ್ರವಾಸಿ ತಾಣ. ಈ ಜಾಗಕ್ಕೆ ಜಪಾನ್ ದೇಶಕ್ಕೆ ಪ್ರವಾಸ ಬಂದೋರೆಲ್ಲಾ ಬಂದೇ ಬರ್ತಾರೆ ಗುರು. ಇಂಥಾ ಪ್ರವಾಸಿ ತಾಣದಲ್ಲಿ ಕಣ್ಣಿಗೆ ಕಾಣೋದು ಜಪಾನಿ ಸಂಸ್ಕೃತಿ, ಆಚರಣೆ, ವೇಷಭೂಷಣ ಮತ್ತು ಮುಖ್ಯವಾಗಿ ಜಪಾನಿ ನುಡಿ.

ನಮ್ಮೂರ ವ್ಯವಸ್ಥೆ ಯಾರಿಗಾಗಿ ಇರಬೇಕು?

ಈಗ ನೀವೇ ಹೇಳಿ ಗುರುಗಳೇ? ಕರ್ನಾಟಕದಲ್ಲಿ ಬರೀ ಕನ್ನಡ ಮಾತ್ರಾ ಗೊತ್ತಿದ್ದವರು ಏನು ಮಾಡಬೇಕು? ಕರ್ನಾಟಕ ಅನ್ನೋದು ಕನ್ನಡದವರ ತವರುನೆಲ ತಾನೇ? ಇಲ್ಲಿರೋ ಯಾವ ಅಂಗಡಿ, ಮುಂಗಟ್ಟೆ, ರೈಲು ನಿಲ್ದಾಣ, ಬಸ್ ನಿಲ್ದಾಣ, ಬೋರ್ಡು, ಮಾಹಿತಿ, ಸೂಚನೆಗಳೆಲ್ಲಾ ಮೊದಲಿಗೆ ಈ ನೆಲದ ಜನಗಳ ಅಗತ್ಯ ಪೂರೈಸಬೇಕು ಮತ್ತು ಅವರಿಗಾಗಿ ಇರಬೇಕು ಅನ್ನೋದು ತಪ್ಪಾ? ಹಾಗಾದ್ರೆ ಇದನ್ನೆಲ್ಲಾ ಮಾಡಬೇಕಾದ್ದು ನಮ್ಮ ಕರ್ನಾಟಕ ಸರ್ಕಾರದ ಮೊದಲನೆ ಕೆಲಸ ಅಲ್ವಾ? ವಲಸಿಗರಿಗಾಗೇ ನಮ್ಮೂರಿನ ವ್ಯವಸ್ಥೆ ಕಟ್ಟೋದು ಮೂರ್ಖತನಾ ಅಲ್ವಾ? ಈ ಮೂರ್ಖತನಾನ ನಮ್ಮ ಸರ್ಕಾರಗಳು, ಇಲಾಖೆಗಳು ಎಂದಾದ್ರೂ ಕೈಬಿಟ್ಟಾವಾ ಗುರು? ಕನ್ನಡದವರೇ ಕನ್ನಡನಾಡಲ್ಲಿ ಅನಾಥರಂತೆ ಬದುಕಬೇಕಾ? ಕನ್ನಡದವರನ್ನು ಕಡೆಗಣಿಸಿ ಕಟ್ಟೋ ವ್ಯವಸ್ಥೆ ಎಂದಾದ್ರೂ ರಿಪೇರಿ ಆಗುತ್ತಾ? ನೋಡುದ್ರಾ ಗುರುಗಳೇ? ಎಂಕ ತೋರಿಸಿದ ಎರಡು ಫೋಟೋ ಹಿಂದೆ ಎಷ್ಟೊಂದು ಪ್ರಶ್ನೆಗಳಿವೆ...

ಕನ್ನಡ ಅನ್ನೋದೆ ಕಬ್ಬಿಣದ ಕಡ್ಲೆ ಆದ್ರೆ ಎಂಗಣ್ಣಾ..

ನನ್ ಮಗೀನಾ ಇಸ್ಕೂಲ್ಗೆ ಸೇರುಸ್ಬೇಕು ಅಂತ ಒಂಟಾಗ ನಮ್ ಮನ್ಯಾಗೆ ಬೋ ಮಾತುಕತೆ ಆತು ಗುರುಗಳೇ... ನಮ್ ಎಂಡ್ರು ’ಎಂಕಾ, ಮಗಾ ಉದ್ದಾರ ಆಗ್ಬೇಕಂದ್ರೆ ಅದುನ್ ಇಂಗ್ಲಿಸ್ ಬಾಸೇಲೆ ಓದುಸ್ಬೇಕು ಕಣ್ಲಾ...’ ಅಂತಾ ಒಂದೇ ಅಟ. ನಾನಾರಾ ಸುಮ್ಕಿದ್ನಾ? ’ಅಲ್ ಕಣಮ್ಮಿ, ನಮ್ಗೆ ಕನ್ನಡಾನೆ ಏಳ್ ಕೊಡೋದು ಸುಲಬ, ಅದು ನಮ್ ಬಾಸೆ ಅಲ್ವಾ... ಮಗೀಗೆ ಕಲ್ಯದೆಲ್ಲಾ ಅರ್ತ ಆಗ್ಬೇಕಲ್ವಾ? ಕನ್ನಡದಾಗೇ ಓದ್ಲಿ. ನಮ್ ಶಾಲೇ ಮಾಸ್ತರ್ರು ಕನ್ನಡದೋರೆಯಾ... ಅವ್ರೇನು ಇಂಗ್ಲೇಂಡಿಂದ ಬಂದಿಲ್ಲಾ, ಮಗಾ ಕನ್ನಡದಲ್ಲೇ ಓದ್ಲಿ’ ಅಂತ ಕನ್ನಡ ಶಾಲೆಗೇ ಸೇರುಸ್ದೆ ಕಣ್ರಣ್ಣಾ....
ಕನ್ನಡ ಅನ್ನೋ ಕಬ್ಬಿಣದ ಕಡಲೆ!
ಮಗಾ, ಇಸ್ಕೂಲಲ್ಲಿ ಕಲ್ತಿದ್ನ ನಾನೂ ಅಂಗೇ ಓದುಸ್ತಾ ಓದುಸ್ತಾ ಇದ್ರೆ ಇದೇನ್ ಕನ್ನಡ ಅಂದ್ರೆ ನಾ ಮಾತಾಡಾದೋ, ಇಲ್ಲಾ ಈ ಪುಸ್ಕದಲ್ಲಿ ಬರ್ದಿರೋದೋ ಅಂತ ಗೊಂದಲಾ ಸುರು ಅತ್ಕಂಬುಡ್ತು.. ಕೂಡೋದಕ್ಕೆ ಸಂಕಲನ ಅನ್ನಬೇಕು, ಕಳೆಯೋದಕ್ಕೆ ಯವಕಲನ ಅನ್ನಬೇಕು. ನನ್ ಮಗ ಯವಕಲನ ಅಂದ್ರೆ ಆ ಮೇಸ್ಟ್ರಪ್ಪ ಏಯ್ ಮೊದ್ಲು ಉಚ್ಚರಣೆ ಸರಿ ಮಾಡ್ಕೊ ಅಂತ ಬಯ್ಯೋದಾ? ಅಲ್ಲಾ ಕಳೆಯದ್ನ ಕಲ್ಸಕ್ಕೆ ಯವಕಲನ ಅನ್ನೋ ಪದ ಯಾಕ್ ಸರಿಯಾಗ್ ಉಚ್ಚರುಸ್ಬೇಕು ಅಂತಾ ಗೊತ್ತೇ ಆಗ್ಲಿಲ್ಲ. ಮುಂದ್ ಅಂಗೇ ಯಾಕರಣದ ಪಾಟ ಮಾಡೋವಾಗ ಅದೆಂತದೋ ಜಸ್ವ ಸಂದಿ, ಚುಸ್ವ ಸಂದಿ, ಸವರ್ಣ ದೀರ್ಗ ಸಂದಿ ಅಂತ ಯೋಳ್ ಕೊಟ್ರು. ದಂದುವ ಸಮಾಸ, ಬವುರೀವಿ ಸಮಾಸ, ಅವ್ಯಯೀ ಬಾವ ಸಮಾಸ ಅಂತೆಲ್ಲಾ ಮಗಾ ಕೇಳ್ತಿದ್ರೆ ಇದ್ಯಾಕೋ ಶಾಲೇಲಿ ಕಲ್ಸೋ ಕನ್ನಡ ಬಾಸೇ ನಾವ್ ಆಡೊ ಅಷ್ಟು ಸುಲುಬದ್ ಅಲ್ಲಾ ಅನ್ಸಕ್ ಸುರುವಾಯ್ತು.
ಇಗ್ನಾನದ ಪಾಟದಲಿ ಎಲೆ ಅಸ್ರು ಅನ್ನೋದ್ನಾ ಪತ್ರ ಅರಿತ್ತು ಅಂತಾ ಏಳ್ ಕೊಟ್ಟವ್ರೆ. ಅದೇನೋ ಪೀನ ದರ್ಪಣ, ನಿಮ್ನ ದರ್ಪಣ ಅಂತೆ. ಅಂಗಂದ್ರೇನ್ ಬುದ್ದಿ ಅಂತ ಮಾಸ್ತರಪ್ಪನ್ ಕೇಳುದ್ರೆ... ’ನಿಮ್ನ ದರ್ಪಣ ಅಂದ್ರೆ ಕನ್ನಡಿ ತಗ್ಗಾಗಿರದೂ, ಪೀನ ದರ್ಪಣ ಅಂದ್ರೆ ಕನ್ನಡಿ ಉಬ್ಬಾಗಿರದೂ’ ಅಂದ್ರು. ಅದುಕ್ಕೆ ನಮ್ ಮಗಾ ’ಅಪ್ಪಯ್ಯ ಅದ್ನ ಉಬ್ಬುಗನ್ನಡಿ, ತಗ್ಗುಗನ್ನಡಿ ಅಂತಲೇ ನಮ್ ಬುಕ್ಕಲ್ಲಿ ಬರೀಬೋದಲ್ಲಪ್ಪಾ... ನಿಮ್ನ, ಪೀನ ಅನ್ನದು ಕನ್ ಪ್ಯೂಜ್ ಆಯ್ತುದೆ, ಯಾವ್ದ್ ಏನು ಅಂತ ಜಪ್ತಿಲ್ ಇರಕ್ಕಿಲ್ಲ’ ಅಂದಾಗ ಇದ್ಯಾಕೋ ಕನ್ನಡದ ಶಾಲೇಲಿ ಕನ್ನಡದಲ್ ಕಲ್ಸದ್ ಬುಟ್ಟು ಇನ್ಯಾವ ಬಾಸೇಲಿ ಕಲ್ಸಕ್ ಸುರು ಅಚ್ಕಂಡವ್ರಲ್ಲಾಪ್ಪೋ ಅನ್ಸಕ್ ಸುರುವಾಯ್ತು ಗುರುಗಳೇ...ನೀವಾರ ಯೋಳಿ, ನಾವ್ ಮಾತಾಡೋದು ಕೀಳು ಕನ್ನಡಾನಾ? ನಮ್ ಐಕ್ಳುಗಳಿಗೆ ಅರ್ತ ಆಗೋ ಅಂಗೆ ಪುಸ್ಕ ಬರೆಯೋದ್ ಆಗಾಕಿಲ್ವಾ? ಕನ್ನಡದ ಮಕ್ಳಿಗೆ ಕನ್ನಡದಲ್ಲೇ ಪಾಟ ಮಾಡಬೇಕಪ್ಪಾ.. ನೀವೇನಂತೀರೀ ಗುರುಗಳೇ?

ಕನ್ನಡದ ಪೂಜಾರೀನೂ ಯಾಮಾರ್ಸಿರೋ ಹಿಂದಿ ಭೂತ!

ನಿಮ್ಗೆಲ್ಲಾ ಎಂಕಂದೊಂದು ನಮಸ್ಕಾರ. ಬೆಂಗಳೂರಿನ ಜಯನಗರ ಕಾಂಪ್ಲೆಕ್ಸ್ ಅಲ್ಲಿ ಒಂದು ಅಂಗಡಿ ಐತೆ, ಮೊನ್ ಮೊನ್ನೆ ಆ ಅಂಗ್ಡಿ ಕಡೆಗ್ ಓಗಿದ್ದೆ. ಅದ್ರ ಎಸ್ರು ಸವಿತಾ ಸ್ಟೋರ್ಸು ಅಂತಾ. ಈ ಅಂಗಡೀಲಿ ಹುರಿದ್ ಜ್ವಾಳ, ಐಸ್ ಕ್ರೀಮು ಎಲ್ಲಾ ಮಾರ್ತಾರೆ. ಇವರ ಅಂಗ್ಡೀಲಿ ಮಾರೋ ತಿನಿಸುಗಳಿಗೆ ಸುತ್ತಾ ಮುತ್ತಾ ಇರೋ ಎಲ್ಲಾ ಅಂಗಡಿಗಳ ತಿನಿಸಿಗಿಂತಾ ಎಚ್ಚು ರುಚಿ. ಅದ್ಯಾಕಪ್ಪಾ ಅಂತೀರಾ? ಈ ಅಂಗಡೀ ತುಂಬಾ ನಮ್ ಕಣ್ಣು ತಂಪಾಗೋ ಅಂತಾ ಸೀನುಗಳೇ ತುಂಬವೆ. ಏ, ರಮ್ಯಾ ರಕ್ಸಿತಾ ಅಂತ ಬಾಯ್ ಬುಡಬೇಡಿ. ಅಂಗಡಿ ತುಂಬಾ ಕನ್ನಡಕ್ಕೆ ಮಾರುಕಟ್ಟೆಲಿ ಇರಬೇಕಾದ ಮಅತ್ವದ ಬಗ್ಗೆ ಬೋಲ್ಡು ಬರ್ದು ನೇತ್ ಆಕ್ಕೊಂಡವ್ರೆ. ಅಚ್ಚರಿ ಪಡಬ್ಯಾಡ್ರಿ. ಯಾಕಂದ್ರೆ ಈ ಅಂಗಡಿ ಯಜಮಾನ್ರು ಕನ್ನಡದ ಬೋ ದೊಡ್ ಅಬಿಮಾನಿ. ಆ ಅಂಗಡಿ ಅತ್ರ ಓಯ್ತಿದ್ ಅಂಗೇ ಮೈಯೆಲ್ಲಾ ಜುಮ್ ಅಂದುಬುಡ್ತದೆ. ಅಂತಾ ಪಸಂದಾಗ್ ಐತೆ ಅಲ್ಲಿ ಕನ್ನಡದ ಸ್ತಾನಮಾನ.

ಕನ್ನಡ ಕಲೀರಿ ಅಂತ ಹೊರಗಿನವ್ರಿಗೆ ಸಂದೇಸ

ಕನ್ನಡದೋರಿಗೆ ’ಅಣ್ಣದೀರಾ, ಇದು ನಿಮ್ಮೂರು ಕಣ್ರಲಾ, ಇಲ್ಲಿ ಯಾಪಾರ ಮಾಡೋಕೆ ಗ್ರಾಅಕರಾಗಿ ಬರೋ ನೀವುಗಳೇ ಯಜಮಾನ್ರುಗಳು. ಇಲ್ಲಿ ಎಲ್ಲಾ ಸೇವೇನ ಕನ್ನಡದಲ್ಲಿ ಪಡ್ಕಳೋಕೆ ನಿಮ್ಗೆ ಹಕ್ಕೈತೆ’ ಅನ್ನೋ ಸಂದೇಶ ಕೊಡ್ತಾ ಔರೆ. ಜೊತೆಗೆ ಕನ್ನಡಾನ ಮಾರುಕಟ್ಟೇಲಿ ಬಳ್ಸಕ್ಕೆ ಕೀಳರಿಮೆ ಪಟ್ಕೋಬೇಡಿ ಅಂತಲೂ ಸಂದೇಸ ಕೊಡ್ತಾ ಔರೆ. ಇಲ್ಲಿ ಒರಗಿಂದ ಬರೋ ಕನ್ನಡ ಓದಕ್ಕೆ ಬರ್ಯಕ್ಕೆ ಬರ್ದೆ ಇರೋರ್ಗೆ ಇಂಗ್ಲಿಸಾಗೆ ಎಚ್ಚರಿಕೆ ಕೊಡ್ತವ್ರೆ. ಕನ್ನಡ ನಾಡಲ್ಲಿ ಎಲ್ಡು ವರ್ಸಕ್ಕಿಂತ ಎಚ್ಗೆ ಕಾಲ ಇರೋರಾದ್ರೆ ಕನ್ನಡ ಕಲ್ತುಕೊಳ್ಳಿ ಅನ್ನೋ ಬೋಲ್ಡು ಹಾಕಿರೋದ್ರು ಜೊತೇಲೆ ’ಕನ್ನಡ ಕಲಿ: ಇಲ್ಲಾ ತೊಲಗು’ ಅಂತಲೂ ಆಕ್ಕೊಂಡವ್ರೆ. ಇವೆಲ್ಲಾ ನೋಡುದ್ರೆ ಆ ಯಜಮಾನರ ಕನ್ನಡ ಪ್ರೇಮಕ್ಕೆ ಒಂದ್ಸಲ ನಮಸ್ಕಾರ ಕಣ್ರಣ್ಣೋ ಅನ್ನದೇ ಇರಕ್ಕೆ ಮನ್ಸಾಗಲ್ಲ. ಒಟ್ನಲ್ಲಿ ಇವ್ರು ಕನ್ನಡದ ಪೂಜಾರಿಗಳು ಅನ್ನಬೌದು.

ಇಂಥಾ ಅಬಿಮಾನೀನೂ ಇಂಗ್ ಯಾಮಾರ್ಸವ್ರೆ!
ಈ ಪಾಟಿ ಕನ್ನಡ ಅಬಿಮಾನ ಮಡಿಕ್ಕಂಡಿರೋ ಸವಿತಾ ಸ್ಟೊರ್ಸ್ ಅಂಗಡಿ ಯಜಮಾನ್ರುಗೂ ಹಿಂದಿ ಬಾಸೆಯೋರು ಯಾಮಾರ್ಸಿರೊ ಬಗೆ ನೋಡ್ರಣಾ. ಹಿಂದಿ ಭಾರತದ ರಾಷ್ಟ್ರಬಾಶೆ ಅನ್ನೋ ಸುಳ್ಳುನ್ನ ಇವ್ರ್ ತಲೆಗೂ ತುಂಬವ್ರೆ. ಅದ್ಕೆಯಾ ಇವ್ರಂಗಡೀಲಿ "ಹಿಂದಿ ಕಲೀರಿ, ಇಲ್ಲಾ ಭಾರತ ಬಿಟ್ಟು ತೊಲಗಿ" ಅನ್ನೋ ಬೋಲ್ಡು ನೇತಾಕವ್ರೆ. ಅದ್ಯಾಕ್ ಯಜಮಾನ್ರೆ ಇಂಗ್ ಆಕ್ಕೊಂಡಿದೀರೀ? ಅಂದ್ರೆ ಹೂ ಇಡೀ ಬಾರತಾನ ಒಂದು ಮಾಡಕ್ಕೆ ಇಂದಿ ಬೇಕು, ಅದು ಬಾರತದ ಲಿಂಕು ಅಂತಾ ಅಂದ್ರು. ನಾನೂನೂವೆ, ಅಲ್ಲಾ ಯಜಮಾನ್ರೆ, ನಾನು ಆಗಾಗ ತಿರುಕ್ಕೋಯಿಲ್ ಕಡೆ ಓಯ್ತಿರ್ತೀನಿ, ನಾನು ತಮಿಳು ಕಲ್ತುಕೊಂಡು ಮಾತಾಡಬೇಕಾ ಅತ್ವಾ ನಾನೂ, ತಿರುಕ್ಕೋಯಿಲ್ ಅಯ್ಯರ್ ಅವ್ರೂ ಇಂದೀ ಕಲ್ತುಕೊಂಡು ಮಾತಾಡ್ಬೇಕಾ ಅಂದ್ರೆ ಏನೂ ಉತ್ರ ಕೊಡ್ದೆ ಮುಂದಿನ್ ಗಿರಾಕಿ ಕಡೆ ಕಣ್ ಹಾಯಿಸ್ಬುಡೋಡಾ ಗುರುಗಳೇ?

ಬರೋ ಬಾನುವಾರ ಬರದ್ ಮರೀಬೇಡಿ ಗುರುಗಳೇ!

"ಏನ್ ಗುರು" ಬರೋ ಆಯಿತವಾರ 6ನೇ ತಾರೀಕು ಬೆಳಗ್ಗೆ ಅತ್ತು ಗಂಟ್ಗೆ ಎಲ್ರುನ್ನು ಬೆಟ್ಟಿ ಆಯ್ತೀನಿ, ಎಲ್ರು ಜೊತೆ ಕಾಪಿ ಕುಡೀತೀನಿ ಅಂತ ಕರದವ್ರೆ ಅಂತಾ ಗೊತಾಯ್ತು. ಅಲ್ಲಾ ಮೊನ್ನೆ ಮೊನ್ನೆ ನನ್ನುನ್ನ ತೈಲ್ಯಾಂಡಿಗೆ ಕಳ್ಸಿ, ನಿನ್ನೆ ಮಂಡ್ಯಕ್ ಕಳ್ಸಿದ್ ’ಏನ್ ಗುರು’ ಏಳವ್ರೆ ಅಂತಾ ಎಲ್ಡು ದಿನದಿಂದ ನಾನೂ ಅಂಗೇ ಜಯನಗರ ಕಾಂಪ್ಲೆಕ್ಸ್ ಕಡೆ ಅಡ್ಡಾಡ್ಕಂಡ್ ಬರೋದ್ರಲ್ಲಿ ಇಂಗೆಲ್ಲಾ ಮಾಡವ್ರಲ್ಲಾ... ಇವ್ರು ಅಂತಾ.

ನನ್ನ ಬುಟ್ಟು ಅದೆಂಗ್ಲಾ ಕಾಪಿ ಕುಡ್ಯಕ್ ಆಯ್ತದೆ. ನಾನಿಲ್ದಿದ್ರೆ ಕಾಪೀನೂ ಕರ್ರುಗ್ ಆಯ್ತುದೆ, ಸಕ್ರೆನೂ ಸಪ್ಪುಗ್ ಆಯ್ತುದೆ. ಅದ್ಕೆಯಾ ನಾನೂನೂವೆ ಅವತ್ತು ಬಿ.ಎಂ.ಸಿರ್ಕಂಟಯ್ಯ ಕಲಾಬವನಕ್ಕೆ ಬತ್ತೀನಿ. ಬೆಳ್ಳಂ ಬೆಳ್ಗೆ ಅದೂ ರವಿವಾರ ಯೋಳೋದು ವಸಿ ತಾಪತ್ರಯಾನೆ ಗುರು, ಆದ್ರೂ ನಮ್ ಏನ್ ಗುರು ಓದುಗ್ರುನ್ ಮಾತಾಡ್ಸೋದು ಅಂದ್ರೆ ಅಂತಾ ಅವಕಾಸ ಬುಡಕಾಯ್ತುದಾ? ನೀವೂನು ಬತ್ತೀರಾ ತಾನೇ?

ಅಕ್ರೆಯಿಂದ ಎಂಕ

ಅಂದಾಗೆ ಕಾರ್ಯಕ್ರಮದ ಬಗ್ಗೆ ಇಲ್ಲಿ ಓದಿ: ಬಾ ಗುರು! ಕಾಫಿ ಕುಡಿಯೋಣ!!

ನಮ್ಮದಾಗಿದೆ ನಮ್ಮೂರ ಬಸ್ಸು!

ಅಡ್ಬಿದ್ದೆ ಕಣ್ರಣ್ಣೋ, ನಾನು ಎಂಕ. ಮೊನ್ನೆ ನಮ್ ಬಾಮೈದ ಸೀನನ್ ನೋಡಿಕ್ಯಂಡ್ ಬಂದು ಬುಡ್ಮಾ ಅಂತ ಎಂಡ್ರುನ್ನೂ ಮಕ್ಕೂಳ್ನೂ ಕರ್ಕೊಂಡು ಒಸಿ ಊರ ಕಡೆಗೆ ಓಗಿದ್ದೆ. ಅದೇ ನಮ್ ಸೀನ ಇರೋ ಊರು ಮಂಡ್ಯದ್ ತಾವ್ ಇರದು. ಅದ್ಕೆಯಾ ಅಂಗೆ ಮೈಸೂರಿಂದ ಮಂಡ್ಯಕ್ ಬಸ್ ಅತ್ಕೊಂಡ್ವಿ. ಆ ಕಂಡಕ್ಟರಪ್ಪ ಬಂದು ತಿಕೀಟು ತಕ್ಕಳ್ಳೀ ಅಂದಿದ್ಕೆ "ಊ ಕಣಣ್ಣಾ ಮಂಡ್ಯಕ್ ಎಲ್ಡು ಪುಲ್ಲು, ಎಲ್ಡು ಆಪು ತಿಕೀಟು ಅರಿ" ಅಂದೆ.

ಆ ವಯ್ಯನೂ ಅದೆಂಥದೋ ಮೆಸಿನ್ ಕುತ್ತಿಗ್ಗೆ ನೇತ್ ಆಕ್ಕೊಂಡಿದ್ದ. ಕಾಸು ಇಸ್ಕೊಂಡಿದ್ದೇ ಅದ್ನ ಕುಟು ಕುಟು ಒತ್ತುದಾ. ನಾನೂನುವೆ ಬಾಯ್ ಬುಟ್ಕೊಂಡು ನೋಡ್ತಿವ್ನಿ, ಮ್ಯಾಗಿಂದ ಕುರ್ರ್ ರ್‍ ರ್‍ ಅಂತ ಆಳೆ ಒರಗ್ ಬಂದೇ ಬುಡದಾ! ಇದೇನಪ್ಪಾ ನಾಕೋ ಆರೋ ಚೀಟಿ ಕಯ್ಯಾಗೆ ಮಡುಗ್ತಾನೆ ಅಂತ ಕಾಯ್ತಿದ್ರೆ ಆ ವಯ್ಯ ಒಂದೇ ಚೀಟಿ ಕೊಡದಾ? ಬೊಂಬಾಟಾಗ್ ಐತಲ್ಲಪ್ಪೋ ಇದು ಅನ್ಕತಾ ಅಂಗೆ ತಿಕಿಟ್ಟಿನ್ ಕಡಿಕ್ ನೋಡ್ತೀನಿ... ಮೈ ಝುಮ್ ಅಂದ್ ಬುಡದಾ? ಅಲ್ಲಾ ಈ ಕೆಎಸ್ಸಾರ್ಟೀಸಿ ಬಡ್ಡೆತ್ತವು ಈ ಪಾಟಿ ಸುಧಾರುಸ್ ಬುಟ್ಟವ್ರಲ್ಲಪ್ಪೋ ಅಂತ ಬೋ ಕುಸ್ಯಾಗೋತು ಗುರು!

ಆ ತಿಕಿಟ್ಟಲ್ಲಿ ಎಲ್ಲಿಂದ ಎಲ್ಲಿಗ್ ಓಯ್ತಿದೀವಿ, ಎಸ್ಟು ಜನ ದೊಡ್ಡೋರು, ಎಸ್ಟು ಚಿಕ್ಕವು, ಎಸ್ಟು ಕಾಸ್ ಕೊಡ್ಬೇಕು ಅಂತೆಲ್ಲಾ ನಂಗ್ ಅರ್ಥ ಆಗೋಂಗೆ ಕನ್ನಡದಾಗೇ ಪಿರಿಂಟ್ ಮಾಡ್ ಬುಟ್ಟವ್ರೇ. "ಅಲ್ಲಾ ಕಣಣ್ಣಾ, ಈ ಇಂಗ್ಲಿಸ್ ಮೆಸಿನ್ನು ಅದೆಂಗ್ಲಾ ಕನ್ನಡದಾಗ್ ಬರೀತುದೆ" ಅಂದುದ್ಕೆ ಆ ಕಂಡಕ್ಟ್ರಣ್ಣ "ಏ, ಬರೀ ತಿಕೇಟ್ ಏನ್ಲಾ, ಬೇಕಂದ್ರೆ ಇಡೀ ಸರ್ಕಾರಾನೇ ಕನ್ನಡದಲ್ ಮಾಡ್ಬೌದು" ಅಂದ. ಅದೂ ಸರೀನೇಯೆ, ನಮ್ ಕನ್ನಡದ್ ಐಕ್ಳು ಕಂಪ್ಯುಟರ್ರು, ಐಟಿ, ಇಪ್ರೊ, ಇನ್ಪೋಸಿಸ್ಸು ಅಂತ ಸಿಟಿಗ್ ಓಗಿ ಇನ್ನೇನ್ ತಾನೆ ಗೆಯ್ಮೆ ಮಾಡ್ಯಾವು, ಕನ್ನಡದಲ್ಲೇ ಬಸ್ಸಿನ್ ತಿಕೀಟು, ರೈಲಿನ್ ತಿಕೀಟು, ಅಂಗಡಿ ಬಿಲ್ಲು, ಕರೆಂಟು, ನೀರಿನ್ ಬಿಲ್ಲು... ಇಂಗೇ ಎಲ್ಲಾನೂವೆ ಕನ್ನಡದಲ್ಲಿ ಬರೋ ಅಂಗ್ ಮಾಡದ್ ಬುಟ್ಟು!! ಅಲ್ವುರಾ ಗುರುಗಳೇ?

ನಮ್ಮೂರ್ ಏರ್ ಪೋರ್ಟನ್ನೂ ಇಂಗೇ ಮಾಡಕ್ ಏನ್ ಧಾಡಿ?

ಮೊನ್ನೆ ಮೊನ್ನೆ ತಾನೆ ನಮ್ ಎಂಕ ಪಾರಿನ್ನು ನೋಡಿಕ್ಯಂಡ್ ಬತ್ತೀನಿ ಅಂತಾ ಅದ್ಯಾವ್ದೋ ತೈಲೆಂಡ್ ದೇಸಕ್ಕೆ ಓಗಿದ್ದವ್ನು ತಿರುಗಿ ಬಂದು ಒಂದು ದೊಡ್ ವರದೀನೆ ಒಪ್ಪುಸ್ಬುಡೋದಾ... ಬರ್ರೀ, ಒಸಿ ಅದೇನ್ ಅಂದಾನೋ ನೋಡ್ಮಾ....

ಎಂಕನ್ ರಿಪೋಲ್ಟು!

ನಮಸ್ಕಾರ ಕಣಣ್ಣೋ, ನಮ್ ಬೆಂಗಳೂರಲ್ಲಿ ಕನ್ನಡದೋರು ಒಸ ಇಮಾನ ನಿಲ್ದಾಣದಾಗೆ ಕನ್ನಡದ ವಾತಾವರಣ ಇರಬೇಕು, ಕನ್ನಡದೋರ್ಗೇ ಕೆಲ್ಸ ಕೊಡ್ಬೇಕು, ಕನ್ನಡದಾಗೇ ಬೋಲ್ಡುಗಳಿರಬೇಕು ಅಂತ ಓರಾಟ ಮಾಡ್ತಾ ಅವ್ರೆ ಅಂತ ಒಂದು ವರುಸದಿಂದ ನೋಡಿಕ್ಯಂಡು ಬತ್ತಾ ಇವ್ನಿ. ಅಲ್ಲಾ ಇಂಟರ್ ನ್ಯಾಸನಲ್ ಏರ್ ಪೋಲ್ಟ್ ಅಂದ್ ಮ್ಯಾಲೆ ಅದೆಂಗ್ಲಾ ಕನ್ನಡಕ್ ಅಲ್ಲಿ ಜಾಗ ಕೊಡಕ್ ಆಯ್ತದೆ? ಅಲ್ಲೇನಿದ್ರೂ ಇಂಟರ್ ನ್ಯಾಸನಲ್ ಬಾಸೆ ಇಂಗ್ಲಿಸ್ ಅಲ್ವಾ ಇರ ಬೇಕಾದ್ದು... ಅಂತ ನಾನೂನೂವೆ ಅಂದುಕ್ಯಂಡು "ಇರ್ಲಿ, ಬ್ಯಾರೆ ದೇಸದಲ್ಲೆಲ್ಲಾ ಎಂಗದೆ ಇಮಾನ ನಿಲ್ದಾಣ, ನೋಡಿಕ್ಯಂಡ್ ಬಂದ್ ಬುಡಮಾ" ಅಂತಾ ತೈಲೆಂಡಿನ ಕಡೆ ಒಂಟೆ.

ತೈಲ್ಯಾಂಡಿಗೆ ಯಾಕೋದ ಎಂಕ?

ಇಡೀ ಪರ್ಪಂಚದಾಗೆ ಪ್ರವಾಸಿಗಳು ಶಾನೆ ಜನ ಬರೋ ದೇಸಗಳಲ್ಲಿ ಇದೂನುವೆ ಒಂದು ಕಣ್ ಗುರು! ಇಲ್ಗೆ ಯೂರೋಪಿಂದ, ಅಮೇರಿಕಾದಿಂದ, ಏಸಿಯಾದಿಂದ ಬೇಜಾನ್ ಜನ ಓಯ್ತಾರೆ. ಅದೂ ಅಲ್ದಿರಾ ಈ ದೇಸ ಮುಕ್ಯವಾಗಿ ನಂಬ್ಕೊಂಡಿರೋದೇ ಪ್ರವಾಸೋದ್ಯಮಾನಾ. ಅಂಗಿದ್ ಮ್ಯಾಲೆ ಇಲ್ಲಿ ಶಾನೆ ಇಂಗ್ಲಿಸ್ ಇರೋದು ಸಾಜ ಅಂತ ಅಲ್ಲಿಗ್ ಓದೆ ಕಣ್ ಗುರು! ಈ ಊರೆಸ್ರು ಬ್ಯಾಂಕಾಕ್ ಅಂತೆ, ಈ ಇಮಾನ ನಿಲ್ದಾಣದ ಎಸ್ರು ಸುವರ್ಣಭೂಮಿ ಅಂತೆ. ಒಳಿಕ್ ಓಗ್ ನೋಡೇ ಬುಡಮಾ ಅಂತ ಓದೆ ಗುರು!

ಮೊಕಕ್ ಹೊಡ್ದಂಗ್ ಕಾಣೊ ನೆಲದ ಸೊಗಡು!

ಇಕಾ ನೋಡು ಒಳಿಕ್ ಓಯ್ತಿದ್ ಅಂಗೇ ಎಂಗ್ ಕಾಣ್ತುದೆ ಅಂತಾ! ಅದೆಂಥದೋ ಗೊಂಬೆ ನಿಲ್ಸವ್ರೆ? ಇಡೀ ಇಮಾನ ನಿಲ್ದಾಣ ಒಳ್ಳೆ ಬ್ಯಾರೆ ಪರಪಂಚ ಇದ್ದಂಗ್ ಐತಲ್ಲಪ್ಪೋ. "ಓ... ಇದೇನೇಯಾ ತೈ ಸಂಸ್ಕೃತಿ" ಅಂತಾ ಕಣ್ಣರಳುಸ್ಕೊಂಡು ಯಾಪಾಟಿ ಪ್ರವಾಸಿಗಳು ಅದ್ರು ಮುಂದೆ ನಿಂತವ್ರಲ್ಲಾ ಗುರು? ನಮ್ ಬೆಂಗಳೂರಾಗು ಇಂಗೆ ಕನ್ನಡ ಸಂಸ್ಕೃತಿ ಬಿಂಬ್ಸೋ ಚಿತ್ರಗಳು, ಗೊಂಬೆಗ್ಳೂ ಇದ್ರೆ ಏನ್ ಪಸಂದಾಗ್ ಇರ್ತೈತೆ ಅಲ್ವಾ ಗುರು? ಕನ್ನಡ ನಾಡಲ್ ನಿಲ್ಸಕ್ ಏನ್ ಗೊಂಬೆಗಳಿಲ್ವಾ? ಪರಪಂಚಕ್ ತೋರುಸ್ಕೊಳೋ ಸಂಸ್ಕೃತಿ ಇಲ್ವಾ ಅಂತಾ ಯೋಚ್ನೆ ಆಯ್ತುದೆ ಗುರು!

ನೆಲದ ಬಾಸೆಗೇ ಮೊದಲ ಸ್ತಾನಾ!

ಅಬ್ಬಬ್ಬಾ... ಎಲ್ಲ ಬೋಲ್ಡಲ್ಲೂ ಒಳ್ಳೆ ಜಾಂಗೀರ್ ಸುತ್ತಿರೋ ಅಂಗೆ ಕಾಣೋ ದೊಡ್ಡದಾಗಿ ಅವರ ಬಾಸೇಲೆ ಬರದವ್ರೆ. ಇಂಗ್ಲಿಸಿಗೆ ಕೆಳಗಿನ ಸ್ತಾನ ಕೊಟ್ಟವ್ರಲ್ಲಪ್ಪೋ? ಇಕಾ ಇಲ್ ಬರೋ ಐದ್ರೆಲ್ಲಾ ಬ್ಯಾರೆ ಬ್ಯಾರೆ ಬಾಸೇನೋರು ಕಣ್ರಣ್ಣಾ, ಅವ್ರಿಗೆಲ್ಲಾ ಎಂಗೆ ತಿಳ್ದೀತು ನಿಮ್ ಬಾಸೆ ಅಂದ್ರೆ, ಅಲ್ ಕೆಳಗಡೆ ಇರೋ ಇಂಗ್ಲಿಸ್ ಕಡೆ ಕೈ ತೋರುಸ್ತಾನಲ್ಲಣ್ಣೋ? ಅಲ್ಲಾ ಗುರು, ಬರೋ ಜನ್ರುಗೆಲ್ಲಾ ಎಂಗಿದ್ರೂ ನಿಮ್ ಬಾಸೆ ತಿಳ್ಯಕಿಲ್ಲಾ, ಮತ್ಯಾಕ್ ಅದ್ರಲ್ ಬರ್ದಿದೀರಾ ಅಂದ್ರೆ ಅಂತಾನೆ " ಈಗ್ ನಾವ್ ಬಂದಿರೋದು ತೈಲ್ಯಾಂಡಿಗೆ, ಇಲ್ಲಿ ಜನ್ರು ಬಾಸೆ ಬ್ಯಾರೆ, ಅದು ನೋಡಕ್ ಇಂಗ್ ಕಾಣ್ತುದೆ ಅಂತಾ ಹೊರಗಿನ್ ಜನುಕ್ ಅನ್ನುಸ್ಬೇಕು.. ಅದ್ರು ಜೊತೆ ನಮ್ ಜನಕ್ ತಮ್ ಬಾಸೆ ಬಗ್ಗೆ ಹೆಮ್ಮೆ ಉಟ್ಕಬೇಕು ಅಂತಾ ಇಂಗ್ ಮಾಡಿದೀವಿ" ಅನ್ನದಾ?

ಎಂಗೂ ಇಸ್ಟು ದೂರ ಬಂದಿವ್ನಿ, ಎಂಡ್ರುಗೇನೂ ತಿಳ್ಯಕಿಲ್ಲಾ, ಒಂದು ಪೆಗ್ ಏರುಸ್ ಬುಡಮಾ ಅಂತ ಬಾರ್ ಒಳಿಕ್ ಓದ್ರೆ, ನೋಡ್ ಗುರು... ಅಲ್ಲೂ ನನ್ ಮಗಂದು ಎಂಗ್ ಅವ್ರು ಬಾಸೇ ಪಳಪಳ ಒಳೀತಿದೆ.
ಅಲ್ಲಿ ಕುಡ್ಯೋ ನೀರಿನ್ ಬಾಟ್ಲಿರಲಿ, ಹೊಡ್ಯೋ ಎಣ್ಣೇ ಬಾಟ್ಲಿರಲಿ... ಎಲ್ಲುದ್ರು ಮ್ಯಾಲೂ ಅವರ್ ಬಾಸೇಲೇ ಬರ್ಕಂಡವ್ರೆ. ಅದೆಂಗ್ಲಾ ಇಂಗ್ ಮಾಡೀರಿ ಅಂದ್ರೆ ಇಂಗ್ಲಿಸಲ್ ಬರುದ್ರೆ ಮಾತ್ರಾ ಕಿಕ್ ಏರದು ಅಂತ ನಮ್ ಜನ ಅನ್ಕಂಡಿಲ್ಲಾ ಅನ್ನಾದಾ ಆ ಬಾರಲ್ಲಿರೋನು!

ಒಟ್ನಲ್ಲಿ ತೈಲ್ಯಾಂಡು ಅನ್ನೋ ದೇಸದಾಗೆ ಅವುರ್ದೆ ಒಂದು ಬಾಸೆ ಐತೆ, ಸಂಸ್ಕೃತಿ ಐತೆ, ಆಚಾರ ಇಚಾರ ಐತೆ, ಅದುಕ್ಕಿಂತ ಮುಕ್ಯವಾಗಿ ಅದುನ್ನೆಲ್ಲಾ ಬಂದೋರಿಗೆ ತೋರುಸ್ಕೋ ಬೇಕು ಅನ್ನೋ ತುಡಿತಾ ಐತೆ, ತೋರುಸ್ಕೊಳಕ್ಕೆ ಹೆಮ್ಮೆ ಐತೆ ಅಂತ ಅರ್ತ ಆಯ್ತು ಗುರು! ಅಲ್ಲಾ, ನಮ್ಮೂರಾಗೂ ನಮ್ ಬಾಸೆ, ಸಂಸ್ಕೃತಿ ತೋರುಸ್ಕೊಳ್ದೆ ಇರಕ್ಕೆ ಕನ್ನಡದವ್ರೇನು ನರ ಸತ್ತವ್ರಾ? ಗುರು

ಎಂಕನ ಕನಸಲ್ಲಿ ನಾಣಿ!

ಇತ್ತೀಚೆಗೆ ಕನ್ನಡಿಗ ನಾರಾಯಣ ಮೂರ್ತಿಗಳಿಗೆ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ನಾರಾಯಣ ಮೂರ್ತಿಗಳ ಉದ್ಯಮ ಕ್ಷೇತ್ರದಲ್ಲಿನ ಅಪಾರವಾದ ಸಾಧನೆಗೆ ಸಂದ ಗೌರವವಾಗಿದೆ.
ಸಾಧಾರಣ ಶಾಲಾಮಾಸ್ತರರ ಮಗನಾಗಿ ಮಧ್ಯಮ ವರ್ಗದ ಎಲ್ಲ ಬವಣೆಗಳನ್ನು ದಾಟಿ ತಮ್ಮ ಉದ್ಯಮಶೀಲತೆಯಿಂದಾಗಿ ವಿಶ್ವದೆಲ್ಲೆಡೆ ಮಾನ್ಯತೆ ಪಡೆದ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ ಇವರ ಸಾಧನೆ ಎಲ್ಲ ಕನ್ನಡಿಗರಿಗೆ ಪ್ರೇರಣಾದಾಯಕ.
ಈ ಪ್ರಶಸ್ತಿ ಶ್ರೀಯುತರಿಗೆ ದೊರೆತಿರುವುದು ಅವರ ಉದ್ಯಮಶೀಲತೆ ಮತ್ತು ಜಾಗತೀಕರಣದ ಉಪಯೋಗ ಪಡೆದುಕೊಂಡು ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟು ಮಾಡಿದ ಕ್ರಾಂತಿಗಾಗಿ.

ಇವೆಲ್ಲದರ ನಡುವೆ ನಮ್ಮ ಎಂಕ ಕಣ್ಮುಚ್ಕೊಂಡು ಅದೇನೇನೇನೋ ಕನಸ್ ಕಾಣ್ತಾವ್ನೆ. ಔನ್ ಕನಸು ಅಂಥಿಂಥದ್ದಲ್ಲ, ಇಪ್ಪತ್ತು ವರ್ಷ ಮುಂದಿನ್ದು. ಎಂಕನ್ ಕನಸಿಗೆ ಒಂದು ಬಾಲ್ಕನಿ ಟಿಕೆಟ್ ತಗಂಡ್ ಒಳಗ್ ಓಗ್ಮ ಬನ್ನಿ!

ಅಬ್ಬಬ್ಬಬ್ಬಾ ಏನ್ ಗುರು ಇದು? ಕನ್ನಡದ ಶಾಲೆ ಇಂಗೆಲ್ಲಾ ಇರ್ತುದಾ? ಅದೇನು ಎಕರೆಗಟ್ಟಲೆ ಮೈದಾನ, ತೋಟ, ಆಟದ ಮೈದಾನ, ಲಾನು... ಎಷ್ಟು ಸಖತ್ತಾಗ್ ಐತಲ್ಲಪ್ಪೋ ನಮ್ ಐಕ್ಳು ಹಾಕಿರೋ ಯೂನಿಫಾರ್ಮು? ಆ ಪ್ರೊಜೆಕ್ಟರ್ ಏನು? ಆ ಮಕ್ಳು ಬಳುಸ್ತಿರೋ ಸೌಕರ್ಯಗಳೇನು? ಇದ್ಯಾವ ಇಂಟರ್ ನ್ಯಾಸನಲ್ ಶಾಲೆಗೂ ಕಮ್ಮಿ ಇಲ್ದಂಗ್ ಐತಲ್ಲಪ್ಪೋ?
ಶಿಕ್ಷಣ ಕ್ರಾಂತಿ!
ಇಪ್ಪತ್ತು ವರ್ಷಗಳ ಹಿಂದೆ ಎಕ್ಕುಟ್ ಹೋಗಿದ್ದ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೆಗೆ ದೊಡ್ ತಿರುವು ಕೊಟ್ರು ನಮ್ ಮೂರ್ತಿಗಳು. ಕನ್ನಡ ಶಾಲೆಗಳು, ಮಾಧ್ಯಮ ಇವುಗಳ ಸ್ವರೂಪವನ್ನು ಜಿಲ್ಲೆಗೊಂದು ಮಾದರಿ ಶಾಲೆಗಳನ್ನು ಕಟ್ಟೋ ಮೂಲಕ ಬುಡಸಮೇತ ಬದ್ಲಾಯ್ಸುದ್ರು. ಕನ್ನಡದ ಮಕ್ಕಳ ಕಲಿಕೇನ ಸರಳ ಮಾಡಿ, ಜಗತ್ತಿನ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಸಾಲಿನಲ್ಲಿ ಕನ್ನಡ ನಾಡಿನ ಶಿಕ್ಷಣ ವ್ಯವಸ್ಥೇನ ನಿಲ್ಸಿ ತೋರುಸ್ಕೊಟ್ರು. ಅಂಥಾ ನಾರಾಯಣ ಮೂರ್ತಿಗಳು ಕನ್ನಡದೋರು ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಲು ಈ ಎಲ್ಲ ಜ್ಞಾನ ಸಂಪತ್ತು ಕನ್ನಡದಲ್ಲಿ ಇರಬೇಕಾದ ಅಗತ್ಯ ಅರ್ಥಮಾಡ್ಕೊಂಡು, ಕನ್ನಡ ತಂತ್ರಜ್ಞಾನ ಸಂಶೋಧನಾ ಕೇಂದ್ರವನ್ನು ಆರಂಭಿಸಿದ್ದಾರೆ. ಇಲ್ಲಿ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಮೆಕಾನಿಕಲ್, ಎಲೆಕ್ಟ್ರಿಕಲ್, ಸಿವಿಲ್, ನ್ಯಾನೋ, ಬಯೋ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿನ ಪ್ರಪಂಚದ ಅತ್ಯುನ್ನತ ಅರಿವನ್ನು ಕನ್ನಡಕ್ಕೆ ತರುವ ಮೂಲಕ ಹೊಸ ಹೊಸ ಅವಿಷ್ಕಾರಗಳಿಗೆ ಕಾರಣವಾಗುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಈಗಾಗ್ಲೆ ಇದುಕ್ಕೆ ಬೇಜಾನ್ ಪೇಟೆಂಟ್ಗಳು ಸಿಕ್ಕವೆ ಗುರು!
ಉದ್ದಿಮೆಗಾರಿಕೆ!
ಕನ್ನಡಿಗರಲ್ಲಿ ಉದ್ದಿಮೆಗಾರಿಕೆ ಹೆಚ್ಚಿಸಲು ಮಾರ್ಗದರ್ಶನ/ ಅನುಭವ ಹಂಚಿಕೊಳ್ಳುವ ವ್ಯವಸ್ಥೆ ಕಟ್ಟಿದಾರೆ. ಇದ್ರಾಗೆ ಯಶಸ್ವಿ ಉದ್ದಿಮೆಗಾರಿಕೆಯ ಬಗ್ಗೆ ತರಬೇತಿ ಕೊಡೋದ್ರು ಜೊತೆಗೆ ಕನ್ನಡ ನಾಡಿನ ಅನೇಕ ವಿಶ್ವವಿದ್ಯಾಲಯಗಳಲ್ಲೂ ಉದ್ದಿಮೆಗಾರಿಕೆ ಹೆಚ್ಚಿಸಲು ಅಗತ್ಯವಿರುವ ಕೋರ್ಸುಗಳನ್ನು ಆರಂಭಿಸಲು ಉತ್ತೇಜಿಸಲಾಗಿದೆ. ಶ್ರೀಯುತರು ಇಂತಹ ಕಡೆ ಅತಿಥಿ ಉಪನ್ಯಾಸಕರಾಗಿ ಮುನ್ನಡೆಸ್ತಿರೋದು ವಿಶೇಷವಾಗಿದೆ. ಇವರು ಇಪ್ಪತ್ ವರ್ಷದಿಂದ ಹೊಸ ಉದ್ದಿಮೆಗಾರರನ್ನು ಪ್ರೋತ್ಸಾಹಿಸ್ತಾ, ನಾಡಿಗೆ ಬಂಡವಾಳ ಹರಿದು ಬರಕ್ಕೆ ಕನ್ನಡಿಗರ ಬ್ರಾಂಡ್ ಅಂಬಾಸಿಡರ್ ಆಗಿಯೂ ಕೆಲಸ ಮಾಡಿ ಗೆದ್ದಿದ್ದಾರೆ. ಇದೀಗ ಉದ್ದಿಮೆಗಾರಿಕೆಗೆ ದಾರಿ ತೋರ್ಸಕ್ಕೆ ಇವರೇ ಹುಟ್ಟು ಹಾಕಿದ ಏಜೆನ್ಸಿಯೊಂದು ಕಾರ್ಯನಿರ್ವಹಿಸುತ್ತಿದ್ದು ಇಡೀ ಭಾರತ ಈ ಮಾದರಿಯನ್ನು ಅನುಸರಿಸತೊಡಗಿದೆ.
ಅಸ್ತು ದೇವತೆಗಳಿರ್ತಾರಂತೆ!
ಎಂಕನ್ನ ಸುಮ್ನೆ ಎಬ್ಬಿಸಿ, ಲೇ ಕನಸು ಕಾಣ್ಬೇಡ ಅನ್ನಬ್ಯಾಡ್ರಿ. ಒಳ್ಳೇ ಕನಸುಗಳು ನನಸಾಗಲಿ ಅನ್ನೋ ಅಸ್ತು ದೇವತೆಗಳು ಇರ್ತಾರಂತೆ ಗುರು!

"ಕನ್ನಡಿಗರೇ! ಎರಡನೇ ದರ್ಜೆ ನಾಗರಿಕರಾಗಲು ಒಪ್ಪಬೇಡಿ" - ಶೇಷಗಿರಿರಾವ್

ಉಡುಪೀಲಿ ನಡೀತಿರೋ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶ್ರೀ. ಪ್ರೊ. ಎಲ್.ಎಸ್. ಶೇಷಗಿರಿರಾಯರು ಕನ್ನಡಿಗರಿಗೆ ಹೇಗೆ ಕರೆ ಕೊಟ್ಟಿದಾರೆ ಅಂದ್ರೆ ಸತ್ತಂತಿರೋರಲ್ಲ, ಸತ್ತೋಗಿರೋ ಕನ್ನಡಿಗರಿಗೂ ಬಡಿದು ಎಚ್ಚರಿಸೋಹಾಗಿದೆ. ಏನು ಆ ಕರೆ ಅಂತೀರಾ? ಇದು -
ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ. ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ.

ಶೇಷಗಿರಿರಾಯರು ನುಡಿದಿರೋ ಮೇಲಿನ ಒಂದೊಂದು ಪದಾನೂ ತೂಕ ಇರೋಂಥದ್ದು ಗುರು! ಮೇಲಿನ ಹೇಳಿಕೇಲಿ ಎರಡು ಮುಖ್ಯವಾದ ಸಂದೇಶಗಳಿವೆ. ಅವು ಯಾವ್ಯಾವ ಸಂದೇಶಗಳು ಅಂತ ಒಸಿ ಬೂದ್ಗಾಜಿಟ್ಟು ನೋಡಿ ಯಂಕ ಈ ಕೆಳಗಿನ ಕಾಜಗಾನ ನಮೀಗ್ ಕಳುಸ್ದ.

ಮೊದಲನೇ ಸಂದೇಶ

"ಕನ್ನಡಿಗರೇ, ಭಾರತದಲ್ಲಿ ನೀವು ಎರಡನೇ ದರ್ಜೆ ನಾಗರಿಕರಾಗಲು ಯಾವ ಕಾರಣಕ್ಕೂ ಒಪ್ಪಬೇಡಿ." ಅನ್ನೋದೇ ಮೊದಲ ಸಂದೇಶ. ಇದರ ಅರ್ಥ ಏನೂಂದ್ರೆ -
  1. ಕನ್ನಡಿಗರ ಮೇಲೆ "ನೀವು ಎರಡನೇ ದರ್ಜೆಯ ನಾಗರಿಕರಾಗಿ" ಅಂತ ಬೋಧಿಸೋಂಥಾ ತಾರತಮ್ಯದ ವ್ಯವಸ್ಥೆ ಇವತ್ತಿನ ದಿವಸ ಇದೆ ಅಂತ ಅರ್ಥ ಮಾಡ್ಕೊಳಿ. ಅರ್ಥ ಮಾಡ್ಕೊಂಡು ಅಂತಾ ವ್ಯವಸ್ಥೆ ಹೇಳಿದ್ದನ್ನ ನೀವು ಕೇಳಬೇಡಿ.
  2. ಎರಡನೇ ದರ್ಜೆಯ ನಾಗರಿಕನ ಬದುಕು ಅಂದ್ರೆ? ಕನ್ನಡಿಗಂಗೆ ತನ್ನ ಕನ್ನಡತನವನ್ನ ಉಳಿಸಿಕೊಂಡರೆ ಅವನಿಗೆ ಕಲಿಕೆ, ಕೆಲಸ, ಮನರಂಜನೆ, ಗ್ರಾಹಕ ಸೇವೆ ಮುಂತಾದ ಪ್ರತಿಯೊಂದು ಕ್ಷೇತ್ರದಲ್ಲೂ ಅವನಿಗೆ ಇಲ್ಲಿ ಸ್ಥಾನಾನೇ ಇಲ್ಲ; ಔನು ಇವುಗಳಿಗೆ ಬೇರೆ ಒಂದು ಭಾಷೆಯ ಸಾರ್ವಭೌಮತ್ವವನ್ನ ಒಪ್ಪಿಕೊಳ್ಳಬೇಕು ಅನ್ನೋ ವ್ಯವಸ್ಥೆ ಇದೆಯಲ್ಲ, ಆ ವ್ಯವಸ್ಥೆಯಲ್ಲಿ ಅವನ ಬದುಕೇ ಎರಡನೇ ದರ್ಜೆಯ ನಾಗರಿಕನ ಬದುಕು.
  3. ಹಾಗೆಯೇ ಇಡೀ ಭಾರತಕ್ಕೇ ಇದು ಅನ್ವಯಿಸುತ್ತೆ. ಭಾರತದಲ್ಲಿ ಎಲ್ಲಿಗೆ ಹೋದರೂ ನೀವು ಎರಡನೇ ದರ್ಜೆಯೋರು ಅಂತ ಅನ್ಕೋಬೇಡಿ. ಹೀಗಂದ್ರೆ? ಇನ್ನೇನೂ ಇಲ್ಲ, ಉದಾಹರಣೆಗೆ ದಿಲ್ಲಿಗೆ ಹೋದರೆ "ನಾನು ಕೇವಲ ಕರ್ನಾಟಕದೋನು, ನನ್ನ ಭಾಷೇನ ಇಲ್ಲಿ ಕೇಳೋರು ಯಾರು?" ಅನ್ನೋ ಕೀಳರಿಮೆ ಬೇಡ ಅಂತ ಅರ್ಥ. ಇವತ್ತಿನ ದಿನ ಹಿಂದಿಯೋರಿಗೆ ಮತ್ತೆ ಹಿಂದಿಗೆ ಕರ್ನಾಟಕದಲ್ಲಿ ಯಾವ ಸೌಲತ್ತುಗಳು ಇವೆಯೋ ಅದೇ ಸೌಲತ್ತುಳು ನಿಂಗೆ ದಿಲ್ಲೀಲಿ ಸಿಗಬೇಕು.
  4. ಯಾವ ಕಾರಣಕ್ಕೂ ಎರಡನೇ ದರ್ಜೆ ನಾಗರಿಕನಾಗಲು ಒಪ್ಪಬೇಡಿ ಅಂದ್ರೆ? ಕಾರಣಗಳು ಬಹಳ ಇವೆ ಇವತ್ತಿನ ದಿನ ನಿಂಗೆ ಹಾಗೆ ಒಪ್ಪಿಕೊಳ್ಳೋಹಾಗೆ ಪ್ರೇರೇಪಿಸಕ್ಕೆ. ಪ್ರತಿಯೊಂದು ದಿಕ್ಕಿಂದಾನೂ ನಿಂಗೆ ನೀನು ಕೀಳು, ನಿನ್ನ ಭಾಷೆ ಕೀಳು, ನಿನ್ನ ನಾಡು ಕೀಳು ಅನ್ನೋ ಸಂದೇಶಗಳು ಬಹಳ ಬರ್ತಿವೆ, ಅವುಗಳಲ್ಲಿ ಯಾವ ಒಂದರಿಂದಲೂ ನೀನು ಪ್ರಭಾವಿತನಾಗಬೇಡ.
ಎರಡನೇ ಸಂದೇಶ

"ಕನ್ನಡಿಗರಿರುವುದು ಕೇಂದ್ರ ಸರ್ಕಾರಕ್ಕೆ ತೆರಿಗೆ ಕೊಟ್ಟು, ಸೈನ್ಯದಲ್ಲಿ ಬಲಿದಾನಕ್ಕೆ ಸಿದ್ಧವಾಗಿ ಕೇಂದ್ರವು ಅನುಗ್ರಹಿಸಿದ್ದನ್ನು ದೈನ್ಯತೆಯಿಂದ ಸ್ವೀಕರಿಸುವುದಕ್ಕೆ ಅಲ್ಲ." ಅನ್ನೋದೇ ಎರಡನೇ ಸಂದೇಶ. ಇದರಲ್ಲಿ ಅಡಗಿರೋ ಅರ್ಥಗಳು ಹೀಗಿವೆ:
  1. ಕನ್ನಡಿಗರು ಅಂದ್ರೆ ಔರಿಂದ ಬೇಕಾದಷ್ಟು ತೆರಿಗೆ ಕಿತ್ತಿ ಭಾರತದ ಗಡೀಲಿ ಸಾಯಕ್ಕೆ ನಿಲ್ಲಿಸಿ ಹಾಕಿದ್ದು ತಿನ್ಕೊಂಡು ಬಿದ್ದಿರೋ ಅಬ್ಬೇಪಾರಿಗಳು ಅನ್ನೋ ಅಭಿಪ್ರಾಯ ಕೇಂದ್ರಕ್ಕೂ ಕೆಲ ಕನ್ನಡಿಗರಿಗೂ ಬಂದಿದೆ. ಇದು ಸರಿಯಲ್ಲ. ನಾವು ತೆರಿಗೆ ಕೊಡೋದು ಕರ್ನಾಟಕದ ಉದ್ಧಾರಕ್ಕೆ, ಕನ್ನಡಿಗನ ಉದ್ಧಾರಕ್ಕೆ, ಕನ್ನಡದ ಉದ್ಧಾರಕ್ಕೇ ಹೊರತು ಬೀದೀಲಿ ಹೋಗೋ ರಾಜ್ಯಗಳ, ಜನರ, ಭಾಷೆಗಳ ಉದ್ಧಾರಕ್ಕಲ್ಲ!
  2. ಕೇಂದ್ರ ಕೊಟ್ಟಷ್ಟು ಸಾಕು, "ಅಪ್ಪಣೆ ಬುದ್ದಿ!" ಅಂತ ಹಾಕಿದಷ್ಟು ತಿನ್ಕೊಂಡಿರೋ ಪ್ರವೃತ್ತಿ ಕನ್ನಡಿಗರಲ್ಲಿ - ಹೆಚ್ಚಾಗಿ ರಾಜಕಾರಣಿಗಳಲ್ಲಿ - ಬಂದುಬಿಟ್ಟಿದೆ. ಇದು ಸರಿಯಲ್ಲ. ನಮ್ಮ ಹಕ್ಕುಗಳ್ನ ನಾವು ಗರ್ಜಿಸಿ ಕೇಳಬೇಕು, "ಕೊಡ್ತೀರೋ ಇಲ್ಲವೋ?" ಅಂತ ಬೆದರಿಸಿ ಕೇಳಬೇಕು, "ನಾವು ತೆರಿಗೆ ಕೊಡ್ತಿರೋದು ಈ ತಾರತಮ್ಯಕ್ಕಲ್ಲ" ಅಂತ ಗದರಬೇಕು.
  3. ದೈನ್ಯತೆ. ಈ ದೈನ್ಯತೆಗೆ ಕಾರಣ ಇನ್ನೇನೂ ಅಲ್ಲ, ರಾಜಕಾರಣಿಗಳಲ್ಲಿರೋ ಹೈಕಮಾಂಡ್-ದಾಸ್ಯ, ಅಷ್ಟೇ. ಈ ಹೈಕಮಾಂಡ್-ದಾಸ್ಯ ಇರೋದ್ರಿಂದ್ಲೇ ಹಾಕಿದ್ದು ತಿನ್ಕೊಂಡು ಬಿದ್ದಿರ್ತೀನಿ ಅನ್ನೋ ಪ್ರವೃತ್ತಿ ಕರ್ನಾಟಕದ ರಾಜಕಾರಣಿಗಳಿಗೆ ಇರೋದು.
ಒಟ್ಟಿನಲ್ಲಿ ಸಕ್ಕತ್ ಗಟ್ಟಿಯಾದ ಸಂದೇಶ ಕೊಟ್ಟಿದಾರೆ! ಅರ್ಥ ಮಾಡ್ಕೋಬೇಕು, ಜಾರಿಗೆ ತರಬೇಕು, ಅಷ್ಟೆ. ಏನ್ ಗುರು?

ಮಿಲನದ ಹಾಡಿಗೆ ಎಂಕನ ಭಾಷ್ಯ

ಹುಚ್ಚುಹಿಡಿದ ಭಕ್ತ ಒಬ್ಬ ಪ್ರತಿಯೊಂದರಲ್ಲೂ ತನ್ನ ಪ್ರೀತಿಯ ಭಗವಂತನ್ನ ಕಾಣೋಹಾಗೆ, ಪ್ರೀತಿಸುತ್ತಾ ಇರೋ ಒಬ್ಬನಿಗೆ ಎಲ್ಲೆಲ್ಲೂ ತನ್ನ ನಲ್ಲೆ ಕಂಡಂಗೆ ಎಂಕನಿಗೆ ಮಿಲನ ಚಿತ್ರದಲ್ಲಿ ಜಯಂತ ಕಾಯ್ಕಿಣಿ ಬರೆದಿರೋ ಒಂದು ಹಾಡಲ್ಲಿ ಬರೀ ಕನ್ನಡಿಗನಿಗೆ ಏಳಿಗೆಯ ಕಿವಿಮಾತೇ ತುಂಬಿತ್ತು ಅಂತ ನಮಗೆ ಬಂದು ಹೇಳಿದ. "ಅದೆಂಗ್ಲಾ ಎಂಕ?" ಅಂತ ಕೇಳಿದಾಗ ಔನು ಆ ಹಾಡಿಗೆ ಕೊಟ್ಟ ಭಾಷ್ಯ ಒಸಿ ಹಿಂಗಿತ್ತು:

ಈ ಹಾಡಲ್ಲಿ ಒಬ್ಬ ಕನ್ನಡಿಗ ತನ್ನ ಕನಸಿನ ಕರ್ನಾಟಕದೆಡೆಗೆ ಹೊರ್ಟಿರ್ತಾನೆ ಗುರು! ಅವನಿಗೆ ಕವಿ ಹೀಗೆ ಹೇಳ್ತಾನೆ:
ಕಿವಿಮಾತೊಂದು ಹೇಳಲೇ ನಾನಿಂದು ದಾರಿ ನಿಂತಾಗ ಸಾಗಲೇ ಬೇಕೆಂದು
ನಿನ್ನೆ ಈಗಿಲ್ಲ ನಾಳೆಯು ತಿಳಿದಿಲ್ಲ ನೀನು ನೀನಾಗಿ ಬಾಳಲೇ ಬೇಕಿಂದು ||ಪ||

ಕನ್ನಡಿಗನಿಗೆ ಏಳಿಗೆಯ ದಾರಿ ನಿಂತುಹೋಗಿದೆ ಅನ್ನಿಸಿದೆ. ಅವನಿಗೆ ಕವಿ ಹೇಳಿರೋದು ಏನು ಅಂದ್ರೆ - ನೀನು ನಿನ್ನೆ ಏನೇ ಆಗಿರು (ವಿಜಯನಗರದ ಅರಸನೇ ಆಗಿರು, ಇಲ್ಲವೇ ಬ್ರಿಟಿಷರ ಕಾಲಾಳೇ ಆಗಿರು), ಆ ನೆನ್ನೆ ಅನ್ನೋದು ಈಗಿಲ್ಲ. ನಾಳೆ ನೀನೇನಾಗ್ತ್ಯಾ ಅನ್ನೋದು ತಿಳಿದಿಲ್ಲ. ಆದ್ರೆ ಒಂದು ಖಂಡಿತ ಏನಪ್ಪಾ ಅಂದ್ರೆ ನೀನು ಇವತ್ತು ನಿನ್ನತನವನ್ನ ಬಿಟ್ಟು ಬಾಳಕ್ಕಾಗಲ್ಲ, ನೀನು ನೀನಾಗೇ ಬಾಳಬೇಕು. ಅಂದ್ರೆ - ನೀನು ನಿನ್ನ ಕನ್ನಡತನವನ್ನ ಬಿಡದೇ ಬಾಳಬೇಕು. ಹೀಗೆ ನೀನಾಗಿ ಬಾಳುವುದು ಬಿಡುವುದು ಎಂಬ ಆಯ್ಕೆ ನಿನ್ನದಲ್ಲ. ನೀನಿಲ್ಲಿ ಅಸ್ವತಂತ್ರ. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ನೀನಾಗಿ ಬಾಳಲೇಬೇಕು.
ಹಸಿರಾಗಿದೆ ದ್ವೀಪವು ನಿನಗಾಗಿ ನಸುನಗುತಲೇ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ ಈ ಬಾಳುಂಟು ಬಾಳುವ ಸಲುವಾಗಿ ||೧||

ಹಸಿರಾದ ದ್ವೀಪ ಅಂದರೆ ಕನಸಿನ ಕರ್ನಾಟಕ. ಹಸಿರು ಸಮೃದ್ಧಿಯ ಸೂಚಕ. ದ್ವೀಪ ಹೇಗೆ? ಹೇಗೆ ಎಂದರೆ ಇಡೀ ಪ್ರಪಂಚ ಎಂಬ ಸಾಗರದಲ್ಲಿರೋದರಿಂದ ದ್ವೀಪ. ಈ ಕನಸಿನ ಕರ್ನಾಟಕ - ಯಾವುದು ಗುರಿಯೋ ಆ ಕನಸಿನ ಕರ್ನಾಟಕ ನಿನಗಾಗೇ ಇದೆ, ಮತ್ತೊಬ್ಬನಿಗಲ್ಲ. ಮತ್ತೂ ಏನೆಂದರೆ ಆ ಹಸಿರಾದ ದ್ವೀಪ - ಎಂದರೆ ಸಮೃದ್ಧ ಕರ್ನಾಟಕ - ಮುಂದೆ ಇದ್ದೇ ಇದೆ. ಇದೆಯೋ ಇಲ್ಲವೋ ಎನ್ನುವ ಸಂದೇಹ ಬೇಡ. ಆ ಗುರಿಯ ಕಡೆಗೆ ನಸುನಗುತಲೇ ನೀನು ಗೆಲುವುಮೊಗದವನಾಗಿ ಸಾಗು! ಹೊಸ ಎಂದರೆ ಇವತ್ತಿನ ಜಾಗತೀಕರಣವಾಗಿರೋ. ತಂಗಾಳಿ ಯಾಕೆ ಅಂದರೆ ಅದರಿಂದ ಕನ್ನಡಿಗನಿಗೆ ಒಳಿತೇ ಆಗಿದೆ. ಅ ಹೊಸ ತಂಗಾಳಿ ಮೆಲುವಾಗಿ ಹೇಳಿದೆ. ಮೆಲುವಾಗಿ ಎಂದರೆ ಬುದ್ಧಿವಂತರ ಕಿವಿಗೆ ಮಾತ್ರ ಕೇಳಿಸುವ ಹಾಗೆ. ಏನು ಹೇಳಿದೆ? ಈ ಬಾಳುಂಟು ಬಾಳುವ ಸಲುವಾಗಿ. ಈ ಬಾಳು ಎಂದರೆ ಕನ್ನಡಿಗನಾಗಿ ಹುಟ್ಟಿರುವ ಈ ಬಾಳು. ಇದು ಬಾಳುವ ಸಲುವಾಗಿಯೇ ಇದೆ ಎಂದರೆ ನೀನು ಕನ್ನಡಿಗನಾಗಿಯೇ ಸದಾಕಾಲ ಬಾಳಬೇಕು ಎಂದರ್ಥ. ಬಾಳೇ ಬಾಳ್ತೀಯ, ಬಾಳದೆ ಹೇಗಿರಬಲ್ಲೆ ನೀನು? ಇದು ನಿನ್ನ ಕೈಯಲ್ಲಿ ಇಲ್ಲವೇ ಇಲ್ಲ!
ಬಾಗಿಲಿನಾಚೆಗೆ ತಾ ಬಂದು ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು ಓಡಲೇಬೇಕು ನೀನಿಂದು ||೨||

ಕನ್ನಡಿಗ ಇವತ್ತಿನ ದಿನ ನಾಲ್ಕು ಗೋಡೆಗಳ ನಡುವ ಒಬ್ಬೊಬ್ಬನೇ ಇದ್ದಾನೆ, ಇತರ ಕನ್ನಡಿಗರೊಡನೆ ಒಗ್ಗೂಡಿಲ್ಲ. ಆ ನಾಲ್ಕುಗೋಡೆಗಳ ಬಾಗಿಲಿನಾಚೆಗೆ ಬಾಳು - ಎಂದರೆ ಜೀವನ - ಅವನನ್ನು ಬಾ ಎಂದು ಕರೆದಿದೆ. ಇಲ್ಲಿ ಕನ್ನಡಿಗ ಎಂದರೆ ಒಬ್ಬನೇ ಅಲ್ಲ, ಕೋಟಿಗಟ್ಟಲೆ ಜನ. ಇವರೆಲ್ಲ ಬಾಗಿಲಿನಾಚೆಗೆ ಬಂದಾಗಲೇ ಅದು ಬಾಳು. ಎಂದರೆ ಪ್ರತಿಯೊಬ್ಬ ಕನ್ನಡಿಗನೂ ತನ್ನ ಗೂಡಿನಿಂದ ಹೊರಬಂದು ಒಗ್ಗಟ್ಟಿನಿಂದ ಇರಬೇಕು. ಒಗ್ಗಟ್ಟನ್ನೇ ಇಲ್ಲಿ ಬಾಳು ಎಂದಿರುವುದು. ಒಗ್ಗಟ್ಟಿಲ್ಲದೆ ತನ್ನ ನಾಲ್ಕು ಗೋಡೆಯೊಳಗೆ ಕೂತಿರುವುದು ಬಾಳೇ ಅಲ್ಲ, ಸಾವು! ಹೀಗೆ ಒಗ್ಗಟ್ಟೆಂಬ ಬಾಳು ಕೂಗಿದಾಗ ನೀನು ಸಂತಸದಿಂಡ ಓಗೊಟ್ಟು ಓಡಲೇಬೇಕು ಇಂದು - ಎಂದರೆ ನಿನಗೆ ಓಡದೆ ಬೇರೆ ದಾರಿಯಿಲ್ಲ; ಓಡದೆ ಇರುವುದು ನಿನ್ನ ನಿಯಂತ್ರಣದಲ್ಲಿಲ್ಲ!
ಸಾವಿರ ಕಣ್ಣಿನ ನವಿಲಾಗಿ ನಿಂತಿದೆ ಸಮಯ ನಿನಗೆಂದೂ
ಕಣ್ಣನು ತೆರೆದು ಹಗುರಾಗಿ ನೋಡಲೇ ಬೇಕು ನೀ ಬಂದು ||೩||

ಸಮಯ - ಎಂದರೆ ಹಿಂದು, ಇಂದು ಮತ್ತು ಮುಂದು - ಇವೆಲ್ಲವೂ ನಿನಗಾಗಿ ಸಾವಿರ ಕಣ್ಣಿನ ನವಿಲಾಗಿ ನಿಂತಿದೆ. ಕಣ್ಣೇಕೆ ಎಂದರೆ ಅದು ನಿನ್ನನ್ನು ನೋಡುತ್ತಿರುವುದರಿಂದ. ಎಂದರೆ ನಿನ್ನ ಹಿಂದಿನವರು, ಇಂದಿನವರು ಮತ್ತು ಮುಂದಿನವರು - ಇವೆರಲ್ಲಾ ನಿನ್ನನ್ನು ಅಸಂಖ್ಯಾತ ಕಣ್ಣುಗಳಿಂದ ನೋಡುತ್ತಿದ್ದಾರೆ, ನಿನ್ನ ಪ್ರತಿಯೊಂದು ಹೆಜ್ಜೆಯನ್ನೂ ಆಲಿಸುತ್ತಿದ್ದಾರೆ. ಇಡೀ ಸಮಯವನ್ನು ಒಂದು ನವಿಲೆಂದಿರುವುದು ಅದರ ಅಂದವನ್ನು ಸೂಚಿಸಲು. ಹೀಗೆ ಸಮಯವೆನ್ನುವುದೇ ಹೆಪ್ಪುಗಟ್ಟಿ ನಿನ್ನನ್ನು ನೋಡುತ್ತಿದ್ದಾಗ ಹಗುರಾಗಿ ಕಣ್ಣನ್ನು ತೆರೆದು ನೀನು ಅದನ್ನು ನೋಡಲೇಬೇಕು ಬಂದು. ಹಗುರಾಗಿ ಏಕೆ ಎಂದರೆ ಪೂರ್ತಿ ನೋಡಲು ಹೊರಟರೆ ನಿನ್ನ ಕಣ್ಣು ಸುಟ್ಟುಹೋದೀತು, ಅದಕ್ಕೆ. ನೋಡಲೇ ಬೇಕು ಎಂದರೆ ಮತ್ತೆ ನಿನಗೆ ನೋಡದೆ ಆಯ್ಕೆಯೇ ಇಲ್ಲ ಎಂಬ ಅರ್ಥ. ಇಡೀ ಸಮಯವೇ ನಿನ್ನ ಮುಂದೆ ನಿಂತಿದ್ದಾಗ ನೀನು ನೋಡದೆ ಇರಲಾರೆ ಎನ್ನುವುದು ಕವಿವಾಣಿ. ಇಲ್ಲೂ ನೋಡುವುದು ಬಿಡುವುದು ನಿನ್ನ ಹತೋಟಿಯಲ್ಲಿಲ್ಲ; ಅಸ್ವತಂತ್ರನು ನೀನು.
ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ ||೪||

ಕನ್ನಡಿಗನ ಮೇಲೆ ಕವಿದಿರುವ ಮೋಡಕ್ಕೆ ಒಂದು ಬೆಳ್ಳಿಯ ಅಂಚಿದೆ, ಆದ್ದರಿಂದ ಮೋಡ ಬಾನಲ್ಲಿ ನಗುವ ಬೀರಿದೆ. ಮೋಡ ಇವತ್ತಿನ ತೊಂದರೆಗಳು. ಆ ತೊಂದರೆಗಳೇ ಏಳಿಗೆಗೆ ಬೇಕಾದ್ದೆಲ್ಲವನ್ನೂ ತುದಿಯಲ್ಲಿ ಹೊಂದಿರುವುದರಿಂದ ಬೆಳ್ಳಿಯ ಅಂಚಿರುವುದು. ಹೀಗಿರುವಾಗ ನಿನ್ನ ಬಾಳಿನ ಸಂಗೀತವನ್ನ. ಸಂಗೀತ ಎಂದರೆ ಲಯಬದ್ಧವಾದ ಮತ್ತು ಎಲ್ಲರಿಗೂ ಇಷ್ಟವಾಗುವಂಥ ಒಂದು ಗುಂಪುಗಾಯನ. ಇಂತಹ ಒಗ್ಗಟ್ಟಿನ ಗುಂಪುಗಾಯನದಲ್ಲಿ ನಿನ್ನ ಪಾಲನ್ನು ನೀನು ಹಾಡಲೇಬೇಕು. ಹಾಡದೆ ಆಯ್ಕೆ ನಿನಗಿಲ್ಲ ಇಲ್ಲಿ!
ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ ||೫||

ಆ ನಿನ್ನ ಕನಸಿನ ಕರ್ನಾಟಕ ಯಾವುದಿದೆಯೋ ಅದರ ಕಡೆಗೆ ನೀನು ಮಿಂಚುವ ಅಲೆಗಳ ನದಿಯಾಗಿ ಬೇಗನೆ ಚಲಿಸು. ಮಿಂಚುವ ಅಲೆ ಏತಕ್ಕೆ ಎಂದರೆ ಸೂರ್ಯನ ಶಕ್ತಿಯನ್ನು ಬಿಂಬಿಸುವುದರಿಂದ. ನದಿ ಬೇಗ ಏತಕ್ಕೆ ಚಲಿಸುತ್ತದೆ ಎಂದರೆ ಕಲ್ಲು-ಬಂಡೆಗಳ ಅಡಚಣೆಗಳಿಂದ. ಹೀಗೆ ಬೇಗ ಬೇಗನೆ ನದಿಯಾಗಿ ಹರಿದು ನೀನು ನಿನ್ನ ಪಾಲಿನ ಆಟವನ್ನು ಆಡಲೇಬೇಕು. ಏನು ಆಟ? ಈ ಬಾಳೆಂಬ ಆಟ - ಯಾವುದರಲ್ಲಿ ನೀನು ಕನಸಿನ ಕರ್ನಾಟಕವನ್ನು ಕಟ್ಟಲು ಹೊರಟಿದೆಯೋ ಆ ಆಟ. ಆಡಲೇಬೇಕು ಎಂದರೆ ಅದು ಕವಿ ಕನ್ನಡಿಗನಿಗೆ ಮಾಡಿರುವ ಆಜ್ಞೆಯಲ್ಲ, ಅವನ ಅಸ್ವತಂತ್ರತೆಯನ್ನ ಸೂಚಿಸುತ್ತಿದೆ. ಆ ಆಟವನ್ನು ನೀನು ಆಡುವುದಿಲ್ಲ ಎಂದುಕೊಂಡರೂ ನೀನು ಆಡಲೇಬೇಕು. ಹೇಗೆ ಮರದಿಂದ ಬಿದ್ದ ಹಣ್ಣು ನೆಲಕ್ಕೆ ಬೀಳಲೇಬೇಕೋ ಹಾಗೆ ನೀನು ಆಡಲೇಬೇಕು, ಕನ್ನಡಿಗನಾಗಿ ಬಾಳಲೇಬೇಕು, ನಿಂತ ದಾರಿಯಲ್ಲಿ ಮುಂದೆ ಸಾಗಲೇಬೇಕು, ಒಗ್ಗಟ್ಟಾಗಲೇಬೇಕು, ನಿನ್ನ ಕನಸಿನ ಕರ್ನಟಕವನ್ನು ನೀನು ಹೋಗಿ ಮುಟ್ಟಲೇಬೇಕು; ನಿನಗಿಲ್ಲಿ ಆಯ್ಕೆಯಿಲ್ಲ, ಇದಾವುದೂ ನಿನ್ನ ಹತೋಟಿಯಲ್ಲಿಲ್ಲ; ಎಲ್ಲಾ ಆಗಲೇಬೇಕು!

ಅಲ್ಲ - "ಅದೆಂಗ್ಲಾ ಎಂಕ?" ಅಂತ ಕೇಳಿದ ತಕ್ಷಣ ಇಷ್ಟೆಲ್ಲಾ ಹೇಳಿದನಲ್ಲ, ಎನಾದರೂ ಅರ್ಥವಾಯಿತಾ ಗುರು? ಸುಮ್ಮನೆ ಹೋಗಿ ಪೂಜಾ ಗಾಂಧೀನೂ ಐಟಂ ಹಾಡ್ನೂ ನೋಡ್ಕೊಂಡ್ ಬಾರ್ಲಾ ಅಂದ್ರೆ ಯೇನೋ ಬುಟ್ಟ ಸಿದ್ಧಾಂತ!
Related Posts with Thumbnails